ಬೇಜವಾಬ್ದಾರಿಯೆನಿಸುವಂತಹ ಮಾತುಗಳನ್ನು ರಾಹುಲ್ಗಾಂಧಿಯವರಿಂದ ಕೇಳಿಬರುತ್ತಿರುವುದನ್ನು ಗಮನಿಸುವಾಗ ಅವರನ್ನು ವಿಪಕ್ಷನಾಯಕರಾಗಿ ಸಂದರ್ಭವಶದಿಂದ ಆಯ್ಕೆ ಮಾಡಿರುವ ಪಕ್ಷಗಳವರಿಗೆ ಆಂತರ್ಯದಲ್ಲಿ ಹೇಗನಿಸುತ್ತಿರಬಹುದು? ಇಷ್ಟಾಗಿ ಇದು ಯಾವಾಗಲೋ ಒಮ್ಮೆ ಆಕಸ್ಮಿಕವಾಗಿ ನಡೆದದ್ದಲ್ಲ;. ಸತತವಾಗಿ ನಡೆದಿರುವ ವಿದ್ಯಮಾನ. ರಾಹುಲ್ಗಾಂಧಿ ಮಾನಸಿಕತೆಯನ್ನು ಏನೆಂದು ಅರ್ಥಯಿಸಬೇಕು? ಇತರರನ್ನು, ಅಧಿಷ್ಠಿತ ಸರ್ಕಾರವನ್ನು ಹಗಲುರಾತ್ರಿ ಟೀಕಿಸುತ್ತಿದ್ದಲ್ಲಿ ತಮ್ಮ ‘ಪ್ರತಿಮೆ’ ವರ್ಧಿಸುತ್ತದೆಂದು ಅವರು ಭಾವಿಸಿದ್ದಾರೆಯೆ? ಇದು ಅಸಮಂಜಸವೆಂದು ಐ.ಎನ್.ಡಿ.ಐ.ಎ ಕೂಟದ ಇತರ ಪಕ್ಷಗಳಿಗೂ ಅನ್ನಿಸಬೇಕಾಗಿತ್ತು. ಹಾಗೆ ಆಗದಿರುವುದು ದುರದೃಷ್ಟಕರ.
ಈ ಮಾತುಗಳನ್ನು ಇಂತಹವರು ಆಡಿದರೆಂದು ವರದಿಗಳು ನಮೂದಿಸದಿದ್ದರೆ ಇವು ಯಾರೋ ಬುದ್ಧಿವಿಕಲರ ಅಪಲಾಪಗಳೆಂದು ಜನರು ಭಾವಿಸುತ್ತಿದ್ದರೇನೊ. ಆದರೆ ಈ ಮಾತುಗಳನ್ನು ಆಡಿದವರು ಯಃಕಶ್ಚಿತರಲ್ಲ; ಕಾಂಗ್ರೆಸ್ ಪಕ್ಷದ ಅಧಿನಾಯಕರೂ ಸಂಸತ್ಸದಸ್ಯರೂ ಸಂಸತ್ತಿನಲ್ಲಿ ವಿಪಕ್ಷಪ್ರಮುಖರೂ ಈ ಕಾರಣದಿಂದ ಕ್ಯಾಬಿನೆಟ್ ಸಚಿವರ ಸ್ಥಾನಮಾನ ಪಡೆದವರೂ ಆದ ರಾಹುಲ್ಗಾಂಧಿ. ಅವರ ಮಾತುಗಳು ತಮ್ಮ ಪಕ್ಷಕ್ಕೇ ಅಪಕೀರ್ತಿ ತರುತ್ತಿವೆಯೆಂದು ಕಾಂಗ್ರೆಸ್ ಪಕ್ಷದವರಿಗೆ ಅನಿಸದಿರುವುದು ಆಶ್ಚರ್ಯಕರ. ಯಾರ ಬಾಯಿಂದಲೇ ಬಂದರೂ ಬೇಜವಾಬ್ದಾರಿಯವೆನಿಸುವಂತಹ ಮಾತುಗಳನ್ನು ರಾಹುಲ್ಗಾಂಧಿಯವರಿಂದ ಕೇಳಿಬರುತ್ತಿರುವುದನ್ನು ಗಮನಿಸುವಾಗ ಅವರನ್ನು ವಿಪಕ್ಷನಾಯಕರಾಗಿ ಸಂದರ್ಭವಶದಿಂದ ಆಯ್ಕೆ ಮಾಡಿರುವ ಪಕ್ಷಗಳವರಿಗೆ ಆಂತರ್ಯದಲ್ಲಿ ಹೇಗನಿಸುತ್ತಿರಬಹುದು? ಇಷ್ಟಾಗಿ ಇದು ಯಾವಾಗಲೋ ಒಮ್ಮೆ ಆಕಸ್ಮಿಕವಾಗಿ ನಡೆದದ್ದಲ್ಲ; ಸತತವಾಗಿ ನಡೆದಿರುವ ವಿದ್ಯಮಾನ.
ಜಾತೀಯತೆಯಿಂದ ಜನ್ಯವಾದ ವಿಕೃತಿಗಳನ್ನು ನಿವಾರಿಸುವ ಪ್ರಯತ್ನಗಳಲ್ಲಿ ದೇಶವಷ್ಟೂ ತೊಡಗಿರುವಾಗ ರಾಹುಲ್ಗಾಂಧಿ ಪ್ರಸಕ್ತಿಯೇ ಇಲ್ಲದ ಸನ್ನಿವೇಶಗಳಿಗೂ ಜಾತೀಯತೆಯ ರಂಗನ್ನು ಲೇಪಿಸುತ್ತಿರುವುದಕ್ಕೆ ಏನೆನ್ನಬೇಕು? ಹಲ್ವಾ ತಯಾರಿಯ ಫೋಟೊವನ್ನು ರಾಹುಲ್ಗಾಂಧಿ ಬಜೆಟ್ ಅಧಿವೇಶನದಲ್ಲಿ ಪ್ರದರ್ಶಿಸಿ “ಇದರಲ್ಲಿ ಹಿಂದುಳಿದ ವರ್ಗಗಳವರಾರೂ ಕಾಣುತ್ತಲೇ ಇಲ್ಲ” ಎಂದು ಪ್ರೌಢವ್ಯಾಖ್ಯೆ ಮಾಡಿದರು.
ಇದಕ್ಕಿಂತ ಹೇಯವಾದ ಮಾತು ಇನ್ನೊಂದೆಡೆ ರಾಹುಲ್ಗಾಂಧಿಯವರಿಂದ ಹೊರಬಂದಿತು. ಅದು ಸೈನಿಕ ದಳವನ್ನು ಕುರಿತು. ಕ್ಷುದ್ರ ಪರಿಗಣನೆಗಳಿಂದ ಅತೀತವಾಗಿ ಶತಾಂಶ ವೃತ್ತಿಪರವಾಗಿ ಸಾಗಿರುವ ಅಂಗವೆಂದರೆ ರಕ್ಷಣಾದಳ ಎಂದು ದೇಶವೆಲ್ಲ ಅಂಗೀಕರಿಸಿದೆ, ಮೆಚ್ಚಿದೆ. ಇಂತಹ ಅಭಿಮಾನಾಸ್ಪದ ವಿಭಾಗಕ್ಕೂ ರಾಹುಲ್ಗಾಂಧಿ ಜಾತೀಯತೆಯ ಬಣ್ಣ ಬಳಿಯಲು ಹಿಂದೆಗೆಯಲಿಲ್ಲ. “ಶ್ರಮದ ಕೆಲಸಗಳು, ಗಡಿಗಳನ್ನು ಕಾಯುವುದು – ಇಂತಹ ಕೆಳಸ್ತರಗಳಲ್ಲಷ್ಟೆ ಪರಿಶಿಷ್ಟ ವರ್ಗಗಳವರೂ ಅಲ್ಪಸಂಖ್ಯಾತರೂ ತೊಡಗಿದ್ದಾರೆ. ಉನ್ನತ ಅಧಿಕಾರಸ್ಥಾನಗಳೆಲ್ಲ ಉಚ್ಚ ವರ್ಗಗಳವರ ಕೈಗಳಲ್ಲಿವೆ.”
ಮೇಲಿನದಕ್ಕಿಂತ ಆಕ್ಷೇಪಣೀಯ ಮಾತುಗಳನ್ನೂ ರಾಹುಲ್ಗಾಂಧಿ ಈಚಿನ ಅವರ ಅಮೆರಿಕ ಪ್ರವಾಸ ಸಂದರ್ಭದಲ್ಲಿ ಆಡಿದ್ದಾರೆ. ತಾವು ಅಲ್ಲಿಯ ಭಾರತಮೂಲದ ವಿದ್ಯಾರ್ಥಿಗಳನ್ನೂ ವಲಸಿಗರಲ್ಲಿ ಪ್ರಭಾವಶಾಲಿಗಳನ್ನೂ ಭೇಟಿ ಮಾಡಲು ಉದ್ದೇಶಿಸಿರುವುದಾಗಿ ಪ್ರಕಟಿಸಿದ್ದರು. ಆದರೆ ನಡೆದದ್ದೇ ಬೇರೆ. ಘೋಷಿತ ಭಾರತವಿರೋಧಿಗಳಿಗೆ ಪ್ರೋತ್ಸಾಹ ನೀಡುವುದಕ್ಕೇ ಅವರ ಮಾತುಗಳು ಮೀಸಲಾದವು.
ಈಚೆಗೆ ಕೆನಡಾದಲ್ಲಿಯೂ ಸ್ವಲ್ಪಮಟ್ಟಿಗೆ ಅಮೆರಿಕದಲ್ಲಿಯೂ ಖಲಿಸ್ತಾನಿ ಉಗ್ರರ ಚಟುವಟಿಕೆಗಳು ತೀವ್ರತೆ ಪಡೆದುಕೊಂಡಿರುವುದು ಸುವಿದಿತ. ಈ ಹಿನ್ನೆಲೆಯಲ್ಲಿ ಖಲಿಸ್ತಾನಿಗಳು ಸೀಖ ಸಮುದಾಯದ ಒಂದು ಸಣ್ಣ ವರ್ಗ್ರಮಾತ್ರವೆಂಬ ಮತ್ತು ಒಟ್ಟಾರೆ ಸೀಖರು ಹಿಂದೂಗಳೊಡನೆ ಸಾಮರಸ್ಯದಿಂದಲೇ ಹೊಂದಿಕೊಂಡಿದ್ದಾರೆಂಬ ವಾಸ್ತವವನ್ನು ಒತ್ತಿ ಹೇಳುವುದರ ಆವಶ್ಯಕತೆ ಇದ್ದಿತು. ಆದರೆ ರಾಹುಲ್ಗಾಂಧಿ ಹಿಂದೂಗಳಿಗೂ ಸೀಖರಿಗೂ ನಡುವೆ ಭಿನ್ನತೆಯನ್ನು ತರುವ ಧಾಟಿಯಲ್ಲಿಯೆ ಮಾತನಾಡಿದರು; ‘ಸೀಖರು ಭಾರತದಲ್ಲಿ ತಲೆಯ ಮೇಲೆ ತಮ್ಮ ಧಾರ್ಮಿಕ ಲಾಂಛನವಾದ ಪಗಡಿಯನ್ನೂ ಧರಿಸಲಾಗದ ಸ್ಥಿತಿ ಇದೆ’ ಎಂಬ ಶತಾಂಶ ಸುಳ್ಳು ಆಪಾದನೆ ಮಾಡಿದರು; ಹೀಗೆ ಪರೋಕ್ಷವಾಗಿ ಖಲಿಸ್ತಾನಿಗಳಿಗೆ ಕುಮ್ಮಕ್ಕು ಕೊಟ್ಟರು.
ರಾಹುಲ್ಗಾಂಧಿ ಅಮೆರಿಕ ಪರ್ಯಟನೆಯಲ್ಲಿ ಆಡಿದ ಎಲ್ಲ ಮಾತುಗಳೂ ಭಾರತದ ರಾಷ್ಟ್ರಹಿತಕ್ಕೆ ವಿರುದ್ಧವೇ ಆಗಿದ್ದವು; ಹೀಗೆ ಅವರು ಭಾರತವಿರೋಧಿ ದೇಶಗಳ ಬಳಕೆಗೆ ಅನುಕೂಲಕರ ಸಾಮಗ್ರಿಯನ್ನು (ಅದೆಲ್ಲ ಸುಳ್ಳೇ ಆಗಿರವೊಲ್ಲದೇಕೆ) ಅವಕ್ಕೆ ತಟ್ಟೆಯಲ್ಲಿಟ್ಟು ಕೊಡುವ ಸ್ವದೇಶವಿರೋಧಿ ಕೆಲಸವನ್ನೇ ಮಾಡಿದರು.
ರಾಹುಲ್ಗಾಂಧಿ ಮಾಡಿದ ಇನ್ನೊಂದು ಸುಳ್ಳು ಆಪಾದನೆ ವಿಷಾದಕರವಾಗಿದ್ದಂತೆ ಹಾಸ್ಯಾಸ್ಪದವೂ ಆಗಿತ್ತು. ಅದು ೨೦೨೪ರ ಸಾರ್ವತ್ರಿಕ ಚುನಾವಣೆಯ ಫಲಿತವನ್ನು ಕುರಿತದ್ದು. ಅವರು ಹೇಳಿದರು: “ಚುನಾವಣೆಯ ಮತಗಣನೆ ನ್ಯಾಯವಾಗಿ ನಡೆದಿದ್ದಿದ್ದರೆ ಭಾಜಪಾಕ್ಕೆ ಇಷ್ಟು ಮತಗಳು ಬರುವುದು ಸಾಧ್ಯವೇ ಇರಲಿಲ್ಲ. ಈ ಚುನಾವಣೆಯ ಫಲಿತವನ್ನು ಪೂರ್ತಿ ನಿಯಂತ್ರಿಸಿದ್ದುದು ಕೇಂದ್ರಸರ್ಕಾರವೇ.” ಈ ಟೀಕೆ ಆಶ್ಚರ್ಯಕರವೆನ್ನಬೇಕು. ಭಾರತದಲ್ಲಿ ನಡೆದಿರುವ ಚುನಾವಣೆಯ ಪ್ರಕ್ರಿಯೆ ಅಂತರರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ. ಹಲವು ದೇಶಗಳು ತಮ್ಮ ದೇಶಗಳ ಚುನಾವಣೆಯ ನಿರ್ವಹಣೆಯಲ್ಲಿ ಭಾರತದ ಚುನಾವಣಾ ಆಯೋಗದ ಸಹಕಾರವನ್ನು ಕೋರಿವೆ. ಭಾರತದ ಚುನಾವಣಾ ಆಯೋಗ ಪೂರ್ಣವಾಗಿ ಸ್ವತಂತ್ರವಾಗಿರುವ ಸಂವಿಧಾನಬದ್ಧ ಸ್ವಾಯತ್ತ ಸಂಸ್ಥೆ. ಅದರ ವಿಶ್ವಾಸಾರ್ಹತೆಯನ್ನು ಯಾವ ವಿರೋಧಪಕ್ಷಗಳೂ ಪ್ರಶ್ನಿಸಿಲ್ಲ. ಭಾಜಪಾವಿರೋಧಿ ಚುನಾವಣಾ ಪ್ರಚಾರಕ್ಕೆ ದೇಶದಲ್ಲಿ ಎಲ್ಲಿಯೂ ಅಡ್ಡಿ ಒದಗಿಲ್ಲ.
ಇಷ್ಟಕ್ಕೂ ರಾಹುಲ್ಗಾಂಧಿ ರಿಗಿಂಗ್-ಮೋಸ ನಡೆದಿದೆಯೆಂದು ಆಪಾದಿಸಿರುವ ಚುನಾವಣೆಯ ಫಲಿತದ ಆಧಾರದ ಮೇಲೆಯೆ ಹಲವು ರಾಜ್ಯಗಳಲ್ಲಿ ಭಾಜಪಾ ಅಲ್ಲದ ಅನ್ಯಪಕ್ಷ ಸರ್ಕಾರಗಳು ಪದಾಧಿಷ್ಠಿತವಾಗಿವೆಯಲ್ಲ! ಇದನ್ನೂ ರಾಹುಲ್ಗಾಂಧಿ ಅಲ್ಲಗಳೆಯುತ್ತಿದ್ದಾರೆಯೆ? ಅವರ ಮಾತುಗಳಲ್ಲಿ ಹೊಣೆಗಾರಿಕೆಯನ್ನಾಗಲಿ ತಾರ್ಕಿಕತೆಯನ್ನಾಗಲಿ ನಿರೀಕ್ಷಿಸುವುದು ವ್ಯರ್ಥ.
ರಾಹುಲ್ಗಾಂಧಿ ಮಾನಸಿಕತೆಯನ್ನು ಏನೆಂದು ಅರ್ಥಯಿಸಬೇಕು? ಇತರರನ್ನು, ಅಧಿಷ್ಠಿತ ಸರ್ಕಾರವನ್ನು ಹಗಲುರಾತ್ರಿ ಟೀಕಿಸುತ್ತಿದ್ದಲ್ಲಿ ತಮ್ಮ ‘ಪ್ರತಿಮೆ’ ವರ್ಧಿಸುತ್ತದೆಂದು ಅವರು ಭಾವಿಸಿದ್ದಾರೆಯೆ? ಇದು ಅಸಮಂಜಸವೆಂದು ಐ.ಎನ್.ಡಿ.ಐ.ಎ ಕೂಟದ ಇತರ ಪಕ್ಷಗಳಿಗೂ ಅನ್ನಿಸಬೇಕಾಗಿತ್ತು. ಹಾಗೆ ಆಗದಿರುವುದು ದುರದೃಷ್ಟಕರ. ದುರ್ಮಾರ್ಗದ ಉಪಲಬ್ಧಿ ಎಷ್ಟು ಕಾಲ ಉಳಿದೀತು? ರಾಜ್ಯಾಂಗ ವ್ಯವಸ್ಥೆಯ ಆರೋಗ್ಯವು ಸರ್ವಥಾ ರಕ್ಷಣೀಯವೆಂಬುದರ ಬಗೆಗೆ ರಾಜಿ ಸಲ್ಲದು.