ಸಂಸತ್ತಿನ ಮೇಲೆ ದಾಳಿ ನಡೆಸಿದ್ದ ಉಗ್ರ ನಾಯಕ ಅಫ್ಜಲ್ ಗುರು ಅನ್ನು ಗಲ್ಲಿಗೇರಿಸಿ ಮೂರು ವರ್ಷಗಳು ಕಳೆದಿದ್ದ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಅಫ್ಜಲ್ ಗುರು ಪರವಾಗಿ ಘೋಷಣೆ ಎಬ್ಬಿಸಿದ್ದರು, ದೇಶವನ್ನು ತುಂಡರಿಸುವAತೆ ಕೂಗಿದ್ದರು, ದೇಶದೆಲ್ಲೆಡೆ ಇದು ವಿವಾದವನ್ನು ಎಬ್ಬಿಸಿತ್ತು. ಈ ಸುದ್ದಿಯೂ ಕ್ಯಾಪ್ಟನ್ ಪವನ್ಕುಮಾರ್ ಅವರಿಗೆ ದುಃಖ ತರಿಸಿತು. ತಾವಿಲ್ಲಿ ದೇಶದ ಗಡಿಯನ್ನು ಕಾಯುತ್ತಿರುವಾಗ ತನ್ನ ದೇಶದ ಜನ ಈ ರೀತಿ ವರ್ತಿಸುತ್ತಿದ್ದಾರೆ!
ಈ ಸಂಚಿಕೆಯ ವೀರಯೋಧನ ಹೆಸರು ಕ್ಯಾಪ್ಟನ್ ಪವನ್ಕುಮಾರ್. ೧೯೧೬, ಫೆಬ್ರುವರಿ ೨೦ರಂದು ನಡೆದ ಉಗ್ರವಿರೋಧಿ ಕಾರ್ಯಾಚರಣೆಯಲ್ಲಿ ಕ್ಯಾಪ್ಟನ್ ಪವನ್ಕುಮಾರ್ ಅವರು ತೋರಿದ ಅಸಾಮಾನ್ಯ ಸಾಹಸಕ್ಕಾಗಿ ಅವರಿಗೆ ‘ಶೌರ್ಯಚಕ್ರ’ ನೀಡಲಾಯಿತು. ಆದರೆ ಆ ಪ್ರಶಸ್ತಿಯನ್ನು ಸ್ವೀಕರಿಸಲು ಅವರು ಬದುಕಿರಲಿಲ್ಲ ಎನ್ನುವುದು ದುಃಖದ ಸಂಗತಿ.
ಕ್ಯಾಪ್ಟನ್ ಪವನ್ಕುಮಾರ್ ಜನಿಸಿದ್ದು ಹರ್ಯಾಣಾದ ಜಿಂದ್ ಜಿಲ್ಲೆಯ ಬಢಾನಾ ಗ್ರಾಮದಲ್ಲಿ, ೧೯೯೩ ಜನವರಿ ೧೫ರಂದು ರಾಜಬೀರ್ಸಿಂಗ್ ಮತ್ತು ಕಮ್ಲೇಶ್ ಅವರ ಪುತ್ರನಾಗಿ. ಜನಿಸಿದ್ದು ‘ಸೈನಿಕ ದಿನ’ದಂದು ಎನ್ನುವುದೊಂದು ಕಾಕತಾಳೀಯ ವಿಶೇಷ. ಚಿಕ್ಕಂದಿನಿಂದಲೇ ಸೈನ್ಯಕ್ಕೆ ಸೇರುವುದರಲ್ಲಿ ವಿಶೇಷ ಆಸಕ್ತಿ. ಹೀಗಾಗಿಯೇ ಆತ ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸೇರಿ ಸೈನಿಕ ಶಿಕ್ಷಣ ಪಡೆದುಕೊಂಡ. ೨೦೧೩ ಡಿಸೆಂಬರ್ ೧೪ರಂದು ಶಿಕ್ಷಣ ಪೂರೈಸಿದ ಪವನ್ಕುಮಾರ್, ಮೊದಲಿಗೆ ಡೋಗ್ರಾ ರೆಜಿಮೆಂಟಿಗೆ ಸೇರ್ಪಡೆಗೊಂಡ. ಮುಂದೆ ಆತ ವಿಶೇಷ ಸೈನಿಕಪಡೆಗೆ ಸೇರಿಕೊಂಡು, ಪ್ಯಾರಾ ಕಮಾಂಡೋ ಆಗಿ ತರಬೇತಿ ಪಡೆದ. ಆನಂತರ ೨೦೧೫ರಲ್ಲಿ ಆತನನ್ನು ಪ್ಯಾರಾ ಬೆಟಾಲಿಯನ್ಗೆ ವರ್ಗಾಯಿಸಲಾಯಿತು. ಆತನಿದ್ದ ದಳಕ್ಕೆ ಮರುಭೂಮಿಯ ಸಮರದಲ್ಲಿ ವಿಶೇಷ ತರಬೇತಿ ನೀಡಲಾಗಿತ್ತು ಮತ್ತು ಆ ದಳಕ್ಕೆ ನೀಡಿದ್ದ ಹೆಸರು ‘ಮರಳುಗಾಡಿನ ಚೇಳುಗಳು’ (Desert Scorpions). ಮರೂನ್ ಬಣ್ಣದ ಸಮವಸ್ತç ಮತ್ತು ‘ಬಲಿದಾನ್’ ಬ್ಯಾಡ್ಜ್ ಧರಿಸಿ ಓಡಾಡುವುದೆಂದರೆ ಪವನ್ಕುಮಾರ್ಗೆ ಎಲ್ಲಿಲ್ಲದ ಹೆಮ್ಮೆ. ಬ್ಯಾಡ್ಜ್ ಧರಿಸಿ, ಎದೆಯುಬ್ಬಿಸಿ, ಠೀವಿಯಿಂದ ನಡೆದಾಡುತ್ತಿದ್ದ.
೨೦೧೬ ಫೆಬ್ರುವರಿ ೨೦ ಕ್ಯಾಪ್ಟನ್ ಪವನ್ಕುಮಾರ್ ಅವರ ಜೀವನದಲ್ಲಿ ಅತ್ಯಂತ ಮಹತ್ತ್ವದ ದಿನವಾಗಲಿತ್ತು. ಅಂದು ಅವರಿಗೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಸಮೀಪದ ಸೈನಿಕ ಠಾಣೆಗೆ ಬರಲು ತಿಳಿಸಲಾಗಿತ್ತು. ತಮ್ಮ ದಳದೊಂದಿಗೆ ಮಧ್ಯಾಹ್ನದ ವೇಳೆಗೆ ಅಲ್ಲಿಗೆ ಬಂದಿಳಿದರು. ಮಧ್ಯಾಹ್ನವಾದರೂ ಚಳಿ ಕಡಮೆಯಾಗಿರಲಿಲ್ಲ, ಜೊತೆಗೆ ತುಂತುರು ಮಳೆ ಬೇರೆ. ಅದೇ ಸಮಯಕ್ಕೆ ಶೋಪಿಯಾನಿನಿಂದ ೪೦ ಕಿಲೋಮೀಟರ್ ದೂರದಲ್ಲಿ ಪವನ್ಕುಮಾರ್ ಅವರ ಮೇಲಧಿಕಾರಿ ಮೇಜರ್ ತುಷಾರ್ಸಿಂಗ್ ತೋಮರ್ ಅವರಿಗೆ ಶ್ರೀನಗರದ ಕೇಂದ್ರ ಕಚೇರಿಯಿಂದ ದೂರವಾಣಿ ಕರೆ ಬಂದಿದೆ. ತಕ್ಷಣವೇ ತಮ್ಮ ಸೈನಿಕರನ್ನು ಪಾಂಪೋರೆಗೆ ಕಳುಹಿಸಬೇಕೆಂದು ಆದೇಶ. ಅಂದು ೪:೨೦ರ ವೇಳೆಯಲ್ಲಿ ಜಮ್ಮುವಿನಿಂದ ಬಸ್ಸುಗಳಲ್ಲಿ ಸಾಗುತ್ತಿದ್ದ ೫೦೦ ಜನರಿದ್ದ ಸಿಆರ್ಪಿಎಫ್ ದಳದ ಮೇಲೆ ಉಗ್ರರು ದಾಳಿ ನಡೆಸಿ, ನಾಲ್ವರು ಪೊಲೀಸರನ್ನು ಕೊಂದು, ಇತರ ಅನೇಕರನ್ನು ಗಾಯಗೊಳಿಸಿದ್ದರು. ಉಗ್ರರ ಮೇಲೆ ಪೊಲೀಸರು ಮರುದಾಳಿ ನಡೆಸಲಾರಂಭಿಸಿದ ಕೂಡಲೆ ಉಗ್ರರು ಅಲ್ಲಿಯೇ ಇದ್ದ Jammu Kashmir Entrepreneurship Development Institute (JKEDI)ನ ಬಹುಮಹಡಿ ಕಟ್ಟಡದೊಳಗೆ ಸೇರಿಕೊಂಡಿದ್ದರು. ಆ ಕಟ್ಟಡದೊಳಗೆ ಸುಮಾರು ೧೦೦ ಜನ ಕಾಶ್ಮೀರಿ ಯುವಕರಿಗೆ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಅಗತ್ಯವಾದ ವಿಶೇಷ ಉಪನ್ಯಾಸ ನೀಡಲಾಗುತ್ತಿತ್ತು. ಉಗ್ರರು ಈ ಯುವಕರ ಮೇಲೆ ದಾಳಿ ಮಾಡುವ ಮತ್ತು ಅವರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುವ ಸಾಧ್ಯತೆ ಇತ್ತು. ಸೈನಿಕರು ಕಟ್ಟಡದ ಮೇಲೆ ಗುಂಡಿನ ದಾಳಿ ನಡೆಸಿದರೆ ಕಾಶ್ಮೀರಿ ಯುವಕರು ಅಪಾಯಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇತ್ತು. ಹೀಗಾಗಿ ಉಗ್ರರನ್ನು ಹಿಡಿಯುವುದು ಸುಲಭದ ಕೆಲಸವಾಗಿರಲಿಲ್ಲ. ಈ ಕಾರಣಕ್ಕಾಗಿಯೇ ಮೇಜರ್ ತುಷಾರ್ಸಿಂಗ್ ತೋಮರ್ ಅವರಿಗೆ ವಿಶೇಷ ದಳದ ಸೈನಿಕರನ್ನು ಅಲ್ಲಿಗೆ ಕಳುಹಿಸಲು ತಿಳಿಸಲಾಗಿತ್ತು.
ತೂಕಡಿಸುತ್ತಿದ್ದ ಕ್ಯಾಪ್ಟನ್ ಪವನ್ಕುಮಾರ್ ಅವರು ದೂರವಾಣಿಯ ಸದ್ದಿನಿಂದ ದಡಕ್ಕನೆ ಎದ್ದರು. ತಮ್ಮ ಮೇಲಧಿಕಾರಿಯ ಆದೇಶವನ್ನು ತಮ್ಮ ದಳದ ಇತರರಿಗೆ ತಿಳಿಸಿ, ಕೂಡಲೇ ಹೊರಡುವಂತೆ ಆಣತಿ ಮಾಡಿದರು. ಪಾಂಪೋರೆ ಸಮೀಪದ ಪೂರ್ವನಿರ್ಧಾರಿತ ಸ್ಥಳದಲ್ಲಿ ಕ್ಯಾಪ್ಟನ್ ಪವನ್ಕುಮಾರ್ ಅವರು ಮೇಜರ್ ತುಷಾರ್ಸಿಂಗ್ ತೋಮರ್ ಅವರನ್ನು ಭೇಟಿಯಾಗಬೇಕಿತ್ತು. ಆದರೆ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ಅಲ್ಲಿದ್ದ ತೊರೆಯೊಂದು ರಸ್ತೆಯನ್ನೇ ಕೊಚ್ಚಿಹಾಕಿ, ದೊಡ್ಡ ಹೊಂಡಗಳನ್ನು ನಿರ್ಮಿಸಿತ್ತು. ಪವನ್ಕುಮಾರ್ ಅವರ ತಂಡವು ಚಲಿಸುತ್ತಿದ್ದ ಸೈನಿಕ ವಾಹನದ ಚಕ್ರವು ಹೊಂಡದಲ್ಲಿ ಸಿಲುಕಿಕೊಂಡುಬಿಟ್ಟಿತು. ಸುದ್ದಿಯನ್ನು ತಿಳಿದ ಮೇಜರ್ ತುಷಾರ್ ವಾಹನದ ಚಕ್ರ ಸಿಲುಕಿದ್ದ ಸ್ಥಳಕ್ಕೇ ಧಾವಿಸಿದರು. ಮರಗಟ್ಟುವ ಚಳಿಯಲ್ಲಿ ಪವನ್ಕುಮಾರ್ ಅವರು ನೆನೆದು ತೊಪ್ಪೆಯಾಗಿದ್ದರು. ಮೈಯೆಲ್ಲ ಕೆಸರು. ತಮ್ಮ ವಾಹನವನ್ನು ಹೊಂಡದಿಂದ ಹೊರಕ್ಕೆ ತಳ್ಳಲು ಹರಸಾಹಸ ನಡೆಸುತ್ತಿದ್ದರು. ತುಷಾರ್ ಅವರೂ ಕೈಜೋಡಿಸಿ ವಾಹನವನ್ನು ಹೊರಕ್ಕೆಳೆದರು. ನಂತರ ಕೂಡಲೇ ಹತ್ತಿರದ ಸೈನಿಕ ಠಾಣೆಗೆ ಹೋಗಿ ವಸ್ತ್ರವನ್ನು ಬದಲಾಯಿಸಿ ಬರುವಂತೆ ತಂಡಕ್ಕೆ ಸೂಚಿಸಿದರು. ಆದರೆ ಪವನ್ಕುಮಾರ್ ಇದಕ್ಕೆ ಒಪ್ಪಲಿಲ್ಲ. ಒಂದು ಕ್ಷಣವೂ ತಡಮಾಡಲು ಸಾಧ್ಯವಿಲ್ಲ. ಈಗಾಗಲೇ ಸಾಕಷ್ಟು ಸಮಯ ಕಳೆದುಕೊಂಡಿದ್ದೇವೆ, ಕೂಡಲೇ ಉಗ್ರರಿರುವ ಸ್ಥಳಕ್ಕೆ ಧಾವಿಸೋಣ – ಎಂದು ಒತ್ತಾಯಿಸಿದರು.
ಇಬ್ಬರು ನಾಯಕರೂ ತಮ್ಮ ಸೈನಿಕರನ್ನು ಕರೆದುಕೊಂಡು ಪಾಂಪೋರೆಗೆ ಧಾವಿಸಿದರೆ ಅಲ್ಲಿ ಅವರನ್ನು ಸ್ವಾಗತಿಸಿದ್ದು ಕಲ್ಲುಗಳ ಮಳೆ! ಉಗ್ರರನ್ನು ಬೆಂಬಲಿಸುವ ಅನೇಕ ಯುವಕರು ಒಟ್ಟಾಗಿ ಸೇರಿಕೊಂಡು ಸೈನಿಕರ ಮೇಲೆ ಕಲ್ಲುಗಳನ್ನೆಸೆಯುತ್ತಿದ್ದರು. ಅವರಿಂದ ತಪ್ಪಿಸಿಕೊಂಡು JKEDI ಕಟ್ಟಡವನ್ನು ಇವರು ತಲಪಿದರು. ಅಲ್ಲಿ ಆ ವೇಳೆಗೇ ಸಿಆರ್ಪಿಎಫ್ ದಳದ ಸೈನಿಕರು ಮತ್ತು ರಾಷ್ಟ್ರೀಯ ರೈಫಲ್ಸ್ ದಳದ ಸೈನಿಕರು ಮುತ್ತಿಗೆ ಹಾಕಿದ್ದರು. ಒಳಗಿದ್ದುದು ಕೇವಲ ಮೂವರು ಉಗ್ರರು ಎಂದು ತಿಳಿಸಲಾಯಿತು. ಕತ್ತಲಾಗುವುದರೊಳಗೆ ಅವರನ್ನು ಹಿಡಿಯಬೇಕು, ಇಲ್ಲದಿದ್ದರೆ ಅವರು ಕತ್ತಲಲ್ಲಿ ಪರಾರಿಯಾಗುವ ಸಾಧ್ಯತೆಯಿತ್ತು. ಆದರೆ, ಕಟ್ಟಡದ ಸಮೀಪಕ್ಕೆ ಹೋಗಲೂ ಸಾಧ್ಯವಿರಲಿಲ್ಲ. ಕಟ್ಟಡದ ಮೇಲ್ಮಹಡಿಯಲ್ಲಿ ಸೇರಿಕೊಂಡಿದ್ದ ಉಗ್ರರು, ಹತ್ತಿರ ಬರುವವರ ಮೇಲೆ ಗುಂಡಿನ ಮಳೆಗರೆಯುತ್ತಿದ್ದರು. ಒಳನುಗ್ಗಲು ಪ್ರಯತ್ನಿಸಿದ ಸಿಆರ್ಪಿಎಫ್ ದಳದ ಮೇಲೆ ಉಗ್ರರು ಗ್ರೆನೇಡ್ ಎಸೆಯುತ್ತಿದ್ದರು.
ಕ್ಯಾಪ್ಟನ್ ಪವನ್ಕುಮಾರ್ ಪರಿಸ್ಥಿತಿಯನ್ನು ಒಮ್ಮೆ ವಿಶ್ಲೇಷಿಸಿದರು. ಕಟ್ಟಡದ ಸುತ್ತಲೂ ಹೋಗಿ ಬಂದರು. ಅನಂತರ ತಮ್ಮೊಡನೆ ಐವರು ಸೈನಿಕರನ್ನು ಕರೆದುಕೊಂಡು, ಮುಂದಿನ ಕಾರ್ಯಾಚರಣೆಯ ಕುರಿತು ಅವರೊಡನೆ ಚರ್ಚಿಸಿದರು. ಮೇಜರ್ ತುಷಾರ್ ಅವರು ಬೆಳಗಿನವರೆಗೆ ಕಾಯೋಣ ಎಂದು ಸಲಹೆ ನೀಡಿದರು. ಅದಕ್ಕೆ ಪವನ್ಕುಮಾರ್ ಒಪ್ಪಲಿಲ್ಲ. ರಾತ್ರಿಯಲ್ಲೇ ನಾವು ನುಗ್ಗಲು ಸಾಧ್ಯವಾಗದಿದ್ದರೆ, ಬೆಳಗಾದ ನಂತರ ನುಗ್ಗುವುದು ಮತ್ತಷ್ಟು ಕಠಿಣವಾಗುತ್ತದೆ – ಎನ್ನುವುದು ಪವನ್ಕುಮಾರ್ ಅವರ ವಾದ. ಕಡೆಗೂ ತುಷಾರ್ ಅವರು ಪವನ್ಕುಮಾರ್ ಅವರ ಮಾತಿಗೆ ಒಪ್ಪಿದರು. ಕಟ್ಟಡದ ಹಿಂಭಾಗದಲ್ಲಿದ್ದ ತುರ್ತು ನಿರ್ಗಮನ ದ್ವಾರದ ಹತ್ತಿರವಿದ್ದ ಮೆಟ್ಟಿಲಿನ ಕಡೆಯಿಂದ ಪವನ್ಕುಮಾರ್ ತಮ್ಮ ತಂಡದೊಡನೆ ಕಟ್ಟಡದೊಳಗೆ ನುಗ್ಗಿದರು. ಹೊರಗಿದ್ದ ಇತರ ಸೈನಿಕರಿಗೆ, ಉಗ್ರರ ಮೇಲೆ ದಾಳಿ ನಡೆಸುತ್ತ, ಅವರ ಗಮನವನ್ನು ಹಿಡಿದಿಟ್ಟಿರಲು ಸೂಚಿಸಿದ್ದರು. ಉಗ್ರರ ಗಮನ ಅತ್ತ ಇದ್ದಾಗ, ಪವನ್ಕುಮಾರ್ ತಂಡ ಕಟ್ಟಡದ ಹಿಂಭಾಗದಿಂದ ಒಳನುಗ್ಗಿತ್ತು.
ಆದರೆ, ಕಟ್ಟಡದಲ್ಲಿ ಉಗ್ರರು ಎಲ್ಲಿ ಅಡಗಿದ್ದಾರೆ ಎನ್ನುವುದು ಸ್ಪಷ್ಟವಾಗಿ ತಿಳಿದಿರಲಿಲ್ಲ. ಒಂದೊಂದೇ ಮಹಡಿಯನ್ನು ಹೊಕ್ಕು, ಅಲ್ಲಿದ್ದ ಕಾಶ್ಮೀರಿ ಯುವಕರನ್ನೆಲ್ಲ ಕೆಳಕ್ಕೆ ಕಳುಹಿಸುತ್ತ, ಪವನ್ಕುಮಾರ್ ಮೇಲ್ಮಹಡಿಗೆ ತಲಪಿದರು. ಅಲ್ಲಿ ಅನೇಕ ಕೊಠಡಿಗಳಿದ್ದವು. ಅಲ್ಲಿದ್ದ ಒಂದು ಕೊಠಡಿಯಲ್ಲಿ ಉಗ್ರರು ಅವಿತಿರಬೇಕೆಂದುಕೊಂಡರು. ಒಂದೊಂದೇ ಕೊಠಡಿಗೆ ನುಗ್ಗುತ್ತ ಅಲ್ಲಿ ಉಗ್ರರು ಇಲ್ಲವೆಂದು ಖಚಿತಪಡಿಸಿಕೊಂಡು, ಪಕ್ಕದ ಕೊಠಡಿಯತ್ತ ಧಾವಿಸುವುದು. ಆ ರೀತಿ ನುಗ್ಗಿದಾಗ ಒಂದು ಕೊಠಡಿಯಲ್ಲಿ ಸೇರಿಕೊಂಡಿದ್ದ ಉಗ್ರರು, ಪವನ್ಕುಮಾರ್ ಅವರು ಬಾಗಿಲನ್ನು ಒದೆಯುತ್ತಿದ್ದಂತೆ ಗುಂಡಿನ ದಾಳಿ ನಡೆಸಿದರು. ಅದರಿಂದ ಪವನ್ಕುಮಾರ್ ತಪ್ಪಿಸಿಕೊಂಡರು. ಒಳಗೆ ಕಗ್ಗತ್ತಲೆ; ಏನೂ ಕಾಣುತ್ತಿಲ್ಲ. ಕೆಲವೇ ಅಡಿಗಳ ದೂರದಲ್ಲಿ ಉಗ್ರರು ಅಡಗಿದ್ದಾರೆ! ಮುಂದಿನ ಹೆಜ್ಜೆ ಯೋಚಿಸುವಷ್ಟರಲ್ಲಿ ಉಗ್ರರು ಮತ್ತೊಂದು ಸುತ್ತು ಗುಂಡಿನ ದಾಳಿ ನಡೆಸಿದರು. ಈ ಸಲ ಅವರು ಹಾರಿಸಿದ ಗುಂಡು ನೇರವಾಗಿ ಕ್ಯಾಪ್ಟನ್ ಪವನ್ಕುಮಾರ್ ಅವರ ಎದೆಗೆ ಬಡಿಯಿತು. ಅದೇ ಕ್ಷಣದಲ್ಲಿ ಪವನ್ಕುಮಾರ್ ಅವರ ಆಟೊಮ್ಯಾಟಿಕ್ ಮೆಷಿನ್ಗನ್ನಿನಿಂದಲೂ ಗುಂಡು ಹಾರಿತ್ತು, ಅದರ ಹೊಡೆತಕ್ಕೆ ಉಗ್ರ ಅಲ್ಲೇ ನೆಲಕಚ್ಚಿದ. ಈಗ ಉಳಿದಿದ್ದವರು ಇನ್ನಿಬ್ಬರು ಉಗ್ರರು ಮಾತ್ರ.
ಎದೆಗೆ ಗುಂಡಿನೇಟು ತಾಕಿದರೂ ಲೆಕ್ಕಿಸದೆ ಪವನ್ಕುಮಾರ್ ಮುಂದುವರಿದರು. ಅಷ್ಟರಲ್ಲೇ ಮತ್ತೊಂದು ಸುತ್ತಿನ ದಾಳಿ ಉಗ್ರರಿಂದ ನಡೆಯಿತು. ಮತ್ತಷ್ಟು ಗುಂಡುಗಳು ಪವನ್ ಅವರ ದೇಹವನ್ನು ಅಪ್ಪಳಿಸಿದವು. ಎದೆಯಿಂದ ರಕ್ತ ಉಕ್ಕಿಬರುತ್ತಿತ್ತು, ದೇಹದ ಎಲ್ಲೆಡೆ ಗಾಯಗಳು. ಪವನ್ ಅಲ್ಲೇ ಕುಸಿದರು. ಅವರ ಜೊತೆಗಾರರು ಅವರನ್ನು ಹೊರಕ್ಕೆ ಹೊತ್ತೊಯ್ದರು. ‘ಇನ್ನೂ ಇಬ್ಬರು ಉಗ್ರರು ಒಳಗಿದ್ದಾರೆ, ಅವರನ್ನು ನಾನು ಕೊಲ್ಲಬೇಕು’ ಎಂದು ಪವನ್ಕುಮಾರ್ ಹೇಳುತ್ತಲೇ ಇದ್ದರು. ಆದರೆ ಅವರಿಗಾಗಿದ್ದ ಗಾಯ ಮರಣಾಂತಿಕವಾಗಿತ್ತು, ಅವರ ಹೃದಯದ ಒಂದು ಭಾಗವೇ ಕಿತ್ತುಹೋಗಿತ್ತು. ಆ್ಯಂಬುಲೆನ್ಸ್ನಲ್ಲಿ ಅವರನ್ನು ಶ್ರೀನಗರದ ಆಸ್ಪತ್ರೆಗೆ ತಕ್ಷಣವೇ ಕರೆದೊಯ್ಯಲಾಯಿತು. ಆದರೆ ಅವರು ಚೇತರಿಸಿಕೊಳ್ಳಲು ಸಾಧ್ಯವಾಗದೆ ಅಲ್ಲಿಯೆ ಕೊನೆಯುಸಿರೆಳೆದರು.
ಅವರಿಗಿನ್ನೂ ಕೇವಲ ೨೩ ವರ್ಷ ವಯಸ್ಸು. ದೇಶದ ಗಡಿಯನ್ನು ಕಾಯಬೇಕು, ಉಗ್ರರನ್ನು ಮಟ್ಟಹಾಕಬೇಕು ಎನ್ನುವ ಬಾಲ್ಯದ ಕನಸು ನನಸಾಗಿತ್ತು. ಆ ಕಾರ್ಯ ಮಾಡುತ್ತಲೇ ತಮ್ಮ ಪ್ರಾಣವನ್ನು ಮಾತೃಭೂಮಿಯ ಕಾರ್ಯದಲ್ಲಿ ಅರ್ಪಿಸಿದ್ದರು. ಅವರ ಈ ಸಾಹಸಕ್ಕಾಗಿ ಸರ್ಕಾರ ಅವರಿಗೆ ಮರಣೋತ್ತರ ಶೌರ್ಯಚಕ್ರ ಪ್ರಶಸ್ತಿ ನೀಡಿ ಗೌರವಿಸಿತು.
ಅಂದಿನ ಕಾರ್ಯಾಚರಣೆಗೆ ಕೆಲವು ನಿಮಿಷಗಳ ಮೊದಲು ಕ್ಯಾಪ್ಟನ್ ಪವನ್ಕುಮಾರ್ ಅವರು ತಮ್ಮ ಫೇಸ್ಬುಕ್ನಲ್ಲಿ ಸಂದೇಶವೊಂದನ್ನು ದಾಖಲಿಸಿದ್ದರು. ಶೋಪಿಯಾನ್ಗೆ ಬಂದಿಳಿದು ವಿಶ್ರಾಂತಿ ತೆಗೆದುಕೊಳ್ಳುತ್ತ ದೇಶದ ಸುದ್ದಿಗಳನ್ನು ಪವನ್ ಓದುತ್ತಿದ್ದಾಗ ಎರಡು ಸುದ್ದಿಗಳು ಅವರ ಗಮನ ಸೆಳೆದಿದ್ದವು. ಒಂದು ಸುದ್ದಿ ಅವರ ರಾಜ್ಯವಾದ ಹರ್ಯಾಣಾದಿಂದ ಬಂದದ್ದು. ಜಿಂದ್ ಜಿಲ್ಲೆಯಲ್ಲಿನ ತಮ್ಮ ಮನೆಯ ಸಮೀಪ ಉದ್ರಿಕ್ತ ಜನರ ಗುಂಪೊAದು ವಾಹನಗಳಿಗೆ ಬೆಂಕಿ ಹಚ್ಚಿತ್ತು ಮತ್ತು ಆಸ್ತಿಪಾಸ್ತಿಗಳನ್ನು ಘಾಸಿಗೊಳಿಸಿತ್ತು. ತಮಗೆ ಸರ್ಕಾರಿ ಕೆಲಸದಲ್ಲಿ ರಿಸರ್ವೇಶನ್ ನೀಡಬೇಕೆಂದು ಒತ್ತಾಯಿಸುತ್ತಿದ್ದ ಚಳವಳಿ ಹಿಂಸೆಗೆ ತಿರುಗಿತ್ತು. ಆ ಸುದ್ದಿ ಮತ್ತು ಅದರೊಡನಿದ್ದ ಚಿತ್ರಗಳನ್ನು ನೋಡಿದ ಕ್ಯಾಪ್ಟನ್ ಪವನ್ಕುಮಾರ್ ಅವರಿಗೆ ಖೇದವಾಯಿತು. ಮತ್ತೊಂದು ಸುದ್ದಿ ಪವನ್ಕುಮಾರ್ ಅವರು ಶಿಕ್ಷಣ ಪಡೆದಿದ್ದ ದೆಹಲಿಯ ಜೆಎನ್ಯುಯಿಂದ ಬಂದದ್ದು. ಸಂಸತ್ತಿನ ಮೇಲೆ ದಾಳಿ ನಡೆಸಿದ್ದ ಉಗ್ರ ನಾಯಕ ಅಫ್ಜಲ್ ಗುರು ಅನ್ನು ಗಲ್ಲಿಗೇರಿಸಿ ಮೂರು ವರ್ಷಗಳು ಕಳೆದಿದ್ದ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಅಫ್ಜಲ್ ಗುರು ಪರವಾಗಿ ಘೋಷಣೆ ಎಬ್ಬಿಸಿದ್ದರು, ದೇಶವನ್ನು ತುಂಡರಿಸುವಂತೆ ಕೂಗಿದ್ದರು, ದೇಶದೆಲ್ಲೆಡೆ ಇದು ವಿವಾದವನ್ನು ಎಬ್ಬಿಸಿತ್ತು. ಈ ಸುದ್ದಿಯೂ ಕ್ಯಾಪ್ಟನ್ ಪವನ್ಕುಮಾರ್ ಅವರಿಗೆ ದುಃಖ ತರಿಸಿತು. ತಾವಿಲ್ಲಿ ದೇಶದ ಗಡಿಯನ್ನು ಕಾಯುತ್ತಿರುವಾಗ ತನ್ನ ದೇಶದ ಜನ ಈ ರೀತಿ ವರ್ತಿಸುತ್ತಿದ್ದಾರೆ!
ಕೆಲವು ನಿಮಿಷಗಳು ಕಣ್ಮುಚ್ಚಿ ಕುಳಿತ ಪವನ್ಕುಮಾರ್ ಅನಂತರ ತಮ್ಮ ಫೇಸ್ಬುಕ್ ಪುಟದಲ್ಲಿ ತಮ್ಮ ಭಾವನೆಗಳನ್ನು ಈ ರೀತಿ ಬರೆದರು:
“ಕಿಸೀ ಕೋ ರಿಸರ್ವೇಶನ್ ಚಾಹಿಯೇ ತೋ,
ಕಿಸೀ ಕೋ ಆಜಾದೀ,
ಭಾಯಿ ಹಮೇ ಕುಚ್ ನಹಿ ಚಾಹಿಯೇ ಭಾಯಿ,
ಬಸ್ ಅಪ್ನೀ ರಜಾಯಿ”
(ಕೆಲವರಿಗೆ ರಿಸರ್ವೇಶನ್ ಬೇಕು, ಮತ್ತೆ ಕೆಲವರಿಗೆ ಸ್ವಾತಂತ್ರ್ಯ ಸಹೋದರ, ನನಗಾದರೋ ಬೇರೇನೂ ಬೇಡ, ಕೇವಲ ಬೆಚ್ಚನೆಯ ಹೊದಿಕೆ ಸಾಕು).