
ಕಳೆದ ಜೂನ್ ೨೯ರ ನಡುರಾತ್ರಿಯಿಂದ ಎಲ್ಲೆಡೆ ಉತ್ಸಾಹಪೂರ್ಣ ವಿಜಯೋತ್ಸವಾಚರಣೆಗೆ ನಿಮಿತ್ತವನ್ನೊದಗಿಸಿದೆ ವೆಸ್ಟ್ ಇಂಡೀಸ್‌ನಲ್ಲಿ ಟಿ-೨೦ ಸರಣಿಯಲ್ಲಿ ದಕ್ಷಿಣ ಆಫ್ರಿಕದ ವಿರುದ್ಧ ಭಾರತ ತಂಡ ಸಾಧಿಸಿದ ವಿಕ್ರಮ. ಕ್ರೀಡಾಭಿಮಾನಿಗಳಲ್ಲಿ ಚಿಮ್ಮಿದ ಈ ಸಂಭ್ರಮ ಸಹಜವೇ. ಏಕೆಂದರೆ ಈ ಹಿಂದೆ ಭಾರತಕ್ಕೆ ಈ ಭಾಗ್ಯ ಒಲಿದಿದ್ದುದು ಹದಿನೇಳು ವರ್ಷ ಹಿಂದೆ. ಹೀಗಾಗಿ ಭಾನುವಾರ ಜೂನ್ ೩೦ರಿಂದ ದೇಶದ ರಸ್ತೆ-ರಸ್ತೆಗಳಲ್ಲಿ ಸಿಹಿ-ಹಂಚಿಕೆ, ಪಟಾಕಿ ಸಿಡಿತ, ರಾಷ್ಟ್ರಧ್ವಜಾರೋಹಣ, ಬೈಕ್ ರ‍್ಯಾಲಿ ಮೊದಲಾದವು ನಿರಂತರ ನಡೆದವು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬಾರ್ಬಡೋಸ್ ಕ್ರೀಡಾಗಾರದ ಚಿಟಿಕೆ ಮಣ್ಣಿನ ಪ್ರಾಶನ ಮಾಡಿ ಸಂತಸವನ್ನು ಹಂಚಿಕೊಂಡರು. ಹಿಂದೆ ಒಂದೆರಡು ಹಿನ್ನಡೆಗಳಾದಾಗ ‘ನಮ್ಮ ತಂಡದ ಸ್ಟ್ರೈಕ್ ರೇಟ್ ಕಡಮೆ’, ‘ರೋಹಿತ್ ಶರ್ಮಾರ ನಾಯಕತ್ವ ಐ.ಪಿ.ಎಲ್. ಮಟ್ಟಕ್ಕಷ್ಟೆ ಸಾಕಾದಂತಿದೆ’ ಎಂದೆಲ್ಲ ಕೊಂಕು ತೆಗೆದಿದ್ದವರ ಬಾಯನ್ನು ಜೂನ್ ೨೯ರ ಸಾಧನೆ ಮುಚ್ಚಿಹಾಕಿದೆ. ‘ಕೋಚ್ ರಾಹುಲ್ ದ್ರಾವಿಡ್‌ರವರಲ್ಲಿ ಆಕ್ರಮಕತೆಯ ಕೊರತೆ ಇದೆ’ ಎಂದೆಲ್ಲ ಮೂದಲಿಸುತ್ತಿದ್ದವರ ಬಾಯನ್ನೂ ಈಗಿನ ವಿಕ್ರಮ ಅಣಗಿಸಿದೆ. ಮೊದಲೇ ಸೂಚನೆ ನೀಡಿದ್ದಂತೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಟಿ-೨೦ ಪಂದ್ಯಾವಳಿಯಿಂದ ವಿರಮಿಸುತ್ತಿದ್ದಾರೆ; ಆದರೆ ಏಕದಿನ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರಿದಾರು. ಮುಂಬರುವ ಶ್ರೀಲಂಕಾ (ಜುಲೈ ೨೭-ಆಗಸ್ಟ್ ೭), ತವರಿನಲ್ಲಿಯೆ ಬಾಂಗ್ಲಾದೇಶ ವಿರುದ್ಧ ಸರಣಿ (ಸೆಪ್ಟೆಂಬರ್ ೧೯-ಅಕ್ಟೋಬರ್ ೧೨), ತವರಿನಲ್ಲಿಯೆ ನ್ಯೂಜಿಲೆಂಡ್ ವಿರುದ್ಧ ಸರಣಿ (ಅಕ್ಟೋಬರ್ ೧೬-ನವೆಂಬರ್ ೫), ದಕ್ಷಿಣ ಆಫ್ರಿಕಾ ಪ್ರವಾಸದ ಪಂದ್ಯಸರಣಿ (ನವೆಂಬರ್ ೮-೧೬) – ಇದೇ ವರ್ಷದ ಮುಂದಿನ ದಿನಗಳ ಸರಣಿಗಳಿಗಾಗಿ ದೇಶ ಕುತೂಹಲದಿಂದ ಎದುರುನೋಡುತ್ತಿದೆ. ಈಗ ನಡೆದಿರುವವು ಕ್ರಿಕೆಟ್‌ನ ‘ಅಚ್ಛೇ ದಿನ್’.