ಭಾರತೀಯ ಸೇನಾಪಡೆಯ ಸೈನಿಕನಾಗಿ ಸೇರ್ಪಡೆಯಾಗಿದ್ದು 2011ರ ಮಾರ್ಚ್ನಲ್ಲಿ, ಆರ್ಮಿ ಆರ್ಡ್ನೆನ್ಸ್ ಕೋರ್ ದಳಕ್ಕೆ. ಸೈನ್ಯದಲ್ಲಿರುವ ಪದ್ಧತಿಯಂತೆ, ಆಫೀಸರ್ ಆಗಿ ಸೇರ್ಪಡೆಯಾದವರು, ಮೊದಲ ಎರಡು ವರ್ಷ ಯುದ್ಧದಲ್ಲಿ ಪದಾತಿ ದಳದಲ್ಲಿ ಕೆಲಸ ಮಾಡಬೇಕು ಅಥವಾ ಉಗ್ರವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಬೇಕು. ಲೆಫ್ಟಿನೆಂಟ್ ನವದೀಪ್ಸಿಂಗ್ ಅವರನ್ನು ಜಮ್ಮು-ಕಾಶ್ಮೀರದ 15 ಮರಾಠಾ ಲೈಟ್ ಇನ್ಫೆಂಟ್ರಿ ದಳಕ್ಕೆ ಕಮಿಷನ್ಡ್ ಆಫೀಸರ್ ಆಗಿ ನಿಯುಕ್ತಿ ಮಾಡಲಾಯಿತು. ಇದಾದ ಕೇವಲ ಆರು ತಿಂಗಳಲ್ಲಿಯೇ ತನ್ನ ಶೌರ್ಯ ಪ್ರದರ್ಶಿಸುವ ಅವಕಾಶ ನವದೀಪ್ಸಿಂಗ್ಗೆ ಪ್ರಾಪ್ತವಾಯಿತು.
ಸೈನ್ಯಕ್ಕೆ ಸೇರಿದ ಆರು ತಿಂಗಳಲ್ಲೇ ಅಸಾಧಾರಣ ಸಾಧನೆಗೈದು, ಅಶೋಕಚಕ್ರ ಪ್ರಶಸ್ತಿಗೆ ಭಾಜನರಾದ ವೀರಯೋಧರೊಬ್ಬರ ಕಥೆಯಿದು. ಹೆಸರು ನವದೀಪ್ಸಿಂಗ್. ಹುಟ್ಟಿದ್ದು ಪಂಜಾಬಿನ ಗುರುದಾಸಪುರದಲ್ಲಿ; 1985 ಜೂನ್ 8ರಂದು. ನವದೀಪ್ಸಿಂಗ್ ತಮ್ಮ ಕುಟುಂಬದಲ್ಲಿ ಸೈನ್ಯಕ್ಕೆ ಸೇರಿದವರಲ್ಲಿ ಮೂರನೆಯ ತಲೆಮಾರಿನವರು. ತಂದೆ ಜೋಗೀಂದರ್ಸಿಂಗ್ ಸೈನ್ಯದಲ್ಲಿ ಸುಬೇದಾರರಾಗಿ, ಕ್ಯಾಪ್ಟನ್ ಆಗಿ ನಿವೃತ್ತರಾಗಿದ್ದರೆ, ತಾತ ಕಿರಿಯ ಕಮಿಷನ್ಡ್ ಆಫೀಸರ್ ಆಗಿ ಸೇವೆ ಸಲ್ಲಿಸಿದ್ದರು. ಮಗ ಸೈನ್ಯಕ್ಕೆ ಸೇರಿದ್ದು ಜೋಗೀಂದರ್ಸಿಂಗ್ ಅವರಿಗೆ ಬಹಳ ಹೆಮ್ಮೆಯ ವಿಷಯ. ಸೈನ್ಯದಲ್ಲಿ ಯಾವ ಕ್ಷಣದಲ್ಲಿ ತನ್ನ ಮಗನಿಗೆ ಯಾವ ಅಪಾಯ ಕಾದಿರುತ್ತದೆಯೋ ಎಂಬ ಆತಂಕದಲ್ಲಿ ತಾಯಿ ಜಗ್ತೀಂದರ್ ಕೌರ್ ಇರುತ್ತಿದ್ದಾಗ, ಅವರಿಗೆ ಧೈರ್ಯ ಹೇಳಿ ಸಮಾಧಾನ ಮಾಡುತ್ತಿದ್ದುದು ಸುಬೇದಾರ್ ಜೋಗೀಂದರ್ಸಿಂಗ್.
ನವದೀಪ್ಸಿಂಗ್ ಅವರು ಶಾಲಾ ಶಿಕ್ಷಣ ಪಡೆದದ್ದು ಗುರುದಾಸಪುರದ ತಿಬ್ರಿ ಎಂಬಲ್ಲಿರುವ ಆರ್ಮಿ ಪಬ್ಲಿಕ್ ಶಾಲೆಯಲ್ಲಿ. 2006ರಲ್ಲಿ ಹೊಟೇಲ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಬಿ.ಎಸ್ಸಿ. ಪದವಿ ಗಳಿಸಿ, 2009ರಲ್ಲಿ ಕೋಲ್ಕತಾದ ಆರ್ಮಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಎಂ.ಬಿ.ಎ. ಪದವಿ ಗಳಿಸಿದರು. ಯಾವುದಾದರೂ ಕಂಪೆನಿ ಸೇರಿ, ಉತ್ತಮ ವೇತನ ಗಳಿಸಿ, ಸುಖವಾದ ಜೀವನ ನಡೆಸಬಹುದಾಗಿದ್ದ ನವದೀಪ್ಸಿಂಗ್ ಆರಿಸಿಕೊಂಡದ್ದು ಸೈನಿಕ ವೃತ್ತಿಯನ್ನು. ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಕ್ಯಾಡೆಟ್ ಆಗಿ ಸೇರಿಕೊಂಡು ಸೈನಿಕ ಶಿಕ್ಷಣ ಪಡೆದರು. ಅವರು ಭಾರತೀಯ ಸೇನಾಪಡೆಯ ಸೈನಿಕನಾಗಿ ಸೇರ್ಪಡೆಯಾಗಿದ್ದು 2011ರ ಮಾರ್ಚ್ನಲ್ಲಿ, ಆರ್ಮಿ ಆರ್ಡ್ನೆನ್ಸ್ ಕೋರ್ ದಳಕ್ಕೆ. ಸೈನ್ಯದಲ್ಲಿರುವ ಪದ್ಧತಿಯಂತೆ, ಆಫೀಸರ್ ಆಗಿ ಸೇರ್ಪಡೆಯಾದವರು, ಮೊದಲ ಎರಡು ವರ್ಷ ಯುದ್ಧದಲ್ಲಿ ಪದಾತಿ ದಳದಲ್ಲಿ ಕೆಲಸ ಮಾಡಬೇಕು ಅಥವಾ ಉಗ್ರವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಬೇಕು. ಲೆಫ್ಟಿನೆಂಟ್ ನವದೀಪ್ಸಿಂಗ್ ಅವರನ್ನು ಜಮ್ಮು-ಕಾಶ್ಮೀರದ 15 ಮರಾಠಾ ಲೈಟ್ ಇನ್ಫೆಂಟ್ರಿ ದಳಕ್ಕೆ ಕಮಿಷನ್ಡ್ ಆಫೀಸರ್ ಆಗಿ ನಿಯುಕ್ತಿ ಮಾಡಲಾಯಿತು.
ಇದಾದ ಕೇವಲ ಆರು ತಿಂಗಳಲ್ಲಿಯೇ ತನ್ನ ಶೌರ್ಯ ಪ್ರದರ್ಶಿಸುವ ಅವಕಾಶ ನವದೀಪ್ಸಿಂಗ್ಗೆ ಪ್ರಾಪ್ತವಾಯಿತು.
ಆಗಸ್ಟ್ 18, 2011. ಉತ್ತರಕಾಶ್ಮೀರದ ಗುರೆeóï ಸೆಕ್ಟರಿನಲ್ಲಿ ಇಬ್ಬರು ಸೈನಿಕರು ಗಡಿ ಕಾಯುತ್ತಿದ್ದರು. ಮಧ್ಯರಾತ್ರಿಯ ಸಮಯ. ಅರಣ್ಯ ಪ್ರದೇಶ, ಪಕ್ಕದಲ್ಲೇ ಜುಳುಜುಳು ಹರಿಯುತ್ತಿರುವ ನದಿ. ಎಲ್ಲಿಂದಲೋ ಅಲುಗಾಟದ ಸದ್ದು ಕೇಳಿಬರಲಾರಂಭಿಸಿತು. ಇರುಳು ಕನ್ನಡಕದಲ್ಲಿ (Night Vision) ನೋಡಿದಾಗ, ನದಿಯಲ್ಲಿ ರಬ್ಬರ್ ದೋಣಿಯ ಮೂಲಕ ಯಾರೋ ಬರುತ್ತಿರುವುದು ಕಾಣಿಸಿತು. ಬೋಟಿನಲ್ಲಿದ್ದ ಪ್ರತಿಯೊಬ್ಬನ ಬೆನ್ನಮೇಲೂ ಭಾರದ ಚೀಲ, ಕೈಯಲ್ಲಿ ಮೆಷಿನ್ಗನ್ನು! ಅವರು ಪಾಕ್ ಉಗ್ರರೆನ್ನುವುದು ಖಚಿತವಾಯಿತು.
ಅಲ್ಲಿ ಹರಿಯುತ್ತಿದ್ದುದು ಕಿಶನ್ಗಂಗಾ ನದಿ. ಆ ನದಿಗೆ ಒಂದು ಸೇತುವೆಯೂ ಇದೆ. ನದಿಯ ಆಚೆ ಬದಿಯ ಅರಣ್ಯದಿಂದ ಕಟ್ಟಿಗೆ ತರಲು, ಜಾನುವಾರುಗಳಿಗೆ ಹುಲ್ಲು ಮೇಯಿಸಲು ಅಲ್ಲಿಯ ಸ್ಥಳೀಯರು ನದಿಯ ಆಚೆ ಕಡೆಗೆ ಹೋಗಿಬರುತ್ತಾರೆ. ಆ ಎಲ್ಲ ಸಮಯದಲ್ಲಿ ಅವರು ಈ ಸೇತುವೆಯನ್ನೇ ಬಳಸುತ್ತಾರೆ. ಅಲ್ಲಿ ಗಡಿಕಾವಲು ಕಾಯುವ ಸೈನಿಕರೂ ಸೇತುವೆಯನ್ನು ಬಳಸುತ್ತಾರೆ. 80 ಮೀಟರ್ ಅಗಲದ ಈ ನದಿಯನ್ನು ಈಜಿಕೊಂಡು ದಾಟುವುದು ಸುಲಭವಲ್ಲ. ಅದು ಬಹಳ ರಭಸವಾಗಿ ಹರಿಯುವ ನದಿ ಮತ್ತು ಅದರ ನೀರು ಮಂಜುಗಡ್ಡೆಯಷ್ಟೇ ತಣ್ಣಗಿರುತ್ತದೆ. ಸೇತುವೆಗೆ ಇಪ್ಪತ್ತನಾಲ್ಕು ಗಂಟೆ ಸೈನಿಕರ ಪಹರೆ ಇರುತ್ತದೆ. ಹೀಗಾಗಿ, ನದಿಯನ್ನು ಈ ಪರಿಸರದಲ್ಲಿ ದಾಟುವ ಸಾಹಸವನ್ನು ಉಗ್ರರು ಈವರೆಗೆ ಮಾಡಿರಲಿಲ್ಲ.
ಉಗ್ರರು ಉಪಯೋಗಿಸುತ್ತಿದ್ದ ರಬ್ಬರ್ ದೋಣಿಯಲ್ಲಿ ನಾಲ್ವರು ಮಾತ್ರ ಕುಳಿತುಕೊಳ್ಳಲು ಅವಕಾಶವಿತ್ತು. ಇಬ್ಬರು ಹುಟ್ಟುಹಾಕುತ್ತ ದೋಣಿಯನ್ನು ನದಿಯ ಪೂರ್ವ ದಡದಿಂದ ಪಶ್ಚಿಮ ದಡಕ್ಕೆ ತರುತ್ತಿದ್ದರು. ಅವರಲ್ಲಿ ಇಬ್ಬರು ದೋಣಿಯಿಂದ ಇಳಿದುಕೊಂಡರು. ಅವರೊಡನಿದ್ದ ಇನ್ನಿಬ್ಬರು ದೋಣಿಯನ್ನು ವಾಪಸ್ ಪೂರ್ವ ದಡಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಅಲ್ಲಿ ಮತ್ತಿಬ್ಬರು ಹತ್ತಿಕೊಳ್ಳುತ್ತಿದ್ದರು. ಹೀಗೆ ಸುಮಾರು ಒಂದು ಡಜûನ್ ಉಗ್ರರು ಈ ಕಡೆಗೆ ಬಂದಿದ್ದಿರಬಹುದು.
ಇದನ್ನು ಗಮನಿಸಿದ ಸೈನಿಕರು, ಅಲ್ಲಿಂದ ಸುಮಾರು 800 ಮೀಟರ್ ದೂರದಲ್ಲಿದ್ದ `ರಾಣಾ’ಗೆ ಕರೆ ಮಾಡಿದರು. ‘ರಾಣಾ’ – ಕಂಜಲ್ವಾನ್ ಗ್ರಾಮದಲ್ಲಿ ಸ್ಥಾಪಿತವಾಗಿದ್ದ 15 ಮರಾಠಾ ಲೈಟ್ ಇನ್ಫೆಂಟ್ರಿಯ ಮುಖ್ಯ ಠಾಣೆ. ಅಲ್ಲಿನ ಕಮಾಂಡಿಂಗ್ ಆಫೀಸರ್ ಕರ್ನಲ್ ಗಿರೀಶ್ ಕರೆಯನ್ನು ಸ್ವೀಕರಿಸಿದರು. ಕರೆ ಮಾಡಿ ಉಗ್ರರು ಆಗಮಿಸಿರುವ ಮಾಹಿತಿ ನೀಡಿದ ಸೈನಿಕರಿಗೆ, ಉಗ್ರರ ಚಲನವಲನವನ್ನು ಒಂದು ಕ್ಷಣವೂ ಬಿಡದೆ ಗಮನಿಸುವಂತೆ ತಿಳಿಸಿದ ಗಿರೀಶ್, ತಮ್ಮ ದಳಕ್ಕೆ ಕೂಡಲೇ ಸಿದ್ಧರಾಗಲು ತಿಳಿಸಿದರು. ಕೆಲವೇ ನಿಮಿಷಗಳಲ್ಲಿ ಸೈನಿಕರು ಅಲ್ಲಿಗೆ ಧಾವಿಸಿದರು. ಆ ಪ್ರದೇಶದಲ್ಲೆಲ್ಲ್ಲ ಕೆಲವು ಸೈನಿಕ ತಂಡಗಳು ಈಗಾಗಲೇ ಪಹರೆ ಕಾಯುತ್ತಿದ್ದವು. ಪ್ರತಿಯೊಂದು ತಂಡದಲ್ಲಿ ಎಂಟು ಸೈನಿಕರು. ಆ ಎಲ್ಲ ತಂಡಗಳಿಗೂ ಕರ್ನಲ್ ಗಿರೀಶ್ ಸಂದೇಶ ಕಳುಹಿಸಿದರು.
ತಮ್ಮೊಡನಿದ್ದ ಸೈನಿಕರನ್ನೂ ಎಂಟು ಜನರ ಹೊಂಚುದಾಳಿ ತಂಡಗಳಾಗಿ ವಿಂಗಡಿಸಿದರು. ಆ ರೀತಿಯ ಒಂದು ಹೊಂಚುದಾಳಿ ತಂಡಕ್ಕೆ ನವದೀಪ್ಸಿಂಗ್ ಅವರನ್ನು ನಾಯಕರನ್ನಾಗಿ ನೇಮಿಸಿ ಕಳುಹಿಸಿದರು. ನದಿಯ ಉದ್ದಕ್ಕೂ ತಂಡಗಳು ಹೊಂಚುಹಾಕುತ್ತ್ತ ಅಡಗಿ ಕುಳಿತವು. ನದಿಯು ತಿರುವು ತೆಗೆದುಕೊಳ್ಳುವ ಒಂದು ಸ್ಥಳದಲ್ಲಿ ನವದೀಪ್ಸಿಂಗ್ರ ತಂಡ ಉಗ್ರರ ಬೇಟೆಗಾಗಿ ಕಾದು ಕುಳಿತಿತು. ಅವರಿಂದ ಕೆಲವೇ ಮೀಟರ್ ದೂರದಲ್ಲಿ ನದಿಯಿಂದ ಸಣ್ಣ ತೊರೆಯೊಂದು ಶಾಖೆಯಾಗಿ ಹೊರಟಿರುವ ಕಡೆಯಲ್ಲಿ ಮತ್ತೊಂದು ತಂಡ, ಅದರ ನಾಯಕ ನಾಯ್ಬ್ ಸುಬೇದಾರ್ ಮೆಂಗರೆ ಶಂಕರ್ ಗಣಪತಿ.
ಕಮಾಂಡಿಂಗ್ ಆಫೀಸರ್ ಗಿರೀಶ್ ಅವರು ‘ರಾಣಾ’ದಲ್ಲೇ ಉಳಿಯಬೇಕಾಯಿತು. ಉಗ್ರರ ಮೇಲೆ ನಿಗಾ ಇಟ್ಟಿದ್ದ ಕಣ್ಗಾವಲು ತಂಡದಿಂದ ಕ್ಷಣಕ್ಷಣದ ಮಾಹಿತಿಯನ್ನು ಸ್ವೀಕರಿಸಿ, ತಮ್ಮ ತಂಡಗಳಿಗೆ ಸರಿಯಾದ ಆದೇಶಗಳನ್ನು ನೀಡಿ ಮಾರ್ಗದರ್ಶನ ಮಾಡಬೇಕಾದ ಗುರುತರ ಹೊಣೆ ಅವರ ಮೇಲಿತ್ತು. ನವದೀಪ್ಸಿಂಗ್ ಅವರನ್ನು ಕಳುಹಿಸುವಾಗ, ಗಿರೀಶ್ ಅವರು ಕಿವಿಮಾತು ಹೇಳಿದ್ದರು: ‘ಉತ್ಸಾಹದಲ್ಲಿ ಮುನ್ನುಗ್ಗಬೇಡ. ತಾಳ್ಮೆ ಮುಖ್ಯ. ಸರಿಯಾದ ಸಮಯಕ್ಕೆ ಕಾದು ವೈರಿಯ ಮೇಲೆ ದಾಳಿ ಮಾಡಬೇಕು. ನಾನು ತಿಳಿಸುವವರೆಗೂ ದಾಳಿ ಪ್ರಾರಂಭಿಸಬೇಡ.’ ಇಪ್ಪತ್ತಾರರ ಹರೆಯದ ನವದೀಪ್ಸಿಂಗ್ಗೆ ಯೌವನದ ಹುಮ್ಮಸ್ಸು. ತಾನು ಸೈನ್ಯಕ್ಕೆ ಸೇರಿ ಇಷ್ಟು ದಿನಗಳಾದರೂ ಉಗ್ರರೊಡನೆ ಸೆಣೆಸುವ ಅವಕಾಶ ಸಿಗಲಿಲ್ಲವಲ್ಲ ಎಂದು ಆತ ಹಪಹಪಿಸುತ್ತಿದ್ದ. ಅದನ್ನು ತನ್ನ ನಾಯಕ ಕರ್ನಲ್ ಗಿರೀಶ್ ಅವರ ಬಳಿ ಹೇಳಿಯೂ ಇದ್ದ. ಗಿರೀಶ್ ಅವನನ್ನು ಸಮಾಧಾನ ಮಾಡುತ್ತಿದ್ದರು. ಇದೀಗ ಉಗ್ರರೊಡನೆ ಸೆಣೆಸುವ ಅವಕಾಶ ಒದಗಿಬಂದಿತ್ತು. ಅನುಭವವಿಲ್ಲದ ಈ ಯುವಕ ಎಲ್ಲಿ ಗಡಿಬಿಡಿ ಮಾಡಿಬಿಡುತ್ತಾನೋ, ಆತುರದಲ್ಲಿ ಎಲ್ಲಿ ಕೆಲಸ ಕೆಡುತ್ತದೋ ಎಂದು ನಾಯಕ ಗಿರೀಶರಿಗೆ ಕಳವಳ. ಅದಕ್ಕಾಗಿಯೇ ನವದೀಪ್ಸಿಂಗ್ಗೆ ವಿಶೇಷವಾಗಿ ಕಿವಿಮಾತು ಹೇಳಿದ್ದ. ಅಲ್ಲಿದ್ದ ಸೈನಿಕ ತಂಡದಲ್ಲಿ ಎಲ್ಲರಿಗಿಂತ ಅತ್ಯಂತ ಕಿರಿಯ ನವದೀಪ್ಸಿಂಗನೇ. ಅವನನ್ನು ಅವರೆಲ್ಲರೂ ‘ಮಗು’ ಎಂದೇ ಸಂಬೋಧಿಸುತ್ತಿದ್ದರು.
ರಬ್ಬರ್ ದೋಣಿ ಎಲ್ಲ ಉಗ್ರರನ್ನೂ ಇಳಿಸಿದ ನಂತರ, ಅವರೆಲ್ಲರೂ ಒಂದು ವ್ಯೂಹವನ್ನು ರಚಿಸಿಕೊಂಡು ಮುನ್ನಡೆಯತೊಡಗಿದರು. ಒಟ್ಟು ಹದಿನಾಲ್ಕರಿಂದ ಹದಿನೈದು ಉಗ್ರರು ಇರುವರೆಂದು ಕಣ್ಗಾವಲು ತಂಡ ಮಾಹಿತಿ ನೀಡಿತು. ಪ್ರತಿಯೊಬ್ಬ ಉಗ್ರನ ಬೆನ್ನ ಮೇಲೊಂದು ಚೀಲ, ಕೈಯಲ್ಲಿ ಅಸಾಲ್ಟ್ ಮೆಷಿನ್ಗನ್, ಆತನ ಬೆರಳು ಕುದುರೆಯ ಮೇಲೆ. ಮೈಯೆಲ್ಲ ಕಣ್ಣಾಗಿಸಿಕೊಂಡು ಎಚ್ಚರಿಕೆಯಿಂದ ಅವರು ಹೆಜ್ಜೆ ಹಾಕುತ್ತಿದ್ದಾರೆ. ನವದೀಪ್ಸಿಂಗ್ ಮತ್ತು ಗಣಪತಿ ಅವರ ತಂಡದತ್ತಲೇ ಅವರು ಬರುತ್ತಿದ್ದಾರೆ. ಇವರಿಂದ ಕೇವಲ ಐನೂರು ಮೀಟರ್ ದೂರದಲ್ಲಿ ತಂಡ ಹೆಜ್ಜೆ ಹಾಕುತ್ತಿದ್ದಾಗಲೇ, ಸೈನಿಕನೊಬ್ಬ “ದಾಳಿ ಮಾಡಿ ಮುಗಿಸೋಣ” ಎಂದು ಆತುರ ತೋರಿದ. ನವದೀಪ್ ಸಿಂಗ್ ಖಡಕ್ಕಾಗಿ ತಿಳಿಸಿದ, “ಅವರು ಹತ್ತಿರ ಬರುವವರೆಗೂ ಕಾಯಬೇಕು. ನಾನು ಹೇಳುವವರೆಗೂ ಅಲುಗಾಡುವಂತಿಲ್ಲ.” ಗಣಪತಿ ತಂಡಕ್ಕೂ ನವದೀಪ್ ಸೂಚನೆ ನೀಡಿದ, “ನಾನು ತಿಳಿಸುವವರೆಗೂ ದಾಳಿ ಪ್ರಾರಂಂಭಿಸಬೇಡಿ. ನನ್ನ ಸೂಚನೆಗಾಗಿ ಕಾಯಿರಿ.” ಬಿಸಿರಕ್ತದ ಯುವಕನಾದರೂ ನವದೀಪ್ಸಿಂಗ್ ಅನುಭವಸ್ಥನಂತೆ ವ್ಯವಹರಿಸಿದ. ಅವನ ಸೂಚನೆಗಳು ಸ್ಪಷ್ಟವಾಗಿದ್ದವು, ಯಾವುದೇ ಗೊಂದಲವಿಲ್ಲ, ಕೇಳಿದವರು ಆತನ ಆದೇಶವನ್ನು ಪಾಲಿಸಲೇಬೇಕು ಎನ್ನುವ ಧ್ವನಿ. ಗಿರೀಶ್ ಅವರು ಸೂಚಿಸಿದ್ದಂತೆಯೇ ನವದೀಪ್ಸಿಂಗ್ ಯೋಜಿಸಿದ್ದರು. ಉಗ್ರರು ನವದೀಪ್ಸಿಂಗ್ ಮತ್ತು ಗಣಪತಿ ಅವರ ಹೊಂಚುದಾಳಿ ತಂಡಗಳ ನಡುವೆ ಬರುವವರೆಗೂ ಕಾದಿದ್ದು, ಎರಡೂ ಬದಿಯಿಂದ ಒಮ್ಮೆಗೇ ಅನಿರೀಕ್ಷಿತ ಆಘಾತ ನೀಡುವಂತೆ ಗಿರೀಶ್ ಆದೇಶ ಮಾಡಿದ್ದರು.
ಉಗ್ರರ ತಂಡ ಹತ್ತಿರ ಬರುತ್ತಿದೆ. ಇದೀಗ 100 ಮೀಟರ್ ದೂರದಲ್ಲಿದ್ದಾರೆ. ಮತ್ತಷ್ಟು ಹತ್ತಿರ ಬರಲೆಂದು ನವದೀಪ್ಸಿಂಗ್ ಸೂಚನೆ. ಇದೀಗ 50 ಮೀಟರ್, 25 ಮೀಟರ್, 10 ಮೀಟರ್, 5 ಮೀಟರ್! ಸೈನಿಕರು ಅಲ್ಲಿಗೆ ಬಂದು ವ್ಯೂಹ ರಚಿಸಿ ಬೇಟೆಗಾಗಿ ಕೂತದ್ದು ಮಧ್ಯರಾತ್ರಿಗೆ ಕೆಲವೇ ನಿಮಿಷಗಳ ಮೊದಲು 11:45ಕ್ಕೆ. ಈಗ ಸಮಯ ಮಧ್ಯರಾತ್ರಿ 12:03. ಹೆಚ್ಚು ಸಮಯವೇನೂ ಉಳಿದಿಲ್ಲ. ಆದರೂ ನಿಮಿಷಗಳು ಯುಗಗಳಂತೆ ಸರಿಯುತ್ತಿವೆ. ಎಲ್ಲಿ ಉಗ್ರರು ತಮ್ಮನ್ನು ನೋಡಿಬಿಡುತ್ತಾರೋ, ಅವರೇ ತಮ್ಮ ಮೇಲೆ ದಾಳಿ ಮಾಡಿಬಿಡುತ್ತಾರೋ ಎಂದು ಸೈನಿಕರಲ್ಲಿ ಆತಂಕ. ಉಗ್ರರು 5 ಮೀಟರ್ ದೂರದಲ್ಲಿದ್ದಾಗ ನವದೀಪ್ಸಿಂಗ್ ದಾಳಿ ಮಾಡಲು ತಮ್ಮ ತಂಡಕ್ಕೆ ಸೂಚಿಸಿದ, ಗಣಪತಿ ಅವರ ತಂಡಕ್ಕೂ ಸೂಚಿಸಿದ.
ಈ ಅನಿರೀಕ್ಷಿತ ಆಘಾತದಿಂದ ಉಗ್ರರು ಬೆಚ್ಚಿದರು. ಎರಡು ಹೊಂಚುದಾಳಿ ತಂಡಗಳ ನಡುವೆ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡ ಪರಿಸ್ಥಿತಿ. ಏಕಾಏಕಿ ಎರಡೂ ಕಡೆಗಳಿಂದ ದಾಳಿ ನಡೆದಿದೆ – ಮುಂಭಾಗದಿಂದ ನವದೀಪ್ಸಿಂಗ್ ಅವರ ತಂಡ, ಹಿಂಭಾಗದಿಂದ ಗಣಪತಿ ಅವರ ತಂಡ. ನವದೀಪ್ಸಿಂಗ್ ಅವರ ಯೋಜನೆ ಫಲಿಸಿತ್ತು. ಮೊದಲ ಸುತ್ತಿನ ದಾಳಿಯಲ್ಲೇ ಎಂಟು ಉಗ್ರರು ಧರೆಗುರುಳಿದರು. ಮತ್ತೊಂದು ಹೊಂಚುದಾಳಿ ತಂಡವೂ ದಾಳಿಯನ್ನು ಆರಂಭಿಸಿತು. ಅದರ ಹೊಡೆತಕ್ಕೆ ಮತ್ತೆ ಮೂವರು ಉಗ್ರರು ಸತ್ತುಬಿದ್ದರು. ಕೆಲವೇ ನಿಮಿಷಗಳಲ್ಲಿ ಎಲ್ಲ ಉಗ್ರರೂ ನೆಲ ಕಚ್ಚಿದರು!
ತಾವು ಎಲ್ಲ ಉಗ್ರರನ್ನೂ ಸದೆಬಡಿದೆವು ಎಂಬ ಹುಮ್ಮಸ್ಸಿನಲ್ಲಿದ್ದಾಗಲೇ, ನೆಲದ ಮೇಲೆ ಬಿದ್ದಿದ್ದ ಉಗ್ರನೊಬ್ಬ ಎದ್ದು ಓಡಿದ! ಕತ್ತಲಿನಲ್ಲಿ ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ, ಆತ ಅಲ್ಲಿಯೇ ಹತ್ತಿರದಲ್ಲಿದ್ದ ಬಂಡೆಯೊಂದರ ಹಿಂದೆ ಅವಿತುಕೊಂಡು, ಅಲ್ಲಿಂದಲೇ ಗ್ರೆನೇಡೊಂದನ್ನು ಎಸೆದ. ಅದು ನವದೀಪ್ಸಿಂಗ್ ಅವರ ತಂಡ ಕುಳಿತಿದ್ದ ಹಳ್ಳಕ್ಕೇ ನೇರವಾಗಿ ಬಂದು ಬಿದ್ದಿತು. ಎಲ್ಲರೂ ತಕ್ಷಣವೇ ಹೊರ ಹಾರಿಕೊಂಡರೂ, ಗ್ರೆನೇಡಿನ ಸಿಡಿತದಿಂದ ಹೊರಟ ಲೋಹದ ತುಂಡುಗಳು ಕೆಲವು ಸೈನಿಕರನ್ನು ಗಾಯಗೊಳಿಸಿದವು. ನವದೀಪ್ಸಿಂಗ್ರ ಜೊತೆಗಾರ ವಿಜಯ್ ಅವರ ಭುಜಕ್ಕೆ ಬಲವಾದ ಗಾಯವಾಗಿ ರಕ್ತ ಚಿಮ್ಮಿತು.
ಈ ಘಟನೆ ಎಲ್ಲರಿಗೂ ಅನಿರೀಕ್ಷಿತವಾಗಿತ್ತು. ನವದೀಪ್ಸಿಂಗ್ ಅವರು ಕೂಡಲೇ ವಿಜಯ್ ಅವರ ಸಹಾಯಕ್ಕೆ ಧಾವಿಸಿ, ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಸುರಕ್ಷಿತ ತಾಣದಲ್ಲಿ ಇಳಿಸಿದರು. ಅನಂತರ ಅವರ ಗಮನ ಅಡಗಿಕೊಂಡಿದ್ದ ಉಗ್ರನತ್ತ ಹೋಯಿತು. ಆತನೆಡೆಗೆ ಸತತವಾಗಿ ಗುಂಡು ಹಾರಿಸತೊಡಗಿದರು. ಆತನು ಅಡಗಿದ್ದ ಸ್ಥಳ ಹೇಗಿತ್ತೆಂದರೆ, ಸೈನಿಕರ ಒಂದು ಗುಂಡೂ ಅವನನ್ನು ತಲಪುತ್ತಿರಲಿಲ್ಲ! ಆತನನ್ನು ಹೇಗಾದರೂ ಮುಗಿಸಬೇಕೆಂದು ನಿರ್ಧರಿಸಿದ ನವದೀಪ್ಸಿಂಗ್, ತಮ್ಮ ಸ್ಥಳದಿಂದಲೇ ತಲೆಯನ್ನು ಸ್ವಲ್ಪ ಎತ್ತರಿಸಿ, ಆತನಿರುವ ಸ್ಥಳದತ್ತ ದೃಷ್ಟಿ ಹಾಯಿಸಿದರು. ಅದೇ ಕ್ಷಣದಲ್ಲಿ ಉಗ್ರನೂ ಇವರತ್ತ ಗುಂಡು ಹಾರಿಸಿದ್ದ. ಅದು ನವದೀಪ್ಸಿಂಗ್ ಅವರ ತಲೆಯನ್ನೇ ತೂರಿಕೊಂಡು ಹೋಯಿತು, ಅವರು ಅಲ್ಲೇ ಕುಸಿದುಬಿದ್ದರು. ತಲೆಗೆ ಗುಂಡು ಬಡಿದ ಕ್ಷಣದಲ್ಲೇ, ತಮ್ಮ ಕೈಯಲ್ಲಿದ್ದ ಮೆಷಿನ್ಗನ್ನಿನ ಕುದುರೆ ಅಮುಕಿದ್ದರು ನವದೀಪ್ಸಿಂಗ್. ಆಘಾತದ ಸಮಯದಲ್ಲೂ ಅದೂ ಗುರಿ ತಪ್ಪಲಿಲ್ಲ, ಉಗ್ರನ ಮುಖವನ್ನೇ ಅಪ್ಪಳಿಸಿತು, ಆತನನ್ನು ಆಹುತಿ ಪಡೆಯಿತು.
ಕೇವಲ ಐದು ನಿಮಿಷದಲ್ಲಿ ಕಾರ್ಯಾಚರಣೆ ಮುಗಿದಿತ್ತು, ಎಲ್ಲ ಉಗ್ರರೂ ನಾಶಗೊಂಡಿದ್ದರು. ಆದರೆ, ಧೀರ ಯೋಧನೊಬ್ಬ ಹುತಾತ್ಮನಾಗಿದ್ದ.
ಬೆಳಗಾಗುವವರೆಗೂ ಎಲ್ಲ ಉಗ್ರರು ಹತರಾಗಿದ್ದಾರೆಯೇ, ಮತ್ತೆ ಯಾರಾದರೂ ಅಡಗಿಕೊಂಡಿದ್ದಾರೆಯೇ, ಎಂಬುದಾವುದೂ ಖಚಿತವಾಗುವುದಿಲ್ಲ. ಬೆಳಕಾಗುವವರೆಗೆ ಎಲ್ಲ ಸೈನಿಕರೂ ಅದೇ ಪ್ರದೇಶದಲ್ಲಿ ನಿಗಾ ಇಟ್ಟು ಕಾದರು. ಬೆಳಗಾಗುತ್ತಲೇ ಎಲ್ಲೆಡೆ ಹುಡುಕಾಟ ನಡೆಸಿದರು. ಒಂದೆಡೆಯಲ್ಲಿ ದಾರಿಯುದ್ದಕ್ಕೂ ರಕ್ತ ಸೋರಿರುವುದು ಕಂಡಿತು. ಗಾಯಗೊಂಡ ಉಗ್ರರು ಹೇಗೋ ತಪ್ಪಿಸಿಕೊಂಡು ಹೋಗಿರಬೇಕು ಎಂದು ಊಹಿಸಿದರು. ಹಾಗೆ ಗಾಯಗೊಂಡ ಉಗ್ರರು ಸಾಮಾನ್ಯವಾಗಿ ಗಡಿ ದಾಟಿ ವಾಪಸ್ ಹೋಗಲು ಪ್ರಯತ್ನಿಸುತ್ತಾರೆ, ಒಳಗೆ ಹೋಗುವುದಿಲ್ಲ. ಈ ವಿಷಯ ಅರಿತಿದ್ದ ಸೈನಿಕರು, ಸುತ್ತಲಿನ ಪ್ರದೇಶಗಳ ಮೇಲೆ ವಿಶೇಷ ಗಮನವಹಿಸಿ ಕಾದರು. ಅವರ ಊಹೆ ನಿಜವಾಗಿತ್ತು. ಎರಡು ದಿನಗಳ ನಂತರ, ಆಗಸ್ಟ್ 22ರಂದು ಉಗ್ರನೊಬ್ಬ ಮರದ ಹಿಂದೆ ಅಡಗಿರುವುದನ್ನು ತಂಡವು ಪತ್ತೆಹಚ್ಚಿತು. ಹವೀಲ್ದಾರ್ ಜೋರೆ ಬಾಪು ಭಾಗೋಜಿ ಎಂಬ ಯೋಧನು ಆ ಉಗ್ರನ ಮೇಲೆ ಗುಂಡು ಹಾರಿಸಿ ನೆಲಕ್ಕುರುಳಿಸಿದನು. ಅಲ್ಲಿಗೆ ಹದಿಮೂರನೇ ಉಗ್ರನು ನಾಶಗೊಂಡಿದ್ದ.
ಭಾರತದ ರಾಷ್ಟ್ರಧ್ವಜದಲ್ಲಿ ಸುತ್ತಿ ನವದೀಪ್ಸಿಂಗ್ನ ದೇಹವನ್ನು ಅವರ ಮನೆಗೆ ತರಲಾಯಿತು. ಅದನ್ನು ಸ್ವೀಕರಿಸಿದ ತಂದೆ ಸುಬೇದಾರ್ ಜೋಗೀಂದರ್ಸಿಂಗ್ ಅವರ ಬಾಯಿಂದ ಬಂದ ಉದ್ಗಾರವೆಂದರೆ: “ನನ್ನ ಮಗ ಸರಿಯಾಗಿ ಹೋರಾಡಿದ ತಾನೆ? ಅವನು ಚೆನ್ನಾಗಿಯೇ ಹೋರಾಡಿರುತ್ತಾನೆ! ಎಷ್ಟು ಜನ ಉಗ್ರರನ್ನು ಆತ ಹೊಡೆದುರುಳಿಸಿದ?’’ ಮಗನನ್ನು ಕಳೆದುಕೊಂಡ ದುಃಖದ ಸಮಯದಲ್ಲೂ ಅವರ ಬಾಯಲ್ಲಿ ಧೀರ ನುಡಿಗಳೇ ಹೊರಬಂದವು.
ಭಾರತಸರ್ಕಾರ ನವದೀಪ್ಸಿಂಗ್ಗೆ ಶಾಂತಿ ಸಮಯದಲ್ಲಿ ನೀಡುವ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಅಶೋಕಚಕ್ರವನ್ನು ನೀಡಿ ಗೌರವಿಸಿತು.