ಅಮುಲ್ ಸಂಸ್ಥೆಯ ಸರ್ವತೋಮುಖ ಯಶಸ್ಸು ದೇಶಾದ್ಯಂತ ಅಲೆಗಳನ್ನು ಎಬ್ಬಿಸಿತು. ಗುಜರಾತ್ನ ಹಳ್ಳಿ ಮೂಲೆಯಿಂದ ಹಬ್ಬಿದ ಅಲೆ ಎಲ್ಲೆಡೆ ಪಸರಿಸಿತು. ‘ಆನಂದ್ ಪ್ಯಾಟರ್ನ್’ (ಮಾದರಿ) ನೋಡಲು ಜನ ಬಂದರು. ರೈತರಿಗೆ ಸಲ್ಲಬೇಕಾದ್ದನ್ನು ದಿಟ್ಟತನದಿಂದ ಪಡೆದವರೆಂದು ಕುರಿಯನ್ರನ್ನು ಗುರುತಿಸಿದರು. ಹಾಗೆ ಗುರುತಿಸಿದವರಲ್ಲಿ ಒಬ್ಬರು ೧೯೬೪ರ ಹೊತ್ತಿಗೆ ಕೇಂದ್ರದ ಜನಪ್ರಿಯ ಕೃಷಿ ಸಚಿವರಾಗಿದ್ದ ಸಿ. ಸುಬ್ರಹ್ಮಣ್ಯಮ್ ಅವರು. ದೆಹಲಿಯ ತಮ್ಮ ಕಚೇರಿಗೆ ಕರೆದ ಅವರು ಇದ್ದಕ್ಕಿದ್ದಂತೆ “ದೆಹಲಿಯ ಮಿಲ್ಕ್ ಸ್ಕೀಂನ (ಡಿಎಂಎಸ್) ಹೊಣೆಯನ್ನು ವಹಿಸಿಕೊಳ್ಳಬೇಕು” ಎಂದರು. ಕುರಿಯನ್ರಿಗೆ ಆಶ್ಚರ್ಯ.

೧೯೫೩ರ ಏಪ್ರಿಲ್ನಲ್ಲಿ ವರ್ಗೀಸ್ ಕುರಿಯನ್ ತಮ್ಮ ನ್ಯೂಜಿಲೆಂಡ್ ಅಧ್ಯಯನ ಪ್ರವಾಸವನ್ನು ಪೂರೈಸಿ ಮರಳಿದರು. ಆಗ ಅವರ ತಲೆಯಲ್ಲಿದ್ದ ಯೋಚನೆ ಒಂದೇ – ಹೊಸ ಡೈರಿಯನ್ನು ಸ್ಥಾಪಿಸುವುದು ಮತ್ತು ಹಾಲಿನ ಹುಡಿ ಉತ್ಪಾದಿಸುವುದು. ಇನ್ನೊಂದೆಡೆ ಮದುವೆ ಮಾಡಿಕೊಳ್ಳುವಂತೆ ಊರಿನಿಂದ (ಕೇರಳ) ತಾಯಿಯ ಒತ್ತಾಯ ಬರುತ್ತಲೇ ಇತ್ತು. ಅವರು ಹುಡುಗಿಯನ್ನು ಕೂಡ ನೋಡಿದ್ದರು; ಸೂಸಾನ್ ಮೊಲ್ಲಿ ಪೀಟರ್ ಆಕೆಯ ಹೆಸರು. ಆಕೆಯ ಹೆತ್ತವರು ಇವರ ಕುಟುಂಬಕ್ಕೆ ತೀರಾ ನಿಕಟವಾಗಿದ್ದವರು. ವರ್ಗೀಸ್ ಮತ್ತು ಮೊಲ್ಲಿಯ ತಂದೆ ಇಬ್ಬರೂ ಡಾಕ್ಟರ್; ಇವರು ಪರಸ್ಪರ ಇಷ್ಟಪಟ್ಟದ್ದು ಅಂಥದೇನೂ ಇಲ್ಲ. ಇನ್ನು ತಡಮಾಡುವಂತಿರಲಿಲ್ಲ. ತ್ರಿಭುವನದಾಸ್ ಮತ್ತು ದಲಾಯಾ ವಿದೇಶಕ್ಕೆ ಹೋಗುವವರಿದ್ದರು. ಅಷ್ಟರೊಳಗೆ ಮದುವೆ ನಡೆಯಬೇಕು. ಜೂನ್ ೧೫, ೧೯೫೩ರಂದು ತ್ರಿಶೂರಿನಲ್ಲಿ ಮದುವೆ ಎಂದಾಯಿತು; ಮದುವೆಯೂ ನೆರವೇರಿತು.
ರಜೆ ಏನೂ ಇಲ್ಲ. ಅದೇ ದಿನ ನವದಂಪತಿ ಮುಂಬಯಿಗೆ ಹೊರಟರು; ತ್ರಿಭುವನದಾಸ್ ಮತ್ತು ದಲಾಯಾ ಅವರನ್ನು ಬೀಳ್ಕೊಡುವುದಕ್ಕಾಗಿ. ಅಲ್ಲಿಂದ ಮರುದಿನ ಬೆಳಗ್ಗೆ ಆನಂದ್ನ ಮನೆಗೆ ಸೇರಿದರು. ಅವಸರದ ಮದುವೆ; ಸ್ನೇಹಿತರನ್ನು ಆಮಂತ್ರಿಸಿ ಕರೆದುಕೊಂಡು ಹೋಗುವುದಕ್ಕೂ ಆಗಲಿಲ್ಲ. ಇಲ್ಲಿ ಮನೆಗೆ ನವವಧುವನ್ನು ಸ್ವಾಗತಿಸುವುದಕ್ಕೆ ಕೂಡ ಯಾರೂ ಇರಲಿಲ್ಲ; ಪುಟ್ಟಮನೆ. ಅದನ್ನೆಲ್ಲ ನೆನಪಿಸಿಕೊಂಡು ಡಾ|| ಕುರಿಯನ್, “ಆರಂಭದ ವರ್ಷಗಳಲ್ಲಿ ಮೊಲ್ಲಿ ಹೇಗೆ ನಿಭಾಯಿಸಿದಳು ಎನಿಸುತ್ತದೆ. ಅವರಿಬ್ಬರು ಇಲ್ಲದ ಕಾರಣ ನನಗೆ ಪುರುಸೊತ್ತೇ ಇರಲಿಲ್ಲ. ೧೯೫೮ರವರೆಗೆ ಅಮುಲ್ ಡೈರಿಗೆ ತನ್ನದಾದ ಅತಿಥಿಗೃಹ ಇರಲಿಲ್ಲ. ಅದು ಸಣ್ಣ ಊರಾದ ಕಾರಣ ಅತಿಥಿಗಳು ನಮ್ಮ ಮನೆಗೇ ಬರುತ್ತಿದ್ದರು. ಅವರ ಊಟ, ತಿಂಡಿ, ವಸತಿ ವ್ಯವಸ್ಥೆ ಆಗಬೇಕು. ಮೊಲ್ಲಿ ಎಲ್ಲವನ್ನೂ ನಿರ್ವಹಿಸಿದಳು. ಆದರೆ ಆನಂದ್ನಲ್ಲಿ ಆಕೆಗೆ ಹಲವು ಅಸಾಮಾನ್ಯ ಸ್ನೇಹಿತರ ಬೆಂಬಲವಿತ್ತು. ಅವರಲ್ಲಿ ಒಬ್ಬರು ಮಣಿಬೆನ್ (ಸರ್ದಾರ್ ಪಟೇಲರ ಪುತ್ರಿ). ಅವರು ನಮ್ಮ ಕುಟುಂಬದ ಸದಸ್ಯೆ ಹಾಗೂ ತಾಯಿಯಂತೆಯೇ ಇದ್ದರು. ನಮ್ಮ ಎದುರಾಳಿ ಸಂಸ್ಥೆ ಪೋಲ್ಸನ್ನ ಮ್ಯಾನೇಜರ್ ವರಿಯಾವಾ ಕುಟುಂಬದವರು ಕೂಡ ಆತ್ಮೀಯರಾಗಿದ್ದರು” ಎಂದಿದ್ದಾರೆ.
ಹಾಲಿನ ಹುಡಿ ಬಗ್ಗೆ ಚಿಂತನೆ
ಕೈರಾ ಸಹಕಾರಿ ಯೂನಿಯನ್ ಬೆಳೆಯುತ್ತಲೇ ಇತ್ತು. ಚಳಿಗಾಲದಲ್ಲಿ ಹಾಲು ಹೆಚ್ಚಾಗುವ ಸಮಸ್ಯೆಯ ಪರಿಹಾರಕ್ಕಾಗಿ ನಾವೇ ಹಾಲಿನ ಪುಡಿ ತಯಾರಿಸಬೇಕೆಂದು ನಿರ್ಧರಿಸಿದೆವು. ಆಗ ವಿಶ್ವಸಂಸ್ಥೆಯ ಮಕ್ಕಳನಿಧಿಯ (ಯುನಿಸೆಫ್) ಪ್ರತಿನಿಧಿಗಳು ನಮ್ಮ ಸ್ಥಾವರಕ್ಕೆ ಭೇಟಿ ನೀಡಿದರು. ನಮ್ಮ ಸಮಸ್ಯೆಯನ್ನು ಕಂಡ ಅವರು ಹಾಲಿನಹುಡಿ ತಯಾರಿಸುವ ಡೈರಿ ಉಪಕರಣಗಳನ್ನು ಕೊಡುವುದಾಗಿ ಭರವಸೆ ನೀಡಿದರು. ಅವರ ಈ ಭರವಸೆಯನ್ನು ತಿಳಿದ ಮುಂಬಯಿ ಹಾಲು ಯೋಜನೆಯ (ಬಿಎಂಎಸ್) ದಾರಾ ಖುರೋಡಿ “ಎಮ್ಮೆ ಹಾಲಿನಿಂದ ಹುಡಿ ತಯಾರಿಸಲು ಬರುವುದಿಲ್ಲ. ಅದು ತಾಂತ್ರಿಕವಾಗಿ ಅಸಾಧ್ಯವೆಂದು ನ್ಯೂಜಿಲೆಂಡ್ನ ತಜ್ಞರು ಹೇಳಿದ್ದಾರೆ” ಎನ್ನುವ ಆತಂಕ ಒಡ್ಡಿದರು.
“ಇದರಲ್ಲಿ ನಾನು ಇನ್ನೊಂದು ಬೇಸರದ ಪಾಠ ಕಲಿತೆ. ಏನೆಂದರೆ ಸಾಮಾನ್ಯವಾಗಿ ‘ತಜ್ಞರ’ ತಾಂತ್ರಿಕ ಸಲಹೆಗಳಿಗೆ ಮುಂದುವರಿದ ದೇಶಗಳ ಆರ್ಥಿಕ ಹಿತಾಸಕ್ತಿಗಳು ಆಧಾರವಾಗಿರುತ್ತವೆಯೇ ಹೊರತು ಹಿಂದುಳಿದ ದೇಶದ ಆವಶ್ಯಕತೆಗಳು ಅಥವಾ ವಾಸ್ತವ ಸಂಗತಿಗಳು ಆಧಾರವಾಗಿರುವುದಿಲ್ಲ. ಅದೇ ರೀತಿಯಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ನ ತಜ್ಞರು ಎಮ್ಮೆ ಹಾಲಿನಿಂದ ಹಾಲಿನ ಹುಡಿ ತಯಾರಿಸಲು ಅಸಾಧ್ಯ ಎಂದರು” ಎಂದು ಕುರಿಯನ್ ದಾಖಲಿಸಿದ್ದಾರೆ.
ಯುನಿಸೆಫ್ ನಮಗೆ ಸಹಾಯ ಮಾಡುವ ಆಶಯವನ್ನು ಮುಂದುವರಿಸಿತು. ಆದರೆ ತಾವು ನೆರವಾಗಬೇಕಿದ್ದರೆ ಸ್ಥಾವರದ ವೆಚ್ಚದ ಒಂದೂವರೆ ಪಾಲಿನಷ್ಟು ಮೌಲ್ಯದ ಹಾಲನ್ನು ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಉಚಿತವಾಗಿ ನೀಡಬೇಕು; ಐದು ವರ್ಷದಲ್ಲಿ ಮರುಪಾವತಿ ಮಾಡಬೇಕು ಎನ್ನುವ ಶರತ್ತು ವಿಧಿಸಿತು. ಅವಿಭಜಿತ ಮುಂಬಯಿ ಪ್ರಾಂತದ ಮುಖ್ಯಮಂತ್ರಿ ಜೀವರಾಜ ಮೆಹ್ತಾ ಅವರು ಯುನಿಸೆಫ್ ಕೊಡುಗೆಯನ್ನು ಸ್ವೀಕರಿಸುವಂತೆ ಸಲಹೆ ನೀಡಿದರು. ಕೈರಾ ಯೂನಿಯನ್ ಅದಕ್ಕೆ ಒಪ್ಪಿಗೆ ನೀಡಿತು.
ಯುನಿಸೆಫ್ ಕೊಡುಗೆ
ಯೋಜನೆಗೆ ಅವಿಭಜಿತ ಮುಂಬಯಿ ಪ್ರಾಂತ ಹಾಲು ಕಮಿಷನರ್ ಅವರ ಅನುಮೋದನೆ ಬೇಕಿತ್ತು. ಅದಕ್ಕಾಗಿ ಕುರಿಯನ್ ಹೈನುಗಾರಿಕೆ ಸಚಿವರನ್ನು ಕಂಡರು; ಮತ್ತು ಅಂಧೇರಿ ಪ್ರಯೋಗಾಲಯದಲ್ಲಿ ದಲಾಯಾ ಅವರೊಂದಿಗೆ ಸೇರಿ ಎಮ್ಮೆ ಹಾಲಿನಿಂದ ಹಾಲಿನ ಹುಡಿ ತಯಾರಿಸಿ ತೋರಿಸಿದರು. ಸಚಿವರಿಗೆ ಕೂಡ ಅದರಿಂದ ಸಮಾಧಾನವಾಯಿತು. ಅಲ್ಲಿಗೆ ಹಾಲಿನ ಹುಡಿ ಸ್ಥಾವರ ಸ್ಥಾಪನೆಗೆ ಯುನಿಸೆಫ್ ನೆರವು ಲಭ್ಯವಾಯಿತು. ಹಾಲಿನ ಹುಡಿ ನೀರಿನಲ್ಲಿ ಚೆನ್ನಾಗಿ ಕರಗಿದ್ದಲ್ಲದೆ ಆ ಹಾಲಿನ ರುಚಿ ಹಾಲಿನಂತೆಯೇ ಇತ್ತು. ಬಾಂಬೆ ಸರ್ಕಾರ ಇವರ ಯೋಜನೆಗೆ ಒಪ್ಪಿಗೆ ನೀಡುವುದರೊಂದಿಗೆ ಕುರಿಯನ್ ತಂಡ ಜಯದ ಹುಮ್ಮಸ್ಸಿನೊಂದಿಗೆ ಆನಂದ್ಗೆ ಮರಳಿತು.
ಆದರೆ ಯುನಿಸೆಫ್ ಡಚ್ವೋಲ್ಮಾ ಹಾಲಿನ ಹುಡಿ ಸ್ಥಾವರವನ್ನು ನೀಡಲು ಮುಂದಾದಾಗ ಇನ್ನೊಂದು ಸಮಸ್ಯೆ ಎದುರಾಯಿತು. ಇವರಿಗೆ ಲಾರ್ಸನ್ ಅಂಡ್ ಟೂಬ್ರೋ ಯಂತ್ರ ಬೇಕಿತ್ತು. ಅದನ್ನು ಅವರಿಗೆ ತಿಳಿಸಿದಾಗ ‘ನೀವು ಕೇಳಿದ್ದನ್ನು ಕೊಡಲಾಗುವುದಿಲ್ಲ; ನಾವು ಕೊಟ್ಟುದನ್ನು ತೆಗೆದುಕೊಳ್ಳಬೇಕು’ ಎಂಬಂತೆ ಹೇಳಿದರು. ಕೇಂದ್ರ ಹಣಕಾಸು ಕಾರ್ಯದರ್ಶಿ (ಮುಂದೆ ಕೇಂದ್ರ ಸಚಿವರಾದವರು) ಎಚ್.ಎಂ. ಪಟೇಲ್ ಅವರನ್ನು ಸಂಪರ್ಕಿಸಿ ಸಮಸ್ಯೆಯನ್ನು ತಿಳಿಸಿದಾಗ, ಅದೇ ಮಾತನ್ನು ತಿರುಗಿಸಿ ‘ನಮಗೇನು ಬೇಕೆಂದು ನೀವು ಹೇಳುವುದಲ್ಲ’ ಎನ್ನುವಂತೆ ಸೂಚಿಸಿದರು. ಅದು ಕೆಲಸ ಮಾಡಿತು; ಬೇಕಾದ ಸ್ಥಾವರವೇ ಸಿಕ್ಕಿತು. ಇದರಿಂದ ‘ಸರಿಯಾದ ಕಾಲದಲ್ಲಿ ಕೇಳಿದರೆ ನಾವು ಕೇಳಿದ್ದು ಸಿಗುತ್ತದೆ ಎನ್ನುವ ಪಾಠ ಕಲಿತೆ’ ಎಂದಿದ್ದಾರೆ ಡಾ|| ಕುರಿಯನ್.
ಕೈರಾ ಯೂನಿಯನ್ನ ಹಳೆಯ ಡೈರಿ ರೈಲು ನಿಲ್ದಾಣದ ಎದುರು ತುಂಬ ಜನನಿಬಿಡ ಸ್ಥಳದಲ್ಲಿದ್ದು, ಹೊಸ ಸ್ಥಾವರಕ್ಕೆ ಹೊಸ ಜಾಗದ ಹುಡುಕಾಟ ನಡೆಯಿತು. ಆನಂದ್ನಲ್ಲಿ ಸರ್ಕಾರಿ ಡೈರಿಗಾಗಿ ಖುರೋಡಿ ಒಂದು ಜಾಗದ ಮೇಲೆ ಕಣ್ಣು ಹಾಕಿದ್ದರು; ಸಾಕಷ್ಟು ಪ್ರಯತ್ನದ ಬಳಿಕ ಅದು ಇವರಿಗೆ ದೊರೆತು, ಹೊಸ ಡೈರಿಯನ್ನು ಅಲ್ಲಿ ಸ್ಥಾಪಿಸಲಾಯಿತು.
ಹೊಸ ಡೈರಿಗೆ ಶಿಲಾನ್ಯಾಸ

ನವೆಂಬರ್ ೧೫, ೧೯೫೪ರಂದು ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಅವರು ಹೊಸ ಸ್ಥಾವರದ ಶಿಲಾನ್ಯಾಸವನ್ನು ನೆರವೇರಿಸಿದರು. ಮುಂದಿನ ವರ್ಷ ಸರ್ದಾರ್ ಪಟೇಲ್ ಜನ್ಮದಿನವಾದ ಅಕ್ಟೋಬರ್ ೩೧ರಂದು ಸ್ಥಾವರದ ಉದ್ಘಾಟನೆ ನೆರವೇರಿಸಬೇಕೆಂದು ನಿರ್ಧರಿಸಲಾಯಿತು. ಕೆಲಸ ಚುರುಕಾಗಿ ನಡೆಯಬೇಕಿತ್ತು. ರೈಲಿನಲ್ಲಿ ಪ್ರತಿದಿನ ೩೦-೪೦ ವ್ಯಾಗನ್ ಯಂತ್ರಗಳು, ಬಿಡಿಭಾಗಗಳು ಬರುತ್ತಿದ್ದವು; ಉಪಾಯವಾಗಿ ರೈಲ್ವೆಯವರ ಸಹಕಾರವನ್ನು ಪಡೆಯಲಾಯಿತು. ನಿರ್ಮಾಣಕ್ಕೆ ಬಂದ ಡ್ಯಾನಿಶ್ ಇಂಜಿನಿಯರ್ಗಳು ದಲಾಯಾ ಅವರ ಸಲಹೆ-ಸೂಚನೆಗಳನ್ನು ಕಿವಿ ಮೇಲೆ ಹಾಕಿಕೊಳ್ಳಲಿಲ್ಲವಂತೆ. ಆಗ ಅವರಿಗೆ ಕುರಿಯನ್ “ಅವರಾಡುವುದು ನನ್ನ ಮಾತು; ಅದು ನಿಮಗೆ ಸಂಬಳ ಕೊಡುವ ಮಾಲೀಕರ ಮಾತು. ದಲಾಯಾ ಅವರನ್ನು ಪ್ರಶ್ನಿಸಲು ನೀವು ಯಾರು?” ಎಂದು ನೇರವಾಗಿಯೇ ಕೇಳಿದರು. ಎರಡು ಬಾಯ್ಲರ್ಗಳನ್ನು ತರಿಸಿಕೊಂಡು ಕ್ರಮ ಪ್ರಕಾರ ನಿಲ್ಲಿಸಲಾಯಿತು.
ನೆಹರು ಅಪ್ಪುಗೆ
ಮುಖ್ಯಮಂತ್ರಿ ಮೊರಾರ್ಜಿ ದೇಸಾಯಿ ಅವರು ಉದ್ಘಾಟನೆಗೆ ನಾಲ್ಕು ದಿನ ಮುಂಚಿತವಾಗಿಯೇ ಬಂದರು. ಪ್ರಧಾನಿ ಜವಾಹರಲಾಲ್ ನೆಹರು ಅವರು ಉದ್ಘಾಟನೆಗೆ ಬಂದಾಗ ಅವರೊಂದಿಗೆ ಮಗಳು ಇಂದಿರಾ ಕೂಡ ಇದ್ದರು. ಕುರಿಯನ್ ಅವರ ಮನೆಯಲ್ಲೇ ವಾಸ್ತವ್ಯ. ಅವರು ಕೋಟಿಗೆ ಸಿಕ್ಕಿಸಿಕೊಳ್ಳುವ ಗುಲಾಬಿಯನ್ನು ಕೂಡ ಸಿದ್ಧಮಾಡಿ ಇಟ್ಟಿದ್ದರು. ಆದರೆ ನೆಹರು ತಾವಿದ್ದ ಕೊಠಡಿಯ ವೇಸ್ನಲ್ಲಿದ್ದ ಹೂವನ್ನೇ (ರೋಸ್) ಕೋಟಿಗೆ ಸಿಕ್ಕಿಸಿಕೊಂಡು ಹೊರಗೆ ಬಂದರಂತೆ. ಅನಂತರ ಅದನ್ನು ತೆಗೆದುಹಾಕಿ ಮೊಲ್ಲಿ ಅವರು ಸಿದ್ಧಪಡಿಸಿ ಇಟ್ಟುದನ್ನು ತೆಗೆದುಕೊಂಡರು. ಕುರಿಯನ್ ದಂಪತಿಯ ಆತಿಥ್ಯ ನೆಹರು ಅವರಿಗೆ ಇಷ್ಟವಾಯಿತು. ನಗುತ್ತಾ ಅವರು ಮೊಲ್ಲಿ ಅವರಲ್ಲಿ ಹೀಗೆ ಹೇಳಿದರಂತೆ: “ಶ್ರೀಮತಿ ಕುರಿಯನ್ ಅವರೆ, ಕ್ಲಿಯೋಪಾತ್ರ ಕತ್ತೆಯ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದಳಂತೆ; ನೀವು ಈಗ ಎಮ್ಮೆ ಹಾಲಿನಲ್ಲಿ ಸ್ನಾನ ಮಾಡಬಹುದು!”
ಹೀಗೆ ದೇಶದ ಆಧುನಿಕ ಡೈರಿ ಉತ್ಪನ್ನಗಳ ಮೊದಲ ಸ್ಥಾವರವು ಆನಂದ್ನಲ್ಲಿ ಸಾಕಾರಗೊಂಡಿತು. ಅಮುಲ್ನ ತ್ರಿಮೂರ್ತಿಗಳು ಇದರಲ್ಲಿ ದೊಡ್ಡ ರಿಸ್ಕನ್ನು ತಮ್ಮ ಮೇಲೆ ತೆಗೆದುಕೊಂಡಿದ್ದರು. ನನ್ನಮಟ್ಟಿಗೆ ಇದು ಸದಾ ನೆನಪಿಸುವ ಸಂಗತಿಯಾಯಿತು ಎಂದಿದ್ದಾರೆ ಡಾ|| ಕುರಿಯನ್. ಸಂತೋಷಗೊಂಡ ಪ್ರಧಾನಿ ನೆಹರು ಇವರನ್ನು ಅಪ್ಪಿಕೊಂಡು “ಕುರಿಯನ್, ನನಗೆ ಸಂತೋಷವೆಂದರೆ ನಮ್ಮ ದೇಶದಲ್ಲಿ ನಿಮ್ಮಂತಹ ಜನರಿದ್ದಾರೆ; ಇವರು ಎಂಥವರೆಂದರೆ ಕೆಲಸ ಅಸಾಧ್ಯವೆನಿಸುವಂತಿದ್ದರೆ ಕೂಡ ಧೈರ್ಯವಾಗಿ ಮುಂದೆ ಹೋಗಿ ಅದನ್ನು ಸಾಧಿಸುವವರು!” ಎಂದು ಉದ್ಗರಿಸಿದರು. ಇದು ಎಮ್ಮೆ ಹಾಲಿನಿಂದ ಹುಡಿ ತಯಾರಿಸುವ ಜಗತ್ತಿನ ಮೊದಲ ಸ್ಥಾವರ ಎಂದು ಮೊರಾರ್ಜಿ ದೇಸಾಯಿ ಬಣ್ಣಿಸಿದರು.
“ಹಲವರ ನೆರವಿಲ್ಲದಿದ್ದರೆ ಕೈರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಕ್ಕೆ ಈ ಹೊಸ ಸ್ಥಾವರವನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ಯುನಿಸೆಫ್ ೮ ಲಕ್ಷ ರೂ. ಮೌಲ್ಯದ ಯಂತ್ರಗಳನ್ನು ನೀಡಿತು. ಅದಕ್ಕೆ ನಾವು ೧೨ ಲಕ್ಷ ರೂ. ಮೌಲ್ಯದ ಹಾಲು ಮತ್ತು ಹಾಲಿನ ಹುಡಿಗಳನ್ನು ಮಕ್ಕಳು ಮತ್ತು ಗರ್ಭಿಣಿಯರಿಗೆ ಉಚಿತವಾಗಿ ನೀಡಬೇಕಿತ್ತು. ನ್ಯೂಜಿಲೆಂಡ್ ಸರ್ಕಾರವು ೩ ಲಕ್ಷ ರೂ. ಮೌಲ್ಯದ ಉಪಕರಣ ಮತ್ತು ಒಬ್ಬ ಶ್ರೇಷ್ಠ ಇಂಜಿನಿಯರ್ ಸೇವೆಯನ್ನು ಒದಗಿಸಿತು. ಬಾಂಬೆ ಸರ್ಕಾರ ೧೦ ಲಕ್ಷ ರೂ. ಸಾಲ ನೀಡಿತು. ಉಳಿದ ಹಣವನ್ನು ಕೈರಾ ಯೂನಿಯನ್ ತಾನೇ ಪೂರೈಸಿದ್ದು, ಒಟ್ಟು ವೆಚ್ಚ ೪೮ ಲಕ್ಷ ರೂ. ಆಗಿತ್ತು. ಇದು ಏಷ್ಯಾದ ಅತಿದೊಡ್ಡ ಡೈರಿಯಾಗಿದ್ದು ರೈತರು ಸ್ವಂತದ್ದಾದ ಡೈರಿ ಹೊಂದಬೇಕೆನ್ನುವ ಸರ್ದಾರ್ ಪಟೇಲರ ಕನಸು ಹೀಗೆ ಸಾಕಾರವಾಯಿತು” ಎಂದು ಕುರಿಯನ್ ಧನ್ಯತಾಭಾವವವನ್ನು ಪ್ರಕಟಿಸಿದ್ದಾರೆ.
ಬ್ರ್ಯಾಂಡ್ ನೇಮ್ ‘ಅಮುಲ್’
ಉತ್ಪಾದನೆಯ ಬೆನ್ನಿಗೇ ಬರುವಂಥದು ಮಾರಾಟ ಅಥವಾ ಮಾರುಕಟ್ಟೆ ವ್ಯವಸ್ಥೆ; ಅಲ್ಲಿಯ ಯಶಸ್ಸು ಕೂಡ ಅಷ್ಟೇ ಮುಖ್ಯವಾದದ್ದು. ಕೈರಾ ಸಹಕಾರಿ ಸಂಸ್ಥೆಯ ಉತ್ಪನ್ನಗಳಿಗೆ ಒಂದು ಉತ್ತಮ ಹೆಸರಾಗಬೇಕೆಂದು ಒಟ್ಟು ಕುಳಿತು ಚರ್ಚಿಸುವಾಗ ಅವರ ಪ್ರಯೋಗಾಲಯದ ಓರ್ವ ಕೆಮಿಸ್ಟ್ ‘ಅಮುಲ್’ ಆಗಬಹುದಲ್ಲವೆ ಎಂದು ಕೇಳಿದರು. ಅದು ಎಲ್ಲರಿಗೂ ಇಷ್ಟವಾಗಿ ಸ್ವೀಕೃತವಾಯಿತು. ೧೯೫೭ರಲ್ಲಿ ಕೈರಾ ಸಹಕಾರಿ ಯೂನಿಯನ್ ಆ ಹೆಸರನ್ನು ನೋಂದಾಯಿಸಿತು. ನಿರೀಕ್ಷೆಗಿಂತ ಬೇಗ ಆ ಹೆಸರು ದೇಶಾದ್ಯಂತ ಜನರ ನಾಲಗೆಯ ಮೇಲೆ ನಲಿದಾಡತೊಡಗಿತು. ‘ಅಮೂಲ್ಯ’ (ಬೆಲೆಕಟ್ಟಲಾಗದ್ದು) ಎನ್ನುವ ಪದದಿಂದ ಅಮೂಲ್ ಅಥವಾ ಅಮುಲ್ ಬಂದಿದೆ. ಮುಂದಿನ ಹೆಜ್ಜೆ ಜಾಹೀರಾತು ವ್ಯವಸ್ಥೆ ಮತ್ತು ಆ ಬಗ್ಗೆ ಸಂಸ್ಥೆ ಅಥವಾ ಸಂಸ್ಥೆಗಳ ಆಯ್ಕೆ. ಅದಕ್ಕೆ ಎರಡು ಲಕ್ಷ ರೂ. ಬೇಕೆಂದಾಗ ಹಳೆಕಾಲದವರೂ ಗಾಂಧಿವಾದಿಯೂ ಆದ ಸಂಸ್ಥೆಯ ಮುಖ್ಯಸ್ಥ ತ್ರಿಭುವನದಾಸ್ ಪಟೇಲರಿಂದ ಸಹಜವಾಗಿಯೇ ವಿರೋಧ ಬಂತು. ಕೊನೆಗೂ ಅವರು ಅದರ ಮಹತ್ತ್ವವನ್ನು ಅರ್ಥೈಸಿಕೊಂಡು ಪರ್ಸ್ ಬಿಚ್ಚಿದರು.
ಉದ್ಯಮದಲ್ಲಿ ಮುಂದುವರಿದಂತೆ ಡಾ|| ಕುರಿಯನ್ ಸಹಕಾರಿ ತತ್ತ್ವ ಮತ್ತು ಸಹಕಾರಿ ಸಂಸ್ಥೆಗಳ ಕಾರ್ಯನಿರ್ವಹಣೆ ಕುರಿತು ಆಳವಾಗಿ ಚಿಂತಿಸುತ್ತ ಹೋದರು. ಆಗ ಅವರಿಗೆ ಹೈನುಗಾರಿಕೆಗೆ ಸಹಕಾರಿ ವ್ಯವಸ್ಥೆಯು ಅತ್ಯಂತ ಯೋಗ್ಯವಾದದ್ದು ಎಂಬುದು ಖಾತ್ರಿಯಾಯಿತು. ಅದಕ್ಕೆ ಉದಾಹರಣೆ ಎಂಬಂತೆ ಬಂಡವಾಳಶಾಹಿಯ ರಾಜಧಾನಿ ಅಮೆರಿಕದಲ್ಲಿ ಡೈರಿ ಉದ್ಯಮದ ಶೇ. ೮೫ರಷ್ಟು ಸಹಕಾರಿ ರಂಗದಲ್ಲಿದೆ. ನ್ಯೂಜಿಲೆಂಡ್, ಡೆನ್ಮಾರ್ಕ್ ಮತ್ತು ಹಾಲೆಂಡ್ಗಳಲ್ಲಿ ನೂರಕ್ಕೆ ನೂರು ಸಹಕಾರಿ ವ್ಯವಸ್ಥೆಯ ಕೆಳಗಿದೆ. ಅಂದಿನ ಪಶ್ಚಿಮ ಜರ್ಮನಿ ಹೈನುಗಾರಿಕೆಯ ಶೇ. ೯೫ರಷ್ಟು ಸಹಕಾರಿ ರಂಗದಲ್ಲಿದೆ ಎನ್ನುವ ಕುರಿಯನ್, ಅದು ಭಾರತಕ್ಕೂ ಅನ್ವಯಿಸುತ್ತದೆ ಎಂಬುದನ್ನು ನಾವು ಅಮುಲ್ ಮೂಲಕ ಸಾಬೀತುಪಡಿಸಿದ್ದೇವೆ ಎಂದು ಹೇಳಿದ್ದಾರೆ.
ಒಂದು ಸಹಕಾರಿ ಸಂಸ್ಥೆಯು ವ್ಯವಹಾರದ ಸಂಸ್ಥೆ ಕೂಡ ಆಗಿದ್ದು ವ್ಯವಹಾರವನ್ನು ಸರಿಯಾಗಿ ನಡೆಸಬೇಕು ಎಂಬುದು ಡಾ|| ಕುರಿಯನ್ ಅವರ ಖಚಿತ ನಿಲವು. ಸಾಕಷ್ಟು ಸಮೀಪದಲ್ಲಿ ಮುಂಬಯಿ ಇದ್ದುದರಿಂದ ಆನಂದ್ನಲ್ಲಿ ಅಮುಲ್ ಬೆಳೆಯಲು ಸಾಧ್ಯವಾಯಿತು. ಸರಿಯಾದ ಮಾರುಕಟ್ಟೆ ಇದ್ದಾಗ ಮಾತ್ರ ಇನ್ನಷ್ಟು ಮತ್ತಷ್ಟು ಉತ್ಪಾದನೆ ಸಾಧ್ಯವಾಗುತ್ತದೆ. ಮುಂಬಯಿ ಇಲ್ಲದಿದ್ದರೆ ಆನಂದ್ ಇರುತ್ತಿರಲಿಲ್ಲ ಎಂದು ಅವರು ಮುಂಬಯಿ ಹಾಲು ಯೋಜನೆಗೆ(ಬಿಎಂಎಸ್) ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಬೆಣ್ಣೆಯಲ್ಲಿ ಯಶಸ್ಸು
ದ್ರವ ಹಾಲಿನಿಂದ ಹಾಲಿನ ಹುಡಿಗೆ ಮುಂದುವರಿದ ಕೈರಾ ಸಹಕಾರಿ ಯೂನಿಯನ್ ಬಹುಬೇಗ ಬೆಣ್ಣೆ ಉತ್ಪಾದನೆಯ ಕಡೆಗೆ ಗಮನಹರಿಸಿತು. ಅಲ್ಲಿಯತನಕ ಅದರಲ್ಲಿ ಪೋಲ್ಸನ್ ಸಂಸ್ಥೆಯ ಏಕಸ್ವಾಮ್ಯವಿತ್ತು. ಆಧುನಿಕ ತಂತ್ರಜ್ಞಾನವನ್ನು ಬಗಲಲ್ಲಿ ಇಟ್ಟುಕೊಂಡು ಹೊರಟ ಅಮುಲ್ ಬೆಣ್ಣೆ ಮಾರುಕಟ್ಟೆಗೆ ದೊಡ್ಡ ರೀತಿಯಲ್ಲೇ ಪ್ರವೇಶಿಸಿತು; ಅದರಲ್ಲಿ ಭಾರೀ ಯಶಸ್ಸನ್ನೂ ಕಂಡಿತು; ಅದರೊಂದಿಗೆ ಪಾಲ್ಸನ್ ಹಿಮ್ಮೆಟ್ಟಬೇಕಾಯಿತು.
ಆ ಹೊತ್ತಿಗೆ ಮುಂಬಯಿ ಪ್ರಾಂತದ ಮುಖ್ಯಮಂತ್ರಿ ವೈ.ಬಿ. ಚವಾಣ್ ಅವರು ಕೈರಾ ಡೈರಿಗೆ ಭೇಟಿ ಕೊಟ್ಟ ಘಟನೆ ಉಲ್ಲೇಖಾರ್ಹವೆನಿಸಿತು. ತಮ್ಮ ಹಿಂದಿನ ಭೇಟಿಯನ್ನು ನೆನಪಿಸಿಕೊಂಡ ಅವರು “ಕುರಿಯನ್ ಅವರೆ, ಹಿಂದೆ ನಾನು ಇಲ್ಲಿಗೆ ಉಪಮಂತ್ರಿಯಾಗಿ ಬಂದಾಗ ನೀವು ಸರ್ಕಾರದೊಂದಿಗೆ ಹಲವು ಸಮಸ್ಯೆಗಳು ಇರುವುದಾಗಿ ಹೇಳಿದಿರಿ. ಆಗ ಸಹಾಯ ಮಾಡಲು ನನಗೆ ಸಾಧ್ಯವಾಗಲಿಲ್ಲ. ಈಗ ನಾನು ಮುಖ್ಯಮಂತ್ರಿ. ನಿಮ್ಮ ಎಲ್ಲ ಸಮಸ್ಯೆಗಳನ್ನು ಹೇಳಿ; ಕೂಡಲೆ ಅದನ್ನು ಬಗೆಹರಿಸುವೆ” ಎಂದು ಆತ್ಮೀಯವಾಗಿ ತಿಳಿಸಿದರು. ಮಾತು ಕುರಿಯನ್ರನ್ನು ಆಳವಾಗಿ ಕಲಕಿತು; “ಈಗ ನನಗೇನೂ ಸಮಸ್ಯೆ ಇಲ್ಲ, ಸರ್” ಎಂದು ನಿವೇದಿಸಿಕೊಂಡರು.
ಕಾಲ ಕಳೆದಂತೆ ಕುರಿಯನ್ ಅವರಿಗೆ ದೇಶದ ನಿಜವಾದ ಸಮಸ್ಯೆ ಏನು ಎಂಬುದು ಅರ್ಥವಾಯಿತು. “ಆಡಳಿತ ಅಥವಾ ಅಭಿವೃದ್ಧಿ ಮೇಲಿನಿಂದ ಕೆಳಗೆ ಬರುವುದೇ ಇಲ್ಲಿಯ ಸಮಸ್ಯೆ. ಸ್ವಾತಂತ್ರ್ಯದೊಂದಿಗೆ ನಮಗೆ ಅಧಿಕಾರಶಾಹಿಯು ಬ್ರಿಟಿಷರ ಬಳುವಳಿಯಾಗಿ ಬಂತು. ಇದನ್ನು ಅವರು ಆಳುವುದಕ್ಕಾಗಿ ರೂಪಿಸಿದ್ದರೇ ಹೊರತು ಜನರ ಸೇವೆಗಲ್ಲ. ಸರ್ಕಾರಿ ಇಲಾಖೆಗಳ ಮೂಲಕ ಎಲ್ಲ ಕೆಲಸ ಮಾಡುವುದೇ ಬ್ರಿಟಿಷರ ಕಾರ್ಯವಿಧಾನ. ಸ್ವಾತಂತ್ರö್ಯ ಬಂದ ಅನಂತರ ನಾವದನ್ನು ಮುಂದುವರಿಸಿದೆವು. ದುರದೃಷ್ಟವೆಂದರೆ, ಇಲ್ಲಿಯ ಜನತೆ ಭಾರತದ ಅತಿದೊಡ್ಡ ಆಸ್ತಿ ಎಂಬುದನ್ನು ನಾವು ಮರೆತಿದ್ದೇವೆ. ಬುದ್ಧಿ ಇರುವ ಯಾವುದೇ ಸರ್ಕಾರ ತನ್ನ ಪ್ರಜೆಗಳ ಶಕ್ತಿಯನ್ನು ಬಳಸಿಕೊಳ್ಳಬೇಕು. ಕೆಲಸ ಅವರಿಂದ ನಡೆಯಬೇಕೇ ಹೊರತು ಸರ್ಕಾರಿ ನೌಕರಶಾಹಿಯಿಂದಲ್ಲ” ಎಂದವರು ದಾಖಲಿಸಿದ್ದಾರೆ; ಮುಂದುವರಿದು, ಜನಶಕ್ತಿ ಏನು ಮಾಡಬಹುದೆಂಬುದನ್ನು ನಾವು ಕೈರಾ ಯೂನಿಯನ್ನಲ್ಲಿ ತೋರಿಸಿದ್ದೇವೆ; ತ್ರಿಭುವನ ದಾಸ್ರಂತಹ ನಾಯಕರ ಮಾರ್ಗದರ್ಶನದಲ್ಲಿ ಜನ ಏನು ಮಾಡಬಲ್ಲರೆಂಬುದು ಇಲ್ಲಿ ಸಾಬೀತಾಗಿದೆ ಎಂದಿದ್ದಾರೆ; ಇಲ್ಲಿ ತ್ರಿಭುವನದಾಸ್ರೊಂದಿಗೆ ಡಾ|| ಕುರಿಯನ್ ಕೂಡ ಸೇರುತ್ತಾರೆಂದು ಪ್ರತ್ಯೇಕ ಹೇಳಬೇಕಾಗಿಲ್ಲ.
ನೆಸ್ಲೆ ಉದ್ಧಟತನ
೧೯೫೬ರಲ್ಲಿ ಡಾ|| ಕುರಿಯನ್ ಅವರಿಗೆ ದೈತ್ಯ ಕಂಪೆನಿ ನೆಸ್ಲೆಯೊಂದಿಗೆ ಮುಖಾಮುಖಿಯಾಗುವ ಒಂದು ಸಂದರ್ಭ ಕೂಡಿಬಂತು; ಅದಕ್ಕಾಗಿ ಸ್ವಿಜರ್ಲೆಂಡಿಗೆ ಹೋಗಬೇಕಾಯಿತು. ಆ ಕೆಲಸವನ್ನು ವಹಿಸಿದ್ದು ಭಾರತ ಸರ್ಕಾರದ ಕೈಗಾರಿಕಾ ಇಲಾಖೆಯವರು. ನೆಸ್ಲೆ ವತಿಯಿಂದ ಭಾರತದಲ್ಲಿ ಏನಾದರೂ ಮಾಡಬಹುದೆ ಎಂದು ಅದರ ಅಧಿಕಾರಿಗಳಲ್ಲಿ ಕೇಳುವಂತೆ ಕೈಗಾರಿಕೆ ಮತ್ತು ವಾಣಿಜ್ಯ ಮಂತ್ರಿ ಮನುಭಾಯಿ ಶಾ ಅಪೇಕ್ಷೆಪಟ್ಟರು. ಸಾಂದ್ರೀಕೃತ ಹಾಲಿನ (Condensed Milk) ನೆಪದಲ್ಲಿ ಸರ್ಕಾರ ಅಲ್ಲಿಂದ ಹಾಲಿನ ಹುಡಿಯಲ್ಲದೆ ಸಕ್ಕರೆ ಮತ್ತು ಕ್ಯಾನ್ ತಯಾರಿಸುವ ತಗಡು (Plate)ಗಳನ್ನು ಕೂಡ ಆಮದು ಮಾಡುತ್ತಿತ್ತು.
ಭಾರತದ ಹಾಲಿನಿಂದ ಸಾಂದ್ರೀಕೃತ ಹಾಲು ತಯಾರಿಸಲು ಸರ್ಕಾರ ನಿಮಗೆ ಲೈಸೆನ್ಸ್ ನೀಡಲು ಸಿದ್ಧವಿದೆ ಎಂದಾಗ ನೆಸ್ಲೆ ಅಧಿಕಾರಿ, “ಎಮ್ಮೆ ಹಾಲಿನಿಂದ ಸಾಂದ್ರೀಕೃತ ಹಾಲು ತಯಾರಿಸಲು ಬರುವುದಿಲ್ಲ” ಎಂದರು. ಅದಕ್ಕೆ ಕುರಿಯನ್ “ನಿಮಗೆ ಅದು ಗೊತ್ತಿಲ್ಲದಿದ್ದರೆ ನನ್ನೊಂದಿಗೆ ಬನ್ನಿ; ಮಾಡುವುದು ಹೇಗೆಂದು ಹೇಳಿಕೊಡುತ್ತೇನೆ” ಎಂದು ಉತ್ತರಿಸಿದರು. ಎಮ್ಮೆ ಹಾಲಿನಿಂದ ಅದನ್ನು ತಯಾರಿಸುವುದು ದನದ ಹಾಲಿಗಿಂತ ಕಷ್ಟ ಎಂದು ಒಪ್ಪುತ್ತೇನೆ. ಸಮಸ್ಯೆ ಇದೆ ನಿಜ; ಆದರೆ ಅದು ಮೀರಲಾಗದ ಸಮಸ್ಯೆ ಅಲ್ಲ ಎಂದಾಗ ನೆಸ್ಲೆ ಅಧಿಕಾರಿ “ಅದನ್ನು ನಾವೇ ಬಂದು ಮಾಡಬೇಕಾಗುತ್ತದೆ; ಇಡೀ ಶೇರು ಬಂಡಾವಳ ನಮ್ಮ ಕೈಯಲ್ಲಿರಬೇಕು” ಎಂದು ಹೇಳಿದರು. ಕುರಿಯನ್ ಅಷ್ಟೇ ನೇರವಾಗಿ ಭಾರತ ಸರ್ಕಾರ ಹೊರಗಿನವರಿಗೆ ಶೇ.೪೯ರಷ್ಟು ಶೇರು ಮಾತ್ರ ಕೊಡುತ್ತದೆ. ಶೇ.೫೧ನ್ನು ಹೊಂದುವಾತ ಭಾರತೀಯ ಆಗಿರಬೇಕು ಎಂದಾಗ ಅದಕ್ಕೆ ಅವರು ಒಪ್ಪಲಿಲ್ಲ. ಶೇ.೫೧ರಷ್ಟು ನೆಸ್ಲೆ ಇಂಡಿಯಾ ಬಳಿ ಇರುತ್ತದೆ ಎಂದಾಗ ಒಪ್ಪಲಾಯಿತು.
ದಿಟ್ಟತನದ ಮಾದರಿ
ಯೋಜನೆ ಬಗ್ಗೆ ಅವರ ತಜ್ಞರು ಬರುತ್ತಾರೆ ಎಂದಾಗ ಡಾ|| ಕುರಿಯನ್ “ತಜ್ಞರು ಎಷ್ಟು ಬೇಕಾದರೂ ಬರಲಿ. ಆದರೆ ಐದು ವರ್ಷದೊಳಗೆ ಭಾರತದವರಿಗೆ ತರಬೇತಿ ನೀಡಿ ಅವರು ನಿರ್ಗಮಿಸಬೇಕು” ಎಂದು ಸೂಚಿಸಿದರು. ಅದಕ್ಕೆ ನೆಸ್ಲೆ ಅಧಿಕಾರಿ “ಇದು ಬಹಳ ಸೂಕ್ಷö್ಮ ಕೆಲಸ. ಇಲ್ಲಿನವರು (Natives) ಕಲಿತು ಮಾಡಲಾಗದು; ಅವರಿಗೆ ವಹಿಸುವಂತಿಲ್ಲ” ಎಂದು ಕ್ಯಾತೆ ತೆಗೆದ. ಆಗ ಕುರಿಯನ್ರಿಗೆ ಸಿಟ್ಟೇರಿತು. ಮೇಜು ಗುದ್ದಿ ಗಟ್ಟಿಯಾಗಿ ಹೇಳಿದರು: “ನೆನಪಿಡಿ, ನೀವೀಗ ಒಬ್ಬ ನೇಟಿವ್ ಜೊತೆ ಮಾತನಾಡುತ್ತಿದ್ದೀರಿ. ಐದು ವರ್ಷದ ತರಬೇತಿ ಬಳಿಕವೂ ಇಲ್ಲಿನವರಿಗೆ ಅಧಿಕಾರ ವಹಿಸಿಕೊಳ್ಳಲು ಆಗುವುದಿಲ್ಲ ಎನ್ನುವುದಾದರೆ ನೀವು ನನ್ನ ದೇಶವನ್ನು ಅವಮಾನಿಸುತ್ತಿದ್ದೀರಿ ಎಂದರ್ಥ. ನೀವಿಲ್ಲದೆ ಹೇಗೆ ಮಾಡಬೇಕೆಂದು ನನ್ನ ದೇಶಕ್ಕೆ ಗೊತ್ತು” ಎಂದರಲ್ಲದೆ ಸಭೆಯಿಂದ ಎದ್ದು ಹೊರಗೆ ಬಂದರು.
ಭಾರತಕ್ಕೆ ಮರಳಿ ಅದನ್ನು ಮಂತ್ರಿ ಮನುಭಾಯಿ ಶಾ ಅವರಿಗೆ ತಿಳಿಸಿದರು. ಹಾಗಾದರೆ ಅದಕ್ಕೆ ಪರಿಹಾರ ಏನು ಎನ್ನುವ ಅವರ ಪ್ರಶ್ನೆಗೆ ಅಮುಲ್ ಸಂಸ್ಥೆಯೇ ಸಾಂದ್ರೀಕೃತ ಹಾಲು ತಯಾರಿಸುವುದು ಎಂದು ತಿಳಿಸಿದರು. ಕೆಲಸ ಆರಂಭಿಸಿ ಎರಡು ವರ್ಷ ಆಗುವಷ್ಟರಲ್ಲಿ ಅಮುಲ್ ಸಾಂದ್ರೀಕೃತ ಹಾಲಿನ ಉತ್ಪಾದನೆ, ಮಾರಾಟಗಳನ್ನು ಆರಂಭಿಸಿತು. ಅದಾಗುತ್ತಲೇ ಸಾಂದ್ರೀಕೃತ ಹಾಲಿನ ಆಮದು ನಿಷೇಧಿಸುವಂತೆ ಮಂತ್ರಿಯವರನ್ನು ಕೋರಿದಾಗ ಕೂಡಲೆ ಅದನ್ನು ಜಾರಿಗೊಳಿಸಿದರು.
ಕೆಲವು ವಾರ ಕಳೆಯುವಷ್ಟರಲ್ಲಿ ಮನುಭಾಯಿ ಶಾ ದೆಹಲಿಯಿಂದ ಕುರಿಯನ್ರಿಗೆ ಫೋನ್ ಮಾಡಿ “ನೆಸ್ಲೆಯ ಕೆಲವು ಅಧಿಕಾರಿಗಳು ಇಲ್ಲಿಗೆ ಬಂದಿದ್ದಾರೆ. ನನ್ನನ್ನು ನೋಡಬೇಕಂತೆ. ಈಗಾಗಲೆ ನಮ್ಮ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಇಲ್ಲೊಂದು ಸ್ಥಾವರ ಹಾಕುತ್ತಾರಂತೆ. ನೀವು ಹೇಳಿದ್ದೆಲ್ಲ ನನಗೆ ನೆನಪಿದೆ. ನೀವು ಕೊಟ್ಟ ಪರಿಚಯಪತ್ರವಿಲ್ಲದೆ ನಾನವರನ್ನು ಭೇಟಿ ಮಾಡುವುದಿಲ್ಲ. ನಿಮ್ಮ ಬಳಿಗೆ ಬಂದೇ ಬರುತ್ತಾರೆ. ದೇಶದ ಸಾಂದ್ರೀಕೃತ ಹಾಲಿನ ಪೂರ್ತಿ ಬೇಡಿಕೆಯನ್ನು ಅಮುಲ್ ಪೂರೈಸುತ್ತದೆಯೇ ಅಥವಾ ಅವರಿಗೆ ಅವಕಾಶ ನೀಡಬೇಕೇ ಎಂಬುದನ್ನು ನೀವೀಗ ನಿರ್ಧರಿಸಬೇಕು. ನೀವು ಪರಿಚಯಪತ್ರ ನೀಡದಿದ್ದರೆ ಅವರನ್ನು ನೋಡುವುದಿಲ್ಲ. ಹಾಗೆಯೆ ಕಳುಹಿಸುತ್ತೇನೆ; ನಿರ್ಧಾರ ನಿಮ್ಮದು” ಎಂದರು.
ಮರೆಯಲಾಗದ ಪಾಠ
ನಾಲ್ವರ ತಂಡ ಡಾ|| ಕುರಿಯನ್ ಅವರ ಬಳಿಗೆ ಬಂತು. ಅದರಲ್ಲಿ ‘ನೇಟಿವ್’ ಎಂದ ಕೀಬರ್ ಕೂಡ ಇದ್ದರು. ಮೊದಲು ಡೈರಿಗೆ ಕರೆದೊಯ್ದು ಹಾಲಿನ ಸ್ಥಾವರ ತೋರಿಸಿದ ಕುರಿಯನ್ “ಕೀಬರ್ ಅವರೆ, ‘ನೇಟಿವ್’ಗಳ ಬಗ್ಗೆ ಈಗ ಏನೆನಿಸುತ್ತದೆ?” ಎಂದು ಕೇಳಿದರು. ಆತನ ಮುಖ ಕೆಂಪಾಯಿತು. “ನನ್ನಿಂದ ತಪ್ಪಾಯಿತು. ಕ್ಷಮೆ ಕೇಳಲು ಬಂದಿದ್ದೇನೆ. ಭಾರತದ ಡೈರಿ ಅಭಿವೃದ್ಧಿಯಲ್ಲಿ ಭಾಗಿಯಾಗಲು ನಮಗೊಂದು ಅವಕಾಶ ಕೊಡಿ; ನೀವು ವಿಧಿಸುವ ನಿಯಮದಂತೆ ನಡೆದುಕೊಳ್ಳುತ್ತೇವೆ” ಎಂದು ಅಂಗಲಾಚಿದ. ಅದರಂತೆ ಮೋಗಾದಲ್ಲಿ ಸ್ಥಾವರ ನಿರ್ಮಿಸಲು ನೆಸ್ಲೆಗೆ ಅವಕಾಶ ನೀಡಲಾಯಿತು. ಈ ಸಂಬಂಧವಾಗಿ ಕುರಿಯನ್ “ನಮ್ಮ ದೇಶದ ಹಿತಾಸಕ್ತಿಗೆ ಪೂರಕವಾಗಿದ್ದಲ್ಲಿ ಮಾತ್ರ ವಿದೇಶಿ ಕಂಪೆನಿಗಳಿಗೆ ಅವಕಾಶ ನೀಡಬೇಕು. ಆ ಉದ್ಯಮಕ್ಕೆ ದೇಶದ ಬಂಡವಾಳ ಮತ್ತು ಜ್ಞಾನ ಇರದಿದ್ದಲ್ಲಿ ಮಾತ್ರ ಅವರು ಬರಲಿ” ಎಂದು ಅಭಿಪ್ರಾಯಪಟ್ಟಿದ್ದಾರೆ. “ನಮ್ಮ ಮಾರುಕಟ್ಟೆ ಇಡೀ ಯುರೋಪ್ನ ಮಾರುಕಟ್ಟೆಯಷ್ಟಿದ್ದು ಸರ್ಕಾರಗಳು ಇದನ್ನು ಸುಲಭವಾಗಿ ಬಿಟ್ಟು ಕೊಡಬಾರದು. ಅವರಿಗಿಂತ ಅಗ್ಗಕ್ಕೆ ಅವರಿಗಿಂತ ಉತ್ತಮವಾದುದನ್ನು ನೀಡುವುದೊಂದೇ ಇದಕ್ಕಿರುವ ದಾರಿ; ಡೈರಿ ಕ್ಷೇತ್ರದಲ್ಲಿ ಸಹಕಾರಿ ಸಂಘಗಳು ಅದನ್ನು ಮಾಡಿವೆ; ನೆಸ್ಲೆಯಂತಹ ದೈತ್ಯ ಕಂಪೆನಿಗಳ ಎದುರು ಕೂಡ ಜಯಿಸಿವೆ. ಈ ಸಹಕಾರಿ ಸಂಸ್ಥೆಗಳು ಇಲ್ಲದಿದ್ದರೆ ಈಗ ಕೂಡ ಭಾರತವು ಶಿಶುಆಹಾರ (ಬೇಬಿಫುಡ್), ಹಾಲಿನ ಹುಡಿ ಮತ್ತಿತರ ಡೈರಿ ಉತ್ಪನ್ನಗಳನ್ನು ಆಮದು ಮಾಡುತ್ತಿತ್ತು. ನಮ್ಮ ನೆರೆ ರಾಷ್ಟ್ರಗಳು ಹಾಗೆ ಮಾಡುತ್ತಿವೆ. ಹೀಗೆ ಹೇಳುವುದಕ್ಕೆ ನನಗೆ ಭಾರೀ ಹೆಮ್ಮೆ. ನಾವು, ನಮ್ಮ ರೈತರು ಮತ್ತವರ ಸಹಕಾರಿ ಸಂಘಗಳು ಡೈರಿ ಉತ್ಪನ್ನಗಳ ಮಟ್ಟಿಗೆ ವಿದೇಶಿ ಬಂಡವಾಳವನ್ನು ಪಳಗಿಸಿವೆ” ಎಂಬುದವರ ಸ್ವಾಭಿಮಾನದ ಮಾತು.
ಪೋಲ್ಸನ್ (Polson) ಸಂಸ್ಥೆಗೆ ಕೈರಾ ಸಹಕಾರಿ ಯೂನಿಯನ್ ಎದುರು ಸ್ಪರ್ಧೆಯಲ್ಲಿ ನಿಲ್ಲಲಾಗದಿದ್ದರೂ ತೊಂದರೆ ಕೊಡುವುದು ನಡೆದೇ ಇತ್ತು. ಜಗಳ ತಪ್ಪಿಸುವ ಹೆಸರಿನಲ್ಲಿ ಅದರ ಖುರೋಡಿ ಕೃಷಿ ಮಂತ್ರಿ ದಿನಕರರಾವ್ ಮುಂದೆ ಒಂದು ಪ್ರಸ್ತಾವ ಇಟ್ಟು ಹಾಲು ಸಂಗ್ರಹಿಸುವ ಬಗ್ಗೆ ಕೈರಾ ಜಿಲ್ಲೆಯನ್ನು ಎರಡು ವಿಭಾಗ ಮಾಡಬೇಕೆಂದು ಸೂಚಿಸಿದರು. ಈ ಖೆಡ್ಡಾಕ್ಕೆ ಬೀಳುವ ಅಪಾಯದಿಂದ ಎಚ್ಚೆತ್ತ ಡಾ|| ಕುರಿಯನ್ ತಾವು ಹಾಲು ಸಂಗ್ರಹಿಸುವ ಹಳ್ಳಿಗಳ ಪಟ್ಟಿ ಮಾಡಿ ಅದರ ನಕಾಶೆಯನ್ನು ಮಂತ್ರಿಗೆ ನೀಡಿದರು; ಅದು ಹೆಚ್ಚು ಹಾಲು ಸಿಗುವ ಹಳ್ಳಿಗಳಾಗಿದ್ದವು. ಅದಕ್ಕೆ ಖುರೋಡಿ ಆಕ್ಷೇಪಿಸಿದರಾದರೂ ಅದನ್ನು ಬದಲಿಸಲು ಮಂತ್ರಿ ಒಪ್ಪಲಿಲ್ಲ. ಇವರಿಗೆ ಹೆಚ್ಚಿನ ನಷ್ಟವಾಗಲಿಲ್ಲ.
ಟಿಟಿಕೆ ಸಹಾಯ
ಕೇಂದ್ರ ವಾಣಿಜ್ಯ ಮಂತ್ರಿ ಟಿ.ಟಿ. ಕೃಷ್ಣಮಾಚಾರಿ ಅವರು ಒಂದು ದಿನ ಅಮುಲ್ಗೆ ಭೇಟಿ ನೀಡಿ ಡೈರಿಯನ್ನೆಲ್ಲ ನೋಡಿ “ನನ್ನಿಂದ ಏನಾದರೂ ಸಹಾಯ ಬೇಕಾದರೆ ಕೇಳಿ; ಮಾಡಿಕೊಡುತ್ತೇನೆ” ಎಂದರು. ನ್ಯೂಜಿಲೆಂಡ್ ಮತ್ತು ಪೋಲ್ಸನ್ ಬೆಣ್ಣೆಗಳ ಸ್ಪರ್ಧೆಯಿಂದಾಗಿ ಆರಂಭದಲ್ಲಿ ಅಮುಲ್ ಬೆಣ್ಣೆ ಮಾರಲು ಕಷ್ಟವಿತ್ತು. ಟಿಟಿಕೆ ಅವರಿಗೆ ಪತ್ರ ಬರೆದು, ತಮ್ಮ ಕಷ್ಟವನ್ನು ತಿಳಿಸಿ ಬೆಣ್ಣೆ ಆಮದನ್ನು ಶೇ. ೨೫ರಷ್ಟು ಕಡಿತ ಮಾಡಲು ಸಾಧ್ಯವೇ ಎಂದು ಕೇಳಿದರು; ಅದಕ್ಕೆ ಕೂಡಲೆ ಒಪ್ಪಿಗೆ ಸಿಕ್ಕಿತು. ಆರು ತಿಂಗಳು ಕಳೆಯುವಾಗ ಇವರ ಬೆಣ್ಣೆ ಉತ್ಪಾದನೆ ತುಂಬ ಹೆಚ್ಚಾಯಿತು. ಮತ್ತೆ ಪತ್ರ ಬರೆದು ಆಮದು ಕಡಿತವನ್ನು ಶೇ. ೬೭.೫ಕ್ಕೆ ಏರಿಸುವಂತೆ ವಿನಂತಿಸಿಕೊಂಡರು. ಆಗ ಸರ್ಕಾರಕ್ಕೆ ವಿದೇಶಿ ವಿನಿಮಯದ ತೊಂದರೆಯೂ ಇತ್ತು. ಇವರ ಬೇಡಿಕೆ ಕೂಡಲೆ ಜಾರಿ ಆಯಿತು. ಮತ್ತೆ ೩-೪ ತಿಂಗಳಾಗುವಾಗ ಟಿಟಿಕೆ ಅವರೇ ಕುರಿಯನ್ರಿಗೆ ಪತ್ರ ಬರೆದು, ವಿದೇಶಿ ವಿನಿಮಯದ ತೀವ್ರ ಅಭಾವ ಇದೆ. ಬೆಣ್ಣೆ ಆಮದನ್ನು ಪೂರ್ತಿ ನಿಷೇಧಿಸಿದರೆ ಉತ್ಪಾದನೆಯನ್ನು ಇನ್ನಷ್ಟು ಏರಿಸುವಿರಾ ಎಂದು ಕೇಳಿದರು. ಅದರಿಂದ ಅಮುಲ್ಗೆ ಅನುಕೂಲವೇ ಆಯಿತು; ಅಮುಲ್ನವರು ಬ್ರಾಂಡ್ ಮಾಡಿದ ಮೊದಲ ಉತ್ಪನ್ನ ಬೆಣ್ಣೆ.
ಆದರೂ ವಿಚಿತ್ರ ಸಮಸ್ಯೆಗಳು ಬರುತ್ತಲೇ ಇದ್ದವು. ಪೋಲ್ಸನ್ನವರು ಹಳೆಯ ಕೆನೆಯಿಂದ (ಕ್ರೀಮ್) ಬೆಣ್ಣೆ ತಯಾರಿಸುತ್ತಿದ್ದರು. ಫ್ರೆಶ್ ಕ್ರೀಮ್ ಮಾಡಲು ಅವರು ಅದಕ್ಕಾಗಿ ಹಾಲು ಸಂಗ್ರಹಿಸುತ್ತಿರಲಿಲ್ಲ. ವ್ಯಾಪಾರಿಗಳು ಅವರಿಗೆ ಟನ್ಗಟ್ಟಲೆ ಕ್ರೀಮ್ ಕೊಡುತ್ತಿದ್ದರು. ಕೆಲವು ಸಲ ಅದನ್ನು ಫ್ರಿಡ್ಜ್ ಇಲ್ಲದೆ ಹತ್ತು ದಿನ ಕೂಡ ಹಾಗೆಯೇ ಇಡುತ್ತಿದ್ದರು. ಅದು ಕೊಳಕಾಗಿ ನೊಣಗಳು ಅದಕ್ಕೆ ಮುತ್ತುತ್ತಿದ್ದವು.
ಆದರೆ ಅಮುಲ್ನ ಬೆಣ್ಣೆ ಮಾರುಕಟ್ಟೆಗೆ ಬಂದಾಗ ಜನ ‘ಇದೆಂಥ ಬೆಣ್ಣೆ? ಪರಿಮಳ ಏನೂ ಇಲ್ಲ’ ಎಂದರಂತೆ. ಪೋಲ್ಸನ್ ಮಾಲೀಕರು ತಮ್ಮವರಾದ ಕಾರಣ ಅವರು ಈ ಬೆಣ್ಣೆಯನ್ನು ಮುಟ್ಟಲಿಲ್ಲ. ಈ ಗಂಭೀರ ಸಮಸ್ಯೆಗೆ ಬೇಗ ಪರಿಹಾರ ಕಾಣಬೇಕಿತ್ತು. ಅದಕ್ಕಾಗಿ ಬೆಣ್ಣೆ ತಯಾರಿಸುವ ಕೊನೆಹಂತದಲ್ಲಿ ಡಯಾಸೆಟಿಲ್ (Diacetyl) ಎಂಬ ರಾಸಾಯನಿಕವನ್ನು ಸೇರಿಸಿದರು. ಅದರ ಬಳಕೆಗೆ ಅನುಮತಿಯಿದ್ದು ಅದರಿಂದ ಬೆಣ್ಣೆಗೆ ಪರಿಮಳವೂ ಬಂತು. ಅದರಿಂದ ಮಾರಾಟದಲ್ಲಿ ಉತ್ತಮ ಏರಿಕೆ ಕಂಡುಬಂತು. ಉಪ್ಪು, ಆರ್ದ್ರತೆ, ಬಣ್ಣಗಳನ್ನು ಸೇರಿಸಲಾಗುತ್ತಿತ್ತು. ಏನಿದ್ದರೂ ಗ್ರಾಹಕನಿಗೆ ಮೋಸ ಮಾಡದೆ ಗುಣಮಟ್ಟದ ಉತ್ಪನ್ನವನ್ನು ನೀಡುವುದು ಅಮುಲ್ನ ಮೂಲತತ್ತ್ವ. ಬಣ್ಣ ಸೇರಿಸುವುದು ಅನಿವಾರ್ಯವಾಗಿತ್ತು. ಏಕೆಂದರೆ ಸದಾ ಹಸಿರು ಹುಲ್ಲು ತಿನ್ನುವ ನ್ಯೂಜಿಲೆಂಡ್ನ ಬೆಣ್ಣೆಯ ಬಣ್ಣ ಸ್ವಲ್ಪಮಟ್ಟಿಗೆ ಹಳದಿ; ಇತರ ಹಲವು ದೇಶಗಳದ್ದು ಕೂಡ ಅದೇ ರೀತಿ. ಗುಜರಾತಿನ ಎಮ್ಮೆಯ ಹಾಲು ಪೂರ್ತಿ ಬಿಳಿ ಆದ್ದರಿಂದ ಬಣ್ಣದ ಅಗತ್ಯವಿತ್ತು.
ಪೋಲ್ಸನ್ ಸ್ಪರ್ಧೆ ಅಂತ್ಯ
ಕೈರಾ ಯೂನಿಯನ್ನವರ ಉತ್ಪನ್ನಗಳ ಬೆಲೆ ಒಂದೇ ರೀತಿ; ಇವರು ಆಗಾಗ ಬೆಲೆ ಏರಿಸುವವರಲ್ಲ. ಪೋಲ್ಸನ್ರವರು ಡಾ|| ಕುರಿಯನ್ ಅವರನ್ನು ಕರೆಯಿಸಿಕೊಂಡು ಉದ್ಯಮ ಬೆಳೆಯಬೇಕಿದ್ದರೆ ಆಗಾಗ ಬೆಲೆ ಏರಿಸಬೇಕು ಎಂಬಂತಹ ಸಲಹೆ ನೀಡಿದರು. ಪೋಲ್ಸನ್ ಸಂಸ್ಥೆಯ ಮ್ಯಾನೇಜರ್ ಫಾಸ್ಟರ್ ಇವರೊಡನೆ “ಕೈರಾ ಸಹಕಾರಿ ಯೂನಿಯನ್ ಟೇಕಾಫೇ ಆಗುವುದಿಲ್ಲವೆಂದು ಭಾವಿಸಿದ್ದೆ. ಆದರೆ ನೀವು ಬಂದ ಮೇಲೆ ಎಲ್ಲ ಬದಲಾಯಿತು; ಪೋಲ್ಸನ್ನ ಪತನವೂ ಶುರು ಆಯಿತು” ಎಂದು ಹೇಳಿದ್ದಲ್ಲದೆ ಹುದ್ದೆಗೆ ರಾಜೀನಾಮೆ ನೀಡಿ ತನ್ನ ದೇಶಕ್ಕೆ (ನ್ಯೂಜಿಲೆಂಡ್) ಹೊರಟುಹೋದರು. ಅನಂತರ ವರಿಯಾವಾ ಅಲ್ಲಿ ಮ್ಯಾನೇಜರ್ ಆದರು. “ನಾವು ಅವರನ್ನು ಹೊರಹಾಕಲಿಲ್ಲ. ನಮ್ಮ ಸ್ಪರ್ಧೆಯನ್ನು ಎದುರಿಸಲಾಗದೆ ಅವರ ವ್ಯವಹಾರವೇ ನಿಂತುಹೋಯಿತು” ಎಂದು ಡಾ|| ಕುರಿಯನ್ ಹೇಳಿದ್ದಾರೆ. ಅದರ ಮಾಲೀಕ ಪೆಸ್ತೋನ್ಜೀ ಅವರ ಮಗ ಮಿನೂ ಒಂದು ಬಗೆಯ ಐಲುಪೈಲು. ಆತ ತಮ್ಮ ಸ್ಥಾವರವನ್ನು ಓರ್ವ ಮಾರ್ವಾಡಿಗೆ ರೂ. ೧೭ ಲಕ್ಷಕ್ಕೆ ಮಾರಿದ. ವ್ಯವಹಾರಕ್ಕೆ ಅಷ್ಟೇ ಮೊತ್ತದ ಲಂಚ ಪಡೆದನೆಂದು ಗಮಾನಿಯಿತ್ತು. ಮಾರ್ವಾಡಿ ಪೋಲ್ಸನ್ ಸ್ಥಾವರವನ್ನು ಖರೀದಿಸಿದ್ದು ಅದರ ರಿಯಲ್ ಎಸ್ಟೇಟ್ ಬೆಲೆಗಾಗಿ.
ಪೋಲ್ಸನ್ ವಿರುದ್ಧ ಬೆಣ್ಣೆ ಸಮರದಲ್ಲಿ ಗೆದ್ದ ಅನಂತರ ಕೈರಾ ಸಹಕಾರಿ ಸಂಸ್ಥೆಯನ್ನು ತಡೆಯುವವರಿಲ್ಲ ಎಂದಾಯಿತು. ೫೦ರ ದಶಕದ ಕೊನೆ ಮತ್ತು ೬೦ರ ದಶಕದ ಆರಂಭದ ನಡುವೆ ಮಾರುಕಟ್ಟೆಯಲ್ಲಿ ಬೆಣ್ಣೆ ಮತ್ತು ಹಾಲಿನ ಹುಡಿಗೆ ಮಾತ್ರ ಅಲ್ಲ; ಸಾಂದ್ರೀಕೃತ ಹಾಲು, ಗಿಣ್ಣು ಮತ್ತು ಶಿಶುಆಹಾರಗಳಲ್ಲಿ ಕೂಡ ಅಮುಲ್ ಹಿಡಿತವನ್ನು ಸಾಧಿಸಿತು; ಮುಂಬಯಿ, ಮದ್ರಾಸ್ (ಚೆನ್ನೈ), ದೆಹಲಿ, ಕೋಲ್ಕತಾಗಳಲ್ಲಿ ವಿತರಕರನ್ನು ನೇಮಿಸಿತು.
ಶಿಶುಆಹಾರ
ಶಿಶುಆಹಾರದ ಮಾರುಕಟ್ಟೆಯಲ್ಲಿ ಅಮುಲ್ ಬೆಳೆದ ಬಗೆ ರೋಚಕವೇ ಆಗಿದೆ. ಅದಕ್ಕೆ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ(ಸಿಎಫ್ಟಿಆರ್ಐ) ಯದ್ದೊಂದು ಫಾರ್ಮುಲಾ ಇತ್ತು. ಅದನ್ನು ಹತ್ತು ಸಾವಿರ ರೂ. ಗೆ ಕೊಡಬಹುದೆಂದು ರಾಷ್ಟಿçÃಯ ಸಂಶೋಧನಾ ಅಭಿವೃದ್ಧಿ ನಿಗಮದ (ಎನ್ಆರ್ಡಿಸಿ) ಮೂಲಗಳಿಂದ ತಿಳಿಯಿತು. ಅಹಮದಾಬಾದ್ಗೆ ಹೋಗಿ ಎರಡೂ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿ ಮಾಡಿದಾಗ ಎನ್ಆರ್ಡಿಸಿ ಅಧ್ಯಕ್ಷರು ಸಿಎಫ್ಟಿಆರ್ಐ ನಿರ್ದೇಶಕರ ಸಮ್ಮುಖದಲ್ಲೇ “ಅರೆಬರೆ ಫಾರ್ಮುಲಾವನ್ನು ಮಾಡಿರುತ್ತಾರೆ; ನೀವದನ್ನು ಸರಿಪಡಿಸಿದರೆ ಮತ್ತೆ ಯಾರಿಗೋ ಮಾರಿಕೊಳ್ಳುತ್ತಾರೆ” ಎಂದು ಛೇಡಿಸಿದರು. ಅಂತೂ ಫಾರ್ಮುಲಾ ಕೊಡಲು ಸಿಎಫ್ಟಿಆರ್ಐ ನಿರ್ದೇಶಕರು ಸಮ್ಮತಿಸಿದರು.

ಆದರೆ ವಾಪಸು ಬಂದು ದಲಾಯಾ ಅವರು ಪರಿಶೀಲಿಸುವಾಗ ಅದು ಅಪ್ರಯೋಜಕ ಎಂದು ಗೊತ್ತಾಗಿ ಬೇರೆಯೇ ಮಾಡಬೇಕಾಯಿತು. ಏನಿದ್ದರೂ ಸಿಎಫ್ಟಿಆರ್ಐಗೆ ೩೦-೪೦ ಲಕ್ಷ ರೂ. ರಾಯಲ್ಟಿ ಕೊಡುವುದು ತಪ್ಪಲಿಲ್ಲ. “ನಮ್ಮ ಹಾಲಿನ ಹುಡಿಗೆ ವಿಟಾಮಿನ್ ಸೇರಿಸಿ ಶಿಶುಆಹಾರವನ್ನು (ಬೇಬಿಫುಡ್) ತಯಾರಿಸಿದೆವು. ಅದರ ಮೂಲಕ ದೈತ್ಯ ಸಂಸ್ಥೆ ಗ್ಲಾಕ್ಸೋ ವಿರುದ್ಧ ಸ್ಪರ್ಧಿಸಬೇಕಾಗಿತ್ತು. ಆಗ ಅಮುಲ್ಗೆ ಫುಡ್ ಇಮೇಜ್ ಇರಲಿಲ್ಲ; ಎಗ್ರೋ ರೂರಲ್ (ಕೃಷಿ-ಗ್ರಾಮೀಣ) ಇಮೇಜ್ ಮಾತ್ರ ಇತ್ತು. ಬೇಬಿಫುಡ್ನೊಂದಿಗೆ ನಾವು ಅಪರಿಚಿತ ಪ್ರದೇಶದಲ್ಲಿ ಕಾಲಿಡುತ್ತಿದ್ದೆವು. ಶಿಶುಗಳ ತಾಯಂದಿರ ಮೇಲೆ ಪ್ರಭಾವ ಬೀರಬೇಕಿತ್ತು; ಆದರೆ ಸ್ತನ್ಯಪಾನದ ಘನತೆಗೆ ಕುಂದು ತರುವಂತಿರಲಿಲ್ಲ. ನರ್ಸಿಂಗ್ಹೋಂಗಳಲ್ಲಿ ಪ್ರವೇಶ ಗಳಿಸಬೇಕಿತ್ತು. ಎಲ್ಲಕ್ಕೂ ಮಿಗಿಲಾಗಿ ಗ್ಲಾಕ್ಸೋದ ಸ್ಪರ್ಧೆ ಎದುರಿಸಬೇಕಿತ್ತು” – ಎಂದಿದ್ದಾರೆ
ವಿವಾದ–ಪರಿಹಾರ
ಆದರೂ ವಿವಾದ ಉಂಟಾಗುವುದನ್ನು ತಪ್ಪಿಸಲಾಗಲಿಲ್ಲ. ಚಳವಳಿಗಾರರು (Activists) ಬೇಬಿಫುಡ್ ಜಾಹೀರಾತನ್ನು ವಿರೋಧಿಸಿದರು. ಅದಕ್ಕಾಗಿ ಬೇಬಿಫುಡ್ನ ಬಗ್ಗೆ ಒಂದು ಪುಸ್ತಕ ಮಾಡಿ ‘ತಾಯಿಯ ಹಾಲೇ ಶ್ರೇಷ್ಠ; ಅದಿಲ್ಲದಾಗ ಮಾತ್ರ ಇದು’ ಎಂದು ಪ್ರತಿಪಾದಿಸಿದೆವು. ನಮ್ಮದು ಏಕಸ್ವಾಮ್ಯ ಎಂದಾಗ ‘ಹಾಗಿಲ್ಲ; ಏಕಸ್ವಾಮ್ಯ ದೇಶದ ತಾಯಂದಿರದ್ದು. ಶೇ. ೯೩ರಷ್ಟು ಶಿಶುಗಳು ಈಗಲೂ ತಾಯಿ ಎದೆಹಾಲನ್ನೇ ನಂಬಿವೆ’ ಎಂದು ಉತ್ತರಿಸಿದೆವು. ದನದ ಹಾಲಿನ ಬದಲು ಎಮ್ಮೆ ಹಾಲಿನ ಪುಡಿ ಬಳಸುತ್ತಾರೆಂದು ಅದೂ ಒಂದು ವಿವಾದವಾಯಿತು. ಕೊನೆಯಲ್ಲಿ ನಮ್ಮದೇ ಉತ್ತಮ ಶಿಶುಆಹಾರವೆಂದು ಅಂಗೀಕೃತವಾಯಿತು ಎಂದು ಡಾ|| ಕುರಿಯನ್ ವಿವರಿಸಿದ್ದಾರೆ.
ಕುತೂಹಲದ ಸಂಗತಿಯೆಂದರೆ ಒಂದು ಹಂತದಲ್ಲಿ ಗ್ಲಾಕ್ಸೋದವರು ಅಮುಲ್ನವರನ್ನು ಸಂಪರ್ಕಿಸಿ ತಮ್ಮ ಶಿಶುಆಹಾರ ತಯಾರಿ ಗುತ್ತಿಗೆಯನ್ನು ಕೊಡುವುದಾಗಿ ಹೇಳಿದರು. ಆಗ ಕುರಿಯನ್ ಅದರ ಹೆಸರು ಅಮುಲ್ ಆಗಿರುತ್ತದೆ ಎಂದು ಟಾಂಗ್ ನೀಡಿದರು. ಸಿಟ್ಟಾದ ಗ್ಲಾಕ್ಸೋ ಬಾಸ್ “ಅಮುಲ್ಗೆ ತನ್ನ ಶಿಶುಆಹಾರವನ್ನು ಮಾರಲು ಸಾಧ್ಯವಾಗದಂತೆ ಮಾಡುತ್ತೇವೆ. ನಿಮ್ಮ ಟಿನ್ಗಳು ಶೆಲ್ಫ್ಗಳಲ್ಲಿ ಕೊಳೆಯಲು ಆರಂಭವಾದಾಗ ನಾನೇ ಅದನ್ನು ಸಂಗ್ರಹಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತೇನೆ” ಎಂದರಂತೆ. ಇದು ಬಹುರಾಷ್ಟ್ರೀಯ ಕಂಪೆನಿಗಳ (ಎಂಎನ್ಸಿ) ಉದ್ಧಟತನದ ಒಂದು ಮಾದರಿ ಎಂದು ಡಾ|| ಕುರಿಯನ್ ಚುಚ್ಚಿದ್ದಾರೆ.
೧೯೬೨ರ ಯುದ್ಧ
೧೯೬೨ರ ಭಾರತ-ಚೀನಾ ಯುದ್ಧ ಸನ್ನಿಹಿತವಾದಾಗ ಡಾ|| ಕುರಿಯನ್ರಿಗೆ ಪ್ರಧಾನಿ ಕಚೇರಿಯಿಂದ ಫೋನ್ ಬಂತು. ಜನರಲ್ಗಳೆಲ್ಲ ಸೇರಿದ್ದ ಸಭೆಯಲ್ಲಿ “ಸೇನೆಗೆ ಹಾಲಿನ ಹುಡಿ ಬೇಕು. ಎಷ್ಟು ಕೊಡುತ್ತೀರಿ? ಬೇಗ ಬೇಕು” ಎಂದರು. ಆರು ತಿಂಗಳಲ್ಲಿ ೧೦೦೦ ಟನ್ ಕೊಡುವೆ ಎಂದಾಗ ಅಷ್ಟು ಸಾಲದು: ೨೭೫೦ ಟನ್ ಬೇಕು ಎಂದರು. ದೇಶದ ಮಾರುಕಟ್ಟೆಗೆ ಕೊಡದೆ ಕೇವಲ ಸೇನೆಗೆ ಒದಗಿಸಲು ನಿರ್ಧರಿಸಿದರು. ನಿಮಗೆ ಸಾಲವೇನಾದರೂ ಬೇಕೇ ಎಂದು ಕೇಳಿದಾಗ ಇವರು ಸರ್ಕಾರವನ್ನು ಹಿಂಡಲು ಇಷ್ಟವಿಲ್ಲ ಎಂದರು. ರಾಜ್ಕೋಟ್ನಲ್ಲಿ ಗುಜರಾತ್ ಸರ್ಕಾರದ ಒಂದು ಸಣ್ಣ ಹಾಲಿನ ಹುಡಿ ಸ್ಥಾವರ ಇರುವುದು ಇವರಿಗೆ ಗೊತ್ತಿತ್ತು; ಈ ಅವಧಿಗೆ ಅದರ ನಿಯಂತ್ರಣವನ್ನು ಕೇಳಿದಾಗ ಸರ್ಕಾರ ಒಪ್ಪಿತು. ಈ ವ್ಯವಹಾರದ ಪರಿಣಾಮವಾಗಿ ಅಮುಲ್ ಬೆಣ್ಣೆ ಕೂಡ ಮಾರುಕಟ್ಟೆಗೆ ಹೋಗಲಿಲ್ಲ.
ಅಮುಲ್ ಉತ್ಪನ್ನಗಳ ಸಂಖ್ಯೆ ಕ್ರಮೇಣ ಬೆಳೆಯುತ್ತಿತ್ತು. ವಿದೇಶೀ ಕಂಪೆನಿಗಳನ್ನು ಪಾಲುದಾರರಾಗಿ ತೆಗೆದುಕೊಳ್ಳುವುದಕ್ಕೆ ಡಾ|| ಕುರಿಯನ್ ವಿರೋಧವಿತ್ತು. ಮೆಟಲ್ ಬಾಕ್ಸ್ ಎಂಬ ಸಂಸ್ಥೆ ಜೊತೆಗಿನ ಹೊಂದಾಣಿಕೆಯನ್ನು ಬಿಟ್ಟು ಹರ್ಷದ್ ಕಪಾಡಿಯಾ ಅವರ ಜೊತೆ ಸೇರಿ ಕೈರಾ ಕ್ಯಾನ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಡೈರಿ ಅಭಿವೃದ್ಧಿಗೆ ಅಮುಲ್ ಮಾದರಿ ಸಂಸ್ಥೆಯಾಯಿತು. ಮುಂದೆ ಎನ್ಡಿಡಿಬಿ ಮುಂತಾದ ಹಲವು ಸಂಸ್ಥೆಗಳು ಸ್ಥಾಪನೆಗೊಂಡವು. ಇದಕ್ಕೆ ‘ಡೈರಿ ಕೋಆಪರೇಟಿವ್ಸ್’ ಎನ್ನುವ ಪದ ಪ್ರಚಲಿತವಾಯಿತು. ೨೦೦೮ರ ಹೊತ್ತಿಗೆ ಆನಂದ್ನಲ್ಲಿದ್ದ ಕೈರಾ ಜಿಲ್ಲಾ ಸಹಕಾರಿ ಯೂನಿಯನ್ನಲ್ಲಿ ೧೦೧೭ ಹಳ್ಳಿಗಳು ಸೇರಿದ್ದವು. ಪ್ರತಿ ಹಳ್ಳಿಯಲ್ಲಿ, ಒಂದು ಸಹಕಾರಿ ಹಾಲಿನ ಸೊಸೈಟಿ ಇದ್ದು ಅದಕ್ಕೊಂದು ಆಡಳಿತ ಸಮಿತಿ ಇರುತ್ತದೆ. ಅದರ ಅಧ್ಯಕ್ಷ ಆನಂದ್ನ ಜಿಲ್ಲಾ ಸಹಕಾರಿ ಯೂನಿಯನ್ನ ಜನರಲ್ಬಾಡಿಯಲ್ಲಿರುತ್ತಾನೆ; ಡೈರಿ ಸ್ಥಾವರವು ಜಿಲ್ಲಾ ಸಹಕಾರಿ ಯೂನಿಯನ್ ಅಧೀನದಲ್ಲಿರುತ್ತದೆ. ಆ ಜನರಲ್ ಬಾಡಿಯು ಆಡಳಿತ ನಡೆಸುವ ನಿರ್ದೇಶಕರ ಮಂಡಳಿಯನ್ನು ಆರಿಸುತ್ತದೆ. ಇಂತಹ ಜಿಲ್ಲಾ ಯೂನಿಯನ್ಗಳು ರಾಜ್ಯ ಒಕ್ಕೂಟದಲ್ಲಿ ಸೇರಿರುತ್ತವೆ.
ಮಹಿಳಾ ಸಬಲೀಕರಣ
ಕೈರಾ ಜಿಲ್ಲೆಯ ೧೦೧೭ ಹಳ್ಳಿಗಳ ಹಾಲು ಉತ್ಪಾದಕ ಸದಸ್ಯರ ಒಟ್ಟು ಸಂಖ್ಯೆ ೫,೭೩,೯೬೨. ಹಾಲು ಮತ್ತಿತರ ವಸ್ತುಗಳ ಮಾರಾಟದಿಂದ ಜಿಲ್ಲೆಯ ವಾರ್ಷಿಕ ವ್ಯವಹಾರ ೫೦೯.೨ ಕೋಟಿ ರೂ. ಅದರಲ್ಲಿ ೩೯೪.೩ ಕೋಟಿ ರೂ. ರೈತರಿಗೆ ಸೇರುತ್ತದೆ. ಉತ್ಪಾದನೆ ಹೆಚ್ಚಿದಂತೆ ಇದು ಜಾಸ್ತಿಯಾಗುತ್ತದೆ. ಇಷ್ಟು ಮಾತ್ರವಲ್ಲ, ಆನಂದ್ ಸ್ಫೂರ್ತಿ ನೀಡಿದ ಡೈರಿ, ಸಹಕಾರಿ ಚಳವಳಿಯು ಭಾರತದ ಅತಿ ದೊಡ್ಡ ಉದ್ಯೋಗಾವಕಾಶ ಯೋಜನೆಯಾಗಿದೆ. ಇದು ರೈತಕುಟುಂಬಗಳ ಆದಾಯವನ್ನು ಇಮ್ಮಡಿಗಿಂತಲೂ ಜಾಸ್ತಿ ಮಾಡಿದೆ. ಅಮುಲ್ನ ಕಥೆ ರೈತರಿಗೆ ಲಾಭ ತಂದದ್ದು ಮಾತ್ರ ಅಲ್ಲ; ಸಹಕಾರಿ ಸಂಘಗಳಿಂದ ಅಪೂರ್ವವಾದ್ದೇನೋ ಆಯಿತು. ಸಮುದಾಯಗಳ ಸಾಮಾಜಿಕ ಸ್ವರೂಪವೇ ಬದಲಾಯಿತು. ಹಿಂದೆ ರೈತರು ಗದ್ದೆ(ಹೊಲ) ನೋಡಿಕೊಂಡರೆ ಪತ್ನಿ ಮನೆಯಲ್ಲಿರುವ ಒಂದೆರಡು ಎಮ್ಮೆಗಳ ಉಸ್ತುವಾರಿ ವಹಿಸುತ್ತಿದ್ದಳು. ಅಮುಲ್ ಡೈರಿಯಿಂದಾಗಿ ಆಕೆಯ ಆದಾಯದಲ್ಲಿ ಏರಿಕೆಯಾಗಿ ಪತಿಗೆ ಸಮಾನ ಎಂಬಂತಾಯಿತು. ಸೊಸೈಟಿಯಲ್ಲಿ ಹಾಲು ಹಾಕಲು ಬಂದವರು ಕ್ಯೂ ನಿಲ್ಲಬೇಕಿತ್ತು; ಮೊದಲು ಬಂದವರು ಮೊದಲು; ಜಾತಿಭೇದವಿಲ್ಲ. ಅಲ್ಲಿ ಕೆಳಜಾತಿಯವರು ಅಥವಾ ದಲಿತರ ಹಿಂದೆ ಬ್ರಾಹ್ಮಣರು ಸೇರಿದಂತೆ ಮೇಲುಜಾತಿಯವರು ನಿಲ್ಲಬೇಕಾಗಿತ್ತು. ಅದರಿಂದ ಜಾತಿಪದ್ಧತಿಯ ಮೇಲು-ಕೀಳಿಗೆ ಏಟು ಬಿತ್ತು; ಹಾಲು ಸಂಗ್ರಹದ ಜಾಗಕ್ಕೆ ಶುಚಿತ್ವ ಬಂತು.
ಪಶುವೈದ್ಯರ ಸೇವೆ
ಕೈರಾ ಯೂನಿಯನ್ನಿಂದ ಪಶುವೈದ್ಯರ ಒಂದು ಪಡೆ ಸಿದ್ಧವಾಯಿತು. ಫೋನ್ ಮಾಡಿದರೆ ಸಾಕು, ಅವರು ಬಂದು ಜಾನುವಾರಿಗೆ ಬೇಕಾದ ಚಿಕಿತ್ಸೆ ಕೊಡುತ್ತಿದ್ದರು. ದನ-ಎಮ್ಮೆಗಳ ಹೆರಿಗೆ ಮಾಡಿಸುತ್ತಿದ್ದರು. ಇವರ ದಕ್ಷಸೇವೆಯ ಹಿನ್ನೆಲೆಯಲ್ಲಿ ಜನ ಸರ್ಕಾರಿ ಸೇವೆಯನ್ನು ಪ್ರಶ್ನಿಸತೊಡಗಿದರು. ಮಹಿಳೆಯರು, ಮಕ್ಕಳಿಗೆ ಕೂಡ ಅಮುಲ್ ವತಿಯಿಂದ ಆರೋಗ್ಯಸೇವೆ ನೀಡಲಾಯಿತು. ಅದಕ್ಕಾಗಿ ತ್ರಿಭುವನದಾಸ್ ಫೌಂಡೇಶನ್ ಸ್ಥಾಪನೆಗೊಂಡಿತು. ಹೈನುಗಾರ ಮಹಿಳೆಯರ ಪ್ರವಾಸ ಏರ್ಪಡಿಸಿ ಅಮುಲ್ನ ಆಧುನಿಕ ಡೈರಿ, ಪಶುಆಹಾರ ಸ್ಥಾವರಗಳನ್ನು ತೋರಿಸಿದರು. ಪಶುಆಹಾರ, ಜಾನುವಾರು ಕೃತಕ ಗರ್ಭಧಾರಣೆಗಳ ಬಗ್ಗೆ ಮಾಹಿತಿ ನೀಡಿದರು; ಗರ್ಭಿಣಿ ಎಮ್ಮೆಗಳಿಗೆ ಒಳ್ಳೆಯ ಆಹಾರ ನೀಡುವಂತೆ ತಿಳಿಸಿದರು. ಒಟ್ಟಿನಲ್ಲಿ ಕೈರಾ ಸಹಕಾರಿ ಸಂಸ್ಥೆಯು ಸಾಮಾಜಿಕ-ಆರ್ಥಿಕ ಪರಿವರ್ತನೆಗೆ ಕಾರಣವಾಯಿತು ಎನ್ನುವ ಡಾ|| ಕುರಿಯನ್, “ಐದು ದಶಕಗಳ ಹಿಂದೆ ನಾನು ಕಡ್ಡಾಯ ಎಂಬಂತೆ ಆನಂದ್ಗೆ ಬಂದೆ; ಅಂತಹ ಜೀತದ ಮನೋಭಾವ ಗೌರವ-ತೃಪ್ತಿಗಳಲ್ಲಿ ಪರ್ಯವಸಾನ ಆಯಿತು. ನಾನು ಮಾಡಿದ್ದೆಂದರೆ ಮುಂದೆ ದೆಹಲಿ ಅಥವಾ ಬೇರೆ ಕಡೆಗೆ ಹೋಗುವ ಅವಕಾಶ ಬಂದರೂ ಅದನ್ನು ತ್ಯಜಿಸಿ ಇಲ್ಲಿ ನಿಂತದ್ದು. ಇಡೀ ಜೀವನದಲ್ಲಿ ರೈತರ ನೌಕರನಾಗಿ ನಿಂತೆ. ಇದು ನಾನು ಕೈಗೊಂಡ ಅತ್ಯಂತ ವಿವೇಕಯುತ ನಿರ್ಧಾರವಾಯಿತು” ಎಂದು ಪ್ರಾಂಜಲವಾಗಿ ಹೇಳಿಕೊಂಡಿದ್ದಾರೆ.
೧೯೬೦ರ ದಶಕದಲ್ಲಿ ಅವರು ಬಡತನ ನಿರ್ಮೂಲನ ಮತ್ತು ಪರಿಸರ ಸಂರಕ್ಷಣೆಗೆ ಒತ್ತು ನೀಡಿದ ಬಾರ್ಬರಾ ವಾರ್ಡ್ ಅವರ ಸಾಹಿತ್ಯವನ್ನು ಓದಿದ್ದರು. ಅದರಿಂದ ಅವರಿಗೆ ಸರ್ದಾರ್ ಪಟೇಲ್ ಮತ್ತು ಬಾರ್ಬರಾ ವಾರ್ಡ್ರಂಥವರ ದರ್ಶನದ (ವಿಶನ್) ಬಗ್ಗೆ ತನ್ನ ಕೊಡುಗೆ ನೀಡಬೇಕು ಅನ್ನಿಸಿತು. ಅವರ ಅಂತಿಮ ಗುರಿ ಕೇವಲ ಹಾಲಿನ ಉತ್ಪಾದನೆಯ ಯಾಂತ್ರಿಕ ಆಧುನೀಕರಣವಲ್ಲ; ಬದಲಾಗಿ ಗ್ರಾಮೀಣ ಪ್ರದೇಶದ ಬಹುಸಂಖ್ಯಾತರು ತಮ್ಮ ಭವಿಷ್ಯದ ಮೇಲೆ ಹಿಡಿತವನ್ನು ಸಾಧಿಸುವಂತೆ ಮಾಡುವುದು; ಶ್ರೀಮಂತ ಮತ್ತು ತೃಪ್ತಿಕರ ಸಮುದಾಯವಾಗಿ ಅವರು ರೂಪುಗೊಳ್ಳುವುದು.
ಜನಶಕ್ತಿಯಲ್ಲಿ ವಿಶ್ವಾಸ

ನಮ್ಮ ದೇಶದ ದೊಡ್ಡ ಶಕ್ತಿ ಅದರ ಜನತೆಯ ಶಕ್ತಿ. ಕೋಟಿಗಟ್ಟಲೆ ರೈತರು ಮತ್ತವರ ಕುಟುಂಬದಲ್ಲಿ ವೃತ್ತಿಪರ ಮ್ಯಾನೇಜ್ಮೆಂಟ್ ಬರಬೇಕು. ಅದಕ್ಕೆ ಮುನ್ನ ಬಾರ್ಬರಾ ಹೇಳಿದಂತೆ ಪರಸ್ಪರ ಹಂಚಿಕೆ, ಉತ್ತಮ ಸಹಕಾರ ಬರಬೇಕು. ಕೃಷಿ-ಕೈಗಾರಿಕೆ, ಹಳ್ಳಿ-ನಗರಗಳ ಅಸಮತೋಲನವು ದೂರವಾಗಬೇಕು; ರೈತರು ಸಂಘಟಿತರಾಗದೆ ಅದು ಅಸಾಧ್ಯ. ಅದಕ್ಕಾಗಿ ಆನಂದ್ನಲ್ಲಿ ನಿರ್ಧಾರ ಕೈಗೊಳ್ಳುವ ಹಂತದಲ್ಲಿ ಜನರನ್ನು ಸೇರಿಸಿಕೊಂಡೆವು. ಕೆಳಹಂತದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆ ಇಲ್ಲದಿದ್ದರೆ ದೆಹಲಿಯ ಪ್ರಜಾಪ್ರಭುತ್ವಕ್ಕೆ ಏನರ್ಥ ಎಂದು ಕುರಿಯನ್ ಕೇಳಿದ್ದಾರೆ. (ನೋಡಿ – I Too Had a Dream). ಹಳ್ಳಿಗೆ ರಸ್ತೆ ಇಲ್ಲದಿರುವಾಗ ದೆಹಲಿಯಲ್ಲಿ ಮೇಲ್ಸೇತುವೆ ನಿರ್ಮಾಣ ತಪ್ಪು. ಹಳ್ಳಿಗೆ ಕುಡಿಯುವ ನೀರು ಸಿಗುವವರೆಗೆ ದೆಹಲಿಯಲ್ಲಿ ಕಾರಂಜಿ ಬೇಡ. ದೆಹಲಿಯಲ್ಲಿ ದೊಡ್ಡ ಆಸ್ಪತ್ರೆ ಮಾಡಿ; ಆದರೆ ಎರಡು ಹನಿ ಔಷಧಿಯಿಲ್ಲದೆ ರೈತನ ಮಗು ಕುರುಡಾಗದಿರಲಿ ಎಂದು ಚಾಟಿ ಬೀಸಿದ್ದಾರೆ. ಅದನ್ನು ಮಾಡದೆ ಪಂಚತಾರಾ ಆಸ್ಪತ್ರೆ ಕಟ್ಟಿಸುತ್ತಿದ್ದಾರೆ; ನೀತಿ (ಪಾಲಿಸಿ) ರೂಪಿಸುವ ವಿದ್ಯಾವಂತರೇ ಅದಕ್ಕೆ ಕಾರಣ ಎನ್ನುತ್ತ, “ನಾನು ನಗರಕ್ಕೆ ಹೋಗದೆ ರೈತರ ನೌಕರನಾಗಿ ಹಳ್ಳಿಯಲ್ಲಿ ಉಳಿದೆ. ನನ್ನ ಪ್ರಕಾರ ಇದೇ ಶ್ರೇಷ್ಠ ಉದ್ಯೋಗ – ಇದೇನೂ ಔದಾರ್ಯವಲ್ಲ; ನನಗೆ ಇದರಿಂದ ಭಾರೀ ಸಂತೋಷ, ತೃಪ್ತಿಗಳು ಸಿಕ್ಕಿವೆ. ರೈತರಿಗಾಗಿ ಕೆಲಸ ಮಾಡುವುದರಲ್ಲೇ ಸಾಮಾಜಿಕ ಹಿತ ಇದೆ. ತೃಪ್ತಿ ಇರುವುದು ಕೇವಲ ಹಣದಲ್ಲಿ ಅಲ್ಲ. ಇತರ ಹಲವು ಅಂಶಗಳಿವೆ; ನನಗೆ ಅವೆಲ್ಲ ಆನಂದ್ನಲ್ಲಿ ಸಿಕ್ಕಿದವು” ಎಂದು ಡಾ|| ಕುರಿಯನ್ ಉಚ್ಚಕಂಠದಲ್ಲಿ ಹೇಳಿದ್ದಾರೆ.
ದೆಹಲಿ ಮಿಲ್ಕ್ ಸ್ಕೀಂ ಹೊಣೆ
ಅಮುಲ್ ಸಂಸ್ಥೆಯ ಸರ್ವತೋಮುಖ ಯಶಸ್ಸು ದೇಶಾದ್ಯಂತ ಅಲೆಗಳನ್ನು ಎಬ್ಬಿಸಿತು. ಗುಜರಾತ್ನ ಹಳ್ಳಿ ಮೂಲೆಯಿಂದ ಹಬ್ಬಿದ ಅಲೆ ಎಲ್ಲೆಡೆ ಪಸರಿಸಿತು. ‘ಆನಂದ್ ಪ್ಯಾಟರ್ನ್ (ಮಾದರಿ) ನೋಡಲು ಜನ ಬಂದರು. ರೈತರಿಗೆ ಸಲ್ಲಬೇಕಾದ್ದನ್ನು ದಿಟ್ಟತನದಿಂದ ಪಡೆದವರೆಂದು ಕುರಿಯನ್ರನ್ನು ಗುರುತಿಸಿದರು. ಹಾಗೆ ಗುರುತಿಸಿದವರಲ್ಲಿ ಒಬ್ಬರು ೧೯೬೪ರ ಹೊತ್ತಿಗೆ ಕೇಂದ್ರದ ಜನಪ್ರಿಯ ಕೃಷಿ ಸಚಿವರಾಗಿದ್ದ ಸಿ. ಸುಬ್ರಹ್ಮಣ್ಯಮ್ ಅವರು. ದೆಹಲಿಯ ತಮ್ಮ ಕಚೇರಿಗೆ ಕರೆದ ಅವರು ಇದ್ದಕ್ಕಿದ್ದಂತೆ “ದೆಹಲಿಯ ಮಿಲ್ಕ್ ಸ್ಕೀಂನ (ಡಿಎಂಎಸ್) ಹೊಣೆಯನ್ನು ವಹಿಸಿಕೊಳ್ಳಬೇಕು” ಎಂದರು. ಕುರಿಯನ್ರಿಗೆ ಆಶ್ಚರ್ಯ.
“ನನಗೆ ದೆಹಲಿಗೆ ಬರುವ ಯೋಚನೆಯೇ ಇಲ್ಲ; ನಾನು ಆನಂದ್ ಬಿಡುವವನಲ್ಲ” ಎಂದರು. ಬೇಸರಗೊಂಡ ಮಂತ್ರಿ “ಹಾಗಾದರೆ ನಾನೇನು ಮಾಡಲಿ? ಡಿಎಂಎಸ್ ಸರಿಮಾಡಬಲ್ಲವರು ನೀವು ಮಾತ್ರ ಎಂದು ಯಾರೋ ಹೇಳಿದರು. ಹಾಗಾದರೆ ನೀವು ನನಗಾಗಿ ಏನು ಮಾಡುವಿರಿ?” ಎಂದು ಕೇಳಿದರು. “ಅದನ್ನು ನೋಡಿ ಏನು ಮಾಡಬೇಕೆಂದು ಹೇಳುತ್ತೇನೆ” ಎಂದಾಗ ಸಚಿವರು “ಸರಿ, ಸರ್ಕಾರ ನಿಮ್ಮ ಪ್ರಸ್ತಾವವನ್ನು ಸ್ವೀಕರಿಸುತ್ತದೆ” ಎಂದು ಸ್ಪಷ್ಟಪಡಿಸಿದರು.
ನೋಡುವಾಗ ಅಲ್ಲಿ ಎಲ್ಲವೂ ಸರಿ ಇರಲಿಲ್ಲ, ಹಾಲಿನ ಪಡಿತರ (ರೇಶನಿಂಗ್) ಜಾರಿಯಲ್ಲಿತ್ತು. ಹಾಲಿನ ಕಾರ್ಡ್ ಕೊಡುತ್ತಿದ್ದರು. ಉತ್ಪಾದನಾ ವೆಚ್ಚಕ್ಕಿಂತ ತೀರಾ ಅಗ್ಗ ದರದಲ್ಲಿ ಹಾಲನ್ನು ಮಾರುತ್ತಿದ್ದರು. ಮಾರುಕಟ್ಟೆ ದರ ಲೀಟರಿಗೆ ೫ ರೂ. ಇರುವಾಗ ಡಿಎಂಎಸ್ ಎರಡು ರೂ. ನಿಗದಿಪಡಿಸಿತ್ತು. ಹಾಲಿನ ಬೂತ್ಗಳ ಮುಂದೆ ಉದ್ದ ಕ್ಯೂ, ನೂಕಾಟ ಇತ್ತು. ಗೂಂಡಾಗಳು ಹಾಲು ಪಡೆದುಕೊಂಡು ಕಾಳಸಂತೆಯಲ್ಲಿ ಮಾರುತ್ತಿದ್ದರು. ಗುತ್ತಿಗೆದಾರರು ಡಿಎಂಎಸ್ಗೆ ಹಾಲು ಒದಗಿಸುತ್ತಿದ್ದು, ಅವರ ಲಾಬಿಯಿತ್ತು. ರಾಜಕಾರಣಿಗಳ ಅವರ ಪ್ರಭಾವದಲ್ಲಿದ್ದು, ವಿತರಿಸುವ ಹಾಲು ಕಳಪೆ ಎಂದು ಹೇಳುವ ಧೈರ್ಯ ಯಾರಿಗೂ ಇರಲಿಲ್ಲ.
ನಗರಕ್ಕೆ ಬೇಕಾದಷ್ಟು ಹಾಲನ್ನು ಸಂಗ್ರಹಿಸುತ್ತಿರಲಿಲ್ಲ. ಕೊರತೆ ತುಂಬಿಸಲು ಹಾಲಿನ ಹುಡಿ ಆಮದು ಮಾಡಿಕೊಂಡು ನೀರಿನಲ್ಲಿ ಕರಡಿಕೊಡುತ್ತಿದ್ದರು. ಬೇಕಾದಷ್ಟು ಹಾಲು ಇಲ್ಲದಿದ್ದರೂ ಕೂಡ ಹಾಲಿನ ಹುಡಿಯ ಘಟಕ ಮಾಡಿಕೊಂಡಿದ್ದರು. ಮತ್ತು ಬಣ್ಣದ ಹಾಲು, ಮೊಸರು, ಬೆಣ್ಣೆ, ತುಪ್ಪ ಎಲ್ಲ ಘಟಕಗಳೂ ಇದ್ದವು. ಒಟ್ಟಿನಲ್ಲಿ ಜನರ ಹಣದಿಂದ ಅಗ್ಗದ ಹಾಲು ಇತ್ಯಾದಿ ಒದಗಿಸುತ್ತಿದ್ದರು.
‘ಟೆರಿಬಲ್ ಮೆಸ್’
ಎಲ್ಲವನ್ನೂ ಗಮನಿಸಿದ ಡಾ|| ವರ್ಗೀಸ್ ಕುರಿಯನ್ ವರದಿ ತಯಾರಿಸಿ ಅದನ್ನು ಹಿಡಿದುಕೊಂಡು ಸಚಿವ ಸುಬ್ರಹ್ಮಣ್ಯಮ್ ಅವರ ಬಳಿಗೆ ಹೋದರು. “ಪರಿಸ್ಥಿತಿ ತುಂಬ ಹಾಳಾಗಿದೆ; ಟೆರಿಬಲ್ ಮೆಸ್ (ಗೊಂದಲದ ಗೂಡು). ಸರ್ಕಾರ ಹೀಗೆ ಮಾಡಬಹುದಾ?” ಎಂದು ಅವರಲ್ಲಿ ಕೇಳಿದರು. ಸರಿ ಮಾಡಲು ನಿಮಗೆ ಎಷ್ಟು ಸಮಯ ಬೇಕು?” ಎಂದು ಸಚಿವರು ಕೇಳಿದಾಗ ಇವರು “ಸರಿಮಾಡಬಹುದು; ಆದರೆ ನನಗಿರುವ ಅಧಿಕಾರ ಏನು?” ಎಂದು ತಿಳಿಯಬಯಸಿದರು. ಸಚಿವರು ತಡಮಾಡದೆ “ಹಣಕಾಸು ಮಂತ್ರಿ ಮತ್ತು ಕೃಷಿ ಮಂತ್ರಿಯಷ್ಟು” ಎನ್ನುವ ಕೊಡುಗೆ ನೀಡಲು ಮುಂದಾದರು. ಅದನ್ನು ಕೇಳಿ ಕುರಿಯನ್ರಿಗೆ ಆಘಾತವಾಯಿತು. “ನಿಮ್ಮ ಅಧಿಕಾರ ಸರಿ. ಆದರೆ ಹಣಕಾಸು ಸಚಿವರ ಅಧಿಕಾರವನ್ನು ಹೇಗೆ ಕೊಡುತ್ತೀರಿ?” ಎಂದು ಕೇಳಿದರು. ಆಗ ಗುಟ್ಟು ಹೊರಗೆ ಬಿತ್ತು. “ಹಣಕಾಸು ಮಂತ್ರಿ ಟಿ.ಟಿ. ಕೃಷ್ಣಮಾಚಾರಿ ಅವರು ಸೂಚಿಸಿದ ಪ್ರಕಾರವೇ ನಿಮ್ಮನ್ನು ಕರೆಸಿದ್ದು. ಆದ್ದರಿಂದ ಅವರ ಅಧಿಕಾರವನ್ನು ಕೂಡ ಕೊಡುತ್ತೇವೆ. ಸರಿಮಾಡಲು ಎಷ್ಟು ಸಮಯ ಬೇಕು ಹೇಳಿ” ಎಂದರು ಸಿ. ಸುಬ್ರಹ್ಮಣ್ಯಮ್.
“ಆರು ವಾರ ಬೇಕು. ಕೆಲಸ ಮಾಡುವುದಕ್ಕೆ ಒಂದು ತಂಡ ಬೇಕು” ಎಂದಾ ಅದು ಸ್ಥಳದಲ್ಲೇ ಮಂಜೂರಾಯಿತು. ಡಿಎಂಎಸ್ ಅಧ್ಯಕ್ಷ ಡಾ|| ಸಿಕ್ಕಾ ಅವರನ್ನು ವಜಾ ಮಾಡುತ್ತೇನೆ ಎಂದಾಗ ಕುರಿಯನ್, “ಬೇಡ; ಗೌರವಪೂರ್ವಕವಾಗಿ ಕಳುಹಿಸಿ” ಎಂದು ಸಲಹೆ ನೀಡಿದರು. ಸಚಿವರು ಸೂಚಿಸಿದಂತೆ ಡಾ|| ಸಿಕ್ಕಾ ರಾಜೀನಾಮೆ ನೀಡಿದರು. ಕುರಿಯನ್ ಏಳು ಜನರ ತಂಡ ರಚಿಸಿದರು. ಅದರಲ್ಲಿ ದಲಾಯಾ, ಆನಂದ್ನ ಆಹಾರ-ಕೃಷಿಸಂಸ್ಥೆಯ ತಜ್ಞ ಮೈಕೆಲ್ ಹಾಲ್ಸ್ ಮುಂತಾದವರಿದ್ದರು. ಕೆಲಸದ ಸಲುವಾಗಿ ದಲಾಯಾ ದೆಹಲಿಯಲ್ಲೇ ನಿಂತರು. ಕುರಿಯನ್ ದೆಹಲಿ ಮತ್ತು ಆನಂದ್ಗಳ ನಡುವೆ ಸುತ್ತಾಡಿಕೊಂಡಿದ್ದರು. ನಲವತ್ತೆರಡು ದಿನ ಹಗಲು-ರಾತ್ರಿ ಕೆಲಸ ಮಾಡಿದರು. ಅಷ್ಟರಲ್ಲಿ ದೆಹಲಿ ಡೈರಿಯ ದೋಷಗಳು ಬಹುತೇಕ ದೂರವಾಗಿ ಹೊಸ ಡೈರಿ ರೂಪುಗೊಂಡಿತು. ಏಳು ಜನರ ತಂಡವಲ್ಲದೆ ಡಾ|| ಕುರಿಯನ್, ಅಮುಲ್ನ ೯೨ ಜನ ಕೆಲಸಗಾರರನ್ನು ಕೂಡ ದೆಹಲಿ ಡೈರಿಯಲ್ಲಿ ನಿಯೋಜಿಸಿದ್ದರು.
ಡಿಎಂಎಸ್ನ ಆ ಸ್ಥಿತಿಯಲ್ಲಿ ವರ್ಷಕ್ಕೆ ೧೦-೧೨ ಕೋಟಿ ರೂ. ನಷ್ಟ ಆಗುತ್ತಿತ್ತು. ಎಲ್ಲ ಸಬ್ಸಿಡಿಗಳನ್ನು ನಿಲ್ಲಿಸುವಂತೆ ಕುರಿಯನ್ ಸೂಚಿಸಿದರು. ಅದರಿಂದ ಅಗ್ಗಕ್ಕೆ (ಅಥವಾ ಉಚಿತ) ಹಾಲು ಪಡೆಯುತ್ತಿದ್ದ ಹಲವರಿಗೆ ಸಿಟ್ಟು ಬಂತು. ಕೇಂದ್ರ ಸಚಿವ ಸಂಪುಟವು ಈ ಹಾಲಿನ ದರ ನಿಗದಿ ಮಾಡುವುದನ್ನು ರದ್ದುಪಡಿಸಿತು. ಸಂಸ್ಥೆಗೆ ನಷ್ಟ ಆಗದಂತೆ, ಹಾಲಿನ ದರ ನಿಗದಿಪಡಿಸಿದರು. ಹಾಲಿನ ಬೂತ್ಗಳ ರೂಪ ಬದಲಿಸಿದರು. ಎಲ್ಲರಿಗೂ ಒಂದೇ ದರದಲ್ಲಿ ಹಾಲು ಸಿಗುವಂತಾಯಿತು. ರೇಶನಿಂಗ್ ತೆಗೆದುದರ ವಿರುದ್ಧ ಕೆಲವರು ಪ್ರತಿಭಟನೆಯನ್ನು ಕೂಡ ನಡೆಸಿದರು; ಡಾ|| ಕುರಿಯನ್ ತಂಡಕ್ಕೆ ಘೇರಾವ್ ಕೂಡ ಮಾಡಿದರು.
ಆದರೆ ಸಿ. ಸುಬ್ರಹ್ಮಣ್ಯಮ್ ಅವರಿಗೆ ತುಂಬ ಸಂತೋಷವಾಯಿತು. ಅವರು ಡಾ|| ಕುರಿಯನ್ ಅವರ ಗೆಳೆಯನೇ ಆಗಿಬಿಟ್ಟರು. ಡಿಎಂಎಸ್ ಸ್ವಚ್ಛ ಆಗುತ್ತಲೇ ಡಾ|| ಕುರಿಯನ್ ತಮ್ಮ ತಂಡದೊಂದಿಗೆ ಆನಂದ್ಗೆ ಮರಳಿದರು. ಸಚಿವರು ಡಿಎಂಎಸ್ಗೆ ಹೊಸ ಅಧ್ಯಕ್ಷರನ್ನು ತಂದರು. (ಸಶೇಷ)