೨೦೧೭ರ ಮೇ ತಿಂಗಳ ಮೊದಲ ವಾರದಲ್ಲಿ ಪ್ರದೀಪ್ ಆರ್ಯ ಅವರಿಗೆ ಸೈನ್ಯದಿಂದ ತುರ್ತು ಕರೆ ಬಂದಿತು. ಮುಂಬೈನ ಆದಾಯ ತೆರಿಗೆ ಕಚೇರಿಯಲ್ಲಿ ಕಡತಗಳ ಮಧ್ಯೆ ಕೆಲಸ ಮಾಡುತ್ತಿದ್ದ ಪ್ರದೀಪ್, ಕೂಡಲೇ ತಮ್ಮ ಮೇಲಧಿಕಾರಿಯ ಬಳಿ ಹೋಗಿ ರಜೆಗೆ ಅರ್ಜಿ ಹಾಕಿದರು. ಎಷ್ಟು ದಿನಕ್ಕೆ ವಾಪಸ್ ಬರುತ್ತೇನೆ ಎನ್ನುವುದೂ ತಿಳಿದಿಲ್ಲ, ಯಾವ ಕೆಲಸಕ್ಕೆ ತೆರಳುತ್ತಿದ್ದೇನೆ ಎನ್ನುವುದೂ ತಿಳಿದಿಲ್ಲ. ಪ್ಯಾರಾ ಸ್ಪೆಷಲ್ ಫೋರ್ಸಸ್ನ ಕಮಾಂಡಿಂಗ್ ಆಫೀಸರ್ ಅವರಿಂದ ಕರೆ ಬಂದಿತ್ತು. ಜಮ್ಮು-ಕಾಶ್ಮೀರದ ಊರಿ ಪ್ರದೇಶದಲ್ಲಿ ಎಲ್ಓಸಿ (LOC) ಸಮೀಪ ಕೆಲಸ ಮಾಡುತ್ತಿದ್ದ ಪಡೆ ಇದು. ಕೇವಲ ಎಂಟು ತಿಂಗಳ ಹಿಂದಷ್ಟೇ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ಹತ್ತೊಂಬತ್ತು ಸೈನಿಕರು ಹತರಾಗಿದ್ದು ಇಲ್ಲಿಯೇ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಘಟನೆ ಇದಾಗಿತ್ತು. ಇದಕ್ಕೆ ತಕ್ಕ ಉತ್ತರ ನೀಡಲೆಂದೇ ೨೦೧೬ರ ಸೆಪ್ಟೆಂಬರ್ ೨೯ರಂದು ಭಾರತ ಸರ್ಜಿಕಲ್ ಸ್ಟೆçöÊಕ್ ನಡೆಸಿ, ಗಡಿಯಾಚೆಯ ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ಉಡಾಯಿಸಿ, ಮೂವತ್ತಾರು ಭಯೋತ್ಪಾದಕರನ್ನು ಯಮಪುರಿಗಟ್ಟಿದ್ದು.
ಇವರೋರ್ವ ವಿಶೇಷ ವ್ಯಕ್ತಿ. ಆದಾಯ ತೆರಿಗೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಸೈನಿಕರಾಗಿ ಸಮವಸ್ತ್ರ ಧರಿಸಿ ಶೌರ್ಯವನ್ನೂ ಮೆರೆದವರು. ದಿನ ಬೆಳಗಾದರೆ ಹಣದ ಲೆಕ್ಕಾಚಾರ ನಡೆಸುವ ವ್ಯಕ್ತಿಗೆ ‘ಶೌರ್ಯಚಕ್ರ’ದಂತಹ ವಿಶೇಷ ಸಾಹಸವನ್ನು ಪ್ರದರ್ಶಿಸುವ ಸೈನಿಕರಿಗೆ ಮಾತ್ರ ದೊರಕುವ ಪ್ರಶಸ್ತಿ ಹೇಗೆ ದೊರೆಯಿತೆನ್ನುವುದು ಕುತೂಹಲದ ಸಂಗತಿ. ಅವರ ಕುರಿತು ಬರೆಯಲು ಬಹಳ ಹೆಮ್ಮೆ ಎನಿಸುತ್ತಿರುವುದಕ್ಕೆ ಇನ್ನೊಂದು ಕಾರಣವೂ ಇದೆ. ಅದೆಂದರೆ, ಅವರು ನಮ್ಮ ಕರ್ನಾಟಕದವರು, ಕನ್ನಡ ಕುವರ, ಬೆಂಗಳೂರಿನ ನಿವಾಸಿ. ಅವರ ಸಾಧನೆಗಳನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು ಅವರಿಗೆ ೨೦೧೮ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ಹಾಗೂ ೨೦೧೯ನೇ ಸಾಲಿನ ಕೆಂಪೇಗೌಡ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.
ಕ್ಯಾಪ್ಟನ್ ಪ್ರದೀಪ್ ಶೌರಿ ಆರ್ಯ ಅವರು ೨೦೦೪ನೇ ಸಾಲಿನ IRS ಅಧಿಕಾರಿಗಳ ತಂಡಕ್ಕೆ ಸೇರಿದವರು. ‘ಭಾರತೀಯ ಸೇನೆಯ ಸಮವಸ್ತ್ರ ಧರಿಸಬೇಕು, ಶತ್ರುಗಳೊಡನೆ ಹೋರಾಡಬೇಕು, ದೇಶದ ರಕ್ಷಣೆಗೆ ಹೆಗಲು ನೀಡಬೇಕು’ ಎನ್ನುವುದು ಅವರ ಬಹುದಿನಗಳ ಆಸೆಯಾಗಿತ್ತು. ಅದಕ್ಕಾಗಿ ಪ್ರಯತ್ನಪೂರ್ವಕವಾಗಿ ಭಾರತೀಯ ಸೇನೆಯ ಭಾಗವಾಗಿರುವ ‘ಪ್ರಾದೇಶಿಕ ಸೈನ್ಯ’ (Territorial Army) ಕ್ಕೆ ಸೇರಲು ಅವಶ್ಯವಿರುವ ಪ್ರವೇಶಪರೀಕ್ಷೆಯನ್ನು ಪೂರೈಸಿ, ತರಬೇತಿ ಪಡೆದು ತಮ್ಮ ಕನಸನ್ನು ನನಸಾಗಿಸಿಕೊಂಡ ಧೀಮಂತ ವ್ಯಕ್ತಿ. ಈ ಪ್ರಾದೇಶಿಕ ಸೈನ್ಯವು ಸ್ವ-ಇಚ್ಛೆಯಿಂದ ಕೆಲಸ ಮಾಡುವವರ ಸೈನಿಕೇತರ ಅಧಿಕಾರಿಗಳ ಸಂಸ್ಥೆ. ಸೈನ್ಯಕ್ಕೆ ಸಂಬಂಧವಿರದ, ಭಾರತಸರ್ಕಾರದ ಇತರ ಸೇವೆಗಳಲ್ಲಿರುವವರಿಗೆ ಸೇನೆಯ ಕೆಲಸದಲ್ಲಿ ಸಹಕಾರ ನೀಡಲು ನಿರ್ಮಿಸಿರುವ ಸಂಸ್ಥೆಯಿದು. ಇವರು ವರ್ಷದಲ್ಲಿ ಎರಡು ತಿಂಗಳುಗಳ ಕಾಲ ಸೇನೆಯಲ್ಲಿ ಕೆಲಸ ಮಾಡಬೇಕು. ಉಳಿದ ಸಮಯ ತಂತಮ್ಮ ವೃತ್ತಿಗಳಲ್ಲಿ ತೊಡಗಿಕೊಳ್ಳಬಹುದು.
ಪ್ರದೀಪ್ ಆರ್ಯ ಅವರು ತಾವು ವೃತ್ತಿಯಲ್ಲಿದ್ದ ಆದಾಯ ತೆರಿಗೆ ಇಲಾಖೆಯಿಂದ ಪೂರ್ವ-ಅನುಮತಿ ಪಡೆದುಕೊಂಡು ೨೦೦೮ರಲ್ಲಿ ಪ್ರಾದೇಶಿಕ ಸೈನ್ಯದ ಪ್ರವೇಶಪರೀಕ್ಷೆಯನ್ನು ಬರೆದರು. ಪ್ರವೇಶಪರೀಕ್ಷೆಯಲ್ಲಿ ತೇರ್ಗಡೆಗೊಂಡ ಪ್ರದೀಪ್ ಅವರು ೧೦೬ ಇನ್ಫಂಟ್ರಿ (ಪ್ಯಾರಾ) ಬೆಟಾಲಿಯನ್ ಆರ್ಮಿಗೆ ಸೇರ್ಪಡೆಗೊಂಡರು. ಇವರ ಪಡೆಯ ಹೆಸರು ‘ಬೆಂಗಳೂರು ಟರ್ರಿಯರ್ಸ್’. ಇದಾದ ನಂತರ ಪೂಂಚ್-ರಾಜೌರಿಯಲ್ಲಿ ಮೊದಲ ಹಂತದ ತರಬೇತಿ ಪಡೆದು, ಮಹಾರಾಷ್ಟ್ರದ ದೇವಲಾಲಿಯಲ್ಲಿ ಸೈನ್ಯ ಸೇರ್ಪಡೆಗೆ ಪೂರ್ವಭಾವಿಯಾಗಿ ಅವಶ್ಯವಿರುವ ಪ್ರಶಿಕ್ಷಣವನ್ನು (Pre-commission Training) ಪೂರೈಸಿ, ಅಂತಿಮವಾಗಿ ಡೆಹ್ರಾಡೂನಿನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ Post-commission Training ಮುಗಿಸಿದರು. ಈ ಸಮಯದಲ್ಲಿ “Best officer in the overall order of merit” ಪಡೆದ ಹೆಗ್ಗಳಿಕೆ ಅವರದು.
ತಮ್ಮ ಮೂಲಕ್ಷೇತ್ರಗಳ ಜವಾಬ್ದಾರಿಗಳನ್ನು ಪೂರೈಸಬೇಕಿರುವ ಈ ಅಧಿಕಾರಿಗಳು, ಸೈನ್ಯದ ತರಬೇತಿಯನ್ನು ಅನೇಕ ಕಂತುಗಳಲ್ಲಿ ಮಾಡಬೇಕಾಗುತ್ತದೆ. ಅದು ಮುಗಿಯಲು ಹಲವು ವರ್ಷಗಳೇ ಹಿಡಿಯುತ್ತವೆ. ಪ್ರದೀಪ್ ಅವರು ೨೦೧೩ರ ಹೊತ್ತಿಗೆ ತಮ್ಮ ಸೈನಿಕ ತರಬೇತಿ ಪೂರ್ಣಗೊಳಿಸಿದರು. ಏತನ್ಮಧ್ಯೆ ಅವರು ಕರ್ನಾಟಕ ಮತ್ತು ನಾಗಾಲ್ಯಾಂಡ್ಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಜವಾಬ್ದಾರಿಗಳನ್ನು ನಿರ್ವಹಿಸಿದರು. ೨೦೧೩ರಲ್ಲಿ ಅವರಿಗೆ ಅತ್ಯುತ್ತಮವಾಗಿ ಚುನಾವಣೆ ನಿರ್ವಹಿಸಿದ್ದಕ್ಕಾಗಿ ರಾಷ್ಟ್ರಪತಿಗಳ ಪದಕವನ್ನು ನೀಡಲಾಯಿತು.
ಸೈನಿಕ ತರಬೇತಿ ಮುಗಿದ ನಂತರ, ಅವರು ಪ್ರತಿ ವರ್ಷವೂ ಎರಡು ತಿಂಗಳು ಸೈನ್ಯದ ಕೆಲಸಕ್ಕೆ ಹಾಜರಾಗಬೇಕು. ಮತ್ತು ಸೈನ್ಯದ ಕರೆ ಬಂದಾಗ ಸೇರಿಕೊಳ್ಳಬೇಕು. ಪ್ರದೀಪ್ ಅವರು ವಿಮಾನದ ಪೈಲಟ್ ಪರವಾನಗಿಯನ್ನೂ ಹೊಂದಿದ್ದಾರೆ. ಅವರು ಸೋಷಿಯಾಲಜಿ, ಉದ್ಯಮ ನಿರ್ವಹಣೆ, ಕಾನೂನು ಹಾಗೂ ತೆರಿಗೆಯ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ‘ಮತದಾನ ವರ್ತನೆ’ ವಿಷಯದಲ್ಲಿ ಡಾಕ್ಟೊರೇಟ್ ಗಳಿಸಿದ್ದಾರೆ. ಆದಾಯ ತೆರಿಗೆ ಅಧಿಕಾರಿಯಾಗಿರುವ ಅವರಿಗೆ ಆ ವಿಷಯದಲ್ಲಿದ್ದ ತಜ್ಞತೆಯ ಲಾಭವನ್ನು ಪಡೆಯಲು ಹಣದ ಅವ್ಯವಹಾರ ಹಾಗೂ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಪೂರೈಕೆಯ ಮಾರ್ಗಗಳು (Money laundering and terror funding)ಎನ್ನುವ ವಿಷಯವನ್ನು ಅಧ್ಯಯನ ಮಾಡಲು ಸೈನ್ಯದ ಹಿರಿಯ ಅಧಿಕಾರಿಗಳು ಸೂಚಿಸಿದರು. ಪ್ರದೀಪ್ ಅವರು ಈ ಕುರಿತು ಕ್ಷೇತ್ರದಲ್ಲಿ ಪ್ರತ್ಯಕ್ಷ ಅಧ್ಯಯನ ನಡೆಸಿ ವರದಿಯನ್ನು ಮಂಡಿಸಿ, ಸೈನ್ಯದ ಮಹಾದಂಡನಾಯಕರಿAದ ಪ್ರಶಂಸೆಗೆ (Special forces probation) (COF) – ೨೦೧೬) ಭಾಜನರಾದರು. ಕೋವಿಡ್ ಪಿಡುಗು ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಸಮಯದಲ್ಲಿ ಬೆಂಗಳೂರಿಗೆ ಬಂದಿದ್ದ ಪ್ರದೀಪ್ ಅವರು, ತಮ್ಮ ಅನುಭವ ಹಾಗೂ ಪ್ರಭಾವವನ್ನು ಬಳಸಿಕೊಂಡು, ಸ್ವಯಂಸೇವಕರ ಪಡೆಯನ್ನು ನಿರ್ಮಿಸಿ ರೋಗಿಗಳ ಸೇವೆ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದರು.
ಪ್ರಾದೇಶಿಕ ಸೈನ್ಯವು ಯಾವುದೇ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳುವ, ಉಗ್ರರನ್ನು ಬೇಟೆಯಾಡುವ ಸೈನ್ಯವಲ್ಲ. ಭಾರತೀಯ ಸೈನ್ಯದ ಸೈನಿಕರ ವಾಡಿಕೆಯ ಕೆಲಸಗಳನ್ನು ನಿರ್ವಹಿಸುವ ಮೂಲಕ, ಸೈನಿಕರ ಕೆಲಸಗಳನ್ನು ಸ್ವಲ್ಪಮಟ್ಟಿಗೆ ಹಗುರಗೊಳಿಸುವ ಉದ್ದೇಶ ಹೊಂದಿರುವ ಪಡೆ. ಆದರೆ, ಪ್ರದೀಪ್ ಆರ್ಯ ಅವರಿಗೆ ಬಂದೂಕನ್ನು ಹಿಡಿದು ಹೋರಾಡಬೇಕು, ಪ್ರತ್ಯಕ್ಷ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳಬೇಕೆನ್ನುವ ಹುಮ್ಮಸ್ಸು. ಅದಕ್ಕಾಗಿ ಮೇಲಧಿಕಾರಿಗಳ ಅನುಮತಿ ಪಡೆದು, ಅದಕ್ಕೆ ಅವಶ್ಯವಾದ ತರಬೇತಿ (Special forces probation) ಪೂರೈಸಿ, ವಿಶೇಷ ದಳದ ಉಗ್ರ ಕಾರ್ಯಾಚರಣೆಗೆ ಸಿದ್ಧರಾದರು. ಈ ತರಬೇತಿಯನ್ನು ತೆಗೆದುಕೊಂಡವರೆಲ್ಲ ಅದನ್ನು ಪೂರೈಸಲಾಗುವುದಿಲ್ಲ. ಏಕೆಂದರೆ, ಅದು ಅತ್ಯಂತ ಕಠಿಣ ತರಬೇತಿ. ತಮ್ಮ ಛಲದಿಂದ ಈ ಪರಿಶ್ರಮದ ತರಬೇತಿಯನ್ನೂ ಪೂರೈಸಿ, ವಿಶೇಷ ದಳದ ಕಾರ್ಯಕ್ಕೆ ಪ್ರದೀಪ್ ಆಯ್ಕೆಗೊಂಡರು. ಈ ಆಧಾರದ ಮೇಲೆಯೇ ಅವರಿಗೆ ಉಗ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಕರೆ ಬಂದದ್ದು.
೨೦೧೭ರ ಮೇ ತಿಂಗಳ ಮೊದಲ ವಾರದಲ್ಲಿ ಪ್ರದೀಪ್ ಆರ್ಯ ಅವರಿಗೆ ಸೈನ್ಯದಿಂದ ತುರ್ತು ಕರೆ ಬಂದಿತು. ಮುಂಬೈನ ಆದಾಯ ತೆರಿಗೆ ಕಚೇರಿಯಲ್ಲಿ ಕಡತಗಳ ಮಧ್ಯೆ ಕೆಲಸ ಮಾಡುತ್ತಿದ್ದ ಪ್ರದೀಪ್, ಕೂಡಲೇ ತಮ್ಮ ಮೇಲಧಿಕಾರಿಯ ಬಳಿ ಹೋಗಿ ರಜೆಗೆ ಅರ್ಜಿ ಹಾಕಿದರು. ‘ಎಷ್ಟು ದಿನಕ್ಕೆ ವಾಪಸ್ ಬರುತ್ತೇನೆ ಎನ್ನುವುದೂ ತಿಳಿದಿಲ್ಲ, ಯಾವ ಕೆಲಸಕ್ಕೆ ತೆರಳುತ್ತಿದ್ದೇನೆ ಎನ್ನುವುದೂ ತಿಳಿದಿಲ್ಲ. ಪ್ಯಾರಾ ಸ್ಪೆಷಲ್ ಫೋರ್ಸಸ್ನ ಕಮಾಂಡಿಂಗ್ ಆಫೀಸರ್ ಅವರಿಂದ ಕರೆ ಬಂದಿದೆ’ – ಎಂದರು. ಜಮ್ಮು-ಕಾಶ್ಮೀರದ ಊರಿ ಪ್ರದೇಶದಲ್ಲಿ ಎಲ್ಓಸಿ ಸಮೀಪ ಕೆಲಸ ಮಾಡುತ್ತಿದ್ದ ಪಡೆ ಇದು. ಕೇವಲ ಎಂಟು ತಿಂಗಳ ಹಿಂದಷ್ಟೇ ನಡೆದಿದ್ದ ಭಯೋತ್ಪಾದಕ ದಾಳಿಯಲ್ಲಿ ಹತ್ತೊಂಬತ್ತು ಸೈನಿಕರು ಹತರಾಗಿದ್ದುದು ಇಲ್ಲಿಯೇ. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಘಟನೆ ಇದಾಗಿತ್ತು. ಇದಕ್ಕೆ ತಕ್ಕ ಉತ್ತರ ನೀಡಲೆಂದೇ ೨೦೧೬ರ ಸೆಪ್ಟೆಂಬರ್ ೨೯ರಂದು ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ, ಗಡಿಯಾಚೆಯ ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ಉಡಾಯಿಸಿ, ಮೂವತ್ತಾರು ಭಯೋತ್ಪಾದಕರನ್ನು ಯಮಪುರಿಗಟ್ಟಿದ್ದು.
ತಕ್ಷಣವೇ ಬರಬೇಕೆಂದು ತಿಳಿಸಲಾಗಿತ್ತೇ ಹೊರತು, ಯಾವ ಕಾರ್ಯಕ್ಕಾಗಿ ಎನ್ನುವುದನ್ನು ತಿಳಿಸಿರಲಿಲ್ಲ. ಮುಂಬೈನಿಂದ ದೆಹಲಿಗೆ ವಿಮಾನಯಾನ ಮತ್ತು ಅಲ್ಲಿಂದ ಶ್ರೀನಗರಕ್ಕೆ ಮತ್ತೊಂದು ವಿಮಾನದಲ್ಲಿ ಪ್ರಯಾಣ, ಅಲ್ಲಿಂದ ಸೇನಾ ಜೀಪ್ನಲ್ಲಿ ‘ಊರಿ’ಗೆ ಪ್ರಯಾಣ.
ಊರಿ ತಲಪುವ ವೇಳೆಗೆ ಸೂರ್ಯಾಸ್ತವಾಗಿ ಕತ್ತಲು ಕವಿದಿತ್ತು, ಯಾವುದೇ ಸದ್ದುಗದ್ದಲವಿಲ್ಲದೆ ವಾತಾವರಣ ನಿಶ್ಯಬ್ದವಾಗಿತ್ತು. ‘‘ಯಾಕಿಷ್ಟು ತಡವಾಯಿತು? ಕಮಾಂಡಿಂಗ್ ಆಫೀಸರ್ ಉಧಾಮ್ಪುರದಿಂದ ಬರುತ್ತಿದ್ದಾರೆ, ಇನ್ನು ಸ್ವಲ್ಪ ಸಮಯದಲ್ಲಿ ಇಲ್ಲಿರುತ್ತಾರೆ” ಎಂದು ತಿಳಿಸಲಾಯಿತು. ತನ್ನನ್ನು ಏತಕ್ಕಾಗಿ ತುರ್ತಾಗಿ ಕರೆಸಲಾಯಿತು ಎಂಬುದನ್ನು ತಿಳಿಯಲು ಪ್ರದೀಪ್ ಕಾತರಿಸುತ್ತಿದ್ದರು. ಮೇಲಧಿಕಾರಿ ಬರುವವರೆಗೆ ತಡೆದುಕೊಳ್ಳದೆ ಅನ್ಯಮಾರ್ಗವಿಲ್ಲ. ಅವರಿಗಾಗಿ ಹೆಚ್ಚು ಹೊತ್ತು ಕಾಯಬೇಕಾಗಲಿಲ್ಲ. ಕೆಲ ನಿಮಿಷಗಳಲ್ಲೇ ಆರು ಅಡಿ ಎತ್ತರದ ಆಜಾನುಬಾಹು ವ್ಯಕ್ತಿತ್ವದ ಕಮಾಂಡಿಂಗ್ ಆಫೀಸರ್ ಬಂದು ಎಲ್ಲರನ್ನೂ ಭೇಟಿಯಾದರು. ಹಿಂದೆ ನಡೆದಿದ್ದ ಸರ್ಜಿಕಲ್ ಸ್ಟೆçöÊಕ್ನಲ್ಲಿ ಭಾಗಿಯಾಗಿ ಮೆಡಲ್ ಗಳಿಸಿದ್ದ ಈ ಅಧಿಕಾರಿಯನ್ನು ಕಂಡರೆ ಎಲ್ಲರಿಗೂ ಅಪಾರ ಗೌರವ. ಅವರು ಬಂದ ಸ್ವಲ್ಪ ಹೊತ್ತಿನಲ್ಲೇ ಎಲ್ಲರೂ ಸೇರಲು ತಿಳಿಸಿ, ಮುಂದಿರುವ ಕಾರ್ಯವನ್ನು ವಿವರಿಸಿದರು.
ಗಡಿಯಾಚೆಯಿಂದ ಎಲ್ಓಸಿಯನ್ನು ದಾಟಿ ಭಾರತದೊಳಕ್ಕೆ ನುಸುಳಲು ಉಗ್ರರು ಹೊಂಚು ಹಾಕುತ್ತಿರುವ ಗುಪ್ತಚರ ಮಾಹಿತಿ ಸಿಕ್ಕಿತ್ತು. ಒಳನುಗ್ಗಲಿರುವ ಉಗ್ರರು ಕಮಾಂಡೋಗಳಂತೆ ತರಬೇತಿ ಪಡೆದವರಾಗಿದ್ದು, ಬಹಳ ದೊಡ್ಡ ಪ್ರಮಾಣದ ಅನಾಹುತ ಮಾಡಲು ಸಿದ್ಧರಾಗಿದ್ದರು. ಹೀಗಾಗಿ ಅವರನ್ನು ತಡೆಯುವ ಕೆಲಸ ಆಗಬೇಕಿತ್ತು. ಅದಕ್ಕಾಗಿ ಎಲ್ಲರನ್ನೂ ಕರೆಸಲಾಗಿತ್ತು. ಉಗ್ರರು ಕೆಲವೇ ದಿನಗಳಲ್ಲಿ ಬರಬಹುದು ಅಥವಾ ಕೆಲವು ವಾರಗಳೇ ಕಾಯಬೇಕಾಗಬಹುದು ಮತ್ತು ಅವರು ಯಾವ ಸ್ಥಳದಿಂದ ನುಸುಳುತ್ತಾರೆ ಎನ್ನುವುದು ಖಚಿತವಾಗಿ ತಿಳಿದಿಲ್ಲ. ಇದೆಲ್ಲ ಮಾಹಿತಿಗಳನ್ನೂ ಸಂಗ್ರಹಿಸುವ ಕೆಲಸವನ್ನು ಪ್ರದೀಪ್ ಅವರಿಗೆ ನೀಡಲಾಯಿತು.
ಇದೆಲ್ಲವೂ ಬಾಯಿಯಲ್ಲಿ ವಿವರಿಸುವುದು ಸುಲಭ. ಪ್ರತ್ಯಕ್ಷ ಕಾರ್ಯರೂಪದಲ್ಲಿ ಇಳಿಸುವುದು ಹೇಳಿದಷ್ಟು ಸರಳವಲ್ಲ. ಉಗ್ರರು ತಮ್ಮ ಜಾಲವನ್ನು ಹರಡಿರುತ್ತಾರೆ. ಉಗ್ರವಿರೋಧಿ ದಳ ಕಟ್ಟೆಚ್ಚರದಲ್ಲಿರುವುದು ಅವರಿಗೆ ತಿಳಿದಿರುತ್ತದೆ. ಹೀಗಾಗಿ ಅವರು ತಮ್ಮ ಯೋಜನೆಯನ್ನು ಕಡೆಯ ಕ್ಷಣದವರೆಗೂ ಬದಲಿಸುತ್ತಲೇ ಇರುತ್ತಾರೆ. ಅವರು ಒಳನುಸುಳುವವರೆಗೂ ಯಾವಾಗ ಹಾಗೂ ಎಲ್ಲಿಂದ ನುಸುಳುತ್ತಾರೆ ಎನ್ನುವುದನ್ನು ಖಚಿತವಾಗಿ ತಿಳಿಸುವುದು ಬಹಳವೇ ಕಷ್ಟ, ಅವರು ಒಳನುಸುಳಿದ ನಂತರವೇ ಖಚಿತ. ಕೆಲವೊಮ್ಮೆಯಂತೂ ಅವರು ಇದ್ದಕ್ಕಿದ್ದಂತೆ ನುಗ್ಗಿ ಸೈನಿಕರ ಮೇಲೆಯೆ ದಾಳಿ ಎಸಗಿದ ಉದಾಹರಣೆಗಳೂ ಇವೆ. ಒಟ್ಟಿನಲ್ಲಿ ಇದು ಜೀವನ್ಮರಣದ ಕಾರ್ಯವೆನ್ನುವುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ.
ಹಿಂದಿನ ದಿನವಷ್ಟೇ ಮುಂಬೈನ ವಾತಾನುಕೂಲದ ಕೊಠಡಿಯಲ್ಲಿ ಐಷಾರಾಮಿ ಜೀವನದ ಮಧ್ಯದಲ್ಲಿದ್ದ ಪ್ರದೀಪ್ ಅವರು, ಇದೀಗ ಎಲ್ಓಸಿ ಸಮೀಪದ ಊರಿಯಲ್ಲಿರುವ ಪ್ಯಾರಾ ವಿಶೇಷದಳದ ಬ್ಯಾರಕ್ನಲ್ಲಿದ್ದಾರೆ. ವಿಶೇಷದಳದ ಬ್ಯಾರಕ್ ಎಂದು ಹೆಸರಾದರೂ, ಅದರಲ್ಲಿ ಹೆಚ್ಚಿನ ವಿಶೇಷವೇನೂ ಇರಲಿಲ್ಲ. ಇತರ ಸೈನಿಕರ ಬ್ಯಾರಕ್ನಂತೆಯೇ ಇದ್ದಿತು. ಪ್ರದೀಪ್ ಅವರು ಇನ್ನಿಬ್ಬರು ಸೈನಿಕರೊಡನೆ ತಮ್ಮ ಬ್ಯಾರಕ್ನ್ನು ಹಂಚಿಕೊಳ್ಳಬೇಕಿತ್ತು. ಬ್ಯಾರಕ್ ವ್ಯವಸ್ಥೆಯಲ್ಲಿ ಯಾವುದೇ ವಿಶೇಷವಿರದಿದ್ದರೂ, ಅದರಲ್ಲಿದ್ದ ಸೈನಿಕರು ವಿಶೇಷವಾಗಿದ್ದರು, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳು ವಿಶೇಷವಾಗಿದ್ದವು, ಅವರು ಮಾಡಲಿದ್ದ ಕಾರ್ಯ ವಿಶೇಷವಾಗಿತ್ತು. ಹಿಂದಿನ ದಿನ ಕೈಯಲ್ಲಿ ಪೆನ್ನು ಹಿಡಿದು, ಕಂಪ್ಯೂಟರ್ ಮುಂದೆ ಕುಳಿತು ಲೆಕ್ಕಪತ್ರದ ಕೆಲಸದಲ್ಲಿ ತೊಡಗಿದ್ದ ಈ ವ್ಯಕ್ತಿ, ಇಂದು ಗನ್ ಹಿಡಿದು ಉಗ್ರರನ್ನು ಬೇಟೆಯಾಡುವ ಕೆಲಸದಲ್ಲಿ ತೊಡಗಿದ್ದಾರೆ. ಅದು ವಿಶೇಷವಾಗಿತ್ತು. ಕ್ಯಾಪ್ಟನ್ ಪ್ರದೀಪ್ ಅವರ ಕುರಿತು ಅಲ್ಲಿದ್ದ ಎಲ್ಲರಿಗೂ ತಿಳಿದಿತ್ತು. ಹೀಗಾಗಿ ಇವರನ್ನು ಕಂಡರೆ ಜೊತೆಯವರಿಗೆಲ್ಲ ಏನೋ ಒಂದು ರೀತಿಯ ಗೌರವ. ಅಂದು ರಾತ್ರಿ ಪ್ರದೀಪ್ ಅವರಿಗೆ ಅರ್ಧಂಬರ್ಧ ನಿದ್ರೆ. ಮುಂದಿನ ಯೋಜನೆಗಳೇ ತಲೆಯಲ್ಲಿ ತಿರುಗುತ್ತಿತ್ತು, ಮಾರನೆಯ ದಿನ ಮಾಡಬೇಕಾದ ಕೆಲಸವನ್ನೇ ಯೋಚಿಸುತ್ತಿತ್ತು.
ಗುಪ್ತಚರ ಜಾಲವನ್ನು ನಿರ್ಮಿಸುವುದು ಅತ್ಯಂತ ಪ್ರಮುಖ ಕೆಲಸವಾಗಿತ್ತು. ಗಡಿಯ ಎರಡು ಬದಿಯಲ್ಲಿಯೂ ಗುಪ್ತಚರರನ್ನು ಇಟ್ಟಿರಬೇಕು. ಜೊತೆಗೆ ಅಲ್ಲಿ ಕೆಲಸ ಮಾಡುತ್ತಿದ್ದ ಇತರ ಸೈನಿಕ ಗುಂಪುಗಳನ್ನು ಸಂಪರ್ಕಿಸಿ, ಎಲ್ಲರೂ ಒಂದು ಸೂತ್ರದಲ್ಲಿ ಕೆಲಸ ಮಾಡುವಂತೆ ಮಾಡುವುದೂ ಅತ್ಯಂತ ಆವಶ್ಯಕವಾಗಿತ್ತು. ಇದಕ್ಕಾಗಿ ಸೂಕ್ತ ಸಂಪರ್ಕವ್ಯವಸ್ಥೆಯನ್ನು ಕಲ್ಪಿಸಬೇಕಾಗಿತ್ತು. ಮುಂದಿನ ಮೂರು ವಾರಗಳ ಕಾಲ ಕ್ಯಾಪ್ಟನ್ ಪ್ರದೀಪ್ ತಯಾರಿ ನಡೆಸಿ ಕಾರ್ಯಾರಂಭ ಮಾಡಿದರು. ಒಳನುಗ್ಗುತ್ತಿರುವುದು ಸಾಮಾನ್ಯ ಉಗ್ರರಲ್ಲ, ಅವರಿಗೆ ಪಾಕಿಸ್ತಾನಿ ಸೈನ್ಯದ ಬೆಂಬಲವಿರುತ್ತದೆ ಎನ್ನುವುದು ಪ್ರದೀಪ್ ಅವರಿಗೆ ಚೆನ್ನಾಗಿ ತಿಳಿದಿತ್ತು. ಹೀಗಾಗಿ ಉಗ್ರರು ತಮ್ಮಂತೆಯೇ ತಯಾರಿ ನಡೆಸಿರುತ್ತಾರೆ, ತಾವು ಗಮನಿಸದ ಸ್ಥಳದಿಂದ ಮತ್ತು ಎಚ್ಚರ ತಪ್ಪಿರುವ ಸಮಯದಲ್ಲಿ ಒಳನುಸುಳುತ್ತಾರೆ ಎನ್ನುವುದೂ ಕ್ಯಾಪ್ಟನ್ ಪ್ರದೀಪ್ ಅವರಿಗೆ ತಿಳಿದಿತ್ತು. ಇದೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡೇ ಅವರು ತಮ್ಮ ಜಾಲವನ್ನು ನಿರ್ಮಿಸಿದ್ದರು.
ಉಗ್ರರು ಇಂದು ನುಸುಳುವರು, ನಾಳೆ ನುಸುಳುವರು, ಇಂತಹ ಪ್ರದೇಶದಿಂದ ನುಸುಳುವರು ಇತ್ಯಾದಿ ಮಾಹಿತಿಗಳು ನಿತ್ಯವೂ ಬರುತ್ತಲೇ ಇದ್ದವು. ಆದರೆ, ಇವೆಲ್ಲವೂ ಹುಸಿಯಾಗಿದ್ದಿತು. ಮೇ ೧೦ರಂದು ಬಂದ ಮಾಹಿತಿ ಮಾತ್ರ ಹುಸಿಯಾಗಲಿಲ್ಲ. ಮೇ ತಿಂಗಳ ಕಡೆಯ ವಾರದಲ್ಲಿ ಉಗ್ರರು ‘ಕೆಡಿಕೆ ನಾಲಾ’ ಎನ್ನುವ ಸ್ಥಳದಲ್ಲಿ ನುಸುಳುವ ಯೋಜನೆ ಮಾಡಿರುವ ಖಚಿತ ಮಾಹಿತಿ ತಲಪಿತ್ತು. ಉಗ್ರರನ್ನು ಎದುರುಗೊಳ್ಳಲು ಪ್ರದೀಪ್ ತಮ್ಮ ತಂಡವನ್ನು ತಯಾರು ಮಾಡಿದರು. ಆರು ಸೈನಿಕರ ಮೂರು ತಂಡಗಳು ಸಿದ್ಧವಾದವು. ಜೊತೆಗೆ ಇನ್ನೆರಡು ತಂಡಗಳು ಇವರಿಗೆ ಬೆಂಬಲವಾಗಿ ಹಿಂದೆಯೇ ಇರುವುದು. ಮೇ ೨೨ರಂದು ಪ್ರದೀಪ್ ಅವರ ತಂಡ ‘ಕೆಡಿಕೆ ನಾಲಾ’ ತಲಪಿ ತನ್ನ ಜಾಲವನ್ನು ನೆಲೆಗೊಳಿಸಿತು. ಮುಂದಿನ ನಾಲ್ಕು ದಿನಗಳ ಕಾಲ ಉಗ್ರರಿಗಾಗಿ ಕಾಯುವ ಕೆಲಸ ಮಾಡಿದರು. ಕಾಯುವುದೆಂದರೆ ಒಂದು ಸ್ಥಳದಲ್ಲಿ ಕುಳಿತು ಕಾಯುವುದಲ್ಲ. ಆ ಪ್ರದೇಶದಲ್ಲೆಲ್ಲ್ಲ ಎಚ್ಚರಿಕೆಯಿಂದ ಮತ್ತು ರಹಸ್ಯವಾಗಿ ಸುತ್ತಾಡುತ್ತ ಕಟ್ಟೆಚ್ಚರದಲ್ಲಿರುವುದು.
ಉಗ್ರರು ಯಾವ ಕ್ಷಣದಲ್ಲಾದರೂ ನುಸುಳಬಹುದು ಮತ್ತು ನಾಲಾದ ಯಾವ ಭಾಗದಿಂದಾದರೂ ನುಸುಳಬಹುದು. ಹೀಗಾಗಿ, ಇಡೀ ಪ್ರದೇಶವನ್ನು ಗಮನಿಸುತ್ತಿರಬೇಕು. ಈ ರೀತಿಯ ಕಾರ್ಯಾಚರಣೆಯಲ್ಲಿ ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕು. ಶತ್ರುವು ನೆಲಬಾಂಬನ್ನು ಹೂತಿರುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಒಂದು ತಂಡ ಈ ರೀತಿಯ ನೆಲಬಾಂಬನ್ನು ಗುರುತಿಸಿ ನಿಷ್ಕ್ರಿಯಗೊಳಿಸುವ ಕೆಲಸವನ್ನೇ ಮಾಡುತ್ತದೆ. ಜೊತೆಗೆ ನಮ್ಮ ಸೈನಿಕರೂ ನೆಲಬಾಂಬನ್ನು ಹುದುಗಿಸುತ್ತಾರೆ. ಉಗ್ರರು ಅದರ ಮೇಲೆ ಕಾಲಿಟ್ಟಾಗ ಅದು ಸ್ಫೋಟಗೊಂಡು ಉಗ್ರರು ನಾಶವಾಗುತ್ತಾರೆ. ಮೇ ೨೬ರ ತಡರಾತ್ರಿಯಲ್ಲಿ ಕ್ಯಾಪ್ಟನ್ ಪ್ರದೀಪ್ ಅವರಿಗೆ ದೂರವಾಣಿ ಕರೆಯೊಂದು ಬಂದಿತು. ಅವರು ಕಳೆದೆರಡು ವರ್ಷಗಳಿಂದ ತರಬೇತುಗೊಳಿಸಿ ತಮ್ಮ ಆಪ್ತರನ್ನಾಗಿ ಮಾಡಿಕೊಂಡಿದ್ದ ಗುಪ್ತಚರನ ಕರೆ ಅದು. ಉಗ್ರರು ಮೇ ೨೮ ಅಥವಾ ಮೇ ೨೯ರ ರಾತ್ರಿ ಚಾಬುಕ್ ಎನ್ನುವ ಸ್ಥಳದಿಂದ ಒಳನುಸುಳುತ್ತಾರೆ, ಅವರಿಗೆ ಪಾಕಿಸ್ತಾನಿ ಸೇನೆಯ ಸುಗ್ನಾ ಪೋಸ್ಟ್ ಮಾರ್ಗದರ್ಶನ ಮಾಡುತ್ತಿದೆ – ಎಂದು ಆತ ತಿಳಿಸಿದ. ಕಳೆದೆರಡು ವಾರಗಳ ಹುಡುಕಾಟ ಅಂತಿಮಗೊಳ್ಳುವ ಹಂತಕ್ಕೆ ಬರುತ್ತಿದೆ.
ವಿಶೇಷದಳದ ನೆಲೆಯಿಂದ ಜೀಪಿನಲ್ಲಿ ಚಾಬುಕ್ ತಲಪಲು ಸುಮಾರು ೯೦ ನಿಮಿಷಗಳಷ್ಟು ಬೇಕಾಗುತ್ತದೆ. ಕೂಡಲೇ ನಾಲ್ಕು ತುಕಡಿಗಳಿಗೆ ಸಿದ್ಧರಿರುವಂತೆ ಪ್ರದೀಪ್ ಆದೇಶಿಸಿದರು. ಒಂದು ತಂಡ ಜೀಪಿನಲ್ಲಿ ತೆರಳಿದರೆ, ಉಳಿದವರು ಕಾಲ್ನಡಿಗೆಯಲ್ಲಿ ಹೋಗುವ ಯೋಜನೆ.
ಆದರೆ ಇವರ ಯೋಜನೆಗಳಿಗೆ ಸವಾಲಾಗುವಂತಹ ಘಟನೆಯೊಂದು ಇದೇ ಸಂದರ್ಭದಲ್ಲಿ ಘಟಿಸಿತು. ಬುರ್ಹಾನ್ ವಾಣಿಯ ಉತ್ತರಾಧಿಕಾರಿಯಾಗಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಯ ಕಮಾಂಡರ್ ಆಗಿದ್ದ ಸಬ್ಜಾರ್ ಅಹ್ಮದ್ ಭಟ್ನನ್ನು ಭಾರತೀಯ ಯೋಧರು ಕಾಶ್ಮೀರದ ತ್ರಾಲ್ ಪ್ರದೇಶದಲ್ಲಿ ಗುಂಡಿಟ್ಟು ಕೊಂದರು. ಈ ಘಟನೆಯಿಂದಾಗಿ ಕಾಶ್ಮೀರದೆಲ್ಲೆಡೆ ಪ್ರತಿಭಟನೆಗಳು ಇದ್ದಕ್ಕಿದ್ದಂತೆ ಭುಗಿಲೆದ್ದವು ಮತ್ತು ಅದು ಹಿಂಸಾಚಾರಕ್ಕೆ ತಿರುಗಿದವು. ಇಂತಹ ಸಂದರ್ಭದಲ್ಲಿ ತಮ್ಮ ನೆಲೆಯಿಂದ ಯಾರ ಗಮನವನ್ನೂ ಸೆಳೆಯದಂತೆ ಗುಪ್ತವಾಗಿ ಚಲಿಸುವುದು ಅಪಾಯಕರವಾಗಿತ್ತು. ಇವರಿಗೆ ಪ್ರಕೃತಿಯೇ ಮತ್ತೊಂದು ಸವಾಲನ್ನೆಸೆಯಿತೇನೋ ಎನ್ನುವಂತೆ ಧಾರಾಕಾರ ಮಳೆ ಸುರಿಯಲಾರಂಭಿಸಿತು, ಗುಡ್ಡಗಾಡು ಪ್ರದೇಶದ ನೆಲ ಎಲ್ಲೆಡೆ ಜಾರಲಾರಂಭಿಸಿತು. ಇಂತಹ ಸವಾಲಿನ ಮಧ್ಯೆಯೂ ಧೃತಿಗೆಡದೆ ಮೇ ೨೭ರ ರಾತ್ರಿಯ ವೇಳೆಗೆ ಇಡೀ ತಂಡ ಚಾಬುಕ್ ತಲಪಿತು. ಆ ಪ್ರದೇಶದಲ್ಲಿ ಈಗಾಗಲೇ ಬಂದು ತಲಪಿದ್ದ ತುಕಡಿಯೊಡನೆ ಸಂಪರ್ಕ ಸಾಧಿಸಿದರು ಮತ್ತು ಆ ಪ್ರದೇಶದ ಎಲ್ಲೆಡೆ ಹರಡಿಕೊಂಡು ಎಲ್ಲವನ್ನೂ ಗಮನಿಸತೊಡಗಿದರು. ಹಗಲಿನ ಹೊತ್ತು ಯಾರಿಗೂ ಕಾಣಿಸದಂತೆ ಅಡಗಿಕೊಂಡಿರಬೇಕು, ರಾತ್ರಿಯ ವೇಳೆ ಕಣ್ಣಿಗೆ ಎವೆ ಮುಚ್ಚದೆ ಕಾಯುತ್ತಿರಬೇಕು.
ಮೇ ೨೮ರ ರಾತ್ರಿ ೧೦:೩೦ರ ಹೊತ್ತಿಗೆ ಎಲ್ಓಸಿ ಕಡೆಯಿಂದ ಒಳನುಸುಳುತ್ತಿರುವ ಆಕೃತಿಯೊಂದು ಥರ್ಮಲ್ ಇಮೇಜರ್ ಮೇಲೆ ಗೋಚರಿಸಿತು. ಆತ ಬಾಗಿಕೊಂಡು ಎಚ್ಚರಿಕೆಯಿಂದ ಕಳ್ಳಹೆಜ್ಜೆಗಳನ್ನಿಡುತ್ತ ಕೆಡಿಕೆ ನಾಲಾ ಕಡೆಗೆ ಹೋಗುತ್ತಿದ್ದ. ಕೆಲವೇ ಕ್ಷಣಗಳಲ್ಲಿ ಆತನ ಹಿಂದೆ ಮತ್ತೊಬ್ಬ ವ್ಯಕ್ತಿ ಅದೇ ರೀತಿ ಬಾಗಿಕೊಂಡು ನುಸುಳತೊಡಗಿದ. ಕೆಲವೇ ನಿಮಿಷಗಳಲ್ಲಿ ಮತ್ತಿಬ್ಬರು ಅವರನ್ನು ಹಿಂಬಾಲಿಸಿದರು. ಅವರಿಬ್ಬರಿಂದ ಇನ್ನೂರು ಮೀಟರ್ ಹಿಂದೆ ಮತ್ತಿಬ್ಬರು. ಎಲ್ಲರೂ ನಾಲಾ ಕಡೆಗೆ ಚಲಿಸುತ್ತಿದ್ದಾರೆ. ಆರು ಜನ ಉಗ್ರರು ಒಳನುಸುಳುವ ಪ್ರಯತ್ನದಲ್ಲಿದ್ದರು. ಕೆಲವು ನಿಮಿಷ ನಡೆಯುವುದು, ಒಂದೆರಡು ನಿಮಿಷ ನಿಂತು ಸುತ್ತಲೂ ಗಮನಿಸಿ ಆಲಿಸುವುದು, ಮತ್ತೆ ಮುಂದುವರಿಯುವುದು, ಈ ರೀತಿ ನಡೆದಿತ್ತು ಅವರ ಚಲನೆ.
ಅವರೆಲ್ಲರೂ ಭಾರತದ ನೆಲವನ್ನು ತಲಪಿದ ನಂತರ ಕ್ಯಾಪ್ಟನ್ ಪ್ರದೀಪ್ ಅವರು ನೆಲಬಾಂಬನ್ನು ಸಿಡಿಸುವಂತೆ ತಮ್ಮ ಸೈನಿಕನಿಗೆ ಸೂಚಿಸಿದರು. ಎರಡು ನೆಲಬಾಂಬುಗಳು ಸ್ಫೋಟಗೊಂಡವು. ಎಲ್ಲರಿಗಿಂತ ಮುಂದಿದ್ದ ಉಗ್ರನ ಸಮೀಪದಲ್ಲೇ ಬಾಂಬು ಸಿಡಿದು, ಆತ ಅಲ್ಲೇ ಹಾರಿ ನೆಲಕ್ಕೆ ಬಿದ್ದ. ಕೂಡಲೇ ಉಳಿದ ಐವರು ಮೂರು ದಿಕ್ಕುಗಳಲ್ಲಿ ಓಡಿ, ಸಮೀಪದಲ್ಲೇ ಇದ್ದ ಪೊದೆಗಳ ಮರೆಯಲ್ಲಿ ಅವಿತಿಟ್ಟುಕೊಂಡರು. ಕೆಲವು ನಿಮಿಷಗಳು ಎಲ್ಲವೂ ನಿಶ್ಶಬ್ದ. ನೆಲಬಾಂಬು ತಾನಾಗಿ ಸಿಡಿಯಿತೊ ಅಥವಾ ಸೈನಿಕರು ಸಿಡಿಸಿದರೊ ಎನ್ನುವುದು ಉಗ್ರರಿಗೆ ತಿಳಿದಿರಲಿಲ್ಲ. ಭಾರತೀಯ ಸೈನಿಕರು ಇಲ್ಲಿಯವರೆಗೂ ಒಂದು ಗುಂಡನ್ನೂ ಹಾರಿಸಿರಲಿಲ್ಲ. ಕೆಲವು ನಿಮಿಷಗಳು ಎಲ್ಲವೂ ಮೌನವಾದಾಗ, ಮರೆಯಲ್ಲಿ ಅವಿತಿದ್ದ ಮತ್ತೊಬ್ಬ ಉಗ್ರನು ನೆಲದ ಮೇಲೆ ಬಿದ್ದಿದ್ದ ಉಗ್ರನ ಸಮೀಪಕ್ಕೆ ಬಂದು ಆತನನ್ನು ಎಳೆದುಕೊಂಡು ಹೋಗತೊಡಗಿದ. ಥರ್ಮಲ್ ಇಮೇಜರ್ ಮೇಲೆ ಇದು ಸ್ಪಷ್ಟವಾಗಿ ಗೋಚರಿಸಿತು. ಕೂಡಲೇ ಕ್ಯಾಪ್ಟನ್ ಪ್ರದೀಪ್ ಅವರು ತಮ್ಮ ಬಂದೂಕಿನಿಂದ ಗುರಿಯಿಟ್ಟು ಎರಡನೇ ಉಗ್ರನನ್ನು ಉಡಾಯಿಸಿದರು. ಆತನೂ ನೆಲಕ್ಕುರುಳಿದ.
ಇದೀಗ ಉಗ್ರರಿಗೆ ಸೈನಿಕರು ಇರುವುದು ಖಚಿತವಾಯಿತು. ಅವರು ಸತತವಾಗಿ ಗುಂಡು ಹಾರಿಸತೊಡಗಿದರು. ಕ್ಯಾಪ್ಟನ್ ಪ್ರದೀಪ್ ಅವರು ನೆಲದ ಮೇಲೆ ತೆವಳುತ್ತ ಉಗ್ರರ ಹಿಂಭಾಗಕ್ಕೆ ಸರಿದು, ಅಲ್ಲಿಂದ ಗುಂಡು ಹಾರಿಸತೊಡಗಿದರು. ಮರೆಯಲ್ಲಿದ್ದ ಇನ್ನಿಬ್ಬರು ಉಗ್ರರು ನೆಲಕ್ಕುರುಳಿದರು. ಕಾರ್ಯಾಚರಣೆ ಪ್ರಾರಂಭವಾಗಿ ಕೇವಲ ಇಪ್ಪತ್ತು ನಿಮಿಷಗಳು ಸಂದಿದ್ದವು; ಇದೀಗ ಉಳಿದಿರುವುದು ಇಬ್ಬರು ಉಗ್ರರು ಮಾತ್ರ. ಭಾರತೀಯ ಸೈನಿಕರು ಇಬ್ಬರು ಉಗ್ರರು ಅವಿತಿದ್ದ ಸ್ಥಳವನ್ನು ಆರು ಕಡೆಗಳಿಂದ ಸುತ್ತುವರಿದರು. ತಾವು ಸಿಕ್ಕಿಬೀಳುವುದು ಖಚಿತವಾದ ಕೂಡಲೇ ಉಗ್ರರು ಕತ್ತಲ ಮರೆಯಲ್ಲಿ ಅಲ್ಲಿಂದ ಅದು ಹೇಗೋ ನುಸುಳಿಕೊಂಡು ಎಲ್ಓಸಿ ಕಡೆಗೆ ಓಡತೊಡಗಿದರು. ಅವರು ಗಡಿರೇಖೆಯನ್ನು ದಾಟಿಬಿಟ್ಟರೆ, ಅವರನ್ನು ಬೆನ್ನಟ್ಟಲು ಸಾಧ್ಯವಿಲ್ಲ. ಅವರನ್ನು ಕೂಡಲೇ ತಡೆಯಿರಿ ಎಂದು ಕ್ಯಾಪ್ಟನ್ ಪ್ರದೀಪ್ ಕೂಗಿಕೊಂಡರು. ಭಾರತೀಯ ಸೈನಿಕರು ಉಗ್ರರತ್ತ ಸತತವಾಗಿ ಗುಂಡಿನ ಮಳೆ ಸುರಿಸಿದರು, ಉಗ್ರರ ಬಂದೂಕುಗಳು ಮೌನವಾದವು. ಸಮಯ ರಾತ್ರಿ ೧೧:೧೫. ಉಗ್ರರು ನೆಲಕ್ಕುರುಳಿದರೊ ಅಥವಾ ತಪ್ಪಿಸಿಕೊಂಡರೊ ತಿಳಿಯಲಿಲ್ಲ. ಬೆಳಕಾಗುವವರೆಗೂ ಯಾವುದೂ ಖಚಿತವಾಗುವುದಿಲ್ಲ. ಪ್ರದೀಪ್ ಮತ್ತು ಅವರ ಸಂಗಡಿಗರು ಸೂರ್ಯೋದಯಕ್ಕಾಗಿ ಕಾದರು. ಬೆಳಕಿನಲ್ಲಿ ಇಡೀ ಪ್ರದೇಶವನ್ನು ತಡಕಾಡಿದರು, ಆರು ಜನ ಉಗ್ರರ ಮೃತದೇಹಗಳು ಪತ್ತೆಯಾದವು. ಅವರ ಬಳಿ ಸಾಕಷ್ಟು ಪ್ರಮಾಣದಲ್ಲಿ ಮದ್ದುಗುಂಡುಗಳು, ಗ್ರೆನೇಡುಗಳು, ಎಕೆ-೪೭ ಹಾಗೂ ಕಲಾಶ್ನಿಕೋವ್ ರೈಫಲ್ಗಳು, ಚೀಣಾನಿರ್ಮಿತ ಪಿಸ್ತೂಲುಗಳು ಇದ್ದವು.
ಭಾರತದೊಳಗೆ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿಯುಂಟುಮಾಡುವ ಸಿದ್ಧತೆಯೊಂದಿಗೆ ಅವರು ಬಂದಿದ್ದುದು ಸ್ಪಷ್ಟವಿತ್ತು. ಭಾರತೀಯ ಯೋಧರ ಎಚ್ಚರಿಕೆ ಮತ್ತು ಶೌರ್ಯದಿಂದ ಮತ್ತೊಂದು ಅನಾಹುತ ತಪ್ಪಿತ್ತು. ಕ್ಯಾಪ್ಟನ್ ಪ್ರದೀಪ್ ಶೌರಿ ಆರ್ಯ ಅವರು ನಿರ್ಮಿಸಿದ್ದ ಗುಪ್ತಚರ ಜಾಲ ಪರಿಣಾಮಕಾರಿಯಾಗಿ ಕೆಲಸ ಮಾಡಿತ್ತು ಮತ್ತು ಕ್ಯಾಪ್ಟನ್ ಪ್ರದೀಪ್ ಅವರು ಎಲ್ಲವನ್ನೂ ಚಾಕಚಕ್ಯತೆಯಿಂದ ನಿಭಾಯಿಸಿದರು. ಯಾವುದೇ ಭಾರತೀಯ ಸೈನಿಕನ ಪ್ರಾಣಕ್ಕೂ ಸಂಚಕಾರವಾಗದೆಯೆ, ಎಲ್ಲ ಉಗ್ರರನ್ನೂ ಯಮಪುರಿಗಟ್ಟಿದ್ದು, ಈ ಕಾರ್ಯಾಚರಣೆಯ ವಿಶೇಷ. ಕ್ಯಾಪ್ಟನ್ ಪ್ರದೀಪ್ ಅವರ ಸಾಹಸಕ್ಕೆ ಭಾರತ ಸರ್ಕಾರ ಅವರಿಗೆ ಶೌರ್ಯಚಕ್ರ ಪ್ರದಾನ ಮಾಡಿತು. ೨೦೧೮ರ ಏಪ್ರಿಲ್ ೨೩ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ನಲವತ್ತಾರು ವರ್ಷ ವಯಸ್ಸಿನ ಪ್ರದೀಪ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಅಂದು ಪ್ರಶಸ್ತಿ ಸ್ವೀಕರಿಸಿದವರಲ್ಲಿ ಎಲ್ಲರಿಗಿಂತ ಹಿರಿಯರು ಪ್ರದೀಪ್ ಅವರೇ.
ಕ್ಯಾಪ್ಟನ್ ಪ್ರದೀಪ್ ಅವರ ಶೌರ್ಯಗಾಥೆಯನ್ನು ಚಲನಚಿತ್ರ (web series) ಆಗಿ ಪ್ರಕಟಿಸಲಾಗಿದೆ. SonyLive OTT ಮಾಧ್ಯಮವು ಒಂಬತ್ತು ಕಂತುಗಳಲ್ಲಿ ಪ್ರಸ್ತುತಪಡಿಸಿರುವ Avrodh-2 web-series ಪ್ರದೀಪ್ ಅವರು ಪಾಲ್ಗೊಂಡ ಕಾರ್ಯಾಚರಣೆಯನ್ನು ದೇಶದ ಜನರಿಗೆ ಕಟ್ಟಿಕೊಡುತ್ತದೆ.