ಪಾಕಿಸ್ತಾನ-ಸ್ಥಿತ ಮುಸ್ಲಿಮೇತರರು ಅಲ್ಲಿಯ ಬವಣೆಗಳಿಂದ ಪಾರಾಗಿ ಭಾರತಕ್ಕೆ ಬರಲು ಇಚ್ಛಿಸಿದಲ್ಲಿ ಅದಕ್ಕೆ ಅವಕಾಶ ಕಲ್ಪಿಸಬೇಕು – ಎಂಬ ಆಕಾಂಕ್ಷೆಯು ೧೯೪೭ರಲ್ಲಿ ಆಗಿನ ನಾಯಕರಿಂದ ವ್ಯಕ್ತವಾಗಿತ್ತಾದರೂ ಅದನ್ನು ಕಾರ್ಯಗತಗೊಳಿಸುವ ಮನೋದಾರ್ಢ್ಯದ ಕೊರತೆಯಿತ್ತು. ವರ್ಷಗಳುದ್ದಕ್ಕೂ ಅಲ್ಲಿಯ ಸ್ಥಾನೀಯ ಹಿಂದುಗಳ ಮತ್ತು ವಲಸೆಹೋದವರ ಸ್ಥಿತಿ ಹದಗೆಡುತ್ತಲೇ ಹೋಯಿತು. ಪರಿಣಾಮ ನಿರೀಕ್ಷಿತವೇ ಆಗಿತ್ತು: ೧೯೪೭-೨೦೨೨ರ ಅವಧಿಯಲ್ಲಿ ವಿಭಜನಾನಂತರ ಪಾಕಿಸ್ತಾನದಲ್ಲಿ ಮುಸ್ಲಿಮೇತರರ ಪ್ರಮಾಣ ಶೇ. ೨೩ರಿಂದ ಶೇ. ೩ಕ್ಕೆ ಇಳಿಯಿತೆಂಬುದಕ್ಕಿಂತ ವಾಸ್ತವಸ್ಥಿತಿಗೆ ಬೇರೆ ಕೈಗನ್ನಡಿ ಬೇಕಿಲ್ಲ. ಮತಾಂತರಾದಿ ಬಲಾತ್ಕಾರಗಳು, ದೈನಂದಿನ ಜೀವನದ ಸಂಕಷ್ಟಗಳು, ಅದರಲ್ಲೂ ವಿಶೇಷವಾಗಿ ಮಹಿಳೆಯರ ಶೋಷಣೆ, ದಲಿತರನ್ನು ಜೀತದಾಳುಗಳಾಗಿ ದುಡಿಸಿಕೊಳ್ಳುವುದು, ಬಲಾತ್ಕಾರದ ವಿವಾಹಗಳು, ವಯಸ್ಕ ಹೆಣ್ಣುಮಕ್ಕಳನ್ನು ಅಪರವಯಸ್ಕ ಮುಸ್ಲಿಮರಿಗೆ ಅಂಗಡಿಸರಕಿನಂತೆ ಮಾರಾಟ ಮಾಡುವುದು, ಹೇಗೋ ನಿಭಾವಣೆ ಮಾಡಿಕೊಂಡು ಭಾರತಕ್ಕೆ ವಲಸೆಬಂದವರೂ ನರಕಸದೃಶ ಶಿಬಿರಜೀವನ ನಡೆಸಬೇಕಾಗಿರುವುದು – ಈ ಎಲ್ಲ ಸಮಸ್ಯೆಗಳಿಗೆ ಸಮರ್ಪಕ ಪರಿಹಾರವೆಂದರೆ ನೆರೆದೇಶಗಳಲ್ಲಿರುವ ಭಾರತಮೂಲದವರಿಗೆ ಇಲ್ಲಿ ಪೌರತ್ವ ನೀಡುವುದೊಂದೇ – ಎಂದು ಮನಗಂಡ ಭಾರತದ ಆರೂಢ ಸರ್ಕಾರ ಪೌರತ್ವ ಕಾಯ್ದೆಗೆ ಅವಶ್ಯ ತಿದ್ದುಪಡಿ ತಂದು ಈಗ ಅದನ್ನು ಕಾರ್ಯಾನ್ವಿತಗೊಳಿಸಿರುವುದು ಸುತರಾಂ ಅಭಿವಂದನೀಯವಾಗಿದ್ದು ಇತಿಹಾಸಗತ ಪ್ರಮಾದವೊಂದರ ಪರಿಹಾರಕವಾಗಿದೆಯೆಂದು ಹೇಳಲೇಬೇಕು.
ಅಮಲಿಗೆ ಬಂದ ಸಿ.ಎ.ಎ.
Month : May-2024 Episode : Author : -ಎಸ್.ಆರ್.ಆರ್.