ಮತ-ಬೇಟೆಗಾಗಿ ಹೊಸಹೊಸ ತಂತ್ರಗಾರಿಕೆಗಳು, ಪದವಿಯ ಉಳಿಕೆ-ಗಳಿಕೆಗಾಗಿ ಸತತ ಸಂಧಾನಗಳು, ಅವಿಶ್ರಾಂತವಾದ ಆರೋಪ-ಪ್ರತ್ಯಾರೋಪಗಳು, ಅವಕಾಶವಿದ್ದಾಗ ಹೇಗೋ ಜೀರ್ಣಿಸಿಕೊಳ್ಳೋಣವೆಂಬ ಹುಂಬತನದಿಂದ ಮಾಡಿದ ಅಕ್ರಮಗಳೊಡನೆ ಜೂಟಾಟ – ಈ ದೈನಂದಿನಿಗಳ ನಡುವೆ ಹಿಂಬದಿಗೆ ಸರಿದಿರುವವು ನೈಜ ಆದ್ಯತೆಗಳು. ಯಾವ ಅಂಶದಲ್ಲಿ ಸ್ಥಿರತೆ ಇದ್ದಲ್ಲಿ ಮಾತ್ರ ಇತರ ಎಲ್ಲ ಸಾಹಸಗಳು ಸಾಧ್ಯವಾದಾವೋ ಆ ಅಂಶವೇ ನಿರ್ಲಕ್ಷö್ಯಕ್ಕೆ ಈಡಾದಲ್ಲಿ ನಾಗರಿಕ ಜೀವನವೆಂಬುದು ಕನಸಿನ ಮಾತಾಗುತ್ತದೆ. ನಗರಜೀವನ ಹೆಚ್ಚುಹೆಚ್ಚು ಆತಂಕಕಾರಿಯಾಗುತ್ತಿದೆ. ೨೦೧೦ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಗಿದ್ದ ಸ್ಫೋಟ, ೨೦೧೪ರಲ್ಲಿ ಚರ್ಚ್ ಸ್ಟ್ರೀಟ್ನಲ್ಲಿ ಆದ ಸ್ಫೋಟ – ಇವೆಲ್ಲ ಹಿಂದಿನ ವರ್ಷಗಳವಾದವು. ತೀರಾ ಈಚಿನ ದುರ್ಘಟನೆಗಳನ್ನು ಸ್ಮರಿಸುವುದಾದರೆ – ಕೆಲವು ತಿಂಗಳ ಹಿಂದೆ ಆದ ರಾಮೇಶ್ವರಂ ಕೆಫೆ ಸ್ಫೋಟ, ಇತ್ತೀಚೆಗಷ್ಟೆ ತಾಜ್ ವೆಸ್ಟೆಂಡ್ನಲ್ಲಿ ಆದ ಸ್ಫೋಟ, ಜಿಗಣಿಯಲ್ಲಿ ಉಲ್ಫಾ ಉಗ್ರರ ಪತ್ತೆ – ಹೀಗೆ ದಿನಬೆಳಗಾದರೆ ಬಯಲಾಗುತ್ತಿರುವ ಸುದ್ದಿಗಳನ್ನು ನೋಡುವಾಗ ಭದ್ರತೆಗೆ ಸಲ್ಲಬೇಕಾದಷ್ಟು ಪ್ರಾಮುಖ್ಯ ಸಲ್ಲುತ್ತಿಲ್ಲವೆಂಬ ಅನಿಸಿಕೆ ಜನತೆಯಲ್ಲಿ ಹರಡುತ್ತಿದೆ. ಅನುಕೂಲಕರ ವಾತಾವರಣದಿಂದಾಗಿ ಬೆಂಗಳೂರು ಉಗ್ರ ತಂಡಗಳ ಅಡಗುದಾಣವಾಗಿದೆಯೆಂಬ ಪ್ರಬಲ ಶಂಕೆ ಇದೆ. ಬಂಗ್ಲಾದೇಶ, ಮಯನ್ಮಾರ್ ಮೊದಲಾದೆಡೆಗಳಿಂದ ಬಂದ ವಲಸಿಗರಿಂದ ನಗರ ನಿಬಿಡವಾಗಿದೆ. ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಕಾರಣರಾದ ಉಗ್ರರು ಬಂಗಾಳಮೂಲದವರೆAದು ಖಚಿತಪಟ್ಟಿದೆ, ಅವರಿಗೆ ಬಂಗ್ಲಾದೇಶದ ಉಗ್ರಸಂಘಟನೆಗಳ ನಂಟು ಇರುವುದೂ ತಿಳಿದುಬಂದಿದೆ. ಬನ್ನೇರುಘಟ್ಟ ರಸ್ತೆಯ ಆಸುಪಾಸಿನಲ್ಲಿ ಉಗ್ರರಿಗಾಗಿ ಪೋಷಕಕೇಂದ್ರಗಳಿರುವುದು ವರದಿಯಾಗಿದೆ. ಅಕ್ಟೋಬರ್ ಮೊದಲ ವಾರದಷ್ಟು ಈಚೆಗೂ ಹಲವಾರು ಪಾಕಿಸ್ತಾನ ಮೂಲದವರು ಹಿಂದೂ ಹೆಸರುಗಳನ್ನು ತಳೆದು ಬೆಂಗಳೂರಿನಲ್ಲಿ ನೆಲೆಗೊಂಡಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ನಗರದಲ್ಲೇ ೪೦,೦೦೦ಕ್ಕೂ ಮಿಕ್ಕಿ ಅಕ್ರಮ ವಲಸಿಗರಿದ್ದಾರೆಂದು ಒಂದು ಅಂದಾಜು. ಭದ್ರತೆಯನ್ನು ಬಿಗಿಗೊಳಿಸುವುದರ ಮೊದಲ ಹೆಜ್ಜೆಯಾಗಿ ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಹೊರಗಟ್ಟಬೇಕಾಗಿದೆ. ಭದ್ರತೆಯನ್ನು ಅಲಕ್ಷಿಸಿದರೆ ತುಂಬಾ ದುಬಾರಿ ಬೆಲೆ ತೆರಬೇಕಾಗುತ್ತದೆ.
ಭದ್ರತೆಗೂ ಗಮನಸಲ್ಲಲಿ!
Month : November-2024 Episode : Author : - ಸಂಪಾದಕ