ಮಹಾದಿಕ್ ಅವರು ಕೈಗೊಂಡಿದ್ದ ಒಂದು ಮಹತ್ತ್ವದ ಕೆಲಸವೆಂದರೆ ಕಾಶ್ಮೀರದ ಜನರ ಹೃದಯವನ್ನು ಗೆಲ್ಲುವ ಕಾರ್ಯ. ಕುಪ್ವಾರ ಜಿಲ್ಲೆಯ ಮಕ್ಕಳಿಗಾಗಿ ಯೋಗ ಶಿಬಿರಗಳು ಅವರಲ್ಲಿ ನಾಯಕತ್ವದ ಗುಣ ಬೆಳೆಸುವ ಕಾರ್ಯಕ್ರಮಗಳು ಪ್ರವಾಸೋದ್ಯಮದ ಬೆಳವಣಿಗೆ ಇತ್ಯಾದಿ…
೨೦೧೫ನೇ ಇಸವಿಯ ನವೆಂಬರ್ ತಿಂಗಳ ೧೬ನೇ ತಾರೀಖು, ಮಧ್ಯರಾತ್ರಿಯ ಸಮಯ. ಆಗಸದಲ್ಲಿ ದಟ್ಟವಾಗಿ ಕವಿದಿರುವ ಮೋಡಗಳು. ಚಂದಿರನ ಸುಳಿವೂ ಇಲ್ಲದ ಇರುಳಿನ ಕಗ್ಗತ್ತಲಿನಲ್ಲಿ ಜಗತ್ತೆಲ್ಲವೂ ಕರಗಿ ನೀರವ ಮೌನ ಎಲ್ಲೆಡೆ ಆವರಿಸಿದೆ. ಇದಕ್ಕೆ ಜೊತೆಯೇನೋ ಎಂಬಂತೆ ಮರಗಟ್ಟಿಸುವ ಚಳಿ. ಜಮ್ಮು-ಕಾಶ್ಮೀರ ಪ್ರಾಂತದ ಚಳಿ ಎಂದರೆ ಕೇಳಬೇಕೆ! ಜಗವೆಲ್ಲ ಬೆಚ್ಚಗೆ ಮಲಗಿರುವ ಆ ನಡುರಾತ್ರಿಯಲ್ಲಿ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕಲ್ರೂಸ್ ಪ್ರದೇಶದ ದಟ್ಟ ಅರಣ್ಯದಲ್ಲಿ ಕೆಲವು ವ್ಯಕ್ತಿಗಳು ಓಡಾಟ ನಡೆಸುತ್ತಿದ್ದಾರೆ. ಪ್ರತಿಯೊಬ್ಬರ ಕೈಯಲ್ಲಿಯೂ ಬಂದೂಕುಗಳಿವೆ, ಬೆನ್ನಮೇಲೆ ಭಾರದ ಚೀಲಗಳಿವೆ. ಅವರು ಏನನ್ನೋ ಹುಡುಕುತ್ತಿರುವಂತಿದೆ. ಅವರ ದಿರಿಸು ಮತ್ತು ರೀತಿಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಅವರು ಸೈನಿಕರೆಂಬ ಅನುಮಾನ ಬಾರದಿರದು. ನಿಜ, ಅವರು ಭಾರತೀಯ ಸೈನಿಕರು; ೪೧ ರಾಷ್ಟ್ರೀಯ ರೈಫಲ್ಸ್ ಪಡೆಯ ಕಮ್ಯಾಂಡೋಗಳು.
ವಿಶೇಷ ಪಡೆಗಳಿಗೆ ಸೇರಿದ ಈ ಕಮ್ಯಾಂಡೋಗಳ ಬಹುಮುಖ್ಯವಾದ ಕೆಲಸ – ಗಡಿಯಾಚೆಯಿಂದ ಕಳ್ಳತನದಲ್ಲಿ ನುಸುಳುವ ಉಗ್ರರನ್ನು ಪತ್ತೆಹಚ್ಚಿ ನಾಶಗೊಳಿಸುವುದು. ಗಡಿಯುದ್ದಕ್ಕೂ ಗುಪ್ತಚರರ ಜಾಲ ಹರಡಿದೆ. ಉಗ್ರರ ಚಲನವಲನವನ್ನು ಗಮನಿಸಿಕೊಂಡು ಹತ್ತಿರದ ಕಮ್ಯಾಂಡೋ ತಂಡಕ್ಕೆ ಸುದ್ದಿ ರವಾನಿಸುವ ಕೆಲಸ ಇವರದು. ಗುಪ್ತಚರರಿಂದ ಸುದ್ದಿ ಬಂದ ಕೂಡಲೇ ಅಲ್ಲಿಗೆ ಧಾವಿಸಿ ಉಗ್ರರ ದಮನ ಮಾಡುವುದು ಕಮ್ಯಾಂಡೋ ತಂಡಗಳ ಕೆಲಸ. ಈ ಕೆಲಸಕ್ಕೆ ಹಗಲು-ರಾತ್ರಿ ಎಂಬ ಭೇದವಿಲ್ಲ. ಸದಾ ಸಿದ್ಧರಿರುವ ರಾಷ್ಟ್ರರಕ್ಷಕರಿವರು.
ಉಗ್ರರು ಗಡಿಯೊಳಗೆ ನುಸುಳಿ ತಮ್ಮ ಪ್ರದೇಶವನ್ನು ಸೇರಿರುವ ಸುದ್ದಿ ೪೧ ರಾಷ್ಟ್ರೀಯ ರೈಫಲ್ಸ್ ತಂಡದ ಕಮ್ಯಾಂಡಿಂಗ್ ಆಫೀಸರ್ ಕರ್ನಲ್ ಸಂತೋಷ್ ಯಶ್ವಂತ್ ಮಹಾದಿಕ್ ಅವರಿಗೆ ತಲಪಿತ್ತು. ನವೆಂಬರ್ ೩ರಂದು ಅಲ್ಲಿನ ತ್ರುಮ್ನಾರ್ ಗ್ರಾಮದ ಬಳಿ ಅನುಮಾನಾಸ್ಪದ ವ್ಯಕ್ತಿಗಳು ಕಾಣಿಸಿಕೊಂಡಿದ್ದರು. ಕೂಡಲೇ ಗುಪ್ತಚರ ಮಾಹಿತಿಯನ್ನು ೫೭ ರಾಷ್ಟ್ರೀಯ ರೈಫಲ್ಸ್ ಕಚೇರಿಗೆ ರವಾನಿಸಲಾಯಿತು. ಅಲ್ಲಿದ್ದ ಅಧಿಕಾರಿ ೪೧ ರಾಷ್ಟ್ರೀಯ ರೈಫಲ್ಸ್ನ ಕರ್ನಲ್ ಮಹಾದಿಕ್ ಅವರ ತಂಡವನ್ನು ಎಚ್ಚರಿಸಿದರು. ಶಂಶಬಾರಿ ಪರ್ವತಶ್ರೇಣಿಯ ಇಳಿಜಾರಿನಲ್ಲಿರುವ ಪ್ರದೇಶವದು. ಕರ್ನಲ್ ಮಹಾದಿಕ್ ತಮ್ಮ ತಂಡವನ್ನು ಕರೆದುಕೊಂಡು ಆ ಪ್ರದೇಶದಲ್ಲಿ ತಮ್ಮ ಜಾಲವನ್ನು ಬೀಸಿ ಕಾದು ಕುಳಿತರು. ಮೂರು ದಿನಗಳಾದರೂ ಉಗ್ರರು ಪತ್ತೆಯಾಗಲಿಲ್ಲ. ನವೆಂಬರ್ ೭ರಂದು ಹಿಮವೃಷ್ಟಿಯಾಯಿತು, ಹಲವು ಅಡಿಗಳಷ್ಟು ಹಿಮ ಎಲ್ಲೆಡೆಯೂ ಸುರಿದು ಸೈನಿಕರು ತಮ್ಮ ಠಾಣೆಗೆ ವಾಪಸ್ ತೆರಳಬೇಕಾಯಿತು.
ಅದಾದ ಎರಡು ದಿನಗಳ ನಂತರ, ಅಂದರೆ ನವೆಂಬರ್ ೯ರಂದು ತ್ರುಮ್ನಾರ್ ಗ್ರಾಮದ ಸಮೀಪ ಶವವೊಂದು ಪತ್ತೆಯಾಯಿತು. ಕೂಡಲೇ ಕರ್ನಲ್ ಮಹಾದಿಕ್ ಅಲ್ಲಿಗೆ ಧಾವಿಸಿ ತಪಾಸಣೆ ನಡೆಸಿದರು. ಸಣ್ಣ ಝರಿಯ ಪಕ್ಕದಲ್ಲಿ ಬಿದ್ದಿದ್ದ ಶವದ ಜೊತೆ ಎ.ಕೆ.-೪೭ ಮೆಷಿನ್ಗನ್ ಇದ್ದಿತು. ಆ ವ್ಯಕ್ತಿಯ ಒಂದು ಕಾಲು ಗ್ಯಾಂಗ್ರಿನ್ನಿಂದ ಕೊಳೆತುಹೋಗಿತ್ತು. ಪ್ರಾಯಶಃ ಈ ವ್ಯಕ್ತಿಯೂ ಈ ಉಗ್ರರ ಗುಂಪಿಗೆ ಸೇರಿದವನಾಗಿದ್ದು ಹಿಮಪಾತದಿಂದ ಅಸುನೀಗಿದ್ದಿರಬೇಕೆಂದು ಅವರು ನಿರ್ಧರಿಸಿದರು. ಈಗ ಉಳಿದಿರುವುದು ಮೂವರು ಉಗ್ರರು, ಅವರು ಕಾಶ್ಮೀರದತ್ತ ಮುಂದುವರಿಯುತ್ತಿರಬೇಕು.
ಕರ್ನಲ್ ಮಹಾದಿಕ್ ನವೆಂಬರ್ ೧೦ರಂದು ತಮ್ಮ ತಂಡವನ್ನು ಎರಡು ಭಾಗವನ್ನಾಗಿ ಮಾಡಿ ಕುಪ್ವಾರಾದ ಮಣಿಗಾ ಮತ್ತು ಬಾರಾಮುಲ್ಲಾದ ಜುಗ್ಟಿಯಲ್ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರು. ಬೆಟ್ಟಗುಡ್ಡಗಳು, ಕಾನನ ಪ್ರದೇಶ, ಎಲ್ಲೆಡೆಯೂ ಹುಡುಕಾಡಿದರು. ಸತತ ೪೮ ಗಂಟೆಗಳ ಹುಡುಕಾಟವು ಯಾವ ಫಲವನ್ನೂ ನೀಡಲಿಲ್ಲ; ಎಲ್ಲಿಯೂ ಉಗ್ರರ ಪತ್ತೆಯಾಗಲಿಲ್ಲ.
ನವೆಂಬರ್ ೧೩ರಂದು ಮಹಾದಿಕ್ ಅವರಿಗೆ ಸುದ್ದಿಯೊಂದು ತಲಪಿತು – ಒಬ್ಬ ಅನುಮಾನಾಸ್ಪದ ವ್ಯಕ್ತಿ ಅರಣ್ಯಪ್ರದೇಶದಿಂದ ತ್ರುಮ್ನಾರ್ ಗ್ರಾಮಕ್ಕೆ ಸಮೀಪದ ಮತ್ತೊಂದು ಗ್ರಾಮದಲ್ಲಿ ಆಹಾರಕ್ಕಾಗಿ ಹುಡುಕಾಟ ನಡೆಸಿದ್ದಾನೆ – ಎಂದು. ಕೂಡಲೇ ಕಮ್ಯಾಂಡೋಗಳ ತಂಡ ಅಲ್ಲಿಗೆ ಧಾವಿಸಿದರೂ, ಅವರು ತಲಪುವ ವೇಳೆಗೆ ಆತ ಆಹಾರ ಸಂಗ್ರಹಿಸಿಕೊಂಡು ಅಲ್ಲಿಂದ ಮರೆಯಾಗಿದ್ದ. ಆತ ಯಾವ ದಿಕ್ಕಿನಲ್ಲಿ ಹೋದನೆಂದು ಗ್ರಾಮಸ್ಥರು ತೋರಿಸಿದ ದಿಕ್ಕಿನತ್ತ ಕಮ್ಯಾಂಡೋಗಳು ಧಾವಿಸಿದರು. ಒಂದು ಗುಡ್ಡದ ಮೇಲೆ ಶಾಲು ಹೊದ್ದಿರುವ ವ್ಯಕ್ತಿಯೊಬ್ಬ ಹೋಗುತ್ತಿರುವುದು ಕಾಣಿಸಿತು. ಕೂಡಲೇ ಆತನಿಗೆ ನಿಲ್ಲುವಂತೆ ದೂರದಿಂದಲೇ ಕೂಗಿ ಹೇಳಿದರು. ಆತನು ಕಮ್ಯಾಂಡೋಗಳ ಕಡೆ ತಿರುಗಿದವನೇ ಶಾಲಿನ ಒಳಗಿನಿಂದ ಬಂದೂಕನ್ನು ಹೊರತೆಗೆದು ಗುಂಡು ಹಾರಿಸತೊಡಗಿದ. ಇಬ್ಬರು ಸೈನಿಕರಿಗೆ ಗುಂಡೇಟು ತಗುಲಿ ಗಾಯಗೊಂಡರು. ತಕ್ಷಣ ಸೈನಿಕರೆಲ್ಲ ಹತ್ತಿರದಲ್ಲಿದ್ದ ಮರಗಳ ಹಿಂದೆ, ಬಂಡೆಗಳ ಹಿಂದೆ ಅಡಗಿಕೊಂಡರು. ಅದೇ ಸಮಯದಲ್ಲಿ ಇದ್ದಕ್ಕಿದ್ದಂತೆ ಎಲ್ಲೆಡೆ ಹಿಮ ಆವರಿಸಿತು, ಮಳೆ ಸುರಿಯಲಾರಂಭಿಸಿತು. ಎದುರುಗಡೆಯೆ ಇರುವ ವಸ್ತುವೂ ಕಾಣದಂತಾಯಿತು. ಆ ಅವಕಾಶವನ್ನು ಉಪಯೋಗಿಸಿಕೊಂಡು ಉಗ್ರನು ಪರಾರಿಯಾದ. ಮುಂದಿನ ಎರಡು ದಿನಗಳ ಕಾಲ ಆ ಪ್ರದೇಶವನ್ನೆಲ್ಲ ತಡಕಾಡಿದರೂ ಯಾವೊಬ್ಬನೂ ಕಣ್ಣಿಗೆ ಬೀಳಲಿಲ್ಲ. ಏಳು ದಿನಗಳಿಂದ ಸತತವಾಗಿ ಹುಡುಕಾಟ ನಡೆಸಿದ್ದ ಸೈನಿಕರಿಗೆ ನವೆಂಬರ್ ೧೫ರ ಹೊತ್ತಿಗೆ ಮುಂದೆ ಹುಡುಕುವುದರಿಂದ ಉಪಯೋಗವಿಲ್ಲ ಎನಿಸಿತ್ತು, ನಿರಾಸೆ ಕವಿದಿತ್ತು. ಅವರು ತಮ್ಮ ಠಾಣೆಗೆ ವಾಪಸ್ಸಾದರು.
ಮಹಾದಿಕ್ ಅವರ ತಂಡ ವಾಪಸ್ಸಾದ ನಂತರ ೧೬೦ ಟೆರಿಟೋರಿಯಲ್ ಆರ್ಮಿಯ ತಂಡವು ಹುಡುಕಾಟವನ್ನು ಮುಂದುವರಿಸಿತು. ಅವರು ಪಕ್ಕದಲ್ಲಿರುವ ಸುಬಾಯ ಪ್ರದೇಶದಲ್ಲಿನ ಅರಣ್ಯದಲ್ಲಿ ಮತ್ತು ಗ್ರಾಮಗಳಲ್ಲಿ ಓಡಾಡಿದರು. ನವೆಂಬರ್ ೧೬ರ ರಾತ್ರಿ ಅವರ ಮೇಲೆ ಇದ್ದಕ್ಕಿದ್ದಂತೆ ಗುಂಡಿನ ದಾಳಿ ನಡೆಯಿತು. ಒಬ್ಬ ಸೈನಿಕ ಗಾಯಾಳುವಾದ. ಕೂಡಲೇ ಮಹಾದಿಕ್ ಅವರಿಗೆ ತುರ್ತು ಸಂದೇಶ ಹೋಯಿತು. ಅವರು ಮತ್ತೆ ತಮ್ಮ ತಂಡದೊಂದಿಗೆ ಸೈನಿಕವಾಹನಗಳಲ್ಲಿ ಸುಬಾಯ ಪ್ರದೇಶಕ್ಕೆ ಧಾವಿಸಿದರು. ಕಮ್ಯಾಂಡೋ ತಂಡದೊಡನೆ ಜಮ್ಮು-ಕಾಶ್ಮೀರ ಪೊಲೀಸ್ ವಿಶೇಷ ಕಾರ್ಯಪಡೆಯೂ ಸೇರಿಕೊಂಡಿತು. ಉಗ್ರರು ಪತ್ತೆಯಾಗಿರುವ ಪ್ರದೇಶವನ್ನು ಇವರು ಸುತ್ತುಗಟ್ಟಿದರು. ಮೊದಲಿಗೆ ಗಾಯಗೊಂಡಿದ್ದ ಸೈನಿಕನನ್ನು ಸುರಕ್ಷಿತ ಪ್ರದೇಶಕ್ಕೆ ಸಾಗಿಸಿ ಔಷಧೋಪಚಾರ ನೀಡಿದರು. ಮಹಾದಿಕ್ ಅಲ್ಲಿದ್ದ ಒಂದು ಎತ್ತರದ ಆಯಕಟ್ಟಿನ ಸ್ಥಳವನ್ನೇರಿ ಸುತ್ತಲಿನ ಪ್ರದೇಶದ ಮೇಲೆ ಕಣ್ಣು ಹಾಯಿಸಿದರು. ಇಡೀ ರಾತ್ರಿ ಮಹಾದಿಕ್ ಅದೇ ಸ್ಥಳದಲ್ಲಿ ಕಳೆದರು. ನವೆಂಬರ್ ೧೭ರ ಮುಂಜಾನೆ ಮತ್ತಷ್ಟು ಸೈನಿಕರು ಅಲ್ಲಿಗೆ ಬಂದು ಸೇರಿಕೊಂಡರು. ಮತ್ತಷ್ಟು ಹುರುಪಿನಿಂದ ಹುಡುಕಾಟ ಮುಂದುವರಿಯಿತು. ಅದೇ ಸಮಯದಲ್ಲಿ ಮಹಾದಿಕ್ ಅವರ ದೂರವಾಣಿ ರಿಂಗಣಿಸಿತು. ಕರೆ ಮಾಡಿದ್ದು ಅಲ್ಲಿನ ಗ್ರಾಮದ ಮಾಹಿತಿಗಾರ. ಒಬ್ಬ ಉಗ್ರನು ಆಹಾರಕ್ಕಾಗಿ ಹತ್ತಿರದ ಕಶ್ನೀರಿ ಮಣಿಗಾ ಪ್ರದೇಶಕ್ಕೆ ಬಂದಿರುವನು ಎಂಬ ಮಾಹಿತಿಯನ್ನು ಆತ ನೀಡಿದ. ತಕ್ಷಣ ಮಹಾದಿಕ್ ತಮ್ಮ ತಂಡದ ಅರ್ಧದಷ್ಟು ಕಮ್ಯಾಂಡೋಗಳನ್ನು ಮತ್ತು ಜಮ್ಮು-ಕಾಶ್ಮೀರ ಪೊಲೀಸ್ ಪಡೆಯನ್ನು ಕರೆದುಕೊಂಡು ಮಣಿಗಾ ಪ್ರದೇಶಕ್ಕೆ ಧಾವಿಸಿದರು. ಆ ವೇಳೆಗೆ ಉಗ್ರನು ಗುಡ್ಡವನ್ನೇರಿ ಅರಣ್ಯದೊಳಗೆ ಮಾಯವಾಗಿದ್ದ. ಅಲ್ಲಿಂದಲೇ ಮಹಾದಿಕ್ ತಮಗೆ ಮಾಹಿತಿ ನೀಡಿದ್ದ ವ್ಯಕ್ತಿಗೆ ದೂರವಾಣಿ ಕರೆ ಮಾಡಿದರು. ಆ ಉಗ್ರನೊಡನೆ ಮತ್ತೂ ಇಬ್ಬರು ಇರುವರು ಎನ್ನುವುದನ್ನು ಮಾಹಿತಿಗಾರ ಖಚಿತಪಡಿಸಿದ. ತಾವು ಕಳೆದ ಒಂದು ವಾರದಿಂದ ನಡೆಸುತ್ತಿರುವ ಹುಡುಕಾಟ ಅಂತಿಮಘಟ್ಟ ತಲಪುತ್ತಿದೆ ಎಂದು ಮಹಾದಿಕ್ ಅವರಿಗೆ ಅನ್ನಿಸಿತು.
ಹದಿನಾಲ್ಕು ಜನರ ತಂಡವನ್ನು ಏಳೇಳು ಜನರ ಎರಡು ತಂಡವನ್ನಾಗಿ ಮಾಡಿಕೊಂಡು ಗುಡ್ಡದ ಪ್ರದೇಶವನ್ನೆಲ್ಲ ತಡಕಾಡಿದರು. ಗುಡ್ಡದ ಮೇಲಿಂದ ನೀರಿನ ಝರಿಯೊಂದು ಕೆಳಕ್ಕೋಡುತ್ತಿತ್ತು. ಅದರ ಇಕ್ಕೆಲಗಳಲ್ಲೂ ಹುಡುಕಿದರು. ಎಲ್ಲಿಯೂ ಉಗ್ರರು ಪತ್ತೆಯಾಗಲಿಲ್ಲ. ಸ್ವಲ್ಪ ಹೊತ್ತು ಹುಡುಕಾಡಿದ ನಂತರ ಗ್ರಾಮದ ಹೊರವಲಯದಲ್ಲಿ ಎಲ್ಲರೂ ಸೇರಿ ಮುಂದಿನ ಹೆಜ್ಜೆಯ ಕುರಿತು ಚರ್ಚಿಸುತ್ತಿದ್ದಾಗ ಒಬ್ಬ ಕಮ್ಯಾಂಡೋ, ಅಲ್ಲೇ ಬಿದ್ದಿದ್ದ ಮಿನರಲ್ ವಾಟರ್ ಬಾಟಲಿಯೊಂದರ ಕಡೆಗೆ ಎಲ್ಲರ ಗಮನ ಸೆಳೆದ. ಅದರ ಮೇಲ್ಭಾಗವನ್ನು ಕತ್ತರಿಸಿ ಬಟ್ಟಲಿನಂತೆ ಮಾಡಲಾಗಿತ್ತು. ಅದನ್ನು ಬಂಡೆಯೊAದರ ಮೇಲೆ ಇರಿಸಲಾಗಿತ್ತು. ಅಲ್ಲೇ ಪಕ್ಕದಲ್ಲಿ ಒಲೆಯೊಂದು ಕಾಣಿಸಿತು. ಅಲ್ಲಿ ಬಿದ್ದಿದ್ದ ಆಹಾರವು ಆಗ ತಾನೆ ಮಾಡಿದಂತಿತ್ತು. ಹಾಗಿದ್ದರೆ ಉಗ್ರರು ಇಲ್ಲೇ ಹತ್ತಿರದಲ್ಲಿರಬೇಕು. ತಕ್ಷಣವೇ ಸೈನಿಕರೆಲ್ಲರೂ ಬಂಡೆ-ಮರಗಳ ಹಿಂದೆ ಅವಿತುಕೊಂಡರು. ಮುಂದಿನ ಹೆಜ್ಜೆ ಯೋಚಿಸಲು ಸಮಯವಿಲ್ಲ. ತಮ್ಮ ತಂಡ ಬರುವುದನ್ನು ಕಂಡು ಉಗ್ರರು ಅಲ್ಲೇ ಎಲ್ಲೋ ಮರೆಯಲ್ಲಿ ಅವಿತಿರಬೇಕು. ಹಾಗಿದ್ದರೆ ಅವರ ಗುರಿಗೆ ತಾವೆಲ್ಲರೂ ಸಿಲುಕುವ ಸಾಧ್ಯತೆ ಇದೆ. ಇದು ಅತ್ಯಂತ ಅಪಾಯದ ಕ್ಷಣ ಮತ್ತು ಸನ್ನಿವೇಶ. ಹೇಗೆ ಮುಂದುವರಿಯುವುದು?
ಮಹಾದಿಕ್ ಒಂದು ಕ್ಷಣವನ್ನೂ ವ್ಯರ್ಥಗೊಳಿಸಲಿಲ್ಲ. ಒಂದು ತಂಡದ ಕೆಲವರನ್ನು ಗುಡ್ಡದ ಮೇಲಕ್ಕೆ ಕಳುಹಿಸಿದರು. ಅಲ್ಲಿಂದ ಅವರು ಕೆಳಗಿನ ಪ್ರದೇಶವನ್ನು ಗಮನಿಸುತ್ತಿರಬೇಕು ಮತ್ತು ಅಲ್ಲಿಂದಲೇ ತಮಗೆ ರಕ್ಷಣೆ ನೀಡಬೇಕು. ತಂಡದ ಉಳಿದವರೊಡನೆ ಮಹಾದಿಕ್ ಗುಡ್ಡದ ಅಕ್ಕಪಕ್ಕದಲ್ಲಿ ಹುಡುಕತೊಡಗಿದರು. ಹಾಗೆ ಓಡಾಡುವಾಗ ಒಬ್ಬ ಸೈನಿಕನಿಗೆ ಒಂದು ಪೊದೆಯ ಹಿಂದೆ ಕಾಶ್ಮೀರಿ ಉಡುಪು ಕಾಣಿಸಿತು. ತಕ್ಷಣ ಆತ ಮಹಾದಿಕ್ ಅವರಿಗೆ ಆ ದಿಕ್ಕಿನತ್ತ ನೋಡುವಂತೆ ತಿಳಿಸಿದ. ಅಲ್ಲಿ ಇಬ್ಬರು ವ್ಯಕ್ತಿಗಳು ಅವಿತಿರುವಂತೆ ಕಾಣಿಸಿತು. ತಮ್ಮ ಬಂದೂಕನ್ನು ಸಿದ್ಧವಾಗಿಟ್ಟುಕೊಂಡು ಮಹಾದಿಕ್ ಮತ್ತು ಸಂಗಡಿಗರು ಆ ದಿಕ್ಕಿನತ್ತ ಮುಂದುವರಿದರು.
ಅದೇ ಸಮಯದಲ್ಲಿ ಅವಿತಿಟ್ಟುಕೊಂಡಿದ್ದ ಒಬ್ಬ ವ್ಯಕ್ತಿ ಪಕ್ಕಕ್ಕೆ ಹಾರಿ ತನ್ನ ಸ್ಥಳ ಬದಲಿಸಿದ. ಮಧ್ಯರಾತ್ರಿಯ ಗಾಢ ಕತ್ತಲಿನಲ್ಲಿ ಯಾರು ಎಲ್ಲಿದ್ದಾರೆ ಎನ್ನುವುದು ಕಾಣುತ್ತಿರಲಿಲ್ಲ. ಹೀಗಾಗಿ ಸ್ಥಳ ಬದಲಿಸಿದ ವ್ಯಕ್ತಿ ಎಲ್ಲಿಗೆ ಹೋದನೆನ್ನುವುದು ತಿಳಿಯಲಿಲ್ಲ. ಎಲ್ಲವನ್ನೂ ಅಂದಾಜಿನ ಮೇಲೆಯೇ ಮಾಡಬೇಕಿತ್ತು. ಮಹಾದಿಕ್ ತಮ್ಮ ಬಂದೂಕಿನಿಂದ ಪೊದೆಯತ್ತ ಒಂದು ಸುತ್ತು ಗುಂಡು ಹಾರಿಸಿದರು. ಅನಿರೀಕ್ಷಿತವಾಗಿ ಸ್ಥಳ ಬದಲಿಸಿದ್ದ ಉಗ್ರನು ಇದ್ದಕ್ಕಿದ್ದಂತೆ ಇವರ ಮೇಲೆ ಗುಂಡಿನ ಮಳೆಗರೆದ. ಆ ಗುಂಡುಗಳು ಮಹಾದಿಕ್ ಅವರ ದೇಹವನ್ನು ಸೀಳಿದವು, ಅವರ ತಲೆಗೂ ಗಂಭೀರ ಗಾಯವಾಯಿತು. ಮಹಾದಿಕ್ ನೆಲಕ್ಕೆ ಕುಸಿದರು. ಗುಂಡಿನ ಸುರಿಮಳೆ ಎಲ್ಲಿಂದ ಬರುತ್ತಿದೆ ಎನ್ನುವುದು ಯಾರಿಗೂ ಕಾಣಿಸುತ್ತಿಲ್ಲ. ಗುಂಡಿನ ಸದ್ದು ಕೇಳಿಸಿದ ಕೂಡಲೇ ಅವರೊಡನಿದ್ದ ಮೂವರು ಸೈನಿಕರೂ ನೆಲದ ಮೇಲೆ ಮಲಗಿದರು. ಮಹಾದಿಕ್ ಅವರ ಮೈಯಿಂದ ರಕ್ತ ಸುರಿಯುತ್ತಿತ್ತು. ಹಾಗೆಯೇ ಅವರು ತೆವಳಿಕೊಂಡು ಮುಂದುವರಿಯುತ್ತಿದ್ದರು. ಉಳಿದ ಸೈನಿಕರಿಗೆ ಇಲ್ಲಿನ ಸ್ಥಿತಿ ತಿಳಿದಿರಲಿಲ್ಲ. ತಮ್ಮ ಶಕ್ತಿಯನ್ನೆಲ್ಲ್ಲ ಒಟ್ಟುಗೂಡಿಸಿ ಮುಂದುವರಿದ ಮಹಾದಿಕ್ ಅಲ್ಲಿದ್ದ ಬಂಡೆಯೊಂದರ ಹಿಂದೆ ಸರಿದು ಅಲ್ಲಿಂದಲೇ ಗುಂಡು ಬಂದತ್ತ ವಾಪಸ್ ಗುಂಡು ಹಾರಿಸತೊಡಗಿದರು. ಅದು ಯಾವ ಉಗ್ರನಿಗೂ ತಗಲದಿದ್ದರೂ ತಮ್ಮೊಡನಿದ್ದ ಉಳಿದ ಸೈನಿಕರಿಗೆ ರಕ್ಷಣೆ ನೀಡುವಲ್ಲಿ ಸಫಲವಾಯಿತು. ಸ್ವಲ್ಪ ಹೊತ್ತಿನಲ್ಲೇ ಗುಂಡಿನ ಹಾರಾಟದ ಸದ್ದಿನಿಂದ ಎಚ್ಚೆತ್ತ ಉಳಿದ ತಂಡಗಳೂ ಇಲ್ಲಿಗೆ ಬಂದು ಸೇರಿದವು. ಅವರಿಗೆ ಏನಾಗುತ್ತಿದೆ ಎನ್ನುವುದು ತಿಳಿದಿರಲಿಲ್ಲ, ಮಹಾದಿಕ್ ಅವರು ಗಾಯಗೊಂಡಿರುವುದೂ ತಿಳಿದಿರಲಿಲ್ಲ. ಮಹಾದಿಕ್ ಅವರೊಡನಿದ್ದ ಹವೀಲ್ದಾರ್ ಒಬ್ಬ ತನ್ನ ಹತ್ತಿರವಿದ್ದ ಮೊಬೈಲ್ ದೂರವಾಣಿಯ ಮೂಲಕ ಇತರರಿಗೆ ಸ್ಥಿತಿಯನ್ನು ತಿಳಿಸಿದ. ಆತ ಮಹಾದಿಕ್ ಅವರನ್ನು ಬೆನ್ನ ಮೇಲೆ ಹಾಕಿಕೊಂಡು ಗುಡ್ಡವಿಳಿದು ಹೋದ. ಉಳಿದ ಸೈನಿಕರು ಆತನಿಗೆ ರಕ್ಷಣೆ ನೀಡಿದರು. ಸುರಕ್ಷಿತ ತಾಣವಿದ್ದುದು ಅಲ್ಲಿಂದ ೧.೫ ಕಿ.ಮೀ. ದೂರದಲ್ಲಿ. ಅಲ್ಲಿಯವರೆಗೂ ಅವರನ್ನು ಬೆನ್ನಮೇಲೆ ಹೊತ್ತುಕೊಂಡೇ ಹೋಗಬೇಕಾಗಿತ್ತು. ಸಾಕಷ್ಟು ರಕ್ತಸ್ರಾವವಾಗಿತ್ತು, ದೇಹ ತಣ್ಣಗಾಗುತ್ತಿತ್ತು. ಅಲ್ಲಿಂದ ಸೈನಿಕವಾಹನದಲ್ಲಿ ಸೊಪೋರೆ-ಕುಪ್ವಾರಾ ಹೆದ್ದಾರಿಯಲ್ಲಿರುವ ದ್ರುಗ್ಮುಲ್ಲಾ ಎಂಬಲ್ಲಿರುವ ೧೬೮ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರು ಇದು ತಮ್ಮ ಕೈಮೀರಿದ ಪರಿಸ್ಥಿತಿ, ಕೂಡಲೇ ಶ್ರೀನಗರದ ಆರ್ಮಿ ಬೇಸ್ ಆಸ್ಪತ್ರೆಗೆ ಕರೆದೊಯ್ಯಿರಿ ಎಂದು ಸಲಹೆ ನೀಡಿದರು. ಎಂಬತ್ತೆöÊದು ಕಿಲೋಮೀಟರ್ ದೂರದ ಶ್ರೀನಗರಕ್ಕೆ ವಿಮಾನದಲ್ಲಿ ಮಹಾದಿಕ್ ಅವರನ್ನು ಕರೆದೊಯ್ದರು. ಅಲ್ಲಿನ ೯೨ ಬೇಸ್ ಆಸ್ಪತ್ರೆ ತಲಪುವ ವೇಳೆಗೆ ಮಹಾದಿಕ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.
ಕರ್ನಲ್ ಸಂತೋಷ್ ಯಶ್ವಂತ್ ಮಹಾದಿಕ್ ಜನಿಸಿದ್ದು ೧೯೭೭ರ ಜನವರಿ ೧೫ರಂದು, ಮಹಾರಾಷ್ಟçದ ಸತಾರಾದಲ್ಲಿ. ಅಲ್ಲಿನ ಸೈನಿಕ ಶಾಲೆಯಲ್ಲಿ ಶಿಕ್ಷಣ ಪೂರೈಸಿದ ಮಹಾದಿಕ್ ೧೯೯೮ರ ಡಿಸೆಂಬರ್ನಲ್ಲಿ ಭಾರತೀಯ ಸೈನ್ಯವನ್ನು ಸೇರಿದರು. ದೇಶದ್ರೋಹಿಗಳನ್ನು ಸದೆಬಡಿಯುವುದೆಂದರೆ ಮಹಾದಿಕ್ಗೆ ಎಲ್ಲಿಲ್ಲದ ಹುಮ್ಮಸ್ಸು. ಈಶಾನ್ಯಭಾರತದಲ್ಲಿ ೨೦೦೩ರಲ್ಲಿ ನಡೆದ ‘ಆಪರೇಷನ್ ರೈನೊ; ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಮಹಾದಿಕ್ ಅವರು ಸೇನಾ ಪದಕದಿಂದ ಪುರಸ್ಕೃತರಾಗಿದ್ದರು. ಸಾಮಾನ್ಯ ಸೇನಾಧಿಕಾರಿಯಾಗಿದ್ದ ಮಹಾದಿಕ್ ತಾವೇ ಬಯಸಿ, ಸೇನೆಯ ಉಗ್ರನಿಗ್ರಹ ದಳಕ್ಕೆ ವರ್ಗಾವಣೆ ಪಡೆದಿದ್ದರು. ದೇಶಮಾತೆಯ ರಕ್ಷಣೆಯನ್ನು ಮಾಡುತ್ತಲೇ ತಮ್ಮ ಪ್ರಾಣವನ್ನೇ ಮಾತೃಭೂಮಿಯ ಅಡಿದಾವರೆಗಳಲ್ಲಿ ಸಮರ್ಪಿತಗೊಳಿಸಿದರು.
ಮಹಾದಿಕ್ ಅವರು ಸೈನಿಕನಾಗಿ ಮಾಡಿದ ಉಗ್ರದಮನದ ಕಾರ್ಯ ಅವರ ಜೀವನದ ಒಂದು ಭಾಗವಷ್ಟೇ. ಅದನ್ನಷ್ಟೇ ನೆನೆಸಿಕೊಂಡರೆ ಅವರ ಜೀವನದ ಸ್ಮರಣೆ ಅಪೂರ್ಣವಾಗುತ್ತದೆ. ಅವರು ಕೈಗೊಂಡಿದ್ದ ಮತ್ತೊಂದು ಮಹತ್ತ್ವದ ಕೆಲಸವೆಂದರೆ ಕಾಶ್ಮೀರದ ಜನರ ಹೃದಯವನ್ನು ಗೆಲ್ಲುವ ಕಾರ್ಯ. ಕುಪ್ವಾರ ಜಿಲ್ಲೆಯ ಮಕ್ಕಳಿಗಾಗಿ ಯೋಗ ಶಿಬಿರಗಳು, ಅವರಲ್ಲಿ ನಾಯಕತ್ವದ ಗುಣ ಬೆಳೆಸುವ ಕಾರ್ಯಕ್ರಮಗಳು, ಪ್ರವಾಸೋದ್ಯಮದ ಬೆಳವಣಿಗೆ, ಇತ್ಯಾದಿ ಕಾರ್ಯಕ್ರಮಗಳನ್ನೂ ಅವರು ನಡೆಸುತ್ತಿದ್ದರು. ಮುಸಲ್ಮಾನರೇ ಬಹುಸಂಖ್ಯಾತರಿರುವ ಆ ಪ್ರದೇಶದಲ್ಲಿ ಯೋಗದ ಶಿಬಿರಗಳನ್ನು ನಡೆಸುವುದು ಅಪಾಯಕಾರಿ ಎಂದು ಅನೇಕ ಸ್ಥಳೀಯರು ಎಚ್ಚರಿಸಿದ್ದರು. ಆದರೆ ಅದಕ್ಕೆ ಮಹಾದಿಕ್ ಹೆದರಲಿಲ್ಲ. ೨೦೧೪ರಲ್ಲಿ ಆಯ್ದ ೧೫ ಜನ ಯುವಕರನ್ನು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ‘ಸಿದ್ಧ ಸಮಾಧಿ ಯೋಗ’ ಶಿಬಿರಕ್ಕೆ ಕಳುಹಿಸಿಕೊಟ್ಟರು. ಕುಪ್ವಾರಾದಲ್ಲೇ ವಿಶೇಷ ಯೋಗ ಶಿಬಿರವನ್ನು ನಡೆಸಿದರು. ಪುಣೆಯಿಂದ ಬಂದ ಯೋಗಶಿಕ್ಷಕರು ಈ ಶಿಬಿರದಲ್ಲಿ ಶಿಕ್ಷಣ ನೀಡಿದರು.
ಮಹಾದಿಕ್ ಸ್ಥಳೀಯರೊಡನೆ ಸದಾ ಸಂಪರ್ಕದಲ್ಲಿರುತ್ತಿದ್ದರು. ಆಗಾಗ ಅವರೊಡನೆ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದರು. ಅಲ್ಲಿನ ಯುವಕರ ಮಧ್ಯೆ ವಾಲಿಬಾಲ್, ಕ್ರಿಕೆಟ್ ಪಂದ್ಯಗಳನ್ನಾಡಿಸುತ್ತಿದ್ದರು. ಮಾಜಿ ಉಗ್ರರನ್ನು ಸಂಪರ್ಕದಲ್ಲಿಟ್ಟುಕೊಂಡು ಅವರಿಗೆ ಕೆಲಸ ಕೊಡಿಸುವ ಪ್ರಯತ್ನವನ್ನೂ ಮಹಾದಿಕ್ ಮಾಡುತ್ತಿದ್ದರು. ಸ್ಥಳೀಯ ಆಡಳಿತವು ಪ್ರಯತ್ನಿಸದ ಅನೇಕ ಕಾರ್ಯಗಳನ್ನು ಇವರು ನಡೆಸಿ ಯಶಸ್ವಿಯಾದರು. ಕಾಶ್ಮೀರದ ಸಮಸ್ಯೆಯನ್ನು ಸೈನ್ಯದ ಮೂಲಕವಷ್ಟೆ ಪರಿಹರಿಸಲಾಗದು ಎನ್ನುವುದು ಅವರ ಬಲವಾದ ನಂಬಿಕೆಯಾಗಿತ್ತು. ತಾವು ಅಲ್ಲಿರುವುದು ಸ್ವಲ್ಪ ಸಮಯ ಮಾತ್ರ, ತಾವು ಇಲ್ಲಿಂದ ಹೊರಡುವ ಮುಂಚೆ ಈ ಸುಂದರ ಪ್ರದೇಶವನ್ನು ಮತ್ತಷ್ಟು ಸುಂದರವನ್ನಾಗಿ ಮಾಡಿ ಹೋಗಬೇಕು – ಎಂದು ಅವರು ಜೊತೆಗಾರರಿಗೆ ಆಗಾಗ ಹೇಳುತ್ತಿದ್ದರು. ಅವರು ಅಲ್ಲಿದ್ದ ಸಮಯದಲ್ಲಿ ಕುಪ್ವಾರಾದ ಜನರಿಗೆ ಸೈನ್ಯದ ಬಗ್ಗೆ ಸ್ನೇಹದ ಭಾವ ಹೆಚ್ಚಾಯಿತು, ಅವರನ್ನು ಆತ್ಮೀಯರಂತೆ ಕಾಣತೊಡಗಿದರು. ಅವರ ಈ ಕಾರ್ಯ ಕೆಲವರ ಕಣ್ಣು ಕುಕ್ಕಿದ್ದೂ ಸತ್ಯ! ತಮ್ಮ ಜನಪರ ಕಾರ್ಯಕ್ರಮಗಳಿಂದ ಸಹಜವಾಗಿ ಹುರಿಯತ್ ಸಂಘಟನೆಯ ಪ್ರತ್ಯೇಕತಾವಾದಿಗಳ ವಿರೋಧವನ್ನು ಮಹಾದಿಕ್ ಕಟ್ಟಿಕೊಳ್ಳಬೇಕಾಯಿತು. “ನೀವು ನಿಮ್ಮ ಕೆಲಸವನ್ನಷ್ಟೇ ಮಾಡಿಕೊಂಡು ಹೋಗಿ. ಜನರ ಬಳಿ ಹೋಗುವುದು ನಿಮ್ಮ ಕೆಲಸವಲ್ಲ, ಅದರಿಂದ ನಿಮ್ಮ ಗತಿ ನೆಟ್ಟಗಾಗದು” ಎಂದು ಹುರಿಯತ್ನ ಪ್ರತ್ಯೇಕತಾವಾದಿಗಳು ಮಹಾದಿಕ್ ಅವರನ್ನು ಎಚ್ಚರಿಸಿದ್ದರು.
ಮಹಾದಿಕ್ ಅವರು ತಮ್ಮ ಜೊತೆಯ ಸೈನಿಕರ ಕುರಿತಾಗಿಯೂ ವಿಶೇಷ ಕಾಳಜಿ ವಹಿಸುತ್ತಿದ್ದರು. ಒಮ್ಮೆ ಮಹಾರಾಷ್ಟ್ರದ ಸೈನಿಕನೊಬ್ಬನಿಗೆ ಕುಟುಂಬದಲ್ಲಿ ಸಮಸ್ಯೆಯುಂಟಾಯಿತು. ಅದು ವಿವಾಹ ವಿಚ್ಛೇದನದ ಮಟ್ಟಕ್ಕೆ ಹೋಗಿ ಮುಟ್ಟಿತು. ಈ ಸುದ್ದಿ ಗೊತ್ತಾದ ಕೂಡಲೇ ಮಹಾದಿಕ್ ಅವರು ಆ ಸೈನಿಕನ ಮಡದಿ ಮತ್ತು ಮಕ್ಕಳನ್ನು ಕುಪ್ವಾರಾಕ್ಕೆ ಕರೆಸಿಕೊಂಡರು. ಅವರನ್ನು ಸೈನಿಕ ಶಿಬಿರದಲ್ಲೇ ಒಂದು ತಿಂಗಳ ಕಾಲ ಇರುವಂತೆ ಮಾಡಿದರು. ಆ ಸಮಯದಲ್ಲಿ ದಂಪತಿಗಳೊಡನೆ ಆಪ್ತ ಸಮಾಲೋಚನೆ ನಡೆಸಿದರು. ಅವರ ಈ ಪ್ರಯತ್ನದ ಫಲವಾಗಿ ಕುಟುಂಬದ ಸಮಸ್ಯೆ ಪರಿಹಾರವಾಯಿತು, ವಿಚ್ಛೇದನದ ಯೋಚನೆಯನ್ನು ಕೈಬಿಟ್ಟರು. ಸೈನ್ಯದ ಅಧಿಕಾರಿಗಳು ತಮ್ಮ ಕೈಕೆಳಗಿನ ಸೈನಿಕರ ವೈಯಕ್ತಿಕ ಜೀವನದಲ್ಲಿ ಇಷ್ಟೊಂದು ಆಸಕ್ತಿ ವಹಿಸುವುದು ಅತ್ಯಂತ ಅಪರೂಪ. ಮಹಾದಿಕ್ ಅವರ ಈ ಅಪರೂಪದ ಗುಣದಿಂದ ಅವರಿಗೆ ತಮ್ಮ ತಂಡದ ಸೈನಿಕರೊಡನೆ ಘನಿಷ್ಠ ಸಂಬಂಧ ಬೆಳೆದಿತ್ತು.
ಕರ್ನಲ್ ಸಂತೋಷ್ ಯಶ್ವಂತ್ ಮಹಾದಿಕ್ ಹುತಾತ್ಮರಾದಾಗ ಅವರಿಗಿನ್ನೂ ಕೇವಲ ೩೮ ವರ್ಷ ವಯಸ್ಸು. ಅವರಿಗೆ ಇಬ್ಬರು ಮಕ್ಕಳು – ಹೆಣ್ಣುಮಗಳಾದ ಕಾರ್ತಿಕಿಗೆ ೧೧ ವರ್ಷ, ಮಗ ಸ್ವರಾಜ್ಗೆ ಕೇವಲ ೬ ವರ್ಷ. ತಮ್ಮ ತಂದೆ ತೀರಿಕೊಂಡಿರುವುದೂ ಆ ಹಸುಗೂಸಿಗೆ ಅರ್ಥವಾಗಿರಲಿಲ್ಲ. ತಂದೆಯ ಶವಪೆಟ್ಟಿಗೆಯ ಮೇಲೆ ಹತ್ತಿ-ಇಳಿದು ಆಟವಾಡುತ್ತಿದ್ದನಂತೆ! ಮಹಾದಿಕ್ ಅವರ ಪತ್ನಿ ಸ್ವಾತಿ, ಪತಿಗಿಂತ ಕೇವಲ ಒಂದು ವರ್ಷಕ್ಕೆ ಚಿಕ್ಕವರು. ಪತಿಯ ಮರಣ ಅವರಿಗೆ ಆಘಾತವುಂಟು ಮಾಡಿದ್ದು ನಿಜ. ಆದರೆ, ಅವರು ಎದೆಗುಂದಲಿಲ್ಲ, ಅದನ್ನು ಸವಾಲಾಗಿ ಸ್ವೀಕರಿಸಿದರು, ಎಲ್ಲ ಮಹಿಳೆಯರಿಗೂ ಮಾದರಿಯಾಗುವ ನಿರ್ಧಾರವನ್ನು ಅವರು ಕೈಗೊಂಡರು. ಅವರ ಮಾತುಗಳಲ್ಲೇ ಹೇಳುವುದಾದರೆ, “ಪತಿ ಹುತಾತ್ಮರಾದ ನಂತರ ನಾನೂ ಏಕೆ ಸೈನ್ಯ ಸೇರಿ ದೇಶಸೇವೆ ಮಾಡಬಾರದು ಎನಿಸಿತು. ನಾನು ಪುರುಷಸೈನಿಕರ ವಿಭಾಗಕ್ಕೆ ಸರಿಸಮನಾದ ತರಬೇತಿ ಪಡೆದಿದ್ದು, ಯುದ್ಧ ಸಂದರ್ಭಗಳಲ್ಲಿ ಮುಖ್ಯಪಾತ್ರ ವಹಿಸಲು ಸಿದ್ಧಳಾಗಿದ್ದೇನೆ.” ಪತಿ ಮರಣ ಹೊಂದಿದ ದಿನವೇ ತಾನೂ ಸೈನ್ಯಕ್ಕೆ ಸೇರುವುದಾಗಿ ನಿರ್ಧರಿಸಿದ ಸ್ವಾತಿ ಮಹಾದಿಕ್, ತನ್ನ ಮಕ್ಕಳನ್ನು ಮಹಾರಾಷ್ಟ್ರ ಮತ್ತು ಉತ್ತರಾಖಂಡದ ಬೋರ್ಡಿಂಗ್ ಶಾಲೆಗಳಿಗೆ ಸೇರಿಸಿದರು. ಅನಂತರ ಸೈನ್ಯಕ್ಕೆ ಸೇರಲು ಎಸ್.ಎಸ್.ಬಿ. (ಸರ್ವಿಸ್ ಸೆಲೆಕ್ಶನ್ ಬೋರ್ಡ್) ಪರೀಕ್ಷೆ ಪೂರೈಸಿ, ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ೧೧ ತಿಂಗಳ ಕಠಿಣ ತರಬೇತಿ ಪಡೆದು ಸೈನ್ಯದಲ್ಲಿ ಸಶಸ್ತ್ರ ಪಡೆಗಳ ಲೆಫ್ಟಿನೆಂಟ್-ಕರ್ನಲ್ ಆಗಿ ಸೇರ್ಪಡೆಗೊಂಡು ಪತಿಯ ಕಾರ್ಯವನ್ನು ಮುಂದುವರಿಸಿದರು.