ಈಗ್ಗೆ ಮೂರು ವರ್ಷ ಹಿಂದೆ (ಮೇ ೨೦೨೦) ಮೋದಿ ಸರ್ಕಾರ ‘ಆತ್ಮನಿರ್ಭರ ಭಾರತ’ ಗುರಿಯನ್ನು ಘೋಷಿಸಿದಾಗ – ಅದೂ ಕೋವಿಡ್ ೧೯ ಸಾಂಕ್ರಾಮಿಕದ ವಿಘಾತದ ಹಿಂದುಗೂಡಿ – ಶಾಶ್ವತ ಸಿನಿಕತನಕ್ಕೆ ಹೆಸರಾದ ‘ವಿರೋಧಕ್ಕಾಗಿ ವಿರೋಧ’ವನ್ನು ಸ್ವಾಭಾವಿಕವಾಗಿಸಿಕೊಂಡ ಪಡೆಗಳಂತೂ ಎಂದಿನಂತೆ ಅದನ್ನು ಘೋಷಣೆ ಮಾತ್ರವೆಂದು ತಳ್ಳಿಹಾಕಿದುದು ಅವುಗಳ ಜಾಯಮಾನಕ್ಕೆ ಅನುಗುಣವಾಗಿತ್ತು. ಅನ್ಯ ವಲಯಗಳಲ್ಲಿಯೂ ಆ ಲಕ್ಷö್ಯದ ಬಗೆಗೆ ಅತ್ಯುತ್ಸಾಹವೇನೂ ತೋರಿರಲಿಲ್ಲ. ಅಲ್ಲಿಂದೀಚೆಗೂ ಪ್ರಮುಖ ವಿರೋಧಪಕ್ಷವು ಆರೂಢ ಸರ್ಕಾರದ ಪ್ರತಿಯೊಂದು ಉಪಕ್ರಮವನ್ನೂ ಟೀಕಿಸುತ್ತ ಬಂದಿರುವ ರೀತಿಯನ್ನು ನೋಡಿದರೆ ಅದರ ದೃಷ್ಟಿಯಲ್ಲಿ ಭಾರತ ಒಂದು ‘ಬನಾನಾ ರಿಪಬ್ಲಿಕ್’ ಎನ್ನಬೇಕಾದೀತು. ಆದರೆ ‘ವಾಸ್ತವ’ಗಳೆದುರಿಗೆ ‘ವಾದ’ಗಳು ಮುಗ್ಗರಿಸಲೇಬೇಕಾಗುತ್ತದಷ್ಟೆ. ಒಂದೆರಡು ಸಾಧನೆಗಳನ್ನೇ ಗಮನಿಸುವುದಾದಲ್ಲಿ: ಭಾರತದ ರಫ್ತು ೭೫೦ ಶತಕೋಟಿ ಡಾಲರ್ ತಲಪಿ ದಾಖಲೆ ನಿರ್ಮಿಸಿದೆ. ರಕ್ಷಣಾ ಸಾಧನಗಳ ರಫ್ತಿನ ಪ್ರಮಾಣ ರೂ. ೧೫,೯೨೦ ಕೋಟಿಯಷ್ಟಾಗಿರುವುದು ಇನ್ನೊಂದು ದಾಖಲೆಯಾಗಿದೆ. ಉಕ್ಕು ಉದ್ಯಮದಲ್ಲಿ ಭಾರತ ವಿಶ್ವದಲ್ಲಿಯೆ ಎರಡನೇ ಸ್ಥಾನಕ್ಕೆ ಏರಿದೆ. ಪಟ್ಟಿಯನ್ನು ಎಷ್ಟು ಬೇಕಾದರೂ ಬೆಳೆಸಲು ಅವಕಾಶವಿದೆ; ಅದರ ಆವಶ್ಯಕತೆ ಇಲ್ಲ. ರಸ್ತೆ ಸಂಪರ್ಕ, ರೈಲು ಸಂಪರ್ಕ, ಕೃಷಿಗೆ ಪೋಷಕವಾದ ಧೋರಣೆಗಳು, ಗ್ರಾಮಗಳಿಗೆ ನೀರಿನ ಹಾಗೂ ವಿದ್ಯುತ್ತಿನ ಒದಗಣೆ ಮೊದಲಾದ ನಿತ್ಯಜೀವನ ಸೌಕರ್ಯಗಳ ಉನ್ನತೀಕರಣ _ ಎಲ್ಲವೂ ಎದ್ದುಕಾಣುವಂತಿವೆ. ಆತ್ಮನಿರ್ಭರತೆಯೆಂದರೆ ಮತ್ತಿನ್ನೇನು? ಸಮಸ್ಯೆಗಳೇ ಇಲ್ಲವೆಂದಲ್ಲ. ಆದರೆ ಸಾಧನೆಯನ್ನು ಅಲಕ್ಷಿಸದಿರೋಣ.
ಆತ್ಮನಿರ್ಭರತೆ
Month : July-2023 Episode : Author :