‘ರಾಜಕೀಯಕ್ಕೆ ಹೋಗುವುದಿಲ್ಲ’ ಎಂದು ಬರೆದುಕೊಟ್ಟು ಬಿಡುಗಡೆಯಾಗಿ ಹೊರಬಂದ ಸಾವರಕರ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅವರು ಹಿಂದುಗಳಿಗೆ “ನೀವೆಲ್ಲ ಹೆಚ್ಚುಹೆಚ್ಚು ಸೈನ್ಯಕ್ಕೆ ಸೇರಿಕೊಳ್ಳಿ. ಆಗ ನಮ್ಮಲ್ಲಿ ಹೋರಾಟದ ಮನೋಭಾವ (fighting spirit) ಮೂಡುತ್ತದೆ. ಜೊತೆಗೆ ಬಂದೂಕು ಹಿಡಿಯುವುದು, ಹಿಡಿದು ನಾವೇನು ಮಾಡಬೇಕು ಎನ್ನುವುದು ತಿಳಿಯುತ್ತದೆ. ಇದು ಸ್ವಾತಂತ್ರ್ಯ ಚಳವಳಿಯನ್ನು ಮಾಡುವ ಹೊಸ ರೀತಿಯನ್ನು, ಹೊಸ ಮಾರ್ಗವನ್ನು ನಮಗೆ ತೋರಿಸಬಹುದು” – ಎಂದು ಕರೆಕೊಟ್ಟರು. ಸಾವರಕರ್ ಬಗೆಗಿನ ಅಪಪ್ರಚಾರಗಳು ಹಸಿಸುಳ್ಳುಗಳ ಕಂತೆಯೇ ಸರಿ. ಹೀಗೆ ಪ್ರಚಾರ ಮಾಡುವವರು ಸಾವರಕರರನ್ನು ಯಾರಿಗೆ ಹೋಲಿಸುತ್ತಾರೆ? ‘ನೆಹರು ಹಾಗೆ ಮಾಡಲಿಲ್ಲ…’ ಎಂದು ವೈಭವೀಕರಿಸುವವರು ನೆಹರು ಮಾಡಿದ ಅವಾಂತರಗಳ ಬಗೆಗೆ ಮಾತನಾಡದೆ ಮೌನವಹಿಸುವುದೇಕೆ?
ಸ್ವಾತಂತ್ರ್ಯಾನಂತರದಲ್ಲಿ ಮುಖ್ಯವಾಗಿ ೨೦೧೪ಕ್ಕೆ ಪೂರ್ವದಲ್ಲಿ ಸಾವರಕರ್ರನ್ನು ಕೀಳುಮಟ್ಟದಲ್ಲಿ ಬಿಂಬಿಸುವ ವ್ಯವಸ್ಥಿತ ಪ್ರಯತ್ನ ನಡೆಯಿತು. ಅದಕ್ಕಾಗಿ ಅವರು ಬಳಸಿಕೊಳ್ಳುತ್ತಿದ್ದುದು ಮತ್ತು ಪದೇ ಪದೇ ಹೇಳುತ್ತಿದ್ದುದು ‘ಸಾವರಕರ್ ಅವರು ಕ್ಷಮಾಪಣಾ ಪತ್ರ ಬರೆದುಕೊಟ್ಟರು’ ಎಂಬುದು. ಆದರೆ ವಾಸ್ತವವಾಗಿ, ಅವರು ಬ್ರಿಟಿಷರಿಗೆ ಬರೆದುಕೊಟ್ಟಿರುವುದು ಕ್ಷಮಾಪಣೆಯ ಬೇಡಿಕೆಯನ್ನಲ್ಲ; ತಾನು ರಾಜಕೀಯಕ್ಕೆ ಹೋಗುವುದಿಲ್ಲ – ಎಂಬುದನ್ನು. ಇದಕ್ಕೆ ಕಾರಣವೂ ಇಲ್ಲದಿಲ್ಲ.
ಸಾವರಕರ್ರಿಗೆ ಬ್ರಿಟಿಷರು ಎರಡು ಕರಿನೀರಿನ ಶಿಕ್ಷೆ, ಅಂದರೆ ೫೨ ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಅಂಡಮಾನ್ ಜೈಲಿನಲ್ಲಿ ಇರಿಸಿದ್ದರು. ಅಂಡಮಾನ್ ದ್ವೀಪ – ಅದು ಅತ್ಯಂತ ಹೆಚ್ಚು ಸೆಕೆ ಇರುವ ಪ್ರದೇಶ, ಸೆಕೆಯ ತೀವ್ರತೆ ಎಷ್ಟೆಂದರೆ ಅಲ್ಲಿ ಚಳಿಗಾಲ ಎಂಬುದೇ ಇಲ್ಲ. ಇಂತಹ ಸೆಕೆಯಲ್ಲಿ ಅವರು ಪ್ರಾಣಿಗಳಂತೆ ಗಾಣ ತಿರುಗಿಸಿ ಎಣ್ಣೆ ತೆಗೆಯಬೇಕಾಗಿತ್ತು.
ನಗರಗಳಲ್ಲಿ ಬೆಳೆದ ನಮಗೆ ಇದು ಅರ್ಥವಾಗುವುದು ಸ್ವಲ್ಪ ಕಷ್ಟ. ಅಂಡಮಾನ್ನಲ್ಲಿ ತುಂಬಾ ತೆಂಗು ಬೆಳೆಯುತ್ತದೆ. ಆ ಕೊಬ್ಬರಿಗಳನ್ನು ಸುಲಿದು, ದೊಡ್ಡ ತಿರುಗುವ ಯಂತ್ರ ‘ಗಾಣ’ದ ಸಹಾಯದಿಂದ ಎಣ್ಣೆ ತೆಗೆಯುತ್ತಿದ್ದರು. ಆ ಗಾಣಕ್ಕೆ ಎಮ್ಮೆ, ಕೋಣಗಳನ್ನು ಬಳಸಿ, ಅದೂ ಎರಡೆರಡು ಕೋಣಗಳನ್ನು ಕಟ್ಟುತ್ತಿದ್ದರು. ಆ ಕೋಣಗಳು ನಿರಂತರವಾಗಿ ಸುತ್ತುತ್ತಿರಬೇಕು, ಅವು ಸುತ್ತಿದಂತೆ ಕೊಬ್ಬರಿಯಿಂದ ಎಣ್ಣೆ ಬರುತ್ತಿತ್ತು. ಅಂತಹ ಗಾಣಕ್ಕೆ ಸಾವರಕರ್ರನ್ನು ಕಟ್ಟಿ ಎಣ್ಣೆ ತೆಗೆಯುವಂತೆ ಬ್ರಿಟಿಷರು ಆದೇಶ ನೀಡಿದ್ದರು. ಹೀಗೆ ಸಾವರಕರ್ ದಿನನಿತ್ಯ ನಿರಂತರ ದಿನದ ೧೨ ಗಂಟೆಗಳ ಕಾಲ ಗಾಣವನ್ನು ಸುತ್ತಿ ಎಣ್ಣೆ ತೆಗೆಯಬೇಕಾಗಿತ್ತು. ರಾತ್ರಿಯೂ ಕಗ್ಗತ್ತಲ ಕೋಣೆಯೊಂದರಲ್ಲಿ ಕೂಡಿಹಾಕುತ್ತಿದ್ದರು. ಊಟತಿಂಡಿಯ ವ್ಯವಸ್ಥೆಯೂ ಸರಿಯಾಗಿರಲಿಲ್ಲ. ಹೀಗೆ ಸಾವರಕರ್ ಅವರು ಅಂಡಮಾನಿನಲ್ಲಿ ೧೨ ವರ್ಷಗಳ ಕಾಲ ನರಕಯಾತನೆ ಅನುಭವಿಸಿದರು.
ಅಷ್ಟು ಹೊತ್ತಿಗಾಗಲೇ ಅವರ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿತ್ತು. ಆಗ ಸಾವರಕರ್ ಆಲೋಚನೆ ಮಾಡಿದರು – ನಾನು ಇನ್ನು ಹೆಚ್ಚು ವರ್ಷ ಬದುಕಲಾರೆ, ಹೆಚ್ಚೆಂದರೆ ಇನ್ನು ಎರಡುಮೂರು ವರ್ಷ ಬದುಕಬಹುದು. ಆದರೆ ಕರಿನೀರಿನ ಶಿಕ್ಷೆ ೫೨ ವರ್ಷಗಳ ಕಾಲ; ಅಲ್ಲಿಯವರೆಗೆ ನಾನು ಬದುಕಿರಲಾರೆ. ಹೀಗೆ ಜೈಲಿನಲ್ಲಿ ನರಕಯಾತನೆ ಪಡುತ್ತ ಸಾಯುವುದರಿಂದ ಏನು ಸಾರ್ಥಕತೆ ಬಂದೀತು? ನಾನೇನು ಮಾಡಿದ ಹಾಗಾಯಿತು? ನಾನು ಯಾವ ಹಠಕ್ಕಾಗಿ ಇಲ್ಲಿ ಇದ್ದು, ಇಲ್ಲೇ ಸಾಯಬೇಕು? ಈ ರೀತಿ ಯಾಕೆ ಸಾಯಬೇಕು? – ಎಂದು.
ಬ್ರಿಟಿಷರೂ ‘ರಾಜಕೀಯಕ್ಕೆ ಹೋಗುವುದಿಲ್ಲ – ಎಂದು ಬರೆದುಕೊಟ್ಟಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ಒಂದು ಅವಕಾಶವನ್ನು ನೀಡಿದರು. ಕೊನೆಗೆ ಸಾವರಕರ್ ಅವರು ‘ನಾನು ರಾಜಕೀಯಕ್ಕೆ ಹೋಗುವುದಿಲ್ಲ’ ಎಂದು ಬರೆದುಕೊಟ್ಟರು. ಅವರ ಬಿಡುಗಡೆಯೂ ಆಯಿತು.
ಅವರು ‘ರಾಜಕೀಯಕ್ಕೆ ಹೋಗುವುದಿಲ್ಲ’ ಎಂದು ಏಕೆ ಬರೆದುಕೊಟ್ಟರು? ೧೨ ವರ್ಷಗಳಿಂದ ದೂರದ ಅಂಡಮಾನ್ ಜೈಲಿನಲ್ಲಿ ಕಠಿಣ ಶಿಕ್ಷೆ ಅನುಭವಿಸುತ್ತಿದ್ದರೂ ಅವರಿಗೆ ಅಂದಿನ ಭಾರತದ ಪರಿಸ್ಥಿತಿ ಬಹಳ ಚೆನ್ನಾಗಿ ಗೊತ್ತಿತ್ತು.
ಅದಕ್ಕೆ ಹಿಂದೆ ‘ಶಕ್ತಿಯನ್ನು ಬಳಸಿ ಸ್ವಾತಂತ್ರ್ಯವನ್ನು ಪಡೆಯಬೇಕು, ಕ್ರಾಂತಿಯಿಂದ ಸ್ವಾತಂತ್ರ್ಯ’ – ಎನ್ನುತ್ತಿದ್ದ ಹಲವರಿದ್ದರು. ಅವರಲ್ಲಿ ಬಹಳ ಪ್ರಮುಖರಾದವರು ಲೋಕಮಾನ್ಯ ತಿಲಕರು. ಆದರೆ ಬ್ರಿಟಿಷರು ತಿಲಕರನ್ನು ದೂರದ ಬರ್ಮಾಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಆರು ವರ್ಷಗಳ ಕಾಲ ಜೈಲಿನಲ್ಲಿಟ್ಟರು. ಆನಂತರ ಗಾಂಧಿಯುಗ ಬಂತು. ಗಾಂಧಿ ಅಹಿಂಸಾ ಮಾರ್ಗವನ್ನು ಹಿಡಿದರು. ಆ ವೇಳೆಗಾಗಲೇ ಭಾರತೀಯರಿಗೆ ಅದರಲ್ಲೂ ಮುಖ್ಯವಾಗಿ ಹಿಂದೂಗಳಿಗೆ ‘ಅಹಿಂಸೆ’ಯ ಹುಚ್ಚು ಹಿಡಿದಿತ್ತು. ‘ಅಹಿಂಸೆ’ ಎಂಬ ನಮ್ಮ ದೇಶದ ಒಂದು ಫಿಲಾಸಫಿಯನ್ನು ತಪ್ಪಾಗಿ ಜನಪ್ರಿಯಗೊಳಿಸಲಾಗಿತ್ತು. ಬೌದ್ಧರಿಂದ ಮುನ್ನೆಲೆಗೆ ಬಂದ ಈ ಅಹಿಂಸೆಯ ಹಾದಿಯನ್ನು ಗಾಂಧಿ ಹಿಡಿದರು. ಗಾಂಧಿ ಕಾಲದಲ್ಲಿ ಜೈಲಿಗೆ ಹೋಗುವುದು ಅಂತಹ ಹೆಚ್ಚಿನ ಸಂಕಟದ ನೋವಿನ ಸಂಗತಿಯೇನೂ ಆಗಿರಲಿಲ್ಲ. ಅಹಿಂಸಾತ್ಮಕ ಹೋರಾಟದಲ್ಲಿ ಕ್ರಿಮಿನಲ್ ಚಟುವಟಿಕೆಗಳು ನಡೆಯದೇ ಇರುತ್ತಿದ್ದುದರಿಂದ ಅವರಿಗೆ ತಕ್ಕಮಟ್ಟಿಗೆ ಊಟ, ಹೆಚ್ಚು ಕೆಲಸವೂ ಇಲ್ಲದ, ಓದು-ಬರಹಕ್ಕೆ ವ್ಯವಸ್ಥೆಯೂ ಇರುವ ಶಿಕ್ಷೆ ಕೊಡಲಾಗುತ್ತಿತ್ತು. ಶಿಕ್ಷೆ ಪೂರ್ಣವಾಗುವ ಮಧ್ಯದಲ್ಲಿಯೇ ಬಿಡುಗಡೆಯನ್ನೂ ಮಾಡಿಬಿಡುತ್ತಿದ್ದರು.
ಈ ಪರಿಸ್ಥಿತಿಯನ್ನು ಚೆನ್ನಾಗಿ ಅರಿತಿದ್ದ ಸಾವರಕರ್ ನಾನು ರಾಜಕೀಯಕ್ಕೆ ಹೋದರೂ ಇದೇ ಆಗುವುದು; ಇದರಿಂದ ಏನೂ ಪ್ರಯೋಜನವಿಲ್ಲ – ಎಂದು ನಿಶ್ಚಯಿಸಿ ‘ನಾನು ರಾಜಕೀಯಕ್ಕೆ ಹೋಗುವುದಿಲ್ಲ’ ಎಂದು ಕಾಗದ ಬರೆದುಕೊಟ್ಟು ಹೊರಬಂದರು. ಆಗ ‘ಗಾಂಧೀ ರಾಜಕೀಯ’ಕ್ಕೆ ವಿರುದ್ಧವಾಗಿ ಹೋದವರನ್ನು ಜನರೇ ಒಪ್ಪುತ್ತಿರಲಿಲ್ಲ. ಏಕೆಂದರೆ ನಮ್ಮಲ್ಲಿ ಪುಕ್ಕಲುತನ ಎಂಬುದು ಗಾಢವಾಗಿ ಬೆಳೆದೇ ಹೋಗಿತ್ತು.
ಡಾ. ಬಿ.ಆರ್. ಅಂಬೇಡ್ಕರ್ ಅವರು ೧೯೪೦ರ ದಶಕದಲ್ಲಿ ಬರೆದ ‘Thoughts on Pakistan’’ ಪುಸ್ತಕದಲ್ಲಿ ಬ್ರಿಟಿಷರು ಭಾರತದಲ್ಲಿ ತಮ್ಮ ಸೈನ್ಯವನ್ನು ಹೇಗೆ ಕಟ್ಟಿದ್ದಾರೆ – ಎಂಬುದನ್ನು ವಿವರಿಸಿದ್ದಾರೆ. ಬ್ರಿಟಿಷರು ಸೈನ್ಯಕ್ಕೆ ಹೆಚ್ಚಾಗಿ ನೇಪಾಳಿಗಳನ್ನೂ ಪಂಜಾಬಿಗಳನ್ನೂ ನೇಮಕ ಮಾಡಿಕೊಳ್ಳುತ್ತಿದ್ದರು. ಅದರಲ್ಲಿ ದಕ್ಷಿಣ ಭಾರತದವರು ಯಾರೂ ಇರಲೇ ಇಲ್ಲ. ದಕ್ಷಿಣ ಭಾರತೀಯರಿಗೆ ಸೇರ್ಪಡೆಯಾಗುವ ಆಸಕ್ತಿಯೂ ಇರಲಿಲ್ಲ – ಎಂಬುದನ್ನು ಅವರು ದಾಖಲೆಗಳೊಂದಿಗೆ ಆ ಪುಸ್ತಕದಲ್ಲಿ ಬರೆದಿದ್ದಾರೆ. ಹೀಗೆ ಪುಕ್ಕಲುತನದ, ಕ್ಷಾತ್ರಹೀನರ ಹಿಂದೂ ಸಮಾಜ ನಿರ್ಮಾಣವಾಗಿತ್ತು.
‘ರಾಜಕೀಯಕ್ಕೆ ಹೋಗುವುದಿಲ್ಲ’ ಎಂದು ಬರೆದುಕೊಟ್ಟು ಬಿಡುಗಡೆಯಾಗಿ ಹೊರಬಂದ ಸಾವರಕರ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅಂಬೇಡ್ಕರ್ ಅವರಿಗಿಂತ ಬಹಳ ಮೊದಲೇ ಇದನ್ನು ಅರಿತ ಸಾವರಕರರು ಈ ಕುರಿತು ಕಾರ್ಯಪ್ರವೃತ್ತರಾದರು. ಅವರು ಹಿಂದುಗಳಿಗೆ ಕರೆಕೊಟ್ಟರು: “ನೀವೆಲ್ಲ ಹೆಚ್ಚುಹೆಚ್ಚು ಸೈನ್ಯಕ್ಕೆ ಸೇರಿಕೊಳ್ಳಿ. ಆಗ ನಮ್ಮಲ್ಲಿ ಹೋರಾಟದ ಮನೋಭಾವ (fighting spirit) ಮೂಡುತ್ತದೆ. ಜೊತೆಗೆ ಬಂದೂಕು ಹಿಡಿಯುವುದು, ಹಿಡಿದು ನಾವೇನು ಮಾಡಬೇಕು ಎನ್ನುವುದು ತಿಳಿಯುತ್ತದೆ. ಇದು ಸ್ವಾತಂತ್ರ್ಯಚಳವಳಿಯನ್ನು ಮಾಡುವ ಹೊಸ ರೀತಿಯನ್ನು, ಹೊಸ ಮಾರ್ಗವನ್ನು ನಮಗೆ ತೋರಿಸಬಹುದು” – ಎಂದು.
ಹೀಗಾಗಿ ಸಾವರಕರ್ ಬಗೆಗಿನ ಅಪಪ್ರಚಾರ ಹಸಿಸುಳ್ಳುಗಳ ಕಂತೆಯೇ ಸರಿ. ಹೀಗೆ ಪ್ರಚಾರ ಮಾಡುವವರು ಸಾವರಕರರನ್ನು ಯಾರಿಗೆ ಹೋಲಿಸುತ್ತಾರೆ? – ಎಂಬುದನ್ನೂ ನಾವು ನೋಡಬೇಕು. “ನೆಹರು ಹಾಗೆ ಮಾಡಲಿಲ್ಲ…” ಎಂದು ವೈಭವೀಕರಿಸುತ್ತಾರೆ.
ನೆಹರು ಅವರ ಒಬ್ಬ ತಂಗಿ ಕೃಷ್ಣಾ ಹತೀಸಿಂಗ್. ಅವರು ಜೈಲಿನಲ್ಲಿದ್ದ ನೆಹರುವನ್ನು ಭೇಟಿ ಮಾಡುತ್ತಾರೆ. ಆಗ ನೆಹರು ಹೇಗಿದ್ದರು, ಅಂದರೆ ನೆಹರು ಅವರಿದ್ದ ಜೈಲನ್ನು ಅವರು ವರ್ಣಿಸುವುದು ಹೀಗೆ: “ದೊಡ್ಡ ಗಾಜಿನ ಕಿಟಕಿಗಳಿರುವ ಕೋಣೆ, ತಂಪಾದ ಹವಾ, ಬರೆಯಲು ದೊಡ್ಡ ಟೇಬಲ್, ಕುಳಿತುಕೊಳ್ಳಲು ಆರಾಮ ಖುರ್ಚಿ, ರೆಫರೆನ್ಸ್ ಮಾಡಲು ಬೇಕಾದ ಪುಸ್ತಕಗಳು, ಒಂದೇ ಒಂದು ಸೋಫಾ ಮತ್ತು ಮಲಗಲು ಮಂಚ. ನಮ್ಮ ಅಣ್ಣನ ಇಂತಹ ಬಡತನವನ್ನು ನೋಡಿ ನನಗೆ ಕಣ್ಣಲ್ಲಿ ನೀರು ಬಂತು” ಎಂದು ಬರೆದಿದ್ದಾರೆ. ಆ ಪುಸ್ತಕದ ಹೆಸರು ‘With No Regrets’ – ಎಂದು. ಈ ಪುಸ್ತಕವನ್ನು ದೇ. ಜವರೇಗೌಡ ಅವರು ಕನ್ನಡಕ್ಕೆ ‘ನೆನಪು ಕಹಿಯಲ್ಲ’ ಎಂಬ ಹೆಸರಿನಲ್ಲಿ ಸುಂದರವಾಗಿ ಅನುವಾದಿಸಿದ್ದಾರೆ. ಪ್ರತಿಯೊಬ್ಬರೂ ಖಂಡಿತವಾಗಿ ಓದಬೇಕು.
ಇನ್ನೊಂದು ಮುಖ್ಯ ವಿಷಯ ಏನೆಂದರೆ ನೆಹರು ಜೈಲಿನಲ್ಲಿದ್ದು ‘Discovery of India’ ಎಂಬ ಪುಸ್ತಕವನ್ನು ಬರೆದರು. ನೆಹರು ಬರೆದರು ಎಂಬ ಕಾರಣದಿಂದಲೇ ಅದು ಹೆಚ್ಚು ಪ್ರಸಿದ್ಧವಾಯಿತು. ಸಿನೆಮಾವನ್ನೂ ಮಾಡಲಾಯಿತು. ಎಲ್ಲೆಡೆ ಪ್ರಚಾರ ಪ್ರಸಿದ್ದಿಯನ್ನೂ ಪಡೆಯಿತು.
ಸ್ವಾತಂತ್ರ್ಯಚಳವಳಿ ನಡೆಸುತ್ತಿದ್ದ ನಮ್ಮವರು “ಬ್ರಿಟಿಷರೇ, ನೀವು ಹೊರಗಿನವರು. ನೀವು ಭಾರತ ಬಿಟ್ಟು ತೊಲಗಿ” ಎಂದು ಆಗ್ರಹಿಸುತ್ತಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಬ್ರಿಟಿಷ್ ಇತಿಹಾಸಕಾರರು ಭಾರತದ ಇತಿಹಾಸವನ್ನು ಬರೆದರು, ತಮ್ಮ ಪ್ರಭುತ್ವ ಮುಂದುವರಿಯಲು ಯಾವ ರೀತಿ ಅಗತ್ಯವೋ ಹಾಗೆ ಬರೆದರು. ಅವರು ಭಾರತದ ಇತಿಹಾಸವನ್ನು ಹೇಗೆ ಬರೆದರು ಎಂಬುದಕ್ಕೆ ಒಂದು ಉದಾಹರಣೆ. “ಹಿಂದೂಗಳ ಇತಿಹಾಸ ಎಂದರೆ ಅದು ವೇದಗಳು. ಆದರೆ ಆ ವೇದಗಳನ್ನು ಬರೆದಾಗ ಅವರು ಇಂಡಿಯಾ ದೇಶದೊಳಗೆ ಇರಲೇ ಇಲ್ಲ. ಅವರು ಆಫಘಾನಿಸ್ತಾನದಿಂದಲೂ ಆಚೆಕಡೆ ಇದ್ದರು. ಅಲ್ಲಿ ಬರೆದು, ಅನಂತರ ಅದನ್ನು ಭಾರತಕ್ಕೆ ತೆಗೆದುಕೊಂಡು ಬಂದರು. ಎಷ್ಟೋ ವರ್ಷಗಳ ಕಾಲ ಇಲ್ಲಿ ವಾಸಮಾಡಿದರು. ಅನಂತರ ಮುಸಲ್ಮಾನರು ಬಂದರು. ಹೊರಗಡೆಯಿಂದ ಬಂದ ಅವರೂ ನೂರಾರು ವರ್ಷಗಳ ಕಾಲ ಇಂಡಿಯಾದಲ್ಲಿ ಆಳ್ವಿಕೆ ನಡೆಸಿದರು. ಹೀಗೆಯೇ ನಾವೂ ಬಂದೆವು. ಈಗ ನೀವು ‘ನಾವು ಹೊರಗಡೆಯಿಂದ ಬಂದವರು’ ಎನ್ನುತ್ತಿದ್ದೀರಿ, ನೀವೂ ಹೊರಗಡೆಯಿಂದ ಬಂದವರು. ಇದಕ್ಕೇನು ಹೇಳುತ್ತೀರಿ?” ಎಂದು ಪ್ರಶ್ನಿಸಿದರು. ಹೀಗೆ ಅವರು ನಮ್ಮ ಇತಿಹಾಸವನ್ನು ತಿರುಚಿದರು. ಅದನ್ನೇ ಪ್ರಚಾರ ಮಾಡಿದರು. ಇಂತಹ ಬ್ರಿಟಿಷ್ ಇತಿಹಾಸಕಾರರು ಬರೆದ ದೊಡ್ಡದೊಡ್ಡ ಪುಸ್ತಕಗಳ ಆಧಾರದ ಮೇಲೆಯೇ ನೆಹರು ತಮ್ಮ ‘Discovery of India’ ಪುಸ್ತಕವನ್ನು ಬರೆದದ್ದು. ಈ ಮೂಲಕ ಬ್ರಿಟಿಷ್ ಇತಿಹಾಸಕಾರರಿಗೆ ಹಾಗೂ ಅವರ ಪುಸ್ತಕಗಳಿಗೆ ನೆಹರು ಅಧಿಕೃತತೆಯ ಮುದ್ರೆ ಒತ್ತಿದರು. ಅವುಗಳೇ ಭಾರತದ ಇತಿಹಾಸದ ಅಧ್ಯಯನ ಗ್ರಂಥಗಳಾದವು!
ಸ್ವಾತಂತ್ರ್ಯಾನಂತರ ಅಧಿಕಾರದಲ್ಲಿದ್ದವರು ವ್ಯವಸ್ಥಿತವಾಗಿ ಸಾವರಕರ್ರನ್ನು ಹೀನಾಯವಾಗಿ ಅವಹೇಳನ ಮಾಡಿದರು. ಅವರಿಗೆ ಇಂತಹ ನೆಹರು ಆದರ್ಶಪ್ರಾಯರಾಗಿದ್ದರು. ಮಾತುಮಾತಿಗೂ ‘ಸಾವರಕರ್ ಅವನೊಬ್ಬ ಪುಕ್ಕಲ. ನೆಹರು ಅವರೇನು ಹೀಗೆ ಕ್ಷಮಪಣೆ ಬರೆದುಕೊಟ್ಟರಾ?’ ಎಂದು ಹೋಲಿಸಲು ಪ್ರಾರಂಭಿಸಿದರು. ಏಕವಚನದಲ್ಲಿಯೂ ತೆಗಳಲಾಯಿತು. ಸಾವರಕರ್ ಹೆಸರನ್ನು ಯಾರೂ ಹೇಳದಂತೆ, ಹೇಳಿದವರನ್ನು ಹಳಿಯುವುದು – ಹೀಗೆ ವ್ಯವಸ್ಥಿತ ಷಡ್ಯಂತ್ರವೇ ನಡೆಯಿತು. ಈಗಲೂ ನಡೆಯುತ್ತಿದೆ.
ಪ್ರಾಸಂಗಿಕವಾಗಿ ಹೇಳಬಹುದಾದ್ದು – ನೆಹರು ಅವಾಂತರಗಳಲ್ಲಿ ಇನ್ನೊಂದು ಮೇಘಾಲಯವನ್ನು ಕ್ರೈಸ್ತೀಕರಣಗೊಳಿಸಿದ್ದು. ಇಂದು ಮೇಘಾಲಯದಲ್ಲಿ ಶೇ. ೧೦೦ರಷ್ಟು ಕ್ರೈಸ್ತರೇ ಇದ್ದಾರೆ. ಇದಕ್ಕೆ ಮುಖ್ಯ ಕಾರಣ ನೆಹರು. ಮೇಘಾಲಯ ಒಂದು ಅಭಿವೃದ್ದಿ ಹೊಂದದೇ ಇರುವ ಪ್ರದೇಶ. ಹಿಮಾಲಯದ ಕಾಡುಪ್ರದೇಶ. ಅಲ್ಲಿರುವವರು ಕಾಡುಗಳಲ್ಲಿರುವ ಬುಡಕಟ್ಟು ಜನಾಂಗಗಳು. ಸಾಮಾನ್ಯವಾಗಿ ಮಿಷನರಿಗಳು ಮೊದಲು ಬಡವರು, ಬುಡಕಟ್ಟು ಜನರನ್ನೇ ಹಿಡಿಯುತ್ತಾರೆ.
ಈ ಬುಡಕಟ್ಟು ಜನರಲ್ಲಿ ವೆರಿಯರ್ ಎಲ್ವಿನ್ ಎಂಬ ಒಬ್ಬ ಹೆಸರುವಾಸಿ ಮಾನವಶಾಸ್ತ್ರಜ್ಞ (Anthropologist) ಇದ್ದ. ನಾಗರಿಕತೆ ಬೆಳೆಯದೇ ಇರುವ ಜನರ ಕುರಿತು ಅಧ್ಯಯನ ಮಾಡುವುದಕ್ಕೆ ಆ್ಯಂತ್ರಪಾಲಜಿ ಎನ್ನುತ್ತಾರೆ. ಲಂಡನ್ನಲ್ಲಿ ಆ್ಯಂತ್ರಪಾಲಜಿ ಓದಿಕೊಂಡು ಭಾರತಕ್ಕೆ ಬಂದಿದ್ದ ಈತ ಒಬ್ಬ ಪಾದ್ರಿ. ಮತಾಂತರ ಮಾಡುವುದೇ ಈತನ ಉದ್ದೇಶ. ಮೇಘಾಲಯಕ್ಕೆ ಬಂದು ಅಲ್ಲಿ ಆಸ್ಪತ್ರೆ, ಇಂಗ್ಲಿಷ್ ಶಿಕ್ಷಣ ಕೊಡುವ ಶಾಲೆ ನಿರ್ಮಿಸಿದ. ಈತನಿಂದ ಪ್ರಭಾವಿತರಾದ ನೆಹರು ವೆರಿಯರ್ ಎಲ್ವಿನ್ನನ್ನು ಕರೆದು “ಈ ಜನರನ್ನು ನೀನು ಉದ್ಧಾರ ಮಾಡುತ್ತಿರುವ ಈ ಕೆಲಸ ಇನ್ನಷ್ಟು ಚೆನ್ನಾಗಿ ಮಾಡಬೇಕು. ಅದಕ್ಕೆ ಬೇಕಾದ ಎಲ್ಲ ಸಹಾಯ, ಹಣಕಾಸಿನ ವ್ಯವಸ್ಥೆ ಒದಗಿಸುತ್ತೇವೆ” – ಎಂದು ಕೋಟ್ಯಂತರ ರೂಪಾಯಿ ಹಣವನ್ನು ಆತನಿಗೆ ನೀಡಿದರು. ಈ ಕೋಟಿಗಟ್ಟಲೆ ಹಣವನ್ನು ಉಪಯೋಗಿಸಿ ಆತ ಬುಡಕಟ್ಟು ಜನರನ್ನು ಮತಾಂತರಿಸಿದ, ಮೇಘಾಲಯದ ನಂತರ ಒಡಿಸ್ಸಾಗೂ ಆಗಮಿಸಿ ಅಲ್ಲಿನ ಬುಡಕಟ್ಟು ಜನರನ್ನು ಮತಾಂತರಿಸಿದ. ಕೊನೆಗೊಂದು ದಿನ ಮೇಘಾಲಯದ ಜನರನ್ನೆಲ್ಲ ಎತ್ತಿಕಟ್ಟಿ ಅವರಿಂದ ‘ನಾವು ಒಂದು ಸ್ವತಂತ್ರವಾದ ದೇಶ ಮಾಡುತ್ತೇವೆ. ನಾವು ಭಾರತದೊಂದಿಗೆ ಸೇರುವುದಿಲ್ಲ’ – ಎಂಬ ದೊಡ್ಡ ಚಳವಳಿಯನ್ನೇ ಮಾಡಿಸಿದ. ಹೀಗೆ ನೆಹರು ದೂರದರ್ಶಿತ್ವ ಇಲ್ಲದೆ ಮಾಡಿದ ಹಲವು ಘೋರ ನಿದರ್ಶನಗಳನ್ನು ನಾವು ಕಾಣಬಹುದು. ದೇಶಕ್ಕೆ ಸಂಬಂಧಿತ ಸೂಕ್ಷ್ಮ ಸಂಗತಿಗಳನ್ನು ಅಲಕ್ಷ್ಯ ಮಾಡುವುದು ನೆಹರು ಸ್ವಭಾವವೇ ಆಗಿತ್ತು.
ಅನಂತರ ಇದರ ವಿರುದ್ಧ ಜನಾಕ್ರೋಶ, ಜನಾಭಿಪ್ರಾಯ ಹೆಚ್ಚಾದಾಗ ಎಲ್ವಿನ್ನನ್ನು ಬಂಧಿಸುವಂತೆ ಆದೇಶಿಸಿದರು. ಆದರೆ ಅದಾಗಲೇ ಆತ ಬ್ರಿಟನ್ಗೆ ಓಡಿಹೋಗಿದ್ದ. ಮಾತ್ರವಲ್ಲ ಅಲ್ಲಿಂದಲೇ ‘ಸ್ವತಂತ್ರ ಮೇಘಾಲಯ’ ರಾಜ್ಯವನ್ನು ಕಟ್ಟಿದ. ಅದು ಹೇಗೆ ಗೊತ್ತೆ? ಎರಡನೇ ಮಹಾಯುದ್ದದಲ್ಲಿ ಜರ್ಮನಿ ಫ್ರಾನ್ಸ್ನ್ನು ಸಂಪೂರ್ಣವಾಗಿ ಆಕ್ರಮಣ ಮಾಡಿತು. ಆಗ ಫ್ರಾನ್ಸ್ನ ಕಮಾಂಡರ್ ಇನ್ ಚೀಫ್ ಚಾರ್ಲ್ಸ್ ಡಿಗಾಲ್ ಬ್ರಿಟನ್ಗೆ ಆಗಮಿಸಿ ‘ತಾನು ಫ್ರಾನ್ಸ್ನಲ್ಲಿ ಸರ್ಕಾರವನ್ನು ರಚಿಸಿದ್ದೇನೆ ಹಾಗೂ ನಾನೇ ಫ್ರಾನ್ಸ್ ಸರ್ಕಾರದ ಅಧ್ಯಕ್ಷ’ ಎಂದು ಹೇಳಿಕೊಂಡ. ಇದಕ್ಕೆ ಬ್ರಿಟನ್, ಅಮೆರಿಕ ಮುಂತಾದ ದೇಶಗಳು ಮಾನ್ಯತೆ ನೀಡಿ, ಅವರಿಗೆ ಬೇಕಾದ ಮದ್ದುಗುಂಡುಗಳನ್ನು ಒದಗಿಸಿತು. ಬ್ರಿಟನ್, ಅಮೆರಿಕದ ರಾಜತಾಂತ್ರಿಕರು ಫ್ರಾನ್ಸ್ಗೆ ಭೇಟಿ ನೀಡಿದರು. ಇದನ್ನು ‘ಗವರ್ನ್ಮೆಂಟ್ ಇನ್-ಆ್ಯಬ್ಸೆನ್ಶಿಯಾ’ ಎನ್ನುತ್ತಾರೆ. ಬ್ರಿಟನ್ಗೆ ಹೋದ ವೆರಿಯರ್ ಎಲ್ವಿನ್ ಕೂಡಾ ಹಾಗೆ ಅಲ್ಲಿ ‘ಗವರ್ನ್ಮೆಂಟ್ ಇನ್-ಆ್ಯಬ್ಸೆನ್ಶಿಯಾ’ ಎಂದು ರಚನೆ ಮಾಡಿದ. ಬ್ರಿಟಿಷರು ಅದಕ್ಕೆ ಅವಕಾಶ ಕೊಟ್ಟರು.
ಆಗ ಭಾರತದಲ್ಲಿ ಅಧಿಕಾರಾರೂಢರು, ಮುಖ್ಯವಾಗಿ ನೆಹರು ಏನು ಮಾಡುತ್ತಿದ್ದರು? ಸಾವರಕರರನ್ನು ಹೇಡಿ ಎಂದು ಮಾತನಾಡುವಾಗ ಇದನ್ನು ನೆನಪು ಮಾಡಿಕೊಳ್ಳಲೇಬೇಕಾಗಿದೆ.
ನಾನು ಹೈಸ್ಕೂಲ್ ಓದುವಾಗ ತುಂಬಾ ಸಿನೆಮಾಗಳನ್ನು ನೋಡುತ್ತಿದ್ದೆ. ಆಗ ಯಾವುದೇ ಸಿನೆಮಾ ಪ್ರದರ್ಶನಗೊಳ್ಳುವ ಮೊದಲು ಥಿಯೇಟರ್ಗಳಲ್ಲಿ ‘ನ್ಯೂಸ್ ರೀಲ್’ ಎಂದು ಹಾಕುತ್ತಿದ್ದರು. ಅದು ಕಡ್ಡಾಯವಾಗಿತ್ತು. ಬಹುಶಃ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯೇ ಈ ನ್ಯೂಸ್ ರೀಲ್ನ್ನು ತಯಾರಿಸುತ್ತಿತ್ತು. ಅದು ಸುಮಾರು ೧೫ ನಿಮಿಷಗಳ ಕಾಲಾವಧಿಯದ್ದು. ಅದರಲ್ಲಿ ನೆಹರು ವಿಮಾನಕ್ಕೆ ಆಗಮಿಸುವುದು, ವಿಮಾನದಿಂದ ಕೆಳಕ್ಕಿಳಿಯುವುದು, ಅವರಿಗೆ ಹಾರಹಾಕಿ ಸ್ವಾಗತಿಸುವುದು, ಜನರೆಲ್ಲ ಜೈಕಾರ ಕೂಗುವುದು, ಅನಂತರ ಅವರು ಯೋಜನೆಗಳನ್ನು ಉದ್ಘಾಟನೆಗೊಳಿಸುತ್ತಿರುವ ಚಿತ್ರಗಳು – ಹೀಗೆ ನೆಹರುವನ್ನು ವೈಭವೀಕರಿಸುವ ೧೫ ನಿಮಿಷಗಳ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುತ್ತಿತ್ತು. ಇದನ್ನು ಸಿನೆಮಾ ನೋಡುವ ಎಲ್ಲರೂ ಕಡ್ಡಾಯವಾಗಿ ನೋಡುವಂತೆ ಮಾಡುತ್ತಿದ್ದರು. ಅದರಲ್ಲಿ ಬೇರಾವ ಮಂತ್ರಿನಾಯಕರನ್ನು ಸ್ವಲ್ಪವೂ ತೋರಿಸುತ್ತಿರಲಿಲ್ಲ, ಸರ್ದಾರ್ ಪಟೇಲರನ್ನು ಕೂಡಾ. ಹೀಗೆ ತೆರಿಗೆ ಹಣದಲ್ಲಿ ಸ್ವ-ಪ್ರಚಾರ ನಡೆಯಿತು. ಹೀಗೆ ಮಾಡಿ ವಂಶಪಾರಂಪರ್ಯ ಪ್ರಾರಂಭವಾಯಿತು.
‘ಸಾವರಕರ್ ಪುಕ್ಕಲ, ಪ್ರಯೋಜನ ಇಲ್ಲ’ ಎಂದು ಹೇಳುವ ಈ ಕಾಂಗ್ರೆಸ್ಸಿಗರು ಅವರು ಆರಾಧಿಸುವ ನೆಹರುವಿನ ವಾಸ್ತವ ಇತಿಹಾಸ ಏನು ಎನ್ನುವುದನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಚೀನಾ ನಮ್ಮ ಮೇಲೆ ಆಕ್ರಮಣ ಮಾಡಿದಾಗ ಏನಾಯಿತು ಎಂಬ ಕುರಿತು ‘ಹಿಮಾಲಯನ್ ಬ್ಲಂಡರ್’ ಮುಂತಾದ ಹತ್ತಾರು ಪುಸ್ತಕಗಳು ಬಂದಿವೆ. ಅದಕ್ಕೆ ಕಾರಣ ಯಾರು ಎಂಬುದನ್ನು ಕುರಿತು ಇವರಾರೂ ಮಾತನಾಡುವುದಿಲ್ಲ. ಚೀನಾಕ್ಕೆ ನೀಡಿದ ರಾಜೋಪಚಾರಗಳು, ಯುನೆಸ್ಕೋ ಮುಂತಾದೆಡೆ ಚೀನಾಕ್ಕೆ ಸ್ಥಾನ ಕೊಡಿಸಿದವರು ಯಾರು? – ಎಂಬುದನ್ನು ಕುರಿತು ಇವರು ಮಾತನಾಡುವುದಿಲ್ಲ. ತಮಗೆ ಸರಿಹೊಂದುವ ಕೆಲವೇ ಕೆಲವು ಅಂಶಗಳನ್ನು ಹಿಡಿದುಕೊಂಡು ಅದನ್ನೇ ಪ್ರಸಾರ ಮಾಡುವುದು – ಇದು ನಡೆಯುತ್ತಿದೆ. ಕೆಲವರನ್ನು ವೈಭವೀಕರಿಸುವುದು, ಕೆಲವರನ್ನು ಅವಹೇಳನ ಮಾಡುವುದು – ಈ ಸುಳ್ಳುಗಳು ನಮ್ಮ ದೇಶದ ರಾಜಕೀಯದಲ್ಲಿ ವ್ಯಾಪಕವಾಗಿವೆ.
ಭಾರತದ ರಾಜಕೀಯದಲ್ಲಿ ಇರುವಷ್ಟು ಸುಳ್ಳುಗಳು ಜಗತ್ತಿನ ಬೇರೆಲ್ಲಿಯೂ ಕಾಣಸಿಗುವುದಿಲ್ಲ. ಅಲ್ಲಿಯ ಜನರು ವಿದ್ಯಾವಂತರು ಮತ್ತು ಪ್ರಬುದ್ಧರು. ರಾಜಕೀಯವಾಗಿ ಅವರಿಗಿರುವಷ್ಟು ಶಿಕ್ಷಣ ನಮಗೆ ಈವರೆಗೆ ಆಗಿಲ್ಲ. ನಮಗೆ ಇನ್ನೂ ಜಾತಿ, ಮತ, ಪಂಥ ಇನ್ನಾವುದೋ ಕಾರಣಗಳೇ ಮುಖ್ಯವಾಗಿವೆ. ನಿಜವಾದ ಹೀರೋಗಳನ್ನು ಮಸುಕು ಮಾಡುವುದು – ಇದು ನಮ್ಮ ರಾಜಕೀಯದ ಸಹಜ ಸ್ವಭಾವವೇ ಆಗಿಹೋಗಿದೆ. ದೇಶದ ಸ್ವಾತಂತ್ರ್ಯಹೋರಾಟಕ್ಕಾಗಿ ಹೋರಾಟ ನಡೆಸಿದ ಸಾವರಕರ್, ನೇತಾಜಿ ಸುಭಾಷ್ಚಂದ್ರ ಬೋಸ್ ಅವರನ್ನೂ ನೂರಾರು ಅಜ್ಞಾತವ್ಯಕ್ತಿಗಳನ್ನೂ ಸ್ಮರಿಸಬೇಕಾದ ಹಾಗೂ ಅವರ ನೈಜಇತಿಹಾಸವನ್ನು ಜನಮನಕ್ಕೆ ಮುಟ್ಟಿಸುವ ಪ್ರಯತ್ನ ನಡೆಯಬೇಕಾಗಿದೆ. ಇದಕ್ಕಾಗಿ ಆಸಕ್ತರು ಆರ್.ಸಿ. ಮಜುಂದಾರ್ ಅವರ ‘ಹಿಸ್ಟರಿ ಆಫ್ ಫ್ರೀಡಂ ಮೂವ್ಮೆಂಟ್ ಇನ್ ಇಂಡಿಯಾ’ ಮೊದಲಾದ ಪುಸ್ತಕಗಳನ್ನು ಗಮನಿಸಬಹುದು.
{ಮೈಸೂರಿನ ಸಾವರ್ಕರ್ ಪ್ರತಿಷ್ಠಾನವು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ ‘ವೀರ ಸಾವರಕರ್ ಸಂಮಾನ್’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಡಾ. ಎಸ್.ಎಲ್. ಭೈರಪ್ಪ ಅವರು
ಮಾಡಿದ ಚಾಷಣದ ಲಿಖಿತರೂಪ.}
[ಭಾಷಣ ಸಂಗ್ರಹ: ಅನಿಲ್ಕುಮಾರ್ ಮೊಳಹಳ್ಳಿ]