ಸತೀಶ್ ದಹಿಯಾ ಅವರ ತಂಡ ಬೇಟೆಯಾಡಲು ಹೊರಟಿದ್ದುದು ಸಾಮಾನ್ಯ ಉಗ್ರಗಾಮಿಗಳನ್ನಲ್ಲ. ಅವರು ಜೈಷ್–ಎ–ಮೊಹಮ್ಮದ್ ಉಗ್ರ ಗುಂಪಿಗೆ ಸೇರಿದವರು, ಕಮಾಂಡೋಗಳಂತೆ ತರಬೇತಿ ಪಡೆದವರು. ಆ ದಳಕ್ಕಿಟ್ಟಿದ್ದ ಹೆಸರು ‘ಅಫ್ಜಲ್ ಗುರು ಸ್ಕ್ವಾಡ್’. ಅವರ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿದ್ದವು ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಸಂವಹನ ನಡೆಸುತ್ತಿದ್ದರು. ಹೀಗಾಗಿ ಅವರ ಸಂವಹನವನ್ನು ಕದ್ದಾಲಿಸಲು ಕಷ್ಟವಿತ್ತು. ಕಮಾಂಡೋ ಶೈಲಿಯ ತರಬೇತಿ ಪಡೆದಿದ್ದ ಈ ಉಗ್ರರು, ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲೂ ದೀರ್ಘಕಾಲ ಕಾದಾಡಲು ಸಮರ್ಥರಾಗಿದ್ದರು. ಅವರನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿರಲಿಲ್ಲ. ಒಬ್ಬೊಬ್ಬ ಉಗ್ರನೂ ಅಪಾರ ಹಾನಿಯನ್ನುಂಟುಮಾಡುವ ಸಾಮರ್ಥ್ಯ ಉಳ್ಳವನಾಗಿರುತ್ತಿದ್ದನು. ಈ ರೀತಿ ತರಬೇತಾದ ಮರ್ನಾಲ್ಕು ಉಗ್ರರು ಹಂದ್ವಾರಾ ಸಮೀಪದ ಗ್ರಾಮದಲ್ಲಿ ಅವಿತಿದ್ದ ಮಾಹಿತಿ ಸಿಕ್ಕಿತ್ತು.
ಫೆಬ್ರುವರಿ ೧೪, ೨೦೧೭. ರಾಜಸ್ಥಾನದ ಜೈಪುರದಲ್ಲಿನ ಒಂದು ಮನೆ. ಅಲ್ಲಿರುವ ಮಹಿಳೆಯೊಬ್ಬಳು ಯಾವುದಕ್ಕೋ ಕಾಯುತ್ತಿರುವಂತಿದೆ. ಸಮಯ ಕಳೆದಂತೆಲ್ಲ್ಲ ಆಕೆಯ ಕಾತರ ಹೆಚ್ಚುತ್ತಿದೆ. ಅವಳ ಗಮನವೆಲ್ಲ ಮನೆಯ ಬಾಗಿಲ ಕಡೆಗೆ. ಯಾರದೋ ಆಗಮನಕ್ಕಾಗಿ ಆಕೆ ಕಾಯುತ್ತಿದ್ದಾಳೆ ಮತ್ತು ಪದೇಪದೇ ತನ್ನ ಮೊಬೈಲ್ನಿಂದ ಕರೆ ಮಾಡುತ್ತಿದ್ದಾಳೆ. ಅತ್ತಕಡೆಯ ದೂರವಾಣಿ ರಿಂಗಣಿಸಿದರೂ, ಆ ವ್ಯಕ್ತಿ ಅದಕ್ಕೆ ಉತ್ತರಿಸುತ್ತಿಲ್ಲ. ಹಿಂದೆ ಎಂದೂ ಹೀಗೆ ಆಗಿರಲಿಲ್ಲ. ಹೀಗಾಗಿ ಆಕೆಗೆ ಹೆಚ್ಚು ಆತಂಕವಾಗುತ್ತಿದೆ.
ಇಪ್ಪತ್ತೇಳರ ಹರೆಯದ ಆಕೆಯ ಹೆಸರು ಸುಜಾತ ದಹಿಯಾ. ಫೆಬ್ರುವರಿ ೧೪ ವ್ಯಾಲೆಂಟೈನ್ ದಿನಾಚರಣೆ ಮತ್ತು ಅಲ್ಲಿಂದ ಮೂರು ದಿನಕ್ಕೆ ಫೆಬ್ರುವರಿ ೧೭ರಂದು ವಿವಾಹ ವಾರ್ಷಿಕೋತ್ಸವ. ಹಿಂದಿನ ದಿನವೇ ಸುಜಾತ ತನ್ನ ಪತಿಗೆ ಮಾರನೆಯ ದಿನದ ಕುರಿತಾಗಿ ನೆನಪಿಸಿದ್ದಳು. ಪತಿಯ ಹೆಸರು ಸತೀಶ್ ದಹಿಯಾ. ಎಂದಿನಂತೆ ಮುಂಜಾನೆ ಕೆಲಸಕ್ಕೆ ತೆರಳಿದ ಸತೀಶ್, ಸ್ವಲ್ಪ ಸಮಯಕ್ಕೆ ಕರೆ ಮಾಡಿ, ಮನೆಗೊಂದು ಪಾರ್ಸೆಲ್ ಬರುವುದಾಗಿ ತಿಳಿಸಿದ್ದ. ಮತ್ತೆರಡು ಬಾರಿ ಕರೆ ಮಾಡಿ ಪಾರ್ಸೆಲ್ ಬಂದಿತೇ ಎಂದು ವಿಚಾರಿಸಿದ್ದ. ಆದರೆ, ಪಾರ್ಸೆಲ್ನಲ್ಲಿ ಏನಿದೆ ಎನ್ನುವುದನ್ನು ಮಾತ್ರ ತಿಳಿಸಿರಲಿಲ್ಲ. ಹೀಗಾಗಿ, ಆಕೆಯ ಕುತೂಹಲ-ನಿರೀಕ್ಷೆಗಳು ಹೆಚ್ಚಾಗಿದ್ದವು. ತಮ್ಮ ವಿವಾಹ ವಾರ್ಷಿಕೋತ್ಸವಕ್ಕಾಗಿಯೇ ಏನೋ ವಿಶೇಷವಾದ್ದನ್ನು ಆತ ಕಳುಹಿಸಿದ್ದಾನೆಂದು ಆಕೆ ಊಹಿಸಿದ್ದಳು. ಪಾರ್ಸೆಲ್ ಯಾವ ಸಮಯದಲ್ಲಾದರೂ ಬರಬಹುದು, ಮನೆಯಲ್ಲೇ ಇದ್ದು ಅದನ್ನು ಸ್ವೀಕರಿಸಬೇಕೆಂದು ಆತ ತಿಳಿಸಿದ್ದ. ಹೀಗಾಗಿ ಆಕೆಯ ಕುತೂಹಲ ಮತ್ತಷ್ಟು ಹೆಚ್ಚಾಗಿತ್ತು. ಆದರೆ, ಮಧ್ಯಾಹ್ನವಾದರೂ ಯಾವ ಪಾರ್ಸೆಲ್ ಕೂಡ ಬರಲಿಲ್ಲ. ಜೊತೆಗೆ, ಪತಿರಾಯನೂ ಕರೆ ಮಾಡಲಿಲ್ಲ. ಅಷ್ಟೇ ಅಲ್ಲ, ತಾನು ಕರೆ ಮಾಡಿದರೂ ಆತ ಸ್ವೀಕರಿಸುತ್ತಿಲ್ಲ. ಸಂಜೆಯ ವೇಳೆಗೆ ಆಕೆ ಹತ್ತಾರು ಬಾರಿ ಕರೆ ಮಾಡಿದ್ದಳು. ಸಮಯ ಕಳೆದಂತೆ ಆಕೆಯ ಆತಂಕ ಹೆಚ್ಚುತ್ತಿತ್ತು.
ಸಂಜೆ ಸೂರ್ಯಾಸ್ತವಾಗಿ ಕತ್ತಲಾದರೂ ಪತಿಯ ಪತ್ತೆಯಿಲ್ಲ, ಆತ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಆತನ ಸ್ನೇಹಿತರಿಗೆ ಕರೆ ಮಾಡಿ ಆತನಿಗೆ ತಿಳಿಸುವಂತೆ ಹೇಳಿದರೂ, ಯಾವ ಉಪಯೋಗವೂ ಆಗಲಿಲ್ಲ. ರಾತ್ರಿ ೮:೧೫ರ ಸುಮಾರಿಗೆ ಒಂದು ಕರೆ ಬಂದಿತು. ಅತ್ತಕಡೆಯಿಂದ ಹೆಣ್ಣುಧ್ವನಿಯೊಂದು ಕೇಳಿಸಿತು: “ನೀವು ಹೇಗಿದ್ದೀರಿ?” ಅದಾದನಂತರ ಅನೇಕ ಕರೆಗಳು ಬರತೊಡಗಿದವು. ಎಲ್ಲರೂ ಆಕೆಯನ್ನು ವಿಚಾರಿಸುವವರೇ. ಆಕೆಗೆ ಏನೊಂದೂ ತಿಳಿಯುತ್ತಿಲ್ಲ. ಅಷ್ಟರಲ್ಲೇ ಆಕೆಯ ಸ್ನೇಹಿತನೊಬ್ಬ ಕರೆ ಮಾಡಿ, ಸತೀಶ್ ದಹಿಯಾ ಉಗ್ರವಿರೋಧಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ, ಆತ ಗಾಯಗೊಂಡಿದ್ದಾನೆ ಎಂದು ಸುದ್ದಿ ನೀಡಿದ. ಆಕೆಗೆ ಹೃದಯವೇ ನಿಂತುಹೋದ ಅನುಭವ. ತನ್ನ ಪತಿ ಇಷ್ಟು ಸಮಯವಾದರೂ ಕರೆ ಸ್ವೀಕರಿಸದಿದ್ದುದು ಮತ್ತು ವಾಪಸ್ ಕರೆ ಮಾಡದಿದ್ದುದು ಏಕೆಂದು ಆಕೆಗೆ ಅರ್ಥವಾಗತೊಡಗಿತು! ಆಕೆ ದೇವರಕೋಣೆಗೆ ಧಾವಿಸಿದಳು, ದೇವರ ಮುಂದೆ ದೀಪವನ್ನು ಹಚ್ಚಿ ಕಣ್ಮುಚ್ಚಿ ಕುಳಿತಳು. ನಿತ್ಯವೂ ಬೆಳಗಿನ ಹೊತ್ತು ದೇವರ ಕೋಣೆಯಲ್ಲಿ ಕುಳಿತುಕೊಳ್ಳುತ್ತಿದ್ದ ತನ್ನ ಅಮ್ಮ, ಇಂದೇಕೆ ರಾತ್ರಿ ಅಲ್ಲಿ ಕುಳಿತಿದ್ದಾಳೆ ಎನ್ನುವುದು ಎರಡು ವರ್ಷದ ಪ್ರಿಯಾಶಾಗೆ ಅರ್ಥವಾಗಲಿಲ್ಲ. ತನ್ನ ಪತಿ ಸುರಕ್ಷಿತವಾಗಿ ಬರಲೆಂದು ಕಣ್ಮುಚ್ಚಿ ದೇವರನ್ನು ಪ್ರಾರ್ಥಿಸುತ್ತಿದ್ದ ಸುಜಾತ ತೊಡೆಯನ್ನೇರಿ ಪ್ರಿಯಾಶಾ ಕುಳಿತಳು.
ಅದೇ ಸಮಯಕ್ಕೆ ಮನೆಯ ಕರೆಗಂಟೆ ಸದ್ದು ಮಾಡಿತು. ಸುಜಾತ ಬಾಗಿಲು ತೆರೆಯಲು ಒಂದೇ ಉಸಿರಿನಲ್ಲಿ ಓಡಿದಳು. ಬಂದಿದ್ದು ಡೆಲಿವರಿ ಬಾಯ್. ಗುಲಾಬಿಹೂವಿನ ಗೊಂಚಲು ಮತ್ತು ಕೆಂಪುಬಣ್ಣದ ಕಾಗದದಲ್ಲಿ ಅಲಂಕಾರಿಕವಾಗಿ ಸುತ್ತಿಟ್ಟಿದ್ದ ಪಾರ್ಸೆಲ್ ಆಕೆಯ ಕೈಗಿತ್ತ. ಹೂವನ್ನು ಟೇಬಲ್ಲಿನ ಮೇಲಿಟ್ಟು, ಕೆಂಪು ಕಾಗದವನ್ನು ಎಚ್ಚರಿಕೆಯಿಂದ ಬಿಡಿಸಿದಳು. ಹೃದಯಾಕಾರದ ಕೇಕ್ ಮತ್ತು ಮೋಂಬತ್ತಿಗಳು ಅದರಲ್ಲಿದ್ದವು. ಪಾರ್ಸೆಲ್ ಬಂದದ್ದನ್ನು ತಿಳಿಸಲು ಮತ್ತೊಮ್ಮೆ ತನ್ನ ಪತಿಯ ಮೊಬೈಲ್ಗೆ ಕರೆ ಮಾಡಿದಳು. ಈ ಬಾರಿಯೂ ಉತ್ತರವಿಲ್ಲ. ಸ್ವಲ್ಪ ಹೊತ್ತಿಗೆ ಸುಜಾತಳ ತಂದೆ ಮನೆಗೆ ಬಂದರು. ಈಗ ಸಮಯ ರಾತ್ರಿ ೧೦.೩೦. ಎಂದೂ ಈ ಸಮಯದಲ್ಲಿ ಬಾರದ ತನ್ನಪ್ಪ, ಇಂದು ಬಂದಿರುವುದನ್ನು ಕಂಡು ಸುಜಾತ ನೆಲಕ್ಕೆ ಕುಸಿದಳು, ಕಣ್ಣೀರು ಉಕ್ಕಿ ಹರಿಯಿತು. ಏನೋ ದೊಡ್ಡ ಅಪಾಯ ಕಾದಿದೆ ಎಂದು ಮನಸ್ಸು ಹೇಳತೊಡಗಿತು.
ಸತೀಶ್ಗೆ ಏನಾಗಿದೆ, ಏತಕ್ಕೆ ಯಾರೂ ಉತ್ತರಿಸುತ್ತಿಲ್ಲ ಎಂದು ಕರುಣಾಜನಕವಾಗಿ ಸುಜಾತ ಕೇಳಿಕೊಂಡಾಗ, ಆಸ್ಪತ್ರೆಯಲ್ಲಿ ಆತನ ಚಿಕಿತ್ಸೆ ನಡೆಯುತ್ತಿದೆ, ವೈದ್ಯರು ಗಮನಿಸುತ್ತಿದ್ದಾರೆ ಎಂದು ಸೈನ್ಯದ ಕಾರ್ಯಾಲಯ ತನಗೆ ತಿಳಿಸಿದೆ ಎಂದಷ್ಟೇ ಆಕೆಯ ತಂದೆ ಹೇಳಿದರು. ಮಧ್ಯರಾತ್ರಿಯಾದರೂ ಸ್ಪಷ್ಟವಾದ ಸುದ್ದಿ ತಿಳಿಯಲಿಲ್ಲ. ಆತನನ್ನು ಶ್ರೀನಗರದ ಆಸ್ಪತ್ರೆಗೆ ಸೇರಿಸಿದ್ದಾರೆ. ಬೆಳಗಿನ ಹೊತ್ತಿಗೆ ಹೇಗಾದರೂ ಅಲ್ಲಿಗೆ ತಲಪಬೇಕೆಂದು, ಮಧ್ಯರಾತ್ರಿಯಲ್ಲಿಯೇ ಕಾರು ಮಾಡಿಕೊಂಡು ದೆಹಲಿಗೆ ಹೊರಟರು. ಅಲ್ಲಿಂದ ಬೆಳಗಿನಜಾವದಲ್ಲೇ ಶ್ರೀನಗರಕ್ಕೆ ವಿಮಾನದಲ್ಲಿ ಹೋಗುವ ಯೋಜನೆ.
ಕಾರು ಹೊರಟ ಸ್ವಲ್ಪ ಹೊತ್ತಿನ ನಂತರ ಸತೀಶ್ ಅವರ ಮೇಲಧಿಕಾರಿಗೆ ಆಕೆ ಕರೆ ಮಾಡಿದಳು. ಅವರೂ ಇಲ್ಲಿಯವರೆಗೆ ಯಾವ ಕರೆಯನ್ನೂ ಸ್ವೀಕರಿಸಿರಲಿಲ್ಲ. ಈ ಸಲ ಕರೆಯನ್ನು ಸ್ವೀಕರಿಸಿದರು. ಆದರೆ, ಆಕಡೆ ಮಾತನಾಡುತ್ತಿದ್ದುದು ಅಪರಿಚಿತ ಧ್ವನಿ. ಇವರು ದೆಹಲಿಗೆ ಹೊರಟಿರುವುದು ತಿಳಿದು, ಅಲ್ಲಿಗೆ ಬರುವ ಅಗತ್ಯವಿಲ್ಲವೆಂದು ಅವರು ತಿಳಿಸಿದರು.
ಮೇಲಧಿಕಾರಿಯೊಡನೆ ಮಾತನಾಡಬೇಕೆಂದು ಸುಜಾತ ಒತ್ತಾಯಿಸಿದಾಗ, ಮೇಲಧಿಕಾರಿ ಕರ್ನಲ್ ರಾಜೀವ್ ಮಾತನಾಡಿದರು. ಅವರ ಕಂಠ ಗದ್ಗದಿತವಾಗಿತ್ತು, ಅವರು ಬಿಕ್ಕುತ್ತಿದ್ದ ಸದ್ದು ಕೇಳುತ್ತಿತ್ತು. ಸತೀಶ್ ಕೊನೆಯುಸಿರೆಳೆದಿದ್ದಾರೆ ಎನ್ನುವ ಸುದ್ದಿಯನ್ನು ಅವರು ಹೊರಗೆಡಹಿದರು. ಸುಜಾತ ಅಲ್ಲೇ ಮೂರ್ಛಿತಳಾದಳು. ಪತಿಗೆ ನೀಡಲು ಹಿಡಿದುಕೊಂಡಿದ್ದ ಕೆಂಪು ಗುಲಾಬಿಯ ಗೊಂಚಲು ನೆಲಕ್ಕೆ ಬಿತ್ತು. ಆಕೆಯ ತಂದೆ ಕಾರಿನ ಚಾಲಕನಿಗೆ ಕಾರನ್ನು ಹರ್ಯಾಣಾದ ನರ್ನಾಲ್ಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದರು. ಅದು ಸತೀಶ್ ಅವರ ತಂದೆ-ತಾಯಿಯರು ವಾಸಿಸುತ್ತಿದ್ದ ಸ್ಥಳ.
* * *
ಮೇಜರ್ ಸತೀಶ್ ದಹಿಯಾ ಹರ್ಯಾಣಾದ ಯುವಕ. ಹುಟ್ಟಿದ್ದು ೧೯೮೫ರ ಸೆಪ್ಟೆಂಬರ್ ೨೨ರಂದು, ಹರ್ಯಾಣಾದ ಮಹೇಂದ್ರಗಢ ಜಿಲ್ಲೆಯ ಬನೀಹಾರಿ ಗ್ರಾಮದಲ್ಲಿ. ಅಚಲ್ಸಿಂಗ್ ದಹಿಯಾ ಮತ್ತು ಶ್ರೀಮತಿ ಅನಿತಾದೇವಿಯವರ ಏಕೈಕ ಪುತ್ರನಾಗಿ. ತನ್ನ ಶಾಲಾ ಶಿಕ್ಷಣವನ್ನು ಉತ್ತರಪ್ರದೇಶದಲ್ಲಿ ಪೂರೈಸಿದ ಸತೀಶ್, ಕಾಲೇಜು ಶಿಕ್ಷಣ ಪಡೆದದ್ದು ರಾಜಸ್ಥಾನ್ ವಿಶ್ವವಿದ್ಯಾಲಯದಿಂದ. ಆನಂತರ ಆತ ಸೈನಿಕ ಶಿಕ್ಷಣಕ್ಕೆ ಸೇರ್ಪಡೆಗೊಂಡು, ೨೦೦೯ರ ಡಿಸೆಂಬರ್ ೧೨ರಂದು ಸೈನ್ಯವನ್ನು ಸೇರಿಕೊಂಡ. ಪ್ರಾರಂಭದಲ್ಲಿ ಸಾಗಾಣಿಕೆ ವಿಭಾಗದಲ್ಲಿ ಕಾರ್ಯ ಮಾಡಿದ ಸತೀಶ್, ಮುಂದೆ ೧ ನಾಗಾ ಬೆಟಾಲಿಯನ್ಗೆ ಸೇರಿ ಜಮ್ಮು-ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಿದ. ಮುಂದೆ ರಾಷ್ಟ್ರೀಯ ರೈಫಲ್ಸ್ ಪಡೆಯ ಉಗ್ರನಿಗ್ರಹ ವಿಶೇಷದಳಕ್ಕೆ ಸೇರ್ಪಡೆಯಾಗಿ, ಅನೇಕ ಉಗ್ರನಿಗ್ರಹ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡ.
ಉಗ್ರನಿಗ್ರಹ ಕಾರ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಸತೀಶ್ ದಹಿಯಾನನ್ನು `ಜಂಗಲ್’ ಕಂಪೆನಿಗೆ ಮುಖ್ಯಸ್ಥನನ್ನಾಗಿ ಮಾಡಲಾಗಿತ್ತು. ರಾಷ್ಟ್ರೀಯ ರೈಫಲ್ಸ್ ದಳವನ್ನು ನಾಲ್ಕು ಕಂಪೆನಿಗಳನ್ನಾಗಿ ವಿಂಗಡಿಸಲಾಗಿತ್ತು – ಎರಡು ಕಂಪೆನಿಗಳು ರಸ್ತೆಗಳನ್ನು ತೆರವುಗೊಳಿಸುವ, ಸೈನಿಕರಿಗೆ ಬೆಂಗಾವಲು ನೀಡುವ ಕೆಲಸ ಮಾಡಿದರು. ‘ಜಂಗಲ್ ಕಂಪೆನಿಗಳು’ ಎಂದು ಕರೆಯಲ್ಪಡುವ ಮತ್ತೆರಡು ಕಂಪೆನಿಗಳು ಅರಣ್ಯಪ್ರದೇಶಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಕೆಲಸ ಮಾಡಬೇಕಾಗಿತ್ತು. ಸತೀಶ್ ಅವರ ಸುಪರ್ದಿಗೆ ಬರುತ್ತಿದ್ದುದು ೨೩ ಚದರ ಕಿಲೋಮೀಟರ್ ಪ್ರದೇಶದಲ್ಲಿ ವ್ಯಾಪಿಸಿದ್ದ ಮೂವತ್ತು ಗ್ರಾಮಗಳು. ಅದರಲ್ಲಿ ಹೆಚ್ಚಿನ ಭಾಗ ದಟ್ಟವಾದ ಕಾಡುಗಳಿಂದ ಆವರಿಸಿತ್ತು.
೨೦೧೭ರ ಫೆಬ್ರುವರಿಯಲ್ಲಿ ಸತೀಶ್ ಅವರ ಪಡೆಯು ಜಮ್ಮು-ಕಾಶ್ಮೀರದ ಕುಪ್ವಾರಾದಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಅಲ್ಲಿನ ಸ್ಥಳೀಯರೊಡನೆ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದ ಸತೀಶ್, ಅವರಲ್ಲಿ ಅನೇಕರನ್ನು ಮಾಹಿತಿದಾರರನ್ನಾಗಿ ಮಾಡಿಕೊಂಡಿದ್ದ. ಆ ರೀತಿಯಲ್ಲಿ ಆತನಿಗೆ ಸಿಕ್ಕಿದ್ದ ನಿರ್ದಿಷ್ಟ ಮಾಹಿತಿ, ಕುಪ್ವಾರಾದ ಹಂದ್ವಾರಾ ಪಟ್ಟಣದ ಕ್ರಾಲ್ಗುಂಡ್ ಗ್ರಾಮದಲ್ಲಿ ಉಗ್ರರು ಅವಿತಿಟ್ಟುಕೊಂಡಿದ್ದಾರೆ ಎಂದು.
ಫೆಬ್ರುವರಿ ೧೪ರ ಸಂಜೆ ೫ ಗಂಟೆಯ ವೇಳೆಗೆ ಸತೀಶ್ ತಮ್ಮ ಪಡೆಯೊಡನೆ ಅಲ್ಲಿಗೆ ಧಾವಿಸಿದರು. ಜಮ್ಮು-ಕಾಶ್ಮೀರ ಪೊಲೀಸ್ ಪಡೆಯೂ ಇವರೊಡನೆ ಅಲ್ಲಿಗೆ ಬಂದಿಳಿಯಿತು. ಕಳೆದೆರಡು ತಿಂಗಳಿನಿಂದ ಅವರು ಬೆನ್ನಟ್ಟಿದ್ದ ಉಗ್ರರ ದಮನಕ್ಕೆ ಇದೀಗ ಸಕಾಲ ಒದಗಿತ್ತು.
ಇವರು ಬೇಟೆಯಾಡಲು ಹೊರಟಿದ್ದುದು ಸಾಮಾನ್ಯ ಉಗ್ರಗಾಮಿಗಳಲ್ಲ. ಅವರು ಜೈಷ್-ಎ-ಮೊಹಮ್ಮದ್ ಉಗ್ರ ಗುಂಪಿಗೆ ಸೇರಿದವರು, ಕಮಾಂಡೋಗಳಂತೆ ತರಬೇತಿ ಪಡೆದವರು. ಆ ದಳಕ್ಕಿಟ್ಟಿದ್ದ ಹೆಸರು ‘ಅಫ್ಜಲ್ ಗುರು ಸ್ಕ್ವಾಡ್’. ಅವರ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿದ್ದವು ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಸಂವಹನ ನಡೆಸುತ್ತಿದ್ದರು. ಹೀಗಾಗಿ ಅವರ ಸಂವಹನವನ್ನು ಕದ್ದಾಲಿಸಲು ಕಷ್ಟವಿತ್ತು. ಕಮಾಂಡೋ ಶೈಲಿಯ ತರಬೇತಿ ಪಡೆದಿದ್ದ ಈ ಉಗ್ರರು, ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲೂ ದೀರ್ಘಕಾಲ ಕಾದಾಡಲು ಸಮರ್ಥರಾಗಿದ್ದರು. ಅವರನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿರಲಿಲ್ಲ. ಒಬ್ಬೊಬ್ಬ ಉಗ್ರನೂ ಅಪಾರ ಹಾನಿಯನ್ನುಂಟುಮಾಡುವ ಸಾಮರ್ಥ್ಯ ಉಳ್ಳವನಾಗಿರುತ್ತಿದ್ದನು. ಈ ರೀತಿ ತರಬೇತಾದ ಮರ್ನಾಲ್ಕು ಉಗ್ರರು ಹಂದ್ವಾರಾ ಸಮೀಪದ ಗ್ರಾಮದಲ್ಲಿ ಅವಿತಿದ್ದ ಮಾಹಿತಿ ಸಿಕ್ಕಿತ್ತು. ಇವರನ್ನು ಬೇಟೆಯಾಡಲು ಸತೀಶ್ ದಹಿಯಾ ಅವರ ತಂಡ ಹೊರಟಿದ್ದಿತು.
ಪ್ರಾರಂಭದಲ್ಲಿ ಉಗ್ರರು ಹಜೀನ್ ಕ್ರಾಲ್ಗುಂಡ್ ಗ್ರಾಮದ ಎರಡು ಮನೆಗಳಲ್ಲಿ ಅಡಗಿಕೊಂಡಿದ್ದರು – ಒಂದು ಮನೆ ಗ್ರಾಮದ ಮಧ್ಯಭಾಗದಲ್ಲಿದ್ದರೆ, ಮತ್ತೊಂದು ಗ್ರಾಮದ ಅಂಚಿನಲ್ಲಿದ್ದಿತು. ಸತೀಶ್ ದಹಿಯಾ ಅವರು ಪ್ರಾರಂಭದಲ್ಲಿ ಡ್ರೋನ್ ಒಂದನ್ನು ಹಾರಿಸಿ, ಅದರಲ್ಲಿದ್ದ ಕ್ಯಾಮೆರಾ ಮೂಲಕ ಗ್ರಾಮದ ಎಲ್ಲ ಭಾಗವನ್ನು ಪರಿಶೀಲಿಸಿದ್ದರು. ಸ್ವಲ್ಪ ಸಮಯದ ನಂತರ ಒಳಭಾಗದ ಮನೆಯಲ್ಲಿದ್ದ ಉಗ್ರರೂ ಗ್ರಾಮದ ಅಂಚಿನ ಮನೆಗೆ ಸೇರಿಕೊಂಡಿದ್ದರು. ಇದು ಕೂಡಾ ಸತೀಶ್ ತಂಡಕ್ಕೆ ತಿಳಿಯಿತು. ಎಲ್ಲ ಸೈನಿಕರು ಹಾಗೂ ಪೊಲೀಸರು ಆ ಮನೆಯ ಸುತ್ತ ಮುತ್ತಿಗೆ ಹಾಕಿದರು. ಉಗ್ರರಿಗೆ ತಿಳಿಯದಂತೆ ಇದ್ದಕ್ಕಿದ್ದಂತೆ ಮನೆಯ ಮೇಲೆ ದಾಳಿ ಮಾಡುವ ಯೋಜನೆ ಹಾಕಿಕೊಂಡಿದ್ದರು. ಆದರೆ ಉಗ್ರರಿಗೆ ಸೈನಿಕರು ಮುತ್ತಿರುವ ವಿಷಯ ಹೇಗೊ ತಿಳಿದಿತ್ತು. ಅವರು ಅವರು ತಮ್ಮ ಬಳಿಯಿದ್ದ ಎಕೆ-೪೭ ಬಂದೂಕಿನಿಂದ ಗುಂಡಿನ ಮಳೆಗರೆಯಲು ಪ್ರಾರಂಭಿಸಿದರು. ಜೊತೆಗೆ ಗ್ರೆನೇಡುಗಳನ್ನೆಸೆದರು. ಹೀಗಾಗಿ, ಅವರು ಅವಿತಿದ್ದ ಮನೆಯ ಸಮೀಪ ಹೋಗಲು ಸೈನಿಕರಿಗೆ ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯದ ನಂತರ ಇದ್ದಕ್ಕಿದ್ದಂತೆ ಗುಂಡಿನ ಮಳೆ ನಿಂತು ಹೋಯಿತು. ಆ ಸಮಯದಲ್ಲಿ ಸತೀಶ್ ತಮ್ಮ ಜೊತೆಗೆ ಒಬ್ಬ ಸೈನಿಕನನ್ನು ಕರೆದುಕೊಂಡು ಮನೆಯ ಹಿಂಬಾಗಿಲ ಸಮೀಪ ಹೋದರು. ಅಷ್ಟರಲ್ಲಿ ಮನೆಯ ಬಾಗಿಲು ತೆರೆದುಕೊಂಡು ಮೂವರು ಉಗ್ರರು ಗುಂಡು ಹಾರಿಸುತ್ತ ಹೊರಕ್ಕೋಡಿದರು. ಅದೇ ಸಮಯಕ್ಕೆ ಸತೀಶ್ ಅವರು ಉಗ್ರರ ಮೇಲೆ ಗುಂಡು ಹಾರಿಸಿದರು. ಒಬ್ಬ ಉಗ್ರ ನೆಲಕ್ಕುರುಳಿದ, ಇಬ್ಬರು ಉಗ್ರರು ಪಕ್ಕಕ್ಕೆ ಹಾರಿ, ಅಲ್ಲಿಯೇ ಇದ್ದ ದಿಬ್ಬದ ಹಿಂದೆ ಅವಿತುಕೊಂಡು ಗುಂಡು ಹಾರಿಸುವುದನ್ನು ಮುಂದುವರಿಸಿದರು.
ಈ ಸಮಯದಲ್ಲಿ ಉಗ್ರರಿಂದ ಹಾರಿದ ಕೆಲವು ಗುಂಡುಗಳು ಸತೀಶ್ ಅವರ ಪಕ್ಕೆಯನ್ನು ಹೊಕ್ಕು ರಕ್ತ ಹರಿಯಲಾರಂಭಿಸಿತು. ಆದರೂ ಅವರು ಹಿಮ್ಮೆಟ್ಟದೆ ಉಗ್ರರು ಅವಿತಿದ್ದ ದಿಬ್ಬದ ಸಮೀಪಕ್ಕೆ ತೆವಳಿಕೊಂಡು ಹೋದರು. ಸತೀಶ್ ಅವರು ಹಾರಿಸಿದ ಗುಂಡಿಗೆ ಮತ್ತೊಬ್ಬ ಉಗ್ರ ಬಲಿಯಾದ. ಆ ಹೊತ್ತಿಗೆ ಉಗ್ರರು ಹಾರಿಸಿದ್ದ ಗುಂಡಿನ ಮಳೆಗೆ ಮೂವರು ಸೈನಿಕರು ಹುತಾತ್ಮರಾದರು. ಸತೀಶ್ ಅವರಿಗೆ ರಕ್ತಸ್ರಾವ ತೀವ್ರವಾಗಿತ್ತು. ಅವರು ಸ್ವಲ್ಪ ಸಮಯದಲ್ಲೇ ಮೂರ್ಛಿತರಾದರು. ಕೂಡಲೇ ಅವರ ಜೊತೆಗಾರರು ಅವರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ ಪ್ರಥಮಚಿಕಿತ್ಸೆ ನೀಡಿದರು. ಅವರಿಗಾಗಿದ್ದ ಗಾಯ ತೀವ್ರತರದ್ದಾಗಿತ್ತು, ಬಹಳಷ್ಟು ರಕ್ತ ಹೊರಕ್ಕೆ ಹೋಗಿತ್ತು. ಹೀಗಾಗಿ, ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಸತೀಶ್ ಅಲ್ಲಿಯೇ ಕೊನೆಯುಸಿರೆಳೆದರು.
ಈ ರೀತಿಯ ಉಗ್ರನಿಗ್ರಹ ಕಾರ್ಯಾಚರಣೆಯ ಸಮಯದಲ್ಲಿಯೆ ಸತೀಶ್ ಅವರ ಪತ್ನಿ ಸುಜಾತ, ತನ್ನ ಪತಿಯನ್ನು ಸಂಪರ್ಕಿಸಲು ಸತತವಾಗಿ ಪ್ರಯತ್ನಿಸುತ್ತಿದ್ದುದು. ತಮ್ಮ ದೂರವಾಣಿ ಸದ್ದು ಮಾಡುತ್ತಿರುವುದು ಸತೀಶ್ ಅವರ ಗಮನಕ್ಕೆ ಬಂದಿತ್ತು. ಆದರೆ ಅವರಿದ್ದ ಪರಿಸ್ಥಿತಿಯಲ್ಲಿ ದೂರವಾಣಿಗೆ ಉತ್ತರಿಸಲು ಸಾಧ್ಯವಿರಲಿಲ್ಲ. ಸೈನಿಕನ ಕೆಲಸ ಯಾವ ರೀತಿಯಿರುತ್ತದೆ ಎಂದು ಪರಿಚಯಿಸಲು ಪತ್ನಿಯನ್ನು ಸೈನಿಕ ಠಾಣೆಗೆ ಒಮ್ಮೆ ಕರೆದುಕೊಂಡು ಬಂದು ತೋರಿಸಿದ್ದರು. ತಮ್ಮ ಜೊತೆಯ ಸೈನಿಕರನ್ನೂ ಪರಿಚಯಿಸಿದ್ದರು. ಆದರೂ, ನಿಜವಾದ ಕಾರ್ಯಾಚರಣೆ ಯಾವ ರೀತಿಯಿರುತ್ತದೆ ಎನ್ನುವುದನ್ನು ಊಹಿಸುವುದು ಸುಲಭವಲ್ಲ, ಅದನ್ನು ಅನುಭವಿಸಿಯೇ ನೋಡಬೇಕು. ತನ್ನ ಪತಿ ಈ ರೀತಿಯ ಜೀವನ್ಮರಣದ ಹೋರಾಟ ನಡೆಸಿದ್ದಾರೆ ಎಂದು ಸುಜಾತಳಿಗೆ ಕಲ್ಪನೆಯಿರಲಿಲ್ಲ. ಅಂದಿನ ಸಂಜೆ ಪತಿಯೊಡನೆ ಸಂತೋಷವಾಗಿ ಕಳೆಯುವ ಕಲ್ಪನೆ ಮಾಡಿದ್ದಳಾಕೆ. ಸತೀಶ್ ಅವರೂ ಆಕೆಯನ್ನು ಸಂತೋಷಪಡಿಸುವ ಯೋಜನೆಯನ್ನೇ ಮಾಡಿಕೊಂಡಿದ್ದರು. ಫೆಬ್ರುವರಿ ೧೭ರ ತಮ್ಮ ವಿವಾಹ ವಾರ್ಷಿಕೋತ್ಸವದ ಆಚರಣೆಗೆ ನಾಲ್ಕು ದಿನ ರಜೆ ತೆಗೆದುಕೊಂಡಿದ್ದ ಸತೀಶ್, ಅಂದು ಗೋವಾದ ತಾಜ್ ವಿವಾಂಟಾದಲ್ಲಿರುವ ವ್ಯವಸ್ಥೆ ಮಾಡಿದ್ದರು. ಆದರೆ ವಿಧಿಯ ಯೋಜನೆ ಬೇರೆಯೇ ಇದ್ದಿತೆನ್ನುವುದು ಇಬ್ಬರಿಗೂ ತಿಳಿದಿರಲಿಲ್ಲ ಎನ್ನುವುದು ವಿಧಿಯ ವಿಪರ್ಯಾಸವಷ್ಟೇ!
ತಮ್ಮ ಪಡೆಯ ಯಾವ ಸೈನಿಕನೂ ಪ್ರಾಣ ಕಳೆದುಕೊಳ್ಳಬಾರದು ಎನ್ನುವುದು ಸತೀಶ್ ಅವರ ಅದಮ್ಯ ಆಸೆಯಾಗಿತ್ತು. ಹೀಗಾಗಿ ತಮ್ಮ ಸೈನಿಕರನ್ನು ಮುಂದಕ್ಕೆ ಕಳುಹಿಸುವ ಬದಲು, ತಾವೇ ಮುಂದಾಗಿ ನುಗ್ಗುತ್ತಿದ್ದರು. ತಮ್ಮ ಕಡೆಯ ಮೂವರು ಸೈನಿಕರು ಉಗ್ರರ ಗುಂಡಿಗೆ ಬಲಿಯಾಗಿದ್ದರು ಎನ್ನುವ ಸಂಗತಿ ಸತೀಶ್ ಅವರಿಗೆ ತಿಳಿದಿರಲಿಲ್ಲ. ಅವರು ಕೇವಲ ಗಾಯಗೊಂಡಿದ್ದಾರೆ ಎಂದು ಭಾವಿಸಿದ್ದರು ಮತ್ತು ಸ್ವತಃ ತಾವೂ ಉಗ್ರರ ಗುಂಡಿಗೆ ಬಲಿಯಾದರು.
ಆದರೆ ಅವರ ಬಲಿದಾನ ವ್ಯರ್ಥವಾಗಲಿಲ್ಲ. ‘ಅಫ್ಜಲ್ ಗುರು ಸ್ಕ್ವಾಡ್’ನ ಎಲ್ಲ ಉಗ್ರರೂ ಹತರಾದರು, ದೊಡ್ಡ ಅನಾಹುತ ತಪ್ಪಿಸಲಾಗಿತ್ತು. ಉಗ್ರನಿಗ್ರಹದಲ್ಲಿ ಸತೀಶ್ ಅವರು ತೋರಿದ ಅಸಾಧಾರಣ ಸಾಹಸಕ್ಕೆ ಭಾರತಸರ್ಕಾರ ಅವರಿಗೆ ‘ಶೌರ್ಯ ಚಕ್ರ’ ನೀಡಿ ಗೌರವಿಸಿತು. ಅವರ ಗ್ರಾಮದಲ್ಲಿರುವ ಒಂದು ರಸ್ತೆಗೆ ಮತ್ತು ಅಲ್ಲಿನ ಕಾಲೇಜೊಂದಕ್ಕೆ ಅವರ ಹೆಸರನ್ನಿಡಲಾಗಿದೆ.
ಹಾಜಿನ್ ಕ್ರಾಲ್ಗುಂಡ್ ಕಾರ್ಯಾಚರಣೆಗೆ ಕೆಲವು ವಾರಗಳ ಮುಂಚೆ ಕರ್ನಲ್ ರಾಜೀವ್ ಅವರು, ಸತೀಶ್ ಅವರ ಜಂಗಲ್ ಪೋಸ್ಟಿಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಕರ್ನಲ್ ರಾಜೀವ್ ಅವರು ಸತೀಶ್ ಅವರಿಗೆ ಈ ರೀತಿ ಸಲಹೆ ನೀಡಿದ್ದರು: “ನಾವಿಬ್ಬರೂ ರಾಷ್ಟ್ರೀಯ ರೈಫಲ್ಸ್ನಲ್ಲಿನ ನಮ್ಮ ಕಾರ್ಯಾವಧಿಯ ಅಂತ್ಯಕ್ಕೆ ತಲಪಿದ್ದೇವೆ. ಹೀಗಾಗಿ ನೀವು ಹೆಚ್ಚು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಆವಶ್ಯಕತೆಯಿಲ್ಲ. ನೀವು ಬೆನ್ನಟ್ಟಿರುವ ಮೂವರು ಉಗ್ರರನ್ನು ಮಟ್ಟಹಾಕದಿದ್ದರೂ ಸದ್ಯಕ್ಕೆ ಪರವಾಗಿಲ್ಲ.” ಎಂದಿದ್ದರು. ಅದಕ್ಕೆ ಮೇಜರ್ ಸತೀಶ್ ದಹಿಯಾ ಅವರು ಇತ್ತ ಉತ್ತರವೆಂದರೆ, “ನಿಮಗೆ ನಾನು ವಚನ ನೀಡುತ್ತಿದ್ದೇನೆ. ಆ ಉಗ್ರರ ಹುಟ್ಟಡಗಿಸುವವರೆಗೆ ನಾನು ಈ ಪ್ರದೇಶದಿಂದ ಹೊರಡುವುದಿಲ್ಲ.” ಹೀಗಿತ್ತು ಅವರ ಕಾರ್ಯನಿಷ್ಠೆ, ದೇಶಭಕ್ತಿ! ಈ ರೀತಿಯ ಸೈನಿಕರ ತ್ಯಾಗ-ಬಲಿದಾನಗಳಿಂದ ದೇಶದಲ್ಲಿರುವ ನಾವೆಲ್ಲರೂ ನೆಮ್ಮದಿಯ ಬದುಕನ್ನು ಸಾಗಿಸಲು ಸಾಧ್ಯವಾಗಿದೆ – ಎಂಬುದನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಸದಾ ನೆನಪಿಟ್ಟುಕೊಂಡಿರಬೇಕು. ಪ್ರತಿಯೊಬ್ಬ ಸೈನಿಕನಿಗೂ ಮನಸಾರೆ ಪ್ರಣಾಮಗಳನ್ನು ಸಲ್ಲಿಸಬೇಕು.