–ಎಸ್. ಎಸ್. ನರೇಂದ್ರಕುಮಾರ್
ಕಾಶ್ಮೀರದ ಉತ್ತರಕ್ಕೆ 220 ಕಿಲೋಮೀಟರ್ಗಳಷ್ಟು ಉದ್ದಕ್ಕೆ ಹರಡಿವೆ ‘ಶಂಶಬಾರಿ ಪರ್ವತ ಶ್ರೇಣಿಗಳು’. ಇಡೀ ಉತ್ತರ ಕಾಶ್ಮೀರವನ್ನು ವ್ಯಾಪಿಸಿಕೊಂಡಿರುವ ಹಿಮಾವೃತವಾದ ಈ ಶ್ರೇಣಿಗಳು ಕಾಶ್ಮೀರದ ಶಿರಕ್ಕೆ ಹಿಮದ ಕಿರೀಟವನ್ನು ತೊಡಿಸಿದಂತೆ ಕಾಣುತ್ತವೆ. ಕಾಶ್ಮೀರದ ವಾಯವ್ಯದ ತುದಿಯಲ್ಲಿರುವ ಬಾರಾಮುಲ್ಲಾ ಜಿಲ್ಲೆಯ ಕಾಲಾಪಹಾಡ್ನಿಂದ ಪ್ರಾರಂಭವಾಗುವ ಈ ಶ್ರೇಣಿಗಳು ಲಡಾಖ್ ಪ್ರಾಂತದ ಕಾರ್ಗಿಲ್ ಜಿಲ್ಲೆಯವರೆಗೂ ಹರಡಿಕೊಂಡಿವೆ. ಸಮುದ್ರಮಟ್ಟದಿಂದ 11,500 ಅಡಿ ಎತ್ತರದಿಂದ 17,500 ಅಡಿ ಎತ್ತರದವರೆಗಿನ ಶಿಖರಗಳನ್ನು ಹೊಂದಿರುವ ಈ ಶ್ರೇಣಿಗಳು ಭಾರತ-ಪಾಕಿಸ್ತಾನದ ನಡುವಿನ LOCಗೆ ರಕ್ಷಣೆಯ ಗೋಡೆಯಂತೆ ಎದ್ದುನಿಂತಿವೆ. ಈ ಶ್ರೇಣಿಗಳ ಪಶ್ಚಿಮದ ತುದಿಯಲ್ಲಿ ಕಿಶನ್ಗಂಗಾ ಮತ್ತು ಮಧುಮತಿ ನದಿಗಳ ಸಂಗಮಸ್ಥಳದಲ್ಲಿ ಹಿಂದುಗಳ ಪವಿತ್ರ ಕ್ಷೇತ್ರವು ಹುದುಗಿದೆ. “ನಮಸ್ತೇ ಶಾರದಾ ದೇವಿ ಕಾಶ್ಮೀರ ಪುರವಾಸಿನಿ” ಎಂದು ಹಿಂದೂಗಳು ನಿತ್ಯ ಪ್ರಾರ್ಥಿಸುವ ಶಾರದೆಯ ಆವಾಸಸ್ಥಾನವಿದು. ಇದೇ 1200 ವರ್ಷಗಳ ಹಿಂದೆ ಆದಿ ಶಂಕರಾಚಾರ್ಯರು ಸ್ಥಾಪಿಸಿದ ಶಾರದಾಪೀಠ. ಹಿಮಾಚ್ಛಾದಿತ ಪರ್ವತಗಳನ್ನು ಹೊಂದಿರುವ ಈ ಶ್ರೇಣಿಯಲ್ಲಿರುವ ನದಿಗಳೂ ಚಳಿಗಾಲದಲ್ಲಿ ಹೆಪ್ಪುಗಟ್ಟಿಬಿಡುತ್ತವೆ. ಚಳಿಗಾಲದಲ್ಲಿ ಬೀಳುವ ಹಿಮವು ಇಪ್ಪತ್ತರಿಂದ ಮೂವತ್ತು ಅಡಿಗಳವರೆಗೂ ತುಂಬಿಕೊಳ್ಳುತ್ತದೆ. ಈ ಶ್ರೇಣಿಗಳ ಮೂಲಕ ಹಾದುಹೋಗುವ ರಸ್ತೆಗಳಲ್ಲಿ ಬಿದ್ದಿರುವ ಹಿಮವನ್ನು ಸರಿಸಲು ಕೆಲವೊಮ್ಮೆ ವಾರಗಳಷ್ಟು ಸಮಯ ಹಿಡಿಯುತ್ತದೆ. ಹೀಗಾಗಿ ಡಿಸೆಂಬರ್ನಿಂದ ಮೇ ತಿಂಗಳವರೆಗೆ ಈ ಪ್ರದೇಶದಲ್ಲಿ ಯಾರೂ ಓಡಾಡುವುದಿಲ್ಲ. ಶಂಶಬಾರಿ ಪರ್ವತಶ್ರೇಣಿಯ ಗಿರಿಶಿಖರಗಳ ಮೂಲಕ ಹಾದುಹೋಗುವ LOCಯನ್ನು ಕಾಯುವ ಭಾರತೀಯ ಸೈನ್ಯದ ಗಡಿರಕ್ಷಣಾ ಪಡೆಗಳ ಶೂರಸೈನಿಕರೂ ಚಳಿಗಾಲದಲ್ಲಿ ಶಿಖರಗಳಲ್ಲಿರುವ ತಮ್ಮ ಸೈನಿಕ ಠಾಣೆಗಳನ್ನು ತೊರೆದು ಕೆಳಗಿನ ಪ್ರದೇಶಗಳಿಗೆ ಹೋಗುತ್ತಾರೆ. ಅವರು ಮತ್ತೆ ಹಿಂದಿರುಗುವುದು ಮೇ ತಿಂಗಳಿನಲ್ಲೇ. ಪಾಕ್ ಉಗ್ರರೂ ಚಳಿಗಾಲದಲ್ಲಿ ಗಡಿದಾಟುವ ಸಾಹಸಕ್ಕೆ ಕೈಹಾಕುವುದಿಲ್ಲ, ಅಂತಹ ದುರ್ಗಮ ಪ್ರದೇಶವದು.
ಈ ಶ್ರೇಣಿಗಳ ಮತ್ತೊಂದು ಬದಿಯಲ್ಲಿರುವುದು ಪಾಕ್-ಆಕ್ರಮಿತ ಕಾಶ್ಮೀರಪ್ರಾಂತ. ಅಲ್ಲಿರುವ ಲೀಪಾ ಕಣಿವೆ ಚೇತೋಹಾರಿ ಪ್ರದೇಶವಾಗಿದೆ. ಹಾಗೆಂದೇ ಬೇಸಿಗೆಯ ಮಾಸಗಳಲ್ಲಿ ಅಲ್ಲಿಗೆ ಪ್ರವಾಸಿಗರು ಪ್ರವಾಹದೋಪಾದಿಯಲ್ಲಿ ಬಂದಿಳಿಯುತ್ತಾರೆ, ಅಲ್ಲಿನ ಪ್ರಕೃತಿಯ ರುದ್ರ-ರಮಣೀಯ ದೃಶ್ಯವನ್ನು ಸವಿದು ಆನಂದಿಸುತ್ತಾರೆ. ಲೀಪಾ ಕಣಿವೆ ಕುರಿತಾಗಿ ಜಾಲತಾಣಗಳಲ್ಲಿ ಹುಡುಕಿದಾಗ ಅಲ್ಲಿರುವ ಪ್ರವಾಸಿ ತಾಣಗಳು, ಸುಂದರದೃಶ್ಯಗಳು ಮೂಡಿಬರುತ್ತವೆ. ಆದರೆ ಲೀಪಾ ಕಣಿವೆಗೇ ಸೇರಿಕೊಂಡು ಮತ್ತೊಂದು ಭಾಗವೂ ಇದೆ ಎನ್ನುವುದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಈ ರಹಸ್ಯತಾಣದಲ್ಲೇ ಪಾಕ್ ಉಗ್ರರ ತರಬೇತಿ ಶಿಬಿರಗಳು ಸ್ಥಾಪಿತವಾಗಿವೆ. ಇಲ್ಲಿಂದಲೇ ಪ್ರತಿವರ್ಷವೂ ಅನೇಕ ಉಗ್ರರು ತಯಾರಾಗಿ ಭಾರತದೊಳಗೆ ನುಸುಳಿ ಭಯೋತ್ಪಾದನೆಯ ಚಟುವಟಿಕೆಗಳನ್ನು ನಡೆಸುತ್ತಾರೆ.
2016ರ ಮೇ 26ರಂದು ಸೂರ್ಯಾಸ್ತವಾಗುತ್ತಿದ್ದಂತೆಯೇ ಲೀಪಾ ಕಣಿವೆಯ ಒಂದು ಸಣ್ಣ ಡೇರೆಯಿಂದ ನಾಲ್ವರು ಯುವಕರು ಹೊರಬಿದ್ದರು. ಅವರ ಬೆನ್ನ ಮೇಲೆ ಭಾರವಾದ ಚೀಲಗಳಿದ್ದವು. ಕೈಯಲ್ಲಿ ಎ.ಕೆ.47 ಮೆಷಿನ್ಗನ್ನುಗಳಿದ್ದವು. ಸಾಕಷ್ಟು ದೊಡ್ಡಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು, ಮದ್ದುಗುಂಡುಗಳನ್ನು ಹೊತ್ತೊಯ್ಯುತ್ತಿದ್ದ ಇವರು ಲೀಪಾ ಕಣಿವೆಯ ಉಗ್ರ ತರಬೇತಿ ಶಿಬಿರಗಳಲ್ಲಿ ತರಬೇತಾದ ಉಗ್ರರು. ಕಪ್ಪುಮೋಡವು ಆಗಸವನ್ನು ತುಂಬಿತ್ತು, ಚಂದ್ರನನ್ನು ಮರೆಯಾಗಿಸಿತ್ತು, ತುಂತುರು ಮಳೆ ಬೀಳುತ್ತಿತ್ತು. ಈ ಯುವಕರು ಕಣಿವೆಯಿಂದ ಶಂಶಬಾರಿ ಪರ್ವತವನ್ನು ಹತ್ತುವುದಕ್ಕೆ ಪ್ರಾರಂಭಿಸಿದರು. ಪರ್ವತವನ್ನೇರಿ LOC ದಾಟಿ ಭಾರತದೊಳಕ್ಕೆ ನುಸುಳುವುದು ಇವರ ಉದ್ದೇಶವಾಗಿತ್ತು. ಕೇವಲ ಒಂದು ವಾರದ ಹಿಂದೆಯಷ್ಟೇ ಭಾರತೀಯ ಸೈನಿಕರು ಶಿಖರಗಳಲ್ಲಿರುವ ತಮ್ಮ ಸೈನಿಕ ಠಾಣೆಗಳಿಗೆ ವಾಪಸ್ಸಾಗಿ LOC ಕಾಯುವ ಕಾಯಕವನ್ನು ಪ್ರಾರಂಭಿಸಿದ್ದರು.
ಉಗ್ರರಿಗೆ ಶಸ್ತ್ರಾಸ್ತ್ರ ತರಬೇತಿಯ ಜೊತೆಗೆ ಪರ್ವತಶಿಖರಗಳಲ್ಲಿ ಚಟುವಟಿಕೆಗಳನ್ನು ನಡೆಸಲು ಅಗತ್ಯವಾದ ತರಬೇತಿಯನ್ನೂ ನೀಡಲಾಗಿರುತ್ತದೆ. ಲೀಪಾ ಕಣಿವೆಯಿಂದ ಹೊರಟಿದ್ದ ಉಗ್ರರಿಗೆ ಶಂಶಬಾರಿ ಪರ್ವತಶ್ರೇಣಿಯ ಗಿರಿಶಿಖರಗಳು, ತಾವು ಹೋಗಬೇಕಾದ ದಾರಿಗಳು, ಭಾರತೀಯ ಸೈನಿಕರ ಠಾಣೆಗಳಿರುವ ಪ್ರದೇಶಗಳು, ಭಾರತೀಯ ಸೈನಿಕರು ಪಹರೆ ಮಾಡುವ ಸ್ಥಳಗಳು, ಅಡಗಿಕೊಳ್ಳಲು ಇರುವ ತಾಣಗಳು, ಇತ್ಯಾದಿ ಮಾಹಿತಿಗಳನ್ನೆಲ್ಲ ನೀಡಲಾಗಿತ್ತು. ಅವರು ಆ ಪ್ರದೇಶದ ಭೂಪಟವನ್ನೂ ಅಧ್ಯಯನ ಮಾಡಿದ್ದರೆನ್ನಿಸುತ್ತದೆ. ಅವರಿಗೆ ತಾವು ಹೋಗಬೇಕಾಗಿದ್ದ ದಾರಿಯ ನಿಖರ ಮಾಹಿತಿ ಇದ್ದಿತ್ತು. ಅವರು ಶಿಖರವನ್ನೇರುತ್ತ ಆಗಾಗ ಸ್ವಲ್ಪ ವಿರಮಿಸಿಕೊಂಡು ಅಲ್ಲಲ್ಲೇ ಅಡಗಿಕೊಂಡು ಮುಂದುವರಿಯುತ್ತಿದ್ದರು.
ಭಾರತವು LOC ಕಾಯುವುದಕ್ಕಾಗಿ ದೊಡ್ಡಸಂಖ್ಯೆಯಲ್ಲಿ ಸೈನಿಕರನ್ನು ನೇಮಿಸಿರುವುದಲ್ಲದೆ ಗಡಿಯುದ್ದಕ್ಕೂ ವಿದ್ಯುತ್ ಹರಿಯುವ ತಂತಿಬೇಲಿಯನ್ನು ನಿರ್ಮಿಸಿದೆ. ಆದರೆ ಚಳಿಗಾಲದಲ್ಲಿ ಸುರಿಯುವ ಹಿಮವೃಷ್ಟಿಯಿಂದಾಗಿ ಬೇಲಿಯು ಅನೇಕ ಕಡೆಗಳಲ್ಲಿ ಹಾಳಾಗಿರುತ್ತದೆ. ಜೊತೆಗೆ ಪರ್ವತಪ್ರದೇಶದಲ್ಲಿ ಅನೇಕ ಕಡೆಗಳಲ್ಲಿ ಬೇಲಿಯನ್ನು ಹಾಕುವುದು ಅಸಾಧ್ಯವಾಗಿರುತ್ತದೆ. ಈ ಉಗ್ರರು ಎರಡು ಕಿಲೋಮೀಟರ್ಗಳಷ್ಟು ಬೇಲಿಯಿರದಂತಹ ಪ್ರದೇಶವನ್ನು ಹುಡುಕಿಕೊಂಡಿದ್ದರು. ಮೇ 26ರ ಆ ಕಗ್ಗತ್ತಲ ರಾತ್ರಿಯಂದು ಈ ಸಂದಿಯಲ್ಲಿ ಅವರು ಯಾರಿಗೂ ತಿಳಿಯದಂತೆ ಭಾರತದೊಳಕ್ಕೆ ಒಳನುಸುಳಿದರು. ಇನ್ನು ಅಲ್ಲಿದ್ದ ಭಾರತೀಯ ಗಡಿರಕ್ಷಕ ಪಡೆಗಳ ಕಣ್ಣುತಪ್ಪಿಸಿ ಕೆಲವು ಗಂಟೆಗಳ ಕಾಲ ಒಳನುಸುಳಿದರೆ ಅವರ ಕಾರ್ಯ ಅರ್ಧ ಸಾಧಿಸಿದಂತೆ; ಇನ್ನುಳಿದದ್ದು ಭಯೋತ್ಪಾದನೆ ನಡೆಸುವುದಷ್ಟೆ.
ಅಲ್ಲಿ ಗಡಿಯನ್ನು ಕಾಯುತ್ತಿದ್ದದ್ದು ಅಸ್ಸಾಂ ರೆಜಿಮೆಂಟಿನ 35 ರಾಷ್ಟ್ರೀಯ ರೈಫಲ್ಸ್ ದಳಕ್ಕೆ ಸೇರಿದ ಸೈನಿಕರು. ಭಾರತದ ಪೂರ್ವಾಂಚಲ ರಾಜ್ಯಗಳಲ್ಲಿ ಹುಟ್ಟಿಬೆಳೆದಿರುವ ಈ ಸೈನಿಕರಿಗೆ ಪರ್ವತಶಿಖರಗಳ ಪರಿಚಯ ತಕ್ಕಮಟ್ಟಿಗಿರುತ್ತದೆ.
ಉಗ್ರರು ಗಡಿಯನ್ನು ದಾಟಿ ಒಳನುಸುಳುವ ಹೊತ್ತಿಗೆ ಸೂರ್ಯನ ಮೊದಲ ಕಿರಣಗಳು ಮೂಡುತ್ತಿದ್ದವು. ಆ ಪ್ರದೇಶವನ್ನು ಗಮನಿಸುತ್ತಿದ್ದ ಸಿಪಾಯಿ ಮಣಿಪುರದ ಜೆ.ಎನ್. ಬೈತೆಗೆ ಕಣ್ಣಂಚಿನಲ್ಲಿ ಏನೋ ಓಡಾಡಿದ್ದು ಕಂಡಿತು. ಈ ರೀತಿ ಆಗುವುದು ಅಪರೂಪವೇನಲ್ಲ. ಯಾವುದೋ ವನ್ಯಮೃಗವೋ ಪಕ್ಷಿಯೋ ಆಗಾಗ ಓಡಾಡುತ್ತಿರುತ್ತವೆ. ಹಿಮದ ಚಿರತೆಗಳು, ಕರಡಿಗಳು ಅಲ್ಲಿ ಅಡ್ಡಾಡುತ್ತವೆ. ಏನೇ ಆದರೂ ಖಚಿತಪಡಿಸಿಕೊಳ್ಳಬೇಕೆನ್ನುವುದು ಅಲ್ಲಿರುವ ಪ್ರತಿಯೊಬ್ಬ ಸೈನಿಕನಿಗೂ ನೀಡಲಾಗಿರುವ ಹುಕುಂ. ಓಡಾಟ ಕಂಡ ಪ್ರದೇಶದ ಹತ್ತಿರ ಜೆ.ಎನ್. ಬೈತೆ ಸರಿದು ನೋಡಿದರು; ಏನೂ ಕಾಣುತ್ತಿಲ್ಲ, ಅಲುಗಾಡುತ್ತಿಲ್ಲ; ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದಾಗ ನೆಲದ ಮೇಲೆ ಬಿದ್ದಿದ್ದ ಹಿಮದ ಮೇಲೆ ಆಗ ತಾನೆ ಮೂಡಿದ್ದ ಹೆಜ್ಜೆಗುರುತುಗಳು ಕಂಡವು. ಏನೂ ಆಗಿಲ್ಲವೆಂಬಂತೆ ಸದ್ದಿಲ್ಲದೆ ಹಿಂದಕ್ಕೆ ಸರಿದ ಸಿಪಾಯಿ ತನ್ನ ಜೊತೆಗಾರರೆಲ್ಲರನ್ನೂ ಎಚ್ಚರಿಸಿದ. ಕೂಡಲೇ ಶಂಶಬಾರಿ ಶ್ರೇಣಿಯಲ್ಲಿ ಆ ಪ್ರದೇಶದಲ್ಲಿದ್ದ ಎಲ್ಲ ತಂಡಗಳ ನಿರ್ವಹಣೆ ಮಾಡುತ್ತಿದ್ದ ‘ಪ್ರತಿಧ್ವನಿ ತಂಡ’ದ ಕಮಾಂಡರ್ ಮೇಜರ್ ಕೆ. ಅಮೃತರಾಜ್ ಅವರಿಗೆ ರೇಡಿಯೋ ಸಂದೇಶ ಕಳುಹಿಸಲಾಯಿತು.
ಉಗ್ರರ ಓಡಾಟ ಕಂಡಿದ್ದ ಶಿಖರದ ಸುತ್ತಲಿದ್ದ ನಾಲ್ಕು ತಂಡಗಳು ಮತ್ತು ಕೆಳಗಿನ ಪ್ರದೇಶದಲ್ಲಿದ್ದ ಮೂರು ತಂಡಗಳನ್ನು ಎಚ್ಚರಿಸಲಾಯಿತು. ಶಿಖರದಿಂದ 2000 ಮೀಟರ್ ಕೆಳಗಿದ್ದ ‘ಸಬು ಪೋಸ್ಟ್’ ತಾಣದಲ್ಲಿ ಕಾವಲು ಕಾಯುತ್ತಿದ್ದುದು ಹವೀಲ್ದಾರ್ ಹಂಗ್ಪನ್ ದಾದಾ ಮತ್ತು ಸಂಗಡಿಗರು. ಆಗಿನ್ನೂ ಬೆಳಗಿನ ಜಾವ 5:45 ಗಂಟೆಯಾಗಿತ್ತು, ಬೆಳಕು ಮೂಡುತ್ತಿತ್ತು. ಈ ತಂಡವು ಶಿಖರದಿಂದ ಕೆಳಗಿಳಿದು ಮುಂದಿನ ಕೆಲವು ದಿನಗಳಿಗೆ ಬೇಕಿದ್ದ ಆಹಾರಸಾಮಗ್ರಿಗಳನ್ನು ತರಲು ಹೊರಟಿತ್ತು. ಉಗ್ರರು ಅಡಗಿರುವ ಸುದ್ದಿ ಬಂದ ಕೂಡಲೇ ಅವರು ಮೇಲಕ್ಕೇರಿ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಶಿಖರವನ್ನು ಏರತೊಡಗಿದರು. ಹಿಂದಿನ ಒಂದೆರಡು ದಿನಗಳಲ್ಲಿ ಸತತವಾಗಿ ಹಿಮ ಸುರಿದಿತ್ತು. ಹತ್ತು ಅಡಿಗಳಷ್ಟು ಹಿಮವು ತುಂಬಿಕೊಂಡಿತ್ತು, ತಾಪಮಾನವು -15 ಡಿಗ್ರಿ ಸೆಂಟಿಗ್ರೇಡ್ಗೆ ಇಳಿದಿತ್ತು. ನೆಲವು ಜಾರುತ್ತಿತ್ತು. ಹೀಗಾಗಿ ಇವರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿತ್ತು. ಅರುಣಾಚಲ ಪ್ರದೇಶದಲ್ಲಿ ಹುಟ್ಟಿಬೆಳೆದಿದ್ದ ಹವೀಲ್ದಾರ್ ದಾದಾಗೆ ಈ ಪರ್ವತಪ್ರದೇಶವು ತನ್ನೂರಿನ ಪ್ರದೇಶದಂತೆಯೇ ಕಾಣುತ್ತಿತ್ತು. ಹೀಗಾಗಿ ಇಲ್ಲಿಗೆ ಹೊಂದಿಕೊಳ್ಳಲು ಓಡಾಡಲು ಅವನಿಗೆ ತೊಂದರೆಯಾಗಿರಲಿಲ್ಲ.
ಎಷ್ಟು ಜನ ಉಗ್ರರು ಸೇರಿಕೊಂಡಿರುವರೆಂಬುದು ಇನ್ನೂ ತಿಳಿದಿರಲಿಲ್ಲ. ಹವೀಲ್ದಾರ್ ದಾದಾ ಜೊತೆ ಇದ್ದದ್ದು ಹತ್ತು ಸೈನಿಕರು. ಉಗ್ರರು ಶಿಖರದಿಂದ ಕೆಳಗಿಳಿದು ತಪ್ಪಿಸಿಕೊಂಡು ಹೋಗದಂತೆ ತಡೆಯುವುದು ಇವರ ಕಾರ್ಯವಾಗಿತ್ತು. ಆ ಶಿಖರದಿಂದ ಕೆಳಗಿಳಿದು ಹೋಗಲು ಸಾಧ್ಯವಿದ್ದ ಎಲ್ಲ ದಾರಿಗಳಲ್ಲೂ ಸೈನಿಕನನ್ನು ನಿಲ್ಲಿಸಿದ ದಾದಾ, ಅವರೆಲ್ಲರಿಗೂ ಕೂಗಿ ಹೇಳಿದ: “ಅವರು ನಮ್ಮ ತಾಣದವರೆಗೂ ಬಂದಿದ್ದಾರೆ. ಆದರೆ, ನಾವು ಅವರನ್ನು ಇಲ್ಲಿಂದ ಮುಂದೆ ಹೋಗಲು ಬಿಡುವುದಿಲ್ಲ. ಅವರೆಲ್ಲರನ್ನೂ ಇಲ್ಲೇ ಮುಗಿಸೋಣ.” ಹವೀಲ್ದಾರ್ ತನ್ನ ತಂಡದ ಎಲ್ಲರಿಗೂ ಮಾದರಿ ಸೈನಿಕನಾಗಿದ್ದ; ಅವರಿಗೆ ನೀಡುವ ಕೆಲಸವನ್ನು ತಾನು ಅದಾಗಲೇ ಮಾಡಿರುತ್ತಿದ್ದ; ಆತ ನಿಜವಾದ ನಾಯಕನಾಗಿದ್ದ. ಹೀಗಾಗಿ ಆತ ಏನು ಹೇಳಿದರೂ ಆ ಸೈನಿಕರು ಗೌರವದಿಂದ ಮರುಮಾತಿಲ್ಲದೆ ಮಾಡುತ್ತಿದ್ದರು. ಆ ಎಲ್ಲ ಸೈನಿಕರೂ ಉಗ್ರರ ಸ್ವಾಗತಕ್ಕೆ ಅಣಿಯಾಗಿದ್ದರು. ಆದರೆ, ಇಲ್ಲಿಯವರೆಗೂ ಉಗ್ರರ ಸುದ್ದಿಯಿಲ್ಲ. ಆಯಕಟ್ಟಿನ ಸ್ಥಳಗಳಲ್ಲಿ ಎಲ್ಲ ಸೈನಿಕರೂ ಸ್ಥಾಪಿತರಾದ ನಂತರ ಕಂಪೆನಿ ಕಮಾಂಡರ್ ಉಗ್ರರು ಕಂಡಿದ್ದ ಪ್ರದೇಶದ ಸುತ್ತಲಿನ ನಾಲ್ಕು ತಂಡಗಳಿಗೆ ಮೆಷಿನ್ಗನ್ನುಗಳಿಂದ ಒಂದು ಸುತ್ತು ಗುಂಡು ಹಾರಿಸುವಂತೆ ಆಜ್ಞಾಪಿಸಿದರು. ಗುಂಡಿನ ಮಳೆ ಸುರಿಯತೊಡಗಿತು.
ಇದನ್ನು ನಿರೀಕ್ಷಿಸಿರದಿದ್ದ ಉಗ್ರರು ಗಾಬರಿಯಾಗಿ ಶಿಖರದ ಇಳಿಜಾರಿನಲ್ಲಿ ಓಡತೊಡಗಿದರು. ‘ಸಬು ಪೋಸ್ಟ್’ನ ಸೈನಿಕರು ಈ ಕ್ಷಣಕ್ಕಾಗಿಯೇ ಕಾದಿದ್ದರು. ಉಗ್ರರು ತಮ್ಮ ಅಡಗುತಾಣದಿಂದೆದ್ದು ಓಡಿದ್ದನ್ನು ಗಮನಿಸಿದ ಕಂಪೆನಿ ಕಮಾಂಡರ್ ಅಮೃತರಾಜ್ ಅವರನ್ನು ಬೆಂಬತ್ತಿದರು. ಮುಂದೆ ಹವೀಲ್ದಾರ್ ದಾದಾ ಮತ್ತು ಜೊತೆಗಾರರು ಉಗ್ರರನ್ನು ತಡೆಯುವರೆನ್ನುವುದು ರಾಜ್ಗೆ ಖಚಿತವಿತ್ತು.
ಉಗ್ರರು ಇಬ್ಬಿಬ್ಬರು ಜೊತೆಯಾಗಿ ಎರಡು ಗುಂಪುಗಳಲ್ಲಿ ಧಾವಿಸಿ ಬರುತ್ತಿದ್ದರು. ಅಟ್ಟಿಸಿಕೊಂಡು ಬರುತ್ತಿದ್ದ ಭಾರತೀಯ ಸೈನಿಕರಿಗೆ ದಾರಿ ತಪ್ಪಿಸಲು ಅವರು ಎರಡು ತಂಡಗಳಾಗಿ ಬೇರೆಬೇರೆ ದಾರಿಗಳಲ್ಲಿ ಓಡುತ್ತಿದ್ದರು. ಹವೀಲ್ದಾರ್ ದಾದಾ ಮತ್ತು ಅವರ ತಂಡದ ಸೈನಿಕರು ನೆಲದ ಮೇಲೆ ಮಲಗಿ ಕಾಯುತ್ತಿದ್ದರು. ಉಗ್ರರು ಇವರಿಂದ ಕೆಲವೇ ಹೆಜ್ಜೆಗಳಷ್ಟು ದೂರದಲ್ಲಿದ್ದರು. ಸೈನಿಕರ ಬೆರಳುಗಳು ಮೆಷಿನ್ಗನ್ನುಗಳ ಕುದುರೆಯ ಮೇಲಿದ್ದವು. ಇನ್ನೇನು ಅವನ್ನು ಒತ್ತಬೇಕು ಎನ್ನುವಷ್ಟರಲ್ಲಿ ಓಡುತ್ತಿದ್ದ ಉಗ್ರರು ಗಕ್ಕನೆ ತಮ್ಮ ದಾರಿಯಲ್ಲಿ ನಿಂತುಬಿಟ್ಟರು. ಅವರು ಹಾಗೇಕೆ ನಿಂತರೆಂದು ಸೈನಿಕರು ಯೋಚಿಸುವಷ್ಟರಲ್ಲಿ ಅವರು ನಿರೀಕ್ಷಿಸಿರದ ಸಂಗತಿ ನಡೆಯಿತು. ಓಡುತ್ತಿದ್ದ ಉಗ್ರರಿಗೆ ನೆಲದ ಮೇಲೆ ಮಲಗಿದ್ದ ಸೈನಿಕರು ಕಂಡಿದ್ದರು. ಅವರು ಕ್ಷಣಮಾತ್ರದಲ್ಲಿ ತಮ್ಮನ್ನು ನುಚ್ಚುನೂರು ಮಾಡುವರೆನ್ನುವುದನ್ನರಿತ ಉಗ್ರರು ತಾವೇ ಮುಂದಾಗಿ ಸೈನಿಕರ ಮೇಲೆ ಮೆಷಿನ್ಗನ್ನುಗಳಿಂದ ಗುಂಡಿನ ಮಳೆ ಸುರಿಸಿಬಿಟ್ಟರು. ಅನಿರೀಕ್ಷಿತ ಆಕ್ರಮಣದಿಂದ ದಿಕ್ಕೆಟ್ಟ ಸೈನಿಕರು ಮಲಗಿದ್ದಲ್ಲಿಂದ ಎದ್ದು ನುಗ್ಗಿಬರುತ್ತಿದ್ದ ಗುಂಡುಗಳಿಂದ ತಪ್ಪಿಸಿಕೊಳ್ಳಲು ಧಾವಿಸಿದರು. ಆದರೆ ಹವೀಲ್ದಾರ್ ದಾದಾ ತಪ್ಪಿಸಿಕೊಂಡು ಓಡುವುದರ ಬದಲು ಆವೇಶ ಬಂದವರಂತೆ ಉಗ್ರರತ್ತ ನುಗ್ಗಿದರು. ಅವರು ಕೈಯ್ಯಲ್ಲಿದ್ದ ಕಲಾಶ್ನಿಕೋವ್ ಮೆಷಿನ್ಗನ್ನಿನಿಂದ ಬೆಂಕಿಯನ್ನುಗುಳಿಸುತ್ತ ಮಲಗಿದ್ದಲ್ಲಿಂದ ಮೇಲಕ್ಕೆ ನೆಗೆದು ಮುನ್ನುಗ್ಗಿದರು. ಕೆಲವೇ ಕ್ಷಣಗಳಲ್ಲಿ 30 ಸುತ್ತು ಗುಂಡುಗಳನ್ನು ಹಾರಿಸಿ ಉಗ್ರರಿಬ್ಬರನ್ನೂ ಯಮಪುರಿಗಟ್ಟಿದರು. ಇವರ ಆವೇಶ ನೋಡಿ ಗಾಬರಿಗೊಂಡ ಉಳಿದಿಬ್ಬರು ಉಗ್ರರು ಹತ್ತಿರದಲ್ಲಿದ್ದ ಎರಡು ಬೃಹದ್ ಗಾತ್ರದ ಬಂಡೆಗಳ ಸಂದಿಯಲ್ಲಿ ಅವಿತಿಟ್ಟುಕೊಂಡರು.
ಇಬ್ಬರು ಉಗ್ರರನ್ನು ಮುಗಿಸಿದ ಹವೀಲ್ದಾರ್ ಬಂಡೆಯ ಹಿಂದೆ ಅವಿತಿದ್ದ ಉಗ್ರರೆಡೆಗೆ ನುಗ್ಗಿದರು. ಹವೀಲ್ದಾರನ ಜೊತೆಗಾರರು ಮುನ್ನುಗ್ಗಬೇಡವೆಂದು ಕೂಗಿಕೊಂಡರು; ಬಂಡೆಯ ಹಿಂದೆ ಅವಿತಿದ್ದ ಉಗ್ರರ ಗುಂಡಿಗೆ ಇವರು ಸುಲಭದ ಗುರಿಯಾಗುತ್ತಾರೆನ್ನುವುದು ಅವರಿಗೆ ತಿಳಿದಿತ್ತು. ಆದರೆ, ಮೈಮೇಲೆ ಆವೇಶ ಬಂದಿದ್ದ ಹವೀಲ್ದಾರ್ ದಾದಾ ಮೇಲೆ ಯಾರ ಎಚ್ಚರಿಕೆಯ ಮಾತೂ ಕೆಲಸ ಮಾಡಲಿಲ್ಲ. ಬಂಡೆಯ ಹಿಂದೆ ಅವಿತಿದ್ದ ಉಗ್ರ ಒಂದು ಕ್ಷಣ ಹೊರಬಂದು ಮುನ್ನುಗ್ಗುತ್ತಿದ್ದ ದಾದಾ ಮೇಲೆ ಗುಂಡಿನ ದಾಳಿ ನಡೆಸಿದ. ಕ್ಷಣಾರ್ಧದಲ್ಲಿ ತಮ್ಮ ದೇಹವನ್ನು ಗುಂಡಿನ ದಾರಿಯಿಂದ ಪಕ್ಕಕ್ಕೆಸೆದ ದಾದಾ ಬಂಡೆಯತ್ತ ಸರಿದು ತಮ್ಮ ಮೆಷಿನ್ಗನ್ನಿನ ಹಿಂಭಾಗದಿಂದ ಉಗ್ರನ ಮುಖಕ್ಕೆ ಗುದ್ದಿ, ಆತನ ಕುತ್ತಿಗೆಯನ್ನು ಮತ್ತೊಂದು ಕೈಯಿಂದ ಹಿಡಿದುಕೊಂಡರು. ಇವರ ಪಟ್ಟಿನಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದ ಉಗ್ರನ ಕುತ್ತಿಗೆಯನ್ನು ಮುರಿದು ನೆಲಕ್ಕೆ ಚೆಲ್ಲಿದರು ದಾದಾ. ಇನ್ನುಳಿದದ್ದು ಕಡೆಯ ಉಗ್ರ. ಆತ ಸ್ವಲ್ಪ ಏರುಜಾಗದಲ್ಲಿದ್ದ ಮತ್ತೊಂದು ಬಂಡೆಯ ಹಿಂದೆ ಅವಿತಿದ್ದ. ಆವೇಶದಲ್ಲಿದ್ದ ದಾದಾ ತಮ್ಮ ಗಮನ ಅತ್ತ ಸರಿಸಿದರು. ಉಳಿದ ಉಗ್ರರಿಗೆ ಆಗಿದ್ದ ಗತಿಯನ್ನು ಕಣ್ಣಾರೆ ಕಂಡಿದ್ದ ನಾಲ್ಕನೆಯ ಉಗ್ರನು ದಾದಾ ಹತ್ತಿರ ಬರುವ ಮೊದಲೇ ಅವಿತಿದ್ದಲ್ಲಿಂದ ಹೊರಬಂದು ಗುರಿಯಿಟ್ಟು ಗುಂಡಿನ ಮಳೆ ಸುರಿಸಿದ. ಆತನು ಸಿಡಿಸಿದ ಗುಂಡೊಂದು ದಾದಾ ಅವರ ಗಂಟಲನ್ನು ಸೀಳಿಹಾಕಿತು. ದಾದಾ ಅಲ್ಲೇ ಕುಸಿದುಬಿದ್ದರು.
ಆಗ ಸಮಯ ಬೆಳಗಿನ 9:45. ನಾಲ್ಕನೆಯ ಉಗ್ರ ಮತ್ತೆ ಬಂಡೆಯ ಹಿಂದೆ ಅವಿತುಕೊಂಡ. ಆತನನ್ನು ಹಿಡಿಯಲು ಕಮಾಂಡರ್ ರಾಜ್ ವ್ಯೂಹವನ್ನು ರಚಿಸಿದರು. ಆತನನ್ನು ಮುಗಿಸಿದಾಗ ಸಮಯ ಸಂಜೆ 4:45. ಏಳು ಗಂಟೆಗಳ ಕಾಲ ಆತ ಇವರನ್ನು ಸತಾಯಿಸಿದ್ದ. ಕಡೆಗೂ ಕಮಾಂಡರ್ ರಾಜ್ ಅವರೇ ಆತನನ್ನು ನಿಗ್ರಹಿಸಿದ್ದರು. ಆತ ಹತನಾಗುವವರೆಗೂ ಹವೀಲ್ದಾರ್ ದಾದಾ ಹತ್ತಿರ ಹೋಗಲು ಯಾರಿಗೂ ಸಾಧ್ಯವಾಗಿರಲಿಲ್ಲ. ಸಂಜೆ 4:45ರವರೆಗೂ ದಾದಾ ಅವರ ದೇಹ ಸುತ್ತಲಿನ ಹಿಮವನ್ನೆಲ್ಲ ಕೆಂಪಾಗಿಸಿ ಅಲ್ಲೇ ಬಿದ್ದಿತ್ತು. ಅವರ ಕೈಯಲ್ಲಿದ್ದ ಕಲಾಶ್ನಿಕೋವ್ ಬಂದೂಕಿನ ಕುದುರೆಯನ್ನು ಅವರ ಬೆರಳು ಇನ್ನೂ ಅದುಮಿಕೊಂಡೇ ಇದ್ದಿತು. ಬಂದೂಕಿನಲ್ಲಿದ್ದ ಎಲ್ಲ ಗುಂಡುಗಳೂ ಮುಗಿದಿದ್ದವು, ಅಲ್ಲಿಯವರೆಗೂ ಅವರು ಉಗ್ರನ ಹುಟ್ಟಡಗಿಸುವ ಪ್ರಯತ್ನ ನಡೆಸಿದ್ದರು. ಅವರ ದಾಳಿಯಲ್ಲಿ ನಾಲ್ಕನೆಯ ಉಗ್ರನೂ ಗಾಯಗೊಂಡಿದ್ದ; ಸ್ವಲ್ಪದರಲ್ಲಿ ಆತ ಪಾರಾಗಿದ್ದ.
ಮೈಮೇಲೆ ಬಂದಂತೆ ಸೆಣಸಿ ಮೂವರು ಉಗ್ರರನ್ನು ಯಮಪುರಿಗಟ್ಟಿದ್ದ ಹವೀಲ್ದಾರ್ ಹಂಗ್ಪನ್ ದಾದಾಗೆ 2016ರ ಆಗಸ್ಟ್ 14ರಂದು ಭಾರತದ ರಾಷ್ಟ್ರಪತಿಗಳು ಶಾಂತಿಸಮಯದ ಅತ್ಯುನ್ನತ ಪ್ರಶಸ್ತಿಯಾದ ‘ಅಶೋಕಚಕ್ರ’ವನ್ನು ಘೋಷಿಸಿದರು. ಆ ಪ್ರಶಸ್ತಿಯನ್ನು ಆತನ ಪತ್ನಿ ಚೇಸನ್ ಅವರು 2017ರ ಗಣರಾಜ್ಯೋತ್ಸವದಂದು ದೆಹಲಿಯ ರಾಜಪಥದಲ್ಲಿ ನಡೆಯುವ ಪೆರೇಡ್ ಸಮಯದಲ್ಲಿ ರಾಷ್ಟ್ರಪತಿಗಳಿಂದ ಸ್ವೀಕರಿಸಿದರು.
ಶಿಲ್ಲಾಂಗ್ ಅನ್ನು ಕೇಂದ್ರವಾಗಿ ಹೊಂದಿರುವ ಅಸ್ಸಾಂ ರೆಜಿಮೆಂಟಿನ ಕೇಂದ್ರದ ಪ್ರಧಾನಕಛೇರಿಯ ಕಟ್ಟಡಕ್ಕೆ ಹವೀಲ್ದಾರ್ ಹಂಗ್ಪನ್ ದಾದಾ ಅವರ ಹೆಸರನ್ನಿಡಲಾಗಿದೆ. ಅರುಣಾಚಲ ಪ್ರದೇಶ ಸರ್ಕಾರವು ಪ್ರತಿವರ್ಷ ನಡೆಸುವ ಮುಖ್ಯಮಂತ್ರಿಗಳ ಫುಟ್ಬಾಲ್ ಮತ್ತು ವಾಲೀಬಾಲ್ ಚಾಂಪಿಯನ್ಷಿಪ್ಗೆ ಕೂಡಾ ಹವೀಲ್ದಾರ್ ದಾದಾ ಅವರ ಹೆಸರನಿಟ್ಟಿದೆ.