ಆಯೂಬ್ಖಾನರ ಎಲ್ಲ ಯೋಜನೆಗಳೂ ವಿಫಲವಾದ ನಂತರ ಪಾಕಿಸ್ತಾನವು ಯುದ್ಧವನ್ನು ನಿಲ್ಲಿಸುವುದಕ್ಕಾಗಿ ಹಾತೊರೆಯಿತು. ಭಾರತೀಯ ಸೈನ್ಯಾಧಿಕಾರಿಗಳು ಯುದ್ಧವನ್ನು ನಿಲ್ಲಿಸದಂತೆ ಸರ್ಕಾರವನ್ನು ವಿನಂತಿಸಿದರು. ಆದರೆ, ಭಾರತ ಸರ್ಕಾರದ ಮೇಲೆ ಯುದ್ಧವನ್ನು ನಿಲ್ಲಿಸುವಂತೆ ಎಲ್ಲೆಡೆಯಿಂದ ಒತ್ತಡ ಬರಲಾರಂಭಿಸಿತು. ಸೆಪ್ಟೆಂಬರ್ ೨೩ರಂದು ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಕದನವಿರಾಮವನ್ನು ಘೋಷಿಸಲಾಯಿತು – ೨೨ ದಿನಗಳ ಯುದ್ಧ ಕೊನೆಗೊಂಡಿತ್ತು. ೧೯೬೬ರ ಜನವರಿಯಲ್ಲಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಮತ್ತು ಪಾಕಿಸ್ತಾನದ ಸರ್ವಾಧಿಕಾರಿ ಆಯೂಬ್ಖಾನರನ್ನು ಸಂಧಾನಕ್ಕಾಗಿ ಆಮಂತ್ರಿಸಲಾಯಿತು. ೧೯೬೬ರ ಜನವರಿ ೧೦ರಂದು ತಾಷ್ಕೆಂಟಿನಲ್ಲಿ ಈರ್ವರು ನಾಯಕರೂ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು.

೧೯೪೮ರಲ್ಲಿ ಕಾಶ್ಮೀರವನ್ನು ಕಬಳಿಸಲು ಯತ್ನಿಸಿ ವಿಫಲವಾದ ಪಾಕಿಸ್ತಾನ ತನ್ನ ದುರಾಸೆಗೆ ಇತಿಶ್ರೀ ಹಾಡಲಿಲ್ಲ. ಹೇಗಾದರೂ ಮಾಡಿ ಕಾಶ್ಮೀರವನ್ನು ಕಬಳಿಸಲೇಬೇಕೆಂಬ ಹಠಕ್ಕೆ ಬಿದ್ದಿದ್ದ ಆ ದೇಶದ ನಾಯಕರು ಸೂಕ್ತ ಸಮಯಕ್ಕಾಗಿ ಹೊಂಚುಹಾಕಿ ಕಾಯುತ್ತಿದ್ದರು ಮತ್ತು ಆ ನಿಟ್ಟಿನಲ್ಲಿ ತಯಾರಿಯನ್ನೂ ನಡೆಸಿದ್ದರು. ಪಾಕಿಸ್ತಾನವು ತನ್ನ ಧೂರ್ತಯೋಜನೆಯನ್ನು ಮತ್ತೊಮ್ಮೆ ಕಾರ್ಯರೂಪಕ್ಕಿಳಿಸಿದ್ದು ೧೯೬೫ರಲ್ಲಿ. ಅದರ ಪರಿಣಾಮವಾಗಿ ನಡೆದದ್ದೇ ದ್ವಿತೀಯ ಭಾರತ-ಪಾಕ್ ಯುದ್ಧ.
ಅಂದಿನ ಪರಿಸ್ಥಿತಿಯ ಅವಲೋಕನ
೧೯೬೨ರ ಭಾರತ-ಚೀನಾ ಯುದ್ಧದಲ್ಲಿ ಭಾರತವು ಸೋತ ಪರಿಣಾಮವಾಗಿ ಜಗತ್ತಿನ ಮುಂದೆ ಭಾರತ ತಲೆ ತಗ್ಗಿಸುವಂತಾಗಿತ್ತು, ಭಾರತದ ಸ್ಥಾನಮಾನ ಪಾತಾಳಕ್ಕಿಳಿದಿತ್ತು, ಸೈನ್ಯದ ಆತ್ಮವಿಶ್ವಾಸವು ಕುಸಿದಿತ್ತು. ಚೀನಾದ ಆಕ್ರಮಣವನ್ನು ವಿಶ್ವಾಸದ್ರೋಹವೆಂದೇ ಪರಿಗಣಿಸಿದ ಪ್ರಧಾನಿ ಜವಾಹರಲಾಲ್ ನೆಹರೂ ಅವರು ತೀವ್ರ ಆಘಾತಕ್ಕೊಳಗಾಗಿದ್ದರು ಮತ್ತು ಅದರಿಂದ ಚೇತರಿಸಿಕೊಳ್ಳಲೇ ಇಲ್ಲ, ೧೯೬೪ರ ಮೇ ೨೭ರಂದು ಆ ಕೊರಗಿನಲ್ಲೇ ಕೊನೆಯುಸಿರೆಳೆದರು. ನೆಹರೂ ಅವರ ಉತ್ತರಾಧಿಕಾರಿಯಾಗಿ ಲಾಲಬಹಾದುರ್ ಶಾಸ್ತ್ರಿಯವರು ಜೂನ್ ೧೯೬೪ರಂದು ಅಧಿಕಾರ ವಹಿಸಿಕೊಂಡರು. ಕಾಂಗ್ರೆಸ್ಸಿನ ಅದ್ವಿತೀಯ ನಾಯಕರಾಗಿದ್ದ ನೆಹರೂ ಅವರ ಹಠಾತ್ ನಿರ್ಗಮನದಿಂದಾಗಿ ಕಾಂಗ್ರೆಸ್ ಪಕ್ಷದೊಳಗೆ ಅಧಿಕಾರಕ್ಕಾಗಿ ಪ್ರಾರಂಭವಾದ ಆಂತರಿಕ ಕಚ್ಚಾಟಗಳು ಸರ್ಕಾರದ ಮೇಲೂ ಪರಿಣಾಮ ಬೀರಿದವು. ಇದರ ಪರಿಣಾಮವಾಗಿ ಸೌಮ್ಯಸ್ವಭಾವದ ಶಾಸ್ತ್ರಿಯವರಿಗೆ ಆಡಳಿತದ ಮೇಲೆ ಹಿಡಿತ ಸಾಧಿಸುವುದು ಕಠಿಣವಾಯಿತು. ಇದರ ಜೊತೆಗೆ ದೇಶದ ಆರ್ಥಿಕತೆಯೂ ಕುಸಿಯುತ್ತಿತ್ತು, ಆಹಾರ ಪರಿಸ್ಥಿತಿ ಹದಗೆಟ್ಟಿತ್ತು. ಭಾಷಾವಾರು ಪ್ರಾಂತಗಳ ರಚನೆಯ ಪರಿಣಾಮವಾಗಿ ದೇಶಾದ್ಯಂತ ಪ್ರಾದೇಶಿಕ ಹಾಗೂ ಭಾಷಿಕ ಗಲಭೆಗಳು ಎದ್ದಿದ್ದವು.
ಇತ್ತ ಕಾಶ್ಮೀರದ ರಾಜಕೀಯದಲ್ಲೂ ಸ್ಥಿತ್ಯಂತರಗಳಾದವು. ೧೯೫೦ರಲ್ಲಿ ನಡೆದ ಮೊಟ್ಟಮೊದಲ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿದ ಶೇಖ್ ಅಬ್ದುಲ್ಲಾ ಅವರಿಗೂ ಮತ್ತು ಪ್ರಧಾನಿ ನೆಹರೂ ಅವರಿಗೂ ಈಗ ಮನಸ್ತಾಪಗಳುಂಟಾಗಿ ಭಾರತ ಸರ್ಕಾರವು ಶೇಖ್ ಅಬ್ದುಲ್ಲಾರನ್ನು ಬಂಧಿಸಿ ಅನೇಕ ವರ್ಷಗಳ ಕಾಲ ಸೆರೆಯಲ್ಲಿಡಬೇಕಾಯಿತು. ಈ ಸಮಯದಲ್ಲಿ ಅಧಿಕಾರಕ್ಕೇರಿದ ಬಕ್ಷಿ ಗುಲಾಂ ಮೊಹಮ್ಮದ್ ಅವರ ಸರ್ಕಾರವು ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿ, ಭ್ರಷ್ಟಾಚಾರದ ಆರೋಪಗಳಿಗೆ ಗುರಿಯಾಯಿತು. ಇದೆಲ್ಲದರ ಪರಿಣಾಮವಾಗಿ ಕಾಶ್ಮೀರದಲ್ಲಿ ಅಸಮಾಧಾನ ಹೊಗೆಯಾಡತೊಡಗಿತ್ತು ಮತ್ತು ಗಲಭೆಗಳೆಗೆ ಕಾರಣವಾಯಿತು.
ಒಟ್ಟಿನಲ್ಲಿ ದೇಶವು ಅರಾಜಕತೆಯತ್ತ ಸಾಗುತ್ತಿತ್ತು.
ಪಾಕಿಸ್ತಾನದ ಸ್ಥಿತಿಗತಿ
ಭಾರತದ ಪರಿಸ್ಥಿತಿ ಹೀಗಿರಬೇಕಾದರೆ, ಪಾಕಿಸ್ತಾನದ ಆರ್ಥಿಕತೆ ಉತ್ತಮಗೊಳ್ಳುತ್ತಿತ್ತು. ೧೯೪೮ರ ಯುಧ್ಧದ ನಂತರದಲ್ಲಿ ಪಾಕಿಸ್ತಾನವು ತನ್ನ ರಕ್ಷಣಾ ಪಡೆಗಳ ಬಲವನ್ನು ಹೆಚ್ಚಿಸಿಕೊಳ್ಳುವತ್ತ ವಿಶೇಷ ಗಮನ ನೀಡತೊಡಗಿತು. ಪಾಕಿಸ್ತಾನವು ಅಮೆರಿಕ ನೇತೃತ್ವದ ಮಧ್ಯಪ್ರಾಚ್ಯ ಒಕ್ಕೂಟ (Central Treaty Organization – CENTO), ದಕ್ಷಿಣ-ಪೂರ್ವ ಏಷಿಯಾ ಸಂಸ್ಥೆ (South-East Asia Treaty Organization – SEATO) ಹಾಗೂ ಉತ್ತರ ಅಟ್ಲಾಂಟಿಕ್ ಒಕ್ಕೂಟ (North Atlantic Treaty Organization – NATO)ಗಳೊಡನೆ ಸೇರಿಕೊಂಡಿತ್ತು. ೧೯೫೪ರಲ್ಲಿ ಪಾಕಿಸ್ತಾನದ ಸರ್ವಾಧಿಕಾರಿ ಫ಼ೀಲ್ಡ್ ಮಾರ್ಷಲ್ ಆಯೂಬ್ಖಾನ್ ಅವರು ಅಮೆರಿಕದೊಂದಿಗೆ ಮಿಲಿಟರಿ ಒಪ್ಪಂದಕ್ಕೆ ಸಹಿ ಹಾಕಿದರು. ಭಾರತವನ್ನು ವಿರೋಧಿಸುತ್ತಿದ್ದ ಅಮೆರಿಕದ ರಾಜ್ಯ ಕಾರ್ಯದರ್ಶಿ ಜಾನ್ ಫ಼ಾಸ್ಟರ್ ಡಲ್ಲೆಸ್ ಅವರು ಪಾಕಿಸ್ತಾನಕ್ಕೆ ಒತ್ತಾಸೆ ನೀಡಿದರು. ಪಾಕಿಸ್ತಾನವು ಅಮೆರಿಕಕ್ಕೆ ರಷ್ಯಾದ ವಿರುದ್ಧದ ಗುರಾಣಿಯಾಗಿ ಕೆಲಸ ಮಾಡತೊಡಗಿತು. ಇದಕ್ಕೆ ಪ್ರತಿಯಾಗಿ ಅಮೆರಿಕವು ಪಾಕಿಸ್ತಾನಕ್ಕೆ ದೊಡ್ಡ ಪ್ರಮಾಣದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನೀಡಿತು.
ಪಾಕಿಸ್ತಾನವು ಮಾಡಿದ ಮತ್ತೊಂದು ಚತುರ ಕೆಲಸವೆಂದರೆ, ಏಷಿಯಾದಲ್ಲಿ ಬೆಳೆಯುತ್ತಿದ್ದ ಭಾರತದ ಪ್ರಭಾವವನ್ನು ಮಸುಕಾಗಿಸಿ ಭಾರತವನ್ನು ಮೂಲೆಗುಂಪು ಮಾಡುವ ಉದ್ದೇಶದಿಂದ ೧೯೬೩ರಲ್ಲಿ ಚೀನಾದೊಂದಿಗೆ ಕೈಜೋಡಿಸಿತು. ಚೀನಾದ ಸ್ನೇಹವನ್ನು ಸಂಪಾದಿಸಲು ತಾನು ೧೯೪೮ರಲ್ಲಿ ಆಕ್ರಮಿಸಿಕೊಂಡಿದ್ದ ಕಾಶ್ಮೀರದ ಭಾಗವಾದ ಶಕ್ಸ್ಗಮ್ ಕಣಿವೆ ಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿತು. ಪಾಕಿಸ್ತಾನದ ಮುಖ್ಯಭಾಗದಿಂದ ಬಹುದೂರವಿದ್ದ ಈ ಪ್ರದೇಶದಿಂದ ಪಾಕಿಸ್ತಾನಕ್ಕೆ ಹೆಚ್ಚಿನ ಉಪಯೋಗವೇನಿರಲಿಲ್ಲ. ಚೀನಾಕ್ಕೆ ತಲೆನೋವಾಗಿದ್ದ ಕ್ಸಿಂಗಿಯಾಂಗ್ ಪ್ರಾಂತದ ದಕ್ಷಿಣಕ್ಕಿದ್ದ ಶಕ್ಸ್ಗಮ್ ಕಣಿವೆಯು ಗಡಿಪ್ರದೇಶದ ಮೇಲೆ ಕಣ್ಣಿಡಲು ಉಪಯೋಗವಾಗುತ್ತಿತ್ತು. ಇದಕ್ಕೆ ಪ್ರತಿಯಾಗಿ ಚೀನಾವು ಪಾಕಿಸ್ತಾನಕ್ಕೆ ಆಧುನಿಕ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಮತ್ತು ಇತರ ಯುದ್ಧೋಪಯೋಗಿ ಸಾಮಗ್ರಿಗಳನ್ನು ಒದಗಿಸುವುದಾಗಿ ವಾಗ್ದಾನ ನೀಡಿತು. ಅಷ್ಟೇ ಅಲ್ಲದೆ ಭಾರತದೊಂದಿಗೆ ಯುದ್ಧ ಸಂಭವಿಸಿದರೆ ಚೀನಾವು ಭಾರತವನ್ನು ಆಕ್ರಮಿಸುವುದಾಗಿ ಭರವಸೆ ನೀಡಿತು.

ಕಾಶ್ಮೀರದ ಆಕ್ರಮಣಕ್ಕೆ ಸನ್ನದ್ಧವಾದ ಪಾಕಿಸ್ತಾನ
೧೯೬೨ರ ಯುದ್ಧದ ನಂತರ ಎಚ್ಚೆತ್ತ ಭಾರತ ಸರ್ಕಾರ ದೇಶದ ರಕ್ಷಣೆಯತ್ತ ಹೆಚ್ಚಿನ ಗಮನ ನೀಡಲಾರಂಭಿಸಿತ್ತು – ಸಶಸ್ತ್ರಪಡೆಗಳು ವಿದೇಶಗಳಿಂದ ಆಯುಧಸಾಮಗ್ರಿಗಳನ್ನು ಆಮದು ಮಾಡಿಕೊಂಡು, ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳುವ ತಯಾರಿ ಪ್ರಾರಂಭಿಸಿದ್ದವು. ಆದರೆ, ಈ ತಯಾರಿ ಪೂರ್ಣಗೊಂಡು, ಭಾರತೀಯ ಸಶಸ್ತ್ರಪಡೆಗಳು ಪೂರ್ಣ ಸನ್ನದ್ಧವಾಗಲು ಕನಿಷ್ಠ ಮೂರ್ನಾಲ್ಕು ವರ್ಷಗಳಾದರೂ ಹಿಡಿಯುತ್ತಿತ್ತು. ಭಾರತವು ಯುದ್ಧವನ್ನು ಎದುರಿಸುವ ಪರಿಸ್ಥಿತಿಯಲ್ಲಿ ಇಲ್ಲ, ಬಲವಾದ ಹೊಡೆತ ನೀಡಿದರೆ ಕಾಶ್ಮೀರ ತಮ್ಮದಾಗಿಬಿಡುತ್ತದೆ – ಎಂದು ಪಾಕಿಸ್ತಾನದ ನಾಯಕರು ಅಂದಾಜು ಮಾಡಿದರು. ಪಾಕಿಸ್ತಾನದ ವಿದೇಶಾಂಗ ಸಚಿವರಾಗಿದ್ದ ಜ಼ುಲ್ಫಿಕರ್ ಆಲಿ ಭುಟ್ಟೋ ಅವರು ಭಾರತದ ಮೇಲೆ ಆಕ್ರಮಣ ನಡೆಸಲು ತುದಿಗಾಲ ಮೇಲೆ ನಿಂತಿದ್ದರು. ಭಾರತದ ಪರಿಸ್ಥಿತಿಯನ್ನು ಪಾಕಿಸ್ತಾನದ ಸರ್ವಾಧಿಕಾರಿಗಳಿಗೆ ಮನಗಾಣಿಸಿದ ಭುಟ್ಟೋ, ಭಾರತದ ಮೇಲೆ ಕೂಡಲೇ ಆಕ್ರಮಣ ನಡೆಸುವಂತೆ ಒತ್ತಾಯಿಸಿದರು. ಕಾಶ್ಮೀರವನ್ನು ಆಕ್ರಮಿಸಿಕೊಳ್ಳಲು ಕಾಯುತ್ತಿದ್ದ ಪಾಕಿಸ್ತಾನದ ಸರ್ವಾಧಿಕಾರಿ ಇದನ್ನು ಸುವರ್ಣಾವಕಾಶ ಎಂದೇ ಭಾವಿಸಿ ಕೂಡಲೇ ಕಾರ್ಯಪ್ರವೃತ್ತರಾದರು.
ಭಾರತದ ಪ್ರತಿಕ್ರಿಯೆಯ ಪರೀಕ್ಷೆ
ಆಪರೇಷನ್ ಜಿಬ್ರಾಲ್ಟರ್ ಮೊದಲ ಹಂತ
ಈ ಧೂರ್ತ ಯೋಜನೆಗೆ ಪಾಕಿಸ್ತಾನವಿಟ್ಟ ಹೆಸರು ಆಪರೇಷನ್ ಜಿಬ್ರಾಲ್ಟರ್. ಭಾರತವನ್ನು ಕೆಣಕಿ ಅದರ ಪ್ರತಿಕ್ರಿಯೆಯನ್ನು ಪರೀಕ್ಷಿಸುವುದು ಈ ಕಾರ್ಯಾಚರಣೆಯ ಮೊದಲ ಹಂತದ ಉದ್ದೇಶ. ಅದಕ್ಕಾಗಿ, ೧೯೬೫ರ ಬೇಸಗೆಯಲ್ಲಿ ಗುಜರಾತಿನ ಕಛ್ ಪ್ರದೇಶದಲ್ಲಿ ಪಾಕಿಸ್ತಾನ ಯಾವುದೋ ಕ್ಯಾತೆ ತೆಗೆದು ಭಾರತದ ಗಡಿ ಉಲ್ಲಂಘಿಸಿತು. ರಾಣ್ ಆಪ್ ಕಚ್ ಗಡಿಯ ಕುರಿತಾಗಿ ೧೯೫೦ರಿಂದಲೇ ಪಾಕಿಸ್ತಾನ ವಿವಾದವನ್ನು ಹುಟ್ಟುಹಾಕಿತ್ತು. ಮಹಾರಾಜರ ಆಡಳಿತಕ್ಕೆ ಒಳಪಟ್ಟಿದ್ದ ಈ ಪ್ರದೇಶವು ನ್ಯಾಯಸಮ್ಮತವಾಗಿ ಭಾರತಕ್ಕೇ ಸೇರಬೇಕಾಗಿದ್ದ ಪ್ರದೇಶ. ೧೯೬೫ರಲ್ಲಿ ಪಾಕಿಸ್ತಾನವು ಈ ಪ್ರದೇಶವನ್ನು ಆಕ್ರಮಿಸಿಕೊಂಡಿತು. ಈ ದುಸ್ಸಾಹಸಕ್ಕೆ ಕೈಹಾಕುವುದಕ್ಕೆ ಮುಂಚೆ ಸಾಕಷ್ಟು ಪೂರ್ವಸಿದ್ಧತೆಯನ್ನೂ ಅದು ಮಾಡಿಕೊಂಡಿತ್ತು: ಗಡಿಯ ಸಮೀಪದಲ್ಲಿ ರಸ್ತೆಗಳನ್ನು ರಚಿಸಿಕೊಂಡಿದ್ದು, ತನ್ನ ಸೈನ್ಯವನ್ನು ವೇಗವಾಗಿ ಅಲ್ಲಿಗೆ ನುಗ್ಗಿಸಲು ಅದು ಸಹಕಾರಿಯಾಗಲಿತ್ತು.
೧೯೬೫ರ ಜನವರಿಯಲ್ಲಿ ಭಾರತೀಯ ರಕ್ಷಣಾ ಪಡೆಗಳು ಗಡಿಯಲ್ಲಿ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ಸೇನೆಯು ಭಾರತದ ಗಡಿಯಿಂದ ೩ ಕಿ.ಮೀ.ನಷ್ಟು ಒಳಗೆ ನುಸುಳಿ ಟೆಂಟುಗಳನ್ನು ಹಾಕಿಕೊಂಡಿರುವುದು ಪತ್ತೆಯಾಯಿತು. ಅಲ್ಲಿದ್ದವರನ್ನು ಪ್ರಶ್ನಿಸಿದಾಗ ಈ ಪ್ರದೇಶವು ಪಾಕಿಸ್ತಾನಕ್ಕೆ ಸೇರಿದ್ದು ಎಂದು ಅವರು ವಾದಿಸಲಾರಂಭಿಸಿದರು. ಭಾರತೀಯ ಸೈನಿಕರು ಪಾಕಿಸ್ತಾನಿ ಸೈನಿಕರನ್ನು ಅಲ್ಲಿಂದ ಹೊರತಳ್ಳಲು ಪ್ರಯತ್ನಿಸಿದರು. ಪಾಕ್ ಸೈನಿಕರು ಅಲ್ಲಿಂದ ಕಾಲ್ತೆಗೆಯಲಿಲ್ಲ ಮಾತ್ರವಲ್ಲ, ೧೯೬೫ರ ಏಪ್ರಿಲ್ ೯ರಂದು ಸರ್ದಾರ್ ಪೋಸ್ಟ್ ಮತ್ತು ಕಂಜಾರ್ಕೋಟ್ ಎನ್ನುವ ಪ್ರದೇಶಗಳಿಗೆ ನುಗ್ಗಿ ಆ ಪ್ರದೇಶಗಳನ್ನೂ ಆಕ್ರಮಿಸಿಕೊಂಡರು. ಕೂಡಲೇ ಭಾರತವು ಭುಜ್ನಿಂದ ಪದಾತಿದಳವನ್ನು ಕರೆಸಿಕೊಂಡು, ಏಪ್ರಿಲ್ ೧೨ರಂದು ಸರ್ದಾರ್ ಪೋಸ್ಟ್ ಮತ್ತು ವಿಗೋಕೋಟ್ಗಳನ್ನು ಆಕ್ರಮಿಸಿಕೊಂಡಿದ್ದ ಪಾಕ್ ಸೈನಿಕರನ್ನು ಅಲ್ಲಿಂದ ಹೊರದಬ್ಬಿದರು. ಪಾಕಿಸ್ತಾನವು ಏಪ್ರಿಲ್ ೨೩ರಂದು ಮತ್ತಷ್ಟು ಹೆಚ್ಚು ಸೈನಿಕರನ್ನು ಸೇರಿಸಿಕೊಂಡು ಪ್ಯಾಟನ್ ಟ್ಯಾಂಕುಗಳೊಂದಿಗೆ ಸರ್ದಾರ್ ಪೋಸ್ಟ್, ವಿಗೋಕೋಟ್ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಮತ್ತೊಮ್ಮೆ ದಾಳಿ ನಡೆಸಿತು. ಭಾರತೀಯ ಸೈನಿಕರು ತೀವ್ರ ಪ್ರತಿರೋಧ ಒಡ್ಡಿದರು, ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದರು. ಆಗ ನಡೆದ ಕದನದಲ್ಲಿ ಪಾಕ್ ಸೈನಿಕರು ಅಪಾರ ನಷ್ಟಕ್ಕೊಳಗಾಗಬೇಕಾಯಿತು. ೨೪೫ ಮಂದಿ ಪಾಕ್ ಸೈನಿಕರು ಪ್ರಾಣ ಕಳೆದುಕೊಂಡರು, ೯ ಪ್ಯಾಟನ್ ಟ್ಯಾಂಕುಗಳು ನಷ್ಟವಾದವು. ಭಾರತದ ಕಡೆ ೬೫ ಸೈನಿಕರು ಹುತಾತ್ಮರಾಗಬೇಕಾಯಿತು.
ಏಪ್ರಿಲ್ ೨೮ರಂದು ಭಾರತದ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿಯವರು ಪಾಕಿಸ್ತಾನಕ್ಕೆ ಹೀಗೆ ಎಚ್ಚರಿಕೆ ನೀಡಿದರು: ಪಾಕಿಸ್ತಾನವು ಆಕ್ರಮಣ ನಿಲ್ಲಿಸದಿದ್ದರೆ ಭಾರತವು ಸೂಕ್ತ ಉತ್ತರ ನೀಡಬೇಕಾಗುತ್ತದೆ. ಕೆಲವು ದಿನ ಸುಮ್ಮನಿದ್ದ ಪಾಕಿಸ್ತಾನವು ಮೇ-ಜೂನ್ ತಿಂಗಳುಗಳಲ್ಲಿ ಮತ್ತೊಮ್ಮೆ ಆಕ್ರಮಣ ನಡೆಸಿ ಮತ್ತಷ್ಟು ದೊಡ್ಡ ನಷ್ಟಕ್ಕೊಳಗಾಯಿತು. ಜೂನ್ ತಿಂಗಳ ಮಧ್ಯಭಾಗದಲ್ಲಿ ಬ್ರಿಟನ್ ಪ್ರಧಾನಿ ಹೆರಾಲ್ಡ್ ವಿಲ್ಸನ್ ಅವರು ಎರಡೂ ದೇಶಗಳನ್ನು ಸಂಪರ್ಕಿಸಿ ಕದನವಿರಾಮದ ಬಗ್ಗೆ ಸೂಚಿಸಿದರು. ಜೂನ್ ೩೦ರಂದು ಭಾರತದ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿಯವರು ಮತ್ತು ಪಾಕ್ ಸರ್ವಾಧಿಕಾರಿ ಅಯೂಬ್ ಖಾನ್ ಅವರು ೧೯೬೫ರ ಜನವರಿಯ ಸ್ಥಿತಿಯನ್ನು ಕಾಪಾಡಿಕೊಳ್ಳುವುದಕ್ಕೆ ಒಪ್ಪಿಕೊಂಡು ಕದನವಿರಾಮಕ್ಕೆ ಸಹಿ ಹಾಕಿದರು.

ಕಾಶ್ಮೀರಕ್ಕೆ ನುಗ್ಗಿದ ಪಾಕಿಸ್ತಾನ
ಆಪರೇಷನ್ ಜಿಬ್ರಾಲ್ಟರ್ ಎರಡನೆಯ ಹಂತ
ಆದರೆ, ಕದನವಿರಾಮ ಕೇವಲ ಕಣ್ಣೊರೆಸುವ ತಂತ್ರವಾಗಿತ್ತು. ಕೆಲವೇ ದಿನಗಳಲ್ಲಿ ಪಾಕಿಸ್ತಾನವು ಆಪರೇಷನ್ ಜಿಬ್ರಾಲ್ಟರ್ನ ಎರಡನೇ ಹಂತದ ಕಾರ್ಯಾಚರಣೆಯನ್ನು ಆರಂಭಿಸುವುದಿತ್ತು. ೧೯೬೫ರ ಪಾಕಿಸ್ತಾನ ರಚನಾ ದಿನದಂದು (ಆಗಸ್ಟ್ ೧೫) ಆ ದೇಶದ ಜನರಿಗೆ ಕಾಶ್ಮೀರವನ್ನು ಉಡುಗೊರೆಯಾಗಿ ನೀಡುವುದು ಆಯೂಬ್ಖಾನರ ಮಹತ್ತ್ವ್ವಾಕಾಂಕ್ಷೆಯಾಗಿತ್ತು. ಅದಕ್ಕಾಗಿ ೧೯೬೫ರ ಜೂನ್ನಿಂದಲೇ ತಯಾರಿ ಆರಂಭವಾಗಿತ್ತು. ಪಾಕ್-ಆಕ್ರಮಿತ ಕಾಶ್ಮೀರದಲ್ಲಿ ಶಿಬಿರಗಳನ್ನು ಏರ್ಪಡಿಸಿದ ಪಾಕಿಸ್ತಾನಿ ಸೈನ್ಯ ೩೦,೦೦೦ ಸೈನಿಕರಿಗೆ ಆರು ವಾರಗಳ ಯುದ್ಧ ತರಬೇತಿ ನೀಡಿತು. ಜುಲೈ ೨೫ರಂದು ಇವರನ್ನೆಲ್ಲ ಉದ್ದೇಶಿಸಿ ಭಾಷಣ ಮಾಡಿದ ಆಯೂಬ್ಖಾನರು, ಕಾಶ್ಮೀರಕ್ಕೆ ನುಗ್ಗಿ ಜಿಹಾದ್ ನಡೆಸುವಂತೆ, ಕಾಶ್ಮೀರವನ್ನು ವಶಪಡಿಸಿಕೊಳ್ಳುವಂತೆ ಆವಾಹನೆ ನೀಡಿದರು. ಆ ನಂತರದಲ್ಲಿ ಅವರೆಲ್ಲರೂ ಸಣ್ಣಸಣ್ಣ ಗುಂಪುಗಳಲ್ಲಿ ಕಾಶ್ಮೀರದೊಳಕ್ಕೆ ಕಳ್ಳ ದಾರಿಗಳಲ್ಲಿ ನುಸುಳಿದರು. ಇವರಿಗೆ ಬೆಂಬಲವಾಗಿ ಕಾಶ್ಮೀರದೊಳಗಿದ್ದ ಪ್ರತ್ಯೇಕತಾವಾದಿ ಗುಂಪುಗಳು ಸಹಕಾರ ನೀಡಿದವು.
ಹೀಗೆ, ಕದನವಿರಾಮಕ್ಕೆ ಸಹಿ ಹಾಕಿದ್ದ ಎರಡು ತಿಂಗಳೊಳಗಾಗಿ ಪಾಕಿಸ್ತಾನವು ಮತ್ತೊಮ್ಮೆ ಕಾಲ್ಕೆರೆದುಕೊಂಡು ಯುದ್ಧವನ್ನಾರಂಭಿಸಿತು. ಪಾಕ್ ಸೈನಿಕರು ಕಾಶ್ಮೀರದೊಳಕ್ಕೆ ನುಗ್ಗಿದ ಕೇವಲ ೨೪ ಗಂಟೆಗಳಲ್ಲಿ ಭಾರತೀಯ ಸೈನಿಕರಿಗೆ ಮಾಹಿತಿ ಸಿಕ್ಕಿತು. ಎಚ್ಚೆತ್ತುಕೊಂಡ ಭಾರತೀಯ ಗಡಿರಕ್ಷಣಾ ಸೈನಿಕರು ಅನೇಕ ನುಸುಳುಕೋರರನ್ನು ಸೆರೆಹಿಡಿದರು, ಅವರ ಬಳಿಯಿದ್ದ ಮದ್ದು-ಗುಂಡುಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು. ಪ್ರತಿರೋಧ ಒಡ್ಡಿದ ನುಸುಳುಕೋರರು ಪ್ರಾಣ ಕಳೆದುಕೊಳ್ಳಬೇಕಾಯಿತು, ಒಂದಷ್ಟು ಜನ ತಪ್ಪಿಸಿಕೊಂಡು ಪರಾರಿಯಾದರು. ಆಗಸ್ಟ್ ಮೂರನೇ ವಾರದ ಹೊತ್ತಿಗೆ ಪಾಕ್ ನುಸುಳುಕೋರರ ಶಕ್ತಿ ಸಾಕಷ್ಟು ಕ್ಷೀಣಿಸಿತ್ತು. ಅದನ್ನು ಅಲ್ಲಿಗೇ ಬಿಡದೆ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಲು ಭಾರತೀಯ ನಾಯಕರು ನಿರ್ಧರಿಸಿದರು. ಗಡಿಯನ್ನು ದಾಟಿ ಪಾಕಿಸ್ತಾನದ ಮೇಲೆ ಪ್ರತ್ಯಾಕ್ರಮಣ ನಡೆಸುವಂತೆ ಸೈನ್ಯಕ್ಕೆ ಆಜ್ಞೆ ನೀಡಲಾಯಿತು.
ಆಗಸ್ಟ್ ೧೫ರಂದು ಕಾರ್ಗಿಲ್ ವಲಯದ ವಾಯವ್ಯ ಸರಹದ್ದನ್ನು ದಾಟಿದ ಭಾರತೀಯ ಸೈನಿಕರು ಗಡಿಯಾಚೆಯ ಮೂರು ಆಯಕಟ್ಟಿನ ಸ್ಥಳಗಳಲ್ಲಿ ಠಾಣೆಗಳನ್ನು ಸ್ಥಾಪಿಸಿಕೊಂಡರು; ಆಗಸ್ಟ್ ೨೪ರಂದು ತಿತ್ವಾಲ್ ವಲಯದಲ್ಲಿ ಗಡಿಯನ್ನು ದಾಟಿ ಪೀರ್ಸಾಹೇಬ್ ವಶಪಡಿಸಿಕೊಂಡು ಕಿಶನ್ಗಂಗಾ ನದಿಯವರೆಗೂ ಮುಂದುವರಿದರು; ಆಗಸ್ಟ್ ೨೫ರಂದು ಉರಿ ವಲಯದಲ್ಲಿ ಗಡಿಯನ್ನು ದಾಟಿ ಹಾಜಿಪೀರ್ ಕಣಿವೆಯನ್ನು ವಶಪಡಿಸಿಕೊಳ್ಳಲಾಯಿತು. ಹಾಜಿಪೀರ್ ಕಣಿವೆ ಇರುವುದು ೮೬೦೦ ಅಡಿಗಳ ಎತ್ತರದಲ್ಲಿ. ಅದನ್ನು ತಲಪಲು ಮೊದಲಿಗೆ ೪೦೦೦ ಅಡಿ ಎತ್ತರದ ಶಿಖರವನ್ನೇರಿ, ಪಾಕ್-ಆಕ್ರಮಿತ ಕಾಶ್ಮೀರದಲ್ಲಿ ೧೨ ಕಿಲೋಮೀಟರ್ಗಳಷ್ಟು ದೂರ ನಡೆದು ಮತ್ತೆ ಮೇಲೇರಬೇಕು. ಸಾಲದುದಕ್ಕೆ ಆ ರಾತ್ರಿ ಅಲ್ಲಿ ಧಾರಾಕಾರ ಮಳೆ ಸುರಿಯುತ್ತಿತ್ತು; ಇದಾವುದಕ್ಕೂ ಹೆದರದೆ ಭಾರತೀಯ ಸೈನಿಕರು ತಮ್ಮ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದರು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ೧೯ ಸೇನಾ ನೆಲೆಗಳನ್ನು ವಶಪಡಿಸಿಕೊಳ್ಳಲಾಯಿತು, ೨೦೦೦ಕ್ಕೂ ಹೆಚ್ಚು ಪಾಕಿಸ್ತಾನಿ ಸೈನಿಕರು ಹತರಾದರು ಮತ್ತು ಹಾಜಿಪೀರ್ ಕಣಿವೆಯ ೩೭೦ ಚ.ಕಿ.ಮೀ ಪ್ರದೇಶ ಭಾರತದ ವಶವಾಯಿತು. ಆಪರೇಷನ್ ಜಿಬ್ರಾಲ್ಟರ್ ಹೀಗೆ ವಿಫಲವಾಗಿತ್ತು!
ಯುದ್ಧದ ಅಂತಿಮ ಹಂತ
ಆಪರೇಷನ್ ಗ್ರ್ಯಾಂಡ್ ಸ್ಲ್ಯಾಮ್
ಆದರೆ, ಆಯೂಬ್ಖಾನರು ಯುದ್ಧವನ್ನು ನಿಲ್ಲಿಸಲಿಲ್ಲ. ಅವರ ಬಳಿ ಮತ್ತೊಂದು ಕಾರ್ಯಾಚರಣೆಯ ಯೋಜನೆ ಸಿದ್ಧವಿತ್ತು. ಇದೇ ಆಪರೇಷನ್ ಗ್ರ್ಯಾಂಡ್ ಸ್ಲ್ಯಾಮ್. ಸೆಪ್ಟೆಂಬರ್ ೧ರಂದು ಬೆಳಗಿನ ಜಾವದ ಸಮಯದಲ್ಲಿ ಪಾಕಿಸ್ತಾನಿ ಸೈನಿಕರು ಛಾಂಬ್ ವಲಯದಲ್ಲಿ ತೀವ್ರ ದಾಳಿ ನಡೆಸಿ ೯೦ ಪ್ಯಾಟನ್ ಟ್ಯಾಂಕುಗಳೊಂದಿಗೆ ಭಾರತದೊಳಕ್ಕೆ ನುಗ್ಗಿದರು. ಅವರ ಮುಂದಿನ ಗುರಿ ಇದ್ದದ್ದು ಅಕ್ನೂರ್ ಅನ್ನು ಆಕ್ರಮಿಸಿಕೊಂಡು ಜಮ್ಮುವಿನತ್ತ ನುಗ್ಗುವುದು ಮತ್ತು ಜಮ್ಮುವನ್ನು ಆಕ್ರಮಿಸಿಕೊಂಡು ಇಡೀ ಕಾಶ್ಮೀರ ರಾಜ್ಯವನ್ನು ಪಾಕಿಸ್ತಾನದ ಭಾಗವೆಂದು ಘೋಷಿಸುವುದು. ಈ ದಾಳಿಯಲ್ಲಿ ಭಾರತೀಯ ಪಡೆಗಳಿಗೆ ಸಾಕಷ್ಟು ನಷ್ಟವಾಯಿತು. ಹೊಡೆತಕ್ಕೊಳಗಾಗಿದ್ದ ಭಾರತೀಯ ಸೈನ್ಯದ ಬೆಂಬಲಕ್ಕೆ ಕೂಡಲೇ ಯುದ್ಧರಂಗವನ್ನು ಪ್ರವೇಶಿಸಿದ ಭಾರತೀಯ ವಾಯುಪಡೆ ಪಾಕ್ ಸೈನಿಕರ ಮೇಲೆ ಬಾಂಬುಗಳನ್ನು ಉದುರಿಸಿತು. ಕೇವಲ ಅರ್ಧ ಗಂಟೆಯ ಒಳಗಾಗಿ ೧೪ ಪ್ಯಾಟನ್ ಟ್ಯಾಂಕುಗಳು ಹಾಗೂ ೪೮ ಜೀಪು/ಟ್ರಕ್ಗಳು ನಾಶವಾದವು, ಪಾಕಿಸ್ತಾನದ ಎರಡು ಎಫ಼್-೧೬ ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಯಿತು.
ಇದೇ ಸಮಯದಲ್ಲಿ ಪ್ರಧಾನಮಂತ್ರಿ ಲಾಲ್ ಬಹಾದುರ್ ಶಾಸ್ತ್ರಿಯವರು ಭಾರತೀಯ ಪಡೆಗಳ ದಂಡನಾಯಕರ ತುರ್ತು ಸಭೆ ಕರೆದು ಪಂಜಾಬ್ ಕಡೆಯಿಂದಲೂ ಆಕ್ರಮಣ ನಡೆಸುವಂತೆ ಸಲಹೆ ನೀಡಿದರು. ಈ ನಿರ್ಧಾರವು ಯುದ್ಧದ ದಿಕ್ಕನ್ನೇ ಬದಲಿಸಿತು. ಈ ಸಲಹೆಯನ್ನು ಕೂಡಲೇ ಕಾರ್ಯರೂಪಕ್ಕಿಳಿಸಿದ ಭಾರತೀಯ ಸೇನಾನಾಯಕರು ಮೂರು ದಿಕ್ಕುಗಳಲ್ಲಿ ಸೈನ್ಯವನ್ನು ನುಗ್ಗಿಸಿದರು. ಮೊದಲ ಪಡೆ ಲಾಹೋರಿನತ್ತ ನುಗ್ಗಿತು – ಸೆಪ್ಟೆಂಬರ್ ೧೫ರ ವೇಳೆಗೆ ೨೫೦ ಚ.ಕಿ.ಮೀ.ಗಳಷ್ಟು ಪ್ರದೇಶವನ್ನು ವಶಪಡಿಸಿಕೊಂಡಿತು. ಎರಡನೇ ಪಡೆ ವಾಘಾ ಗಡಿಯಲ್ಲಿ ಆಕ್ರಮಣ ನಡೆಸಿ, ಸೆಪ್ಟೆಂಬರ್ ೨೨ರ ವೇಳೆಗೆ ಡೋಗ್ರಾಯ್ ಅನ್ನು ವಶಪಡಿಸಿಕೊಂಡಿತು. ಈ ಸಮಯದಲ್ಲಿ ೨೧ ಪ್ಯಾಟನ್ ಟ್ಯಾಂಕುಗಳನ್ನು ವಶಪಡಿಸಿಕೊಳ್ಳಲಾಯಿತು. ಮೂರನೇ ಪಡೆ ರೂಹಿವಾಲ್, ಬಂಡ್ ಜಂಕ್ಷನ್ ಮತ್ತು ಬಲ್ಲಿಯನ್ವಾಲಾ ಪ್ರದೇಶಗಳನ್ನು ವಶಪಡಿಸಿಕೊಂಡಿತು. ಅಲ್ಲಿದ್ದ ರೋಹಿ ನಾಲಾ ಮತ್ತು ಇತರ ನಾಲೆಗಳನ್ನು ಒಡೆದು ಪೂರ್ತಿ ಪ್ರದೇಶವನ್ನು ಜಲಾವೃತಗೊಳಿಸಿತು. ಈ ಸ್ಥಳದಲ್ಲಿ ಸೆಪ್ಟೆಂಬರ್ ೮ರಂದು ದಾಳಿ ನಡೆಸಿದ ಪಾಕಿಸ್ತಾನಿ ಸೈನಿಕರು ಭಾರತಕ್ಕೆ ಅನಿರೀಕ್ಷಿತ ಆಘಾತ ನೀಡುವ ಉದ್ದೇಶ ಹೊಂದಿದ್ದರು. ಆದರೆ, ನೀರು ತುಂಬಿದ್ದ ಪ್ರದೇಶದಲ್ಲಿ ಪಾಕಿಸ್ತಾನಿ ಟ್ಯಾಂಕುಗಳು ಹೂತುಹೋದದ್ದರ ಪರಿಣಾಮವಾಗಿ ಅವರೇ ಆಘಾತಕ್ಕೊಳಗಾಗುವಂತಾಯಿತು. ಈ ವ್ಯೂಹವನ್ನು ಹೂಡಿದ್ದ ಭಾರತೀಯ ಪಡೆಗಳು ಪಾಕಿಸ್ತಾನದ ೧೪ ಪ್ಯಾಟನ್ ಟ್ಯಾಂಕುಗಳನ್ನು ನಾಶಪಡಿಸಿದವು. ಈ ಸಮಯದಲ್ಲೇ ಹವಿಲ್ದಾರ್ ಅಬ್ದುಲ್ ಹಮೀದರು ಹುತಾತ್ಮರಾದದ್ದು. ಮೂರು ಪ್ಯಾಟನ್ ಟ್ಯಾಂಕುಗಳನ್ನು ನಾಶಗೊಳಿಸಿದ್ದ ಅಬ್ದುಲ್ ಹಮೀದರು ನಾಲ್ಕನೇ ಪ್ಯಾಟನ್ ಟ್ಯಾಂಕಿನ ಮೇಲೆ ಆಕ್ರಮಣ ನಡೆಸುತ್ತಿದ್ದ ವೇಳೆ ಮತ್ತೊಂದು ಟ್ಯಾಂಕಿನಿಂದ ಬಂದ ಗುಂಡು ಅವರನ್ನು ಹೊಡೆದುರುಳಿಸಿತ್ತು. ಅಂದು ಅವರು ತೋರಿದ ಅಸಾಧಾರಣ ಸಾಹಸಕ್ಕಾಗಿ ಭಾರತ ಸರ್ಕಾರವು ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಪರಮ ವೀರ ಚಕ್ರವನ್ನು ಮರಣೋತ್ತರವಾಗಿ ಅವರಿಗೆ ನೀಡಿ ಗೌರವಿಸಿತು.
ಸೆಪ್ಟೆಂಬರ್ ೮-೯ರಂದು ಪಾಕಿಸ್ತಾನ ಮತ್ತೊಂದು ತೀವ್ರ ದಾಳಿ ನಡೆಸಿತು. ಭಾರತೀಯ ಪಡೆಗಳು ಅಷ್ಟೇ ತೀವ್ರವಾದ ಪ್ರತ್ಯುತ್ತರ ನೀಡಿದವು. ೪೮ ಗಂಟೆಗಳ ಕಾಲ ನಡೆದ ಈ ಕದನದಲ್ಲಿ ಪಾಕಿಸ್ತಾನದ ೬೫ ಪ್ಯಾಟನ್ ಟ್ಯಾಂಕುಗಳು ಸಂಪೂರ್ಣ ನಾಶವಾದವು ಮತ್ತು ೩೨ ಟ್ಯಾಂಕುಗಳು ಭಾರತೀಯ ಸೈನಿಕರ ವಶವಾದವು.
ಸೆಪ್ಟೆಂಬರ್ ೬ರಂದು ಲಾಹೋರ್ ವಿಭಾಗದಲ್ಲಿ ಆಕ್ರಮಣದ ರೂಪರೇಷೆ ಸಿದ್ಧವಾಗುತ್ತಿರುವಾಗಲೇ, ಆಯೂಬ್ಖಾನರು ಭಾರತೀಯ ಪಡೆಗಳಿಗೆ ವಾಯುಸೇನೆಯ ಸಹಾಯ ದೊರಕದಂತೆ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದರು. ಅದಕ್ಕಾಗಿ, ಸೆಪ್ಟೆಂಬರ್ ೬-೭ರ ಮಧ್ಯರಾತ್ರಿಯ ಸಮಯದಲ್ಲಿ ಸುಮಾರು ೪೫೦ ಪ್ಯಾರಾಟ್ರೂಪರ್ಗಳನ್ನು ಹಲ್ವಾರಾ ಮತ್ತು ಆದಂಪುರಗಳಲ್ಲಿ ರಹಸ್ಯವಾಗಿ ಇಳಿಸಲಾಯಿತು. ಪಠಾಣ್ಕೋಟ್ ಮತ್ತು ಅಂಬಾಲಾ ವಾಯುನೆಲೆಗಳ ಮೇಲೆ ಆಕ್ರಮಣ ನಡೆಸಿ, ಅಲ್ಲಿದ್ದ ವಾಯುನೆಲೆಗಳನ್ನು ನಿಷ್ಕ್ರಿಯಗೊಳಿಸುವುದು ಈ ಪ್ಯಾರಾಟ್ರೂಪರ್ಗಳ ಉದ್ದೇಶವಾಗಿತ್ತು. ಆದರೆ, ಅವರ ತಂತ್ರವನ್ನು ವಿಫಲಗೊಳಿಸಿದ ಭಾರತೀಯ ಪಡೆಗಳು ೨೦ ಪ್ಯಾರಾಟ್ರೂಪರ್ಗಳನ್ನು ಕೊಂದು, ೧೯೩ ಮಂದಿಯನ್ನು ಸೆರೆ ಹಿಡಿದವು; ಉಳಿದವರು ಪರಾರಿಯಾದರು.
ಲಾಹೋರ್ ನಂತರ ಭೀಕರ ಸಂಗ್ರಾಮ ನಡೆದದ್ದು ಸಿಯಾಲ್ಕೋಟ್ ವಿಭಾಗದಲ್ಲಿ. ಭಾರತೀಯ ಪಡೆಗಳು ಸಿಯಾಲ್ಕೋಟ್ನ ಉತ್ತರ ಮತ್ತು ದಕ್ಷಿಣ ಭಾಗಗಳಿಂದ ಆಕ್ರಮಣ ನಡೆಸಿದವು. ಹತ್ತು ದಿನಗಳ ಕಾಲ ನಡೆದ ಈ ಸಂಗ್ರಾಮದಲ್ಲಿ ಎರಡೂ ದೇಶಗಳ ನೂರಾರು ಟ್ಯಾಂಕುಗಳು ಹಣಾಹಣಿ ನಡೆಸಿದವು. ಈ ಕಾಳಗದಲ್ಲಿ ೩೨೫ ಟ್ಯಾಂಕುಗಳು ನಾಶಗೊಂಡವು. ಈ ಸಂದರ್ಭದಲ್ಲೇ ಪಾಕಿಸ್ತಾನದ ೭ ಟ್ಯಾಂಕುಗಳನ್ನು ನಾಶಪಡಿಸಿದ್ದ ಲೆಫ್ಟಿನೆಂಟ್-ಕರ್ನಲ್ ಎ.ಬಿ. ತಾರಪೊರೆ ಅವರು ಹುತಾತ್ಮರಾದದ್ದು. ೧೯೬೫ರ ಯುದ್ಧದ ಎರಡನೆಯ ಪರಮವೀರ ಚಕ್ರ ಪುರಸ್ಕೃತರಾದರು ಅವರು. ಸೆಪ್ಟೆಂಬರ್ ೨೨ರಂದು ಕದನವಿರಾಮ ಘೋಷಣೆಯಾಗುವ ವೇಳೆಗೆ ಸಿಯಾಲ್ಕೋಟ್ ಸುತ್ತಲಿನ ೩೨೦ ಚ.ಕಿ.ಮೀ. ಪ್ರದೇಶ ಭಾರತದ ವಶವಾಗಿತ್ತು.
೧೯೬೫ರ ಭಾರತ-ಪಾಕ್ ಯುದ್ಧದಲ್ಲಿ ಭಾರತೀಯ ವಾಯುಪಡೆ ಅಪ್ರತಿಮ ಸಾಹಸವನ್ನು ಮೆರೆಯಿತು. ಮೊದಲಿಗೆ ಸೆಪ್ಟೆಂಬರ್ ೧ರಂದು ಛಾಂಬ್ನಲ್ಲಿ ಮುನ್ನುಗ್ಗುತ್ತಿದ್ದ ಪಾಕಿಸ್ತಾನಿ ಪಡೆಗಳ ಮೇಲೆ ಆಕ್ರಮಣ ನಡೆಸಿ ಅವರ ಶಕ್ತಿಯನ್ನು ತೀವ್ರವಾಗಿ ಕುಗ್ಗಿಸಿತು. ಆ ನಂತರದಲ್ಲಿ ಪಾಕಿಸ್ತಾನಿ ವಾಯುನೆಲೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಹಾಳುಗೆಡವಿ ಪಾಕಿಸ್ತಾನದ ಯುದ್ಧ ಸಾಮರ್ಥ್ಯಕ್ಕೆ ತೀವ್ರ ಧಕ್ಕೆ ನೀಡಿತು. ಈ ಸಂದರ್ಭದಲ್ಲಿ ಸರ್ಗೋದ, ಚಕ್ಲಾ, ಪೇಶಾವರ್, ಕೋಹಟ್ ಮತ್ತು ಅಕ್ವಾಲ್ ಮೇಲೆ ಸತತವಾಗಿ ಬಾಂಬುಗಳನ್ನು ಸುರಿಸಲಾಯಿತು. ಲಾಹೋರ್ ವಲಯದಲ್ಲಿಯೂ ವಾಯುಪಡೆಗಳು ನಿರ್ಣಾಯಕ ಪಾತ್ರ ವಹಿಸಿದವು.
ಯುದ್ಧವಿರಾಮಕ್ಕೆ ಹಾತೊರೆದ ಪಾಕ್
ಆಯೂಬ್ಖಾನರ ಎಲ್ಲ ಯೋಜನೆಗಳೂ ಹೀಗೆ ವಿಫಲವಾದ ನಂತರ ಪಾಕಿಸ್ತಾನವು ಯುದ್ಧವನ್ನು ನಿಲ್ಲಿಸುವುದಕ್ಕಾಗಿ ಹಾತೊರೆಯಿತು. ಭಾರತೀಯ ಸೈನ್ಯಾಧಿಕಾರಿಗಳು ಯುದ್ಧವನ್ನು ನಿಲ್ಲಿಸದಂತೆ ಭಾರತಸರ್ಕಾರವನ್ನು ವಿನಂತಿಸಿದರು. ಆದರೆ, ಭಾರತ ಸರ್ಕಾರದ ಮೇಲೆ ಯುದ್ಧವನ್ನು ನಿಲ್ಲಿಸುವಂತೆ ಎಲ್ಲೆಡೆಯಿಂದ ಒತ್ತಡ ಬರಲಾರಂಭಿಸಿತು. ಸೆಪ್ಟೆಂಬರ್ ೨೩ರಂದು ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಕದನವಿರಾಮವನ್ನು ಘೋಷಿಸಲಾಯಿತು – ೨೨ ದಿನಗಳ ಯುದ್ಧ ಕೊನೆಗೊಂಡಿತ್ತು. ೧೯೬೬ರ ಜನವರಿಯಲ್ಲಿ ಭಾರತದ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಮತ್ತು ಪಾಕಿಸ್ತಾನದ ಸರ್ವಾಧಿಕಾರಿ ಆಯೂಬ್ಖಾನರನ್ನು ಸಂಧಾನಕ್ಕಾಗಿ ಆಮಂತ್ರಿಸಲಾಯಿತು. ೧೯೬೬ರ ಜನವರಿ ೧೦ರಂದು ತಾಷ್ಕೆಂಟಿನಲ್ಲಿ ಈರ್ವರು ನಾಯಕರೂ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದರು. ಆದರೆ, ದುರ್ದೈವವಶಾತ್ ಭಾರತದ ವಿಜಯೋತ್ಸಾಹ ಕ್ಷಣಿಕವಾಗಿತ್ತು – ವಿಧಿ ಬೇರೊಂದು ಹಂಚಿಕೆ ಹಾಕಿತ್ತು. ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮರುದಿನವೇ, ಅಂದರೆ ೧೯೬೬ರ ಜನವರಿ ೧೧ರಂದು ಭಾರತದ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿಯವರು ತಾಷ್ಕೆಂಟಿನಲ್ಲಿಯೇ ಅನುಮಾನಾಸ್ಪದ ರೀತಿಯಲ್ಲಿ ಮರಣವನ್ನಪ್ಪಿದರು. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ ಜನಪ್ರಿಯತೆಯ ತುತ್ತತುದಿಗೇರಿದ್ದ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿಯವರು ಭಾರತಕ್ಕೆ ಮರಳಲೇ ಇಲ್ಲ! ವಿಜಯೋತ್ಸವವನ್ನು ಆಚರಿಸಬೇಕಿದ್ದ ದೇಶ ಸೂತಕದಲ್ಲಿ ಮುಳುಗಿತು. ಶಾಸ್ತ್ರಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದರೆಂದು ವೈದ್ಯಕೀಯ ವರದಿಗಳು ತಿಳಿಸುತ್ತವಾದರೂ, ಅನೇಕರು ಇದನ್ನು ಕೊಲೆ ಎಂದೇ ಪರಿಗಣಿಸಿರುವರು. ಇಲ್ಲಿಯವರೆಗೂ ಈ ಸಾವು ನಿಗೂಢವಾಗಿಯೇ ಉಳಿದಿದೆ.
ಈ ಯುದ್ಧದಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಪಾಕಿಸ್ತಾನಿ ಸೈನ್ಯದ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿದ್ದವು ಮತ್ತು ಅಮೆರಿಕದಿಂದ ಪಡೆಯಲಾಗಿದ್ದ ಅತ್ಯುತ್ತಮ ರಕ್ಷಾಕವಚ ಹೊಂದಿದ್ದ ಪ್ಯಾಟನ್ ಟ್ಯಾಂಕುಗಳ ದೊಡ್ಡ ಸಂಗ್ರಹವೇ ಇದ್ದಿತು. ಭಾರತದ ಬಳಿ ಇದ್ದದ್ದು ಹಳೆಯ ಮಾದರಿಯ ಟ್ಯಾಂಕುಗಳು ಮತ್ತು ಇತರ ಶಸ್ತ್ರಾಸ್ತ್ರಗಳು. ಸೈನಿಕರ ಸಂಖ್ಯೆ, ಸೈನ್ಯದ ತಯಾರಿ, ಯುದ್ಧಸಾಮಗ್ರಿಗಳು, ಶಸ್ತ್ರಾಸ್ತ್ರಗಳು, ಫಿರಂಗಿಗಳು, ವಿಮಾನಗಳು – ಹೀಗೆ ಎಲ್ಲ ವಿಷಯದಲ್ಲೂ ಪಾಕಿಸ್ತಾನದ ಕೈ ಮೇಲಿತ್ತು. ಇಂತಹ ಅಸಮ ಹೋರಾಟದಲ್ಲೂ ಭಾರತೀಯ ಸೈನಿಕರು ಅಸಾಧಾರಣ ಸಾಹಸ ಮೆರೆದರು, ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದರು ಮತ್ತು ದೇಶದ ನಾಯಕರು ಭಾರತೀಯ ರಕ್ಷಣಾಪಡೆಗಳಿಗೆ ಕ್ಷಿಪ್ರ ನಿರ್ಣಯಗಳನ್ನು ಕೈಗೊಳ್ಳಲು ಅನುವು ಮಾಡಿಕೊಟ್ಟರು. ಭಾರತವು ಈ ಯುದ್ಧದಲ್ಲಿ ರಕ್ಷಣಾತ್ಮಕವಾಗಿ ಕಾದಲಿಲ್ಲ; ಅದು ಆಕ್ರಮಕ ಯುದ್ಧವನ್ನು ಮಾಡಿತು, ಗಡಿಯನ್ನು ದಾಟಿ ಹೋಗಿ ಪ್ರಹಾರ ನೀಡಲು ಹಿಂಜರಿಯಲಿಲ್ಲ. ಇದೆಲ್ಲದರ ಪರಿಣಾಮವಾಗಿ ಭಾರತಕ್ಕೆ ೧೯೬೫ರ ಯುದ್ಧದಲ್ಲಿ ಗೆಲವು ದೊರೆಯಿತು.
ಶೌರ್ಯ ಪ್ರಶಸ್ತಿಗಳು:
- ೧೯೬೫ರ ಭಾರತ-ಪಾಕ್ ಯುದ್ಧದಲ್ಲಿ ಇಬ್ಬರಿಗೆ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಪರಮವೀರ ಚಕ್ರ ನೀಡಲಾಯಿತು:
– ಕಂಪೆನಿ ಕ್ವಾರ್ಟರ್ಮಾಸ್ಟರ್ ಹವಿಲ್ದಾರ್ ಅಬ್ದುಲ್ ಹಮೀದ್.
– ಲೆಫ್ಟಿನೆಂಟ್-ಕರ್ನಲ್ ಎ.ಬಿ. ತಾರಪೊರೆ.
- ಭಾರತೀಯ ಸೈನ್ಯದ ೩೩ ಜನ ಸೈನಿಕರಿಗೆ ಹಾಗೂ ಭಾರತೀಯ ವಾಯುಪಡೆಯ ನಾಲ್ವರಿಗೆ ಮಹಾವೀರ ಚಕ್ರ ಮತ್ತು ೧೨೮ ಜನ ಸೈನಿಕರಿಗೆ ಹಾಗೂ ವಾಯುಪಡೆಯ ೪೩ ಜನ ವೈಮಾನಿಕರಿಗೆ ವೀರಚಕ್ರ ನೀಡಿ ಗೌರವಿಸಲಾಯಿತು.
- ಭಾರತದ ಸೈನ್ಯಾಧಿಕಾರಿಯಾಗಿದ್ದ ಜೋಗಿಂದರ್ ಸಿಂಗ್ ಧಿಲ್ಲಾನ್ ಅವರಿಗೆ ೧೯೬೫ರ ಯುದ್ಧದಲ್ಲಿನ ಪಾತ್ರಕ್ಕಾಗಿ ೧೯೬೬ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಪದ್ಮ ಪ್ರಶಸ್ತಿಯನ್ನು ಪಡೆದ ಮೊತ್ತಮೊದಲ ಭಾರತೀಯ ಸೇನಾಧಿಕಾರಿ ಎಂಬ ಗೌರವಕ್ಕೆ ಧಿಲ್ಲಾನ್ ಪಾತ್ರರಾದರು.