ಟಾರು ಕಾಣದ ರಸ್ತೆಯ ಸುತ್ತ ಮೂವತ್ತು, ನಲವತ್ತು ಮನೆಗಳು. ಅಲ್ಲೊಂದು ಇಲ್ಲೊಂದು ಗುಡಿಸಲು. ಅದರ ಮುಂದೆ ಕೋಳಿ, ದನ. ಊರ ಹೊರಗೆ ನೀಲಗಿರಿಯ ತೋಪು. ಅದರ ಪಕ್ಕದಲ್ಲಿ ತುಂಗಭದ್ರಾ ನದಿ. ಆದರೆ ಸೊರಗಿ ಹರಿಯುತ್ತಿದ್ದ ಅದನ್ನು ನದಿ ಅಂತ ಕರೆಯಲು ಕೂಡ ಹೆದರಿದಂತೆ ಆ ಊರಿನ ಜನ ಅದನ್ನು ‘ಹೊಳೆ’ ಅಂತಲೇ ಕರೆಯುತ್ತಿದ್ದರು. ತುಂಗಭದ್ರಾ ನೀರಿನ ಸವಿ ಉಂಡ ಭತ್ತ, ಕಬ್ಬುಗಳ ಹಸಿರು ನೋಡುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಊರೆಲ್ಲ ಸುತ್ತಿ, ಸಾಯಂಕಾಲದ ವೇಳೆಗೆ ಸಂಶೋಧಕರ ಟೆಂಟ್ ಬಳಿ ಬಂದೆ. ನನ್ನ ಜೊತೆ ಪರಮೇಶಿ ಇದ್ರೆ ಆ ಸಂಶೋಧಕರು ಮನಸ್ಸು ಬಿಚ್ಚಿ ಮಾತನಾಡುವುದು ಯಾಕೋ ಅನುಮಾನವಾಯ್ತು.
ನಾ ಸಾಯಾಕ ಮೊದ್ಲು ಈ ಊರನ ಉದ್ಧಾರ ಮಾಡ್ತೀನಿ ಅಂತಿದ್ದ ಮಾಸ್ತ್ರ ಹೊಳಿ ದಂಡ್ಯಾಗ ಸತ್ತು ಮಲ್ಗ್ಯಾನಲ್ಲೋ ಶಿವ…” ಅಂತ ಪರಮೇಶಿ ಊರಿನ ಬೀದಿಬೀದಿಗಳಲ್ಲೂ ಡಂಗುರ ಹೊಡೆದಂತೆ ರೋದಿಸುತ್ತಿದ್ದರೆ, ಅತ್ತಕಡೆ ಬತ್ತಿದ ತುಂಗಭದ್ರಾ ಇದೀಗ ಮಲೆನಾಡಲ್ಲಿ ಬಂದ ಮಳೆಯಿಂದ ಭೋರ್ಗರೆಯುತ್ತ ಸಾಗುತ್ತಿತ್ತು. ಬಯಲುಸೀಮೆಯ ಆ ಇಡೀ ಊರಿಗೆ ಊರೇ ಬರುವ ಕೇಡುಗಾಲಕ್ಕೆ ಸಿದ್ಧವಾಗಿ ಕುಳಿತಂತೆ ಗಾಬರಿಯಿಂದಲೇ ಪರಮೇಶಿಯ ಲುಂಗಿಯನ್ನು ಹಿಂಬಾಲಿಸಿಕೊಂಡು ತುಂಗಭದ್ರೆಯ ತೀರದತ್ತ ಮೇಷ್ಟ್ರ ದುಃಸ್ಥಿತಿಗೆ ಕಣ್ಣೀರಿಡಲು ಹೊರಟರು.
* * *
ಆಗಷ್ಟೇ ಕಾಲೇಜ್ ಕ್ಯಾಂಪಸ್ನಲ್ಲಿ ಪತ್ರಿಕೋದ್ಯಮ ಮುಗಿಸಿದ್ದ ನಾನು, ಬೆಂಗಳೂರಿನಲ್ಲಿ ಕೆಲಸ ಸಿಗುವ ನಿರೀಕ್ಷೆಯಲ್ಲಿ ಚಪ್ಪಲಿ ಸವೆಸುತ್ತಿದ್ದೆ. ಯುನಿವರ್ಸಿಟಿಯಲ್ಲಿ ಚಿನ್ನದ ಪದಕ ಬಾಚಿದ್ದ ನನಗೆ ಯಾವುದಾದರೂ ಪತ್ರಿಕೆಯಲ್ಲಿ ಕೆಲಸ ಪಡೆಯುವುದು ಕಷ್ಟವೇನಾಗಿರಲಿಲ್ಲ. ಆದರೆ ಸಾವಿರ ಆಸೆಗಳನ್ನು ಹೊತ್ತ ನನಗೆ ಕೆಲಸ ಕೊಡುತ್ತೇವೆ ಎಂದವರು ಕೊಡುವ ಸಂಬಳ ಕೇಳಿಯೇ ‘ನಮ್ಮೂರಲ್ಲಿ ಮೂರು ಹಸು ಸಾಕಿಕೊಂಡ್ರೆ ಇದಕ್ಕೂ ಒಳ್ಳೆ ಕಾಸು ಮಾಡ್ಬೋದು ಕಣಪ್ಪ’ ಅಂತಿದ್ದ ಬಸವಣ್ಣನ ಮಾತು ನೆನಪಾಗಿ ಅಲ್ಲಿಂದ ಕಾಲ್ತೆಗೆಯುತ್ತಿದ್ದೆ. ಆದರೆ ಎಷ್ಟೇ ಚಪ್ಪಲಿ ಸವೆದರೂ, ಒಳ್ಳೆ ಸಂಬಳ ಬರುವ ಕೆಲಸ ಮಾತ್ರ ಸಿಗಲಿಲ್ಲ. ಕೊನೆಗೆ ‘ಭೂತವಾಣಿ’ ಮಾಸಪತ್ರಿಕೆಯ ಬಾಗಿಲು ಬಡಿದೆ. ಇತಿಹಾಸವನ್ನು ಕೆದಕಿ, ಅದರ ಗರ್ಭದಲ್ಲಿ ಅಡಗಿದ್ದ ವಿಷಯಗಳನ್ನು ಬಯಲು ಮಾಡುವುದರಿಂದ ‘ಭೂತವಾಣಿ’ಯ ಭವಿಷ್ಯ ನಿರ್ಧಾರವಾಗುತ್ತಿತ್ತು. ಇತಿಹಾಸದ ಬಗ್ಗೆ ನನಗಿದ್ದ ಜ್ಞಾನವನ್ನು ಅಳೆದು ತೂಗಿ ಕೊನೆಗೂ ‘ಭೂತವಾಣಿ’ಯಲ್ಲಿ ಬಸವಣ್ಣನ ಮೂರು ಹಸು ಕೊಡೋ ಕಾಸಿನಷ್ಟೇ ಸಂಬಳಕ್ಕೆ, ಹಾರರ್ ಸಿನೆಮಾದ ದೆವ್ವದಂತೆ ಕಾಣುತ್ತಿದ್ದ ಎಡಿಟರ್ ಸಾರಥ್ಯದ ‘ಭೂತವಾಣಿ’ ಮಾಸಪತ್ರಿಕೆ ಸೇರಿದೆ.
‘ಭೂತವಾಣಿ’ ಸೇರಿ ಒಂದ್ಹತ್ತು ದಿನ ಕಳೆದಿತ್ತು. ಬೆಳಗಿನ ನಿದ್ದೆಯಲ್ಲಿದ್ದವನಿಗೆ ಕಾಲ್ ಮಾಡಿದ ಎಡಿಟರ್ ಭೂತೇಶ್ “ಗುಡ್ ಮಾರ್ನಿಂಗ್, ಬೇಗ ರೆಡಿಯಾಗಿ ಕಚೇರಿಗೆ ಬನ್ನಿ ಸಂಜಯ್. ನಿಮಗೊಂದು ಅಸೈನ್ಮೆಂಟ್ ಇದೆ” ಅಂತ ಹೇಳಿ ಕಾಲ್ ಕಟ್ ಮಾಡಿದರು.
ತಕ್ಷಣವೇ ರೆಡಿಯಾಗಿ ಬೆಂಗಳೂರೆಂಬ ಮಹಾನಗರದ ಟ್ರಾಫಿಕ್ ದಾಟಿ ‘ಭೂತವಾಣಿ’ ಕಚೇರಿ ತಲಪುವಷ್ಟರಲ್ಲಿ ಸೂರ್ಯ ನೆತ್ತಿಗೇರಿದ್ದ. ನನ್ನ ಡೆಸ್ಕ್ ಬಳಿ ಬಂದು ಬ್ಯಾಗ್ ಇಟ್ಟು ಕುಳಿತ ತಕ್ಷಣವೇ ಎಡಿಟರ್ ಭೂತೇಶ್ನ ಸಹಾಯಕ ಶಂಕರ್ ಅಲಿಯಾಸ್ ಶಂಕ್ರಣ್ಣ ಎದುರಿಗೆ ಪ್ರತ್ಯಕ್ಷವಾದ. “ಎಡಿಟರ್ ಸರ್ ಕರೀತಿದ್ದಾರೆ” ಎಂದ. ಬೇಟೆಗೆ ಕಾದು ಕುಳಿತಂತೆ ನನಗೆ ಕಾಯುತ್ತಿರಬೇಕಾದರೆ ಏನೋ ತಲೆ ಹೋಗೋ ಕೆಲ್ಸಾನೇ ಇರಬೇಕು ಅಂದುಕೊಂಡು, ಅವನನ್ನು ಹಿಂಬಾಲಿಸಿದೆ. ಎಡಿಟರ್ ರೂಮ್ನ ಬಾಗಿಲು ತಳ್ಳಿ ಒಳಗೆ ಹೋಗುತ್ತಿದ್ದಂತೆಯೆ ಓಬಿರಾಯನ ಕಾಲದ ಯಾವುದೋ ಹಾಳೆಗಳನ್ನು ಓದುತ್ತಿದ್ದ ಎಡಿಟರ್ ಭೂತೇಶ್ ನಾನು ಬಂದಿದ್ದು ಗಮನಿಸಿ “ಓ, ಬನ್ನಿ ಸಂಜಯ್. ನಿಮಗೊಂದು ಇಂಪಾರ್ಟೆಂಟ್ ಅಸೈನ್ಮೆಂಟ್ ಕೊಡಬೇಕಿತ್ತು. ನಮ್ಮ ಡಿಸೆಂಬರ್ ತಿಂಗಳ ಎಡಿಷನ್ಗೆ ಒಂದು ಒಳ್ಳೇ ಟಾಪಿಕ್ ಸಿಕ್ಕಿದೆ, ಆದರೆ ಅದನ್ನ ಇನ್ನಷ್ಟು ಸ್ಟಡಿ ಮಾಡಿ ಒಳ್ಳೆ ಕವರ್ಪೇಜ್ ಆರ್ಟಿಕಲ್ ರೆಡಿ ಮಾಡೋ ಜವಾಬ್ದಾರಿ ನಿಮ್ಮದು” ಎನ್ನುತ್ತ ಆ ಓಬಿರಾಯನ ಕಾಲದ ಹಾಳೆಗಳನ್ನು ನನ್ನ ಎದುರಿಗೆ ತಳ್ಳಿದರು.
ಮುಖಪುಟದಲ್ಲಿ ‘ವಿಜಯನಗರ ಸಾಮ್ರಾಜ್ಯದ ಸೇತುವೆಗಳು’ ಎಂದಿತ್ತು. ಅನಂತರ ಇತ್ತೀಚಿನ ಪತ್ರಿಕೆಯಲ್ಲಿ ಬಂದ ಸುದ್ದಿಯ ತುಂಡೊಂದನ್ನು ಕೈಗಿಟ್ಟರು. ಆಗಲೇ ವಿಷಯ ಸರಿಯಾಗಿ ಗೊತ್ತಾಗಿದ್ದು – ಇತ್ತೀಚೆಗೆ ಹವಾಮಾನ ವೈಪರೀತ್ಯಗಳಿಂದ ತುಂಗಭದ್ರಾ ನದಿಯ ಹರಿವು ಸೊರಗುತ್ತಿದೆ. ಇಷ್ಟೇ ಆಗಿದ್ದರೆ ನಮ್ಮ ಎಡಿಟರ್ ತಲೆಕೆಡಿಸಿಕೊಳ್ಳುತ್ತಲೂ ಇರಲಿಲ್ಲ. ಆದರೆ ನದಿಯು ಬತ್ತಿ ಹಲವಾರು ಕಡೆ ನದಿಗೆ ಅಡ್ಡಲಾಗಿ ಕಟ್ಟಿದ್ದ ಹಳೆಕಾಲದ ಪುರಾತನ ಸೇತುವೆಗಳು ಪತ್ತೆಯಾಗತೊಡಗಿವೆ. ವಿಜಯನಗರ ಸಾಮ್ರಾಜ್ಯದ ಜೊತೆಗೆ ಮುಳುಗಿದ್ದ ಈ ಸೇತುವೆಗಳು ಶತಮಾನಗಳ ನಂತರ ಈಗ ಹೊರಜಗತ್ತಿಗೆ ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಇದರ ಬಗ್ಗೆ ಒಂದು ಸುದೀರ್ಘ ಲೇಖನ ರೆಡಿಮಾಡು. ಇತಿಹಾಸದ ಒಂದು ಮಹತ್ತರ ಘಟ್ಟವನ್ನು ನಾವು ಓದುಗರಿಗೆ ಕೊಡೋಣ ಎಂದರು.
ಅನಂತರ ಗುಟ್ಟಾಗಿ ಕರೆದು, “ತುಂಗಭದ್ರಾ ನದಿಯ ತೀರದಲ್ಲಿರುವ ಮೊದಲಘಟ್ಟ ಬಳಿ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ನದಿಗೆ ಅಡ್ಡಲಾಗಿ ಕಟ್ಟಿದ ಕಲ್ಲಿನ ಸೇತುವೆ ಪ್ರತ್ಯಕ್ಷವಾಗಿದೆ. ಇದು ವಿಜಯನಗರ ಕಾಲದ ಸೇತುವೆ. ಇದರ ಸುತ್ತಮುತ್ತ ಭಾರೀ ನಿಧಿಯ ಸಂಗ್ರಹ ಇರಬಹುದು ಅಂತ ಇತಿಹಾಸಕಾರರು ಹೇಳುತ್ತಿದ್ದಾರೆ. ಈ ಗುಸುಗುಸು ಆ್ಯಂಟಿಕ್ ಕಳ್ಳರ ಮಧ್ಯೆ ಕೂಡ ಹರಡಿದೆ. ಬೇಗ ಈ ವಿಷಯವನ್ನು ನಾವು ಬಯಲು ಮಾಡಬೇಕು” ಎಂದರು.
“ಅಲ್ಲಿಗೆ ಹೋಗಿ ವಿಷಯ ಕಲೆಕ್ಟ್ ಮಾಡ್ಕೋ. ಅಲ್ಲಿನ ಸರ್ಕಾರಿ ಶಾಲೆಯ ಮೇಷ್ಟುç ಚಂದ್ರಶೇಖರ್ ಮೇಗಳಮನಿಗೆ ನಿನ್ನ ಬಗ್ಗೆ ಹೇಳಿದ್ದೇನೆ. ವಾಸ್ತವ್ಯಕ್ಕೆ ಅವರು ಸಹಾಯ ಮಾಡ್ತಾರೆ. ಅಲ್ಲಿ ನಿನಗೆ ಏನಾದ್ರೂ ಹೆಲ್ಪ್ ಬೇಕಾದ್ರೆ ಅವರನ್ನ ಕೇಳು, ತುಂಬಾ ಒಳ್ಳೆಯ ಮನುಷ್ಯ ಆತ” ಎಂದು ಹೇಳಿ ಕೈಗೆ ಹತ್ತು ಸಾವಿರ ಇಟ್ಟರು.
ಬೆಂಗಳೂರಿನಿಂದ ವಿಜಯನಗರ ಜಿಲ್ಲೆಯ ಮೊದಲಘಟ್ಟಕ್ಕೆ ಬಂದು ಬಸ್ನಿಂದ ಕೆಳಗೆ ಇಳಿಯುವಷ್ಟರಲ್ಲಿ ಎದುರಿಗೆ ಪ್ರತ್ಯಕ್ಷವಾದ ವ್ಯಕ್ತಿ, “ನೀವು ಬೆಂಗ್ಳೂರು ರಿಪೋಟ್ರಾ?” ಅಂತ ಕೇಳಿ ನಾನು ಉತ್ತರಿಸುವ ಮೊದಲೇ ನನ್ನ ಲಗೇಜ್ ಬ್ಯಾಗ್ನ ಅವನ ಹೆಗಲಿಗೇರಿಸಿದ. ‘ನನ್ ಹೆಸ್ರು ಪರಮೇಶ್ನಾಯ್ಕ್ ಅಂತ. ಎಲ್ರೂ ಪರಮೇಶಿ ಅಂತ ಕರೀತಾರೆ. ಇಲ್ಲೇ ದಾಸರಳ್ಳಿ ತಾಂಡಾದಾಗ ನನ್ನ ಮನೆ ಐತಿ. ನಾನೂ ಇಸ್ಕೂಲ್ ಅಲ್ಲೇ ಕೆಲ್ಸಾ ಮಾಡೋದು, ಬೆಂಗ್ಳೂರಿನಿAದ ಯಾರೋ ರಿಪೋಟ್ರು ಬರ್ತಾರೆ ಕರ್ಕಂಡ್ ಬಾ ಅಂತ ಮಾಸ್ತುç ಕಳ್ಸಿದ್ರು’ ಅಂತ ಪಟಪಟನೆ ಅವನ ಲಂಬಾಣಿ ಶೈಲಿಯ ಕನ್ನಡದಲ್ಲಿ ಹೇಳಿದ. ಆ ಬಲಾಢ್ಯ ದೇಹದ, ಕೊಳೆಯಾದ ಲುಂಗಿ, ದೊಗಲು ಅಂಗಿ ತೊಟ್ಟಿದ್ದ ಪರಮೇಶಿಯನ್ನು ಹಿಂಬಾಲಿಸಿಕೊಂಡು ಸ್ಕೂಲ್ನ ಕಡೆ ಹೆಜ್ಜೆಹಾಕಿದೆ, ಚಂದ್ರಶೇಖರ್ ಮೇಗಳಮನಿ ಅವರನ್ನು ಭೇಟಿ ಆಗೋಕೆ.
ಊರಿಗೆ ಕಾಲಿಟ್ಟ ತಕ್ಷಣವೇ ಹಳ್ಳಿಯ ದಾರಿದ್ರ್ಯಗಳೆಲ್ಲ ಕಣ್ಮುಂದೆ ಬಂದವು. ದಶಕಗಳಿಂದ ಡಾಂಬಾರು ಕಾಣದ ರಸ್ತೆ, ರಸ್ತೆಯಲ್ಲೇ ರಾಜಾರೋಷವಾಗಿ ಹರಿಯುವ ಚರಂಡಿ. ರಸ್ತೆ ಪಕ್ಕದಲ್ಲೇ ಊರಿಗೆ ಸ್ವಾಗತ ಕೋರುವ ಕಕ್ಕಸಿನ ದುರ್ಗಂಧ, ಅಕ್ಕಪಕ್ಕದಲ್ಲೇ ಸಾಲುಗಟ್ಟಿ ನಿಂತ ಮನೆಗಳು. ಊರ ತುಂಬಾ ಬರೀ ಮುದುಕರು, ಮಕ್ಕಳು. ಇದನ್ನೆಲ್ಲ ದಾಟಿ ಯಾವುದೋ ಹಳೇಕಾಲದ ಬಂಗಲೆಯಂತಹ ಬಿಲ್ಡಿಂಗ್ ಮುಂದೆ ಪರಮೇಶಿ ನನ್ನನ್ನು ತಂದು ನಿಲ್ಲಿಸಿದ. ತಲೆ ಎತ್ತಿ ನೋಡುವಷ್ಟರಲ್ಲಿ ಬ್ಲಾಕ್ ಪ್ಯಾಂಟು, ಬಿಳಿ ಶರ್ಟ್ ಹಾಕಿದ್ದ ನೀಳಕಾಯದ ವ್ಯಕ್ತಿಯೊಬ್ಬ ಬಂದು ಕೈ ಕುಲುಕಿದರು. ಇವರೇ ಚಂದ್ರಶೇಖರ್ ಮೇಗಳಮನಿ ಎಂದು ಗೊತ್ತಾಯ್ತು.
“ಹಲೋ ಸಂಜಯ್, ನಾನು ಈ ಊರಿನ ಸ್ಕೂಲ್ ಮೇಷ್ಟ್ರು. ಇಲ್ಲಿ ಸ್ಕೂಲ್ ಎಲ್ಲಿದೆ ಅಂತ ಕನ್ಫ್ಯೂಸ್ ಆಗ್ಬೇಡಿ. ಹೊಸ ಸ್ಕೂಲ್ ಬಿಲ್ಡಿಂಗ್ ಕಟ್ಟಿಸೋಕೆ ಅಂತ ನೂರು ಸಲ ನಮ್ಮ ಎಂಎಲ್ಎ, ಶಿಕ್ಷಣ ಸಚಿವರಿಗೆ ಪತ್ರ ಬರೆದರೂ ಏನೂ ಪ್ರಯೋಜನ ಆಗ್ಲಿಲ್ಲ. ಅದ್ಕೆ ಪ್ರವಾಸಿ ಮಂದಿರವನ್ನೇ ತಾತ್ಕಾಲಿಕವಾಗಿ ಸ್ಕೂಲ್ ಮಾಡ್ಕೊಂಡಿದ್ದೀವಿ” ಅಂತ ತಮ್ಮ ಸಾಧನೆಯನ್ನು ಹೇಳಿಕೊಂಡು ಹಲ್ಲು ಬಿಟ್ರು. ನಾನು ಅದ್ಕೊಂಡಿದ್ದಕ್ಕಿಂತ ಜಾಸ್ತಿನೇ ಸಮಸ್ಯೆ ಇಲ್ಲಿದೆ ಅಂತ ನಾನೂ ಮನಸಲ್ಲೇ ಅಂದುಕೊಂಡೆ.
“ಏ ಪರಮೇಶಿ, ರಿಪೋರ್ಟರ್ ಅವರ ಲಗೇಜ್ನ ರೂಮ್ ಅಲ್ಲಿ ಇಡು ನಡಿ” ಎಂದವರೇ, ಮತ್ತೆ ನನ್ನ ಕಡೆ ತಿರುಗಿ “ತುಂಬಾ ಜರ್ನಿ ಮಾಡಿದೀರಾ. ಹೋಗಿ ಫ್ರೆಶ್ ಆಗಿ ರೆಸ್ಟ್ ಮಾಡಿ. ಸಾಯಂಕಾಲ ಮಾತಾಡೋಣ” ಅಂದ್ರು. ಆ ಬಳ್ಳಾರಿ ಬಿಸಿಲಿಗೆ ಸುಸ್ತಾಗಿದ್ದ ನಾನೂ ಮಾತನಾಡೋ ಮೂಡಲ್ಲಿ ಇರಲಿಲ್ಲ. ತಕ್ಷಣವೇ ಪರಮೇಶಿ ತೋರಿಸಿದ ರೂಮ್ ಹೊಕ್ಕು, ಸ್ನಾನ ಮಾಡಿ ನಿದ್ರೆಗೆ ಜಾರಿದೆ.
ಸಾಯಂಕಾಲ ಹೊರಗಡೆ ಶಾಲೆಯ ಬೆಲ್ ಹೊಡೆದಿದ್ದರಿಂದ, ನನ್ನ ನಿದ್ದೆಗೆ ಕಲ್ಲು ಬಿದ್ದು ಎಚ್ಚರವಾಯಿತು. ಎದ್ದು ಹೊರಬಂದೆ. ಎದುರಿಗೆ ಪ್ರತ್ಯಕ್ಷವಾದ ಮೇಷ್ಟುç, ತಮ್ಮ ಪುರಾಣ ಶುರುಮಾಡಿದರು. “ಸರ್, ನಾನು ಶಿಕ್ಷಕನಾಗೋ ಕನಸು ಕಂಡಿದ್ದೆ. ಉನ್ನತ ಶಿಕ್ಷಣ ಮುಗಿಸಿ ಮತ್ತೆ ನಮ್ಮೂರಿಗೆ ಬಂದಾಗ ಇಲ್ಲೇ ಶಾಲೆ ಶುರು ಮಾಡೋ ಆಲೋಚನೆ ಬಂತು. ಆಗಿನ ಪಂಚಾಯತಿ ಅಧ್ಯಕ್ಷರಿಗೆ ಹೇಳಿದಾಗ ‘ಸದ್ಯಕ್ಕೆ ಪ್ರವಾಸಿಮಂದಿರದಲ್ಲೇ ಶಾಲೆ ಶುರುಮಾಡಪ್ಪ, ಈ ಹಾಳು ಊರಿಗೆ ಯಾವನ್ ಪರದೇಶಿ ಪ್ರವಾಸಕ್ಕೆ ಬರ್ತಾನೆ. ಸುಮ್ನೇ ಅದು ಪಾಳು ಬಿದ್ದೋಗುತ್ತೆ’ ಎಂದಾಗ ನಾನು ಹು ಅಂದೆ. ಮುಂದೆ ಹೊಸ ಶಾಲೆ ಕಟ್ಸಿ, ಬೇರೆ ಮೇಷ್ಟುç ಕಳ್ಸೋಕೆ ಸರ್ಕಾರಕ್ಕೆ ಪತ್ರ ಬರಿತೀನಿ ಅಂತದ್ರು. ನಾನೂ ಅದನ್ನ ನಂಬ್ಕಂಡು ಒಪ್ಕೊಂಡೆ. ಆದ್ರೆ ಆ ಅಧ್ಯಕ್ಷನ ತಿಥಿ ಆದ್ರು ಶಾಲೆ ಮಾತ್ರ ಆಗಿಲ್ಲ. ತಿಂಗ್ಳ ಸಂಬ್ಳನ ವರ್ಷಕ್ಕೆ ಮೂರು ಸಲ ಸರ್ಕಾರ ಕೊಡುತ್ತೆ. ಕೊನೆ ಸಲ ಸಂಬ್ಳ ಬಂದು ಐದು ತಿಂಗ್ಳು ಆಯ್ತು ಸಾರ್” ಅಂತ ಆ ಮೇಷ್ಟ್ರು ಗೊಣಗಿದರು. ಅವರ ಕಥೆಗೆ ನಾನೂ ವ್ಯಥೆ ಸೂಚಿಸಿದೆ.
ಅನಂತರ ನಾನು ಬಂದ ಉದ್ದೇಶ ಕೇಳಿ, “ಓ ಅದನ್ನ ಏನ್ ಹೇಳೋದು ಸಾರ್. ಶತಮಾನಗಳ ಕಾಲ ಮುಳುಗಿದ್ದ ಸೇತುವೆ ಒಮ್ಮೆಗೆ ಪ್ರತ್ಯಕ್ಷವಾಗಿದ್ದನ್ನು ಕಂಡು ಎಲ್ಲರೂ ಈ ಹಾಳು ಊರಿಗೆ ಬರ್ತಿದ್ದಾರೆ. ಇದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡು ದುಡ್ಡು ಮಾಡುವ ಯೋಜನೆಯನ್ನು ‘ಮೊದಲಘಟ್ಟ ಶ್ರೀಆಂಜನೇಯ ಸ್ವಾಮಿ ಟ್ರಸ್ಟ್’ ಸಿದ್ಧಪಡಿಸಿದೆ.
ಇದು ಆಂಜನೇಯ ಸ್ವಾಮಿ ಕಟ್ಟಿದ ಸೇತುವೆ. ಆತನ ಕೃಪೆಯಿಂದ ಸೇತುವೆ ಮತ್ತೆ ಉದ್ಭವವಾಗಿದೆ. ಸೀತಮ್ಮನಿಗಾಗಿ ಆ ರಾಕ್ಷಸ ರಾವಣನ ವಿರುದ್ಧ ಯುದ್ಧ ಮಾಡೋಕೆ ಅಂತ ಲಂಕೆಗೆ ಹೋಗ್ಬೇಕಾದ್ರೆ ಅಲ್ಲಿ ಸೇತುವೆ ಕಟ್ಟಬೇಕಾಗುತ್ತೆ. ಆದರೆ ಆ ಸೇತುವೆ ಕಟ್ಟೋಕೆ ಅಲ್ಲಿನ ಕಲ್ಲು ಸಾಕಾಗಲ್ಲ. ಅದಕ್ಕೆ ಕಲ್ಲು ಹುಡ್ಕೊಂಡು ಆಂಜನೇಯಸ್ವಾಮಿ ಜೊತೆ ಕೆಲವು ಕಪಿಸೇನೆ ಮತ್ತೆ ಈ ಕಡೆ ಬರ್ತಾರೆ. ಕೆಲವರು ಕಿಷ್ಕಿಂಧೆ ಬಳಿ ಕಲ್ಲು ಸಂಗ್ರಹ ಮಾಡ್ತಾರೆ. ಆಂಜನೇಯ ಈ ಭಾಗದಲ್ಲಿ ಕಲ್ಲು ಸಂಗ್ರಹ ಮಾಡಿ, ತುಂಗಭದ್ರಾ ಹೊಳೆ ದಾಟೋಕೆ ಸಿದ್ಧವಾಗಿ ನಿಲ್ತಾನೆ. ಆದ್ರೆ ಅದೇ ಸಮಯಕ್ಕೆ ಒಬ್ಬ ಹೆಂಗಸು ಅವನ ಎದುರಿನಲ್ಲೇ ನದಿಗೆ ಇಳಿದು, ಆ ಹರಿವ ನೀರಿನಲ್ಲಿ ಕಷ್ಟಪಟ್ಟು ಸ್ಪಲ್ಪ ದೂರ ಹೋಗ್ತಾಳೆ. ಆದ್ರೆ ಯಾವತ್ತಿಗಿಂತಲೂ ರಭಸವಾಗಿ ಹೊಳೆ ಹರಿಯುತ್ತಿತ್ತು. ಆ ಹೆಂಗಸು ವಾಪಸು ಬಂದು ದಡದಲ್ಲಿ ಕಣ್ಣೀರು ಹಾಕ್ತಾಳೆ. ಆಗ ಆಂಜನೇಯಸ್ವಾಮಿ ‘ಏಕೆ ತಾಯಿ, ಏನಾಯ್ತು? ತುಂಬಿ ಹರಿಯುತ್ತಿರುವ ನದಿನಾ ಯಾಕೆ ದಾಟ್ತಿದಿಯಾ’ ಅಂತ ಕೇಳ್ತಾನೆ. ಅದಕ್ಕೆ ಆ ಹೆಂಗಸು, ‘ನನ್ನ ಗಂಡ ಹೊಳೆಯ ಆಚೆ ದಡದಲ್ಲಿ ಇರೋ ಊರ್ನಾಗೆ ಇದಾನೆ. ಅವನಿಗೆ ಅವ್ವ-ಅಪ್ಪ ಯಾರೂ ಇಲ್ಲ. ಈಗ ಕಾಯಿಲೆ ಬಂದು ಮಲಗಿದಾನಂತೆ. ನಾನು ಸತ್ರೂ ಚಿಂತೆಯಿಲ್ಲ, ನನ್ನ ಗಂಡನ್ನ ನೋಡ್ಬೇಕು’ ಅಂತ ಅಂದ್ಲಂತೆ. ಆಕೆಯನ್ನು ಎತ್ತಿಕೊಂಡು ಹೊಳೆ ದಾಟೋದು ಆಂಜನೇಯನಿಗೆ ಕಷ್ಟ ಇರ್ಲಿಲ್ಲ. ಆದರೆ ಆತ ಬ್ರಹ್ಮಚಾರಿ. ಬೇರೆ ಹೆಂಗಸರನ್ನು ಮುಟ್ಟದವನು. ಈಗ ಈಕೆಯ ಸಂಕಟ ಕೇಳಿ ಮರುಗ್ತಾನೆ. ತಕ್ಷಣವೇ ತಾವು ಸಂಗ್ರಹ ಮಾಡಿದ್ದ ಕಲ್ಲಿಂದ ಅವಳಿಗಾಗಿ ಸೇತುವೆ ಮಾಡೋ ನಿರ್ಧಾರ ಮಾಡಿ, ಕಪಿಸೇನೆಗೆ ಆದೇಶ ಕೊಡ್ತಾನೆ. ಆ ಹೊಳೆಗೆ ಕೆಲವೇ ಗಂಟೆಯಲ್ಲಿ ಸೇತುವೆ ಆಗುತ್ತೆ. ಆ ಹೆಂಗಸು ಸೇತುವೆ ದಾಟಿ ಗಂಡನ ಬಳಿ ಹೋಗಿ ಶುಶ್ರೂಷೆ ಮಾಡ್ತಾಳೆ. ಕೆಲವು ದಿನಗಳಲ್ಲಿ ಗಂಡ ಮೊದಲಿನಂತೆ ಆಗ್ತಾನೆ. ಅವನು ಶ್ರೀಮಂತ ವ್ಯಾಪಾರಿ ಆಗಿರ್ತಾನೆ. ಆಂಜನೇಯಸ್ವಾಮಿ ತನ್ನ ಹೆಂಡತಿಗಾಗಿ ಸೇತುವೆ ಕಟ್ಟಿದ್ದು ಕೇಳಿ ಅಲ್ಲೇ ಒಂದು ಆಂಜನೇಯಸ್ವಾಮಿ ಗುಡಿ ನಿರ್ಮಾಣ ಮಾಡ್ತಾನೆ” ಅಂತ ಕಥೆ ಕಟ್ಟಿ ಸೇತುವೆಯನ್ನು ನೋಡೋಕೆ ಜನ ಬರೋ ತರ ಮಾಡಿ, ಅದರ ಲಾಭವನ್ನು ದೇವರ ಹೆಸರಲ್ಲಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಹನುಮಪ್ಪ ಗೌಡ್ರು ಮತ್ತು ಅವರ ಚೇಲಾಗಳು ಪಡೀತಿದ್ದಾರೆ. ಸೇತುವೆ ಬಗ್ಗೆ ಸಂಶೋಧನೆಗೆ ಬಂದ ಇತಿಹಾಸಕಾರರನ್ನು ‘ಇವ್ರು ನಮ್ಮ ದುಡ್ಡಿಗೆ ಸಂಚಕಾರ ತರ್ತಾರೆ’ ಅನ್ಕೊಂಡು, ಅವರಿಗೆ ಕಾಟ ಕೊಟ್ಟು ಊರಿಂದ ಓಡಿಸಿದ್ರು ಸಾರ್ – ಅಂತ ಮೇಷ್ಟ್ರು ಸೇತುವೆ ಪುರಾಣ ಹೇಳುತ್ತ, “ಏ ಪರಮೇಶಿ, ಇವರಿಗೆ ನಮ್ ಊರು ತೋರ್ಸೊ” ಅಂತ ಹೇಳಿ ಅವರ ಮನೆ ಕಡೆ ನಡೆದರು.
ಸ್ಕೂಲ್ ಮೇಷ್ಟ್ರ ಬಲಗೈ ಪರಮೇಶಿ ಈಗ ನನಗೆ ಊರು ತೋರಿಸೋ ಗೈಡ್ ಆದ. ಅವನ ಮುಚ್ಚದ ಬಾಯಿ, ಆ ಊರು, ಅಲ್ಲಿನ ಜನರ ಬಗ್ಗೆ ಅವನು ಮಾತಾಡ್ತಾ ಇದ್ದಿದ್ದು ಕೇಳಿ, ಅಬ್ಬೇಪಾರಿ ತರ ಊರು ಸುತ್ತೋ ಇವನಿಗೆ ಮನೆಯ ಗೋಡೆಗಳ ಹಿಂದಿನ ವಿಷಯ ಕೂಡ ಗೊತ್ತಿರುತ್ತೆ ಅನ್ಕೊಂಡೆ. ಸೇತುವೆ ಬಗ್ಗೆ ಬೇರೆ ಯಾರೂ ನನಗೆ ಹೇಳದ ವಿಷಯ ಇವನಿಂದ ನನಗೆ ಸಿಗುತ್ತೆ ಅಂತ ನನ್ನ ಪತ್ರಕರ್ತ ಮನಸ್ಸು ಹೇಳುತ್ತಿತ್ತು. ಇವನನ್ನು ಬುಟ್ಟಿಗೆ ಹಾಕ್ಕೊಂಡ್ರೆ ನನ್ನ ಕೆಲ್ಸ ಕೂಡ ಸುಲಭ ಆಗುತ್ತೆ ಅಂದ್ಕೊಂಡು, ಅವನನ್ನು ಕರೆದುಕೊಂಡು ಅಲ್ಲೇ ಹತ್ತಿರವಿದ್ದ ‘ಆಂಜನೇಯಸ್ವಾಮಿ ಹೋಟೆಲ್’ ಹೊಕ್ಕಿದೆ.
“ನನಗೆ ಏನೂ ಬೇಡ ಸಾರ್, ನೀವು ಹೋಗಿ ಬನ್ನಿ” ಅಂತ ಪರಮೇಶಿ ಹೇಳಿದಾಗ, “ಏಯ್ ನಿಮ್ ಮೇಷ್ಟ್ರುಗೆ ಏನ್ ಹೇಳಲ್ಲ, ಬಾ” ಅಂತ ಕರೆದೆ. ಅಳುಕು ಮುಖ ಹೊತ್ತೇ ಹೋಟೆಲ್ ಒಳಗೆ ಕಾಲಿಟ್ಟ.
ಮಸಿಯಾಗಿದ್ದ ಬಿಳಿ ಬನೀನು, ಹೆಗಲ ಮೇಲೆ ಕೆಂಪು ಟವಲ್ ಹಾಕಿದ್ದ ವ್ಯಕ್ತಿ ಬಂದು ‘ಏನ್ ಬೇಕು ಸಾರ್?’ ಅಂದ.
ಎರಡು ಫುಲ್ ಸ್ಟ್ರಾಂಗ್ ಟೀ ಅಂತ ಪರಮೇಶಿ ಅವನಿಗೆ ಆರ್ಡರ್ ಮಾಡಿದ. ಪರಮೇಶಿನ ನೋಡಿದ ತಕ್ಷಣವೇ ಅವನು “ಲೇ ಪರಮೇಶಿ, ಹಳೇ ರೊಕ್ಕ ಎಲ್ಲಲ್ಲೇ ಮಗನೆ. ಮೊನ್ನೆ ಹುಣ್ಣಿಮೆಗೆ ಕೊಡ್ತೀನಿ ಅಂದೋನು, ಅಮ್ವಾಸೆ ಆದ್ರೂ ಪತ್ತೆ ಇಲ್ವಲ್ಲೋ” ಎಂದಾಗ, ನನ್ನ ಎದುರು ಮರ್ಯಾದೆ ಹೋಗಿದ್ದಕ್ಕೆ ಬೇಜಾರಾದ ಪರಮೇಶಿ “ಏ, ನಿನ್ ರೊಕ್ಕ ಎಲ್ಲಿ ಹೋಗುತ್ತೆ ಬಿಡಣ್ಣಾ, ನಾನ್ ಏನ್ ಊರು ಬಿಟ್ಟು ಒಂಟೋಯ್ತಿನಾ. ಇಸ್ಕೂಲು ಸಂಬಳ ಬಂದೆಟ್ಗೆ ತಂದುಕೊಡ್ತೀನಿ” ಎಂದ. ಆಗಲೇ ಆತನೇ ಈ ಹೋಟೆಲ್ ಓನರ್ ಅಂತ ನನಗೆ ಗೊತ್ತಾಗಿದ್ದು. ಆತ ತನ್ನ ಹಣೆಬರಹ ಹಳಿಯುತ್ತ ಟೀ ಮಾಡಲು ಶುರುಮಾಡಿದ.
ನಾನು ಪರಮೇಶಿಯನ್ನು ಮಾತಿಗೆ ಎಳೆಯುತ್ತ, “ಅಲ್ವೋ ಪರಮೇಶಿ, ನಿಮ್ ಊರಲ್ಲಿ ಅಲ್ಲೊಂದು ಇಲ್ಲೊಂದು ಗಂಡಸ್ರು ಬಿಟ್ರೆ, ಊರು ತುಂಬಾ ಮುದುಕರು, ಮಕ್ಳೇ ಇದಾರಲ್ಲೋ?” ಅಂತ ಅವನ ಕಾಲೆಳೆದೆ. ಅಷ್ಟರಲ್ಲೇ ಟೀ ತಂದ ವೇಟರ್ ಕಮ್ ಓನರ್, ಹೋಟೆಲ್ನಲ್ಲಿ ಗಿರಾಕಿಗಳು ಯಾರೂ ಇರದಿದ್ದರಿಂದ ನಮ್ಮ ಟೇಬಲ್ ಮುಂದಿನ ಮುರುಕು ಕುರ್ಚಿ ಮೇಲೆ ಆಸೀನನಾದ. ನಾನು ಪರಮೇಶಿಗೆ ಕೇಳಿದ್ದು ಅವನಿಗೂ ಕೇಳ್ಸಿತ್ತು. “ಸಾರ್, ಮೊದಲು ಊರ ತುಂಬಾ ತೋಟ, ಕಬ್ಬಿನಗದ್ದೆ ಮಾಡ್ಕಂಡು ಜನ ಇರ್ತಿದ್ರು. ಈಗಿನ ಕಾಲ್ದ ಹುಡ್ಗರು ಅದನ್ನೆಲ್ಲ್ಲ ಎಲ್ಲಿ ಮಾಡ್ತಾರೆ ಹೇಳಿ. ನಾಲ್ಕು ಅಕ್ಷರ ಕಲಿಬೇಕು ಅಂತ ಬೇರೆ ಊರಿನ ಶಾಲೆಗೆ ಸೇರ್ತಾರೆ. ಅಮೇಲೆ ಕೆಲ್ಸಾ ಹುಡ್ಕಂಡು ಮುಂಬಯಿ, ಬೆಂಗ್ಳೂರು ಅಂತ ಪಟ್ಟಣ ಸೇರ್ತಾರೆ. ಇನ್ನೂ ಸ್ವಲ್ಪ ಮಂದಿ ಬೆಂಗ್ಳೂರಲ್ಲಿ ಮನೆ ಕಟ್ಟೋಕೆ, ರಸ್ತೆ ಮಾಡೋಕೆ, ಕಾಫಿ ಸೀಮೆಲಿ ತೋಟದ ಕೆಲ್ಸಕ್ಕೆ ಹೋಗ್ತಾರೆ. ವರ್ಷಕ್ಕೆ ಒಂದೋ ಎರಡೋ ಸಲ ಈ ಕಡೆ ತಲೆ ಹಾಕ್ತಾರೆ. ಅದು ಬಿಟ್ರೆ ಊರ್ ತುಂಬಾ ಕೈಲಾಗದ ಮಕ್ಳು ಮರಿ, ಮುದ್ಕರು ಮಾತ್ರ. ತೋಟ, ಗದ್ದೆ ಎಲ್ಲ ತುಂಗಭದ್ರಾ ಹೊಳೆ ಥರನೇ ಸೊರಗಿ ಹೋಗ್ಬಿಟ್ವು. ಅಲ್ಲಿ ಒಳ್ಳೆ ದುಡ್ಡು ಸಿಗ್ಬೇಕಾದ್ರೆ ಈ ಕೊಂಪೆನಾ ಯಾವ್ ನಾಯಿ ಮೂಸ್ಬೇಕು ಹೇಳಿ?” ಎಂದಾಗ ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದ ನನಗೆ ಇದು ಎಲ್ಲ ಹಳ್ಳಿಗಳ ಸಮಸ್ಯೆ ಅನ್ನಿಸಿತು. ನಗರಗಳು ಬೆಳೆದಂತೆ ಹಳ್ಳಿಗಳು ಅನಾಥವಾಗುತ್ತಿವೆ, ಮಾಯವಾಗುತ್ತಿವೆ.
ಅಷ್ಟರಲ್ಲಿ ನಮ್ಮ ಟೀ ಖಾಲಿ ಆಗಿತ್ತು. ಆತನಿಗೆ ದುಡ್ಡು ಕೊಟ್ಟು ಹೊರಬಿದ್ದೆವು.
ಹೊಟೇಲ್ ಓನರ್ ದುಡ್ಡು ಕೇಳಿದಾಗಿನಿಂದ, ಪರಮೇಶಿ ಮೌನವ್ರತ ಮಾಡುತ್ತಿದ್ದ. ಅದನ್ನು ಮುರಿಯಲೆಂದು “ಏ ಪರಮೇಶಿ, ನಿಮ್ಮ ಮೇಷ್ಟ್ರು ನೋಡಿದ್ರೆ ಆ ಸೇತುವೆ ಸಂಶೋಧನೆ ಮಾಡೋಕೆ ಬಂದವ್ರು ಒಳ್ಳೇವ್ರು. ನಿಮ್ಮೂರವ್ರೇ ಕಿತಾಪತಿ ಮಾಡ್ತಿದಾರೆ ಅಂತಾರಲ್ವೋ?” ಅಂದೆ.
ನನ್ನ ಪ್ರಶ್ನೆ ಕೇಳಿ, ಆತ ಏನೋ ಗುಟ್ಟು ಹೇಳುವವನಂತೆ “ಸಾರ್, ನಮ್ ಮಾಸ್ತರಿಗೆ ಸರಿಯಾಗಿ ಗೊತ್ತಿಲ್ಲ. ಕೊನೆ ಹುಣ್ಣಿಮೆ ದಿನ ಮಧ್ಯರಾತ್ರಿ ನಾನು ಹೊಳೆ ಕಡೆ ಹೋಗಿದ್ದೆ. ಆ ಪರದೇಶಿ ಜನ ಟಾರ್ಚ್ ಬಿಟ್ಕಂಡು ಏನೋ ಮಾಡ್ತಿದ್ರು. ಏನೇನೋ ತಂತಿ-ಗಿಂತಿ ಹಿಡ್ಕೊಂಡು ಇದ್ರು ಸಾರ್. ಇದನ್ನ ನಮ್ ಊರ್ನಾಗೆ ಸುಮಾರ್ ಜನ ಕಂಡವ್ರೆ. ಆ ಜನ ಇಲ್ಲಿ ನಿಧಿ-ಗಿಧಿ ಐತೆ ಅಂತ ಹುಡ್ಕಂಡು ಇದ್ರಂತೆ. ಅದರಲ್ಲೂ ಸೇತ್ವೆ ಇರೋದು ಆಂಜನೇಯಸ್ವಾಮಿ ಗುಡಿ ಹತ್ರ. ಆ ಸೇತ್ವೆನಾ ಆ ಆಂಜನೇಯನೇ ಕಟ್ಟಿರೋದು ಅಂತೆ. ಅದ್ನ ಈ ಕಳ್ ಮಕ್ಳು ಹಾಳ್ ಮಾಡಿ, ಆಂಜನೇಯ ಸ್ವಾಮಿ ಮುನಿಸ್ಕಬಾರ್ದು ಅಂತ ನಮ್ ಪಂಚಾಯ್ತಿ ಅಧ್ಯಕ್ಷ ಭರಮಣ್ಣ, ಆಂಜನೇಯ ಗುಡಿಯ ಹನುಮಪ್ಪ ಗೌಡ್ರು ಸೇರ್ಕಂಡು ಅವರನ್ನ ಊರು ಬಿಟ್ಟು ಓಡ್ಸಿದ್ರು. ಆದ್ರೆ ಆ ಜನ ಸರ್ಕಾರದ ಎಂತದೋ ಕಾಗ್ದ ಹಿಡ್ಕಂದು ಮತ್ತೆ ಬಂದವ್ರೆ ಸಾರ್” ಎಂದ.
ಅಷ್ಟರಲ್ಲಿ “ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಮೊದಲಘಟ್ಟ” ಫಲಕದ ಮುಂದೆ ತಂದು ಬಿಟ್ಟ. ದೇವರ ಅಸ್ತಿತ್ವವನ್ನೇ ನಂಬದ ನಾನು ದೇವಸ್ಥಾನದ ಒಳಗೆ ಹೋಗಿ ಮಾಡೋದಾದ್ರೂ ಏನು! ಆದರೆ ಪಕ್ಕದಲ್ಲಿದ್ದ ಪರಮೇಶಿ, ದೇವಸ್ಥಾನದ ಹೊರಗಡೆ ಮರದ ಕೆಳಗಿದ್ದ ಚಿಕ್ಕ ಗುಡಿ ತೋರಿಸಿ, “ಸಾರ್, ಅದರೊಳಗೆ ಪವಾಡದ ಕಲ್ಲು ಐತೆ. ನಿಮ್ಮ ಮನಸ್ಸಿನ್ಯಾಗ ಏನಾದ್ರೂ ಅನ್ಕೊಂಡು ಅದನ್ನು ಮೂರು ಸಲ ಎತ್ತಿದ್ರೆ ನೀವು ಮನಸ್ಸಿನ್ಯಾಗ ಅನ್ಕೊಂಡಿದ್ದು ನಿಜ್ವಾಗುತ್ತೆ” ಎಂದ.
“ಮೂರು ಸಲ ಕಲ್ಲು ಎತ್ತಿದ ತಕ್ಷಣ ಮನಸ್ಸಿನಲ್ಲಿ ಇರೋದು ನಿಜ ಆಗೋದ್ ಇದ್ರೆ, ನಾನು ಆ ಭೂತ ಮುಖದ ಭೂತೇಶ್ ಸಹವಾಸ ಬಿಟ್ಟು, ಇಲ್ಲೇ ಈ ಕಲ್ಲನ್ನು ಎತ್ತಿಕೊಂಡು ಕೂರ್ತಿದ್ದೆ. ಈ ಇಪ್ಪತ್ತೊಂದನೇ ಶತಮಾನದಲ್ಲೂ ಕೂಡ ಇದನ್ನೆಲ್ಲ ನಂಬುವವರು ಇರೋದಕ್ಕೆ ಅಲ್ವಾ, ದೇವರನ್ನು ಬಳಸಿ ಕೋಟಿಗಟ್ಟಲೆ ಬಿಸಿನೆಸ್ ಮಾಡ್ತಾರೆ” ಎಂದು ಮೆಲ್ಲಗೆ ಗೊಣಗಿದೆ.
ಅಷ್ಟರಲ್ಲಿ ನನ್ನ ಹಿಂದಿನಿಂದ ಬಂದ ವ್ಯಕ್ತಿ “ಮಿಸ್ಟರ್, ನಮಗೆ ಒಳ್ಳೇದು ಆಗುತ್ತೆ ಅನ್ನೋ ನಂಬಿಕೆ, ಕೆಟ್ಟದ್ದು ಆಗುತ್ತೆ ಅನ್ನೋ ಭಯ ಮನುಷ್ಯನನ್ನು ಏನು ಬೇಕಾದರೂ ನಂಬೋ ಥರ ಮಾಡುತ್ತೆ” ಅಂತ ಹೇಳಿ ನನ್ನ ಮುಖವನ್ನೇ ನೋಡಿದರು. ಯಾರು ಈ ಪರದೇಶಿ ಎನ್ನುವಂತೆ ತಕ್ಷಣವೇ ನಾನು ನನ್ನ ಪರಿಚಯ ಮಾಡಿಕೊಂಡೆ. ನಾನು ಪತ್ರಕರ್ತ ಅಂತಲೂ, ಅದರಲ್ಲೂ ತುಂಗಭದ್ರಾ ನದಿಯಲ್ಲಿ ಉದ್ಭವವಾಗಿರುವ ಸೇತುವೆಯ ಕುರಿತು ವರದಿ ಮಾಡಲು ಬಂದಿರುವ ಪತ್ರಕರ್ತ ಅಂತಲೂ ಗೊತ್ತಾದ ಕೂಡಲೆ ಅವರ ಮುಖ ಅರಳಿತು.
“ನನ್ಹೆಸ್ರು ಪಾಂಡುರಂಗರೆಡ್ಡಿ, ಭಾರತೀಯ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯಲ್ಲಿ ಕೆಲಸ ಮಾಡ್ತಿರೋದು. ನೀವು ಹುಡುಕಿಕೊಂಡು ಬಂದಿರೋ ವಿಷಯದ ಬಗ್ಗೇನೆ ಈಗ ನಾವು ಕೂಡ ಸಂಶೋಧನೆ ಮಾಡ್ತಿರೋದು. ನಿಮಗೆ ಗೊತ್ತಿರಬಹುದು, ಇತ್ತೀಚೆಗೆ ತುಂಗಭದ್ರಾ ನದಿಯ ನೀರಿನ ಹರಿವು ಕಡಮೆಯಾಗಿ ಕೆಲವು ಕಡೆ ಸೇತುವೆ ಪತ್ತೆಯಾಗಿದೆ. ಅದರ ಬಗ್ಗೆ ನಾವು ಸಂಶೋಧನೆ ಮಾಡ್ತಿದೀವಿ” ಎಂದು ಹೇಳಿದರು. ನಾನು ಹುಡುಕಿಕೊಂಡು ಬಂದ ಬಳ್ಳಿ ನನ್ನ ಕಾಲಿಗೇ ಸಿಕ್ಕ ಖುಷಿಯಾಯಿತು. ತಕ್ಷಣವೇ, “ಸಾರ್, ನೀವು ಇವತ್ತು ಫ್ರೀ ಇದ್ರೆ ಇದರ ಬಗ್ಗೆ ಮಾತಾಡಬಹುದಾ?” ಎಂದೆ.
“ಓಕೆ ಯಂಗ್ಮ್ಯಾನ್, ನಮ್ಮಿಂದ ನಿಮಗೆ ಎಷ್ಟು ಆಗುತ್ತೋ ಅಷ್ಟೂ ಇನ್ಫರ್ಮೇಶನ್ನ ಶೇರ್ ಮಾಡ್ತೀವಿ. ನೀವು ಸೂರ್ಯ ಮುಳುಗಿದ ಮೇಲೆ ಬಂದ್ರೆ, ನನ್ನ ಜೊತೆ ಕೆಲಸ ಮಾಡ್ತಿರೋ ಬೇರೆ ಸಂಶೋಧಕರು ಕೂಡ ನಿಮಗೆ ಸಿಗ್ತಾರೆ, ಗುಡ್ಬೈ” ಎಂದರು.
ನಾನು ಪರಮೇಶಿ ಬಳಿ ಅವರು ವಾಸವಿರುವ ಜಾಗ ಕೇಳಿ ತಿಳಿದುಕೊಂಡೆ. ಅವರ ಸಂಶೋಧನೆಗೆ ಊರಿನ ಮುಖಂಡರು ಅಡ್ಡಿ ಮಾಡಿದ್ದರಿಂದ ಅವರು ನದಿಯ ಬಯಲಿನಲ್ಲಿ ಟೆಂಟ್ ಹಾಕಿದ್ದಾರೆ ಎಂದೂ, ನನ್ನ ಜೊತೆ ಮಾತನಾಡಿದ ವ್ಯಕ್ತಿಯಲ್ಲದೆ ಬೇರೆ ಮೂವರೂ ಅಲ್ಲಿ ವಾಸವಿದ್ದಾರೆ ಎಂದೂ ತಿಳಿಯಿತು. ಆದರೆ ಈ ಊರಿನ ಮುಖಂಡರು ಏಕೆ ಸಂಶೋಧಕರಿಗೆ ತೊಂದರೆ ಕೊಡ್ತಿದ್ದಾರೆ ಎಂದು ಮಾತ್ರ ಗೊತ್ತಾಗಲಿಲ್ಲ. ಪರಮೇಶೀನ ಕೇಳೋಣ ಅಂತ ಅಂದುಕೊಂಡೆ. ಆದ್ರೆ ಅವನತ್ರ ಹನುಮಪ್ಪನ ಬಗ್ಗೆ ಕೇಳಿದ್ರೆ ಅವರಪ್ಪನ ಬಗ್ಗೆ ಹೇಳ್ತಾನೆ ಅಂದುಕೊಂಡು ಸುಮ್ಮನಾದೆ. ಹೇಗೋ ಸಾಯಂಕಾಲ ಆ ಸಂಶೋಧಕರ ಬಳಿನೇ ಕೇಳಿದ್ರೆ ಆಯ್ತು ಅಂತ ಸುಮ್ಮನಾಗಿ, ಪರಮೇಶಿಯ ಜೊತೆ ಊರು ಸುತ್ತಲು ಹೊರಟೆ.
ಟಾರು ಕಾಣದ ರಸ್ತೆಯ ಸುತ್ತ ಮೂವತ್ತು ನಲವತ್ತು ಮನೆಗಳು. ಅಲ್ಲೊಂದು ಇಲ್ಲೊಂದು ಗುಡಿಸಲು. ಅದರ ಮುಂದೆ ಕೋಳಿ, ದನ. ಊರ ಹೊರಗೆ ನೀಲಗಿರಿಯ ತೋಪು. ಅದರ ಪಕ್ಕದಲ್ಲಿ ತುಂಗಭದ್ರಾ ನದಿ. ಆದರೆ ಸೊರಗಿ ಹರಿಯುತ್ತಿದ್ದ ಅದನ್ನು ನದಿ ಅಂತ ಕರೆಯಲು ಕೂಡ ಹೆದರಿದಂತೆ ಆ ಊರಿನ ಜನ ಅದನ್ನು ‘ಹೊಳೆ’ ಅಂತಲೇ ಕರೆಯುತ್ತಿದ್ದರು. ತುಂಗಭದ್ರಾ ನೀರಿನ ಸವಿ ಉಂಡ ಭತ್ತ, ಕಬ್ಬುಗಳ ಹಸಿರು ನೋಡುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಊರೆಲ್ಲ ಸುತ್ತಿ, ಸಾಯಂಕಾಲದ ವೇಳೆಗೆ ಸಂಶೋಧಕರ ಟೆಂಟ್ ಬಳಿ ಬಂದೆ. ನನ್ನ ಜೊತೆ ಪರಮೇಶಿ ಇದ್ರೆ ಆ ಸಂಶೋಧಕರು ಮನಸ್ಸು ಬಿಚ್ಚಿ ಮಾತನಾಡುವುದು ಏಕೋ ಅನುಮಾನವಾಯ್ತು. ಅದರಲ್ಲೂ ಈ ಊರಿನವರು ಸಂಶೋಧಕರಿಗೆ ಏಕೆ ತೊಂದರೆ ಕೊಡ್ತಿದಾರೆ ಅನ್ನೋದನ್ನ ಪರಮೇಶಿಯ ಮುಂದೆನೇ ನನಗೆ ಅವರು ದೇವರಾಣೆ ಹೇಳ್ತಿರಲಿಲ್ಲ. ಹಾಗಾಗಿ ಪರಮೇಶಿಗೆ ನಾನು ಸಂಶೋಧಕರ ಜೊತೆ ಮಾತನಾಡಿ ರಾತ್ರಿ ಪ್ರವಾಸಿ ಮಂದಿರಕ್ಕೆ ಬರ್ತೀನಿ ಅಂತ ಮೇಷ್ಟಿçಗೆ ಹೇಳು ಅಂತ ಹೇಳಿ, ರಾತ್ರಿ ಊಟಕ್ಕೆ ವ್ಯವಸ್ಥೆ ಮಾಡು ಅಂತ ಇನ್ನೂರು ರೂಪಾಯಿ ಅವನ ಕೈಗಿಟ್ಟೆ. ದುಡ್ಡು ಕೈಗೆ ಸಿಕ್ಕಿದ್ದೇ ತಡ, ಅವನು ಮಾಯವಾದ. ನಾನು ಸಂಶೋಧಕರ ಟೆಂಟ್ ಬಳಿಗೆ ನಡೆದೆ.
ನನ್ನ ಪುಣ್ಯಕ್ಕೆ, ನಾನು ಆ ಟೆಂಟ್ ಬಳಿ ಕಾಲಿಡುತ್ತಿದ್ದಂತೆ ದೇವಸ್ಥಾನದ ಬಳಿ ಸಿಕ್ಕಿದ್ದ ಪಾಂಡುರಂಗರೆಡ್ಡಿ ಅವರು ನನಗಾಗಿ ಕಾಯುತ್ತಿರುವಂತೆ ಎದುರಿಗೆ ಬಂದು ಕೈ ಕುಲುಕಿದರು. ನಿಮ್ಮ ಬಗ್ಗೆ ಅವರಿಗೆ ಎಲ್ಲ ಹೇಳಿದೀನಿ ಅಂತ ಅಂದು, ತಮ್ಮ ಜೊತೆಯಿದ್ದ ಸಂಶೋಧಕರ ಬಳಿ ನನ್ನನ್ನು ಕರೆದುಕೊಂಡು ಹೋದರು. ಯಾವುದೋ ಚರ್ಚೆಯಲ್ಲಿ ಇದ್ದ ಅವರು, ನನ್ನ ಆಗಮನ ಕಂಡು ಸುಮ್ಮನಾದರು. ರೆಡ್ಡಿಯೇ ನನಗೆ ಅವರನ್ನು ಪರಿಚಯ ಮಾಡಿದ. ಅವರೆಲ್ಲರೂ ತಲೆಯ ಮೇಲೆ ಕೂದಲು ಇಲ್ಲದ, ಇದ್ದ ಅಷ್ಟಿಷ್ಟು ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದ್ದ ಐವತ್ತರ ಸುಮಾರಿನವರು. ಎಲ್ಲರಿಗೂ ಇತಿಹಾಸದ ಬಗ್ಗೆ ಭಾರಿ ಕುತೂಹಲ. ಅದರಲ್ಲೂ ಹಂಪಿಯ ಬಗ್ಗೆ ಹಲವಾರು ಸಂಶೋಧನೆಗಳನ್ನು ವರ್ಷಗಟ್ಟಲೆ ಜೊತೆಯಲ್ಲಿ ಮಾಡಿದವರು, ಹೆಂಡತಿಯರ ಜೊತೆಯಲ್ಲಿ ಇದ್ದುದಕ್ಕಿಂತ ಹೆಚ್ಚು ಸಮಯ ಟೆಂಟ್ ಅಡಿಯಲ್ಲಿ ಮಲಗಿದ್ದ ಅವರಲ್ಲಿ ಒಬ್ಬರ ಬಗ್ಗೆ ಮತ್ತೊಬ್ಬರಿಗೆ ತುಂಬಾ ಅಭಿಮಾನವಿತ್ತು ಅನ್ನೋದನ್ನು ಮೊದಲ ನೋಟದಲ್ಲೇ ಹೇಳಬಹುದಿತ್ತು.
ನಾನು ಸೇತುವೆಯ ವಿಷಯದಲ್ಲಿ ಆಸಕ್ತಿ ವಹಿಸಿ ಇಷ್ಟು ದೂರ ಬಂದಿದ್ದು ಆ ನಾಲ್ವರಿಗೂ ಖುಷಿ ತಂದಿತ್ತು. ನಮ್ಮ ವೃತ್ತಿ ಜೀವನದಲ್ಲಿ ವಿಜಯನಗರ ಸಾಮ್ರಾಜ್ಯದ ಬಗ್ಗೆ ಮಾಡುತ್ತಿದ್ದುದು ಮಹತ್ತ್ವದ ಸಂಶೋಧನೆ. ವಿಜಯನಗರ ಸಾಮ್ರಾಜ್ಯದ ಬಗ್ಗೆ ಇದುವರೆಗೂ ಸಿಗದಿದ್ದ ಮಿಸ್ಸಿಂಗ್ ಲಿಂಕ್ನ ಕೊಂಡಿ ನಮಗೆ ಸಿಕ್ಕಿದೆ – ಅಂತ ಆ ನಾಲ್ವರೂ ಒಕ್ಕೊರಲಿನಲ್ಲಿ ಹೇಳಿದರು. ಅಲ್ಲ, ಚಿನ್ನ ವಜ್ರಗಳನ್ನು ಬೀದಿಯ ಮೇಲೆ ಮಾರುತ್ತಿದ್ದ ವಿಜಯನಗರ ಸಾಮ್ರಾಜ್ಯದ ಮಿಸ್ಸಿಂಗ್ ಲಿಂಕ್ ಕಲ್ಲಿನ ಸೇತುವೆಯಾ? ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ರಾಜರು ಕಟ್ಟಿಸಿದ ಭವ್ಯ ದೇಗುಲಗಳು, ಅರಮನೆ ಹೇಳದ ಯಾವ ಚರಿತ್ರೆಯ ಕೊಂಡಿ ಈ ಸೇತುವೆಯಲ್ಲಿ ಅಡಗಿದೆ ಅಂತ ಕುತೂಹಲವಾಯ್ತು.
ನನ್ನ ಕುತೂಹಲವನ್ನು ಅರ್ಥ ಮಾಡಿಕೊಂಡವರಂತೆ ಪಾಂಡುರಂಗರೆಡ್ಡಿ ಶುರು ಮಾಡಿದರು “ಮಿಸ್ಟರ್, ಇಲ್ಲಿ ಪತ್ತೆಯಾಗಿರುವ ಸೇತುವೆ ವಿಜಯನಗರ ಕಾಲದ್ದು” ಅಂತ ಅವರು ಹೇಳುವಷ್ಟರಲ್ಲಿ, ಮೇಷ್ಟ್ರು ಹೇಳಿದ್ದ ಕಥೆ ನೆನಪಾಗಿ ನಾನು ಮಧ್ಯೆ ಬಾಯಿ ಹಾಕಿ “ಸರ್, ಇದು ಆಂಜನೇಯಸ್ವಾಮಿ ಕಟ್ಟಿಸಿದ ಸೇತುವೆ ಅಂತ ಊರಿನವರು ಹೇಳ್ತಿದಾರೆ ಅಲ್ವಾ?” ಅಂದೆ. ಅಷ್ಟು ಸಮಯ ಸುಮ್ಮನೆ ನಮ್ಮಿಬ್ಬರ ಮಾತುಕತೆ ಕೇಳುತ್ತಿದ್ದ ಇತರರು ಕೂಡ, ಒಮ್ಮೆಗೆ ನನ್ನ ಪ್ರಶ್ನೆಗೆ ಉತ್ತರ ಕೊಡಲು ಮುಂದೆ ಬಂದರು. ಸಂಶೋಧಕರ ಗುಂಪಿನಲ್ಲಿದ್ದ ನಾಗೇಂದ್ರರಾವ್, ತಮ್ಮ ಕನ್ನಡಕ ಸರಿ ಮಾಡಿಕೊಂಡು “ಸಾರ್, ಮುಟ್ಟಾಳರು ಸೃಷ್ಟಿಸಿದ ಕಟ್ಟುಕತೆಯನ್ನು ನೀವು ನಂಬ್ತೀರಾ? ರೆಡ್ಡಿ ನೋಡಿದ್ರೆ ನೀವು ನಾಸ್ತಿಕ ಅಂದ್ರು. ರಾಮಾಯಣ, ಮಹಾಭಾರತವೇ ನಡೆದಿಲ್ಲ, ಅದು ಬರೀ ಮಹಾಕಾವ್ಯಗಳಷ್ಟೇ, ಅದು ಬರಹಗಾರನ ಕಲ್ಪನೆ ಅಂತ ಎಷ್ಟೋ ಜನ ಹೇಳ್ತಿದಾರೆ. ಅದು ಇರ್ಲಿ, ಇವರ ಪ್ರಕಾರನೇ ಯೋಚನೆ ಮಾಡೋಣ. ಬೇಸಿಕ್ ಆಗಿ ಹೇಳಬೇಕು ಅಂದ್ರೆ, ಈ ಮುಟ್ಟಾಳರು ಸೃಷ್ಟಿಸಿದ ಕತೆಯಲ್ಲಿ ಲಾಜಿಕ್ಕೇ ಇಲ್ಲ. ಅಲ್ಲ ಸಾರ್, ನೀವು ರಾಮಾಯಣ ಓದಿದೀರಾ?” ಅಂದ್ರು. ಹೌದು ಎಂಬಂತೆ ತಲೆ ಅಲ್ಲಾಡಿಸಿದೆ. ಅವರು ಮುಂದುವರಿಸಿದರು, “ಯಾವ ರಾಮಾಯಣದಲ್ಲಿ ಆದ್ರೂ ರಾಮಸೇತು ಕಟ್ಟಲು ಕಲ್ಲಿಗಾಗಿ ಆಂಜನೇಯ ಕಿಷ್ಕಿಂಧೆಗೆ ಬಂದಿರೋ ಉಲ್ಲೇಖ ಇದೆಯಾ?” ಅಂತ ಮರುಪ್ರಶ್ನೆ ಹಾಕಿದರು. ನಾಗೇಂದ್ರರಾವ್ ಕೇಳಿದ್ದು ಸರಿ ಅನ್ನಿಸಿತು. ನಾನು ಇದುವರೆಗೂ ಎಲ್ಲೂ ಈ ಉಲ್ಲೇಖ ಕೇಳಿಲ್ಲ. ಇಲ್ಲ ಸರ್ ಎಂಬAತೆ ತಲೆ ಅಲ್ಲಾಡಿಸಿದೆ. ರಾವ್ ಮುಂದುವರಿದು, “ರಾಮಸೇತು ಎಂದು ನಂಬಲಾಗಿರುವ ಸೇತುವೆ ಕಟ್ಟಿರುವುದು ‘ಪ್ಯೂಮಿಸ್’ ಕಲ್ಲಿಂದ. ಆ ಕಲ್ಲಿಗೆ ನೀರಿನಲ್ಲಿ ತೇಲುವ ಗುಣವಿದೆ. ಆದರೆ ಈ ಸೇತುವೆ ಕಟ್ಟಿರೋದು ‘ಲಿಂಟೆಲ್’ ಕಲ್ಲಿಂದ” ಅಂತ ಹೇಳಿ ನಿಮ್ಮ ಅನುಮಾನ ಪರಿಹಾರ ಆಯ್ತಾ ಎಂಬಂತೆ ನೋಡಿದರು. ನಾನು ಉತ್ತರಿಸುವ ಮೊದಲೇ ಪಾಂಡುರಂಗರೆಡ್ಡಿ “ಸರ್, ನಾವು ಈ ಸೇತುವೆ ವಿಜಯನಗರ ಕಾಲಕ್ಕೆ ಸೇರಿದ್ದು ಅಂತ ಏಕೆ ನಿರ್ಧಾರ ಮಾಡಿದ್ದು ಅಂತ ನಿಮಗೆ ಗೊತ್ತಾಯ್ತು ಅಂತ ಭಾವಿಸ್ತಿನಿ” ಅಂತ ನಕ್ಕರು.
“ನನಗೆ ನೆನಪಾಯ್ತು, ಲಿಂಟೆಲ್ ಕಲ್ಲುಗಳನ್ನು ವಿಜಯನಗರ ಕಾಲದ ಹಲವು ದೇವಾಲಯಗಳ ರಚನೆಯಲ್ಲಿ, ಮನೆಯ ಬಾಗಿಲಿನ ಹೊಸ್ತಿಲು, ತಲೆಗಂಬ ಮುಂತಾದ ಹಲವಾರು ಕಡೆ ಈ ರೀತಿಯ ಕಲ್ಲಿನ ಬಳಕೆ ಕೇಳಿದ್ದೆ” ಎಂದೆ.
ಇಷ್ಟೊತ್ತು ನಮ್ಮ ಚರ್ಚೆಯನ್ನು ಸಮಾಧಾನದಿಂದ ಕೇಳುತ್ತಿದ್ದ ಗಣಪತಿ, ಮಧ್ಯೆ ಬಾಯಿ ಹಾಕಿ, “ಅಷ್ಟೇ ಅಲ್ಲ, ಈ ಕಲ್ಲುಗಳನ್ನು ಸೇತುವೆ ನಿರ್ಮಾಣಕ್ಕೆ ಹೆಚ್ಚಾಗಿ ಉಪಯೋಗ ಮಾಡಿದ್ದು ವಿಜಯನಗರದ ಅರಸರು. ಸದಾ ಯುದ್ಧದಲ್ಲಿ ಮುಳುಗಿದ್ದ ವಿಜಯನಗರ ಸಾಮ್ರಾಜ್ಯದ ಸೈನಿಕರಿಗೆ ಆಹಾರದ ಕೊರತೆ ಉಂಟಾಗಬಾರದು ಎಂಬ ಕಾರಣದಿಂದ ವಿಜಯನಗರದ ಕಾಲದಲ್ಲಿ ಹಂಪಿಯ ಸುತ್ತಮುತ್ತ ಕೃಷಿಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗುತ್ತಿತ್ತು. ಅದರಲ್ಲೂ ವಿಜಯನಗರ ರಾಜರು ಹಂಪಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಂಗಭದ್ರಾ ನದಿಗೆ ಹಲವಾರು ಕಡೆ ಸೇತುವೆಯನ್ನು, ಒಡ್ಡುಗಳನ್ನು ನಿರ್ಮಾಣ ಮಾಡಿ ಕೃಷಿಗೆ ಸಹಾಯ ಮಾಡುತ್ತಿದ್ದರು. ತಮ್ಮ ಸೈನಿಕರಿಗೆ ಆಹಾರದ ಕೊರತೆ ಉಂಟಾಗಬಾರದು ಎಂದು! ತಮ್ಮ ಸಾಮ್ರಾಜ್ಯಕ್ಕಾಗುವಷ್ಟು ಆಹಾರದ ಉತ್ಪಾದನೆ ಇದ್ದರೂ, ಯಾವ ಸಾಮಂತರಾಜರು ಯಾವಾಗ ತಿರುಗಿಬೀಳುತ್ತಾರೆ ಎಂಬುದು ಗೊತ್ತಿರಲಿಲ್ಲ. ಹಾಗಾಗಿ ಸಾಧ್ಯವಾದಷ್ಟು ರಾಜಧಾನಿ ಹಂಪಿಯ ಸುತ್ತಮುತ್ತ ಕೃಷಿಗೆ ಪ್ರಾಧಾನ್ಯ ನೀಡಿ, ಕೃಷಿಗೆ ತೆರಿಗೆ ವಿನಾಯಿತಿ ಕೂಡ ನೀಡಲಾಗಿತ್ತು” ಎಂದರು. “ಅದಲ್ಲದೆ, ಹೊಳೆ ದಾಟಲು ಕೆಲವು ಕಡೆ ಮೇಲ್ಛಾವಣಿ ಆಕಾರದ ಸೇತುವೆಗಳನ್ನು ನಿರ್ಮಾಣ ಮಾಡಿರುವುದನ್ನು ವಿಜಯನಗರ ಸಾಮ್ರಾಜ್ಯದ ಹಲವಾರು ಕಡೆ ನೀವು ನೋಡಬಹುದು. ಹಂಪಿಯ ವಿಠ್ಠಲ ದೇವಾಲಯದ ಹಿಂಭಾಗದಲ್ಲಿ ಈ ರೀತಿಯ ಬೃಹತ್ ಸೇತುವೆ ಇತ್ತು. ಅದು ಹಂಪಿ ಮತ್ತು ಆನೆಗುಂದಿ ನಡುವೆ ಸಂಪರ್ಕಕ್ಕಾಗಿ ಬಳಸುತ್ತಿದ್ದರು ಅಂತ ಹಲವಾರು ಕಡೆ ಉಲ್ಲೇಖ ಇದೆ” ಎಂದರು.
ಆದರೆ ನನ್ನ ಕುತೂಹಲ ಅಷ್ಟಕ್ಕೇ ಮುಗಿಯಲಿಲ್ಲ. ಪಾಂಡುರಂಗರೆಡ್ಡಿಯ ಕಡೆಗೆ ತಿರುಗಿ, “ಸರ್, ನೀವು ಇದನ್ನು ವಿಜಯನಗರ ಇತಿಹಾಸದ ಪ್ರಮುಖ ಕೊಂಡಿ ಅಂತ ಹೇಳಿದ್ರಿ. ಆದರೆ ಕೇವಲ ಕೃಷಿಗಾಗಿ ಕಟ್ಟಿದ ಸೇತುವೆ ಇದು ಅಂದರೆ, ಇಂತಹ ಹಲವಾರು ಸೇತುವೆಯನ್ನು ವಿಜಯನಗರ ಸಾಮ್ರಾಜ್ಯದ ಹಲವು ಕಡೆ ಗುರುತಿಸಿದ್ದಾರೆ ಅಲ್ವಾ?” ಎಂದೆ. ಪಾಂಡುರಂಗರೆಡ್ಡಿಯವರು ನರಸಿಂಹರಾಜು ಕಡೆ ನೋಡಿದರು. ನನಗೆ ಅಲ್ಲಿದ್ದ ನಾಲ್ವರಲ್ಲಿ ಈ ನರಸಿಂಹರಾಜು ವಿಚಿತ್ರವಾಗಿ ಕಂಡಿದ್ದರು. ನಾನು ಇಷ್ಟೊತ್ತು ಇವರ ಬಳಿ ಮಾತನಾಡುತ್ತಿದ್ದರೂ ಆತ ಮಾತ್ರ ತುಟಿಕ್ ಪಿಟಿಕ್ ಎಂದಿರಲಿಲ್ಲ. ಆದರೆ ರೆಡ್ಡಿಯ ನೋಟವನ್ನು ಅರ್ಥ ಮಾಡಿಕೊಂಡವನಂತೆ, “ಮಿಸ್ಟರ್, ಕೇವಲ ಕೃಷಿಗಾಗಿ ಈ ಸೇತುವೆ ಕಟ್ಟಿಲ್ಲ” ಎಂದರು. ನಾನು ಉದ್ವೇಗದಿಂದ “ಅಂದ್ರೆ, ಇಲ್ಲಿ ನಿಧಿ ಅಡಗಿಸಿ ಇಟ್ಟಿರಬಹುದಾ?” ಎಂದೆ. ಒಂದು ಕ್ಷಣ ಯೋಚಿಸಿದ ನರಸಿಂಹರಾಜು “ಬಹುಶಃ ಆ ಸಾಧ್ಯತೆ ಇಲ್ಲ. ಏಕೆಂದರೆ ವಿಜಯನಗರ ಸಾಮ್ರಾಜ್ಯದ ರಾಜರು ಅವರ ನಿಧಿಯನ್ನು ಸಂಗ್ರಹಿಸುತ್ತಿದ್ದದ್ದು ದೇವಾಲಯ, ಬೆಟ್ಟಗಳ ಮೇಲೆ, ನಿಗೂಢ ಪ್ರದೇಶಗಳಲ್ಲಿ. ಆದರೆ ಈ ಊರಿನ ದೇವಾಲಯ ಇತ್ತೀಚಿನ ಶತಮಾನದಲ್ಲಿ ನಿರ್ಮಾಣವಾಗಿರುವುದು. ಇದು ಬಯಲುಪ್ರದೇಶ ಬೇರೆ. ಯಾವ ಮೂರ್ಖ ರಾಜನು ಕೂಡ ಇಂತಹ ಸ್ಥಳಗಳಲ್ಲಿ ಭಾರೀ ಪ್ರಮಾಣದ ನಿಧಿ ಸಂಗ್ರಹ ಮಾಡುವುದಿಲ್ಲ. ನಿಧಿ ಇದ್ದರೂ ಚಿಕ್ಕ ಪ್ರಮಾಣದಲ್ಲಿ ಇರಬಹುದು. ಆಗಿನ ವ್ಯಾಪಾರಿಗಳು, ಶ್ರೀಮಂತರು ಬಚ್ಚಿಟ್ಟ ನಿಧಿಯಷ್ಟೇ” ಎಂದರು. ಉದ್ವೇಗದಿಂದ ಅರಳಿದ್ದ ನನ್ನ ಮುಖ ಮುದುಡಿತು. ಅದನ್ನು ಗಮನಿಸಿದ ನರಸಿಂಹರಾಜು, “ಆದರೆ ನಿಧಿಗಿಂತ ವಿಶೇಷ ಈ ಸೇತುವೆಗೆ ಇದೆ. ವಿಜಯನಗರ ಕಾಲದಲ್ಲಿ ಇದೇ ಜಾಗದಿಂದ ಪಶ್ಚಿಮ ಕರಾವಳಿಗೆ ವ್ಯಾಪಾರ ಮಾಡುತ್ತಿದ್ದರು. ಪಾಶ್ಚಾತ್ಯದೇಶಗಳಿಂದ ಬರುತ್ತಿದ್ದ ಕುದುರೆಗಳನ್ನು ಇದೇ ಮಾರ್ಗವಾಗಿ ಹಂಪಿಗೆ ಸಾಗಿಸಲಾಗುತ್ತಿತ್ತು, ಮರಳಿ ಇಲ್ಲಿಂದ ಚಿನ್ನ ಬೆಳ್ಳಿ ವಜ್ರಗಳನ್ನು ಕೂಡ ಇದೇ ಮಾರ್ಗವಾಗಿ ಸಾಗಿಸುವ ಪ್ರಮುಖ ವ್ಯಾಪಾರಿ ಮಾರ್ಗವಾಗಿತ್ತು” ಎಂದರು. ಆಗ ಆ ಸಂಶೋಧಕರು ಈ ಸೇತುವೆಯನ್ನು ಏಕೆ ‘ಮಿಸ್ಸಿಂಗ್ ಲಿಂಕ್’ ಅಂತ ಹೇಳಿದ್ದು ಎಂದು ಅರ್ಥವಾಯ್ತು.
ನನ್ನ ಎಲ್ಲ ಪ್ರಶ್ನೆಗಳಿಗೂ ಒಂದು ರೀತಿಯಲ್ಲಿ ಉತ್ತರ ಸಿಕ್ಕಿತು. ಆದರೆ “ಈ ಊರಿನ ಮುಖಂಡರು ಏಕೆ ಸಂಶೋಧನೆಗೆ ತಕರಾರು ತೆಗೆಯುತ್ತಿದ್ದಾರೆ?” ಅಂತ ಕೇಳಿದೆ. “ಹಣದ ಆಸೆಗೆ” ಎಂದರು ರೆಡ್ಡಿ ನಗುತ್ತ. “ನಿಧಿಯೇ ಇಲ್ಲದೆ ಹಣವೆಲ್ಲಿಯದು?” ಎಂದೆ.
“ಮಿಸ್ಟರ್, ನೀವು ಅಂದುಕೊಂಡಿರುವಷ್ಟು ಈ ಜನ ಮುಗ್ಧರಲ್ಲ. ನಿಧಿಯಿಂದಲೇ ಹಣ ಬರಬೇಕು ಅಂತಲೂ ಇಲ್ಲ. ಹಣ ಮಾಡಲೆಂದೇ ದೇವರು ಇದೆಯಲ್ವಾ! ಜನರಲ್ಲಿ ನಂಬಿಕೆ ಹುಟ್ಟಿಸಿದರೆ ಸಾಕು, ದಾರಿ ಬದಿಯಲ್ಲಿ ಬಿದ್ದಿರುವ ಕಲ್ಲನ್ನೇ ‘ಉದ್ಭವ ಲಿಂಗ’ ಅಂತ ನಂಬಿಸಿ ಮಂಗ ಮಾಡ್ತಾರೆ. ಅಂತದ್ರಲ್ಲಿ ಇಲ್ಲಿ ಸೇತುವೆಯೇ ಉದ್ಭವವಾಗಿದೆ, ಇನ್ನೂ ಈಗ ಬಿಡ್ತಾರಾ? ನದಿ ನೀರು ಕಡಮೆಯಾಗಿ ಸೇತುವೆಯ ಕಲ್ಲು ಕಂಡಿದ್ದೆ ತಡ, ಹೇಗೂ ಪಕ್ಕದಲ್ಲಿ ಆಂಜನೇಯಸ್ವಾಮಿ ದೇವಸ್ಥಾನ ಇದೆ. ಅದಕ್ಕೂ ಇದಕ್ಕೂ ಹೊಂದಾಣಿಕೆ ಆಗೋ ರೀತಿ ಕಥೆ ಕಟ್ಟಿ, ಜನ ನಂಬುವ ರೀತಿಯಲ್ಲಿ ಈ ಸೇತುವೆಯನ್ನು ಆಂಜನೇಯಸ್ವಾಮಿ ಕಟ್ಟಿರೋದು ಅಂತ ಜನ ನಂಬುವಂತೆ ಕೂಡ ಮಾಡಿದ್ರು. ಆದರೆ ಇದು ವಿಜಯನಗರ ಕಾಲದ ಸೇತುವೆ ಅಂತ ನಾವು ಸಂಶೋಧನೆ ಮೂಲಕ ಸಾಬೀತು ಮಾಡೋಕೆ ಬಂದಾಗ, ಅವರ ಯೋಜನೆಯನ್ನು ನಾವು ತಲೆಕೆಳಗೆ ಮಾಡ್ತಿದೀವಿ ಅಂತ ನಮ್ಮ ಮೇಲೆ ಇಲ್ಲದ ಕಥೆ ಕಟ್ಟಿದ್ರು. ನಾವು ನಿಧಿ ಕಳ್ಳರು ಅಂತ ಸುಳ್ಳು ಹಬ್ಬಿಸಿ ನಮ್ಮನ್ನು ಊರಿಂದ ಹೊರದಬ್ಬಿದ್ರು. ಹೇಗೋ ಸರ್ಕಾರದ ಪರ್ಮಿಶನ್ ಪಡೆದು ನಮ್ಮ ಸಂಶೋಧನೆ ಮುಗ್ಸಿದ್ದೀವಿ. ನಾಳೆನೇ ನಾವು ಇಲ್ಲಿಂದ ಹೊರಡ್ತಿದ್ದೀವಿ. ನೀವು ಇವತ್ತು ಸಿಕ್ಕಿದ್ದು ನಮ್ಮ ಪುಣ್ಯ” ಅಂತ ಹೇಳಿದ್ರು.
ನಾನು ಸಮಯ ನೋಡಿದೆ ಆಗಲೇ ರಾತ್ರಿ ಹತ್ತೂವರೆಯಾಗಿತ್ತು. ಆ ಅಮಾವಾಸ್ಯೆಯ ಕತ್ತಲಲ್ಲಿ ಹೊರಗಡೆ ಏನಿದೆ ಅನ್ನೋದು ಕೂಡ ಗೊತ್ತಾಗುತ್ತಿರಲಿಲ್ಲ. ಅಷ್ಟರಲ್ಲೇ ನಾವು ಇದ್ದಲ್ಲಿಗೆ ನನ್ನ ಲಗೇಜ್ ಎಲ್ಲ್ಲ ಹಿಡಿದು ಏದುಸಿರು ಬಿಡುತ್ತ ಪರಮೇಶಿ ಓಡೋಡಿ ಬಂದ. “ಸಾರ್, ನೀವು ಬೇಗ ಈ ಊರು ಬಿಟ್ಟು ಹೋಗಿ, ಇಲ್ಲ್ಲಾಂದ್ರೆ ಆ ಖದೀಮರು ನಿಮ್ಮನ್ನೂ ಮುಗಿಸಿಬಿಡ್ತಾರೆ” ಅಂತ ಒಂದೇ ಉಸಿರಲ್ಲಿ ಹೇಳಿದ. “ಯಾರು ನನ್ನ ಮುಗಿಸ್ತಾರೆ?” ಎಂದು ಅಚ್ಚರಿಯಿಂದ ಕೇಳಿದೆ. ನನಗೆ ಗಾಬರಿ. ಎದುರಿಗೆ ಕುಳಿತವರಿಗೆ ಗಾಬರಿಯಾಗುವಂತೆ, ಆ ದೈತ್ಯ ಗಾತ್ರದ ಪರಮೇಶಿಯು ಒಂದೇ ಸಮನೆ ಅಳಲು ಶುರುಮಾಡಿದ. ಬಿಕ್ಕುತ್ತ, “ಆ ಜನರೇ ನಮ್ ಮಾಸ್ತ್ರನ್ನಾ ಮುಗಿಸಿಬಿಟ್ರು ಸಾರ್..” ಎಂದ.
ನಮಗೆಲ್ಲರಿಗೂ ಆಶ್ಚರ್ಯ, ಆತಂಕ. ಈ ಊರಿನಲ್ಲಿ ಮೇಷ್ಟ್ರ ಮೇಲೆ ಅಷ್ಟು ದ್ವೇಷ ಇರೋರು ಯಾರು? ಈ ರಾತ್ರಿಯಲ್ಲಿ ಅವರನ್ನು ಕೊಲೆ ಮಾಡಿದ್ದು ಯಾರು? ಅನ್ನೋ ಪ್ರಶ್ನೆ ಎಲ್ಲರ ತಲೆಯಲ್ಲೂ ಸುಳಿಯಿತು. ಅಷ್ಟರಲ್ಲಿ ಪಾಂಡುರಂಗರೆಡ್ಡಿ, ಪರಮೇಶಿಗೆ ನೀರು ಕುಡಿಯಲು ಕೊಟ್ಟು ಸಮಾಧಾನ ಮಾಡಿದರು.
ನನ್ನ ಕಡೆ ತಿರುಗಿದ ಪರಮೇಶಿ, “ನೀವು ಇಲ್ಲಿಗೆ ಬಂದಿದ್ದೀರಾ ಅಂತ ನಾನು ಮಾಸ್ತುçಗೆ ಹೇಳಿ ರಾತ್ರಿ ಊಟ ತರಾನ ಅಂತ ಮನೆ ಕಡೆ ಹೊಂಟೆ. ವಾಪಾಸ್ ಬರ್ಬೇಕಾದ್ರೆ ಅವರ ಮನೆಯಲ್ಲಿ ಮಾಸ್ತ್ರುಇರಲಿಲ್ಲ. ಅವರ ಅವ್ವ, ಯಾರೋ ಹೊಸ ಜನ ಊರ್ನಾಗೆ ಬಂದಿದಾರೆ ಅಂತಲ್ವೊ ಅವ್ರನ್ನ ಕಾಣೋಕೆ ಹೋಗಿದಾನೆ ಕಣಪ್ಪಾ ಅಂದ್ಲು. ಪ್ರವಾಸಿ ಮಂದಿರದ ಹತ್ರ ನೋಡಿದ್ರೆ, ಅಲ್ಲಿ ಯಾರೂ ಇರ್ಲಿಲ್ಲ. ಅದ್ಕೆ ಮಾಸ್ತ್ರು ನಿಮ್ಮನ್ನ ಹುಡಿಕ್ಕಂಡು ಟೆಂಟ್ ತಾವ ಬಂದಿರಬಹುದು ಅಂತ ಅನ್ಕೊಂಡು ಅಡ್ಡ ದಾರಿನಾಗೆ ಬರ್ತಿದ್ದೆ. ಅಲ್ಲಿ ಯಾರೋ ರಸ್ತೇಲಿ ಬಿದ್ದಿದ್ರು. ಓಡಿ ಹೋಗಿ ನೋಡಿದ್ರೆ ನಮ್ಮ ಮಾಸ್ತ್ರು…” ಎಂದು ಮತ್ತೆ ಅಳಲು ಶುರುಮಾಡಿದ. ಒಂದು ನಿಮಿಷ ಸುಮ್ಮನಾದ. ಮತ್ತೆ ಶುರುಮಾಡಿದ “ನಾನು ಅವರ ಹತ್ರ ಹೋಗ್ಬೇಕಾದ್ರೆ ಇನ್ನೂ ಅರೆಜೀವ ಇತ್ತು. ನನ್ನ ನೋಡಿದ್ದೆ ತಡ, “ಲೋ ಪರಮೇಶಿ.. ಸಾಯಂಕಾಲ ಶಾಲೆ ಬಿಟ್ಮೇಲೆ, ನಾನು ಮನೆ ತಾವ ಹೋಗ್ಬೇಕಾದ್ರೆ ಆ ಹನುಮಪ್ಪ ಗೌಡ್ರು, ಪಂಚಾಯ್ತಿ ಭರಮಣ್ಣ ಆ ಹುಣಸೆಮರದ ಅಡಿಗೆ ನಿಂತಿದ್ರು. ನನ್ನ ಕಂಡ ಕೂಡ್ಲೆ, ‘ಏನ್ ಮೇಷ್ಟ್ರೆ ಯಾರೋ ಹೊಸ ಜನಾನ ನಿಧಿ ಹುಡ್ಕಾಕೆ ಅಂತ ನಮ್ಮೂರಿಗೆ ಕರ್ಕಂಡು ಬಂದಿದೀರಂತೆ’ ಅಂದ್ರು. ನಾನು ‘ಇಲ್ಲ ಸ್ವಾಮಿ, ಆತ ಪತ್ರಕರ್ತ. ನಮ್ಮೂರ ಸೇತ್ವೆ ಬಗ್ಗೆ ಏನೋ ಬರಿತಾನಂತೆ’ ಅಂದೆ. ಅವರಿಬ್ರು ಸಿಟ್ಟಿನಿಂದ, ‘ಆ ತಲೆಮಾಸಿದ ರಿಪೋಟ್ರು ಇಲ್ಲಿಂದ ಹೊರಗೆ ಹೋದ್ರೆ ತಾನೆ ಸೇತ್ವೇ ಬಗ್ಗೆ ಬರಿಯೋಕೆ’ ಅಂತ ಅಲ್ಲಿಂದ ಹೊರಟ್ರು. ನಾನು ಇವರೇನು ಮಾಡ್ತಾರೆ ಅಂತ ಸುಮ್ನಿದ್ದೆ.
ರಾತ್ರಿ ಪ್ರವಾಸಿ ಮಂದಿರಕ್ಕೆ ಹೋದ್ರೆ, ಅಲ್ಲಿ ಈ ರಿಪೋಟ್ರು ಇದ್ದಿಲ್ಲ. ಇದೊಳ್ಳೆ ಸವಾಸ ಆಯ್ತಲ್ಲ ಅನ್ಕೊಂಡು, ಇನ್ನೂ ಆ ಟೆಂಟ್ ತಾವನೇ ಇರ್ಬೊದು ಅಂತ ಇತ್ತ ಬಂದೆ. ನಾನು ಈ ಕಡೆ ಬರೋದು ನೋಡಿ, ಯಾರೋ ಮೂವರು ನನ್ನ ಹಿಂದೆನೇ ಬಂದಂಗಾಯ್ತು. ನಾನು ಭ್ರಮೆ ಅನ್ಕೊಂಡು ಸುಮ್ನಾದೆ. ಆದರೆ ಹೊಳೆ ಬಯಲಿಗೆ ಬಂದ್ ತಕ್ಷಣನೇ, ಆ ಮೂವರು ನನ್ ಮೈಮ್ಯಾಗೆ ಕಂಬಳಿ ಮುಚ್ಚಿ, ದೊಣ್ಣೆ ತಂಗಾಂಡ್ ತದ್ಕೊಕೆ ಶುರುಮಾಡಿದ್ರು. ದೊಣ್ಣೆಯಲ್ಲಿ ಹೊಡೀತಿದ್ದೋನು ಒಬ್ಬ, ಹನುಮಪ್ಪನ ಸೇತ್ವೆ ಬಗ್ಗೆನೇ ಏನೇನೋ ಬರಿತೀಯೇನೊ ಮಗನೇ ಅಂದಾಗ… ಇದು ಆ ಮೂಲೆಮನೆ ನಿಂಗನ ಧ್ವನಿ ತರ ಐತಲ್ಲ, ಅನ್ಕೊಂಡು ಲೇ… ನಾನ್ ಮೇಷ್ಟ್ರು ಕಣಲೇ ಅಂದೆ. ನಾನು ರಿಪೋರ್ಟ್ರು ಅಲ್ಲ ಅಂತ ಗೊತ್ತಾಗಿದ್ದೆ ತಡ, ಅವರ ಬಂಡವಾಳ ಬಯಲಾಗುತ್ತೆ ಅಂತ ಆ ಮೂವರು ನನ್ ತಲಿಗೆ ದೊಣ್ಣೇಲಿ ತದುಕಿ ಓಡಿಹೋದ್ರು. ಹೆಂಗರ್ರು ಮಾಡಿ ಆ ರಿಪೋರ್ಟ್ರನ ಬೆಂಗ್ಳೂರಿಗೆ ಕಳ್ಸು ಪರಮೇಶಿ ಅಂತ ಹೇಳ್ತಾ ನನ್ ತೊಡಿ ಮ್ಯಾಗನೇ ಪ್ರಾಣ ಬಿಟ್ರು ಸಾರ್…” ಎಂದ.
ಇದನ್ನು ಕೇಳಿದ ತಕ್ಷಣವೇ ಪಾಂಡುರಂಗರೆಡ್ಡಿ, “ನಾನು ವಾಪಾಸು ಬರೋತನಕ ಇಲ್ಲೇ ಇರಿ” ಅಂತ ಅವರ ಜೊತೆಗಾರರಿಗೆ ಮತ್ತು ಪರಮೇಶಿಗೆ ಹೇಳಿ, ತಕ್ಷಣವೇ ಅವರ ಕಾರಿನಲ್ಲಿ ನನ್ನ ಲಗೇಜ್ ತುರುಕಿ, ನನ್ನನ್ನು ಹೂವಿನಹಡಗಲಿಗೆ ತಂದು, ಬೆಂಗ್ಳೂರು ಬಸ್ ಹತ್ತಿಸಿದರು.
ಬಸ್ ಬೆಂಗ್ಳೂರು ಕಡೆಗೆ ಹೊರಡುತ್ತಿದ್ದಂತೆ, ರೆಡ್ಡಿ ಕಾರ್ ತಿರುಗಿಸಿ ಹೊರಟರು. ಒಮ್ಮೆಲೆ ಭಾರಿ ಮಳೆ ಶುರುವಾಯ್ತು. ರೆಡ್ಡಿ ಮೊದಲಘಟ್ಟ ತಲಪುವ ವೇಳೆಗೆ ನದಿಯ ಬಯಲಲ್ಲಿ ಹಾಕಿದ್ದ ಅವರ ಟೆಂಟ್ ಸಮೀಪಕ್ಕೆ ನದಿ ನೀರು ಬಂದಿತ್ತು. ನದಿ ನೀರು ಹೆಚ್ಚಾಗುತ್ತಿದ್ದಂತೆ ಆ ಸಂಶೋಧಕರು ಪರಮೇಶಿ ಜೊತೆ ಸೇರಿ ತಮ್ಮ ಟೆಂಟ್, ಇತರೆ ವಸ್ತುಗಳನ್ನು ದಾರಿ ಬದಿಯಲ್ಲಿ ತಂದಿದ್ದರು. ಎಲ್ಲರೂ ಅವಸರವಾಗಿ ಅವರ ಸಾಮಾನುಗಳನ್ನು ಕಾರಿಗೆ ತುರುಕಿ, ಪರಮೇಶಿಗೆ ಥ್ಯಾಂಕ್ಸ್ ಹೇಳಿ ಅವನ ಕೈಗೆ ಐನೂರರ ನೋಟು ಕೊಟ್ಟರು.
“ನಾ ಸಾಯಾಕ ಮೊದ್ಲು ಈ ಊರಿನ ಉದ್ಧಾರ ಮಾಡ್ತೀನಿ ಅಂತಿದ್ದ ಮಾಸ್ತç ಹೊಳಿ ದಂಡ್ಯಾಗ ಸತ್ತು ಮಲ್ಗ್ಯಾನಲ್ಲೋ ಶಿವ” ಅಂತ ಪರಮೇಶಿ ಊರಿನ ಬೀದಿಬೀದಿಗಳಲ್ಲೂ ಡಂಗೂರ ಹೊಡೆದಂತೆ ರೋದಿಸುತ್ತಿದ್ದರೆ, ಅತ್ತ ಕಡೆ ಇಷ್ಟೂ ದಿವಸ ಬತ್ತಿದ್ದ ತುಂಗಭದ್ರಾ ಇದೀಗ ಮಲೆನಾಡಲ್ಲಿ ಬಂದ ಮಳೆಯಿಂದ ಭೋರ್ಗರೆಯುತ್ತ ಸಾಗುತ್ತಿತ್ತು. ಬಯಲುಸೀಮೆಯ ಆ ಇಡೀ ಊರಿಗೆ ಊರೇ ಬರುವ ಕೇಡುಗಾಲಕ್ಕೆ ಸಿದ್ಧವಾಗಿ ಕುಳಿತಂತೆ ಗಾಬರಿಯಿಂದಲೇ ಪರಮೇಶಿಯ ಲುಂಗಿಯನ್ನು ಹಿಂಬಾಲಿಸಿಕೊಂಡು ತುಂಗಭದ್ರೆಯ ತೀರದತ್ತ, ಮೇಷ್ಟ್ರು ಸ್ಥಿತಿಗೆ ಹೊರಟರೆ, ‘ಉದ್ಭವ ಸೇತುವೆ’ ಮತ್ತೆ ತುಂಗಭದ್ರೆಯ ಒಡಲಲ್ಲಿ ಮುಳುಗಿಹೋಯಿತು.