ಗೋವಾ ಕಾರ್ಯಾಚರಣೆಯು ಸುಲಭವಾಗಿ ಮುಕ್ತಾಯಗೊಳ್ಳಲು ಪ್ರಮುಖ ಕಾರಣ ಸ್ಥಳೀಯರ ಸಹಕಾರ. ಅವರು ಭಾರತೀಯ ಸೈನಿಕರ ಆಗಮನಕ್ಕಾಗಿ ಕಾಯುತ್ತಿದ್ದರು. ಭಾರತೀಯ ಸೈನಿಕರನ್ನು ಸ್ವಾಗತಿಸಿದ್ದು ಮಾತ್ರವಲ್ಲದೆ, ಅವರಿಗೆ ಪೋರ್ಚುಗೀಸ್ ಸೈನಿಕರು ಅಡಗಿಕೊಂಡಿದ್ದ ಸ್ಥಳಗಳನ್ನು ತೋರಿಸಿದರು, ಮುಂದೆ ಹೋಗುವ ದಾರಿಯನ್ನು ತೋರಿಸಿದರು. ಎಷ್ಟೋ ಸ್ಥಳಗಳಲ್ಲಿ ಸೈನಿಕರಿಗೆ ಆಹಾರ-ಪಾನೀಯಗಳನ್ನು ನೀಡಿದರು. ವಾಹನಗಳಿಗೆ ಇಂದನ ತುಂಬಿಸಿಕೊಟ್ಟರು. ಪೋರ್ಚುಗೀಸರಿಗೆ ಭಾರತೀಯ ಸೈನ್ಯದ ಸಾಮರ್ಥ್ಯವು ಚೆನ್ನಾಗಿಯೇ ತಿಳಿದಿತ್ತು.
ಭಾರತಕ್ಕೆ ೧೯೪೭ರ ಆಗಸ್ಟ್ ೧೫ರಂದು ಸ್ವಾತಂತ್ರ್ಯ ಲಭಿಸಿತೆನ್ನುವ ವಿಚಾರ ಎಲ್ಲರಿಗೂ ತಿಳಿದಿರುವಂತಹುದೇ. ಆದರೆ, ಆನಂತರವೂ ಭಾರತದ ಕೆಲವು ಪ್ರದೇಶಗಳು ಮುಂದಿನ ಒಂದು ದಶಕಕ್ಕೂ ಹೆಚ್ಚು ಕಾಲ ಪರಾಧೀನವಾಗಿಯೇ ಇತ್ತೆನ್ನುವುದಾಗಲಿ ಮತ್ತು ಅವನ್ನು ಸ್ವತಂತ್ರಗೊಳಿಸಲು ಬಲಪ್ರಯೋಗ ಮಾಡಬೇಕಾಯಿತೆನ್ನುವ ವಿಷಯವಾಗಲಿ ಹೆಚ್ಚು ಜನರಿಗೆ ತಿಳಿದಿರಲಾರದು. ಇದಕ್ಕೆ ಕಾರಣವನ್ನು ಹುಡುಕಲು ಬಹುದೂರವೇನೂ ಹೋಗಬೇಕಾಗಿಲ್ಲ. ನಮ್ಮ ಶಾಲಾ-ಕಾಲೇಜುಗಳ ಇತಿಹಾಸದ ಪಠ್ಯಗಳಲ್ಲಿ ಈ ಪ್ರದೇಶಗಳಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಳ ವಿಚಾರವಾಗಿ ಪ್ರಸ್ತಾವಿಸಲಾಗಿಲ್ಲ. “ಕಾಂಗ್ರೆಸ್ ನಡೆಸಿದ ಸತ್ಯಾಗ್ರಹಗಳ ಮೂಲಕವೇ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು’’ ಮತ್ತು “ಅಹಿಂಸಾತ್ಮಕ ಹೋರಾಟಗಳೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿದವು’’ ಎಂಬ ಕಾಂಗ್ರೆಸ್ಸಿನ ಪ್ರಚಾರಕ್ಕೆ ಗೋವಾದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಕಥೆ ಪೂರಕವಾಗಿರಲಿಲ್ಲ. ಗೋವಾದಲ್ಲಿ ಅಹಿಂಸಾತ್ಮಕ ಹೋರಾಟ ವಿಫಲವಾಯಿತು, ಅಲ್ಲಿಂದ ವಿದೇಶೀಯರನ್ನು ಓಡಿಸಲು ಸೈನಿಕ ಕಾರ್ಯಾಚರಣೆ ನಡೆಸಬೇಕಾಯಿತು ಎಂಬ ವಾಸ್ತವ “ಕಾಂಗ್ರೆಸ್ಸಿನ ಅಹಿಂಸಾತ್ಮಕ ಹೋರಾಟ’’ದ ಕಥೆಯ ಹಿಂದಿರುವ ‘ಸತ್ಯ’ವನ್ನು ಬಯಲಿಗೆಳೆಯುತ್ತವೆ ಎನ್ನುವ ಭಯ ಆಳುಗರಲ್ಲಿ ಇದ್ದಿರಬಹುದು.
೧೯೪೭ರ ಆಗಸ್ಟ್ ೧೫ರಂದು ಸ್ವಾತಂತ್ರ್ಯ ಲಭಿಸಿದ್ದು ಬ್ರಿಟಿಷರು ಆಳುತ್ತಿದ್ದ ಭಾಗಗಳಿಗೆ ಮಾತ್ರ. ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ಕೆಲವು ಪ್ರದೇಶಗಳನ್ನು ಬ್ರಿಟಿಷರು ಆಳುತ್ತಿರಲಿಲ್ಲ. ಹೀಗಾಗಿ ಆ ಪ್ರದೇಶಗಳು ಆಗಸ್ಟ್ ೧೫ರಂದು ಸ್ವತಂತ್ರಗೊಳ್ಳಲಿಲ್ಲ. ಪೂರ್ವ ಕರಾವಳಿಯ ಪುದುಚೆರಿಯು ಫ್ರೆಂಚರ ವಸಾಹತು ಆಗಿದ್ದಿತು. ಅದೇ ರೀತಿ, ಪಶ್ಚಿಮ ಕರಾವಳಿಯ ಗೋವಾ ಪ್ರಾಂತವು ಪೋರ್ಚುಗೀಸರ ವಶದಲ್ಲಿತ್ತು. ಈ ಎರಡೂ ಪ್ರದೇಶಗಳು ದೇಶದ ಉಳಿದ ಭಾಗಗಳಿಗೆ ಸ್ವಾತಂತ್ರ್ಯ ಲಭಿಸಿದ ಬಹಳ ಸಮಯದ ನಂತರ ಸ್ವತಂತ್ರಗೊಂಡವು.
ಫ್ರೆಂಚ್ ವಸಾಹತುಗಳ ಮುಕ್ತಿ
ಫ್ರೆಂಚರ ಕೈಕೆಳಗಿದ್ದ ಪ್ರದೇಶಗಳ ವ್ಯಾಪ್ತಿ ಸುಮಾರು ೫೦೦ ಚದರ ಕಿಲೋಮೀಟರ್ಗಳು. ಪುದುಚೆರಿ, ಚಂದ್ರನಾಗೋರ್, ಕರೈಕ್ಕಲ್, ಮಾಹೆ ಮತ್ತು ಯಾಣಮ್ – ಇವುಗಳೇ ಫ್ರೆಂಚ್ ವಸಾಹತಿನ ಭಾಗಗಳು. ಬ್ರಿಟಿಷರಂತೆಯೇ ಫ್ರೆಂಚರೂ ಭಾರತಕ್ಕೆ ಮೊದಲು ಬಂದದ್ದು ವ್ಯಾಪಾರ ಮಾಡಲು. ಇಲ್ಲಿದ್ದ ಸನ್ನಿವೇಶದ ಲಾಭ ಪಡೆದು ಕೆಲವು ಪ್ರದೇಶಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಅವರಿಗೆ ಪ್ರಬಲ ಪ್ರತಿರೋಧ ಬಂದದ್ದು ಬ್ರಿಟಿಷರು ಮತ್ತು ಡಚ್ಚರಿಂದ. ೧೬೭೩ರಲ್ಲಿ ಬಂಗಾಳದಲ್ಲಿದ್ದ ಮೊಘಲ ಸಾಮ್ರಾಜ್ಯದ ಪ್ರತಿನಿಧಿಯಿಂದ ಚಂದ್ರನಾಗೋರ್ ಅನ್ನು ಕೊಂಡುಕೊಳ್ಳುವ ಮೂಲಕ ಫ್ರೆಂಚ್ ಆಧಿಪತ್ಯದ ನಾಂದಿಯಾಯಿತು. ೧೬೭೪ರಲ್ಲಿ ಬಿಜಾಪುರದ ಸುಲ್ತಾನನಿಂದ ಪುದುಚೆರಿಯನ್ನು ಖರೀದಿಸಿ ತಮ್ಮ ಸಾಮ್ರಾಜ್ಯಕ್ಕೆ ಸೇರಿಸಿಕೊಂಡರು. ೧೭೨೧ರಲ್ಲಿ ಮಾಹೆ, ೧೭೩೧ರಲ್ಲಿ ಯಾಣಮ್ ಮತ್ತು ೧೭೩೮ರಲ್ಲಿ ಕರೈಕ್ಕಲ್ ಪ್ರದೇಶಗಳಲ್ಲಿ ಫ್ರೆಂಚರು ತಮ್ಮ ಕೋಟೆಗಳನ್ನು ಸ್ಥಾಪಿಸಿಕೊಂಡರು. ಬ್ರಿಟಿಷರನ್ನು ತೊಲಗಿಸಲು ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಕಿಡಿ ಫ್ರೆಂಚರ ಕೈಕೆಳಗಿದ್ದ ಪ್ರದೇಶದಲ್ಲೂ ಹೊತ್ತಿಕೊಂಡಿತು. ೧೯೩೦ರ ದಶಕದಲ್ಲಿ ಸ್ವಾತಂತ್ರ್ಯಹೋರಾಟದ ಬೀಜಾಂಕುರವಾಯಿತು. ಆ ಪ್ರದೇಶಗಳಲ್ಲಿ ಕ್ರಾಂತಿಕಾರಿಗಳ ಓಡಾಟವೂ ನಡೆದಿತ್ತು. ಸುಪ್ರಸಿದ್ಧ ಕ್ರಾಂತಿಕಾರಿ ಅರವಿಂದ ಘೋಷರು ಅಲಿಪುರ ಬಾಂಬ್ ಮೊಕದ್ದಮೆಯಿಂದ ಖುಲಾಸೆಯಾದ ನಂತರ ಪುದುಚೆರಿಗೆ ಬಂದು ನೆಲೆಸಿದರು, ಆಶ್ರಮವನ್ನು ಸ್ಥಾಪಿಸಿ ಅಧ್ಯಾತ್ಮಸಾಧನೆಯಲ್ಲಿ ತೊಡಗಿದರು. ತಮಿಳುನಾಡಿನ ಸುಬ್ರಹ್ಮಣ್ಯ ಭಾರತಿ, ವಿ.ವಿ.ಎಸ್.ಐಯ್ಯರ್ ಮುಂತಾದ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಪುದುಚೆರಿಗೆ ಆಗಾಗ್ಗೆ ಬಂದು ನೆಲೆಸುತ್ತಿದ್ದರು. ಆದರೆ ಇದಾವುದೂ ಅಲ್ಲಿ ಸ್ವಾತಂತ್ರ್ಯಹೋರಾಟ ದೊಡ್ಡ ಪ್ರಮಾಣದಲ್ಲಿ ನಡೆಯಲು ಸಹಕಾರಿಯಾಗಲಿಲ್ಲ. ದ್ವಿತೀಯ ಮಹಾಯುದ್ಧವು ಜಗತ್ತಿನ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿತು. ಆ ಮಹಾಯುದ್ಧದ ಪರಿಸಮಾಪ್ತಿಯ ನಂತರ ಜಗತ್ತಿನೆಲ್ಲೆಡೆ ವಸಾಹತುಶಾಹಿಗಳು ತಾವು ಆಕ್ರಮಿಸಿಕೊಂಡಿದ್ದ ಪ್ರದೇಶಗಳಿಂದ ಕಾಲ್ತೆಗೆಯತೊಡಗಿದರು. ೧೯೪೭ರ ಆಗಸ್ಟ್ ೧೫ರಂದು ಬ್ರಿಟಿಷರು ಅಧಿಕಾರ ಹಸ್ತಾಂತರಿಸಿ ತಮ್ಮ ದೇಶಕ್ಕೆ ತೆರಳಿದರು. ಆದರೆ, ಫ್ರೆಂಚರಿಗೆ ತಮ್ಮ ಕೈಯಲ್ಲಿದ್ದ ಪ್ರದೇಶವನ್ನು ಬಿಟ್ಟುಕೊಡಲು ಮನಸ್ಸಿರಲಿಲ್ಲ, ಅವರು ಮೀನಮೇಷ ಎಣಿಸತೊಡಗಿದರು. ಅವರ ಕೈಕೆಳಗಿದ್ದ ಚಂದ್ರನಾಗೋರ್ ಮಾತ್ರ ೧೯೪೭ರಲ್ಲೇ ತನ್ನ ಸ್ವಾತಂತ್ರ್ಯವನ್ನು ಘೋಷಿಸಿಕೊಂಡು ಭಾರತದೊಡನೆ ವಿಲೀನವಾಗಿತ್ತು. ತಮ್ಮ ಸಾಮ್ರಾಜ್ಯದಲ್ಲಿದ್ದ ಜನ ತಮ್ಮ ಆಡಳಿತವನ್ನು ಮೆಚ್ಚಿದ್ದಾರೆ ಎಂಬ ಭ್ರಮೆಯಲ್ಲಿದ್ದ ಫ್ರೆಂಚರು ಜನಮತಗಣನೆ ನಡೆಸಿ ಮುಂದಿನ ನಡೆ ನಿರ್ಧರಿಸುವುದಾಗಿ ಘೋಷಿಸಿದರು. ಒಟ್ಟಿನಲ್ಲಿ ಫ್ರೆಂಚರು ಇಲ್ಲಿಂದ ಕಾಲ್ತೆಗೆಯುವ ದಿನವನ್ನು ಮುಂದೂಡುತ್ತಾ ಹೋದರು. ಕಡೆಗೂ ೧೯೫೪ರ ನವೆಂಬರ್ ೧ರಂದು ಪುದುಚೆರಿ ಸ್ವತಂತ್ರಗೊಂಡಿತು. ಅದು ಭಾರತದೊಡನೆ ವಿಲೀನಗೊಂಡದ್ದು ೧೯೬೨ರ ಆಗಸ್ಟ್ ೧೬ರಂದು.
ಗೋವಾದ ಸ್ವಾತಂತ್ರ್ಯದ ಕಥೆ
ಗೋವಾದ ಪೋರ್ಚುಗೀಸರು ಮಾತ್ರ ಬಡಪೆಟ್ಟಿಗೆ ಬಗ್ಗಲಿಲ್ಲ. ಅವರನ್ನು ಗೋವೆಯ ನೆಲದಿಂದ ಓಡಿಸಲು ಭಾರತವು ಸೈನ್ಯವನ್ನೇ ನುಗ್ಗಿಸಬೇಕಾಯಿತು. ಪೋರ್ಚುಗೀಸರು ಗೋವಾದಲ್ಲಿ ತಮ್ಮ ವಸಾಹತು ಸ್ಥಾಪಿಸಿದ್ದು ೧೫೧೦ರಲ್ಲಿ. ಅಲ್ಲಿಂದ ಮುಂದಿನ ೪೫೧ ವರ್ಷಗಳ ಕಾಲ ಅವರು ಆಳ್ವಿಕೆ ನಡೆಸಿದರು. ಗೋವಾ, ಡಮನ್, ಡಿಯು, ದಾದ್ರಾ, ನಗರಹವೇಲಿ, ಅಂಜಿದೀವ್ – ಇವಿಷ್ಟು ಪ್ರದೇಶಗಳು ಪೋರ್ಚುಗೀಸರ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳು. ಭಾರತಕ್ಕೆ ಸಮುದ್ರಮಾರ್ಗವನ್ನು ಹುಡುಕಿ ಮೊತ್ತಮೊದಲು ಭಾರತವನ್ನು ತಲಪಿದ ಯೂರೋಪಿಯನ್ನರೆಂದರೆ ಪೋರ್ಚುಗೀಸರು. ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ದೇಶಗಳಲ್ಲಿ ಇಸ್ಲಾಮಿನ ಪ್ರಭಾವ ಬೆಳೆದ ಪರಿಣಾಮವಾಗಿ ಯೂರೋಪಿಯನ್ನರಿಗೆ ಭಾರತವನ್ನು ತಲಪುವ ದಾರಿ ಮುಚ್ಚಿಹೋಗಿತ್ತು. ಜಗತ್ತಿನ ಅತ್ಯಂತ ಸಮೃದ್ಧ ರಾಷ್ಟçವಾಗಿದ್ದ ಭಾರತದೊಡನೆ ವ್ಯಾಪಾರ ಮುಂದುವರಿಸಲು ಹಾತೊರೆಯುತ್ತಿದ್ದ ಯೂರೋಪಿಯನ್ನರು ಸಮುದ್ರಮಾರ್ಗದ ಮೂಲಕ ಭಾರತವನ್ನು ತಲಪುವ ದಾರಿಯನ್ನು ಹುಡುಕತೊಡಗಿದರು.
ಮೊದಲಿಗೆ ಹೊರಟ ಸ್ಪೈನ್ ದೇಶದ ಕೊಲಂಬಸ್ ಪೂರ್ವಾಭಿಮುಖವಾಗಿ ಹೊರಟು ಕೆರಿಬಿಯನ್ ದ್ವೀಪಗಳನ್ನು ತಲಪಿದ ಮತ್ತು ಮುಂದೆ ಅಮೆರಿಕಾ ದೇಶಕ್ಕೆ ಕಾಲಿರಿಸಿದ. ಆ ಪ್ರದೇಶವನ್ನೇ ಭಾರತವೆಂದು ತಿಳಿದು ಸಂಭ್ರಮಿಸಿದ್ದ ಅವರಿಗೆ, ಅದು ಭಾರತವಲ್ಲವೆನ್ನುವುದು ಅರಿವಾದಾಗ ನಿರಾಸೆಯಾಯಿತು. ಈ ಅನುಭವದಿಂದ ಪಾಠ ಕಲಿತ ಪೋರ್ಚುಗೀಸ್ ನಾವಿಕರು ಪೂರ್ವಾಭಿಮುಖವಾಗಿ ಹೋಗುವ ಬದಲು ಆಫ್ರಿಕಾದ ತೀರದ ಪಕ್ಕದಲ್ಲೇ ಪಯಣಿಸಿದರು. ಭಾರ್ತಾಲೋಮಿಯೋ ಡಯಾಜ್ ಎಂಬ ನಾವಿಕ ಆಫ್ರಿಕಾದ ದಕ್ಷಿಣದ ತುದಿಯವರೆಗೆ ಹೋಗಿ ವಾಪಸ್ಸಾದ. ಅಲ್ಲಿಯವರೆಗೆ ತಲಪಿದ ಮೊತ್ತಮೊದಲ ಯೂರೋಪಿಯನ್ ಆತನಾದ ಮತ್ತು ಆಫ್ರಿಕಾವನ್ನು ಬಳಸಿ ಮುಂದುವರಿದು ಭಾರತವನ್ನು ತಲಪಲು ಸಾಧ್ಯವಿದೆ ಎನ್ನುವ ಭರವಸೆ ಹುಟ್ಟಿಸಿದ. ಈ ಕಾರಣಕ್ಕಾಗಿ ಆಫ್ರಿಕಾದ ದಕ್ಷಿಣ ತುದಿಗೆ “ಭರವಸೆಯ ತುದಿ” ಅಥವಾ ಕೇಪ್ ಆಫ್ ಗುಡ್ ಹೋಪ್ (Cape of Good Hope) ಎಂದು ಹೆಸರಿಟ್ಟರು. ಇದಾದ ಒಂದು ದಶಕದ ನಂತರ ಪೋರ್ಚುಗಲ್ನ ವಾಸ್ಕೋ-ಡ-ಗಾಮ ಎಂಬ ನಾವಿಕನು ಭಾರತವನ್ನು ಹುಡುಕಲು ಅದೇ ಮಾರ್ಗವಾಗಿ ಹೊರಟ. ಬಹಳ ದೀರ್ಘ ಸಮಯ ಸಮುದ್ರದಲ್ಲಿ ಪ್ರಯಾಣಿಸಲು ಸಾಧ್ಯವಿರುವಂತಹ ಬೃಹತ್ತಾದ ನಾಲ್ಕು ಹಡಗುಗಳನ್ನು ರಚಿಸಿ ೧೪೯೭ರ ಮಾರ್ಚ್ ೨೫ರಂದು ಲಿಸ್ಬನ್ ಸಮೀಪದ ಬಂದರಿನಿಂದ ವಾಸ್ಕೋ-ಡ-ಗಾಮನ ಪ್ರಯಾಣ ಆರಂಭವಾಯಿತು. ಆ ಹಡಗುಗಳು ೧೪೯೭ರ ಡಿಸೆಂಬರ್ ವೇಳೆಗೆ ಕೇಪ್ ಆಫ್ ಗುಡ್ ಹೋಪ್ ತಲಪಿದವು. ಮುಂದಿನ ಪ್ರಯಾಣದಲ್ಲಿ ಈ ಹಡಗುಗಳು ಭೀಕರ ತುಫಾನುಗಳಿಗೆ ಸಿಕ್ಕು ನಜ್ಜುಗುಜ್ಜಾದವು. ೧೯೪೮ರ ಮಾರ್ಚ್ನಲ್ಲಿ ಆಫ್ರಿಕಾ ಕರಾವಳಿಯ ಮೊಝಾಂಬಿಕ್ ತಲಪುವ ವೇಳೆಗೆ ಎರಡು ಹಡಗುಗಳು ಸಂಪೂರ್ಣ ಜಖಂಗೊಂಡಿದ್ದವು. ಇದೇ ವೇಳೆಗೆ ಡ-ಗಾಮನ ಜೊತೆಯಲ್ಲಿದ್ದ ನಾವಿಕರು ಭಾರತವನ್ನು ತಲಪುವ ಆಸೆ ಕಳೆದುಕೊಂಡು ವಾಪಸ್ ಹೋಗೋಣವೆಂದು ಒತ್ತಾಯಿಸುತ್ತಿದ್ದರು. ಮುಂದೆ ಏನು ಮಾಡಬೇಕೆಂದು ತೋರದೆ ಡ-ಗಾಮನೂ ದಿಕ್ಕೆಟ್ಟವನಂತಾಗಿದ್ದ.
ಅದೇ ಸಮಯದಲ್ಲಿ ಅದೇ ಬಂದರಿನಲ್ಲಿ ಲಂಗರು ಹಾಕಿದ್ದ ಬಹಳ ದೊಡ್ಡ ಹಡಗೊಂದು ಗಾಮನಿಗೆ ಕಂಡಿತು. ಆ ಹಡಗು ಇವರು ಪೋರ್ಚುಗಲ್ನಿಂದ ತಂದಿದ್ದ ಹಡಗುಗಳಿಗಿಂತ ಅದೆಷ್ಟೋ ಪಟ್ಟು ದೊಡ್ಡದಾಗಿತ್ತು! ಆ ಬೃಹದಾಕಾರದ ಹಡಗು ಯಾರಿಗೆ ಸೇರಿದ್ದೆಂದು ವಿಚಾರಿಸಿದಾಗ, ಅದು ಭಾರತದಿಂದ ಬಂದಿದ್ದ ವ್ಯಾಪಾರಿಯೊಬ್ಬನಿಗೆ ಸೇರಿದ್ದೆಂದು ತಿಳಿದು ಡ-ಗಾಮನ ಆಸೆ ಮತ್ತೊಮ್ಮೆ ಗರಿಗೆದರಿತು. ಆ ವ್ಯಾಪಾರಿಯನ್ನು ಸಂಪರ್ಕಿಸಿದ ಡ-ಗಾಮ, ಭಾರತಕ್ಕೆ ದಾರಿ ತೋರಿಸುವಂತೆ ಆತನನ್ನು ಕೇಳಿಕೊಂಡ. ಕಡೆಗೂ ೧೪೯೮ರ ಏಪ್ರಿಲ್ ೨೪ರಂದು ಆಫ್ರಿಕಾದ ಕರಾವಳಿಯಿಂದ ಭಾರತದತ್ತ ಇವರ ಪ್ರಯಾಣ ಆರಂಭವಾಯಿತು. ಸಮುದ್ರದಲ್ಲಿ ಮೂರು ವಾರ ಪಯಣಿಸಿದ ನಂತರ ಮೊದಲ ಭೂಪ್ರದೇಶ ಕಂಡಿತು. ಅದೇ ಭಾರತದ ಪಶ್ಚಿಮ ಕರಾವಳಿಯ ಕಲ್ಲಿಕೋಟೆ. ಆ ತೀರವನ್ನು ತಲಪಿ ಲಂಗರು ಹಾಕಿದ್ದು ೧೪೯೮ರ ಮೇ ೧೭. ಎಪ್ಪತ್ತೆöÊದು ವರ್ಷಗಳ ಸತತ ಪ್ರಯತ್ನವು ಫಲ ನೀಡಿತ್ತು, ಯೂರೋಪಿಯನ್ನರು ಮೊತ್ತಮೊದಲ ಬಾರಿಗೆ ಭಾರತವನ್ನು ಸಮುದ್ರಮಾರ್ಗವಾಗಿ ತಲಪಿದ್ದರು.
ಪೋರ್ಚುಗೀಸರ ಆಗಮನ, ಸಾಮ್ರಾಜ್ಯ ಸ್ಥಾಪನೆ
ಪೋರ್ಚುಗಲ್ ದೇಶದ ಅನೇಕ ವ್ಯಾಪಾರಿಗಳು ಸಮುದ್ರ ಮಾರ್ಗವಾಗಿ ಭಾರತಕ್ಕೆ ಬರಲಾರಂಭಿಸಿದರು. ಕೇರಳದ ಕಲ್ಲಿಕೋಟೆಯಿಂದ ಹಿಡಿದು ಗುಜರಾತ್ವರೆಗೆ ಅನೇಕ ಬಂದರುಗಳಲ್ಲಿ ಇವರ ಹಡಗುಗಳು ಬಂದಿಳಿದವು, ವ್ಯಾಪಾರಕ್ಕೆ ತೊಡಗಿದವು. ಆದರೆ, ಅವರ ಉದ್ದೇಶ ಕೇವಲ ವ್ಯಾಪಾರವಾಗಿರಲಿಲ್ಲ. ಅವರು ವ್ಯಾಪಾರದೊಡನೆ ಕ್ರೈಸ್ತ ಮತಪ್ರಚಾರಕ್ಕೂ ತೊಡಗಿದರು. ಭಾರತದ ರಾಜರು ಇದಕ್ಕೂ ಮುಕ್ತ ಅವಕಾಶ ನೀಡಿದರು, ಭಾರತೀಯರು ಯಾವುದೇ ಪ್ರತಿರೋಧ ಒಡ್ಡಲಿಲ್ಲ. ಭಾರತದಲ್ಲಿ ವ್ಯಾಪಾರ ಮತ್ತು ಕ್ರೈಸ್ತ ಮತಪ್ರಚಾರವನ್ನು ನಿರಾತಂಕವಾಗಿ ಮಾಡುತ್ತಿದ್ದ ಪೋರ್ಚುಗೀಸರು, ಇಲ್ಲಿನ ರಾಜರ ನಡುವೆ ಇದ್ದ ವೈಮನಸ್ಯವನ್ನು ಗಮನಿಸಿದರು, ಅದನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳತೊಡಗಿದರು, ಒಂದೊಂದೇ ಪ್ರದೇಶದಲ್ಲಿ ತಮ್ಮ ಆಡಳಿತವನ್ನು ಸ್ಥಾಪಿಸತೊಡಗಿದರು.
೧೪೯೮ರಲ್ಲಿ ವಾಸ್ಕೋ-ಡ-ಗಾಮ ಪ್ರಥಮ ಬಾರಿಗೆ ಭಾರತವನ್ನು ತಲಪಿದ ಸಮಯದಲ್ಲೇ ಕಾರವಾರ ಸಮೀಪದ ಅಂಜುದೀವ್ ಎಂಬ ದ್ವೀಪವನ್ನು ವಶಪಡಿಸಿಕೊಂಡು ಅಲ್ಲೊಂದು ಕೋಟೆಯನ್ನು ನಿರ್ಮಿಸಿ ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡರು. ಅಲ್ಲಿದ್ದ ವಿಜಯನಗರದ ಸಣ್ಣ ಪಡೆಗೆ ಇವರನ್ನು ತಡೆಯಲು ಸಾಧ್ಯವಾಗಲಿಲ್ಲ. ಈ ರೀತಿ ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಾಂದಿಯಾಯಿತು. ಅವರ ಪ್ರಭುತ್ವಕ್ಕೆ ಭದ್ರವಾದ ಅಡಿಪಾಯ ಹಾಕಿಕೊಟ್ಟವರಲ್ಲಿ ಮುಖ್ಯನಾದವನು ಅಫೋನ್ಸೋ ಡಿ ಆಲ್ಬುಕರ್ಕ್. ೧೫೦೩ರಲ್ಲಿ ಭಾರತಕ್ಕೆ ಬಂದಿಳಿದ ಆಲ್ಬುಕರ್ಕ್, ೧೫೦೯ರಲ್ಲಿ ಭಾರತದಲ್ಲಿ ಪೋರ್ಚುಗೀಸ್ ವ್ಯವಹಾರಗಳ ಗವರ್ನರ್ ಆಗಿ ಪೋರ್ಚುಗಲ್ ಸರ್ಕಾರದಿಂದ ನೇಮಿಸಲ್ಪಟ್ಟ. ೧೫೧೦ರಲ್ಲಿ ಆತ ಬಿಜಾಪುರದ ಸುಲ್ತಾನನಿಂದ ಗೋವಾ ವಶಪಡಿಸಿಕೊಂಡು ಪೋರ್ಚುಗೀಸರ ಕೋಟೆಯನ್ನು ಸ್ಥಾಪಿಸಿದ. ಗೋವಾದಲ್ಲಿದ್ದ ಬಿಜಾಪುರದ ಸೈನ್ಯದೊಂದಿಗೆ ಹೋರಾಡಬೇಕೆಂದು ಸಿದ್ಧತೆ ಮಾಡಿಕೊಂಡು ಹೋಗಿದ್ದ ಆಲ್ಬುಕರ್ಕ್ಗೆ ಅಲ್ಲೊಂದು ಆಶ್ಚರ್ಯ ಕಾದಿತ್ತು. ಅಲ್ಲಿನ ಜನತೆ ಕೋಟೆಯನ್ನು ಸಿಂಗರಿಸಿಟ್ಟುಕೊಂಡು, ಆಲ್ಬುಕರ್ಕ್ ಬಂದ ಕೂಡಲೇ ದಿಡ್ಡಿ ಬಾಗಿಲನ್ನು ತೆರೆದು ತಮ್ಮದೇ ರಾಜ್ಯದ ರಾಜನನ್ನು ಸ್ವಾಗತಿಸಿದಂತೆ ಸ್ವಾಗತಿಸಿ, ಸಂಭ್ರಮದಿಂದ ಮೆರವಣಿಗೆಯಲ್ಲಿ ಅರಮನೆಗೆ ಕರೆದುಕೊಂಡು ಹೋಗಿ ಸಿಂಹಾಸನದ ಮೇಲೆ ಕೂಡಿಸಿ ಕೈಕಟ್ಟಿಕೊಂಡು ನಿಂತರು! ಆ ಘಟನೆ ನಡೆಯುವ ಸ್ವಲ್ಪ ಸಮಯಕ್ಕೆ ಮುಂಚೆ ಯಾರೋ ಜ್ಯೋತಿಷಿಯೊಬ್ಬ “ಸದ್ಯದಲ್ಲೇ ಗೋವಾ ವಿದೇಶೀಯರಿಂದ ಆಳಲ್ಪಡುತ್ತದೆ” ಎಂದು ನುಡಿದಿದ್ದ ಭವಿಷ್ಯವನ್ನು ನಂಬಿದ ಅಲ್ಲಿನ ಜನರು, ಆತನಿಗೆ ಪ್ರತಿರೋಧವನ್ನೇ ಒಡ್ಡಲಿಲ್ಲ. ಹೀಗೆ ನಮ್ಮವರ ಮೂಢತನದಿಂದಲೇ ಗೋವಾದಲ್ಲಿ ವಿದೇಶೀ ಆಡಳಿತ ಪ್ರಾರಂಭವಾಯಿತು! ೧೫೧೫ರಲ್ಲಿ ಆಲ್ಬುಕರ್ಕ್ ಗತಿಸುವ ವೇಳೆಗೆ ಪಶ್ಚಿಮ ಕರಾವಳಿಯ ಅತ್ಯಂತ ಬಲಿಷ್ಠ ನೌಕಾಪಡೆಯಾಗಿ ಪೋರ್ಚುಗೀಸರು ಸ್ಥಾಪಿತಗೊಂಡಿದ್ದರು. ಮುಂದಿನ ದಿನಗಳಲ್ಲಿ ಡಿಯು, ಡಮನ್, ದಾದ್ರಾ, ನಗರಹವೇಲಿ, ಸಾಲ್ಸೆಟ್ಟೆ, ಚೌಲ್, ಬಾಂಬೆ, ಮದ್ರಾಸ್ ಸಮೀಪದ ಸ್ಯಾನ್ ಥೋಮೆ, ಬಂಗಾಳದ ಹೂಗ್ಲಿ ಮತ್ತು ಶ್ರೀಲಂಕಾದ ಹೆಚ್ಚಿನ ಭೂಭಾಗ – ಇವೆಲ್ಲಾ ಪ್ರದೇಶಗಳನ್ನು ವಶಪಡಿಸಿಕೊಂಡು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರು. ಆದರೆ, ಮುಂದಿನ ಒಂದು ಶತಮಾನದಲ್ಲಿ ಬ್ರಿಟಿಷರ ಬಲ ಹೆಚ್ಚುತ್ತಾ ಹೋಯಿತು, ಪೋರ್ಚುಗೀಸರು ಒಂದೊಂದೇ ಪ್ರದೇಶಗಳನ್ನು ಕಳೆದುಕೊಳ್ಳುತ್ತಾ ಹೋದರು. ಪೋರ್ಚುಗೀಸ್ ಸಾಮ್ರಾಜ್ಯದಲ್ಲಿ ಕಡೆಯವರೆಗೂ ಉಳಿದ ಪ್ರದೇಶಗಳೆಂದರೆ ಗೋವಾ, ಡಮನ್, ಡಿಯು, ದಾದ್ರಾ ಮತ್ತು ನಗರಹವೇಲಿ.
ಗೋವಾ ಸ್ವಾತಂತ್ರ್ಯಹೋರಾಟ
ಪೋರ್ಚುಗೀಸರ ಆಳ್ವಿಕೆ ಪ್ರಾರಂಭವಾದಂದಿನಿಂದಲೇ ಸ್ವಾತಂತ್ರ್ಯ ಹೋರಾಟವು ಆ ಪ್ರದೇಶಗಳಲ್ಲಿ ಪ್ರಾರಂಭವಾಯಿತು. ಆಗಾಗ್ಗೆ ಸ್ಥಳೀಯರು ವಿದೇಶೀ ಆಳ್ವಿಕೆಯ ನೊಗವನ್ನು ಕಿತ್ತೊಗೆಯಲು ಪ್ರಯತ್ನಿಸುತ್ತಲೇ ಇದ್ದರು. ಈ ರೀತಿ ದೀರ್ಘಕಾಲ ಪ್ರಯತ್ನಿಸಿದವರೆಂದರೆ ಗೋವಾದ ಕ್ಷತ್ರಿಯ ಕುಲಕ್ಕೆ ಸೇರಿದ ರಾಣೆಗಳು. ೧೭೫೫ರಲ್ಲಿ ಪ್ರಾರಂಭವಾದ ಇವರ ಹೋರಾಟ ೧೮೨೨ರ ಸಂಧಾನದೊಂದಿಗೆ ಮುಕ್ತಾಯವಾಯಿತು. ಅಲ್ಲಿಯವರೆಗೆ ನಡೆದಿದ್ದ ಹದಿನಾಲ್ಕು ದಂಗೆಗಳಿಂದ ಸುಸ್ತಾಗಿದ್ದ ಪೋರ್ಚುಗೀಸರೇ ಸಂಧಾನಕ್ಕೆ ಮುಂದಾಗಿದ್ದರು. ಆದರೆ, ಈ ಸಂಧಾನ ಅಲ್ಪವಿರಾಮವಷ್ಟೇ ಆಯಿತು. ದೇಶವನ್ನು ಲೂಟಿಮಾಡಲೆಂದೇ ಇಲ್ಲಿಗೆ ಬಂದಿದ್ದ ಪೋರ್ಚುಗೀಸರು ೧೮೫೨ರಲ್ಲಿ ಕೃಷಿಭೂಮಿಯ ಮೇಲೆ ದೊಡ್ಡ ಪ್ರಮಾಣದಲ್ಲಿ ಕರವನ್ನು ಹೇರಿದರು. ಇದನ್ನು ವಿರೋಧಿಸಿದ ದೀಪಾಜಿ ರಾಣೆ ಒಂದು ಸೈನ್ಯವನ್ನೇ ರಚಿಸಿ ಪೋರ್ಚುಗೀಸರೊಡನೆ ಹೋರಾಟಕ್ಕಿಳಿದ. ಈ ಹೋರಾಟದಲ್ಲಿ ಆತ ಪೋರ್ಚುಗೀಸರ ಒಂದು ಪ್ರಮುಖ ಕೋಟೆಯನ್ನು ವಶಪಡಿಸಿಕೊಂಡ. ಇವರ ಹೋರಾಟದಿಂದ ದಿಗಿಲುಗೊಂಡ ಪೋರ್ಚುಗೀಸರು ಸಂಧಾನಕ್ಕಿಳಿದರು, ರಾಣೆಗಳ ಬೇಡಿಕೆಗಳನ್ನು ಈಡೇರಿಸಿದರು. ೧೮೬೯ರಲ್ಲಿ ಕಸ್ತೂಬಾ ರಾಣೆ ಮೂರು ವರ್ಷಗಳ ಕಾಲ ಒಳಗಿಂದೊಳಗೇ ಪೋರ್ಚುಗೀಸರನ್ನು ಕಾಡಿದ. ಕೊನೆಗೂ ಸಿಕ್ಕಿಬಿದ್ದ ಆತನನ್ನು ಚಿತ್ರಹಿಂಸೆ ನೀಡಿ ಕೊಲೆಮಾಡಲಾಯಿತು. ೧೮೯೫ರಲ್ಲಿ ದಾದಾ ರಾಣೆ ತನ್ನ ೯೦೦ ಸೈನಿಕರೊಂದಿಗೆ ದಾಳಿ ಮಾಡಿದ. ಸಂಖ್ಯೆಯಲ್ಲಿ ಮತ್ತು ಸಾಮರ್ಥ್ಯದಲ್ಲಿ ಹೆಚ್ಚಿದ್ದ ಪೋರ್ಚುಗೀಸರ ಕೈ ಮೇಲಾಯಿತು. ಎಲ್ಲರನ್ನೂ ಬಂಧಿಸಿ ಪೆಸಿಫಿಕ್ ಸಾಗರದ ತಿಮೋರಿಗೆ ಒಯ್ದು ಸೆರೆಯಲ್ಲಿಡಲಾಯಿತು. ಹೆಚ್ಚಿನವರು ಅಲ್ಲೇ ಕೊನೆಯುಸಿರೆಳೆದರು. ಕಟ್ಟಕಡೆಗೆ ಪೋರ್ಚುಗೀಸರು ೧೯೧೨ರಲ್ಲಿ ಪೋರ್ಚುಗಲ್ ದೇಶದಿಂದ ಮತ್ತು ಆಫ್ರಿಕಾ ದೇಶದಲ್ಲಿದ್ದ ತಮ್ಮ ವಸಾಹತುಗಳಿಂದ ದೊಡ್ಡ ಸೇನೆಯನ್ನು ತರಿಸಿ ರಾಣೆಗಳನ್ನು ಬಗ್ಗುಬಡಿದರು.
ಅನಂತರ ಸ್ವಲ್ಪ ಕಾಲ ತಣ್ಣಗಾಗಿದ್ದ ಹೋರಾಟಕ್ಕೆ ಮತ್ತೆ ಕಾವು ಬಂದದ್ದು ದೇಶದೆಲ್ಲೆಡೆ ನಡೆಯುತ್ತಿದ್ದ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಿಂದ. ತಿಲಕರ ಬರಹಗಳಿಂದ ಸ್ಫೂರ್ತಿ ಪಡೆದ ಪುಂಡಲೀಕ ಹೆಗಡೆ, ದತ್ತಾತ್ರೇಯ ಪೈ ಮುಂತಾದವರು ಪತ್ರಿಕೆಗಳಲ್ಲಿ ದೇಶಭಕ್ತಿಯ ಲೇಖನಗಳನ್ನು ಬರೆದರು, ವಿದೇಶೀ ನೊಗವನ್ನು ಕಿತ್ತೊಗೆಯುವಂತೆ ಯುವಕರಿಗೆ ಆವಾಹನೆ ನೀಡಿದರು. ಇವುಗಳ ಸ್ಫೂರ್ತಿಯಿಂದ ಗೋವಾದಲ್ಲಿನ ಹೋರಾಟ ಮತ್ತೆ ಪ್ರಾರಂಭವಾದದ್ದು ೧೯೩೦ರ ದಶಕದಲ್ಲಿ – ಅಹಿಂಸಾತ್ಮಕ ಹೋರಾಟಗಳು ಪ್ರಾರಂಭವಾದವು. ೧೯೨೮ರಲ್ಲಿ ಡಾ|| ಟಿ.ಬಿ. ಕುನ್ಹಾ ಅವರು ಪ್ರಾರಂಭಿಸಿದ್ದ ಗೋವಾ ನ್ಯಾಷನಲ್ ಕಾಂಗ್ರೆಸ್ನ ನೇತೃತ್ವದಲ್ಲಿ ಈ ಹೋರಾಟ ನಡೆಯಿತು. ೧೯೪೬ರಲ್ಲಿ ರಾಮಮನೋಹರ ಲೋಹಿಯಾ ಚಳವಳಿ ನಡೆಸಿದರು. ಸರ್ಕಾರ ಅವರನ್ನು ಬಂಧಿಸಿತು. ಅವರ ಬಂಧನ ಸ್ವಾತಂತ್ರ್ಯಯಜ್ಞಕ್ಕೆ ತುಪ್ಪವನ್ನು ಸುರಿದಂತಾಯಿತು. ಕುನ್ಹಾ, ಕಾಕೋಡ್ಕರ್, ಲಕ್ಷ್ಮೀಕಾಂತ್, ಬೆಂಗ್ರೆಯವರು ಪ್ರತಿಭಟನೆ ನಡೆಸಿ ಬಂಧಿತರಾದರು. ಅವರೆಲ್ಲರನ್ನೂ ದೂರದ ಪೋರ್ಚುಗಲ್ನಲ್ಲಿನ ಸೆರೆಮನೆಗೆ ತಳ್ಳಲಾಯಿತು. ಹೀಗೆ ಪೋರ್ಚುಗೀಸರು ಸ್ವಾತಂತ್ರ್ಯ ಹೋರಾಟದ ಎಲ್ಲ ಪ್ರಯತ್ನಗಳನ್ನೂ ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಿದರು. ಬ್ರಿಟಿಷರು ಭಾರತ ಬಿಟ್ಟು ಹೋಗುವ ಸಮಯದಲ್ಲೇ ಗೋವಾಕ್ಕೂ ಸ್ವಾತಂತ್ರ್ಯ ನೀಡುವಂತೆ ಪೋರ್ಚುಗೀಸರನ್ನು ಭಾರತ ರಾಷ್ಟ್ರೀಯ ಕಾಂಗ್ರೆಸ್ ಒತ್ತಾಯಿಸಿತು. ಪೋರ್ಚುಗೀಸರು ಇದಕ್ಕೆ ಒಪ್ಪಲಿಲ್ಲ. “ಗೋವಾ ಪೋರ್ಚುಗಲ್ ದೇಶದ, ಪೋರ್ಚುಗೀಸ್ ಸಾಮ್ರಾಜ್ಯದ ಅವಿಭಾಜ್ಯ ಅಂಗ” ಎಂದೇ ಅವರು ಸಾರಿದರು.
ದಬ್ಬಾಳಿಕೆ, ಲೂಟಿ ಮತ್ತು ಮತಾಂತರ
ಪೋರ್ಚುಗೀಸ್ ಆಡಳಿತದೊಂದಿಗೇ ಪ್ರಾರಂಭವಾದದ್ದು ಮತಾಂತರದ ಆಕ್ರಮಣ. ತಮ್ಮ ಕೈಯಲ್ಲಿದ್ದ ಅಧಿಕಾರವನ್ನು ಬಳಸಿ ಹಿಂದುಗಳನ್ನು ಕ್ರೈಸ್ತರನ್ನಾಗಿ ಮತಾಂತರಿಸುವ ಕಾರ್ಯವನ್ನೂ ಅವರು ಪ್ರಾರಂಭಿಸಿದರು. ಅವರ ಮತಾಂತರದ ಪರಿಯನ್ನು ತಿಳಿಸಲು ಒಂದು ಉದಾಹರಣೆ: ಕಂಕೋಲಿಮ್, ಗೋವೆಯ ಪ್ರಮುಖ ಗ್ರಾಮಗಳಲ್ಲೊಂದು. ೧೫೬೭ರ ಡಿಸೆಂಬರ್ ೪ರಂದು ಪೋರ್ಚುಗೀಸರು ಗೋವೆಯಲ್ಲಿ ಒಂದು ಹೊಸ ಕಾನೂನನ್ನು ಜಾರಿಗೊಳಿಸಿದರು. ೧೫ ವಯೋಮಾನ ದಾಟಿದವರೆಲ್ಲರೂ ಚರ್ಚಿಗೆ ಬರುವುದು ಕಡ್ಡಾಯ. ಕ್ರಿಸ್ತನ ಸಂದೇಶವನ್ನು ಕಿವಿಗೆ ತುರುಕುವ ಪರಿ ಇದು. ಆ ಗ್ರಾಮದಲ್ಲಿದ್ದ ಶೂರ ಕ್ಷತ್ರಿಯ ಗಾಂವ್ಕರ್ ಕುಟುಂಬಗಳು ಕಾನೂನನ್ನು ಪಾಲಿಸಲಿಲ್ಲ. ಇವರನ್ನು ಮಟ್ಟಹಾಕಲು ಕಾಯುತ್ತಿದ್ದ ಪೋರ್ಚುಗೀಸ್ ಸರ್ಕಾರ ೧೫೮೩ರಲ್ಲಿ ಕಂಕೋಲಿಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ೨೩೪ ದೇವಸ್ಥಾನಗಳಿಗೆ ಸೈನ್ಯವನ್ನು ನುಗ್ಗಿಸಿ ನಾಶಗೊಳಿಸಿದರು. ಸ್ವಾಭಿಮಾನಿಗಳಾದ ಕಂಕೋಲಿಮ್ ಜನತೆ ಇದರಿಂದ ರೊಚ್ಚಿಗೆದ್ದರು, ಸರ್ಕಾರದ ವಿರುದ್ಧ ತಿರುಗಿಬಿದ್ದರು. ಕರನಿರಾಕರಣೆ ಚಳವಳಿ ಪ್ರಾರಂಭಿಸಿದರು. ಗಾಂಧಿಯವರಿಗಿಂತ ೩೩೮ ವರ್ಷಗಳ ಮೊದಲೇ ಈ ಚಳವಳಿಯನ್ನು ಪ್ರಾರಂಭಿಸಿದ್ದವರು ಕಂಕೋಲಿಮ್ನ ಜನತೆ. ಜೊತೆಗೆ ಹಿಂದು ಹಬ್ಬ-ಹರಿದಿನಗಳನ್ನು, ಆಚರಣೆಗಳನ್ನು ಮೊದಲಿಗಿಂತಲೂ ವಿಜೃಂಭಣೆಯಿಂದ ಆಚರಿಸಲಾರಂಭಿಸಿದರು. ಪೋರ್ಚುಗೀಸರಿಂದ ನಾಶಗೊಂಡಿದ್ದ ದೇವಸ್ಥಾನಗಳನ್ನು ಮತ್ತಷ್ಟು ಭವ್ಯವಾಗಿ ನಿರ್ಮಿಸುವ ಕಾರಸೇವೆಗಳೂ ನಡೆದವು. ಹೀಗಿತ್ತು ಅಲ್ಲಿನ ಜನರ ಸ್ವಾಭಿಮಾನದ ತೀವ್ರತೆ, ಪ್ರತಿಭಟನೆಯ ಪರಿ. ಈ ಎಲ್ಲ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದ ಗಾಂವ್ಕರ್ ನಾಯಕರಿಗೆ ಪಾಠ ಕಲಿಸುವ ಹುನ್ನಾರವನ್ನು ಧೂರ್ತ ಪೋರ್ಚುಗೀಸರು ಮಾಡಿದರು. ಅದಕ್ಕಾಗಿ ಹದಿನಾರು ಜನ ಗಾಂವ್ಕರ್ ನಾಯಕರನ್ನು ಪಕ್ಕದ ಹಳ್ಳಿಯ ಕೋಟೆಗೆ ಸಂಧಾನಕ್ಕೆಂದು ಕರೆಸಿಕೊಂಡರು. ಹಾಗೆ ಬಂದವರನ್ನು ವಂಚನೆಯಿಂದ ಗುಂಡಿಟ್ಟು ದಾರುಣವಾಗಿ ಕೊಲೆಗೈದರು. ಹದಿನೈದು ಜನ ತೀರಿಕೊಂಡರೆ, ಒಬ್ಬ ಮಾತ್ರ ಶೌಚಾಲಯದ ಕಿಟಕಿಯಿಂದ ನುಸುಳಿ ಸಮುದ್ರಕ್ಕೆ ಹಾರಿ ತಪ್ಪಿಸಿಕೊಂಡು ಕಾರವಾರ ಸೇರಿದ. ಕಾಲಕ್ರಮೇಣ ಕಂಕೋಲಿಮ್ನ ಹಾಗೂ ಆಸುಪಾಸಿನ ಗ್ರಾಮಗಳ ಜನರನ್ನು ಕ್ರೈಸ್ತರನ್ನಾಗಿ ಮತಾಂತರಿಸಿದರು.
ಭಾರತಕ್ಕೆ ಸ್ವಾತಂತ್ರ್ಯ- ಕಾವೇರಿದ ಹೋರಾಟ
೧೯೪೭ರ ಆಗಸ್ಟ್ನಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಗೋವಾದ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ಕಾವು ಸಿಕ್ಕಿತು. ಅಲ್ಲಿನ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಲು ಸಭೆ, ಸಮಾರಂಭಗಳನ್ನು ನಡೆಸಿದರು, ಸರ್ಕಾರಕ್ಕೆ ಮನವಿ-ಪತ್ರಗಳನ್ನು ಸಲ್ಲಿಸಿದರು. ‘ಆಜಾದ್ ಗೋಮಾಂತಕ್ ದಲ್’, ‘ಗೋವಾ ಲಿಬರೇಷನ್ ಆರ್ಮಿ’ ಮುಂತಾದ ಸಂಘಟನೆಗಳು ಸಶಸ್ತ್ರ ಹೋರಾಟಕ್ಕಿಳಿದವು, ಕಂಡಕಂಡಲ್ಲಿ ಪೋರ್ಚುಗೀಸರನ್ನು ಗುಂಡಿಟ್ಟು ಕೊಲ್ಲಲಾರಂಭಿಸಿದರು, ಶಸ್ತಾçಗಾರಗಳನ್ನು ನಾಶಮಾಡಿದರು. ಕ್ರಾಂತಿಕಾರಿಗಳ ಈ ಹೋರಾಟವನ್ನು ಪೋರ್ಚುಗೀಸರು ತಮ್ಮ ಕೈಕೆಳಗಿದ್ದ ಆಫ್ರಿಕಾದ ಗುಲಾಮರನ್ನು ಬಳಸಿ ಮಟ್ಟಹಾಕಿದರು. ಪೋರ್ಚುಗೀಸರ ಕೈಕೆಳಗಿದ್ದ ಗೋವಾ ಮತ್ತು ಇತರ ಪ್ರದೇಶಗಳನ್ನು ಭಾರತಕ್ಕೆ ಶಾಂತಿಯುತವಾಗಿ ವರ್ಗಾಯಿಸುವಂತೆ ಭಾರತ ಸರ್ಕಾರವು ೧೯೪೯ರಲ್ಲಿ ಪೋರ್ಚುಗಲ್ ಸರ್ಕಾರಕ್ಕೆ ಅಧಿಕೃತ ಪತ್ರವನ್ನು ಬರೆಯಿತು. ಇದಕ್ಕೆ ಉತ್ತರಿಸುವ ಬದಲು ಪೋರ್ಚುಗೀಸರು ಗೋವಾದ ಜನರ ಮೇಲೆ ಅತ್ಯಾಚಾರಕ್ಕೆ ಕೈಹಾಕಿತು, ಅಲ್ಲಿನ ಜನರ ಹಕ್ಕುಗಳನ್ನು ಕಸಿದುಕೊಂಡಿತು, ಅಹಿಂಸಾತ್ಮಕ ಹೋರಾಟ ನಡೆಸುತ್ತಿದ್ದವರನ್ನೆಲ್ಲ ಬಂಧಿಸಿ ಸೆರೆಮನೆಗೆ ತಳ್ಳಿತು.
೧೯೫೦ರ ಜನವರಿ ೨೬ರಂದು ಭಾರತವು ಗಣರಾಜ್ಯವೆಂದು ಘೋಷಣೆಯಾದ ನಂತರ ಪೂರ್ವ ಕರಾವಳಿಯ ಫ್ರೆಂಚರು ತಮ್ಮ ಪ್ರದೇಶಗಳನ್ನು ಭಾರತದೊಡನೆ ವಿಲೀನಗೊಳಿಸುವುದಕ್ಕೆ ಒಪ್ಪಿ ಭಾರತದಿಂದ ನಿರ್ಗಮಿಸಿದ್ದು ಗೋವಾ ಮುಕ್ತಿಯ ಆಸೆಗೆ ಮರುಹುಟ್ಟು ನೀಡಿತು. ಮತ್ತೊಮ್ಮೆ ಭಾರತ ಸರ್ಕಾರ ಗೋವಾ ಮುಕ್ತಿಗೆ ಗಂಭೀರ ಪ್ರಯತ್ನಗಳನ್ನು ನಡೆಸಿತು. ಪೋರ್ಚುಗಲ್ನ ಲಿಸ್ಬನ್ ನಲ್ಲಿ ಭಾರತದ ದೂತಾವಾಸವನ್ನು ತೆರೆದು ಪೋರ್ಚುಗಲ್ ಸರ್ಕಾರದೊಡನೆ ಮಾತುಕತೆಗೆ ಪ್ರಯತ್ನಿಸಿತು. ಆದರೆ, ಅಲ್ಲಿನ ಸರ್ಕಾರ ಭಾರತದ ಪ್ರಯತ್ನದ ಮೇಲೆ ತಣ್ಣೀರೆರಚಿತು. ಇತ್ತ ಗೋವಾ ಸರ್ಕಾರದ ದಮನಕಾರ್ಯ ಮತ್ತಷ್ಟು ಹೆಚ್ಚಾಯಿತು, ಹೋರಾಟಗಾರರ ಮೇಲಿನ ದೌರ್ಜನ್ಯ ತಾರಕಕ್ಕೇರಿತು. ಭಾರತದ ಎಲ್ಲ ಪ್ರಯತ್ನಗಳು ವಿಫಲವಾಗಿ ೧೯೫೩ರ ಜೂನ್ನಲ್ಲಿ ಲಿಸ್ಬನ್ನ ದೂತಾವಾಸವನ್ನು ಮುಚ್ಚಬೇಕಾಯಿತು.
ದಾದ್ರಾ ಹಾಗೂ ನಗರಹವೇಲಿಗಳ ವಿಮುಕ್ತಿ
ಪೋರ್ಚುಗೀಸರ ದೌರ್ಜನ್ಯದ ಅಟ್ಟಹಾಸಕ್ಕೆ ಕೊನೆಯಿಲ್ಲ ಮತ್ತು ಶಾಂತಿಯುತ ಹೋರಾಟದಿಂದ ಪ್ರಯೋಜನವಿಲ್ಲ ಎನ್ನುವುದು ಸ್ಪಷ್ಟವಾದಾಗ ಡಮನ್ ಸಮೀಪದ ದಾದ್ರಾದ ಹೋರಾಟಗಾರರು ಬಲಪ್ರಯೋಗದಿಂದ ಪೋರ್ಚುಗೀಸರನ್ನು ಓಡಿಸಿ ೧೯೫೪ರ ಜುಲೈ ೨೧ರಂದು ದಾದ್ರಾ ವಿಮುಕ್ತಿಗೊಳಿಸಿದರು. ಅದಾದ ಹನ್ನೊಂದು ದಿನಕ್ಕೆ ದಾದ್ರಾ ಸಮೀಪದ ನಗರಹವೇಲಿ ಆಗಸ್ಟ್ ೧ರಂದು ಪೋರ್ಚುಗೀಸ್ ಆಳ್ವಿಕೆಯನ್ನು ಕಿತ್ತೊಗೆದು ಸ್ವಾತಂತ್ರ್ಯ ಘೋಷಿಸಿಕೊಂಡಿತು. ಈ ಎರಡು ಘಟನೆಗಳ ವಿರುದ್ಧ ಪೋರ್ಚುಗೀಸರು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಿದರು. ನಾಲ್ಕು ವರ್ಷಗಳ ವಾದ-ವಿವಾದದ ನಂತರ ೧೯೬೦ರ ಏಪ್ರಿಲ್ ೧೨ರಂದು ಅಂತರರಾಷ್ಟ್ರೀಯ ನ್ಯಾಯಾಲಯ ನೀಡಿದ ಅಂತಿಮ ತೀರ್ಪು ಭಾರತದ ಪರವಾಗಿತ್ತು, ದಾದ್ರಾ-ನಗರಹವೇಲಿ ಪ್ರದೇಶಗಳು ಪೋರ್ಚುಗೀಸರಿಗೆ ಸೇರತಕ್ಕದ್ದಲ್ಲ ಎಂದು ಘೋಷಿಸಲಾಯಿತು. ಆಗಸ್ಟ್ ೧೯೬೧ರಲ್ಲಿ ಈ ಪ್ರದೇಶಗಳು ಅಧಿಕೃತವಾಗಿ ಭಾರತದೊಡನೆ ವಿಲೀನಗೊಂಡವು.
ಪೋರ್ಚುಗೀಸರ ದಬ್ಬಾಳಿಕೆ – ಪ್ರತಿಭಟನೆ
ದಾದ್ರಾ ಮತ್ತು ನಗರಹವೇಲಿಗಳು ಮುಕ್ತವಾದ ನಂತರ ಗೋವಾ ಮುಕ್ತಿಸಂಗ್ರಾಮದ ಹೋರಾಟ ಮತ್ತಷ್ಟು ತೀವ್ರಗೊಂಡಿತು. ೧೯೫೫ರ ಆಗಸ್ಟ್ ೧೪-೧೫ರಂದು ಕೈಯಲ್ಲಿ ಭಾರತದ ತ್ರಿವರ್ಣಧ್ವಜವನ್ನು ಎತ್ತಿ ಹಿಡಿದ ನೂರಾರು ಸತ್ಯಾಗ್ರಹಿಗಳು ಏಕಕಾಲದಲ್ಲಿ ಗೋವಾ, ಡಮನ್ ಮತ್ತು ಡಿಯು ಪ್ರದೇಶಗಳಿಗೆ ಎಲ್ಲ ದಿಕ್ಕುಗಳಿಂದ ನುಗ್ಗಿದರು. ಗೋವಾದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲ ನೀಡುವುದು, ದೌರ್ಜನ್ಯಕ್ಕೆ ಒಳಗಾಗಿದ್ದ ಅಲ್ಲಿನ ಹೋರಾಟಗಾರರಿಗೆ ಸಹಾನುಭೂತಿ ತೋರಿ ಅವರ ಕೈ ಬಲಪಡಿಸುವುದು ಈ ಶಾಂತಿಯುತ ಸತ್ಯಾಗ್ರಹದ ಉದ್ದೇಶವಾಗಿತ್ತು. ಆದರೆ, ಗೋವಾದ ಗಡಿಪ್ರದೇಶವನ್ನು ಕಾಯುತ್ತಿದ್ದ ಪೋರ್ಚುಗೀಸ್ ಸೈನ್ಯ ಮತ್ತು ಅಲ್ಲಿನ ಪೊಲೀಸರು ಸತ್ಯಾಗ್ರಹಿಗಳನ್ನು ಗಡಿಯಲ್ಲೇ ತಡೆದು, ಅವರ ಮೇಲೆ ಲಾಠಿಪ್ರಹಾರ ನಡೆಸಿದರು ಮತ್ತು ಅವರ ಮೇಲೆ ಗುಂಡು ಹಾರಿಸಿದರು. ೨೨ ಸತ್ಯಾಗ್ರಹಿಗಳು ಹುತಾತ್ಮರಾದರು, ೨೨೫ ಸತ್ಯಾಗ್ರಹಿಗಳಿಗೆ ಗಂಭೀರ ಗಾಯಗಳಾದವು. ಅಷ್ಟಕ್ಕೇ ತೃಪ್ತರಾಗದ ಪೋರ್ಚುಗೀಸ್ ಪೊಲೀಸರು ಗೋವಾದ ನಾಗರಿಕರ ಮೇಲೂ ಹಲ್ಲೆನಡೆಸಿ ನೂರಾರು ಜನರನ್ನು ಸೆರೆಮನೆಗೆ ತಳ್ಳಿದರು.
ಪೋರ್ಚುಗೀಸರ ಈ ರಾಕ್ಷಸೀ ಕೃತ್ಯ ಭಾರತದಾದ್ಯಂತ ಪ್ರತಿಧ್ವನಿಸಿತು, ಎಲ್ಲೆಡೆ ಪ್ರತಿಭಟನಾ ಸಭೆಗಳು, ಸಮಾರಂಭಗಳು ನಡೆದವು. ಪೋರ್ಚುಗೀಸ್ ಸರ್ಕಾರದ ದಮನನೀತಿ ತೀವ್ರ ಖಂಡನೆಗೊಳಗಾಯಿತು. ನಮ್ಮದೇ ನೆಲದಲ್ಲಿ ನಮ್ಮ ಜನರನ್ನು ತುಳಿಯುತ್ತಿರುವ ಪೋರ್ಚುಗೀಸ್ ಆಡಳಿತವನ್ನು ಪೊಲೀಸ್ ಕಾರ್ಯಾಚರಣೆಯ ಮೂಲಕ ಕಿತ್ತೆಸೆಯುವಂತೆ ದೇಶದ ಸಮಸ್ತ ಜನರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಜಗತ್ತಿನ ವಿವಿಧ ದೇಶಗಳು ಪೋರ್ಚುಗೀಸರ ಕ್ರೌರ್ಯವನ್ನು ಖಂಡಿಸಿದವು. ಸಂಯುಕ್ತ ರಾಷ್ಟ್ರ ಸಂಘವು ಪೋರ್ಚುಗೀಸ್ ಸರ್ಕಾರದಿಂದ ವಿವರಣೆ ಕೇಳಿತು. ಇದಕ್ಕೆ ಪೋರ್ಚುಗೀಸ್ ಸರ್ಕಾರದ ಉತ್ತರವೆಂದರೆ, “ಗೋವಾ ಪೋರ್ಚುಗೀಸರ ವಸಾಹತು ಪ್ರದೇಶವಲ್ಲ. ಅದು ಪೋರ್ಚುಗಲ್ ದೇಶದ ಅವಿಭಾಜ್ಯ ಅಂಗ. ಅಲ್ಲಿ ನಡೆಯುವ ಘಟನೆಗಳು ನಮ್ಮ ದೇಶದ ಆಂತರಿಕ ಭದ್ರತೆಗೆ ಸಂಬಂಧಿಸಿದವು. ಅವುಗಳನ್ನು ಕೇಳುವ ಹಕ್ಕು ಸಂಯುಕ್ತ ರಾಷ್ಟ್ರ ಸಂಘಕ್ಕಾಗಲಿ, ಯಾವುದೇ ದೇಶಕ್ಕಾಗಲಿ ಇಲ್ಲ” – ಎಂದು. ಸಂಯುಕ್ತ ರಾಷ್ಟ್ರ ಸಂಘವು ಪೋರ್ಚುಗೀಸರ ಪ್ರತಿಕ್ರಿಯೆಯನ್ನು ಖಂಡಿಸಿತು ಮತ್ತು ಯಾವ ದೇಶವೂ ಪೋರ್ಚುಗೀಸರಿಗೆ ಯಾವ ರೀತಿಯಲ್ಲೂ ಸಹಾಯ ನೀಡಬಾರದೆಂದು ನಿರ್ಬಂಧ ಹಾಕಿತು.
ಭಾರತ ಸರ್ಕಾರದ ಶಾಂತಿಯುತ ಪ್ರಯತ್ನಗಳೆಲ್ಲವೂ ವಿಫಲಗೊಂಡವು. ಪೋರ್ಚುಗೀಸರನ್ನು ಸತ್ಯಾಗ್ರಹ ಹಾಗೂ ಅಹಿಂಸೆಯ ಮೂಲಕ ತೊಲಗಿಸುವುದು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಯಿತು. ಅಹಿಂಸೆಯಿಂದಲೇ ಎಲ್ಲವೂ ಸಾಧ್ಯ ಎನ್ನುತ್ತಿದ್ದ ಭಾರತದ ಆಗಿನ ಪ್ರಧಾನಮಂತ್ರಿಗಳಿಗೆ ವಾಸ್ತವ ಅರಿವಾಗಲಾರಂಭಿಸಿತು. ಚತುರೋಪಾಯದ ನಾಲ್ಕನೆಯ ಅಂಗವಾದ ದಂಡಕ್ಕೂ ಸಿದ್ಧವಾಗಬೇಕೆಂದು ಅರ್ಥವಾಯಿತು. ಗೋವಾ ಮುಕ್ತಿಗಾಗಿ ಮುಂದೆ ನಡೆದ ಕಾರ್ಯಾಚರಣೆಯೇ “ಆಪರೇಷನ್ ವಿಜಯ್”.
ಭಾರತವು ಗೋವಾ ವಿಮುಕ್ತಿಗಾಗಿ ಸೈನ್ಯವನ್ನು ಕಳುಹಿಸಲಿದೆ ಎನ್ನುವ ಸೂಚನೆಗಳು ಪೋರ್ಚುಗೀಸರಿಗೆ ಸಿಕ್ಕಿತು. ಪೋರ್ಚುಗಲ್ನ ಪ್ರಧಾನಮಂತ್ರಿಗಳಾಗಿದ್ದ ಸಾಲಜಾರ್ ಅವರು ಗೋವಾದ ಗವರ್ನರ್-ಜನರಲ್ ಆಗಿದ್ದ ವಸ್ಸಾಲೋ ಎ ಸೆಲ್ವ ಅವರಿಗೆ ‘ಕಟ್ಟಕಡೆಯ ವ್ಯಕ್ತಿ ಉಳಿಯುವವರೆಗೆ ಹೋರಾಡಿ, ಕನಿಷ್ಠ ಪಕ್ಷ ಎಂಟು ದಿನಗಳಾದರೂ ಭಾರತದ ಸೈನ್ಯವನ್ನು ತಡೆಯಿರಿ’ ಎಂದು ಸಂದೇಶ ಕಳುಹಿಸಿದರು. ಎಂಟು ದಿನಗಳಲ್ಲಿ ಭಾರತದ ವಿರುದ್ಧ ಅಂತರರಾಷ್ಟ್ರೀಯ ಬೆಂಬಲವನ್ನು ಕ್ರೋಡೀಕರಿಸಬಹುದೆನ್ನುವ ವಿಶ್ವಾಸ ಅವರಿಟ್ಟುಕೊಂಡಿದ್ದರು. ಪೋರ್ಚುಗೀಸರ ಬಳಿ ಇದ್ದದ್ದು ಸುಮಾರು ೪೦೦೦ ಜನ ಸೈನಿಕರು, ಎರಡು ಸರಕು ಸಾಗಾಣಿಕೆ ವಿಮಾನಗಳು, ಒಂದು ಹಡಗು, ಮೂರು ಕಾವಲು ಹಡಗುಗಳು, ಮೂರು ಗಸ್ತು ತಿರುಗುವ ಮೋಟಾರ್ ಬೋಟುಗಳು, ಐದು ವ್ಯಾಪಾರೀ ಹಡಗುಗಳು, ಸುಮಾರು ೧೦೦೦ ಪೊಲೀಸ್ ಅಧಿಕಾರಿಗಳು ಮತ್ತು ೪೦೦ ಗಡಿ ಕಾಯುವ ರಕ್ಷಕರು.
‘ಆಪರೇಷನ್ ವಿಜಯ್’ಗೆ ಸಿದ್ಧತೆ
ಪೋರ್ಚುಗೀಸರ ಬಲಾಬಲಗಳನ್ನು ಅಳೆದ ಭಾರತ ಸರ್ಕಾರ ಗೋವಾ ವಿಮುಕ್ತಿಗಾಗಿ ಭಾರತದ ರಕ್ಷಣಾ ಪಡೆಗಳ ಮೂರು ವಿಭಾಗಗಳಾದ ಭೂಸೇನೆ, ಜಲಸೇನೆ ಮತ್ತು ವಾಯುಸೇನೆಗಳೆಲ್ಲವನ್ನೂ ಬಳಸಲು ನಿರ್ಧರಿಸಿತು. ಮೇಜರ್ ಜನರಲ್ ಕ್ಯಾಂಡೆತ್ ಅವರು ವಿವರವಾದ ಯೋಜನೆ ಸಿದ್ಧಪಡಿಸಿದರು. ಗೋವಾ, ಡಿಯು, ಡಮನ್ ಮೂರು ಕಾಲೊನಿಗಳ ಮೇಲೂ ಏಕಕಾಲಕ್ಕೆ ದಾಳಿ ಮಾಡುವ ಯೋಜನೆ ತಯಾರಿಸಿ, ರಕ್ಷಣಾ ಪಡೆಗಳಿಗೆ ಸೂಚನೆ ನೀಡಿದರು. ೧೯೬೧ರ ಡಿಸೆಂಬರ್ ೧೬ರಂದು ದಾಳಿ ಮಾಡುವುದೆಂದು ನಿರ್ಧಾರವಾಯಿತು. ಮುಂದೆ ಇದನ್ನು ಡಿಸೆಂಬರ್ ೧೮ ಎಂದು ಬದಲಿಸಲಾಯಿತು.
ಅವರು ಮಾಡಿದ ಯೋಜನೆಯ ಸ್ಥೂಲ ರೂಪ ಹೀಗಿದೆ: ಕೆಳಗೆ ತಿಳಿಸಿರುವ ಎಲ್ಲ ದಾಳಿಗಳನ್ನೂ ಏಕಕಾಲಕ್ಕೆ ಮಾಡುವುದು. ಸೈನ್ಯಕ್ಕೆ ಒತ್ತಾಸೆಯಾಗಿ ಜಲಸೇನೆ ಮತ್ತು ವಾಯುಸೇನೆಗಳು ಕೆಲಸ ಮಾಡಬೇಕು.
ಗೋವಾ ಆಕ್ರಮಣದ ಯೋಜನೆ: ಉತ್ತರದಿಕ್ಕಿನಿಂದ ೫೦ ಪ್ಯಾರಾಚೂಟ್ ಬ್ರಿಗೇಡ್, ೪೮ ಬ್ರಿಗೇಡ್ ಹಾಗೂ ೬೩ ಬ್ರಿಗೇಡ್ಗಳು. ಪೂರ್ವ ದಿಕ್ಕಿನಿಂದ ಮತ್ತು ದಕ್ಷಿಣ ದಿಕ್ಕಿನಿಂದ ೨೦ ಇನ್ಫಾಂಟ್ರಿ ಬ್ರಿಗೇಡ್ ಏಕಕಾಲಕ್ಕೆ ದಾಳಿ ಮಾಡಿ ಪಣಜಿ ಹಾಗೂ ಮರ್ಮಗೋವಾ ನಗರಗಳನ್ನು ಸ್ವತಂತ್ರಗೊಳಿಸುವುದು. ೫೦ ಪ್ಯಾರಾಬ್ರಿಗೇಡ್ ದೋಡಾಮಾರ್ಗ್ ದಾರಿಯಲ್ಲಿ ಹೊರಟು ಅಸ್ಸೋನಾರ ಮೂಲಕ ಬಿಚೋಲಿಮ್ ತಲಪುವುದು. ಅಲ್ಲಿ ತಮ್ಮಲ್ಲಿದ್ದ ಪಡೆಯನ್ನು ಎರಡಾಗಿ ವಿಂಗಡಿಸಿ, ಒಂದು ಭಾಗವನ್ನು ಪಶ್ಚಿಮ ದಿಕ್ಕಿನ ಮಾಪುಸಾ ಕಡೆಗೂ, ಮತ್ತೊಂದು ಭಾಗವನ್ನು ದಕ್ಷಿಣದ ಬೇಟಿಮ್ ಕಡೆಗೂ ಕಳಿಸುವುದು. ಪೂರ್ವದಿಂದ ಬರುವ ಸೈನಿಕರು ಅನ್ಮೋಡ್ ಮಾರ್ಗವಾಗಿ ಮೋಹೆಮ್ ಮೂಲಕ ಪೋಂಡಾ ತಲಪುವುದು. ದಕ್ಷಿಣದಿಂದ ಬರುವ ೨೦ ಇನ್ಫಾಂಟ್ರಿ ಬ್ರಿಗೇಡ್ ಸೈನಿಕರು ಕಾರವಾರದಿಂದ ಹೊರಟು ಮಜಲಿತೋ ಮಾರ್ಗವಾಗಿ ಕಾಣಕೋಣ ತಲಪುವುದು.
ಡಿಯು ಆಕ್ರಮಣದ ಯೋಜನೆ: ೨೦ ರಜಪೂತ್ ಮತ್ತು ೪ ಮದ್ರಾಸ್ ಬ್ರಿಗೇಡ್ಗಳು ಡಿಯು ವಿಮುಕ್ತಿಗೊಳಿಸುವುದು. ಸೈನಿಕರು ರಾತ್ರಿಯ ಸಮಯದಲ್ಲಿ ಸಣ್ಣ ತೆಪ್ಪಗಳ ಮೇಲೆ ಮತ್ತು ಉತ್ತರ ದಿಕ್ಕಿನಿಂದ ಭೂಮಾರ್ಗವಾಗಿ ದ್ವೀಪವನ್ನು ಪ್ರವೇಶಿಸಿ ಮೊದಲಿಗೆ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡು, ನಂತರ ಡಿಯು ನಗರ ಹಾಗೂ ಕೋಟೆಯನ್ನು ವಶಪಡಿಸಿಕೊಳ್ಳುವುದು. ೪ ಮದ್ರಾಸ್ ಬ್ರಿಗೇಡ್ ಸೈನಿಕರು ಡಿಯುವಿನ ಪೂರ್ವೋತ್ತರಕ್ಕಿರುವ ಗೋಗ್ಲಾ ವಶಪಡಿಸಿಕೊಂಡು, ಪಶ್ಚಿಮದಿಂದ ಆಕ್ರಮಿಸುವ ೨೦ ಬ್ರಿಗೇಡಿನ ಸೈನಿಕರಿಗೆ ಬೆಂಬಲವಾಗಿ ನಿಲ್ಲಬೇಕು.
ಡಮನ್ ಆಕ್ರಮಣದ ಯೋಜನೆ: ೧ ಮರಾಠಾ ಬ್ರಿಗೇಡ್ ಡಮನ್ ಪ್ರದೇಶವನ್ನು ಮುಕ್ತಿಗೊಳಿಸುವುದು. ಈ ಪಡೆಗಳು ವಾಪಿ ಮಾರ್ಗವಾಗಿ ಹೊರಟು ಡಮನ್ ನಗರದ ಉತ್ತರಕ್ಕಿರುವ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡು, ನಂತರ ಡಮನ್ ವಶಪಡಿಸಿಕೊಳ್ಳುವುದು.
ಜಲಸೇನೆಯು ಅಂಜುದೀವ್ ವಿಮುಕ್ತಿಗೊಳಿಸಬೇಕು, ಮರ್ಮಗೋವಾ, ಅಗುಡಾ, ಡಮನ್ ಮತ್ತು ಡಿಯು ಪ್ರದೇಶಗಳಿಂದ ಪೋರ್ಚುಗೀಸರಾರೂ ಜಲಮಾರ್ಗದ ಮೂಲಕ ತಪ್ಪಿಸಿಕೊಳ್ಳದಂತೆ ಮತ್ತು ಅವರಿಗೆ ಹೊರಗಿನಿಂದ ಯಾವುದೇ ಸಹಾಯ ಸಿಗದಂತೆ ನೌಕೆಗಳನ್ನು ರಕ್ಷಣಾತ್ಮಕವಾಗಿ ನಿಲ್ಲಿಸುವುದು, ಪೋರ್ಚುಗೀಸರ ನೌಕೆಗಳನ್ನು ನಿಷ್ಕಿçಯಗೊಳಿಸುವುದು ಅಥವಾ ಮುಳುಗಿಸುವುದು. ಈ ಕಾರ್ಯಕ್ಕಾಗಿ
ಐ.ಎನ್.ಎಸ್. ಮೈಸೂರ್ ಮತ್ತು ಐ.ಎನ್.ಎಸ್. ತ್ರಿಶೂಲ್ ಎಂಬ ಎರಡು ಸಮರನೌಕೆಗಳನ್ನು ಮೀಸಲಿಡಲಾಯಿತು.
ವಾಯುಸೇನೆಯು ಅಗತ್ಯಬಿದ್ದಲ್ಲಿ ಮಾತ್ರ ದಾಳಿಯಲ್ಲಿ ಭಾಗವಹಿಸುವುದು, ಅಲ್ಲಿಯವರೆಗೆ ಭೂಸೇನೆಗೆ ಬೆಂಬಲವಾಗಿ ಕಾರ್ಯಗಳನ್ನು ಮಾಡಬೇಕು. ಮುಖ್ಯವಾಗಿ ಡಾಬೋಲಿಮ್ನಲ್ಲಿರುವ ವಿಮಾನ ನಿಲ್ದಾಣವನ್ನು ನಿಷ್ಕ್ರಿಯಗೊಳಿಸುವುದು, ಬಾಂಬೋಲಿಮ್ ಅಲ್ಲಿರುವ ನಿಸ್ತಂತು ಕೇಂದ್ರವನ್ನು ನಾಶಗೊಳಿಸುವುದು, ವೈರಿಯು ಡಿಯು ಹಾಗೂ ಡಮನ್ ವಿಮಾನ ನಿಲ್ದಾಣವನ್ನು ತಲಪದಂತೆ ತಡೆಯುವುದು.
ಪೋರ್ಚುಗೀಸರ ಕಿರಿಕಿರಿ
ಭಾರತದ ಕಾರ್ಯಾಚರಣೆಗೆ ಒಂದು ತಿಂಗಳ ಮುಂಚೆಯೇ ಪೋರ್ಚುಗೀಸರು ಭಾರತದ ಹಡಗೊಂದರ ಮೇಲೆ ದಾಳಿ ನಡೆಸಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದರು. ೧೯೬೧, ನವೆಂಬರ್ ೭ರಂದು ಮಂಗಳೂರಿನತ್ತ ಸಾಗುತ್ತಿದ್ದ ‘ಸಬರಮತಿ’ ಎನ್ನುವ ಹಡಗಿನ ಮೇಲೆ ಅಪ್ರಚೋದಿತವಾಗಿ ಅಂಜುದೀವ್ ದ್ವೀಪದಲ್ಲಿದ್ದ ಪೋರ್ಚುಗೀಸ್ ಪಡೆಗಳು ಗುಂಡು ಹಾರಿಸಿದವು. ಈ ದಾಳಿಯಲ್ಲಿ ಹಡಗಿನಲ್ಲಿದ್ದ ಚೀಫ್ ಇಂಜಿನಿಯರ್ ಒಬ್ಬರಿಗೆ ಗಾಯಗಳಾದವು. ಇದು ಅಲ್ಲಿಗೇ ನಿಲ್ಲಲಿಲ್ಲ. ನವೆಂಬರ್ ೨೪ರಂದು ಮೀನು ಹಿಡಿಯಲು ಹೋಗಿದ್ದ ಬೆಸ್ತರ ೨೦ ದೋಣಿಗಳ ಮೇಲೆ ದಾಳಿ ನಡೆಸಿದರು, ಪ್ರಾಣಹಾನಿಯೂ ಆಯಿತು. ಈ ಘಟನೆಗಳಾದ ನಂತರ ನವೆಂಬರ್ ೨೮ರಿಂದ ಭಾರತೀಯ ನೌಕಾಪಡೆಯ ರಜಪೂತ್ ಎನ್ನುವ ಹಡಗನ್ನು ಮತ್ತು ಸಬ್ಮೇರಿನನ್ನು ನಾಶಗೊಳಿಸುವ ಸಾಮರ್ಥ್ಯವಿರುವ ಕ್ರಿಪಾಣ್ ಎನ್ನುವ ಹಡಗನ್ನು ಕಾರವಾರದ ಬಂದರಿನ ಸಮೀಪ ಗಸ್ತು ತಿರುಗಲು ನೇಮಿಸಲಾಯಿತು. ಡಿಸೆಂಬರ್ ೧ರ ಹೊತ್ತಿಗೆ ಮತ್ತೆರಡು ಹೆಚ್ಚಿನ ಸಾಮರ್ಥ್ಯದ ಹಾಗೂ ವಿಮಾನಗಳನ್ನುರುಳಿಸುವ ಸಾಮರ್ಥ್ಯ ಹೊಂದಿದ್ದ ಐ.ಎನ್.ಎಸ್. ಬೆಟ್ವಾ ಮತ್ತು ಐ.ಎನ್.ಎಸ್. ಬೇಯಾಸ್ ಹಡಗುಗಳನ್ನು ಅಲ್ಲಿಗೆ ಕಳುಹಿಸಿ ರಜಪೂತ್ ಹಾಗೂ ಕ್ರಿಪಾಣ್ ಹಿಂಪಡೆಯಲಾಯಿತು. ಆಪರೇಷನ್ ವಿಜಯ್ ಮುಕ್ತಾಯಗೊಳ್ಳುವವರೆಗೂ ಬೆಟ್ವಾ ಹಾಗೂ ಬೇಯಾಸ್ ಅಲ್ಲಿದ್ದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡವು.
ಡಿಯು ವಿಮೋಚನೆ
ಡಿಯು ನಗರವು ಗುಜರಾತ್ ತೀರಕ್ಕೆ ಸಮೀಪದ ಕೇವಲ ೪೦ ಚದರ ಕಿ.ಮೀ ವ್ಯಾಪ್ತಿಯ ಸಣ್ಣ ದ್ವೀಪ. ಅಲ್ಲಿ ಸುಮಾರು ೫೦೦ ಪೋರ್ಚುಗೀಸ್ ಸೈನಿಕರಿದ್ದರು. ಅವರ ಬಳಿ ಸಾಕಷ್ಟು ಮದ್ದು-ಗುಂಡುಗಳ ದಾಸ್ತಾನು ಇದ್ದು, ವೇಗಾ ಎನ್ನುವ ಹೆಸರಿನ ಗಸ್ತು ತಿರುಗುವ ನೌಕಾಪಡೆಗೆ ಸೇರಿದ ದೋಣಿ ಇದ್ದಿತು. ಈ ದೋಣಿಯಲ್ಲೂ ದೊಡ್ಡ ಫಿರಂಗಿಯೊಂದನ್ನು ಮತ್ತು ಸಾಕಷ್ಟು ಯುದ್ಧಸಾಮಾಗ್ರಿಗಳನ್ನು ಇರಿಸಿದ್ದರು. ೨೦ ರಜಪೂತ್ ಮತ್ತು ೪ ಮದ್ರಾಸ್ ಬ್ರಿಗೇಡಿಗೆ ಸೇರಿದ ಸೈನಿಕರು ರಾತ್ರಿಯ ಕತ್ತಲಿನಲ್ಲಿ ಸಣ್ಣ ತೆಪ್ಪಗಳ ಮೂಲಕ ಡಿಯು ತಲಪಲು ಪ್ರಯತ್ನಿಸಿದರು. ಆದರೆ, ಇದರ ಸುಳಿವು ಮೊದಲೇ ಸಿಕ್ಕಿದ್ದ ಪೋರ್ಚುಗೀಸರು ಪ್ರತಿದಾಳಿ ಮಾಡಿದರು. ಹೀಗಾಗಿ ಭಾರತೀಯ ಸೈನಿಕರು ಆ ರಾತ್ರಿ ಡಿಯು ತಲಪಲು ಸಾಧ್ಯವಾಗಲಿಲ್ಲ. ಮರುದಿನ ಬೆಳಗ್ಗೆ ೭ ಗಂಟೆಯ ಹೊತ್ತಿಗೆ ವಿಂಗ್ ಕಮಾಂಡರ್ ಮಿಕಿ ಬ್ಲೇಕ್ ಅವರು ವೈಮಾನಿಕ ದಾಳಿ ನಡೆಸಿದರು. ಈ ದಾಳಿಯಲ್ಲಿ ಅಲ್ಲಿನ ವಿಮಾನ ನಿಲ್ದಾಣ ಮತ್ತು ಅಲ್ಲಿದ್ದ ಮದ್ದುಗುಂಡಿನ ದಾಸ್ತಾನು ನಾಶಗೊಂಡವು. ಈ ವಿಮಾನದ ಮೇಲೆ ಗುಂಡು ಹಾರಾಟ ನಡೆಸಿದ ಗಸ್ತು ದೋಣಿ ವೇಗಾ ಕೂಡಾ ವೈಮಾನಿಕ ದಾಳಿಯಲ್ಲಿ ಹಾನಿಗೊಂಡು ಸಮುದ್ರದಲ್ಲಿ ಮುಳುಗಿತು, ಅದರ ಕ್ಯಾಪ್ಟನ್ ಅಸುನೀಗಿದ. ಸಮುದ್ರದ ಕಡೆಯಿಂದ ಐ.ಎನ್.ಎಸ್. ಡೆಲ್ಲಿ ದಾಳಿ ನಡೆಸಿತು. ಈ ಎಲ್ಲ ದಾಳಿಗಳಿಂದ ಕಂಗೆಟ್ಟ ಪೋರ್ಚುಗೀಸರು ಡಿಯು ಮಧ್ಯದಲ್ಲಿದ್ದ ಕೋಟೆಯಲ್ಲಿ ಅಡಗಿಕೊಂಡರು. ಅಲ್ಲಿಗೆ ನುಗ್ಗಿದ ಭಾರತೀಯ ಸೇನೆ ಅವರೆಲ್ಲರನ್ನೂ ಬಂಧಿಸಿ ಡಿಯು ನಗರವನ್ನು ವಿದೇಶೀ ಆಳ್ವಿಕೆಯಿಂದ ಮುಕ್ತಗೊಳಿಸಿತು.
ಡಮನ್ ವಿಮೋಚನೆ
ಡಮನ್ ನಗರವು ಗುಜರಾತ್ ಮತ್ತು ಮಹಾರಾಷ್ಟ್ರ ಗಡಿಗಳ ನಡುವೆ ಇರುವ ೭೨ ಚದರ ಕಿ.ಮೀ. ವ್ಯಾಪ್ತಿಯುಳ್ಳ ಪ್ರದೇಶ. ಇಲ್ಲಿ ಹರಿಯುವ ಡಮನ್ ಗಂಗಾ ಎಂಬ ಹೆಸರಿನ ನದಿಯು ಈ ಪ್ರದೇಶವನ್ನು ಎರಡು ಭಾಗವಾಗಿ ವಿಭಾಗಿಸಿದೆ – ನಾನಿ ಡಮನ್ ಮತ್ತು ಮೋಟಿ ಡಮನ್. ಪೋರ್ಚುಗೀಸರ ೩೬೦ ಸೈನಿಕರು ಮತ್ತು ೨೦೦ ಪೊಲೀಸರು ಈ ಪ್ರದೇಶವನ್ನು ಕಾಯುತ್ತಿದ್ದರು. ಈ ಪ್ರದೇಶದ ಬಿಡುಗಡೆಗೆ ನಿಯುಕ್ತರಾಗಿದ್ದ ೧ ಮರಾಠಾ ಪಡೆಗಳು ಬೆಳಗಿನ ಜಾವ ೪ ಗಂಟೆಗೇ ಆಕ್ರಮಣ ಪ್ರಾರಂಭಿಸಿದವು. ಇನ್ನೂ ಕತ್ತಲಾಗಿದ್ದು ವೈರಿ ನಿದ್ರಿಸುತ್ತಿರುವಾಗ ಇದ್ದಕ್ಕಿದ್ದಂತೆ ಎರಗಿ ವಶಪಡಿಸಿಕೊಳ್ಳುವ ಉದ್ದೇಶ ಅವರದಾಗಿತ್ತು. ಆದರೆ, ಭಾರತೀಯರು ದಾಳಿ ಮಾಡಬಹುದೆಂಬ ಗುಮಾನಿಯಿದ್ದ ವೈರಿ ತಕ್ಷಣವೇ ಎಚ್ಚೆತ್ತು ಪ್ರತಿದಾಳಿ ನಡೆಸಿದ್ದರಿಂದ ಭಾರತೀಯ ಸೈನಿಕರು ಅಂದುಕೊಂಡಷ್ಟು ಸುಲಭದಲ್ಲಿ ಕೆಲಸ ಮುಗಿಯಲಿಲ್ಲ. ಬೆಳಕು ಹರಿದ ನಂತರ ವಾಯುಪಡೆಯೂ ಭೂಪಡೆಗಳಿಗೆ ಸಹಕಾರ ನೀಡಿತು. ಸಂಜೆಯವರೆಗೂ ಹೋರಾಟ ನಡೆದು ಕಡೆಗೂ ಭಾರತೀಯ ಸೈನಿಕರು ವಿಜಯ ಸಾಧಿಸಿದರು.
ಗೋವಾ ವಿಮೋಚನೆ
ಡಿಸೆಂಬರ್ ೧೭ರಂದು ಗೋವಾ ಗಡಿ ಸಮೀಪದ ಮೌಲಿಂಗೆಮ್ ಎಂಬ ಪಟ್ಟಣವನ್ನು ವಶಪಡಿಸಿಕೊಳ್ಳುವ ಮೂಲಕ ಭಾರತೀಯ ಪಡೆಗಳು ಗೋವಾ ವಶಪಡಿಸಿಕೊಳ್ಳುವತ್ತ ಮೊದಲ ಹೆಜ್ಜೆ ಇಟ್ಟವು. ಮುಖ್ಯ ಕಾರ್ಯಾಚರಣೆ ಪ್ರಾರಂಭವಾದದ್ದು ಮರುದಿನ ಬೆಳಗಿನ ಜಾವ ೪ ಗಂಟೆಗೆ, ಡಮನ್ ಹಾಗೂ ಡಿಯು ಪ್ರದೇಶಗಳಲ್ಲಿ ಪ್ರಾರಂಭ ಆದ ಸಮಯದಲ್ಲೇ. ೫೦ ಬ್ರಿಗೇಡ್ ಪಡೆ ಪೋಂಡಾ ಹಾಗೂ ಮಾಪುಸಾ ದಾರಿಯಲ್ಲಿ ಗೋವಾ ಪ್ರವೇಶಿಸಿದರೆ, ೬೩ ಬ್ರಿಗೇಡ್ ಮಾರ್ಗೋವಾ ಪ್ರವೇಶಿಸಿತು. ದಕ್ಷಿಣದಿಂದ ೪ ರಜಪೂತ್ ಕೂಡಾ ಮತ್ತೊಂದು ದಾರಿಯಿಂದ ಅಲ್ಲಿಗೇ ಬಂದು ಸೇರಿತು. ಪೋರ್ಚುಗೀಸರ ಪಡೆಗಳು ಹಿಂದೆ ಸರಿಯುತ್ತಾ ಹೋದವು. ಹಾಗೆ ಹೋಗುವಾಗ ದಾರಿಯಲ್ಲಿದ್ದ ಎಲ್ಲ ಸೇತುವೆಗಳನ್ನೂ ನಾಶಗೊಳಿಸುತ್ತಾ ಭಾರತೀಯ ಪಡೆಗಳ ನಡೆಯನ್ನು ನಿಧಾನಗೊಳಿಸಲು ಪ್ರಯತ್ನಿಸಿದವು. ಮರುದಿನದ ಹೊತ್ತಿಗೆ ಪಣಜಿ, ಅಗೂಡ, ಮರ್ಗೋವಾ, ಡಾಬೋಲಿಮ್, ವಾಸ್ಕೋಗಳನ್ನು ಭಾರತೀಯ ಪಡೆಗಳು ಮುಕ್ತಗೊಳಿಸಿದವು. ಸುಮಾರು ೫೦೦೦ ಪೋರ್ಚುಗೀಸರು ಶರಣಾದರು.
ಮರ್ಮಗೋವಾ ಮತ್ತು ಅಂಜುದೀವ್ಗಳ ವಿಮೋಚನೆ
ಭೂಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದ ಸಮಯದಲ್ಲೇ ನೌಕಾಪಡೆಗಳು ಮರ್ಮಗೋವಾ ಬಂದರು, ಅಂಜುದೀವ್ ದ್ವೀಪವನ್ನು ವಶಪಡಿಸಿಕೊಂಡವು. ಈ ಪ್ರದೇಶಗಳ ಮೇಲೆ ದಾಳಿ ಮಾಡಿದಾಗ ಪೋರ್ಚುಗೀಸರ ನೌಕಾಪಡೆ ಸುಲಭಕ್ಕೆ ಮಣಿಯಲಿಲ್ಲ, ಕೆಲವು ಗಂಟೆಗಳ ಕಾಲ ಯುದ್ಧ ನಡೆಯಿತು. ಪೋರ್ಚುಗೀಸರು ಮೋಸದ ಯುದ್ಧಕ್ಕೂ ಇಳಿದರು; ಶಾಂತಿಸೂಚಕವಾದ ಶ್ವೇತಪತಾಕೆಯನ್ನು ಹಾರಿಸಿ, ಭಾರತೀಯ ನೌಕಾಪಡೆಯ ಸೈನಿಕರು ಹತ್ತಿರ ಬಂದ ಕೂಡಲೇ ಅನಾಮತ್ತಾಗಿ ದಾಳಿ ಮಾಡಿದರು. ಇದಾವುದಕ್ಕೂ ಭಾರತೀಯ ಪಡೆಗಳು ದಿಕ್ಕೆಡಲಿಲ್ಲ, ಧೈರ್ಯವಾಗಿ ಎದುರಿಸಿ ತಮ್ಮ ಗುರಿ ಮುಟ್ಟಿದರು. ಅಂದು ಮಧ್ಯಾಹ್ನದ ಹೊತ್ತಿಗೆ ಪೋರ್ಚುಗೀಸರು ಸೋಲನ್ನೊಪ್ಪಿದರು. ಡಿಸೆಂಬರ್ ೧೯ರ ಸಂಜೆಯ ವೇಳೆಗೆ ಕಾರ್ಯಾಚರಣೆ ಸಂಪೂರ್ಣವಾಗಿ ಮುಕ್ತಾಯಗೊಂಡಿತು, ಗೋವಾ ಪ್ರಾಂತ ವಿದೇಶೀ ಆಡಳಿತದಿಂದ ಮುಕ್ತವಾಯಿತು. ಕಾರ್ಯಾಚರಣೆ ನಡೆದ ಒಟ್ಟು ಸಮಯ ಕೇವಲ ೪೦ ಗಂಟೆಗಳು. ಗೋವಾ, ಡಿಯು ಮತ್ತು ಡಮನ್ಗಳಲ್ಲಿ ಭಾರತದ ತ್ರಿವರ್ಣಧ್ವಜ ಹಾರಾಡತೊಡಗಿತು. ಭಾರತಕ್ಕೆ ಸ್ವಾತಂತ್ರ್ಯ ಬಂದು ಹದಿನಾಲ್ಕು ವರ್ಷಗಳ ನಂತರ ಭಾರತದ್ದೇ ಭಾಗವಾದ ಗೋವಾ ಪ್ರಾಂತಕ್ಕೆ ಸ್ವಾತಂತ್ರ್ಯ ಲಭಿಸಿತು.
ಭಾರತದ ಭೂಪಟದಲ್ಲಿ ಕಿರುಬೆರಳಿಗಿಂತ ಸಣ್ಣ ಗಾತ್ರದ ಈ ಪ್ರದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಳ್ಳಲು ಹದಿನಾಲ್ಕು ವರ್ಷ ಕಾಯಬೇಕಾಗಿದ್ದು, ಇದನ್ನು ಸಾಧಿಸಲು ನಮ್ಮದೇ ಸರ್ಕಾರದ ಕಣ್ತೆರೆಸಲು ಇಲ್ಲಿನ ಜನ ಸತ್ಯಾಗ್ರಹಕ್ಕೆ ಮೊರೆಹೋಗಿ ಅಗಣಿತ ಸಂಕಟಗಳಿಗೆ ಒಳಗಾಗಿದ್ದು ಈ ದೇಶದ ನೇತಾರರ ಭ್ರಮಾಧೀನ ‘ಅಹಿಂಸಾ ನೀತಿ’ಯ ಫಲವಲ್ಲದೆ ಬೇರೇನಲ್ಲ!
ಗೋವಾ ಮುಕ್ತಿಸಂಗ್ರಾಮದಲ್ಲಿ ಆರೆಸ್ಸೆಸ್ನ ಪಾತ್ರ
ದಾದ್ರಾ ಮತ್ತು ನಗರಹವೇಲಿ ಮುಕ್ತಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಮಹತ್ತ್ವದ ಪಾತ್ರ ವಹಿಸಿದರು. ೧೯೫೪ರ ಆಗಸ್ಟ್ ೨ರಂದು ಒಂದು ನೂರು ಮಂದಿ ಸ್ವಯಂಸೇವಕರು ಪುಣೆಯ ಸಂಘಚಾಲಕರಾಗಿದ್ದ ದಿವಂಗತ ವಿನಾಯಕರಾವ್ ಆಪ್ಟೆಯವರ ನೇತೃತ್ವದಲ್ಲಿ ದಾದ್ರಾ ಮತ್ತು ನಗರಹವೇಲಿಗೆ ಮುತ್ತಿಗೆ ಹಾಕಿದರು. ಶಿವಾಜಿಯ ಗೆರಿಲ್ಲಾ ಯುದ್ಧತಂತ್ರವನ್ನು ಅನುಸರಿಸಿದ್ದ ಅವರು ಸೆಲ್ವಾಸ್ಸಾದಲ್ಲಿನ ಪ್ರಧಾನ ಪೊಲೀಸ್ ಕಛೇರಿಯ ಮೇಲೆ ಏಕಾಏಕಿ ದಾಳಿ ಮಾಡಿದರು. ಕಕ್ಕಾಬಿಕ್ಕಿಯಾದ ಅಲ್ಲಿದ್ದ ೧೭೫ ಮಂದಿ ಪೋರ್ಚುಗೀಸ್ ಸೈನಿಕರು ಬೇಷರತ್ತಾಗಿ ಶರಣಾದರು. ದಾದ್ರಾ ಹಾಗೂ ನಗರಹವೇಲಿ ದಾಸ್ಯದಿಂದ ಮುಕ್ತವಾಯಿತು. ಅಲ್ಲಿ ತ್ರಿವರ್ಣ ಧ್ವಜವನ್ನೇರಿಸಿ ಅಂದೇ ಆ ಪ್ರದೇಶವನ್ನು ಕೇಂದ್ರಸರ್ಕಾರಕ್ಕೆ ಒಪ್ಪಿಸಲಾಯಿತು. ೧೯೭೯ರ ಆಗಸ್ಟ್ ೨ರಂದು ಈ ಚಾರಿತ್ರಿಕ ಕಾರ್ಯಾಚರಣೆಯ ರಜತ ಮಹೋತ್ಸವ ನಡೆದಾಗ ಸೆಲ್ವಾಸ್ಸಾದ ಜನರು ಆ ನೂರು ಮಂದಿ ಸ್ವಾತಂತ್ರ್ಯವೀರರನ್ನು ಆಹ್ವಾನಿಸಿ ಸಂಮಾನಿಸಿದರು. ೧೯೮೭ರಲ್ಲಿ ಮಹಾರಾಷ್ಟ್ರ ಸರಕಾರವೂ ಇವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಗೌರವಿಸಿತು.
೧೯೫೫ರಲ್ಲಿ ಮೊಟ್ಟಮೊದಲ ಬಾರಿಗೆ ಪಣಜಿಯ ಸರ್ಕಾರಿ ಕೇಂದ್ರಕಛೇರಿಯ ಮೇಲೆ ತ್ರಿವರ್ಣಧ್ವಜವನ್ನು ಮೆರೆಸಿದ ಕೀರ್ತಿ ಗೋವಾದಲ್ಲಿ ಉಪಾಧ್ಯಾಯನಾಗಿದ್ದ ಓರ್ವ ಸ್ವಯಂಸೇವಕನದ್ದು. ಅದಕ್ಕಾಗಿ ಆತ ೧೭ ವರ್ಷಗಳ ಕಾಲ ಲಿಸ್ಬನ್ ಸೆರೆಮನೆಯಲ್ಲಿ ಕೊಳೆಯಬೇಕಾಯಿತು. ೧೯೬೧ರಲ್ಲಿ ಗೋವಾ ಸ್ವತಂತ್ರಗೊಂಡರೂ ಆತನಿಗೆ ಮಾತ್ರ ಮುಕ್ತಿ ದೊರೆತಿರಲಿಲ್ಲ. ೧೯೫೫ರಲ್ಲಿ ಗೋವಾ ಮುಕ್ತಿಗಾಗಿ ದೊಡ್ಡ ಪ್ರಮಾಣದಲ್ಲಿ ಸರ್ವಪಕ್ಷ ರಾಷ್ಟ್ರೀಯ ಆಂದೋಲನ ನಡೆದಾಗಲೂ ಸಂಘದ ಸ್ವಯಂಸೇವಕರದೇ ಪ್ರಧಾನ ಪಾತ್ರ. ಮಹಿಳೆಯರನ್ನೂ ಒಳಗೊಂಡಂತೆ ಸುಮಾರು ೩,೦೦೦ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಸತ್ಯಾಗ್ರಹದಲ್ಲಿ ಭಾಗವಹಿಸಿದರು. ಗೋವಾ ಗಡಿಗೆ ದೇಶದ ಮೂಲೆಮೂಲೆಗಳಿಂದ ಪ್ರವಾಹದೋಪಾದಿಯಲ್ಲಿ ಬರುತ್ತಿದ್ದ ಸತ್ಯಾಗ್ರಹಿಗಳ ತಂಡಗಳಿಗೆ ಆಹಾರ ಮತ್ತು ವಸತಿಗಳ ವ್ಯವಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡವರು ಬೆಳಗಾವಿಯ ಸ್ವಯಂಸೇವಕರು ಮತ್ತು ಸರಸ್ವತಿ ಅಪಟೆ ತಾಯಿ ಅವರ ನೇತೃತ್ವದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಸೇವಿಕೆಯರು.
ಮಧ್ಯಭಾರತದಿಂದ ಬಂದಿದ್ದ ಸ್ವಯಂಸೇವಕರ ಒಂದು ತಂಡಕ್ಕೆ ನಾಯಕರಾಗಿದ್ದವರು ರಾಜಾಭಾವೂ ಮಹಾಂಕಾಳ. ಗಡಿಯಲ್ಲಿದ್ದ ಪೋರ್ಚುಗೀಸ್ ಸೈನಿಕರ ಕೋವಿಯ ಸನೀನು, ಗುಂಡುಗಳು, ಸತ್ಯಾಗ್ರಹಿಗಳ ‘ಸ್ವಾಗತ’ಕ್ಕಾಗಿ ಕಾದಿದ್ದವು. ರಾಜಾಭಾವೂ ಇನ್ನೂ ಗೋವಾ ಗಡಿಯನ್ನು ಪ್ರವೇಶಿಸುವುದರೊಳಗಾಗಿಯೇ ಮೊದಲ ಮೂರು ಸತ್ಯಾಗ್ರಹಿ ಜಾಥಾಗಳ ಮೇಲೆ ಗುಂಡುಗಳು ಹಾರಿದ್ದವು. ಅವರೆಲ್ಲ ಗಾಯಗೊಂಡು ನೆಲಕ್ಕುರುಳಿದ್ದರು. ಮೂರನೆಯ ಸಾಲಿನಲ್ಲಿದ್ದ ಧೀರ ಮಹಿಳೆ ಸಾಗರದ ಸಹೋದರಾದೇವಿ ಗಾಯಗೊಂಡು ಕೆಳಕ್ಕುರುಳಿದಂತೆ ರಾಜಾಭಾವೂ ಆಕೆಯ ಕೈಯಲ್ಲಿದ್ದ ತ್ರಿವರ್ಣಧ್ವಜವನ್ನು ಕೈಗೆತ್ತಿಕೊಂಡು ‘ಭಾರತ್ ಮಾತಾ ಕೀ ಜಯ್’ ಗರ್ಜನೆಯೊಂದಿಗೆ ಮುನ್ನುಗ್ಗಿದರು. ಅವರ ಕಣ್ಣಿಗೆ ನೇರವಾಗಿ ಬಡಿದ ಒಂದು ಗುಂಡು ಅವರನ್ನೂ ನೆಲಕ್ಕೊರಗಿಸಿತು. ಇನ್ನೂ ಪ್ರಾಣ ಮಿಡಿಯುತ್ತಿದ್ದ ಕೆಲವೇ ಕ್ಷಣಗಳಲ್ಲಿ ಅವರು ಧ್ವಜವನ್ನೆತ್ತಿ ಹಿಡಿಯಲು ಹಾಗೂ ಇತರ ಗಾಯಾಳು ಸತ್ಯಾಗ್ರಹಿಗಳನ್ನು ನೋಡಿಕೊಳ್ಳಲು ಇತರರಿಗೆ ಆದೇಶ ನೀಡಿ ಕೊನೆಯುಸಿರೆಳೆದರು.
ಸತ್ಯಾಗ್ರಹದಲ್ಲಿ ಧುಮುಕಿದ ಜನಸಂಘ ಮತ್ತು ಜಗನ್ನಾಥರಾವ್ ಜೋಷಿ
ರಾಜಕೀಯ ಕ್ಷೇತ್ರದಲ್ಲಿ ಹಿಂದುತ್ವದ ಕಂಪನ್ನು ಪಸರಿಸಲು ಪ್ರಾರಂಭವಾಗಿದ್ದ ಭಾರತೀಯ ಜನಸಂಘವೂ ಗೋವಾ ಮುಕ್ತಿ ಸಂಗ್ರಾಮದಲ್ಲಿ ಧುಮುಕಿತು. ೧೯೫೪ರ ಇಂದೋರ್ ಅಧಿವೇಶನದಲ್ಲಿ ಈ ನಿಟ್ಟಿನಲ್ಲಿ ಠರಾವನ್ನು ಸ್ವೀಕರಿಸಲಾಯಿತು. ಈ ಠರಾವನ್ನು ಮಂಡಿಸಿದವರು ಅಟಲ್ ಬಿಹಾರಿ ವಾಜಪೇಯಿಯವರು. ಅವರು ಗೋವಾದ ವಿಷಯದಲ್ಲಿ ಭಾರತ ಸರ್ಕಾರದ ನಿಲವನ್ನು ಕಟುವಾಗಿ ಖಂಡಿಸಿದರು, ಈ ಸಮಸ್ಯೆಯನ್ನು ಆದಷ್ಟು ಶೀಘ್ರವಾಗಿ ಪರಿಹರಿಸದಿದ್ದಲ್ಲಿ ಇದು ಮತ್ತಷ್ಟು ಜಟಿಲವಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು. ಈ ವಿಷಯದಲ್ಲಿ ಪಾಕಿಸ್ತಾನ ತೋರಿಸುತ್ತಿರುವ ಅನಾವಶ್ಯಕ ಆಸಕ್ತಿಯ ಕಡೆಗೆ ಎಲ್ಲರ ಗಮನ ಸೆಳೆದರು. ಭಾರತ ಸರ್ಕಾರವು ಪೋರ್ಚುಗಲ್ ಸರ್ಕಾರದೊಡನೆ ತಟಸ್ಥ ವೀಕ್ಷಕರ ರೀತಿಯಲ್ಲಿ ಸಂಧಾನ ನಡೆಸುತ್ತಿರುವುದು ಸರಿಯಲ್ಲ, ಸರ್ಕಾರ ಈ ವಿಷಯವನ್ನು ಮತ್ತಷ್ಟು ಗಂಭೀರವಾಗಿ ಪರಿಗಣಿಸಬೇಕು, ಎಂಬುದಾಗಿ ಠರಾವಿನಲ್ಲಿ ತಿಳಿಸಲಾಯಿತು. ಠರಾವು ಗೋವಾ ಮತ್ತದರ ಸುತ್ತಮುತ್ತಲ ಪ್ರದೇಶದ ವಿಮೋಚನೆಯಲ್ಲಿ ಭಾಗಿಯಾದ ಸ್ವಾತಂತ್ರ್ಯ ಹೋರಾಟಗಾರರನ್ನು ಅಭಿನಂದಿಸಿತು. ಈ ಠರಾವನ್ನು ‘ಕರ್ನಾಟಕ ಕೇಸರಿ’ ಎಂದು ಸುಪ್ರಸಿದ್ಧರಾದ ಜಗನ್ನಾಥರಾವ್ ಜೋಷಿಯವರು ಅನುಮೋದಿಸಿದರು. ಠರಾವು ಸ್ವೀಕಾರದ ನಂತರ ಸೆಪ್ಟೆಂಬರ್ ೯ರಿಂದ ೧೬ರವರೆಗೂ ಗೋವಾ ವಿಮೋಚನಾ ಸಪ್ತಾಹ ಆಚರಿಸುವಂತೆ, ಆ ಸಂದರ್ಭದಲ್ಲಿ ಸಾರ್ವಜನಿಕ ಸಭೆ ಸಮಾರಂಭಗಳ ಮೂಲಕ ಜನಜಾಗೃತಿ ಮೂಡಿಸುವಂತೆ ತನ್ನೆಲ್ಲ ಶಾಖೆಗಳಿಗೂ ಸೂಚನೆ ನೀಡಲಾಯಿತು.
ಅನಂತರದಲ್ಲಿ ಜನಸಂಘವನ್ನೂ ಒಳಗೊಂಡಂತೆ ಎಲ್ಲ್ಲ ಸಮಾನಮನಸ್ಕ ಪಕ್ಷಗಳೂ ಸೇರಿ ‘ಗೋವಾ ಮುಕ್ತಿ ಆಂದೋಲನ ಸಮಿತಿ’ಯನ್ನು ರಚಿಸಿಕೊಂಡವು. ಆ ಸಮಿತಿಯು ಸತ್ಯಾಗ್ರಹದ ಘೋಷಣೆ ಮಾಡಿತು. ಸತ್ಯಾಗ್ರಹದ ದಿನ ನಿಶ್ಚಯವಾಯಿತು. ದೇಶದ ಎಲ್ಲ ಕಡೆಗಳಿಂದಲೂ ಯೋಜನೆಯನುಸಾರ ಸತ್ಯಾಗ್ರಹಿ ತಂಡಗಳು ಗೋವಾದ ಕಡೆಗೆ ಹೊರಟವು. ಬೆಳಗಾವಿಯು ಈ ಸತ್ಯಾಗ್ರಹದ ಮಹತ್ತ್ವದ ಕೇಂದ್ರವಾಗಿತ್ತು. ಸತ್ಯಾಗ್ರಹಿಗಳ ಎಲ್ಲ ತಂಡಗಳೂ ಬೆಳಗಾವಿಯ ಮಾರ್ಗವಾಗಿಯೇ ಗೋವೆಯನ್ನು ಪ್ರವೇಶಿಸುತ್ತಿದ್ದವು. ಈ ಸತ್ಯಾಗ್ರಹಿ ತಂಡಗಳ ಎಲ್ಲ ರೀತಿಯ ವ್ಯವಸ್ಥೆಯನ್ನು ಜನಸಂಘದ ಕಾರ್ಯಕರ್ತರು ಜಗನ್ನಾಥರಾಯರ ನೇತೃತ್ವದಲ್ಲಿ ಯಶಸ್ವಿಯಾಗಿ ನಿರ್ವಹಿಸಿದರು. ಜನಸಂಘವೂ ಪ್ರತ್ಯಕ್ಷವಾಗಿ ಸತ್ಯಾಗ್ರಹದಲ್ಲಿ ಭಾಗವಹಿಸಬೇಕೆಂದು ನಿರ್ಣಯವಾಗುತ್ತಲೇ ಸತ್ಯಾಗ್ರಹದ ಮೊದಲ ತಂಡದ ನಾಯಕತ್ವವನ್ನು ಜಗನ್ನಾಥರಾಯರೇ ವಹಿಸಬೇಕೆಂದೂ ನಿರ್ಣಯಿಸಲ್ಪಟ್ಟಿತು. ಅವರನ್ನು ಸತ್ಯಾಗ್ರಹಕ್ಕೆ ಬೀಳ್ಕೊಡುವ ಸಮಾರಂಭಗಳು ಕರ್ನಾಟಕದಲ್ಲೂ ಮಹಾರಾಷ್ಟçದಲ್ಲೂ ನಡೆದವು. ಈ ಸಮಾರಂಭಗಳಲ್ಲಿ ಜಗನ್ನಾಥರಾಯರು ಗೋವಾ ಕುರಿತಂತೆ ಭಾರತ ಸರ್ಕಾರದ ಟೊಳ್ಳು ನೀತಿಯನ್ನು ಬಯಲಿಗೆಳೆದರು. ಅವರ ಮಾತಿನ ಸಾರ ಹೀಗಿದೆ: “ನಾವೆಲ್ಲರೂ ಸತ್ಯಾಗ್ರಹಕ್ಕೆ ಹೋಗುತ್ತಿರುವುದು ನಿದ್ರೆಯಲ್ಲಿರುವ ನೆಹರು ಸರ್ಕಾರವನ್ನು ಬಡಿದೆಬ್ಬಿಸುವುದಕ್ಕೇ ಹೊರತು ಸಾಲಾಝಾರನನ್ನಲ್ಲ. ನಮ್ಮ ಈ ನಿಃಶಸ್ತ್ರ ಸತ್ಯಾಗ್ರಹದಿಂದ ಸಾಲಾಝಾರನು ಮಣಿಯುವನೆಂಬ ಭ್ರಮೆ ನಮಗಿಲ್ಲ. ಶಾಂತಿ ಮತ್ತು ಅಹಿಂಸೆಯ ಮೂರ್ಖ ವ್ಯವಹಾರಕ್ಕೆ ಸಾಲಾಝಾರ ಕಿಂಚಿತ್ತೂ ಬೆಲೆ ಕೊಡುವವನಲ್ಲ. ಅವನಿಗೆ ಅರ್ಜುನನ ಗಾಂಡೀವದ ಠೇಂಕಾರವೇ ಮೊಳಗಬೇಕು. ‘ತಸ್ಮಾತ್ ಉತ್ತಿಷ್ಠ ಕೌಂತೇಯ, ಯುದ್ಧಾಯ ಕೃತನಿಶ್ಚಯಃ’ ಎಂದು ಶ್ರೀಕೃಷ್ಣನು ದ್ವಾಪರಯುಗದಲ್ಲಿ ಅರ್ಜುನನಿಗೆ ಹೇಳಿದ್ದ. ಆ ಕೃಷ್ಣಸಂದೇಶ ಇಂದು ಈ ಕಲಿಯುಗದಲ್ಲಿ ಪಂಡಿತ್ ನೆಹರುರವರ ಕಿವಿಗೆ ಬೀಳಲೆಂದೇ ನಮ್ಮ ಈ ಸತ್ಯಾಗ್ರಹ. ಈ ಕ್ರಮಗಳಿಂದಷ್ಟೆ ಗೋವಾ ಮುಕ್ತಿಯಾಗುವುದು ಕೇವಲ ಕನಸು. ಅದಕ್ಕಾಗಿ ಭಾರತ ಸರಕಾರವು ಸೈನಿಕ ಕಾರ್ಯಾಚರಣೆ ಮಾಡುವುದು ಅನಿವಾರ್ಯ. ನಾವು ಸತ್ಯಾಗ್ರಹದಿಂದ ಹಿಂತಿರುಗಿ ಬರುತ್ತೇವೋ ಇಲ್ಲವೋ ತಿಳಿಯದು. ಆದರೆ, Nothing but military action as in Hyderabad will liberate Goa – ಎಂಬುದನ್ನು ನೀವು ಸಹಸ್ರಾರು ಕಂಠಗಳಿಂದ ಸರ್ಕಾರದ ಕಿವಿಗೆ ಕೇಳಿಸುವಂತೆ ಕೂಗಿ ಕೂಗಿ ಹೇಳಿರಿ. ಪಾಶವೀ ಶಕ್ತಿಯೊಂದಿಗೆ ಸಶಸ್ತçದಿಂದಲೇ ಹೋರಾಡಬೇಕಾಗುತ್ತದೆ. ಆದರೆ ಯುದ್ಧದಲ್ಲೂ ಸಾತ್ತ್ವಿಕತೆಯನ್ನು ಉಳಿಸಿಕೊಳ್ಳುವುದು ಭಾರತೀಯ ಸಂಸ್ಕೃತಿಯ ಯುಗಯುಗಗಳ ಸಿದ್ಧಾಂತವಾಗಿದೆ. ಸರಕಾರವು ಪಾಶವೀ ಸಾಲಾಝಾರನ ಎದುರು ಸೈನಿಕಶಕ್ತಿಯ ಅಸ್ತ್ರವನ್ನೇ ಬಳಸಬೇಕು.”
ಪೂರ್ವಯೋಜನೆಯಂತೆ ೧೫೦ ಸತ್ಯಾಗ್ರಹಿಗಳ ಗುಂಪಿನ ನಾಯಕರಾಗಿ ಜಗನ್ನಾಥರಾಯರು ೧೯೫೫ರ ಜುಲೈ ೨೫ರಂದು ಬಾಂದಾ ಸೀಮೆಯಿಂದ ತೆರೆಖೋಲ ಠಾಣೆಯತ್ತ ಸಾಗಿದರು. ಏಳೆಂಟು ಮೈಲಿ ನಡೆದು ಹೋದ ನಂತರ ಈ ತಂಡದ ಮೇಲೆ ಪೋರ್ಚುಗೀಸ್ ಪೊಲೀಸರು ಅಮಾನುಷ ಹಲ್ಲೆ ಮಾಡಿದರು. ಧೋ ಧೋ ಎಂದು ಸುರಿಯುತ್ತಿದ್ದ ಮಳೆ; ಕೆಸರಿನಲ್ಲಿ ಹೂತುಹೋಗುತ್ತಿದ್ದ ಕಾಲುಗಳು; ಪೊಲೀಸರ ಬೂಟಿನ ಒದೆತಗಳು; ಪೊಲೀಸ್ ಲಾಠಿಗಳಿಂದ ಬಿದ್ದ ಏಟುಗಳಿಂದ ತಲೆಯೊಡೆದು ಹರಿಯುತ್ತಿದ್ದ ರಕ್ತ – ಈ ಅತ್ಯಾಚಾರದಿಂದ ದಣಿದ ಸತ್ಯಾಗ್ರಹಿಗಳನ್ನು ಬಂಧಿಸಲಾಯಿತು. ಮರುದಿನ ಜಗನ್ನಾಥರಾಯರ ಹೊರತು ಇತರ ಸತ್ಯಾಗ್ರಹಿಗಳನ್ನು ಭಾರತದ ಗಡಿಯೊಳಗೆ ತಂದು ಬಿಡಲಾಯಿತು. ಜಗನ್ನಾಥರಾಯರನ್ನು ಪೊಲೀಸ್ ಚೌಕಿಗೆ ಕರೆದೊಯ್ದರು. ಇದಕ್ಕೆ ಕಾರಣ – ಸತ್ಯಾಗ್ರಹಕ್ಕೆ ಹೊರಡುವ ಮೊದಲು ಜಗನ್ನಾಥರಾಯರು ಮಾಡಿದ್ದ ಬೆಂಕಿಯುಗುಳುವ ಭಾಷಣಗಳ ವೃತ್ತಾಂತವು ಗೋವಾ ಸರ್ಕಾರಕ್ಕೆ ತಲಪಿದ್ದಿತು. ಇದರಿಂದ ರೊಚ್ಚಿಗೆದ್ದ ಪೊಲೀಸರು ಪೊಲೀಸ್ ಚೌಕಿಯಲ್ಲಿ ಅಕ್ಷರಶಃ ಜಗನ್ನಾಥರಾಯರ ಮೈಯನ್ನು ತುಳಿದಾಡಿದರು. ಬೂಟುಕಾಲುಗಳಿಂದ ಮನಬಂದಂತೆ ಒದ್ದರು, ಲಾಠಿಗಳಿಂದ ಜಜ್ಜಿದರು. ಇನ್ನೂ ಹೇಳಬಾರದಂತಹ ಕಿರುಕುಳವನ್ನು ನೀಡಿದರು. ಅನಂತರ ಅವರನ್ನು ವಿಚಾರಣೆಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹನ್ನೆರಡು ವರ್ಷಗಳ ಕಾರಾವಾಸದ ಶಿಕ್ಷೆಯನ್ನು ವಿಧಿಸಿ ಆಗ್ವಾಡಾದ ಕಾರಾಗೃಹಕ್ಕೆ ತಳ್ಳಿದರು. ಅಲ್ಲೂ ಅವರನ್ನು ನಿರಂತರವಾಗಿ ಥಳಿಸಲಾಗುತ್ತಿತ್ತು. ಬೂಟುಗಾಲಿನಿಂದ ಒದೆಯುತ್ತಾ ಸೆರೆಮನೆಯ ಅಧಿಕಾರಿ ಕುಹಕದಿಂದ “Why did you come here?” ಎಂದು ಕೇಳಿದ ಪ್ರಶ್ನೆಗೆ ಜಗನ್ನಾಥರಾಯರು ನೀಡಿದ ಸಿಡಿಲಿನಂತಹ ಉತ್ತರವೆಂದರೆ, “First you answer me. Why did you come here, You brutes! This is our motherland. You leave this place immediately. Otherwise, one day we will kick you out, mind this!!”. ಅಂದಿನ ಚಿತ್ರಹಿಂಸೆಯ ಕಲೆಗಳು ಕೊನೆಯವರೆಗೂ ಜಗನ್ನಾಥರಾಯರ ಶರೀರವನ್ನು ಅಲಂಕರಿಸಿದ್ದವು. ಹೊಡೆತಗಳಿಂದ ಮಂಡಿಗಳು ದುರ್ಬಲವಾಗಿ ಜೀವನದ ಅಂತ್ಯದವರೆಗೂ ಕಾಡಿದವು. ಕೈ ಬೆರಳುಗಳು ಶಾಶ್ವತವಾಗಿ ಸೊಟ್ಟಗಾಗಿದ್ದವು. ಈ ಕುರಿತು ಯಾರಾದರೂ ಕೇಳಿದರೆ ಅವರು ನಕ್ಕು `ಹಾಂ, ಅವು ಆ ಸಾಲಾಝಾರನ ಚಿರ ಪ್ರಸಾದ’ ಎಂದು ಹೇಳಿ ತೇಲಿಸಿಬಿಡುತ್ತಿದ್ದರು. ಎರಡು ವರ್ಷಗಳ ಕಠಿಣ ಸಜೆಯ ನಂತರ ಅವರನ್ನೂ ಇತರ ಕೆಲವು ನೇತಾರರನ್ನೂ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು.
ಭಾರತ ಕಲಿತ ಮುಖ್ಯ ಪಾಠಗಳು
ಗೋವಾ ಕಾರ್ಯಾಚರಣೆಗೆ ತಯಾರಾಗಲು ಸೈನಿಕರಿಗಿದ್ದ ಸಮಯ ಕೇವಲ ೧೫ ದಿನಗಳು. ಡಿಸೆಂಬರ್ ಮೊದಲ ವಾರದಲ್ಲಷ್ಟೇ ಅವರಿಗೆ ಸಿದ್ಧವಾಗಲು ಮತ್ತು ಗೋವಾ ತಲಪಲು ಸೂಚನೆ ಬಂದಿತ್ತು. ಅಷ್ಟು ಕಡಮೆ ಸಮಯದಲ್ಲಿ ಅವರೆಲ್ಲರೂ ಶಸ್ತ್ರಾಸ್ತ್ರಗಳೊಂದಿಗೆ ಸಿದ್ಧರಾಗಿ ದೇಶದ ವಿವಿಧ ಮೂಲೆಗಳಿಂದ ಪೂರ್ವನಿಗದಿತ ಸ್ಥಳಗಳಿಗೆ ಮೋಟಾರುವಾಹನ, ರೈಲುಗಳ ಮೂಲಕ ಬಂದು ಸೇರಿದರು. ಕಾರ್ಯಾಚರಣೆ ಪ್ರಾರಂಭವಾಗುವುದಕ್ಕೆ ಮುಂಚೆ ಪಾಕಿಸ್ತಾನವು ಪೋರ್ಚುಗೀಸರಿಗೆ ಸಹಕಾರ ಕೊಡುವ ಸೂಚನೆಗಳು ಕಾಣಿಸಿಕೊಂಡಿದ್ದವು. ಪಾಕಿಸ್ತಾನದಿಂದ ವಿಮಾನಗಳು ಗೋವಾಗೆ ಬಂದು ಹೋಗುತ್ತಿದ್ದವು. ಗೋವಾದಿಂದ ಅನೇಕ ಪೋರ್ಚುಗೀಸರು ಪಾಕಿಸ್ತಾನಕ್ಕೆ ತೆರಳುತ್ತಿದ್ದರು. ಹೀಗಾಗಿ, ಭಾರತೀಯ ಪಡೆಗಳು ಪಾಕಿಸ್ತಾನದತ್ತಲೂ ಒಂದು ಕಣ್ಣು ಇಟ್ಟಿರಬೇಕಾಗಿತ್ತು. ಭಾರತೀಯ ಪಡೆಗಳ ಮೂರು ವಿಭಾಗಗಳೂ ಒಟ್ಟಾಗಿ ಕಾರ್ಯಾಚರಣೆ ಮಾಡಿದ್ದು ಅದೇ ಮೊದಲ ಬಾರಿ. ಮೂರು ಪಡೆಗಳೂ ಪರಸ್ಪರ ಸಹಕಾರದಿಂದ ಒಟ್ಟಾಗಿ ಕೆಲಸ ಮಾಡಿದರೆ ಕಾರ್ಯ ಸಾಧಿಸಬಹುದು ಎಂಬ ವಿಶ್ವಾಸ ಇದರಿಂದ ಸಿಕ್ಕಿದಂತಾಯಿತು ಮತ್ತು ಭಾರತದ ರಕ್ಷಣೆಗೆ ಇದು ಅತ್ಯಗತ್ಯವೂ ಹೌದು.
ಗೋವಾ ಕಾರ್ಯಾಚರಣೆಯು ಸುಲಭವಾಗಿ ಮುಕ್ತಾಯಗೊಳ್ಳಲು ಪ್ರಮುಖ ಕಾರಣ ಸ್ಥಳೀಯರ ಸಹಕಾರ. ಅವರು ಭಾರತೀಯ ಸೈನಿಕರ ಆಗಮನಕ್ಕಾಗಿ ಕಾಯುತ್ತಿದ್ದರು. ಭಾರತೀಯ ಸೈನಿಕರನ್ನು ಸ್ವಾಗತಿಸಿದ್ದು ಮಾತ್ರವಲ್ಲದೆ, ಅವರಿಗೆ ಪೋರ್ಚುಗೀಸ್ ಸೈನಿಕರು ಅಡಗಿಕೊಂಡಿದ್ದ ಸ್ಥಳಗಳನ್ನು ತೋರಿಸಿದರು, ಮುಂದೆ ಹೋಗುವ ದಾರಿಯನ್ನು ತೋರಿಸಿದರು. ಎಷ್ಟೋ ಸ್ಥಳಗಳಲ್ಲಿ ಸೈನಿಕರಿಗೆ ಆಹಾರ-ಪಾನೀಯಗಳನ್ನು ನೀಡಿದರು, ವಾಹನಗಳಿಗೆ ಇಂಧನ ತುಂಬಿಸಿಕೊಟ್ಟರು. ಪೋರ್ಚುಗೀಸರಿಗೆ ಭಾರತೀಯ ಸೈನ್ಯದ ಸಾಮರ್ಥ್ಯವು ಚೆನ್ನಾಗಿಯೇ ತಿಳಿದಿತ್ತು. ಈ ಕಾರಣದಿಂದಲೇ ಭಾರತೀಯ ಸೈನಿಕರ ಮೇಲೆ ಆಕ್ರಮಣ ಮಾಡಲು ಹೆಚ್ಚು ಪ್ರಯತ್ನಿಸಲಿಲ್ಲ. ತಾವೇನಾದರೂ ಆಕ್ರಮಿಸಿದರೆ ತಾವು ಕ್ಷಿಪ್ರವಾಗಿ ನಾಶವಾಗುವುದು ಅವರಿಗೆ ಸ್ಪಷ್ಟವಿತ್ತು. ಹೀಗಾಗಿ, ಅವರು ಭಾರತೀಯ ಸೈನಿಕರು ಒಳಬಂದಂತೆಲ್ಲ ಹಿಮ್ಮೆಟ್ಟುತ್ತಾ ಹೋದರು. ಆದರೆ ಭಾರತೀಯ ಸೈನಿಕರ ಮುಂದುವರಿಯುವಿಕೆಯನ್ನು ನಿಧಾನಗೊಳಿಸಲು ಅಡ್ಡಿ ಆತಂಕಗಳನ್ನು ಒಡ್ಡುತ್ತಾ ಹೋದರು. ಅನೇಕ ಕಡೆಗಳಲ್ಲಿ ನೆಲಬಾಂಬುಗಳನ್ನು ಹುಗಿದರು, ರಸ್ತೆಗಳನ್ನು ಅಗೆದಿಟ್ಟರು, ಸೇತುವೆಗಳನ್ನು ನಾಶಗೊಳಿಸಿದರು. ಇವೆಲ್ಲವನ್ನೂ ನಿವಾರಿಸಿಕೊಂಡು ಭಾರತೀಯ ಸೈನಿಕರು ಮುಂದುವರಿಯಬೇಕಾಗಿತ್ತು. ವಾಹನಗಳ ಮೂಲಕ ಮುಂದುವರಿಯಲು ಸಾಧ್ಯವಾಗದಿದ್ದಾಗ ತಮ್ಮೆಲ್ಲ ವಸ್ತುಗಳನ್ನೂ, ಶಸ್ತ್ರಾಸ್ತ್ರಗಳನ್ನೂ ಬೆನ್ನಮೇಲೆ ಹೊತ್ತುಕೊಂಡು ನಡೆದೇ ಹೋದರು; ಸೇತುವೆಗಳು ನಾಶವಾಗಿದ್ದ ಕಡೆಗಳಲ್ಲಿ ತುರ್ತಾಗಿ ತಾತ್ಕಾಲಿಕ ಸೇತುವೆ ನಿರ್ಮಿಸುವ ಪ್ರಯತ್ನವನ್ನೂ ಮಾಡಿದರು; ಸೇತುವೆ ನಿರ್ಮಾಣ ಸಾಧ್ಯವಾಗದಿದ್ದಾಗ ತೆಪ್ಪಗಳಲ್ಲಿ ಅಥವಾ ಅನೇಕ ಕಡೆಗಳಲ್ಲಿ ಈಜಿಕೊಂಡೇ ಮುಂದುವರಿದರು; ಫಿರಂಗಿಗಳನ್ನು ಸಾಗಿಸಲು ಸಾಧ್ಯವಾಗದಿದ್ದಾಗ ಕೇವಲ ರೈಫಲ್ಗಳನ್ನೇ ಹೊತ್ತು ಮುಂದೆ ಸಾಗಿದರು. ಯಾವುದೇ ಅಡ್ಡಿ-ಆತಂಕವೂ ಇವರನ್ನು ತಡೆಯಲು ಸಾಧ್ಯವಾಗಲಿಲ್ಲ. ಗೋವಾ ಮುಕ್ತವಾಗುವವರೆಗೂ ವಿಶ್ರಮಿಸೆವೆಂದು ಅವರು ಪಣ ತೊಟ್ಟಿದ್ದರು, ಅದನ್ನೇ ಸಾಧಿಸಿದರು.
ಬಹಳ ಸಮಯದಿಂದ ಅಹಿಂಸೆಯ ಜಪ ಮಾಡುತ್ತಿದ್ದ, ನಮ್ಮ ದೇಶಕ್ಕೆ ಸೇನೆಯ ಅಗತ್ಯವೇ ಇಲ್ಲ ಎನ್ನುತ್ತಿದ್ದ ಭಾರತದ ಸರ್ಕಾರಕ್ಕೆ ಗೋವಾ ವಿಮೋಚನೆಯ ಅಧ್ಯಾಯ ಒಂದು ಉತ್ತಮ ಪಾಠವೂ ಆಯಿತು. ಅಹಿಂಸೆ ಎಲ್ಲ ಕಾಲದಲ್ಲೂ ಕೆಲಸಕ್ಕೆ ಬಾರದು; ಅಹಿಂಸೆಯ ಆಚರಣೆಗಿಂತ ದುಷ್ಟನಿಗ್ರಹ ದೊಡ್ಡ ಗುರಿಯಾಗಬೇಕು; ಶತ್ರುವು ಸಾಮ ಹಾಗೂ ದಾನಗಳಿಗೆ ಬಗ್ಗದಿದ್ದಾಗ ದಂಡನೀತಿಗೆ ಕೈಹಾಕಲು ಹಿಂಜರಿಯುವ ಅಗತ್ಯವಿಲ್ಲ; ದೇಶದ ರಕ್ಷಣೆಗಿಂತ ಅಹಿಂಸೆಯೇನೂ ದೊಡ್ಡ ಧರ್ಮವಲ್ಲ.