ಹೈದರಾಬಾದ್ ವಿಮೋಚನಾ ಕಾರ್ಯಾಚರಣೆ
ಹೈದರಾಬಾದ್ ಸಂಸ್ಥಾನದ ವಿಲೀನ ದೊಡ್ಡ ತಲೆನೋವಾಗಿ ಪರಿಣಮಿಸಿತು. ಅಂದಿನ ಕಾಲಕ್ಕೆ ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಒಬ್ಬನೆಂದು ಹೆಸರಾಗಿದ್ದ ಹೈದರಾಬಾದಿನ ನಿಜಾಮನೆಂದೇ ಪ್ರಸಿದ್ಧನಾದ ನಿಜಾಮ್ ಮೀರ್ ಉಸ್ಮಾನ್ ಆಲಿಗೆ ಹೈದರಾಬಾದನ್ನು ಭಾರತದೊಂದಿಗೆ ವಿಲೀನಗೊಳಿಸುವುದು ಇಷ್ಟವಿರಲಿಲ್ಲ. ಆ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಉಳಿಸಿಕೊಳ್ಳಬಹುದೆಂದು ಕೆಲವು ಬ್ರಿಟಿಷ್ ಅಧಿಕಾರಿಗಳೂ ಮತ್ತು ಮುಸ್ಲಿಂ ಲೀಗಿನ ನಾಯಕರೂ ಚಿತಾವಣೆ ನಡೆಸಿದ್ದರು, ಆತನನ್ನು ಪ್ರೇರೇಪಿಸುತ್ತಿದ್ದರು.
೧೯೪೭ರ ಆಗಸ್ಟ್ ೧೫ರಂದು ಬ್ರಿಟಿಷರು ಜವಾಹರಲಾಲ್ ನೆಹರು ನೇತೃತ್ವದ ಕಾಂಗ್ರೆಸ್ಸಿಗೆ ಭಾರತದ ಅಧಿಕಾರವನ್ನು ಮತ್ತು ಮೊಹಮ್ಮದ್ ಆಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗಿಗೆ ಪಾಕಿಸ್ತಾನದ ಅಧಿಕಾರವನ್ನು ಹಸ್ತಾಂತರಿಸಿ ನಿರ್ಗಮಿಸಿದರು. ಹಾಗೆ ನಿರ್ಗಮಿಸುವಾಗ ಅವರು ಹಸ್ತಾಂತರಿಸಿದ್ದು ಬ್ರಿಟಿಷರು ನೇರವಾಗಿ ಆಳುತ್ತಿದ್ದ ಪ್ರದೇಶಗಳ ಮೇಲಣ ಅಧಿಕಾರವನ್ನು ಮಾತ್ರ. ಬ್ರಿಟಿಷರ ಆಡಳಿತಕ್ಕೆ ನೇರವಾಗಿ ಒಳಪಡದಿದ್ದ, ರಾಜರ ಆಳ್ವಿಕೆಗೆ ಒಳಪಟ್ಟಿದ್ದ ಸುಮಾರು ಆರು ನೂರು ಸಂಸ್ಥಾನಗಳಿಗೆ ತಾವು ಯಾವ ದೇಶಕ್ಕೆ ಸೇರಬೇಕೆಂದು ನಿರ್ಣಯಿಸುವ ಸ್ವಾತಂತ್ರ್ಯವನ್ನು ನೀಡಿ, ಒಂದು ರೀತಿಯಲ್ಲಿ ಅರಾಜಕ ಪರಿಸ್ಥಿತಿಯನ್ನು, ಗೊಂದಲದ ವಾತಾವರಣವನ್ನು ನಿರ್ಮಿಸಿ ಬ್ರಿಟಿಷರು ಇಲ್ಲಿಂದ ಕಾಲ್ದೆಗೆದರು. ಆಗಷ್ಟೇ ಕಣ್ತೆರೆಯುತ್ತಿದ್ದ ಸ್ವತಂತ್ರ ದೇಶದ ಎದುರು ಇದೊಂದು ಭೂತಾಕಾರದ ಸಮಸ್ಯೆಯಾಗಿ ನಿಂತಿತು. ಸಂಸ್ಥಾನಗಳ ರಾಜರುಗಳು ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡತೊಡಗಿದರು, ವಿವಿಧ ರೀತಿಯ ಬೇಡಿಕೆಗಳನ್ನು ಮುಂದಿಡತೊಡಗಿದರು; ಕೆಲವು ಸಂಸ್ಥಾನಗಳು ತಮ್ಮದೇ ಒಕ್ಕೂಟವನ್ನು ಮಾಡಿಕೊಳ್ಳುವ ಪ್ರಯತ್ನವನ್ನೂ ನಡೆಸಿದವು. ಕೆಲವು ಸಂಸ್ಥಾನಗಳು ಸ್ವತಂತ್ರವಾಗಿ ಉಳಿಯುವ ಆಸೆಯನ್ನೂ ವ್ಯಕ್ತಪಡಿಸಿದವು. ಭಾರತವನ್ನು ತುಂಡರಿಸಿದ ಮೇಲೂ ಬ್ರಿಟಿಷ್ ಅಧಿಕಾರಿಗಳ ಕುಯುಕ್ತಿಗಳು ನಿಲ್ಲಲಿಲ್ಲ. ಹಲವು ಸಂಸ್ಥಾನಗಳನ್ನು ಗುಪ್ತವಾಗಿ ಸಂಪರ್ಕಿಸಿ, ಅವರಲ್ಲನೇಕರನ್ನು ಭಾರತದೊಡನೆ ಸೇರದಂತೆ ಅವರು ಓಲಯಿಸತೊಡಗಿದರು.
ಒಟ್ಟಾರೆ ಅಂದಿನ ಪರಿಸ್ಥಿತಿ ಸುಲಭದಲ್ಲಿ ಪರಿಹಾರವಾಗುವಂತಿರಲಿಲ್ಲ. ಒಂದಾಗಿದ್ದ ದೇಶವು ನೂರಾರು ತುಂಡುಗಳಾಗಿಬಿಡುವ, ಛಿದ್ರವಿಚ್ಛಿದ್ರಗೊಳ್ಳುವ ಭಯಾನಕ ದೃಶ್ಯ ನಿರ್ಮಾಣವಾಗಿತ್ತು. ಬ್ರಿಟಿಷರ ಕುತಂತ್ರಗಳಿಗೆ ತಡೆಯೊಡ್ಡಿ, ಎಲ್ಲ ದೇಶೀಯ ಸಂಸ್ಥಾನಗಳನ್ನೂ ಸಂಪರ್ಕಿಸಿ, ಅಲ್ಲಿನ ರಾಜರುಗಳು ಹಾಗೂ ಮಂತ್ರಿಗಳೊಡನೆ ಮಾತುಕತೆ ನಡೆಸಿ, ಭಾರತದೊಡನೆ ಸೇರುವಂತೆ ಅವರೆಲ್ಲರ ಮನವೊಲಿಸಿ, ಎಲ್ಲ ಸಂಸ್ಥಾನಗಳೂ ಭಾರತದೊಡನೆ ವಿಲೀನಗೊಳ್ಳುವಂತೆ ಮಾಡಿದ ಕೀರ್ತಿ ಉಕ್ಕಿನ ಮನುಷ್ಯರೆಂದೇ ಪ್ರಸಿದ್ಧರಾದ ಸರ್ದಾರ್ ಪಟೇಲ್ ಮತ್ತು ಗೃಹಖಾತೆಯ ಕಾರ್ಯದರ್ಶಿ ವಿ.ಪಿ. ಮೆನನ್ನರಿಗೆ ಸಲ್ಲಬೇಕು. ಅವರ ಅಂದಿನ ಭಗೀರಥಪ್ರಯತ್ನದ ಫಲವಾಗಿ ಎಲ್ಲ ಸಂಸ್ಥಾನಗಳೂ ಭಾರತದೊಡನೆ ವಿಲೀನಗೊಂಡು, ಭಾರತವು ಸುಭದ್ರ, ಸಾರ್ವಭೌಮ ರಾಷ್ಟçವಾಗಿ ನಿಲ್ಲುವುದು ಸಾಧ್ಯವಾಯಿತು.
ಭಾರತಕ್ಕೆ ಸ್ವಾತಂತ್ರ್ಯ ನೀಡುವ ಪ್ರಕ್ರಿಯೆಯ ಅಂಗವಾಗಿ ಭಾರತದ ನೂತನ ವೈಸರಾಯ್ ಆಗಿ ನಿಯುಕ್ತರಾಗಿದ್ದ ಲಾರ್ಡ್ ಮೌಂಟ್ಬ್ಯಾಟನ್ ಅವರು ೧೯೪೭ರ ಜೂನ್ ೩ರಂದು ಘೋಷಣಾಪತ್ರವೊಂದನ್ನು ಹೊರಡಿಸಿದರು. ೧೯೪೮ರ ಜೂನ್ ೨ರ ವೇಳೆಗೆ ಸ್ವಾತಂತ್ರ್ಯ ನೀಡುವುದಾಗಿ ಹೊರಡಿಸಿದ್ದ ಹಿಂದಿನ ಘೋಷಣೆಯನ್ನು ಬದಲಾಯಿಸಿ, ೧೯೪೭ರ ಆಗಸ್ಟ್ ೧೫ರಂದೇ ಸ್ವಾತಂತ್ರ್ಯ ನೀಡುವುದಾಗಿ ಈ ಹೊಸ ಘೋಷಣಾಪತ್ರದಲ್ಲಿ ತಿಳಿಸಲಾಗಿತ್ತು. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡಿದರೂ, ಭಾರತದಲ್ಲಿದ್ದ ಸುಮಾರು ೬೦೦ ಸಂಸ್ಥಾನಗಳು ತಮ್ಮದೇ ನಿರ್ಧಾರ ತೆಗೆದುಕೊಳ್ಳಬಹುದೆಂದು ಅವರಿಗೆ ತಿಳಿಸಲಾಗಿತ್ತು. ಇದರಿಂದ ಆಗುವ ಅನರ್ಥವನ್ನು ತಪ್ಪಿಸಲು ಸರ್ದಾರ್ ಪಟೇಲರು ಕೂಡಲೇ ವಿವಿಧ ಸಂಸ್ಥಾನಗಳ ರಾಜರನ್ನು ಭೇಟಿಯಾಗಿ ಮಾತುಕತೆ ನಡೆಸುವ ಪ್ರಕ್ರಿಯೆಯನ್ನು ಆರಂಭಿಸಿದರು.
ಪಟೇಲರು ಜುಲೈ ೪ರಂದು ದೇಶೀಯ ಸಂಸ್ಥಾನಗಳು ಭಾರತದೊಡನೆ ವಿಲೀನಗೊಳ್ಳಬೇಕೆಂದು ವಿನಂತಿಸುವ ಪತ್ರವನ್ನು ಎಲ್ಲ ಸಂಸ್ಥಾನಗಳಿಗೆ ಕಳಿಸಿದರು. ಆ ಪತ್ರದ ವಿನಂತಿ ಹೀಗಿತ್ತು: “ನಮ್ಮ ದೇಶವು ನಮ್ಮದೇ ಪರಂಪರಾಗತ ಸಂಸ್ಥೆಗಳನ್ನು ಹೊಂದಿರುವ, ನಮ್ಮ ಜನರ ಹೆಮ್ಮೆ, ಪರಂಪರೆಗಳ ಪ್ರತೀಕ. ಅಂತಹ ಮಹಾನ್ ದೇಶಕ್ಕೆ ಸೇರಿದ ನಾವು ಒಂದು ಆಕಸ್ಮಿಕ ಕಾರಣದಿಂದಾಗಿ, ಕೆಲವರು ದೇಶೀಯ ಸಂಸ್ಥಾನಗಳಲ್ಲೂ, ಇತರರು ಬ್ರಿಟಿಷ್-ಅಧೀನ ಭಾರತದಲ್ಲೂ ಜೀವಿಸುತ್ತಾ ಬಂದಿದ್ದೇವೆ. ಹೀಗಿದ್ದಾಗ್ಯೂ ನಾವೆಲ್ಲರೂ ಸಮಾನ ಸಂಸ್ಕೃತಿ ಹಾಗೂ ಸಮಾನ ಪರಂಪರೆಯಲ್ಲಿ ಬೆಳೆದು ಬಂದವರು. ಸಮಾನ ಭಾವನೆ ಹಾಗೂ ಸಮಾನ ಹಿತಾಸಕ್ತಿಗಳಿಂದ ಎರಕಗೊಂಡ ರಕ್ತಸಂಬಂಧಗಳಿಂದ ಒಂದಾಗಿ ಬೆಸೆಯಲ್ಪಟ್ಟ ನಮ್ಮನ್ನು ಯಾರೂ ಬೇರ್ಪಡಿಸಲಾರರು. ನಮ್ಮನ್ನು ಬೇರ್ಪಡಿಸುವಂತಹ ಯಾವುದೇ ಅಡ್ಡಗೋಡೆಗಳನ್ನು ನಿರ್ಮಿಸುವುದು ಸಾಧ್ಯವಾಗದ ಮಾತು. ಮಿತ್ರರಾದ ನಮ್ಮ ದೇಶೀಯ ರಾಜರನ್ನೂ, ಅವರ ಪ್ರಜೆಗಳನ್ನೂ ಸಂವಿಧಾನಸಭೆಯ ಮಂಡಳಿಗಳಲ್ಲಿ ಭಾಗವಹಿಸಲು ಈ ಮೂಲಕ ನಾನು ಆಮಂತ್ರಿಸುತ್ತಿದ್ದೇನೆ. ನಾವೆಲ್ಲರೂ ಸ್ನೇಹ ಸಹಕಾರಗಳಿಂದ ನಮ್ಮೆಲ್ಲರಿಗೂ ಹಿತಕಾರಿಯಾದ, ಮಾತೃಭೂಮಿಯ ಸೇವಾದೀಕ್ಷೆ ಸ್ವೀಕರಿಸಿ ಪರಸ್ಪರ ಸ್ನೇಹ ಸಹಕಾರದ ಮೇಲೆ ಒಟ್ಟುಗೂಡಿ ನಿಲ್ಲೋಣ. ನಾವಿಂದು ಭಾರತದ ಇತಿಹಾಸದಲ್ಲೇ ಚರಿತ್ರಾರ್ಹವೆನಿಸುವ ಅತ್ಯಪೂರ್ವ ಘಟ್ಟವನ್ನು ತಲಪಿದ್ದೇವೆ. ನಮ್ಮೀ ದೇಶವನ್ನು ನವ ವೈಭವದತ್ತ ಕೊಂಡೊಯ್ಯಲು ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕಾದದ್ದು ಅನಿವಾರ್ಯ. ಅಸಂಘಟಿತವಾಗುಳಿದಲ್ಲಿ ದೇಶಕ್ಕೆ ಹೊಸಹೊಸ ಆಪತ್ತುಗಳು ಎರಗಿಬಂದಾವು. ನಮ್ಮ ಸಮಾನವಾದ ಹಿತಾಸಕ್ತಿಗಳಿಗಾಗಿ ನಾವೆಲ್ಲರೂ ಒಟ್ಟುಗೂಡಿ ನಿಲ್ಲುವುದು ಅತ್ಯಾವಶ್ಯಕ. ಇಲ್ಲವಾದಲ್ಲಿ ನಮ್ಮೆಲ್ಲರ ನಾಶ ನಿಶ್ಚಿತ. ಸಹಕಾರದಿಂದ ದುಡಿಯದಿದ್ದಲ್ಲಿ ಅರಾಜಕತೆ-ಗೊಂದಲ-ಗಲಭೆಗಳು ಕಟ್ಟಿಟ್ಟದ್ದು ಎಂಬ ಮಾತನ್ನು ದೇಶೀಯ ಸಂಸ್ಥಾನಿಕ ಮಿತ್ರರಲ್ಲಿ ನಿವೇದಿಸಬಯಸುತ್ತೇನೆ”. (ಆಧಾರ: ವಿ.ಪಿ. ಮೆನನ್ ಅವರ ‘ದಿ ಸ್ಟೋರಿ ಆಫ್ ದಿ ಇಂಟೆಗ್ರೇಷನ್ ಆಫ್ ದಿ ಇಂಡಿಯನ್ ಸ್ಟೇಟ್ಸ್’)
ವಿಲೀನಕ್ಕೆ ಒಪ್ಪದ ಮೂರು ಸಂಸ್ಥಾನಗಳು
ಸರ್ದಾರ್ ಪಟೇಲ್ ಮತ್ತು ವಿ.ಪಿ. ಮೆನನ್ನರ ಸಮಯೋಚಿತ ಪ್ರಯತ್ನಗಳ ಪರಿಣಾಮವಾಗಿ ಮೂರು ಸಂಸ್ಥಾನಗಳನ್ನುಳಿದು ಎಲ್ಲ ಸಂಸ್ಥಾನಗಳೂ ಭಾರತದೊಡನೆ ವಿಲೀನಗೊಂಡವು. ವಿಲೀನ ಪತ್ರಕ್ಕೆ ಸಹಿ ಹಾಕದೇ ತಲೆನೋವುಂಟು ಮಾಡಿದ ಮೂರು ಸಂಸ್ಥಾನಗಳೆಂದರೆ – ಜಮ್ಮು-ಕಾಶ್ಮೀರ ಸಂಸ್ಥಾನ, ಜುನಾಗಢ ಸಂಸ್ಥಾನ ಮತ್ತು ಹೈದರಾಬಾದ್ ಸಂಸ್ಥಾನ. ಜಮ್ಮು-ಕಾಶ್ಮೀರದ ಅಧಿಪತಿ ರಾಜಾ ಹರಿಸಿಂಗ್ ಮೀನಮೇಷ ಎಣಿಸುತ್ತಿರುವಾಗಲೇ ಪಾಕಿಸ್ತಾನವು ಕಾಶ್ಮೀರವನ್ನು ಕಬಳಿಸುವ ಧೂರ್ತ ಯೋಜನೆಯೊಂದಿಗೆ ಗುಡ್ಡಗಾಡು ಜನರನ್ನು ಮುಂದಿಟ್ಟುಕೊಂಡು ಸೈನ್ಯವನ್ನು ಅಲ್ಲಿಗೆ ನುಗ್ಗಿಸಿತು. ಕೂಡಲೇ ರಾಜಾ ಹರಿಸಿಂಗ್ ವಿಲೀನ ಪತ್ರಕ್ಕೆ ಸಹಿ ಹಾಕಿ ಜಮ್ಮು-ಕಾಶ್ಮೀರ ಸಂಸ್ಥಾನವನ್ನು ಭಾರತದೊಂದಿಗೆ ವಿಲೀನಗೊಳಿಸಿದ. ಭಾರತದ ವೀರಯೋಧರು ಪಾಕಿಸ್ತಾನವನ್ನು ಯುದ್ಧದಲ್ಲಿ ಮಣ್ಣುಮುಕ್ಕಿಸಿದರು. ಆದರೆ, ಜಮ್ಮು-ಕಾಶ್ಮೀರ ತಮ್ಮ ಸ್ವತ್ತೆಂಬಂತೆ ಮಾತನಾಡುತ್ತಿದ್ದ ಪಂಡಿತ್ ನೆಹರೂ ಅವರು, ಭಾರತವು ಯುದ್ಧವನ್ನು ಗೆದ್ದಿದ್ದರೂ ವಿಶ್ವಸಂಸ್ಥೆಗೆ ದೂರನ್ನು ಒಯ್ದು, ಕಾಶ್ಮೀರದ ಸಮಸ್ಯೆಯನ್ನು ಶಾಶ್ವತ ವ್ರಣವಾಗಿಸಲು ಕಾರಣರಾದರು. ಸೌರಾಷ್ಟçದಲ್ಲಿದ್ದ ಜುನಾಗಢದ ದಿವಾನ ಮುಸ್ಲಿಂ ಲೀಗಿನ ಶಾನವಾಜ್ ಭುಟ್ಟೋ ಜುನಾಗಢ ಪಾಕಿಸ್ತಾನಕ್ಕೆ ಸೇರಲು ಇಚ್ಛಿಸುತ್ತದೆ ಎಂದು ಪಾಕಿಸ್ತಾನಕ್ಕೆ ಪತ್ರ ಬರೆದ. ಇದು ಅತಾರ್ಕಿಕ ನಿರ್ಧಾರವಾಗಿತ್ತು. ತಕ್ಷಣವೇ ಸರ್ದಾರ್ ಪಟೇಲರು ಜುನಾಗಢದ ಬಾಗಿಲಿಗೆ ಸೇನೆಯನ್ನು ಕಳುಹಿಸಿದರು. ಆದರೆ, ಹಿಂದಿನ ದಿನವೇ ಭುಟ್ಟೋ ಕರಾಚಿಗೆ ಪಲಾಯನ ಮಾಡಿದ್ದ, ಸೇನೆಯ ಕಾರ್ಯಾಚರಣೆಯ ಅಗತ್ಯ ಬೀಳಲಿಲ್ಲ. ಮುಂದೆ ೧೯೪೮ ಫೆಬ್ರುವರಿ ೨೦ರಂದು ಅಲ್ಲಿ ಜನಮತಗಣನೆ ನಡೆಸಲಾಯಿತು. ಅಲ್ಲಿನ ಅತ್ಯಧಿಕ ಬಹುಸಂಖ್ಯೆಯ ಜನ ಭಾರತದೊಡನೆ ಜುನಾಗಢದ ವಿಲೀನವನ್ನು ಅನುಮೋದಿಸಿದ್ದರು.
ಹೈದರಾಬಾದ್ ಸಂಸ್ಥಾನದ ವಿಲೀನ ದೊಡ್ಡ ತಲೆನೋವಾಗಿ ಪರಿಣಮಿಸಿತು. ಅಂದಿನ ಕಾಲಕ್ಕೆ ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ ಒಬ್ಬನೆಂದು ಹೆಸರಾಗಿದ್ದ ಹೈದರಾಬಾದಿನ ನಿಜಾಮ ಮೀರ್ ಉಸ್ಮಾನ್ ಆಲಿಗೆ ಹೈದರಾಬಾದನ್ನು ಭಾರತದೊಂದಿಗೆ ವಿಲೀನಗೊಳಿಸುವುದು ಇಷ್ಟವಿರಲಿಲ್ಲ. ಆ ಸಂಸ್ಥಾನವನ್ನು ಸ್ವತಂತ್ರ ರಾಷ್ಟçವನ್ನಾಗಿ ಉಳಿಸಿಕೊಳ್ಳಬಹುದೆಂದು ಕೆಲವು ಬ್ರಿಟಿಷ್ ಅಧಿಕಾರಿಗಳೂ ಮತ್ತು ಮುಸ್ಲಿಂ ಲೀಗಿನ ನಾಯಕರೂ ಚಿತಾವಣೆ ನಡೆಸಿದ್ದರು, ನಿಜಾಮನನ್ನು ಪ್ರೇರೇಪಿಸುತ್ತಿದ್ದರು. ಹೈದರಾಬಾದ್ ಇಡೀ ದೇಶದಲ್ಲಿಯೇ ಅತ್ಯಂತ ದೊಡ್ಡ ಸಂಸ್ಥಾನವಾಗಿತ್ತು. ಇಂದಿನ ತೆಲಂಗಾಣ ರಾಜ್ಯ, ಮಹಾರಾಷ್ಟçದ ದಕ್ಷಿಣದ ಕೆಲವು ಜಿಲ್ಲೆಗಳು ಮತ್ತು ಕರ್ನಾಟಕದ ಹೊಸಪೇಟೆಯ ತುಂಗಭದ್ರಾ ದಂಡೆಯವರೆಗೆ ವ್ಯಾಪಿಸಿದ್ದ ೮೨,೦೦೦ ಚದರ ಮೈಲುಗಳಷ್ಟು ವಿಸ್ತಾರ ಪ್ರದೇಶವನ್ನು ಹೊಂದಿದ್ದ ಹೈದರಾಬಾದ್ ಸಂಸ್ಥಾನದ ಒಟ್ಟು ಜನಸಂಖ್ಯೆ ೧.೬ ಕೋಟಿ ಮತ್ತು ವಾರ್ಷಿಕ ವರಮಾನ ೨೬ ಕೋಟಿ ರೂಪಾಯಿಗಳು. ಆ ಸಂಸ್ಥಾನವು ತನ್ನದೇ ಆದ ನಾಣ್ಯವನ್ನು ಟಂಕಿಸುತ್ತಿತ್ತು. ಹೈದರಾಬಾದ್ ಸಂಸ್ಥಾನದ ಜನಸಂಖ್ಯೆಯಲ್ಲಿನ ಶೇಕಡಾ ೮೫ ಭಾಗ ಹಿಂದುಗಳಾಗಿದ್ದರೂ, ಅಲ್ಲಿನ ಆಡಳಿತದಲ್ಲಿ, ಪೊಲೀಸ್ ದಳದಲ್ಲಿ ಮತ್ತು ಸೈನ್ಯದಲ್ಲಿ ಹೆಚ್ಚಿನ ಪಾಲು ತುಂಬಿದ್ದವರು ಮುಸಲ್ಮಾನರೇ.
ಖುರಾನ್–ಖಡ್ಗ ಹಿಡಿದು ಮುನ್ನುಗ್ಗಿ!
ಜೂನ್ ೩ರ ಯೋಜನೆ ಹೊರಬಿದ್ದ ಕೆಲವೇ ದಿನಗಳ ನಂತರ, ಜೂನ್ ೧೧ರಂದು – ಹೈದರಾಬಾದ್ ಸಂಸ್ಥಾನವು ಸ್ವತಂತ್ರವಾಗಿ, ಸಾರ್ವಭೌಮವಾಗಿ ಉಳಿಯುತ್ತದೆಂದು ನಿಜಾಮ ಘೋಷಿಸಿದ್ದ. ಭಾರತವು ಸ್ವತಂತ್ರಗೊಂಡ ದಿನವೇ ನಿಜಾಮನು ಹೈದರಾಬಾದ್ ಸ್ವತಂತ್ರ ರಾಷ್ಟçವಾಗಿದೆಯೆಂದು ರೇಡಿಯೋ ಡೆಕ್ಕನ್ ಮೂಲಕ ಸಾರಿದ. ಆತನ ಭಂಟನಾದ ಕಾಸಿಂ ರಜ್ವಿಯ
ರಜಾಕಾರ ಸೇನೆಯು ಅಪಾರ ಪ್ರಮಾಣದ ದಾಂಧಲೆಗಳನ್ನೆಬ್ಬಿಸುತ್ತಾ, ಹಿಂದುಗಳ ವಿರುದ್ಧವಾಗಿ ಮತ್ತು ಭಾರತದ ವಿರುದ್ಧವಾಗಿ ವಿಷಪೂರಿತವಾದ ಅಪಪ್ರಚಾರದ ಧೂಳೆಬ್ಬಿಸಿತು. ರಜಾಕಾರರ ಸೇನೆಯ ನಾಯಕನಾಗಿದ್ದ ಕಾಸಿಂ ರಜ್ವಿ ಮಹಾರಾಷ್ಟçದ ಲಾತೂರಿನ ವಕೀಲ. ಮೂಲ ಪರ್ಷಿಯನ್ ಭಾಷೆಯ ಪದವಾದ ‘ರಜಾಕಾರ’ ಎಂದರೆ ಸೇವಕ ಎಂದು ಅರ್ಥ. ಆದರೆ, ಈ ರಜಾಕಾರರು ಸೇವೆಗೆ ಅಪಚಾರವೆಸಗುವ ಕಾರ್ಯ ಮಾಡಿದರು. ಹೈದರಾಬಾದ್ ಸಂಸ್ಥಾನದಲ್ಲಿ ಅವರು ಮಾಡಿದ ಹಿಂಸೆ, ಅತ್ಯಾಚಾರ, ಲೂಟಿ, ಸುಲಿಗೆಗಳಿಗೆ ಲೆಕ್ಕವಿಲ್ಲ, ಎಂತಹ ರಕ್ಕಸರೂ ನಾಚುವಂತಹ ಕೆಲಸ ಅವರದು! ಮತಾಂಧ ಮುಸಲ್ಮಾನನಾಗಿದ್ದ ಕಾಸಿಂ ರಜ್ವಿ ‘ಮಜ್ಲೀಸ್-ಎ-ಇತ್ತೇಹಾದ್-ಉಲ್-ಮುಸ್ಲಿಮೀನ್’ ಎಂಬ ಹೆಸರಿನ ಉಗ್ರಗಾಮಿ ಸಂಘಟನೆಯ ಅಧ್ಯಕ್ಷನೂ ಆಗಿದ್ದ. ಇಸ್ಲಾಮಿನ ಹೆಸರಿನಲ್ಲಿ ಆತ ನಡೆಸುತ್ತಿದ್ದ ಕೃತ್ಯಗಳಿಗೆ ನಿಜಾಮನ ಹಾಗೂ ಅನೇಕ ಮುಸಲ್ಮಾನ ಮುಖಂಡರ ನೈತಿಕ ಬೆಂಬಲವಿತ್ತು.
ಹಿಂದು ದ್ವೇಷವೇ ಮೈತಳೆದಂತಿದ್ದ ಕಾಸಿಂ ರಜ್ವಿಯು ತನ್ನ ಭಾಷಣಗಳಲ್ಲಿ ಉಗುಳುತ್ತಿದ್ದ ದ್ವೇಷ-ರೋಷಗಳ ಜ್ವಾಲೆಯಿಂದಾಗಿ ಹಿಂದುಗಳಲ್ಲಿ ಭಯ-ಆತಂಕಗಳೂ, ಮುಸಲ್ಮಾನರಲ್ಲಿ ಹಿಂದುವಿರೋಧಿ ಹಾಗೂ ಭಾರತವಿರೋಧಿ ಉನ್ಮಾದಗಳೂ ಕಿಡಿಗೆದರುತ್ತಿದ್ದವು. ಹೈದರಾಬಾದ್ ರಾಜ್ಯವನ್ನು ಎಂದಿಗೂ ಭಾರತದೊಡನೆ ವಿಲೀನಗೊಳಿಸಬಾರದು ಎಂಬುದು ಕಾಸಿಂ ರಜ್ವಿಯ ದೃಢ ನಿಲವು ಆಗಿತ್ತು. ಅಷ್ಟೇ ಅಲ್ಲ, ಮುಸಲ್ಮಾನ ಸೈನಿಕರು ದೆಹಲಿಯನ್ನು ಗೆದ್ದು ಕೆಂಪುಕೋಟೆಯ ಮೇಲೆ ತಮ್ಮ ಧ್ವಜವನ್ನು ಹಾರಿಸಬೇಕೆಂದೂ ಆತ ಹೇಳುತ್ತಿದ್ದ. ‘ಬಂಗಾಳಕೊಲ್ಲಿಯ ನೀರು ನಿಜಾಮರ ಪಾದವನ್ನು ತೊಳೆಯುವವರೆಗೂ ಮುಸಲ್ಮಾನ ಸೈನಿಕರು ವಿರಮಿಸಬಾರದು’ ಎಂದು ಆತ ರಜಾಕಾರರನ್ನು ಉದ್ರೇಕಿಸುತ್ತಿದ್ದ. ೧೯೪೮ರ ಮಾರ್ಚ್ ೩೧ರಂದು ಆತ ಹೈದರಾಬಾದಿನ ಮುಸಲ್ಮಾನರಿಗೆ ಈ ರೀತಿ ಕರೆ ನೀಡಿದ: “ಇಸ್ಲಾಂ ಪರಮಾಧಿಪತ್ಯ ಕೈಗೂಡುವವರೆಗೆ ಹಿಂದುಗಳ ಮೇಲೆ ಎತ್ತಿರುವ ಖಡ್ಗವನ್ನು ಯಾವ ಮುಸಲ್ಮಾನನೂ ಒರೆಗೆ ಸೇರಿಸಬಾರದು; ಶತ್ರುಗಳ ಧ್ವಂಸಕ್ಕಾಗಿ ಒಂದು ಕೈಯಲ್ಲಿ ಖುರಾನ್, ಮತ್ತೊಂದರಲ್ಲಿ ಖಡ್ಗ ಹಿಡಿದು ಮುನ್ನುಗ್ಗಿ; ದೊಡ್ಡ ಹೋರಾಟಕ್ಕೆ ರಂಗ ಸಜ್ಜಾದಲ್ಲಿ ಭಾರತದ ನಾಲ್ಕೂವರೆ ಕೋಟಿ ಮುಸಲ್ಮಾನರು ನಮ್ಮ ಬೆಂಬಲಕ್ಕೆ ನಿಲ್ಲುವರು.” ತಮ್ಮ ಪ್ರಾಂತದಲ್ಲಿ ಸಾಮಾನ್ಯ ರೀತಿಯ ಶಸ್ತçದಿಂದ ಸಜ್ಜಾದ ೨ ಲಕ್ಷ ರಜಾಕಾರರಿದ್ದಾರೆ;
ಅನೇಕ ಪಠಾಣರ ಪ್ರತ್ಯಕ್ಷ ಸೇನೆ ಮತ್ತು ಇತರರೂ ಸೇರಿ ೪೦,೦೦೦ ಇದ್ದಾರೆ – ಎಂದೂ ಅವನು ಬಡಾಯಿ ಕೊಚ್ಚಿಕೊಂಡಿದ್ದ.
ಕಾವೇರಿದ ಚಳವಳಿ
ರಜಾಕಾರರೊಡನೆ ರಾಜ್ಯದ ಪೊಲೀಸರೂ ಶಾಮೀಲಾಗಿ ದೇವಸ್ಥಾನಗಳ ಧ್ವಂಸ, ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಕಳ್ಳಸಾಗಣೆಗಳು ಎಗ್ಗಿಲ್ಲದೆ ಸಾಗಿದವು. ಅನಂತರ ಮದ್ರಾಸ್, ಬೊಂಬಾಯಿ, ಮಧ್ಯಪ್ರಾಂತಗಳ ಗಡಿಗಳೊಳಕ್ಕೂ ರಜಾಕಾರರು ನುಗ್ಗಿ ನೇರ ರೈಲುಗಳ ಮೇಲೂ ಪದೇಪದೇ ಹಲ್ಲೆ ಆರಂಭಿಸಿದರು. ಹಿಂದುಗಳು ಹೈದರಾಬಾದಿನಿಂದ ಹೊರಕ್ಕೆ ಧಾವಿಸಿ ಹೋಗಲಾರಂಭಿಸಿದ್ದು ಇಂತಹ ದಾರುಣ ಪರಿಸ್ಥಿತಿಯಲ್ಲಿ. ಹೈದರಾಬಾದಿನ ಜನತೆ ಭಾರತದೊಡನೆ ವಿಲೀನಗೊಳ್ಳಬೇಕೆಂದು ಬಯಸಿದ್ದರು. ಅದಕ್ಕಾಗಿ ಅವರು ಕಾಂಗ್ರೆಸ್ ಮುಖಂಡರಾಗಿದ್ದ ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಅಹಿಂಸಾತ್ಮಕ ಚಳವಳಿ ನಡೆಸಿದರು. ಸ್ವಾಮಿ ರಮಾನಂದ ತೀರ್ಥರು “ಕಾಲೇಜನ್ನು ತ್ಯಜಿಸಿ, ಇಂದೇ ಕಾರ್ಯಪ್ರವೃತ್ತರಾಗಿ” ಎಂದು ನೀಡಿದ ಕರೆಗೆ ಓಗೊಟ್ಟ ಸಾವಿರಾರು ವಿದ್ಯಾರ್ಥಿಗಳು ಚಳವಳಿಗೆ ಧುಮುಕಿದರು. ನಿಜಾಮನು ಈ ಚಳವಳಿಯನ್ನು ಹತ್ತಿಕ್ಕಲು ರಾಜ್ಯದ ಪೊಲೀಸ್ ಪಡೆಯನ್ನು ಉಪಯೋಗಿಸಿದನು. ಸ್ವಾಮಿ ರಮಾನಂದ ತೀರ್ಥರನ್ನು ಬಂಧಿಸಿ ಸೆರೆಯಲ್ಲಿಟ್ಟನು.
ಆದರೆ, ಇದರಿಂದ ಚಳವಳಿ ತಣ್ಣಗಾಗಲಿಲ್ಲ, ಚಳವಳಿಕಾರರು ಬೆದರಲಿಲ್ಲ; ಚಳವಳಿ ಮತ್ತಷ್ಟು ಕಾವೇರಿತು.
ಈ ಚಳವಳಿಯ ಸಂಘಟನೆ, ಚಳವಳಿಯ ಬೆಳವಣಿಗೆಗಳದೇ ಒಂದು ದೊಡ್ಡ ಕಥೆ. ಈ ಚಳವಳಿಗೆ ಗ್ರಾಮಗ್ರಾಮಗಳಿಂದ ಜನ ಬೆಂಬಲ ನೀಡಿದರು. ಕರ್ನಾಟಕ ಹಾಗೂ ಮಹಾರಾಷ್ಟçದ ಅನೇಕ ಜಿಲ್ಲೆಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ ಚಳವಳಿಕಾರರನ್ನು ಸಂಘಟಿಸಲಾಯಿತು, ತರಬೇತಿ ನೀಡಲಾಯಿತು. ಶಿಬಿರದ ಮಾಹಿತಿಯನ್ನು ನೀಡುವ ಕೈಬರಹದ ಪತ್ರಗಳನ್ನು ಹಂಚಲಾಗುತ್ತಿತ್ತು. ಈ ರೀತಿಯ ಪತ್ರಗಳು ದೆಹಲಿಯಲ್ಲಿದ್ದ ಸರ್ದಾರ್ ಪಟೇಲರನ್ನೂ ತಲಪುವಂತೆ ಚಳವಳಿಯ ಸಂಘಟಕರು ನೋಡಿಕೊಂಡರು. ಪಟೇಲರ ಸೂಚನೆಯ ಮೇರೆಗೆ ಕೇಂದ್ರದ ಮಂತ್ರಿಗಳಾಗಿದ್ದ ಗಾಡ್ಗೀಳ್ ಮತ್ತು ಕರ್ನಾಟಕದ ಕಾಂಗ್ರೆಸ್ ಮುಖಂಡರಾಗಿದ್ದ ನಿಜಲಿಂಗಪ್ಪನವರು ರಹಸ್ಯವಾಗಿ ಶಿಬಿರಗಳಿಗೆ ಭೇಟಿ ನೀಡಿ, ಚಳವಳಿಕಾರರಿಗೆ ಪ್ರೋತ್ಸಾಹ ನೀಡಿದ್ದರು. ಹೈದರಾಬಾದಿನ ವಿಮೋಚನಾ ಹೋರಾಟಕ್ಕಾಗಿ ನಡೆಯುತ್ತಿದ್ದ ಚಳವಳಿಯ ವಿವರಗಳು ರಾಷ್ಟçಮಟ್ಟದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವಂತೆ ಸರ್ದಾರ್ ಪಟೇಲರು ಯೋಜನೆ ಮಾಡಿದ್ದರು. ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯು ಈ ಸುದ್ದಿಗಳನ್ನು ಪ್ರಕಟಿಸುತ್ತಿದ್ದ ಕರ್ನಾಟಕದ ಪ್ರಮುಖ ಪತ್ರಿಕೆಯಾಗಿತ್ತು.
ಚಳವಳಿಯನ್ನು ಹತ್ತಿಕ್ಕಲು ಹೈದರಾಬಾದಿನ ಪೊಲೀಸರಷ್ಟೇ ಅಲ್ಲದೆ, ರಜಾಕಾರರ ಸೇನೆಯೂ ದೊಡ್ಡ ಪ್ರಮಾಣದ ಪ್ರಯತ್ನ ನಡೆಸಿತು. ಚಳವಳಿಕಾರರು ಸುಮ್ಮನೆ ಕೂಡಲಿಲ್ಲ, ಅವರೂ ಪ್ರತಿದಾಳಿ ನಡೆಸಿದರು. ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಶಂಕರೇಗೌಡ ಮತ್ತು ಅಮರೇಶ ಎನ್ನುವ ಪ್ರೌಢಶಾಲಾ ವಿದ್ಯಾರ್ಥಿಗಳು ರಜಾಕಾರರ ಪಥಸಂಚಲನದ ಮೇಲೆ ಕೈಬಾಂಬುಗಳನ್ನೆಸೆದರು. ರಜಾಕಾರರ ಪ್ರಾಬಲ್ಯವಿದ್ದ ಕುಕನೂರಿನ ಪ್ರಮುಖ ಪೊಲೀಸ್ ಠಾಣೆಯ ಮೇಲೆ ಮುಂಡರಗಿಯಲ್ಲಿ ನಡೆಯುತ್ತಿದ್ದ ಶಿಬಿರದ ಯುವಕರು ದಾಳಿ ನಡೆಸಿ ಅಪಾರ ಪ್ರಮಾಣದ ಬಂದೂಕುಗಳನ್ನು, ಮದ್ದು-ಗುಂಡುಗಳನ್ನು ವಶಪಡಿಸಿಕೊಂಡರು. ಹೀಗೆ ನಡೆದ ಪ್ರತಿದಾಳಿಯಿಂದ ನಿಜಾಮನ ಪೊಲೀಸರು ಮತ್ತು ರಜಾಕಾರರು ನಡುಗಿದರು. ಅನೇಕ ಗ್ರಾಮಗಳಿಗೆ ದಾಳಿ ಮಾಡಿದ ಚಳವಳಿಕಾರರು ರಜಾಕಾರರನ್ನು ಅಲ್ಲಿಂದ ಹೊರದಬ್ಬಿ ಸ್ವತಂತ್ರ ಭಾರತದ ತ್ರಿವರ್ಣಧ್ವಜವನ್ನು ಹಾರಿಸಿದರು. ೧೯೪೭ರ ಆಗಸ್ಟ್ ತಿಂಗಳಿನಲ್ಲೇ ನಿಜಾಮ ಸರ್ಕಾರವು ತ್ರಿವರ್ಣಧ್ವಜ ಹಾರಿಸುವುದನ್ನು ನಿಷೇಧಿಸಿತ್ತು. ಹೀಗಾಗಿ, ಚಳವಳಿಕಾರರು ಛಲದಿಂದ ತ್ರಿವರ್ಣಧ್ವಜ ಹಾರಿಸುವುದಕ್ಕೆ ಮುಂದಾಗುತ್ತಿದ್ದರು, ಪೊಲೀಸರ ದಂಡಪ್ರಯೋಗಕ್ಕೂ ಬಗ್ಗುತ್ತಿರಲಿಲ್ಲ, ಬೆದರುತ್ತಿರಲಿಲ್ಲ.
ಚಳವಳಿಗೆ ಜನಸಾಮಾನ್ಯರ ಬೆಂಬಲ ಹೇಗಿತ್ತು ಎನ್ನುವುದನ್ನು ತಿಳಿಸುವ ಒಂದು ಸಣ್ಣ ಪ್ರಸಂಗ ಹೀಗಿದೆ: ಮಾಲಗಿತ್ತಿ ಎಂಬ ಸ್ಥಳದಲ್ಲಿ ಒಂದು ಬಹಿರಂಗ ಮೆರವಣಿಗೆ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಸೀತಮ್ಮ ಬಡಿಗೇರ ಎಂಬ ೨೪ರ ಹರೆಯದ ಯುವತಿ ಕುಣಿಯಲು ಪ್ರಾರಂಭಿಸಿದಳು. ಹಣೆಯ ತುಂಬ ಕುಂಕುಮ, ಗಲ್ಲಕ್ಕೆ ಅರಿಶಿಣ ಹಚ್ಚಿಕೊಂಡಿದ್ದ ಆಕೆ ವೀರಗಚ್ಚೆ ಹಾಕಿದ್ದಳು. ಮಹಿಷಾಸುರ ಮರ್ದಿನಿಯಂತೆ ನರ್ತಿಸುತ್ತಿದ್ದ ಆಕೆಯ ಒಂದು ಕೈಯಲ್ಲಿ ತ್ರಿವರ್ಣಧ್ವಜ, ಮತ್ತೊಂದು ಕೈಯಲ್ಲಿ ಕುಡುಗೋಲು. ಆಕೆ ನರ್ತನಕ್ಕೆ ತೊಡಗುತ್ತಿದ್ದಂತೆ ಅಲ್ಲಿದ್ದ ಎಲ್ಲರೂ “ವಂದೇ ಮಾತರಂ’’ ಘೋಷಿಸಲು ಪ್ರಾರಂಭಿಸಿದರು. ಅದೇ ರೀತಿಯ ಮತ್ತೊಂದು ಘಟನೆ: ೧೯೪೬ನೇ ಇಸವಿಯ ಕಾರಹುಣ್ಣಿಮೆಯ ದಿನದಂದು ಕಲ್ಬುರ್ಗಿ ಜಿಲ್ಲೆಯ ಮಹಾಗಾಂವ್ ಗ್ರಾಮದಲ್ಲಿ ನಡೆದ ಘಟನೆ. ಗ್ರಾಮದ ಗ್ರಾಮಸ್ಥರೆಲ್ಲ ಸೇರಿ ಹುಣ್ಣಿಮೆ ಹಬ್ಬವನ್ನು ಆಚರಿಸುತ್ತಿದ್ದರು. ಆ ಸಮಯದಲ್ಲಿ ರಜಾಕಾರರ ದೊಡ್ಡ ಗುಂಪೊAದು ಗ್ರಾಮದ ಮೇಲೆ ದಾಳಿ ಮಾಡಿತು. ಅವರಿಂದ ತಪ್ಪಿಸಿಕೊಳ್ಳಲು ಊರಿನ ಗಂಡಸರೆಲ್ಲ ಊರಿನ ಒಂದು ಕಡೆಗೆ ಓಡಿದಾಗ, ರಜಾಕಾರರು ಊರಿಗೆ ನುಗ್ಗಿ ಮನೆಗಳನ್ನು ಲೂಟಿ ಮಾಡತೊಡಗಿದರು, ಮಹಿಳೆಯರ ಮೇಲೆ ಅತ್ಯಾಚಾರಕ್ಕೂ ಪ್ರಯತ್ನಿಸಿದರು. ತಕ್ಷಣವೇ ಅಕ್ಕಮ್ಮ ಮಹಾದೇವಿ, ರಟ್ಟಗಲ್ಲ ಸೂಗಮ್ಮ ಮತ್ತು ಹಟ್ಟಿ ಗುರುಬಸವ್ವ ಎಂಬ ಮಹಿಳೆಯರು ಎಲ್ಲ ಮಹಿಳೆಯರಿಗೆ ಮನೆಗಳ ಮಹಡಿ ಏರುವಂತೆ ತಿಳಿಸಿ, ಮೇಲಿನಿಂದ ರಜಾಕಾರರ ಮೇಲೆ ಕವಣೆಯಿಂದ ಕಲ್ಲುಗಳನ್ನು ಬೀಸಿ ಹೊಡೆಯತೊಡಗಿದರು, ಕಾದ ಎಣ್ಣೆಯನ್ನು ಸುರಿದರು. ಇದರಿಂದ ಬೆದರಿದ ರಜಾಕಾರರು ಅಲ್ಲಿಂದ ಪಲಾಯನ ಮಾಡಬೇಕಾಯಿತು.
ರಜಾಕಾರರ ಕ್ರೌರ್ಯದ ಪರಮಾವಧಿಯನ್ನು ನಿದರ್ಶಿಸುವ ಒಂದು ಘಟನೆ: ೧೯೪೮ರ ಮೇ ಮೊದಲ ವಾರದಲ್ಲಿ ರಜಾಕಾರರು ಬೀದರ್ ಜಿಲ್ಲೆಯ ಗೋರ್ಟಾ ಎನ್ನುವ ಗ್ರಾಮದ ಮೇಲೆ ದಾಳಿ ನಡೆಸಿ ಅಲ್ಲಿದ್ದ ೨೦೦ ಹಿಂದುಗಳನ್ನು ಒಟ್ಟಿಗೆ ಕೂಡಿಹಾಕಿ ಬೆಂಕಿಹಚ್ಚಿ ಕೊಂದರು. ಈ ಘಟನೆಯು ದಕ್ಷಿಣಭಾರತದ ಜಲಿಯನ್ ವಾಲಾಬಾಗ್ ದುರಂತವೆAದೇ ಕುಪ್ರಸಿದ್ಧವಾಯಿತು. ಬೀದರ್ ಜಿಲ್ಲೆಯ ಭಾಲ್ಕಿಯ ಹಿರೇಮಠ ಸಂಸ್ಥಾನವು ಗಡಿಭಾಗದಲ್ಲಿ ಸಂತ್ರಸ್ತರಿಗೆ ಆಶ್ರಯ ನೀಡಿತು.
ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ರಜಾಕಾರರು ನಡೆಸಿದ ದೌರ್ಜನ್ಯಗಳ ಅಂಕಿ-ಅAಶಗಳು ಹೀಗಿವೆ:
೧. ಕಲ್ಬುರ್ಗಿ ಜಿಲ್ಲೆಯಲ್ಲಿ ೮೭ ಗ್ರಾಮಗಳ ಮೇಲೆ ದಾಳಿ, ೪೨ ಕೊಲೆ, ೩೬ ದರೋಡೆ ಹಾಗೂ ೩೪ ಮಹಿಳೆಯರ ಮೇಲೆ ಅತ್ಯಾಚಾರ.
೨. ಬೀದರ್ ಜಿಲ್ಲೆಯಲ್ಲಿ ೧೭೬ ಗ್ರಾಮಗಳ ಮೇಲೆ ದಾಳಿ, ೧೨೦ ಕೊಲೆ ಹಾಗೂ ೨೩ ಮಹಿಳೆಯರ ಮೇಲೆ ಅತ್ಯಾಚಾರ.
೩. ರಾಯಚೂರು ಜಿಲ್ಲೆಯಲ್ಲಿ ೯೪ ಗ್ರಾಮಗಳ ಮೇಲೆ ದಾಳಿ, ೨೫ ಕೊಲೆ ಹಾಗೂ ೬೩ ಮಹಿಳೆಯರ ಅತ್ಯಾಚಾರ.
ನಿಜಾಮ್ ರಾಜ್ಯದ ಎಕ್ಸಿಕ್ಯುಟಿವ್ ಕೌನ್ಸಿಲ್ ಸದಸ್ಯ ಜೆ.ವಿ. ಜೋಷಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ತಮ್ಮ ರಾಜೀನಾಮೆಯ ಪತ್ರದಲ್ಲಿ, ರಾಜ್ಯದ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಭಗ್ನಗೊಂಡಿದೆ,
ಲೂಟಿ, ಅಗ್ನಿಕಾಂಡ, ಕೊಲೆ, ಮಹಿಳೆಯರ ಮೇಲಿನ ಅತ್ಯಾಚಾರ ಮುಂತಾದ ದುರ್ವ್ಯವಹಾರಗಳಲ್ಲಿ ರಜಾಕಾರರೊಡನೆ ಪೊಲೀಸರೂ ಅನೇಕ ಕಡೆ ಕೈಜೋಡಿಸಿದ್ದಾರೆ. ಹೀಗಾಗಿ ಹಿಂದುಗಳು ದಿಕ್ಕೆಟ್ಟವರಾಗಿ ರಾಜ್ಯದ ಹೊರಗೆ ರಕ್ಷಣೆ ಪಡೆದಿದ್ದಾರೆ – ಎಂದವರು ತಿಳಿಸಿದ್ದರು. ಅವರ ಪ್ರತ್ಯಕ್ಷ ಮಾತುಗಳು ಹೀಗಿವೆ (ಆಧಾರ: ವಿ.ಪಿ. ಮೆನನ್ ಅವರ ‘ದಿ ಸ್ಟೋರಿ ಆಫ್ ದಿ ಇಂಟೆಗ್ರೇಷನ್ ಆಫ್ ದಿ ಇಂಡಿಯನ್ ಸ್ಟೇಟ್ಸ್’):
“ಪರಭಣಿ ಮತ್ತು ನಾಂದೇಡ್ ಜಿಲ್ಲೆಗಳಲ್ಲಿ ಭಯದ ಭೂತನೃತ್ಯ ಸಾಗಿದೆ. ಲೋಹಾ ಗ್ರಾಮದಲ್ಲಿ ಬ್ರಾಹ್ಮಣರನ್ನು ಕೊಂದು ಅವರ ಕಣ್ಣುಗಳನ್ನು ಕಿತ್ತುಹಾಕಿರುವ, ಸ್ತಿçÃಯರ ಮೇಲೆ ಅತ್ಯಾಚಾರ ನಡೆಸಿ ಅಸಂಖ್ಯಾತ ಮನೆಗಳಿಗೆ ಬೆಂಕಿಕೊಟ್ಟಿರುವ ಭೀಕರ ನಾಶದ ದೃಶ್ಯವನ್ನು ಕಣ್ಣಾರೆ ಕಂಡ ನನ್ನ ಹೃದಯ ಹೊತ್ತಿ ಉರಿಯುತ್ತಿದೆ.”
“ಅಲ್ಲಿನ ಉಗ್ರಗಾಮಿಗಳ ಅತ್ಯಾಚಾರಗಳು ಕೇವಲ ಕಾಂಗ್ರೆಸ್ಸಿಗರು ಅಥವಾ ಹಿಂದುಗಳ ವಿರುದ್ಧವಾಗಿ ಮಾತ್ರ ಆಗಿರದೆ, ತಮ್ಮನ್ನು ಬೆಂಬಲಿಸದಿದ್ದ ಮುಸಲ್ಮಾನರ ಮೇಲೂ ಜರುಗಿವೆ. ಕಾಂಗ್ರೆಸ್ ಸಂಸ್ಥೆಯ ಮೇಲೆ ಬಹಿಷ್ಕಾರ ಘೋಷಿಸಲಾಗಿದೆಯಲ್ಲದೆ ೧೦,೦೦೦ ಕಾಂಗ್ರೆಸ್ಸಿಗರನ್ನೂ ಕಾರಾಗೃಹಕ್ಕೆ ತಳ್ಳಲಾಗಿದೆ.”
“ಅತ್ಯಂತ ಕ್ಷೋಭಾಕರ ಸಂಗತಿಯೆAದರೆ, ರಜಾಕಾರರು ಕಮ್ಯುನಿಸ್ಟರ ಜೊತೆ ಕೈಜೋಡಿಸಿದ್ದಾರೆ. ೧೯೪೩ರಲ್ಲಿ ನಿಜಾಮರು ಆ ಪಕ್ಷವನ್ನು ನಿರ್ಬಂಧಿಸಿದ್ದರು. ಈಗ ಅದನ್ನು ಸಡಿಲಿಸಲಾಗಿದೆಯಲ್ಲದೆ ಅವರಿಗೆ ಆಯುಧಗಳ ಸರಬರಾಜು ಮಾಡಲಾಗಿದೆಯೆಂದೂ ನಮಗೆ ತಿಳಿದುಬಂದಿದೆ.”
“ಹೈದರಾಬಾದ್ ಪ್ರಾಂತದೊಳಕ್ಕೆ ಶಸ್ತçಗಳು ಹಾಗೂ ಮದ್ದುಗುಂಡುಗಳನ್ನು ಕದ್ದೊಯ್ಯುವ ಪ್ರಯತ್ನಗಳೂ ಸಾಗಿವೆ. ಆಸ್ಟೆçÃಲಿಯಾ ನಿವಾಸಿ ಸಿಡ್ನಿ ಕಾಟನ್, ಕರಾಚಿಯ ತನ್ನ ನೆಲೆಯಿಂದ ಬಂದೂಕುಗಳ ರವಾನೆ ಮಾಡುತ್ತಿದ್ದಾನೆಂಬ ಸುದ್ದಿಯೂ ಬಂದಿತ್ತು. ಬೀದರ್ ಮತ್ತು ವಾರಂಗಲ್ ವಿಮಾನನಿಲ್ದಾಣಗಳಲ್ಲಿ ಕತ್ತಲಾದ ಮೇಲೆ ಬಂದೂಕುಗಳನ್ನು ಇಳಿಸಿಕೊಳ್ಳಲಾಗುತ್ತಿತ್ತು.”
ಪಟೇಲರ ದಿಟ್ಟ ನಿರ್ಧಾರ
ಭಾರತದೊಡನೆ ವಿಲೀನಗೊಳ್ಳುವ ನೀತಿ ನಿಯಮಾವಳಿಗಳ ಸಂಬAಧವಾಗಿ ಭಾರತದ ಸರ್ಕಾರವು ನಿಜಾಮನಿಗೆ ರಿಯಾಯಿತಿಯ ಮೇಲೆ ರಿಯಾಯಿತಿ ನೀಡಿದಷ್ಟೂ ಅವನ ಆಕ್ರಮಕ ನಿಲವು ಹೆಚ್ಚುಹೆಚ್ಚಾಗುತ್ತಲೇ ಹೋಯಿತು; ಕೆಲವು ಬ್ರಿಟಿಷ್ ಪತ್ರಿಕೆಗಳು ಹಾಗೂ ಅಲ್ಲಿನ ರಾಜಕೀಯ ನಾಯಕರು ಸಹ ಸ್ವತಂತ್ರ ರಾಜ್ಯವಾಗಿ ಉಳಿಯುವ ಆತನ ಆಕಾಂಕ್ಷೆಗೆ ಎಣ್ಣೆ ಸುರಿಯುತ್ತಲೇ ಹೋದರು. ಹೈದರಾಬಾದ್ ಮತ್ತು ಭಾರತದ ಮಧ್ಯೆ ಎದ್ದಿರುವ ವಿವಾದಗಳನ್ನು ಪರಿಹರಿಸಿಕೊಳ್ಳಲು ಸಂಯುಕ್ತ ರಾಷ್ಟç ಸಂಘದ ಮಧ್ಯಸ್ಥಿಕೆಯನ್ನು ಕೋರುವುದಾಗಿ ರಾಜ್ಯದ ಪ್ರಧಾನಿ ಲಯೀಕ್ ಆಲಿ ಘೋಷಿಸಿದನು. ಪಾಕಿಸ್ತಾನವೂ ಹೈದರಾಬಾದಿಗೆ ಸಹಾಯ ನೀಡಲಾರಂಭಿಸಿತು. ಪಾಕಿಸ್ತಾನದಿಂದ ಅಪಾರ ಪ್ರಮಾಣದ ಶಸ್ತಾçಸ್ತç ಬಂದಿಳಿಯಿತು, ಅದನ್ನು ರಜಾಕಾರರ ಸೇನೆಗೆ ಮತ್ತು ಪೊಲೀಸರಿಗೆ ಹಂಚಲಾಯಿತು. ವಿವಿಧ ಪ್ರದೇಶಗಳಿಂದ ಮುಸ್ಲಿಮರು ಹೈದರಾಬಾದಿಗೆ ಬರತೊಡಗಿದರು. ಹೀಗೆ ಮುಸಲ್ಮಾನರ ಸಂಖ್ಯೆ ಹೆಚ್ಚುತ್ತಿದ್ದಂತೆ ಹಿಂದುಗಳ ಮೇಲಿನ ಅತ್ಯಾಚಾರ, ಕೊಲೆಗಳು ಮತ್ತು ಮತಾಂತರ ಹೆಚ್ಚುತ್ತಾ ಹೋಯಿತು. ಇಷ್ಟಾದರೂ ನೆಹರೂ ಶಾಂತಿ ಮಂತ್ರವನ್ನೇ ಜಪಿಸುತ್ತಿದ್ದರು; ಒಪ್ಪಂದದ ಮೂಲಕ, ಪತ್ರಗಳ ಮೂಲಕ ನಿಜಾಮನ ಮನವೊಲಿಸಲು ಪ್ರಯತ್ನಿಸುತ್ತಿದ್ದರು. ಭಾರತ ಸರ್ಕಾರದ ಪ್ರತಿನಿಧಿಯಾಗಿ ಕೆ.ಎಂ. ಮುನ್ಷಿಯವರು ಹೈದರಾಬಾದ್ ಸಂಸ್ಥಾನದೊಡನೆ ಮಾತುಕತೆ ನಡೆಸಿದರು.
ನಿಜಾಮನ ವಿರುದ್ಧ ದೃಢಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ದಾರ್ ಪಟೇಲರು ಅನೇಕ ಸಲ ಒತ್ತಾಯಿಸಿದ್ದರು. ರಾಜ್ಯ ಕಾರ್ಯದರ್ಶಿ ವಿ.ಪಿ. ಮೆನನ್ನರ ಮೂಲಕ ಎಚ್ಚರಿಕೆಯನ್ನೂ ನೀಡಲಾಯಿತು. ಆದರೆ ಮೌಂಟ್ಬ್ಯಾಟನ್ನರು ಮಾತ್ರ ಪ್ರತಿಸಲವೂ ಇನ್ನೂ ಹೆಚ್ಚಿನ ಸವಲತ್ತುಗಳನ್ನು ನೀಡಿ ನಿಜಾಮನ ಮನವೊಲಿಸಬೇಕೆಂದು ಹೇಳುತ್ತ ಸಮಯ ಕಳೆಯುತ್ತಿದ್ದರು. ಕೇಂದ್ರ ಸರ್ಕಾರವು ಹೈದರಾಬಾದ್ ವಿರುದ್ಧ ಕ್ರಮಕೈಗೊಂಡರೆ ಕೋಮು ದಂಗೆಗಳು ದೇಶದಾದ್ಯಂತ ಸಿಡಿದೇಳುವುದೆಂಬ ಗುಮ್ಮನನ್ನು ಕೇಂದ್ರ ಸರ್ಕಾರದ ಕೆಲವು ಕುಹಕ ಸಲಹೆಗಾರರು ನಿರ್ಮಿಸಿದ್ದರು. ಹೈದರಾಬಾದಿನಲ್ಲಿ ಹಿಂದುಗಳೂ, ಉಳಿದೆಡೆ ಮುಸಲ್ಮಾನರೂ ಮಾರಣಹೋಮಕ್ಕೊಳಗಾಗುತ್ತಾರೆ; ದಕ್ಷಿಣಭಾರತದ ಮುಸಲ್ಮಾನರು, ಅದರಲ್ಲೂ ಮೋಪ್ಳಾಗಳು ಸಿಡೆದೇಳುತ್ತಾರಲ್ಲದೆ ಪಾಕಿಸ್ತಾನವೂ ಮಧ್ಯೆ ತಲೆ ಹಾಕಬಹುದೆಂದೂ ಅವರು ಸುದ್ದಿ ಹಬ್ಬಿಸಿದ್ದರು. ದೆಹಲಿಗೆ ಭೇಟಿ ನೀಡಿದ ಕಾಸಿಂ ರಜ್ವಿ ಪಟೇಲರನ್ನು ಹೆದರಿಸಲು ಈ ರೀತಿ ಹೇಳಿಕೆ ನೀಡಿದ: “ಭಾರತದ ಸೇನೆ ಹೈದರಾಬಾದಿಗೆ ಕಾಲಿಟ್ಟರೆ ಕಟ್ಟಕಡೆಯ ವ್ಯಕ್ತಿ ಇರುವವರೆಗೂ ಹೋರಾಡಿ ಮಡಿಯುತ್ತೇವೆ.” ಅದಕ್ಕೆ ಉಕ್ಕಿನ ಮನುಷ್ಯ ಸರ್ದಾರ್ ಪಟೇಲರು ಪ್ರತಿಕ್ರಿಯಿಸಿದ್ದು ಹೀಗೆ: “ಆತ್ಮಹತ್ಯೆ ಮಾಡಿಕೊಳ್ಳಲೇಬೇಕೆಂದು ನೀವು ನಿರ್ಧರಿಸಿದ್ದರೆ ನಿಮ್ಮನ್ನಾರು ತಾನೆ ತಡೆಯಬಲ್ಲರು?”.
ಹೈದರಾಬಾದಿನ ವಿರುದ್ಧ ಕಡೆಗೂ ದೃಢ ಕ್ರಮ ಕೈಗೊಳ್ಳಲು ಪಟೇಲರಿಗೆ ಸಾಧ್ಯವಾದದ್ದು, ಮೌಂಟ್ಬ್ಯಾಟನ್ನರು ದೇಶದಿಂದ ಹೊರನಡೆದು ರಾಜಾಜಿಯೆಂದೇ ಪ್ರಸಿದ್ಧರಾದ ಚಕ್ರವರ್ತಿ ರಾಜಗೋಪಾಲಚಾರಿಯವರು ಗವರ್ನರ್-ಜನರಲ್ ಹುದ್ದೆಯನ್ನು ವಹಿಸಿಕೊಂಡ ನಂತರವೇ – ೨೧.೬.೧೯೪೮ರ ನಂತರವೇ.
ಮೌಂಟ್ಬ್ಯಾಟನ್ನರ ಸಲಹೆಯಂತೆ ನಿಜಾಮನಿಗೆ ಯೋಚಿಸಲು ಹೆಚ್ಚಿನ ಸಮಯ ನೀಡಿದ ಅವಧಿಯಲ್ಲಿ ಪಟೇಲರು ಸುಮ್ಮನೆ ಕಾಯುತ್ತಾ ಕೂರಲಿಲ್ಲ. ಅವರು ಒರಿಸ್ಸಾದ ೨೬ ಸಣ್ಣ ಸಂಸ್ಥಾನಗಳನ್ನು ಭಾರತದೊಡನೆ ವಿಲೀನಗೊಳಿಸಿದರು ಮತ್ತು ಹೈದರಾಬಾದ್ ಸಂಸ್ಥಾನದ ಕೆಲವು ಭಾಗಗಳನ್ನೂ ಭಾರತಕ್ಕೆ ಸೇರಿಸಿದರು. ಹೈದರಾಬಾದಿನ ಅಕ್ಕಪಕ್ಕದ ರಾಜ್ಯಗಳ ಮೇಲೆ ದಾಳಿ ಮಾಡುತ್ತಿದ್ದ ರಜಾಕಾರರ ಮೇಲೂ ಉಗ್ರ ಕ್ರಮಗಳನ್ನು ಕೈಗೊಂಡರು. ಪಟೇಲರ ಕೃತ್ಯಗಳಿಂದ ಕುಪಿತರಾದ ನೆಹರೂರವರು ಸಂಸತ್ತಿನಲ್ಲಿ “ಪಟೇಲರೆ! ನೀವು ಕೋಮುವಾದಿ, ನಿಮ್ಮ ನಿರ್ಧಾರಗಳಿಗೆ ನನ್ನ ಸಮ್ಮತಿಯಿಲ್ಲ” ಎಂದು ವಾಗ್ದಾಳಿ ಮಾಡಿದರು. ದೇಶದ ಭವಿಷ್ಯದ ಹಿತದೃಷ್ಟಿಯಿಂದ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದ ಪಟೇಲರಿಗೆ ನೆಹರೂರವರ ಮಾತುಗಳಿಂದ ಬಹಳ ನೋವಾಯಿತು, ಅವರು ಅಲ್ಲಿಂದ ಹೊರನಡೆದರು. ಪಟೇಲರಿಗೆ ಆಗಿದ್ದ ನೋವನ್ನು ಮತ್ತು ಈ ಸಮಯದಲ್ಲಿ ಪಟೇಲರ ನೇತೃತ್ವದ ಅತ್ಯಗತ್ಯತೆಯನ್ನು ಚೆನ್ನಾಗಿ ಅರಿತಿದ್ದ ರಾಜಾಜಿಯವರು ಪಟೇಲರ ಮನವೊಲಿಸಿ ಮತ್ತೆ ಕಾರ್ಯಪ್ರವೃತ್ತರಾಗುವಂತೆ ಮಾಡಿದರು. ಹೈದರಾಬಾದನ್ನು ಸ್ವತಂತ್ರವಾಗಿ ಉಳಿಯಲು ಬಿಟ್ಟರೆ, ಭಾರತದ ಸಾರ್ವಭೌಮತ್ವಕ್ಕೆ ಪೆಟ್ಟು ಬೀಳಲಿದೆ ಎನ್ನುವುದನ್ನು ನೆಹರೂರವರಿಗೆ ಹೇಳಲು ಪಟೇಲರು ಮರೆಯಲಿಲ್ಲ.
೧೯೪೮ರ ಸೆಪ್ಟೆಂಬರ್ ೧೨ರಂದು ಪ್ರಧಾನಿ ಜವಾಹರಲಾಲ್ ಹೈದರಾಬಾದಿನ ಸಮಸ್ಯೆಯ ಪರಿಹಾರಕ್ಕಾಗಿ ಸಭೆ ಕರೆದರು. ಆ ಸಭೆಯಲ್ಲಿ ಪ್ರಧಾನಿ ನೆಹರೂ, ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್, ರಕ್ಷಣಾ ಮಂತ್ರಿ ಬಲದೇವ್ಸಿಂಗ್, ಗೋಪಾಲಸ್ವಾಮಿ ಅಯ್ಯಂಗಾರ್, ಜನರಲ್ ಬುಕರ್, ಜನರಲ್ ಕಾರಿಯಪ್ಪ ಇದ್ದರು. ಬ್ರಿಟಿಷ್ ಸೈನ್ಯಾಧಿಕಾರಿಯಾಗಿದ್ದ ಜನರಲ್ ಬುಕರ್ ಹೈದರಾಬಾದ್ ಮೇಲೆ ಸಶಸ್ತç ಕ್ರಮ ತೆಗೆದುಕೊಳ್ಳುವುದನ್ನು ವಿರೋಧಿಸಿದ. ಸಶಸ್ತç ಕ್ರಮ ತೆಗೆದುಕೊಳ್ಳುವುದೇ ಆದರೆ, ತಾನು ರಾಜೀನಾಮೆ ಕೊಡುವುದಾಗಿ ಹೆದರಿಸಿದ. ನೆಹರೂ ಅವರಿಗೆ ದಿಕ್ಕೇ ತೋಚಲಿಲ್ಲ. ಬ್ರಿಟಿಷರ ಸಹಾಯವಿಲ್ಲದೆ ಯಾವ ಕೆಲಸವೂ ಸಾಧ್ಯವಿಲ್ಲವೆನ್ನುವುದು ನೆಹರುರವರ ಅಭಿಪ್ರಾಯವಾಗಿತ್ತು. ಅವರು ಏನು ಮಾಡಬೇಕೆಂದು ತೋಚದೆ ಚಿಂತಾಕ್ರಾAತರಾದಾಗ, ಸರ್ದಾರ್ ಪಟೇಲರು ಗುಡುಗಿದರು: “ಜನರಲ್ ಬುಕರ್, ನೀವು ರಾಜೀನಾಮೆ ಕೊಡಬಹುದು. ನಾಳೆಯಿಂದಲೇ ಪೊಲೀಸ್ ಕ್ರಮ ತೆಗೆದುಕೊಳ್ಳುತ್ತಿದ್ದೇವೆ!”
ಕಟ್ಟಕಡೆಗೆ ಈ ವಿಡಂಬನೆಗೆ ತೆರೆ ಎಳೆಯಲು ಭಾರತೀಯ ಸೈನ್ಯಕ್ಕೆ ಹೈದರಾಬಾದ್ ಪ್ರವೇಶಿಸಬೇಕೆಂದು ಭಾರತ ಸರ್ಕಾರ ೧೯೪೮ರ ಅಕ್ಟೋಬರ್ ೧೩ರಂದು ಆದೇಶ ನೀಡಿತು. ಈ ಆಜ್ಞೆ ಹೊರಬಿದ್ದ ಮೇಲೂ ಅಕ್ಟೋಬರ್ ೧೫ರವರೆಗೆ ಹೇಗಾದರೂ ಆ ಕ್ರಮ ಜಾರಿಯಾಗದಂತೆ ತಡೆಯಲು ಎಡಬಿಡದ ಪ್ರಯತ್ನ ನಡೆದಿತ್ತು. ಸೈನ್ಯವು ಒಳನುಗ್ಗುವ ಮುಹೂರ್ತವನ್ನು ಮುಂದೂಡಲು ನಡೆದಿದ್ದ ಒಳಸಂಚು ಸೇನಾ ಕಾರ್ಯಾಚರಣೆಯ ಮೊದಲ ದಿನವೇ ಬಟ್ಟಬಯಲಾದುದನ್ನು ವಿ.ಪಿ. ಮೆನನ್ನರ ಬರಹಗಳು ಹೊರಗೆಡಹುತ್ತವೆ: “ಹೈದರಾಬಾದ್ಗೆ ಒಳನುಗ್ಗಿದ ಸೇನೆಯು ಮಾಡಿದ ಮೊದಲ ಕೆಲಸವೆಂದರೆ, ೧೯೪೭ರ ಆಗಸ್ಟ್ನಿಂದಲೂ ಹೈದರಾಬಾದ್ ಸೈನ್ಯದಲ್ಲಿ ನಿಯುಕ್ತಿಗೊಂಡಿದ್ದ, ಮಾಜಿ ಬ್ರಿಟಿಷ್ ಕಮಾಂಡರ್ ಹಾಗೂ ವಿಶೇಷ ಸೇನಾಧಿಕಾರಿ ಲೆಫಿû್ಟನೆಂಟ್ ಟಿ.ಟಿ. ಮೂರ್ರವರನ್ನು ಬಂಧಿಸಿದ್ದು. ಆತ ಶಸ್ತಾçಸ್ತç ತುಂಬಿದ ಜೀಪ್ನಲ್ಲಿ ನಲದುರ್ಗದ ಕಡೆಗೆ ಧಾವಿಸುತ್ತಿದ್ದ. ಜೊತೆಗೆ ಹಾದಿಯಲ್ಲಿನ ವಿವಿಧ ಸೇತುವೆಗಳನ್ನು ವಿಧ್ವಂಸಗೊಳಿಸಲು ಅವನಿಗೆ ಜವಾಬ್ದಾರಿ ನೀಡಿದ್ದ ಸರ್ಕಾರಿ ಆಜ್ಞಾಪತ್ರವೂ ಆತನಲ್ಲಿತ್ತು. ಭಾರತ ಸೇನೆಯು ೧೩ರ ಬದಲಿಗೆ ಆಗಸ್ಟ್ ೧೫ರಂದು ಒಳನುಗ್ಗುವುದೆಂದು ಭಾವಿಸಿದ ಹೈದರಾಬಾದ್ ಸೇನಾ ಕೇಂದ್ರವು ನಲದುರ್ಗ ಮತ್ತು ಇನ್ನೂ ಕೆಲವು ಸೇತುವೆಗಳನ್ನೂ ತುರ್ತಾಗಿ ಧ್ವಂಸಗೊಳಿಸಲು ಆತನನ್ನು ನಿಯೋಜಿಸಿತ್ತು. ದಿನಾಂಕ ೧೩ರ ಬದಲಿಗೆ ೧೫ರಂದು ಭಾರತ ಸೈನ್ಯ ಒಳನುಗ್ಗಿದ್ದಲ್ಲಿ ಆ ಸಮಯಕ್ಕೆ ಮುಖ್ಯವಾದ ಸೇತುವೆಗಳೆಲ್ಲಾ ಧ್ವಂಸವಾಗಿರುತ್ತಿದ್ದವು. ಪ್ರಕೃತಿಯಿಂದಲೂ ಅಡೆತಡೆಗಳುಂಟಾಗುತ್ತಿತ್ತು. ಅದು ಮಳೆಗಾಲ, ಪ್ರಚಂಡ ಮಳೆ ಸುರಿಯುತ್ತಿದ್ದುದರಿಂದ, ರಸ್ತೆಗಳು ನೀರಿನಲ್ಲಿ ಮುಳುಗಿಹೋಗಿ ಭಾರಿ ತೂಕದ ಸೈನಿಕ ವಾಹನಗಳೆಲ್ಲವೂ ಅಲ್ಲಲ್ಲೇ ನಿಂತು ಬಿಡಬೇಕಾಗಿತ್ತು.”
ಸರ್ದಾರ್ ಪಟೇಲರ ಆದೇಶದಂತೆ ಸೆಪ್ಟೆಂಬರ್ ೧೩ರಂದು ಭಾರತೀಯ ಸೇನೆ ಹೈದರಾಬಾದ್ ವಿಮೋಚನಾ ಕಾರ್ಯಕ್ಕೆ ಕಾಲಿಟ್ಟಿತು. ಸೈನಿಕ ಕಾರ್ಯಾಚರಣೆ ಆರಂಭವಾದ ನಾಲ್ಕೂವರೆ ದಿನಗಳೊಳಗಾಗಿ ಹೈದರಾಬಾದ್ ಸೈನ್ಯ ಶರಣಾಗತವಾಯಿತು. ‘ಆಪರೇಷನ್ ಪೋಲೋ’ ಎಂಬ ಹೆಸರಿನ ಈ ಕಾರ್ಯಾಚರಣೆ ಕೇವಲ ೧೦೮ ಗಂಟೆಗಳಲ್ಲಿ ಮುಗಿಯಿತು; ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ ದಿಟ್ಟ ನಿರ್ಧಾರ ಮತ್ತು ದೂರಗಾಮಿ ಚಿಂತನೆಗಳ ಪರಿಣಾಮವಾಗಿ ಹೈದರಾಬಾದ್ ಸಂಸ್ಥಾನವು ಇತರ ಸಂಸ್ಥಾನಗಳAತೆಯೇ ಭಾರತದೊಡನೆ ವಿಲೀನಗೊಂಡಿತು.