ಬಗೆಬಗೆಯ ತಂತ್ರಗಾರಿಕೆಗಳನ್ನು ಬಳಸಿ ರಾಜಕಾರಣಿಗಳು ನಾನು ಮೇಲು ತಾನು ಮೇಲು ಎಂದು ಸ್ಪರ್ಧೆ ನಡೆಸುತ್ತಿರುವ ಲಜ್ಜಾಸ್ಪದ ಸನ್ನಿವೇಶಕ್ಕೆ ವ್ಯತಿರಿಕ್ತವಾಗಿ ತಮ್ಮ ಯೋಗ್ಯತೆ-ಸಾಮರ್ಥ್ಯ-ಸಾಧನೆಗಳಿಂದಾಗಿಯೇ ದೇಶದ ಆಬಾಲವೃದ್ಧ ಸಮಸ್ತರಿಗೂ ಸಂಭ್ರಮಿಸುವ ಅವಕಾಶವನ್ನು ಕಲ್ಪಿಸುತ್ತಿರುವ ನಮ್ಮ ಕ್ರೀಡಾಕಲಿಗಳಿಗೆ ಉಘೇ ಉಘೇ ಹೇಳಲೇಬೇಕಾಗಿದೆ.
ಕಳೆದ ಏಪ್ರಿಲ್ ೨೧ರಂದು ಭಾರತದ ಡಿ. ಗುಕೇಶ್ ಚದುರಂಗದಲ್ಲಿ ವಿಶ್ವ ಮುಕುಟಕ್ಕೆ ಉಪಾಂತ್ಯದ್ದಾದ ಕ್ಯಾಂಡಿಡೇಟ್ ಪಂದ್ಯದಲ್ಲಿ ಜಾಗತಿಕ ಶ್ರೇಷ್ಠರ ಪಂಕ್ತಿಯಲ್ಲಿರುವ ಹಿಕರು ನಕಮುರಾ, ನೆಪೊಮ್ನಿಯಾಚಿ, ಫ್ಯಾಬಿಯಾನೊ – ಮೂವರನ್ನೂ ಹಿಂದಿಕ್ಕಿ ಸಮುನ್ನತಿಯನ್ನು ಸಾಧಿಸಿರುವುದು ಅತ್ಯಂತ ರೋಚಕವೂ ಉತ್ಸವಾರ್ಹವೂ ಆಗಿದೆ. ಕೇವಲ ೧೭ ವಯಸ್ಸಿನ ಗುಕೇಶ್ ವಿಶ್ವ-ಶ್ರೇಷ್ಠ ಕಿರೀಟ ಗಳಿಸಲು ಇನ್ನೊಂದು ಮೆಟ್ಟಲು ಮಾತ್ರ ಉಳಿದಿದೆ. ಆ ಗಳಿಕೆಗಾಗಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗುಕೇಶ್ ಚೀನಾದ ಡಿಂಗ್ ಲಿರೆನ್ ವಿರುದ್ಧ ಸೆಣಸಬೇಕಾಗುತ್ತದೆ. ಕ್ಯಾಂಡಿಡೇಟ್ ಟೂರ್ನಿಯಲ್ಲಿ ಗೆದ್ದ ಎರಡನೇ ಭಾರತೀಯ, ಈ ಟೂರ್ನಿ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಅನನ್ಯ ಪ್ರಶಸ್ತಿಯನ್ನಂತೂ ಗುಕೇಶ್ ಈಗಲೇ ಗೆದ್ದದ್ದು ಆಗಿದೆ. ಇಡೀ ದೇಶವೇ ಅವರ ಮೇಲೆ ಅಭಿನಂದನೆಯ ಮಳೆಗರೆಯುತ್ತಿದೆ.