೧೯೬೨ರ ಯುದ್ಧದ ಕಾರಣವನ್ನು ಹುಡುಕುತ್ತಾ ಹೋದರೆ ಅಲ್ಲಿಂದ ಒಂದು ದಶಕದಷ್ಟು ಹಿಂದಕ್ಕೆ ಹೋಗುತ್ತೇವೆ. ೧೯೫೦ರ ಅಕ್ಟೋಬರ್ ೭ರಂದು ಚೀನಾದ ಲಿಬರೇಷನ್ ಆರ್ಮಿ ಇದ್ದಕ್ಕಿದ್ದಂತೆ ಟಿಬೆಟ್ ಪ್ರವೇಶಿಸಿತು. ಒಳನುಗ್ಗಿದ ಚೀನಾ ಪಡೆಗಳನ್ನು ತಡೆಯುವ ಸ್ಥಿತಿಯಲ್ಲಿ ಟಿಬೆಟ್ ಇರಲಿಲ್ಲ, ಅದು ಭಾರತದ ಸಹಾಯವನ್ನು ಯಾಚಿಸಿತು. ಆದರೆ, ಚೀನಾವನ್ನು ಎದುರುಹಾಕಿಕೊಳ್ಳಲು ಸಿದ್ಧವಿರದ ಜವಾಹರಲಾಲ್ ನೆಹರೂ ಸರ್ಕಾರ ಯಾವುದೇ ರೀತಿಯ ಸಹಾಯವನ್ನು ನಿರಾಕರಿಸಿತು; ಚೀನಾದೊಂದಿಗೆ ಶಾಂತಿಯುತ ಸಂಧಾನ ಮಾಡಿಕೊಳ್ಳಿ ಎಂದು ಬಿಟ್ಟಿ ಸಲಹೆ ನೀಡಿತು. ಈ ಪ್ರಸಂಗದಲ್ಲಿ ಅಂದಿನ ಭಾರತೀಯ ನಾಯಕರ ದೂರದೃಷ್ಟ್ಯಭಾವ ಕಣ್ಣಿಗೆ ರಾಚುವಂತಿದೆ.
೧೯೬೨ರ ಭಾರತ-ಚೀನಾ ಯುದ್ಧವು ಸ್ವತಂತ್ರ ಭಾರತದ ಇತಿಹಾಸದ ಅತ್ಯಂತ ಕಡಮೆ ಅವಧಿಯ ಯುದ್ಧವೆಂದು ದಾಖಲಾದರೂ, ಭಾರತದ ಪಾಲಿಗೆ ಆ ಯುದ್ಧ ಅತ್ಯಂತ ಅಪಮಾನಕರ ಘಟನೆಯೆಂಬುದೂ ಕಟು ವಾಸ್ತವವಾಗಿದೆ. ೧೯೬೨ರ ಅಕ್ಟೋಬರ್ ೨೦ರಂದು ಚೀನಾ ಇದ್ದಕ್ಕಿದ್ದಂತೆ ಭಾರತದ ಮೇಲೆ ಆಕ್ರಮಣ ನಡೆಸಿತು. ಎರಡು ಸ್ಥಳಗಳಲ್ಲಿ ಚೀನಾದ ಸೈನ್ಯವು ಭಾರತದೊಳಕ್ಕೆ ನುಗ್ಗಿತು. ಅರುಣಾಚಲಪ್ರದೇಶದ ತವಾಂಗ್ ಜಿಲ್ಲೆಯಲ್ಲಿರುವ ಭಾರತ-ಚೀನಾ ಗಡಿಯ ಸಮೀಪದ ನಮ್ಕಾಚು ಕಣಿವೆಯ ಪ್ರದೇಶ ಮೊದಲನೆಯದಾದರೆ, ಸಿಕ್ಕಿಂನ ನಥುಲಾ ಪಾಸ್ ಪ್ರದೇಶವು ಎರಡನೆಯದು. ೮೦,೦೦೦ದಷ್ಟು ಬೃಹತ್ ಸಂಖ್ಯೆಯ ಚೀನಾ ಸೈನ್ಯದ ಮುಂದೆ ಭಾರತದ ೨೦,೦೦೦ ಸೈನಿಕರ ಬಲ ಏನೇನೂ ಸಾಲದಾಯಿತು. ಚೀನೀಯರ ಮುಂದೆ ಭಾರತೀಯ ಸೈನಿಕರು ಹತಾಶರಾಗಬೇಕಾಯಿತು. ಗಡಿಯಲ್ಲಿದ್ದ ಭಾರತೀಯ ಸೇನಾಪಡೆಗಳು ಕೆಲವು ಗಂಟೆಗಳು ಕೂಡಾ ಚೀನಾ ಸೇನೆಯನ್ನು ತಡೆಯಲು ಸಾಧ್ಯವಾಗಲಿಲ್ಲ. ಅಲ್ಲಿಂದ ಮುಂದೆ ಅಸ್ಸಾಂ ತನಕ ಚೀನಾ ಸೈನ್ಯವನ್ನು ತಡೆಯುವವರಿಲ್ಲ! ಅದೃಷ್ಟವಶಾತ್ ಚೀನಾ ಅಸ್ಸಾಂ ಒಳಗೆ ನುಗ್ಗಲು ಪ್ರಯತ್ನಿಸಲಿಲ್ಲ, ಹೆಚ್ಚು ದಿನ ಯುದ್ಧವನ್ನೂ ಮುಂದುವರಿಸಲಿಲ್ಲ. ಯಾವ ರೀತಿ ಅನಿರೀಕ್ಷಿತವಾಗಿ ಒಳನುಗ್ಗಿತೋ, ಅಷ್ಟೇ ಅನಿರೀಕ್ಷಿತವಾಗಿ ವಾಪಸ್ಸಾಯಿತು. ೧೯೬೨ರ ಅಕ್ಟೋಬರ್ ೨೦ರಂದು ಪ್ರಾರಂಭವಾದ ಯುದ್ಧ ನವೆಂಬರ್ ೨೧ರಂದು ಮುಕ್ತಾಯಗೊಂಡಿತು: ಕೇವಲ ೩೩ ದಿನಗಳು! ಒಟ್ಟಿನಲ್ಲಿ ಭಾರತವು ಯುದ್ಧದಲ್ಲಿ ಸೋತಿತು, ಜಗತ್ತಿನ ಮುಂದೆ ತಲೆತಗ್ಗಿಸುವಂತಾಯಿತು. ಭಾರತದ ಪಾಲಿಗೆ ಇದೊಂದು ಮರೆಯಲಾರದ ಮತ್ತು ಎಂದೆಂದೂ ಮರೆಯಬಾರದ ಮಹತ್ತ್ವದ ಘಟನೆಯಾಗಿದೆ. ಈ ಯುದ್ಧವು ಯಾವ ಕಾರಣಕ್ಕಾಗಿ ನಡೆಯಿತು, ಭಾರತವು ಏತಕ್ಕಾಗಿ ಸೋತಿತು ಎನ್ನುವುದನ್ನು ವಿಶ್ಲೇಷಿಸುವುದು ಉಪಯುಕ್ತ.
ಗಡಿ ವಿವಾದ – ಮೆಕ್ಮಹೊನ್ ಗಡಿರೇಖೆ
ಮೊಟ್ಟಮೊದಲನೆಯದಾಗಿ ಎರಡೂ ದೇಶಗಳ ನಡುವೆ ಇರುವ ಗಡಿರೇಖೆಯೆ ಅಸ್ಪಷ್ಟವಾಗಿದೆ; ಈ ವಿಷಯದಲ್ಲಿ ಬಹಳ ಸಮಯದಿಂದ ವಿವಾದಗಳು ನಡೆದಿವೆ. ಈ ವಿವಾದಗಳೇ ೧೯೬೨ರ ಯುದ್ಧಕ್ಕೆ ಮೂಲ ಕಾರಣ. ಭಾರತ ಮತ್ತು ಚೀನಾ ದೇಶಗಳು ೩೪೮೮ ಕಿಲೋಮೀಟರ್ ಉದ್ದದಷ್ಟು ಗಡಿಯನ್ನು ಹಂಚಿಕೊಂಡಿವೆ. ಎರಡೂ ದೇಶಗಳ ನಡುವೆ ಹಿಮಾಲಯ ಪರ್ವತಶ್ರೇಣಿಯ ದುರ್ಗಮ ಪ್ರದೇಶಗಳಿವೆ. ಹೀಗಾಗಿ, ಅನೇಕ ಸ್ಥಳಗಳಲ್ಲಿ ಗಡಿರೇಖೆ ಸ್ಪಷ್ಟವಾಗಿಲ್ಲ. ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ಚೀನಾವು ಟಿಬೆಟ್ ತನಗೆ ಸೇರಿದ್ದೆಂದು ವಾದಿಸತೊಡಗಿತು. ಈ ವಿಷಯದ ಇತ್ಯರ್ಥಕ್ಕಾಗಿ ೧೯೧೩-೧೪ರಲ್ಲಿ ಸಿಮ್ಲಾದಲ್ಲಿ ಬ್ರಿಟಿಷರು ಒಂದು ಸಭೆ ಕರೆದರು. ಆ ಸಭೆಯಲ್ಲಿ ಭಾರತವನ್ನು ಆಳುತ್ತಿದ್ದ ಬ್ರಿಟಿಷರು, ಚೀನಾ ಮತ್ತು ಟಿಬೆಟ್ ಭಾಗವಹಿಸಿದವು.
ಆ ಸಭೆಯಲ್ಲಿ ಆದ ಒಪ್ಪಂದದಂತೆ ಎರಡೂ ದೇಶಗಳ ಗಡಿರೇಖೆಯನ್ನು ಗುರುತಿಸುವುದೆಂದು ನಿಶ್ಚಯಿಸಲಾಯಿತು. ಈ ಒಪ್ಪಂದಕ್ಕೆ ಬ್ರಿಟಿಷರು ಮತ್ತು ಟಿಬೆಟಿಯನ್ನರು ಒಪ್ಪಿದರೂ, ಚೀನಾ ಒಪ್ಪಲಿಲ್ಲ. ಚೀನಾದ ಅಸಮ್ಮತಿಗೆ ತಲೆಕೆಡಿಸಿಕೊಳ್ಳದ ಬ್ರಿಟಿಷರು, ಗಡಿರೇಖೆಯನ್ನು ಗುರುತಿಸುವ ಮತ್ತು ಅದನ್ನು ದಾಖಲಿಸುವ ಕೆಲಸಕ್ಕೆ ಕೈಹಾಕಿದರು. ಈ ಕೆಲಸವನ್ನು ಲೆಫ್ಟಿನೆಂಟ್-ಕರ್ನಲ್ ಸರ್ ಆರ್ಥರ್ ಹೆನ್ರಿ ಮೆಕ್ಮಹೊನ್ ಅವರಿಗೆ ನೀಡಲಾಯಿತು. ಬ್ರಿಟಿಷರ ಅಧೀನವಾಗಿದ್ದ ಭಾರತೀಯ ಸೈನ್ಯದ ಅಧಿಕಾರಿಯಾಗಿದ್ದ ಅವರು, ಬ್ರಿಟಿಷ್ ಸರ್ಕಾರದಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದವರು. ೧೯೧೩-೧೪ರಲ್ಲಿ ಸಿಮ್ಲಾದಲ್ಲಿ ನಡೆದ ಸಭೆಯಲ್ಲಿ ಅವರು ಮಹತ್ತ್ವದ ಪಾತ್ರ ವಹಿಸಿದರು. ಎರಡೂ ದೇಶಗಳ ನಡುವಣ ಗಡಿಯನ್ನು ಸರಿಯಾಗಿ ಗುರುತಿಸುವ ಸಲಹೆಯನ್ನು ನೀಡಿದ್ದು ಮೆಕ್ಮಹೊನ್ ಅವರೇ. ಸರ್ಕಾರವು ಗಡಿರೇಖೆಯನ್ನು ಗುರುತಿಸುವ ಕೆಲಸದ ಜವಾಬ್ದಾರಿಯನ್ನು ಮೆಕ್ಮಹೊನ್ ಅವರಿಗೇ ನೀಡಿತು. ಹೀಗಾಗಿ, ಈ ಗಡಿರೇಖೆಯು ಮೆಕ್ಮಹೊನ್ ರೇಖೆ ಎಂದೇ ಪ್ರಸಿದ್ಧವಾಯಿತು. ಆದರೆ ಅವರೇನೂ ಆ ಪ್ರದೇಶಕ್ಕೆ ಪ್ರತ್ಯಕ್ಷ ಭೇಟಿ ನೀಡಿ, ಸರ್ವೇಕ್ಷಣೆ ನಡೆಸಿದ ನಂತರ ಗಡಿರೇಖೆಯನ್ನು ನಿರ್ಧರಿಸಲಿಲ್ಲ; ನಕ್ಷೆಯೊಂದನ್ನು ತನ್ನ ಮುಂದಿಟ್ಟುಕೊಂಡು, ಹಿಂದಿನ ಕೆಲವು ವರದಿಗಳನ್ನು ನೋಡಿಕೊಂಡು ಗಡಿರೇಖೆ ಬರೆದರು. ನಕ್ಷೆಯ ಮೇಲೆ ಅವರು ಗುರುತಿಸಿದ ಗಡಿರೇಖೆಯು ಹಿಮಾಲಯದ ದುರ್ಗಮ ಪರ್ವತಶಿಖರಗಳು, ಕಣಿವೆಗಳು ಹಾಗೂ ಸರೋವರಗಳ ಮೂಲಕ ಹಾದುಹೋಗುತ್ತದೆ. ಚಳಿಗಾಲದಲ್ಲಿ ತೀವ್ರ ಹಿಮಪಾತಕ್ಕೊಳಗಾಗುವ, ಭೂಕುಸಿತಕ್ಕೊಳಗಾಗುವ ಈ ಪ್ರದೇಶಗಳು ಆಗಾಗ್ಗೆ ಬದಲಾಗುತ್ತಲೇ ಇರುತ್ತವೆ, ಇಂದಿದ್ದಂತೆ ನಾಳೆ ಇರುವ ಖಚಿತತೆ ಇಲ್ಲ. ಹೀಗಾಗಿ ಗಡಿರೇಖೆ ಎಲ್ಲಿ ಹಾದುಹೋಗುತ್ತದೆ ಎಂಬ ವಿಷಯದಲ್ಲಿ ಎರಡೂ ದೇಶಗಳಿಗೆ ಅನೇಕ ಬಾರಿ ವಿವಾದಗಳು ನಡೆದಿವೆ.
ಟಿಬೆಟನ್ನು ಆಕ್ರಮಿಸಿಕೊಂಡ ಚೀನಾ
೧೯೬೨ರ ಯುದ್ಧದ ಕಾರಣವನ್ನು ಹುಡುಕುತ್ತಾ ಹೋದರೆ ಅಲ್ಲಿಂದ ಒಂದು ದಶಕದಷ್ಟು ಹಿಂದಕ್ಕೆ ಹೋಗುತ್ತೇವೆ. ೧೯೫೦ರ ಅಕ್ಟೋಬರ್ ೭ರಂದು ಚೀನಾದ ಲಿಬರೇಷನ್ ಆರ್ಮಿ ಇದ್ದಕ್ಕಿದ್ದಂತೆ ಟಿಬೆಟ್ ಪ್ರವೇಶಿಸಿತು. ಒಳನುಗ್ಗಿದ ಚೀನಾ ಪಡೆಗಳನ್ನು ತಡೆಯುವ ಸ್ಥಿತಿಯಲ್ಲಿ ಟಿಬೆಟ್ ಇರಲಿಲ್ಲ, ಅದು ಭಾರತದ ಸಹಾಯವನ್ನು ಯಾಚಿಸಿತು. ಆದರೆ, ಚೀನಾವನ್ನು ಎದುರುಹಾಕಿಕೊಳ್ಳಲು ಸಿದ್ಧವಿರದ ಜವಾಹರಲಾಲ್ ನೆಹರೂ ಸರ್ಕಾರ ಯಾವುದೇ ರೀತಿಯ ಸಹಾಯವನ್ನು ನಿರಾಕರಿಸಿತು; ಚೀನಾದೊಂದಿಗೆ ಶಾಂತಿಯುತ ಸಂಧಾನ ಮಾಡಿಕೊಳ್ಳಿ ಎಂದು ಬಿಟ್ಟಿ ಸಲಹೆ ನೀಡಿತು. ಈ ಪ್ರಸಂಗದಲ್ಲಿ ಅಂದಿನ ಭಾರತೀಯ ನಾಯಕರ ದೂರದೃಷ್ಟ್ಯಭಾವ ಕಣ್ಣಿಗೆ ರಾಚುವಂತಿದೆ. ಶತಮಾನಗಳ ಕಾಲ ಭಾರತ ಮತ್ತು ಚೀನಾದ ನಡುವೆ ತಡೆಗೋಡೆಯಂತೆ (buffer zone) ಇತ್ತು ಟಿಬೆಟ್. ಬೌದ್ಧರ ರಾಜ್ಯವಾದ ಟಿಬೆಟ್ ಸ್ವತಂತ್ರವಾಗಿತ್ತು ಮತ್ತು ಭಾರತಕ್ಕೆ ಅನುಕೂಲಕರವಾಗಿತ್ತು. ಚೀನಾವು ಭಾರತದತ್ತ ನುಗ್ಗದಂತೆ ಅದೊಂದು ತಡೆಗೋಡೆಯಾಗಿತ್ತು. ಇದೀಗ ಚೀನಾವು ಟಿಬೆಟನ್ನು ಆಕ್ರಮಿಸಿಕೊಂಡಿದ್ದರಿಂದ ಚೀನಾದ ಗಡಿ ನಮ್ಮ ಮನೆ ಬಾಗಿಲಿಗೇ ಬಂದು ನಿಂತಿತು, ಭಾರತದ ಪಾಲಿಗೆ ಇದು ಮುಂಬರುವ ಅಪಾಯದ ಮುನ್ಸೂಚನೆ ಎನ್ನುವುದನ್ನು ನಮ್ಮ ನಾಯಕರು ಅರ್ಥ ಮಾಡಿಕೊಳ್ಳಬೇಕಿತ್ತು. ಅಂದಿನ ಅನೇಕ ನಾಯಕರು ನೆಹರೂ ಸರ್ಕಾರವನ್ನು ಮುಂದಿನ ಅಪಾಯದ ಕುರಿತಾಗಿ ಎಚ್ಚರಿಸಿದರು. ಆದರೆ, ಅದಾವುದಕ್ಕೂ ನೆಹರೂ ಅವರು ಕವಡೆ ಕಿಮ್ಮತ್ತು ನೀಡಲಿಲ್ಲ. ಟಿಬೆಟ್ಟಿಗೆ ಸೈನ್ಯವನ್ನು ಕಳುಹಿಸಲು ಭಾರತಕ್ಕೆ ಯಾವ ಅಧಿಕಾರವಿದೆ? ಟಿಬೆಟ್ ಸ್ವತಂತ್ರವಾಗಿದ್ದರೇನು, ಚೀನಾದ ಪಾಲಾದರೇನು, ನಾನು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಇದು ನೆಹರೂ ಅವರ ಅಂದಿನ ಪ್ರತಿಕ್ರಿಯೆ.
ಟಿಬೆಟ್ ಪೂರ್ವೇತಿಹಾಸ
ಟಿಬೆಟ್ ಎಂದೂ ಚೀನಾದ ಭಾಗವಾಗಿರಲಿಲ್ಲ. ಆದರೆ ಚೀನಾ ಮಾತ್ರ ಟಿಬೆಟ್ ತನಗೆ ಸೇರಿದ್ದೆಂದು ಹೇಳುತ್ತಲೇ ಇತ್ತು. ಆ ಸಮಯದಲ್ಲಿ ಚೀನಾ ಪ್ರಬಲ ರಾಷ್ಟ್ರವೇನಾಗಿರಲಿಲ್ಲ, ಜಗತ್ತನ್ನು ಆಳುತ್ತಿದ್ದವರು ಬ್ರಿಟಿಷರು. ಹೀಗಾಗಿ, ಚೀನಾದ ಮಾತಿಗೆ ಯಾರೂ ಹೆಚ್ಚಿನ ಬೆಲೆ ನೀಡಲಿಲ್ಲ. ೧೯೧೩ರಲ್ಲಿ ಟಿಬೆಟ್ ತಾನು ಪೂರ್ಣ ಸ್ವತಂತ್ರ ಎಂದು ಘೋಷಿಸಿಕೊಂಡಿತು. ಇದರಿಂದ ಟಿಬೆಟ್ ಮತ್ತು ಚೀನಾ ನದುವೆ ಎದ್ದ ವಿವಾದವನ್ನು ಬಗೆಹರಿಸಲು ಬ್ರಿಟಿಷರು ತ್ರಿಪಕ್ಷೀಯ ಸಭೆ ಕರೆದರು. ೧೯೧೪ರಲ್ಲಿ ಸಿಮ್ಲಾದಲ್ಲಿ ನಡೆದ ಬ್ರಿಟಿಷ್-ಟಿಬೆಟ್-ಚೀನಾ ತ್ರಿಪಕ್ಷೀಯ ಸಭೆಯಲ್ಲಿ ಟಿಬೆಟ್ ಒಂದು ಸರ್ವತಂತ್ರ ಸ್ವತಂತ್ರ ರಾಷ್ಟ್ರ, ಅದರ ಆಡಳಿತದಲ್ಲಿ ಚೀನಾ ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ, ಚೀನಾಗೆ ಟಿಬೆಟ್ ಮೇಲೆ ಯಾವುದೇ ಅಧಿಕಾರ ಇರುವುದಿಲ್ಲ, ಚೀನಾ ಟಿಬೆಟ್ಟಿಗೆ ಸೈನ್ಯವನ್ನು ಕಳುಹಿಸುವಂತಿಲ್ಲ – ಎಂಬ ನಿರ್ಣಯಗಳನ್ನು ಮಾಡಲಾಯಿತು. ಈ ನಿರ್ಣಯಕ್ಕೆ ಟಿಬೆಟ್ ಒಪ್ಪಿದರೂ, ಚೀನಾ ಸಹಿ ಹಾಕಲು ನಿರಾಕರಿಸಿತು. ಎರಡನೇ ಮಹಾಯುದ್ಧದ ಸಮಯದಲ್ಲೂ ಚೀನಾ ಯುದ್ಧದಲ್ಲಿ ನೇರವಾಗಿ ಧುಮುಕಿದರೆ, ಟಿಬೆಟ್ ತಟಸ್ಥವಾಗಿತ್ತು.
ಇವೆಲ್ಲ ಪುರಾವೆಗಳು ಟಿಬೆಟ್ ಸ್ವತಂತ್ರ ರಾಷ್ಟ್ರವೆಂದು ಸೂಚಿಸುತ್ತವೆ. ಇವನ್ನು ಮುಂದಿಟ್ಟುಕೊಂಡು ಚೀನಾ ಆಕ್ರಮಣಕಾರಿ ರಾಷ್ಟ್ರ, ಟಿಬೆಟ್ ಚೀನಾಗೆ ಸೇರಿದ್ದಲ್ಲ ಎಂದು ಭಾರತ ಪಟ್ಟುಹಿಡಿಯಬೇಕಾಗಿತ್ತು ಮತ್ತು ಚೀನಾದ ವಿರುದ್ಧ ಜಾಗತಿಕ ಅಭಿಪ್ರಾಯ ರೂಪಿಸಬೇಕಿತ್ತು. ಭಾರತದ ಸುರಕ್ಷತೆಯ ದೃಷ್ಟಿಯಿಂದಲೂ ಇದು ಅತ್ಯಗತ್ಯವಾಗಿತ್ತು.
ಆದರೆ, ನಮ್ಮ ಆಗಿನ ನಾಯಕರು ಇದಾವುದಕ್ಕೂ ಕೈಹಾಕಲಿಲ್ಲ. ಅಷ್ಟು ಮಾತ್ರವಲ್ಲ, ವಿಶ್ವಸಂಸ್ಥೆಯಲ್ಲಿ ಟಿಬೆಟ್ ಕುರಿತಾದ ಚರ್ಚೆಯನ್ನೇ ನಮ್ಮ ನಾಯಕರು ವಿರೋಧಿಸಿದರು! ವಿಶ್ವಸಂಸ್ಥೆಯ ಜನರಲ್ ಅಸ್ಸೆಂಬ್ಲಿಯಲ್ಲಿ ೧೯೫೦ರ ನವೆಂಬರ್ ೨೩ರಂದು ಈ ಪ್ರಶ್ನೆಯನ್ನು ಚರ್ಚೆಗೆ ಎತ್ತಿಕೊಂಡಾಗ, ಭಾರತದ ಪ್ರತಿನಿಧಿ ಅದನ್ನು ವಿರೋಧಿಸಿ, ಟಿಬೆಟ್ ಮತ್ತು ಚೀನಾ ಈ ವಿಷಯವನ್ನು ಶಾಂತಿಯುತವಾಗಿ ಪರಿಹಾರ ಮಾಡಿಕೊಳ್ಳಬೇಕು. ಆಗ ಮಾತ್ರ ಟಿಬೆಟ್ ಸ್ವತಂತ್ರವಾಗಿ ಇರಲು ಸಾಧ್ಯ, ಜೊತೆಜೊತೆಗೆ ಚೀನಾದೊಂದಿಗೆ ಉತ್ತಮ ಸಂಬಂಧವನ್ನೂ ಮುಂದುವರಿಸಬಹುದು ಎಂಬ ಹೇಳಿಕೆ ನೀಡಿದರು. ಜಾಗತಿಕ ನಾಯಕನಾಗುವ, ಜಗತ್ತಿನ ಶಾಂತಿದೂತ ಎಂದು ಹೆಸರು ಗಳಿಸುವ ಅವಸರದಲ್ಲಿದ್ದ ನೆಹರೂ ಅವರಿಗೆ, ಕೊರಿಯಾ ಯುದ್ಧವೂ ನಡೆಯುತ್ತಿರುವ ಇಂದಿನ ಸಂದರ್ಭದಲ್ಲಿ, ಚೀನಾದೊಂದಿಗೆ ಯುದ್ಧ ಪ್ರಾರಂಭವಾದರೆ ಅದು ಮೂರನೇ ಮಹಾಯುದ್ಧಕ್ಕೆ ತಿರುಗಬಹುದು; ಅದನ್ನು ಪ್ರಾರಂಭಿಸಿದ ಅಪಕೀರ್ತಿ ನಿಮಗೇ ತಟ್ಟುತ್ತದೆ ಎಂಬುದಾಗಿ ಕೆಲವರು ಕಿವಿಯೂದಿದ್ದರು. ಕಮ್ಯೂನಿಸ್ಟರಂತೂ ಚೀನಾ ಬೆಂಬಲಕ್ಕಿದ್ದರು. ಇಂತಹ ಮನಃಸ್ಥಿತಿಯಲ್ಲಿದ್ದ ನಾಯಕರಿಂದ ನಡೆಸಲ್ಪಡುತ್ತಿದ್ದ ಭಾರತ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವಲ್ಲಿ ಎಡವಿತು. ಸ್ವಹಿತಾಸಕ್ತಿಯಲ್ಲಿ ಮುಳುಗಿದ್ದ ಅಂದಿನ ಎತ್ತರದ ಪ್ರಶ್ನಾತೀತ ನಾಯಕ, ದೇಶದ ಹಿತಾಸಕ್ತಿಯನ್ನೇ ಬಲಿಗೊಟ್ಟದ್ದು ಇಲ್ಲಿ ಸುಸ್ಪಷ್ಟ ಮತ್ತು ಇದು ದೇಶದ ಪಾಲಿಗೆ ದೊಡ್ಡ ದುರಂತವಾಗಿ ಪರಿಣಮಿಸಿದ್ದರಲ್ಲಿ ಅನುಮಾನವಿಲ್ಲ.
ಚೀನಾಕ್ಕೆ ಮಣೆಹಾಕಲಾರಂಭಿಸಿದ ಭಾರತ
ಒಟ್ಟಿನಲ್ಲಿ ಭಾರತ ಚೀನಾವನ್ನು ಎದುರುಹಾಕಿಕೊಳ್ಳಲು ಸಿದ್ಧವಿರಲಿಲ್ಲ. ಟಿಬೆಟ್ಟಿಗೆ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹಾರ ಮಾಡಿಕೊಳ್ಳುವಂತೆ ಸಲಹೆ ನೀಡುವ ಮೂಲಕ ಭಾರತ ಕೈತೊಳೆದುಕೊಂಡಿತು, ಭಾರತದ ಮಟ್ಟಿಗೆ ಟಿಬೆಟ್ ಸಮಸ್ಯೆ ಮುಕ್ತಾಯವಾದಂತಾಯಿತು. ಅಲ್ಲಿಂದ ಮುಂದೆ ಚೀನಾದ ಸ್ನೇಹವನ್ನು ಪಡೆಯುವುದು ಭಾರತದ ನೀತಿಯೇ ಆಯಿತು. ಚೀನಾದ ಪರ ವಹಿಸಿ ಭಾರತದ ನಾಯಕರು ವಿಶ್ವಸಂಸ್ಥೆಯಲ್ಲಿ ಮಾತನಾಡಿದರು. ಚೀನಾಗೆ ವಿಶ್ವಸಂಸ್ಥೆಯ ಭದ್ರತಾ ಮಂಡಲಿಯಲ್ಲಿ ಸ್ಥಾನ ನೀಡುವಂತೆ ಒತ್ತಾಯಿಸಿದರು. ಚೀನಾಕ್ಕೆ ಸ್ಥಾನ ನೀಡಲಿಲ್ಲ ಎಂಬ ಕಾರಣಕ್ಕೆ ತನ್ನ ಸ್ಥಾನವನ್ನೂ ಭಾರತ ತಿರಸ್ಕರಿಸಿತು!
೧೯೫೧ರಲ್ಲಿ ಚೀನಾ ಲಡಾಕ್ ಪ್ರದೇಶದೊಳಗೆ ಪಹರೆ ಆರಂಭಿಸಿತು. ಭಾರತ ಇದಕ್ಕೂ ಪ್ರತಿಕ್ರಿಯಿಸಲಿಲ್ಲ. ಪ್ರಧಾನಮಂತ್ರಿ ನೆಹರೂ ಅವರು ಸಂಸತ್ತಿಗೂ ವಿಷಯವನ್ನು ತಿಳಿಸುವ ಗೋಜಿಗೆ ಹೋಗಲಿಲ್ಲ. ಚೀನಾ ಹೆಚ್ಚು ಶಕ್ತಿಯುತವಾದಂತೆಲ್ಲಾ ತನ್ನ ಗಡಿಗಳನ್ನು ವಿಸ್ತರಿಸಿಕೊಳ್ಳುವ ಪ್ರಯತ್ನ ಮಾಡುತ್ತದೆ ಎನ್ನುವ ವಿಷಯವನ್ನು ನಮ್ಮ ನಾಯಕರು ಅರಿಯುವಲ್ಲಿ ವಿಫಲವಾದರು, ಅಥವಾ ಈ ವಿಷಯದಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿದರು. ಚೀನಾ ಸೈನಿಕರು ಭಾರತದ ಗಡಿಯೊಳಗೆ ಪ್ರವೇಶಿಸುವುದು ಕ್ರಮೇಣ ಹೆಚ್ಚಾಯಿತು. ಭಾರತವು ಗಡಿ ಪ್ರದೇಶದಲ್ಲಿ ತನ್ನ ಸೈನ್ಯವನ್ನು ಹೆಚ್ಚಿಸುವ ಮೂಲಕ ಚೀನಾದ ಪ್ರಯತ್ನವನ್ನು ತಡೆಯಬೇಕಿತ್ತು. ಆದರೆ, ಚೀನಾದ ಅತಿಕ್ರಮಣಕ್ಕೆ ಭಾರತದ್ದು ಮೌನ ಪ್ರತಿಕ್ರಿಯೆ. ನಾವು ಸಹನೆಯಿಂದಿದ್ದರೆ, ಪ್ರತಿಕ್ರಿಯಿಸದಿದ್ದರೆ, ಅಹಿಂಸಾ ಪಾಲನೆ ಮಾಡಿದರೆ ನಮ್ಮ ಶತ್ರುಗಳು ಏನೂ ಮಾಡುವುದಿಲ್ಲ ಎಂದು ನಮ್ಮ ನಾಯಕರು ಭಾವಿಸಿದಂತಿತ್ತು!
ಎಚ್ಚರಿಕೆ-ಸಲಹೆಗಳನ್ನು ನಿರ್ಲಕ್ಷಿಸಿದ ನೆಹರೂ
ಮಂತ್ರಿಮಂಡಲದಲ್ಲಿ ನೆಹರೂ ಅವರ ಎದುರಿಗೆ ನಿಂತು ಅವರ ನಿರ್ಧಾರಗಳನ್ನು ಪ್ರಶ್ನಿಸುವ ಎದೆಗಾರಿಕೆ ಇದ್ದ ಏಕೈಕ ವ್ಯಕ್ತಿಯೆಂದರೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು. ದೇಶದ ದೌರ್ಭಾಗ್ಯ, ೧೯೫೦ ರ ಡಿಸೆಂಬರಿನಲ್ಲಿ ಸರ್ದಾರ್ ಪಟೇಲರು ತೀರಿಕೊಂಡರು. ಆ ನಂತರ, ನೆಹರೂ ಅವರ ನೀತಿಯನ್ನು ಸಂಸತ್ತಿನಲ್ಲಾಗಲಿ, ಮಂತ್ರಿಮಂಡಲದಲ್ಲಾಗಲಿ ಧೈರ್ಯವಾಗಿ ಪ್ರಶ್ನಿಸುವವರೇ ಇಲ್ಲದಂತಾಯಿತು, ನೆಹರೂ ಮಾಡಿದ್ದಕ್ಕೆಲ್ಲ ಗೋಣುಹಾಕುವವರಷ್ಟೇ ಉಳಿದರು. ಚೀನಾದ ಹುನ್ನಾರ ಸರ್ದಾರ್ ಪಟೇಲರಿಗೆ ಸ್ಪಷ್ಟವಿತ್ತು ಮತ್ತು ನೆಹರೂ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ದೇಶದ ಭವಿಷ್ಯಕ್ಕೆ ಮಾರಕ ಎಂದೂ ಅವರು ಅರಿತಿದ್ದರು. ಅವರು ತೀರಿಕೊಳ್ಳುವ ಮುಂಚೆ ನವೆಂಬರ್ ೭ರಂದು ಕೂಡಾ ಚೀನಾ ಕುರಿತಾಗಿ ನೆಹರೂ ಅವರಿಗೆ ಪತ್ರ ಬರೆದಿದ್ದರು. ಚೀನಾವನ್ನು ನಿರ್ಲಕ್ಷಿಸುವುದರಿಂದ ಕೇವಲ ಗಡಿ ಪ್ರದೇಶದಲ್ಲಿ ಮಾತ್ರವಲ್ಲ, ಇಡೀ ಪೂರ್ವಾಂಚಲವೇ ಅಪಾಯಕ್ಕೆ ಸಿಕ್ಕಿಕೊಳ್ಳುತ್ತದೆ – ಎಂದು ಅವರು ಆ ಪತ್ರದಲ್ಲಿ ಎಚ್ಚರಿಸಿದ್ದರು. ಯಥಾಪ್ರಕಾರ ನೆಹರೂ ಅವರು ಅದಕ್ಕೆ ಪ್ರತಿಕ್ರಿಯಿಸಲಿಲ್ಲ, ಉತ್ತರಿಸುವ ಗೋಜಿಗೂ ಹೋಗಲಿಲ್ಲ.
ಭಾರತೀಯ ಸೈನಿಕ ಅಧಿಕಾರಿಗಳೂ ಸರ್ಕಾರಕ್ಕೆ ಚೀನಾದ ಅಪಾಯದ ಕುರಿತಾದ ವರದಿ ನೀಡಿದ್ದರು. ೧೯೫೨ರಲ್ಲಿ ಜನರಲ್ ಕುಲ್ವಂತ್ಸಿಂಗ್ ಅವರು ಭಾರತ-ಚೀನಾ ಗಡಿಯ ಅಧ್ಯಯನ ನಡೆಸಿ ಸುದೀರ್ಘವಾದ ವರದಿ ನೀಡಿದ್ದರು. ಹಿಮಾಲಯದ ಮೂಲಕ ಚೀನಾ ಭಾರತವನ್ನು ಪ್ರವೇಶಿಸುವ ಪ್ರಯತ್ನ ನಡೆಸಿದರೆ ಅದನ್ನು ತಡೆಯುವುದಕ್ಕೆ ಭಾರತವು ಯಾವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಆ ವರದಿಯಲ್ಲಿ ತಿಳಿಸಲಾಗಿತ್ತು. ಕೇಂದ್ರ ಮಂತ್ರಿಮಂಡಲವು ಆ ವರದಿಯನ್ನು ಪೆಟ್ಟಿಗೆಯೊಳಗಿಟ್ಟು ಬೀಗ ಹಾಕಿತು. ಚೀನಾ ಭಾರತಕ್ಕೆ ಏನೂ ಮಾಡುವುದಿಲ್ಲ, ನಮಗೆ ಚೀನಾ ಶತ್ರುವಲ್ಲ, ಪಾಕಿಸ್ತಾನದ ಕಡೆ ಕಣ್ಣಿಟ್ಟರೆ ಸಾಕು – ಎಂಬುದಾಗಿ ಭಾರತೀಯ ನಾಯಕರು ಸೈನಿಕ ಅಧಿಕಾರಿಗಳಿಗೆ ಬುದ್ಧಿವಾದ ಹೇಳಿದರು.
ಭಾರತ ಸರ್ಕಾರ ಈ ಪ್ರದೇಶದ ವಿಷಯದಲ್ಲಿ ಕಣ್ಮುಚ್ಚಿ ಕುಳಿತಿತು. ನವೆಂಬರ್ ೧೯೬೧ರವರೆಗೂ ಶ್ರೀನಗರ ಮತ್ತು ಲೇಹ್ ನಡುವೆ ಯಾವುದೇ ರಸ್ತೆಯ ಸಂಪರ್ಕವೇ ಇರಲಿಲ್ಲವೆಂದರೆ, ಭಾರತ ಆ ಪ್ರದೇಶವನ್ನು ಅದೆಷ್ಟು ಕಡೆಗಣಿಸಿತ್ತು ಎನ್ನುವುದು ಅರ್ಥವಾಗುತ್ತದೆ. ೨೦೦೦ ಕಿ.ಮೀ ಉದ್ದದ ಗಡಿಯನ್ನು ರಕ್ಷಿಸಲು ಕೇವಲ ಒಂದು ಬ್ರಿಗೇಡ್ ಸೇನೆ ಮತ್ತು ಅರುಣಾಚಲ ಪ್ರದೇಶದಲ್ಲಿ ಒಂದು ಬೆಟಾಲಿಯನ್ ಸೇನೆಯನ್ನು ಮಾತ್ರ ನಿಯುಕ್ತಿ ಮಾಡಲಾಗಿತ್ತು ಎನ್ನುವ ಸಂಗತಿಯೂ ಭಾರತ ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಪ್ರಧಾನಿ ನೆಹರೂ ಅವರಿಗೆ ಸೈನ್ಯದ ಮೇಲೆ ಅಪನಂಬಿಕೆಯೂ ಇದ್ದಿತು. ಸೈನ್ಯವು ಬಲಶಾಲಿಯಾದರೆ, ಪಾಕಿಸ್ತಾನದಲ್ಲಿ ಆದಂತೆ ಭಾರತದಲ್ಲಿಯೂ ಅಧಿಕಾರವನ್ನು ಕಬಳಿಸಬಹುದು ಎಂದು ಅವರು ಶಂಕಿಸಿದ್ದರು. ಈ ಕಾರಣಕ್ಕಾಗಿಯೇ ಸೈನ್ಯವನ್ನು ದುರ್ಬಲವಾಗಿಡಲಾಗಿತ್ತು ಮತ್ತು ಭೂ-ಜಲ-ಆಕಾಶ ಸೇನೆಗಳನ್ನು ಪ್ರತ್ಯೇಕವಾಗಿಡಲಾಗಿತ್ತು ಎಂದೂ ಕೆಲವರು ವಿಶ್ಲೇಷಿಸಿದ್ದಾರೆ. ಇದರ ಪರಿಣಾಮವಾಗಿ ಸೈನ್ಯದ ಅಧಿಕಾರಿಗಳಿಗೆ ಭಾರತೀಯ ಸೇನೆಯ ವಿಷಯದಲ್ಲಾಗಲಿ ಮತ್ತು ದೇಶದ ರಕ್ಷಣೆಯ ವಿಷಯದಲ್ಲಾಗಲಿ ಯಾವುದೇ ನಿರ್ಣಯ ತೆಗೆದುಕೊಳ್ಳುವ ಸ್ವಾತಂತ್ರ್ಯವಿರಲಿಲ್ಲ.
ಸೇನೆಯ ಮಹಾದಂಡನಾಯಕರೂ ರಾಜಕೀಯ ನಾಯಕರ ಮುಂದೆ ಕೈಕಟ್ಟಿ ನಿಂತು ಅಪ್ಪಣೆ ಪಡೆಯಬೇಕಾಗಿತ್ತು. ಸೇನೆಯ ಆವಶ್ಯಕತೆಗಳ ಕುರಿತಾಗಿ ಸರಿಯಾದ ತಿಳಿವಳಿಕೆ ಇರದಿದ್ದ ರಾಜಕೀಯ ನಾಯಕರು ಸೇನೆಗೆ ಆಧುನಿಕ ಶಸ್ತ್ರಾಸ್ತ್ರಗಳ, ಇತರೆ ಅತ್ಯಗತ್ಯ ವಸ್ತುಗಳ ಪೂರೈಕೆ ಮಾಡಲಿಲ್ಲ, ಹಿಮಾಲಯದಂತಹ ಚಳಿ ಪ್ರದೇಶದಲ್ಲಿ ಬೇಕಾಗಿದ್ದ ಉಡುಪುಗಳನ್ನಾಗಲಿ, ಅಲ್ಲಿ ಕೆಲಸ ಮಾಡಲು ಬೇಕಾದ ತರಬೇತಿಯನ್ನಾಗಲಿ ನೀಡಲಿಲ್ಲ. ಹಿಮಾಲಯದಂತಹ ತೀವ್ರ ಹಿಮಪ್ರದೇಶದಲ್ಲಿ ನಮ್ಮ ಸೈನಿಕರು ತೊಟ್ಟಿದ್ದು ಹತ್ತಿಯ ಬಟ್ಟೆಗಳನ್ನು! ಎತ್ತರದ ಪ್ರದೇಶದಲ್ಲಿ ಅವಶ್ಯವಿರುವ ಸ್ನೋ ಕನ್ನಡಕಗಳಾಗಲಿ ಮತ್ತು ಕಡೆಗೆ ಸ್ನೋ ಪದವೇಶಗಳು ಕೂಡಾ ನಮ್ಮ ಸೈನಿಕರ ಹತ್ತಿರ ಇರಲಿಲ್ಲ. ಎಷ್ಟೋ ಸೈನಿಕರು ಅಲ್ಲಿಯ ತೀವ್ರಶೀತಕ್ಕೆ ಪ್ರಾಣ ಕಳೆದುಕೊಂಡರು. ನಮ್ಮ ಸೈನಿಕರ ಬಳಿಯಿದ್ದದ್ದು ಪೊಲೀಸ್ ಪೇದೆಗಳು ಉಪಯೋಗಿಸುವ ಸಾಧಾರಣ ಬಂದೂಕುಗಳಷ್ಟೆ. ಯುದ್ಧಕ್ಕೆ ಬೇಕಾದ ಆಯುಧಗಳು ಇರಲಿಲ್ಲ. ಸೇನಾ ಅಧಿಕಾರಿಗಳ ನಿಯುಕ್ತಿ ಮತ್ತು ಬಡ್ತಿಗಳಲ್ಲೂ ರಾಜಕೀಯ ಹಸ್ತಕ್ಷೇಪಗಳು ನಡೆಯುತ್ತಿದ್ದವು. ಅನುಭವವಿರದಿದ್ದ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಿಗೆ ನೇಮಿಸಿದರು.
ನೆಹರೂ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದ ವಿ.ಕೆ. ಕೃಷ್ಣ ಮೆನನ್ ಅವರಿಗೆ ಸೇನೆಯ ಕುರಿತು ಒಂದು ರೀತಿಯ ತಿರಸ್ಕಾರವಿತ್ತು. ಅವರ ಉದ್ಗಾರಗಳು ಹೀಗಿದ್ದವು – ನಮಗೆ ಸೇನೆಯ ಆವಶ್ಯಕತೆ ಏನಿದೆ? ಪಾಕಿಸ್ತಾನದ ವಿರುದ್ಧ ನಾವು ಯಾವಾಗಲೂ ಗೆಲ್ಲುತ್ತೇವೆ. ಗೋವಾ ಮತ್ತು ಹೈದರಾಬಾದ್ನಲ್ಲೂ ಭಾರತೀಯ ಸೇನೆ ಯಶಸ್ವಿಯಾಗಿದೆ. ಚೀನಾ ಜೊತೆ ನಮ್ಮ ಸಂಬಂಧ ಉತ್ತಮವಾಗಿದೆ. ಹೀಗಿರುವಾಗ, ನಮಗೆ ಸೇನೆ ಏಕೆ ಬೇಕು? ಶಸ್ತ್ರ ತಯಾರು ಮಾಡುವ ಕಾರ್ಖಾನೆಗಳನ್ನು ಮತ್ತಾವುದಕ್ಕಾದರೂ ಬಳಸಬಹುದು. ಸೈನಿಕರನ್ನು ಹೊಲಗಳಲ್ಲಿ ದುಡಿಯಲು ಏಕೆ ಕಳುಹಿಸಬಾರದು? ದೇಶದ ರಕ್ಷಣಾ ಸಚಿವರೇ ಹೀಗೆ ಯೋಚಿಸಲು ಆರಂಭಿಸಿದರೆ ದೇಶದ ಸೈನ್ಯದ ಗತಿ, ರಕ್ಷಣೆಯ ಗತಿ ಏನಾಗಬಹುದು!
ಭಾರತದ ಬೇಹುಗಾರಿಕಾ ವೈಫಲ್ಯ
೧೯೫೦ರ ದಶಕದಲ್ಲಿ ಚೀನಾ ಟಿಬೆಟ್ಟಿನಲ್ಲಿ ತನ್ನ ಅಧಿಕಾರದ ಮುದ್ರೆ ಒತ್ತತೊಡಗಿತು ಮತ್ತು ಎಲ್ಲವನ್ನೂ ಚೀನಾಮಯಗೊಳಿಸಲಾರಂಭಿಸಿತು. ತನ್ನ ವಿರೋಧಿಗಳನ್ನೆಲ್ಲ್ಲ ಸದೆಬಡಿಯಿತು. ಟಿಬೆಟ್ ಮೂಲಕ ಭಾರತದ ಗಡಿಯವರೆಗೂ ರಸ್ತೆಗಳನ್ನು ನಿರ್ಮಾಣ ಮಾಡಿಕೊಂಡಿತು. ಮಿಲಿಟರಿ ಉಪಯೋಗಕ್ಕಾಗಿಯೇ ನಿರ್ಮಿಸಲಾಗಿದ್ದ ರಸ್ತೆಗಳಾಗಿತ್ತು ಇವು. ೧೯೫೩ರ ಹೊತ್ತಿಗೆ ಟಿಬೆಟ್ಟಿನ ಪ್ರಮುಖ ನಗರಗಳಿಗೆಲ್ಲ ಅಂಚೆ-ತಂತಿ ಮೂಲಕ ಸಂಪರ್ಕ ಸಾಧಿಸಲಾಗಿತ್ತು. ಜಮ್ಮು-ಕಾಶ್ಮೀರ ರಾಜ್ಯಕ್ಕೆ ಸೇರಿದ ಲಡಾಖ್ಗೆ ಸೇರಿದ ಅಕ್ಸಾಯ್ ಚಿನ್ ಮೂಲಕ ರಸ್ತೆ ನಿರ್ಮಿಸಿತು. ಭಾರತಕ್ಕೆ ಇದರ ಸುಳಿವೂ ಇರಲಿಲ್ಲ. ೧೯೫೭ರಲ್ಲಿ ಚೀನಾ ಈ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಘೋಷಣೆ ಮಾಡಿ ತನ್ನ ಭೂಪಟದಲ್ಲಿ ಮುದ್ರಿಸಿದ ನಂತರವೇ ಅದು ಭಾರತಕ್ಕೆ ತಿಳಿದದ್ದು. ತನ್ನ ದೇಶದೊಳಗೆ ಏನಾಗುತ್ತಿದೆ ಎನ್ನುವುದೂ ಭಾರತಕ್ಕೆ ತಿಳಿಯಲಿಲ್ಲ ಎನ್ನುವುದು, ಭಾರತದ ಬೇಹುಗಾರಿಕೆಗೆ ಹಿಡಿದ ಕೈಗನ್ನಡಿ. ಚೀನಾದ ಗಡಿ ಪ್ರದೇಶದಲ್ಲಿ ಭಾರತದ ನುರಿತ, ಕಾಯಂ ಬೇಹುಗಾರರು ಇರಲಿಲ್ಲ. ಯುದ್ಧದ ಸಮಯದಲ್ಲಿ ಚೀನೀಯರು ಎಷ್ಟು ಸೇನೆ ನಿಯೋಜಿಸಿದ್ದಾರೆ, ಅರುಣಾಚಲ ಪ್ರದೇಶದ ಮೂಲಕ ದಾಳಿ ನಡೆಸುವ ವಿಷಯ, ಅವರ ಚಲನವಲನಗಳು – ಈ ಯಾವ ಮಾಹಿತಿಗಳೂ ಭಾರತದ ಸೈನಿಕ ಅಧಿಕಾರಿಗಳಿಗೆ ಲಭಿಸಿರಲಿಲ್ಲ. ಇದು ಭಾರತದ ಬೇಹುಗಾರಿಕಾ ವೈಫಲ್ಯವನ್ನು ತೋರಿಸುತ್ತದೆ.
ಹಿಂದಿ ಚೀನೀ ಭಾಯಿ ಭಾಯಿ
ಚೀನಾ ಈ ರೀತಿ ಒಂದು ಕಡೆ ಅತಿಕ್ರಮಣದ ಸಿದ್ಧತೆಗಳನ್ನು ನಡೆಸುತ್ತಿರುವಾಗಲೇ, ಮತ್ತೊಂದೆಡೆ ಭಾರತದೊಡನೆ ಸ್ನೇಹದ ಸೋಗು ಹಾಕುತ್ತಿತ್ತು. ೧೯೫೪ರ ಏಪ್ರಿಲ್ ೨೯ರಂದು ಭಾರತದೊಡನೆ ಪಂಚ ಶೀಲಕ್ಕೆ ಸಹಿ ಹಾಕಿತು. ಅಲ್ಲಿಂದ ಮುಂದೆ ಎರಡು ದೇಶಗಳು ಹಿಂದೀ ಚೀನೀ ಭಾಯಿ ಭಾಯಿ ಹಾಡಲಾರಂಭಿಸಿದವು. ಅದೇ ವರ್ಷ ನೆಹರೂ ಅವರು ಚೀನಾ ದೇಶಕ್ಕೆ ಭೇಟಿ ನೀಡಿದರು. ಅವರಿಗೆ ಚೀನಾದಿಂದ ಭವ್ಯವಾದ ಸ್ವಾಗತ ಸಿಕ್ಕಿತು. ಇದೆಲ್ಲದರ ಮುಖಾಂತರ ತಾನು ಭಾರತಕ್ಕೆ ಶಾಶ್ವತ ಸ್ನೇಹಿತ ಎಂದು ನಂಬಿಸುವುದು ಚೀನಾದ ಉದ್ದೇಶವಾಗಿತ್ತು. ಇದರ ಲಾಭ ಚೀನಾಕ್ಕೆ. ಟಿಬೆಟ್ ಚೀನಾಕ್ಕೆ ಸೇರಿದ್ದೆಂದು ಭಾರತ ತಕರಾರಿಲ್ಲದೆ ಒಪ್ಪಿಕೊಂಡಿತ್ತು. ಜೊತೆಗೆ ಚೀನಾವು ಈ ಸಮಯದ ಸದುಪಯೋಗ ಮಾಡಿಕೊಂಡಿತು – ತನ್ನ ಆರ್ಥಿಕ ಮತ್ತು ಸೈನಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಚೀನಾಕ್ಕೆ ಸಾಕಷ್ಟು ಸಮಯ ಸಿಕ್ಕಂತಾಯಿತು.
ಈ ಸ್ನೇಹದಿಂದ ತನಗೆ ಲಾಭವಾಗಿದೆ ಎಂದು ಭಾರತ ಭ್ರಮಿಸಿತು – ತನ್ನ ಸ್ನೇಹಿತನಾಗಿರುವ ಚೀನಾವು ಭಾರತದ ಮೇಲೆ ಆಕ್ರಮಣ ನಡೆಸುವುದಿಲ್ಲ ಎಂದು ಭಾರತ ನಂಬಿಕೊಂಡಿತು. ನೆಹರೂ ಜೀವಿತಾವಧಿಯಲ್ಲಿ ಚೀನಾದೊಂದಿಗೆ ಯಾವುದೇ ಯುದ್ಧ ನಡೆಯುವುದಿಲ್ಲ ಎಂದು ಪಂಡಿತ್ ನೆಹರೂ ಹೆಮ್ಮೆಯಿಂದ ಘೋಷಿಸಿದರು. ಮುಂದಿನ ಎಂಟು ವರ್ಷಗಳ ಕಾಲ ಆರ್ಥಿಕತೆಯಿಂದ ಹಿಡಿದು ಸೈನ್ಯದವರೆಗೆ ಭಾರತದ ಎಲ್ಲ ಕ್ಷೇತ್ರಗಳ ನೀತಿಗಳಿಗೆ ಈ ಮೇಲಿನ ಘೋಷಣೆಯೇ ಮಾರ್ಗದರ್ಶಕ ಸೂಚಿಯಾಯಿತು.
೧೯೫೯ರಲ್ಲಿ ಟಿಬೆಟ್ಟಿನ ಧರ್ಮಗುರು ದಲಾಯಿ ಲಾಮಾ ಅವರಿಗೆ ಭಾರತ ಆಶ್ರಯ ನೀಡಿದ್ದು ಚೀನಾವನ್ನು ಕೆರಳಿಸಿತು. ಟಿಬೆಟ್ಟಿನ ಲ್ಹಾಸಾದಲ್ಲಿ ನಡೆಯುತ್ತಿದ್ದ ದಂಗೆಯ ಹಿಂದೆ ಭಾರತದ ಹಸ್ತಕ್ಷೇಪವಿದೆ, ಅದಕ್ಕೆ ಭಾರತ ಪ್ರೇರೇಪಣೆ ನೀಡುತ್ತಿದೆ ಎಂದೆಲ್ಲ ಚೀನಾ ಆರೋಪಿಸಲಾರಂಭಿಸಿತು. ಟಿಬೆಟ್ನಲ್ಲಿ ತನ್ನ ಆಡಳಿತಕ್ಕೆ ಭಾರತ ಪ್ರಮುಖ ಅಡ್ಡಿ ಎಂದು ಚೀನಾ ಭಾವಿಸತೊಡಗಿತು. ೧೯೬೨ರ ಪ್ರಾರಂಭ ಮತ್ತು ಮಧ್ಯಭಾಗದಲ್ಲಿ ಚೀನಾ ಆಗಾಗ ಅತಿಕ್ರಮಣ ಪ್ರವೇಶ ಮಾಡತೊಡಗಿತು, ಚೀನಾ ಹಾಗೂ ಭಾರತದ ಸೈನಿಕರ ನಡುವೆ ಚಕಮಕಿಗಳು ನಡೆದವು.
ಫಾರ್ವರ್ಡ್ ಪಾಲಿಸಿ
ಅಕ್ಸಾಯ್ ಚಿನ್ ಪ್ರದೇಶದಲ್ಲಿ ಚೀನಾದ ಸೈನಿಕರು ಗಸ್ತು ತಿರುಗಲು ಆರಂಭಿಸಿದಾಗ ಭಾರತ ಫಾರ್ವರ್ಡ್ ಪಾಲಿಸಿಯನ್ನು ಅನುಸರಿಸಿತು. ಫಾರ್ವರ್ಡ್ ಪಾಲಿಸಿ ಎಂದರೆ, ಅಕ್ಸಾಯ್ ಚಿನ್ ಪ್ರದೇಶದಲ್ಲಿ ಚೀನಾದ ಸೈನಿಕರು ಗಸ್ತು ತಿರುಗುತ್ತಿರುವ ದಾರಿಗೂ ಮುಂದೆ ಇನ್ನಷ್ಟು ಗಡಿಯ ಸಮೀಪಕ್ಕೆ ಹೋಗಿ ಭಾರತೀಯ ಸೇನೆಯು ಕಟ್ಟಡ, ಬಂಕರುಗಳನ್ನು ಕಟ್ಟುವುದು. ಚೀನಾ ಇದಕ್ಕೇನೂ ಪ್ರತಿಕ್ರಿಯಿಸುವುದಿಲ್ಲ ಎಂದು ನೆಹರೂ ನಂಬಿದ್ದರು. ಈ ಫಾರ್ವರ್ಡ್ ಪಾಲಿಸಿಗೆ ಸೈನಿಕ ಅಧಿಕಾರಿಗಳ ಒಪ್ಪಿಗೆ ಇರಲಿಲ್ಲ, ಇದರಿಂದ ಅಪಾಯವನ್ನು ಮೈಮೇಲೆ ಎಳೆದುಕೊಂಡಂತಾಗುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು; ಒಟ್ಟಿನಲ್ಲಿ ಅದರಿಂದಾಗುವ ಪರಿಣಾಮಗಳನ್ನೆದುರಿಸಲು ಭಾರತ ಸಿದ್ಧವಾಗಿಲ್ಲ ಎನ್ನುವುದು ಅವರೆಲ್ಲರ ಅಭಿಪ್ರಾಯಗಳ ಒಟ್ಟು ಅರ್ಥ. ಹಿಮಾಲಯದ ದುರ್ಗಮ ಪ್ರದೇಶದಲ್ಲಿ ಸರಿಯಾದ ತಯಾರಿ ಇಲ್ಲದೆ ಮತ್ತು ಚೀನಾ ಒಡ್ಡುವ ಅಪಾಯಗಳನ್ನು ಅರ್ಥ ಮಾಡಿಕೊಳ್ಳದೆ ನಮ್ಮ ಸೇನೆಯನ್ನು ಅಟ್ಟಿದರು, ಭಾರತೀಯ ಸೈನಿಕರನ್ನು ಮೃತ್ಯುಕೂಪಕ್ಕೆ ದೂಡಿದರು. ಆದರೆ ಚೀನಾ ಇದನ್ನು ಭಾರತದ ಆಕ್ರಮಣ ಎಂದೇ ಪರಿಗಣಿಸಿ, ಅಕ್ಸಾಯ್ ಚಿನ್ ಮತ್ತು ಅರುಣಾಚಲಪ್ರದೇಶಕ್ಕೆ ಹೆಚ್ಚಿನ ಪ್ರಮಾಣದ ಸೇನೆಯನ್ನು ನಿಯೋಜಿಸಿ ದಾಳಿ ಮಾಡಿತು.
ಅನಿರೀಕ್ಷಿತ ದಾಳಿ
೧೯೬೨ರ ಅಕ್ಟೋಬರ್ ೨೦ರಂದು ಎರಡು ಕಡೆಗಳಲ್ಲಿ ದಿಢೀರನೆ ಚೀನಾ ಸೈನ್ಯ ಭಾರತದೊಳಕ್ಕೆ ನುಗ್ಗಿತು. ಗಡಿಯನ್ನು ಕಾಯುತ್ತಿದ್ದುದು ಕೇವಲ ಎರಡು ಡಿವಿಶನ್ ಭಾರತದ ಸೈನಿಕರು. ಚೀನಾದ ಮೂರು ರೆಜಿಮೆಂಟ್ ಸೈನಿಕರು ಸರ್ವಸನ್ನದ್ಧರಾಗಿ ಬಂದಿದ್ದರು. ದೊಡ್ಡ ಸಂಖ್ಯೆಯ ಭಾರತೀಯ ಸೈನಿಕರನ್ನು ಚೀನಾದ ಸೈನಿಕರು ಬಂಧಿಸಿಟ್ಟುಕೊಂಡರು. ತವಾಂಗ್ ಪ್ರದೇಶದಲ್ಲಿ ಯಾವುದೇ ಪ್ರತಿರೋಧವಿಲ್ಲದೆ ಭಾರತೀಯ ಸೇನೆ ಹಿಮ್ಮೆಟ್ಟಿತು. ನಾಲ್ಕು ದಿನಗಳ ಕಾಲ ತೀವ್ರ ಚಕಮಕಿ ನಡೆಯಿತು.
ಈ ಯುದ್ಧದಲ್ಲಿ ಭಾರತವು ವಾಯುಸೇನೆಯನ್ನು ಉಪಯೋಗಿಸುವ ಪ್ರಯತ್ನವನ್ನೇ ಮಾಡಲಿಲ್ಲ. ಯುದ್ಧ ನಡೆದಿದ್ದ ಅರುಣಾಚಲಪ್ರದೇಶ ಮತ್ತು ಅಕ್ಸಾಯ್ ಚಿನ್ ಪ್ರದೇಶಗಳು ಚೀನಾದ ವಾಯುನೆಲೆಗಳಿಂದ ಬಹಳ ದೂರದಲ್ಲಿದ್ದವು. ಅದಕ್ಕೆ ಹೋಲಿಸಿದರೆ ಭಾರತದ ವಾಯುನೆಲೆಗಳು ಅಲ್ಲಿಗೆ ಬಹಳ ಹತ್ತಿರದಲ್ಲಿದ್ದವು. ಒಂದು ವೇಳೆ ಭಾರತವೇನಾದರೂ ವಾಯುಪಡೆ ಬಳಸಿದ್ದಿದ್ದರೆ ಯುದ್ಧದ ದಿಕ್ಕೇ ಬದಲಾಗುತ್ತಿತ್ತು. ಆದರೆ ವಾಯುಪಡೆ ಬಳಸಲು ನೆಹರೂ ಒಪ್ಪಲಿಲ್ಲ. ಅವರ ಈ ನಿರ್ಧಾರ ಭಾರತದ ಪಾಲಿಗೆ ಮುಳುವಾಯಿತು.
ಯುದ್ಧದಲ್ಲಿ ನಮ್ಮೆಲ್ಲ ಶಕ್ತಿಯನ್ನು ಉಪಯೋಗಿಸುವ ಬದಲು ನೆಹರೂ ಅವರು ಜಾಗತಿಕ ಶಕ್ತಿಗಳ ನೆರವು ಕೋರಿದರು, ಸಹಾಯ ಯಾಚಿಸಿ ಅಮೆರಿಕ, ಇಂಗ್ಲೆಂಡ್ ಹಾಗೂ ರಷ್ಯಾ ದೇಶಗಳ ಬಾಗಿಲು ತಟ್ಟಿದರು. ಅದೇ ಸಮಯದಲ್ಲಿ ಕ್ಯೂಬಾ ಕ್ಷಿಪಣಿ ಬಿಕ್ಕಟ್ಟಿನಲ್ಲಿ ಮುಳುಗಿದ್ದ ರಷ್ಯಾ ತಕ್ಷಣ ಸಹಾಯ ಕಳುಹಿಸುವ ಸ್ಥಿತಿಯಲ್ಲಿರಲಿಲ್ಲ; ಅಮೆರಿಕ ಹಾಗೂ ಇಂಗ್ಲೆಂಡ್ ದೇಶಗಳು ಭಾರತಕ್ಕೆ ಕೂಡಲೇ ಸಹಾಯ ಮಾಡಲಿಲ್ಲ. ಅವು ಸಹಾಯ ಕಳುಹಿಸಲು ಒಂದು ತಿಂಗಳೇ ಬೇಕಾಯಿತು, ಆ ವೇಳೆಗೆ ಸಾಕಷ್ಟು ಸೈನಿಕರು ಪ್ರಾಣ ಕಳೆದುಕೊಂಡಿದ್ದರು. ಅಮೆರಿಕದ ವಾಯುಸೇನೆ ಭಾರತದ ಸಹಾಯಕ್ಕೆ ಬರುತ್ತಿರುವ ಸುಳಿವು ಸಿಕ್ಕ ಕೂಡಲೇ ಚೀನಾದ ಅಧ್ಯಕ್ಷ ಮಾವೋ ಜ಼ೆಡಾಂಗ್ ಅವರು ನೆಹರೂ ಅವರಿಗೆ ಪತ್ರ ಬರೆದು, ಯುದ್ಧವಿರಾಮದ ಪ್ರಸ್ತಾಪ ಮಾಡಿದರು. ತಾವು ವಶಪಡಿಸಿಕೊಂಡಿದ್ದ ಅರುಣಾಚಲಪ್ರದೇಶದ ಭಾಗದಿಂದ ತನ್ನ ಸೈನ್ಯವನ್ನು ಹಿಂದಕ್ಕೆ ತೆಗೆದುಕೊಂಡರು. ಆದರೆ, ಲಡಾಖ್ ಪ್ರಾಂತದ ಆಯಕಟ್ಟಿನ ಪ್ರದೇಶವಾದ ಅಕ್ಸಾಯ್ ಚಿನ್ ಪ್ರದೇಶವನ್ನು ತಮ್ಮ ಕೈಯಲ್ಲೇ ಇಟ್ಟುಕೊಂಡರು. ಅಂದಿನಿಂದ ಚೀನಾ ಆಕ್ರಮಿಸಿಕೊಂಡ ಪ್ರದೇಶವನ್ನೇ ನೈಜ ನಿಯಂತ್ರಣ ರೇಖೆ ಎಂದು ಎರಡೂ ದೇಶಗಳು ಗುರುತಿಸುತ್ತಿವೆ. ಭಾರತವು ತಾನು ಕಳೆದುಕೊಂಡ ಪ್ರದೇಶವನ್ನು ಇಲ್ಲಿಯವರೆಗೂ ಹಿಂಪಡೆಯಲಾಗಿಲ್ಲ!
ಯುದ್ಧದ ಪರಿಣಾಮಗಳು ಮತ್ತು ನಂತರ
೧೯೬೨ರ ಯುದ್ಧದಲ್ಲಿ ಭಾರತವು ೧೩೮೩ ಸೈನಿಕರನ್ನು ಕಳೆದುಕೊಂಡರೆ, ಚೀನಾ ೭೨೨ ಸೈನಿಕರನ್ನು ಕಳೆದುಕೊಂಡಿತು. ಭಾರತವು ಮೂವರು ಸೈನಿಕರಿಗೆ ಪರಮವೀರ ಚಕ್ರ, ಇಪ್ಪತ್ತು ಸೈನಿಕರಿಗೆ ಮಹಾವೀರ ಚಕ್ರ ಮತ್ತು ಅರವತ್ತೇಳು ಸೈನಿಕರಿಗೆ ವೀರಚಕ್ರ ಪದಕಗಳನ್ನು ನೀಡಿ ಗೌರವಿಸಿತು. ಪರಮವೀರ ಚಕ್ರ ಗೌರವಕ್ಕೆ ಪಾತ್ರರಾದ ಸೈನಿಕರೆಂದರೆ – ಮೇಜರ್ ಧಾನ್ ಸಿಂಗ್ ಥಾಪಾ, ಸುಬೇದಾರ್ ಜೋಗಿಂದರ್ ಸಿಂಗ್ ಮತ್ತು ಮೇಜರ್ ಶೈತಾನ್ ಸಿಂಗ್.
ಈ ಯುದ್ಧದಿಂದ ಅಪಾರ ಆಘಾತಕ್ಕೊಳಗಾದವರೆಂದರೆ ಪ್ರಧಾನಿ ಜವಹರಲಾಲ್ ನೆಹರೂ ಅವರೇ. ತಾನು ಆಪ್ತ ಸ್ನೇಹಿತನೆಂದು ನಂಬಿದ್ದ ಚೀನಾ ತನ್ನ ಬೆನ್ನಿಗೆ ಇರಿಯಿತು ಎಂಬುದು ಅವರ ಅಳಲಾಗಿತ್ತು. ಈ ಆಘಾತದಿಂದ ಅವರು ಚೇತರಿಸಿಕೊಳ್ಳಲೇ ಇಲ್ಲ. ಅದಾದ ಎರಡು ವರ್ಷದಲ್ಲಿ ಅವರು ತೀರಿಕೊಂಡರು. ಈ ಸೋಲಿಗೆ ಕಾರಣರಾಗಿದ್ದ ಮತ್ತೊಬ್ಬ ವ್ಯಕ್ತಿಯೆಂದರೆ, ನೆಹರೂ ಅವರ ಬಲಗೈಯಂತಿದ್ದ, ನೆಹರೂ ಅವರ ನಂಬಿಕಸ್ಥರಾಗಿದ್ದ ಕೃಷ್ಣ ಮೆನನ್. ಅವರು ತಮ್ಮ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಂದೆ ಭಾರತದ ರಕ್ಷಣಾ ನೀತಿಯಲ್ಲಿ ಗಣನೀಯ ಬದಲಾವಣೆಗಳಾದವು. ಭಾರತವು ತನ್ನ ರಕ್ಷಣಾ ವೆಚ್ಚವನ್ನು ಹೆಚ್ಚಿಸಿತು, ದೇಶದ ರಕ್ಷಣೆಗೆ ಮಹತ್ತ್ವ ನೀಡತೊಡಗಿತು.