2015ರ ಜೂನ್ 5ರಂದು ಭಾರತೀಯ ಸೇನೆಯ ಡೋಗ್ರಾ ರೆಜಿಮೆಂಟಿಗೆ ಸೇರಿದ ಸೇನಾ ತುಕಡಿಯೊಂದು ಮಣಿಪುರ ರಾಜ್ಯದ ತೆಂಗ್ನೌಪಾಲ್-ಸಮ್ತಾಲ್ ರಸ್ತೆಯಲ್ಲಿ ದಿನಚರಿಯಂತೆ ಬೆಳಗಿನ ಸಮಯದ ಪಹರೆ ನಡೆಸುತ್ತಿತ್ತು. ಬೆಳಗಿನ ಸುಮಾರು 6:00 ಗಂಟೆಯ ಹೊತ್ತಿಗೆ ಐದು ವಾಹನಗಳಲ್ಲಿದ್ದ 29 ಸೈನಿಕರ ತುಕಡಿಯು ಪಾರಾಲಾಂಗ್ ಮತ್ತು ಚರಾಂಗ್ ಗ್ರಾಮಗಳ ಸಮೀಪವಿದ್ದಾಗ ಉಗ್ರಗಾಮಿಗಳು ದಾಳಿ ನಡೆಸಿದರು. ಮೊದಲಿಗೆ ರಾಕೆಟ್ ಲಾಂಚರ್ ಮೂಲಕ ವಾಹನಗಳ ಮೇಲೆ ಗ್ರೆನೇಡ್ಗಳನ್ನು ಎಸೆದು ಸಿಡಿಸಿದ ಉಗ್ರರು, ಅನಂತರ ಆಟೋಮ್ಯಾಟಿಕ್ ಗನ್ಗಳ ಮೂಲಕ ಸತತ ಗುಂಡಿನ ದಾಳಿಯನ್ನು ನಡೆಸಿದರು. ಮೂರು ಗಂಟೆಗಳ ಕಾಲ ನಡೆದ ಈ ದಾಳಿಯಲ್ಲಿ 18 ಸೈನಿಕರು ಸ್ಥಳದಲ್ಲೇ ಅಸುನೀಗಿದರೆ, 11 ಮಂದಿ ಪ್ರಾಣಾಂತಿಕವಾಗಿ ಗಾಯಗೊಂಡರು. ಪೂರ್ವಾಂಚಲ ಭಾರತದಲ್ಲಿ ಅನೇಕ ವರ್ಷಗಳ ನಂತರ ನಡೆದ ಅತ್ಯಂತ ಘೋರ ದಾಳಿ ಇದಾಗಿತ್ತು. ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ ಆಫ್ ವೆಸ್ಟರ್ನ್ ಸೌತ್ ಈಸ್ಟ್ ಏಷಿಯಾ (United National Liberation Front of Western South East Asia) ಗುಂಪಿಗೆ ಸೇರಿದ ಉಗ್ರಗಾಮಿ ಸಂಸ್ಥೆ ಎನ್.ಎಸ್.ಸಿ.ಎನ್. (NSCN – National Socialist Council of Nagaland) ಈ ದಾಳಿಯನ್ನು ತಾನೇ ನಡೆಸಿದ್ದು ಎಂದು ಘೋಷಿಸಿತು.
ಜೂನ್ 5ರ ದಾಳಿ ನಡೆದ ಕೂಡಲೇ ಭಾರತೀಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಮಂತ್ರಿ ಮನೋಹರ ಪರಿಕ್ಕರ್ ಇದನ್ನು ತೀವ್ರವಾಗಿ ಖಂಡಿಸಿದರು. ಭಾರತದ ಪ್ರಕ್ರಿಯೆ ಕೇವಲ ಘೋಷಣೆಗಳಿಗೆ, ಖಂಡನೆಗಳಿಗೆ ಸೀಮಿತವಾಗಿರುತ್ತದೆಯೇ? ಉಗ್ರರ ಹುಟ್ಟಡಗಿಸುವತ್ತ ದಿಟ್ಟ ಹೆಜ್ಜೆಯನ್ನಿಡುವ ಎದೆಗಾರಿಕೆಯನ್ನು ಇಲ್ಲಿನ ನಾಯಕರು ಈಗಲಾದರೂ ತೋರುತ್ತಾರೆಯೇ? ಹಿಂದೆಯೂ ಈ ರೀತಿಯ ಅನೇಕ ಉಗ್ರ ದಾಳಿಗಳು ನಡೆದಿದ್ದವು. ಭಾರತಕ್ಕೆ ದಾಳಿಗಳು ಹೊಸತೇನಲ್ಲ. ಆಗ ಇದ್ದ ಸರ್ಕಾರಗಳು ದಾಳಿಗಳನ್ನು ಖಂಡಿಸುತ್ತಿದ್ದವು; ಇದನ್ನು ಹತ್ತಿಕ್ಕಲು ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳ ಸಹಾಯ ಕೇಳುತ್ತಿದ್ದವು; ಸ್ವಲ್ಪ ಸಮಯದ ನಂತರ ಎಲ್ಲವೂ ಮರೆತುಹೋಗುತ್ತಿತ್ತು. ‘ಅಹಿಂಸೆ’ಯ ಮುಖವಾಡದಲ್ಲಿ ಭಾರತವು ಪಾಲಿಸುತ್ತಿದ್ದುದು ಹೇಡಿತನ ಎನ್ನುವುದು ಆ ಸರ್ಕಾರಗಳಿಗೆ ಅರ್ಥವಾಗುತ್ತಲೇ ಇರಲಿಲ್ಲ. ಅಥವಾ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆಂದು ಆ ನಾಯಕರಿಗೆ ಅನ್ನಿಸುತ್ತಿರಲಿಲ್ಲ. ನಾಯಕರ ಈ ಹೇಡಿತನಕ್ಕೆ ನೂರಾರು ಶೂರ ಸೈನಿಕರ ರಕ್ತವನ್ನು ಹರಿಸುವಂತಾಗಿದ್ದು ದೇಶದ ದುರದೃಷ್ಟ. ಈ ರೀತಿಯ ದಾಳಿಗಳಾಗಿ ಸೈನಿಕರ ಹತ್ಯೆಯಾದಾಗ ಸೇಡು ತೀರಿಸಿಕೊಳ್ಳಬೇಕೆಂದು ಸೈನಿಕರಿಗೆ ತುಡಿಯುತ್ತಿರುತ್ತದೆ. ಆದರೆ, ಅವರೆಲ್ಲರೂ ರಾಜಕೀಯ ನಾಯಕರ ಆಜ್ಞೆಗೆ ಕಾಯಬೇಕಾಗುತ್ತದೆ. ಆ ರೀತಿಯ ಆಜ್ಞೆ ಬರುವುದೇ ಇಲ್ಲ.
ಆದರೆ, ಇದೀಗ ಭಾರತದ ನಾಯಕತ್ವ ಬದಲಾಗಿದೆ. ಅದು ಕೇವಲ ಬಾಯಿಮಾತಿಗೆ ತೃಪ್ತವಾಗುವುದಿಲ್ಲ. ಅವರಿಂದ ದೇಶ ಬಹಳಷ್ಟು ನಿರೀಕ್ಷಿಸುತ್ತಿದೆ. ಹಿಂದಿನ ಯಾವ ಸರ್ಕಾರಗಳೂ ಕೈಹಾಕದಂತಹ ಸಾಹಸಕ್ಕೆ ಈ ಸರ್ಕಾರ ಕೈಹಾಕಬೇಕೆಂದು ದೇಶದ ಜನ ಬಯಸುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಮಂತ್ರಿ ಮನೋಹರ್ ಪರಿಕ್ಕರ್ ಜನರ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಕೇವಲ ಖಂಡನೆಗೇ ತಮ್ಮ ಪ್ರತಿಕ್ರಿಯೆಯನ್ನು ಮೀಸಲಿಡಲಿಲ್ಲ. ಅವರು ತಕ್ಷಣವೇ ಕಾರ್ಯತತ್ಪರರಾದರು. ಹೊರಗಿನ ಜಗತ್ತಿನ ಮಟ್ಟಿಗೆ ಎಲ್ಲವೂ ಶಾಂತವಾಗಿತ್ತು, ಹಿಂದಿನಂತೆಯೇ ಭಾರತವು ಹೆಚ್ಚೇನೂ ಮಾಡಲಾರದು ಎಂದೇ ಅನೇಕರು ತಿಳಿದಿದ್ದರು. ಆದರೆ, ದಾಳಿಯಾದ ಕೆಲವೇ ಗಂಟೆಗಳಲ್ಲಿ ತ್ವರಿತಗತಿಯಲ್ಲಿ ಒಂದಾದ ಮೇಲೊಂದು ಚಟುವಟಿಕೆಗಳು ಆರಂಭಗೊಂಡಿದ್ದವು. ಎಲ್ಲವೂ ರಹಸ್ಯವಾಗಿ ನಡೆದಿದ್ದವು! ಭಾರತೀಯ ಪಡೆಗಳ ಅತ್ಯುನ್ನತ ಅಧಿಕಾರಿಗಳಿಗೆ ಕರೆ ಹೋಯಿತು. ಮುಂದಿನ ಕ್ರಮಗಳ ಕುರಿತಾಗಿ ಚಿಂತನೆ ನಡೆಸಿದರು.
ತೀವ್ರವಾಗಿ ಗಾಯಗೊಂಡಿದ್ದ ಸೈನಿಕರನ್ನು ಸೈನ್ಯದ ಹೆಲಿಕಾಪ್ಟರ್ಗಳ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಗೆ ಹೋಗುವಾಗಲೂ ಗಾಯಗೊಂಡಿದ್ದ ಈ ಹನ್ನೊಂದು ಸೈನಿಕರ ಮನಸ್ಸಿನಲ್ಲಿದ್ದದ್ದು ಒಂದೇ ಆಲೋಚನೆ – ಸೇಡು ಸೇಡು ಸೇಡು, ಉಗ್ರಗಾಮಿಗಳ ನಿಗ್ರಹ, ಶತ್ರು ದಮನ! ಹೆಲಿಕಾಪ್ಟರ್ನಲ್ಲಿ ಗಾಯಾಳು ಸೈನಿಕರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಮಯದಲ್ಲೇ, ಇತ್ತ ದೆಹಲಿಯಲ್ಲಿ ಕಮಾಂಡೋಗಳ ತಂಡವೊಂದು, ಆಂತರಿಕ ಕಲಹಗಳು ಹಾಗೂ ಅಂತರ್ಯುದ್ಧಗಳಿಂದ ಕಂಗೆಟ್ಟು ಸಂಯುಕ್ತ ರಾಷ್ಟ್ರ ಸಂಘದ ಸಹಾಯಕ್ಕಾಗಿ ಆರ್ತ ಮೊರೆಯಿಟ್ಟಿದ್ದ ‘ಡೆಮೊಕ್ರ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋ’ ದೇಶಕ್ಕೆ ಹೊರಡಲು ಸಿದ್ಧತೆ ನಡೆಸಿತ್ತು. ಭಾರತೀಯ ಸೈನ್ಯದಲ್ಲಿ ವಿಶೇಷ ತರಬೇತಿ ಪಡೆದು ಯಾವುದೇ ಪರಿಸ್ಥಿತಿಗಳನ್ನೂ ಎದುರಿಸಲು ಸಿದ್ಧರಾಗಿದ್ದು, ಪ್ರತಿಷ್ಠಿತ ವಿಶೇಷ ಪಡೆಗೆ ಸೇರಿದ್ದ ಕಮಾಂಡೋಗಳು ಇವರು. ಸಂಯುಕ್ತ ರಾಷ್ಟ್ರ ಸಂಘದ ಶಾಂತಿ ಪಡೆಗಳ ಪರವಾಗಿ ಕರ್ತವ್ಯ ನಿರ್ವಹಿಸಲು ಇವರು ಹೊರಟಿದ್ದರು. ಕಾಂಗೋದ ಉತ್ತರ-ಕಿವು ಪ್ರಾಂತದಲ್ಲಿ ಈಗಾಗಲೇ ಕಾರ್ಯನಿರತರಾಗಿದ್ದ 500 ಭಾರತೀಯ ಪಡೆಗಳ ಜೊತೆಗೆ ಇವರು ಸೇರಿಕೊಳ್ಳಬೇಕಾಗಿತ್ತು. ಈ ತಂಡವು ಉತ್ತರ-ಕಿವು ಪ್ರಾಂತದ ಗೋಮಾವನ್ನು ಪ್ರಧಾನ ಕಛೇರಿ ಮಾಡಿಕೊಂಡು ಅಲ್ಲಿನ 62,000 ಚದರ ಕಿಲೋಮೀಟರ್ ಪ್ರದೇಶವನ್ನು ನೋಡಿಕೊಳ್ಳಬೇಕಾಗಿತ್ತು. ಆ ಪ್ರದೇಶವು ಕಲಹಗಳಿಂದ ಕಂಗೆಟ್ಟಿದ್ದರೂ, ರುದ್ರ ರಮಣೀಯ ಪ್ರದೇಶವಾಗಿತ್ತು – ಸರೋವರಗಳು, ಪರ್ವತಗಳು, ಜ್ವಾಲಾಮುಖಿಗಳು, ಸವನ್ನಾಗಳು, ನದಿಗಳಿಂದ ಕಂಗೊಳಿಸುತ್ತಿತ್ತು. ಇಂದು ಅಲ್ಲಿದ್ದ ಪರಿಸ್ಥಿತಿಯನ್ನು ನಿಭಾಯಿಸಲು ಈ ಕಮಾಂಡೋಗಳಿಗಿಂತ ಸಮರ್ಥರು ಇನ್ನಾರಿದ್ದಾರು?
ಈ ತಂಡವು ದೆಹಲಿಯ ಪಾಲಂ ವಿಮಾನ ನಿಲ್ದಾಣದಿಂದ ಇನ್ನೇನು ಹೊರಡಬೇಕು ಎನ್ನುವಾಗ ಅವರಿಗೆ ತಮ್ಮ ಕೇಂದ್ರ ಕಛೇರಿಯಾದ ಅಸ್ಸಾಮಿನ ಜೊರ್ಹಾಟ್ನಿಂದ ತುರ್ತು ಸಂದೇಶವೊಂದು ತಲಪಿತು. ಕಾಂಗೋ ಪ್ರಯಾಣವನ್ನು ಮುಂದೂಡಲಾಗಿತ್ತು. ಅವರೆಲ್ಲರಿಗೂ ಕಾಂಗೋ ಕಡೆಗೆ ಹೊರಟು ನಿಂತಿದ್ದ ವಿಮಾನದ ಬದಲಾಗಿ ಮತ್ತೊಂದು ವಿಮಾನವನ್ನೇರಲು ತಿಳಿಸಲಾಯಿತು. ಅದು ಭಾರತೀಯ ವಿಮಾನ ಪಡೆಯ ‘ವೈಲ್ಡ್ ವೈಪರ್ಸ್’ ಸ್ಕ್ವಾಡ್ರನ್ಗೆ ಸೇರಿದ್ದ ಸಿ-130ಜೆ ಸೂಪರ್ ಹಕ್ರ್ಯುಲಿಸ್ ವಿಮಾನ. ಆ ವಿಮಾನವು ದೆಹಲಿಯಿಂದ 2350 ಕಿ.ಮೀ. ದೂರದಲ್ಲಿದ್ದ ಮಣಿಪುರಕ್ಕೆ ಕಮಾಂಡೋಗಳನ್ನು ತಲಪಿಸಿತು.
ಮಣಿಪುರದಲ್ಲಿ ನಡೆದಿದ್ದ ಉಗ್ರರ ದಾಳಿಯ ವಿಷಯ ಈ ಕಮಾಂಡೋಗಳಿಗೆ ಈಗಾಗಲೇ ತಿಳಿದಿತ್ತು. ಕಡೆಯ ನಿಮಿಷದಲ್ಲಿ ಪೂರ್ವನಿಯೋಜಿತ ಕಾರ್ಯಕ್ರಮ ರದ್ದಾಗಿ, ಮಣಿಪುರದ ಕಡೆಗೆ ತಮ್ಮನ್ನು ತುರ್ತಾಗಿ ಕರೆದೊಯ್ಯುತ್ತಿರುವುದು ವಿಶೇಷ ಕಾರಣಕ್ಕಾಗಿಯೇ ಎನ್ನುವುದನ್ನೂ ಅವರು ಊಹಿಸಿದ್ದರು. ಆದರೆ, ಮುಂದಿನ ಕ್ರಮ ಯಾವ ರೀತಿ ಇರುತ್ತದೆ, ತಮ್ಮ ಪಾತ್ರವೇನು ಎನ್ನುವುದೆಲ್ಲ ತಿಳಿದದ್ದು ಮರುದಿನವೇ. ಭಾರತೀಯ ಸೈನ್ಯದ ಎಲ್ಲ ಸೈನಿಕರೂ ಕೋಪದಿಂದ ಕುದಿಯುತ್ತಿದ್ದರು, ಬೆಂಕಿಯನ್ನು ಉಗುಳುತ್ತಿದ್ದರು, ಸೇಡಿಗಾಗಿ ಅವರ ಹೃದಯ ಕಾತರಿಸುತ್ತಿತ್ತು. ಆದರೆ, ಯಾರ ಮೇಲೆ ಸೇಡು ತೀರಿಸಿಕೊಳ್ಳುವುದು? ದಾಳಿ ಮಾಡಿದವರು ಅಲ್ಲೇ ಕಾಯುತ್ತಾ ಕುಳಿತಿರುತ್ತಾರೇನು? ದಾಳಿ ಮಾಡಿದವರು ಯಾರೆನ್ನುವುದು ತಿಳಿಯಬೇಡವೇ?
ತಕ್ಷಣವೇ ಕಾರ್ಯಕ್ಕಿಳಿದಿದ್ದ ಗುಪ್ತಚರ ದಳ ಈ ಎಲ್ಲ ಮಾಹಿತಿಗಳನ್ನೂ ಸಂಗ್ರಹಿಸಿತು. ಉಗ್ರರ ಮೂರು ಗುಂಪುಗಳು ಈ ದಾಳಿಯನ್ನು ನಡೆಸಿದ್ದವು – ಖಪ್ಲಾಂಗ್ ನೇತೃತ್ವದ ಎನ್.ಎಸ್.ಸಿ.ಎನ್.-ಕೆ (NSCN-K), ಕಾಂಗ್ಲೈಪಕ್ ಕಮ್ಯುನಿಸ್ಟ್ ಪಕ್ಷ (Kangleipak Communist Party) ಮತ್ತು ಕಾಂಗ್ಲೈ ಯಾವೋಲ್ ಕನ್ನ ಲೂಪ್ (Kanglei Yawol Kanna Lup). ದಾಳಿಗೆ ಒಳಪಟ್ಟಿದ್ದ ಡೋಗ್ರಾ ರೆಜಿಮೆಂಟ್ ಮಣಿಪುರದಲ್ಲಿ ಮೂರು ವರ್ಷದ ಕಾರ್ಯಾವಧಿಯನ್ನು ಪೂರೈಸಿ ಉತ್ತರಭಾರತದ ಮತ್ತೊಂದು ಸ್ಥಳಕ್ಕೆ ಹೊರಡುವ ಸನ್ನಾಹದಲ್ಲಿತ್ತು. ದಾಳಿ ನಡೆಸಿದ ಉಗ್ರರು, ದಾಳಿ ನಡೆಸಿದ ನಂತರದಲ್ಲಿ ಮ್ಯಾನ್ಮಾರ್ ಗಡಿ ದಾಟಿ ತಪ್ಪಿಸಿಕೊಂಡು ಹೋಗಿದ್ದರು. ಅವರು ಮ್ಯಾನ್ಮಾರಿನ ಗಡಿಯಲ್ಲಿದ್ದ ಅರಣ್ಯಗಳಲ್ಲಿ ಸ್ಥಾಪಿತವಾಗಿದ್ದ ಶಿಬಿರಗಳಲ್ಲಿ ತರಬೇತಿ ಹೊಂದಿದ್ದರು ಮತ್ತು ಅಲ್ಲೇ ಗುಪ್ತವಾಗಿ ನೆಲಸಿದ್ದರು. ಈ ಹಿಂದೆ ನಡೆಸಿದ್ದ ದಾಳಿಗಳ ನಂತರವೂ ಇದೇ ರೀತಿ ತಪ್ಪಿಸಿಕೊಂಡು ಹೋಗಿದ್ದರು. ಇದು ಅವರಿಗೆ ಅಭ್ಯಾಸವಾಗಿತ್ತು. ಗಡಿಯನ್ನು ದಾಟಿ ಹೋದ ನಂತರ ಭಾರತೀಯ ಸೈನಿಕರು ಅವರನ್ನು ಬೆನ್ನಟ್ಟಿ ಬರುವ ಸಾಧ್ಯತೆಗಳಿರಲಿಲ್ಲ, ಭಾರತವು ಅಂತಾರಾಷ್ಟ್ರೀಯ ಗಡಿಯನ್ನು ದಾಟುವ ದುಸ್ಸಾಹಸವನ್ನು ಮಾಡದು ಎನ್ನುವುದು ಅವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಹೀಗಾಗಿ ಅವರಿಗೆ ಯಾವ ಅಂಜಿಕೆಯೂ ಇರಲಿಲ್ಲ.
ಆದರೆ, ಜೂನ್ 5ರ ದಾಳಿ ಹೊಸ ಇತಿಹಾಸಕ್ಕೆ ನಾಂದಿಯಾಗಲಿದೆ ಎನ್ನುವುದು ಇವರಿಗೆ ತಿಳಿದಿರಲಿಲ್ಲ!
ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಡನೆ ಬಾಂಗ್ಲಾದೇಶ ಪ್ರವಾಸದಲ್ಲಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರು ತಮ್ಮ ಪ್ರವಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ದೆಹಲಿಗೆ ಹಿಂತಿರುಗಿದ್ದರು. ಇಂಗ್ಲೆಂಡಿಗೆ ಪ್ರವಾಸಕ್ಕೆ ತೆರಳಬೇಕಿದ್ದ ಭಾರತೀಯ ಸೈನ್ಯದ ಮಹಾದಂಡನಾಯಕ ಜನರಲ್ ದಲ್ಬೀರ್ಸಿಂಗ್ ಅವರು ತಮ್ಮ ಪ್ರವಾಸವನ್ನು ರದ್ದುಗೊಳಿಸಿ ಮಣಿಪುರದ ರಾಜಧಾನಿ ಇಂಫಾಲ್ಗೆ ಧಾವಿಸಿದರು. ಅಲ್ಲಿ ಲೆಫ್ಟಿನೆಂಟ್-ಜನರಲ್ ಬಿಪಿನ್ ರಾವತ್ ಅವರು ದಲ್ಬೀರ್ಸಿಂಗ್ ಅವರಿಗೆ ನಡೆದಿದ್ದ ಘಟನೆಯ ವಿವರಗಳನ್ನು ನೀಡಿದರು. ತಮ್ಮ ಮುಂದಿದ್ದ ಮೇಜಿನ ಮೇಲೆ ಆ ಪ್ರದೇಶದ ನಕ್ಷೆಯನ್ನು ಬಿಡಿಸಿಟ್ಟುಕೊಂಡು, ಉಗ್ರರು ಅಡಗಿದ್ದ ಶಿಬಿರಗಳನ್ನು ತೋರಿಸಿದರು – ಅವುಗಳನ್ನು ಕೆಂಪುಬಣ್ಣದಿಂದ ಗುರುತಿಸಲಾಗಿತ್ತು. ಈ ಶಿಬಿರಗಳು ಮಣಿಪುರ ಮತ್ತು ನಾಗಾಲ್ಯಾಂಡ್ ರಾಜ್ಯಗಳಿಗೆ ಹೊಂದಿಕೊಂಡಿದ್ದ ಮ್ಯಾನ್ಮಾರ್ ಗಡಿಯ ಒಳಗಿದ್ದ ಅರಣ್ಯಗಳಲ್ಲಿ ಸ್ಥಾಪಿತವಾಗಿದ್ದವು. ಈ ಪ್ರದೇಶಗಳನ್ನು ತಲಪುವುದು ಭಾರತೀಯ ಸೈನಿಕರಿಗೇನೂ ಅಸಾಧ್ಯವಿರಲಿಲ್ಲ. ಸೈನ್ಯದ ಮುಖ್ಯಸ್ಥರ ಆಜ್ಞೆಗಾಗಿ ಅವರು ಕಾಯುತ್ತಿದ್ದರು, ಅಷ್ಟೆ. ಎಲ್ಲವನ್ನೂ ಶಾಂತವಾಗಿ ಕೇಳಿಸಿಕೊಂಡ ದಲ್ಬೀರ್ಸಿಂಗ್ ಅವರು, ಭಾರತ ಸರ್ಕಾರದ ಅತ್ಯುನ್ನತ ಸ್ತರದಲ್ಲಿ ತೆಗೆದುಕೊಂಡಿದ್ದ ನಿರ್ಧಾರವನ್ನು ತಿಳಿಸಿದರು. ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿ ಅವನ್ನು ನಾಶಪಡಿಸುವ ಕಾರ್ಯಾಚರಣೆ – ಇಡೀ ಯೋಜನೆಯ ನೇತೃತ್ವ ವಹಿಸಿರುವುದು ಭಾರತ ಸರ್ಕಾರದ ರಕ್ಷಣಾಮಂತ್ರಿಗಳು! ಭಾರತೀಯ ಸೈನಿಕರು ಹಾತೊರೆಯುತ್ತಿದ್ದ ಗಳಿಗೆ ಬಂದಿತ್ತು!
ಕಾರ್ಯಾಚರಣೆಗೆ ಹೋಗಬೇಕಿದ್ದ ತಂಡಕ್ಕೆ ಲೆಫ್ಟಿನೆಂಟ್-ಕರ್ನಲ್ ಆಸ್ಕರ್ ಡೆಲ್ಟಾ ಅವರನ್ನು ನಾಯಕನನ್ನಾಗಿ ನೇಮಿಸಲಾಯಿತು. 35ರ ಹರೆಯದ ಆಸ್ಕರ್ ಡೆಲ್ಟಾ ಅವರು ಭಾರತೀಯ ಸೈನ್ಯದ ಪರ್ವತ ವಿಭಾಗದ ಪ್ರಧಾನ ಕಛೇರಿಯಿದ್ದ ಮಣಿಪುರ ರಾಜ್ಯದ ಲೈಮ್ಖಾಂಗ್ ಅನ್ನು ಕೇಂದ್ರವನ್ನಾಗಿ ಮಾಡಿಕೊಂಡು ಕಾರ್ಯನಿರತರಾಗಿದ್ದರು. 18 ಸೈನಿಕರು ಹತರಾದ ಸುದ್ದಿ ಇವರನ್ನು ಬರಸಿಡಿಲಿನಂತೆ ಅಪ್ಪಳಿಸಿತ್ತು. ಸುದ್ದಿಯನ್ನು ಕೇಳಿ ಇವರ ಕುದಿಯುತ್ತಿತ್ತು. ಪೂರ್ವಾಂಚಲದ ಉಗ್ರರ ಗುಂಪುಗಳ ವಿಷಯವಾಗಲಿ, ಅವು ಆಗಾಗ ನಡೆಸುತ್ತಿದ್ದ ದಾಳಿಗಳಾಗಲಿ ಡೆಲ್ಟಾ ಅವರಿಗೆ ಹೊಸತೇನಲ್ಲ. ಆದರೆ, ಒಂದೇ ದಾಳಿಯಲ್ಲಿ 18 ಸೈನಿಕರು ಹತರಾಗಿದ್ದು ಸಾಮಾನ್ಯವಲ್ಲ, ಅದು ಅತ್ಯಂತ ಘೋರ ದಾಳಿಯಾಗಿತ್ತು. ವಿಶೇಷ ಪಡೆಗಳ (Para Special Force) ಸೆಕಂಡ್-ಇನ್-ಕಮ್ಯಾಂಡ್ ಆಗಿದ್ದ ಡೆಲ್ಟಾ ಅವರು ಉಗ್ರರಿಗೂ ಚೆನ್ನಾಗಿ ಪರಿಚಯವಿದ್ದರು. 14 ವರ್ಷಗಳ ಕಾಲ ಸೈನ್ಯದಲ್ಲಿ ಕೆಲಸ ಮಾಡಿದ್ದ ಡೆಲ್ಟಾ ಅವರು, ತಮ್ಮ ಹೆಚ್ಚಿನ ಸಮಯವನ್ನೆಲ್ಲ ಪೂರ್ವಾಂಚಲದ ಬೆಟ್ಟ-ಗುಡ್ಡಗಳಲ್ಲಿ, ಅರಣ್ಯಗಳಲ್ಲಿ ಉಗ್ರರನ್ನು ಬೇಟೆಯಾಡುವುದರಲ್ಲಿ, ಅವರನ್ನು ಮಟ್ಟಹಾಕುವುದರಲ್ಲೇ ಕಳೆದಿದ್ದರು. ಅವರಿಗೆ 2004ರಲ್ಲಿ ಶೌರ್ಯ ಪ್ರಶಸ್ತಿಯೂ ದೊರಕಿತ್ತು. ಹೀಗಾಗಿ, ಉಗ್ರರ ದೃಷ್ಟಿ ಇವರ ಮೇಲೆ ಸದಾ ಇದ್ದಿತು. ಅವರ ಮೋಸ್ಟ್-ವಾಂಟೆಡ್ ಪಟ್ಟಿಯಲ್ಲಿ ಇವರ ಹೆಸರೇ ಮೊದಲಿತ್ತು. ಹಾಗೆಂದು, ಡೆಲ್ಟಾ ಅವರೇನೂ ಅಡಗಿ ಕುಳಿತಿರಲಿಲ್ಲ ಅಥವಾ ತಮ್ಮ ಕೆಲಸವನ್ನೇನೂ ಬದಲಾಯಿಸಿಕೊಂಡಿರಲಿಲ್ಲ. ಅವರು ನಿರ್ಭೀತರಾಗಿ ತಮ್ಮ ಕೆಲಸವನ್ನು ಮುಂದುವರಿಸಿದ್ದರು. ಹೆದರುವುದಾದರೆ ಉಗ್ರರೇ ತನ್ನನ್ನು ಕಂಡು ಹೆದರಬೇಕು, ಎನ್ನುವುದು ಡೆಲ್ಟಾ ಅವರ ವಾದವಾಗಿತ್ತು.
ಲೆಫ್ಟಿನೆಂಟ್-ಕರ್ನಲ್ ಡೆಲ್ಟಾ ಮತ್ತು ಅವರ ತಂಡಕ್ಕೆ ಕಾರ್ಯಾಚರಣೆಯ ಹೊಣೆಯನ್ನು ನೀಡಿದಾಗ, ಅವರಿಗೇನೂ ಆಶ್ಚರ್ಯವಾಗಲಿಲ್ಲ. ಅವರು ಈಗಾಗಲೇ ಇದಕ್ಕೆ ತಯಾರಾಗಿದ್ದರು. ಈ ರೀತಿಯ ಕರೆ ಬರಲೆಂದೇ ಅವರು ಕಾಯುತ್ತಿದ್ದವರು. ಜೂನ್ 5ರಂದೇ ಅವರು ಮ್ಯಾನ್ಮಾರ್ ಒಳಗೆ ನುಗ್ಗಿ ಉಗ್ರರ ಶಿಬಿರ ನಾಶಗೊಳಿಸುವ ತಯಾರಿ ನಡೆಸಿಕೊಂಡಿದ್ದರು. ಇದಕ್ಕೆ ಒಂದು ತಿಂಗಳ ಮುಂಚೆ, ಅಂದರೆ 2015ರ ಮೇ 4ರಂದು ಮಣಿಪುರದ ಮೋನ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ್ದ ದಾಳಿಯಲ್ಲಿ 8 ಜನ ಸೈನಿಕರು ಹತರಾಗಿದ್ದಕ್ಕೆ ಪ್ರತೀಕಾರ ಕೈಗೊಳ್ಳಲು ನಡೆಸಿದ್ದ ತಯಾರಿ ಇದು. ಆದರೆ, ಜೂನ್ 5ರಂದು ಮತ್ತೊಂದು ದಾಳಿ ನಡೆದಿದ್ದರಿಂದ ಇವರ ಯೋಜನೆಗೆ ತಡೆಬಿದ್ದಿತು. ಆದರೆ ಇವರ ತಯಾರಿ ವ್ಯರ್ಥವಾಗಲಿಲ್ಲ. ಜೂನ್ 6ರಂದು ಮಹಾದಂಡನಾಯಕ ದಲ್ಬೀರ್ ಸಿಂಗ್ ಅವರಿಗೆ ಲೆಫ್ಟಿನೆಂಟ್-ಜನರಲ್ ಬಿಪಿನ್ ರಾವತ್ ಅವರು ವಿವರಣೆ ನೀಡುವಾಗ ಲೆಫ್ಟಿನೆಂಟ್-ಕರ್ನಲ್ ಡೆಲ್ಟಾ ಕೂಡಾ ಅಲ್ಲಿದ್ದರು. ತಾವು ಏನು ಮಾಡಲಿದ್ದೇವೆ ಎನ್ನುವುದು ಅವರಿಗೆ ಸ್ಪಷ್ಟವಾಯಿತು. ಆದರೆ ಅದನ್ನು ಹೇಗೆ ಮಾಡಲಿದ್ದೇವೆ ಎನ್ನುವುದು ಇನ್ನೂ ಸ್ಪಷ್ಟವಿರಲಿಲ್ಲ. ಮುಂದಿನ 72 ಗಂಟೆಗಳಲ್ಲಿ ಕಾರ್ಯಾಚರಣೆ ಮುಗಿದಿರಬೇಕು, ಜೂನ್ 7ರಂದೇ ಹೊರಡಬೇಕು ಎಂದು ತಿಳಿಸಲಾಯಿತು.
ದಲ್ಬೀರ್ಸಿಂಗ್ ಅವರ ಭೇಟಿಯ ನಂತರ ಅಲ್ಲೇ ಸ್ವಲ್ಪ ಹೊತ್ತು ಉಳಿಯುವಂತೆ ಡೆಲ್ಟಾ ಅವರಿಗೆ ಹಿರಿಯ ಅಧಿಕಾರಿಗಳು ತಿಳಿಸಿದರು. ಆ ಸಮಯದಲ್ಲಿ ಕಾರ್ಯಾಚರಣೆಯ ಎಲ್ಲ ವಿವರಗಳನ್ನೂ ಚರ್ಚಿಸಲಾಯಿತು. ಎರಡು ತಂಡಗಳು ಏಕಕಾಲಕ್ಕೆ ಎರಡು ಬೇರೆಬೇರೆ ಸ್ಥಳಗಳಿಂದ ದಾಳಿ ನಡೆಸುವುದೆಂದು ನಿಶ್ಚಯಿಸಲಾಯಿತು. ಒಂದು ತಂಡ ಮಣಿಪುರದ ದಾರಿಯನ್ನು ಹಿಡಿದರೆ, ಮತ್ತೊಂದು ತಂಡ ನಾಗಾಲ್ಯಾಂಡ್ ದಾರಿಯನ್ನು ಹಿಡಿಯುವುದು. ಕಮಾಂಡೋಗಳು ತಾವು ಆಘಾತ ನಡೆಸಬೇಕಾದ ಗುರಿಗಳನ್ನು ಸರಿಯಾಗಿ ಆರಿಸಿಕೊಳ್ಳಬೇಕು. ಯಾವ ಶಿಬಿರದಲ್ಲಿ ಹೆಚ್ಚಿನ ಉಗ್ರರು ನೆಲಸಿರುವರೋ ಅಂತಹ ಶಿಬಿರಗಳ ಮೇಲೆ ದಾಳಿ ಮಾಡಬೇಕು. ಹೆಚ್ಚಿನ ಉಗ್ರರ ನಾಶವಾದರೆ ಮಾತ್ರ ದಾಳಿಯು ಸಾರ್ಥಕವಾಗುತ್ತದೆ ಎಂದು ತಿಳಿಸಲಾಯಿತು. ದಾಳಿ ಮಾಡಿದ ಶಿಬಿರಗಳಲ್ಲಿ ಅತಿ ಕಡಮೆ ಉಗ್ರರಿದ್ದರೆ ದಾಳಿ ಮಾಡುವುದು ವ್ಯರ್ಥವಾಗುತ್ತದೆ ಎಂದು ಎಚ್ಚರಿಸಲಾಯಿತು. ಹೀಗಾಗಿ ಶಿಬಿರಗಳ ಆಯ್ಕೆಗೆ ಪ್ರಾರಂಭದ ಹಲವು ಗಂಟೆಗಳನ್ನು ಮೀಸಲಿಡಲಾಯಿತು. ಈ ರೀತಿಯ ಸರ್ಜಿಕಲ್ ದಾಳಿಗಳಲ್ಲಿ ಹೆಚ್ಚು ಸೂಕ್ಷ್ಮವಾಗಿ ತಯಾರಿ ನಡೆಸಬೇಕಾಗುತ್ತದೆ. ಇವರ ತಯಾರಿಗೆ ಗುಪ್ತಚರ ವಿಭಾಗದ ಮಾಹಿತಿಗಳು ಮತ್ತು ಗೂಢಚಾರರ ಜಾಲ ಅತ್ಯಂತ ಪ್ರಮುಖವಾಗುತ್ತದೆ. ಇವರ ಮೂಲಕ ದೊರೆಯುವ ಸೂಕ್ಷ್ಮ ಮಾಹಿತಿಗಳ ಆಧಾರದ ಮೇಲೆಯೇ ಮುಂದಿನ ಯೋಜನೆಗಳನ್ನು ವಿವರವಾಗಿ ಮಾಡಲಾಗುತ್ತದೆ. ಗಡಿಯ ಆಚೆಗೆ ಭಾರತೀಯ ಸೈನಿಕರು ದಾಳಿ ನಡೆಸಬಹುದಾದ ಅನೇಕ ಶಿಬಿರಗಳ ಮಾಹಿತಿ ಗೂಢಚಾರರ ಮೂಲಕ ಭಾರತೀಯ ಸೈನಿಕರಿಗೆ ಲಭ್ಯವಾಗಿತ್ತು. ಅವುಗಳಲ್ಲಿ ಡೆಲ್ಟಾ ಅವರ ತಂಡಕ್ಕೆ ಮೂರು ಶಿಬಿರಗಳನ್ನು ಗುರಿಯಾಗಿ ನೀಡಲಾಯಿತು. ಅದೇ ರೀತಿ ನಾಗಾಲ್ಯಾಂಡ್ ಮೂಲಕ ಹೋಗುವ ತಂಡಕ್ಕೂ ಕೆಲವು ಶಿಬಿರಗಳ ಗುರಿಯನ್ನು ನಿಶ್ಚಯಿಸಲಾಯಿತು.
ಆದರೆ, ಇವರಿಗೆ ದೊಡ್ಡ ಸಮಸ್ಯೆಯೊಂದು ಎದುರಾಯಿತು. ಅದು ಸಮಯದ ಅಭಾವ. ಜೂನ್ 7ರ ಒಳಗೆ ಈ ಶಿಬಿರಗಳಿರುವ ತಾಣಗಳನ್ನು ತಲಪಿ ಆಕ್ರಮಣ ನಡೆಸಲು ಸಾಧ್ಯವಿರಲಿಲ್ಲ. ಅದಕ್ಕೆ ಕಾರಣ, ಆ ಶಿಬಿರಗಳು ಮ್ಯಾನ್ಮಾರಿನ ದಟ್ಟ ಅರಣ್ಯದ ಒಳಗಿದ್ದ ಶಿಬಿರಗಳು. ಅವನ್ನು ತಲಪಲು ಹೆಚ್ಚಿನ ಸಮಯ ಬೇಕಿತ್ತು. ಆ ಪ್ರದೇಶಗಳಲ್ಲಿ ಅನೇಕ ವರ್ಷ ಕಾರ್ಯ ಮಾಡಿದ ಅನುಭವವಿದ್ದ ಲೆಫ್ಟಿನೆಂಟ್-ಕರ್ನಲ್ ಡೆಲ್ಟಾ ಅವರು ತಮಗೆ ಕೆಲಸ ಒಪ್ಪಿಸಿದ್ದ ಹಿರಿಯ ಅಧಿಕಾರಿಗಳಿಗೆ ಈ ವಿಷಯವನ್ನು ಮನದಟ್ಟು ಮಾಡಿಸಿದರು. ಇದರ ಜೊತೆಗೆ ಮತ್ತೊಂದು ಮುಖ್ಯವಾದ ಸಂಗತಿಯೂ ಇದ್ದಿತು. ಅದೆಂದರೆ, ಸೈನಿಕರ ಬಲಾಬಲ. ಡೆಲ್ಟಾ ಅವರೊಡನೆ ಇದ್ದದ್ದು ಕೇವಲ 40 ಮಂದಿ ಕಮಾಂಡೋಗಳು. ಕನಿಷ್ಠ ನೂರು ಮಂದಿ ಕಮಾಂಡೋಗಳಾದರೂ ದಾಳಿಗೆ ಆವಶ್ಯಕವಿತ್ತು. ಈ ಕಾರಣಕ್ಕಾಗಿಯೇ ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋಗೆ ತೆರಳಲು ಸಿದ್ಧವಾಗಿದ್ದ ಕಮಾಂಡೋಗಳ ತಂಡವನ್ನು ಮಣಿಪುರಕ್ಕೆ ಕಳುಹಿಸಿದ್ದು. ಆ ತಂಡವು ಮಣಿಪುರದ ರಾಜದಾನಿ ಇಂಫಾಲ್ ತಲಪಿದ್ದು ಅದೇ ದಿನ ರಾತ್ರಿಯ ಸಮಯಕ್ಕೆ. ಈ ರೀತಿಯ ಮಹತ್ತ್ವದ ನಿರ್ಧಾರಗಳನ್ನು ತಕ್ಷಣವೇ ತೆಗೆದುಕೊಳ್ಳಲು ಸಾಧ್ಯವಾಗಿದ್ದು, ಸರ್ಕಾರ ಮತ್ತು ಸೈನ್ಯದಲ್ಲಿ ಅತ್ಯಂತ ಮೇಲ್ಮಟ್ಟದ ಅಧಿಕಾರಿಗಳು ಸಕ್ರಿಯವಾಗಿ ತೊಡಗಿಕೊಂಡಿದ್ದರಿಂದ ಮತ್ತು ಸ್ವತಃ ಪ್ರಧಾನಮಂತ್ರಿಗಳು ಹಾಗೂ ರಕ್ಷಣಾ ಸಚಿವರೇ ವಿಶೇಷ ಗಮನ ವಹಿಸಿದ್ದರಿಂದ. ಈ ಕಾರ್ಯಾಚರಣೆಗಾಗಿಯೇ ಲೆಫ್ಟಿನೆಂಟ್-ಜನರಲ್ ಬಿಪಿನ್ ರಾವತ್ ಅವರು ನಾಗಾಲ್ಯಾಂಡಿನ ದಿಮಾಪುರದಲ್ಲಿದ್ದ ತಮ್ಮ ಕೇಂದ್ರಕಛೇರಿಯನ್ನು ಮಣಿಪುರದ ಇಂಫಾಲ್ಗೆ ವರ್ಗಾಯಿಸಿಕೊಂಡರು. ಈ ರೀತಿ ಸೈನ್ಯದ ಅಧಿಕಾರಿಗಳು ಕಾರ್ಯಾಚರಣೆಗೆ ಅತ್ಯಂತ ಹೆಚ್ಚಿನ ಮಹತ್ತ್ವ ನೀಡಿದ್ದು, ಸರ್ಕಾರವೂ ಸೂಕ್ತ ನಿರ್ಧಾರಗಳನ್ನು ತ್ವರಿತಗತಿಯಲ್ಲಿ ತೆಗೆದುಕೊಂಡದ್ದು ಸೈನಿಕರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತು.
ಲೆಫ್ಟಿನೆಂಟ್-ಕರ್ನಲ್ ಡೆಲ್ಟಾ ಅವರ ತಂಡ ದಾಳಿ ಮಾಡಿ ನಾಶಗೊಳಿಸಬೇಕಾಗಿದ್ದ ಮೂರು ಶಿಬಿರಗಳೂ ಒಂದಕ್ಕೊಂದು ಸಮೀಪದಲ್ಲೇ ಇದ್ದಂತಹವು. ಆ ಶಿಬಿರಗಳಲ್ಲಿ 120ಕ್ಕೂ ಹೆಚ್ಚು ಉಗ್ರರು ನೆಲಸಿದ್ದರು. ಹೀಗಾಗಿಯೇ, ಕೇವಲ 40 ಕಮಾಂಡೋಗಳನ್ನು ಕರೆದುಕೊಂಡು ಹೋಗಿ ದಾಳಿ ನಡೆಸುವುದು ಸಾಧ್ಯವಾದರೂ, ಹೆಚ್ಚಿನ ಅಪಾಯಕ್ಕೆ ಸೈನಿಕರನ್ನು ಒಡ್ಡಿದಂತಾಗುತ್ತಿತ್ತು. ಡೆಲ್ಟಾ ಅವರೊಡನೆ ಚರ್ಚಿಸಿದ ನಂತರ ದಾಳಿಯ ದಿನವನ್ನು ಎರಡು ದಿನ, ಅಂದರೆ ಜೂನ್ 9ಕ್ಕೆ ಮುಂದೂಡಲಾಯಿತು. ಡೆಲ್ಟಾ ಅವರಿಗೆ ಉಸಿರಾಡಲು ಸ್ವಲ್ಪ ಸಮಯ ಸಿಕ್ಕಂತಾಯಿತು. ಇದೀಗ ಡೆಲ್ಟಾ ಮತ್ತವರ ತಂಡಕ್ಕೆ ತಮ್ಮ ಗುರಿಯನ್ನು ತಲಪಿ ಯಶಸ್ವಿ ಕಾರ್ಯಾಚರಣೆ ನಡೆಸಲು ಬೇಕಾದ ತಯಾರಿ ನಡೆಸಲು ಸಮಯ ಸಿಕ್ಕಿತು. ಮತ್ತು ಅಂದಿನ ರಾತ್ರಿ ಮಲಗಿದ ನಂತರ ಮುಂದಿನ ಮೂರು ದಿನಗಳ ಕಾಲ ನಿದ್ರಿಸಲು ಸಾಧ್ಯವಿಲ್ಲ ಎನ್ನುವುದೂ ಡೆಲ್ಟಾ ಅವರಿಗೆ ಖಚಿತವಿತ್ತು. ಜೂನ್ 8ರಂದು ಮಧ್ಯರಾತ್ರಿಯ ಹೊತ್ತಿಗೆ ತಾವು ದಾಳಿ ಮಾಡಬೇಕಿದ್ದ ಶಿಬಿರಗಳ ಸಮೀಪವಿದ್ದ ಬೆಟ್ಟಗಳ ಮೇಲಿದ್ದ ಅರಣ್ಯವನ್ನು ತಮ್ಮ ತಂಡ ತಲಪಬೇಕೆಂದು ಡೆಲ್ಟಾ ತಮ್ಮ ಸಂಗಡಿಗರಿಗೆ ತಿಳಿಸಿದರು. ಜೂನ್ 9ರ ಮುಂಜಾನೆ ದಾಳಿ ನಡೆಸುವುದು. ವಿಶೇಷ ಪಡೆಯ ಕಮಾಂಡೋಗಳ ತಂಡವು ಮೊದಲಿಗೆ ಗಡಿಯ ಸಮೀಪದಲ್ಲಿ ಮೊದಲೇ ನಿರ್ಧರಿಸಿರುವ ಸ್ಥಳವನ್ನು ತಲಪಿಕೊಳ್ಳಬೇಕು. ಅಲ್ಲಿಂದ ಒಟ್ಟಾಗಿ ಮ್ಯಾನ್ಮಾರ್ ಗಡಿಯನ್ನು ದಾಟಬೇಕು. ಈ ತಂಡದ ಪ್ರತಿಯೊಂದು ಹೆಜ್ಜೆಯೂ, ಚಲನವಲನವೂ ಅತಿ ರಹಸ್ಯವಾಗಿರಬೇಕು. ಕಡೆಯ ನಿಮಿಷದವರೆಗೂ ಉಗ್ರರಿಗೆ ಇದರ ಕಿಂಚಿತ್ ಸುಳಿವೂ ಸಿಗಕೂಡದು. ಹಾಗೇನಾದರೂ ಸುಳಿವು ಸಿಕ್ಕಲ್ಲಿ, ಇವರ ಪ್ರಯತ್ನ ವ್ಯರ್ಥವಾಗುತ್ತದೆ ಮಾತ್ರವಲ್ಲ, ಇವರೆಲ್ಲರ ಪ್ರಾಣವನ್ನೂ ವೃಥಾ ಅಪಾಯಕ್ಕೊಡ್ಡಿದಂತಾಗುತ್ತದೆ.
ಕಮಾಂಡೋಗಳು ಜನರ ಗಮನ ಸೆಳೆಯದೆ ಗಡಿಯನ್ನು ತಲಪುವುದು ಹೇಗೆ? ಶತ್ರುಗಳ ಗುಪ್ತಚರರು ಈ ಕಡೆಯೂ ಇರುತ್ತಾರಲ್ಲ, ಅವರು ಅನುಮಾನಿಸಿ ಗಡಿಯಾಚೆಗೆ ಸುಳಿವು ನೀಡಿಬಿಟ್ಟರೆ? ವಿಮಾನದಲ್ಲಿ ಅಥವಾ ಹೆಲಿಕಾಪ್ಟರ್ನಲ್ಲಿ ಹೋದರೆ ಬೇಗನೆ ಗಂತವ್ಯ ತಲಪಿಕೊಳ್ಳಬಹುದು; ಆದರೆ, ಅದು ಎಲ್ಲರ ಗಮನಕ್ಕೂ ಬರುತ್ತದೆ, ಅನುಮಾನಕ್ಕೂ ಕಾರಣವಾಗುತ್ತದೆ. ಹೀಗಾಗಿ, ಸೈನ್ಯದ ಟ್ರಕ್ಕುಗಳಲ್ಲಿ ಪ್ರಯಾಣಿಸುವುದೆಂದು ನಿಶ್ಚಯಿಸಿದರು. ಗಡಿಯ ಸಮೀಪದಲ್ಲಿ ಸೈನ್ಯದ ಟ್ರಕ್ಕುಗಳ ಓಡಾಟ, ಸೈನಿಕರು ಹೋಗುವುದು ಬರುವುದು, ಇವೆಲ್ಲ ಸಾಮಾನ್ಯ. ಹೀಗಾಗಿ, ಇದು ಯಾರ ಗಮನವನ್ನೂ ಸೆಳೆಯುವುದಿಲ್ಲ, ಯಾವ ಅನುಮಾನಕ್ಕೂ ಕಾರಣವಾಗುವುದಿಲ್ಲ. ಮತ್ತು ಇಡೀ ಯೋಜನೆ ಅತ್ಯಂತ ಗೌಪ್ಯವಾಗಿದ್ದಿತು. ಕಾರ್ಯಾಚರಣೆಯಲ್ಲಿ ಭಾಗವಹಿಸುವ ಕಮಾಂಡೋಗಳು ಮತ್ತು ಬೆರಳೆಣಿಕೆಯಷ್ಟು ಹಿರಿಯ ಅಧಿಕಾರಿಗಳನ್ನು ಬಿಟ್ಟರೆ ಇವರು ಹೋಗುತ್ತಿರುವುದೆಲ್ಲಿಗೆ, ಇವರು ದಾಳಿ ಮಾಡುವ ದಿನಾಂಕ, ಇವರ ತಂಡಗಳಲ್ಲಿ ಯಾರುಯಾರು ಇದ್ದಾರೆ, ಇವರ ಯೋಜನೆಯ ವಿವರಗಳು, ಯಾವೊಬ್ಬ ನರಪಿಳ್ಳೆಗೂ ತಿಳಿದಿರಲಿಲ್ಲ.
ಜೂನ್ 6ರ ಮುಂಜಾನೆ ಡೆಲ್ಟಾ ಅವರ ತಂಡ ಪ್ರಯಾಣ ಆರಂಭಿಸಿತು. ಒಟ್ಟು 64 ಮಂದಿ ಅತ್ಯುತ್ಕೃಷ್ಟ ಕಮಾಂಡೋಗಳಿದ್ದ ತಂಡವದು. ಪ್ರತಿಯೊಬ್ಬರೂ ಸಾಕಷ್ಟು ಭಾರ ಹೊತ್ತಿದ್ದರು – ಮಿದುಳಿನ ಮೇಲಿನ ಒತ್ತಡ ಮಾತ್ರವಲ್ಲ, ದೇಹದ ಮೇಲೂ ಭಾರ ಬಿದ್ದಿತ್ತು. ಪ್ರತಿಯೊಬ್ಬರ ಬಳಿಯೂ, ಅವರ ವೈಯಕ್ತಿಕ ಸಾಮಾನು-ಸರಂಜಾಮುಗಳ ತೂಕವೇ ಕನಿಷ್ಠ 40 ಕೆಜಿಯಷ್ಟಿತ್ತು. ಇದರ ಜೊತೆಗೆ ಅವರ ಶಸ್ತ್ರಾಸ್ತ್ರಗಳು. ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳ ವಿವರ ಹೀಗಿದೆ: ಕಾರ್ಲ್ ಗುಸ್ತವ್ 84-ಎಂಎಂ ರಾಕೆಟ್ ಲಾಂಚರ್ಗಳು, ಪುಲೆಮ್ಯೋಟ್ ಕಲಾಶ್ನಿಕೋವ್ ಮೆಶಿನ್ಗನ್ಗಳು, ಇಸ್ರೇಲ್ ನಿರ್ಮಿತ ತಾವರ್ ಟಿ.ಎ.ಆರ್-21 ಅಸ್ಸಾಲ್ಟ್ ರೈಫಲ್ಗಳು, ಕೋಲ್ಟ್ ಎಂ4 ಕಾರ್ಬೈನ್ಗಳು, ಎಕೆ-47ಗಳು, ಅಂಡರ್ ಬ್ಯಾರೆಲ್ ಗ್ರೆನೇಡ್ ಉಡಾವಣಾ ಶಸ್ತ್ರಗಳು, ಇಸ್ರೇಲಿ ಉಜಿ ಸೈಲೆನ್ಸಡ್ ಸಬ್ಮೆಶಿನ್ ಗನ್ಗಳು, ಗಲೀಲ್ 7.62-ಎಂಎಂ ಸ್ನೈಪರ್ ರೈಫಲ್ಗಳು. ಶತ್ರುಗಳಿಗೆ ತೀವ್ರಮಟ್ಟದ ಹಾನಿ ಮಾಡಲು ಬೇಕಾದಷ್ಟು ಶಸ್ತ್ರಾಸ್ತ್ರಗಳನ್ನೆಲ್ಲ ಇವರು ಹೊತ್ತಿದ್ದರು. ಭಾರತೀಯ ಸೈನ್ಯದ ಸರ್ವಸನ್ನದ್ಧವಾದ ವಿಶೇಷ ಪಡೆಯಿದು. ಅವರು ಹೊತ್ತಿದ್ದ ಶಸ್ತ್ರಾಸ್ತ್ರಗಳೂ ಅದನ್ನೇ ಹೇಳುತ್ತಿದ್ದವು. ತಂಡದ ನಾಯಕ ಲೆಫ್ಟಿನೆಂಟ್-ಕರ್ನಲ್ ಡೆಲ್ಟಾ ತಮಗಿಷ್ಟವಾದ ಎಂ4ಎ1 ಅಸ್ಸಾಲ್ಟ್ ರೈಫಲ್ ತೆಗೆದುಕೊಂಡಿದ್ದರು. ಹಗುರವಾಗಿದ್ದ ಈ ರೈಫಲ್ ಅನ್ನು ಕ್ಷಣಾರ್ಧದಲ್ಲಿ ಪ್ರಯೋಗಿಸಲು ಬರುತ್ತಿತ್ತು. ಕಮಾಂಡೋಗಳು ರೈಫಲ್ಗಳನ್ನು ಹೆಗಲಿಗೆ ತೂಗಿಹಾಕಿಕೊಂಡಿರಲಿಲ್ಲ, ಬದಲಾಗಿ ಕೈನಲ್ಲೇ ಹಿಡಿದಿದ್ದರು. ಇದಕ್ಕೆ ಕಾರಣ, ತೂಗಿಹಾಕಿಕೊಂಡಿದ್ದರೆ ಅದನ್ನು ಬಳಸಬೇಕಾದಾಗ ಕೆಲವು ಕ್ಷಣಗಳಾದರೂ ಬೇಕಾಗುತ್ತದೆ, ಕೈಯಲ್ಲಿದ್ದರೆ ತಕ್ಷಣ ಬಳಸಬಹುದು. ಒಟ್ಟಿನಲ್ಲಿ ಇವರು ಮೈಯೆಲ್ಲ ಕಣ್ಣಾಗಿ, ಎಲ್ಲ ಸಂದರ್ಭಗಳಿಗೂ ತಯಾರಾಗಿ ಹೊರಟಿದ್ದರು.
ಇವರನ್ನು ಹೊತ್ತೊಯ್ಯಲು ಆರ್ಮಿ ಟ್ರಕ್ಕುಗಳು ಸಿದ್ಧವಾಗಿ ನಿಂತಿದ್ದವು. ಇನ್ನೇನು ಟ್ರಕ್ಕಿಗೆ ಹತ್ತಿಕೊಳ್ಳಬೇಕೆನ್ನುವಾಗ, ಡೆಲ್ಟಾ ತಮ್ಮ ಶಸ್ತ್ರವನ್ನು ಪಕ್ಕದಲ್ಲಿದ್ದ ಕಮಾಂಡೋಗೆ ನೀಡಿದರು. ಕಮಾಂಡೋ ತನ್ನ ಬಳಿಯಿರುವ ಶಸ್ತ್ರಾಸ್ತ್ರವನ್ನು ಬೇರಾರಿಗೂ ನೀಡುವುದಿಲ್ಲ. ಡೆಲ್ಟಾ ಮುಂದೇನು ಮಾಡಲಿದ್ದಾರೆ ಎನ್ನುವುದು ಜೊತೆಗಾರರಿಗೆ ತಿಳಿದಿತ್ತು. ಕರ್ನಲ್ ಡೆಲ್ಟಾ ನೆಲದ ಮೇಲೆ ಮಂಡಿಯೂರಿ ಬಾಗಿ ನಮಸ್ಕರಿಸಿ ಮುತ್ತಿಟ್ಟ! ಮಾತೃಭೂಮಿಗೆ ವಂದನೆ, ವಂದೇ ಮಾತರಂ! ಇವರನ್ನೆಲ್ಲ ಹೊತ್ತ ಟ್ರಕ್ಕುಗಳು ಜೂನ್ 7ರ ಬೆಳಗಿನ ಜಾವ 3:00 ಗಂಟೆ ಹೊತ್ತಿಗೆ ಇವರು ತಲಪಬೇಕಿದ್ದ ಸ್ಥಳದಲ್ಲಿ ತಂಡವನ್ನು ಇಳಿಸಿ ವಾಪಸ್ ಹೋದವು. ಅಲ್ಲಿಂದ ಮೊದಲೇ ನಿರ್ಧರಿಸಿದ್ದ ಬೆಟ್ಟವನ್ನು ತಲಪಬೇಕು. 40 ಕಿ.ಮೀ ದೂರವಿದ್ದ ಅಲ್ಲಿಗೆ ತಲಪುವುದು ಕಾಲ್ನಡಿಗೆಯ ಮೂಲಕವೇ. ಸೂರ್ಯೋದಯವಾಗಿ ಬೆಳಕು ಹರಿದ ಕೂಡಲೇ ಎಲ್ಲರೂ ನಡೆಯಲು ಪ್ರಾರಂಭಿಸಿದರು. ಎಲ್ಲರಿಗೂ ಒಂದೇ ಗುರಿ – ತಾವು ತಲಪಬೇಕಿದ್ದ ಬೆಟ್ಟವನ್ನು ಆದಷ್ಟು ಬೇಗನೆ ತಲಪಬೇಕು, ಎಲ್ಲೂ ನಿಲ್ಲುವಂತಿಲ್ಲ. ಹಲವು ಗಂಟೆಗಳ ಕಾಲ ಸತತವಾಗಿ ನಡೆದರು. ಬೆಟ್ಟವೇರಿ ನಿಂತಾಗ ಕತ್ತಲಾಗಿತ್ತು. ಮ್ಯಾನ್ಮಾರ್ ಕಡೆಯಿಂದ ಕುಳಿರ್ಗಾಳಿ ಇವರನ್ನು ಸ್ವಾಗತಿಸಿತು. ಮುಂದಿನ 36 ಗಂಟೆಗಳಲ್ಲಿ ಕಾರ್ಯಾಚರಣೆ ಮುಗಿದಿರುತ್ತದೆ. ಇಲ್ಲಿಯವರೆಗೂ ಎಲ್ಲವೂ ಯೋಜನೆಯಂತೆಯೇ ನಡೆದಿದೆ, ಯೋಜಿಸಿದ್ದ ಸಮಯಕ್ಕೇ ಅಲ್ಲಿಗೆ ತಲಪಿದ್ದಾರೆ. ರಾತ್ರಿ ಅಲ್ಲಿಯೇ ಕಳೆದು, ಜೂನ್ 8ರ ಮುಂಜಾನೆ ಬೆಳಗಾಗುವ ಹೊತ್ತಿಗೆ ಗಡಿ ದಾಟಿ ಮ್ಯಾನ್ಮಾರ್ ಪ್ರವೇಶಿಸಿದರು. ಇನ್ನು ಇಲ್ಲಿಂದ ಹಿಂದಕ್ಕೆ ನೋಡುವಂತಿಲ್ಲ, ಬೆನ್ನು ತಿರುಗಿಸುವಂತಿಲ್ಲ, ಹೊರಟ ಕೆಲಸ ಮುಗಿಸಿದ ನಂತರವೇ ವಾಪಸ್ಸಾಗುವುದು!
ಗಡಿ ದಾಟಿದ ನಂತರ ಅರಣ್ಯಪ್ರದೇಶ, ಕಾಡುಮೇಡುಗಳ ಮರೆಯಲ್ಲಿ ಯಾರಿಗೂ ಕಾಣದಂತೆ ನಡೆಯಬಹುದು, ಅದಕ್ಕಾಗಿಯೇ ಈ ದಾರಿಯನ್ನು ಆರಿಸಿಕೊಳ್ಳಲಾಗಿತ್ತು. ಡೆಲ್ಟಾ ಮತ್ತವರ ಸಂಗಡಿಗರು 6 ಕಿ.ಮೀ. ಅರಣ್ಯಪ್ರದೇಶದಲ್ಲಿ ನಡೆದರು, ಬೆಟ್ಟಗುಡ್ಡಗಳನ್ನು ಹತ್ತಿ ಇಳಿದರು. ಇಂತಿಷ್ಟು ದೂರ ಈ ರೀತಿಯ ಪ್ರದೇಶವಿರುತ್ತದೆ, ಇತ್ಯಾದಿ ವಿವರಗಳು ಇವರಿಗೆ ಮೊದಲೇ ಸ್ಪಷ್ಟವಾಗಿ ತಿಳಿದಿತ್ತು, ಅದಕ್ಕೆ
ಅವರೆಲ್ಲರೂ ತಯಾರಾಗಿದ್ದರು. ಅವರ ಯೋಜನೆ ಮತ್ತು ನಿರೀಕ್ಷೆಯಂತೆಯೇ ಎಲ್ಲವೂ ನಡೆಯುತ್ತ ಹೋಯಿತು. ಮೊದಲೇ ಯೋಜಿಸಿದಂತೆ ತಮಗೆ ದಾರಿತೋರಿಸಲು ಮಣಿಪುರದ ಗಡಿಯ ಗ್ರಾಮದಿಂದ ಇಬ್ಬರು ಯುವಕರನ್ನು ಗೈಡ್ಗಳನ್ನಾಗಿ ಕರೆದುಕೊಂಡು ಬಂದಿದ್ದರು. ಈ ಗೈಡ್ಗಳಿಗೆ ಬರ್ಮಾದ ಭಾಷೆ ಚೆನ್ನಾಗಿ ಬರುತ್ತಿತ್ತು, ಅರಣ್ಯಪ್ರದೇಶವೂ ಚೆನ್ನಾಗಿ ಪರಿಚಿತವಿತ್ತು. ಇವರ ಭೌಗೋಳಿಕ ಜ್ಞಾನ ಮತ್ತು ಡೆಲ್ಟಾ ಅವರ ನಕ್ಷೆಯ ಅಧ್ಯಯನ – ಎರಡರ ಸಹಾಯದಿಂದ ಖಚಿತ ಮಾರ್ಗದಲ್ಲೇ ನಡೆಯುತ್ತ ಸಾಗಿದರು. ಎಲ್ಲೂ ಯಾವ ತೊಡಕೂ, ತೊಂದರೆಯೂ ಒದಗಲಿಲ್ಲ. ಯಾವ ನರಪಿಳ್ಳೆಯೂ ಓಡಾಡದ ಹಾದಿಯನ್ನು ಇವರು ಆರಿಸಿಕೊಂಡಿದ್ದರು. ಅರ್ಧ ದೂರದವರೆಗೂ ಯಾರೂ ಕಂಡಿರಲಿಲ್ಲ.
ಗಡಿಯಲ್ಲಿರುವ ಸಣ್ಣ ನದಿಯೊಂದನ್ನು ದಾಟಿ ಮುನ್ನಡೆಯುತ್ತಿದ್ದಾಗ, ಯಾರೋ ಮಾತನಾಡುತ್ತಿರುವುದು ಕೇಳಿ ಗಕ್ಕನೆ ನಿಂತರು. ಏನು ಮಾಡುವುದೆಂದು ಯೋಚಿಸುವಷ್ಟರಲ್ಲಿ ಕೆಲವು ಯುವಕರು ಇವರ ಮುಂದೆ ನಿಂತಿದ್ದರು. ಅವರ ಕೈಯಲ್ಲಿ ಉಡದಂತಹ ದೊಡ್ಡ ಗಾತ್ರದ ಹಲ್ಲಿಯನ್ನು ಹೋಲುವ ಪ್ರಾಣಿಗಳಿದ್ದವು. ಅವರು ಬರ್ಮಾದ ಭಾಷೆ ಮಾತನಾಡುತ್ತಿದ್ದರು. ಕಮಾಂಡೋಗಳ ಜೊತೆಯಿದ್ದ ಗೈಡ್ಗಳು ಈ ಯುವಕರೊಡನೆ ಮಾತನಾಡಿ ವಿಷಯವೇನೆಂದು ತಿಳಿದುಕೊಂಡರು. ಆ ಯುವಕರು ಅರಣ್ಯಪ್ರದೇಶದಲ್ಲಿ ಕಂಡಿದ್ದ ಈ ಬೃಹತ್ ಗಾತ್ರದ ಹಲ್ಲಿಗಳನ್ನು ಕೊಂದು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಆ ಪ್ರದೇಶದಲ್ಲಿ ಈ ಪ್ರಾಣಿಗಳು ವಿಶೇಷ ಖಾದ್ಯವೆನಿಸುತ್ತದೆ. ಈ ರೀತಿಯ ಪ್ರಸಂಗ ಎದುರಾಗಬಹುದೆಂದು ಡೆಲ್ಟಾ ಅವರು ಎಣಿಸಿರಲಿಲ್ಲ. ಅವರ ಎದುರು ಐವರು ಯುವಕರಿದ್ದರು. ಈಗೇನು ಮಾಡುವುದೆಂದು ತಕ್ಷಣ ನಿರ್ಧರಿಸಿಬೇಕಿತ್ತು. ಅವರನ್ನು ಅವರ ಪಾಡಿಗೆ ಬಿಟ್ಟು ಮುಂದೆ ಹೋಗುವುದು ಅತ್ಯಂತ ಸುಲಭದ ಆಯ್ಕೆಯಾಗಿತ್ತು.
ಆದರೆ, ಅವರು ಶತ್ರುಗಳ ಗೂಢಚಾರರಲ್ಲವೆಂದು ಹೇಗೆ ಹೇಳುವುದು? ಅವರೇನಾದರೂ ಗೂಢಚಾರರಾಗಿದ್ದರೆ, ಶತ್ರುಗಳಿಗೆ ತಮ್ಮ ವಿಷಯ ತಿಳಿದುಬಿಡುತ್ತದೆ. ಅವರು ಗೂಢಚಾರರಲ್ಲದಿದ್ದರೂ, ಮುಂದೆ ಸಿಗುವ ಯಾರಿಗಾದರೂ ತಮ್ಮ ವಿಷಯ ತಿಳಿಸಬಹುದು, ಅನುಮಾನಕ್ಕೆ ಊಹಾಪೋಹಗಳಿಗೆ ಕಾರಣವಾಗಬಹುದು. ಇವೆಲ್ಲವೂ ತಮ್ಮ ಮುಂದಿನ ಕಾರ್ಯಕ್ಕೆ ಅಡ್ಡಿಯುಂಟುಮಾಡುವಂತಹುವೇ. ಮತ್ತೊಂದು ಆಯ್ಕೆ, ಆ ಯುವಕರನ್ನು ಕೊಂದುಬಿಡುವುದು. ಆದರೆ, ಅವರು ಅಮಾಯಕರಾಗಿದ್ದಲ್ಲಿ ತಾವು ಮಾಡುವುದು ಬಹಳ ದೊಡ್ಡ ತಪ್ಪಾಗುತ್ತದೆ. ಅವರು ಶತ್ರುಗಳೆಂದು ಖಚಿತವಾಗದೆ ಕೊಲ್ಲುವುದು ಸರಿಯಲ್ಲ. ಇಂತಹ ಸಂದಿಗ್ಧದದಲ್ಲೇ ನಾಯಕನ ಗುಣ ಪರೀಕ್ಷೆಗೊಳಪಡುವುದು – ಚಿನ್ನವು ಅಪರಂಜಿ ಎಂದು ನಿರೂಪಿತವಾಗುವುದು ಬೆಂಕಿಗೆ ಬಿದ್ದಾಗಲೇ. ಕಮಾಂಡೋಗಳ ತಂಡದ ನಾಯಕ ಡೆಲ್ಟಾ ಅವರು ಈ ರೀತಿ ನಿರ್ಧರಿಸಿದರು – ಆ ಯುವಕರನ್ನು ಕಟ್ಟಿಹಾಕಿ ತಮ್ಮೊಡನೆ
ಕರೆದುಕೊಂಡು ಹೋಗುವುದು! ತಾವು ಕೈಗೊಂಡಿರುವ ಗುರಿಗೆ ಯಾವುದೇ ಅಪಾಯವೊದಗಬಾರದು, ಅದೇ ಸಮಯದಲ್ಲಿ ತಮ್ಮಿಂದ ಯಾವುದೇ ಅಪರಾಧವೂ ಘಟಿಸಬಾರದು, ಅಂತಹ ಜಾಣತನದ ನಿರ್ಧಾರವದು. ಹೇಗೂ ತಮ್ಮ ನಡಿಗೆಗೆ ತಡೆ ಒದಗಿದ್ದರಿಂದ, ಅಲ್ಲೇ ಮತ್ತೊಂದೈದು ನಿಮಿಷ ನಿಂತು ಊಟವನ್ನೂ ಮುಗಿಸಲು ನಿರ್ಧರಿಸಿದರು. ಎಲ್ಲರೂ ಒಟ್ಟಿಗೆ ಊಟ ಮಾಡುವಂತಿಲ್ಲ. ಊಟದಲ್ಲಿ ತಲ್ಲೀನರಾಗಿದ್ದಾಗ ಶತ್ರುಗಳು ಎರಗಿದರೆ? ಕೆಲವರು ಕಾವಲು ನಿಂತರೆ, ಉಳಿದವರು ಊಟ ಮಾಡಿದರು. ಕಾವಲು ನಿಂತವರು ಊಟ ಮಾಡುವಾಗ ಊಟವಾದವರ ಕಾವಲು. ಎಲ್ಲವನ್ನೂ ಕೆಲವೇ ನಿಮಿಷದಲ್ಲಿ ಮುಗಿಸಿ ಮುಂದಕ್ಕೋಡಬೇಕು. ಬೆಳಗ್ಗಿನಿಂದ ಒಮ್ಮೆಯೂ ನಿಲ್ಲದೆ, ಸ್ವಲ್ಪವೂ ನಡಿಗೆಯ ವೇಗವನ್ನು ತಗ್ಗಿಸದೆ ಬಂದಿದ್ದರು. ಈಗೊಂದು ಕೆಲವು ನಿಮಿಷಗಳ ವಿರಾಮ ಸಿಕ್ಕಂತಾಯಿತು. ಊಟ ಮುಗಿದ ಕೂಡಲೇ ತಮ್ಮ ಪ್ರಯಾಣವನ್ನು ಮುಂದುವರಿಸಿದರು.
ಸ್ವಲ್ಪ ಹೊತ್ತಿಗೇ ತಾವು ಏರಬೇಕಿದ್ದ ಬೆಟ್ಟ ಕಾಣತೊಡಗಿತು. ಅದನ್ನು ದಾಟಿ ಇಳಿದರೆ ಶತ್ರುಗಳ ಶಿಬಿರಗಳು ಸಿಗುತ್ತವೆ. ಅದು ಕಡಿದಾದ ಬೆಟ್ಟವೇ ಆಗಿತ್ತು. ಸಾಕಷ್ಟು ಗಿಡಗಂಟಿಗಳು ತುಂಬಿಕೊಂಡಿದ್ದವು. ಕಮಾಂಡೋಗಳು ತೊಟ್ಟಿದ್ದ ಉಡುಪಿನ ಬಣ್ಣ ಗಿಡಗಳ ಬಣ್ಣದೊಡನೆ ಹೊಂದಿಕೆಯಾಗುತ್ತಿತ್ತು – ದೂರದಿಂದ ನೋಡಿದವರಿಗೆ ಇವರು ಕಾಣಿಸುತ್ತಿರಲಿಲ್ಲ. ಬೇಗಬೇಗನೆ ಬೆಟ್ಟವನ್ನು ಹತ್ತಿದರು. ಬೆಟ್ಟವನ್ನು ತಲಪುವ ವೇಳೆಗೆ ಇವರ ಬಳಿಯಿದ್ದ ನೀರು ಖಾಲಿಯಾಗಿತ್ತು. ಬೇಸಗೆಯ ಸಮಯ. ಸಾಕಷ್ಟು ನೀರಡಿಕೆಯಾಗಿತ್ತು, ಗಂಟೆಗಟ್ಟಲೆ ನಡೆದಿದ್ದರು. ಆದರೂ ನಿಲ್ಲುವಂತಿರಲಿಲ್ಲ. ಮರುದಿನ ತಾವು ಶತ್ರುಗಳ ಶಿಬಿರವನ್ನು ನಾಶಮಾಡಿದ ನಂತರವೇ ಕುಡಿಯಲು ನೀರು ಸಿಗುವುದು ಎನ್ನುವುದು ಅವರಿಗೆ ತಿಳಿದಿತ್ತು. ಹೀಗಾಗಿ ಮನಸ್ಸನ್ನು ಕಲ್ಲು ಮಾಡಿಕೊಂಡು ಬೆಟ್ಟದ ತುದಿಗೆ ತಲಪಿದರು. ಇಲ್ಲಿಗೆ ತಲಪುವವರೆಗೂ ಇಂಫಾಲ್ನ ಸೈನಿಕ ಮುಖ್ಯಕಛೇರಿಯೊಡನೆ ಮೊಬೈಲ್ ಮತ್ತು ಉಪಗ್ರಹ ದೂರವಾಣಿಯ ಮೂಲಕ ಡೆಲ್ಟಾ ಸಂಪರ್ಕ ನಡೆಸಿ ತಮ್ಮ ಪ್ರಗತಿಯ ಹಂತವನ್ನು ತಿಳಿಸುತ್ತಿದ್ದರು. ಈ ಯಾವ ಮಾತುಕತೆಗಳೂ ಮುಕ್ತವಾಗಿ ಆಗುವಂತಿರಲಿಲ್ಲ. ಶತ್ರುಗಳು ಇದನ್ನು ಕದ್ದು ಕೇಳುವ ಸಂಭವವಿರುತ್ತದೆ. ಗುಪ್ತ ಸಂಜ್ಞೆಗಳ ಮೂಲಕ, ವಿವಿಧ ತಂತ್ರಗಳ ಮೂಲಕ ಸಂಭಾಷಣೆ ನಡೆಸಬೇಕಾಗುತ್ತದೆ. ಬೆಟ್ಟದ ಮೇಲೆ ತಲಪುವ ವೇಳೆಗೆ ಕತ್ತಲಾಗಿತ್ತು. ಮೊದಲೇ ನಿರ್ಧರಿಸಿದ ಸ್ಥಳದಲ್ಲಿ ಎಲ್ಲರೂ ಗುಪ್ತವಾಗಿ ಸೇರಿಕೊಂಡು ಇರುಳ ಕನ್ನಡಕ ಧರಿಸಿ ಶತ್ರುಶಿಬಿರಗಳತ್ತ ಗಮನ ಹರಿಸಿದರು – ಎಲ್ಲರ ಬಳಿಯೂ ಕತ್ತಲಲ್ಲಿ ನೋಡಲು ಸಹಾಯಕವಾಗುವ ಇರುಳ ಕನ್ನಡಕವಿತ್ತು. ಅಲ್ಲಿಂದ ಕೇವಲ 400 ಮೀಟರ್ ದೂರದಲ್ಲಿ ಶತ್ರು ಶಿಬಿರಗಳಿದ್ದವು. ಕೆಲವು ಕಮಾಂಡೋಗಳು ಅಲ್ಲಿದ್ದ ಅತಿ ಎತ್ತರದ ಸ್ಥಳಕ್ಕೇರಿ ಉಗ್ರರ ಚಲನವಲನಗಳನ್ನು ಪರಿಶೀಲಿಸಿದರು. ಇದಕ್ಕೆ ಕಾರಣವೆಂದರೆ, ಇಂಫಾಲ್ನ ಕೇಂದ್ರ ಕಛೇರಿಯಿಂದ, ಉಗ್ರರು ಶಿಬಿರವನ್ನು ಖಾಲಿ ಮಾಡಿ ಬೇರೆಡೆ ಹೋಗಿರುವ ಗುಪ್ತ ಮಾಹಿತಿ ಬಂದಿದೆ ಎಂದು ಡೆಲ್ಟಾ ಅವರಿಗೆ ತಿಳಿಸಿದ್ದು. ಆ ರೀತಿ ಆಗಿದ್ದರೆ, ಎಲ್ಲ ತಯಾರಿಯೂ ವ್ಯರ್ಥ. ಇಷ್ಟೆಲ್ಲ್ಲ ಪ್ರಯತ್ನವೂ ವ್ಯರ್ಥ ಮತ್ತು ಮರುದಿನದವರೆಗೆ ಕಾಯುವ ಆವಶ್ಯಕತೆಯೂ ಇಲ್ಲ. ಎತ್ತರದಿಂದ ಗಮನಿಸಿದ ಕಮಾಂಡೋಗಳು ಶಿಬಿರದಲ್ಲಿ ಉಗ್ರರಿರುವುದನ್ನು ಖಾತರಿ ಪಡಿಸಿದರು. ಕೇಂದ್ರ ಕಛೇರಿಗೂ ಇದೇ ಮಾಹಿತಿಯನ್ನು ರವಾನಿಸಿದರು. ಪ್ರಾಯಶಃ ಅವರಿಗೆ ಹಿಂದೆ ಬಂದಿದ್ದ ಮಾಹಿತಿ ಬೇರಾವುದೋ ಸ್ಥಳದ್ದಿರಬಹುದು. ಉಳಿದವರೆಲ್ಲರೂ ಬೆಟ್ಟದ ಇಳಿಜಾರಿನಲ್ಲಿ ಯಾರಿಗೂ ಕಾಣದಂತೆ ಅಲ್ಲಲ್ಲೇ ಅವಿತಿದ್ದರು.
ಆ ಬೆಟ್ಟವನ್ನು ತಲಪುವವರೆಗೂ ತಾವು ಬಂಧಿಸಿದ್ದ ಯುವಕರನ್ನು ತಮ್ಮೊಡನೆ ಕರೆದುಕೊಂಡು ಬಂದಿದ್ದರು. ಆ ಯುವಕರೂ ಬೇರೆ ದಾರಿಕಾಣದೆ ಸಹಕರಿಸಿದ್ದರು. ಬೆಟ್ಟವನ್ನೇರಿದ ಮೇಲೆ ಆ ಯುವಕರನ್ನು ಬಂಧಮುಕ್ತಗೊಳಿಸಲಾಯಿತು. ತಮ್ಮಿಂದ ಅವರಿಗಾಗಿದ್ದ ತೊಂದರೆಗಾಗಿ ಅವರಲ್ಲಿ ಪ್ರತಿಯೊಬ್ಬರಿಗೂ ರೂ. 5000 ನೀಡಿ ಕಳುಹಿಸಿಕೊಟ್ಟರು. ತಮಗೇನಾಗುವುದೋ ಎಂಬ ಆತಂಕದಲ್ಲಿದ್ದ ಯುವಕರು, ಇದೀಗ ಬಹಳ ಸಂತೋಷದಿಂದ ಹಿಂತಿರುಗಿದರು.
ಮರುದಿನ ಮುಂಜಾನೆ ಯಾವ ರೀತಿ ವ್ಯೂಹರಚನೆ ಮಾಡಿಕೊಳ್ಳುವುದು, ಯಾವ ರೀತಿ ದಾಳಿ ಮಾಡುವುದು, ವಾಪಸ್ ಹೋಗುವುದಕ್ಕೆ ತಮ್ಮ ಯೋಜನೆ ಏನು, ಇತ್ಯಾದಿಗಳನ್ನು ಕರ್ನಲ್ ಡೆಲ್ಟಾ ಎಲ್ಲರಿಗೂ ಪಿಸುಮಾತಿನಲ್ಲಿ ವಿವರಿಸಿದರು. ತಂಡವನ್ನು ನಾಲ್ಕು ಭಾಗಗಳಾಗಿ ವಿಂಗಡಿಸುವುದೆಂದು ನಿರ್ಧರಿಸಲಾಯಿತು. ಒಂದು ಗುಂಪು ನೇರವಾಗಿ ಶಿಬಿರದೊಳಗೆ ನುಗ್ಗಿ ಉಗ್ರರನ್ನು ಹತ್ತಿಕ್ಕುವುದು. ಎರಡು ಗುಂಪುಗಳು ಶಿಬಿರದ ದ್ವಾರಗಳ ಬಳಿ ನಿಂತಿದ್ದು, ಹೊರಗೆ ಓಡಿ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುವ ಉಗ್ರರ ಮೇಲೆ ದಾಳಿ ಮಾಡುವುದು ಮತ್ತು ನಾಲ್ಕನೆಯ ಗುಂಪು ಇವರೆಲ್ಲರಿಗೆ ರಕ್ಷಣೆಗಾಗಿ ನಿಲ್ಲುವುದು. ಮರುದಿನ, ಅಂದರೆ ಜೂನ್ 9ರ ಬೆಳಗ್ಗೆ ಸೂರ್ಯೋದಯಕ್ಕೆ ಮೊದಲು 5:00 ಗಂಟೆಯ ಹೊತ್ತಿಗೆ ದಾಳಿ ಮಾಡಲು ಮುಹೂರ್ತ ನಿಶ್ಚಯಿಸಲಾಯಿತು. ಆ ಸಮಯವನ್ನು ಆರಿಸಿಕೊಳ್ಳಲೂ ಒಂದು ಬಹುಮುಖ್ಯ ಕಾರಣವಿದೆ. ಅದನ್ನು ತಿಳಿದಾಗ, ಈ ಕಾರ್ಯಾಚರಣೆಗೆ ಅದೆಷ್ಟು ಪೂರ್ವತಯಾರಿ ನಡೆಸಿದ್ದರು, ಯಾವ ರೀತಿಯಲ್ಲಿ ಪ್ರತಿಯೊಂದು ಹೆಜ್ಜೆಯನ್ನೂ ಆಲೋಚಿಸಿದ್ದರು ಎನ್ನುವುದು ತಿಳಿಯುತ್ತದೆ. ಕರ್ನಲ್ ಡೆಲ್ಟಾ ಅವರು ಗೂಢಚಾರರ ಮೂಲಕ ತಿಳಿದುಕೊಂಡಿದ್ದ ಮಾಹಿತಿಗಳಲ್ಲಿ ಶಿಬಿರದಲ್ಲಿದ್ದ ಉಗ್ರರ ದಿನಚರಿಯನ್ನೂ ತಿಳಿಸಲಾಗಿತ್ತು. ಈ ಉಗ್ರರು ನಿತ್ಯವೂ ಎರಡು ಸಲ ಊಟ ಮಾಡುತ್ತಿದ್ದರು; ಬೆಳಗ್ಗೆ ಸೂರ್ಯೋದಯಕ್ಕೆ ಮೊದಲು 5:00 ಗಂಟೆಗೊಮ್ಮೆ ಮತ್ತೊಮ್ಮೆ ಅಪರಾಹ್ನ 3:00 ಗಂಟೆಗೆ. ಮತ್ತು ಊಟದ ಸಮಯದಲ್ಲಿ ಎಲ್ಲರೂ ಒಟ್ಟಾಗಿ ಒಳಗೆ ಸೇರಿಕೊಂಡು ಊಟ ಮಾಡುವರು ಎಂದೂ ತಿಳಿಸಲಾಗಿತ್ತು. ಹೀಗಾಗಿ, ಅವರೆಲ್ಲ ಊಟದಲ್ಲಿ ಮೈಮರೆತಿರುವಾಗಲೇ ದಾಳಿ ಮಾಡುವುದಕ್ಕೆ ಅತ್ಯಂತ ಪ್ರಶಸ್ತ ಸಮಯವೆಂದೇ ಬೆಳಗಿನ 5:00 ಗಂಟೆಯ ಸಮಯವನ್ನು ನಿಶ್ಚಯಿಸಿದ್ದರು!
ಯೋಜನೆಯ ವಿವರಗಳನ್ನು ತಂಡಕ್ಕೆ ತಿಳಿಸಲಾಗುತ್ತಿತ್ತು; ಆಗ ರಾತ್ರಿ 9:00 ಗಂಟೆಯ ಸಮಯ. ಚಂದ್ರನ ಬೆಳದಿಂಗಳು ಎಲ್ಲೆಡೆ ಹಾಲಿನಂತೆ ಚೆಲ್ಲಿತ್ತು. ಎಲ್ಲೆಡೆಯೂ ಮೌನ; ಒಮ್ಮೊಮ್ಮೆ ಯಾವುದೋ ಹುಳುಹುಪ್ಪಟೆಗಳು, ಮತ್ತಾವುದೋ ಹಕ್ಕಿ ಕೂಗುವುದು ಬಿಟ್ಟರೆ ಗಾಢಮೌನ ಕವಿದಿತ್ತು. ಇದ್ದಕ್ಕಿದ್ದಂತೆ ಮೌನವನ್ನು ಸೀಳಿಕೊಂಡು ಹತ್ತಿರದಲ್ಲೇ ಮದ್ದುಗುಂಡು ಸಿಡಿಸುವ ಸದ್ದಾಗತೊಡಗಿತು. ಕಮಾಂಡೋಗಳ ತಂಡಕ್ಕೆ ಇದು ಅನಿರೀಕ್ಷಿತವಾಗಿತ್ತು. ಎಲ್ಲರೂ ತಾವಿದ್ದ ಸ್ಥಳದಲ್ಲೇ ವಿಗ್ರಹಗಳಂತೆ ನಿಶ್ಚಲರಾಗಿ ನಿಂತುಬಿಟ್ಟರು. ಅವರೆಲ್ಲರ ಕೈಗಳು ತಮ್ಮ ಬಳಿಯಿದ್ದ ರೈಫಲ್ಗಳ ಕುದುರೆಯ ಮೇಲಿತ್ತು. ಕರ್ನಲ್ ಡೆಲ್ಟಾರ ಬುದ್ಧಿ ವೇಗವಾಗಿ ಓಡತೊಡಗಿತು. ತಮ್ಮ ಲೆಕ್ಕಾಚಾರ ಎಲ್ಲೋ ತಪ್ಪಾಗಿದೆ; ತಮ್ಮ ಆಗಮನದ ಸೂಚನೆ ಸಿಕ್ಕಿರುವ ಉಗ್ರರು ತಮ್ಮನ್ನು ಹುಡುಕಿಕೊಂಡು ಬರುತ್ತಿದ್ದಾರೆ; ತಾವು ಅವರನ್ನು ಚಕಿತಗೊಳಿಸುವ ಬದಲು, ತಮ್ಮನ್ನೇ ಅವರು ಚಕಿತಗೊಳಿಸುವಂತಿದೆ! ತಾವೇನಾದರೂ ಅವರ ಕಣ್ಣಿಗೆ ಬಿದ್ದರೆ ಪ್ರಾಣ ಕಳೆದುಕೊಳ್ಳುವುದು ನಿಶ್ಚಿತ; ಹೀಗಾಗಿ ಓಡಿ ಪರಾರಿಯಾಗುವುದೊಂದೇ ದಾರಿ! ಈ ರೀತಿ ಡೆಲ್ಟಾರ ಕಲ್ಪನೆಯ ಕುದುರೆ ಲಗಾಮಿಲ್ಲದೆ ಓಡುತ್ತಿತ್ತು. ಅಷ್ಟರಲ್ಲೇ ಮಾತುಕತೆಗಳು ಕೇಳಿಸಿದವು. ಎತ್ತರದ ಧ್ವನಿಯಲ್ಲಿ ಹಾಡುವುದು ಕೇಳಿಸಿತು; ಗುಂಡು ಹಾರಿಸುವ ಸದ್ದು ನಿಂತಿತು. ಡೆಲ್ಟಾ ಅವರಿಗೆ ಹೋದ ಜೀವ ಬಂದಂತಾಯಿತು. ಉಗ್ರರು ಪ್ರಾಯಶಃ ರಾತ್ರಿ ಒಮ್ಮೆ ಗಸ್ತು ತಿರುಗಿ ಎಚ್ಚರಿಕೆಯ ಗುಂಡು ಹಾರಿಸುವ ಪದ್ಧತಿ ಇಟ್ಟುಕೊಂಡಿದ್ದಿರಬಹುದು. ಉಗ್ರರು ಕಮಾಂಡೋಗಳಿಂದ ಕೇವಲ 150 ಮೀಟರ್ಗಳಷ್ಟು ಹತ್ತಿರದಲ್ಲಿದ್ದರು! ಎಲ್ಲರೂ ವಾಪಸ್ ಹೋದರು ಎಂದು ಖಚಿತವಾದ ನಂತರ ಕಮಾಂಡೋಗಳು ರಾತ್ರಿಯ ಊಟ ಮಾಡಿದರು. ಆದರೆ ನಿದ್ದೆ ಮಾಡುವಂತಿಲ್ಲ. ಈ ರೀತಿಯ ಕಾರ್ಯಾಚರಣೆಗೆ ಹೊರಟವರಿಗೆ ನಿದ್ದೆ ಬರುವುದೆಂತು? ಅವರೆಲ್ಲರೂ ಬೆಳಗಿನ 5:00 ಗಂಟೆಯಾಗುವುದನ್ನೇ ಕಾಯುತ್ತಾ ಕುಳಿತರು. ಮಧ್ಯರಾತ್ರಿ ಹನ್ನೆರಡಾಯಿತು. ಡೆಲ್ಟಾ ಗಡಿಯಾರದ ಮೇಲೆ ಕಣ್ಣಾಡಿಸಿದರು. ಮತ್ತೊಮ್ಮೆ ಮೌನವನ್ನು ಭೇದಿಸಿಕೊಂಡು ಗುಂಡು ಹಾರಾಡತೊಡಗಿತು. ಕ್ಷಣಾರ್ಧದಲ್ಲಿ ಎಲ್ಲ ಕಮಾಂಡೋಗಳೂ ರೈಫಲ್ ಹಿಡಿದು ಮುಂದೆ ಜರುಗಬಹುದಾದ ಸನ್ನಿವೇಶವನ್ನೆದುರಿಸಲು ಸಜ್ಜಾದರು. ಒಂದೆರಡು ನಿಮಿಷದ ಗುಂಡಿನ ಹಾರಾಟದ ನಂತರ ಮತ್ತೊಮ್ಮೆ ಗಾಢಮೌನ! ಇದೇ ರೀತಿಯ ಗುಂಡಿನ ಹಾರಾಟ ಮತ್ತೊಮ್ಮೆ ಮೂರು ಗಂಟೆಗೂ ನಡೆಯಿತು. ಈಗ ಬೆಳಗಿನ ಜಾವ 4:00 ಗಂಟೆ. ಮೂರು ಗಂಟೆಗೆ ಗಸ್ತು ಹೊಡೆದು ಗುಂಡು ಹಾರಿಸಿದ ಉಗ್ರರು ಇನ್ನೂ ಶಿಬಿರಕ್ಕೆ ವಾಪಸ್ಸಾಗಿರಲಿಲ್ಲ. ಇನ್ನು ಉಳಿದಿರುವುದು ಒಂದೇ ಗಂಟೆ. ಕಮಾಂಡೋಗಳು ತಾವಿದ್ದ ಸ್ಥಳದಿಂದ ಮುಂದುವರಿದು ಶಿಬಿರವನ್ನು ಸುತ್ತುವರಿಯಬೇಕಿತ್ತು. ಆದರೆ, ಉಗ್ರರು ಇಲ್ಲೇ ಎಲ್ಲೋ ಇರುವಂತಿದೆ, ತಮ್ಮನ್ನೇ ಹುಡುಕುತ್ತಿದ್ದಿರಬಹುದೇ? ಹೀಗೆ ಯೋಚಿಸುತ್ತಿರುವಾಗಲೇ ಶಿಬಿರಕ್ಕೆ ವಾಪಸ್ಸಾಗುತ್ತಿರುವ ಉಗ್ರರು ಇರುಳ ಕನ್ನಡಕದಲ್ಲಿ ಕಂಡರು. ಕಮಾಂಡೋಗಳು ನಿಧಾನವಾಗಿ, ನಿಶ್ಶಬ್ದವಾಗಿ ಅವರನ್ನೇ ಹಿಂಬಾಲಿಸಿದರು. ಡೆಲ್ಟಾ ಅವರು ಕಡೆಯ ಕ್ಷಣದಲ್ಲಿ ಯೋಜನೆ ಬದಲಿಸಿದರು – ನಾಲ್ಕು ಭಾಗಗಳ ಬದಲು ಮೂರು ಭಾಗಗಳಾಗಿ ತಂಡವನ್ನು ವಿಂಗಡಿಸಿದರು. ಎರಡು ಗುಂಪುಗಳು ನೇರವಾಗಿ ಶಿಬಿರಗಳ ಮೇಲೆ ದಾಳಿ ಮಾಡುವುದು. ಮೂರನೇ ತಂಡ ಹಿಂದೆ ನಿಂತು ಅವರಿಗೆ ರಕ್ಷಣೆ ನೀಡುವುದು. ಇದೇ ಬದಲಾದ ಯೋಜನೆ.
ಶಿಬಿರಕ್ಕೆ ಹಿಂತಿರುಗಿದ ಉಗ್ರರಿಗೆ ಮೃತ್ಯುವು ತಮ್ಮನ್ನೇ ಹಿಂಬಾಲಿಸುತ್ತಿದೆ ಎನ್ನುವ ಅರಿವೇ ಇರಲಿಲ್ಲ. ಅಷ್ಟು ಹೊತ್ತಿಗೆ 5:00 ಗಂಟೆಯಾಯಿತು – ಬೆಳಗಿನ ಊಟದ ಸಮಯ. ಎಲ್ಲ ಉಗ್ರರೂ ಒಂದೆಡೆ ಸೇರಿ ಊಟ ಮಾಡತೊಡಗಿದರು. ಅದೇ ತಮ್ಮ ಜೀವನದ ಕಡೆಯ ಊಟ ಎಂದು ಅವರಾರಿಗೂ ತಿಳಿದಿರಲಿಲ್ಲ. ಅವರೆಲ್ಲ ಊಟದಲ್ಲಿ ಮೈಮರೆತಿದ್ದಾಗ, ಶಿಬಿರವನ್ನು ಎಲ್ಲೆಡೆಯಿಂದ ಆವರಿಸಿದ್ದ ಕಮಾಂಡೋಗಳ ತಂಡ ಶತ್ರುಗಳ ಮೇಲೆರಗಿತು. ಮೊದಲಿಗೆ ಶಿಬಿರವನ್ನು ಕಾಯುತ್ತಿದ್ದ ಆರು ಜನ ಸೆಂಟ್ರಿಗಳ ಮೇಲೆ ಕಾರ್ಲ್ ಗುಸ್ತವ್ ಅಸ್ತ್ರದ ಮೂಲಕ ರಾಕೆಟ್ಗಳನ್ನು ಎಸೆದರು. ಅವುಗಳ ಸಿಡಿತಕ್ಕೆ ಸೆಂಟ್ರಿಗಳ ದೇಹ ಕ್ಷಣಾರ್ಧದಲ್ಲಿ ಛಿದ್ರಛಿದ್ರವಾಯಿತು, ಆಸ್ಫೋಟಕ್ಕೆ ನೆಲ ನಡುಗಿತು. ಊಟದಲ್ಲಿ ತೊಡಗಿದ್ದ ಉಗ್ರರಿಗೆ, ತಮ್ಮ ಮೇಲೆ ದಾಳಿ ನಡೆದಿದೆ ಎಂದು ತಿಳಿದದ್ದು ಭೂಮಿಯು ನಡುಗಿದ ನಂತರವೇ! ಆದರೆ, ಅವರೇನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ದಿಕ್ಕಾಪಾಲಾಗಿ ಓಡತೊಡಗಿದರು, ಶಿಬಿರದ ಒಳಗೆ ಸಂಪೂರ್ಣ ಗೊಂದಲದ ವಾತಾವರಣ ನಿರ್ಮಾಣವಾಯಿತು! ಮುಂದಿನ ಕ್ಷಣದಲ್ಲೇ ಭಾರತೀಯ ಕಮಾಂಡೋಗಳು ಮೆಷಿನ್ಗನ್ಗಳಿಂದ ಸತತವಾಗಿ ಗುಂಡು ಸಿಡಿಸುತ್ತ ಶಿಬಿರದ ಒಳಗೆ ನುಗ್ಗಿದ್ದರು. ಕೆಲವೇ ನಿಮಿಷಗಳಲ್ಲಿ ಅಲ್ಲಿದ್ದ ಎಲ್ಲ ಉಗ್ರರೂ ಹತರಾಗಿದ್ದರು. ಅವರು ಎಸಗಿದ್ದ ಪಾಪಕ್ಕೆ ತಕ್ಕ ಶಿಕ್ಷೆ ಒದಗಿತ್ತು.
ಕಮಾಂಡೋಗಳ ತಂಡ ಅಲ್ಲಿಂದ ಎರಡನೇ ಶಿಬಿರದತ್ತ ದಾವಿಸಿತು. ಇಲ್ಲಿನ ಸದ್ದುಗದ್ದಲದಿಂದ ಎರಡನೇ ಶಿಬಿರದಲ್ಲಿದ್ದ ಉಗ್ರರು ಪ್ರತಿದಾಳಿಗೆ ಸಿದ್ಧರಾಗಿದ್ದರು. ಶಿಬಿರದ ಒಳಗೇ ಗುಂಡಿಗಳನ್ನು ತೋಡಿಕೊಂಡು ಸೈನಿಕರಂತೆ ಪ್ರತ್ಯಾಕ್ರಮಣಕ್ಕೆ ಸಿದ್ಧರಾಗಿದ್ದರು. ಗುಂಡಿಯ ಒಳಗೆ ಅಡಗಿಕೊಂಡಿದ್ದ ಉಗ್ರರು ಕಮಾಂಡೋಗಳ ಮೇಲೆ ಗುಂಡು ಸಿಡಿಸತೊಡಗಿದರು. ಅವರು ಈ ರೀತಿ ಸಿದ್ಧರಾಗಿರುವುದು ಅನಿರೀಕ್ಷಿತವಾಗಿದ್ದರೂ, ಕಮಾಂಡೋಗಳು ಎಲ್ಲ ರೀತಿಯ ಪ್ರತಿದಾಳಿಗೂ ಸಿದ್ಧರಾಗಿದ್ದರು. ಅವರು ತಮ್ಮ ಆಟೋಮ್ಯಾಟಿಕ್ಗನ್ಗಳಿಂದ ಗುಂಡಿನಮಳೆ ಸುರಿಸುತ್ತ, ಜೊತೆಗೇ ಶತ್ರುಗಳಿದ್ದ ಕಡೆಗೆ ಗ್ರೆನೇಡುಗಳನ್ನೆಸೆದರು, ಎರಡು ರಾಕೆಟ್ಗಳನ್ನು ಸಿಡಿಸಿದರು. ಗುಂಡಿಗಳಲ್ಲಿ ಅವಿತಿದ್ದ ಉಗ್ರರು ಹೊರಗೆಸೆಯಲ್ಪಟ್ಟರು. ಅನೇಕರು ಇದ್ದಲ್ಲೇ ಕರಕಲಾಗಿದ್ದರು. ಸುತ್ತಲಿನ ನೆಲವೆಲ್ಲ ಸುಟ್ಟು ಕಪ್ಪುಬಣ್ಣಕ್ಕೆ ತಿರುಗಿತ್ತು. ಆ ಶಿಬಿರದಲ್ಲಿದ್ದ ಎಲ್ಲರನ್ನೂ ಯಮಸದನಕ್ಕಟ್ಟಿದ ಬಳಿಕ ಕಮಾಂಡೋಗಳು ಮೂರನೆ ಶಿಬಿರದತ್ತ ಗಮನ ಹಾಯಿಸಿದರು. ಅವರು ಹೆಚ್ಚು ಹೊತ್ತು ನಿಲ್ಲುವಂತಿರಲಿಲ್ಲ. ಹೀಗಾಗಿ, ಮೂರನೆ ಶಿಬಿರದ ಒಳಗೆ ಹೋಗದೆ, ಹೊರಗಿನಿಂದಲೇ ಸಾಧ್ಯವಾದಷ್ಟು ಘಾಸಿ ಮಾಡಿ, ಅಲ್ಲಿಂದ ಹಿಂತಿರುಗಿದರು.
ಒಂದು ಗಂಟೆಗಿಂತ ಕಡಮೆ ಅವಧಿಯಲ್ಲಿ ಕೆಲಸ ಮುಗಿದಿತ್ತು. ಮೊದಲ ಶಿಬಿರದ ದಾಳಿಗೆ 25 ನಿಮಿಷ ತಗಲಿದ್ದರೆ, ಎರಡನೇ ಶಿಬಿರಕ್ಕೆ ತೆಗೆದುಕೊಂಡದ್ದು 20 ನಿಮಿಷವಷ್ಟೆ. ಮೂರನೆ ಶಿಬಿರದಲ್ಲಿ ಅದಕ್ಕಿಂತ ಬಹಳ ಕಡಮೆ ಸಮಯ ವ್ಯಯಿಸಿದ್ದರು. ಈ ದಾಳಿಯಲ್ಲಿ 15,000 ಸುತ್ತು ಗುಂಡುಗಳನ್ನು, 150 ಗ್ರೆನೇಡುಗಳನ್ನು ಮತ್ತು ಒಂದು ಡಜನ್ ರಾಕೆಟ್ಗಳನ್ನು ಉಪಯೋಗಿಸಿದ್ದರು. ಎಷ್ಟು ಜನ ಉಗ್ರರು ನಾಶವಾದರು, ಎಷ್ಟು ಜನ ಶತ್ರುಗಳನ್ನು ಕೊಂದರೆನ್ನುವುದನ್ನು ಲೆಕ್ಕ ಮಾಡುತ್ತ ಇರಬಾರದು, ಶೀಘ್ರವಾಗಿ ಕೆಲಸ ಮುಗಿಸಿ ಆದಷ್ಟು ಬೇಗನೆ ವಾಪಸ್ಸಾಗುವಂತೆ ಕಟ್ಟಪ್ಪಣೆ ಮಾಡಲಾಗಿತ್ತು – ಕೈಹಿಡಿದ ಕೆಲಸ ಮುಗಿದ ನಂತರ, ಸುರಕ್ಷಿತವಾಗಿ ವಾಪಸ್ಸಾಗುವುದಕ್ಕೇ ಅತ್ಯಂತ ಹೆಚ್ಚಿನ ಆದ್ಯತೆ. ಅವರು ತಮಗೆ ನೀಡಲಾಗಿದ್ದ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದರು. ಬಂದ ದಾರಿಯಲ್ಲೇ ಹಿಂತಿರುಗಿದರು. ಎಲ್ಲ 64 ಕಮಾಂಡೋಗಳೂ ವಾಪಸ್ಸಾಗಿದ್ದರು, ಯಾರಿಗೂ ಒಂದು ಸಣ್ಣ ಗಾಯವೂ ಆಗಿರಲಿಲ್ಲ! ಅಷ್ಟು ಕರಾರುವಾಕ್ಕಾಗಿ ಕಾರ್ಯಾಚರಣೆಯನ್ನು ಯೋಜಿಸಿ, ಕಾರ್ಯಾನುಷ್ಠಾನಗೊಳಿಸಲಾಗಿತ್ತು.
ಗಡಿಗೆ ಸಮೀಪಿಸಿದಂತೆ ಕರ್ನಲ್ ಡೆಲ್ಟಾ ತಮ್ಮ ಮೇಲಧಿಕಾರಿಗಳಿಗೆ ಸಂದೇಶ ಕಳುಹಿಸಿದರು – ‘ಕಾರ್ಯ ಯಶಸ್ವಿಯಾಯಿತು!’ ಅಲ್ಲಿಂದ ಸುದ್ದಿ ಭಾರತ ಸರ್ಕಾರದ ಅತ್ಯುನ್ನತ ಸ್ಥಳಗಳಿಗೆ ಹೋಯಿತು. ಭಾರತ ಸರ್ಕಾರ ಅಧಿಕೃತ ಸುದ್ದಿಗೋಷ್ಠಿಯನ್ನು ಕರೆದು ಕಾರ್ಯಾಚರಣೆಯ ಸುದ್ದಿಯನ್ನು ಪ್ರಕಟಿಸಿತು. ಡೆಲ್ಟಾ ಮತ್ತು ಸಂಗಡಿಗರು ಬೆಟ್ಟವನ್ನೇರಿ ಇಳಿದು, ಅರಣ್ಯದಲ್ಲಿ ಹಲವು ಗಂಟೆಗಳ ಕಾಲ ನಡೆದು ಗಡಿಯನ್ನು ದಾಟಿ ಮಣಿಪುರದ ಮೊದಲ ಹಳ್ಳಿಯನ್ನು ತಲಪಿದರು. ಆಗ ಜೂನ್ 9ರ ಮದ್ಯಾಹ್ನ 3:00 ಗಂಟೆ. ಸ್ವಲ್ಪ ಹೊತ್ತಿಗೆ ಭಾರತೀಯ ಸೈನ್ಯಕ್ಕೆ ಸೇರಿದ್ದ ಎರಡು ಧೃವ್ ಹೆಲಿಕಾಪ್ಟರ್ಗಳು ಆ ಹಳ್ಳಿಯಲ್ಲಿ ಇಳಿದವು. ಕಾರ್ಯಾಚರಣೆಯಲ್ಲಿ ಜಯಶೀಲರಾಗಿದ್ದ ಕಮಾಂಡೋಗಳನ್ನು ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅವು. ಮರುದಿನ ಎಲ್ಲರೂ ಲೈಮಾಖಾಂಗ್ಗೆ ವಾಪಸ್ಸಾದರು. ಅಲ್ಲಿ ಇಳಿದ 15 ನಿಮಿಷಕ್ಕೆ ಕರ್ನಲ್ ಡೆಲ್ಟಾ ಅವರ ದೂರವಾಣಿ ಸದ್ದು ಮಾಡತೊಡಗಿತು. ಅವರು ಈ ಕರೆಯನ್ನು ನಿರೀಕ್ಷಿಸಿರಲಿಲ್ಲ. ಭಾರತದ ಮಾನ್ಯ ರಕ್ಷಣಾಸಚಿವರಾದ ಮನೋಹರ್ ಪರಿಕ್ಕರ್ ಅವರು ಕರೆ ಮಾಡಿದ್ದರು – ಡೆಲ್ಟಾ ಅವರನ್ನು ಅಭಿನಂದಿಸಲು!
ಇವರು ದಾಳಿ ಮಾಡಿದ್ದ ಸಮಯದಲ್ಲೇ ನಾಗಾಲ್ಯಾಂಡ್ ಮಾರ್ಗವಾಗಿ ಸಾಗಿ ಅಲ್ಲಿನ ಗಡಿಯಾಚೆ ಇರುವ ಉಗ್ರರ ಶಿಬಿರಗಳ ಮೇಲೆ ದಾಳಿ ಮಾಡಬೇಕಿದ್ದ ಎರಡನೇ ತಂಡದ ಅದೃಷ್ಟ ಅಷ್ಟು ಚೆನ್ನಾಗಿರಲಿಲ್ಲ. ಈ ತಂಡ ಅಲ್ಲಿಗೆ ತಲಪುವ ಮೊದಲೇ ಉಗ್ರರು ಶಿಬಿರವನ್ನು ತೊರೆದು ಹೋಗಿದ್ದರು. ಪ್ರಾಯಶಃ ಉಗ್ರರಿಗೆ ಮೊದಲೇ ಯಾರೋ ಸುದ್ದಿಯನ್ನು ತಲಪಿಸಿಬಿಟ್ಟಿದ್ದರು ಅಥವಾ ಉಗ್ರರ ಅದೃಷ್ಟ ಚೆನ್ನಾಗಿತ್ತು! ಖಾಲಿ ಶಿಬಿರವನ್ನು ಕಂಡು ನಿರಾಸೆಯಾದ ಕಮಾಂಡೋಗಳು ಶಿಬಿರಕ್ಕೆ ಬೆಂಕಿಯಿತ್ತು ವಾಪಸ್ಸಾಗಿದ್ದರು.
ಈ ಎಲ್ಲ ಕಾರ್ಯಾಚರಣೆ ನಡೆಯುವಾಗಲೇ ಡೆಲ್ಟಾ ಅವರ ಕುಟುಂಬದಲ್ಲಿ ತುರ್ತಾದ ಮತ್ತು ಆತಂಕದ ಕಾರ್ಯವೊಂದು ನಡೆದಿತ್ತು. ಕರ್ನಲ್ ಡೆಲ್ಟಾ ಅವರು ಈ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ಅದೆಂದರೆ, ಡೆಲ್ಟಾ ಅವರ ತಾಯಿಯವರು ಸರ್ವಿಕಲ್ ಕ್ಯಾನ್ಸರ್ಗೆ ತುತ್ತಾಗಿ ನೋವನ್ನನುಭವಿಸುತ್ತಿದ್ದರು. ಜೂನ್ 9ರಂದೇ ಅವರಿಗೆ ಶಸ್ತ್ರಚಿಕಿತ್ಸೆ ನಿಶ್ಚಯವಾಗಿತ್ತು. ಇಂತಹ ಸಂದರ್ಭದಲ್ಲಿ ಯಾರೇ ಆಗಿದ್ದರೂ ಕೆಲಸಕ್ಕೆ ರಜೆ ಹಾಕಿ ಕುಟುಂಬದೊಡನೆ ಇರುತ್ತಿದ್ದರು. ಆದರೆ ಡೆಲ್ಟಾ ತಾಯಿಯ ಆರೋಗ್ಯದ ಜವಾಬ್ದಾರಿಯನ್ನು ವೈದ್ಯರಿಗೊಪ್ಪಿಸಿ ತಾವು ತಾಯ್ನಾಡಿನ ಸೇವೆಯತ್ತ ಗಮನ ಹರಿಸಿದರು! ಕಾರ್ಯಾಚರಣೆ ಮುಗಿಸಿ ಬಂದ ನಂತರವಷ್ಟೆ ಸ್ವಲ್ಪ ಬಿಡುವು ಕೇಳಿಕೊಂಡು ಆಸ್ಪತ್ರೆಗೆ ಧಾವಿಸಿದರು. ಕೆಲವೇ ಗಂಟೆಗಳ ಮೊದಲು ಅವರ ತಾಯಿಯವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು, ಅದು ಯಶಸ್ವಿಯಾಗಿತ್ತು. ನಾಲ್ಕು ಗಂಟೆಗಳ ಕಾಲ ತಾಯಿಯವರೊಡನಿದ್ದ ಕರ್ನಲ್ ಡೆಲ್ಟಾ ಸಂಜೆಗೆ ತಮ್ಮ ಬೇಸ್ ಶಿಬಿರಕ್ಕೆ ವಾಪಸ್ಸಾದರು. ಅವರ ಹಿರಿಯ ಅಧಿಕಾರಿಗಳಿಗೆ ಪರಿಸ್ಥಿತಿಯ ಅರಿವಾಗಿದ್ದು ಕಾರ್ಯಾಚರಣೆಯ ನಂತರ ಡೆಲ್ಟಾ ಅವರು ತಮ್ಮ ತಾಯಿಯನ್ನು ನೋಡಲು ಹೋದಾಗಲೇ. ಅವರೆಲ್ಲರಿಗೂ ಇದನ್ನು ಕೇಳಿ ಅತ್ಯಾಶ್ಚರ್ಯವೆನಿಸಿತು.
ಕಾರ್ಯಾಚರಣೆ ನಡೆದ ಎರಡು ತಿಂಗಳ ನಂತರ, ಆ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಭಾರತ ಸರ್ಕಾರ ಲೆಫ್ಟಿನೆಂಟ್-ಕರ್ನಲ್ ಡೆಲ್ಟಾ ಅವರಿಗೆ ಕೀರ್ತಿ ಚಕ್ರ, ಅವರ ತಂಡದಲ್ಲಿದ್ದ ಹವೀಲ್ದಾರ್ ಒಬ್ಬರಿಗೆ ಶೌರ್ಯ ಚಕ್ರ ಮತ್ತು ಐವರು ಕಮಾಂಡೋಗಳಿಗೆ ಸೇನಾ ಮೆಡಲ್ ಘೋಷಿಸಿ ಗೌರವಿಸಿತು. ಕೀರ್ತಿ ಚಕ್ರವು ಭಾರತ ಸರ್ಕಾರ ನೀಡುವ ಎರಡನೇ ಅತಿದೊಡ್ಡ ಶೌರ್ಯ ಪದಕ. ಈ ಪದಕ ತನ್ನೊಬ್ಬನದಲ್ಲ, ತನ್ನ ಇಡೀ ತಂಡಕ್ಕೆ ಸೇರಿದ್ದು – ಎನ್ನುತ್ತಾರೆ ಕರ್ನಲ್ ಡೆಲ್ಟಾ.