1915 ರ ಜನವರಿ 25 ರಂದು ಭಾರತ ಸರ್ಕಾರ ಕ್ಯಾಪ್ಟನ್ ಡಾಂಗಿಯವರಿಗೆ ‘ಕೀರ್ತಿ ಚಕ್ರ’ ಘೋಷಿಸಿತು. ಮಾರ್ಚ್ 21ರಂದು ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿಗಳು ಡಾಂಗಿಯವರಿಗೆ ಪ್ರಶಸ್ತಿ ತೊಡಿಸಿದರು. ಇಪ್ಪತೈದು ವರ್ಷ ವಯಸ್ಸಿನ ಕ್ಯಾಪ್ಟನ್ ಜಯದೇವ ಡಾಂಗಿಯವರಿಗೆ ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಮದುವೆಯ ನಿಶ್ಚಿತಾರ್ಥವಾಗಿತ್ತು.
ಈ ಸಂಚಿಕೆಯ ಸಾಹಸದ ಕಥೆಯ ಹೀರೋ “ಕ್ಯಾಪ್ಟನ್ ಜಯದೇವ ಡಾಂಗಿ”. ಭಾರತೀಯ ಸೈನ್ಯಕ್ಕೆ ಸೇರಿದ ಪ್ಯಾರಾಚೂಟ್ ರೆಜಿಮೆಂಟಿನ ವಿಶೇಷ ಕಾರ್ಯಪಡೆಯ ಕಮ್ಯಾಂಡೋ ಆಗಿ ಕಾರ್ಯನಿರ್ವಹಿಸುತ್ತಿದ್ದ ಕ್ಯಾಪ್ಟನ್ ಡಾಂಗಿಯವರು 2014ರ ಜೂನ್ 19 ರಂದು ನಡೆದ ಉಗ್ರ ದಮನ ಕಾರ್ಯಾಚರಣೆಯ ಸಂದರ್ಭದಲ್ಲಿ ತೋರಿದ ಅಸಾಧಾರಣ ಸಾಹಸ ಮತ್ತು ನೇತೃತ್ವಕ್ಕಾಗಿ ಭಾರತ ಸರ್ಕಾರವು ಅವರಿಗೆ ‘ಕೀರ್ತಿ ಚಕ್ರ’ ವನ್ನು ನೀಡಿ ಗೌರವಿಸಿತು. ಶಾಂತಿ ಸಮಯದಲ್ಲಿ ತೋರುವ ಸಾಹಸಕ್ಕೆ ಭಾರತ ಸರ್ಕಾರ ನೀಡುವ ಎರಡನೆ ಅತ್ಯುನ್ನತ ಪ್ರಶಸ್ತಿ ಕೀರ್ತಿ ಚಕ್ರ. ಭಾರತೀಯರ ಪ್ರಾಣ ತೆಗೆಯಲೆಂದೇ ಪಾಕಿಸ್ತಾನದಿಂದ ತರಬೇತಿ ಪಡೆದಿರುವ, ತಮ್ಮ ಪ್ರಾಣವನ್ನೂ ಲೆಕ್ಕಿಸದ ಈ ಉಗ್ರಗಾಮಿಗಳು ನರವೇಷದ ರಕ್ಕಸರು. ಪ್ರಾಣ ಬಿಡಲೂ ಸಿದ್ಧರಾಗಿರುವ ಇಂತಹವರನ್ನು ನಿಗ್ರಹಿಸುವುದು ಸುಲಭವಲ್ಲ. ದೇಶಕ್ಕಾಗಿ ಪ್ರಾಣವನ್ನು ಒತ್ತೆಯಿಟ್ಟು ಕಾರ್ಯ ನಿರ್ವಹಿಸುವ ಸೈನಿಕರಿಗೆ ಮಾತ್ರ ಇದು ಸಾಧ್ಯ. ಇಂತಹ ಪ್ರತಿಯೊಬ್ಬ ಯೋಧನಿಗೂ ದೇಶವು ಚಿರಋಣಿಯಾಗಿರುತ್ತದೆ. ಈ ಯೋಧರು ತಮ್ಮ ಪ್ರಾಣವನ್ನು ಒತ್ತೆಯಿಟ್ಟಿರುವುದರಿಂದಲೇ ದೇಶದ ಇತರ ಪ್ರಜೆಗಳು ನಿರಾತಂಕವಾಗಿ ಜೀವನ ನಡೆಸಲು ಸಾಧ್ಯವಿರುವುದು ಎನ್ನುವುದನ್ನು ಎಲ್ಲರೂ ಸದಾ ನೆನಪಿಡಬೇಕಾದ ಸಂಗತಿ.
ಪಾಕಿಸ್ತಾನದಿಂದ ತರಬೇತಿ ಪಡೆದು ಪ್ರಚೋದಿತರಾಗಿರುವ ಉಗ್ರರು ಯಾವ ಭಯವೂ ಇಲ್ಲದೆ ನಿರಾತಂಕವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಸ್ಥಳ ತ್ರಾಲ್. ಇದು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ಸೇರಿದ ಒಂದು ನಗರ. ಶ್ರೀನಗರದಿಂದ ಕೇವಲ 40 ಕಿ.ಮೀ ದೂರದಲ್ಲಿರುವ ತ್ರಾಲ್ ನಗರವು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮ್ಯಾಂಡರ್ ಆಗಿದ್ದ ಬುರ್ಹಾನ್ ವಾಣಿ ಅವರ ಆವಾಸ ಸ್ಥಾನವೂ ಆಗಿತ್ತು. ಇಲ್ಲಿರುವ ಭಾರತೀಯ ಸೈನ್ಯದ ಠಾಣೆಯೇ ಕ್ಯಾಪ್ಟನ್ ಜಯದೇವ ಡಾಂಗಿ ಕಾರ್ಯಕ್ಷೇತ್ರವೂ ಹೌದು. ಡಾಂಗಿ ಅವರು ಹರ್ಯಾಣದ ರೋಹ್ತಕ್ ಜಿಲ್ಲೆಯ ಮದೀನ ಕೌರ್ಸನ್ ಗ್ರಾಮಕ್ಕೆ ಸೇರಿದವರು. ಆ ಗ್ರಾಮದಿಂದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ (NDA) ಸೇರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದು. ಮುಂದೆ ಡೆಹ್ರಾಡೂನಿನ ಇಂಡಿಯನ್ ಮಿಲಿಟರಿ ಅಕಾಡೆಮಿ (IMA)ಯಲ್ಲಿ ಸೈನಿಕ ಶಿಕ್ಷಣ ಪಡೆದರು. IMA ಶಿಕ್ಷಣದ ಅಂತ್ಯದಲ್ಲಿ ನಡೆಯುವ ಪರೀಕ್ಷೆಯಲ್ಲಿ ಅತ್ಯುತ್ಕøಷ್ಟ ಸ್ಥಾನವನ್ನು ಪಡೆದವರಿಗೆ ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ನೀಡಲಾಗುತ್ತದೆ. ಭಾರತೀಯ ಸೈನ್ಯದ ಮಹಾದಂಡನಾಯಕರು ಸ್ವತಃ ಉಪಸ್ಥಿತರಿದ್ದು ಅವರ ಕೈಯ್ಯಿಂದ ಪಡೆಯುವ ಈ ಪದಕಗಳನ್ನು ನೀಡುವ ಕಾರ್ಯಕ್ರಮಕ್ಕೆ ‘ಸ್ವಾರ್ಡ್ ಆಫ್ ಆನರ್’ (Sword of Honour) ಎಂದು ಕರೆಯಲಾಗುತ್ತದೆ. 2010ರ ಸಾಲಿನ ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಮಹಾದಂಡನಾಯಕ ಜನರಲ್ ವಿ.ಕೆ. ಸಿಂಗ್ ಅವರಿಂದ ಚಿನ್ನದ ಪದಕವನ್ನು ಪಡೆದುಕೊಂಡದ್ದು ಜಯದೇವ ಡಾಂಗಿಯವರ ಮತ್ತೊಂದು ಹೆಗ್ಗಳಿಕೆ.
ತರಬೇತಿ ಪಡೆಯುವುದು, ಪದಕಗಳನ್ನು ಗಳಿಸುವುದು ಸೈನಿಕ ಜೀವನದ ಪ್ರಾರಂಭವಷ್ಟೇ. ಮುಂದೆ ಕಾರ್ಯಕ್ಷೇತ್ರದಲ್ಲಿ ನಿಜವಾದ ಪರೀಕ್ಷೆಗಳು ಎದುರಾಗುತ್ತವೆ, ಆತನ ಎದೆಗಾರಿಕೆಯನ್ನು ಕೌಶಲ್ಯಗಳನ್ನು ಆಗಾಗ ಪರೀಕ್ಷಿಸುತ್ತಲೇ ಇರುತ್ತವೆ. ತ್ರಾಲ್ ನಗರವನ್ನು ಕೇಂದ್ರವಾಗಿಟ್ಟುಕೊಂಡು ಸೈನಿಕನಾಗಿ ಕಾರ್ಯ ಮಾಡುತ್ತಿದ್ದ ಕ್ಯಾಪ್ಟನ್ ಜಯದೇವ್ ಡಾಂಗಿಯವರ ಜೀವನದ ಮಹತ್ವದ ದಿನ 2014ರ ಜೂನ್ 19. ಆ ದಿನದ ಸಂಜೆಯ ಹೊತ್ತಿಗೆ ತ್ರಾಲ್ನ ಸೈನಿಕ ಠಾಣೆಗೆ ಗುಪ್ತಚರ ಮಾಹಿತಿಯೊಂದು ರವಾನೆಯಾಗಿತ್ತು. ಅಲ್ಲಿಂದ ಹತ್ತು ಕಿಲೋಮೀಟರ್ ದೂರದಲ್ಲಿದ್ದ ಬಚ್ಚೂ ಗ್ರಾಮಕ್ಕೆ ಉಗ್ರಗಾಮಿಯೊಬ್ಬ ಬಂದಿರುವನೆಂಬ ಸುದ್ದಿ ಅದು. ಯಾರೋ ಸಾಮಾನ್ಯ ಉಗ್ರನಲ್ಲ. ಅದಿಲ್ ಅಹ್ಮದ್ ಮಿರ್ ಎಂಬ ಹೆಸರಿನ ಈ ಉಗ್ರ ಅನೇಕ ವರ್ಷಗಳಿಂದ ಆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ, ಆ ಪ್ರದೇಶದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಪ್ರಾದೇಶಿಕ ಕಮ್ಯಾಂಡರ್ ಆತ. ಮುಂದಿನ ವರ್ಷಗಳಲ್ಲಿ ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಉಗ್ರರ ಕಾರ್ಯ ಹೆಚ್ಚಳಕ್ಕೆ ಕಾರಣನಾದ ಬುರ್ಹನ್ ವಾಣಿಯ ಗುರು ಹಾಗೂ ಮಾರ್ಗದರ್ಶಕನೀತ. ಆತನನ್ನು ಹಿಡಿಯಲು ಸಾಕಷ್ಟು ಸಮಯದಿಂದ ಭಾರತೀಯ ಸೈನಿಕರು ಪ್ರಯತ್ನಿಸುತ್ತಿದ್ದರು, ಹೊಂಚು ಹಾಕಿದ್ದರು. ಕಳೆದ ಆರು ತಿಂಗಳಿನಿಂದ ಕಮ್ಯಾಂಡೊಗಳಿಗೆ ಅನೇಕ ಬಾರಿ ಅದಿಲ್ ಮಿರ್ ಕೈಕೊಟ್ಟು ತಪ್ಪಿಸಿಕೊಂಡಿದ್ದ. ತನ್ನ ಚಲನವಲನ ಯಾರಿಗೂ ತಿಳಿಯಬಾರದೆಂಬ ಕಾರಣಕ್ಕಾಗಿ ಆತ ಚರವಾಣಿಯನ್ನೇ ಉಪಯೋಗಿಸುತ್ತಿರಲಿಲ್ಲ.
ಬೇಸಿಗೆಯ ದಿನಗಳು, ಇನ್ನೂ ಸಂಜೆ 5 ಗಂಟೆಯ ಸಮಯ. ಕತ್ತಲಾಗಲು ಸಾಕಷ್ಟು ಸಮಯವಿತ್ತು. ಒಬ್ಬನೇ ಉಗ್ರನಾದ್ದರಿಂದ ಕತ್ತಲಾಗುವುದರೊಳಗೆ ಕಾರ್ಯಾಚರಣೆ ಮುಗಿಸಿ ವಾಪಸ್ಸಾಗಬಹುದೆಂದು, ಇದೊಂದು ಸುಲಭದ ಕಾರ್ಯಾಚರಣೆ ಎಂದು ಕಮ್ಯಾಂಡೋ ತಂಡದ ಲೆಕ್ಕಾಚಾರ. ಸ್ವಲ್ಪ ಸಮಯದಲ್ಲಿಯೇ ತಮ್ಮ ಲೆಕ್ಕಾಚಾರ ತಲೆಕೆಳಕಾಗಲಿದೆ ಎನ್ನುವುದು ಅವರಿಗಿನ್ನೂ ತಿಳಿದಿರಲಿಲ್ಲ. ಬಚ್ಚೂ ಗ್ರಾಮದ ಮನೆಯೊಂದರಲ್ಲಿ ಅದಿಲ್ ಮಿರ್ ಅವಿತಿಟ್ಟುಕೊಂಡಿದ್ದಾನೆಂಬ ಗುಪ್ತಚರ ಮಾಹಿತಿ ಬಂದ ಕೂಡಲೇ ಕಮ್ಯಾಂಡೋಗಳ ತಂಡ ಅಲ್ಲಿಗೆ ಧಾವಿಸಿತು. ಕ್ಯಾಪ್ಟನ್ ಜಯದೇವ ಡಾಂಗಿಯನ್ನೂ ಒಳಗೊಂಡಂತೆ 8 ಜನ ಕಮ್ಯಾಂಡೋಗಳು, ರಾಷ್ಟ್ರೀಯ ರೈಫಲ್ಸ್ ದಳದ ಮೂವರು ಸೈನಿಕರು ಮತ್ತು ಜಮ್ಮು-ಕಾಶ್ಮೀರ ಪೊಲೀಸ್ ದಳದ ವಿಶೇಷ ತಂಡದ ಮೂವರು ಪೊಲೀಸರು ಈ ತಂಡದಲ್ಲಿದ್ದರು. ಸ್ವಲ್ಪ ಇಳಿಜಾರು ಪ್ರದೇಶದಲ್ಲಿರುವ ಬಚ್ಚೂ ಗ್ರಾಮವು ದಟ್ಟವಾದ ಮರಗಳಿರುವ ಅರಣ್ಯದಿಂದಾವೃತವಾದ ಪುಟ್ಟ ಗ್ರಾಮ. ಕಮ್ಯಾಂಡೋಗಳ ತಂಡವು ಕೇವಲ ಹತ್ತು ನಿಮಿಷದಲ್ಲಿ ಗಮ್ಯ ಸ್ಥಾನವನ್ನು ತಲಪಿ, ಉಗ್ರನಿದ್ದ ಮನೆಯ ಆವರಣವನ್ನು ಸುತ್ತುವರಿದರು. ಆ ಆವರಣದಲ್ಲಿದ್ದದ್ದು ಮೂರು ಮನೆಗಳು. ಯಾವ ಮನೆಯಲ್ಲಿ ಉಗ್ರನಿರುವನು ಎನ್ನುವುದನ್ನು ಗುಪ್ತಚರ ಮಾಹಿತಿಯಲ್ಲಿ ತಿಳಿಸಿರಲಿಲ್ಲ. ಹೀಗಾಗಿ, ಮೊದಲಿಗೆ ಯಾವುದಾದರೂ ಒಂದು ಮನೆಯ ಕದವನ್ನು ಮೊದಲು ತಟ್ಟಬೇಕು. ಕಮ್ಯಾಂಡೋಗಳು ಬಂದಿರುವುದು ತಿಳಿದ ಕೂಡಲೇ ಉಗ್ರನು ಪರಾರಿಯಾಗಲು ಯತ್ನಿಸಬಹುದು. ಒಮ್ಮೆ ಸುತ್ತಲೂ ಕಣ್ಹಾಯಿಸಿದರು. ಮನೆಯ ಹಿಂದಿದ್ದ ನೀಲಗಿರಿ ತೋಪಿನ ಮಾರ್ಗ ತಪ್ಪಿಸಿಕೊಳ್ಳಲು ಪ್ರಶಸ್ತವಾಗಿದೆ ಎನ್ನಿಸಿತು. ನೀಲಗಿರಿ ತೋಪನ್ನು ದಾಟಿದರೆ ಹುಲ್ಗಾವಲು, ಪಕ್ಕದಲ್ಲೇ ಒಂದು ಪುಟ್ಟ ತೊರೆ, ಅದನ್ನು ದಾಟಿದರೆ ದಟ್ಟವಾದ ಅರಣ್ಯ. ತಪ್ಪಿಸಿಕೊಳ್ಳಲು ಸುಲಭದ ಮಾರ್ಗ ಇದ್ದದ್ದು ಇದೊಂದೇ. ಹೀಗಾಗಿ, ಉಗ್ರನು ತಪ್ಪಿಸಿಕೊಳ್ಳಲು ಇದೇ ದಾರಿಯಲ್ಲಿ ಬರುವನು ಎಂದು ಡಾಂಗಿ ಅಂದಾಜು ಮಾಡಿದ್ದರು. ಕ್ಯಾಪ್ಟನ್ ಡಾಂಗಿ ಮತ್ತು ಅವರ ಜೊತೆಯ ಕಮ್ಯಾಂಡೋಗಳು ನೀಲಗಿರಿ ಮರಗಳ ಮರೆಯಲ್ಲಿ ಕಾದು ಕುಳಿತರು. ಪ್ರತಿಯೊಬ್ಬ ಕಮ್ಯಾಂಡೋವಿಗೂ ಮತ್ತೊಬ್ಬ ಕಮ್ಯಾಂಡೋ ಜತೆಯಾಗಿದ್ದ. ಕ್ಯಾಪ್ಟನ್ ಡಾಂಗಿ ಜೊತೆ ಇದ್ದದ್ದು 19 ವರ್ಷದ ಪ್ಯಾರಾಟ್ರೂಪರ್ ಮುಖೇಶ್ ಕುಮಾರ್. ತಾವು ಸಿದ್ಧರೆಂದು ಸನ್ನೆ ಮಾಡಿದ ಕೂಡಲೇ, ಪೊಲೀಸರಲ್ಲೊಬ್ಬನು ಮೊದಲ ಮನೆಯ ಮುಂಬಾಗಿಲನ್ನು ತಟ್ಟಿ ಕರೆದನು. ಮುಂದಿನ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು, ಉಗ್ರನು ಬಾಗಿಲು ತೆರೆಯುತ್ತಲೇ ಗುಂಡಿನ ಮಳೆಗರೆಯಬಹುದು! ಸೈನಿಕ ತಂಡವು ಎಲ್ಲಕ್ಕೂ ಸಿದ್ಧವಾಗಿತ್ತು.
ಬಾಗಿಲು ಬಡಿದ ಒಂದೆರಡು ಕ್ಷಣದಲ್ಲೇ ಹಿಂಬಾಗಿಲಿನಿಂದ ಕಾಶ್ಮೀರದ ಪ್ರಾದೇಶಿಕ ಉಡುಪಾದ ಫೆರಾನ್ (ಓವರ್ ಕೋಟು) ತೊಟ್ಟಿದ್ದ ಕಟ್ಟುಮಸ್ತಾದ ಗಡ್ಡಧಾರಿ ವ್ಯಕ್ತಿಯೊಬ್ಬ ಹೊರಕ್ಕೋಡಿದ. ಇದು ಕಮ್ಯಾಂಡೊಗಳಲ್ಲಿ ಆತನ ಕುರಿತಾಗಿ ಸಂಶಯ ಉಂಟುಮಾಡಿದರೂ, ಅವರು ಆತನ ಪೂರ್ವಾಪರ ವಿಚಾರಿಸದೆ ಮುಂದುವರಿಯುವಂತಿಲ್ಲ. ತಂಡದ ನಾಯಕನಾದ ಕ್ಯಾಪ್ಟನ್ ಡಾಂಗಿ ದೊಡ್ಡದನಿಯಲ್ಲಿ – “ನೀನು ಯಾರು? ನಿನ್ನ ಪರಿಚಯ ಹೇಳು. ನಿನ್ನ ಬಳಿ ಯಾವುದೇ ಆಯುಧವಿದ್ದಲ್ಲಿ ಕೂಡಲೇ ಅದನ್ನು ಕೆಳಕ್ಕೆಸೆದು ಕೈಮೇಲಕ್ಕೆತ್ತಿ ಶರಣಾಗು” ಎಂದರೂ, ಇದಾವುದೂ ಕೇಳಿಸಲೇ ಇಲ್ಲವೆಂಬಂತೆ ಗಡ್ಡಧಾರಿ ವ್ಯಕ್ತಿ ಹಿಂದಿನ ಆವರಣದ ಮೇಲೆ ಎಡಗೈ ಊರಿ ಹೊರಕ್ಕೆ ನೆಗೆದ. ಬಲಗೈಯ್ಯಲ್ಲಿ ಎ.ಕೆ.47 ಮೆಷಿನ್ ಗನ್ ಹಿಡಿದಿದ್ದ. ಆ ಕಡೆಗೆ ನೆಗೆದ ಕೂಡಲೇ ಕಮ್ಯಾಂಡೋಗಳ ಧ್ವನಿ ಬಂದ ಕಡೆಗೆ ಮೆಷಿನ್ ಗನ್ನಿನಿಂದ ಗುಂಡು ಹಾರಿಸುತ್ತಾ ಮುನ್ನುಗ್ಗಿದ. ಡಾಂಗಿಯವರ ಪ್ರಶ್ನೆಗೆ ಅದೇ ಆತನ ಉತ್ತರವಾಗಿತ್ತು. ಕಮ್ಯಾಂಡೋಗಳ ಮುಂದಿನ ಕ್ರಮಕ್ಕೆ ಹಾದಿ ಸುಗಮವಾಗಿತ್ತು. “ಆತನ ಕಥೆ ಮುಗಿಸುತ್ತೇನೆ” ಎಂದು ತನ್ನ ಸಂಗಡಿಗ ಮುಖೇಶ್ಗೆ ತಿಳಿಸಿದ ಡಾಂಗಿ ಸೂಕ್ತ ಸಮಯಕ್ಕೆ ಕಾದರು. ಉಗ್ರ ಸತತವಾಗಿ ಗುಂಡು ಹಾರಿಸುತ್ತಿದ್ದ. ಹೀಗಾಗಿ ತಕ್ಷಣವೇ ಮುನ್ನುಗ್ಗುವುದು ಆತ್ಮಹತ್ಯೆಗೆ ಸಮಾನ ಎನ್ನುವುದು ಅವರಿಗೆ ತಿಳಿದಿತ್ತು. ಎಂಟು ಸೆಕಂಡುಗಳ ಕಾಲ ಸತತ ಗುಂಡು ಹಾರಿಸಿದ ನಂತರ ಉಗ್ರನ ಮೆಷಿನ್ ಗನ್ನಿನ ಮ್ಯಾಗಜೀನ್ನಲ್ಲಿದ್ದ ಗುಂಡುಗಳು ಮುಗಿದವು. ಆತ ಮ್ಯಾಗಜೀನ್ ಬದಲಿಸಲು ಆರಂಭಿಸಿದ, ಒಂದು ಕ್ಷಣ ಗುಂಡಿನ ಹಾರಾಟ ನಿಂತಿತು. ಈ ಕ್ಷಣಾಕ್ಕಾಗಿಯೇ ಕಾದಿದ್ದ ಡಾಂಗಿ ಮತ್ತು ಮುಖೇಶ್ ಮರದ ಮರೆಯಿಂದ ಹೊರಬಂದು ತಮ್ಮ ಖಿಂಖ-21 ಬಂದೂಕಿನಿಂದ ಗುಂಡು ಹಾರಿಸಿದರು. ಅವರು ಹಾರಿಸಿದ ಒಂದು ಗುಂಡೂ ವ್ಯರ್ಥವಾಗಲಿಲ್ಲ. ಪ್ರತಿಯೊಂದೂ ಉಗ್ರನ ದೇಹವನ್ನು ಹೊಕ್ಕವು, ಆತ ನೆಲಕ್ಕುರುಳುವ ಮೊದಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಕಮ್ಯಾಂಡೋಗಳ ಕಾರ್ಯ ಸಮಾಪ್ತಿಯಾಗಿತ್ತು. ಕಾರ್ಯಾಚರಣೆ ಯಶಸ್ವಿಯಾಗಿತ್ತು. ಹಾಗೆಂದು ಕಮ್ಯಾಂಡೋಗಳು ಭಾವಿಸಿದರು. ಅವರ ಭಾವನೆ ತಪ್ಪಾಗಿತ್ತು!
ಮುಂದಿನ ಒಂದು ನಿಮಿಷ ಎಲ್ಲವೂ ಮೌನವಾಯಿತು. ಉಗ್ರನ ಕಥೆ ಮುಗಿಯಿತೆಂದು ಡಾಂಗಿ ಮತ್ತು ಸಂಗಡಿಗರು ಸಮಾಧಾನಗೊಂಡರು, ಕೆಲವು ಕ್ಷಣ ಎಚ್ಚರ ತಪ್ಪಿದರು. ಇದ್ದಕ್ಕಿದ್ದಂತೆ ಅಲ್ಲಿದ್ದ ಮನೆಯಿಂದ ಇನ್ನಿಬ್ಬರು ಗಡ್ಡಧಾರಿಗಳು ಹೊರಕ್ಕೆ ಧಾವಿಸಿ ಬಂದರು. ಕಮ್ಯಾಂಡೋ ತಂಡಕ್ಕೆ ಇದು ಅನಿರೀಕ್ಷಿತವಾಗಿತ್ತು. ಆ ಉಗ್ರರು ತಪ್ಪಿಸಿಕೊಳ್ಳಲು ಪ್ರಯತ್ನಿಸಲಿಲ್ಲ, ಓಡಿ ಹೋಗಲಿಲ್ಲ. ಡಾಂಗಿ ಮತ್ತು ಸಂಗಡಿಗನೇ ಅವರ ಗುರಿಯಾಗಿದ್ದರು. ಕಮ್ಯಾಂಡೋಗಳಿಗೆ ಏನಾಗುತ್ತಿದೆ ಎನ್ನುವುದು ಅರಿವಿಗೆ ಬರುವ ಮೊದಲೇ ಉಗ್ರರು ಇವರ ಮೇಲೆ ಗುಂಡಿನ ಧಾಳಿ ಪ್ರಾರಂಭಿಸಿದ್ದರು. ಡಾಂಗಿ ಮತ್ತು ಮುಖೇಶ್ ಕೂಡಲೇ ಪಕ್ಕಕ್ಕೆ ನೆಗೆದು ಅಲ್ಲಿದ್ದ ನೀಲಗಿರಿ ಮರದ ಹಿಂದೆ ಅವಿತರು. ಆದರೆ, ಇಬ್ಬರನ್ನೂ ಮರೆಯಾಗಿಸುವಷ್ಟು ಅಗಲವಿರಲಿಲ್ಲ ಆ ಮರ. ನೀಲಗಿರಿ ಮರವು ಇವರ ತಲೆಯನ್ನು ರಕ್ಷಿಸಿದರೂ ಇಡೀ ದೇಹವನ್ನು ರಕ್ಷಿಸಲು ಸಾಧ್ಯವಿರಲಿಲ್ಲ. ಮರದ ಒಂದು ಬದಿಯಿಂದ ಡಾಂಗಿಯ ದೇಹದ ಒಂದು ಪಾಶ್ರ್ವ ಉಗ್ರರ ಗುಂಡಿನ ಧಾಳಿಗೆ ಸಿಗುವಂತಿದ್ದರೆ, ಮುಖೇಶ್ರ ದೇಹದ ಮತ್ತೊಂದು ಪಾಶ್ರ್ವ ಮರದ ಮತ್ತೊಂದು ಬದಿಯಿಂದ ಕಾಣುತ್ತಿತ್ತು.
ಇಬ್ಬರು ಉಗ್ರರೂ ಕರಾರುವಾಕ್ಕಾಗಿ ಗುಂಡನ್ನು ಹಾರಿಸುತ್ತಿದ್ದರು. ಅವರು ಗುರಿ ಹಿಡಿಯುವುದರಲ್ಲಿ ಚೆನ್ನಾಗಿ ಪಳಗಿದ್ದರು ಎನ್ನುವುದು ಅವರ ಗುಂಡಿನ ಧಾಳಿಯ ಪರಿಯಿಂದಲೇ ತಿಳಿಯುತ್ತಿತ್ತು. ಇಬ್ಬರು ಉಗ್ರರು ನುಗ್ಗಿದ್ದು ಕಮ್ಯಾಂಡೋಗಳಿಗೆ ಅನಿರೀಕ್ಷಿತವಾಗಿದ್ದರೂ, ಉಗ್ರರು ಎಲ್ಲವನ್ನೂ ಮೊದಲೇ ಯೋಜನೆ ಮಾಡಿಕೊಂಡಿದ್ದಾರೆ ಎನ್ನುವುದು ನಿಧಾನವಾಗಿ ಸ್ಪಷ್ಟವಾಯಿತು. ಮೊದಲ ಉಗ್ರ ಹಿಂಬಾಗಿಲಿನಿಂದ ಹೊರಕ್ಕೋಡಿ ಆವರಣ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದೂ ಗಾಬರಿಯಿಂದಲ್ಲ, ಅವರ ಯೋಜನೆಯ ಪ್ರಕಾರವೇ. ಆತನನ್ನು ಅಡ್ಡಗಟ್ಟಲು ಪ್ರಯತ್ನಿಸುವ ಮೂಲಕ ಕಮ್ಯಾಂಡೋಗಳು ಇರುವ ಸ್ಥಳ ಉಳಿದಿಬ್ಬರು ಉಗ್ರರಿಗೆ ತಿಳಿಯುತ್ತದೆ. ಮೊದಲ ಉಗ್ರನು ಹತನಾದ ನಂತರ ಕಮ್ಯಾಂಡೋಗಳು ಮೈಮರೆಯುತ್ತಾರೆ. ಆಗ ಉಳಿದಿಬ್ಬರು ಉಗ್ರರು ಇದ್ದಕ್ಕಿದ್ದಂತೆ ಹೊರನುಗ್ಗಿ ಕಮ್ಯಾಂಡೋಗಳನ್ನು ಮುಗಿಸುವುದು. ಡಾಂಗಿ ಮತ್ತು ಮುಖೇಶ್ ಅವರು ಅವಿತಿದ್ದ ತಾಣ ಅರಿತ ಉಗ್ರರಿಗೆ, ಅವರನ್ನು ಮುಗಿಸಿದರೆ ಮಾತ್ರ ತಪ್ಪಿಸಿಕೊಳ್ಳಲು ಸಾಧ್ಯ ಎನ್ನುವುದು ಖಚಿತವಾಗಿತ್ತು. ಏಕೆಂದರೆ, ತಾವು ತಪ್ಪಿಸಿಕೊಳ್ಳಲು ಇರುವ ಏಕೈಕ ಮಾರ್ಗದಲ್ಲಿ ಇವರಿಬ್ಬರು ಅಡ್ಡವಾಗಿ ನಿಂತಿದ್ದಾರೆ. ಈ ಇಬ್ಬರು ಕಮ್ಯಾಂಡೋಗಳನ್ನು ನಿವಾರಿಸಿ ಮುಂದುವರಿದರೆ ಹುಲ್ಗಾವಲು – ಆಳೆತ್ತರ ಬೆಳೆದು ನಿಂತ ಹುಲ್ಲು. ಈ ಹುಲ್ಲಿನ ಮಧ್ಯೆ ಉಗ್ರರು ತಪ್ಪಿಸಿಕೊಳ್ಳುವುದು ಕಾಣುವುದಿಲ್ಲ, ಅಲ್ಲಿಂದ ಮುಂದೆ ತೊರೆ, ಅದನ್ನು ದಾಟಿದರೆ ದಟ್ಟವಾದ ಅರಣ್ಯ. ಉಗ್ರರು ತಪ್ಪಿಸಿಕೊಳ್ಳುವ ಬದಲು ತಮ್ಮ ಮೇಲೆ ಆಕ್ರಮಣ ನಡೆಸುತ್ತಿರುವುದು ಕಂಡಾಗ, ಡಾಂಗಿಯವರಿಗೆ ಉಗ್ರರ ಯೋಜನೆಯ ಅರಿವಾಯಿತು. ತಾವು ಉಗ್ರರಿಂದ ಮೋಸಹೋದೆವೆಂಬುದು ಅರ್ಥವಾದಾಗ ಕೋಪ ಉಕ್ಕಿತು. ತಕ್ಷಣವೇ ಏನಾದರೂ ಮಾಡಬೇಕಿತ್ತು. ಆದರೆ, ಈಗ ಹೊಸ ಯೋಜನೆ ಮಾಡುವ ಅಥವಾ ಈಗಾಗಲೇ ಮಾಡಿರುವ ಯೋಜನೆ ಬದಲಿಸುವ ಸ್ಥಿತಿಯಲ್ಲಿರಲಿಲ್ಲ ಕಮ್ಯಾಂಡೋಗಳು.
ರಷ್ಯಾ ನಿರ್ಮಿತ ಕಲಾಶ್ನಿಕೋವ್ ಮೆಷಿನ್ ಗನ್ನುಗಳಿಂದ ಗುಂಡಿನ ಮಳೆಗರೆಯುತ್ತಾ ಉಗ್ರರು ಕಮ್ಯಾಂಡೋಗಳತ್ತ ನುಗ್ಗಿದರು. ಡಾಂಗಿ ಮತ್ತು ಮುಖೇಶ್ ಉಗ್ರರ ಗುಂಡಿನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನಿಸಿದರು. ಇದ್ದಕ್ಕಿದ್ದಂತೆ ಕ್ಯಾಪ್ಟನ್ ಡಾಂಗಿಯವರ ಎಡ ತೊಡೆ ಸೀಳಿದಂತ ಅನುಭವ, ಪ್ರಾಣ ಹೋಗುವಂತಹ ನೋವು, ಒಂದು ಗುಂಡು ಅವರ ತೊಡೆಯೊಳಗೆ ನುಗ್ಗಿತ್ತು. ಅದಾದ ಮರುಕ್ಷಣದಲ್ಲಿ ಮತ್ತೊಂದು ಗುಂಡು ಅವರ ಸೊಂಟದ ಎಡಪಾಶ್ರ್ವದಲ್ಲಿ ನುಗ್ಗಿತು. ರಕ್ತ ಹರಿಯಲು ಪ್ರಾರಂಭಿಸಿತು. ಗಾಯಗಳ ಕಡೆ ಕ್ಷಣಕಾಲ ಗಮನ ನೀಡಿದ ಡಾಂಗಿಯವರು, ತಮ್ಮ ಸಂಗಡಿಗನ ಕಡೆಗೊಮ್ಮೆ ನೋಡಿದರು. ಮುಖೇಶ್ರಿಗೆ ದೇಹದ ಬಲಭಾಗದಲ್ಲಿ ತೊಡೆ ಮತ್ತು ಸೊಂಟದ ಪಾಶ್ರ್ವದಲ್ಲಿ ಗುಂಡುಗಳು ಹೊಕ್ಕು ರಕ್ತ ಉಕ್ಕಿ ಬರುತ್ತಿತ್ತು! ಸೈನ್ಯಕ್ಕೆ ಸೇರಿ ಕೇವಲ ಒಂದು ವರ್ಷವಾಗಿದ್ದ ಮುಖೇಶರಿಗೆ ಇದೇ ಮೊದಲ ಗುಂಡಿನ ಕಾಳಗ – ದೇಹದೊಳಗೆ ಮೊತ್ತಮೊದಲ ಬಾರಿಗೆ ಗುಂಡು ಹೊಕ್ಕಿದ್ದ ಅವರು ಬಹಳ ಗಾಬರಿಗೊಂಡಿದ್ದರು, ತಮ್ಮ ಕಥೆ ಮುಗಿಯಿತೆಂದೇ ಭಾವಿಸಿದ್ದರೆನ್ನುವುದು ಅವರ ಮುಖದ ಚಹರೆಯಿಂದಲೇ ತಿಳಿಯುತ್ತಿತ್ತು. ಕ್ಯಾಪ್ಟನ್ ಡಾಂಗಿ ಆತನಿಗೆ ಧೈರ್ಯ ಹೇಳಿದರು – “ಕೇವಲ ಎರಡು ಗುಂಡುಗಳು ಕಮ್ಯಾಂಡೋನನ್ನು ಕೊಲ್ಲಲು ಸಾಧ್ಯವಿಲ್ಲ. ಧೈರ್ಯವಾಗಿರು”. ಮುಖೇಶ್ನ ಬಟ್ಟೆಯೆಲ್ಲಾ ರಕ್ತದಿಂದ ತೊಯ್ದಿತ್ತು, ರಕ್ತವಿನ್ನೂ
ಸುರಿಯುತ್ತಿತ್ತು. ಡಾಂಗಿ ಆತನನ್ನು ಎಳೆದು ಪಕ್ಕಕ್ಕೆ ಮಲಗಿಸಿದರು, ಉಗ್ರರ ಗುಂಡುಗಳು ಆತನನ್ನು ತಲುಪದಂತೆ ರಕ್ಷಿಸಿದ ನಂತರ, ಸ್ವಲ್ಪವೇ ದೂರದಲ್ಲಿ ಅಡಗಿದ್ದ ಮತ್ತೊಬ್ಬ ಕಮ್ಯಾಂಡೋವಿಗೆ ಮುಖೇಶ್ರನ್ನು ಉಪಚರಿಸುವಂತೆ ಸಂಜ್ಞೆ ಮಾಡಿ ತಿಳಿಸಿ, ಮತ್ತೆ ಉಗ್ರರತ್ತ ತಮ್ಮ ಗಮನ ಹರಿಸಿದರು.
ತಮ್ಮ TAR-21 ಮೆಷಿನ್ ಗನ್ನನ್ನು ಮರೆಯಿಂದ ಹೊರತೆಗೆದ ಡಾಂಗಿ, ಮುನ್ನುಗ್ಗುತ್ತಿದ್ದ ಉಗ್ರರತ್ತ ಗುಂಡನ್ನು ಹಾರಿಸತೊಡಗಿದರು. ಕೆಲವೇ ಕ್ಷಣದಲ್ಲಿ ಒಬ್ಬ ಉಗ್ರ ನೆಲಕ್ಕುರುಳಿದ, ಆತನ ದೇಹವನ್ನು ಡಾಂಗಿಯವರ ಗುಂಡೊಂದು ಹೊಕ್ಕಿತ್ತು. ಆದರೆ, ಆತನೇನೂ ಸತ್ತಿರಲಿಲ್ಲ. ಆತನೇ ಇವರುಗಳು ಇಷ್ಟು ದಿನ ಹುಡುಕುತ್ತಿದ್ದ ಉಗ್ರ ನಾಯಕ ಅದಿಲ್ ಅಹ್ಮದ್ ಮಿರ್. ಕೆಳಕ್ಕೆ ಬಿದ್ದಿದ್ದ ಉಗ್ರನತ್ತ ತಮ್ಮ ಗುರಿಯನ್ನು ತಿರುಗಿಸಿ ಗುಂಡು ಹಾರಿಸಬೇಕೆನ್ನುವಷ್ಟರಲ್ಲಿ ಮತ್ತೊಬ್ಬ ಉಗ್ರ ಹಾರಿಸಿದ ಗೊಂಡೊಂದು ಡಾಂಗಿಯವರ ಮೆಷಿನ್ ಗನ್ನಿಗೆ ಬಡಿಯಿತು. ಮೆಷಿನ್ ಗನ್ ಕುದುರೆ ಜಾಮ್ ಆಗಿಹೋಯಿತು. ಗುಂಡು ಹಾರಿಸಲು ಸಾಧ್ಯವಾಗಲಿಲ್ಲ. ಇದೀಗ ಬಹಳ ದೊಡ್ಡ ಅಪಾಯ ಎದುರಾಗಿತ್ತು. ಕೈಯ್ಯಲ್ಲಿ ಯಾವುದೇ ಆಯುಧವಿಲ್ಲದೆ ಉಗ್ರರ ಆಕ್ರಮಣಕ್ಕೆ ಇವರು ಸುಲಭ ತುತ್ತಾಗಲಿದ್ದರು. ಅರೆಕ್ಷಣದಲ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಡಾಂಗಿ, ಪಕ್ಕಕ್ಕೆ ನೆಗೆದು ಮುಖೇಶ್ರ ಗನ್ನನ್ನು ತೆಗೆದುಕೊಂಡರು. ಆದರೆ, ಅದರಲ್ಲಿದ್ದ ಮ್ಯಾಗಜೀನ್ ಖಾಲಿಯಾಗಿತ್ತು. ತಮ್ಮ ಬಳಿಯಿದ್ದ ಮ್ಯಾಗಜೀನ್ ಅನ್ನು ಅದಕ್ಕೆ ಸೇರಿಸಿ ಗುಂಡು ಹಾರಿಸಲು ಸನ್ನದ್ದವಾಗುವಷ್ಟರಲ್ಲಿ, ಮೂರನೆಯ ಉಗ್ರ ಹುಲ್ಲುಗಾವಲಿನೊಳಗೆ ನುಗ್ಗಿ ತಪ್ಪಿಸಿಕೊಳ್ಳುತ್ತಿದ್ದ. ಕೆಳಗೆ ಬಿದ್ದಿದ್ದ ಅದಿಲ್ ದೇಹದಲ್ಲಿ ಇನ್ನೂ ಸ್ವಲ್ಪ ಶಕ್ತಿಯಿದ್ದಿತು. ಪಕ್ಕದಲ್ಲೇ ಬಿದ್ದಿದ್ದ ಕಲಾಶ್ನಿಕೋವ್ ರೈಫಲ್ ತೆಗೆದುಕೊಂಡ ಆತ, ಡಾಂಗಿಯವರತ್ತ ಗುಂಡು ಹಾರಿಸಿದ. ಅದು ಡಾಂಗಿಯವರ ಕೆನ್ನೆಯನ್ನು ಉಜ್ಜಿಕೊಂಡಿ ಹೋಯಿತು, ಸಣ್ಣ ಗಾಯವಾಯಿತು. ಡಾಂಗಿಯವರ ಅದೃಷ್ಟ ಚೆನ್ನಾಗಿತ್ತು – ಅದೇನಾದರೂ ಒಂದಿಂಚು ಪಕ್ಕಕ್ಕೆ ಹೋಗಿದ್ದರೆ ತಲೆಯೇ ಸಿಡಿದು ಹೋಗುತ್ತಿತ್ತು. ತಕ್ಷಣವೇ ಡಾಂಗಿ ಉಗ್ರನ ದೇಹದೊಳಗೆ ಗುಂಡುಗಳನ್ನು ನುಗ್ಗಿಸಿದರು. ಅದಿಲ್ ಸ್ಥಳದಲ್ಲೇ ಅಸುನೀಗಿದ.
ಈಗ ಮೂರನೆಯ ಉಗ್ರನತ್ತ ಗಮನ ಹರಿಸಿದರು. ಆತ ಎಲ್ಲೂ ಕಾಣುತ್ತಿರಲಿಲ್ಲ. ಡಾಂಗಿಯವರ ದೇಹದ ಗಾಯಗಳಿಂದ ರಕ್ತ ಸೋರಿ ಹೋಗುತ್ತಿತ್ತು, ಅವರು ನಿತ್ರಾಣರಾಗುತ್ತಿದ್ದರು.
ಆದರೆ ತಮ್ಮ ದೇಹದ ಕಡೆಗೆ ಗಮನ ನೀಡಲು ಅವರಿಗೆ ಸಮಯವಿರಲಿಲ್ಲ. ಮನಸ್ಸೆಲ್ಲವೂ ತಪ್ಪಿಸಿಕೊಂಡು ಹೋಗಿದ್ದ ಉಗ್ರನ ಕಡೆಯೇ ಇದ್ದಿತು. ಆತ ತಪ್ಪಿಸಿಕೊಂಡು ಹೋಗಿದ್ದ ದಿಕ್ಕನ್ನು ಇವರು ಕಂಡಿದ್ದರು. ಸ್ವಲ್ಪವೂ ತಡ ಮಾಡದೆ ಅದೇ ದಾರಿಯಲ್ಲಿ ಧಾವಿಸಿದರು. ಎಲ್ಲಿಯೂ ಆ ಉಗ್ರನು ಕಾಣಲಿಲ್ಲ, ಎಲ್ಲೆಡೆಯೂ ಎತ್ತರಕ್ಕೆ ಬೆಳೆದಿದ್ದ ಹುಲ್ಲು. ದೂರದಲ್ಲೆಲ್ಲೋ ಹುಲ್ಲುಗಳು ಅಲುಗಾಡುತ್ತಿರುವುದು ಗಮನಕ್ಕೆ ಬಂದಿತು. ಕೂಡಲೇ ಆ ದಿಕ್ಕಿನತ್ತ ಓಡಿದರು. ಬೆನ್ನ ಮೇಲೆ ಆಯುಧ-ಸರಂಜಾಮುಗಳ ದೊಡ್ಡ ಚೀಲವನ್ನು ಹಾಕಿಕೊಂಡು ನೆಲದ ಮೇಲೆ ತೆವಳಿಕೊಂಡು ಹೋಗುತ್ತಿದ್ದ ಉಗ್ರನು ಕಾಣಿಸಿದ. ತನ್ನ ನಾಯಕ ಸತ್ತ ಎನ್ನುವುದು ಸ್ಪಷ್ಟವಾದ ಕೂಡಲೇ, ಆ ಉಗ್ರನಿಗಿದ್ದದ್ದು ಒಂದೇ ಗುರಿ, ಆದಷ್ಟು ಬೇಗನೆ ಅಲ್ಲಿಂದ ತಪ್ಪಿಸಿಕೊಂಡು ಹೋಗುವುದು. ಡಾಂಗಿಯವರ ಗಮನ ಬೇರೆಡೆ ಇದ್ದುದ್ದರಿಂದ ಉಗ್ರನಿಗೆ ತಪ್ಪಿಸಿಕೊಂಡು ಹೋಗಲು ಅವಕಾಶವಾಗಿತ್ತು.
ಆದರೆ, ಆತ ತೊರೆಯನ್ನು ತಲಪುವ ಮೊದಲೇ ಡಾಂಗಿಯವರು ಅಲ್ಲಿ ಪ್ರತ್ಯಕ್ಷರಾದರು. ಏನಾಗುತ್ತಿದೆ ಎನ್ನುವುದು ಅರಿವಾಗುವಷ್ಟರಲ್ಲಿ ಡಾಂಗಿಯವರ ಬಂದೂಕಿನಿಂದ ಹಾರಿದ ಗುಂಡುಗಳು ಮೂರನೆಯ ಉಗ್ರನ ಕಥೆಯನ್ನು ಮುಗಿಸಿದ್ದವು.
ಇಡೀ ಕಾರ್ಯಾಚರಣೆ ಕೇವಲ ಇಪ್ಪತ್ತು ನಿಮಿಷಗಳಲ್ಲಿ ಮುಗಿದಿತ್ತು. ಮೊದಲ ಉಗ್ರ ಮನೆಯ ಹಿಂಬಾಗಿಲಿನಿಂದ ಹೊರಬಿದ್ದ ಸಮಯದಿಂದ ಕಡೆಯ ಉಗ್ರನ ಪ್ರಾಣಪಕ್ಷಿ ಹಾರಿಹೋದ ಸಮಯದ ಅಂತರ ಕೇವಲ ಎಂಟು ನಿಮಿಷಗಳು. ಮಿಂಚಿನವೇಗದ ಕಾರ್ಯಾಚರಣೆ ಇದಾಗಿತ್ತು. ಮೂವರು ಉಗ್ರರು ಅಸು ನೀಗಿದ್ದರು. ಇಬ್ಬರು ಕಮ್ಯಾಂಡೋಗಳಿಗೆ ಬಡಿದಿದ್ದ ಒಟ್ಟು ಗುಂಡುಗಳ ಸಂಖ್ಯೆ ಐದು. ಮುಖೇಶರ ದೇಹದಿಂದ ಸಾಕಷ್ಟು ರಕ್ತ ಹರಿದು ಹೋಗಿದ್ದರೂ ಅವರಿನ್ನೂ ಎಚ್ಚರ ತಪ್ಪಿರಲಿಲ್ಲ. ಅಲ್ಲಿಗೆ ವಾಪಸ್ ಹೋದ ಡಾಂಗಿಯವರು, “ನಾನು ಹೇಳಲಿಲ್ಲವೇ, ಎರಡು ಗುಂಡುಗಳು ಕಮ್ಯಾಂಡೋ ಪ್ರಾಣ ತೆಗೆಯಲಾರವು” ಎಂದು ಚಟಾಕಿ ಹಾರಿಸಿದರು. ತಾವು ಬಂದಿದ್ದ ಸೈನ್ಯದ ವಾಹನದಲ್ಲಿಯೇ ತಮ್ಮ ಸೈನಿಕ ಠಾಣೆಗೆ ಎಲ್ಲರೂ ಮರಳಿದರು. ಸೈನ್ಯದ ಹೆಲಿಕಾಪ್ಟರ್ ಕಾಯುತ್ತಿತ್ತು – ಇಬ್ಬರು ಗಾಯಾಳು ಕಮ್ಯಾಂಡೋಗಳನ್ನು ಶ್ರೀನಗರದ 92 ಬೇಸ್ ಆಸ್ಪತ್ರೆಗೆ ಹೊತ್ತೊಯ್ಯಲು. ಕೆಲವು ದಿನಗಳ ಉಪಚಾರದ ನಂತರ ಗಾಯಗಳು ವಾಸಿಯಾದವು, ಇಬ್ಬರೂ ಕೆಲಸಕ್ಕೆ ಮತ್ತೆ ಹಾಜರ್!
ಅದಾದ ಆರು ತಿಂಗಳ ನಂತರ, 1915 ರ ಜನವರಿ 25 ರಂದು ಭಾರತ ಸರ್ಕಾರ ಕ್ಯಾಪ್ಟನ್ ಡಾಂಗಿಯವರಿಗೆ ‘ಕೀರ್ತಿ ಚಕ್ರ’ ಘೋಷಿಸಿತು. ಮಾರ್ಚ್ 21ರಂದು ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿಗಳು ಡಾಂಗಿಯವರಿಗೆ ಪ್ರಶಸ್ತಿ ತೊಡಿಸಿದರು. ಇಪ್ಪತೈದು ವರ್ಷ ವಯಸ್ಸಿನ ಕ್ಯಾಪ್ಟನ್ ಜಯದೇವ ಡಾಂಗಿಯವರಿಗೆ ಕೇವಲ ನಾಲ್ಕು ತಿಂಗಳ ಹಿಂದಷ್ಟೇ ಮದುವೆಯ ನಿಶ್ಚಿತಾರ್ಥವಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಮದುವೆ ನಿಶ್ಚಯವಾಗಿತ್ತು. ಕಾರ್ಯಾಚರಣೆಯಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದರಿಂದ ಮದುವೆ ಮುಂದಕ್ಕೆ ಹೋಯಿತು, ಡಿಸೆಂಬರಿನಲ್ಲಿ ಮದುವೆಯ ಕಾರ್ಯಕ್ರಮ ಜರುಗಿತು. ಮಾರ್ಚ್ 21ರಂದು ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆಯುವಾಗ ಅವರ ಮಡದಿ ರೀತು ಡಾಂಗಿ ಅವರೂ ಉಪಸ್ಥಿತರಿದ್ದರು. ಕಮ್ಯಾಂಡೋವಿನ ಜೀವನ ಸುಖದ ಸುಪ್ಪತ್ತಿಗೆಯಲ್ಲ, ಅದೊಂದು ಮುಳ್ಳಿನ ಹಾಸಿಗೆ. ಯಾವ ಸಮಯದಲ್ಲೂ ಕರ್ತವ್ಯದ ಕರೆ ಬರಬಹುದು, ಎಂತಹ ಅಪಾಯಕ್ಕಾದರೂ ತಾನು ಮತ್ತು ತನ್ನ ಕುಟುಂಬ ಸಿದ್ಧವಿರಬೇಕೆನ್ನುವುದು ಮದುವೆಯಾಗುವ ಮೊದಲೇ ಈ ಯುವತಿಗೆ ಅರ್ಥ ಮಾಡಿಸಿದ ಘಟನೆ ಇದಾಯಿತು!!