ಭಾರತೀಯ ಸಂಸ್ಕೃತಿಯ ಅಡಿಗಲ್ಲು ವೇದಗಳು. ಭಾರತದಲ್ಲಿ ಮನಃಶಾಸ್ತ್ರ ಎಂಬ ಪ್ರತ್ಯೇಕ ವಿಜ್ಞಾನ ಶಾಖೆ ಜನ್ಮತಳೆಯಲಿಲ್ಲವಾದರೂ ಅದರ ಪೂರ್ಣಾವತಾರವನ್ನು ವಾಙ್ಮಯದಲ್ಲಿ ಕಾಣಬಹುದು. ವೇದಮಂತ್ರಗಳು ಶ್ರೇಷ್ಠ ವಿದ್ವತ್ ಪರಿಶ್ರಮದ ಫಲಿತಗಳಲ್ಲ ಅಥವಾ ಚಿಂತನೆ, ಭಾಷಾಶೈಲಿ, ವಾಕ್ಯಗಳಿಂದ ಕೂಡಿದ ಜಾಣ್ಮೆಯ ರಚನೆಯಲ್ಲ. ಅದರೊಳಗೆ ಪ್ರಚಂಡವಾದ ಶಕ್ತಿಯಿದೆ. ಈ ಶಕ್ತಿಯೇ ಮುಕ್ತವಾಗಿ ಸುಂದರವಾದ ಕಾವ್ಯಾತ್ಮಕ ನುಡಿಯಾಗಿ ಅರಳಿತು. ಅಸ್ತಿತ್ವದೊಡನೆ ನಡೆಸಿದ ಮಹಾನ್ ಸಂವಾದದಿಂದ ಈ ವೇದಮಂತ್ರಗಳು ಸ್ಫೂರ್ತಿ ಪಡೆದಿವೆ. ಆದ್ದರಿಂದ ಈ ಸೂಕ್ತಗಳು ‘ದರ್ಶನ’ದ ಸ್ವರೂಪದಲ್ಲಿವೆ. ವೇದವು ಪ್ರಕಾಶಗೊಳಿಸುತ್ತಿರುವ ಸತ್ಯವು, ನಾವು ಇಂದ್ರಿಯಗಳು ಮತ್ತು ಮನಸ್ಸಿನ ಮೂಲಕ ಗ್ರಹಿಸುತ್ತಿರುವ ಈ ಪರಿವರ್ತನಶೀಲ ಜಗತ್ತಿನ ಸತ್ಯಕ್ಕಿಂತ ತೀರಾ ಭಿನ್ನ. ಈ ಸತ್ಯವು ಅತ್ಯಂತ ಗಹನವಾದುದು ಮತ್ತು ಇಂದ್ರಿಯಾತೀತವಾದುದು. ವೇದದ ಬೆಳಕು ಮಾನವನ ಬುದ್ಧಿಯು ಸೂಚಿಸುತ್ತಿರುವ ಬೆಳಕನ್ನೂ ಮೀರಿಸುವಂಥಾದ್ದು. ಈ ಮಾರ್ಗದಿಂದಲೇ ವೇದಸಂಹಿತೆಯ ಮಂತ್ರಗಳನ್ನು ವ್ಯಾಖ್ಯಾನಿಸಬೇಕು. ಹೀಗೆ ಮಾಡಿದರೆ ಈ ಮಂತ್ರಗಳು ಅರ್ಥದ್ಯೋತಕವಾಗುತ್ತವೆ.
ಮನಃಶಾಸ್ತ್ರ ವಾಸ್ತವಿಕವಾಗಿ ಚೇತನದ ವಿಜ್ಞಾನವಾಗಿದ್ದು ಅದರ ಸ್ವಭಾವ ಹಾಗೂ ಚಲನೆಯನ್ನು ಅರ್ಥೈಸಿಕೊಳ್ಳುವುದಾಗಿದೆ. ಅದಕ್ಕೆಂದೇ ಅರೋಬಿಂದೊ ಹೇಳಿದ್ದು : “ಮನಃಶಾಸ್ತ್ರವು ಚೇತನದ ವಿಜ್ಞಾನ ಹಾಗೂ ಸೃಷ್ಟಿಯಲ್ಲಿನ ಅದರ ಸ್ಥಿತಿ ಹಾಗೂ ಕಾರ್ಯಾಚರಣೆಗಳ ಕುರಿತಾಗಿದೆ. ನಾವು ಯಾವುದನ್ನು ಸೃಷ್ಟಿ ಎಂದು ತಿಳಿದಿದ್ದೇವೆಯೋ ಅದಕ್ಕಿಂತ ಮಿಗಿಲಾದ ಅದರ ರಚನೆಯನ್ನು ತಿಳಿದುಕೊಳ್ಳುವುದಕ್ಕೆ (ಮನಃಶಾಸ್ತ್ರ) ಸಂಬಂಧಿಸಿದೆ”. ಮುಂದುವರಿದು ಅವರು ಹೇಳುತ್ತಾರೆ, “ಐರೋಪ್ಯರ ಪುರಾತನ ಮನಃಶಾಸ್ತ್ರವು ಹುಸಿ-ವಿಜ್ಞಾನ (pseudo-scientific) ವ್ಯವಸ್ಥೆಯಾಗಿದೆ. ಅದರ ಶಬ್ದಗಳು ಹಾಗೂ ವರ್ಗೀಕರಣ ಸ್ವೇಚ್ಛಾನುಸಾರಿ ಆಗಿವೆ. ಅದರ ಉದ್ದೇಶ ಹಾಗೂ ಕೇಂದ್ರಬಿಂದು ಅಸಂಗತ, ನಿಸ್ಸಾರ ಹಾಗೂ ಒಣಪಾಂಡಿತ್ಯಮಯ ಆಗಿವೆ. ಪ್ರಾಥಮಿಕ ಮಾಹಿತಿಗಳು ಹಾಗೂ ಮೇಲ್ವಾತಳಿಯ ಸಾಮಾನ್ಯೀಕರಣಗಳಿಂದ ಹೊರಬಂದು, ಊಹೆ ಹಾಗೂ ಅಪೂರ್ಣ ನಿರ್ಣಯಗಳಿಂದ ಮುಕ್ತವಾಗಿ ಮನಃಶಾಸ್ತ್ರವು ಒಂದು ವಿಜ್ಞಾನ ಎನಿಸಿಕೊಳ್ಳಬೇಕಾದರೆ ಅನುಭಾವೀ ಹಾಗೂ ಪ್ರಯೋಗಾತ್ಮಕ ಮನಃಶಾಸ್ತ್ರ ಆಗಬೇಕಾಗುತ್ತದೆ. ನಾವು ವೀಕ್ಷಿಸಿದ್ದನ್ನು ಕಾಣಬೇಕು, ಅನುಭವಿಸಬೇಕು, ನೇರವಾಗಿ ತಿಳಿಯಬೇಕು, ಖಚಿತ ಜ್ಞಾನದ ಮೇಲೆ ನಾವು ಕೆಲಸ ಮಾಡುವಂತಾಗಬೇಕು.”
ಪಾಶ್ಚಾತ್ಯರ ಮನಃಶಾಸ್ತ್ರ ಕೇವಲ ಪಂಚೇಂದ್ರಿಯಗಳ ನಿಲುಕಿಗೆ ಸೀಮಿತವಾಗಿದೆ. ಹೀಗಿದ್ದರೂ ೨೦೦೬ರಲ್ಲಿ ವಾಲ್ಶ್ ಹಾಗೂ ಶಾಪಿರೊ (Walsh and Shapiro) ಹೀಗೆಂದಿದ್ದರು : ಭಾರತೀಯ ಶಾಸ್ತ್ರಗಳು, ಪರಂಪರೆಗಳು ಮನಃಶಾಸ್ತ್ರದ ಅನೇಕ ಆಯಾಮಗಳನ್ನು ತಲುಪಿಯೇ ಇಲ್ಲ. ಅವರ ಪ್ರಕಾರ ‘ಧ್ಯಾನಮುಖಿ ಪರಂಪರೆಗಳು’, ಶಿಶು-ವೃದ್ಧಿ, ಮಾನವ ನಡುವಳಿಕೆಯ ಅಧ್ಯಯನ (psychodynamics) ಮನೋರೋಗನಿದಾನಶಾಸ್ತ್ರ (psychopathology) ಹಾಗೂ ಮನೋ-ಔಷಧಿಶಾಸ್ತ್ರ (psycho-pharmacology) ಈ ವಿಷಯಗಳಲ್ಲಿ ಅಲ್ಪ ಮಾಹಿತಿ ನೀಡಬಲ್ಲವಾಗಿವೆ. ಆದರೆ ಸಿದ್ಧ ಹಾಗೂ ಆಯುರ್ವೇದ ಶಾಸ್ತ್ರಗಳಲ್ಲಿ ಈ ಬಗ್ಗೆ ಅಪಾರ ಜ್ಞಾನ ಇದೆ. ಈ ನಾಲ್ಕೂ ಕ್ಷೇತ್ರಗಳ ಕುರಿತು ಪಾಶ್ಚಾತ್ಯರು ಕಂಡುಕೊಂಡ ಸಕಲ ಸಂಗತಿಗಳ ತಿಳುವಳಿಕೆ ಇದೆ. ಅಲ್ಲದೆ ಇವುಗಳಿಗೆ ಸಂಬಂಧಿಸಿದ ಸೂಕ್ಷ್ಮ ಅಂಶಗಳನ್ನು ನಮ್ಮ ಶಾಸ್ತ್ರಗಳು ತಿಳಿಸಿವೆ. ಶಿಶು-ಅಭಿವೃದ್ಧಿಗೆ ಸಂಬಂಧಿಸಿದಂತೆ ಅದರ ಪೂರ್ವಜನ್ಮದಿಂದ ಸಾಗಿಬರುವ ಸ್ವಭಾವ, ಆತ್ಮ-ಗುಣ ಇವೆಲ್ಲವುಗಳೂ ಸಂಶೋಧನೆಗೆ ಒಳಗಾಗಿದ್ದು, ಇವುಗಳು ವ್ಯಕ್ತಿಯ ಚಾರಿತ್ರ್ಯನಿರ್ಮಾಣ ಹಾಗೂ ನಡುವಳಿಕೆಗಳ ಮೇಲೆ ಬೀರುವ ಪ್ರಭಾವಗಳ ಕುರಿತು ವಿವರಣೆಗಳಿವೆ. ಆದರೆ ಅಧ್ಯಯನದ ಕೊರತೆಯಿಂದ ಪಾಶ್ಚಾತ್ಯರು ತಪ್ಪು ಪ್ರತಿಪಾದನೆಗೆ ಮುಂದಾಗಿದ್ದಾರೆ.
ಮನಃಶಾಸ್ತ್ರದ ಮುಖ್ಯ ಆಸಕ್ತಿಯ ಒಂದು ಕ್ಷೇತ್ರ ಭಾವನೆಗಳು ಹಾಗೂ ಪ್ರೇರಣೆಗಳು. ಇವುಗಳ ಅಧ್ಯಯನ ಹಾಗೂ ತತ್ತ್ವಪ್ರತಿಪಾದನೆಗೆ ನಾವು ಭಾರತೀಯ ಜ್ಞಾನದ ವಿಶಿಷ್ಟ ಕೊಡುಗೆಗಳನ್ನೇ ಆಧರಿಸಬೇಕಾಗುತ್ತದೆ. ಪರಮ ಸತ್ಯವನ್ನು ಸತ್, ಚಿತ್, ಆನಂದವೆಂಬ ಅವಿಭಾಜ್ಯ ತತ್ತ್ವ ನಿರೂಪಿಸುತ್ತದೆ ಎಂಬ ಭಾರತೀಯ ಶೋಧನೆ ವಿಶಿಷ್ಟವಾದದ್ದು. ಮುಖ್ಯ ಧಾರೆಯ ಮನಃಶಾಸ್ತ್ರದ ಅನುಸಾರ ಮನುಷ್ಯನ ಸುಖ ಅವನ ಆಸೆಗಳು ಹಾಗೂ ಆವಶ್ಯಕತೆಗಳ ಈಡೇರಿಸುವಿಕೆಯಲ್ಲಿ ಅಡಗಿದೆ ಹಾಗೂ ದುಃಖಕ್ಕೆ ಕಾರಣ ವ್ಯಕ್ತಿಯ ಅಹಂಗೆ ಆಗುವ ಧಕ್ಕೆ. ಆಸೆಗಳ ಈಡೇರಿಕೆಯಿಂದ ಸಿಗುವ ಸುಖ ಹಾಗೂ ಅಹಂಗೆ ಪೆಟ್ಟಾಗುವುದರಿಂದ ಉಂಟಾಗುವ ದುಃಖ – ಇವು ಬಹಳ ಕ್ಷಣಿಕ. ಆದ್ದರಿಂದ ಶಾಶ್ವತ ಸುಖ ಹಾಗೂ ದುಃಖಮುಕ್ತಿಯ ಕಡೆಗೆ ಸಾಗುವುದೇ ಮನುಷ್ಯನ ಜೀವನೋದ್ದೇಶ ಆಗಿರಬೇಕು ಎಂಬ ನಿಲುವನ್ನು ತಳೆದ ಭಾರತೀಯ ಪರಂಪರೆ ಮನಃಶಾಸ್ತ್ರದ ಅಂತಿಮ ಅವಸ್ಥೆಯನ್ನು ತೋರಿಸಿಕೊಟ್ಟಿದೆ. ಸ್ಪರ್ಧೆ, ಈರ್ಷ್ಯೆ, ದರ್ಪ, ಸ್ವಾರ್ಥ, ನಿರಾಶೆ ಇವುಗಳನ್ನು ಹೊರತುಪಡಿಸಿ ಪ್ರೀತಿ, ವಿಶ್ವಾಸ, ನಂಬಿಕೆ, ಶ್ರದ್ಧೆ, ಸೌಹಾರ್ದ, ಮಿತ್ರತ್ವ, ನಿಃಸ್ವಾರ್ಥತೆ, ಸಹಾಯಪರತೆ ಈ ತತ್ತ್ವಗಳಿಂದ ಕೂಡಿದ ಜೀವನ ಮನಃಸ್ವಾಸ್ಥ್ಯಕ್ಕೆ ಕಾರಣವಾಗುತ್ತದೆ ಎಂಬುದು ಭಾರತೀಯ ಪರಂಪರೆ ಮನಃಶಾಸ್ತ್ರಕ್ಕೆ ನೀಡಿದ ಹಿರಿಯ ಕೊಡುಗೆ.
ಭಾರತೀಯ ಪರಂಪರೆಯಲ್ಲಿ ಅಡಗಿದ ಮನಃಶಾಸ್ತ್ರಸಂಬಂಧಿತ ಅಮೂಲ್ಯ ವಿಚಾರಗಳನ್ನು ಹುಡುಕಿ ತೆಗೆಯಬೇಕಾಗಿದೆ. ನಮ್ಮ ಶಾಸ್ತ್ರಗ್ರಂಥಗಳಿಂದ ಅರಿಯಬೇಕಾದ್ದು, ಅನುಸರಿಸಬೇಕಾದ್ದು ಅಪಾರವಾಗಿದೆ. ನಮ್ಮ ಋಷಿ-ಮುನಿಗಳು ತಮ್ಮ ದರ್ಶನವನ್ನಾಧರಿಸಿ ನೀಡಿದ ಜ್ಞಾನವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕಾಗಿದೆ. ಇದಕ್ಕೆ ಕೇವಲ ಪ್ರಕಟ ಜಗತ್ತಿನ ಬಗ್ಗೆ ಮಾತ್ರ ಚಿಂತನೆ, ಸಂಶೋಧನೆ ನಡೆಸಿದರೆ ಸಾಲದು. ನಮ್ಮ ಅಂತರ್ಜೀವನದ ಹೊಸ ಆಯಾಮಗಳನ್ನು, ರಹಸ್ಯಗಳನ್ನು ಅರಿತುಕೊಳ್ಳಬೇಕಾಗಿದೆ. ಈ ಕೆಲಸಗಳನ್ನು ಮಾಡಿದವರ ಮುಂಚೂಣಿಯಲ್ಲಿ ಇರುವವರು ಪ್ರೊ|| ಎಸ್. ಕೆ. ರಾಮಚಂದ್ರರಾವ್ ಅವರು. ಇದುವೇ ಅವರು ಮನಃಶಾಸ್ತ್ರ ಕ್ಷಿತಿಜವಿಸ್ತಾರಕ್ಕೆ ನೀಡಿದ ಮಹತ್ತರ ಕೊಡುಗೆಯಾಗಿದೆ.
* * *
ಪ್ರೊ|| ರಾಮಚಂದ್ರರಾವ್ ಅವರು ಈ ದೇಶ ಕಂಡ ಬಹುಶ್ರುತ ವಿದ್ವಾಂಸರು, ಜ್ಞಾನಪರಂಪರೆಯ ಅಧ್ವರ್ಯು. ಅವರ ಅಧ್ಯಯನ ಹಾಗೂ ಬರವಣಿಗೆ ವ್ಯಾಪಕವೂ ಆಳವೂ ಆಗಿವೆ. ಅವರೊಂದಿಗಿನ ಒಡನಾಟ ಬೆಳಕಿನೊಂದಿಗಿನ ಒಡನಾಟದಂತೆ. ಸಭ್ಯತೆ, ಸಜ್ಜನಿಕೆ ಹಾಗೂ ಜ್ಞಾನಗಳ ತ್ರಿವೇಣೀಸಂಗಮ ಅವರು. ಭಾರತೀಯ ಶಾಸ್ತ್ರಪರಂಪರೆ ಕುರಿತಂತೆ ಅವರದು ಸದಾ ಅಧಿಕಾರವಾಣಿ. ಅವರು ಅಧ್ಯಯನ, ಸಂಶೋಧನೆಗಳಿಗೆ ಆಯ್ದುಕೊಂಡ ಕ್ಷೇತ್ರಗಳನ್ನೆಲ್ಲ ಶ್ರೀಮಂತಗೊಳಿಸಿದಂತೆಯೇ ಮನಃಶಾಸ್ತ್ರ ಕ್ಷಿತಿಜವಿಸ್ತಾರಕ್ಕೂ ಕಾರಣರಾಗಿದ್ದಾರೆ. ಅವರು ನೀಡಿದ ಕೊಡುಗೆಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ತಿಳಿದುಕೊಳ್ಳಲು ಪ್ರಯತ್ನಿಸೋಣ.
ನಾನು ಇಲ್ಲಿ ಪ್ರೊ|| ರಾಮಚಂದ್ರರಾವ್ ಅವರ ದರ್ಶನಗಳ ಬೆಳಕಿನಿಂದ ಹೊರಹೊಮ್ಮಿದ ವಿಚಾರಗಳನ್ನು ಅಧಿಕವಾಗಿ ಬಳಸಿ ವಿಷಯನಿರೂಪಣೆ ಮಾಡಲು ಬಯಸುತ್ತೇನೆ. ಪದೇ ಪದೇ ಅವರ ಹೆಸರು ಮತ್ತು ಉದ್ಧರಣಚಿಹ್ನೆಯನ್ನು ಬಳಸುತ್ತಿಲ್ಲ. ಇದನ್ನು ಓದುವ ಮೂಲಕ ಭಾರತೀಯ ಮನಃಶಾಸ್ತ್ರ ಬೆಳೆದುಬಂದ ಬಗೆಯನ್ನು ಸರಳವಾಗಿ ಅರಿಯಬಹುದಾಗಿದೆ.
ಭಾರತೀಯ ಸಂಸ್ಕೃತಿಯ ಅಡಿಗಲ್ಲು ವೇದಗಳು. ಭಾರತದಲ್ಲಿ ಮನಃಶಾಸ್ತ್ರ ಎಂಬ ಪ್ರತ್ಯೇಕ ವಿಜ್ಞಾನಶಾಖೆ ಜನ್ಮ ತಳೆಯಲಿಲ್ಲವಾದರೂ ಅದರ ಪೂರ್ಣಾವತಾರವನ್ನು ವಾಙ್ಮಯದಲ್ಲಿ ಕಾಣಬಹುದು. ವೇದಮಂತ್ರಗಳು ಶ್ರೇಷ್ಠ ವಿದ್ವತ್ಪರಿಶ್ರಮದ ಫಲಿತಗಳಲ್ಲ ಅಥವಾ ಚಿಂತನೆ, ಭಾಷಾಶೈಲಿ, ವಾಕ್ಯಗಳಿಂದ ಕೂಡಿದ ಜಾಣ್ಮೆಯ ರಚನೆಗಳಲ್ಲ. ಅವುಗಳೊಳಗೆ ಪ್ರಚಂಡವಾದ ಶಕ್ತಿಯಿದೆ. ಈ ಶಕ್ತಿಯೇ ಮುಕ್ತವಾಗಿ ಸುಂದರವಾದ ಕಾವ್ಯಾತ್ಮಕ ನುಡಿಯಾಗಿ ಅರಳಿತು. ಅಸ್ತಿತ್ವದೊಡನೆ ನಡೆಸಿದ ಮಹಾ ಸಂವಾದದಿಂದ ಈ ವೇದಮಂತ್ರಗಳು ಸ್ಫೂರ್ತಿ ಪಡೆದಿವೆ. ಆದ್ದರಿಂದ ಈ ಸೂಕ್ತಗಳು ‘ಮಂತ್ರದರ್ಶನ’ದ ಸ್ವರೂಪದಲ್ಲಿವೆ. ವೇದವು ಪ್ರಕಾಶಗೊಳಿಸುತ್ತಿರುವ ಸತ್ಯವು ನಾವು ಇಂದ್ರಿಯಗಳು ಮತ್ತು ಮನಸ್ಸಿನ ಮೂಲಕ ಗ್ರಹಿಸುತ್ತಿರುವ ಈ ಪರಿವರ್ತನಶೀಲ ಜಗತ್ತಿನ ಸತ್ಯಕ್ಕಿಂತ ತೀರಾ ಭಿನ್ನ. ಈ ಸತ್ಯವು ಅತ್ಯಂತ ಗಹನವಾದುದು ಮತ್ತು ಇಂದ್ರಿಯಾತೀತವಾದುದು. ವೇದದ ಬೆಳಕು ಮಾನವನ ಬುದ್ಧಿಯು ಸೂಚಿಸುತ್ತಿರುವ ಬೆಳಕನ್ನೂ ಮೀರಿಸುವಂಥಾದ್ದು. ಈ ಮಾರ್ಗದಿಂದಲೇ ವೇದಮಂತ್ರಗಳನ್ನು ವ್ಯಾಖ್ಯಾನಿಸಬೇಕು. ಹೀಗೆ ಮಾಡಿದರೆ ಈ ಮಂತ್ರಗಳು ಅರ್ಥಪೂರ್ಣವಾಗುತ್ತವೆ. ಈ ಬಗೆಯ ವಿವರಣೆಯನ್ನು ರಹಸ್ಯಾರ್ಥಪರ ಅಥವಾ ಮನಃಪ್ರಾಣಾದಿಪರ (psychological) ಭಾಷ್ಯ ಎನ್ನುತ್ತಾರೆ. ಜ್ಞಾನಿಗಳು ಮೇಲ್ಮೈಯ ಅರ್ಥದಲ್ಲಿ ತೃಪ್ತರಾಗುವುದಿಲ್ಲ. ಅವರು ನಿಗೂಢಾರ್ಥವನ್ನು ತಿಳಿದುಕೊಳ್ಳಲು ಬಯಸುತ್ತಾರೆ (ಪರೋಕ್ಷಪ್ರಿಯಾ ಇವ ಹಿ ದೇವಾಃ ಪ್ರತ್ಯಕ್ಷದ್ವಿಷಃ, ಐ.ಉ. ೩.೧೪). ವೇದದಲ್ಲಿನ ದೇವತೆಗಳೆಲ್ಲ ಮಾನವರೊಳಗಿನ ಯಾವುದಾದರೊಂದು ಮನಃಪ್ರಾಣಾದಿ (psychological) ಶಕ್ತಿಗಳಿಗೆ ಅಧಿಪತಿಗಳಾಗಿರುತ್ತಾರೆ. ಉಹಾದರಣೆಗೆ, ಅಗ್ನಿ – ಸಂಕಲ್ಪ ಶಕ್ತಿಯ ಅಧಿದೇವತೆ, ಇಂದ್ರ – ಸ್ಪಷ್ಟ ವಿಚಾರಶಕ್ತಿಯ ಅಧಿದೇವತೆ, ಸರಸ್ವತೀ – ಪ್ರೇರಣಾಶಕ್ತಿಯ ಅಧಿದೇವತೆ, ಅದಿತಿ – ಸಾಮರಸ್ಯಶಕ್ತಿಯ ಅಧಿದೇವತೆ, ಸರಮಾ – ಅಂತರ್ಬೋಧ (intuition) ಶಕ್ತಿಯ ಅಧಿದೇವತೆ. ಆಧುನಿಕ ಮನಃಶಾಸ್ತ್ರ ಇದರ ಸುಳಿವೂ ನೀಡುವುದಿಲ್ಲ.
ಮೊದಲಿನಿಂದಲೂ ನಾವು ಮನುಷ್ಯ, ಅವನ ಮನಸ್ಸು ಮತ್ತು ಅದರ ಕಾರ್ಯಚಟುವಟಿಕೆಯಲ್ಲಿ ಆಸಕ್ತಿ ತಳೆದಿದ್ದೇವೆ ಮತ್ತು ವಿಶ್ಲೇಷಣೆ ನಡೆಸಿದ್ದೇವೆ. ಇದೆಲ್ಲವನ್ನೂ ನೋಡಿದರೆ ಜ್ಞಾನದ ಒಂದು ಮಹಾಸಾಗರವೇ ಕಂಡೀತು. ವೇದ, ಉಪನಿಷತ್ತು, ಶಾಸ್ತ್ರ, ದರ್ಶನಗಳನ್ನು ಕಂಡಾಗ ಭಾರತೀಯ ಮನಸ್ಸು ಸ್ವಾಭಾವಿಕವಾಗಿ ಚಿಂತನಶೀಲವಾಗಿತ್ತು ಎಂಬುದು ಅರಿವಾಗುತ್ತದೆ.
ಉಪನಿಷತ್ತುಗಳು ಪ್ರಖರ ಮನಸ್ಸಿನ ಉತ್ಪನ್ನಗಳಾಗಿವೆ. ನೈಜ ಅದ್ಭುತವಾದ ಪರಿಕಲ್ಪನೆಯ ಗಣಿಯನ್ನು ಕಾಣುತ್ತೇವೆ. ಉಪನಿಷತ್ತುಗಳು ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಮಸ್ಯೆಗಳಲ್ಲಿ ಆಸಕ್ತಿಯನ್ನು ಹೊಂದಿದ್ದರೂ ಕೇಂದ್ರ ಬಿಂದುವಿನಲ್ಲಿ ಮನುಷ್ಯನಿಗೆ ಒಂದು ನಿರ್ದಿಷ್ಟ ಒತ್ತು ನೀಡಿರುವುದು ಸ್ಪಷ್ಟವಾಗಿದೆ. ಅವನ ಬೌದ್ಧಿಕ ಮತ್ತು ಭಾವನಾತ್ಮಕ ಅನುಭವಗಳು ವಿಶ್ಲೇಷಣೆಗೆ ಒತ್ತು ನೀಡುತ್ತವೆ. ಮಂಥನಕ್ಕೆ ಸಹಾಯಕವಾಗಿ ಆತ್ಮಾವಲೋಕನ ಮತ್ತು ವೀಕ್ಷಣೆಯನ್ನು ಒತ್ತಿ ಹೇಳಲಾಗುತ್ತದೆ. ಮನುಷ್ಯನನ್ನು ಸೂಚಿಸಲು ಈ ಪ್ರಾಚೀನ ಪ್ರಬಂಧಗಳಲ್ಲಿ ‘ಪುರುಷ’ ಎಂಬ ಅಭಿಧಾನವನ್ನು ಆಗಾಗ್ಗೆ ಬಳಸಲಾಗಿದೆ. ಈ ಪದವು ಮನುಷ್ಯನ ಸ್ಪಷ್ಟವಾದ ರಚನೆಗಿಂತ ಅಧಿಕವಾದದ್ದನ್ನು ಸೂಚಿಸುತ್ತದೆ. ಅನುಭವದ ವಿಷಯವಾಗಿ ಅವನನ್ನು ‘ಆತ್ಮ’ದೊಂದಿಗೆ ಸಮಗೊಳಿಸಲಾಗಿದೆ. ವೇದದ ಸಂಪೂರ್ಣ ವಿಸ್ತಾರದಲ್ಲಿ ಈ ಶಬ್ದವನ್ನು ಬ್ಲೂಮ್ಫೀಲ್ಡ್ ಲೆಕ್ಕಾಚಾರದ ಪ್ರಕಾರ, ಕೇವಲ ಹದಿನಾಲ್ಕು ಬಾರಿ ಬಳಸಲಾಗಿದೆ. ವಾಸ್ತವವಾಗಿ ಈ ಪದಕ್ಕೆ ಏಕರೂಪದ ಉಸಿರಾಟ ಎಂಬ ಅರ್ಥವಿದೆ. ಈ ವ್ಯುತ್ಪತ್ತಿ ಆನ್ – ‘ಉಸಿರಾಡಲು’ ಎಂಬ ಧಾತುವಿನ ಒಳಗೊಳ್ಳುವಿಕೆಯನ್ನು ಸೂಚಿಸುತ್ತದೆ. ಕೌಶೀತಕಿಯಲ್ಲಿ ಉಸಿರು, ವಾಣಿ ಮತ್ತು ಮನಸ್ಸು ಆತ್ಮದ ಮೂರು ಅಂಶಗಳಾಗಿವೆ ಎಂದು ತಿಳಿಯುತ್ತೇವೆ. ಈ ಪರಿಕಲ್ಪನೆಯು ಉಪನಿಷತ್ಕಾರರ ದೃಷ್ಟಿಯಲ್ಲಿ ಗಮನಾರ್ಹ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಇದರ ಪರಿಣಾಮವಾಗಿ ನಾವು ಇಲ್ಲಿ ಪ್ರೌಢ ಮತ್ತು ಆಳವಾದ ಸ್ವಯಂ ಸಿದ್ಧಾಂತವನ್ನು ಕಂಡುಕೊಳ್ಳುತ್ತೇವೆ. ಇದು ನಂತರದ ಚಿಂತನೆಯ ಪ್ರವಾಹಗಳ ಮೇಲೆ ಅಗಾಧವಾದ ಪ್ರಭಾವವನ್ನು ಬೀರಿತು.
ಭೌತಿಕ ದೇಹದೊಳಗೆ ಮರೆಯಾಗಿದ್ದು, ಅರಣಿ(ಸೌದೆ)ಗಳಲ್ಲಿನ ಬೆಂಕಿಯಂತೆ ಎಲ್ಲೆಡೆಗೂ ವ್ಯಾಪಿಸಿರುವ ಈ ಅದೃಶ್ಯ ಆತ್ಮವು ‘ಆಂತರಿಕ ಮಾರ್ಗದರ್ಶಿ’ (ಅಂತರ್ಯಾಮಿ) ಆಗಿ ಕಾರ್ಯ ನಿರ್ವಹಿಸುತ್ತದೆ. ಇದು ವಿಭಿನ್ನ ಅಂಶಗಳನ್ನು ಒಂದು ಕಾರ್ಯನಿರ್ವಹಣೆಯ ಸಮಗ್ರ ಘಟಕವಾಗಿ ಸಂಘಟಿಸುತ್ತದೆ. ಆತ್ಮದ ಅತ್ಯಗತ್ಯ ಸ್ವಭಾವವು ಚೇತನವಾಗಿದೆ (ವಿಜ್ಞಾನಮಯ). ಅದು ಮನುಷ್ಯನೊಳಗೆ ಹೊಳೆಯುವ ಬೆಳಕಾಗಿದೆ (ಋಗ್ವೇದ ೧೦.೬೪). ಇದು ಮನಃಶಾಸ್ತ್ರೀಯವಾಗಿ ಸ್ವಯಂಪ್ರಜ್ಞೆಯ ಪ್ರತ್ಯೇಕ ತತ್ತ್ವವಾಗಿ ಸ್ವತಃ ವ್ಯಕ್ತವಾಗುತ್ತದೆ. ಅದರ ಉಪಸ್ಥಿತಿಯು ಸ್ವಯಂವೇದ್ಯವಾಗಿದ್ದು, ಅದರ ಏಕೈಕ ಸಂಭವನೀಯ ಪುರಾವೆಯು ಅಂತರ್ಬೋಧೆ (intuition)ಯಾಗಿದೆ. ಆದರೆ ಅದನ್ನು ಪ್ರಯತ್ನದಿಂದ ಬುದ್ಧಿಪೂರ್ವಕವಾಗಿ ಹಾಗೂ ಅಭ್ಯಾಸದಿಂದ ಅರಿತುಕೊಳ್ಳಬಹುದು. ಅದರ ಅಂತಿಮ ಸ್ವಭಾವದಲ್ಲಿ ಅದು ಬ್ರಹ್ಮ ಅಥವಾ ವಿಶ್ವಾತ್ಮದೊಂದಿಗೆ ಹೋಲುತ್ತದೆ. ಈ ಪದವು ಲ್ಯಾಟಿನ್ನ ಫ್ಲಾಗ್ರೋ ಶಬ್ದದ ಜೊತೆ ಸಂಪರ್ಕ ಹೊಂದಿದೆ ಎಂಬುದು ಸ್ವಾರಸ್ಯಕರವಾಗಿದೆ. ಫ್ಲಾಗ್ರೋ ಎಂದರೆ ಅಗ್ನಿ. ಇದು ಜೆ. ಹರ್ಟೆಲ್ ಸೂಚಿಸಿದಂತೆ, ‘ಮನುಷ್ಯನಲ್ಲಿನ ಆಂತರಿಕ ಅಗ್ನಿ ಮತ್ತು ವಿಶ್ವಾತೀತ (cosmic) ಅಗ್ನಿ’. ಛಾಂದೋಗ್ಯ ಉಪನಿಷತ್ ನಾಲ್ಕು ವಿಭಿನ್ನ ಹಂತಗಳನ್ನು ಗ್ರಹಿಸಲು ಆತ್ಮದ ಪರಿಕಲ್ಪನೆಯನ್ನು ಮಂಡಿಸಿದೆ. ಅಂದರೆ ‘ದೇಹದ ಆತ್ಮ’, ‘ಅನುಭವಾತ್ಮಕ ಆತ್ಮ’, ‘ವಿಶ್ವಾತೀತ ಆತ್ಮ’ ಮತ್ತು ‘ಪರಮ ಆತ್ಮ’. ಉಪನಿಷತ್ತುಗಳಲ್ಲಿ ಅತ್ಯಂತ ನಿಡಿದಾದ ಬೃಹದಾರಣ್ಯಕವು ಆತ್ಮವನ್ನು ಚೈತನ್ಯಭರಿತವಾದದ್ದು ಮತ್ತು ‘ಮನೆಯ ಯಜಮಾನ’ ಎಂದು ವಿವರಿಸುತ್ತದೆ.
ಪಾಶ್ಚಾತ್ಯರ ಅನುಸಾರ ಸಂಕಲ್ಪ ಅಥವಾ ಆಸೆ ಅಥವಾ ಕರ್ಮ (ಕ್ರತು) ಮನುಷ್ಯನ ಸಾರವಾಗುತ್ತದೆ. ಇದಕ್ಕಿಂತ ಮೊದಲಿನ ಸ್ತರ ಒಂದಿದೆ. ಏನೆಂದರೆ, ಮನುಷ್ಯನ ಕೆಲಸ ಬೌದ್ಧಿಕ ಹಾಗೂ ಕ್ರಿಯಾತ್ಮಕ ಎರಡೂ ಆಗಿದೆ. ಮನುಷ್ಯನ ರಚನೆಯನ್ನು ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಹಾಗೂ ಆನಂದಮಯ ಎಂದು ಕಲ್ಪಿಸಿಕೊಳ್ಳಲಾಗಿದೆ. ಸಾವಯವ ಜೀವಿಗಳ ಸಂಘಟನೆಯು ಪ್ರಾಣದ ಅಂತಃಸತ್ತ್ವದಿಂದ ಸಂಭವಿಸುತ್ತದೆ. ಮಾಂಡೂಕ್ಯ ಉಪನಿಷತ್ ಮೂರು ಅವಸ್ಥೆಗಳಲ್ಲಿ ಮನುಷ್ಯನ ನಡವಳಿಕೆಯನ್ನು ಪರಿಶೀಲಿಸಿ ಆತ್ಮದ ಸ್ವಭಾವವನ್ನು ನಿರ್ಧರಿಸಲು ಪ್ರಯತ್ನಿಸುತ್ತದೆ. ಎಚ್ಚರ, ಕನಸು ಮತ್ತು ಆಳವಾದ ನಿದ್ರೆಗಳೇ ಈ ಅವಸ್ಥೆಗಳು.
ಮನುಷ್ಯನು ಮನಸ್ಸನ್ನು ಹೊಂದಿದ್ದಾನೆ; ಅದರ ದೇಹ ಶರೀರ ಹಾಗೂ ರೂಪ ಬೆಳಕು. ಐತರೇಯ ಆರಣ್ಯಕದ ಅನುಸಾರ ಮನಸ್ಸು ಕೇವಲ ಜ್ಞಾನೇಂದ್ರಿಯವಾಗಿದ್ದು, ಅದು ಅರಿಯುವಿಕೆ, ಸಂವೇದನೆ ಹಾಗೂ ಸಂಕಲ್ಪಗುಣಗಳನ್ನು ಹೊಂದಿದೆ. ಅದರ ಸಂರಚನೆ ಶಾರೀರಿಕವಾಗಿದ್ದು, ಅದರ ಗುಣ ಮತ್ತು ಪರಿಣಾಮಕತ್ವಗಳು ಸೇವಿಸುವ ಆಹಾರವನ್ನು ಅವಲಂಬಿಸಿವೆ. ಅದರಲ್ಲಿರುವ ಮನಃಪ್ರಾಣಾದಿ (psychological) ಪ್ರಕ್ರಿಯೆಗಳನ್ನು ಗುರುತಿಸಲಾಗಿದೆ: ವಿಜ್ಞಾನ, ಮೇಧಾ, ದೃಷ್ಟಿ (ಅಂತರ್ಬೋಧೆ), ಮತಿ (ಅಭಿಪ್ರಾಯ), ಧೃತಿ (ನಿರ್ಧಾರ), ಸ್ಮೃತಿ, ಮಂಥನ, ಸಂಕಲ್ಪ ಹಾಗೂ ಆಸೆ (ಕಾಮ). ಇವೆಲ್ಲವೂ ಮನಸ್ಸಿಗಿಂತ ಪ್ರಜ್ಞಾನದ (ಚೇತನದ) ಉಪಕರಣಗಳಾಗಿವೆ. ಮನಸ್ಸು ಕಣ್ಣು, ಕಿವಿಗಳಂತೆ ಒಂದು ಇಂದ್ರಿಯ. ಆದರೆ ಅದು ಭಾವನೆ ಹಾಗೂ ಸಂಕಲ್ಪಗಳ ಶರೀರಾಂಗವಾಗಿದೆ. ಇತರ ಜ್ಞಾನೇಂದ್ರಿಯಗಳ ಕಾರ್ಯಾಚರಣೆಗೆ ಮನಸ್ಸಿನ ಸಹಕಾರ ಹಾಗೂ ಮಾರ್ಗದರ್ಶನ ಅನಿವಾರ್ಯ. ಹೃದಯದ ಕಾರ್ಯವನ್ನೂ ಮನಸ್ಸು ನಿರ್ವಹಿಸುತ್ತದೆ. ಅರ್ಥಪೂರ್ಣವಾದ ಪ್ರತಿಯೊಂದು ಗ್ರಹಿಕೆಯೂ ಮನಸ್ಸಿನದೆ ಕಾರ್ಯ.
ಉಪನಿಷತ್ತುಗಳಲ್ಲಿ ಶಾರೀರಿಕ, ಜ್ಞಾನಶಾಸ್ತ್ರದ ಮತ್ತು ಅಂತರ್ವೈಜ್ಞಾನಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಉಪಯುಕ್ತ ಎನಿಸುವ ಊಹೆಗಳ ಸಂಪತ್ತು ಇದೆ. ಚಿಂತನೆಯು ಪ್ರಾಮಾಣಿಕತೆ ಹಾಗೂ ಸ್ವತಂತ್ರತೆಯಿಂದ ಕೂಡಿದೆ. ಋಷಿಗಳು ದಿಟ್ಟ ಹಾಗೂ ಪ್ರಖರ ಚಿಂತಕರು.
ಉಪನಿಷತ್ತುಗಳ ಸೈದ್ಧಾಂತಿಕ ವ್ಯವಸ್ಥೆಗಳಲ್ಲಿ ಪ್ರಮುಖವಾದದ್ದು ಸಾಂಖ್ಯ. ಇದರ ನಿಖರವಾದ ಮೂಲವು ಅಸ್ಪಷ್ಟವಾಗಿದೆ. ಅಸ್ತಿತ್ವದಲ್ಲಿರುವ ಅತ್ಯಂತ ಹಳೆಯ ಪಠ್ಯ, ‘ಸಾಂಖ್ಯಕಾರಿಕಾ’ ನಮ್ಮ ಯುಗದ ಐದನೇ ಶತಮಾನಕ್ಕಿಂತ ಹಿಂದಿನದು ಎಂದು ತೋರುತ್ತಿಲ್ಲ. ಆದರೆ ಅದರ ಲೇಖಕ ಈಶ್ವರಕೃಷ್ಣ ಪರಂಪರಾಗತ ಗುರುಗಳ ಸರಣಿಯಲ್ಲಿ ನಾಲ್ಕನೆಯವನು ಎಂದು ಪರಿಗಣಿಸಲಾಗಿದೆ. ಅದರ ಪ್ರವರ್ತಕ ಕಪಿಲ ಒಂದು ಋಗ್ವೇದಸೂಕ್ತದೊಂದಿಗೆ ಸಂಬಂಧ ಹೊಂದಿದ್ದಾನೆ. ಸಾಂಖ್ಯದ ಮೊಳಕೆಗಳನ್ನು ಆರಂಭಿಕ ಉಪನಿಷತ್ತುಗಳಲ್ಲಿ ಪತ್ತೆ ಹಚ್ಚಲಾಗಿದೆ. ಆದರೆ, ಅದರ ಸೂತ್ರೀಕರಣವು ಮಹಾಕಾವ್ಯಗಳ ಅವಧಿಯ ಅಂತ್ಯದವರೆಗೆ ವ್ಯವಸ್ಥಿತ ಬದಲಾವಣೆಗೆ ಒಳಗಾಯಿತು. ನಾಸ್ತಿಕ ಮತ್ತು ಅಸಾಂಪ್ರದಾಯಿಕವಾಗಿ ತನ್ನ ಮಂಡನೆಯನ್ನು ಪ್ರಾರಂಭಿಸಿದ ಈ ಪ್ರಾಚೀನ ದರ್ಶನವು ಈ ಪ್ರಕಟ ಪ್ರಪಂಚದ ವಿಕಸನದ ವಿಶ್ಲೇಷಣೆಗೆ ತನ್ನನ್ನು ತೊಡಗಿಸಿಕೊಂಡಿತು.
ಪಿಂಡಾಂಡದ ವ್ಯಕ್ತಿನಿಷ್ಠ ವಿಷಯಗಳು ಹಾಗೂ ಬ್ರಹ್ಮಾಂಡದ ವಸ್ತುನಿಷ್ಠ ವಿಷಯಗಳನ್ನೊಳಗೊಂಡ ೨೪ ತತ್ತ್ವಗಳನ್ನು ಪ್ರತಿಪಾದಿಸಿತು. ವಿಕಾಸವು ಬದಲಾವಣೆಯನ್ನು ವ್ಯಕ್ತಪಡಿಸುತ್ತದೆ ಮತ್ತು ಬದಲಾವಣೆಯು ಶಕ್ತಿಯನ್ನು ಸೂಚಿಸುತ್ತದೆ (ರಜಸ್). ಇದು ಮನುಷ್ಯನ ಚೈತನ್ಯ (ಪುರುಷ) ಮತ್ತು ಪ್ರಕಟ ಅಂಶಗಳ (ಪ್ರಕೃತಿ) ನಡುವಿನ ಮೂಲಭೂತ ವಿಭಜನವನ್ನು ಪ್ರಸ್ತಾಪಿಸಿತು. ಪುರುಷ ವ್ಯಕ್ತಿನಿಷ್ಠ ಅಂಶಕ್ಕೆ ಸಂಬಂಧಿಸಿದೆ. ಇದು ಚೇತನದ ಸ್ಥಿರ ಸ್ರೋತವಾಗಿದೆ. ಇದು ಕಾಂತಿಯುತ ಆಧಾರವಾಗಿದೆ ಮತ್ತು ಪ್ರಕೃತಿಯು ಸಮಸ್ತ ಅಸ್ತಿತ್ವದ ಪ್ರಾಥಮಿಕ ಸ್ರೋತವಾಗಿದೆ. ವಿಕಾಸ ಪ್ರಕ್ರಿಯೆಗೂ ಮೊದಲಿನ ಪ್ರಕೃತಿಯಲ್ಲಿನ ಸ್ಥಿತಿ. ಇದು ಸಂಪೂರ್ಣವಾಗಿ ಜಡವಾಗಿದೆ ಮತ್ತು ಪುರುಷನಿಂದ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅಸಮರ್ಥವಾಗಿದೆ. ಬ್ರಹ್ಮಾಂಡ ಮತ್ತು ಅದರ ಪ್ರಕ್ರಿಯೆಗಳು ಈ ಎರಡು ವಿಭಿನ್ನ ತತ್ತ್ವಗಳ ನಡುವಿನ ವಿಲಕ್ಷಣ ಸಂಬಂಧದ (ಸಂಯೋಗವಿಶೇಷ) ಪರಿಣಾಮವಾಗಿದೆ. ಕೆಲಸದಲ್ಲಿ ಮನುಷ್ಯನು ಅದೇ ತತ್ತ್ವಗಳನ್ನು ಸಾಬೀತುಪಡಿಸುತ್ತಾನೆ. ಅವನ ಅನುಭವ ಮತ್ತು ನಡವಳಿಕೆಯು ಆತ್ಮ ಮತ್ತು ವಸ್ತುಸಂಯೋಜಕಗಳ ನಡುವಿನ ಒಕ್ಕೂಟವನ್ನು ವಿವರಿಸುತ್ತದೆ.
ಸಾಂಖ್ಯದರ್ಶನವು ಭಾರತದಲ್ಲಿ ಮನಃಶಾಸ್ತ್ರದ ವಿಚಾರಗಳ ಬೆಳವಣಿಗೆಯಲ್ಲಿ ಮಹತ್ತ್ವದ ಹಂತವನ್ನು ಗುರುತಿಸುತ್ತದೆ. ಏಕೆಂದರೆ ಇದು ಬೌದ್ಧಧರ್ಮ ಮತ್ತು ವೇದಾಂತಗಳು ಪ್ರತಿನಿಧಿಸುವ ಎರಡು ಪ್ರಮುಖ ಬೌದ್ಧಿಕ ಪ್ರವೃತ್ತಿಗಳ ಬೆಳವಣಿಗೆಯನ್ನು ಸುಗಮಗೊಳಿಸಿತು. ಅಂತೆಯೇ ಯೋಗಶಾಸ್ತ್ರವು ತನ್ನ ವ್ಯವಸ್ಥಿತ ಅಡಿಪಾಯ ನಿರ್ಮಿಸಿಕೊಳ್ಳಲೂ ಸಹಾಯ ಮಾಡಿತು.
ಪ್ರಾಯೋಗಿಕ ಶಿಸ್ತಾಗಿ ಯೋಗವು ಹಿರಿದಾದ ಪ್ರಾಚೀನತೆಯನ್ನು ತೋರುತ್ತದೆ. ಉಪನಿಷತ್ತುಗಳ ಅವಧಿಗೂ ಮುಂಚೆಯೇ ಯೋಗಶಾಸ್ತ್ರ ಇತ್ತು ಎಂಬುದಕ್ಕೆ ಖಚಿತವಾದ ಪುರಾವೆಗಳಿವೆ. ಯೋಗದ ಮೂಲವು ಇತಿಹಾಸಪೂರ್ವ ತಪಸ್ವಿಗಳ ಆಚರಣೆಗಳು ಮತ್ತು ಮಾಂತ್ರಿಕ ನಂಬಿಕೆಗಳಿಂದ ಗುರುತಿಸಬಹುದಾದ ಸಾಧ್ಯತೆಯಿದೆ. ಆದರೆ ಪತಂಜಲಿಯೇ ಯೋಗದ ವ್ಯವಸ್ಥಿತ ಪ್ರತಿಪಾದಕ.
ಸಾಂಖ್ಯದಂತೆ ತನ್ನ ಪ್ರತಿಪಾದನೆಯನ್ನು ಅಸಾಂಪ್ರದಾಯಿಕವಾಗಿ ಪ್ರಾರಂಭಿಸಿದ ಈ ಶಾಸ್ತ್ರವು ಪ್ರಾಯೋಗಿಕ ಆಸಕ್ತಿಯಿಂದ ಗುರುತಿಸಲ್ಪಟ್ಟಿತು. ‘ಯೋಗ’ ಎಂಬ ಶಬ್ದವು ವೈವಿಧ್ಯಮಯ ಅರ್ಥಗಳನ್ನು ಹೊಂದಿದ್ದರೂ ‘ಒಕ್ಕೂಟ’, ‘ಕೌಶಲ್ಯ’ ‘ವ್ಯಾಯಾಮ’, ‘ಔಚಿತ್ಯ’, ‘ರಕ್ಷಣೆ’, ‘ಹೀರಿಕೊಳ್ಳುವಿಕೆ’ ಎಂಬ ತಾತ್ಪರ್ಯಗಳನ್ನು ಹೊಂದಿದೆ. ಇದು ಮೂಲಭೂತವಾಗಿ ಹೀರಿಕೊಳ್ಳುವ ಸಿದ್ಧಾಂತವಾಗಿದೆ.
ಯೋಗದ ಮುಖ್ಯ ಉದ್ದೇಶವು ಮನುಷ್ಯನ ಮಾನಸಿಕ ಸಂವಿಧಾನವನ್ನು ಉತ್ತಮಗೊಳಿಸುವ ಮೂಲಕ ದಕ್ಷತೆಯನ್ನು ಹೆಚ್ಚಿಸುವುದಾಗಿದೆ. ಈ ಉದ್ದೇಶಕ್ಕೆ ಪೂರಕವಾಗಿ ಮಾನವಸ್ವಭಾವದ ಶಕ್ತಿಗಳ ಬಗ್ಗೆ ವಿಸ್ತಾರವಾದ ಶೋಧನೆ ಇರುವುದು ಸಹಜವಾಗಿದೆ. ಯೋಗಪದ್ಧತಿಗಳು ಮನುಷ್ಯನೊಳಗಿನ ಬಲಗಳ ಉಪಸ್ಥಿತಿಯನ್ನು ಒಪ್ಪಿಕೊಳ್ಳುತ್ತವೆ. ಅವುಗಳು ಸಂಸ್ಕರಣಯೋಗ್ಯವಾಗಿವೆ. ಇವು ಸಾಮಾನ್ಯವಾಗಿ ಮನುಷ್ಯನನ್ನು ದೌರ್ಬಲ್ಯಗಳಿಗೆ ಒಳಪಡಿಸಿ ಬಂಧಿಸುತ್ತವೆ. ಆದರೆ ಪ್ರಯತ್ನದಿಂದ ಶಾಂತಿ ಮತ್ತು ಶಕ್ತಿಯನ್ನು ಸಾಧಿಸಬಹುದು. ಯೋಗಸಿದ್ಧಾಂತವು ಮನಸ್ಸಿನ ವಿಷಯವನ್ನು (ಚಿತ್ತ) ಅತ್ಯಂತ ಪ್ರಮುಖವಾದ ಅಂಶವಾಗಿ ಪರಿಗಣಿಸಿದೆ. ಮಾನವನ ಎಲ್ಲ ಅನುಭವಗಳು ಬಾಹ್ಯಪ್ರಪಂಚದ ವಾಸ್ತವತೆಗಳೊಂದಿಗೆ ಅಥವಾ ಅವುಗಳಿಂದ ಪಡೆದ ಅನಿಸಿಕೆಗಳೊಂದಿಗೆ ಮನಸ್ಸಿನ ಸಂವಾದದ ಫಲಿತಾಂಶವಾಗಿದೆ. ‘ಯೋಗಃ ಚಿತ್ತವೃತ್ತಿನಿರೋಧಃ’ (೧.೨) ಎಂಬ ಸೂತ್ರವೊಂದರಿಂದಲೇ ಯೋಗಶಾಸ್ತ್ರವು ಮನಃಶಾಸ್ತ್ರಮಯ ಆಗಿದೆ ಎಂಬುದನ್ನು ಸಮರ್ಥಿಸಬಹುದು.
ಜಗತ್ತನ್ನು ಜೀವಿಗಳು (ಜೀವ) ಮತ್ತು ವಸ್ತು (ಅಜೀವ) ಎಂದು ಇಬ್ಬಗೆಯಾಗಿ ಸಂಯೋಜಿಸಲಾಗಿದೆ ಎಂದು ಜೈನರು ವ್ಯಾಖ್ಯಾನಿಸುತ್ತಾರೆ. ಜೀವದ ವಿಶಿಷ್ಟ ಲಕ್ಷಣವೆಂದರೆ ಪ್ರಜ್ಞೆ (ಬೋಧ). ಇದು ಐದು ಬೋಧನಾಸಂಬಂಧಗಳನ್ನು ಹೊಂದಿದೆ: ಚಿಂತನೆ, ದೈಹಿಕ ಶಕ್ತಿ, ಉಸಿರಾಟ, ಮಾತು ಮತ್ತು ಜೀವನದ ಅವಧಿ. ಇದು ದೇಹವನ್ನು ತನ್ನ ಉಪಕರಣ ಅಥವಾ ವಸ್ತ್ರವಾಗಿ ಬಳಸಿಕೊಳ್ಳುತ್ತದೆ. ಪ್ರಮುಖ ಅಂಶದೊಂದಿಗೆ ಬಹುಸಂಖ್ಯೆಯ ಸೂಕ್ಷ್ಮ ವಸ್ತುಗಳ ಸಂವಹನದ ಮೂಲಕ ಪ್ರಜ್ಞೆ ಉದಯಿಸುತ್ತದೆ. ವೈಯಕ್ತಿಕ ಆತ್ಮಕ್ಕೆ ‘ಬಣ್ಣ’ ಎಂದು ಹೇಳಲಾಗುತ್ತದೆ; ಮತ್ತು ಅಕ್ಷರ ಪ್ರಕಾರಗಳನ್ನು ಪ್ರತಿನಿಧಿಸುವ ಆರು ‘ಬಣ್ಣಗಳು’ ಗುರುತಿಸಲ್ಪಟ್ಟಿವೆ: ಬಿಳಿ (ಶುಕ್ಲ), ಗುಲಾಬಿ (ಪದ್ಮ), ಉರಿಯುತ್ತಿರುವ ಕೆಂಪು (ತೇಜಸ್), ಪಾರಿವಾಳ (ಕಪೋತ), ಕಡು ನೀಲಿ (ನೀಲ) ಮತ್ತು ಕಪ್ಪು (ಕೃಷ್ಣ). ಮೊದಲ ಎರಡು ‘ಉತ್ತಮ’ ಪ್ರಕಾರಕ್ಕೆ (ಸಾತ್ತ್ವಿಕ), ಮುಂದಿನ ಎರಡು ‘ಡೈನಾಮಿಕ್’ ಪ್ರಕಾರಕ್ಕೆ (ರಾಜಸ) ಮತ್ತು ಕೊನೆಯ ಎರಡು ‘ಅಧಮ’ ಪ್ರಾಕರಕ್ಕೆ (ತಾಮಸ) ಸಲ್ಲುತ್ತವೆ. ಮೂಲ ಮಾದರಿಗಳ ಈ ಪುರಾತನ ಪರಿಕಲ್ಪನೆಯು ಕಾಲಾನಂತರದಲ್ಲಿ ವ್ಯಕ್ತಿತ್ವಪ್ರಕಾರಗಳಿಗೆ ಕಾರಣವಾಯಿತು.
ಮನುಷ್ಯನ ಇಂದ್ರಿಯಗಳು ಐದು. ಇವು ಸ್ಪರ್ಶ, ರುಚಿ, ವಾಸನೆ, ದೃಷ್ಟಿ ಮತ್ತು ಶ್ರವಣಗಳಿಗೆ ಸಂಬಂಧಿಸಿವೆ. ಪ್ರತಿಯೊಂದೂ ಒಂದು ನಿರ್ದಿಷ್ಟ ವರ್ಗದ ವಸ್ತುಗಳನ್ನು ಸೆರೆಹಿಡಿಯಲು ತನ್ನದೇ ಆದ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ, ಒಂದು ಇಂದ್ರಿಯವು ಎರಡು ವಿಭಿನ್ನ ಅಂಶಗಳನ್ನು ಹೊಂದಿದೆ: ಭೌತಿಕ ಮತ್ತು ಮಾನಸಿಕ. ಅನುಭವದ ಪರಿಣಾಮವಾಗಿ ಜೀವಿಗಳ ನಿಜವಾದ ಮಾರ್ಪಾಡು. ಸಂವೇದನೆಯನ್ನು ಇಂದ್ರಿಯ-ದತ್ತಾಂಶದ ಅರಿವು ಎಂದು ವ್ಯಾಖ್ಯಾನಿಸಲಾಗಿದೆ. ವಸ್ತುವಿನೊಂದಿಗೆ ಅಂಗದ ಸಂಪರ್ಕದ ಪರಿಣಾಮವಾಗಿ ನಿಷ್ಕಿçಯ ನೋಂದಣಿ. ವಸ್ತುವಿನ ಉಪಸ್ಥಿತಿಯ ಈ ಸಾಮಾನ್ಯ ಅರಿವಿನ ಹಂತದ ನಂತರ, ವಸ್ತುವು ಯಾವ ವರ್ಗಕ್ಕೆ ಸೇರಿದೆ ಎಂಬ ತಿಳಿವು ಉದಯಿಸುತ್ತದೆ. ಇಲ್ಲಿ ವಸ್ತುವನ್ನು ಅದರ ವಸ್ತುನಿಷ್ಠ ಸ್ಥಿತಿಯಿಂದ ಹೊರತೆಗೆಯಲಾಗುತ್ತದೆ ಮತ್ತು ಮಾನಸಿಕ ಗ್ರಹಿಕೆಗೆ ಸಿದ್ಧಪಡಿಸಲಾಗುತ್ತದೆ. ಹೀಗೆ ಸಂವೇದನೆಯ ಎರಡು ಅಂಶಗಳ ನಡುವೆ ವ್ಯತ್ಯಾಸವನ್ನು ಮಾಡಲಾಗುತ್ತದೆ: ಸಂಪರ್ಕ-ಅರಿವು ಮತ್ತು ವಸ್ತು-ಅರಿವು. ಎರಡನೆಯದು ಪಕ್ವತೆಯ ಕಾರ್ಯವೆಂದು ಸೂಚಿಸಲಾಗಿದೆ. ಹೀಗೆ ಪೂರ್ವಭಾವಿಯಾಗಿರುವ ವಸ್ತುವು ಮಾನಸಿಕ ಗ್ರಹಿಕೆಗೆ ದತ್ತಾಂಶವಾಗಿದೆ. ಇದರ ಪೂರ್ವಭಾವಿ ಪ್ರಕ್ರಿಯೆಯು ‘ಊಹಾಪೋಹ’ ಶೈಲಿಯಲ್ಲಿದೆ. ಇದು ವಸ್ತುವಿನ ಗುಣಲಕ್ಷಣಗಳ ನಿರ್ಣಯಕ್ಕಾಗಿ ಶ್ರಮಿಸುತ್ತದೆ. ಪ್ರಯತ್ನವು ಗ್ರಹಿಕೆಯ ಹಂತದಲ್ಲಿ ಅದರ ನೆರವೇರಿಕೆಯನ್ನು ತಲುಪುತ್ತದೆ ಮತ್ತಿದು ಮನಸ್ಸಿನ ನಿರ್ದಿಷ್ಟ ಕಾರ್ಯವಾಗಿದೆ. ಮನಸ್ಸು ಆಂತರಿಕ ವಸ್ತುಗಳನ್ನು ಮತ್ತು ಇಂದ್ರಿಯಗಳ ವಸ್ತುಗಳನ್ನು ಗ್ರಹಿಸುವ ಸಾಧನವಾಗಿದೆ.
ಜೈನದರ್ಶನವು ಮನುಷ್ಯನ ಸಂಪೂರ್ಣ ಜೈವಿಕ ಪರಿಕಲ್ಪನೆಯಿಂದ ಮಾನಸಿಕ ಪರಿಕಲ್ಪನೆಯವರೆಗೆÉ ಪರಿವರ್ತನೆಯ ಹಂತವನ್ನು ಗುರುತಿಸಿದೆ. ಈ ಪ್ರವೃತ್ತಿಯು ಬೌದ್ಧದರ್ಶನದಲ್ಲಿ ತನ್ನ ಫಲವನ್ನು ಸಾಧಿಸಿತು. ಬೌದ್ಧದರ್ಶನದೊಂದಿಗೆ ಭಾರತದಲ್ಲಿ ಮನೋವಿಜ್ಞಾನವು ಸ್ವತಂತ್ರ ಶಾಸ್ತ್ರವಾಗಿ ರೂಪುಗೊಂಡಿತೆಂದು ಹೇಳಬಹುದು. ಧರ್ಮಸಂಹಿತೆಯಾಗಿ ಅದು ನೈತಿಕವಾಗಿತ್ತು ಮತ್ತು ಜನಾಂಗವಾಗಿ ಅದು ನಾಸ್ತಿಕವಾಗಿತ್ತು. ಅದರ ಪ್ರಮುಖ ಚೌಕಟ್ಟು ವ್ಯಕ್ತಿ – ಅವನ ಅಧಿಕಾರಗಳು ಮತ್ತು ದೌರ್ಬಲ್ಯಗಳು, ಅವನ ಸಂವಿಧಾನ ಮತ್ತು ವಿಮೋಚನೆ. ಬೌದ್ಧದರ್ಶನವು ಮನೋವೈಜ್ಞಾನಿಕ ತಿರುವು ಹೊಂದಿರುವ ವಾಸ್ತವ (pragmatism)ವಾದ ಎಂದು ನಿರೂಪಿಸಲ್ಪಟ್ಟಿದೆ.
ಕ್ರಿ.ಶ. ೬೫೦ ಸುಮಾರಿಗೆ ಜೀವಿಸಿದ ಕುಮಾರಿಲ ಭಟ್ಟರು ಪ್ರಸಿದ್ಧ ಬೌದ್ಧ ಚಿಂತಕರಾದ ಧರ್ಮಕೀರ್ತಿ ಮತ್ತು ಪ್ರಜ್ಞಾಕರಗುಪ್ತರ ಸಮಕಾಲೀನರಾಗಿದ್ದರು. ಅವರು ಸ್ವತಃ ಬೌದ್ಧಗುರುಗಳ ವಿದ್ಯಾರ್ಥಿಯಾಗಿದ್ದರು. ಅವರ ಚಿಂತನೆಯು ಉಪನಿಷತ್ತುಗಳು, ಸಾಂಖ್ಯ, ಬೌದ್ಧ ಮತ್ತು ಜೈನದರ್ಶನಗಳ ಸಂಶ್ಲೇಷಣೆಯನ್ನು ಪ್ರತಿನಿಧಿಸುತ್ತದೆ.
ಶಂಕರಾಚಾರ್ಯರು ನಿಸ್ಸಂದೇಹವಾಗಿ ಈ ದೇಶದ ಅತ್ಯಂತ ಶ್ರೇಷ್ಠ ಚಿಂತಕ. ತಮ್ಮ ಜೀವನದ ಸಂಕ್ಷಿಪ್ತ ಅವಧಿಯಲ್ಲೇ (೩೨ ವರ್ಷಗಳು) ಭಾರತದ ಬೌದ್ಧಿಕ ಬೆಳವಣಿಗೆಯ ಮೇಲೆ ಅಮರವಾದ ಪ್ರಭಾವವನ್ನು ಬೀರಿದ್ದಾರೆ. ಅವರು ಅದ್ವೈತಸಿದ್ಧಾಂತವನ್ನು ಪ್ರತಿಪಾದಿಸಿದರು. ಇದು ಅದ್ಭುತ ಮನಸ್ಸುಗಳ ನಕ್ಷತ್ರಪುಂಜವನ್ನು ಆಕರ್ಷಿಸಿತು: ಸುರೇಶ್ವರ, ಪದ್ಮಪಾದ, ವಾಚಸ್ಪತಿ, ಚಿತ್ಸುಖ, ಮಧುಸೂದನ, ಧರ್ಮರಾಜ ಮತ್ತು ಇತರರು. ಅವರ ಸಿದ್ಧಾಂತವು ಪ್ರಧಾನವಾಗಿ ಆಧ್ಯಾತ್ಮಿಕವಾಗಿದ್ದರೂ ಮನೋವಿಜ್ಞಾನದ ಹಲವಾರು ಮೌಲ್ಯಯುತವಾದ ನಿರೂಪಣೆಗಳು ಇಲ್ಲಿ ಕಂಡುಬರುತ್ತವೆ.
ಈ ದೇಶದಲ್ಲಿ ಭಾಷಾಶಾಸ್ತ್ರದ ವಿಶೇಷ ಉಲ್ಲೇಖದೊಂದಿಗೆ ಅಭಿವೃದ್ಧಿಪಡಿಸಲಾದ ಒಂದು ಸಿದ್ಧಾಂತವು ಆಧುನಿಕ ಮನೋವಿಜ್ಞಾನದ ಗೆಸ್ಪಾಲ್ಟ್ ಸಿದ್ಧಾಂತಕ್ಕೆ ಅತಿಸಮೀಪವಾಗಿರುವುದು ಗಮನಾರ್ಹ. ಪ್ರಾಯಶಃ ಕ್ರಿಸ್ತಪೂರ್ವ ಆರನೇ ಶತಮಾನದಲ್ಲಿ ಜೀವಿಸಿದ ಸಂಸ್ಕೃತವ್ಯಾಕರಣಶಾಸ್ತ್ರಕಾರ ಪಾಣಿನಿ ‘ಸ್ಫೋಟಸಿದ್ಧಾಂತ’ವನ್ನು ಸೂಚಿಸುತ್ತಾನೆ. ಪತಂಜಲಿಯು ತನ್ನ ಮಹಾಭಾಷ್ಯದಲ್ಲಿ ಈ ಸಿದ್ಧಾಂತವನ್ನು ನೇರವಾಗಿ ಉಲ್ಲೇಖಿಸುತ್ತಾನೆ. ಪಾಣಿನಿಯ ಸೂತ್ರಗಳು ಅನುಭವದ ಆಂತರಿಕ ಪ್ರಕ್ರಿಯೆಗಳ ಸೂಕ್ಷ್ಮವಾದ ಮಾತಿನಂತೆ ಉಳಿದಿವೆ ಎಂದು ಪತಂಜಲಿ ಸುಳಿವು ನೀಡಿದ. ಈ ಸಲಹೆಯನ್ನು ವ್ಯಾಕರಣಕಾರರ ಚಿಂತನಕ್ರಮದಿಂದ ವಿವರಿಸಲಾಗಿದೆ. ಅದರಲ್ಲಿ ಪ್ರಮುಖವಾದ ಪ್ರತಿಪಾದಕ ಭರ್ತೃಹರಿ. ಅವನು ೭ನೇ ಶತಮಾನದ ಮಧ್ಯಭಾಗಕ್ಕೆ ಸೇರಿದವನು. ೧೭ನೇ ಶತಮಾನದ ಅಂತ್ಯದ ವೇಳೆಗೆ ನಾಗೇಶನು ಈ ಸಿದ್ಧಾಂತವನ್ನು ವ್ಯವಸ್ಥಿತಗೊಳಿಸಿದ. ಸ್ಫೋಟ ಎಂಬ ಶಬ್ದ ‘ಸ್ಫುಟ್’ ಎಂಬ ಮೂಲದಿಂದ ಬಂದಿದೆ. ಮೊಟ್ಟೆಯ ದ್ರವದದಲ್ಲಿನ ಸಂಭಾವ್ಯ ಬೆಳವಣಿಗೆಯಂತೆ ಇದು ಮನಸಿನಲ್ಲಿ ಸುಪ್ತವಾಗಿರುತ್ತದೆ. ಒಂದು ಪದದ ಮೊದಲ ಅಕ್ಷರವನ್ನು ಉಚ್ಚರಿಸಿದ ಕ್ಷಣದಲ್ಲಿ ಸ್ಫೋಟ ಹೊರಹೊಮ್ಮಲು ಪ್ರಾರಂಭಿಸುತ್ತದೆ. ಮುಂದಿನ ಅಕ್ಷರಗಳನ್ನು ಹಿಡಿದಂತೆ ಅದು ಬೆಳೆಯುತ್ತದೆ ಮತ್ತು ಅಭಿವೃದ್ಧಿಗೊಳ್ಳುತ್ತದೆ. ಅಂತಿಮ ಅಕ್ಷರವು ಸಂಪೂರ್ಣವಾಗಿ ಸ್ಫುಟೀಕರಣಗೊಳ್ಳುವವರೆಗೆ ಇದು ಮುಂದುವರಿಯುತ್ತದೆ. ಈ ಸಿದ್ಧಾಂತವು ವ್ಯಾಕರಣದ ಅಂಗವಾಗಿ ಅಭಿವೃದ್ಧಿಪಡಿಸಲ್ಪಟ್ಟಿದ್ದರೂ ಮನೋವಿಜ್ಞಾನಕ್ಕೆ ಅದರ ಮಹತ್ತ್ವವು ನಿಸ್ಸಂಶಯವಾಗಿ ಅಪಾರವಾಗಿದೆ.
ವಿಮರ್ಶೆಯ ಕ್ಷೇತ್ರದಲ್ಲಿ ಭಾರತೀಯ ಚಿಂತಕರ ಕೊಡುಗೆ ಗಮನಾರ್ಹವಾಗಿದೆ. ಕಲ್ಪನೆ, ಭಾವನೆ, ಮೆಚ್ಚುಗೆ ಮತ್ತು ಕಲಾತ್ಮಕ ಸೃಷ್ಟಿಯ ಮನಃಶಾಸ್ತ್ರೀಯ ಸಮಸ್ಯೆಗಳು ಅದರಲ್ಲಿ ಚರ್ಚೆಗೆ ಬರುತ್ತದೆ. ಕ್ರಿಸ್ತಪೂರ್ವ ೨ನೇ ಶತಮಾನದಷ್ಟು ಹಿಂದೆಯೇ ಈ ಕ್ಷೇತ್ರದಲ್ಲಿ ನಮ್ಮ ಜನರ ಚಿಂತನಗಳು ಬೆಳೆದಿದ್ದವು ಎಂಬುದಕ್ಕೆ ಪುರಾವೆಗಳಿವೆ. ಈ ಸಮಯದಲ್ಲಿ ಭರತನು ಕಾವ್ಯ, ನಾಟಕ ಮತ್ತು ಇತರ ಕಲೆಗಳನ್ನು ಉದ್ದೇಶಿಸಿದ ನಾಟ್ಯಶಾಸ್ತ್ರವನ್ನು ರಚಿಸಿ ‘ಸೌಂದರ್ಯದ ಆನಂದ’ ಎಂಬ ಸಿದ್ಧಾಂತವನ್ನು ರೂಪಿಸಿದನು. ಪ್ರತಿಭಾವಂತ ಶಾಸ್ತ್ರಕಾರರ ದೀರ್ಘ ಇತಿಹಾಸ ಈ ಶಾಸ್ತ್ರಕ್ಕಿದೆ. ಈ ಜ್ಞಾನಶಾಖೆಯು ಹದಿನೇಳನೇ ಶತಮಾನದವರೆಗೆ – ಜಗನ್ನಾಥ ತನ್ನ ‘ರಸಗಂಗಾಧರ’ವನ್ನು ಬರೆಯುವವರೆಗೂ – ಶಕ್ತಿ ಮತ್ತು ತೇಜಸ್ಸಿನಿಂದ ಮುಂದುವರಿಯಿತು. ಕಲೆಯ ಉಪಕರಣಗಳ ಕುರಿತು ಮಲಿಕ ಚರ್ಚೆ ಇಲ್ಲಿ ಲಭ್ಯವಿದೆ. ರಾಜಶೇಖರ ಮನಃಪ್ರಾಣಾದಿ ಚಟುವಟಿಕೆಗಳನ್ನು ಸ್ಮೃತಿ ಪ್ರತಿಬಿಂಬ ಮತ್ತು ಅಂತಃಪ್ರಜ್ಞೆ ಎಂದು ವರ್ಗೀಕರಿಸಿದ್ದಾನೆ. ಪ್ರತಿಭೆಯು ಎರಡು ಬಗೆಯದಾಗಿದೆ: ಸೃಜನಾತ್ಮಕ ಮತ್ತು ಮೆಚ್ಚುಗೆ. ರುದ್ರಟನು ನೈಸರ್ಗಿಕ ಅಂತಃಪ್ರಜ್ಞೆ ಮತ್ತು ಸಂಸ್ಕರಣವನ್ನು ಒಪ್ಪಿಕೊಳ್ಳುವ ಅಂತಃಪ್ರಜ್ಞೆಯ ನಡುವೆ ವ್ಯತ್ಯಾಸವನ್ನು ತೋರಿಸಿದನು. ಸೌಂದರ್ಯದ ದೃಷ್ಟಿ ಮತ್ತು ಪರಿಣಾಮಕಾರಿ ಸಂವಹನವನ್ನು ಒಳಗೊಂಡಿರುವ ಅಂತಃಪ್ರಜ್ಞೆಯನ್ನು ಕಾವ್ಯಾತ್ಮಕ ಕಲ್ಪನೆ ಎಂದು ಹೇಳಲಾಗಿದೆ.
ಭರತನ ರಸಸಿದ್ಧಾಂತವು ಹಲವು ಮನಃಶಾಸ್ತ್ರೀಯ ಸಿದ್ಧಾಂತಗಳಿಗೆ ತಳಹದಿ ಒದಗಿಸುತ್ತದೆ. ಅಭಿವ್ಯಕ್ತಿಯ ವಿಶ್ಲೇಷಣೆ ಇನ್ನೊಂದು ಸಮಸ್ಯೆಯಾಗಿದ್ದು, ಹಲವು ಕಾವ್ಯಸಂಬಂಧೀ ಕೃತಿಗಳಲ್ಲಿ ವಿಸ್ತಾರವವಾಗಿ ಚರ್ಚೆಗೆ ಒಳಪಟ್ಟಿದೆ. ಸಾಹಿತ್ಯಿಕ ದೋಷಗಳಿಂದ ರಸಭಂಗ ಆಗುವುದರ ಕಡೆಗೆ ಈ ಶಾಸ್ತ್ರದಲ್ಲಿ ವಿಶೇಷ ಗಮನ ಸೆಳೆಯಲಾಗಿದೆ. ಇವುಗಳನ್ನು ವ್ಯಾಕರಣ, ತರ್ಕ, ಅಭಿವ್ಯಕ್ತಿ ಅಥವಾ ನಿರೂಪಣೆ ಮುಂತಾಗಿ ವರ್ಗೀಕರಿಸಲಾಗಿದ್ದು, ಇವುಗಳಡಿ ದೊಡ್ಡ ಪಟ್ಟಿಯನ್ನೇ ವಿವಿಧ ಲೇಖಕರು ನೀಡಿದ್ದಾರೆ. ಅಸ್ಪಷ್ಟತೆ, ಅಸಮರ್ಪಕತೆ, ಗೊಂದಲ, ಸಂಘರ್ಷ, ಪುನರುಕ್ತಿ, ಅಸಂಬದ್ಧತೆ ಇತ್ಯಾದಿ. ಮಾನಸಿಕ ಅಸ್ವಸ್ಥರ ಮೌಖಿಕ ಪ್ರತಿಕ್ರಿಯೆಗಳ ವಿಶ್ಲೇಷಣೆಗಾಗಿ ಈ ವರ್ಗೀಕರಣವನ್ನು ಬಳಸಿಕೊಳ್ಳಬಹುದು.
ಭಾರತದಲ್ಲಿ ಮನಃಶಾಸ್ತ್ರವನ್ನು ಒಂದು ಪ್ರತ್ಯೇಕ ವಿಜ್ಞಾನವಾಗಿ ನೋಡದಿದ್ದರೂ ವಿವಿಧ ವಿಷಯಗಳ ಮೂಲಕ ಈ ಜ್ಞಾನಕ್ಕೆ ಕೊಡುಗೆ ದೊರಕಿದೆ. ಇಲ್ಲಿ ಉಲ್ಲೇಖಿಸಲಾದ ಅಧ್ಯಯನದ ಕ್ಷೇತ್ರಗಳ ಜೊತೆಗೆ ಔಷಧಶಾಸ್ತ್ರ (ಆಯುರ್ವೇದ) ಮತ್ತು ತಂತ್ರಗಳು ಕೂಡ ಆಸಕ್ತಿದಾಯಕ ಮನಃಶಾಸ್ತ್ರೀಯ ವಿಷಯಗಳನ್ನು ಒಳಗೊಂಡಿವೆ. ಮೇಲೆ ಪಟ್ಟಿ ಮಾಡಲಾದ ಸಂಗತಿಗಳ ಸರಿಯಾದ ಮೌಲ್ಯಮಾಪನವು ಆಧುನಿಕ ಮನೋವಿಜ್ಞಾನದಲ್ಲಿ ಅನೇಕ ಗೋಜಲುಗಳ ಪರಿಹಾರವನ್ನು ಸುಲಭಗೊಳಿಸುತ್ತದೆ; ಮನುಷ್ಯ ಮತ್ತು ಅವನ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಸಮಗ್ರ ಹಾಗೂ ಕಾರ್ಯಸಾಧ್ಯವಾದ ಕಲ್ಪನೆಗಳ ನಿರ್ಮಾಣದಲ್ಲಿ ಸಹಾಯ ಮಾಡುತ್ತದೆ.
ಭೇಲಸಂಹಿತೆ
ಆಯುರ್ವೇದ ಶಾಸ್ತ್ರದ ಪ್ರಮುಖ ಸಂಹಿತೆಗಳಲ್ಲಿ ಒಂದು ಭೇಲಸಂಹಿತೆ. ಭೇಲಮುನಿ ಇದನ್ನು ನಿರೂಪಿಸಿದ್ದಾನೆ. ಆತ್ರೇಯಮುನಿ ಹಾಗೂ ಆತನ ಶಿಷ್ಯ ಭೇಲ ಇವರ ಸಂವಾದದ ರೂಪದಲ್ಲಿ ಪ್ರಸ್ತುತ ಸಂಹಿತೆ ಇದೆ. ಈ ಸಂಹಿತೆಯ (ಕ್ರಿ.ಶ. ೪೦೦/೭೫೦ ಅವಧಿಯದ್ದು) ಪೂರ್ಣ ಪಾಠ ದೊರೆತಿಲ್ಲ. ಪ್ರೊ|| ಎಸ್.ಕೆ. ರಾಮಚಂದ್ರರಾವ್ ಅವರು ಭೇಲಮುನಿಯನ್ನು ಕುರಿತು ಸಂಶೋಧನಪ್ರಬಂಧ ಬರೆದಿದ್ದಾರೆ. ಈ ಪ್ರಬಂಧದಲ್ಲಿ ಮುಖ್ಯವಾಗಿ ಮನಸ್ಸಿಗೆ ಸಂಬಂಧಿಸಿದ ಭೇಲ ಮುನಿಯ ದರ್ಶನವನ್ನು ಕುರಿತು ಚರ್ಚೆ ಮಾಡಿದ್ದಾರೆ.
ಚೇತನ ಹಾಗೂ ಪ್ರಾಣಶಕ್ತಿಯೊಂದಿಗೆ ಮನಸ್ಸು ಹೇಗೆ ಸಂಪರ್ಕ ಸಾಧಿಸುತ್ತದೆ ಎಂಬುದನ್ನು ಭೇಲ ಮುನಿ ವಿಶ್ಲೇಷಿಸಿದ್ದಾನೆ. ಇಂದ್ರಿಯಗಳಿಗೆ ಗೋಚರವಾಗುವ ಪ್ರಪಂಚವನ್ನು ಮನಸ್ಸು ಹೇಗೆ ಅರಿಯುತ್ತದೆ? ಎಂಬ ಪ್ರಶ್ನೆ ಎತ್ತಿ ಅದಕ್ಕೆ ಉತ್ತರಿಸುತ್ತಾನೆ. ಕಾಯಾಗ್ನಿ(ಶರೀರಸ್ಥ ಅಗ್ನಿ)ಯಲ್ಲಿ ಐದು ಪ್ರಕಾರಗಳಿವೆ. ಅದರಲ್ಲಿ ಒಂದು ಗ್ರಹಣಶಕ್ತಿ. ಭೇಲ ಮುನಿಯ ಪ್ರಕಾರ ಈ ಕಾರ್ಯ ಎರಡು ಬಗೆಯಲ್ಲಿ ನಡೆಯುತ್ತದೆ. ದೃಷ್ಟಿಗೋಚರ (ಚಕ್ಷುರ್ ವೈಷಯಿಕ) ಹಾಗೂ ಬುದ್ಧಿಗೋಚರ (ಬುದ್ಧಿ ವೈಷಯಿಕ). ಮೊದಲಿನದು ಮನಸ್ಸನ್ನು ಚಿತ್ತದ ಸಂಪರ್ಕಕ್ಕೆ ತರುವ ಮೂಲಕ ಜ್ಞಾನೋತ್ಪತ್ತಿಗೆ ಕಾರಣವಾಗುತ್ತದೆ. (ಭೇಲ ಮುನಿ ಇಲ್ಲಿ ಆತ್ಮಪದವನ್ನು ಬಳಸಿದ್ದಾರೆ.) ಇದರ ಜೊತೆಗೆ ಮನೋವಿವರಣೆಯನ್ನು ಪ್ರಜ್ಞಾಸ್ತರಕ್ಕೆ ಪ್ರಸ್ತುತಪಡಿಸುತ್ತದೆ. ಇದರಿಂದಾಗಿ ದೃಷ್ಟ ಅನುಭವ ಸ್ವರೂಪಬದ್ಧವಾಗುತ್ತದೆ ಹಾಗೂ ವಿವಿಧ ವಿವರಗಳು ಪ್ರತ್ಯೇಕವಾಗಿ, ಸಂಘಟನಾತ್ಮಕವಾಗಿ ಗೋಚರವಾಗುತ್ತವೆ. ಈ ಕಾರ್ಯವು ಕಣ್ಣುಗಳಲ್ಲಿ ಕೇಂದ್ರೀಕೃತವಾಗಿದೆ. ಎರಡನೆಯದು ಭ್ರೂಮಧ್ಯದಲ್ಲಿ ಇದೆ; ಇದು ಗ್ರಹಿಸಲಾದ ಸೂಕ್ಷ್ಮಸಂಗತಿಯನ್ನು ಅರಿತುಕೊಳ್ಳುತ್ತದೆ, ಅರಿತುಕೊಂಡದ್ದನ್ನು ಸಂಘಟಿಸುತ್ತದೆ, ಸಂಘಟಿಸಿದ್ದನ್ನು ಏಕತ್ರಗೊಳಿಸುತ್ತದೆ. ಇದೆಲ್ಲವನ್ನೂ ಹಿಂದಿನ ಅನುಭವವನ್ನು ಆಧರಿಸಿ ಮಾಡುತ್ತದೆ. ಇದಕ್ಕೆ ಭೂತಕಾಲದ ನೆನಪು ಮತ್ತು ಭವಿಷ್ಯತ್ತಿನ ಕುರಿತು ಕಲ್ಪನೆ (imagination) ಇದೆ. ನಮ್ಮ ಕಾರ್ಯಗಳನ್ನು ಯೋಜಿಸುವುದರಲ್ಲಿ, ಮನಸ್ಸನ್ನು ಕೇಂದ್ರೀಕರಿಸುವುದರಲ್ಲಿ ಹಾಗೂ ಚಿಂತನೆಗಳನ್ನು ಒಟ್ಟುಗೂಡಿಸುವುದರಲ್ಲಿ ಇದರ ಆವಶ್ಯಕತೆ ಇದೆ ಎಂಬುದನ್ನು ಪ್ರೊ|| ರಾಮಚಂದ್ರರಾವ್ ತೋರಿಸಿಕೊಟ್ಟಿದ್ದಾರೆ.
ಜೀವಿಗಳ ನಿದ್ರೆಯ ಕುರಿತಂತೆ ಭೇಲಮುನಿಯ ದರ್ಶನ ವಿಶಿಷ್ಟವಾಗಿದೆ. ನಿದ್ರೆ ಎಂದರೆ ಏನು ಹಾಗೂ ಅದು ಏಕೆ ಬೇಕು ಮುಂತಾದ ವಿಷಯಗಳನ್ನು ಸ್ಪಷ್ಟವಾಗಿ ಈ ಸಂಹಿತೆಯಲ್ಲಿ ಚರ್ಚಿಲಾಗಿದೆ ಎಂದು ಪ್ರೊ|| ರಾವ್ ತಿಳಿಸಿದ್ದಾರೆ.
ಒತ್ತಡ (stress) ಕುರಿತು ಭಾರತೀಯರ ಚಿಂತನೆ
ಇಂದು ಮನಃಶಾಸ್ತ್ರ ವಿಜ್ಞಾನಿಗಳು ಮಾನಸಿಕ ಒತ್ತಡವನ್ನು ಕುರಿತು ವ್ಯಾಪಕ ಚಿಂತನೆ, ಸಂಶೋಧನೆಗಳನ್ನು ನಡೆಸಿದ್ದಾರೆ. ಭಾರತೀಯ ಶಾಸ್ತ್ರಗಳು ಈ ಕುರಿತು ಚಿಂತನೆ ನಡೆಸಿದ್ದನ್ನು ಎತ್ತಿ ತೋರಿಸಿದ್ದಾರೆ ಪ್ರೊ|| ರಾಮಚಂದ್ರರಾವ್ ಅವರು. ಕೋಲ್ಕತ್ತಾದಲ್ಲಿ ಜರುಗಿದ ಇಂಡಿಯನ್ ಸೈನ್ಸ್ ಕಾಂಗ್ರೆಸ್ನಲ್ಲಿ ಅಮೇರಿಕದ ವಿಜ್ಞಾನಿಯೊಬ್ಬ ಮಂಡಿಸಿದ ಪ್ರಬಂಧದಲ್ಲಿನ ವಿಷಯ ಒಪ್ಪಿಗೆಯಾಗದೆ, ನಾನು ಈ ವಿಷಯದ ಕುರಿತು ಸಂಶೋಧನೆ ಆರಂಭಿಸಿದೆ ಎಂದು ಪ್ರೊ|| ರಾಮಚಂದ್ರರಾವ್ ಅವರು ತಿಳಿಸಿದ್ದಾರೆ. (ಈ ಸಂದರ್ಭದಲ್ಲಿ ಅವರು ಬೆಂಗಳೂರಿನ NIMHANSನಲ್ಲಿ ಮನಃಶಾಸ್ತ್ರ ಪ್ರಾಧ್ಯಾಪಕರಾಗಿದ್ದರು). ಆ ವಿಜ್ಞಾನಿಯು ನೋವು ಅಥವಾ ಆತಂಕ ಒತ್ತಡಕ್ಕೆ ಕಾರಣವಲ್ಲ ಹಾಗೂ ಒತ್ತಡದ ಸಂಬಂಧದಲ್ಲಿ ಸಂಸ್ಕೃತಿಗೆ ಯಾವ ಪಾತ್ರವೂ ಇಲ್ಲ ಎಂದು ತಿರಸ್ಕರಿಸಿದ್ದ. ಆದರೆ ಭಯದ ಗ್ರಹಿಕೆಯಲ್ಲಿ ಮಾತ್ರವಲ್ಲ, ಒತ್ತಡ ರೋಗದಿಂದ ಮುಕ್ತವಾಗುವಲ್ಲಿಯೂ ಸಂಸ್ಕೃತಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಪ್ರೊ|| ರಾವ್ ಅವರ ವಿಚಾರವಾಗಿದೆ. ಇಂದಿನ ವಿಜ್ಞಾನ ಇದನ್ನು ಬಹುವಾಗಿ ಮನ್ನಿಸಿದೆ.
ಸಾಂಖ್ಯ, ಯೋಗ ಹಾಗೂ ನ್ಯಾಯ ದರ್ಶನಗಳಿಂದ ಈ ಕುರಿತ ವಿಚಾರಗಳನ್ನು ಹೆಕ್ಕಿ ತೆಗೆದಿದ್ದಾರೆ. ಈಗ ಬಳಕೆಯಲ್ಲಿರುವಂಥ, ಶಾರೀರಿಕ, ಮನಃಶಾಸ್ತ್ರೀಯ ವಿವರಗಳಿಗೆ ಸಂವಾದಿಯಾಗಿ ಈ ವಿಚಾರಗಳನ್ನು ಬಳಸಲಾಗದಿದ್ದರೂ ಮಾನವನ ಶಾರೀರಕ ಹಾಗೂ ಮನಃಪ್ರಾಣಾದಿ ವಿಷಯಗಳಿಗೆ ಸಂಬಂಧಿಸಿದ ಅತ್ಯುನ್ನತ ವಿಚಾರಗಳು ಕಂಡುಬರುವುದು ಖಚಿತ ಎಂದು ಅಭಿಪ್ರಾಯ ತಳೆದಿದ್ದಾರೆ. ಒತ್ತಡ ಒಂದು ರೋಗವಾಗಿಯೂ ನಿತ್ಯಜೀವನದ ಭಾಗವಾಗಿಯೂ ಹೇಗೆಲ್ಲ ಕೆಲಸ ಮಾಡುತ್ತದೆ ಎಂಬ ಬಗ್ಗೆ ಪ್ರೊ|| ರಾಮಚಂದ್ರರಾವ್ ನಿರೂಪಿಸಿದ ವಿಚಾರಗಳು ಇಂದಿನ ವಿಜ್ಞಾನಕ್ಕೆ ಹೊಸ ಆಯಾಮ ನೀಡಬಲ್ಲವಾಗಿವೆ.
ತಂತ್ರ ಮತ್ತು ಪ್ರಜ್ಞೆ
ಪ್ರೊ|| ರಾಮಚಂದ್ರರಾವ್ ಅವರು ತಂತ್ರಗಳ ಬೆಳಕಿನಲ್ಲಿಯೂ ಮನಸ್ಸನ್ನು ಶೋಧಿಸಿದ್ದಾರೆ. ತಂತ್ರ ಇರುವುದು ಕ್ಲೇಶ ನಿವಾರಿಸಿಕೊಂಡು ಪರಮಾನಂದ ಸಾಧಿಸುವುದಕ್ಕಾಗಿ ಎಂಬ ನಿಲುವು ತಳೆದಿದ್ದಾರೆ. ಮಾನವಪ್ರಜ್ಞೆಯ ಪರಿಧಿ ಹಾಗೂ ಅದರ ಸಂಭಾವ್ಯತೆಗಳ ಕುರಿತು ವ್ಯಾಪಕ ಜ್ಞಾನವು ತಂತ್ರಸಾಹಿತ್ಯದಲ್ಲಿ ದೊರಕುತ್ತದೆಂದು ಅನೇಕ ಆಧಾರಗಳ ಉಲ್ಲೇಖದೊಂದಿಗೆ ಪ್ರೊ|| ರಾವ್ ನಿರೂಪಿಸಿದ್ದಾರೆ. ಇಂದು ಅಧ್ಯಯನ, ಸಂಶೋಧನೆಗಳಿಗೆ ಒಳಗಾದ ಜಾಗೃತ ಪ್ರಜ್ಞೆ ಸಂಬಂಧದಲ್ಲಿ ಶರೀರ, ಪ್ರಾಣ ಇವುಗಳ ಕಾರ್ಯಾಚರಣೆಗಳ ಕುರಿತು ಟಿಬೆಟಿನ ತಂತ್ರಸಾಧಕ ನಾರೋಪಾನ ದರ್ಶನವನ್ನು ಅವರು ವಿಶ್ಲೇಷಿಸಿದ್ದಾರೆ. ತಂತ್ರವು ಒಂದು ಸಿದ್ಧಾಂತವಾಗಿ ನಮಗೆ ಚಿತ್ತಸ್ರೋತದ ಬಗ್ಗೆಗೂ ಸಾಧನಾಭಾಗವಾಗಿ ಈ ಸ್ರೋತವನ್ನು ಸಾಕ್ಷಾತ್ಕಾರಗೊಳಿಸುವ ಬಗ್ಗೆಗೂ ತಿಳಿಸುತ್ತದೆ ಎಂದು ಹೇಳಿದ್ದಾರೆ.
ಮಹಾಮುದ್ರಾ ತಂತ್ರಸಾಧಕರು ದೀಕ್ಷೆಯಾಗಿ ಪಡೆಯುವುದೇನೆಂದರೆ: “ಬಂಧಮುಕ್ತನಾಗು, ಸಾರ(essence)ವು ತಕ್ಷಣ ಹೊರಹೊಮ್ಮುವುದು”. ಬೋಧನೆಯ ಮೊದಲ ಭಾಗದಲ್ಲಿ ಮೂರು ಅಂಶಗಳಿವೆ. ಸಮತ್ವ, ನಿರಾಳತೆ ಹಾಗೂ ಸಹಜತೆ. ಸಮತ್ವವು ವ್ಯಾವಹಾರಿಕ ಪ್ರಜ್ಞೆಯ ಮೂರು ಆಯಾಮಗಳಾದ ಶರೀರ, ವಾಣಿ ಹಾಗೂ ಮನಸ್ಸನ್ನು ಸಮತೋಲನಗೊಳಿಸುವುದಾಗಿದೆ. ಭೌತಿಕ ಉಪಕರಣವನ್ನ (ಕಾಯ) ಕಳಚಬೇಕು, ಮೌಖಿಕ ಅಭಿವ್ಯಕ್ತಿಗಳನ್ನು ಪ್ರಾಣದಿಂದ ನಿಯಂತ್ರಣಗೊಳಿಸಬೇಕು ಹಾಗೂ ಯಾವುದೇ ವಸ್ತು ಅಥವಾ ಯೋಜನೆಯನ್ನು ಅವಲಂಬಿಸದಂತೆ ಮನಸ್ಸಿಗೆ ತರಬೇತಿ ನೀಡಲಾಗುತ್ತದೆ.
ನಿತ್ಯಜೀವನವನ್ನು ಧ್ಯಾನಮಯಗೊಳಿಸಲು ಮಹಾಮುದ್ರಾ ಬೋಧನೆಗಳು ಸಲಹೆ ನೀಡುತ್ತವೆ ಎಂದು ಹೇಳುವ ಪ್ರೊ|| ರಾವ್ ಅವರ ಶೋಧನೆ ಅನನ್ಯ.
ಗೀತೆ – ಮನಃಶಾಸ್ತ್ರದ ಕೈಪಿಡಿ
ಇಂದು ಮನಃಶಾಸ್ತ್ರದಲ್ಲಿ ಬಹುವಾಗಿ ಗಮನ ಸೆಳೆದ ವಿಷಯಗಳೆಂದರೆ ಆಪ್ತಸಮಾಲೋಚನೆ ಹಾಗೂ ಪ್ರೇರಣೆ (counselling and motivation). “ಇದೊಂದು ಕೌಶಲ್ಯಪೂರ್ಣ ಹಾಗೂ ಯಶಸ್ವೀ ಆಪ್ತಸಮಾಲೋಚನೆಯ ಕಥೆ. ಆಧುನಿಕ ಕಾಲದ ‘ಮಾರ್ಗದರ್ಶೀ ಆಪ್ತಸಮಾಲೋಚನೆ’ಯನ್ನು ಕುರಿತು ಅಪಾರ ಉದಾಹರಣೆಗಳು ಇದರಲ್ಲಿ (ಗೀತೆ) ದೊರಕುತ್ತವೆ” ಎಂಬುದಾಗಿ ಪ್ರೊ|| ರಾಮಚಂದ್ರರಾವ್ ಅವರು ತಮ್ಮ ‘Counselling on Battle-field’ ಲೇಖನದಲ್ಲಿ ಬರೆಯುತ್ತಾರೆ. ಆಪ್ತಸಮಾಲೋಚನೆಯ ಜತೆಜತೆಗೆ ಉನ್ನತ ತತ್ತ್ವಜ್ಞಾನ ಹಾಗೂ ಅಲೌಕಿಕ ಸೂಕ್ಷ್ಮ ಸಂಗತಿಗಳೂ ಅಡಗಿವೆ ಎಂದು ಹೇಳಿದ್ದಾರೆ. ಅರ್ಜುನನ ಸ್ಥಿತಿಯನ್ನು ಆಧುನಿಕ ಮನಃಶಾಸ್ತ್ರದ ಶಬ್ದಗಳಲ್ಲಿ “Verily a picture of anxiety neurosis’’ ಎಂದು ವಿಶ್ಲೇಷಣೆ ಮಾಡಿದ್ದಾರೆ.
ಬೌದ್ಧಿಕ ಜಾಗೃತಿ (intellectual awareness) ಹಾಗೂ ಭಾವನಾತ್ಮಕ ಸ್ಥಿರತೆ (emotional stability) ಹೊಂದುವುದರ ಮೂಲಕ ವ್ಯಕ್ತಿಯು ತನ್ನೊಡನೆ ಹಾಗೂ ಇತರರೊಡನೆ ಶಾಂತಿಯಿಂದ ಇರಲು ಸಾಧ್ಯ. ಮನಃಪ್ರಾಣಾದಿ ಸಮತೋಲನದಿಂದ ಬದುಕು ಸಾಗಿಸಬೇಕು. ಇದನ್ನೇ ಮಾನಸಿಕ ಆರೋಗ್ಯ ಎಂದು ಕರೆಯಲಾಗುತ್ತದೆ ಎಂದು ಪ್ರೊ|| ರಾವ್ ಅವರು ಗೀತೋಪದೇಶವನ್ನು ತಮ್ಮ ಆಧುನಿಕ ಮನಃಶಾಸ್ತ್ರದ ಅಧ್ಯಯನದ ಬೆಳಕಿನಲ್ಲಿ ತಿಳಿಸಿದ್ದಾರೆ. ಕೃಷ್ಣಾರ್ಜುನರ ಸಂವಾದದಲ್ಲಿ ಆಜ್ಞೆಗಿಂತ, ಅಧಿಕಾರಕ್ಕಿಂತ ಸಮಾಲೋಚನೆ ಪ್ರಮುಖವಾಗಿದೆ. ಇದರಿಂದಾಗಿ ಪ್ರೇರಣೆಯ ಶಕ್ತಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಮನವೊಲಿಸುತ್ತಾರೆ.
ಪ್ರೊ|| ರಾಮಚಂದ್ರರಾವ್ ಅವರು ಭಾರತೀಯ ಜ್ಞಾನಪರಂಪರೆಯನ್ನು ಕುರಿತು ಹೆಮ್ಮೆ ಮೂಡಿಸುವಂಥ ಕೊಡುಗೆಯನ್ನು ಮನಃಶಾಸ್ತ್ರ ಕ್ಷಿತಿಜ ವಿಸ್ತಾರಕ್ಕೆ ನೀಡಿದ್ದಾರೆ. ಆ ಮಹಾಚೇತನಕ್ಕೆ ಶತ ಶತ ನಮನಗಳು.
ಪರಾಮರ್ಶನ:
1. Development of Psychological Thought in India, Prof. S.K. Ramachandra Rao.
2. Mind in Bhela Samhita, Prof. S.K. Ramachandra Rao.
3. The Conception of Stress in Indian Thought, Prof. S.K. Ramachandra Rao.
4, Tantra and Consciousness, Prof. S.K. Ramachandra Rao.
5. Foundations of Indian Psychology (2 vols.), Ed. R.M. Matthijs Cornelissen Girishwar Mishra, Suneet Varma.
6. Spiritual Interpretation of Veda, Prof. S.K. Ramachandra Rao.
7. Why Veda is Important and How to Interpret It, Prof. S.K. Ramachandra Rao.
8. A Greater Psychology, Ed. A.S. Dalal.