“ಮುಂಜಾನೆ ಹುಬ್ಬಳ್ಳಿ ಪೊಲೀಸ್ ಸ್ಟೇಷನ್ನಿನಿಂದ ಫೋನ್ ಬಂದಿತ್ರಿ. ಹುಬ್ಬಳ್ಳಿ ರೇಲ್ವೇ ಸ್ಟೇಷನ್ನಿನ್ಯಾಗ ಭಿಕ್ಷುಕರು ಭಾಳ ಆಗ್ಯಾರಂತ, ಪ್ರಯಾಣಿಕರಿಗೆ ಭಾಳ ಕಾಡತಾರ. ನೀವು ಗಾಡಿ ತಗೊಂಡ ರ್ರೀ ನಾವು ಅವರನ್ನೆಲ್ಲ ಹಿಡಿದು ಗಾಡಿ ತುಂಬಿ ಕೊಡತೇವಿ ಅಂತ ಹುಬ್ಬಳ್ಳಿ ಪೊಲೀಸ್ ಸ್ಟೇಷನ್ನಿನಿಂದ ಫೋನ್ ಮಾಡಿ ನಮ್ಮ ಸೂಪರಿಟೆಂಡೆಂಟ್ಗೆ ಹೇಳ್ಯರ್ರೀ… ಗಾಡಿ ಕೊಟ್ಟು ಡ್ರೈವರ್ ಜೋಡಿ ಅವ್ರು ನನ್ನನ್ನೇ ಕಳಿಸಾವ್ರು.”,“ಮತ್ತಷ್ಟು ಹೊಸಾ ಮಂದಿ ಬರಾವ್ರು ಹಂಗಾದ್ರ! ಈ ಸರ್ಜಾಪುರ ನಿರಾಶ್ರಿತ ಶಿಬಿರದಾಗ ಎಷ್ಟ ಮಂದಿನ ಹಿಡಿಸಾಕ ಸಾಧ್ಯ ಆಕ್ಕೇತೋ ಅಷ್ಟ ಮಂದೀನ ತುಂಬೂದು” ಎಂದೆ. “ಇಲ್ಲಿಗೆ ಬರೂ ಮಂದಿ ಇದ್ದಾರ; ಇಲ್ಲಿಂದ ಹೋಗತೀನಿ ಅನ್ನೋ ಮಂದಿ ಇದ್ದಾರಾ? ಇಲ್ಲಿಯವ್ರನ್ನ ಕರಕೊಂಡು ಹೋಗೂ ಮಂದಿ ಇಲ್ಲ ಅಷ್ಟೇ!” ಎಂದು ನಕ್ಕು ಶಿವ ವ್ಯಾನಿನತ್ತ ನಡೆದ.
ಅಲ್ಲಲ್ಲಿ ಇರುವ ಗಾಳಿಗಿಡಗಳು, ನೇರಳೆ, ನೆಲ್ಲಿಗಿಡಗಳಿಂದ ಹಾದುಬರುವ ತಣ್ಣನೆಯ ಗಾಳಿ ಮೈಮನಸ್ಸಿಗೆ ಹಿತ ನೀಡುತ್ತಿತ್ತು. ವಿಶಾಲವಾದ ಆಲದಮರದ ಕೆಳಗೆ ಕೆಲವರು ಶೂನ್ಯದೆಡೆ ದೃಷ್ಟಿ ನೆಟ್ಟು ಮೌನವಾಗಿ ಕುಳಿತಿದ್ದರು, ಕೆಲವರು ಉಟ್ಟಿದ್ದ ಯುನಿಫರ್ಮನ್ನು ಸರಿಪಡಿಸಿಕೊಳ್ಳುತ್ತ ಅಕಾರಣವಾಗಿ ಅತ್ತಿತ್ತ ಓಡಾಡುತ್ತಿದ್ದರು.
ಸಂಜನಾ ಓಡಿಬಂದು ನನ್ನ ಭುಜ ತಟ್ಟಿ ‘ಹಮೇ ಘರ್ ಭೇಜ್ ದೀಜಿಯೇ ಮೇಡಂಜೀ ಬಚ್ಚಿಕೋ ದೇಖನಾ ಹೈ’ (ನನ್ನನ್ನು ಮನೆಗೆ ಕಳಿಸಿಕೊಡಿ, ಮಗುವನ್ನು ನೋಡಬೇಕಾಗಿದೆ) ಎಂದು ಬಿಕ್ಕಿಬಿಕ್ಕಿ ಅಳಲಾರಂಭಿಸಿದಳು.
‘ಠೀಕ್ ಹೈ, ಆಪ್ ಕೀ ಘರ್ ಕಹಾಂ ಹೈ?’ (ಸರಿ, ನಿಮ್ಮ ಮನೆ ಎಲ್ಲಿದೆ?) ಎಂದು ಕೇಳಿದೆ.
ಅಳು ನಿಲ್ಲಿಸಿ ಚಿಂತೆಗೆ ಬಿದ್ದು ಪರಪರನೆ ತಲೆ ಕೆರೆದುಕೊಂಡಳು.
‘ಹಾA, ಬೋಲೋ ಬೊಲೋ’ (ಹೇಳು ಹೇಳು) ಎಂದೆ.
ಮುಗ್ಧ ಮಗುವಿನ ಹಾಗೆ ನಕ್ಕು ‘ಪತಾ ನಹೀ!’ (ಗೊತ್ತಿಲ್ಲ) ಎಂದಳು. ‘ದೂಧ್ ಪಿಲಾನಾ ಹೈ! ದೂಧ್’ (ಹಾಲು ಕುಡಿಸಬೇಕಾಗಿದೆ, ಹಾಲು) ಎಂದು ನಿತ್ಯದಂತೆ ರಾಗವಾಗಿ ಹೇಳುತ್ತ ಸಂಜನಾ ಆಲದಮರದತ್ತ ನಡೆದಳು.
ಕನ್ನಡ ಮಾತನಾಡಲೂ ಬಾರದ ಸಂಜನಾಳ ವ್ಯಥೆ ನನ್ನ ಮನಸ್ಸನ್ನು ಇನ್ನಿಲ್ಲದಂತೆ ಕಲಕಿತ್ತು.
ಪುಟ್ಟ ಗಣಪನ ಗುಡಿಯ ಬಾಗಿಲು ತೆಗೆದು ದೀಪ ಬೆಳಗಿ ಊದುಬತ್ತಿ ಹಚ್ಚಿ ‘ಸಂಜನಾಳನ್ನೂ ಅವಳ ಮಗುವನ್ನೂ ಒಂದುಗೂಡಿಸಪ್ಪಾ’ ಎಂದು ಕೈಮುಗಿದು ಮನದಲ್ಲೇ ಪ್ರಾರ್ಥನೆ ಮಾಡಿ ಗಂಟೆಯನ್ನು ಬಾರಿಸಿದೆ. ಕಾಲಿನ ಬಳಿ ‘ಧಡ್’ ಎಂದು ಸಪ್ಪಳವಾಯಿತು. ಬಡಕಲಾಟಿ ಭೀಮಪ್ಪ ಸಾಷ್ಟಾಂಗ ನಮಸ್ಕಾರ ಮಾಡಿದ್ದ. ಹೆ… ಹೆ… ಎಂದು ನಕ್ಕು ದೇವರ ಮೇಲಿದ್ದ ಅಶೋಕಾ ಹೂವಿನ ಗೊಂಚಲನ್ನು ಎತ್ತಿ ಕಿವಿಯ ಮೇಲಿರಿಸಿಕೊಂಡ. ಅವನನ್ನು ನೋಡಿ ‘ಹೆಂಗಸು ಹೆಂಗಸು’ ಎನ್ನುತ್ತ ಚಪ್ಪಾಳೆ ತಟ್ಟುತ್ತ, ಜಗುಶೆಟ್ಟಿ ಜೋರಾಗಿ ಕೂಗಿದ. ಭೀಮಪ್ಪ ಕತ್ತನ್ನು ಕೊಂಚ ಬಗ್ಗಿಸಿ ಕಣ್ಣು ಕೆಕ್ಕರಿಸಿ ಟಗರಿನಂತೆ ದುರುದುರು ಜಗುಶೆಟ್ಟಿಯನ್ನು ನೋಡಲಾರಂಭಿಸಿದೊಡನೆ ಇವರಿಬ್ಬರ ನಡುವೆ ಹೊಡೆದಾಟ ಆಗಬಹುದು ಎನಿಸಿತು. ‘ಶಿವಾ’ ಎಂದು ಕೂಗಿದೆ. ಆಫೀಸ್ರೂಮಿನಿಂದ ಶಿವ ಒಂದು ಲಾಠಿಯಿಂದ ನೆಲ ಕುಟ್ಟುತ್ತ “ಯಾಕ, ಏನ ಗದ್ದಲಾ ಹಚ್ಚೀರಿ?” ಎನ್ನುತ್ತ ಬಂದ. ಶಿವನನ್ನು ನೋಡಿದೊಡನೆಯೆ ಇಬ್ಬರೂ ಶಾಂತರಾದರು.
“ಮೇಲ್ವಿಚಾರಕರು ಬಂದಾಗ ಮಂತ್ರ ಹಾಕಿದ ಹಾಂಗ ಗಪ್ಪ ಆಕ್ಕಾರ, ಮೇಲ್ವಿಚಾರಕಿ ಮಾತಿಗೆ ಬಗ್ಗೂದಿಲ್ಲ!” ಎಂದು ಶಿವನಿಗೆ ಹೇಳಿದೆ. ಬಲಗೈಯಿಂದ ಕಾಲರ್ ಜಗ್ಗಿ ಕೊಂಚ ಹೆಮ್ಮೆಯಿಂದ ಶಿವ ಮುಗುಳ್ನಕ್ಕ. ಅಷ್ಟರಲ್ಲಿ ಊಟದ ಹಾಲಿನಿಂದ ಸೈರನ್ ಸಪ್ಪಳ ಕೇಳಿಸಿತು. ಎಲ್ಲರೂ ನಲ್ಲಿಯತ್ತ ಧಾವಿಸಿ ಕೈಕಾಲು ತೊಳೆದುಕೊಂಡು ಊಟ ಮಾಡಲು ಹೊರಟರು. ಆತಂಕ ಕಳೆದ ನಂತರದ ನಿರಾಳತೆಯನ್ನು ಅನುಭವಿಸುತ್ತ ನಾನು ಅಡುಗೆಮನೆಯತ್ತ ತೆರಳಿದೆ. ಭಟ್ಟರು, ಸರಸಮ್ಮ ದೊಡ್ಡದೊಡ್ಡ ಪಾತ್ರೆಗಳಲ್ಲಿ ಬಿಸಿಬೇಳೆಭಾತು, ಮೊಸರನ್ನ ಸಿದ್ಧಪಡಿಸಿಟ್ಟಿದ್ದರು.
“ಕೊಡಿ ಸರಸಮ್ಮ ನಾನು ಬಿಸಿಬೇಳೆಭಾತ್ ಬಡಿಸುತ್ತೇನೆ” ಎಂದೆ. ಅಷ್ಟರಲ್ಲಿ ಬಂದ ಶಿವ ಮೊಸರನ್ನದ ಪಾತ್ರೆಯ ಹಿಂದೆ ನಿಂತ. ಕೌಂಟರಿನ ಇದಿರು ಬಂದವರ ತಟ್ಟೆಗೆ ಇಬ್ಬರೂ ಊಟ ಬಡಿಸುತ್ತ ನಿಂತೆವು. ನಮಗಿಬ್ಬರಿಗೂ ಆ ಕೆಲಸ ಸಮಾಧಾನ ತರುವ ವಿಷಯವಾಗಿತ್ತು. ಕೆಲವರು ಗಬಗಬನೆ ಎಷ್ಟೋ ದಿನದಿಂದ ಅನ್ನವನ್ನೇ ಕಾಣದವರಂತೆ ತಿನ್ನುತ್ತಿದ್ದರೆ, ಕೆಲವರು ಒಂದೊಂದೇ ಅನ್ನದ ಅಗುಳು ಹೆಕ್ಕಿಹೆಕ್ಕಿ ತಿನ್ನುತ್ತಿದ್ದರು. ಕೆಲವರು ಊಟದ ತಟ್ಟೆಯ ಮುಂದೆ ಕುಳಿತು ತಿನ್ನುವುದನ್ನೂ ಮರೆತು ಎಲ್ಲೋ ನೋಡುತ್ತ ಕುಳಿತುಕೊಳ್ಳುತ್ತಿದ್ದರು. ಗಂಡಸರು ಯಾರಾದರೂ ಮಂಕಾಗಿ ಕುಳಿತಿದ್ದರೆ ಕೊಂಚ ನಂಬಿಸಿಯೋ, ಗದರಿಯೋ ಊಟ ಮಾಡಲು ಶಿವ ಆಗ್ರಹಿಸುತ್ತಿದ್ದ. ಹೆಂಗಸರು ಮೌನವಾಗಿ ಕುಳಿತರೆ ನಾನು ಧಾವಿಸುತ್ತಿದ್ದೆ. ಅವರೆಲ್ಲರ ಊಟ ಮುಗಿದು ನಾವು ಊಟ ಮುಗಿಸುವಷ್ಟರಲ್ಲಿ ಮೂರು ಗಂಟೆಯಾಗಿತ್ತು. ತಲೆ ಸಣ್ಣಗೆ ಸಿಡಿಯಲಾರಂಭಿಸಿತು. ಹಣೆಯ ಎರಡೂ ಭಾಗವನ್ನು ತೋರುಬೆರಳಿನಿಂದ ನೀವಿಕೊಳ್ಳುತ್ತ “ಶಿವು, ನಿಮ್ಮದ್ಯಾವ ಕಡೆ ಸರ್ಕಿಟು ಇವತ್ತು?” ಕೇಳಿದೆ.
“ಮುಂಜಾನೆ ಹುಬ್ಬಳ್ಳಿ ಪೊಲೀಸ್ ಸ್ಟೇಶನ್ನಿನಿಂದ ಫೋನ್ ಬಂದಿತ್ರಿ. ಹುಬ್ಬಳ್ಳಿ ರೇಲ್ವೇ ಸ್ಟೇಷನ್ನಿನ್ಯಾಗ ಭಿಕ್ಷುಕರು ಭಾಳ ಆಗ್ಯಾರಂತ, ಪ್ರಯಾಣಿಕರಿಗೆ ಭಾಳ ಕಾಡತಾರ. ನೀವು ಗಾಡಿ ತಗೊಂಡ ರ್ರೀ ನಾವು ಅವರನ್ನೆಲ್ಲ ಹಿಡಿದು ಗಾಡಿ ತುಂಬಿ ಕೊಡತೇವಿ ಅಂತ ಹುಬ್ಬಳ್ಳಿ ಪೊಲೀಸ್ ಸ್ಟೇಷನ್ನಿನಿಂದ ಫೋನ್ ಮಾಡಿ ನಮ್ಮ ಸೂಪರಿಟೆಂಡೆಂಟ್ಗೆ ಹೇಳ್ಯರ್ರೀ… ಗಾಡಿ ಕೊಟ್ಟು ಡ್ರೈವರ್ ಜೋಡಿ ಅವ್ರು ನನ್ನನ್ನೇ ಕಳಿಸಾವ್ರು.”
“ಮತ್ತಷ್ಟು ಹೊಸಾ ಮಂದಿ ಬರಾವ್ರು ಹಂಗಾದ್ರ! ಈ ಸರ್ಜಾಪುರ ನಿರಾಶ್ರಿತ ಶಿಬಿರದಾಗ ಎಷ್ಟ ಮಂದಿನ ಹಿಡಿಸಾಕ ಸಾಧ್ಯ ಆಕ್ಕೇತೋ ಅಷ್ಟ ಮಂದೀನ ತುಂಬೂದು” ಎಂದೆ.
“ಇಲ್ಲಿಗೆ ಬರೂ ಮಂದಿ ಇದ್ದಾರ, ಇಲ್ಲಿಂದ ಹೋಗತೀನಿ ಅನ್ನೋ ಮಂದಿ ಇದ್ದಾರಾ? ಇಲ್ಲಿಯವ್ರನ್ನ ಕರಕೊಂಡು ಹೋಗೂ ಮಂದಿ ಇಲ್ಲ ಅಷ್ಟೇ!” ಎಂದು ನಕ್ಕು ಶಿವ ವ್ಯಾನಿನತ್ತ ನಡೆದ.
“ಖರೇ ಅದರೀ” ಎನ್ನುತ್ತ ನಾನು ಮಂದಾರ ಹಾಲಿನ ಪಕ್ಕದಲ್ಲಿದ್ದ ಗಿಡಗಳತ್ತ ನಡೆದೆ. ಆಗೀಗ ಬೀಳುತ್ತಿದ್ದ ಮಳೆಯಿಂದ ಹೂವಿನ ಗಿಡಗಳ ಸಂದಿಯಲ್ಲೆಲ್ಲ ಸಾಕಷ್ಟು ಕಳೆಗಳು ಬೆಳೆದಿದ್ದವು ಕೀಳುತ್ತ ಕುಳಿತೆ. “ಮೇಡಮ್ಮಾರು ಒಬ್ರೇ ಕೆಲ್ಸಾ ಮಾಡಲಿಕ್ಕ ಹತ್ತೀರೇನು? ನೀವು ಮಾಡೋ ಕೆಲ್ಸ ಅಲ್ಲ ಇದು” ಎನ್ನುತ್ತ್ತ ಬಂದ ವಾರ್ಡನ್ ಶಾರದಾ “ನಾಲ್ಕ ಮಂದೀನ ನಿಮಗ ಜೋಡ ಮಾಡತೇನಿ ತಡೀರಿ” ಎಂದರು.
“ಬ್ಯಾಡ ಬಿಡ್ರಿ ಮೇಡಮ್. ಒಳಗ ಕಸಬರಿಗೆ ಮಾಡೋ ಟ್ರೇನಿಂಗ್ ನಡದದ, ಅವ್ರೆಲ್ಲ ಕೆಲ್ಸಾ ಕಲೀಲಿ. ಎಂದೋ ಒಂದು ದಿನಾ ಇಲ್ಲಿಂದ ಹೊರಗಡೆಗೆ ಹೋಗಿ ಜೀವ್ನಾ ಮಾಡೂದು ಬಂದ್ರೂ ಅವ್ರು ಮತ್ತೆ ಭಿಕ್ಷೆ ಬೇಡಬಾರದು, ಉಪವಾಸ ಬಿದ್ದು ಸಾಯಬಾರದು” ಎಂದು ಅವರ ಮಾತಿಗೆ ನಿರಾಕರಿಸಿದೆ.
“ಹಂಗಂದ್ರ್ಯಾ ಹಂಗ ಆಗ್ಲಿ ಮೇಡಮ್” ಎನ್ನುತ್ತ ಬೀಸುಗಾಲು ಹಾಕುತ್ತ ಹಾಸ್ಟೆಲ್ಲ ಕಡೆಗೆ ನಡೆದರು.
ಮೊಬೈಲ್ ರಿಂಗಣಿಸಿತು. ಮರದ ಕೆಳಗೆ ಕಲ್ಲಿನ ಮೇಲಿಟ್ಟಿದ್ದ ಮೊಬೈಲ್ ಸ್ಕ್ರೀನ್ ಮೇಲೆ ಅಮ್ಮನ ಹೆಸರು ಕಾಣಿಸಿತು. ಎರಡೂ ಕೈಗಳಿಗೆ ಅಂಟಿಕೊಂಡಿದ್ದ ಮಣ್ಣು, ಹುಲ್ಲಿನ ಚೂರುಗಳನ್ನು ತಿಕ್ಕಿ ಸಾಧ್ಯವಾದಷ್ಟು ಉದುರಿಸಿ ಫೋನ್ ರಿಸೀವ್ ಮಾಡಿದೆ.
“ಹಲೋ ಅಮ್ಮಾ, ಏನಾತು?”
“ಬರೂ ಮುಂದ ನನಗ ಬಿ.ಪಿ. ಗುಳಗಿ, ಅರ್ಧ ಲೀಟರ್ ಹಾಲೂ ತಗೊಂಡ ಬಾರವಾ, ಎಷ್ಟ ಗಂಟೆಕ ಬರ್ತಿ?” ಕೇಳಿದಳು ಸೋತ ಧ್ವನಿಯಲ್ಲಿ.
“ಆತಮ್ಮಾ ತರತೀನಿ, ಇಂದ ಏಳ ಗಂಟೇಕ ಬರತೀನಿ” ಎಂದು ಫೋನ್ ಕಟ್ ಮಾಡಿದರೂ ಅಮ್ಮನ ನೋವು ನನ್ನ ಮೈಮನಸ್ಸಿಗೆಲ್ಲ ವ್ಯಾಪಿಸಿದಂತಾಯಿತು. ಒಮ್ಮೆ ನಿಟ್ಟುಸಿರಿಟ್ಟು ಅಮ್ಮನನ್ನು ಸಾಧ್ಯವಾದಷ್ಟು ಚೆನ್ನಾಗಿ ನೋಡಿಕೊಳ್ಳಬೇಕು ಎಂದುಕೊಳ್ಳುತ್ತ ಕೆಲಸದ ಚುರುಕನ್ನು ಹೆಚ್ಚಿಸಿದೆ. ಆವರಣದ ಮರಗಳ ಮೇಲೆ ಅಲ್ಲಲ್ಲಿ ಹಕ್ಕಿಗಳು ಗೂಡು ಕಟ್ಟಿದ್ದವು. ಅವೆಲ್ಲ ಗೂಡಿಗೆ ಮರಳಿ ಬರುವ ಹಾರಾಟ-ಕೂಗಾಟ ಸಂಜೆಯಾಗುವುದನ್ನು ತಿಳಿಸಿತು.
ಸಕ್ಕೂಬಾಯಿ, ಗಿರಿಜಾ, ರಮಾಮಣಿ, ಕಾಂತೀ… ಹೀಗೆ ಒಬ್ಬೊಬ್ಬರಾಗಿ ಅಂದಿನ ತರಬೇತಿ ಮುಗಿಸಿಕೊಂಡು ಹಾಲ್ನಿಂದ ಹೊರಗೆ ಬರಲಾರಂಭಿಸಿದರು. ಕಾಂತಿ ‘ಹಕ್ಕಿ ಹಕ್ಕಿ’ ಎನ್ನುತ್ತ ಹುಲ್ಲಿನ ಮೇಲೆ ಕುಳಿತ ಪಾರಿವಾಳವನ್ನು ಹಿಡಿಯಲು ಯತ್ನಿಸಿದಳು.
“ಏ ಸಾಕು ನಡಿ ಅದ್ಯಾಕೆ ಹಿಡೀತಿದಿ? ಅದೇನು ಕೋಳಿನಾ? ಅದ್ನೇನು ಕೊಯ್ದು ಸಾರು ಮಾಡಾಕೆ ರ್ತದಾ?” ಎಂದು ರಮಾಮಣಿ ಅವಳನ್ನು ಗಟ್ಟಿಯಾಗಿ ಹಿಡಿದುಕೊಂಡಳು.
ಕಾಂತಿ ಜೋರಾಗಿ ತಲೆ ಅಲುಗಾಡಿಸಿದಳು. “ಆಟಾ ಆಡ್ತೀನಿ” ಎಂದಳು. “ಮುದುಕಿಯಾಗಿದ್ದೀ ಆಟವಂತೆ ಆಟಾ” ಎನ್ನುತ್ತ್ತ ಕಾಂತಿಯ ಬೆಕ್ಕಿನ ಬಾಲದಂತಹ ಬಿಳಿಗೂದಲಿನ ಜಡೆ ಹಿಡಿದು ಆಡಿಸಿದಳು ರಮಾಮಣಿ.
ಮಾಡುವ ಕೆಲಸ ಬಿಟ್ಟು ಗಡಬಡಿಸಿ ಅವರ ನಡುವೆ ಹೋಗಿ ನಿಂತು “ಸಾಕು ನಡೀರಿ, ಒಳ್ಳೆ ಮಕ್ಕಳ ಹಾಂಗ ಶುರು ಹಚ್ಚರ್ತೀರಿ ಮಾತಿಗೆ ಮಾತು” ಎಂದು ನಾನು ಗದರಿದೆ. ನನ್ನತ್ತ ಪೆಚ್ಚು ನಗೆಬೀರಿದ ರಮಾಮಣಿ “ಬಾ ಕಾಂತಿ ಚಾ ಕುಡಿಯೋಣು” ಎಂದು ಅಕ್ಕರೆಯಿಂದ ತಾಯಿ ಮಗುವನ್ನು ಕರೆದೊಯ್ಯುವಂತೆ ಕೈ ಹಿಡಿದುಕೊಂಡು ಹೊರಟಳು. ಅರೆಗಳಿಗೆಯ ಹಿಂದೆ ಕಾಂತಿಗೆ ಕಾಡಿದವಳು ಇವಳೇ ಹೌದೇ ಎಂದು ಬೆರಗು ಮೂಡಿತ್ತು! ನಗುತ್ತ ಸರಸರನೆ ಊಟದ ಮನೆಯತ್ತ ಹೋಗಿ ಚಹಾ ಕುಡಿದೆ. ರಿಜಿಸ್ಟರಿನಲ್ಲಿ ಸಹಿ ಮಾಡಿ ಬಸ್ಸ್ಟಾಂಡಿನತ್ತ ಹೆಜ್ಜೆಹಾಕಿದೆ. ತೆರೆದ ಗೇಟಿನಿಂದ ವೇಗವಾಗಿ ವ್ಯಾನು ಬಂತು. ಅರೆ ಹುಬ್ಬಳ್ಳಿಯಿಂದ ಇಷ್ಟು ಬೇಗ ಬಂದರೆ ಎಂದು ನೋಡುವಷ್ಟರಲ್ಲಿ ಶಿವು ಅದರಿಂದ ಇಳಿದ, ಒಳಗೆ ಖಾಲಿ ಇತ್ತು.
ನನ್ನ ಕಂಗಳಲ್ಲಿ ಪ್ರಶ್ನೆ ಇತ್ತು. “ಇಂದು ಕೆಲಸಾ ಆಗಲಿಲ್ಲ. ಅಲ್ಲಿ ಹೆಣ್ಣುಮಕ್ಳೂ ಅದಾರಂತ ನಾಳೆ ಮುಂಜಾನೆ ಎಂಟ ಗಂಟೇಕ್ಕ ನೀವೂ ರ್ರಿ, ಹೋಗಿ ಎಲ್ಲರನ್ನು ಕರಕೊಂಡ ಬರೋಣ” ಎಂದ ಶಿವು.
ಯಾವಾಗಲೂ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಹೆಂಗಸರನ್ನು ರಕ್ಷಣೆ ಮಾಡುವಾಗ ಹೆಂಗಸರೇ ಹೋಗದಿದ್ದರೆ ಜನರು ಅಡ್ಡಿಪಡಿಸುತ್ತಿದ್ದರು. ಹುಬ್ಬಳ್ಳಿ ಪೊಲೀಸ್ ಸ್ಟೇಷನ್ನಿನಲ್ಲಿ ಪೇದೆಯಾಗಿ ಕೆಲಸ ಮಾಡುವ ಪರಿಮಳಾ ಅಥವಾ ರಾಣಿ ನಮ್ಮ ಜೊತೆಗೆ ರಕ್ಷಣಾಕಾರ್ಯದಲ್ಲಿ ಕೈಜೋಡಿಸುತ್ತಿದ್ದರು. ನಿರಾಶ್ರಿತರ ಶಿಬಿರದಿಂದ ನಾನು, ಶಿವು, ಭದ್ರಾಚಾರಿ ಹೋಗುತ್ತಿದ್ದೆವು.
ನನಗೆ ವಿಷಯ ಅರ್ಥವಾಗಿತ್ತು “ಓಕೆ” ಎನ್ನುತ್ತ ಸರಸರನೆ ಹೆಜ್ಜೆಹಾಕಿದೆ.
* * *
ಮನೆ ಸಮೀಪ ಬರುವಷ್ಟರಲ್ಲಿ ಸಂಜೆಗತ್ತಲಾಗಿತ್ತು. ಓಣಿಯಲ್ಲಿ ಅಲ್ಲಲ್ಲಿ ಕಟ್ಟೆಯ ಮೇಲೆ ಕುಳಿತು ಜನರು ಮಾತಾಡುತ್ತಿದ್ದರು, ನಗುತ್ತಿದ್ದರು. ಮೊದಲೆಲ್ಲ ಅಮ್ಮನೂ ಅವರಿವರ ಜೊತೆ ಮಾತಾಡುತ್ತ ಸಂತೋಷವಾಗಿ ಕಾಲ ಕಳೆಯುತ್ತಿದ್ದರು. ಆದರೆ ಈಗ ಮನೆಯ ಹೊಸ್ತಿಲು ದಾಟಲೂ ಬೇಸರ. ಗೊಣಗಾಡಿಕೊಂಡೆ.
“ಡ್ಯೂಟಿ ಮುಗೀತೇನವ್ವಾ?” ಎಂದು ಕೇಳಿದವರಿಗೆ “ಹೂನ್ರೀ, ಚಾ ಆತ್ರೀ?” ಎಂದೆಲ್ಲ ಮಾತನಾಡಿಸುತ್ತ ಮನೆಯ ಸಮೀಪ ಬಂದೆ. ಕಾಲಿಂಗ್ ಬೆಲ್ ನಾಮಕಾವಸ್ಥೆಗಷ್ಟೆ, ಕೆಲಸ ಮಾಡುತ್ತಿರಲಿಲ್ಲ. ಬಾಗಿಲ ಚಿಲಕವನ್ನು ಕಟಕಟಿಸಿದೆ. “ಬಂದ್ಯಾ ಬಾ ಮಗಳೇ” ಎನ್ನುತ್ತ ನಿಶ್ಶಕ್ತ ಕೈಗಳಿಂದ ಬಾಗಿಲು ತೆರೆದು ಮುಗುಳ್ನಕ್ಕಳು ಅಮ್ಮ. ವ್ಯಾನಿಟಿಬ್ಯಾಗಿನಿಂದ ಮೆಡಿಸಿನ್ನು ತೆಗೆದು ಅವಳ ಕೈಗಳಿಗಿತ್ತು ಕ್ಯಾರಿಬ್ಯಾಗಿನಿಂದ ಹಾಲಿನ ಪ್ಯಾಕೆಟ್ಟನ್ನು ತೆಗೆದು ಸಿಂಕಿನ ಬಳಿ ಇಟ್ಟೆ.
“ಕೈಕಾಲು ಮಾರಿ ತೊಳಕೊಂಡ ಬಂದು ಚಾ ಕಾಸತೇನಿ” ಎಂದು ಅಮ್ಮನ ಭುಜ ತಟ್ಟಿ ಅಡುಗೆಮನೆಯ ಮೂಲೆಯಲ್ಲಿದ್ದ ಪುಟ್ಟ ಬಚ್ಚಲುಮನೆ ಹೊಕ್ಕೆ. ಕಾಲುತೊಳೆದು ಮುಖಕ್ಕೆ ನೀರೆರೆಚಿಕೊಂಡಾಗ ಹಾಯ್ ಎನಿಸಿತು. ಟವೆಲ್ಲಿನಿಂದ ನೀರನ್ನು ಒತ್ತಿ ಮುಖವನ್ನು ಒಣಗಿಸಿಕೊಂಡು ಅಡುಗೆಮನೆ ಹೊಕ್ಕೆ. ಗ್ಯಾಸಿನ ಮೇಲೆ ಇದ್ದ ಸಾರಿನ ಡಬರಿಯ ಮುಚ್ಚಳ ತೆಗೆದು ಇಬ್ಬರಿಗೆ ಸಾಕಾಗುತ್ತದೆ ಎಂದು ಖಾತ್ರಿಪಡಿಸಿಕೊಂಡು ಅನ್ನಕ್ಕಿಟ್ಟು ಚಹಾ ಮಾಡಿ ಹೊರಗೆ ಬಂದೆ. ಗೂಡಿನಲ್ಲಿದ್ದ ದೇವರ ಫೋಟೋದ ಮುಂದೆ ದೀಪ ಹಚ್ಚಿಟ್ಟು ಕಣ್ಮುಚ್ಚಿ ಮಣಮಣ ಏನೇನೋ ಶ್ಲೋಕ ಹೇಳುತ್ತಿದ್ದ ಅಮ್ಮ ಚಹಾದ ವಾಸನೆ ಬಂದೊಡನೆ ದೇವರಿಗೊಮ್ಮೆ ಕೈಮುಗಿದು ಬಂದು ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತಳು. ಸರ್ರನೆ ಚಹಾ ಹೀರಿ “ನಿನ್ನ ಕೈಯಾಗಿನ ಚಾ ಕುಡಿದಾಗ ಹೋಗೂ ಜೀವ ಹೊಳ್ಳಿ ಬಂದ ಹಾಂಗ ಅನ್ನಿಸ್ತದ” ಎಂದು ಸಣ್ಣಗೆ ನಕ್ಕಳು. ಹಾಲು ತಂದಿದ್ದು ಸಾರ್ಥಕವಾಯಿತೆನಿಸಿತು ನನಗೆ. ಅಮ್ಮನ ಮೊಗದಲ್ಲಿ ನಗುವೆಷ್ಟು ಅಪರೂಪದ ಸಂಗತಿ ಈಗ!
“ಅಮ್ಮಾ, ನೀ ಭಜನೆ ಹೇಳೂ ಹಾಂಗ ಇದ್ರ ಹೇಳಿಕೋತ ಕುಂದ್ರು. ನಾ ಜಲ್ದಿ ಕೆಲ್ಸಾ ಮುಗಿಸ್ತೇನಿ. ಲಗೂ ಊಟಾ ಮುಗಿಸಿ ಮಕ್ಕೋಬೇಕು, ನಾಳೆ ದಿನಾ ಹೋಗೂದಕ್ಕಿಂತ ಒಂದ ತಾಸು ಮೊದಲ ಹೋಗಬೇಕಾಗೇತಿ” ಎನ್ನುತ್ತ ಕುಡಿದ ಚಹಾದ ಲೋಟಗಳನ್ನು ತೊಳೆಯಲೆಂದು ತೆಗೆದುಕೊಂಡು ಎದ್ದೆ.
“ನಾಳೆ ಯಾಕ ಜಲ್ದಿ ಹೋಗತೀದೀ?” ಕೇಳಿದಳು ಅಮ್ಮ.
“ಹುಬ್ಬಳ್ಳಿ ರೈಲ್ವೇಸ್ಟೇಶನ್ನಿಂದ ಕೆಲವು ಭಿಕ್ಷುಕಿಯರನ್ನು ಕರೆದುಕೊಂಡು ಬರಬೇಕಾಗೇತಿ” ಎಂದೆ.
“ಇದೆಂಥಾ ನೌಕರಿ ಹಿಡದೀದಿ ಮಗಳೇ” ಎನ್ನುತ್ತ ಅಮ್ಮ ಕಣ್ಣಿಗೆ ಸೆರಗು ಹಚ್ಚಿ ಬಿಕ್ಕಿದಳು. “ನಿಮ್ಮಪ್ಪ ಬದುಕಿದ್ದಿದ್ದರೆ ನೀ ದುಡಿದು ಮನೀ ನಡೆಸೋ ಪರಿಸ್ಥಿತಿ ಬರತಿರಲಿಲ್ಲ…” ಎಂದು ನೋವಿನಿಂದ ಹೇಳಿದಳು.
“ದಿನಾ ಅದೇ ಅದೇ ಮಾತ ಯಾಕ ಹೇಳ್ತೀದಿ? ಬಿಡವ್ವಾ, ಅಪ್ಪಾ ಸಾಯೋದಕ್ಕೂ ನಾನೇ ಕಾರಣ…” ಎಂದು ಮಾತು ನಿಲ್ಲಿಸಿದೆ.
“ಬಿಡ್ತು ಅನ್ನು, ಹೇಡಿಯಾಗಿ ನಮ್ಮನ್ನ ನಡುನೀರಿನಲ್ಲಿ ಕೈಬಿಟ್ರು ನಿಮ್ಮಪ್ಪ” ಎನ್ನುತ್ತ ಅಮ್ಮ ಗೋಡೆಗೆ ತಲೆ ಆನಿಸಿ ಕಣ್ಮುಚ್ಚಿದಳು.
ಲಗುಬಗೆಯಿಂದ ಅಡುಗೆಮನೆಯತ್ತ ಸಿಂಕಿನಲ್ಲಿಟ್ಟ ಪಾತ್ರೆಗಳನ್ನು ತಿಕ್ಕಲು ಶುರುಮಾಡಿದೆ. ಮನಸ್ಸು ಹಿಮ್ಮೊಗವಾಗಿ ನೆನಪಿನ ದಾರಿಯಲ್ಲಿ ಹೊರಟಿತು.
ಧಾರವಾಡದ ದತ್ತಾತ್ರೇಯ ದೇವಸ್ಥಾನದ ಇದಿರು ಪೂಜಾಸಾಮಗ್ರಿಗಳನ್ನು ಮಾರುವ ಅಪ್ಪನ ಅಂಗಡಿಗಾಗಿ ಅಮ್ಮ ಬಿಡುವಿನ ಸಮಯದಲ್ಲಿ ಬತ್ತಿ, ಹೂಬತ್ತಿ, ಹತ್ತಿಯ ಹಾರಗಳನ್ನು ಸಿದ್ಧಪಡಿಸುತ್ತಿದ್ದ ದಿನಗಳೆಷ್ಟು ಚೆನ್ನಾಗಿದ್ದವು. ದೇವಸ್ಥಾನಕ್ಕೆ ಬರುವ ಭಕ್ತರೇ ಅಪ್ಪನ ಅಂಗಡಿಯ ಗ್ರಾಹಕರು.
ಸಮಾಜಪುಸ್ತಕಾಲಯದ ಸಮೀಪ ಮೂರಂಕಣದ ಮನೆಯಲ್ಲಿ ನನ್ನ, ಅಣ್ಣನ ಕಲರವ. ಸಮೀಪದ ವಿದ್ಯಾರಣ್ಯ ಸ್ಕೂಲಿನಲ್ಲಿ ಕಲಿಯುತ್ತಿದ್ದ ನಾನು ಓದಿನಲ್ಲಿ ದಡ್ಡಿಯಾಗಿರದಿದ್ದರೂ ಹೇಳಿಕೊಳ್ಳುವಷ್ಟು ಜಾಣೆಯೂ ಆಗಿರಲಿಲ್ಲ. ನನಗಿಂತ ದೊಡ್ಡವನಾದ ಅಣ್ಣನಿಗೆ ಎಂಟು ವರ್ಷವಾಗಿತ್ತೇನೋ. ಬೇಸಿಗೆ ರಜೆಯಲ್ಲಿ ಮನೆಯ ಮುಂದೆ ಸೈಕಲ್ ಆಡುತ್ತಿದ್ದವನಿಗೆ ಲಾರಿಯೊಂದು ರಭಸದಿಂದ ಗುದ್ದಿ ಸ್ಥಳದಲ್ಲೇ ಸತ್ತುಹೋಗಿದ್ದ. ಹೆತ್ತವರ ಗೋಳು ಮುಗಿಲುಮುಟ್ಟಿತ್ತು. ಅಣ್ಣನ ಸಾವು ನನ್ನ ಮನಸ್ಸಿಗೂ ಘಾಸಿ ಮಾಡಿತ್ತು. ಎಲ್ಲ ವಿಷಯಗಳಲ್ಲೂ ಕಚ್ಚಾಡುತ್ತ ಜಗಳವಾಡುತ್ತಿದ್ದ ಅಣ್ಣನ ಬಗ್ಗೆ ನನಗೆ ಅಪಾರ ಪ್ರೀತಿ ಇತ್ತು ಎಂಬುದು ಅವನು ಸತ್ತ ನಂತರವೇ ನನಗರ್ಥವಾಗಿದ್ದು. ‘ಅವನಿಗೊಂದೇ ಸೈಕಲ್ ಕೊಡಿಸಿದ್ದೀರಿ’ ಎಂದು ಸದಾ ತಕರಾರು ಮಾಡುತ್ತಿದ್ದ ನಾನು ಮನೆಯ ಮೂಲೆಗಿಟ್ಟ ಅವನ ಮುರಿದ ಸೈಕಲ್ಲನ್ನು ಮುಟ್ಟಿಯೂ ನೋಡಲಿಲ್ಲ. ಸರಿಮಾಡಿಸಿಕೊಡು ಎಂದೂ ಅಪ್ಪನಲ್ಲಿ ಕೇಳಲಿಲ್ಲ.
ಹಸಿದ ಹೊಟ್ಟೆ ಎಲ್ಲ ನೋವಿಗೂ ಮದ್ದೇನೋ. ಅಪ್ಪ ನಿಧಾನವಾಗಿಯಾದರೂ ಸುಧಾರಿಸಿಕೊಂಡು ಅಂಗಡಿಗೆ ಹೋಗಲಾರಂಭಿಸಿದರು. ಅಮ್ಮನೂ ತನ್ನ ಕೆಲಸ ಶುರುಮಾಡಿದಳು. ಕಷ್ಟಪಟ್ಟಾದರೂ ನನಗೆ ಓದಿಗೆ ಅಗತ್ಯವಾದ ಎಲ್ಲ ಸಂಗತಿಗಳನ್ನೂ ಅಪ್ಪ ತಂದುಕೊಡುತ್ತಿದ್ದರು. ಆದರೆ ಸರ್ಪ ನಿಧಿಯನ್ನು ಕಾಯುವಂತೆ ನನ್ನನ್ನು ಆಡಲು ಎಲ್ಲಿಗೂ ಕಳಿಸದೆ ನನ್ನನ್ನು ಅಮ್ಮ-ಅಪ್ಪ ಇಬ್ಬರೂ ಕಾಯುತ್ತಿದ್ದರು.
ನಾನು ಹೈಸ್ಕೂಲಿಗೆ ಹೋಗುವಾಗಲೇ ಹೆತ್ತವರಿಗೆ ನನ್ನ ಮದುವೆಯ ಚಿಂತೆ ಶುರುವಾಗಿತ್ತು. ಪೈಸೆಗೆ ಪೈಸೆ ಸೇರಿಸಿ ಯಾವುದೋ ಬಂಗಾರದ ಅಂಗಡಿಗೆ, ಪಾತ್ರೆಯಂಗಡಿಗೆ ಅಮ್ಮ ಚೀಟಿ ಹಣ ತುಂಬಿಸುತ್ತಿದ್ದರು. ಪ್ರತಿ ವರ್ಷವೂ ಒಂದಿಷ್ಟು ಪಾತ್ರೆಗಳು, ಚೂರಾದರೂ ಬಂಗಾರ ಮನೆಗೆ ತರುತ್ತಿದ್ದಳು. ಪ್ರವಾಸ, ಪಾರ್ಟಿ ಎಂದು ಸಹಪಾಠಿಗಳು ಚೈನಿ ಮಾಡುವಾಗ ನನ್ನ ಆಸೆಗಳಿಗೆಲ್ಲ ನನ್ನ ಬರಿಗೈ ಅಡ್ಡಿಯಾಗುತ್ತಿತ್ತು. ಅಪ್ಪನನ್ನು ಹಣಕ್ಕಾಗಿ ಕೇಳಿದಾಗ ‘ಶೋಕಿ ಮಾಡೋವಷ್ಟ ರೊಕ್ಕ ನಮ್ಮಂಥಾವ್ರ ಕೂಡ ಎಲ್ಲರ್ತದ ಮಗಳೆ?’ ಎನ್ನುತ್ತಿದ್ದ. ‘ಸುಧಾ ಭಾಳ ಜಿಪುಣಿದ್ದಾಳ’ ಎಂದು ಗೆಳತಿಯರು ನನಗೆ ಪಟ್ಟಗಟ್ಟಿದ್ದರು. ಹೆತ್ತವರ ಪರಿಸ್ಥಿತಿ ಗೊತ್ತಿದ್ದರಿಂದ ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ ಬಿ.ಎ. ಪದವಿ ಮುಗಿಸಿದೆ. ಸೈಕಾಲಜಿ ನನಗಿಷ್ಟವಾದ ಸಬ್ಜೆಕ್ಟ್ ಆಗಿತ್ತು. ಎಂ.ಎ. ಮಾಡುವ ಆಸೆಗೆ ಅಡ್ಡಿಯಾದದ್ದು ಅಪ್ಪನ ಅಂಗಡಿಯೆದುರಿನ ಅಂಗಡಿ ಪಾಟೀಲರ ಮಗ ರಾಜುವಿನಿಂದ ಬಂದ ಮದುವೆಯ ಪ್ರಸ್ತಾಪ. ಅವನ ರೂಪ ಕಣ್ಮುಂದೆ ಬಂದಂತಾಗಿ ಅವುಡುಗಚ್ಚಿದೆ.
“ಅಡುಗೆ ಆತೇನವ್ವಾ?” ಅಮ್ಮನ ಕೂಗಿನಿಂದ ವಾಸ್ತವಕ್ಕೆ ಮರಳಿದೆ. ಅನ್ನ, ಸಾರು, ಉಪ್ಪು, ಉಪ್ಪಿನಕಾಯಿ, ಕತ್ತರಿಸಿದ ಸೌತೇಕಾಯಿ, ಎಲ್ಲವನ್ನೂ ಹಾಲ್ಗೆ ಸ್ಥಳಾಂತರಿಸಿದೆ. ಅಮ್ಮನ ಕೈಗೆ ಎಲ್ಲವನ್ನೂ ಬಡಿಸಿದ ತಟ್ಟೆಯನ್ನು ಕೊಟ್ಟೆ. “ನನಗಿಷ್ಟೇ ಸಾಕೇಳು. ನೀನು ಊಟ ಮಾಡು. ಭಾಳ ದಣಿವಾದ ಹಾಂಗ ಕಾಣ್ತಿದ್ದೀ” ಎಂದಳು. “ಆತವ್ವಾ” ಎನ್ನುತ್ತ ನನ್ನ ತಟ್ಟೆಗೂ ಅನ್ನ ಹಾಕಿ ಸಾರು ಹಾಕಿಕೊಂಡೆ. ನಿಂಬೆಕಾಯಿ ಉಪ್ಪಿನಕಾಯಿಯನ್ನು ನೆಕ್ಕುತ್ತ, ಸೌತೇಕಾಯಿ ಹೋಳು ಕಚ್ಚುತ್ತ, ಸಾರನ್ನವನ್ನು ಉಣ್ಣಲಾರಂಭಿಸಿದಾಗ ಹಸಿದ ಹೊಟ್ಟೆಗೆ ಅದೇ ಅಮೃತವಾಗಿ ಕಂಡಿತು.
“ಹೂಂ ಮತ್ತ ಇಂದೇನು ಕೆಲ್ಸಾ ಮಾಡೀದಿ?” ಅಮ್ಮ ಮಾತಿಗೆಳೆದಳು.
“ಮುಂಜಾನೆ ಸುರೇಶ ಅಂತ ಒಬ್ರು ಡಾಕ್ಟರ್ ಬಂದಿದ್ರು. ಎಲ್ಲಾರನ್ನು ತಪಾಸಣೆ ಮಾಡಿದ್ರು. ಅವ್ರು ಯರ್ಯಾರಿಗೆ ಏನೇನು ಖಾಯಿಲೆ, ಏನೇನು ಟ್ರೀಟ್ಮೆಂಟು ಅಂತ ಹೇಳ್ತಾ ಹೋದ್ರು ನಾನು ಎಲ್ಲಾ ಬರೆದಿಡ್ತಾ ಹೋದೆ. ಆಮ್ಯಾಲೆ ಊಟಕ್ಕೆ ನೀಡಾಕ ಊಟದ ಮನಿಗೆ ಹೋದೆ. ಉಂಡ ಮ್ಯಾಲ ಗಾರ್ಡನ್ ಸ್ವಚ್ಛ ಮಾಡಾಕ ಕುಂತೆ, ಸಂಜಿಮಟಾ ಅದೇ ಕೆಲ್ಸಾ ಮಾಡಿದೆ. ನಡುನಡುವೆ ಅವರಿವರ ನಡ ಬರಕ ನಿಂತು ಜಗಳಾ ತಪ್ಪಸಬೇಕಾಗ್ತತಿ. ಇರುವ ನೂರಾಮೂವತ್ತೆರಡು ಮಂದ್ಯಾಗ ಅರ್ಧಾ ಮಂದಿ ಅರೆಹುಚ್ಚರಂಗ ಅದಾರು. ಒಬ್ಬೊಬ್ರಿಗೆ ತಾನು ಯಾರೆಂಬೋದು ನೆನಪಿಲ್ಲ, ಕೆಲವರಿಗೆ ತಮ್ಮ ಭಾಷೆ, ತಮ್ಮೂರು ಯಾವುದು ಎನ್ನೋದೆ ನೆನಪಿಲ್ಲ. ಕೆಲವರಿಗೆ ಎಲ್ಲ ನೆನಪದ ಆದ್ರ ಮನಿಗೆ ಹೋಗೋ ಮನಸಿಲ್ಲ. ಒಬ್ಬೊಬ್ರ ಕಷ್ಟಾ ನೋಡಿದ್ರ ನಾವೆಷ್ಟು ಸುಖವಾಗಿದ್ದೇವಿ ಅನಿಸ್ತದ ಅಮ್ಮಾ” ಎಂದೆ.
“ಮದುವಿ ಮಾಡಿಕೊಂಡ ದಿನಾನೇ ನಿನಗೆ ಹಾಕಿದ ವಸ್ತ್ರಾ ವಡವೆ ಎಲ್ಲ ದೋಚಿಕೊಂಡು ನಾಪತ್ತೆಯಾದ ನಿನ್ನ ಗಂಡ ಆರು ವರ್ಷಾ ಆದ್ರೂ ಪತ್ತೆ ಆಗಿಲ್ಲ. ಅದೇ ಕೊರಗಿನ್ಯಾಗ ನಿನ್ನಪ್ಪ ನೇಣು ಹಾಕಿಕೊಂಡ ಮ್ಯಾಲ ನನ್ನ ಜವಾಬ್ದಾರಿ, ಈ ಮನೀ ನಡೆಸೋ ಜವಾಬ್ದಾರಿ ಎಲ್ಲ ನಿನಗೇ ಬಿದ್ದತಿ, ಏನು ಸುಖವೋ ನಾ ಕಾಣೆ” ಎನ್ನುತ್ತ ಅಮ್ಮ ಕಣ್ಣಿಗೆ ಸೆರಗೊತ್ತಿ ಕಣ್ಣೀರೊರೆಸಿಕೊಂಡಾಗ ಮನ ಭಾರವಾಯ್ತು.
ಉಂಡ ತಟ್ಟೆ, ಅನ್ನ ಸಾರಿನ ಡಬರಿ ಎಲ್ಲವನ್ನೂ ಮತ್ತೆ ಸಿಂಕಿಗೆ ತುಂಬಿ ಪಾತ್ರೆ ತೊಳೆದೆ. ಅಡುಗೆಮನೆಯನ್ನೆಲ್ಲ ಸ್ವಚ್ಛ ಮಾಡಿಟ್ಟು ಬಂದು ಹಾಸಿಗೆ ಸುರುಳಿ ಬಿಡಿಸಿದೆ.
ಅವ್ವ ಆಗಲೇ ಮಲಗಿದ್ದಳು, ನಿದ್ದೆ ಬಂದಂತಿತ್ತು. ಲೈಟ್ ಆಫ್ ಮಾಡಿ ಮಲಗಿದೆ. ದೇಹ ದಣಿದಿದ್ದರೂ ಕೂಡ ನಿದ್ದೆ ಬರಲೇ ಇಲ್ಲ. ಮೊಬೈಲ್ ತೆಗೆದು ಫೇಸ್ಬುಕ್ಕು ಓಪನ್ ಮಾಡಿ ಸ್ಕ್ರೋಲ್ ಮಾಡುತ್ತ ಯರ್ಯಾರದ್ದೋ ಬರಹ ಚಿತ್ರಗಳನ್ನೆಲ್ಲ ನೋಡುತ್ತ ಸಾಗಿದೆ. ಯಾವುದೋ ಯುವ ಜೋಡಿ ಮದುವೆಗೆ ಮುನ್ನ ಹೊಡೆಸಿದ ಒಂದಿಷ್ಟು ಫೋಟೋಗಳು ಒಂದೆಡೆ ಕಂಡವು. ಹೆಣ್ಣಿನ ಕಣ್ಣಲ್ಲಿ ತುಂಬಿದ ಒಲವು, ತುಟಿಯಂಚಿನಲ್ಲಿ ಮೂಡಿದ ಮುಗುಳ್ನಗು, ಅವಳ ನಡು ಬಳಸಿ ನಿಂತವನ ಕಣ್ಣಲ್ಲಿ ಆರಾಧನಾ ಭಾವ… ‘ಒಂದಾಗಿ ಚೆಂದಾಗಿ ಬಾಳಿರಿ’ ಎಂದು ಮನ ಶುಭ ಹಾರೈಸಿತು.
ಆದರೆ ಮರುಘಳಿಗೆಯೇ ಈ ಶುಭಹಾರೈಕೆಗಳೆಲ್ಲ ನಿಷ್ಪ್ರಯೋಜಕವೇನೋ ಅನಿಸಲಾರಂಭಿಸಿತು. ತನ್ನ ಹಾಗೂ ರಾಜೂನ ನಿಶ್ಚಿತಾರ್ಥದಲ್ಲಿ, ಮದುವೆಯಲ್ಲಿ ಎಷ್ಟೊಂದು ಜನರು ಹೀಗೆ ಶುಭಹಾರೈಸಿದ್ದರು, ಯಾವುದೂ ಫಲಿಸಲಿಲ್ಲ. ಮದುವೆಯ ದಿನ ರಾತ್ರಿ ಮಲಗುವ ಮುನ್ನ ನನ್ನೆಲ್ಲ ಒಡವೆಗಳನ್ನು ಕಳಚಿ ರಾಜುವಿನ ಕೈಗೆ ಕೊಟ್ಟು ಮಲಗಿದ್ದೆ, ಆಯಾಸಕ್ಕೆ ಚೆನ್ನಾಗಿ ನಿದ್ದೆ ಬಂದಿತ್ತು. ಎದ್ದಾಗ ಮನೆಯ ಜನರೆಲ್ಲ ಗುಸುಗುಸು ಮಾತಾಡುತ್ತಿದ್ದರು. ಅತ್ತೆ ನನ್ನನ್ನು ದುರುದುರನೆ ನೋಡಿ ‘ನನ್ನ ಮಗಾ ಬಂಗಾರದಂಥಾಂವ. ಈಕಿ ಕಾಲ್ಗುಣಾನೇ ಸರಿ ಇದ್ದ ಹಾಂಗಿಲ್ಲ, ಮನಿ ಬಿಟ್ಟು ಹೋಗ್ಯಾನ’ ಎಂದಳು.
‘ನನಗೀ ಮದುವೆ ಇಷ್ಟವಿಲ್ಲ. ನಾನು ಮನೆ ಬಿಟ್ಟು ಹೋಗಿದ್ದೇನೆ’ ಎಂದು ಚೀಟಿ ಬರೆದಿಟ್ಟು ರಾಜು ಅವನ ಅತ್ತೆಯ ಮಗಳು ಶಾಂತಾಳ ಜೊತೆ ಓಡಿಹೋಗಿದ್ದ. ಓಡಿಹೋದವನಿಗೆ ಶಾಮೀಲೆಂಬಂತೆ ಅವರು ರಾಜು, ಶಾಂತಾನನ್ನು ಹುಡುಕಲು ಯತ್ನಿಸಲೇ ಇಲ್ಲ!
ನನ್ನ ಮದುವೆಗಾಗಿ ಕೂಡಿಟ್ಟ ಹಣವೆಲ್ಲ ಖರ್ಚಾಗಿ ಮತ್ತಷ್ಟು ಸಾಲವನ್ನು ಮಾಡಿಕೊಂಡ ಅಪ್ಪನು ಕಂಗಾಲಾಗಿಹೋಗಿದ್ದ. ಗುಂಗುರುಕೂದಲು ಎತ್ತರ ನಿಲವಿನ ರಾಜುವನ್ನು ಮನಸಾರೆ ಮೆಚ್ಚಿ, ಸುಖೀಸಂಸಾರದ ನೂರೆಂಟು ಕನಸು ಕಾಣುತ್ತಿದ್ದ ನಾನು ಅನಿರೀಕ್ಷಿತ ಆಘಾತಕ್ಕೆ ನೆಲಕಚ್ಚಿದ್ದೆ. ಅಪ್ಪ ಪೊಲೀಸ್ ಸ್ಟೇಷನ್ ಮೆಟ್ಟಿಲು ತುಳಿದಿದ್ದ. ಹತ್ತಾರು ಸಲ ಅಡ್ಡಾಡಿದ ಮೇಲೆ ಬರಿಗೈ ಬಂಟರಿಗೆ ಕಾನೂನಿನ ಬೆಂಬಲ ಸಿಗಲಾರದು ಎನ್ನುವ ಸತ್ಯ ಅರ್ಥವಾದಾಗ ಮನೆಯ ಒಳಕೋಣೆಯಲ್ಲಿ ನೇಣು ಹಾಕಿಕೊಂಡು ಸಾವಿಗೆ ಶರಣಾದ. ಗಾಯದ ಮೇಲೆ ಬರೆ ಹಾಕಿದಂತಾಯ್ತು.
ನಿದ್ದೆ ಬಾರದೆ ಮತ್ತೆ ಮತ್ತೆ ಮಗ್ಗುಲು ಬದಲಿಸಿದೆ. ‘ನಿಮ್ಮ ಮಗಳನ್ನು ಮದುವಿ ಮಾಡ್ತೀರೇನ್ರೀ? ನನ್ನ ತಮ್ಮನ ಹೆಂಡತಿ ಸತ್ತು ಹೋಗ್ಯಾಳ ಎರಡ ಚಿಕ್ಕ ಚಿಕ್ಕ ಮಕ್ಕಳದಾವ…’ ಎಂದು ಪಕ್ಕದ ಮನೆಯವರು ಕೇಳಿದ ಮೇಲೆ ಅಮ್ಮ ಮನೆಯಿಂದಾಚೆ ಹೋಗುವುದನ್ನೇ ಬಿಟ್ಟರಲ್ಲವೆ. ಕೇವಲ ಹಣದಾಸೆಗೆ ಮದುವೆಯಾದ ರಾಜುವಿಗೆ ನನ್ನ ಬದುಕು ಹಾಳುಮಾಡಲೇನು ಅಧಿಕಾರವಿತ್ತು? ಛೇ… ಒಂದು ದಿನವೂ ಅವನೊಂದಿಗೆ ಸುಖಪಡದಿದ್ದರೂ ನಾನು ಈಗ ಎರಡನೆಯ ಮದುವೆ ಆಗಬೇಕಾದ ಹೆಣ್ಣು! ಗಂಡ ಸತ್ತರೋ, ಡೈವೋರ್ಸ್ ಆದರೋ ಇನ್ನೊಂದು ಮದುವೆ ಆಗಬಹುದು, ನಾಪತ್ತೆ ಆದವನ ಹೆಂಡತಿಯನ್ನು ಮದುವೆ ಆಗುವವರಿಗೆ ಭಯ! ಮೊದಲಿನ ಗಂಡ ಧುತ್ ಎಂದು ಪ್ರತ್ಯಕ್ಷ ಆಗಿ ಹಕ್ಕು ಸಾಧಿಸಿದರೆ?
‘ಅಮ್ಮಾ, “ನನ್ನ ಮಗಳು ಮದುವೆ ಆಗುವುದಿಲ್ಲವಂತೆ. ಅವಳು ನನ್ನ ಪಾಲಿಗೆ ಮಗ” ಎಂದು ಕೇಳಿದವರಿಗೆ ಧೈರ್ಯವಾಗಿ ಹೇಳಮ್ಮಾ. ಮದುವೆ ಮಾಡಿಕೊಂಡು ಬೇರೆ ಯಾವ್ದೋ ಮನೆತನಾ ಉದ್ಧಾರ ಮಾಡೂದಕ್ಕಿಂತ ಈ ಮನೆತನಾನೇ ನೋಡಿಕೊಳ್ತೇನೆ.” ಅಮ್ಮನಿಗೆ ಹೇಳುತ್ತ ಹೇಳುತ್ತ ಅದೇ ಬದುಕಿನ ನಿರ್ಧಾರವಾದಂತಾಗಿತ್ತು. ಪ್ರೊಫೆಸರ್ ವಿಶ್ವನಾಥರ ಬೆಂಬಲದಿಂದ ಇದೊಂದು ಸರಕಾರಿ ಸಂಸ್ಥೆಯಲ್ಲಿ ಉದ್ಯೋಗ ಸಿಕ್ಕಿದ್ದರಿಂದ ನಮ್ಮ ಬದುಕಿನ ಬಂಡಿ ಉರುಳ್ತಾ ಇದೆ, ನಿಟ್ಟುಸಿರಿಟ್ಟೆ.
ನಾಲ್ಕು ಗಂಟೆಯಾಯ್ತೇನೋ ಮೀರಜ್ ರೈಲು ಹೋಗುವ ಸಪ್ಪಳ ಕೇಳಿತು. ನಿದ್ದೆಯ ಮಂಪರಿಗೆ ಜಾರಿದೆ. ಅಲಾರಂ ಸಪ್ಪಳಕ್ಕೆ ದಡಬಡಿಸಿ ಎದ್ದೆ, ಆರು ಗಂಟೆಯಾಗಿತ್ತು. ಹೊರಗಡೆ ನೀರು ಸುರಿಯುವ ಸಪ್ಪಳ ಕೇಳುತ್ತಿತ್ತು. ಮನೆ ಹೊರಗಿನಿಂದ ನೀರು ತಂದು ಬ್ಯಾರೆಲ್ ತುಂಬಿ, ನೀರು ಕಾಯಿಸಿ, ಝಳಕ ಮಾಡಿದೆ. ಬಿಸಿಬಿಸಿಯಾಗಿ ಉಪ್ಪಿಟ್ಟು ಮಾಡಿ ಅಮ್ಮನಿಗೂ ಕೊಟ್ಟು ನಾನೂ ತಿಂದು ಸಿದ್ಧಳಾದೆ. ‘ಅಮ್ಮಾ ನಾನಿನ್ನು ಹೊರಡ್ತೀನಮ್ಮಾ, ಮನೆ ಕಡೆ ಹುಷಾರು’ ಮೆಲ್ಲನೆ ಉಪ್ಪಿಟ್ಟು ತಿನ್ನುತ್ತಿದ್ದ ಅಮ್ಮ ಮೌನವಾಗಿ ತಲೆ ಆಡಿಸಿದಳು.
* * *
‘ಅವ್ವಾ ನಾ ಒಲ್ಲೆ, ಮುಂಜಾನೆ ಮುಂಜಾನೆ ಇಷ್ಟೊಂದ ಮಂದಿ ಎಲ್ಲಿಂದ ಎಲ್ಲಿಗೆ ಹೋಕ್ಕಾರೋ ಏನ ಕಥಿಯೋ’ ಎಂದು ಗೊಣಗಾಡುತ್ತ, ಜನರ ಮಧ್ಯೆ ನುಸುಳುತ್ತ ಭಿಕ್ಷುಕರೆಲ್ಲೆಲ್ಲಿ ಇದ್ದಾರೆ ಎಂಬುದನ್ನು ಗಮನಿಸಿದೆ. ನಡುಹರಯದವಳೊಬ್ಬಳು ಪ್ಲಾಟ್ಫಾರಂನ ತುದಿಗೆ ಭಗ್ನಮೂರ್ತಿಯಂತೆ ಕುಳಿತಿದ್ದಳು. ಬೇಡುವುದರಲ್ಲಿಯೂ ಅವಳಿಗೆ ಆಸಕ್ತಿ ಇದ್ದಂತಿರಲಿಲ್ಲ. ಒಂದು ಬಟ್ಟೆಯ ಗಂಟು ಪಕ್ಕದಲ್ಲಿತ್ತು. ಉಟ್ಟ ಸೀರೆ ಮುದುಡಿತ್ತು, ತಲೆ ಕೆದರಿತ್ತು ಯಾರೋ ಅವಳೆದುರು ಇಟ್ಟ ಇಡ್ಲಿಯ ಸುತ್ತ ನೊಣಗಳು ಹಾರಾಡುತ್ತಿದ್ದರೂ ಅವಳು ನಿರಾಸಕ್ತಿಯಿಂದ ಕುಳಿತಿದ್ದಳು.
ಇನ್ನೊಬ್ಬಳು ಇಳಿವಯಸ್ಸಿನವಳು. ಲಗುಬಗೆಯಿಂದ ಎಲ್ಲರ ಮುಂದೂ ತಟ್ಟೆಯನ್ನೊಡ್ಡಿ ಹಲ್ಲುಗಿಂಜಿ ಬೇಡುತ್ತಿದ್ದಳು. ಹರಯದ ಹೆಣ್ಣೊಬ್ಬಳು ಲಂಬಾಣಿ ಹೆಂಗಸಿನಂತೆ ವೇಷ ಹಾಕಿಕೊಂಡು ಕುಳಿತು “ಅಣಾ, ಅಕಾ” ಎಂದು ದೈನ್ಯದಿಂದ ಕೈಚಾಚಿ ಬೇಡುತ್ತಿದ್ದಳು. ಚಾದಂಗಡಿಯ ಪಕ್ಕದಲ್ಲಿ ಇಬ್ಬರು ಹೆಂಗಸರು ಚಾ ಕುಡಿಯುತ್ತಲೇ ಜಗಳ ಆಡುತ್ತಿದ್ದರು. ಇಬ್ಬರ ವೇಷಭೂಷಣದಿಂದಲೇ ಬೇಡುವವರೆಂಬುದು ಅರ್ಥ ಆಗುವಂತಿತ್ತು. “ಹಲ್ಕಟ್ ರಂಡಿ… ನಾ ಹೋಗೂ ಡಬ್ಬಿಗೇ ನೀ ಯಾಕ ಬರ್ತಿದಿ…” ಎಂದು ಒಬ್ಬಳು ಹೇಳುತ್ತಿದ್ದಳು “ಇದೇನು ನಿಮ್ಮಪ್ಪನ ಆಸ್ತಿ ಏನ… ಬಿಕನಾಸಿ…” ಎಂದು ಮತ್ತೊಬ್ಬಳು ಗುರಾಯಿಸುತ್ತಿದ್ದಳು. ಕನ್ನಡ ಭಾಷೆಯಲ್ಲಿರುವ ಬೈಗುಳಗಳ ಪರಿಚಯ ಮಾಡಿಕೊಳ್ಳಬೇಕೆಂದರೆ ಇಂಥವರ ಬಳಿ ಜಗಳ ಆಡಬೇಕು ಎಂದು ಶಿವು ಹೇಳುವುದು ನೆನಪಾಗಿ ನಗು ಬಂತು. ಸರಸರನೆ ಸ್ಟೇಷನ್ ಹೊರಗಿದ್ದ ವ್ಯಾನಿನತ್ತ ನಡೆದೆ. ನಾನು ಹೋದ ಹತ್ತು ನಿಮಿಷಗಳ ನಂತರ ಶಿವು ಬಂದ, “ಹೆಂಗಸರು ಎಷ್ಟು ಮಂದಿ ಅದಾರ ಸುಧಾ ಮೇಡಂ?” ಕೇಳಿದ.
“ಐದು ಮಂದಿ ಹೆಂಗಸರು ಕಂಡರ್ರೀ, ಗಂಡಸರು ಎಷ್ಟ ಮಂದಿ ಅದಾರು?”
“ಗಂಡಸರು ನಾಲ್ಕ ಮಂದಿ ಅದಾರು. ಒಬ್ಬಾಂವ ಶೌಚಾಲಯದ ಸಮೀಪ ಮಕ್ಕೊಂಡಾನ, ಕಾಲು ಗ್ಯಾಂಗ್ರಿನ್ ಆಗಿ ಕೊಳೆತು ಹುಳಾ ಬಿದ್ದಾವ್ರೀ… ನೋಡಾಕ ಆಗವಲ್ಲದು, ಒಬ್ಬಾಂವ ಕುಡ್ಡ ಅದಾನು, ಒಬ್ಬಾಂವ ಬುಡ್ಡಾ ಅದಾನು ಇನ್ನೂ ಆರ ಮಂದಿ ಅಲ್ಲಿ ಇಲ್ಲಿ ಮಕ್ಕೊಂಡಾರ, ಕುಡಿದು ಮಕ್ಕೊಂಡಾರೋ, ಗತಿಗೆಟ್ಟು ಬೀದಿಗೆ ಬಿದ್ದಾವ್ರು ಇಲ್ಲಿ ಬಂದು ಮಕ್ಕೊಂಡಾರೋ ಪತ್ತೆ ಹಚ್ಚೋದೆ ಕಷ್ಟದ’’ ಎಂದ ಶಿವ.
“ಇನ್ನೊಂದ ಹತ್ತು ಮಿನಿಟನಾಗ ಪೊಲೀಸರು ಬರತಾರ. ಆಮ್ಯಾಲ ನಾಲ್ಕು ಬಡಿತಾ ಬಡಿದಾದ್ರೂ ಅವರ ಬಾಯಿಂದ ಸತ್ಯ ಹೊರಡಿಸ್ತಾರ. ಅವ್ರು ಯುನಿಫಾರಂ ಮೇಲೆ ಬಂದರೆ ಇವರೆಲ್ಲ ಅಡಗಿಕೊಂಡೇಬಿಡ್ತಾರ. ಉಣ್ಣಾಕ ಕೊಡತೇವಿ, ಅರವಿ ಕೊಡತೇವಿ, ಅಂದ್ರೂ ಶಿಬಿರದಾಗ ಇರೂದಕ್ಕಿಂತ ಇಲ್ಲಿ ಸ್ವತಂತ್ರವಾಗಿ ಓಡಾಡೋದೇ ಕೆಲವರಿಗೆ ಚೊಲೋ ಅನ್ನಿಸ್ತದ. ಅವ್ರದ್ದು ಏನೇನೋ ಸೆಟಪ್ಪುಗಳು ಇರ್ತಾವ, ಅಷ್ಟೇ ಅಲ್ಲ ಪೊಲೀಸರನ್ನ ಕಂಡಕೂಡ್ಲೆ ಜೈಲಿಗೆ ಹಾಕ್ತಾರ ಅನ್ನೋ ಭಯ. ನಿರಾಶ್ರಿತರ ಶಿಬಿರ ಅದ ಅನ್ನೋದೇ ಎಷ್ಟೋ ಭಿಕ್ಷುಕರಿಗೆ ಗೊತ್ತಿಲ್ಲ. ಮೂರು ವರ್ಷದ ಹಿಂದಕ ಹಿಂಗ ಬಂದಾಗ ಒಬ್ಬ ಭಿಕ್ಷÄಕನಂತೆ ಇರಾಂವನ ಹಿಡಿಯಾಕ ಹೋದೆ. ಅಂವ ನನ್ನಾ ಜೋರಾಗಿ ದೂಡಿ ಕೆಡವಿ ಓಡಿ ಹೋದಾ. ನನಗ ಚೊಲೋ ಪೆಟ್ಟ ಹತ್ತಿತ್ತು. ಆಮ್ಯಾಲೆ ಇನ್ಸ್ಪೆಕ್ಟರ್ ಹೇಳಿದ್ರು ಅಂವಾ ಡ್ರಗ್ ಮಾರಾಂವ ಅದಾನಂತ. ಪೊಲೀಸರಿಗೂ ಚಳ್ಳೇಹಣ್ಣು ತಿನ್ನಿಸಿಕೊಂತ ಇದ್ದಾಂವಂತ…” ಶಿವ ಮಾತಾಡುವ ಮೂಡಿನಲ್ಲಿದ್ದ.
“ಹೌದೇನ್ರೀ? ಇಷ್ಟ ಮಂದ್ಯಾಗೂ ಅಂಥಾದ್ದನ್ನ ಮಾಡ್ತಾರಂದ್ರೆ ಎಷ್ಟು ಧೈರ್ಯ ಇರಬೇಕು. ಆಗ ನಿಮಗೂ ಜೋರ ಪೆಟ್ಟ ಹತ್ತಿತ್ತೇನು?” ಎಂದು ಹೇಳಿದೆ.
“ಹೂನ್ರೀ. ಬಿದ್ದಾಗ ಅನ್ನಿಸಲಿಲ್ಲ, ರಾತ್ರಿ ಕಾಲನೋವು ಜೋರಾತು. ನರಳಾಟ ನೋಡಿದ ನನ್ನ ಹೆಂಡ್ತಿ ಸಾಕ ಈ ನೌಕ್ರೀ, ಇಂದ ಬಿದ್ದ ಬಂದೀರಿ, ಮತ್ಯಾವಾಗರೆ ಜೀವಕ್ಕ ಏನಾರ ಆದ್ರೇನು ಮಾಡೂದು? ಕೆಲಸಕ್ಕ ರಿಸೈನ್ ಮಾಡ್ರಿ. ನಮ್ಮ ತವರು ಮನಿಗಿ ಹೋಗೋಣ. ಒಂದಿಷ್ಟು ಸಾಲಾ ಮಾಡಿ ನಮ್ಮಪ್ಪನ ಹೊಲದಾಗ ಕೋಳಿಫಾರಂ ಮಾಡಿಕೊಂಡು ಸುಖವಾಗಿ ಇರೋಣ ಅಂದ್ಲು! ಕೋಳಿ ಸಾಕೂದೂ ಸಾಯ್ಸಿ ರೊಕ್ಕಾ ಮಾಡೋದು! ಅದ್ರಾಗೇನು ಸುಖ?!… ಮಾರನೇ ದಿನಾ ಆಸ್ಪತ್ರೆಗೆ ಹೋದರೆ ಕಾಲಿಗೆ ಹೇರ್ಲೈನ್ ಕ್ರಾಕ್ ಬಂದೇತಿ ಅಂದ್ರು ಡಾಕ್ಟರು. ಕಾಲಿಗೆ ಕ್ರೇಪ್ ಬ್ಯಾಂಡೇಜು ಹಾಕಿಕೊಂಡು ಹತ್ತು ದಿನಾ ಓಡಾಡಿ, ಸಾವಿರಾರು ರೂಪಾಯಿ ಮೆಡಿಸಿನ್ ತಗೊಂಡ ಮ್ಯಾಲ ಆರಾಮಾತು ನೋಡ್ರೀ. ನಮ್ಮನಿಯವ್ರಿಗೆ ನನ್ನ ನೌಕ್ರಿ ಅಂದ್ರ ಆಗಿಬರಂಗಿಲ್ಲ. ನನಗ ಮಾವನ ಮನಿ ಹಂಗಿನಾಗ ಹೋಗಿ ಇರಾಕ ಮನಸ್ಸಿಲ್ಲ. ಈ ಕೆಲಸದಾಗ ಜಂಜಾಟ ಅದ ಖರೇರೀ, ಆದ್ರ ಮನಸ್ಸಿಗೆ ಸಮಾಧಾನನೂ ಅದ. ಅಸಹಾಯಕರನ್ನು ನೋಡಿಕೊಳ್ಳೂದು ಪುಣ್ಯೇದ ಕೆಲಸ ಅಂದ್ರ ಆಕೀಗ ತಿಳಿವಲ್ಲದು. ದಿನಾ ಮನಿ ಒಳಗ ಜಗಳ ತಪ್ಪಂಗಿಲ್ಲ. ಭಾಳ ಮಾತಾಡಿ ಬೋರ್ ಹೊಡಸಿದ್ನೆರ್ರೀ ನಾ ನಿಮಗ… ಇವೆಲ್ಲ ನಂದೆ ಸುದ್ದಿ ಆತು. ನಿಮ್ಮನ್ಯಾಗ ನಿಮ್ಮವ್ವಾರು ಹೆಂಗದಾರು?”
“ಅವ್ವಾನ ಆರೋಗ್ಯ ಅಷ್ಟಕಷ್ಟ. ಅವ್ರೀಗಿ ಏನು ಮಾಡಾಕೂ ಹುಮ್ಮಸ್ಸಿಲ್ಲ. ಆವತ್ತು ಒಂದ ದಿನಾ ಚಿತ್ತಿ ಭಾಳ ಗದ್ಲಾ ಮಾಡಾಕ ಹತ್ತಿದಾಗ ಸಮಾಧಾನ ಮಾಡಾಕ ಹಾಸ್ಟೆಲ್ ಒಳಗ ಹೋದೆ. ಆಕಿ ಸಿಟ್ಟೀಲಿ ನನ್ನ ಮಾರಿಗೆಲ್ಲ ಚೂರಿ ಅರಬಿ ಹರದು ಹಾಕಿದ್ಲು. ಅವ್ವಾಗ ಹೇಳಲಾರದೆ ಮುಚ್ಚಿಡಬೇಕು ಅಂತ ಮಾಡಿದ್ದೆ. ಆದ್ರ ಆಕಿಗೆ ಗೊತ್ತಾಗಿಹೋತು. ಉಣ್ಣಾಕ ಕುಂತಾಗ ಹಿಂಗ್ಯಾಕ ಆಗೇತಿ ಮಾರಿ ಎಂದಳು. ಗಾರ್ಡನ್ನಿನ್ಯಾಗ ಗುಲಾಬಿ ಮುಳ್ಳ ತಾಗೇತಿ ಅಂದೆ. ತೊಳೆದು ಒಣಗಿಸಿದ ಅರಬಿ ಹರಿದಿದ್ದು ನೋಡಿ ಮಾರನೆ ದಿನಾ ಗಂಟ ಬಿದ್ಲು ನೀ ನನಗ ಹೇಳಲಾರದೆ ಏನೋ ಮುಚ್ಚಿಡಾಕ ಹತ್ತೀದಿ ಅಂತ ಕಣ್ಣೀರು ಹಾಕಾಣ ಬುದ್ಧಿ ಭ್ರಮಣೆ ಆಗಿರೋ ಚಿತ್ತಿ ಹರದ್ಲು ಅನ್ನೋದನ್ನ ಹೇಳಿದಾಗ ಗಾಬ್ರೀ ಆತಾಕಿಗೆ. ನಾ ಶಿಬಿರದಾಗ ದುಡಿಯೋದು ಮನಸ್ಸಿಲ್ಲ. ನಾ ಓದಿರೋ ಬಿ.ಎ. ಡಿಗ್ರಿಗೆ ಇದಕ್ಕಿಂತ ಚೊಲೋ ನೌಕ್ರಿ ಈ ನಗರದಾಗ ಎಲ್ಲಿ ಸಿಗತೇತ್ರೀ? ಅಷ್ಟೇ ಅಲ್ಲ ಇದು ನೌಕ್ರೀ ಅನ್ನೋದಕ್ಕಿಂತ ಹೆಚ್ಚು ಸೇವಾಕಾರ್ಯವಾಗಿ ಮನಸ್ಸಿಗೆ ಸಮಾಧಾನ ಕೊಡತತಿ. ಈಗ ಒಂದ ಜೊತೆ ಎಕ್ಸಟ್ರಾ ಅರಬಿ ಇಟಗೊಂಡ ಶಿಬಿರಕ್ಕೆ ಬರತೀನಿ” ಎಂದು ನಕ್ಕೆ.
ಅಷ್ಟರಲ್ಲಿ ಇನ್ಸ್ಟೆಕ್ಟರ್ ಯಾದವಾಡರು “ಬಂದು ಭಾಳ ಹೊತ್ತಾತೇನ್ರೀ?” ಎನ್ನುತ್ತ ವ್ಯಾನಿನ ಕಿಟಕಿಯೆದುರು ಬಂದರು. ನಾವಿಬ್ಬರೂ ದಡಬಡಿಸಿ ಇಳಿದು “ನಮಸ್ಕಾರ ಸರ್” ಎಂದೆವು. ಸ್ಟೇಷನ್ನಿನಲ್ಲಿ ನೋಡಿದವರ ಬಗ್ಗೆ ಕೂಡಾ ಹೇಳಿದೆವು. ಪರಿಮಳಾ ರಾಣಿ ಇಬ್ಬರೂ ಬಂದರು. ನಮಸ್ಕಾರದ ವಿನಿಮಯ ಆಯ್ತು. ಮುಂದೊಂದು ತಾಸಿನ ಕಾರ್ಯಾಚರಣೆ ನಡೆಯಿತು. ಹುಲಿಗೆಮ್ಮ ಎನ್ನುವ ದಿಕ್ಕು ನೋಡಿಕೊಂಡು ಕುಳಿತ ಹೆಂಗಸು, ಚಾಲಾಕಿ ಮುದುಕಿ, ಲಂಬಾಣಿ ಬನ್ಸಿ ಮೂವರನ್ನು ಮಾತಾಡಿಸಿ, ಮನವೊಲಿಸಿ ವ್ಯಾನಿಗೇರಿಸಿದೆವು. ಜಗಳ ಆಡುತ್ತಾ ನಿಂತ ಹೆಂಗಸರು ಅದೆಲ್ಲಿ ಅಡಗಿಕೊಂಡರೋ ಇಡೀ ಸ್ಟೇಷನ್ ತಿರುಗಿದರೂ ಸಿಗಲಿಲ್ಲ. ಒಬ್ಬ ಮುದುಕ ಒಬ್ಬ ಅಂಧನನ್ನೂ ಶಿವೂ ತಂದು ವ್ಯಾನಿಗೇರಿಸಿದರು.
ಭದ್ರಾಚಾರಿ ಶಿವು ಸೇರಿ ಗ್ಯಾಂಗ್ರಿನ್ ಆದ ಸೇತೂರಾಮನನ್ನು ಹೊತ್ತುಗೊಂಡು ಬಂದು ವ್ಯಾನಿಗೇರಿಸಿದರು. ಇಡೀ ವ್ಯಾನಿಗೂ ಒಂದು ಬಗೆಯ ದುರ್ನಾತ ಹಬ್ಬಿತು. ಉಳಿದವರು ಮೂಗು ಮುಚ್ಚಿಕೊಂಡಾಗ ಅವನು ಅಸಹಾಯಕತೆಯಿಂದ ಉಳಿದವರನ್ನೊಮ್ಮೆ ನೋಡಿ, ನೋವಿನಿಂದ ನರಳುತ್ತ ಕಣ್ಣೀರು ಸುರಿಸಿದ. ಹುಲಿಗೆಮ್ಮ ಮಾತ್ರ ಕಲ್ಲಿನಂತೆ ಕುಳಿತಿದ್ದಳು. ವ್ಯಾನು ಸರಕಾರಿ ಆಸ್ಪತ್ರೆಯತ್ತ ಚಲಿಸಿತು. ಸೇತೂರಾಮನನ್ನು ಬೆಡ್ ಇಲ್ಲ ಎನ್ನುವ ಕಾರಣ ಒಡ್ಡಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಳ್ಳಲೇ ಇಲ್ಲ! ಶಿವೂ ಅದೆಷ್ಟೋ ಹೊತ್ತು ಅಲ್ಲಿದ್ದವರ ಬಳಿ ರಿಕ್ವೆಸ್ಟ್ ಮಾಡಿದ, ಗೋಗರೆದ, ಜಗಳವಾಡಿದ. ಇನ್ಸ್ಪೆಕ್ಟರ್ ಬಳಿ ಫೋನ್ ಮಾಡಿಸಿದ. ಆದರೂ ಅವರಿಗೆ ಗ್ಯಾಂಗ್ರೀನ್ ಆದ ಭಿಕಾರಿಯ ಟ್ರೀಟ್ಮೆಂಟ್ ಮಾಡುವುದಕ್ಕೆ ಮನಸ್ಸಿರಲಿಲ್ಲ, ಮತ್ತೆ ಸೇತೂರಾಮನನ್ನು ವ್ಯಾನಿಗೇರಿಸಿದರು. ಅವನ ಗಂಟಿನಲ್ಲಿದ್ದ ಬಟ್ಟೆಯನ್ನೇ ತೆಗೆದು ಅವನ ಕಾಲಿಗೆ ಹಗುರವಾಗಿ ಸುತ್ತಿದೆವು, ವಾಸನೆ ಕೊಂಚ ಕಡಮೆಯೆನಿಸಿತು. ಶಿಬಿರದತ್ತ ಹೊರಟಾಗ ಮನ ಭಾರವಾಗಿತ್ತು. ‘ಇಂಥ ಭಿಕಾರಿಗಳನ್ನೆಲ್ಲ ಬದುಕಿಸಿ ಏನು ಮಾಡಾವ್ರು ಇದ್ದೀರಿ ನೀವು? ನಮ್ಮ ಜೀವಕ್ಕೂ ರಿಸ್ಕ್ ತಂದೊಡ್ಡತೀರಿ’ ಎನ್ನುವ ಸರಕಾರಿ ಆಸ್ಪತ್ರೆಯ ಡಾ. ಆನಂದ ವಂಶಿಯವರ ಮಾತುಗಳು ನಮ್ಮ ಕಿವಿಯಲ್ಲಿ ರಿಂಗಣಿಸುತ್ತಿದ್ದವು.
* * *
ಶಿಬಿರದಲ್ಲಿ ಎಲ್ಲರನ್ನೂ ಇಳಿಸಿದಾಗ ಸ್ವಚ್ಛತಾ ಸಿಬ್ಬಂದಿ ಪಾರೂ, ರೂಪಾಲಿ ಹೆಂಗಸರನ್ನು ಸ್ನಾನ ಮಾಡಿಸಲು ಕರೆದುಕೊಂಡು ಹೋದರು. ಸ್ವಾಮಿ, ರತ್ನಾಕರ ಸೇರಿ ಸೇತುರಾಮನನ್ನು ವಸತಿಗೃಹದ ರೂಮಿಗೆ ಹೊತ್ತೊಯ್ದು ಮಲಗಿಸಿದರು. ಉಳಿದಿಬ್ಬರನ್ನು ಕೆಳಗಿಳಿಸಿ ಕಲ್ಲಿನ ಮೇಲೆ ಕುಳ್ಳಿರಿಸಿ ಕೂದಲು ಕತ್ತರಿಸಲಾರಂಭಿಸಿದರು. ಇಂತಹ ಭಿಕ್ಷುಕರ ಮೈಯಲ್ಲಿ ಸೇರಿದ ಕೊಳೆ ತೆಗೆದು ಶಿಬಿರದ ಶಿಸ್ತಿಗೆ ಹೊಂದಿಸುವುದು ನಿಜಕ್ಕೂ ಸವಾಲೇ ಸರಿ ಎಂದುಕೊಳ್ಳುತ್ತ ನಾನು ಹಾಸ್ಟೆಲ್ಲಿನತ್ತ ನಡೆದೆ. ಹಾಸ್ಟೆಲ್ಲಿನ ಹೊರಗೆ ಅಂಗಳದಲ್ಲಿ ವೃತ್ತಾಕಾರವಾಗಿ ಶಿಬಿರಾರ್ಥಿಗಳು ಕುಳಿತಿದ್ದರು. ಮಧ್ಯೆ ನಿಂತ ಮನದೀಪ ಕೌರ್ ‘ಹಿಂದ ದೇಶಕೇ ನಿವಾಸಿ ಸಬ ಜನ ಏಕ ಹೈ, ರಂಗ ರೂಪ ವೇಷ ಭಾಷಾ ಸಾರೇ ಅನೇಕ ಹೈ’ ಎಂದು ಮಧುರವಾಗಿ ಹಾಡುತ್ತಿದ್ದಳು. ಎಂಥ ದೈವದತ್ತ ಕಂಠ. ಸಂಗೀತ ಕಲಿತರೆ ಒಳ್ಳೆಯ ಗಾಯಕಿ ಆಗುತ್ತಿದ್ದಳೇನೋ ಪಾಪ. ಯಾವುದೋ ಲಾರಿ ಡ್ರೈವರಿನ ಪ್ರೇಮಜಾಲದಲ್ಲಿ ಸಿಕ್ಕು ಪಂಜಾಬಿನಿಂದ ಹುಬ್ಬಳ್ಳಿಗೆ ಬಂದ ಹುಡುಗಿ ಇವಳು. ಅವನೋ ಉಂಡ ಎಲೆ ಬಿಸಾಡುವಂತೆ ಒಂದಿಷ್ಟು ದಿನ ಅನುಭವಿಸಿ ಹೆದ್ದಾರಿಯ ಪಕ್ಕದಲ್ಲಿ ಇಳಿಸಿ ನಾಪತ್ತೆಯಾಗಿದ್ದ. ಯಾರೋ ತಂದು ಶಿಬಿರಕ್ಕೆ ಸೇರಿಸಿದ್ದರು, ಅವಳಿಗಾದ ಆಘಾತದಿಂದ ಅರೆಬರೆಯಾಗಿ ಈ ವಿಷಯಗಳನ್ನೆಲ್ಲ ಹೇಳಿದ್ದರೂ ತನ್ನ ಊರು ಹೆತ್ತವರ ವಿವರಗಳನ್ನೆಲ್ಲ ಎಷ್ಟು ಒತ್ತಾಯ ಮಾಡಿದರೂ ಹೇಳುತ್ತಿರಲೇ ಇಲ್ಲ.
“ಸುಧಾ ಮೇಡಂ…” ಎಂದು ಉದ್ವೇಗದಿಂದ ಕೂಗುತ್ತ ಶಿವು ಬಂದ. “ಏನಾಯ್ತು ಸರ್?” ಎಂದು ಕೇಳಿದೆ. ಸಂಜನಾನ ಗಂಡ, ಅಪ್ಪ ಅವಳನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ! ಬಾಣಂತಿ ಸನ್ನಿಯಾದ ಸಂಜನಾ ಗಂಡ ಸ್ನಾನಕ್ಕೆ ಹೋದಾಗ ಮನೆಯಿಂದ ಹೊರಗೆ ಬಂದಿದ್ಲಂತ್ರಿ. ಮನೆಯವ್ರು ಪೊಲೀಸ್ ಕಂಪ್ಲೇಂಟ್ ಕೊಟ್ಟು ಮುಂಬೈ ಪೂರ್ತಿ ಜಾಲಾಡಿದ್ರೂ ಸಿಗಲಿಲ್ಲ. ಆಕಿ ರೈಲು ಹತ್ತಿಗೊಂಡು ಹುಬ್ಬಳ್ಳಿಗೆ ಬಂದಿಳಿದಿದ್ದಾಳೆ. ಹೊಳ್ಳಿ ಹೋಗಾಕ ತಿಳಿಲಾರದೆ ನಮ್ಮ ಕೈಗೆ ಸಿಕ್ಕಿ ಇಲ್ಲಿ ಬಂದಾಳ್ರೀ. ‘ಕಾಣೆಯಾದವರು’ ಎಂದು ಪತ್ರಿಕೆಯಲ್ಲಿ ಬಂದವಳ ಫೋಟೋ ನೋಡಿ ಇಲ್ಲಿ ಬಂದು ಹೋದ ಪತ್ರಕರ್ತರೊಬ್ಬರು ಫೋನ್ ಮಾಡಿ ಸಂಜನಾ ಇಲ್ಲಿದ್ದ ವಿಷಯ ಹೇಳಿದ್ದಾರೆ.
ಮಗುವಿಗೆ ಒಂದು ವರ್ಷವಾಗಿದೆ ಎಂದು ಸಂಜನಾಳ ಗಂಡ ಹೇಳಿದ್ದು ಕೇಳಿ ಎಲ್ಲರಿಗೂ ಸಂಭ್ರಮವಾಗಿತ್ತು. ಅಂದು ಎಲ್ಲರಿಗೂ ಸಿಹಿ ಅಡುಗೆ! ಹೊಸ ಸೀರೆ ಉಡಿಸಿ ಸಂಜನಾಳನ್ನು ಕಾರಿನ ಬಳಿ ಕರೆದುಕೊಂಡು ಹೋದಾಗಲೂ ‘ಘರ್ ಜಾನಾ ಹೈ ಬಚ್ಚಿಕೋ ದೂಧ್ ಪಿಲನಾ ಹೈ’ ಎನ್ನುತ್ತಿದ್ದಳು. ಆದರೆ ಅವಳು ಗಂಡನನ್ನು ಗುರುತಿಸಿರಲೇ ಇಲ್ಲ. ಅಪ್ಪನ ಕೈ ಹಿಡಿದು ‘ಅಚ್ಛೆ ಆದ್ಮಿ’ ಎನ್ನುತ್ತ ಪಕ್ಕದಲ್ಲಿ ಕುಳಿತಳು.
“ಮಗುವನ್ನು ನೋಡಿದ ಮ್ಯಾಲಾದ್ರೂ ಆಕೀಗೆ ಎಲ್ಲಾ ನೆನಪಾದ್ರೆ ಸಾಕು ಪಾಪ” ಎಂದೆ. ಶಿವು “ಆಕಿ ಗಂಡ ಒಳ್ಳೆ ಟ್ರೀಟ್ಮೆಂಟ್ ಕೊಡಿಸ್ತೀನಿ ಅಂದಾರ” ಎಂದು ಮುಗುಳ್ನಕ್ಕ.
“ಅಳ್ನಾವರ ಶಿವಕ್ಕನ ಹಾಂಗ ವಾಪಸ್ಸ ಅಂತೂ ಬರದಿದ್ರೆ ಸಾಕು” ಎಂದೆ.
ಆಲದಮರದ ಕೆಳಗೆ ಕುಳಿತಿದ್ದ ಶಿವಕ್ಕನನ್ನು ನೋಡುತ್ತ “ಹೆತ್ತ ಮಗಳನ್ನು ಭಿಕ್ಷೆ ಬೇಡಲಿಕ್ಕೆ ಹಚ್ಚಿದ ಆಕಿ ಹೆತ್ತವರಿಗೆ ನಾಲ್ಕು ಬಾರಿಸಬೇಕು ಅನಿಸಿತ್ರೀ ನನಗೆ ಮೇಡಮ್ಮ. ‘ಆಕೀಗ ಫಿಟ್ಸ್ ಬರತದ ಹೆದ್ರಿಕಿ ನಮಗ. ಅದಕ್ಕ ಬಸ್ಸ್ಟಾಂಡ್ನಲ್ಲಿ ಬೇಡಲಿಕ್ಕೆ ಬಿಟ್ಟಿದ್ವಿ’ ಅಂದ್ರು! ಬಸ್ಸ್ಟ್ಯಾಂಡಿನಿಂದ ಕರಕೊಂಡು ಬಂದು ಆರು ತಿಂಗಳಾ ಇಲ್ಲಿ ಇಟಗೊಂಡು ಟ್ರೀಟ್ಮೆಂಟ್ ಕೊಡಿಸೀವಿ, ಈಗ ಆಕೀಗಿ ಆರಾಮಾಗೇದ ಅಂತ ಕನ್ವಿನ್ಸ್ ಮಾಡಿ ಬಿಟ್ಟು ಮನಿಗೆ ಬಂದಿದ್ದೇರಿ” ಎಂದು ಶಿವು ಮಾತು ನಿಲ್ಲಿಸಿದ.
“ಒಂದೇ ವಾರದಾಗ ಶಿವಕ್ಕನ ಮತ್ತ ಬಸ್ಸ್ಟಾಂಡಿನ್ಯಾಗ ಕೂಡಿಸಾಕ ಹತ್ತಿದ್ರಂತೆ. ಈಕಿ ಬೇಡಿದ ರೊಕ್ಕಾ ಎಲ್ಲಾ ವಸೂಲಿ ಮಾಡಿ ಅವರು ಚೈನಿ ಮಾಡತಾರಂತ ಪಾಪ. ಮನಃಶ್ಯಾರ ಅಲ್ಲ ತಗೋರಿ ಆಕಿ ಅಪ್ಪಾ-ಅಮ್ಮಾ… ಆಕಿಗೆ ಇಲ್ಲೀದೆ ಋಣಾ ಇರಬೇಕು” ಎಂದೆ.
ಯಾರೋ ಚಿಟ್ಟನೆ ಚೀರುವುದು ಕೇಳಿಸಿತು. ಶಿವೂ ನಾನು ಅತ್ತ ಧಾವಿಸಿದೆವು. ಸೇತೂರಾಮ ನೋವು ತಡೆಯಲಾರದೆ ಕೂಗಿಕೊಳ್ಳುತ್ತಿದ್ದ. ಶಿಬಿರದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸೋಮನಾಥ್ ಬಂದು ಸೇತೂರಾಮನನ್ನು ಪರೀಕ್ಷಿಸಿ ಪೇನ್ಕಿಲ್ಲರ್ ಇಂಜೆಕ್ಷನ್ ಮಾಡಿ, ನಿದ್ರೆ ಬರುವಂತೆ ಮಾತ್ರೆ ನುಂಗಿಸಿದರು. ಗಲಾಟೆ ನಿಲ್ಲಿಸಿ ನಿಧಾನವಾಗಿ ಅವನು ನಿದ್ದೆಗೆ ಜಾರಿದ. “ಇವನನ್ನು ಹಿಂಗ ಬಿಟ್ಟರೆ ಒಂದು ತಿಂಗಳೊಳಗ ಸಾಯುತಾನ, ಆಸ್ಪತ್ರೆಗೆ ಯಾಕೆ ಸೇರಿಸಿ ಬರಲಿಲ್ರೀ?” ಎಂದು ಶಿವುನನ್ನು ಪ್ರಶ್ನಿಸಿದರು ಸೋಮನಾಥ್.
“ಇವನಿರೋ ಕಂಡೀಷನ್ ನೋಡಿ ಅಡ್ಮಿಟ್ ಮಾಡಿಕೊಳ್ಳಲಿಲ್ಲ” ಹತಾಶೆಯಿಂದ ಶಿವು ಹೇಳಿದ.
“ಯಾರಿಗೂ ಬೇಡವಾದವರನ್ನೂ ನಾವು ಬದುಕಿಸಲು ಯತ್ನಿಸಬೇಕು” ಎನ್ನುತ್ತ ಕೈಗಳಿಗೆ ಗ್ಲೌಸ್ ಏರಿಸಿದ ಸೋಮನಾಥ್ ಡೆಟಾಯಿಲ್ನಲ್ಲಿ ಗಾಯವನ್ನು ತೊಳೆದು ಚಿಮಟದಲ್ಲಿ ಒಂದೊಂದೇ ಹುಳವನ್ನೆತ್ತಿ ಪ್ಲಾಸ್ಟಿಕ್ ಟಬ್ಬಿನಲ್ಲಿ ಹಾಕಲಾರಂಭಿಸಿದರು. ಶಿವು ಟಬ್ಹಿಡಿದು ಬಾಗಿ ಅವರೆದುರಿಗೆ ನಿಂತ. ‘ದೇವರನ್ನು ನಮ್ಮಂತಹ ಸಾಮಾನ್ಯರು ನೋಡಲಾಗದಿದ್ದರೂ ದೈವತ್ವ ಇರುವವರನ್ನು ನೋಡಬಹುದು’ ಎಂದು ಎಲ್ಲೋ ಓದಿದ ಸಾಲುಗಳು ನೆನಪಾದವು. ನನಗರಿವಿಲ್ಲದೆ ನಾ ಕೈ ಮುಗಿದು ನಿಂತಿದ್ದೆ.
* * *
ಕರುಣಾಳು ಬಾ ಬೆಳಕೆ… ಗೋಡೆಯ ಮೇಲಿರುವ ಬರಹವನ್ನು ಅಂದೇ ಹೊಸದಾಗಿ ಕಂಡಿರುವಂತೆ ದಿಟ್ಟಿಸುತ್ತಿದ್ದೆ. ಸದ್ದಿಲ್ಲದೆ ನನ್ನ ಹಿಂದೆ ಶಿವು ಬಂದು ನಿಂತಿದ್ದು ಅರಿವಾಗಿ ಮೆಲ್ಲನೆ ತಿರುಗಿದೆ. “ಮನೆಯಲ್ಲಿ ನಿತ್ಯದ ಜಗಳ ಸಾಕಾಗೇದ ನನಗೆ. ನೀವೊಪ್ಪಿದರೆ ಆಕೀನ ಬಿಟ್ಟು ನಿಮ್ಮನ್ನ ಮದುವೆ ಮಾಡ್ಕೋತೀನಿ” ಎಂದವನು ಕಣ್ಣಲ್ಲಿ ನೂರು ರಾಗ ನೂರು ಭಾವ.
ವಿಷಯ ಅನಿರೀಕ್ಷಿತವಾಗಿತ್ತು. ಹೊಯ್ದಾಡಿದ ಮನಸ್ಸನ್ನು ತಹಬದಿಗೆ ತರುತ್ತ “ಕ್ಷಮಿಸಿ ಶಿವು, ಸಹೋದ್ಯೋಗಿಯಾಗಿ ನಿಮ್ಮನ್ನು ಅಪಾರವಾಗಿ ಗೌರವಿಸುತ್ತೇನೆ ಅಷ್ಟೇ. ಗಂಡಹೆಂಡತಿಯ ನಡುವೆ ಮೂರನೆಯವರು ಬಂದರೆ ಆಗುವ ನೋವೇನೆಂಬುದನ್ನು ನಾನು ಉಂಡಿದ್ದೇನೆ. ಬೇರೆಯವರಿಗೆ ಖಂಡಿತಾ ನಾನು ಆ ನೋವನ್ನು ಕೊಡಲಾರೆ” – ಎಂದೆ.