ದಿನಗಳು ಕಳೆದಂತೆ ಯುದ್ಧವು ವಿವಿಧ ಪ್ರದೇಶಗಳಿಗೆ ವಿಸ್ತರಿಸುತ್ತಾ ಹೋಯಿತು. ಭಾರತೀಯ ಪಡೆಗಳು ಎಲ್ಲ ಸವಾಲುಗಳನ್ನು ಎದುರಿಸಿ ವಿಜಯಿಗಳಾಗುತ್ತಾ ಸಾಗಿದವು. ವಿಜಯವೇನೂ ಸುಲಭವಾಗಿ ದೊರಕಲಿಲ್ಲ. ಪ್ರತಿಯೊಂದು ಹೆಜ್ಜೆಯೂ ಸವಾಲೇ, ಪ್ರತಿಯೊಂದು ಕದನದಲ್ಲೂ ಪ್ರಾಣವನ್ನು ಪಣಕ್ಕಿಟ್ಟೇ ಹೋರಾಡಬೇಕು. ಕೆಲವು ಕದನಗಳಲ್ಲಿ ಸೋತದ್ದೂ ಉಂಟು, ಹಿಮ್ಮೆಟ್ಟಬೇಕಾದ ಪ್ರಸಂಗಗಳೂ ಇದ್ದವು. ಅಂತಿಮ ವಿಜಯ ಲಕ್ಷ್ಯದಲ್ಲಿರಬೇಕಾದಾಗ, ಕೆಲವು ಸೋಲು ಪ್ರಮುಖವಾಗುವುದಿಲ್ಲ. ಹೊಸ ಯೋಜನೆಗಳೊಂದಿಗೆ ಸೋಲಾಗಿದ್ದ ಪ್ರದೇಶಗಳನ್ನು ಗೆದ್ದುಕೊಂಡರು. ಪ್ರತಿಯೊಂದು ಕದನವೂ ಒಂದು ಅಪ್ರತಿಮ ಹೋರಾಟದ ಕಥೆಯೇ.

೧೯೪೭ರ ಆಗಸ್ಟ್ ೧೪ರಂದು ಪಾಕಿಸ್ತಾನದ ಉದಯವಾಯಿತು. ಅಖಂಡ ಭಾರತದಲ್ಲಿದ್ದ ಮುಸಲ್ಮಾನರು ತಮ್ಮದೇ ಆದ ಪ್ರತ್ಯೇಕ ರಾಷ್ಟ್ರವೊಂದು ಬೇಕೆಂದು ಒತ್ತಾಯಿಸಿ, ಬೆದರಿಸಿ, ಹಿಂದುಗಳ ರಕ್ತದೋಕುಳಿಯನ್ನು ಹರಿಸಿ ದಕ್ಕಿಸಿಕೊಂಡಿದ್ದ ದೇಶವದು. ಶತಮಾನಗಳಿಂದ ಭಾರತದಲ್ಲಿ ನೆಲಸಿದ್ದ ಕೋಟ್ಯಂತರ ಮುಸಲ್ಮಾನರು, ಪಾಕಿಸ್ತಾನದ ಜನಕ ಮಹಮ್ಮದ್ ಆಲಿ ಜಿನ್ನಾರ ಕರೆಗೆ ಓಗೊಟ್ಟು, ತಮಗೆ ಸ್ವರ್ಗವೇ ದಕ್ಕುವುದೆಂದು ಕಲ್ಪಿಸಿಕೊಂಡು ಪಾಕಿಸ್ತಾನಕ್ಕೆ ವಲಸೆ ಹೋದರು. ಭಾರತ ಮತ್ತು ಪಾಕಿಸ್ತಾನದ ನಡುವೆ ಮಾನವ ಇತಿಹಾಸದಲ್ಲೇ ಕಂಡುಕೇಳರಿಯದಂತಹ ಬೃಹತ್ ಪ್ರಮಾಣದ ವಲಸೆ ನಡೆಯಿತು. ರಾತ್ರಿ ಕಳೆದು ಹಗಲಾಗುವುದರೊಳಗೆ ಕೋಟ್ಯಂತರ ಜನರು ತಮ್ಮ ತಾಯ್ನಾಡಿನಲ್ಲೇ ಪರಕೀಯರಾದರು. ನಿರಾಶ್ರಿತರೆಲ್ಲರಿಗೂ ಸರಿಯಾದ ನೆಲೆ ಕಲ್ಪಿಸುವ ಸಾಗರೋಪಮವಾದ ಗುರುತರ ಜವಾಬ್ದಾರಿ ಸರ್ಕಾರದ ಮೇಲಿತ್ತು. ಸರ್ಕಾರದ ನೇತೃತ್ವ ವಹಿಸಿದ್ದವರಾದರೋ, ಆಡಳಿತದ ವಿಷಯದಲ್ಲಿ ಇನ್ನೂ ಅಂಬೆಗಾಲಿಡುತ್ತಿದ್ದವರು. ಹೀಗಾಗಿ, ಅವರು ನೂತನ ರಾಷ್ಟ್ರದ ಮೇಲೆರಗಿದ್ದ ಸಂಕಟಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಹೆಣಗಾಡಬೇಕಾಗಿತ್ತು. ವಿಭಜನೆಯಿಂದ ನಿರ್ಮಾಣವಾಗಿದ್ದ ರಾಷ್ಟ್ರವಾಗಿದ್ದರಿಂದ, ಅಲ್ಲಿನ ಜನರು ಅದೆಷ್ಟೋ ಹೊಸ ರೀತಿಯ ಸವಾಲುಗಳನ್ನು ಎದುರಿಸುತ್ತಿದ್ದರು, ಗೊಂದಲಗಳಿಗೆ ಈಡಾಗಿದ್ದರು. ಸರ್ಕಾರವು ಜನಜೀವನ ಸುಗಮವಾಗಿ ಸಾಗುವಂತೆ ಮಾಡುವತ್ತ ಗಮನ ಹರಿಸುವ ತುರ್ತು ಆವಶ್ಯಕತೆಯಿದ್ದಿತು. ಆದರೆ, ಇದೆಲ್ಲವನ್ನೂ ಕಡೆಗಣಿಸಿ, ಪಾಕಿಸ್ತಾನದ ನಾಯಕರು ಕೈಹಾಕಿದ್ದು ಕಾಶ್ಮೀರವನ್ನು ಕಬಳಿಸಲು!
೧೯೪೭ರ ಆಗಸ್ಟ್ನಲ್ಲಿ ಸ್ವಾತಂತ್ರ ದೊರೆತದ್ದು ಬ್ರಿಟಿಷರಿಂದ ನೇರವಾಗಿ ಆಳಲ್ಪಡುತ್ತಿದ್ದ ಪ್ರದೇಶಗಳಿಗೆ ಮಾತ್ರ. ತಾವು ನೇರವಾಗಿ ಆಳದಿದ್ದ ಸುಮಾರು ೬೦೦ ಸಂಸ್ಥಾನಗಳಿಗೆ ಭಾರತದೊಡನೆ ಅಥವಾ ಪಾಕಿಸ್ತಾನದೊಡನೆ ವಿಲೀನಗೊಳ್ಳುವ ಅಥವಾ ಸ್ವತಂತ್ರವಾಗಿ ಉಳಿಯುವ ಅವಕಾಶವನ್ನು ನೀಡಿ ಗೊಂದಲಮಯ ವಾತಾವರಣ ನಿರ್ಮಿಸಿ ಬ್ರಿಟಿಷರು ಹೊರಟುಹೋದರು. ಭಾರತವನ್ನು ತುಂಡರಿಸಿದ ನಂತರವೂ ಒಡೆದು ಆಳುವ ತಮ್ಮ ಧೂರ್ತಬುದ್ಧಿಗೆ ಬ್ರಿಟಿಷರು ಮಂಗಳ ಹಾಡಲಿಲ್ಲ. ಹಲವು ಸಂಸ್ಥಾನಗಳನ್ನು ಗುಪ್ತವಾಗಿ ಸಂಪರ್ಕಿಸಿ, ಅವರನ್ನು ಭಾರತದೊಡನೆ ವಿಲೀನಗೊಳ್ಳದಂತೆ ಪ್ರಭಾವಿಸಲು ಪ್ರಯತ್ನಿಸಿದರು. ಈ ರೀತಿಯ ಕುತಂತ್ರದ ಮಧ್ಯೆಯೂ ಎಲ್ಲ್ಲ ದೇಶೀಯ ಸಂಸ್ಥಾನಗಳನ್ನೂ ಭಾರತದೊಡನೆ ವಿಲೀನಗೊಳಿಸಿದ ಕೀರ್ತಿ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಮತ್ತು ಅವರ ಗೃಹಖಾತೆ ಕಾರ್ಯದರ್ಶಿ ವಿ.ಪಿ. ಮೆನನ್ನರಿಗೆ ಸಲ್ಲಬೇಕು. ಸಂಸ್ಥಾನಗಳ ಪೈಕಿ ಸುಲಭದಲ್ಲಿ ಬಗೆಹರಿಯದೆ ಕಗ್ಗಂಟಾಗಿದ್ದು ಕಾಶ್ಮೀರದ ವಿಲೀನ.
ಕಾಶ್ಮೀರ ಸಂಸ್ಥಾನ
೧೯೪೭ರ ಸಮಯದಲ್ಲಿ ಜಮ್ಮು-ಕಾಶ್ಮೀರ ಸಂಸ್ಥಾನದಲ್ಲಿ ನಾಲ್ಕು ಪ್ರಮುಖ ಭಾಗಗಳಿದ್ದವು – ಕಾಶ್ಮೀರ, ಜಮ್ಮು, ಲಡಾಖ್ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ. ಕಾಶ್ಮೀರ ಕಣಿವೆಯ ಪ್ರದೇಶ ಮತ್ತು ಮುಜಫ಼ರಾಬಾದ್ ಜಿಲ್ಲೆಗಳನ್ನು ಒಳಗೊಂಡಿದ್ದ ಕಾಶ್ಮೀರದ ಭಾಗದಲ್ಲಿ ಶೇಕಡಾ ೯೦ರಷ್ಟು ಮುಸಲ್ಮಾನರಿದ್ದರು. ಜಮ್ಮು ಭಾಗವು ೫ ಜಿಲ್ಲೆಗಳನ್ನು ಒಳಗೊಂಡಿತ್ತು. ಅವುಗಳ ಪೈಕಿ ಉಧಮ್ಪುರ್, ಜಮ್ಮು ಮತ್ತು ರಿಯಾಸಿ ಜಿಲ್ಲೆಗಳಲ್ಲಿ ಹಿಂದುಗಳು ಹಾಗೂ ಮುಸಲ್ಮಾನರು ಸಮಸಂಖ್ಯೆಯಲ್ಲಿದ್ದರೆ, ಸಿಖ್ಖರೂ ಗಣನೀಯ ಸಂಖ್ಯೆಯಲ್ಲಿ ನೆಲೆಸಿದ್ದರು. ಮೀರ್ಪುರ ಮತ್ತು ಪೂಂಚ್ ಜಿಲ್ಲೆಗಳಲ್ಲಿ ಪಂಜಾಬಿ ಮುಸಲ್ಮಾನರು ಮತ್ತು ಪಠಾಣರು ಬಹುಸಂಖ್ಯಾತರಾಗಿದ್ದರು. ಪರ್ವತ ಪ್ರದೇಶವಾದ ಲಡಾಖ್ನಲ್ಲಿ ಬೌದ್ಧರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಗಿಲ್ಗಿಟ್ ಮತ್ತು ಬಾಲ್ಟಿಸ್ತಾನದಲ್ಲಿ ಮುಸಲ್ಮಾನರ ಬಾಹುಳ್ಯ.
ಈ ಎಲ್ಲ ಪ್ರದೇಶಗಳನ್ನೂ ಒಳಗೊಂಡಿದ್ದ ಜಮ್ಮು-ಕಾಶ್ಮೀರ ರಾಜ್ಯವನ್ನು ಒಂದು ಶತಮಾನಕ್ಕೂ ಅಧಿಕ ಸಮಯದಿಂದ ಆಳುತ್ತಿದ್ದವರು ಹಿಂದು ಡೋಗ್ರಾ ರಾಜಮನೆತನದವರು. ದೇಶಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ರಾಜನಾಗಿದ್ದವನು ರಾಜಾ ಹರಿಸಿಂಗ್. ಆತನೊಬ್ಬ ಶ್ರದ್ಧಾಳು ಹಾಗೂ ದೇಶಭಕ್ತ ಹಿಂದು. ಕಾಶ್ಮೀರವನ್ನು ಮುಸಲ್ಮಾನ ದೇಶವಾದ ಪಾಕಿಸ್ತಾನದೊಡನೆ ವಿಲೀನಗೊಳಿಸುವುದನ್ನು ಆತ ಕನಸಿನಲ್ಲೂ ಕಂಡಿರಲಿಲ್ಲ. ಕಾಶ್ಮೀರವೇನಾದರೂ ಪಾಕಿಸ್ತಾನಕ್ಕೆ ಸೇರಿದಲ್ಲಿ ಅಲ್ಲಿನ ಹಿಂದುಗಳು ನಾಮಾವಶೇಷಗೊಳ್ಳುವರು ಎಂಬುದು ಆತನಿಗೆ ಸ್ಪಷ್ಟವಿತ್ತು. ಆದರೆ, ಮುಸಲ್ಮಾನರು ಬಹುಸಂಖ್ಯಾತರಾದ್ದುದರಿಂದ ಭಾರತದೊಡನೆ ವಿಲೀನಗೊಳಿಸುವುದೂ ಸುಲಭವಿರಲಿಲ್ಲ. ಆಗಿನ ಬ್ರಿಟಿಷ್ ವೈಸರಾಯ್ ಮೌಂಟ್ಬ್ಯಾಟನ್ ಪಾಕಿಸ್ತಾನದೊಡನೆ ಕಾಶ್ಮೀರವನ್ನು ವಿಲೀನಗೊಳಿಸುವಂತೆ ರಾಜಾ ಹರಿಸಿಂಗನನ್ನು ಒತ್ತಾಯಿಸುತ್ತಿದ್ದರು. ಪ್ರಧಾನಿ ನೆಹರು ಅವರಿಗೆ ಜಮ್ಮು-ಕಾಶ್ಮೀರವು ಭಾರತದೊಡನೆ ವಿಲೀನಗೊಳ್ಳುವುದಕ್ಕಿಂತ ತನ್ನ ಮಿತ್ರ ಶೇಖ್ ಅಬ್ದುಲ್ಲಾನಿಗೆ ಅಧಿಕಾರ ಹಸ್ತಾಂತರವಾಗಬೇಕೆನ್ನುವುದೇ ಮಹತ್ತ್ವದ ಸಂಗತಿಯಾಗಿತ್ತು. ಎಲ್ಲವೂ ಸುಸೂತ್ರವಾಗಿ ನಡೆದಿದ್ದಿದ್ದರೆ ಜಮ್ಮು-ಕಾಶ್ಮೀರ ಸಂಸ್ಥಾನವು ಭಾರತದಲ್ಲಿ ವಿಲೀನಗೊಂಡ ಮೊದಲ ರಾಜ್ಯವಾಗುತ್ತಿತ್ತು.
ಕಾಶ್ಮೀರದ ವಿಲೀನ ಪ್ರಕ್ರಿಯೆ
ಈ ಎಲ್ಲ ಗೊಂದಲಗಳ ನಡುವೆ ಸರ್ದಾರ್ ಪಟೇಲರು ಭಾರತದೊಡನೆ ಕಾಶ್ಮೀರವನ್ನು ವಿಲೀನಗೊಳಿಸಲು ಮಹಾರಾಜ ಹರಿಸಿಂಗ್ನೊಡನೆ ಮಾತುಕತೆ ಪ್ರಾರಂಭಿಸಿದರು. ಮಹಾರಾಜರೊಡನೆ ಮಾತುಕತೆ ನಡೆಸಿ ಅವರು ಸೂಕ್ತ ನಿರ್ಧಾರವನ್ನು ಕೈಗೊಳ್ಳಲು ಸಹಾಯವಾಗುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರಾಗಿದ್ದ ಗುರೂಜಿ ಗೋಳವಲ್ಕರ್ ಅವರನ್ನು ಕಾಶ್ಮೀರಕ್ಕೆ ಕಳುಹಿಸಿದರು. ೧೯೪೭ರ ಅಕ್ಟೋಬರ್ ೧೭ರಂದು ಗುರೂಜಿಯವರು ವಿಮಾನದಲ್ಲಿ ಶ್ರೀನಗರ ತಲಪಿದರು. ಯಾವ ದೇಶದೊಡನೆಯೂ ವಿಲೀನಗೊಳ್ಳದೆ ಸ್ವತಂತ್ರವಾಗಿ ಕಾಶ್ಮೀರ ಉಳಿಸಿಕೊಳ್ಳಲು ಪ್ರಯತ್ನಿಸಿದರೆ ಅದರಿಂದಾಗುವ ಸಮಸ್ಯೆಗಳನ್ನು ಮಹಾರಾಜರಿಗೆ ಮನಗಾಣಿಸಿದರು. ಕಾಶ್ಮೀರವು ಸ್ವತಂತ್ರವಾಗುಳಿಯಲು ಪ್ರಯತ್ನಿಸಿದರೆ, ಪಾಕಿಸ್ತಾನವು ಅಲ್ಲಿದ್ದ ಬಹುಸಂಖ್ಯಾತ ಮುಸಲ್ಮಾನರನ್ನು ಎತ್ತಿಕಟ್ಟಿ ಕಾಶ್ಮೀರವನ್ನು ಕಬಳಿಸಿಬಿಡುವ ಅಥವಾ ಅದನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುವುದರಲ್ಲಿ ಅನುಮಾನವಿಲ್ಲ ಎಂದು ವಿವರಿಸಿದರು. ಮತ್ತು ಭಾರತದೊಡನೆ ವಿಲೀನಗೊಳ್ಳುವುದರಿಂದ ಕಾಶ್ಮೀರಕ್ಕಾಗುವ ಪ್ರಯೋಜನಗಳನ್ನು ತಿಳಿಸಿದರು.
ಅದಾದ ಒಂದು ವಾರದೊಳಗೆ, ಅಂದರೆ ೧೯೪೭ರ ಅಕ್ಟೋಬರ್ ೨೩ರಂದು ಪಾಕಿಸ್ತಾನವು ಸಹಸ್ರಾರು ಸಂಖ್ಯೆಯಲ್ಲಿ ಗುಡ್ಡಗಾಡು ಜನರ ಹಿಂಡನ್ನು ಕಾಶ್ಮೀರಕ್ಕೆ ನುಗ್ಗಿಸಿತು. ಇವರ ಮರೆಯಲ್ಲಿ ಪಾಕಿಸ್ತಾನದ ಸೇನೆಯೂ ಹಿಂದೆಯೇ ನುಗ್ಗಿತು. ತನಗೆ ಸೈನ್ಯ, ಶಸ್ತ್ರ ಮತ್ತು ಯುದ್ಧಸಾಮಗ್ರಿಗಳನ್ನು ತಕ್ಷಣವೇ ಕಳುಹಿಸಿಕೊಡಬೇಕೆಂದು ಮಹಾರಾಜರು ದೆಹಲಿಗೆ ತುರ್ತು ಸಂದೇಶ ಕಳುಹಿಸಿದರು. ಆದರೆ, ಮಹಾರಾಜರು ಆಗಿನ್ನೂ ವಿಲೀನಪತ್ರಕ್ಕೆ ಸಹಿ ಹಾಕಿರದ ಕಾರಣ ಅವರಿಗೆ ಯಾವುದೇ ಸಹಾಯ ನೀಡಕೂಡದೆಂದು ಮೌಂಟ್ಬ್ಯಾಟನ್ ಭಾರತ ಸರ್ಕಾರದ ಮೇಲೆ ಒತ್ತಡ ಹೇರಿದರು. ಹೀಗಾಗಿ, ವಿಲೀನಪತ್ರಕ್ಕೆ ಸಹಿ ಹಾಕುವ ತನಕವೂ ನೆಹರು ಸರ್ಕಾರ ಯಾವುದೇ ಸಹಾಯ ಕಳುಹಿಸಲು ನಿರಾಕರಿಸಿತು. ಬ್ರಿಟಿಷರು ತಾವು ಆಳುತ್ತಿದ್ದ ತನಕವೂ ತಮ್ಮ ಸಾಮ್ರಾಜ್ಯದ ಗಡಿಯ ಕುರಿತಾಗಿ ಅತ್ಯಂತ ಜಾಗರೂಕರಾಗಿದ್ದರು. ಆದರೆ, ದೇಶ ಬಿಟ್ಟು ಹೋಗುವುದು ನಿಶ್ಚಯವಾದ ಕೂಡಲೇ ಅವರು ಎಲ್ಲ ಎಚ್ಚರಿಕೆಯನ್ನೂ ಗಾಳಿಗೆ ತೂರಿದರು ಮತ್ತು ತಮ್ಮನ್ನೇ ನಂಬಿದ್ದ ನೆಹರು ಅವರಿಗೂ ಆಕ್ರಮಣದ ಸಣ್ಣ ಸುಳಿವನ್ನೂ ನೀಡಲಿಲ್ಲ. ಅವರೇನಾದರೂ ಸಕಾಲದಲ್ಲಿ ನೆಹರು ಅವರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಿದ್ದಿದ್ದರೆ ಈ ಯುದ್ಧ ನಡೆಯುತ್ತಿರಲಿಲ್ಲ.ಜಮ್ಮು-ಕಾಶ್ಮೀರ ರಾಜ್ಯವು ಪಾಕಿಸ್ತಾನದ ಪಾಲಾಗಲಿ ಎಂಬ ಉದ್ದೇಶವೂ ಬ್ರಿಟಿಷರಿಗಿದ್ದಿರಬಹುದು ಎಂದು ಅನುಮಾನಿಸುವವರಿದ್ದಾರೆ.
ಅಕ್ಟೋಬರ್ ೨೬ರ ಹೊತ್ತಿಗೆ ಮುಜಫ಼ರಾಬಾದ್ ಹಾಗೂ ಡೋಮೆಲ್ ಪಟ್ಟಣಗಳನ್ನು ದಾಳಿಕೋರರು ಆಕ್ರಮಿಸಿಕೊಂಡರು; ಕಾಶ್ಮೀರದ ಸೇನಾ ದಂಡನಾಯಕರು ಯುದ್ಧದಲ್ಲಿ ಪ್ರಾಣ ಕಳೆದುಕೊಂಡರು; ಡೋಮೆಲ್-ಶ್ರೀನಗರ ರಸ್ತೆಯಲ್ಲಿರುವ ಮಹುರಾದಲ್ಲಿನ ವಿದ್ಯುತ್ ಸ್ಥಾವರಕ್ಕೆ ಪಾಕಿಸ್ತಾನೀಯರು ಬೆಂಕಿ ಹಚ್ಚಿದ್ದರಿಂದ ಶ್ರೀನಗರವು ಕತ್ತಲಲ್ಲಿ ಮುಳುಗಿತು! ಈ ಬೆಳವಣಿಗೆಗಳಿಂದ ಮಹಾರಾಜರು ಕಂಗೆಟ್ಟರು. ಇವೆಲ್ಲ ಘಟನೆಗಳಿಂದ, ಪರಿಸ್ಥಿತಿಯ ಗಂಭೀರತೆ ರಾಜಾ ಹರಿಸಿಂಗರಿಗೆ ಮನದಟ್ಟಾಗತೊಡಗಿತ್ತು. ಭಾರತದಿಂದ ಸಹಾಯ ಪಡೆದುಕೊಳ್ಳದೆ ಅವರಿಗೆ ಬೇರಾವ ಆಯ್ಕೆಯೂ ಇರಲಿಲ್ಲ ಮತ್ತು ಅದಕ್ಕಾಗಿ ಅವರು ವಿಲೀನಪತ್ರಕ್ಕೆ ಸಹಿ ಹಾಕಲೇಬೇಕಾಗಿತ್ತು. ವಿ.ಪಿ. ಮೆನನ್ನರ ಸಮ್ಮುಖದಲ್ಲಿ ಮಹಾರಾಜರು ವಿಲೀನಪತ್ರಕ್ಕೆ ಸಹಿ ಹಾಕಿದರು, ಕಡೆಗೂ ಹೀಗೆ ಭಾರತದ ಶಿರಸ್ಸಿನ ಸ್ಥಾನದಲ್ಲಿರುವ ಕಾಶ್ಮೀರವು ಭಾರತದೊಡನೆ ವಿಲೀನಗೊಂಡಿತು.
ಗುಡ್ಡಗಾಡು ದಾಳಿಕೋರರ ಪಡೆಗಳು ಶ್ರೀನಗರವನ್ನು ಯಾವ ಕ್ಷಣದಲ್ಲೂ ತಲಪಬಹುದೆಂಬ ಆತಂಕವಿದ್ದುದರಿಂದ, ರಾಜಾ ಹರಿಸಿಂಗ್ ಅವರು ತಮ್ಮ ಕುಟುಂಬದೊಡನೆ ಕೂಡಲೇ ಶ್ರೀನಗರವನ್ನು ತೊರೆದು ಜಮ್ಮುವಿಗೆ ಹೋಗುವುದು ಸೂಕ್ತವೆಂದು ಅವರ ಹಿತೈಷಿಗಳು ಒತ್ತಾಯಿಸಿದರು. ಕತ್ತಲಲ್ಲಿ ಮುಳುಗಿದ್ದ ಶ್ರೀನಗರವನ್ನು ಅಕ್ಟೋಬರ್ ೨೫ರ ಮಧ್ಯರಾತ್ರಿ ರಾಜಾ ಹರಿಸಿಂಗ್ ತೊರೆದು ಬನಿಹಾಲ್ ಪಾಸ್ ರಸ್ತೆಯ ಮೂಲಕ ಜಮ್ಮುವಿನತ್ತ ನಡೆದರು. ಅಲ್ಲಿಗೆ, ಜಮ್ಮು-ಕಾಶ್ಮೀರ ರಾಜ್ಯವನ್ನು ಸ್ವತಂತ್ರವಾಗಿಟ್ಟುಕೊಂಡು ಅದರ ಅಧಿಪತಿಯಾಗಿ ಮುಂದುವರಿಯುವ ಅವರ ಕನಸು ನುಚ್ಚುನೂರಾಗಿತ್ತು!
ಪಾಕಿಸ್ತಾನದ ಧೂರ್ತ ಯೋಜನೆ
ಕಾಶ್ಮೀರವನ್ನು ಕಬಳಿಸುವ ಈ ಧೂರ್ತ ಯೋಜನೆಯ ರೂವಾರಿಯಾಗಿದ್ದವನು ಪಾಕಿಸ್ತಾನಿ ಸೇನಾಧಿಕಾರಿ ಮೇಜರ್ ಜನರಲ್ ಅಕ್ಬರ್ ಖಾನ್. ದೇಶವನ್ನು ವಿಭಜಿಸಿ ರಚಿಸುವ ಪಾಕಿಸ್ತಾನದ ರೂಪರೇಖೆಗಳ ಚರ್ಚೆ ನಡೆದಿದ್ದಾಗಲೇ ಯುದ್ಧದ ತಯಾರಿಯನ್ನೂ ಆತ ನಡೆಸಿದ್ದ. ಇಸ್ಲಾಮಿಗೆ ಬದ್ಧರಾಗಿದ್ದ ಕೆಲವು ಮುಸ್ಲಿಂ ಅಧಿಕಾರಿಗಳು ಅಕ್ಬರ್ ಖಾನ್ ನೇತೃತ್ವದಲ್ಲಿ ೧೯೪೭ರ ಮಾರ್ಚ್-ಏಪ್ರಿಲ್ ತಿಂಗಳಿನಿಂದಲೇ ದೆಹಲಿಯ ಲೂಟ್ಯೆಯನ್ಸ್ ಪ್ರದೇಶದ ಔರಂಗಜೇಬ್ ಮಾರ್ಗದಲ್ಲಿದ್ದ ಮಹಮ್ಮದ್ ಆಲಿ ಜಿನ್ನಾ ಅವರ ಬಂಗಲೆಯಲ್ಲಿ ನಿಯಮಿತವಾಗಿ ಸಭೆ ಸೇರುತ್ತಿದ್ದರು. ಅಲ್ಲಿ ಅವರು ಕಾಶ್ಮೀರ ಆಕ್ರಮಣದ ಕುರಿತಾಗಿ ಸುದೀರ್ಘವಾಗಿ ಚರ್ಚಿಸುತ್ತಿದ್ದರು ಮತ್ತು ಅದರ ನೀಲನಕ್ಷೆಯನ್ನೇ ತಯಾರಿಸಿದ್ದರು. ಅವರ ಯೋಜನೆ ಸರಳವಾಗಿತ್ತು:
ಭಾರತ ಸರ್ಕಾರಕ್ಕಾಗಲಿ, ಜಮ್ಮು-ಕಾಶ್ಮೀರ ಸಂಸ್ಥಾನಕ್ಕಾಗಲಿ ಪಾಕಿಸ್ತಾನವು ದಾಳಿ ಮಾಡುವುದರ ಕುರಿತಾಗಿ ಯಾವ ಸುಳಿವೂ ಇರಲು ಸಾಧ್ಯವಿಲ್ಲ. ಏಕೆಂದರೆ, ಇದೆಲ್ಲವನ್ನೂ ರಹಸ್ಯವಾಗಿ ಮಾಡಲಾಗಿದೆ. ಯಾವ ಸುಳಿವೂ ಇಲ್ಲದ ಕಾಶ್ಮೀರ ರಾಜ್ಯಕ್ಕೆ ಏಕಾಏಕಿ ಸಹಸ್ರಾರು ಸಂಖ್ಯೆಯಲ್ಲಿ ಗುಡ್ಡಗಾಡು ಜನರನ್ನು ನುಗ್ಗಿಸುವುದು. ಅವರು ಶ್ರೀನಗರವನ್ನು ತಲಪುವ ವೇಳೆಗೆ, ಕೊಹಾಲಾ ಬಳಿ ನೆಲೆನಿಂತಿರುವ ಪಾಕಿಸ್ತಾನದ ಸೈನ್ಯವನ್ನೂ ಅವರ ಹಿಂದೆಯೇ ಕಳುಹಿಸಿ, ಗುಡ್ಡಗಾಡು ಜನರನ್ನು ಅವರ ಲೂಟಿಯೊಂದಿಗೆ ತಮ್ಮ ಸ್ಥಾನಗಳಿಗೆ ಹಿಂತಿರುಗುವಂತೆ ಮಾಡುವುದು. ಇದಾದ ನಂತರ, ತಾವು ಕಾಶ್ಮೀರವನ್ನು ರಕ್ಷಿಸಿದ ಬಗೆಯನ್ನು ಜಗತ್ತಿಗೆ ತಿಳಿಸುವುದು – ಗುಡ್ಡಗಾಡು ಜನರು ಡುರಾಂಡ್ ಗಡಿಯಿಂದ ಸಾಗರೋಪಾದಿಯಲ್ಲಿ ನುಗ್ಗಿ ಬಂದು ಕಾಶ್ಮೀರವನ್ನು ಧ್ವಂಸ ಮಾಡುವುದರಲ್ಲಿದ್ದರು; ತಾವು ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲಪಿ, ಗುಡ್ಡಗಾಡು ಜನರನ್ನು ಅಲ್ಲಿಂದೋಡಿಸಿ ಕಾಶ್ಮೀರವನ್ನು ರಕ್ಷಿಸಿರುವೆವು – ಎಂಬುದಾಗಿ. ಈ ಘಟನೆಯ ನಂತರ, ಮಹಾರಾಜ ಹರಿಸಿಂಗರಿಗೆ ಕಾಶ್ಮೀರವನ್ನು ಪಾಕಿಸ್ತಾನದೊಡನೆ ವಿಲೀನಗೊಳಿಸುವುದನ್ನು ಬಿಟ್ಟು ಬೇರೆ ದಾರಿ ಇರುವುದಿಲ್ಲ. ಇದ್ದಕ್ಕಿದ್ದಂತೆ ಆಕ್ರಮಣ ನಡೆಸಿ, ಏನಾಗುತ್ತಿದೆ ಎನ್ನುವುದನ್ನು ಎಲ್ಲರೂ ಅರಿಯುವ ಮೊದಲೇ ಜಮ್ಮು-ಕಾಶ್ಮೀರ ರಾಜ್ಯವನ್ನು ಕಬಳಿಸಿಬಿಡುವುದು. ಒಟ್ಟಿನಲ್ಲಿ, ಕಾಶ್ಮೀರದ ಸಂಪತ್ತನ್ನು ಸೂರೆಗೈಯುವ ಗುಡ್ಡಗಾಡು ಜನರಿಗೂ ಲಾಭ, ಕಾಶ್ಮೀರ ದೊರೆಯುವುದರಿಂದ ಪಾಕಿಸ್ತಾನಕ್ಕೂ ಲಾಭ. ಹೀಗಾಗಿ, ಗೆದ್ದ ಪ್ರದೇಶದಲ್ಲಿ ಮನಸೋ-ಇಚ್ಛೆ ಲೂಟಿ ಮಾಡಲು ಅವಕಾಶ ಮಾಡಿಕೊಟ್ಟರೆ ಗುಡ್ಡಗಾಡು ಜನರು ತೃಪ್ತರಾಗುವರು. ಪಾಕಿಸ್ತಾನಕ್ಕೆ ಅದರ ಕನಸಿನ ಜಮ್ಮು-ಕಾಶ್ಮೀರ ರಾಜ್ಯ ದೊರೆಯುತ್ತದೆ – ಒಟ್ಟಿನಲ್ಲಿ ಇಬ್ಬರಿಗೂ ಲಾಭ. ಈ ಕಾರ್ಯಾಚರಣೆಗೆ ಪಾಕ್ ಹೆಸರು ನೀಡಿದ್ದು – ಆಪರೇಷನ್ ಗುಲ್ಮಾರ್ಗ್.

ಉತ್ತರ ಪಾಕಿಸ್ತಾನದ ವಾಯವ್ಯ ಗಡಿನಾಡ ಪ್ರಾಂತದ (North-West Frontier Province-NWFP) ಪಠಾಣರು, ಆಫ್ರಿದಿಗಳು, ವಾಜಿರ್, ಮೊಹ್ಮದ್ ಮತ್ತು ಮಸೂದರು ಗುಡ್ಡಗಾಡುಗಳಲ್ಲಿ ವಾಸ ಮಾಡಿಕೊಂಡಿದ್ದ ಜನರು. ಗುಡ್ಡಗಾಡು ಜನರು ಅಲ್ಲಿನ ಆಡಳಿತಕ್ಕೆ ಒಂದು ರೀತಿ ತಲೆಬೇನೆಯೂ ಆಗಿದ್ದರು. ಎತ್ತರದ ನಿಲವನ್ನು ಹೊಂದಿದ್ದು ಬಲಿಷ್ಠರಾಗಿದ್ದ ಅವರುಗಳು ಸದಾ ಲೂಟಿ, ದಂಗೆ, ಕದನಗಳಲ್ಲಿ ಮುಳುಗಿರುತ್ತಿದ್ದರು. ಅವರೇನೂ ಸೈನಿಕ ಶಿಕ್ಷಣ ಪಡೆದವರಲ್ಲ. ಆದರೆ, ಕೈಯಲ್ಲಿ ಆಯುಧ ಹಿಡಿದು ಓಡಾಡುತ್ತಿದ್ದರು, ಹೊಡೆದಾಟಕ್ಕೆ ಸದಾ ಸಿದ್ಧ. ಅವರ ಬಳಿ ಇದ್ದದ್ದು ಹಳೆಯ ಕಾಲದ ಯುದ್ಧಸಾಮಗ್ರಿಗಳು; ಆಧುನಿಕ ಯುದ್ಧ ಸಾಮಗ್ರಿಗಳ ಪ್ರಯೋಗವನ್ನು ಅವರು ಕಲಿತಿರಲಿಲ್ಲ ಮತ್ತು ಯುದ್ಧದ ತಂತ್ರಗಾರಿಕೆಗಳೂ ಅವರಿಗೆ ತಿಳಿದಿರಲಿಲ್ಲ, ಅನುಶಾಸನವಿರಲಿಲ್ಲ. ಅವರು ಹೊಡೆದು ಓಡುವುದು, ವೈರಿಯು ಮೈಮರೆತಿದ್ದಾಗ ಆಕ್ರಮಿಸುವುದು, ಗೆರಿಲ್ಲಾ ಯುದ್ಧತಂತ್ರಗಳನ್ನು ಉಪಯೋಗಿಸುತ್ತಿದ್ದರು. ಬ್ರಿಟಿಷ್ ಸರ್ಕಾರ ಅವರಿಗೆ ಪ್ರತಿವರ್ಷವೂ ೧೬ ಕೋಟಿ ರೂಪಾಯಿಗಳನ್ನು ನೀಡಿ, ಅವರನ್ನು ಹದ್ದುಬಸ್ತಿನಲ್ಲಿಡುತ್ತಿತ್ತು. ಹೊಸದಾಗಿ ಹುಟ್ಟಿದ್ದ ಪಾಕಿಸ್ತಾನಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ನೀಡುವುದು ಸಾಧ್ಯವಿರಲಿಲ್ಲ. ಇದಕ್ಕೆ ಪ್ರತಿಯಾಗಿ, ಆ ಗುಡ್ಡಗಾಡು ಜನರಿಗೆ ಆಧುನಿಕ ಆಯುಧಗಳಾದ ರೈಫಲ್ಗಳು, ಮೆಷಿನ್ ಗನ್ನುಗಳು, ಗ್ರೆನೇಡುಗಳನ್ನು ನೀಡಿ, ಅವರನ್ನು ಕಾಶ್ಮೀರದ ಮೇಲೆ ಛೂ ಬಿಟ್ಟು, ಲೂಟಿ ಮಾಡಿಸುವುದು. ಈ ರೀತಿ ಮಾಡಿಸುವ ಮೂಲಕ, ಗುಡ್ಡಗಾಡು ಜನರ ಸಮಸ್ಯೆಯನ್ನು ಕಾಶ್ಮೀರಕ್ಕೆ ವರ್ಗಾವಣೆ ಮಾಡಿದಂತಾಗುತ್ತದೆ ಮತ್ತು ಅವರ ಸಹಾಯದಿಂದ ಕಾಶ್ಮೀರವನ್ನು ಸುಲಭವಾಗಿ ತಾನು ಗಳಿಸಿಕೊಳ್ಳಬಹುದು. ಈ ರೀತಿ ಕಾಶ್ಮೀರದ ಕದನಕ್ಕೆ ಗುಡ್ಡಗಾಡು ಜನರನ್ನು ಪಾಕಿಸ್ತಾನ ಉಪಯೋಗಿಸಿಕೊಂಡಿತು.
ಹಲವು ತಿಂಗಳುಗಳ ಕಾಲ ನಡೆದ ಈ ತಯಾರಿ ಭಾರತದ ನಾಯಕರ ಮೂಗಿನಡಿಯಲ್ಲೇ ನಡೆದಿದ್ದರೂ, ಅವರಿಗೆ ಇದರ ಕುರಿತಾಗಿ ಸಣ್ಣ ಸುಳಿವೂ ಸಿಗದಂತೆ ಎಲ್ಲವನ್ನೂ ರಹಸ್ಯವಾಗಿಡಲಾಗಿತ್ತು. ಈ ಸಂಚಿನ ಕುರಿತಾಗಿ ಬ್ರಿಟಿಷ್ ಅಧಿಕಾರಿಗಳಿಗೆ ತಿಳಿದಿತ್ತು ಮತ್ತು ಅದಾವುದೂ ಭಾರತೀಯರಿಗೆ ತಿಳಿಯದಂತೆ ಅವರು ಎಚ್ಚರ ವಹಿಸಿದ್ದರು ಎನ್ನುವ ಸಂಗತಿ ಬ್ರಿಟಿಷರ ನೀಚತನವನ್ನು ತೋರಿಸುತ್ತದೆ. ಆಗಷ್ಟೇ ಅಧಿಕಾರ ಹಸ್ತಾಂತರ ಮಾಡುತ್ತಿದ್ದ ಬ್ರಿಟಿಷರು, ಎರಡೂ ದೇಶಗಳ ಸೈನ್ಯಗಳಿಗೆ ಬ್ರಿಟಿಷ್ ಸೈನ್ಯಾಧಿಕಾರಿಗಳನ್ನೇ ಮುಖ್ಯಸ್ಥರನ್ನಾಗಿ ನೇಮಿಸಿದ್ದರು. ಭಾರತದ ಸೈನ್ಯಕ್ಕೆ ಜನರಲ್ ರಾಬ್ ಲೊಖಾರ್ಟ್ ಮುಖ್ಯಸ್ಥನಾದರೆ, ಪಾಕಿಸ್ತಾನಿ ಸೈನ್ಯಕ್ಕೆ ಜನರಲ್ ಫ್ರಾಂಕ್ ಮೆಸ್ಸರ್ವೀ ಮುಖ್ಯಸ್ಥ. ಇವರಿಬ್ಬರನ್ನೂ ನಿಯಂತ್ರಣದಲ್ಲಿಟ್ಟುಕೊಂಡಿದ್ದವರು ಲಾರ್ಡ್ ಮೌಂಟ್ಬ್ಯಾಟನ್. ಪಾಕಿಸ್ತಾನಿ ಸೇನೆಯು ನಡೆಸಿದ್ದ ಸಂಚು ಜನರಲ್ ಫ್ರಾಂಕ್ ಮೆಸ್ಸರ್ವೀ ಅವರಿಗೆ ತಿಳಿದಿತ್ತು. ಅದನ್ನು ಅವರು ಲಾರ್ಡ್ ಮೌಂಟ್ಬ್ಯಾಟನ್ ಮತ್ತು ಜನರಲ್ ರಾಬ್ ಲೊಖಾರ್ಟ್ ಅವರಿಗೆ ತಿಳಿಸಿಯೂ ಇದ್ದರು. ಈ ವಿಷಯವನ್ನು ಭಾರತದ ನಾಯಕರಿಗೆ ತಿಳಿಯದಂತೆ ರಹಸ್ಯವಾಗಿಡಲಾಗಿತ್ತು.
ಕಾಶ್ಮೀರಕ್ಕೆ ನುಗ್ಗಿದ ಗುಡ್ಡಗಾಡು ಜನರ ಸೈನ್ಯ
ಗುಡ್ಡಗಾಡು ಜನರ ಸೈನ್ಯ ಮೊದಲಿಗೆ ದಾಳಿ ಮಾಡಿದ್ದು ಜಮ್ಮು-ಕಾಶ್ಮೀರ ರಾಜ್ಯದ ಬಾರಾಮುಲ್ಲಾ ನಗರದ ಮೇಲೆ. ಬಾರಾಮುಲ್ಲಾದ ದಾರಿಯಲ್ಲೇ ಇರುವ ಮುಜಫರಾಬಾದಿನಲ್ಲಿ ಜಮ್ಮು-ಕಾಶ್ಮೀರದ ಸೈನಿಕ ನೆಲೆ ಇದ್ದಿತು. ಆದರೆ, ಜಮ್ಮು-ಕಾಶ್ಮೀರದ ರಾಜ್ಯಸೇನೆಯ ಮುಸಲ್ಮಾನ ಸೈನಿಕರೆಲ್ಲರೂ ಶತ್ರುಗಳೊಡನೆ ಸೇರಿದರು. ತಮ್ಮ ಹಿಂದು ಸೇನಾನಾಯಕ ಹಾಗೂ ಅವನ ಸಹಾಯಕರನ್ನು ಗುಂಡಿಟ್ಟು ಕೊಂದರು. ದಾಳಿಕೋರರ ಜೊತೆಗೆ ಸೇರಿಕೊಂಡು ದೇಶದ ವಿರುದ್ಧ ತಿರುಗಿನಿಂತರು. ಅಕ್ಟೋಬರ್ ೨೪ರಂದು ಮಹೂರಾದ ವಿದ್ಯುಚ್ಛಕ್ತಿ ಸರಬರಾಜು ಕೇಂದ್ರವನ್ನು ವಶಪಡಿಸಿಕೊಂಡು ಶ್ರೀನಗರವನ್ನು ಕತ್ತಲಲ್ಲಿ ಮುಳುಗಿಸಿದರು. ಆಕ್ರಮಕರ ಗುರಿಯಿದ್ದದ್ದು ಅಕ್ಟೋಬರ್ ೨೬ರಂದು ಶ್ರೀನಗರವನ್ನು ತಲಪುವುದು ಮತ್ತು ಆ ದಿನ ಶ್ರೀನಗರದಲ್ಲಿ ಈದ್ ಹಬ್ಬವನ್ನಾಚರಿಸುವುದು. ಭೂಸ್ವರ್ಗವೆಂದು ಪ್ರಸಿದ್ಧವಾಗಿದ್ದ ಕಾಶ್ಮೀರವು, ಆಕ್ರಮಣಕಾರರು ಎಸಗಿದ ಕೊಲೆ, ಲೂಟಿ, ಮಾನಾಪಹರಣ, ಅಗ್ನಿಕಾಂಡಗಳಿಂದಾಗಿ ಜ್ವಾಲಾಮುಖಿಯಂತೆ ಉರಿಯಲಾರಂಭಿಸಿತು. ದಾಳಿಕೋರರು ತಾವು ತಲಪಿದ ಪ್ರದೇಶಗಳನ್ನು ಆಕ್ರಮಿಸಿಕೊಂಡು ಲೂಟಿ ಮಾಡುವುದಷ್ಟೇ ಅಲ್ಲದೆ, ಅಲ್ಲಿರುವ ಹಿಂದುಗಳ ಮತಾಂತರ ಹಾಗೂ ಮಹಿಳೆಯರ ಬಲಾತ್ಕಾರಕ್ಕೂ ಕೈಹಾಕಿದರು. ಹಿಂದು ಹೆಣ್ಣುಮಕ್ಕಳ ಅಪಹರಣ-ಅತ್ಯಾಚಾರಗಳು ಅವ್ಯಾಹತವಾಗಿ ನಡೆದವು. ಹಿಂದುಗಳಿಗೆ ಅಲ್ಲಿಂದ ಓಡಿಹೋಗುವುದನ್ನು ಬಿಟ್ಟು ಬೇರಾವ ದಾರಿಯೂ ಉಳಿದಿರಲಿಲ್ಲ. ಈ ಹಿಂದು ನಿರಾಶ್ರಿತರ ಜವಾಬ್ದಾರಿಯೂ ಜಮ್ಮು-ಕಾಶ್ಮೀರ ಸರ್ಕಾರದ ಮೇಲೆ ಬಿದ್ದಿತು. ಹೀಗಾಗಿ, ಆಕ್ರಮಣಕ್ಕೊಳಗಾದ ಪ್ರದೇಶದ ಹಿಂದು ನಿರಾಶ್ರಿತರನ್ನು ಜಮ್ಮುವಿಗೆ ಸುರಕ್ಷಿತವಾಗಿ ಸಾಗಿಸುವ ಕೆಲಸವೂ ಜಮ್ಮು-ಕಾಶ್ಮೀರದ ಪಡೆಗಳ ಹೆಗಲಿಗೇರಿತು.
೧೯೪೭-೪೮ರ ಭಾರತ-ಪಾಕ್ ಯುದ್ಧ ನಡೆದದ್ದು ಪ್ರಮುಖವಾಗಿ ಮೂರು ಪ್ರದೇಶಗಳಲ್ಲಿ – ಮೊದಲನೆಯದು, ಶ್ರೀನಗರವನ್ನು ಕೇಂದ್ರವಾಗಿ ಹೊಂದಿದ್ದ ಕಾಶ್ಮೀರ ಕಣಿವೆ ಪ್ರದೇಶ. ಅತ್ಯಂತ ರಮಣೀಯ ಪ್ರದೇಶವಾದ ಕಾಶ್ಮೀರವು ಪ್ರವಾಸೋದ್ಯಮದ ಅಭಿವೃದ್ಧಿಗೆ ಅತ್ಯಂತ ಪ್ರಶಸ್ತ ಸ್ಥಳವಾಗಿತ್ತು. ಎರಡನೆಯದು, ಕಣಿವೆಯ ಉತ್ತರ ಮತ್ತು ಈಶಾನ್ಯದ ಅತಿ ಎತ್ತರದ ಪ್ರದೇಶಗಳಾದ ಬಾಲ್ಟಿಸ್ತಾನ, ಗಿಲ್ಗಿಟ್, ಸ್ಕರ್ದು ಮತ್ತು ಲಡಾಖ್. ಉತ್ತರದಿಂದ ಯಾವ ಶತ್ರುವೂ ಆತಿಕ್ರಮಿಸದಂತೆ ದೇಶಕ್ಕೆ ನೈಸರ್ಗಿಕ ಗೋಡೆಯ ರೀತಿಯಲ್ಲಿ ಜ಼ಂಸ್ಕರ್, ಲಡಾಖ್, ಕಾರಕೋರಮ್ ಮುಂತಾದ ಅತ್ಯುನ್ನತ ಶಿಖರಗಳನ್ನು ಹೊಂದಿದ್ದ ಪ್ರದೇಶಗಳಿವು. ರಷ್ಯನ್ನರು ಈ ದಾರಿಯ ಮೂಲಕ ಭಾರತವನ್ನು ಆಕ್ರಮಿಸಬಹುದೆಂಬ ಭಯವಿದ್ದುದರಿಂದ, ಬ್ರಿಟಿಷರು ಈ ಪ್ರದೇಶದಲ್ಲಿ ಸದಾ ಕಟ್ಟೆಚ್ಚರದಲ್ಲಿದ್ದರು. ಮೂರನೆಯದು, ಪೀರ್ ಪಂಜಾಲ್ ಮತ್ತು ಕಿಶ್ತ್ವಾರ್ ಪರ್ವತಶ್ರೇಣಿಗಳಿಂದ ಆವೃತಗೊಂಡಿದ್ದ ಜಮ್ಮು, ರಾಜೌರಿ ಮತ್ತು ಪೂಂಚ್. ಶತ್ರುಗಳೇನಾದರೂ ಜಮ್ಮು ತಲಪಿಬಿಟ್ಟರೆ, ಅಲ್ಲಿಂದ ಪಂಜಾಬಿನವರೆಗೂ ಯಾವ ಅಡೆತಡೆಯೂ ಇಲ್ಲ. ಇದೊಂದು ರೀತಿಯಲ್ಲಿ ಉತ್ತರಭಾರತಕ್ಕೆ ದ್ವಾರದಂತಿದ್ದ ಪ್ರದೇಶ. ಜಮ್ಮು-ಕಾಶ್ಮೀರ ಸಂಸ್ಥಾನಕ್ಕೆ ಶ್ರೀನಗರವು ಬೇಸಿಗೆ ಕಾಲದಲ್ಲಿ ರಾಜಧಾನಿಯಾದರೆ, ಚಳಿಗಾಲದಲ್ಲಿ ಜಮ್ಮು ನಗರವು ರಾಜಧಾನಿಯಾಗಿರುತ್ತಿತ್ತು.
ಭಾರತದ ಪ್ರಥಮ ಪ್ರತಿಕ್ರಿಯೆ
ಭಾರತ ಸರ್ಕಾರವು ಆಘಾತದಿಂದ ಎಚ್ಚೆತ್ತು ಯುದ್ಧಕ್ಕೆ ಅಣಿಯಾಗುವ ವೇಳೆಗೇ, ಶತ್ರುಸೇನೆ ಒಳನುಗ್ಗಿ ಬಂದು ಆಘಾತ ಮಾಡತೊಡಗಿತ್ತು. ಒಳನುಗ್ಗಿದ್ದ ಗುಡ್ಡಗಾಡು ಜನರು ಪೂಂಚ್, ರಾಜೌರಿ ಮತ್ತು ಜಮ್ಮು ನಗರಗಳಿಗೆ ಸಮೀಪದಲ್ಲಿ ಶಿಬಿರಗಳನ್ನು ಸ್ಥಾಪಿಸಿಕೊಂಡಿದ್ದರು. ಆ ಶಿಬಿರಗಳಲ್ಲಿ, ಸಹಸ್ರಾರು ಸಂಖ್ಯೆಯಲ್ಲಿ ಗುಡ್ಡಗಾಡು ಜನರು ಸೇರಿಕೊಂಡಿದ್ದರು ಮತ್ತು ಅವರಿಗೆ ಯುದ್ಧಕ್ಕೆ ಅಗತ್ಯವಾದ ತರಬೇತಿ ನೀಡಲಾಗುತ್ತಿತ್ತು. ಅದರ ಜೊತೆಗೆ ಜೆಹಾದ್ ಕುರಿತಾಗಿಯೂ ಉಪದೇಶಿಸಲಾಗುತ್ತಿತ್ತು -ಕಾಶ್ಮೀರವನ್ನಾಳುತ್ತಿರುವುದು ಹಿಂದು ರಾಜ, ಆತ ಕಾಫಿರ. ಕಾಫಿರನನ್ನು ನಿರ್ಣಾಮ ಮಾಡುವುದು ಮುಸಲ್ಮಾನನ ಮತೀಯ ಕರ್ತವ್ಯವಾಗುತ್ತದೆ. ಇದಕ್ಕಾಗಿ ನಾವು ಜೆಹಾದ್ ಮಾಡುತ್ತಿದ್ದೇವೆ. ಜೆಹಾದ್ ಮಾಡಿ ಗೆದ್ದ ನಂತರ, ಆ ಪ್ರದೇಶವೆಲ್ಲಾ ನಮ್ಮದಾಗುತ್ತದೆ, ಅಲ್ಲಿರುವ ಭೂಮಿ, ಅಲ್ಲಿ ಸಿಗುವ ಧನ-ಕನಕ ಸಂಪತ್ತುಗಳೆಲ್ಲವೂ ನಮ್ಮದು. ನಾವೆಲ್ಲವನ್ನೂ ಭೋಗಿಸಬಹುದು, ನಮ್ಮನ್ನು ತಡೆಯುವವರಿರುವುದಿಲ್ಲ. ಜೆಹಾದ್ ಮಾಡುತ್ತಾ ಮಡಿದರೆ, ನಮಗೆ ಸ್ವರ್ಗ ಸಿಗುತ್ತದೆ.
ಇವರ ಮುಂದಿದ್ದ ಪ್ರಧಾನ ಗುರಿಯೆಂದರೆ, ಕಾಶ್ಮೀರ ಕಣಿವೆಯನ್ನು ವಶಪಡಿಸಿಕೊಂಡು, ಪ್ರಮುಖ ಪಟ್ಟಣಗಳಾದ ರಾಜೌರಿ ಮತ್ತು ಪೂಂಚ್ಗಳನ್ನು ಆಕ್ರಮಿಸುವುದು. ಅನಂತರ ಜಮ್ಮುವನ್ನು ಗೆದ್ದುಕೊಂಡು, ಗಿಲ್ಗಿಟ್ ಮತ್ತು ಸ್ಕರ್ದು ನಗರಗಳನ್ನು ಆಕ್ರಮಿಸಿಕೊಂಡು, ಲೇಹ್ ಮತ್ತು ಲಡಾಖಿನತ್ತ ಧಾವಿಸುವುದು. ಇವರ ಎರಡನೆಯ ಗುರಿಯೆಂದರೆ, ಜಮ್ಮು-ಕಾಶ್ಮೀರದಿಂದ ಕಾಫಿರರಾದ ಹಿಂದುಗಳನ್ನು ತೊಲಗಿಸುವುದು. ಜಮ್ಮು-ಕಾಶ್ಮೀರದ ಪೊಲೀಸ್ ಪಡೆಯು ತಮ್ಮ ಎದುರು ಕೆಲವು ಗಂಟೆಗಳ ಕಾಲ ಕೂಡಾ ನಿಲ್ಲಲಾರದು ಮತ್ತು ಆಕ್ರಮಣವು ಅನಿರೀಕ್ಷಿತವಾದದ್ದರಿಂದ ಭಾರತದ ಸರ್ಕಾರ ತಕ್ಷಣ ಯಾವುದೇ ಸಹಾಯವನ್ನೂ ನೀಡಲಾರದು ಎಂದು ಅವರು ಭಾವಿಸಿದ್ದರು. ವಿಭಜನೆಯಿಂದ ಆತಂಕಕ್ಕೊಳಗಾಗಿದ್ದ ಮತ್ತು ಗಡಿಯ ಆಚೆಯಿಂದ ಪ್ರವಾಹೋಪಾದಿಯಲ್ಲಿ ನುಗ್ಗಿ ಬರುತ್ತಿದ್ದ ಜನರ ಪುನರ್ವಸತಿಯ ಕಾರ್ಯದಲ್ಲಿ ಭಾರತೀಯ ಸೈನ್ಯ ನಿರತವಾಗಿರುವುದರಿಂದ, ದೇಶದೆಲ್ಲೆಡೆ ಹಬ್ಬುತ್ತಿದ್ದ ಕೋಮುಗಲಭೆಗಳ ನಿಯಂತ್ರಣದಲ್ಲಿಯೂ ಸೈನಿಕರು ನಿರತರಾಗಿದ್ದುದರಿಂದ, ಜಮ್ಮು-ಕಾಶ್ಮೀರದ ಪೊಲೀಸ್ ಪಡೆಗೆ ಭಾರತವು ಸಕಾಲದಲ್ಲಿ ಸಹಾಯ ನೀಡಲಾರದು. ಭಾರತವು ಎಚ್ಚೆತ್ತುಕೊಳ್ಳುವುದಕ್ಕೆ ಮುಂಚೆಯೆ ಕಾಶ್ಮೀರ ತಮ್ಮ ಪಾಲಾಗಿರುತ್ತದೆ – ಎನ್ನುವುದು ಅವರ ಹವಣಿಕೆಯಾಗಿತ್ತು. ಆಪರೇಷನ್ ಗುಲ್ಮಾರ್ಗ್ ಯೋಜಕರ ಲೆಕ್ಕಾಚಾರದಂತೆ, ಕೆಲವೇ ದಿನಗಳಲ್ಲಿ ಯುದ್ಧವು ಮುಗಿದು, ಇಡೀ ಜಮ್ಮು-ಕಾಶ್ಮೀರ ರಾಜ್ಯವು ಪಾಕಿಸ್ತಾನಕ್ಕೆ ಸೇರುವುದು.
ಪ್ರಾರಂಭದಲ್ಲಿ ಆಕ್ರಮಕರು ಅಂದುಕೊಂಡಿದ್ದಂತೆಯೇ ಆಯಿತು. ಭಾರತ ಸರ್ಕಾರವು ಎಚ್ಚೆತ್ತುಕೊಳ್ಳಲು ಎರಡು ದಿನ ಬೇಕಾಯಿತು. ಅದು ಪ್ರತಿಕ್ರಿಯಿಸಿದ್ದು ಅಕ್ಟೋಬರ್ ೨೫ರಂದು. ಆಗ್ರಾದಲ್ಲಿ ನೆಲೆಯನ್ನು ಹೊಂದಿದ್ದ ಭಾರತೀಯ ವಿಮಾನ ದಳದ ಡಕೋಟಾ ವಿಮಾನ ದಳವನ್ನು ದೆಹಲಿಗೆ ತುರ್ತಾಗಿ ಕರೆಸಿಕೊಳ್ಳಲಾಯಿತು. ಸರ್ಕಾರವು ಸಹಾಯವನ್ನು ಕಳುಹಿಸುವುದಕ್ಕೆ ಮೊದಲು, ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಅರಿತುಕೊಳ್ಳಬೇಕಾಗಿತ್ತು. ವಿಂಗ್ ಕಮ್ಯಾಂಡರ್ ಹೆಚ್.ಕೆ. ದೇವನ್, ವಿ.ಪಿ. ಮೆನನ್ ಮತ್ತು ಕರ್ನಲ್ ಮಾಣಿಕ್ಶಾ ಅವರು ಪರಿಸ್ಥಿತಿಯನ್ನು ಪರಾಮರ್ಶಿಸುವುದಕ್ಕಾಗಿ ಮತ್ತು ಮುಂದಿನ ಕ್ರಮಗಳನ್ನು ಯೋಜಿಸುವುದಕ್ಕಾಗಿ ಶ್ರೀನಗರಕ್ಕೆ ಡಕೋಟಾ ವಿಮಾನದಲ್ಲಿ ಹಾರಿದರು. ಆ ಪ್ರದೇಶದಲ್ಲೆಲ್ಲಾ ವಿಮಾನದಲ್ಲಿ ಹಾರಾಡಿ, ಸಮೀಕ್ಷೆ ನಡೆಸಿ, ಪ್ರತ್ಯಕ್ಷದರ್ಶಿ ವರದಿಯನ್ನು ಸರ್ಕಾರಕ್ಕೆ ನೀಡಿದರು. ದಾಳಿಕೋರರು ಈಗ ಮುಂದುವರಿಯುತ್ತಿದ್ದ ವೇಗದಲ್ಲೇ ಮುಂದುವರಿದರೆ ಕೆಲವೇ ದಿನಗಳಲ್ಲಿ ಅವರು ಶ್ರೀನಗರ ತಲಪಿಬಿಡುತ್ತಾರೆ – ಎಂದು ವಿ.ಪಿ. ಮೆನನ್ ಅವರು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದರು. ಅದಾದ ಕೂಡಲೇ, ಕಾಶ್ಮೀರದ ಪ್ರಧಾನಮಂತ್ರಿಯವರನ್ನೂ ಜೊತೆಯಲ್ಲಿ ಕರೆದುಕೊಂಡು ಮೆನನ್ ಮತ್ತು ಮಾಣಿಕ್ಶಾ ಅವರು ತಕ್ಷಣವೇ ದೆಹಲಿಗೆ ಹಿಂತಿರುಗಿ, ಕಾಶ್ಮೀರದ ರಕ್ಷಣೆಗಾಗಿ ತುರ್ತಾಗಿ ಸೈನ್ಯವನ್ನು ಕಳುಹಿಸುವಂತೆ ಒತ್ತಾಯಿಸಿದರು. ಇವರ ಮನವಿಗೆ ಓಗೊಟ್ಟ ಕೇಂದ್ರಸರ್ಕಾರವು ಎರಡು ತುಕಡಿ ಸೈನ್ಯಗಳನ್ನು ಕಳುಹಿಸಿತು – ಒಂದು ಕಾಶ್ಮೀರ ಕಣಿವೆಯ ರಕ್ಷಣೆಗೆ, ಮತ್ತೊಂದು ಜಮ್ಮು, ಪೂಂಚ್ ಮತ್ತು ರಾಜೌರಿಗಳ ರಕ್ಷಣೆಗೆ.
ಆ ಸಮಯದಲ್ಲಿ ಆಗಸದಲ್ಲಿದ್ದುಕೊಂಡು ಕಣ್ಣಿನಂತೆ ಕೆಲಸ ಮಾಡಿದ್ದು ಭಾರತೀಯ ವಿಮಾನ ದಳ. ಕೆಳಗಿನ ಪ್ರದೇಶಗಳ ಚಿತ್ರೀಕರಣ ಮಾಡಿಕೊಳ್ಳಲು, ಆ ವಿಮಾನಗಳಲ್ಲಿ ಸ್ವಯಂಚಾಲಿತ ಕ್ಯಾಮೆರಾ ಸೌಲಭ್ಯವಿರಲಿಲ್ಲ. ಅವುಗಳಲ್ಲಿ ಕುಳಿತಿವರೇ ಕೈಯಲ್ಲಿ ಕ್ಯಾಮೆರಾ ಹಿಡಿದುಕೊಂಡು ಕೆಳಗಿನ ದೃಶ್ಯಗಳನ್ನು ಚಿತ್ರೀಕರಣಗೊಳಿಸಿಕೊಳ್ಳಬೇಕಿತ್ತು, ಆ ನಂತರ ಆ ಚಿತ್ರಗಳನ್ನು ಮೇಲಧಿಕಾರಿಗಳಿಗೆ ಕಳುಹಿಸಬೇಕಿತ್ತು. ಅವರು ಈ ಚಿತ್ರಗಳ ಆಧಾರದ ಮೇಲೆ, ಶತ್ರುಗಳ ಚಲನವಲನ, ಅವರು ಸಾಗುತ್ತಿದ್ದ ದಾರಿ, ಶತ್ರುಗಳ ಬಲಾಬಲ, ಅವರ ವೇಗ, ಅವರ ಮುಂದಿನ ಗುರಿ ಇತ್ಯಾದಿಗಳನ್ನು ಅರ್ಥ ಮಾಡಿಕೊಂಡು ಮುಂದಿನ ಯೋಜನೆ ಮಾಡಬೇಕಾಗಿತ್ತು. ಅಮೃತಸರ ವಿಮಾನ ನಿಲ್ದಾಣದಿಂದ ಕೆಲಸ ಮಾಡುತ್ತಿದ್ದ ಆಕ್ಸ್ಫರ್ಡ್ ಯುದ್ಧವಿಮಾನವು ಅಕ್ಟೋಬರ್ ೨೬ರಂದು ಮೊತ್ತಮೊದಲ ಚಿತ್ರಣವನ್ನು ನೀಡಿತು – ದಾಳಿಕೋರರು ಬಾರಾಮುಲ್ಲಾದತ್ತ ಧಾವಿಸುತ್ತಿದ್ದರು ಮತ್ತು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಭಾರತದ ಸೈನ್ಯವನ್ನು ವಿಮಾನಗಳ ಮೂಲಕ ಇಳಿಸುವುದು ಕಷ್ಟವಾದರೂ ಅಸಾಧ್ಯವಿರಲಿಲ್ಲ.
ಅದು ಅಪಾಯವೇನೋ ಹೌದಾಗಿತ್ತು; ಆದರೆ ನಿಷ್ಣಾತ ಪೈಲಟ್ಗಳಿಗೆ ಅಲ್ಲಿ ವಿಮಾನಗಳನ್ನು ಇಳಿಸುವುದು ಸಾಧ್ಯವಿತ್ತು. ಭಾರತೀಯ ಪಡೆಗಳು ಭೂಮಾರ್ಗದ ಮೂಲಕ ಶ್ರೀನಗರ ತಲಪಲು ೩೦೦ ಮೈಲಿ ದೂರದ ದಾರಿಯಲ್ಲಿ ಸಾಗಬೇಕಾಗಿತ್ತು. ಅದೇನೂ ಮೋಟಾರು ವಾಹನ ಸಾಗಬಹುದಾದ ದಾರಿಯಾಗಿರಲಿಲ್ಲ. ಆ ಮಾರ್ಗದ ಮೂರನೇ ಎರಡರಷ್ಟು ಭಾಗ ಬೆಟ್ಟಗುಡ್ಡಗಳ ಮೂಲಕ ಸಾಗುತ್ತಿತ್ತು. ಈ ದಾರಿಯನ್ನು ಹಿಡಿದು ಸೈನಿಕರು ಹೊರಟಿದ್ದರೆ ಶ್ರೀನಗರ ಎಂದೋ ಕೈತಪ್ಪಿಬಿಡುತ್ತಿತ್ತು. ಅವರಿಗಿದ್ದದ್ದು ಒಂದೇ ದಾರಿ – ವಿಮಾನಗಳ ಮೂಲಕ ಶ್ರೀನಗರಕ್ಕೆ ಸೈನಿಕರನ್ನು ಸಾಗಿಸುವುದು. ಈ ಸಂದರ್ಭದಲ್ಲಿ ವಿಮಾನದಳ ಅತ್ಯಂತ ಪ್ರಶಂಸನೀಯವಾಗಿ ಕಾರ್ಯಾಚರಣೆ ನಡೆಸಿತು.
ಶತ್ರುವಿನ ಶಕ್ತಿ, ಚಲನೆ ಮತ್ತು ಯೋಜನೆಗಳನ್ನು ತಿಳಿದುಕೊಳ್ಳುವುದು ಅತಿಮುಖ್ಯವೆಂದು ಈ ಹೊತ್ತಿಗೆ ಎಲ್ಲರಿಗೂ ಮನವರಿಕೆಯಾಗಿತ್ತು – ಅದನ್ನು ತಿಳಿದರೆ ಮಾತ್ರ ನಮ್ಮ ಹೆಜ್ಜೆಯನ್ನು ನಿರ್ಧರಿಸಬಹುದು, ನಮ್ಮ ತಂತ್ರಗಳನ್ನು ಹೆಣೆಯಬಹುದು. ಇಲ್ಲದಿದ್ದರೆ, ಕೇವಲ ಕತ್ತಲಲ್ಲಿ ತಡಕಾಡಿದಂತೆ. ಆದರೆ, ಶತ್ರುವಿನ ಶಕ್ತಿಯನ್ನು ಅರಿಯಲು ಶತ್ರುವಿನ ಪಾಳೆಯಕ್ಕೆ ಹೊಕ್ಕೇ ನೋಡಬೇಕು, ಅರ್ಥಾತ್ ಮೃತ್ಯುವಿನ ಮನೆಯ ಬಾಗಿಲು ತಟ್ಟಿದಂತೆ. ಇದು ಸುಲಭಸಾಧ್ಯವಿಲ್ಲ ಮತ್ತು ತೀವ್ರ ಅಪಾಯದ ಕೆಲಸ. ಸ್ವಲ್ಪ ಹೆಚ್ಚು-ಕಡಮೆಯಾದರೂ ಪ್ರಾಣಕ್ಕೇ ಕುತ್ತು. ಇಂತಹ ಅತಿ ಮಹತ್ತ್ವದ ಮತ್ತು ಅಪಾಯದ ಕಾರ್ಯವನ್ನು ಭಾರತೀಯ ವಿಮಾನದಳದ ಬ್ಯಾಟಲೇಕ್ಸಸ್ (Battle-axes) ತಂಡಕ್ಕೆ ನೀಡಲಾಯಿತು.
ಈ ತಂಡವು ಡೋಮೆಲ್-ಬಾರಾಮುಲ್ಲಾ-ಪಟ್ಟಣ್ ದಾರಿಯಲ್ಲಿ ಟೆಂಪೆಸ್ಟ್ ವಿಮಾನಗಳಲ್ಲಿ ಹಾರಾಟ ನಡೆಸಿ ಅವಲೋಕನ ನಡೆಸಿತು. ಶತ್ರುಗಳು ಹೋಗುತ್ತಿದ್ದ ದಾರಿ, ಅವರ ವೇಗ, ಅವರ ಬಳಿಯಿದ್ದ ಸೈನಿಕರ ಬಲಾಬಲ, ಅವರು ಎಷ್ಟು ಗುಂಪುಗಳನ್ನು ಮಾಡಿಕೊಂಡಿದ್ದಾರೆ, ಅವರ ಬೆಂಬಲಕ್ಕೆ ಎಷ್ಟು ಜನ ಇದ್ದಾರೆ, ಅವರು ಎಷ್ಟು ದೂರದಲ್ಲಿದ್ದಾರೆ ಇತ್ಯಾದಿ ಅನೇಕ ಸಂಗತಿಗಳನ್ನು ಅಂದಾಜು ಮಾಡಲಾಯಿತು. ಆಗ್ರಾದಲ್ಲಿ ನೆಲಸಿದ್ದ ಈ ದಳವನ್ನು ಪ್ರಾರಂಭದಲ್ಲಿ ಜಮ್ಮುವಿಗೆ ಮತ್ತು ನಂತರ ಅಮೃತಸರಕ್ಕೆ ಕಳುಹಿಸಲಾಯಿತು. ಈ ತಂಡದ ಧೀರ ಯೋಧರು, ಅವಲೋಕನದ ಜೊತೆಜೊತೆಗೇ ಶತ್ರುವಿನ ಮೇಲೆ ದಾಳಿಯನ್ನೂ ನಡೆಸುವ ಮೂಲಕ ಶತ್ರುವಿನೊಡನೆ ಹೋರಾಟದಲ್ಲಿ ನಿರತರಾಗಿದ್ದ ಭೂಸೈನ್ಯಕ್ಕೆ ಬೆಂಬಲ ನೀಡಿದರು. ಅಕ್ಟೋಬರ್ ೨೯ರಂದು ಜಮ್ಮುವಿನ ೭ ಸ್ಕ್ವಾಡ್ರನ್ಗೆ ಸೇರಿದ ಎರಡು ಟೆಂಪೆಸ್ಟ್ ಯುದ್ಧವಿಮಾನಗಳು ಡೋಮೆಲ್-ಬಾರಾಮುಲ್ಲಾ-ಪಟ್ಟಣ್ ರಸ್ತೆಯಲ್ಲಿ ಸಾಗುತ್ತಿದ್ದ ಗುಡ್ಡಗಾಡು ದಳದ ಮೇಲೆ ದಾಳಿ ನಡೆಸಿದವು. ದಾಳಿಕೋರರು ೭೭ ಬಸ್ಸುಗಳಲ್ಲಿ ಶ್ರೀನಗರದತ್ತ ಧಾವಿಸುತ್ತಿದ್ದರು.
ಭಾರತೀಯ ವಿಮಾನ ದಳ ಶತ್ರುವಿನ ಮೇಲೆ ಬಾಂಬುಗಳನ್ನು ಸುರಿಸಿತು. ಅನೇಕ ವಾಹನಗಳು ಅಗ್ನಿಗಾಹುತಿಯಾದವು. ನೂರಾರು ಶತ್ರುಗಳು ಹುಳುಗಳಂತೆ ಕ್ಷಣಾರ್ಧದಲ್ಲಿ ನಾಶವಾದರು. ಶತ್ರುಪಡೆ ವಿಚಲಿತವಾಯಿತು, ಅವರು ದಿಕ್ಕಾಪಾಲಾಗಿ ಓಡತೊಡಗಿದರು, ಅವರ ಮುನ್ನಡೆಗೆ ತಡೆಯುಂಟಾಯಿತು. ಈ ದಾಳಿಯಿಂದಾಗಿ ಭಾರತೀಯ ಸೈನಿಕ ದಳಕ್ಕೆ ಉಸಿರಾಡಲು ಸಮಯ ಸಿಕ್ಕಂತಾಯಿತು ಮತ್ತು ಶ್ರೀನಗರದ ರಕ್ಷಣೆಗೆ ತಮ್ಮ ಮುಂದಿನ ನಡೆಯನ್ನು ಯೋಜಿಸಲು ಸಹಾಯವಾಯಿತು. ಭಾರತೀಯ ವೈಮಾನಿಕ ಪಡೆ ಈ ರೀತಿಯಲ್ಲಿ ಯುದ್ಧದುದ್ದಕ್ಕೂ ಭೂಪಡೆಯ ಜೊತೆಜೊತೆಗೆ ಕೆಲಸ ಮಾಡಿತು. ವಿಮಾನಗಳು ನಿರಂತರವಾಗಿ ಹಾರಾಡಲು ಅಪಾರ ಪ್ರಮಾಣದ ಇಂಧನದ ಅಗತ್ಯವಿರುತ್ತದೆ. ಶ್ರೀನಗರದಲ್ಲಿ ಈ ವ್ಯವಸ್ಥೆ ಇರಲಿಲ್ಲ. ಇವುಗಳಿಗೆ ಬೇಕಾದ ಇಂಧನವನ್ನು ದೆಹಲಿಯಿಂದ ಬಂದಿದ್ದ ಡಕೋಟಾ ವಿಮಾನಗಳು ಪೂರೈಸುತ್ತಿದ್ದವು.
ದಿನಗಳು ಕಳೆದಂತೆ ಯುದ್ಧವು ವಿವಿಧ ಪ್ರದೇಶಗಳಿಗೆ ವಿಸ್ತರಿಸುತ್ತಾ ಹೋಯಿತು. ಭಾರತೀಯ ಪಡೆಗಳು ಈ ಎಲ್ಲ ಸವಾಲುಗಳನ್ನು ಎದುರಿಸಿ ವಿಜಯಿಗಳಾಗುತ್ತಾ ಸಾಗಿದವು. ವಿಜಯವೇನೂ ಸುಲಭವಾಗಿ ದೊರಕಲಿಲ್ಲ. ಪ್ರತಿಯೊಂದು ಹೆಜ್ಜೆಯೂ ಸವಾಲೇ, ಪ್ರತಿಯೊಂದು ಕದನದಲ್ಲೂ ಪ್ರಾಣವನ್ನು ಪಣಕ್ಕಿಟ್ಟೇ ಹೋರಾಡಬೇಕು. ಕೆಲವು ಕದನಗಳಲ್ಲಿ ಸೋತದ್ದೂ ಉಂಟು, ಹಿಮ್ಮೆಟ್ಟಬೇಕಾದ ಪ್ರಸಂಗಗಳೂ ಇದ್ದವು. ಅಂತಿಮ ವಿಜಯ ಲಕ್ಷ್ಯದಲ್ಲಿರಬೇಕಾದಾಗ, ಕೆಲವು ಕದನಗಳ ಸೋಲು ಪ್ರಮುಖವಾಗುವುದಿಲ್ಲ. ಮತ್ತಷ್ಟು ಪಡೆಗಳನ್ನು ಸೇರಿಸಿಕೊಂಡು, ಹೊಸ ಯೋಜನೆಗಳೊಂದಿಗೆ ಸೋಲಾಗಿದ್ದ ಪ್ರದೇಶಗಳನ್ನು ಗೆದ್ದುಕೊಂಡರು. ಪ್ರತಿಯೊಂದು ಕದನವೂ ಒಂದು ಅಪ್ರತಿಮ ಹೋರಾಟದ ಕಥೆಯೇ. ನಿರ್ಣಾಯಕ ಹೋರಾಟಗಳು ನಡೆದ ಪ್ರದೇಶಗಳು – ಬಡಗಾಂ, ಶಾಲಾತೆಂಗ್, ರಾಜೌರಿ, ಝಂಗಾರ್, ಪೂಂಚ್, ಲಡಾಖ್.
೧೯೪೮ರ ಬೇಸಿಗೆಯ ಹೊತ್ತಿಗೆ ಯುದ್ಧವು ಮೂರು ವಲಯಗಳಲ್ಲೂ ಪಸರಿಸಿತು. ಸಣ್ಣಪುಟ್ಟ ಪ್ರಯತ್ನಗಳಿಂದ ಪಾಕಿಸ್ತಾನಿ ದಾಳಿಕೋರರು ಹಿಮ್ಮೆಟ್ಟುವುದಿಲ್ಲ ಎನ್ನುವುದು ಖಚಿತವಾಯಿತು. ದಾಳಿಕೋರರನ್ನು ಹಿಮ್ಮೆಟ್ಟಿಸಲು ಬಲವಾದ ಯೋಜನೆಗಳನ್ನು ಮತ್ತು ವ್ಯವಸ್ಥಿತವಾದ ವ್ಯೂಹಗಳನ್ನು ಹೆಣೆಯುವುದು ಅನಿವಾರ್ಯವಾಯಿತು. ಉತ್ತರದಲ್ಲಿ ಸ್ಕರ್ದುವಿನಿಂದ ಹಿಡಿದು ದಕ್ಷಿಣದ ನೌಶೇರಾವರೆಗಿನ ಎಲ್ಲ ಪ್ರದೇಶಗಳ ಮೇಲ್ವಿಚಾರಣೆಯನ್ನು ಒಬ್ಬರೇ ಮುಖ್ಯಸ್ಥರು ಗಮನಿಸುವುದು ದುಸ್ತರವಾಯಿತು. ೧೯೪೮ರ ಮಾರ್ಚ್ನಲ್ಲಿ ಜಮ್ಮು-ಕಾಶ್ಮೀರ ರಾಜ್ಯ ಪಡೆಗಳನ್ನು ಜಮ್ಮು-ಕಾಶ್ಮೀರ ಕೋರ್ ಎಂದು ಬದಲಾಯಿಸಿ, ಜನರಲ್ ಕೆ.ಎಂ. ಕಾರಿಯಪ್ಪ ಅವರನ್ನು ಅದರ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಯುದ್ಧವು ಕೊನೆಯಾಗುವ ವೇಳೆಗೆ ಕಾರಿಯಪ್ಪನವರನ್ನು ವೆಸ್ಟರ್ನ್ ಆರ್ಮಿ ಕಮಾಂಡಿಗೆ ಕಳುಹಿಸಿ, ಅವರ ಜಾಗದಲ್ಲಿ ಲೆಫ್ಟಿನೆಂಟ್ ಜನರಲ್ ನಾಗೇಶ್ ಅವರನ್ನು ಕೋರ್ನ ಮುಖ್ಯಸ್ಥರನ್ನಾಗಿ ಮಾಡಲಾಯಿತು. ಇದೀಗ ಹೊಸ ಯೋಜನೆಯ ಪ್ರಕಾರ ಜಮ್ಮು-ಕಾಶ್ಮೀರ ಪಡೆಯನ್ನು ಎರಡು ಭಾಗಗಳನ್ನಾಗಿ ವಿಭಾಗಿಸಲಾಯಿತು – ಜನರಲ್ ಕೆ.ಎಸ್. ತಿಮ್ಮಯ್ಯನವರ ನೇತೃತ್ವದಲ್ಲಿ ಶ್ರೀನಗರ ಡಿವಿಶನ್ ಮತ್ತು ಮೇಜರ್-ಜನರಲ್ ಆತ್ಮಾಸಿಂಗ್ ಅವರ ನೇತೃತ್ವದಲ್ಲಿ ಜಮ್ಮು ಡಿವಿಶನ್. ಏರ್ ಕಮಾಂಡರ್ ಮೆಹರ್ಸಿಂಗ್ ಅವರು ಜಮ್ಮುವನ್ನು ಕೇಂದ್ರವಾಗಿಟ್ಟುಕೊಂಡು ಭಾರತೀಯ ವಿಮಾನ ದಳದ ೧ ಆಪರೇಶನಲ್ ಗ್ರೂಪಿನ ಮುಖ್ಯಸ್ಥರಾಗಿ ಮುಂದುವರಿದರು. ವಿಂಗ್ ಕಮಾಂಡರ್ ಮೂಲಗಾಂವಕರ್ ಅವರು ಶ್ರೀನಗರವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಮುಖ್ಯ ಆಪರೇಶನಲ್ ವಿಂಗ್ ಅನ್ನು ಗಮನಿಸಿದರು. ದಾಳಿಕೋರರನ್ನು ಸಂಪೂರ್ಣವಾಗಿ ಉಚ್ಚಾಟಿಸಲು ದಿಟ್ಟ ಹೆಜ್ಜೆಗಳನ್ನಿಡಲು ಜನರಲ್ ತಿಮ್ಮಯ್ಯನವರು ನಿರ್ಧರಿಸಿದರು. ಲೇಹ್ ರಕ್ಷಣೆಗಾಗಿ ಅವರು ಈಗಾಗಲೇ ಸಾಕಷ್ಟು ಪಡೆಗಳನ್ನು ಕಳುಹಿಸಿದ್ದರು. ಶ್ರೀನಗರದಲ್ಲಿ ಅವರ ಬಳಿ ಇದ್ದದ್ದು ಒಂದು ಡಿವಿಶನ್ ಸೈನಿಕರು ಮಾತ್ರ ಮತ್ತು ಅಗತ್ಯ ಬಿದ್ದರೆ ಅವರ ಸಹಾಯಕ್ಕಾಗಿ ಯಾವ ರಿಸರ್ವ್ ಪಡೆಗಳೂ ಇರಲಿಲ್ಲ. ದಾಳಿಕೋರರನ್ನು ಝೀಲಂ ನದಿಯ ಆಚೆಯವರೆಗೂ ಓಡಿಸಬೇಕು ಮತ್ತು ಅವರು ಆಕ್ರಮಿಸಿಕೊಂಡಿದ್ದ ಎಲ್ಲ ಪ್ರದೇಶಗಳನ್ನೂ ವಾಪಸ್ ಪಡೆಯಬೇಕು ಎನ್ನುವ ಗುರಿಯನ್ನು ಅವರು ಇಟ್ಟುಕೊಂಡರು. ಅವರಿದ್ದ ಪರಿಸ್ಥಿತಿಯಲ್ಲಿ ಇದನ್ನು ಮಹತ್ತ್ವಾಕಾಂಕ್ಷೆ ಎಂದೇ ಹೇಳಬೇಕಾಗುತ್ತದೆ.
ಈ ಯುದ್ಧದ ಪಾತ್ರಧಾರಿಗಳು ಕೇವಲ ಭಾರತ ಮತ್ತು ಪಾಕಿಸ್ತಾನ ಎಂದು ತಿಳಿದರೆ ತಪ್ಪಾದೀತು. ಇವರಿಬ್ಬರ ನಡುವೆ ನಿಂತು ತಮಗಿಷ್ಟ ಬಂದ ರೀತಿಯಲ್ಲಿ ಯುದ್ಧವನ್ನು ತಿರುಗಿಸಲು ಪ್ರಯತ್ನಿಸುತ್ತಿದ್ದವರು ಬ್ರಿಟಿಷರು. ಅವರು ಉದ್ದಕ್ಕೂ ತಮ್ಮ ಕುತಂತ್ರದ ದಾಳಗಳನ್ನು ಎಸೆಯುತ್ತಿದ್ದರು! ಭಾರತೀಯ ಪಡೆಗಳನ್ನು ಝೀಲಂ ನದಿ ದಾಟಲು ಬಿಡಬಾರದು ಎಂದು ಬ್ರಿಟಿಷ್ ಅಧಿಕಾರಿಗಳೂ ನಿರ್ಧರಿಸಿದ್ದರು. ಲಾರ್ಡ್ ಮೌಂಟ್ಬ್ಯಾಟನ್ ಮತ್ತು ಅವರ ಅಧಿಕಾರಿಗಳ ತಂಡವು ಊರಿ-ಪೂಂಚ್-ರಾಜೌರಿ-ನೌಶೇರಾ ದಾರಿಯನ್ನು ಅಘೋಷಿತ ಗಡಿರೇಖೆ ಎಂದೇ ಪರಿಗಣಿಸಿತ್ತು. ಭಾರತೀಯ ಪಡೆಗಳು ಈ ರೇಖೆಯನ್ನೇನಾದರೂ ದಾಟಿಬಿಟ್ಟರೆ ಎಲ್ಲ ವಲಯಗಳಲ್ಲಿ ಮೇಲುಗೈ ಪಡೆದುಬಿಡುತ್ತಾರೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು.
ನೇರವಾಗಿ ಯುದ್ಧಕ್ಕೆ ಧುಮುಕಿದ ಪಾಕಿಸ್ತಾನ
ಇಲ್ಲಿಯವರೆಗೂ ಗುಡ್ಡಗಾಡು ಜನರನ್ನು ದಾಳಿಕೋರರನ್ನಾಗಿ ಮುಂದೆ ಕಳುಹಿಸಿ ಅವರ ಬೆನ್ನ ಹಿಂದೆ ಅಡಗಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ ಪಾಕಿಸ್ತಾನವು, ೧೯೪೮ರ ಅಕ್ಟೋಬರ್ ನಂತರ ನೇರವಾಗಿ ತಾನೇ ಯುದ್ಧಕ್ಕೆ ಧುಮುಕಿತು. ಅದರ ಸೈನ್ಯವು ಶ್ರೀನಗರ, ರಾಜೌರಿ ಮತ್ತು ಪೂಂಚ್ ವಲಯಗಳಲ್ಲಿ ದಾಳಿಕಾರರೊಂದಿಗೆ ಸೇರಿಕೊಂಡು ಆಕ್ರಮಣ ಮುಂದುವರಿಸಿತು. ಭಾರತೀಯ ಸೈನ್ಯದ ೭೭ ಪ್ಯಾರಾ ಬ್ರಿಗೇಡ್ ಪಡೆಯು ಜ಼ೋಜಿಲಾ ಪಾಸ್ ಗೆದ್ದುಕೊಳ್ಳಲು ಸತತ ಪ್ರಯತ್ನ ನಡೆಸಿತ್ತು. ಇದೀಗ ಪಾಕಿಸ್ತಾನವೂ ಯುದ್ಧದಲ್ಲಿ ನೇರವಾಗಿ ಸೇರಿದ್ದರಿಂದ, ಜ಼ೋಜಿಲಾ ಗೆಲ್ಲುವುದು ಮತ್ತಷ್ಟು ಕಠಿಣವಾಯಿತು. ಜನರಲ್ ತಿಮ್ಮಯ್ಯನವರು ಜ಼ೋಜಿಲಾ ಪಾಸ್ ಗೆಲ್ಲಲು ಹೊಸ ಹಂಚಿಕೆ ಹೂಡಿದರು.
ಜಮ್ಮುವಿನಲ್ಲಿ ನೆಲೆ ಮಾಡಿಕೊಂಡಿದ್ದ ೭ನೇ ಲೈಟ್ ಕ್ಯಾವಲ್ರಿ ರೆಜಿಮೆಂಟಿನ ಹತ್ತಿರ ಅಮೆರಿಕ ನಿರ್ಮಿತ ಸ್ಟುವರ್ಟ್ ಯುದ್ಧ ಟ್ಯಾಂಕುಗಳಿದ್ದವು. ಇವನ್ನು ಜಮ್ಮುವಿನಿಂದ ಶ್ರೀನಗರಕ್ಕೆ ಸಾಗಿಸಿ, ಮುಂದೆ ಬಲ್ತಾಲ್ಗೆ ಮತ್ತು ಅಲ್ಲಿಂದ ಜ಼ೋಜಿಲಾ ಪಾಸ್ಗೆ ಸಾಗಿಸುವುದು ಅವರ ಯೋಜನೆ. ಈ ಯುದ್ಧ ಟ್ಯಾಂಕುಗಳು ಗಟ್ಟಿಮುಟ್ಟಾಗಿದ್ದವು. ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಅವನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗಿತ್ತು ಮತ್ತು ಬರ್ಮಾ ಯುದ್ಧದಲ್ಲಿ ತೊಡಗಿದ್ದ ಭಾರತೀಯ ಪಡೆಗಳು ಅವನ್ನು ಉಪಯೋಗಿಸಿದ್ದವು. ಅವುಗಳಿಗೆ ಇತರ ಟ್ಯಾಂಕುಗಳಂತೆ ರಕ್ಷಾಕವಚವಿಲ್ಲದಿದ್ದರೂ, ಅವು ಅನೇಕ ಮೆಷಿನ್ ಗನ್ನುಗಳ ಜೊತೆಗೆ ೩೭ ಮಿಲಿಮೀಟರ್ ಬಂದೂಕನ್ನೂ ಹೊಂದಿದ್ದವು. ಶತ್ರುವಿಗೆ ಅನುಮಾನ ಬಾರದಂತೆ ಜಮ್ಮುವಿನಿಂದ ಇವನ್ನು ಶ್ರೀನಗರಕ್ಕೆ ಸಾಗಿಸಬೇಕಾಗಿತ್ತು. ದಾರಿಯಲ್ಲಿ ಅನೇಕ ದುರ್ಬಲ ಮರದ ಸೇತುವೆಗಳ ಮೇಲೆ ಅವು ಸಾಗಬೇಕಾಗಿತ್ತು. ಶ್ರೀನಗರದಿಂದ ಬಲ್ತಾಲ್ಗೆ ೮೦ ಕಿ.ಮೀ ದೂರ. ಶತ್ರುಗಳಿಗೆ ಅನುಮಾನ ಬಾರದಂತೆ ಅವನ್ನು ಸಾಗಿಸುವುದು ಸುಲಭವಿರಲಿಲ್ಲ. ಟ್ಯಾಂಕುಗಳು ರಸ್ತೆಯಲ್ಲಿ ಸಾಗಿದಾಗ ದೊಡ್ಡ ಸದ್ದು ಮಾಡುತ್ತವೆ ಮತ್ತು ಅವು ಸುಲಭವಾಗಿ ಎಲ್ಲರ ದೃಷ್ಟಿಗೂ ಗೋಚರವಾಗುತ್ತವೆ.
ಅದಕ್ಕಾಗಿ ಟ್ಯಾಂಕುಗಳನ್ನು ರಹಸ್ಯವಾಗಿ ಗುರಿಮುಟ್ಟಿಸಲು ಹೊಸ ತಂತ್ರವೊಂದನ್ನು ಯೋಜಿಸಲಾಯಿತು. ಶ್ರೀನಗರದಲ್ಲಿ ಟ್ಯಾಂಕುಗಳ ಎಲ್ಲ ಭಾಗಗಳನ್ನು ಪ್ರತ್ಯೇಕಿಸಿಬಿಟ್ಟರು. ಟ್ಯಾಂಕಿನ ಮುಖ್ಯಭಾಗವನ್ನು ನೀರಿನ ಟ್ಯಾಂಕರಿನಂತೆ ಮಾರ್ಪಡಿಸಿ ಸಾಗಿಸಲಾಯಿತು. ಅವು ಗಮ್ಯ ಸ್ಥಾನವನ್ನು ತಲಪಿದ ನಂತರ ಇಂಜಿನಿಯರ್ಗಳು ಎಲ್ಲ ಬಿಡಿ ಭಾಗಗಳನ್ನು ಮರುಜೋಡಿಸಿ ಯುದ್ಧ ಟ್ಯಾಂಕರ್ ಸಿದ್ಧಗೊಳಿಸಿದರು! ಮದ್ರಾಸ್ ಇಂಜಿನಿಯರಿಂಗ್ ಗ್ರೂಪಿನ ಮೇಜರ್ ತಂಗರಾಜು ಅವರ ನೇತೃತ್ವದಲ್ಲಿ ತಂಬಿ ಇಂಜಿನಿಯರ್ಗಳು ಈ ಕಾರ್ಯದಲ್ಲಿ ಮಗ್ನರಾದರು. ಅವರು ಜಮ್ಮುವಿನಿಂದ ಶ್ರೀನಗರಕ್ಕೆ ದುರ್ಬಲ ಮರದ ಸೇತುವೆಯ ಮೇಲೆ ಸಾಗಿಸಲು ಸಹಾಯ ಮಾಡಿದ್ದಲ್ಲದೆ, ಬಲ್ತಾಲ್ನಿಂದ ಜ಼ೋಜಿಲಾ ಪಾಸ್ಗೆ ಟ್ಯಾಂಕುಗಳು ಚಲಿಸಲು ಅನುಕೂಲವಾದ ರಸ್ತೆಗಳನ್ನೂ ನಿರ್ಮಿಸಿಕೊಟ್ಟರು. ಅಂತಿಮ ಹಂತದಲ್ಲಿ ಶತ್ರುಗಳ ಗುಂಡಿನ ದಾಳಿಯನ್ನೂ ಎದುರಿಸಿ ಕೆಲಸ ಮಾಡಬೇಕಾಯಿತು.
ಭಾರತೀಯ ಪಡೆಗಳು ಟ್ಯಾಂಕರುಗಳನ್ನು ಮುಂದಿಟ್ಟುಕೊಂಡು ಮಾಡಿದ ಆಕ್ರಮಣ ಪಾಕಿಸ್ತಾನಿ ಪಡೆಗಳಿಗೆ ಅನಿರೀಕ್ಷಿತವಾಗಿತ್ತು. ಜ಼ೋಜಿಲಾ ಪಾಸ್ಗೆ ಭಾರತೀಯ ಪಡೆಗಳು ಯುದ್ಧ ಟ್ಯಾಂಕುಗಳನ್ನು ತರಬಹುದೆಂದು ಪಾಕಿಸ್ತಾನಿ ಆಕ್ರಮಣಕಾರರು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ. ೧೯೪೮ ನವೆಂಬರ್ ೧ರಿಂದ ಎರಡು ವಾರಗಳ ಕಾಲ ಟ್ಯಾಂಕುಗಳು ಮತ್ತು ಯುದ್ಧವಿಮಾನಗಳು ಏಕಕಾಲದಲ್ಲಿ ಶತ್ರುವಿನ ಮೇಲೆ ಬೆಂಕಿಯ ಮಳೆಗರೆದವು. ಜ಼ೋಜಿಲಾ ಪಾಸ್ ಶತ್ರುಗಳಿಂದ ಮುಕ್ತಿ ಪಡೆಯಿತು. ಮುಂದಿನ ಸರದಿ ಕಾರ್ಗಿಲ್ ಮತ್ತು ದ್ರಾಸ್ – ಇಲ್ಲಿ ಭಾರತೀಯ ಪಡೆಗಳು ಶತ್ರುಗಳೊಂದಿಗೆ ದ್ವಂದ್ವ ಯುದ್ಧವನ್ನೇ ಮಾಡಬೇಕಾಯಿತು. ಜೊತೆಗೆ ಆಗಸದಿಂದ ರಾಕೆಟ್ ಮತ್ತು ಬಾಂಬುಗಳನ್ನು ಶತ್ರುಗಳ ಮೇಲೆ ಎಸೆಯುತ್ತಿದ್ದ ಯುದ್ಧವಿಮಾನಗಳು. ಭಾರತೀಯ ಸೈನಿಕರ ವೀರಾವೇಶದ ಎದುರು ಶತ್ರು ನಿಲ್ಲಲಾಗಲಿಲ್ಲ. ಎರಡೆರಡು ಕಡೆಗಳಿಂದ ಏಕಕಾಲಕ್ಕೆ ಆಕ್ರಮಣ ನಡೆದದ್ದರಿಂದ ಶತ್ರುಗಳು ಮಾನಸಿಕವಾಗಿಯೂ ಕುಗ್ಗಿಹೋದರು. ಅಲ್ಲಿಂದ ಕಾಲ್ಕಿತ್ತ ದಾಳಿಕೋರರು ನವೆಂಬರ್ ಅಂತ್ಯದ ವೇಳೆಗೆ ಸ್ಕರ್ದುವಿಗೆ ಪಲಾಯನ ಮಾಡಿದರು.
ಸೆಪ್ಟೆಂಬರಿನಲ್ಲಿ ಸ್ಕರ್ದುವಿನಲ್ಲಿ ನಡೆದ ಕದನವು ಈ ಯುದ್ಧದ ಒಂದು ಮಹತ್ತ್ವದ ಭಾಗ. ಮೇಜರ್ ಹರಿಚಂದ್ ಅವರು ಎಚ್ಚರಿಕೆಯಿಂದ ಆಯ್ದುಕೊಂಡಿದ್ದ ಗೂರ್ಖಾ ಮತ್ತು ಲಡಾಖಿ ಸೈನಿಕರಿದ್ದ ಪಡೆಗಳು ಸಿಂಧು ಮತ್ತು ಶ್ಯೋಕ್ ಕಣಿವೆಗಳಲ್ಲಿ ನಿರ್ಭೀತಿಯಿಂದ ಕಾರ್ಯಾಚರಣೆ ನಡೆಸಿದವು. ನೂರಾರು ದಾಳಿಕೋರರನ್ನು ಯಮಪುರಿಗಟ್ಟಿ, ಲೇಹ್ ಆಕ್ರಮಣಕ್ಕಾಗಿ ಅವರು ಒಯ್ಯುತ್ತಿದ್ದ ಹೋವಿಟ್ಜರ್ ಬಂದೂಕನ್ನು ಪುಡಿಗೊಳಿಸಲಾಯಿತು. ದಾಳಿಕೋರರು ದೂರಸಂಪರ್ಕಕ್ಕೆ ಮಾಡಿಕೊಂಡಿದ್ದ ತಂತಿಗಳನ್ನು ನಾಶಗೊಳಿಸಿ, ಅವರ ಸರಬರಾಜಿನ ವ್ಯವಸ್ಥೆಯನ್ನು ತಡೆಗಟ್ಟಲಾಯಿತು. ನವೆಂಬರ್ ಅಂತ್ಯದ ವೇಳೆಗೆ ಶತ್ರುಪಡೆಗಳು ಸಿಂಧುವಿನ ದಾರಿಯಲ್ಲಿ ಹಿಮ್ಮೆಟ್ಟುವ ವೇಳೆಗೆ ಖಾಯಿಲೆ ಅಂಟಿಕೊಂಡಂತಾಗಿ ಸೋತುಹೋಗಿದ್ದವು.
ಮತ್ತಷ್ಟು ದಕ್ಷಿಣದಲ್ಲಿ, ಭಯಂಕರ ಯುದ್ಧಗಳು ನಡೆದದ್ದು ನೌಶೇರಾ ಮತ್ತು ಪೂಂಚ್ ವಲಯಗಳಲ್ಲಿ. ಮೇಜರ್ ಜನರಲ್ ಆತ್ಮಾಸಿಂಗ್ ಅವರ ನಾಯಕತ್ವದಲ್ಲಿ ಜಮ್ಮು ಡಿವಿಶನ್ನ ೧೯ ಬ್ರಿಗೇಡ್ ಮತ್ತು ೫ ಬ್ರಿಗೇಡ್ ಪಡೆಗಳು ದಕ್ಷಿಣದಿಂದ ಪೂಂಚ್ ತಲಪಲು ತಮ್ಮ ಪ್ರಯತ್ನವನ್ನು ಬಿಡುವಿಲ್ಲದೆ ಮುಂದುವರಿಸಿದ್ದವು. ಅಲ್ಲಿ ಮುತ್ತಿಗೆ ಹಾಕಿದ್ದುದು ಆಜ಼ಾದ್ಕಾಶ್ಮೀರದಿಂದ ಬಂದಿದ್ದ ದಾಳಿಕೋರರು. ಅವರ ಬಳಿ ಇದ್ದ ಎರಡು ಬ್ರಿಗೇಡ್ ಬೆಂಬಲಕ್ಕೆ ಪಾಕಿಸ್ತಾನಿ ಸೇನೆಯೂ ಒಂದು ಬ್ರಿಗೇಡನ್ನು ನಿಲ್ಲಿಸಿತ್ತು. ೧೯೪೮ರ ಅಕ್ಟೋಬರ್ನಲ್ಲಿ ಮತ್ತೊಂದು ಬ್ರಿಗೇಡ್ ಸೈನಿಕರು ಬರುವವರೆಗೂ ಭಾರತೀಯ ಪಡೆಗಳ ಸಂಖ್ಯೆ ಶತ್ರುಗಳ ಸಂಖ್ಯೆಗಿಂತ ಕಡಮೆ ಇದ್ದಿತು. ಫಿರಂಗಿಗಳು ಮತ್ತು ಇತರ ಯುದ್ಧ ಸಾಮಗ್ರಿಗಳ ವಿಷಯದಲ್ಲಿ ಎರಡು ಪಡೆಗಳೂ ಸಮನಾಗಿದ್ದವು.
ಭಾರತೀಯರ ಮೇಲುಗೈ ಇದ್ದದ್ದು ನಾಯಕತ್ವದ ಗುಣಮಟ್ಟದಲ್ಲಿ ಮತ್ತು ಸೈನಿಕರ ಎದೆಗಾರಿಕೆಯಲ್ಲಿ. ಪೂಂಚ್ ಸುತ್ತಲಿನ ಬೆಟ್ಟಗುಡ್ಡಗಳಲ್ಲಿ ಶತ್ರುಗಳು ಆಳವಾದ ಮತ್ತು ಸುರಕ್ಷಿತವಾದ ಕಂದಕಗಳಲ್ಲಿ ನೆಲೆಯೂರಿದ್ದರು. ಅವರನ್ನು ಅಲ್ಲಿಂದ ಕದಲಿಸುವುದು ಸುಲಭಸಾಧ್ಯವಿರಲಿಲ್ಲ. ಭಾರತೀಯ ಸೈನಿಕರು ಕೈ ಕೈ ಮಿಲಾಯಿಸುವವರೆಗೂ ಹೋಗಿ ದ್ವಂದ್ವ ಕಾಳಗವನ್ನೇ ಮಾಡಬೇಕಾಯಿತು. ನವೆಂಬರ್ ೨೧ರಂದು ೫ ಬ್ರಿಗೇಡ್ ಮತ್ತು ಪೂಂಚ್ ಬ್ರಿಗೇಡ್ಗಳು ಮಾಡಿದ ತೋಪಾ ರಿಡ್ಜ್ ಕದನವೇ ಪೂಂಚ್ನಲ್ಲಿ ನಡೆದ ಕಟ್ಟಕಡೆಯ ಹೋರಾಟ. ಮಹತ್ತ್ವದ ಶಿಖರಗಳೆಲ್ಲವನ್ನೂ ಅಂದು ಶತ್ರುಗಳಿಂದ ಮುಕ್ತಗೊಳಿಸಲಾಯಿತು. ಇಂದಿಗೂ ನವೆಂಬರ್ ೨೧ನ್ನು ಪೂಂಚ್ ಬ್ರಿಗೇಡ್ನ ಸೈನಿಕರು ವಿಜಯೋತ್ಸವದ ದಿನವನ್ನಾಗಿ ಆಚರಿಸುತ್ತಾರೆ. ಇದರಲ್ಲಿ ಆ ನಗರದ ಸಾರ್ವಜನಿಕರೂ ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
ಕದನವಿರಾಮ
೧೯೪೮ರ ಡಿಸೆಂಬರ್ ವೇಳೆಗೆ ಮತ್ತೊಮ್ಮೆ ಎಲ್ಲ ಬೆಟ್ಟಗುಡ್ಡಗಳೂ ಹಿಮಾವೃತವಾದವು, ನದಿಗಳು ಹೆಪ್ಪುಗಟ್ಟಿದವು. ಭಾರತೀಯ ಪಡೆಗಳು ಶತ್ರುಗಳನ್ನು ಪೂರ್ಣವಾಗಿ ಪರಾಭವಗೊಳಿಸಿ ಪಾಕಿಸ್ತಾನಕ್ಕೆ ಒದ್ದೋಡಿಸಲು ತುದಿಗಾಲಲ್ಲಿದ್ದವು. ಆದರೆ, ೧೯೪೯ರ ವಸಂತಾಗಮನದವರೆಗೂ (ಮಾರ್ಚ್-ಏಪ್ರಿಲ್ ಸಮಯ) ಯುದ್ಧಕ್ಕೆ ವಿರಾಮ ನೀಡುವಂತೆ ಸರ್ಕಾರವು ಆಜ್ಞಾಪಿಸಿತು! ಮಾರ್ಚ್ ವೇಳೆಗೆ ನಮ್ಮ ಸೈನ್ಯವನ್ನು ಸರಿಯಾಗಿ ಸಿದ್ಧತೆಗೊಳಿಸಿದ ನಂತರ ಮೀರ್ಪುರ, ಕೋಟ್ಲಿ, ಮುಜಫ಼ರಾಬಾದ್ ಮತ್ತು ಜಮ್ಮು-ಕಾಶ್ಮೀರ ರಾಜ್ಯದ ಉತ್ತರಭಾಗಗಳನ್ನು ಮುಕ್ತಗೊಳಿಸೋಣ ಎನ್ನುವ ಕಾರಣವನ್ನು ಮುಂದಿಟ್ಟು ಸೈನ್ಯದ ಅಧಿಕಾರಿಗಳನ್ನು ಮುಂದುವರಿಯದಂತೆ ಮನವೊಲಿಸಲಾಯಿತು. ಭಾರತೀಯ ವಿಮಾನ ಪಡೆಯ ಬೆಂಬಲದೊಂದಿಗೆ ಭಾರತೀಯ ಸೈನ್ಯವೇನಾದರೂ ಶತ್ರುವನ್ನು ಹೊಡೆದೋಡಿಸುವ ಕೆಲಸವನ್ನು ಮುಂದುವರಿಸಿದ್ದಿದ್ದಲ್ಲಿ, ಜಮ್ಮು-ಕಾಶ್ಮೀರದ ಎಲ್ಲ ಪ್ರದೇಶಗಳೂ ಶತ್ರುಗಳಿಂದ ಪೂರ್ಣವಾಗಿ ಮುಕ್ತವಾಗುತ್ತಿದ್ದವು ಮತ್ತು ಭಾರತದೊಡನೆ ಸಂಪೂರ್ಣವಾಗಿ ವಿಲೀನಗೊಳ್ಳುತ್ತಿದ್ದವು. ಆದರೆ, ಮೌಂಟ್ಬ್ಯಾಟನ್ ಅವರು ನೆಹರು ಮತ್ತು ಪಾಕಿಸ್ತಾನದ ನಾಯಕರ ಮೇಲೆ ಒತ್ತಡ ತಂದು, ಸಂಯುಕ್ತ ರಾಷ್ಟ್ರಸಂಘದ ಮಧ್ಯಸ್ಥಿಕೆಯಲ್ಲಿ, ೧೯೪೮ರ ಡಿಸೆಂಬರ್ ೩೧ರಂದು ಕದನವಿರಾಮವನ್ನು ಘೋಷಿಸಿಬಿಟ್ಟರು! ಇದರ ಪರಿಣಾಮವಾಗಿ ಜಮ್ಮು-ಕಾಶ್ಮೀರ ರಾಜ್ಯದ ಉತ್ತರಭಾಗಗಳು, ಕಾಶ್ಮೀರ ಕಣಿವೆ ಮತ್ತು ಜಮ್ಮು ಪ್ರಾಂತವು ಪಾಕಿಸ್ತಾನದ ಕೈಯಲ್ಲಿ ಉಳಿಯುವಂತಾಯಿತು!
ಡಿಸೆಂಬರ್ನಲ್ಲಿ ಕದನವಿರಾಮದ ಘೋಷಣೆಯಾಗುವ ಸುಳಿವು ಪಾಕಿಸ್ತಾನಕ್ಕೆ ಮೊದಲೇ ಸಿಕ್ಕಿತ್ತು. ಹೀಗಾಗಿ, ಪಾಕಿಸ್ತಾನವು ಮತ್ತೊಮ್ಮೆ ಮೀರ್ಪುರ, ಕೋಟ್ ಮತ್ತು ಮುಜಫ಼್ಫರಾಬಾದ್ ನಗರಗಳಲ್ಲಿ ಗುಡ್ಡಗಾಡು ಜನರನ್ನು ಮತ್ತು ತಮ್ಮ ಸೈನ್ಯವನ್ನು ದೊಡ್ಡ ಸಂಖ್ಯೆಯಲ್ಲಿ ಸೇರಿಸಿ, ಪೂಂಚ್-ನೌಶೇರಾ ಮತ್ತು ಕಾರ್ಗಿಲ್-ದ್ರಾಸ್ ವಲಯಗಳಲ್ಲಿ ನುಗ್ಗಿಸುವ ಕಟ್ಟಕಡೆಯ ಪ್ರಯತ್ನ ನಡೆಸಿತು. ಪಾಕಿಸ್ತಾನದ ಧೂರ್ತ ಯೋಜನೆಯ ಅರಿವಿದ್ದ ಭಾರತೀಯ ಸೈನ್ಯಾಧಿಕಾರಿಗಳು ಪಾಕಿಸ್ತಾನಿ ಪಡೆಗಳನ್ನು ನಿರ್ಣಾಯಕವಾಗಿ ಸೋಲಿಸುವ ಪಣ ತೊಟ್ಟಿದ್ದರು. ಈವರೆಗೆ ಯುದ್ಧದಲ್ಲಿ ಹುತಾತ್ಮರಾಗಿದ್ದ ಎಲ್ಲ ಅಧಿಕಾರಿಗಳಿಗೆ ಮತ್ತು ಸೈನಿಕರಿಗೆ ಈ ಮೂಲಕ ಶ್ರದ್ಧಾಂಜಲಿ ಸಲ್ಲಿಸುವುದು ಅವರ ಆಸೆಯಾಗಿತ್ತು. ಆದರೆ, ಭಾರತೀಯ ರಾಜಕೀಯ ನೇತಾಗಳು ೧೯೪೮ರ ಪ್ರಾರಂಭದಲ್ಲಿಯೇ ಸಂಯುಕ್ತ ರಾಷ್ಟ್ರಸಂಘದ ಬಾಗಿಲು ತಟ್ಟಿ ಮಧ್ಯಸ್ಥಿಕೆ ವಹಿಸುವಂತೆ ಕೋರಿಕೊಂಡಿದ್ದರು. ಹೀಗಾಗಿ, ಸಂಯುಕ್ತ ರಾಷ್ಟ್ರಸಂಘವು ೧೯೪೮ರ ಡಿಸೆಂಬರ್ ೩೧ರಂದು ಮಧ್ಯಸ್ಥಿಕೆ ವಹಿಸಿಕೊಳ್ಳಲು ಮುಂದಾದಾಗ, ಭಾರತೀಯ ನಾಯಕರಿಗೆ ಅದನ್ನು ಒಪ್ಪಿಕೊಳ್ಳದೆ ಬೇರೆ ದಾರಿಯಿರಲಿಲ್ಲ. ಕದನವಿರಾಮದ ಜೊತೆಗೆ ಜಮ್ಮು-ಕಾಶ್ಮೀರದಲ್ಲಿ ಜನಮತಗಣನೆ ನಡೆಸಲೂ ಭಾರತೀಯ ನಾಯಕರು ಒಪ್ಪಿಕೊಂಡಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಮುಂದೆ ನಡೆದ ಸಂಧಾನ ಸಭೆಯಲ್ಲಿ ಭಾರತೀಯ ನಾಯಕರು, ಭಾರತೀಯ ಸೈನ್ಯ ಗೆದ್ದುಕೊಂಡಿದ್ದ ಹಾಜಿ ಪೀರ್ ಪಾಸ್, ಗಿಲ್ಗಿಟ್ ಮತ್ತು ಸ್ಕರ್ದು ಪ್ರದೇಶಗಳನ್ನೂ ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಒಪ್ಪಿಕೊಂಡರು.
ಭಾರತೀಯ ವೀರ ಸೈನಿಕರು, ಯುದ್ಧಭೂಮಿಯಲ್ಲಿ ರಕ್ತವನ್ನು ಚೆಲ್ಲಿ, ಪ್ರಾಣವನ್ನು ನೀಗಿ ಗೆಲವನ್ನು ಸಾಧಿಸಿದ್ದರೂ, ಭಾರತದ ರಾಜಕೀಯ ನಾಯಕರು ಸಂಧಾನದ ಸಮಯದಲ್ಲಿ ಎಲ್ಲವನ್ನೂ ಕಳೆದುಕೊಂಡದ್ದು ವಿಪರ್ಯಾಸವೇ ಸರಿ. ಯುದ್ಧದುದ್ದಕ್ಕೂ ಭಾರತ ಸರ್ಕಾರವು ಸರಿಯಾದ ಸಮಯಕ್ಕೆ ನಿರ್ಣಾಯಕ ನಿರ್ಧಾರಗಳನ್ನು ಕೈಗೊಂಡಿತ್ತು, ಸರಿಯಾದ ವೇಳೆಗೆ ಕಾಶ್ಮೀರಕ್ಕೆ ಸೈನ್ಯದ ಸಹಾಯವನ್ನು ಕಳುಹಿಸಿತ್ತು, ಭಾರತೀಯ ವಿಮಾನ ಪಡೆಯನ್ನು ಸೇನೆಯ ಬೆಂಬಲಕ್ಕೆ ಕಳುಹಿಸಿತ್ತು. ಈ ರೀತಿಯ ನಿರ್ಧಾರಗಳನ್ನು ತಕ್ಷಣ ತೆಗೆದುಕೊಳ್ಳದೇ ಹೋಗಿದ್ದಿದ್ದರೆ, ಇಡೀ ಜಮ್ಮು-ಕಾಶ್ಮೀರ ರಾಜ್ಯವನ್ನು ಪಾಕಿಸ್ತಾನವು ಎಂದೋ ಗೆದ್ದುಕೊಂಡುಬಿಡುತ್ತಿತ್ತು. ಪಾಕಿಸ್ತಾನದ ಲೆಕ್ಕಾಚಾರವೂ ಇದೇ ಆಗಿತ್ತು. ಭಾರತದ ರಾಜಕೀಯ ನಾಯಕರು ತೆಗೆದುಕೊಂಡ ನಿರ್ಧಾರಗಳು ಮತ್ತು ಕ್ರಮಗಳಿಂದ ಪಾಕಿಸ್ತಾನದ ಲೆಕ್ಕಾಚಾರ ತಳಕೆಳಗಾಗಿ, ಪಾಕಿಸ್ತಾನವು ಯುದ್ಧದಲ್ಲಿ ಸೋಲುವಂತಾಗಿತ್ತು. ಆದರೆ, ರಣರಂಗದಲ್ಲಿ ಮೇಲುಗೈ ಸಾಧಿಸಿದ ಭಾರತವು, ಕಟ್ಟಕಡೆಯಲ್ಲಿ ನಡೆದ ಸಂಧಾನದಲ್ಲಿ ತನ್ನ ವಾದವನ್ನು ಸರಿಯಾಗಿ ಮಂಡಿಸದೇ, ಗೆದ್ದ ಪ್ರದೇಶಗಳನ್ನು ಕಳೆದುಕೊಂಡದ್ದು ನಮ್ಮ ದುರದೃಷ್ಟವೇ ಸರಿ.
ನಿರ್ಣಾಯಕ ಸಮಯದಲ್ಲಿ ಭಾರತೀಯ ನೇತಾಗಳು ಯುದ್ಧವನ್ನು ನಿಲ್ಲಿಸಿ ಕದನವಿರಾಮ ಘೋಷಿಸಿ, ವಿಶ್ವಸಂಸ್ಥೆಗೆ ದೂರು ತೆಗೆದುಕೊಂಡು ಹೋಗಿದ್ದರ ಪರಿಣಾಮವಾಗಿ ಕಾಶ್ಮೀರದ ಸಮಸ್ಯೆ ಭಾರತಕ್ಕೆ ಶಾಶ್ವತ ತಲೆನೋವಾಗಿ ಉಳಿಯಿತು. ಕೇವಲ ಇಲ್ಲಿಗೇ ಅವರು ಮಾಡಿದ್ದ ಪ್ರಮಾದ ನಿಲ್ಲಲಿಲ್ಲ. ಕಾಶ್ಮೀರವನ್ನು ಭಾರತಕ್ಕೆ ಪೂರ್ಣವಾಗಿ ವಿಲೀನಗೊಳಿಸಲೇ ಇಲ್ಲ; ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ೩೭೦ನೇ ವಿಧಿಯನ್ನು ಜಾರಿಗೊಳಿಸಿದರು! ಇದರಿಂದ ಜಮ್ಮು-ಕಾಶ್ಮೀರವು ಭಾರತದೊಳಗೊಂದು ಪುಟ್ಟ ಆದರೆ ಪ್ರತ್ಯೇಕ ರಾಷ್ಟ್ರದ ಸ್ಥಾನಮಾನವನ್ನು ಗಳಿಸಿತು. ಜಮ್ಮು-ಕಾಶ್ಮೀರಕ್ಕೇ ಪ್ರತ್ಯೇಕ ರಾಷ್ಟ್ರಧ್ವಜ, ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ರಾಷ್ಟ್ರಗೀತೆಗಳಿದ್ದವು. ಇದರ ವಿರುದ್ಧವಾಗಿ ತೀವ್ರವಾಗಿ ಪ್ರತಿಭಟಿಸಿದವರೆಂದರೆ ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರು. ಅವರನ್ನು ಶೇಖ್ ಅಬ್ದುಲ್ಲಾ ನೇತೃತ್ವದ ಜಮ್ಮು-ಕಾಶ್ಮೀರ ಸರ್ಕಾರ ಬಂಧಿಸಿ ಸೆರೆಮನೆಗೆ ದೂಡಿತು. ಸೆರೆಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಅವರ ಅಂತ್ಯವಾಯಿತು.
ಡಾ|| ಶ್ಯಾಮಾಪ್ರಸಾದ ಮುಖರ್ಜಿಯವರ ಬಲಿದಾನದ ಪರಿಣಾಮವಾಗಿ ಸರ್ಕಾರವು ಸಂವಿಧಾನದ ೩೭೦ನೇ ವಿಧಿಯನ್ನು ಮಾರ್ಪಡಿಸಿ ಪ್ರತ್ಯೇಕ ಜಮ್ಮು-ಕಾಶ್ಮೀರಕ್ಕಿದ್ದ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ರಾಷ್ಟ್ರಧ್ವಜ, ಪ್ರತ್ಯೇಕ ರಾಷ್ಟ್ರಗೀತೆಗಳನ್ನು ತೆಗೆದುಹಾಕಿತು. ಆದರೂ ಅದಕ್ಕಿದ್ದ ಉಳಿದೆಲ್ಲ ವಿಶೇಷ ಸ್ಥಾನಮಾನಗಳೂ ಮುಂದುವರಿದವು, ಪ್ರತ್ಯೇಕತೆಯ ಮನೋಭಾವನೆ ಹೆಚ್ಚುತ್ತಲೇ ಹೋಯಿತು, ಉಗ್ರಗಾಮಿಗಳ ಗೂಡಾಯಿತು. ಅನೇಕ ದಶಕಗಳ ಕಾಲ ಜಮ್ಮು-ಕಾಶ್ಮೀರದಲ್ಲಿ ಉಗ್ರಗಾಮಿಗಳ ಅಟ್ಟಹಾಸ ನಡೆಯಿತು, ಅವರ ತಾಳಕ್ಕೆ ಆಳುವವರು ಕುಣಿಯುವಂತಾಯಿತು, ಹಿಂದುಗಳ ಮಾರಣಹೋಮವೇ ನಡೆಯಿತು, ಲಕ್ಷಾಂತರ ಹಿಂದೂ ಕುಟುಂಬಗಳು ಜಮ್ಮು-ಕಾಶ್ಮೀರವನ್ನು ಬಿಟ್ಟು ಭಾರತದ ವಿವಿಧ ಸ್ಥಳಗಳಿಗೆ ವಲಸೆಹೋಗುವ ಪರಿಸ್ಥಿತಿ ನಿರ್ಮಾಣವಾಯಿತು, ಸಾವಿರಾರು ಮಠ-ಮಂದಿರಗಳು ವಿಧ್ವಂಸಗೊಂಡವು, ಸೈನ್ಯವಿಲ್ಲದೇ ಜಮ್ಮು-ಕಾಶ್ಮೀರವು ಭಾರತದೊಡನೆ ಒಂದು ದಿನವೂ ನಿಲ್ಲಲಾರದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಭಾರತದಲ್ಲಿ ಯಾರಾದರೂ ತಾಯಿಗೆ ಹುಟ್ಟಿದ ಮಗನಿದ್ದರೆ ಶ್ರೀನಗರದ ಲಾಲ್ಚೌಕದಲ್ಲಿ ಭಾರತದ ರಾಷ್ಟ್ರಧ್ವಜ ಹಾರಿಸಲಿ ಎಂದು ಉಗ್ರರು ಭಾರತ ಸರ್ಕಾರಕ್ಕೇ ಸವಾಲೆಸೆದರು. ಇಂತಹ ಸಂದರ್ಭದಲ್ಲೂ ಭಾರತ ಸರ್ಕಾರ ಪ್ರತಿಕ್ರಿಯಿಸಲಿಲ್ಲ, ಯಾವುದೇ ಕ್ರಮಗಳನ್ನೂ ಕೈಗೊಳ್ಳಲಿಲ್ಲ. ಆ ಸವಾಲಿಗೆ ಸಮರ್ಥವಾಗಿ ಉತ್ತರ ನೀಡಿದವರೆಂದರೆ ಭಾರತೀಯ ಜನತಾ ಪಕ್ಷದ ನೇತಾರರಾಗಿದ್ದ ಡಾ|| ಮುರಳೀ ಮನೋಹರ ಜೋಷಿಯವರು. ಅವರು ಕನ್ಯಾಕುಮಾರಿಯಿಂದ ಶ್ರೀನಗರಕ್ಕೆ ಏಕತಾ ಯಾತ್ರೆಯನ್ನು ನಡೆಸಿ ಜನವರಿ ೨೬ರ ಗಣರಾಜ್ಯ ದಿವಸದಂದು ಶ್ರೀನಗರದ ಲಾಲ್ಚೌಕದಲ್ಲಿ ರಾಷ್ಟ್ರಧ್ವಜ ಹಾರಿಸಿ ಉಗ್ರರಿಗೆ ದಿಟ್ಟಿನ ಪ್ರತ್ಯುತ್ತರ ನೀಡಿದ್ದು ಇತ್ತೀಚಿನ ಇತಿಹಾಸ.
ಮುಂದೆ ಇದೇ ಪಕ್ಷದ ಸರ್ಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದು, ೨೦೧೯ರಲ್ಲಿ ಸಂವಿಧಾನದ ೩೭೦ನೇ ವಿಧಿಯನ್ನು ತೆಗೆದುಹಾಕಿತು, ಕಾಶ್ಮೀರದ ಭವಿಷ್ಯ ಭದ್ರವಾಯಿತು.
ಇಷ್ಟೆಲ್ಲಾ ವಿವರಿಸಿದುದರ ಉದ್ದೇಶವೆಂದರೆ, ೧೯೪೮ರಲ್ಲಿ ಭಾರತೀಯ ನೇತಾರರು ತೆಗೆದುಕೊಂಡ ಒಂದು ತಪ್ಪು ನಿರ್ಣಯದಿಂದಾಗಿ, ಜಮ್ಮು-ಕಾಶ್ಮೀರ ಮತ್ತು ಭಾರತ ಅನೇಕ ದಶಕಗಳ ಕಾಲ ಅಪಾರ ತೊಂದರೆ ಅನುಭವಿಸುವಂತಾಯಿತು, ಸಾವಿರಾರು ಜನ ಹಿಂದುಗಳು ಪ್ರಾಣ ಕಳೆದುಕೊಳ್ಳುವಂತಾಯಿತು, ಲಕ್ಷಾಂತರ ಹಿಂದುಗಳು ತಮ್ಮ ದೇಶದಲ್ಲೇ ನಿರಾಶ್ರಿತರಾಗಬೇಕಾಯಿತು; ಮತ್ತು ಮೊದಲ ಯುದ್ಧದಲ್ಲಿ ಸರಿಯಾಗಿ ಪಾಠ ಕಲಿಸದುದರ ದುಷ್ಪರಿಣಾಮವಾಗಿ ಪಾಕಿಸ್ತಾನವು ಮತ್ತೆ ೧೯೬೫ರಲ್ಲಿ ಕಾಲುಕೆರೆದುಕೊಂಡು ಯುದ್ಧಕ್ಕೆ ಬಂದಿತು. ಶತ್ರುವಿಗೆ ಸರಿಯಾಗಿ ಪಾಠ ಕಲಿಸದಿದ್ದರೆ, ಶತ್ರುಶೇಷವನ್ನು ಉಳಿಸಿ ಏನಾಗುತ್ತದೆಂಬುದಕ್ಕೆ ಇದು ಭಾರತ ಕಲಿತ ದುಬಾರಿ ಪಾಠವಾಯಿತು.
ಅಹಿಂಸೆಯ ತತ್ತ್ವ ವೈಯಕ್ತಿಕ ಮಟ್ಟದಲ್ಲಿ ಸಾಧುವೇ ಹೊರತು, ರಾಷ್ಟ್ರೀಯ ನೀತಿಯನ್ನಾಗಿ ಸ್ವೀಕರಿಸಿದರೆ ಅದು ದೇಶದ ಸುರಕ್ಷತೆಗೇ ಕುತ್ತಾಗುತ್ತದೆ ಎಂಬ ಪ್ರಾಥಮಿಕ ವಾಸ್ತವ ೧೯೪೮ರಲ್ಲಿ ನಡೆದ ಭಾರತ-ಪಾಕ್ ಯುದ್ಧದ ಸಮಯದಲ್ಲಿಯೇ ನಾಯಕರಿಗೆ ಮನವರಿಕೆಯಾಗಬೇಕಿತ್ತು. ಆದರೆ, ಅವರಿಗೆ ತಮ್ಮ ತಪ್ಪಿನ ಅರಿವಾಗಿದ್ದು, ೧೯೬೨ರ ಚೀನಾ-ಭಾರತ ಯುದ್ಧದಲ್ಲಿ ಮಣ್ಣುಮುಕ್ಕಿದ ನಂತರವೇ!
ದೇಶಕ್ಕೆ ಸ್ವಾತಂತ್ರ್ಯ ಬಂದ ೨೫ ವರ್ಷಗಳಲ್ಲಿ ನಾಲ್ಕು ಬಾರಿ ಯುದ್ಧಗಳಲ್ಲಿ ಭಾಗವಹಿಸಬೇಕಾದದ್ದು ಸರ್ವಸನ್ನದ್ಧ ರಕ್ಷಣಾಪಡೆಗಳ ಅಗತ್ಯತೆಯನ್ನು ಸಾರಿ ಹೇಳುತ್ತದೆ. ಇಲ್ಲಿಯವರೆಗೂ ಭಾರತವು ೫ ಯುದ್ಧಗಳಲ್ಲಿ ಭಾಗವಹಿಸಿದೆ. ನೇರ ಯುದ್ಧಗಳಷ್ಟೇ ಅಲ್ಲದೆ ಗಡಿಯ ಮೂಲಕ ಉಗ್ರರನ್ನು ನುಗ್ಗಿಸಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಪ್ರಯತ್ನವನ್ನು ಪಾಕಿಸ್ತಾನ ಸದಾ ನಡೆಸುತ್ತಿರುತ್ತದೆ. ಹೀಗಾಗಿ, ಭಾರತದ ರಕ್ಷಣಾಪಡೆಗಳು ಸದಾಕಾಲವೂ ಜಾಗೃತವಾಗಿದ್ದುಕೊಂಡು ದೇಶದ ಗಡಿಯನ್ನು ಕಾಯುತ್ತಿರುತ್ತವೆ. ದೇಶದ ಆಂತರಿಕ ಸುರಕ್ಷತೆಗೂ ಸೈನ್ಯವನ್ನು ಬಳಸಲಾಗಿರುವ ಅನೇಕ ಉದಾಹರಣೆಗಳಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ ಹೈದರಾಬಾದ್ ವಿಮೋಚನೆ, ಗೋವಾ ವಿಮೋಚನೆಗಳಿಗೂ ಸೈನ್ಯವನ್ನು ಬಳಸಲಾಗಿದೆ. ಈ ರೀತಿ ದೇಶದ ಸಂರಕ್ಷಣೆಯಲ್ಲಿ ರಕ್ಷಣಾಪಡೆಗಳ ಪಾತ್ರ ಅತ್ಯಂತ ಹಿರಿದು.
ಸರ್ಕಾರೀ ಅಂಕಿ-ಅಂಶಗಳ ಪ್ರಕಾರ, ಈ ಯುದ್ಧದಲ್ಲಿ ೧೫೦೦ ಸೈನಿಕರು ಹುತಾತ್ಮರಾದರು, ೩೫೦೦ ಜನ ಸೈನಿಕರು ಗಾಯಗೊಂಡರು, ಸುಮಾರು ೧೦೦೦ ಜನ ಸೈನಿಕರು ಶಾಶ್ವತವಾಗಿ ಕಾಣೆಯಾದರು. ತಾವು ತೋರಿದ ಶೌರ್ಯ-ಪರಾಕ್ರಮಗಳಿಗಾಗಿ ೫ ಜನ ಸೈನಿಕರು ಪರಮವೀರ ಚಕ್ರ ಪಡೆದರೆ, ೫೩ ಸೈನಿಕರು ಮಹಾವೀರ ಚಕ್ರ ಮತ್ತು ೩೨೩ ಸೈನಿಕರು ವೀರ ಚಕ್ರ ಗಳಿಸಿದರು.