ಉತ್ತರನ ಪೌರುಷಕ್ಕಿಂತಲೂ ವಿವೇಚನೆಯೇ ಮೇಲು
ಎರಡೆರಡು ಜೀವಾವಧಿ ಶಿಕ್ಷೆಗೆ ಗುರಿಯಾಗಿ, ದಿನವಿಡೀ ಎಣ್ಣೆಯ ಗಾಣಕ್ಕೆ ಹೆಗಲು ಕೊಟ್ಟು, ತಿಂಗಳುಗಟ್ಟಳೆ ಗಾಳಿ ಬೆಳಕು ಸುಳಿಯದ ಕಗ್ಗತ್ತಲ ಕೋಣೆಗಳಲ್ಲಿ ಏಕಾಂತವಾಸಕ್ಕೆ ಬಲಿಯಾಗಿ, ಹಾವು ಚೇಳುಗಳಿಂದ ಕೂಡಿದ ಸೆರೆಮನೆಯಲ್ಲಿ ಕಾಲ ಕಳೆಯುತ್ತ ಚಿತ್ರಹಿಂಸೆಯನ್ನನುಭವಿಸಿ ತತ್ತರಿಸಿದ ಅಂಡಮಾನಿನ ಕ್ರಾಂತಿಕಾರಿಗಳನ್ನು ಬ್ರಿಟಿಷ್ ಸರಕಾರದೆದುರು ಕಾಲೂರಿ ಕ್ಷಮಾದಾನಕ್ಕಾಗಿ ಮೊರೆಯಿಟ್ಟ ಹೇಡಿಗಳೆಂದು ಹೀಗಳೆಯುವವರು, ಅದೇ ಸಮಯದಲ್ಲಿ ಅಂಡಮಾನಿನ ‘ನರಕಸದೃಶ’ದ ಲವಲೇಶವೂ ಅಲ್ಲದ ರಾಜಸಂಸ್ಥಾನದ ಸೆರೆಮನೆಯಲ್ಲಿ ತತ್ತರಿಸಿದ ಕಥೆಗೂ ರಮ್ಯತೆಯ ಲೇಪನ ಕೊಟ್ಟು ತನ್ನ ಸಾಹಸವನ್ನು ಬಣ್ಣಿಸುತ್ತಾರೆ. ಜವಾಹರರಾಗಲಿ ಅಥವಾ ಅವರ ಪ್ರಭಾವಶಾಲಿ ತಂದೆಯವರಾಗಲಿ ಬ್ರಿಟಿಷ್ ಸರಕಾರಕ್ಕೆ ಅಲಿಖಿತ ಮುಚ್ಚಳಿಕೆಯನ್ನು ನೀಡಿದ್ದರೇ ಎಂಬ ಪ್ರಶ್ನೆ ಸದಾ ಇತಿಹಾಸಕಾರರನ್ನು ಕಾಡುತ್ತಿದೆ.
ಗಾಂಧಿಯವರ ನೇತೃತ್ವದಲ್ಲಿ ನಡೆದ ಮೂರು ದಶಕಗಳ ಅಹಿಂಸಾತ್ಮಕ ಸ್ವಾತಂತ್ರö್ಯ ಹೋರಾಟದಲ್ಲಿ ಜವಾಹರಲಾಲ್ ನೆಹರುರವರ ಹೆಸರು ಮುಂಚೂಣಿಯಲ್ಲಿರುತ್ತದೆ. ಆಗಿನ ಅಲಹಾಬಾದ್ ನಗರದ ಒಬ್ಬ ಸುಪ್ರಸಿದ್ಧ ವಕೀಲ, ಶ್ರೀಮಂತ ತಂದೆಯ ಮಗನಾಗಿ ಜನಿಸಿದ್ದ ಜವಾಹರಲಾಲ್ ಕ್ರಮೇಣ ಗಾಂಧಿಯವರ ಮಾನಸಪುತ್ರನಾಗಿ ಬೆಳೆದು ಸ್ವತಂತ್ರ ಭಾರತದ ಮೊದಲ ಪ್ರಧಾನಿಯ ಹುದ್ದೆಗೇರಲು ಅವರು ತಮ್ಮ ತಾರುಣ್ಯದ ದಿನಗಳಲ್ಲಿ ತಂದೆಯವರ ಸುಖದ ಸುಪ್ಪತ್ತಿಗೆಗಿಂತಲೂ ಹೆಚ್ಚಾಗಿ ಬ್ರಿಟಿಷರ ಸೆರೆಮನೆಯ ವಾಸಕ್ಕೆ ಅರ್ಪಿಸಿಕೊಂಡಿದ್ದುದೇ ಮುಖ್ಯ ಕಾರಣವೆನ್ನಬಹುದಾಗಿದೆ. ಇಂಗ್ಲೆಂಡಿನಿಂದ ಬ್ಯಾರಿಸ್ಟರ್ ಪಡೆದು ಮರಳಿದ ಜವಾಹರ್ಗೆ ಬ್ರಿಟಿಷರ ನ್ಯಾಯಾಲಯಕ್ಕಿಂತಲೂ ಹೆಚ್ಚಾಗಿ ಗಾಂಧಿಯವರ ಅಸಹಕಾರ ಚಳವಳಿ ಮುದ ಕೊಟ್ಟಿತಲ್ಲದೆ, ತನ್ನ ಜೀವಮಾನವನ್ನು ರಾಷ್ಟçದ ಸೇವೆಗಾಗಿ ಮುಡಿಪಾಗಿಡುವಂತೆ ಮಾಡುತ್ತದೆ. ೧೯೨೧ರ ಅಸಹಕಾರ ಚಳವಳಿಯ ಸಮಯದಲ್ಲಿ ಪ್ರಥಮ ಬಾರಿಗೆ ಬ್ರಿಟಿಷ್ ಸೆರೆಮನೆ ಸೇರಿದ ಜವಾಹರ್ ತಮ್ಮ ಜೀವನದ ಒಟ್ಟು ೩,೨೬೨ ದಿನಗಳಲ್ಲಿ ಕಂಬಿಗಳ ಹಿಂದೆ ಕಳೆದಿರುತ್ತಾರೆ. ಇಷ್ಟೊಂದು ಸುದೀರ್ಘ ಕಾಲ ಸೆರೆಮನೆಯಲ್ಲಿ ಕಳೆದ ಜವಾಹರಲಾಲ್ಗೆ ಪತ್ನಿಯ ವಿಯೋಗ, ಮಗಳ ಅನಾರೋಗ್ಯ, ಕುಟುಂಬ ಮತ್ತು ಗೆಳೆಯರಿಂದ ದೂರ ಇರುವುದು – ಎಂದೂ ಧೃತಿಗೆಡುವಂತೆ ಮಾಡಲಿಲ್ಲ. ೧೯೨೧ರಲ್ಲಿ ಮೊದಲಬಾರಿಗೆ ಲಖ್ನೋ ಸೆರೆಮನೆಯಲ್ಲಿ ಪಾದಾರ್ಪಣೆ ಮಾಡಿದ ಜವಾಹರಲಾಲ್ ನೆಹರುರವರಿಗೆ ತಮ್ಮ ಮುಂದಿನ ಜೀವನದಲ್ಲಿ ಸೆರೆಮನೆಯೆಂಬುದು ‘ಎರಡನೆಯ ಮನೆ’ಯಾಗುವುದೆಂಬ ಕಲ್ಪನೆಯೂ ಇದ್ದಿರಲಾರದು. ಮೊದಲಬಾರಿಗೆ ಲಖ್ನೋದ ಸೆರೆಮನೆಯಲ್ಲಿ ೮೭ ದಿನಗಳನ್ನು ಕಳೆದ ಅವರು ಆ ಬಳಿಕ ೧೯೨೨ ೨೩ರಲ್ಲಿ ೨೬೫ ದಿನಗಳನ್ನು ಲಖ್ನೋ ಸೆರೆಮನೆ, ೧೨ ದಿನಗಳನ್ನು ಪಂಜಾಬಿನ ನಭಾ ಸಂಸ್ಥಾನದ ಸೆರೆಮನೆ, ೧೯೩೦ರಲ್ಲಿ ೧೮೦ ದಿನಗಳು ಮತ್ತು ೧೯೩೦ ೩೧ರಲ್ಲಿ ೯೯ ದಿನಗಳನ್ನು ನೈನಿ ಸೆರೆಮನೆ, ೧೯೩೧ ೩೩ರಲ್ಲಿ ೬೧೨ ದಿನಗಳನ್ನು ನೈನಿ ಮತ್ತು ಬರೇಲಿ ಸೆರೆಮನೆ, ೧೯೩೪ ೩೫ರಲ್ಲಿ ೫೬೯ ದಿನಗಳನ್ನು ಡೆಹರಾಡೂನ್, ಕೋಲ್ಕತಾದ ಪ್ರೆಸಿಡೆನ್ಸಿ ಮತ್ತು ಆಲಿಪುರ, ನೈನಿ ಮತ್ತು ಆಲ್ಮೋರಾದ ಸೆರೆಮನೆಗಳು, ೧೯೪೦ ೪೧ರಲ್ಲಿ ೩೯೮ ದಿನಗಳನ್ನು ಗೋರಖಪುರ ಸೆರೆಮನೆ ಹಾಗೂ ಅಂತಿಮವಾಗಿ ೧೯೪೨ ೪೫ರಲ್ಲಿ ೧೦೪೦ ದಿನಗಳನ್ನು ಬೊಂಬಾಯಿ ಪ್ರಾಂತದ ಅಹ್ಮದ್ನಗರ್ ಸೆರೆಮನೆಯಲ್ಲಿ ಕಳೆದಿರುತ್ತಾರೆ. ಇಷ್ಟಾದರೂ ಒಂದು ದಿನದ ಮಟ್ಟಿಗೂ ಅವರಿಗೆ ಸಾವರಕರ್, ಬರೀಂದ್ರಕುಮಾರ್ ಘೋಷ್, ಉಲಾಸಕರ್ ದತ್ತ, ಚಿತ್ತಗಾಂವ್ ವೀರರು, ಎರಡನೆಯ ಲಾಹೋರ್ ಷಡ್ಯಂತ್ರದ ಭಗತ್ಸಿಂಗ್ನ ಸ್ನೇಹಿತರಂತೆ ಅಂಡಮಾನ್ ಸೆರೆಮನೆಯ ವಾಸವಾಗಲಿ ಅಥವಾ ಲೋಕಮಾನ್ಯ ಬಾಲಗಂಗಾಧರ ತಿಲಕ್, ಲಾಲಾ ಲಜಪತರಾಯ್, ನೇತಾಜಿಯವರಂತೆ ಬರ್ಮಾದ ಮಾಂಡಲೆಯ ಸೆರೆಮನೆವಾಸ ಲಭ್ಯವಾಗಿರಲಿಲ್ಲ ಎಂಬುದು ಅವರ ಪೂರ್ವಜನ್ಮದ ಸುಕೃತವೆನ್ನಬೇಕು. ಆದರೆ ಈ ಎರಡೂ ಸೆರೆಮನೆಗಳ ಭೀಕರತೆಯನ್ನು ಅತ್ಯಂತ ಸಮೀಪದಿಂದ ನೋಡುವಂತೆ ಮಾಡಿದ ಅವರ ನಭಾ ಸಂಸ್ಥಾನದ ಜೈಲುವಾಸದ ಕಥೆ ಮಾತ್ರ ಅವರನ್ನು ಹೆಚ್ಚು ಧೃತಿಗೆಡುವಂತೆ ಮಾಡಿತ್ತು. (ಪುಟ ೮೧, ಮೈಕೇಲ್ ಬ್ರೇಷರ್ನ ‘ನೆಹರು ಎ ಪೊಲಿಟಿಕಲ್ ಬಯಾಗ್ರಫಿ.’)
ಲಖ್ನೋ ಸೆರೆಮನೆ
ಜವಾಹರಲಾಲ್ ನೆಹರುರವರ ಸೆರೆಮನೆವಾಸದ ಅಂಕದ ಪರದೆ ಮೇಲೇಳುವುದು ಲಖ್ನೋದಲ್ಲಿ, ೧೯೨೧ರಲ್ಲಿ. ಅದೇನೂ ಅಂಡಮಾನಿನಂತಹ ಕಗ್ಗತ್ತಲೆಯ ಕರಾಳ ಕೂಪವಾಗಿರಲಿಲ್ಲ. ೧೬ ಅಡಿ ಅಗಲx೨೦ ಅಡಿ ಉದ್ದದ ಆ ಸೆರೆಮನೆಯ ಕೋಣೆಯಲ್ಲಿ ಅವರಿಗೆ ಸಂಗಾತಿಗಳಾಗಿ ಅವರ ತಂದೆ ಮೋತಿಲಾಲ್ ನೆಹರು ಮತ್ತು ಇಬ್ಬರು ದಾಯಾದಿ ಸಹೋದರರಾದ ಮೋಹನ್ಲಾಲ್ ಮತ್ತು ಶ್ಯಾಮಲಾಲ್ರವರೊಂದಿಗೆ ಜೊತೆಯಾಗಿರುವ ಸೌಭಾಗ್ಯ ಲಭ್ಯವಾಗುತ್ತದೆ. ಇತರ ಕೈದಿಗಳು ಬೇರೆ ಬ್ಯಾರಕ್ಗಳಲ್ಲಿರುತ್ತಿದ್ದರು. ಇವರಿಗೆ ಬೇರೆಲ್ಲ ಬ್ಯಾರಕ್ಗಳಿಗೆ ಭೇಟಿ ನೀಡಬಹುದಾದಂತಹ ಸ್ವಾತಂತ್ರ್ಯವಿತ್ತು. ಪುಸ್ತಕಗಳು, ವೃತ್ತಪತ್ರಿಕೆಗಳು, ಬಂಧುಮಿತ್ರರೊಂದಿಗೆ ಧಾರಾಳವಾಗಿ ಭೇಟಿಯಾಗುವ ಅವಕಾಶ, ಸೆರೆಮನೆಯ ಊಟದೊಂದಿಗೆ ಹೊರಗಿನ ತಿಂಡಿತಿನಿಸುಗಳನ್ನು ತರಿಸಿಕೊಳ್ಳುವ ಸೌಲಭ್ಯಗಳ ನಡುವಿನ ಸೆರೆಮನೆವಾಸ ಅಂತಹ ತ್ರಾಸದಾಯಕವೆನಿಸುವಂತಿರಲಿಲ್ಲ.
ಜವಾಹರಲಾಲ್ರವರ ದಿನಚರಿ ಬಹಳ ಸರಳವಾಗಿತ್ತು. ಬೆಳಗ್ಗೆ ಎದ್ದ ತಕ್ಷಣ ಸೆರೆಮನೆಯ ಕೋಣೆಯನ್ನು ಸ್ವಚ್ಛಗೊಳಿಸುವುದು, ಬಳಿಕ ತಮ್ಮ ಮತ್ತು ತಂದೆಯವರ ಬಟ್ಟೆಗಳನ್ನು ಒಗೆದು ಶುಭ್ರಗೊಳಿಸುವ ‘ಕಠಿಣ ಶಿಕ್ಷೆ’ಯನ್ನು ಮಾಡಿ ಮುಗಿಸಿದರೆ ಮಿಕ್ಕ ಸಮಯವನ್ನು ರಾಜಕೀಯ ಚರ್ಚೆಯಲ್ಲಿ ಕಳೆಯುತ್ತಿದ್ದರು. ಚರಕದ ಮೇಲೆ ನೂಲು ತೆಗೆಯುವುದು, ಅವಿದ್ಯಾವಂತ ರಾಜಕೀಯ ಕೈದಿಗಳಿಗೆ ಪಾಠ ಪ್ರವಚನ ನಡೆಸುವುದು, ಸಂಜೆಯ ವೇಳೆ ವಾಲಿಬಾಲ್ ಆಟ, ಅಧ್ಯಯನ – ಹೀಗೆ ಸಮಯ ಕಳೆದರೆ ಒಟ್ಟಾರೆ ‘ಆನಂದ ಭವನ’ದ ಸುಖೀ ಜೀವನದಿಂದ ದೂರವಾಗಿದ್ದರೂ ಏಕಾಂತವಾಸದ ಅರಿವಾಗದಂತೆ ಕಳೆಯಬಹುದಾದಷ್ಟು ಸುಖ ಲಭ್ಯವಾಗುತ್ತಿತ್ತು. (ಪುಟ ೮೧ ೮೨, ‘ನೆಹರು ಎ ಪೊಲಿಟಿಕಲ್ ಬಯಾಗ್ರಫಿ.’)
ಆದರೆ ಅವರು ಆರು ವಾರಗಳ ನಂತರ ಎರಡನೆಯ ಬಾರಿ ಲಖ್ನೋ ಸೆರೆಮನೆಯನ್ನು ಸೇರುವಷ್ಟರಲ್ಲಿ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ. ಸರಕಾರ ಮೋತಿಲಾಲ್ ನೆಹರುರವರನ್ನು ಬೇರೆ ಸೆರೆಮನೆಗೆ ವರ್ಗಾಯಿಸಿರುತ್ತದೆ. ಮೊದಲ ಬಾರಿಗೆ ನೆಹರು ಕುಟುಂಬದವರಿಗೆಂದೇ ಮೀಸಲಾಗಿದ್ದ ವಿಶಾಲ ಕೋಣೆಯ ಸೌಲಭ್ಯ ಈಗಿರಲಿಲ್ಲ. ಒಳಗಿನ ಸೆರೆಮನೆಯಲ್ಲಿ ಎಲ್ಲ ರಾಜಕೀಯ ಕೈದಿಗಳೊಂದಿಗೆ ಸೇರಿ ಜೀವಿಸುವ ಅನಿವಾರ್ಯತೆ ಎದುರಾಗುತ್ತದೆ. ಹೊರಗಿನ ಬಂಧುಮಿತ್ರರೊಂದಿಗೆ ಭೇಟಿಯ ಅವಕಾಶವನ್ನು ಮೊಟಕುಗೊಳಿಸಲಾಗಿತ್ತು. ಆದರೆ ಪುಸ್ತಕಗಳು ಮತ್ತು ವೃತ್ತಪತ್ರಿಕೆಗಳಿಗೆ ಸಂಚಕಾರ ಬಂದಿರಲಿಲ್ಲ. ಜವಾಹರಲಾಲ್ ಯಾವಾಗಲೂ ಬಯಸುತ್ತಿದ್ದ ಏಕಾಂತವಾಸ ಈಗ ಗಗನಕುಸುಮವಾಗಿತ್ತು. “ಸೆರೆಮನೆವಾಸ ನನ್ನ ನರಮಂಡಲಗಳ ಮೇಲೆ ಭಾರಿ ಒತ್ತಡ ಹೇರಲಾರಂಭಿಸಿತ್ತು. ಏಕಾಂತವಾಸಕ್ಕಾಗಿ ನಾನು ಹಗಲಿರುಳು ಹಲುಬುವಂತಾಗುತ್ತಿತ್ತು. ಅದೊಂದು ಶೀತಲ, ನೀರಸ, ವೈವಿಧ್ಯರಾಹಿತ್ಯ ಜೀವನವಾಗಿತ್ತು” ಎಂದು ನೆಹರು ಅಲವತ್ತುಕೊಳ್ಳುತ್ತಾರೆ. ಆದರೆ ಅದೃಷ್ಟವಶಾತ್ ಕೆಲದಿನಗಳ ಬಳಿಕ ನೆಹರು ಮತ್ತು ಅವರ ಕೆಲವು ಗೆಳೆಯರನ್ನು ಸೆರೆಮನೆಯ ಮತ್ತೊಂದು ವಿಭಾಗಕ್ಕೆ ವರ್ಗಾಯಿಸಿದಾಗ ನೆಹರು ಬಯಸುತ್ತಿದ್ದ ‘ಏಕಾಂತವಾಸ’ ಲಭ್ಯವಾಗಿ ತಮ್ಮನ್ನು ತಾವೇ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಅವರಿಗೆ ಸುವರ್ಣಾವಕಾಶ ದೊರಕಿತು. ಮನೆಯಿಂದ ತರಿಸಿಕೊಳ್ಳುತ್ತಿದ್ದ ಪುಸ್ತಕಗಳನ್ನು ತೀವ್ರ ಆಸಕ್ತಿಯಿಂದ ಓದುತ್ತಿದ್ದ ನೆಹರುರವರು ತಮ್ಮ ಮುಂದಿನ ದಿನಗಳ ಸೆರೆಮನೆವಾಸದಲ್ಲಿ ಸೃಷ್ಟಿಗೊಳಿಸಿದ “ಗ್ಲಿಮ್ಸಸ್ ಆಫ್ ವರ್ಲ್ಡ್ ಹಿಸ್ಟರಿ” (೧೯೩೪), “ದಿ ಆಟೋಬಯಾಗ್ರಫಿ (ಟುವರ್ಡ್ಸ್ ಫ್ರೀಡಂ)” (೧೯೩೬), “ದಿ ಡಿಸ್ಕವರಿ ಆಫ್ ಇಂಡಿಯಾ” (೧೯೪೬)ದಂತಹ ಮಹಾನ್ ಕೃತಿಗಳಿಗೆ ಬೇಕಾದ ಬುನಾದಿಯನ್ನು ಬೆಸೆಯತೊಡಗುತ್ತಾರೆ. (ಪುಟ ೮೨, ‘ನೆಹರು ಎ ಪೊಲಿಟಿಕಲ್ ಬಯಾಗ್ರಫಿ.’)
ಮುಂದಿನ ವರ್ಷಗಳಲ್ಲಿ ಈ ಮೂರು ಕೃತಿಗಳಿಂದ ಜವಾಹರಲಾಲ್ ನೆಹರು ಮತ್ತು ಅವರ ಕುಟುಂಬದವರು ಪಡೆದ ಗೌರವಧನ “ಬೇರಾವುದೇ ಬ್ರಿಟಿಷರ ಬಾಲಬಡುಕ ರಾಜಕೀಯ ಕೈದಿ” ಸರಕಾರದಿಂದ ಪಡೆಯುತ್ತಿದ್ದ ಮಾಸಾಶನಕ್ಕಿಂತಲೂ ನೂರಾರು ಪಟ್ಟು ಮಿಗಿಲಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. “ಈ ರಾಜಕೀಯ ಕೈದಿಗಳ” ಮನೆಮಾರುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದ ಬ್ರಿಟಿಷ್ ಸರಕಾರ ‘ಆನಂದ ಭವನ’ದತ್ತ ಕಣ್ಣೆತ್ತಿಯೂ ನೋಡಿರಲಿಲ್ಲ. ಬ್ರಿಟಿಷರು ಭಾರತದಿಂದ ತೊಲಗುವವರೆಗೂ “ಆನಂದ ಭವನ” ಸುಖ, ಸಂಪತ್ತು ಮತ್ತು ಶ್ರೀಮಂತಿಕೆಗಳಿಂದ ನಳನಳಿಸುತ್ತಿತ್ತು.
ಒಂದೆರಡು ದಿನಗಳ ಬಿಡುವು!
ಈಗ ಜವಾಹರಲಾಲ್ ನೆಹರುರವರ ನಭಾ ಸೆರೆಮನೆವಾಸದ ಕತೆಗೆ ಹಿಂತಿರುಗೋಣ. ನಭಾ ಪಂಜಾಬ್ ಪ್ರಾಂತದ ಒಂದು ರಾಜ ಸಂಸ್ಥಾನವಾಗಿದೆ. ಪಾಟಿಯಾಲದ ರಾಜ ಬ್ರಿಟಿಷರ ಪರವಾಗಿದ್ದರೆ ಆತನ ದಾಯಾದಿ ನಭಾದ ರಾಜ ರಿಪುದಮನ್ಸಿಂಗ್ ಬ್ರಿಟಿಷರಿಗೆ ಮಗ್ಗಲು ಮುಳ್ಳಾಗಿದ್ದ ವ್ಯಕ್ತಿ. ೧೯೧೨ರಿಂದ ೧೯೨೩ರವರೆಗೆ ನಭಾದ ಸಿಂಹಾಸನವನ್ನು ಅಲಂಕರಿಸಿದ ರಿಪುದಮನ್ಸಿಂಗ್ ಮೊದಲ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷರಿಗೆ ಹಣ ಸಹಾಯ ಅಥವಾ ಸೈನಿಕ ಸಹಾಯ ಒದಗಿಸದೆ ಅವರನ್ನು ವಿರೋಧಿಸಿ ನಿಂತಿದ್ದ ಏಕೈಕ ರಾಜ. ಗೋಪಾಲಕೃಷ್ಣ ಗೋಖಲೆ, ಮದನಮೋಹನ ಮಾಲವೀಯ, ಲಾಲಾ ಲಜಪತರಾಯ್ ಮೊದಲಾದ ರಾಷ್ಟ್ರೀಯ ನಾಯಕರೊಂದಿಗೆ ಒಡನಾಟ ಹೊಂದಿದ್ದ ವ್ಯಕ್ತಿ. ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಬಲವಾಗಿ ವಿರೋಧಿಸಿದ ದೊರೆ. ಸಿಖ್ಖ್ರು ಪ್ರಾರಂಭಿಸಿದ ಗುರುದ್ವಾರ ಸುಧಾರಣಾ ಚಳವಳಿಗೆ ಮುಕ್ತಕಂಠದಿಂದ ತನ್ನ ಬೆಂಬಲ ಸೂಚಿಸಿದ ರಿಪುದಮನ್ಸಿಂಗ್ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಆತನ ಮೇಲೆ ವ್ಯಕ್ತಿಯ ಅಪಹರಣ ಹಾಗೂ ವಿಷಪ್ರಾಶನದ ಆಪಾದನೆಯನ್ನು ಹೊರಿಸುವ ಬ್ರಿಟಿಷ್ ಸರಕಾರ ಬಲವಂತದಿAದ ಪದಚ್ಯುತಿಗೊಳಿಸಲು ಸಂಚು ಹೂಡುತ್ತದೆ. ತನ್ನ ಕೆಲವು ಅಧಿಕಾರಿಗಳ ಸಲಹೆಯ ಮೇರೆಗೆ ರಿಪುದಮನ್ಸಿಂಗ್ ತನ್ನ ಸಿಂಹಾಸನವನ್ನು ತ್ಯಜಿಸಿ ಬ್ರಿಟಿಷರು ನೀಡಿದ ವಾರ್ಷಿಕ ಮೂರು ಲಕ್ಷ ರೂಪಾಯಿಗಳ ಪಿಂಚಣಿಯನ್ನು ಪಡೆದು ನಭಾವನ್ನು ತ್ಯಜಿಸಿ ಡೆಹರಾಡೂನ್ ಸೇರುತ್ತಾನೆ. (Maharaja of Nabha/Sikhhistroy.in/nirmal anand)
ಮಹಾರಾಜ ರಿಪುದಮನ್ನ ಪದಚ್ಯುತಿಯನ್ನು ಸಿಖ್ಖ್ರು ಸುಮ್ಮನೆ ಸ್ವೀಕರಿಸುವವರಾಗಿರಲಿಲ್ಲ. ಆತನ ಪದಚ್ಯುತಿ ಒಂದೆಡೆ ಅವರನ್ನು ಕೆರಳಿಸಿದರೆ, ಮತ್ತೊಂದೆಡೆ ಅಹಿಂಸಾತ್ಮಕ ಮೆರವಣಿಗೆಗಳ ಮೂಲಕ ಗುರುದ್ವಾರ ಪ್ರಬಂಧಕ ಸುಧಾರಣಾ ಚಳವಳಿಯನ್ನು ಹಮ್ಮಿಕೊಳ್ಳಲಾಗುತ್ತದೆ. “ಪಂಜಾಬ್ನ ಪಾಟಿಯಾಲ ಮತ್ತು ನಭಾದ ರಾಜರ ಮಧ್ಯದಲ್ಲಿ ನಡೆಯುತ್ತಿದ್ದ ಗುದ್ದಾಟದಲ್ಲಿ ನಭಾದ ರಾಜನನ್ನು ಪದಚ್ಯುತಗೊಳಿಸುವ ಮೂಲಕ ಅದರ ಲಾಭವನ್ನು ಬ್ರಿಟಿಷರು ಪಡೆಯುತ್ತಾರೆ. ನಭಾದ ರಾಜ್ಯಾಡಳಿತವನ್ನು ನೋಡಿಕೊಳ್ಳಲು ಭಾರತ ಸರಕಾರ ಒಬ್ಬ ಬ್ರಿಟಿಷ್ ಆಡಳಿತಾಧಿಕಾರಿಯನ್ನು ನೇಮಿಸುತ್ತದೆ. ಈ ಪದಚ್ಯುತಿ ಸಿಖ್ಖರನ್ನು ಕೆರಳಿಸಿ ಆಂದೋಲನಕ್ಕೆ ನಾಂದಿ ಹಾಡಿತು. ಈ ಆಂದೋಲನದ ನಡುವೆ ನಭಾದ ಜೈತೊ ಎಂಬಲ್ಲಿ ಸಿಖ್ಖರು ಒಂದು ಧಾರ್ಮಿಕ ಸಮಾರಂಭವನ್ನು ಹಮ್ಮಿಕೊಳ್ಳುತ್ತಾರೆ. ಆದರೆ ಅದಕ್ಕೆ ಬ್ರಿಟಿಷ್ ಆಡಳಿತಾಧಿಕಾರಿ ಅಡ್ಡಿಪಡಿಸುತ್ತಾನೆ. ತಮ್ಮ ಧಾರ್ಮಿಕ ಸಮಾರಂಭವನ್ನು ಸಂಪನ್ನಗೊಳಿಸಲು ಸಿಖ್ಖರು ಗುಂಪುಗೂಡಿ ಮೆರವಣಿಗೆಯಲ್ಲಿ ಜೈತೊ ತಲಪಲಾರಂಭಿಸಿದರು. ಈ ತರಹದ ಗುಂಪುಗಳ ಮೇಲೆ ಲಾಠಿಗಳಿಂದ ಹಲ್ಲೆ ಮಾಡಲಾರಂಭಿಸಿದ ನಭಾದ ಪೊಲೀಸರು ಅವರನ್ನು ಹೊತ್ತೊಯ್ದು ಕಾಡುಗಳಲ್ಲಿ ಬಿಡಲಾರಂಭಿಸಿದ್ದಾರೆಂಬ ಸುದ್ದಿಯನ್ನು ನಾನು ಕೇಳಲ್ಪಟ್ಟಿದ್ದೆ. ದೆಹಲಿಯಲ್ಲಿ ಕಾಂಗ್ರೆಸ್ನ ವಿಶೇಷ ಅಧಿವೇಶನಕ್ಕಾಗಿ ಬಂದಿದ್ದ ನನಗೆ ಅದಾದ ಬಳಿಕ ಜೈತೋವನ್ನು ತಲಪಿ ಒಂದು ಮೆರವಣಿಗೆಯನ್ನು ವೀಕ್ಷಿಸುವಂತೆ ಸಿಖ್ಖರು ಆಹ್ವಾನಿಸುತ್ತಾರೆ. ಜೈತೋ ದೆಹಲಿಗೆ ಸಮೀಪದಲ್ಲಿತ್ತು. ಭರಾಟೆಯ ರಾಜಕಾರಣದಿಂದ ಒಂದೆರೆಡು ದಿನಗಳ ಬಿಡುವು ದೊರಕುವುದೆಂದು ಭಾವಿಸಿದ ನಾನು ಅವರ ಆಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದೆ” ಎಂದು ಜವಾಹರಲಾಲ್ ತಮ್ಮ ಆತ್ಮಕಥೆಯಲ್ಲಿ ನೆನಪಿಸಿಕೊಳ್ಳುತ್ತಾರೆ. (ಪುಟ ೯೭, ಜವಾಹರಲಾಲ್ ನೆಹರು ಆತ್ಮಕಥೆ – ‘ಟುವರ್ಡ್ಸ್ ಫ್ರೀಡಂ.’)
‘ಒಂದೆರೆಡು ದಿನಗಳ ಬಿಡುವು’ ಎಂದು ಭಾವಿಸಿದ ಘಟನೆಯೊಂದು ತಮ್ಮನ್ನು ಜೀವಮಾನವಿಡೀ ಕಾಡಬಹುದೆಂದು ಜವಾಹರಲಾಲ್ ಯೋಚಿಸಿರಲಿಲ್ಲ. ೧೯೨೨ರ ಸೆಪ್ಟೆಂಬರ್ ೧೯ರ ರಾತ್ರಿ ಜವಾಹರಲಾಲ್ ಎ.ಟಿ. ಗಿದ್ವಾನಿ ಮತ್ತು ಕೆ. ಸಂತಾನಂ ಎಂಬ ಇಬ್ಬರು ಕಾಂಗ್ರೆಸ್ ನಾಯಕರೊಂದಿಗೆ ಅಕಾಲಿ ಕೇಂದ್ರ ಮುಕ್ತೇಸರ್ ತಲಪುತ್ತಾರೆ. ೨೦ರಂದು ಅಲ್ಲಿಯ ಸಭೆಯೊಂದರಲ್ಲಿ ಮಾತನಾಡುತ್ತ ಜವಾಹರಲಾಲ್ ಸಿಖ್ಖರ ಆಂದೋಲನವನ್ನು ಶ್ಲಾಘಿಸುತ್ತಾರೆ. ಮರುದಿನ ಅವರು ಕುದುರೆ ಮೇಲೆ ಕುಳಿತು ಜೈತೋ ತಲಪುತ್ತಾರೆ. ಜೈತೋದಲ್ಲಿ ಒಂದು ಮರದ ಕೆಳಗೆ ಕುಳಿತುಕೊಂಡು ಮೂವರು ಕಾಂಗ್ರೆಸ್ ನಾಯಕರು ಮೆರವಣಿಗೆಯನ್ನು ವೀಕ್ಷಿಸಲಾರಂಭಿಸುತ್ತಾರೆ. ಅಂದು ಸಂಜೆಯ ಟ್ರೈನ್ನಲ್ಲಿ ದೆಹಲಿಗೆ ಹಿಂತಿರುಗುವ ಉದ್ದೇಶ ಅವರದ್ದಾಗಿತ್ತು. ನೆಹರುರವರ ಭೇಟಿಯ ಸುದ್ದಿ ಕೇಳಿದ್ದ ನಭಾದ ಆಡಳಿತಾಧಿಕಾರಿ ವಿಲ್ಸನ್ ಜಾನ್ಸ್ಟನ್ ವೈಸರಾಯ್ ಮತ್ತು ಗೃಹಸದಸ್ಯರಿಂದ ನೆಹರು ತನ್ನ ಸಂಸ್ಥಾನವನ್ನು ಮುಂದಿನ ಎರಡು ತಿಂಗಳುಗಳವರೆಗೆ ಪ್ರವೇಶಿಸದಂತೆ ತಡೆಯಲು ಅನುಮತಿ ಪಡೆಯುತ್ತಾನೆ. ಆದರೆ ಆತನ ಆದೇಶ ಕೈತಲಪುವ ಮೊದಲೇ ನೆಹರುರವರು ನಭಾ ಸಂಸ್ಥಾನವನ್ನು ಪ್ರವೇಶಿಸಿಯಾಗಿತ್ತು. ಪೊಲೀಸರು ಮೂವರನ್ನು ಬಂಧಿಸಿ ಕೈಕೋಳಗಳನ್ನು ತೊಡಿಸುತ್ತಾರೆ. ರಾತ್ರಿಯ ಟ್ರೆöÊನ್ನ ಮೂರನೆಯ ದರ್ಜೆಯ ಬೋಗಿಯಲ್ಲಿ ಕುಳ್ಳಿರಿಸಿ ಅವರನ್ನು ನಭಾಗೆ ಕರೆತರಲಾಯಿತು. ಸುಮಾರು ಇಪ್ಪತ್ತು ಗಂಟೆಗಳ ಕಾಲ ಅವರ ಕೈಗಳಲ್ಲಿ ಬೇಡಿಯನ್ನು ತೊಡಿಸಲಾಗಿತ್ತು. (ಪುಟ ೭೬, ಗೋಪಾಲ್ ಸರ್ವಪಲ್ಲಿ, ‘ಜವಾಹರಲಾಲ್ ನೆಹರು’ ಸಂಪುಟ ೧.)
“ಜೈತೋದಲ್ಲಿ ನಾವು ಪ್ರತ್ಯೇಕವಾಗಿ ನಿಂತು ಮೆರವಣಿಗೆಯನ್ನು ವೀಕ್ಷಿಸಲಾರಂಭಿಸಿದೆವು. ನಾವು ಮೆರವಣಿಗೆಯಲ್ಲಿ ಒಂದಾಗಲಿಲ್ಲ. ಮೆರವಣಿಗೆ ಜೈತೋವನ್ನು ತಲಪುತ್ತಿದ್ದಂತೆ ಪೊಲೀಸರು ಅದನ್ನು ತಡೆದರು. ಅಷ್ಟರಲ್ಲಿ ನನಗೆ ನಭಾ ಗಡಿಯನ್ನು ಪ್ರವೇಶಿಸದಂತೆ, ಒಂದೊಮ್ಮೆ ಪ್ರವೇಶಿಸಿದ್ದರೆ ಅದನ್ನು ತಕ್ಷಣದಲ್ಲಿ ತೊರೆಯುವಂತೆ ಬ್ರಿಟಿಷ್ ಆಡಳಿತಗಾರನ ಆದೇಶ ದೊರಕಿತು. ಆದರೆ ಆದೇಶ ನಮ್ಮ ಕೈ ಸೇರುವ ಮೊದಲೇ ನಾವು ಸಂಸ್ಥಾನವನ್ನು ಪ್ರವೇಶಿಸಿದ್ದುದರಿಂದ ಈಗ ಗಾಳಿಯಲ್ಲಿ ಮಾಯವಾಗಲಾರೆವು, ಮುಂದಿನ ಟ್ರೈನ್ ಸಿಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಹೇಳಬೇಕಾಯಿತು. ತಕ್ಷಣ ಬಂಧಿಸಲಾದ ನಮ್ಮನ್ನು ಇಡೀ ದಿನ ಲಾಕಪ್ನಲ್ಲಿ ಕೂರಿಸಲಾಯಿತು. ಸಂಜೆಯಾಗುತ್ತಿದ್ದಂತೆ ನನ್ನ ಬಲಗೈ ಮತ್ತು ಸಂತಾನಂನ ಎಡಗೈಗೆ ಜಂಟಿಯಾಗಿ ಕಬ್ಬಿಣದ ಬೇಡಿಗಳನ್ನು ತೊಡಿಸಿದರೆ, ಗಿದ್ವಾನಿಯ ಕೈಗೆ ತೊಡಿಸಿದ ಬೇಡಿಯ ಇನ್ನೊಂದು ತುದಿಯೊಳಗೆ ಮತ್ತೊಬ್ಬ ಪೊಲೀಸ್ ತನ್ನ ಕೈಯನ್ನು ತೂರಿಸುತ್ತಾನೆ. ನಮ್ಮ ಸರಪಳಿಯ ಮತ್ತೊಂದು ತುದಿಯನ್ನು ತಮ್ಮ ಕೈಯಲ್ಲಿ ಹಿಡಿದ ಪೊಲೀಸರು ಬೀದಿನಾಯಿಗಳನ್ನು ಕೊಂಡೊಯ್ಯುವಂತೆ ನಮ್ಮನ್ನು ಜೈತೋ ನಗರದ ಬೀದಿಗಳಲ್ಲಿ ಕರೆದೊಯ್ದರು. ಮೊದಮೊದಲು ಇದು ನಮಗೆ ಸಿಡಿಮಿಡಿಗೊಳ್ಳುವಂತೆ ಮಾಡಿತಾದರೂ ಕ್ರಮೇಣ ನಾವು ಅದನ್ನು ಮನಸಾರೆ ಆನಂದಿಸಲಾರಂಭಿಸಿದೆವು. ರಾತ್ರಿಯೆಲ್ಲ ನಿಧಾನವಾಗಿ ಚಲಿಸುವ ಒಂದು ಪ್ಯಾಸೆಂಜರ್ ಟ್ರೈನ್ನ ಕಿಕ್ಕಿರಿದ ಮೂರನೆ ದರ್ಜೆಯ ಬೋಗಿಯಲ್ಲಿ ನಮ್ಮನ್ನು ನಭಾ ನಗರಕ್ಕೆ ಕರೆತರಲಾಯಿತು. ಮರುದಿನ ಮಧ್ಯಾಹ್ನ, ನಭಾದ ಸೆರೆಮನೆಯನ್ನು ಸೇರುವ ತನಕ ನಮ್ಮ ಕೈಗಳಲ್ಲಿ ಕಬ್ಬಿಣದ ಬೇಡಿಗಳು ಮತ್ತು ಭಾರದ ಸರಪಳಿ ತೂಗಾಡುತ್ತಿದ್ದವು. ಆ ಬೇಡಿಗಳಿದ್ದಷ್ಟೂ ಹೊತ್ತು ಪರಸ್ಪರರ ಸಹಕಾರವಿಲ್ಲದೆ ನಾವಿಬ್ಬರೂ ಅತ್ತಿತ್ತ ಕದಲುವಂತಿರಲಿಲ್ಲ. ಮತ್ತೊಬ್ಬರ ಕೈಗೆ ಬೇಡಿಯೊಂದಿಗೆ ಬಂಧನಕ್ಕೊಳಗಾಗಿ ಒಂದು ಹಗಲು ಮತ್ತು ಇಡೀ ರಾತ್ರಿಯನ್ನು ಕಳೆಯುವುದು ನನಗೆ ಸಹಿಸಲಸಾಧ್ಯವಾದ ಅನುಭವವಾಗಿತ್ತು. ನಾವು ಮೂವರೂ ಅಸ್ವಚ್ಛ ಹಾಗೂ ಅನಾರೋಗ್ಯಕರ ನಭಾದ ಸೆರೆಮನೆಯ ಕೋಣೆಯಲ್ಲಿ ರಾತ್ರಿ ಕಳೆಯುವಂತಾಯಿತು. ಚಿಕ್ಕದಾದ ತೇವಭರಿತ ಆ ಕೋಣೆಯ ತಗ್ಗು ಸೂರು ಕೈಯಲ್ಲಿ ಮುಟ್ಟಬಹುದಾದಷ್ಟು ಕೆಳಗಿತ್ತು. ರಾತ್ರಿ ನೆಲದ ಮೇಲೆ ಮಲಗಿದ್ದ ನನ್ನ ಮುಖದ ಮೇಲಿಂದ ಇಲಿಯೋ ಹೆಗ್ಗಣವೋ ಸವರಿ ಹಾರಿ ಹೋದಾಗ ಬೆಚ್ಚಿಬಿದ್ದು ಏಳುವಂತಾಗುತ್ತಿತ್ತು” – ಎಂದು ಜವಾಹರಲಾಲ್ ತಮ್ಮ ಆತ್ಮಕಥೆಯಲ್ಲಿ ವರ್ಣಿಸುತ್ತಾರೆ. (ಪುಟ ೯೮, ‘ಟುವರ್ಡ್ಸ್ ಫ್ರೀಡಂ.’)
೧೯೩೬ರಲ್ಲಿ ಪ್ರಥಮ ಬಾರಿಗೆ ತಮ್ಮ ಆತ್ಮಕಥೆಯನ್ನು ಬರೆದ ಜವಾಹರಲಾಲ್ ನೆಹರುರವರು ೧೯೪೨ರಲ್ಲಿ ಅದನ್ನು ಪರಿಷ್ಕರಿಸುವಾಗ ತಮ್ಮ “ನಭಾದ ಮಧ್ಯಂತರ ಬಿಡುವಿನ” ಬಗ್ಗೆ ಹೊಸತೊಂದು ಅಧ್ಯಾಯವನ್ನೇ ಸೇರಿಸುತ್ತಾರೆ. ಈ ಒಂದು ಅಧ್ಯಾಯವೇ ಇತಿಹಾಸಕಾರರಿಗೆ ನೆಹರುರವರ ಅಂದಿನ ಮನಃಸ್ಥಿತಿಯನ್ನು ಬಿಚ್ಚಿಡುತ್ತದೆ. (ಚಮನ್ಲಾಲ್, ಜವಾಹರಲಾಲ್ ನೆಹರೂಸ್ ಇಂಟರ್ ಲೂಡ್ ಎಟ್ ಜೈತೋ.)
ಈ ಮೊದಲು ತಮ್ಮೊಂದಿಗೆ ಹೆಚ್ಚು ಸುಸಂಸ್ಕೃತರಂತೆ ನಡೆದುಕೊಳ್ಳುತ್ತಿದ್ದ ಪೊಲೀಸರ ಬದಲಾದ ವರ್ತನೆ ಜವಾಹರ್ಗೆ ಭೀಕರ ಆಘಾತವನ್ನುಂಟು ಮಾಡುವಂತಾಗಿತ್ತು. ಅನಾರೋಗ್ಯಕರ ಕೊಳಕು ಕೊಠಡಿ, ಮತ್ತೊಬ್ಬನೊಂದಿಗೆ ಕೈಕೋಳ ತೊಡಿಸಿಕೊಂಡು ಕಳೆಯಬೇಕಾದ ಸಮಯ, ಇಲಿ ಹೆಗ್ಗಣಗಳೊಂದಿಗೆ ಮಲಗುವ ಅನುಭವ ಇತ್ಯಾದಿಗಳು ಜೀವನವನ್ನು ನರಕಸದೃಶವನ್ನಾಗಿಸಿತ್ತು. (ಪುಟ ೯೦, ಮೈಕೇಲ್ ಬ್ರೆಷರ್, ನೆಹರು ಎ ಪೊಲಿಟಿಕಲ್ ಬಯಾಗ್ರಫಿ.) ಹೀಗೆ ಅಂಡಮಾನಿನ ಕೈದಿಗಳು ತಮ್ಮ ಕೋಣೆಗಳಲ್ಲಿ ಓಡಾಡುತ್ತಿದ್ದ ಹಾವು ಚೇಳುಗಳೊಂದಿಗೆ ಕಾಲ ಕಳೆದ ಅನುಭವವನ್ನು ಜವಾಹರಲಾಲ್ ನೆಹರುರವರಿಗೆ ನಭಾದ ಸೆರೆಮನೆಯ ಇಲಿ ಹೆಗ್ಗಣಗಳು ತಂದೊಡ್ಡುತ್ತವೆ.
ತಮ್ಮ ಅನುಭವವನ್ನು ಕೆ. ಸಂತಾನಂ ಹೀಗೆ ಬರೆಯುತ್ತಾರೆ: “ನಭಾದಲ್ಲಿ ನಮ್ಮನ್ನು ಸೆರೆಮನೆಯ ಸುಮಾರು ೧೨ ಅಡಿ ಅಗಲ ಹಾಗೂ ೨೦ ಅಡಿ ಉದ್ದದ ಪ್ರತ್ಯೇಕ ಕೊಠಡಿಯೊಂದರಲ್ಲಿ ಕೂಡಿಡಲಾಯಿತು. ಸುತ್ತಲೂ ಮಣ್ಣಿನ ಗೋಡೆ. ಸೂರಿನಿಂದ ಮಣ್ಣು ಉದುರುತ್ತಿತ್ತು ಕಾವಲುಗಾರರಿಗೂ ನಮ್ಮೊಂದಿಗೆ ಮಾತನಾಡಲು ಅನುಮತಿಯಿರಲಿಲ್ಲ. ಸಮಯಕ್ಕೆ ಸರಿಯಾಗಿ ಚಪಾತಿ ಮತ್ತು ದಾಲ್ಅನ್ನು ನಮ್ಮ ಕೊಠಡಿಯಲ್ಲಿ ಇರಿಸಲಾಗುತ್ತಿತ್ತು. ಸ್ನಾನದ ವ್ಯವಸ್ಥೆಯೂ ಇರಲಿಲ್ಲ. ನಮ್ಮ ಬಟ್ಟೆಬರೆಗಳನ್ನೂ ಕೊಡಲಿಲ್ಲ. ಸೂರಿನಿಂದ ಉದುರುತ್ತಿದ್ದ ಮಣ್ಣು ಜವಾಹರ್ಗೆ ಸಾಕಷ್ಟು ಕಿರಿಕಿರಿಯನ್ನುಂಟುಮಾಡುತ್ತಿತ್ತು. ಆತ ಪ್ರತಿ ಅರ್ಧ ಗಂಟೆಗೊಮ್ಮೆ ಪೊರಕೆಯನ್ನೆತ್ತಿಕೊಂಡು ನೆಲವನ್ನು ಸ್ವಚ್ಛ ಮಾಡಲಾರಂಭಿಸುತ್ತಿದ್ದ. ಇದರಿಂದ ನಾನು ಮತ್ತು ಗಿದ್ವಾನಿ ಹೆಚ್ಚು ಮನೋರಂಜನೆ ಪಡೆಯಲಾರಂಭಿಸಿದೆವು.” (ಚಮನ್ಲಾಲ್, ಜವಾಹರಲಾಲ್ ನೆಹರೂಸ್ ಇಂಟರ್ ಲೂಡ್ ಎಟ್ ಜೈತೋ.)
ನಭಾದ ಆಡಳಿತಾಧಿಕಾರಿ ವಿಲ್ಸನ್ ಜಾನ್ಸ್ಟನ್ ಸ್ವತಃ ಒಪ್ಪಿಕೊಂಡಿರುವಂತೆ ಅಲ್ಲಿಯ ಸೆರೆಮನೆಯ ಸ್ಥಿತಿ ‘ಅಸಹನೀಯ’ವಾಗಿತ್ತು. ಆದರೆ ಸಿಖ್ಖರ ಆಂದೋಲನದಿಂದ ಸೆರೆಮನೆಗೆ ಬರುತ್ತಿರುವ ಕೈದಿಗಳ ಸಂಖ್ಯೆಯನ್ನು ನಿಭಾಯಿಸುವಲ್ಲಿ ಬಳಲಿದ್ದ ಸೆರೆಮನೆಯ ಅಧಿಕಾರಿಗಳು ಸೆರೆಮನೆಯ ಸ್ಥಿತಿಗತಿಗಳನ್ನು ಸುಧಾರಿಸುವ ಸಾಹಸಕ್ಕೆ ಕೈಹಾಕಲಿಲ್ಲ. ನೆಹರು ಮತ್ತು ಸಂಗಾತಿಗಳಿಗೆ ಹೊರಗಿನವರನ್ನು ಭೇಟಿಯಾಗುವ ಅವಕಾಶವಿರಲಿಲ್ಲ. ವೃತ್ತಪತ್ರಿಕೆಗಳು ಅಥವಾ ಪುಸ್ತಕಗಳನ್ನು ನೀಡಲಾಗಲಿಲ್ಲ. ಅಷ್ಟೇಕೆ ಅವರಿಗೆ ಸ್ನಾನ ಮತ್ತು ಬಟ್ಟೆ ಬದಲಿಸುವ ಅವಕಾಶವನ್ನೂ ಒದಗಿಸಲಿಲ್ಲ. (ಪುಟ ೭೬, ಗೋಪಾಲ್ ಸರ್ವಪಲ್ಲಿ, ಜವಾಹರಲಾಲ್ ನೆಹರು ಸಂಪುಟ ೧.)
ಜವಾಹರ್ ಭೇಟಿಗೆ ವೈಸರಾಯ್ ಅನುಮತಿ
ಸೆರೆಮನೆ ಸೇರುತ್ತಿದ್ದಂತೆ ಜವಾಹರಲಾಲ್ ಎರಡು ಪತ್ರಗಳನ್ನು ಬರೆಯುತ್ತಾರೆ. ತಮ್ಮ ಪತ್ನಿ ಕಮಲಾ ನೆಹರುಗೆ ಬರೆದ ಮೊದಲ ಪತ್ರದಲ್ಲಿ “ಇಂದು ಮಧ್ಯಾಹ್ನ ನಮ್ಮನ್ನು ಇಲ್ಲಿ ಬಂಧಿಸಲಾಗಿದೆ. ನಮ್ಮನ್ನು ಎಲ್ಲಿ ವಿಚಾರಣೆಗೆ ಗುರಿಪಡಿಸುತ್ತಾರೆ ಎಂಬುದು ತಿಳಿದುಬಂದಿಲ್ಲ. ಆತಂಕ ಬೇಡ” ಎಂದಿದ್ದರೆ, ತಂದೆ ಮೋತಿಲಾಲ್ರಿಗೆ ಬರೆದ ಪತ್ರದಲ್ಲಿ “ಅದೃಷ್ಟವಶಾತ್ ನಮ್ಮನ್ನು ಬಂಧಿಸಲಾಗಿದೆ. ಕೆಲವು ಗಂಟೆಗಳಿಂದ ನಾವು ಪೊಲೀಸ್ ಠಾಣೆಯಲ್ಲಿ ಕಾಯುತ್ತ ಕುಳಿತಿದ್ದೇವೆ. ಮುಂದೇನಾಗುತ್ತದೆ ಎಂಬುದು ಗೊತ್ತಿಲ್ಲ. ಅದೇನಿದ್ದರೂ ನಾವು ಸಂತುಷ್ಟರಾಗಿದ್ದೇವೆ, ಆತಂಕ ಬೇಡ.” ಮಗ ‘ಆತಂಕ ಬೇಡ’ ಎಂದು ಬರೆದಿದ್ದರೂ ತಂದೆ ಮೋತಿಲಾಲ್ ಬಹಳಷ್ಟು ಪ್ರಪಂಚವನ್ನು ಕಂಡ ವ್ಯಕ್ತಿಯಾಗಿದ್ದರು. ಪಂಜಾಬ್ ಪ್ರಾಂತದ ಕಪಟ, ಸುಳ್ಳು, ಕುಯುಕ್ತಿ ಮತ್ತು ಹಿಂಸೆಯನ್ನು ಕಂಡವರಾಗಿದ್ದರು. ತಮಗಾಗದವರನ್ನು ಕ್ಷಣಮಾತ್ರದಲ್ಲಿ ‘ಗಾಯಬ್’ ಮಾಡಬಲ್ಲ ಅಲ್ಲಿಯ ರಾಜಸಂಸ್ಥಾನಗಳ ವ್ಯವಸ್ಥೆಯ ಬಗ್ಗೆ ಸಾಕಷ್ಟು ಅರಿವುಳ್ಳವರಾಗಿದ್ದರು. ಮಗನ ಆರೋಗ್ಯ ಹಾಗೂ ಪ್ರಾಣಕ್ಕೆ ಅಪಾಯವನ್ನು ನಿರೀಕ್ಷಿಸಿದ ಅವರು ತಕ್ಷಣ (ಸೆಪ್ಟೆಂಬರ್ ೨೩ರಂದು) ವೈಸರಾಯ್ಗೆ “ನನ್ನ ಮಗ ಪಂಡಿತ್ ಜವಾಹರಲಾಲ್ ನೆಹರುವನ್ನು ಭೇಟಿ ಮಾಡಲು ಇಂದು ಪಂಜಾಬ್ ಮೇಲ್ನಲ್ಲಿ ನಭಾಕ್ಕೆ ಹೊರಡಲಿದ್ದೇನೆ. ಅಲ್ಲಿ ಆತನನ್ನು ವಿಧಿ ೧೮೮ರ ಅನ್ವಯ ಬಂಧಿಸಲಾಗಿದ್ದು ಈಗ ಸಂಸ್ಥಾನದ ಅಧೀನದಲ್ಲಿದ್ದಾನೆ. ಈವರೆಗೆ ಅಕಾಲಿ ಆಂದೋಲನದಲ್ಲಿ ಭಾಗವಹಿಸಿಲ್ಲ. ಪ್ರಸ್ತುತ ಭೇಟಿಯ ಮುಖ್ಯ ಉದ್ದೇಶ ಕೇವಲ ಮಗನನ್ನು ಭೇಟಿ ಮಾಡುವುದಾಗಿದೆ. ಕೈ ಕೆಳಗಿನ ಅಧಿಕಾರಿಗಳಿಂದ ಯಾವುದೇ ರೀತಿಯ ಅಡಚಣೆ, ತೊಂದರೆ ಇಲ್ಲದೆ ನನ್ನ ಹಕ್ಕನ್ನು ಚಲಾಯಿಸುವ ಅವಕಾಶ ದೊರಕುತ್ತದೆ ಎಂದು ನಿರೀಕ್ಷಿಸುತ್ತೇನೆ” – ಎಂದು ಟೆಲಿಗ್ರಾಮ್ ಕಳುಹಿಸುತ್ತಾರೆ. ಅದರೊಂದಿಗೆ ಪಂಜಾಬ್ ಪ್ರಾಂತದಲ್ಲಿ ಮಂತ್ರಿಯಾಗಿರುವ ತಮ್ಮ ಗೆಳೆಯ ಹರಿಕಿಶನ್ಲಾಲ್ಗೂ ಟೆಲಿಗ್ರಾಮ್ ಕಳುಹಿಸುತ್ತಾರೆ. ಈ ಮೊದಲು ೧೯೧೯ರಲ್ಲಿ ಪಂಜಾಬ್ನಲ್ಲಿ ಸೈನಿಕ ಆಡಳಿತವಿದ್ದ ಸಮಯದಲ್ಲಿ ಮೊತೀಲಾಲ್ ಹರಿಕಿಶನ್ರವರಿಗೆ ಸಾಕಷ್ಟು ಉಪಕಾರ ಎಸಗಿದ್ದರು. (ಪುಟ ೨೧೮, ಬಿ.ಆರ್. ನಂದ, ದಿ ನೆಹರೂಸ್ ಮೋತಿಲಾಲ್ ಎಂಡ್ ಜವಾಹರಲಾಲ್.)
ಸೆಪ್ಟೆಂಬರ್ ೨೪ರಂದು ನಭಾ ತಲಪಿದ ಮೋತಿಲಾಲ್ ರೈಲ್ವೇ ನಿಲ್ದಾಣದ ವೇಟಿಂಗ್ ರೂಮ್ನಲ್ಲಿ ತಂಗುತ್ತಾರೆ. ನಭಾದ ಆಡಳಿತಾಧಿಕಾರಿ ವಿಲ್ಸನ್ ಜಾನ್ಸ್ಟನ್ ಮೋತಿಲಾಲ್ರಿಗೆ ಪತ್ರ ಬರೆದು “ಗೌರವಾನ್ವಿತ ಹರಿಕಿಶನ್ರವರು ಅಲಹಾಬಾದ್ನಿಂದ ದಿನಾಂಕ ೨೨ರಂದು ನೀವು ಕಳುಹಿಸಿದ ಟೆಲಿಗ್ರಾಮ್ ಅನ್ನು ನಮಗೆ ರವಾನಿಸಿರುತ್ತಾರೆ…. ನಿಮ್ಮ ಮಗನ ಮೊಕದ್ದಮೆಯ ಬಗ್ಗೆ ಹೇಳುವುದಾದರೆ ಅವರನ್ನು ವಿಧಿ ೧೮೮ ಮತ್ತು ೧೪೫ ಅನ್ವಯ ಬಂಧಿಸಲಾಗಿದೆ” ಎಂದು ತಿಳಿಸುತ್ತಾನೆ. ಇದಕ್ಕೆ ಉತ್ತರವಾಗಿ ಮೋತಿಲಾಲ್ “ನಿಮ್ಮ ಪತ್ರಕ್ಕಾಗಿ ಆಭಾರಿಯಾಗಿದ್ದೇನೆ. ನನ್ನ ಮಗನ ಮೊಕದ್ದಮೆಯ ವಿಚಾರದಲ್ಲಿ ನೀವು ಹಮ್ಮಿಕೊಂಡಿರುವ ಕಾನೂನು ಪ್ರಕ್ರಿಯೆಯಲ್ಲಿ ತಲೆಹಾಕುವ ಉದ್ದೇಶ ನನಗಿಲ್ಲ. ಆದರೆ ಒಬ್ಬ ಆಪಾದಿತ ಅಪೇಕ್ಷಿಸಿದಂತೆ ಕಾನೂನುತಜ್ಞರ ಸಹಾಯವನ್ನು ಪಡೆಯುವ ಆತನ ಹಕ್ಕನ್ನು ಮೊಟಕುಗೊಳಿಸುವುದನ್ನು ಸಹಿಸಲಾಗದು. ಆಪಾದಿತನ ಆಯುರ್ ಆರೋಗ್ಯಗಳ ಬಗ್ಗೆ ಹೆಚ್ಚಿನ ಕಳಕಳಿಯಿರುವ ಒಬ್ಬ ತಂದೆಯಾಗಿ ಆತನೊಂದಿಗೆ ಸಂಪರ್ಕ ಸಾಧಿಸುವ ನನ್ನ ಹಕ್ಕನ್ನು ಚಲಾಯಿಸಲು ಅಪೇಕ್ಷಿಸುತ್ತೇನೆ. ಸಂಸ್ಥಾನಗಳ ಪೊಲೀಸರು ತಮ್ಮ ಕೈಕೆಳಗಿನ ಆಪಾದಿತರನ್ನು ದುರ್ವರ್ತನೆಗೆ ಒಳಪಡಿಸುವ ಅನೇಕ ಸುದ್ದಿ ಸಮಾಚಾರಗಳನ್ನು ಪತ್ರಿಕೆಗಳಲ್ಲಿ ಓದಿರುವ ನನಗೆ ನನ್ನ ಮಗನ ಬಗ್ಗೆಯೂ ಅಂತಹ ದುರ್ವರ್ತನೆಯನ್ನು ಅನುಸರಿಸಲಾಗಿದೆಯೇ ಎಂಬ ಆತಂಕ ಕಾಡುತ್ತಿದೆ.” ವಿಲ್ಸನ್ ಜಾನ್ಸ್ಟನ್ ಇಷ್ಟಕ್ಕೆಲ್ಲ ಬಗ್ಗುವ ಪ್ರಾಣಿಯಾಗಿರಲಿಲ್ಲ! “ನಿಮಗೆ ಈಗಾಗಲೇ ಮುಖಿಕವಾಗಿ ತಿಳಿಸಿರುವಂತೆ ನಿಮ್ಮ ಮಗನನ್ನು ಕೆಳಕಂಡ ಷರತ್ತುಗಳ ಮೇಲೆ ಭೇಟಿ ಮಾಡಬಹುದಾಗಿದೆ. (i) ಸಂಸ್ಥಾನದ ಭೂಪ್ರದೇಶದಲ್ಲಿ ನೀವು ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಬರವಣಿಗೆಯಲ್ಲಿ ನೀಡಬೇಕು ಹಾಗೂ (ii) ಜವಾಹರಲಾಲ್ರ ಅವರೊಂದಿಗೆ ಭೇಟಿ ಮುಗಿಯುತ್ತಿದ್ದಂತೆ ಸಂಸ್ಥಾನದ ಭೂಪ್ರದೇಶದಿಂದ ನಿರ್ಗಮಿಸಬೇಕು” ಎಂದು ತಾಕೀತು ಮಾಡುತ್ತಾನೆ. ಹೆಸರಾಂತ ವಕೀಲರಾಗಿದ್ದ ಮೋತಿಲಾಲ್ ನೆಹರು ಒಬ್ಬ ಐಸಿಎಸ್ ಅಧಿಕಾರಿಯ ಇಂತಹ ಗೊಡ್ಡು ಬೆದರಿಕೆಗಳಿಗೆ ತಲೆ ಬಾಗುವವರಾಗಿರಲಿಲ್ಲ. “ನನ್ನ ಮಗನನ್ನು ಭೇಟಿ ಮಾಡಲು ನೀವು ಹಿಂದಿನ ಪತ್ರದಲ್ಲಿ ವಿಧಿಸಿರುವ ನಿಮ್ಮ ಮೌಖಿಕ ಆದೇಶಗಳಿಗೆ ಒಪ್ಪಿಗೆ ಸೂಚಿಸಿದ್ದೇನೆ. ಆದಾಗ್ಯೂ ಅದನ್ನು ನೀವು ಬರವಣಿಗೆಯಲ್ಲಿ ಅಪೇಕ್ಷಿಸುತ್ತಿದ್ದೀರಿ. ನಾನು ಜವಾಹರಲಾಲ್ ನೆಹರುರವರನ್ನು ಭೇಟಿಯಾಗುವುದಷ್ಟೇ ಅಲ್ಲದೆ ಆತನ ನ್ಯಾಯಾಂಗ ವಿಚಾರಣೆಯ ಸಂಪೂರ್ಣ ಪ್ರಕ್ರಿಯೆಯನ್ನು ವೀಕ್ಷಿಸುವ ಹಾಗೂ ಅಗತ್ಯಬಿದ್ದರೆ ಆತನ ಪರ ವಾದ ಮಾಡುವ ಹಕ್ಕನ್ನು ನಿಭಾಯಿಸಲಿದ್ದೇನೆ” ಎಂದು ತಿರುಗೇಟು ಕೊಡುತ್ತಾರೆ. ಈಗ ಅಧಿಕಾರಿಯ ಸರದಿ. “ನಾನು ವಿಧಿಸಿರುವ ಎರಡು ಷರತ್ತುಗಳಿಗೆ ನೀವು ಒಪ್ಪಿಗೆ ಸೂಚಿಸಿರದ ಕಾರಣ ಭಾರತೀಯ ಅಪರಾಧ ಸಂಹಿತೆಯ ವಿಧಿ ೧೪೪ರ ಅನ್ವಯ ತಾವು ತಕ್ಷಣದ ಟ್ರೆöÊನ್ನಲ್ಲಿ ಸಂಸ್ಥಾನದ ಭೂಪ್ರದೇಶದಿಂದ ನಿರ್ಗಮಿಸಬೇಕೆಂದು ಆದೇಶಿಸುತ್ತೇನೆ.” “ನಭಾದಲ್ಲಿ ನನ್ನ ಉಪಸ್ಥಿತಿ ಸರಕಾರಕ್ಕೆ ಕಿರಿಕಿರಿಯನ್ನುಂಟು ಮಾಡಬಲ್ಲದ್ದಾದರೂ ಇಲ್ಲಿಯ ಶಾಂತಿಭಂಗಕ್ಕೆ ಕಾರಣವಾಗುತ್ತದೆ ಎಂಬುದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಪ್ರಸ್ತುತ ನಾನು ಮೊದಲ ಟ್ರೈನ್ ಹಿಡಿದು ಇಲ್ಲಿಂದ ನಿರ್ಗಮಿಸಲಿದ್ದೇನೆ. ಆದರೆ ವಿಧಿ ೧೪೪ನ್ನು ಅನ್ವಯಿಸಿರುವುದು ಸಂಪೂರ್ಣವಾಗಿ ಅನುಚಿತವಾಗಿದೆ” ಎಂದು ಉತ್ತರಿಸುವ ಮೋತಿಲಾಲ್ ಅಲ್ಲಿಂದ ಅಂಬಾಲಕ್ಕೆ ತೆರಳುತ್ತಾರೆ. (ಪುಟ ೨೧೮ ೨೨೦, ಬಿ.ಆರ್. ನಂದ, ದಿ ನೆಹರೂಸ್ ಮೋತಿಲಾಲ್ ಎಂಡ್ ಜವಾಹರಲಾಲ್.)
ಅಂಬಾಲ ದಂಡು ರೈಲ್ವೇ ಸ್ಟೇಷನ್ ತಲಪಿದ ಮೋತಿಲಾಲ್ ನೆಹರು ಅವರು ವೈಸರಾಯ್ಗೆ ಮತ್ತೊಂದು ಟೆಲಿಗ್ರಾಮ್ ಕಳುಹಿಸುತ್ತಾರೆ. “ಸಿಖ್ಖರ ರಾಜಕೀಯ ಆಂದೋಲನದಲ್ಲಿ ಪಾಲ್ಗೊಳ್ಳುವುದಿಲ್ಲ ಮತ್ತು ನನ್ನ ಏಕೈಕ ಉದ್ದೇಶ ವಿಚಾರಣಾಧೀನ ಕೈದಿಯಾಗಿರುವ ಮಗ ಜವಾಹರಲಾಲ್ನನ್ನು ಭೇಟಿ ಮಾಡುವುದಾಗಿದೆ ಎಂಬ ಭರವಸೆ ನೀಡಿದ ಬಳಿಕವೂ ನಭಾದ ಆಡಳಿತಾಧಿಕಾರಿ ಲಿಖಿತ ಭರವಸೆಗಳನ್ನು ನೀಡುವಂತೆ ಒತ್ತಾಯಿಸಿರುತ್ತಾನೆ. ನನ್ನ ಮಗನ ಪರವಾಗಿ ವಕೀಲಿ ಮಾಡುವ ನನ್ನ ಪ್ರಾರ್ಥನೆಗೆ ಬದಲಾಗಿ ವಿಧಿ ೧೪೪ರ ಅನ್ವಯ ನನ್ನನ್ನು ನಭಾದಿಂದ ಮೊದಲ ಟ್ರೈನ್ ಗಾಡಿಯನ್ನು ಹತ್ತಿ ಹೊರಡುವಂತೆ ಆದೇಶಿಸಲಾಗಿದೆ. ಅಲ್ಲಿ ಅಣಕು ವಿಚಾರಣೆ ನಡೆಯುತ್ತಿದ್ದರೂ ನಿನ್ನೆಯ ದಿನ ನಾನು ನಭಾವನ್ನು ತೊರೆಯಬೇಕಾಯಿತು. ಇದು ಸಂಪೂರ್ಣವಾಗಿ ನ್ಯಾಯಬಾಹಿರ ಹಾಗೂ ನಿಷ್ಪಕ್ಷಪಾತ ವ್ಯವಹಾರಕ್ಕೆ ಬಾಹಿರವಾಗಿದೆ. ಆಪಾದಿತನೊಂದಿಗೆ ಸೆರೆಮನೆಯಲ್ಲಿ ದುರ್ವ್ಯವಹಾರ ನಡೆಯಬಹುದೆಂದು ಆತಂಕಗೊಂಡಿದ್ದೇನೆ. ನಿಮ್ಮ ಉತ್ತರದ ನಿರೀಕ್ಷೆಯಲ್ಲಿ ಅಂಬಾಲ ದಂಡು ರೈಲ್ವೇ ಸ್ಟೇಷನ್ನಲ್ಲಿ ಕಾಯುತ್ತಿದ್ದೇನೆ.” ಇದಾದ ಬಳಿಕ ಭಾರತ ಸರಕಾರದ ಮಧ್ಯಪ್ರವೇಶದಿಂದ ಮೋತಿಲಾಲ್ ನೆಹರುಗೆ ಜವಾಹರಲಾಲ್ರನ್ನು ನಭಾದಲ್ಲಿ ಭೇಟಿ ಮಾಡಲು ಅನುಮತಿ ದೊರಕಿತಲ್ಲದೆ, ವಿಚಾರಣೆ ನಡೆಯುವಷ್ಟು ದಿನವೂ ಅಲ್ಲಿರಲು ಅವಕಾಶ ಒದಗಿಸಲಾಯಿತು. ನಭಾದ ರಾಜಕೀಯದಲ್ಲಿ ತಾವು ತಲೆಹಾಕುವುದಿಲ್ಲ ಎಂದು ಅವರು ಪುನರುಚ್ಚರಿಸಬೇಕಾಯಿತು. ಸೆಪ್ಟೆಂಬರ್ ೨೭ರ ಸಂಜೆ ಸೆರೆಮನೆಯಲ್ಲಿ ಜವಾಹರರನ್ನು ಭೇಟಿ ಮಾಡುವ ಮೋತಿಲಾಲ್ ಮಗನ ‘ದುಃಸ್ಥಿತಿ’ಯನ್ನು ಕಂಡು ವ್ಯಾಕುಲರಾಗುತ್ತಾರೆ. ಈ ಒಂದು ಭೇಟಿಗಾಗಿ ನೂರಾರು ಮೈಲಿಗಳಷ್ಟು ಪ್ರಯಾಣ ಮಾಡಿ, ಹಲವಾರು ಟ್ರೆöÊನ್ ಮತ್ತು ಸ್ಟೇಷನ್ಗಳಲ್ಲಿ ಕಾತುರರಾಗಿ ಕಾಯುತ್ತ, ನಭಾದ ಬ್ರಿಟಿಷ್ ಆಡಳಿತಾಧಿಕಾರಿಯೊಂದಿಗೆ ಮಾತಿನ ಸಮರದಲ್ಲಿ ತೊಡಗಿ ಅಂತಿಮವಾಗಿ ವೈಸರಾಯ್ರವರ ಮಧ್ಯಪ್ರವೇಶವನ್ನೂ ಆಹ್ವಾನಿಸಿದ ಆ ವೃದ್ಧ ತಂದೆ ಸಂಪೂರ್ಣವಾಗಿ ಭ್ರಮನಿರಸರಾಗುತ್ತಾರೆ. ಆದರೆ ಜವಾಹರ್ ತಮ್ಮ ತಂದೆಯ ವಕಾಲತ್ತನ್ನು ತಿರಸ್ಕರಿಸುವರಲ್ಲದೆ, ವೈಸರಾಯ್ಗೆ ಮೇಲ್ಮನವಿ ಸಲ್ಲಿಸದಂತೆ ತಡೆಯುತ್ತಾರೆ. (ಪುಟ ೨೨೦ ೨೨೧, ಬಿ.ಆರ್. ನಂದ, ದಿ ನೆಹರೂಸ್ ಮೋತಿಲಾಲ್ ಎಂಡ್ ಜವಾಹರಲಾಲ್.)
ನೆಹರು ಮುಚ್ಚಳಿಕೆ ಬರೆದುಕೊಟ್ಟಿದ್ದರೇ?
“ಎರಡು ಮೂರು ದಿನಗಳ ಬಳಿಕ ನ್ಯಾಯಾಲಯದಲ್ಲಿ ನಮ್ಮ ಮೊಕದ್ದಮೆಯನ್ನು ಪ್ರಾರಂಭಿಸಲಾಯಿತು. ಅದೊಂದು ಹಾಸ್ಯಾಸ್ಪದ ಅಣಕು ವಿಚಾರಣೆ. ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶನೊಬ್ಬ ಸಂಪೂರ್ಣ ಅವಿದ್ಯಾವಂತನಂತೆ ಕಂಡುಬರುತ್ತಿದ್ದ. ಆತನಿಗೆ ಇಂಗ್ಲಿಷ್ನ ಗಂಧಗಾಳಿಯೂ ಇರಲಿಲ್ಲ. ಆದರೆ ನ್ಯಾಯಾಲಯದ ಭಾಷೆಯಾದ ಉರ್ದುವಿನಲ್ಲಿಯೂ ಆತನಿಗೆ ಪರಿಣತಿ ಇತ್ತೇ ಎಂದು ನನಗೆ ಅನುಮಾನವಿದೆ. ಆತನ ಚರ್ಯೆಯನ್ನು ಒಂದು ವಾರ ವೀಕ್ಷಿಸಿದಾಗ ಆತ ನಮ್ಮೆದುರು ಒಂದು ಸಾಲನ್ನೂ ಬರೆಯುತ್ತಿರಲಿಲ್ಲ. ಏನನ್ನಾದರೂ ಬರೆಯುವುದಿದ್ದರೆ ಅದನ್ನಾತ ನ್ಯಾಯಾಲಯದ ಗುಮಾಸ್ತನ ಕೈಯಲ್ಲಿ ಬರೆಯಿಸುತ್ತಿದ್ದ. ನಾವು ಸಲ್ಲಿಸಿದ ಹಲವಾರು ಚಿಕ್ಕಪುಟ್ಟ ಅರ್ಜಿಗಳ ಮೇಲೆ ಆತ ಯಾವ ಆದೇಶವನ್ನೂ ನೀಡುತ್ತಿರಲಿಲ್ಲ. ಆದರೆ ಅವುಗಳ ಮೇಲೆ ಮರುದಿನ ಯಾರೋ ಬರೆದ ಟಿಪ್ಪಣಿಗಳು ಕಾಣಿಸುತ್ತಿದ್ದವು. ಅಸಹಕಾರ ಚಳವಳಿಯ ಸಮಯದಲ್ಲಿ ನ್ಯಾಯಾಲಯಗಳಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಪ್ರಕ್ರಿಯೆಗೆ ತಿಲಾಂಜಲಿ ನೀಡಿದ್ದ ನಮಗೆ ಈಗ ಅಂತಹ ವಾದಮಂಡನೆ ಎಂದರೆ ಅಪಮಾನಜನಕವೆನಿಸುತ್ತಿತ್ತು. ನ್ಯಾಯಾಲಯದಲ್ಲಿ ನಾನೊಂದು ಸುದೀರ್ಘ ಹೇಳಿಕೆಯನ್ನು ಬರೆದು ಸಲ್ಲಿಸಿದೆ.” (ಪುಟ ೯೮, ‘ಟುವರ್ಡ್ಸ್ ಫ್ರೀಡಂ.’)
“ನಮ್ಮದೊಂದು ಸಾಮಾನ್ಯ ಮೊಕದ್ದಮೆಯಾಗಿದ್ದರೂ ವಿಚಾರಣೆ ಮಾತ್ರ ಸುದೀರ್ಘವಾಗಿ ಎಳೆಯುತ್ತಿತ್ತು. ಒಂದು ಮಧ್ಯಾಹ್ನ ನ್ಯಾಯಾಲಯದ ಕಲಾಪ ಮುಗಿದ ಮೇಲೂ ನಮ್ಮನ್ನು ಅದೇ ಕಟ್ಟಡದಲ್ಲಿಟ್ಟು ಕಾಯಿಸಲಾರಂಭಿಸಿದರು. ಸಂಜೆ ಸುಮಾರು ೭ ಗಂಟೆಯ ಸಮಯದಲ್ಲಿ ಅದೇ ಕಟ್ಟಡದ ಮತ್ತೊಂದು ಕೊಠಡಿಗೆ ಕರೆದೊಯ್ಯಲಾಯಿತು. ಅಲ್ಲಿ ಬೇರೊಬ್ಬ ವ್ಯಕ್ತಿ ಕುಳಿತಿದ್ದ. ನಮ್ಮನ್ನು ಜೈತೋದಲ್ಲಿ ಬಂಧಿಸಿದ್ದ ಒಬ್ಬ ವೃದ್ಧ ಪೊಲೀಸ್ ಅಧಿಕಾರಿ ಎದ್ದು ನಿಂತು ಹೇಳಿಕೆಯನ್ನು ದಾಖಲಿಸಲು ಪ್ರಾರಂಭಿಸುತ್ತಾನೆ. ಅಲ್ಲೇನಾಗುತ್ತಿದೆ ಎಂದು ನಾನು ವಿಚಾರಿಸಿದಾಗ ಅದೊಂದು ನ್ಯಾಯಾಲಯ ಹಾಗೂ ನಮ್ಮನ್ನು ಷಡ್ಯಂತ್ರದ ಆಪಾದನೆಯ ಮೇಲೆ ವಿಚಾರಣೆಗೆ ಕರೆಯಿಸಲಾಗಿದೆ ಎಂದು ತಿಳಿದುಬರುತ್ತದೆ. ಇದುವರೆಗೆ ನಾವು ಎದುರಿಸುತ್ತಿದ್ದ ‘ಅನುಮತಿಯಿಲ್ಲದೆ ನಭಾ ಭೂಪ್ರದೇಶವನ್ನು ಪ್ರವೇಶಿಸಿದ’ ಮೊಕದ್ದಮೆಗಿಂತಲೂ ಇದು ಹೊಸ ಮೊಕದ್ದಮೆಯಾಗಿತ್ತು. ಹಿಂದಿನ ಮೊಕದ್ದಮೆಯಲ್ಲಿ ಅಬ್ಬಬ್ಬಾ ಎಂದರೆ ನಮಗೆ ಆರು ತಿಂಗಳ ಶಿಕ್ಷೆ ಮಾತ್ರ ವಿಧಿಸಬಹುದಾಗಿತ್ತು. ಆದರೆ ಅಷ್ಟಕ್ಕೇ ತೃಪ್ತಿಯಾಗದ ನಭಾ ಸರಕಾರ ಅದಕ್ಕಿಂತಲೂ ಹೆಚ್ಚಿನ ಶಿಕ್ಷೆಯನ್ನು ವಿಧಿಸಬೇಕೆಂದು ಹವಣಿಸಿದಂತಿತ್ತು. ಹೀಗಾಗಿ ಹೊಸತೊಂದು ಆಪಾದನೆ ಹೊರಿಸಿತ್ತು! ಆದರೆ ನಭಾದಲ್ಲಿ ಷಡ್ಯಂತ್ರದ ಮೊಕದ್ದಮೆ ಹೂಡಲು ನಾಲ್ವರ ಅಗತ್ಯವಿರುತ್ತದೆ. ನಮ್ಮೊಂದಿಗೆ ಒಬ್ಬ ಅಪರಿಚಿತ ಬಡಪಾಯಿ ಸಿಖ್ಖನನ್ನು ಸೇರಿಸಿ ಈ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ. ನಾವು ಆತನನ್ನು ಜೈತೋಗೆ ಬರುವ ಮೆರವಣಿಗೆಯ ಸಮಯದಲ್ಲಿ ಹೊಲಗಳಲ್ಲಿ ನೋಡಿದ್ದನ್ನು ಬಿಟ್ಟರೆ ಆತನೊಂದಿಗೆ ನಮಗೆ ಬೇರಾವ ಸಂಬಂಧವೂ ಇರಲಿಲ್ಲ. (ಪುಟ. ೯೯, ‘ಟುವರ್ಡ್ಸ್ ಫ್ರೀಡಂ.’)
“ಈ ಮಧ್ಯೆ ಒಂದು ದಿನ ಆಡಳಿತಾಧಿಕಾರಿಯ ಪರವಾಗಿ ಸೆರೆಮನೆಯ ಸೂಪರಿಂಟೆಂಡೆಂಟ್ ಬಂದು ನಭಾವನ್ನು ತೊರೆದು, ಘಟನೆಯ ಬಗೆಗೆ ವಿಷಾದವನ್ನು ವ್ಯಕ್ತಪಡಿಸಿದರೆ ನಮ್ಮ ವಿರುದ್ಧದ ಎಲ್ಲ ಮೊಕದ್ದಮೆಗಳನ್ನು ಕೈಬಿಡಲಾಗುವುದೆಂಬ ಸೂಚನೆಯನ್ನು ನೀಡಿದ. ಅದಕ್ಕುತ್ತರವಾಗಿ, ನಾವು ವಿಷಾದ ವ್ಯಕ್ತಪಡಿಸುವ ಯಾವ ಕಾರ್ಯವನ್ನೂ ಮಾಡಿಲ್ಲ; ಬದಲಿಗೆ ನಭಾದ ಆಡಳಿತವೇ ನಮ್ಮ ಬಳಿ ಕ್ಷಮೆ ಕೇಳಬೇಕೆಂದು ಹೇಳಿದೆವು. ಅಲ್ಲದೆ ಯಾವುದೇ ರೀತಿಯ ಮುಚ್ಚಳಿಕೆಯನ್ನೂ ಬರೆದು ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದೆವು.” (ಪುಟ. ೧೦೦, ‘ಟುವರ್ಡ್ಸ್ ಫ್ರೀಡಂ.’)
“ಈ ರೀತಿಯ ಬೇಜವಾಬ್ದಾರಿ ಷಡ್ಯಂತ್ರದ ವಿಚಾರಣೆಯನ್ನು ಕಂಡಾಗ ನನ್ನಲ್ಲಿದ್ದ ವಕೀಲ ಜಾಗೃತಗೊಳ್ಳುತ್ತಾನೆ. ಇಂತಹ ಸುಳ್ಳು ಮೊಕದ್ದಮೆಯನ್ನು ನಡೆಸಲು ಕಾನೂನಿನ ಕೆಲವು ಅಗತ್ಯ ಕ್ರಮಗಳನ್ನಾದರೂ ಅನುಸರಿಸಬೇಕೆಂಬ ಕನಿಷ್ಠ ಪ್ರಜ್ಞೆಯೂ ಇರಲಿಲ್ಲ. ರಕ್ಷಣಾ ವ್ಯವಸ್ಥೆಯನ್ನು ಮಾಡಿಕೊಳ್ಳಲು ನಮಗೆ ಮೊಕದ್ದಮೆಯ ಬಗ್ಗೆ ಮುನ್ಸೂಚನೆಯನ್ನು ನೀಡಬೇಕಿತ್ತೆಂದು ನಾನು ನ್ಯಾಯಾಧೀಶನಿಗೆ ತಿಳಿಸಿದೆ. ನಮ್ಮ ಪರವಾಗಿ ಹೊರಗಿನ ವಕೀಲರನ್ನು ನೇಮಿಸಿಕೊಳ್ಳುವೆವೆಂದು ತಿಳಿಸಿದಾಗ ನ್ಯಾಯಾಧೀಶ ನಭಾದ ಕಾನೂನಿನ ಪ್ರಕಾರ ಹೊರಗಿನ ವಕೀಲರನ್ನು ನೇಮಿಸಿಕೊಳ್ಳುವಂತಿಲ್ಲ ಎಂಬ ವಿಚಿತ್ರ ಕಾನೂನನ್ನು ವಿಶದಪಡಿಸುತ್ತಾನೆ. ಇದರಿಂದ ಬೇಸತ್ತ ನಾವು ನ್ಯಾಯಾಧೀಶನಿಗೆ ‘ಬೇಕಾದ್ದು ಮಾಡಿಕೊಳ್ಳಿ, ನಾವು ಮೊಕದ್ದಮೆಯ ಕಲಾಪಗಳಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ತಿಳಿಸಿದೆವು. ಆದರೆ ವಿಚಾರಣೆಯ ಸಮಯದಲ್ಲಿ ನಮ್ಮ ವಿರುದ್ಧ ಸಾಕ್ಷಿಗಳು ಸುಳ್ಳಿನ ಸರಮಾಲೆಯನ್ನು ಪೋಣಿಸುವುದನ್ನು ಕಂಡ ನಮಗೆ ಅವರ ಸುಳ್ಳಿನ ಮುಖವಾಡವನ್ನು ಕಿತ್ತೊಗೆಯದಿರಲು ಸಾಧ್ಯವಾಗಲಿಲ್ಲ. ಆಗಾಗ್ಗೆ ನಾವು ಸಾಕ್ಷಿಗಳ ಬಗ್ಗೆ ನಮ್ಮ ವಿಚಾರಗಳನ್ನು ಸೂಕ್ಷ್ಮವಾಗಿ ನ್ಯಾಯಾಲಯದ ಮುಂದೆ ಇಡಲಾರಂಭಿಸಿದೆವು. ಷಡ್ಯಂತ್ರದ ವಿಚಾರಣೆಯನ್ನು ನಡೆಸುತ್ತಿದ್ದ ಈ ನ್ಯಾಯಾಧೀಶ ಮೊದಲ ನ್ಯಾಯಾಧೀಶನಿಗಿಂತ ಹೆಚ್ಚು ಬುದ್ಧಿವಂತನAತೆ ಕಂಡುಬರುತ್ತಾನೆ.” (ಪುಟ ೯೯, ‘ಟುವರ್ಡ್ಸ್ ಫ್ರೀಡಂ.’)
“ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದ್ದಷ್ಟೂ ಸಮಯ ನಮಗೆ ಕೊಳಕು ಸೆರೆಮನೆಯಿಂದ ಬಿಡುಗಡೆ ದೊರಕಿದಂತಾಗುತ್ತಿತ್ತು. ಹದಿನೈದು ದಿನಗಳ ಬಳಿಕ ಎರಡೂ ಮೊಕದ್ದಮೆಗಳ ವಿಚಾರಣೆ ಕೊನೆಗೊಳ್ಳುತ್ತದೆ. ಕೊನೆಯ ದಿನ ಸರಕಾರೀ ವಕೀಲ ತನ್ನ ಹೇಳಿಕೆಯನ್ನು ಮುಗಿಸಿದ ಬಳಿಕ ನಾವು ನಮ್ಮ ಲಿಖಿತ ಹೇಳಿಕೆಗಳನ್ನು ಸಲ್ಲಿಸಿದೆವು. ಮೊದಲ ನ್ಯಾಯಾಧೀಶ ತನ್ನ ಕಾರ್ಯಕಲಾಪವನ್ನು ಪೂರೈಸಿದ ಕೆಲವೇ ನಿಮಿಷಗಳನ್ನು ಉರ್ದುವಿನಲ್ಲಿ ಬರೆದ ತೀರ್ಪಿನ ಭಾರಿ ಕಟ್ಟೊಂದನ್ನು ಹಿಡಿದು ಹಿಂತಿರುಗುತ್ತಾನೆ. ಅಷ್ಟು ಅಲ್ಪ ಮಧ್ಯಂತರದಲ್ಲಿ ಆತ ತನ್ನ ತೀರ್ಪನ್ನು ಬರೆದಿರುವ ಸಾಧ್ಯತೆಯೇ ಇರಲಿಲ್ಲ. ಅದನ್ನು ನಮ್ಮ ಹೇಳಿಕೆಗಳನ್ನು ಸಲ್ಲಿಸುವ ಮೊದಲೇ ಬೇರೊಬ್ಬರಿಂದ ಸಿದ್ಧಪಡಿಸಲಾಗಿತ್ತೆಂದು ತೋರುತ್ತದೆ. ನ್ಯಾಯಾಲಯದಲ್ಲಿ ತೀರ್ಪನ್ನು ಓದದೆ ನಭಾ ಭೂಪ್ರದೇಶವನ್ನು ಅನುಮತಿಯಿಲ್ಲದೆ ಪ್ರವೇಶಿಸಿದ ಅಪರಾಧಕ್ಕಾಗಿ ಆರು ತಿಂಗಳ ಶಿಕ್ಷೆಯನ್ನು ಘೋಷಿಸಲಾಗುತ್ತದೆ. ಷಡ್ಯಂತ್ರದ ಮೊಕದ್ದಮೆಯಲ್ಲಿ ಹದಿನೆಂಟು ತಿಂಗಳ ಅಥವಾ ಎರಡು ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿತ್ತು.” (ಪುಟ ೧೦೦, ‘ಟುವರ್ಡ್ಸ್ ಫ್ರೀಡಂ.’)
ಜವಾಹರಲಾಲ್ ನೆಹರುರವರು ನ್ಯಾಯಾಲಯದಲ್ಲಿ ಸಲ್ಲಿಸಲು ಇಚ್ಛಿಸಿದ ಹೇಳಿಕೆ ಕಾನೂನಿನ ಅಂಶಗಳಿಗಿಂತಲೂ ಹೆಚ್ಚಾಗಿ ನಭಾ ಆಡಳಿತವನ್ನು ಟೀಕಿಸುತ್ತ, ಸಿಖ್ಖರ ಆಂದೋಲನಕ್ಕೆ ಮೆಚ್ಚುಗೆ ಸೂಚಿಸುವ ಭಾವನಾತ್ಮಕ ಹೇಳಿಕೆಗಳಿಂದ ತುಂಬಿತ್ತು. ಅದನ್ನು ಕಂಡ ತಂದೆ ಮೋತಿಲಾಲ್ ನೆಹರುರವರು ತಮ್ಮ ಸಹಾಯಕ ಕಪಿಲ್ದೇವ್ ಮಾಲವೀಯರೊಂದಿಗೆ ಬೇರೊಂದು ತಿದ್ದಿದ ಹೇಳಿಕೆಯನ್ನು ಕಳುಹಿಸಿಕೊಡುತ್ತಾರೆ. ಮೋತಿಲಾಲ್ರ ತಿದ್ದಿದ ಹೇಳಿಕೆ ಒಬ್ಬ ಪ್ರತಿಭಾವಂತ, ಚಾಣಾಕ್ಷ ವಕೀಲನ ಶೀತಲ ಲೇಖನಿಯಿಂದ ಹೊರಬಿದ್ದ ಹೇಳಿಕೆಯಾಗಿತ್ತು. (ಪುಟ ೭೮, ಗೋಪಾಲ್ ಸರ್ವಪಲ್ಲಿ, ಜವಾಹರಲಾಲ್ ನೆಹರು ಸಂಪುಟ ೧.) ಆ ಕ್ಷಣದಲ್ಲಿ ಮಗ ಜವಾಹರರ ಭಾವನಾತ್ಮಕ ತಪ್ಪುಗಳನ್ನು ತಿದ್ದಲು ತಂದೆ ಮೋತಿಲಾಲ್ರಲ್ಲಿದ್ದ ವಕೀಲ ಎದ್ದುನಿಲ್ಲುತ್ತಾನೆ. ಹೆಜ್ಜೆಹೆಜ್ಜೆಗೂ ಒಬ್ಬ ಅನನುಭವಿ ಬ್ಯಾರಿಸ್ಟರ್ ಮಗನ ತಪ್ಪುಗಳನ್ನು ಸುಧಾರಿಸಲು ಅನುಭವಿ ಬ್ಯಾರಿಸ್ಟರ್ ಅಪ್ಪನ ಆಶೀರ್ವಾದ ಕಾಣುತ್ತದೆ.
ಆಡಳಿತಾಧಿಕಾರಿ ವಿಲ್ಸನ್ನ ಇಚ್ಛೆಯಂತೆ ನಡೆದಿದ್ದರೆ ಪ್ರಾಯಶಃ ನೆಹರು ಮತ್ತು ಸಂಗಾತಿಗಳು ತಮ್ಮ ಶಿಕ್ಷೆಯನ್ನು ಪೂರೈಸಿದ ಬಳಿಕವೇ ಸೆರೆಮನೆಯಿಂದ ಹೊರಬರುತ್ತಿದ್ದರು. ಆದರೆ ಅವರ ಬಿಡುಗಡೆಗೆ “ಮೇಲಿನಿಂದ” (ಭಾರತ ಸರಕಾರ) ಆದೇಶ ಬಂದಿರುತ್ತದೆ. ತಮ್ಮ ಬಿಡುಗಡೆಗಾಗಿ ಜವಾಹರಲಾಲ್ (ಅಥವಾ ಮಗನ ಪರವಾಗಿ ಮೋತಿಲಾಲ್ ನೆಹರು) ತಾವು ಪುನಃ ನಭಾ ಸಂಸ್ಥಾನದ ಭೂಪ್ರದೇಶದಲ್ಲಿ ಕಾಲಿಡುವುದಿಲ್ಲ ಎಂಬ ಮುಚ್ಚಳಿಕೆ ಬರೆದುಕೊಟ್ಟಿದ್ದರೆ? ಈ ಪ್ರಶ್ನೆ ಹಲವಾರು ದಶಕಗಳಿಂದ ಇತಿಹಾಸಕಾರರಿಗೆ ಕಾಡುತ್ತಿದೆ. ಹೌದು ಎನ್ನುತ್ತಾನೆ ನಭಾದ ಆಡಳಿಕಾಧಿಕಾರಿ ವಿಲ್ಸನ್ ಜಾನ್ಸ್ಟನ್! ೧೯೨೪ರ ೨೨ರಂದು ಗಾಂಧಿಯವರಿಗೆ ಬರೆದ ಪತ್ರವೊಂದರಲ್ಲಿ ಆತ “ಪಂಡಿತ್ ನೆಹರುರವರು ನಭಾ ಸಂಸ್ಥಾನದ ಭೂಪ್ರದೇಶದಲ್ಲಿ ಮತ್ತೆಂದೂ ಕಾಲಿಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟ ಬಳಿಕವೇ ಅವರನ್ನು ಬಿಡುಗಡೆ ಮಾಡಲಾಗಿದೆ” ಎಂದು ಬರೆಯುತ್ತಾನೆ. ಆದರೆ ಇದನ್ನು ಪಂಡಿತ್ ಜವಾಹರಲಾಲ್ ಅಲ್ಲಗಳೆದು ತಮ್ಮ ಮುಚ್ಚಳಿಕೆ ಪತ್ರವನ್ನು ಬಹಿರಂಗಗೊಳಿಸುವಂತೆ ವಿಲ್ಸನ್ಗೆ ಸವಾಲು ಹಾಕುತ್ತಾರೆ. ಆದರೆ ವಿಲ್ಸನ್ ಈ ಸವಾಲನ್ನು ಸ್ವೀಕರಿಸಲಿಲ್ಲ. (What Sikh/Akali sources tell about Nehru’s release from Nabha jail https://timesofindia.indiatimes.com/blogs/punjab point blank/what sikh akali sources tell about nehrus release from nabha jail.)
ಮೋತಿಲಾಲ್ ಅವರು ವೈಸರಾಯ್ಗೆ ಟೆಲಿಗಾಂ ಕಳುಹಿಸಿದ ಬೆನ್ನಲ್ಲೇ ಭಾರತ ಸರಕಾರ ಮತ್ತು ನಭಾದ ಬ್ರಿಟಿಷ್ ಆಡಳಿತಾಧಿಕಾರಿಗಳ ನಡುವೆ ಸುಮಾರು ಏಳು ಟೆಲಿಗ್ರಾಂಗಳು ಓಡಾಡುತ್ತವೆ. ಇದರಲ್ಲಿ ವಿಲ್ಸನ್ ತೀರ್ಪನ್ನು ಪ್ರಕಟಿಸಿದ ಬಳಿಕ ಆಪಾದಿತರು ಮತ್ತೆಂದೂ ನಭಾದಲ್ಲಿ ಕಾಲಿಡುವುದಿಲ್ಲ ಎಂದು ಕರಾರಿನೊಂದಿಗೆ ಅವರನ್ನು ಬಿಡುಗಡೆ ಮಾಡಬೇಕು. ಒಂದೊಮ್ಮೆ ಅವರು ಈ ಕರಾರನ್ನು ಮುರಿದರೆ ಅವರ ಶಿಕ್ಷೆಯನ್ನು ಮರು ಜಾರಿಗೊಳಿಲಾಗುತ್ತದೆ ಎಂದು ಪ್ರತಿಪಾದಿಸುತ್ತಾನೆ. ಆದರೆ ತೀರ್ಪನ್ನು ಪ್ರಕಟಿಸಿದ ಬಳಿಕ ನಭಾ ಸರಕಾರ ಯಾವುದೇ ಕರಾರುಗಳನ್ನು ಹಾಕದೆ ಶಿಕ್ಷೆಯನ್ನು ಅಮಾನತುಗೊಳಿಸಿ ಆಪಾದಿತರನ್ನು ಬಿಡುಗಡೆ ಮಾಡಬೇಕು. ಅವರನ್ನು ಗಡಿಪಾರು ಮಾಡಿ ಮತ್ತೆ ಸಂಸ್ಥಾನದ ಭೂಪ್ರದೇಶವನ್ನು ಪ್ರವೇಶಿಸಿದರೆ ಅಮಾನತ್ತಿನಲ್ಲಿಡಲಾದ ಶಿಕ್ಷೆಯನ್ನು ಪುನರ್ ಜಾರಿಗೊಳಿಸಲಾಗುತ್ತದೆ ಎಂಬ ಕಾರ್ಯಾಂಗದ ಆದೇಶದೊಂದಿಗೆ ಅವರನ್ನು ಬಿಡುಗಡೆ ಮಾಡಬೇಕು ಎಂಬುದು ಭಾರತ ಸರಕಾರದ ದೃಷ್ಟಿಯಾಗಿತ್ತು. (What Sikh/Akali sources tell about Nehru’s release from Nabha jail.)
ಸೆಪ್ಟೆಂಬರ್ ೨೪ರಂದು ಮೋತಿಲಾಲ್ ಅವರು ಕಳುಹಿಸಿದ ಎರಡನೆಯ ಟೆಲಿಗ್ರಾಂ ವೈಸರಾಯ್ ಕೈ ಸೇರುತ್ತಿದ್ದಂತೆ ಜವಾಹರಲಾಲ್ ಮತ್ತು ಅವರ ಸಂಗಾತಿಗಳನ್ನು ಶಿಕ್ಷೆಗೆ ಒಳಪಡಿಸದೆ ಅವರ ಶಿಕ್ಷೆಯನ್ನು ಅಮಾನತ್ತುಗೊಳಿಸಬೇಕೆಂಬ ಕೇಂದ್ರ ಸರ್ಕಾರದ ನಿಲವು ಆಡಳಿತಾಧಿಕಾರಿ ವಿಲ್ಸನ್ ಜಾನ್ಸ್ಟನ್ನಿಗೆ ಒಪ್ಪಿಗೆಯಾಗುವಂತಿರಲಿಲ್ಲ. ಆತ ತನ್ನ ಅಸಮಾಧಾನವನ್ನು ತನ್ನ ಮೇಲಧಿಕಾರಿ ಪಂಜಾಬ್ ಪ್ರಾಂತದ ಗವರ್ನರ್-ಜನರಲ್ಗೆ ಏಜೆಂಟನಾಗಿ ಕಾರ್ಯನಿರ್ವಹಿಸುತ್ತಿದ್ದ ಲೆಫ್ಟಿನೆಂಟ್ ಕರ್ನಲ್ ಮಿನ್ಚಿನ್ಗೆ ತಿಳಿಸುತ್ತಾನೆ. ಮೋತಿಲಾಲ್ರವರು ತಮ್ಮ ಪತ್ರ ವ್ಯವಹಾರದಲ್ಲಿ ತನ್ನೊಂದಿಗೆ ಶಾಲಿನಲ್ಲಿ ಸುತ್ತಿ ತೋರಿದ ನಿರ್ಲಜ್ಜತನವನ್ನಾತ ಮರೆಯುವಂತಿರಲಿಲ್ಲ. ಅಲ್ಲದೆ ಅಕಾಲಿ ಸಿಖ್ ಆಂದೋಲನಕಾರರಿಗೆ ಶಿಕ್ಷೆಗೆ ಗುರಿಪಡಿಸಿ ಕಾಂಗ್ರೆಸ್ನ ಈ ನಾಯಕರ ಶಿಕ್ಷೆಯನ್ನು ಅಮಾನತುಗೊಳಿಸುವ ತಾರತಮ್ಯದ ಧೋರಣೆ ಆತನಿಗೆ ಸರಿ ತೋರಿಬರಲಿಲ್ಲ. ಆದರೆ ಭಾರತ ಸರಕಾರ ಈ ಸ್ಥಳೀಯ ಆಡಳಿತಾಧಿಕಾರಿಯ ಅಹಂಗೆ ಒತ್ತಾಸೆ ತೋರುವಷ್ಟು ಮೂರ್ಖತನ ಪ್ರದರ್ಶಿಸಲಿಲ್ಲ. ವೈಸರಾಯ್ ಲಾರ್ಡ್ ರೀಡಿಂಗ್ ಜವಾಹರಲಾಲ್ ಸ್ವತಂತ್ರ ಭಾರತದ ಪ್ರಥಮ ಪ್ರಧಾನಮಂತ್ರಿಯಾಗುವರೆಂಬಷ್ಟು ದೂರದರ್ಶಿತ್ವವನ್ನು ಹೊಂದಿರಲಿಲ್ಲವಾದರೂ, ಅವರ ತಂದೆ ಮೋತಿಲಾಲ್ ನೆಹರುರವರು ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸಿ ಕೇಂದ್ರ ಮತ್ತು ಪ್ರಾಂತಗಳ ಶಾಸನಸಭೆಗಳಲ್ಲಿ ವಿರೋಧಪಕ್ಷವಾಗಿ ನಿಲ್ಲಬಲ್ಲ ಸ್ವರಾಜ್ಯ ಪಾರ್ಟಿಯ ಮಹಾನ್ ಕಾರ್ಯದರ್ಶಿ ಎಂಬುದನ್ನು ಕಡೆಗಣಿಸುವಂತಿರಲಿಲ್ಲ. (ಪುಟ ೨೨೨, ಬಿ.ಆರ್. ನಂದ, ದಿ ನೆಹರೂಸ್ ಮೋತಿಲಾಲ್ ಎಂಡ್ ಜವಾಹರಲಾಲ್.)
ಅಷ್ಟೇ ಅಲ್ಲ, ನಿಷ್ಠಾವಂತ ಪ್ರಜೆಗಳಲ್ಲಿ ಸರಕಾರ ಸಿಖ್ಖರಿಗೊಂದು ಕಾನೂನು ಮತ್ತು ಕಾಂಗ್ರೆಸ್ಸಿಗರಿಗೊಂದು ಕಾನೂನನ್ನು ಅನ್ವಯಿಸುತ್ತದೆ ಎಂಬ ಭಾವನೆ ತಲೆದೋರಲಿದೆ ಎಂಬ ಶಂಕೆ ವಿಲ್ಸನ್ ಜಾನ್ಸ್ಟನ್ನನ್ನು ಕಾಡಿದರೆ ಭಾರತ ಸರಕಾರ ಅಂತಹ ತರತಮ ನೀತಿ ತಮಗೆ ಲಾಭದಾಯಕವಾಗಲಿದೆ ಎಂಬ ನಂಬಿಕೆಯನ್ನು ಹೊಂದಿತ್ತು. ಏಕೆಂದರೆ ಅದು ಅಕಾಲಿ ಮತ್ತು ಕಾಂಗ್ರೆಸ್ ನಡುವಣ ನಂಬಿಕೆ ಮತ್ತು ಸಹಯೋಗಕ್ಕೆ ಧಕ್ಕೆ ತರುವುದರಲ್ಲಿ ಸಂದೇಹವಿರಲಿಲ್ಲ. ಜವಾಹರಲಾಲ್ ಮತ್ತಿತರರು ನಭಾದ ಆದೇಶವನ್ನು ಧಿಕ್ಕರಿಸಿ ಪುನಃ ಪ್ರಾಂತವನ್ನು ಪ್ರವೇಶಿಸುವ ಪ್ರಯತ್ನ ಮಾಡಿದರೆ ಅವರ ಅಮಾನತ್ತುಗೊಂಡ ಶಿಕ್ಷೆ ಮತ್ತೆ ಜೀವ ತಳೆಯಲಿದೆ. (ಪುಟ ೭೮ ೯, ಗೋಪಾಲ್ ಸರ್ವಪಲ್ಲಿ, ಜವಾಹರಲಾಲ್ ನೆಹರು ಸಂಪುಟ ೧.)
ಈ ಎಲ್ಲ ಹಗ್ಗಜಗ್ಗಾಟಗಳ ಬಳಿಕ ನೆಹರು ಮತ್ತು ಅವರ ಸಂಗಾತಿಗಳಾದ ಗಿದ್ವಾನಿ ಮತ್ತು ಸಂತಾನಂ ಮೊಕದ್ದಮೆ ನಾಟಕೀಯ ರೂಪದಲ್ಲಿ ಕೊನೆಗೊಳ್ಳುತ್ತದೆ. ಅಂದು ಸಂಜೆ ಸೆರೆಮನೆಯ ಸೂಪರಿಂಟೆಂಡೆಂಟ್ ಅವರನ್ನು ಕರೆಸಿ ಭಾರತೀಯ ಅಪರಾಧ ಸಂಹಿತೆಯನ್ವಯ “ಶಿಕ್ಷೆಯನ್ನು ಅಮಾನತುಗೊಳಿಸುವ” ಆಡಳಿತಾಧಿಕಾರಿಯ ಆದೇಶವನ್ನು ತೋರಿಸುತ್ತಾನೆ. ಅದರಲ್ಲಿ ಯಾವುದೇ ಷರತ್ತುಗಳಿರಲಿಲ್ಲ. ಅದಲ್ಲದೆ ತಕ್ಷಣದಲ್ಲಿ ನಭಾದ ಭೂಪ್ರದೇಶವನ್ನು ತೊರೆದು ವಿಶೇಷ ಅನುಮತಿ ಇಲ್ಲದೆ ಪುನರ್ಪ್ರವೇಶಿಸದಂತೆ ತಡೆಯುವ ಪ್ರತ್ಯೇಕ “ಕಾರ್ಯಾಂಗ ಆದೇಶ”ವೊಂದನ್ನು ತೋರಿಸುತ್ತಾನೆ. ಎರಡು ಆದೇಶಗಳ ಪ್ರತಿಯನ್ನು ನೀಡುವಂತೆ ಜವಾಹರಲಾಲ್ ಮನವಿ ಮಾಡಿದಾಗ ಅದನ್ನು ತಿರಸ್ಕರಿಸಲಾಗುತ್ತದೆ. ಅವರನ್ನು ಅಂದು ರಾತ್ರಿಯೇ ನಭಾದ ರೈಲ್ವೇ ಸ್ಟೇಷನ್ನಲ್ಲಿ ಬಿಡಲಾಯಿತು. ರಾತ್ರಿ ಪ್ರಯಾಣಿಸಿ ಅಂಬಾಲ ತಲಪಿದ ಅವರು ಅಲ್ಲಿಂದ ಅಲಹಾಬಾದ್ ಸೇರುತ್ತಾರೆ. ಹದಿನೈದು ದಿನಗಳ ನಭಾ ಸೆರೆಮನೆವಾಸದಿಂದ ಬಳಲಿದ ನೆಹರುರವರಿಗೆ ಟೈಫಾಯಿಡ್ ಜ್ವರ ಕಾಡುತ್ತದೆ. (ಪುಟ. ೧೦೨, ಜವಾಹರಲಾಲ್ ನೆಹರು, ಆತ್ಮಕಥೆ – ಟುವರ್ಡ್ಸ್ ಫ್ರೀಡಂ; ಪುಟ.೨೨೨, ಬಿ.ಆರ್. ನಂದ, ದಿ ನೆಹರೂಸ್ ಮೋತಿಲಾಲ್ ಎಂಡ್ ಜವಾಹರಲಾಲ್.)
ಹಣ್ಣು ತಿಂದವ ನುಣಿಚಿಕೊಂಡ ಸಿಪ್ಪೆ ತಿಂದವ ಸಿಕ್ಕಿಬಿದ್ದ!
ಅಲಹಾಬಾದ್ ತಲಪಿದ ಜವಾಹರಲಾಲ್ ಆ ಎರಡೂ ಆದೇಶಗಳು ಹಾಗೂ ತಮ್ಮ ಮೊಕದ್ದಮೆಯ ತೀರ್ಪುಗಳ ಪ್ರತಿಗಳನ್ನು ಒದಗಿಸುವಂತೆ ನಭಾದ ಆಡಳಿತಾಧಿಕಾರಿಗೆ ಪತ್ರ ಬರೆಯುತ್ತಾರೆ. ಅದನ್ನಾತ ತಿರಸ್ಕರಿಸುತ್ತಾನೆ. “ಯಾವ ಅಪರಾಧಕ್ಕಾಗಿ ಎರಡೂವರೆ ವರ್ಷಗಳ ಶಿಕ್ಷೆಗೆ ಗುರಿಪಡಿಸಲಾಯಿತೆಂಬುದು ಕೊನೆಗೂ ನನಗೆ ಅರಿವಾಗಲಿಲ್ಲ. ನನಗನಿಸಿದಂತೆ ಪ್ರಾಯಶಃ ಈ ಶಿಕ್ಷೆ ಈಗಲೂ ನಮ್ಮ ತಲೆಯ ಮೇಲೆ ತೂಗುಗತ್ತಿಯಂತೆ ನೇತಾಡುತ್ತಿದೆ. ನಭಾದ ಅಧಿಕಾರಿಗಳು ಅಥವಾ ಭಾರತ ಸರಕಾರ ಇಚ್ಛೆಪಟ್ಟ ದಿನ ಅವುಗಳನ್ನು ಜಾರಿಗೊಳಿಸಬಹುದಾಗಿದೆ” ಎಂದು ಜವಾಹರಲಾಲ್ ತಮ್ಮ ಆತ್ಮಕಥೆಯಲ್ಲಿ ಅಲವತ್ತುಕೊಳ್ಳುತ್ತಾರೆ. “ಹೀಗೆ ಅಮಾನತುಗೊಂಡ ಶಿಕ್ಷೆಯಿಂದ ನಾವು ಮೂವರೂ ಹೊರಬಂದೆವು. ಆದರೆ ನಮ್ಮೊಂದಿಗೆ ಷಡ್ಯಂತ್ರದ ಆಪಾದನೆಯಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಆ ನಾಲ್ಕನೆಯ ಆಪಾದಿತನ ಗತಿ ಏನಾಯಿತು? ಪ್ರಾಯಶಃ ಆತನನ್ನು ಬಿಡುಗಡೆ ಮಾಡಲಿಲ್ಲ. ಇತರ ಅನೇಕರಂತೆ ಆತನ ಬೆನ್ನ ಹಿಂದೆ ಪ್ರಬಲ ಸ್ನೇಹಿತರಾಗಲಿ ಅಥವಾ ಸಾರ್ವಜನಿಕ ಹಿತಾಸಕ್ತಿಯಾಗಲಿ ಇರಲಿಲ್ಲ. ಆತ ಸಂಸ್ಥಾನದ ಸೆರೆಮನೆಯಲ್ಲಿ ಕೊಳೆಯುತ್ತ ಬಿದ್ದಿರುತ್ತಾನೆ. ಆದರೆ ನಾವು ಆತನನ್ನು ಮರೆಯಲಿಲ್ಲ. ಗುರುದ್ವಾರ ಸಮಿತಿಯ ಗಮನಕ್ಕೆ ಆತನ ಮೊಕದ್ದಮೆಯನ್ನು ತರುವ ಮೂಲಕ ನಮ್ಮ ಕೈಲಾದಷ್ಟನ್ನು ಮಾಡಿದೆವು. (ಪುಟ ೧೦೨, ಜವಾಹರಲಾಲ್ ನೆಹರು, ಆತ್ಮಕಥೆ – ಟುವರ್ಡ್ಸ್ ಫ್ರೀಡಂ.)
ಜವಾಹರಲಾಲ್ ನೆಹರು ಮತ್ತು ಸಂಗಡಿಗರೊಂದಿಗೆ ಷಡ್ಯಂತ್ರದ ಆಪಾದನೆಯಲ್ಲಿ ಸೆರೆಮನೆ ಸೇರಿದ ಈ ಅಪರಿಚಿತ ಸಿಖ್ ಯಾರು? ಈ ಹತಭಾಗ್ಯ ಸಿಖ್ ಬೇರಾರೂ ಅಲ್ಲ. ೧೯೧೪ ೧೫ರ ಅವಧಿಯಲ್ಲಿ ಸುಮಾರು ೩೭೨ ಸಿಖ್, ಹಿಂದು ಮತ್ತು ಮುಸಲ್ಮಾನರನ್ನು “ಕೋಮಗಾತ ಮರು” ಎಂಬ ಹಡಗಿನಲ್ಲಿ ತುಂಬಿಕೊಂಡು ಕೆನಡಾಗೆ ವಲಸೆ ಹೋಗಲು ಪ್ರಯತ್ನಿಸಿದ ಗುರುದೀತ್ಸಿಂಗ್ ಆಗಿದ್ದರು. ಕೆನಡಾದಲ್ಲಿ ಕಾಲಿಡಲು ಅನುಮತಿ ದೊರಕದೆ ಮಧ್ಯ ಸಮುದ್ರದಲ್ಲಿ ತಮ್ಮ ಹೋರಾಟವನ್ನು ಮುಂದುವರಿಸಿ ಕೊನೆಗೆ ಕೋಲ್ಕತಾಗೆ ಹಿಂತಿರುಗಿದಾಗ ಬ್ರಿಟಿಷರ ಗೋಲಿಬಾರಿಗೆ ಬಲಿಯಾದ ಪ್ರಯಾಣಿಕರ ನಡುವೆ ತಲೆಮರೆಸಿಕೊಂಡು ಭಾರತದಲ್ಲೆಲ್ಲ ಛದ್ಮವೇಷದಲ್ಲಿ ಸಂಚರಿಸಿದ ಗುರುದೀತ್ಸಿಂಗ್ ಕೊನೆಗೂ ಗಾಂಧಿಯವರ ಸಲಹೆಯ ಮೇರೆಗೆ ಬ್ರಿಟಿಷ್ ಸರಕಾರಕ್ಕೆ ಶರಣಾಗುತ್ತಾರೆ. ಇವರಿಗೆ ಜವಾಹರಲಾಲ್ ಅವರೊಂದಿಗೆ ಯಾವ ಸಂಬಂಧವಿಲ್ಲದಿದ್ದರೂ ಬ್ರಿಟಿಷ್ ಸರಕಾರ ನಭಾದ ಪ್ರಕರಣದಲ್ಲಿ ಇವರನ್ನು ಸಿಲುಕಿಸುವ ಮೂಲಕ ಎರಡು ವರ್ಷಗಳ ಶಿಕ್ಷೆಗೆ ಗುರಿಮಾಡುತ್ತದೆ. ಹಣ್ಣು ತಿಂದವನು ನುಣುಚಿಕೊಂಡ ಸಿಪ್ಪೆ ತಿಂದವ ಸಿಕ್ಕಿಬಿದ್ದ ಎಂಬಂತಿತ್ತು ಗುರುದೀತ್ಸಿಂಗ್ರ ಪರಿಸ್ಥಿತಿ. ನಿಜವಾದ “ಅಪರಾಧಿ” ತಮ್ಮ ಪ್ರಭಾವವನ್ನು ಬಳಸಿಕೊಂಡು ಶಿಕ್ಷೆಯನ್ನು ಅಮಾನತುಗೊಳಿಸಿ ಸೆರೆಮನೆಯಿಂದ ಹೊರಬಿದ್ದರೆ ಈ ಅಮಾಯಕ ಮಾತ್ರ ತಾನು ಮಾಡದ ತಪ್ಪಿಗೆ ಸಂಪೂರ್ಣ ಶಿಕ್ಷೆಯನ್ನು ಅನುಭವಿಸಬೇಕಾಯಿತು.
ನೆಹರುರವರ ‘ನಭಾ ಘಟನೆ’ಯ ಉತ್ತರಾರ್ಧವೇನು? ಅದನ್ನು ಜವಾಹರಲಾಲ್ ತಮ್ಮ ಆತ್ಮಕಥೆಯಲ್ಲಿ ವಿಶದೀಕರಿಸಿದ್ದಾರೆ. “ಪ್ರಾಯಶಃ ಇದಾದ ಆರು ತಿಂಗಳುಗಳ ಬಳಿಕ ಅಮೃತಸರದಲ್ಲಿದ್ದ ಗಿದ್ವಾನಿ ಸಿಖ್ಖ್ರ ಗುರುದ್ವಾರ ಸಮಿತಿಯೊಂದಿಗೆ ಕಾಂಗ್ರೆಸ್ ಪ್ರತಿನಿಧಿಯಾಗಿ ವ್ಯವಹರಿಸುತ್ತಿದ್ದರು. ಗುರುದ್ವಾರ ಸಮಿತಿ ೫೦೦ ಮಂದಿ ಸಿಖ್ಖರ ಮೆರವಣಿಗೆಯನ್ನು ಜೈತೋಗೆ ಕಳುಹಿಸಲು ನಿರ್ಧರಿಸಿದಾಗ ಗಿದ್ವಾನಿ ಅದರೊಂದಿಗೆ ಒಬ್ಬ ವೀಕ್ಷಕನಾಗಿ ಸೇರಿಕೊಳ್ಳುತ್ತಾರೆ. ಆದರೆ ಅವರಿಗೆ ನಭಾದ ಭೂಪ್ರದೇಶವನ್ನು ಪ್ರವೇಶಿಸುವ ಉದ್ದೇಶವಿರಲಿಲ್ಲ. ನಭಾದ ಗಡಿಯಲ್ಲಿ ಆ ಮೆರವಣಿಗೆಯ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದಾಗ ಅನೇಕರು ಮರಣ ಹೊಂದಿದರೆ ಗಾಯಗೊಂಡವರ ಸಂಖ್ಯೆಯೂ ಅತ್ಯಧಿಕವಾಗಿತ್ತು. ಗಾಯಗೊಂಡವರ ಸಹಾಯಕ್ಕಾಗಿ ಧಾವಿಸಿದ ಗಿದ್ವಾನಿಯನ್ನು ಪೊಲೀಸರು ಬಂಧಿಸುತ್ತಾರೆ. ಆದರೆ ಆತನ ವಿರುದ್ಧ ನ್ಯಾಯಾಲಯದಲ್ಲಿ ಯಾವುದೇ ಕ್ರಮವನ್ನು ಜರುಗಿಸಲಿಲ್ಲ. ಸುಮಾರು ಒಂದು ವರ್ಷಕ್ಕೂ ಮೀರಿದ ಅವಧಿಯವರೆಗೆ ಅವರನ್ನು ಸೆರೆಮನೆಯಲ್ಲಿಡಲಾಯಿತು. ಈ ಸಮಯದಲ್ಲಿ ಅವರ ಆರೋಗ್ಯ ಮಿತಿಮೀರಿ ಹದಗೆಟ್ಟಾಗ ಅವರನ್ನು ಬಿಡುಗಡೆ ಮಾಡಲಾಯಿತು. ನನಗೆ ಗಿದ್ವಾನಿಯವರ ವಿರುದ್ಧ ಸರಕಾರದ ಇಂತಹ ನಡಾವಳಿ ಕಾರ್ಯಾಂಗದ ಪಾಶವೀ ಅಧಿಕಾರದ ದುರುಪಯೋಗ ಎನಿಸಿತು. ನಮ್ಮ ಬಂಧನದ ಸಮಯದಲ್ಲಿ ನಭಾದಲ್ಲಿ ಆಡಳಿತಾಧಿಕಾರಿಯಾಗಿದ್ದಾತನೇ ಈಗಲೂ ಅಧಿಕಾರಿಯಾಗಿ ಮುಂದುವರಿಯುತ್ತಿದ್ದಾನೆ. ನಾನು ಗಿದ್ವಾನಿಯೊಂದಿಗೆ ಸರಕಾರದ ನಡಾವಳಿಯನ್ನು ಪ್ರಶ್ನಿಸಿ ಆತನಿಗೊಂದು ಪತ್ರವನ್ನು ಬರೆದೆ. ಆತ ಅದಕ್ಕೆ ಅನುಮತಿಯಿಲ್ಲದೆ ನಭಾದ ಭೂಪ್ರದೇಶವನ್ನು ಗಿದ್ವಾನಿ ಪ್ರವೇಶಿಸಿರುವ ಅಪರಾಧದ ಮೇಲೆ ಬಂಧಿಸಲಾಗಿದೆ ಎಂದು ಉತ್ತರಿಸುತ್ತಾನೆ. ನಾನು ಈ ಆದೇಶವನ್ನು ಪ್ರಶ್ನಿಸಿ ಅದನ್ನು ಬಹಿರಂಗಪಡಿಸುವಂತೆ ಆಹ್ವಾನಿಸಿದೆ. ಅದನ್ನಾತ ತಿರಸ್ಕರಿಸುತ್ತಾನೆ. ಇದರಿಂದ ಸಿಟ್ಟಿಗೆದ್ದ ನಾನೂ ನಭಾವನ್ನು ಪುನಃ ಪ್ರವೇಶಿಸಿ ಗಿದ್ವಾನಿಯ ಮೇಲೆ ಕ್ರಮಕೈಗೊಂಡಂತೆ ನನ್ನ ಮೇಲೂ ಕ್ರಮ ಜರಗಿಸುವಂತೆ ಮಾಡಬೇಕೆಂಬ ಭಾವನೆ ನನ್ನ ಮನದಲ್ಲಿ ಮೂಡಿತು. ಸಹಜವಾಗಿ ನನ್ನ ಒಬ್ಬ ಸಹೋದ್ಯೋಗಿಯ ಬಗ್ಗೆ ಇಷ್ಟಾದರೂ ನಿಷ್ಠೆಯನ್ನು ತೋರಬೇಕು ಎನಿಸಿತು. ಆದರೆ ಇದಕ್ಕೆ ತದ್ವಿರುದ್ಧವಾಗಿ ಯೋಚಿಸುವ ನನ್ನ ಅನೇಕ ಸ್ನೇಹಿತರು ನಭಾವನ್ನು ಪ್ರವೇಶಿಸದಂತೆ ನನಗೆ ಸಲಹೆ ನೀಡಿದರು. ಅವರ ಈ ಸಲಹೆ ನನಗೆ ವರದಾನವೇ ಆಯಿತು. ಅದರ ಬೆನ್ನ ಹಿಂದೆ ಅಡಗಿ ಕುಳಿತ ನಾನು ನಭಾದ ಸೆರೆಮನೆಯನ್ನು ಮತ್ತೆ ಪ್ರವೇಶಿಸಲು ಹಿಂಜರಿದು ನನ್ನ ತೀರ್ಮಾನವನ್ನು ಹಿಂತೆಗೆದುಕೊಳ್ಳುತ್ತೇನೆ. ಒಬ್ಬ ಸಹೋದ್ಯೋಗಿಯನ್ನು ನಡುನೀರಲ್ಲಿ ಕೈಬಿಟ್ಟ ನನ್ನ ಆ ದೌರ್ಬಲ್ಯ ನನ್ನನ್ನು ಸದಾ ಕಾಡುತ್ತ ನಾಚಿಗೆಗೀಡು ಮಾಡುತ್ತಿದೆ. ಹೀಗೆ ಪೌರುಷಕ್ಕಿಂತಲೂ ವಿವೇಚನೆಯೇ ಮೇಲು ಎಂಬ ನಾಣ್ಣುಡಿಯಂತೆ ನಾನು ವಿವೇಚನೆಗೆ ಮೊರೆಹೋದೆ.” (ಪುಟ ೧೦೨, ‘ಟುವರ್ಡ್ಸ್ ಫ್ರೀಡಂ’.)
ಎರಡೆರಡು ಜೀವಾವಧಿ ಶಿಕ್ಷೆಗೆ ಗುರಿಯಾಗಿ, ದಿನವಿಡೀ ಎಣ್ಣೆಯ ಗಾಣಕ್ಕೆ ಹೆಗಲು ಕೊಟ್ಟು, ತಿಂಗಳುಗಟ್ಟಳೆ ಗಾಳಿ ಬೆಳಕು ಸುಳಿಯದ ಕಗ್ಗತ್ತಲ ಕೋಣೆಗಳಲ್ಲಿ ಏಕಾಂತವಾಸಕ್ಕೆ ಬಲಿಯಾಗಿ, ಹಾವು ಚೇಳುಗಳಿಂದ ಕೂಡಿದ ಸೆರೆಮನೆಯಲ್ಲಿ ಕಾಲ ಕಳೆಯುತ್ತ ಚಿತ್ರಹಿಂಸೆಯನ್ನನುಭವಿಸಿ ತತ್ತರಿಸಿದ ಅಂಡಮಾನಿನ ಕ್ರಾಂತಿಕಾರಿಗಳನ್ನು ಬ್ರಿಟಿಷ್ ಸರಕಾರದೆದುರು ಕಾಲೂರಿ ಕ್ಷಮಾದಾನಕ್ಕಾಗಿ ಮೊರೆಯಿಟ್ಟ ಹೇಡಿಗಳೆಂದು ಹೀಗಳೆಯುವ ರಾಜಕೀಯ ಪಕ್ಷದ ಧುರೀಣನೊಬ್ಬ ಅದೇ ಸಮಯದಲ್ಲಿ ಅಂಡಮಾನಿನ ‘ನರಕಸದೃಶ’ದ ಲವಲೇಶವೂ ಅಲ್ಲದ ರಾಜಸಂಸ್ಥಾನದ ಸೆರೆಮನೆಯಲ್ಲಿ ತತ್ತರಿಸಿದ ಕತೆಗೂ ರಮ್ಯತೆಯ ಲೇಪನ ಕೊಟ್ಟು ತನ್ನ ಸಾಹಸವನ್ನು ಬಣ್ಣಿಸುತ್ತಾರೆ. ಜವಾಹರರಾಗಲಿ ಅಥವಾ ಅವರ ಪ್ರಭಾವಶಾಲಿ ತಂದೆಯವರಾಗಲಿ ಬ್ರಿಟಿಷ್ ಸರಕಾರಕ್ಕೆ ಅಲಿಖಿತ ಮುಚ್ಚಳಿಕೆಯನ್ನು ನೀಡಿದ್ದರೇ ಎಂಬ ಪ್ರಶ್ನೆ ಸದಾ ಇತಿಹಾಸಕಾರರನ್ನು ಕಾಡುತ್ತಿದೆ. ಹೊರನೋಟಕ್ಕೆ ಅಂತಹ ಮುಚ್ಚಳಿಕೆ ಕೈ ಹತ್ತದಿದ್ದರೂ ಅವರ ಈ ನಡಾವಳಿ ಮಾತ್ರ ಅವರ ತಥಾಕಥಿತ “ವಿವೇಚನೆ”ಗೆ ಕೈಗನ್ನಡಿಯಾಗಿ ನಿಲ್ಲುತ್ತದೆ. ಹದಿನಾಲ್ಕು ದಿನಗಳಲ್ಲಿ ಮೈಗೂಡಿಸಿಕೊಂಡ ಇಂತಹ “ವಿವೇಚನೆ” ಅಂಡಮಾನಿನ ಸುದೀರ್ಘ ಕಾರಾಗೃಹದಲ್ಲಿ ಇನ್ನೆಷ್ಟು ಶೀಘ್ರವಾಗಿ, ಆಳವಾಗಿ ಮೈದೋರಬಲ್ಲದ್ದಾಗಿರಬಹುದು?