೨೦೧೪ರಿಂದ ೨೦೨೪ರವರೆಗಿನ ಹತ್ತು ವರ್ಷಗಳದು ದೃಢಸಂಕಲ್ಪದಿಂದ ಗಣನೀಯ ಸಾಧನೆಯತ್ತ ಭಾರತ ಇತಿಹಾಸಾರ್ಹ ಹೆಜ್ಜೆಗಳನ್ನಿರಿಸುತ್ತ ಸಾಗಿದ ದಶಕವೆಂದು ಅಂಕಿತಗೊಳ್ಳಬೇಕಾಗಿದೆ. ೨೦೧೪ರಲ್ಲಿ ಈ ಸರ್ಕಾರದ್ದೂ ಬರಿಯ ಘೋಷಣೆಗಳೇ ಅಥವಾ ಅವುಗಳಲ್ಲಿ ಹೆಚ್ಚಿನವನ್ನು ಅದು ಕಾರ್ಯಾನ್ವಿತಗೊಳಿಸೀತೇ ಎಂದು ಶಂಕೆಯನ್ನು ವ್ಯಕ್ತಪಡಿಸಿದ್ದವರು ಕೆಲವರು. ಆದರೆ ಆರೂಢ ಸರ್ಕಾರದ ನೇತೃತ್ವದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಆಗಿರುವ ಎಲ್ಲ ಕ್ಷೇತ್ರಗಳ ಉನ್ಮುಖತೆ ಎಲ್ಲರನ್ನೂ ಬೆರಗುಗೊಳಿಸಿದೆ; ಈಗ್ಗೆ ದಶಕಕ್ಕೆ ಹಿಂದೆ ‘ಅಭಿವೃದ್ಧಿಶೀಲ’ ಎಂಬ ಹಣೆಪಟ್ಟಿ ಧರಿಸಿದ್ದ ಭಾರತ ಈಗ ಜಗತ್ತಿನಲ್ಲೇ ಮುಂಚೂಣಿಯದೆನಿಸಿದೆ. ರಾಷ್ಟ್ರೀಯತೆಯನ್ನು ಪ್ರೇರಕವಾಗಿಯೂ ಎಲ್ಲ ವರ್ಗಗಳ ಏಳ್ಗೆಯನ್ನು ಆಧಾರಸೂತ್ರವಾಗಿಯೂ ದಕ್ಷ ಆಡಳಿತವನ್ನು ಚಾಲಕಶಕ್ತಿಯಾಗಿಯೂ ಇರಿಸಿಕೊಳ್ಳುವುದರ ಮೂಲಕ ಭಾರತ ಎತ್ತರದಿಂದ ಎತ್ತರಕ್ಕೆ ಏರುತ್ತಿರುವುದನ್ನು ಸ್ಪಷ್ಟವಾಗಿ ಕಾಣುತ್ತಿದ್ದೇವೆ. ಎಲ್ಲ ಅಭಿವೃದ್ಧಿಕಾರ್ಯಗಳೂ ಸತ್ತ್ವಪೂರ್ಣವಾಗಿಯೂ ನಿಗದಿತ ಕಾಲಮಿತಿಗೆ ಅನುಗುಣವಾಗಿಯೂ ನಡೆಯುತ್ತಿವೆ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಆಶೋತ್ತರಗಳನ್ನು ಸಾಕಾರಗೊಳಿಸುವ ದಿಶೆಯಲ್ಲಿ ಶ್ರಮಿಸಲು ಬೇಕಾದ ವಾತಾವರಣವನ್ನೂ ಪೂರಕ ಒಳಹಂದರವನ್ನೂ ನಿರ್ಮಿಸಿದ್ದಾಗಿದೆ. ಹೀಗೆ ಸ್ವಾತಂತ್ರ್ಯದ ನೂರನೆ ವರ್ಷದ ಎಂದರೆ ೨೦೪೭ರ ವೇಳೆಗೆ ನಮ್ಮನ್ನು ಅಭಿವೃದ್ಧಿ ಹೊಂದಿದ ಪ್ರಬುದ್ಧ ರಾಷ್ಟ್ರವನ್ನಾಗಿಸುವ ಪ್ರಯತ್ನವು ದಾರ್ಢ್ಯವಂತವಾಗುವ ನಿಶ್ಚಿತ ಭರವಸೆಯನ್ನು ಅನುಭವಗಮ್ಯವಾಗಿಸಿಕೊಂಡಿರುವ ನಮ್ಮ ಪೀಳಿಗೆ ಭಾಗ್ಯಶಾಲಿ.
ಇದು ಪರಿವರ್ತನಪರ್ವ
Month : March-2024 Episode : Author :