ಎಸ್.ಕೆ.ಆರ್. ಅವರ ವಿವೇಚನೆಯಲ್ಲಿ ಪಾಂಡಿತ್ಯವಿದೆ. ಆದರೆ ಈ ಪಾಂಡಿತ್ಯ ವಿವರಗಳ ಪ್ರದರ್ಶನದ ಆಡಂಬರಕ್ಕೆ ಎಡೆಗೊಡದೆ ಪ್ರತಿಯೊಂದು ಹಂತದಲ್ಲಿಯೂ ಸಾರ್ಥಕತೆಯ (‘ಸ+ಅರ್’) ಕಡೆಗೆ ಚಲಿಸುತ್ತದೆ. ಹಾಗೆ ನೋಡಿದರೆ, ಆಲಂಕಾರಿಕ ಪಾಂಡಿತ್ಯದ ನಿರಾಕರಣೆ ಒಂದು ಮೌಲ್ಯವೆಂಬಂತೆ ಅವರಲ್ಲಿ ಸ್ಥಾಪಿತವಾಗುತ್ತದೆ. ಇದನ್ನು ಹರಿದಾಸರ ಧೋರಣೆಯನ್ನು ಗ್ರಹಿಸುವಲ್ಲಿ ಒಂದು ಪ್ರಧಾನವಾದ ಕೀಲಿಕೈಯಾಗಿ ಅವರು ಬಳಸಿಕೊಳ್ಳುತ್ತಾರೆ.
ದಾಸಸಾಹಿತ್ಯ ಅನುಸಂಧಾನಕ್ಕೆ ಎಸ್.ಕೆ. ರಾಮಚಂದ್ರರಾಯರ ಕೊಡುಗೆ ಏನೆಂಬುದನ್ನು ಪರಿಶೀಲಿಸುವುದಕ್ಕೆ ಮೊದಲು ನಮ್ಮಲ್ಲಿ ದಾಸಸಾಹಿತ್ಯ ಅನುಸಂಧಾನವನ್ನು ಅನುಕೂಲಕರವನ್ನಾಗಿ ಮಾಡಿಕೊಂಡಿರುವ ದಾರಿಗಳಿವೆಯೆಂಬುದನ್ನು ಹೇಳಬೇಕು. ಇವರಲ್ಲಿ ಕೆಲವರು ದಾಸಸಾಹಿತ್ಯವನ್ನು ‘ಒಳಗಿ’ನಿಂದ ನೋಡುವವರು; ಇನ್ನು ಕೆಲವರು ‘ಹೊರಗಿ’ನಿಂದ ನೋಡುವವರು. ಇವೆರಡೂ ಅನುಕೂಲದ ದಾರಿಗಳು. ಏಕೆಂದರೆ ಇವರಿಬ್ಬರಿಗೂ ದಾಸಸಾಹಿತ್ಯ ಒಂದು ರೀತಿಯ ಏಕಘನಾಕೃತಿಯ ರಚನೆ. ಅದರ ಅಭಿವ್ಯಕ್ತಿಯ ಸೂಕ್ಷ್ಮಗಳನ್ನು ಗಣನೆಗೆ ತಂದುಕೊಳ್ಳದೆ ಅದನ್ನೊಂದು ಸರಳ ಸಿದ್ಧಾಂತದ ರೂಪಕ್ಕೆ ತಂದು ಸಂಪ್ರದಾಯವೊಂದಕ್ಕೆ ಜೋಡಿಸುವುದರಲ್ಲಿ ಇವರಿಗೆ ಸಮಾಧಾನ. ಹೀಗಾಗಿ ಇವರಲ್ಲಿ ಒಳಗಿನವರು ಯಾವ ಯಾವ ಕಾರಣಗಳಿಗಾಗಿ ದಾಸಸಾಹಿತ್ಯವನ್ನು ಸ್ವೀಕರಿಸಿ ಆರಾಧಿಸುತ್ತಾರೆಯೋ, ಹೆಚ್ಚುಕಡಮೆ ಅದದೇ ಕಾರಣಗಳಿಗಾಗಿಯೇ ಹೊರಗಿನವರು ಅದನ್ನು ದೂರವಿಡುವುದೂ ಉಂಟು. ಈ ದೃಷ್ಟಿಯಿಂದ ಇಲ್ಲಿ ಸ್ವೀಕರಣೆ-ನಿರಾಕರಣೆಗಳೆರಡೂ ಒಂದೇ ಕ್ರಿಯೆಯ ಎರಡು ರೂಪಗಳಂತೆ ಕಂಡುಬಂದರೆ ಆಶ್ಚರ್ಯವಿಲ್ಲ. ಈ ಬಗೆಯ ಹಿನ್ನೆಲೆ ಇರುವುದರಿಂದಲೇ ಎಸ್.ಕೆ.ಆರ್. ಅವರ ದಾಸಸಾಹಿತ್ಯ ವಿವೇಚನೆ ಸಾಹಿತ್ಯಕವಾಗಿ ಮಾತ್ರವಲ್ಲದೆ ಸಾಂಸ್ಕೃತಿಕವಾಗಿ ಮತ್ತು ಸೈದ್ಧಾಂತಿಕವಾಗಿ ಕೂಡ ಮಹತ್ತ್ವವನ್ನು ಪಡೆದುಕೊಳ್ಳುವುದು.
ದಾಸಸಾಹಿತ್ಯ ವಿವೇಚನೆಯ ಸಂದರ್ಭದಲ್ಲಿ ಎಸ್.ಕೆ.ಆರ್. ಒಳಗಿನವರು; ಶಾಸ್ತ್ರೀಯವಾದ ಅಧ್ಯಯನವನ್ನು ಆಧಾರವಾಗಿಟ್ಟುಕೊಂಡು ಸೈದ್ಧಾಂತಿಕ ಪ್ರಭೇದದ ಸೂಕ್ಷö್ಮಗಳನ್ನು ಗುರುತಿಸಿದವರು. ಇದರೊಂದಿಗೇ ಅವರು ವ್ಯವಸ್ಥೆಯ ಭಾಗವಾಗಲು ನಿರಾಕರಿಸಿದ್ದರಿಂದ ಹೊರಗಿನವರೂ ಹೌದು. ಆದ್ದರಿಂದಲೇ ಅವರು ವ್ಯವಸ್ಥೆಯ ಮನ್ನಣೆ ಪಡೆದ ವಕ್ತಾರರಾಗಲು ಸಾಧ್ಯವಿಲ್ಲ. ಒಳಗಿದ್ದುಕೊಂಡೂ ಹೊರಗೆ ಬರಬಲ್ಲ ‘ಪ್ರಾಮಾಣಿಕತೆ’ (ಪಾರಿಭಾಷಿಕ ಅರ್ಥದಲ್ಲಿ) ಅವರ ವಿವೇಚನೆಯ ಪ್ರಧಾನ ಲಕ್ಷಣವಾಗಿ ಪರಿಣಮಿಸಿದೆ.
ಹಾಗೆ ನೋಡಿದರೆ ಎಸ್.ಕೆ.ಆರ್. ದಾಸಸಾಹಿತ್ಯದ ಸ್ವರೂಪನಿಷ್ಕರ್ಷಗೆ ಹೊರಡುವುದೇ ಅದನ್ನು ಪಂಡಿತಮಾನ್ಯ ವ್ಯವಸ್ಥೆಯೊಂದಿಗೆ ವೈಸಾದೃಶ್ಯಗೊಳಿಸುವುದರ ಮೂಲಕ. ದಾಸಕೂಟ ಮತ್ತು ವ್ಯಾಸಕೂಟಗಳ ನಡುವಿನ ವೈಸಾದೃಶ್ಯವನ್ನು ಒಂದು ಸಿದ್ಧಾಂತವಾಗಿ ಎಸ್.ಕೆ.ಆರ್. ಪ್ರತಿಪಾದಿಸುತ್ತಾರೆ. ಇದನ್ನು ಅವರ ದಾಸಸಾಹಿತ್ಯ ವಿವೇಚನೆಯ ಆಧಾರಶ್ರುತಿಯೆಂದೇ ಹೇಳಬೇಕು. ಇದನ್ನು ಮಾಧ್ವ ಸಮಾಜದ ಒಡಕು ಅಥವಾ ವ್ಯವಸ್ಥೆಯ ಸ್ವರೂಪ ಎಂದೇ ಎಸ್.ಕೆ.ಆರ್. ಗುರುತಿಸುತ್ತಾರೆ. ಅವರ ಪ್ರಕಾರ ವ್ಯಾಸಕೂಟವು ಸಿದ್ಧಾಂತಪರವಾದದ್ದಾದರೆ ದಾಸಕೂಟವು ಸಾಧನಾಪ್ರಧಾನವಾದದ್ದಾಯಿತು. ಮಾಧ್ವ ಸಿದ್ಧಾಂತದ ಪ್ರಮೇಯಗ್ರಂಥಗಳನ್ನು ಅವಲಂಬಿಸಿದ ವ್ಯಾಸಕೂಟದವರು ವ್ಯಾಕರಣ-ತರ್ಕಗಳ ನೆರವಿನಿಂದ ಅಧ್ಯಯನ, ಸಂಸ್ಕೃತಭಾಷೆಯಲ್ಲಿ ಶಾಸ್ತ್ರೀಯ ಶೈಲಿಯಲ್ಲಿ ಪ್ರವಚನ ಇವುಗಳಲ್ಲಿ ತೊಡಗಿಕೊಂಡರು. ಅಪೌರುಷೇಯ ಆಗಮಗಳು (ವೇದ, ಉಪನಿಷತ್ತು ಇತ್ಯಾದಿ) ಇವರಿಗೆ ಹೆಚ್ಚು ಆದರಣೀಯವಾದವು. ಅನುಷ್ಠಾನವೇ ಪ್ರಧಾನವಾಗಿ ಪುರಾಣಗಳನ್ನು ಹೆಚ್ಚು ಅವಲಂಬಿಸಿದ ದಾಸಕೂಟದವರಿಗೆ ಪೌರುಷೇಯ ಆಗಮಗಳು (ಪಾಂಚರಾತ್ರ, ಮಹಾಭಾರತ) ಮುಖ್ಯವಾದವು. ತತ್ತ್ವನಿಶ್ಚಯಕ್ಕೆ ಅನುಕೂಲವಾದ ಪುರಾಣ-ಇತಿಹಾಸ-ಸ್ಮೃತಿಗಳನ್ನು ಅವರು ಹೆಚ್ಚು ಅನುಸರಿಸಿದರು. ಅಲ್ಲದೆ ವ್ಯಾಸಕೂಟದವರಿಗೆ ಸರ್ವಮೂಲಗ್ರಂಥಗಳಲ್ಲಿನ ಸಿದ್ಧಾಂತದ ಪ್ರತಿಪಾದನೆ ಮುಖ್ಯವಾಗಿ, ಅವರು ಬ್ರಹ್ಮಸೂತ್ರಭಾಷ್ಯ ಮತ್ತು ಪ್ರಕರಣಗ್ರಂಥಗಳಿಗೆ ಪ್ರಾಧಾನ್ಯವನ್ನು ನೀಡಿದರೆ, ದಾಸಕೂಟದವರು ಹೆಚ್ಚಾಗಿ ಹಿಡಿದುಕೊಂಡದ್ದು ಮಧ್ವಾಚಾರ್ಯರ ತಂತ್ರಸಾರಸಗ್ರಹವನ್ನು. ಉಪಾಸನಾ ಪ್ರಧಾನವಾದ ಈ ಗ್ರಂಥದ ಮೇಲೆ ಪಾಂಚರಾತ್ರಾಗಮದ ಪ್ರಭಾವವಿರುವುದನ್ನು ಎಸ್.ಕೆ.ಆರ್. ಗುರುತಿಸುತ್ತಾರೆ. ತಾಂತ್ರಿಕ ಪ್ರಕ್ರಿಯೆಗಳು, ಯೋಗವಿಧಾನಗಳೇ ಮುಖ್ಯವಾಗಿರುವ ಇದರಲ್ಲಿ ಪ್ರಮೇಯಗಳ ಕಟ್ಟುಪಾಡುಗಳಿಲ್ಲದಿರುವುದನ್ನು ಎಸ್.ಕೆ.ಆರ್. ಗುರುತಿಸಿದ್ದಾರೆ. ವ್ಯಾಸಕೂಟŠದಾಸಕೂಟಗಳ ಮಾಧ್ವನಿಷ್ಠೆಗಳ ನಡುವೆ ಅಂತರ ತಲೆದೋರಿದ್ದು ಕೂಡಾ ಈ ಕಾರಣದಿಂದಾಗಿಯೇ ಎಂದೂ ಎಸ್.ಕೆ.ಆರ್ ಅಭಿಪ್ರಾಯಪಡುತ್ತಾರೆ. ಮಾಧ್ವಮತದ ಸಿದ್ಧಾಂತಗಳನ್ನು ವ್ಯಾಸಕೂಟದ ಪಂಡಿತರು ಗ್ರಹಿಸಿದ್ದಕ್ಕಿಂತ ಭಿನ್ನವಾಗಿ ದಾಸಕೂಟದವರು ಗ್ರಹಿಸಿದರು; ಇದರ ಮೂಲ ವ್ಯಾಸರಾಯಸ್ವಾಮಿಗಳಲ್ಲಿಯೇ ಇದೆ; ಇವರ ಗ್ರಹಿಕೆಗೂ ಪಂಡಿತರ ಗ್ರಹಿಕೆಗೂ ಪ್ರಸ್ಥಾನ ಭೇದವಿದೆ ಎನ್ನುವುದು ಈ ವಿಷಯದಲ್ಲಿ ಎಸ್.ಕೆ.ಆರ್. ಅವರ ಮಹತ್ತ್ವದ ಗಮನಿಕೆಯಾಗಿದೆ ಎನ್ನಬೇಕು. ಈ ಬದಲಾದ ಪ್ರಸ್ಥಾನವೇ ಪುರಂದರದಾಸರಿಗೆ ದಾರಿಯಾಯಿತು ಎನ್ನುವ ಮೂಲಕ ಅವರು ದಾಸಸಾಹಿತ್ಯದ ಗ್ರಹಿಕೆಗೆ ಅಗತ್ಯವಾದ ಅತಿ ಮುಖ್ಯ ಪರಿಪ್ರೇಕ್ಷ್ಯವೊಂದನ್ನು ಕಟ್ಟಿಕೊಡುತ್ತಾರೆ.
ಎಸ್.ಕೆ.ಆರ್. ಅವರ ದಾಸಸಾಹಿತ್ಯ ವಿವೇಚನೆಯ ಇನ್ನೊಂದು ಮುಖ್ಯ ನೆಲೆಯೆಂದರೆ ಈಗಾಗಲೇ ಜಾಡಿಗೆ ಬಿದ್ದು ‘ಸಿದ್ಧಾಂತೀಕರಣ’ಕ್ಕೆ ಒಳಪಟ್ಟಿರುವ ಪರಿಕಲ್ಪನೆಗಳನ್ನು ನಿರಚನೆಗೊಳಿಸುವ ಒಂದು ಪ್ರಯತ್ನ. ಇದನ್ನು ಒಂದು ಬಗೆಯ ‘de-doctrinization’ ಎಂದು ಗುರುತಿಸಬಹುದು. ಇದಕ್ಕೆ ಉದಾಹರಣೆಯಾಗಿ ‘ಬಿಂಬೋಪಾಸನೆ’ಯ ಪರಿಕಲ್ಪನೆಯನ್ನು ಎಸ್.ಕೆ.ಆರ್. ವಿವೇಚಿಸಿರುವ ಬಗೆಯನ್ನು ಗಮನಿಸಬಹುದು. ವಿಷ್ಣುತತ್ತ್ವವನ್ನು ಬ್ರಹ್ಮತತ್ತ್ವದೊಂದಿಗೆ ಸಮೀಕರಿಸುತ್ತ, ಈ ವಿಷ್ಣುತತ್ತ್ವ ಬಿಂಬರೂಪಿಯಾಗಿ ತನ್ನ ಪ್ರತಿಬಿಂಬನಾದ ಜೀವಿಯೊಂದಿಗೆ ಸೇರಿದಾಗ ‘ಹರಿ’ ಎಂದೂ, ಈ ‘ಹರಿ’ ಎಂದರೆ ಸಾಧಕನ ಹೃದಯದಲ್ಲೇ ಅಡಗಿದವನು ಎಂದೂ, ಆದ್ದರಿಂದಲೇ ಈ ದಾಸರು ಹರಿದಾಸರೇ ಆದುದಕ್ಕೆ ಪಾರಿಭಾಷಿಕವಾದ ನೆಲೆಗಟ್ಟು ಕೂಡ ಇದೆಯೆಂದೂ ಅವರು ಪ್ರತಿಪಾದಿಸುತ್ತಾರೆ. ಒಟ್ಟಾರೆಯಾಗಿ ಈ ವಿವರಣೆಯ ಕ್ರಮದಲ್ಲೇ, ಸಿದ್ಧಾಂತದ ವಿವರಗಳು ವ್ಯಕ್ತಿಯ ಸಂದರ್ಭದಲ್ಲಿ ವಾಸ್ತವವಾಗಬೇಕೆಂಬ ಅವರ ವೈಯಕ್ತಿಕ ಕಾಳಜಿಯನ್ನು ಗುರುತಿಸಲು ಸಾಧ್ಯವಿದೆ. ಯುಗಧರ್ಮವಾದ ಉದಾರೀಕರಣದ ಪ್ರಭಾವದಿಂದ ಸಿದ್ಧಾಂತದ ಭಕ್ತಿಯ ಕಡೆಗಿನ ಚಲನೆ ಹೇಗೆ ಸಾಧ್ಯವಾಯಿತೆಂಬುದನ್ನು ಅವರು ಸಾಧಾರವಾಗಿ ನಿರೂಪಿಸಿದ್ದಾರೆ.
ಎಸ್.ಕೆ.ಆರ್. ಅವರ ವಿವೇಚನೆಯಲ್ಲಿ ಪಾಂಡಿತ್ಯವಿದೆ. ಆದರೆ ಈ ಪಾಂಡಿತ್ಯ ವಿವರಗಳ ಪ್ರದರ್ಶನದ ಆಡಂಬರಕ್ಕೆ ಎಡೆಗೊಡದೆ ಪ್ರತಿಯೊಂದು ಹಂತದಲ್ಲಿಯೂ ಸಾರ್ಥಕತೆಯ (‘ಸ+ಅರ್ಥ’) ಕಡೆಗೆ ಚಲಿಸುತ್ತದೆ. ಹಾಗೆ ನೋಡಿದರೆ, ಆಲಂಕಾರಿಕ ಪಾಂಡಿತ್ಯದ ನಿರಾಕರಣೆ ಒಂದು ಮೌಲ್ಯವೆಂಬಂತೆ ಎಸ್.ಕೆ.ಆರ್. ಅವರಲ್ಲಿ ಸ್ಥಾಪಿತವಾಗುತ್ತದೆ. ಇದನ್ನು ಹರಿದಾಸರ ಧೋರಣೆಯನ್ನು ಗ್ರಹಿಸುವಲ್ಲಿ ಒಂದು ಪ್ರಧಾನವಾದ ಕೀಲಿಕೈಯಾಗಿ ಅವರು ಬಳಸಿಕೊಳ್ಳುತ್ತಾರೆ. ನಿದರ್ಶನಕ್ಕೆ ಅವರ ಈ ಮಾತುಗಳನ್ನು ಗಮನಿಸಬಹುದು:
“…ಹರಿದಾಸರು ಪಂಡಿತರಲ್ಲದುದು ಮಾತ್ರವಲ್ಲ, ಪಾಂಡಿತ್ಯವನ್ನೂ ಅಲ್ಲಗಳೆದರು; ಪಂಡಿತರ ಜ್ಞಾನಪಾರಮ್ಯವನ್ನು ಒಪ್ಪಿಕೊಳ್ಳದೆ ಭಕ್ತಿಯೇ ಸಾಧನವೆಂದು ಹಟಹಿಡಿದರು. ಶಾಸ್ತ್ರದಲ್ಲಿ ಭಕ್ತಿಯೇ ಉತ್ತಮ ಸಾಧನವೆಂಬ ಪ್ರಕ್ರಿಯೆಯಿದ್ದರೂ, ವ್ಯವಹಾರದಲ್ಲಿ ಜ್ಞಾನಾರ್ಜನೆಗಿದ್ದ ಬೆಲೆ ಭಕ್ತಿಸಂಪನ್ನತೆಗಿರಲಿಲ್ಲ. ಪಂಡಿತರ ಪಾಲಿಗೆ ಜ್ಞಾನವೇ ಮುಖ್ಯವೆಂದಾಯಿತು. ಜ್ಞಾನವೆಂದರೆ ಶಾಸ್ತ್ರಜ್ಞಾನವೇ ಎಂಬ ಸಂಕುಚಿತಾರ್ಥವೂ ಉಳಿದುಕೊಂಡಿತು. ಈ ಬಗೆಯ ಜ್ಞಾನಕ್ಕೆ ಅಧಿಕಾರವನ್ನು ಹೇಳುವಾಗ ಜಾತಿ, ಮತ, ಕುಲ, ಮನೆತನ, ಆಚಾರ, ಆಡಂಬರಗಳೆಲ್ಲ ಸೇರಿಕೊಂಡು ಬಂದುವು. ಹರಿದಾಸರು ಹೀಗೆ ಜ್ಞಾನಾಧಿಕಾರಿಗಳೆಂದು ಪಂಡಿತರು ಒಪ್ಪಲು ಸಿದ್ಧರಾಗಿರಲಿಲ್ಲ. ಹರಿದಾಸರಾದರೋ ಭಾವುಕರು, ಪಾಂಕ್ತವಾದ ಶಾಸ್ತ್ರಜ್ಞಾನವಿರದಿದ್ದರೂ ಅಪರೋಕ್ಷಜ್ಞಾನದ ಸ್ವಭಾವವನ್ನು ಅರಿತುಕೊಂಡಿದ್ದರು. ತಾರಕವಾದ ಜ್ಞಾನವನ್ನು ಪಡೆದುಕೊಳ್ಳಲು ಸುದೀರ್ಘವಾದ ಅಧ್ಯಯನವೇ ದಾರಿಯೆಂದು ಅವರು ಬಗೆಯಲಿಲ್ಲ…’’ (ದಾಸಸಾಹಿತ್ಯ ಮತ್ತು ಸಂಸ್ಕೃತಿ, ಪು. ೩೭)
ಪುರಂದರದಾಸರ ‘ಗಿಳಿಯು ಪಂಜರದೊಳಿಲ್ಲ’ ಎಂಬ ಗೀತೆಗೆ ಎಸ್.ಕೆ.ಆರ್. ಅವರ ವ್ಯಾಖ್ಯಾನ ಸ್ವಾರಸ್ಯಕರವಾಗಿದೆ. ಅವರ ಪ್ರಕಾರ ‘ಗಿಳಿ’ ಎಂದರೆ ಭಕ್ತಿ; ಭಾಗವತದಲ್ಲಿನ ಶುಕ. ಪಾಂಡಿತ್ಯದ ಪಂಜರದಲ್ಲಿಟ್ಟ ಭಕ್ತಿಯೆಂಬ ಗಿಣಿ ಅಲ್ಲಿರಲಾರದೆ ಹಾರಿಹೋಯಿತು ಎಂದು ಅವರು ಅಭಿಪ್ರಾಯಪಡುತ್ತಾರೆ.
ಎಸ್.ಕೆ.ಆರ್. ಅವರ ವಿವೇಚನೆಯಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ಸಂಗತಿಯೆಂದರೆ ಹರಿದಾಸರ ‘ಮತನಿಷ್ಠೆ’ಯ ವಿಚಾರದಲ್ಲಿ ಅವರು ತಾಳುವ ಧೋರಣೆ. ದಾಸರ ನಿಲುವನ್ನು ಗ್ರಹಿಸುವಲ್ಲಿ ಸಿದ್ಧಾಂತದ ಪ್ರಮೇಯಗಳ ಪಾತ್ರ ಒಂದಿಷ್ಟು ಇದ್ದರೂ ಅಲ್ಲಿ ಪ್ರಧಾನವಾಗುವುದು ಸಾಧನೆಯ ಭಾಗ; ಸಿದ್ಧಾಂತದ ಪ್ರಮೇಯಗಳ ಭೇದ ಸಾಧನೆಯ ಭೇದಕ್ಕೆ ಎಡೆಗೊಡಬೇಕಿಲ್ಲ; ಅಲ್ಲದೆ ಸಾಧನೆ ಪ್ರಧಾನವಾಗಿದ್ದ ದಾಸರು ಸಿದ್ಧಾಂತವನ್ನೂ ಒಂದಿಷ್ಟು ಮಾರ್ಪಡಿಸಿದರು; ಈ ಮಾರ್ಪಾಟನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ. ಇದು ಎಸ್.ಕೆ.ಆರ್. ಅವರ ನಿಲುವು. ಮತೀಯ ಹಿನ್ನೆಲೆಯ ಸಾಹಿತ್ಯದ ಪ್ರವೇಶಕ್ಕೆ ಎಸ್.ಕೆ.ಆರ್. ಅವರು ತಮ್ಮ ಈ ನಿಲುವಿನ ಮೂಲಕ ಹೊಸ ದಾರಿಯೊಂದನ್ನು ತೆರೆದಿದ್ದಾರೆಂದೂ ಹೇಳಬಹುದು. ಆದ್ದರಿಂದಲೇ ಅವರು ಒಂದು ಸಾಹಿತ್ಯ ಪರಂಪರೆಯ ಉತ್ಕೃಷ್ಟತೆಯನ್ನು ಹೇಗೋ ಹಾಗೆಯೆ ಅದರ ಅವನತಿಯನ್ನೂ ಗುರುತಿಸಬಲ್ಲರು. ಸಮಕಾಲೀನ ದಾಸಪರಂಪರೆಯ ಬಗೆಗೆ ಅವರ ಅಭಿಪ್ರಾಯ ಹೀಗೆ ವ್ಯಕ್ತವಾಗಿದೆ:
“ಹರಿದಾಸಪಂಥದ ಶಕ್ತಿಯೂ ಆ ಸಾಹಿತ್ಯದ ಸಂಪತ್ತೂ ಕಡಮೆಯಾಗುತ್ತಾ ಬಂದಿದೆಯೆನ್ನುವುದರಲ್ಲಿ ಸಂಶಯವಿಲ್ಲ. ವಿಸ್ತಾರದಲ್ಲಿಯೂ ಸಾರ್ಥಕ್ಯದಲ್ಲಿಯೂ ಹರಿದಾಸ ಸಾಹಿತ್ಯ ಗೋಪಾಲದಾಸರ ಕಾಲದಿಂದ ಇಳಿಮುಖವೇ. ಕಳೆದ ತಲೆಮಾರಿನಲ್ಲಿ ಅವರು ಗಳಿಸಿದ್ದ ಜನಪ್ರೀತಿಯೂ ಈಗ ಬಹುಮಟ್ಟಿಗೆ ಮರೆಯಾಗಿದೆ; ಈಗಿನ ಹರಿದಾಸ ಸಾಹಿತ್ಯದಲ್ಲಿ ಪ್ರತಿಭೆಯಾಗಲಿ ಸ್ವಾರಸ್ಯವಾಗಲಿ ಕಂಡುಬರದೆ ಪದಗಳು ನೀರಸವಾಗಿದೆ. ‘ಹೇಳಿದ್ದೆ ಹೇಳೋ ಕಿಸಿಬಾಯಿ ದಾಸ’ ಎನ್ನುವ ಗಾದೆ ಇಂಥ ದಾಸರನ್ನು ನೋಡಿದ್ದೆ ಮಾಡಿದುದೊ ಎನಿಸುತ್ತದೆ. ಲೋಕಾನುಭವವಿದ್ದರೆ ಆಧ್ಯಾತ್ಮಿಕ ದೃಷ್ಟಿಯಿಲ್ಲ; ಆಧ್ಯಾತ್ಮಿಕ ದೃಷ್ಟಿಯಿದ್ದರೆ ಲೋಕಾನುಭವವಿಲ್ಲ. ಎರಡೂ ಇದ್ದರೆ ಲೋಕಸಂಗ್ರಹದ ತವಕವಿಲ್ಲ. ಹೀಗಾಗಿ ಈಚಿನ ಹರಿದಾಸ ಸಾಹಿತ್ಯ ದುರ್ಬಲವಾಗಿದೆ, ನಿರರ್ಥಕವಾಗಿದೆ.’’ (ದಾಸಸಾಹಿತ್ಯ ಮತ್ತು ಸಂಸ್ಕೃತಿ, ಪು. ೨೫೯)
ದಾಸಸಾಹಿತ್ಯದ ತಾತ್ತ್ವಿಕ ಸಂದರ್ಭ ಹಾಗೂ ಅಭಿವ್ಯಕ್ತಿ ಪ್ರಕಾರಗಳ ಸ್ವರೂಪ ನಿಷ್ಕರ್ಷೆಯ ಬಗೆಗೆ ಎಸ್.ಕೆ.ಆರ್. ಅವರು ಅತ್ಯಂತ ಮೌಲಿಕವಾದ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಅವರ ವ್ಯುತ್ಪತ್ತಿಯ ಹರಹು ವಿಶಾಲವಾದುದ್ದು. ಪ್ರಮಾಣ ಗ್ರಂಥಗಳಿಂದ, ಇತಿಹಾಸದಿಂದ, ಸಾಹಿತ್ಯದಿಂದ ತಮ್ಮ ಮಂಡನೆಗೆ ಆಧಾರವಾಗುವ ಸಂಗತಿಗಳನ್ನು ಅವರು ಅತ್ಯಂತ ಸಹಜವಾಗಿ ತರುತ್ತಾರೆ. ಹಾಗೆಯೆ ಮಂಡಿಸಬೇಕಾದುದನ್ನು ನಿರ್ಲಿಪ್ತವಾಗಿ, ನಿರುದ್ವೇಗದಿಂದ ಮಂಡಿಸುತ್ತಾರೆ. ಈ ಆಧಾರಗಳಿಂದ ಯಾರು ಬೇಕಾದರೂ ಈ ತೀರ್ಮಾನಗಳನ್ನು ತಲುಪಬಹುದೆಂಬ ಒಂದು ಬಗೆಯ ಸಮಾಧಾನಚಿತ್ತತೆ ಅವರ ಪ್ರತಿಪಾದನೆಯ ಮುಖ್ಯ ಲಕ್ಷಣವಾಗುತ್ತದೆ. ಅವರ ಮಂಡನೆಯಲ್ಲಿ ಎಲ್ಲಿಯೂ ‘ಜೋರುದನಿ’ ಕಂಡುಬರುವುದಿಲ್ಲ. ಇದು, ಇನ್ನೊಂದು ರೀತಿಯಲ್ಲಿ ಅವರ ಪಾಂಡಿತ್ಯದ ಅಹಂ ನಿರಸನದ ಲಕ್ಷಣವಾಗಿದೆಯೆಂದೂ ಗುರುತಿಸಬಹುದು.
ಎಸ್.ಕೆ.ಆರ್. ಅವರ ಬರವಣಿಗೆ ವಸ್ತುನಿಷ್ಠವೇನೋ ಸರಿಯೆ; ಹಾಗೆಂದು ಅದು ಲೋಕನಿರಪೇಕ್ಷವೇನೂ ಅಲ್ಲ. ಸಂಗತಿಗಳನ್ನು ಉದ್ದೇಶಿಸುವುದು (addressing the issues) ಅವರ ಬರವಣಿಗೆಯ ಪ್ರಧಾನ ಕಾಳಜಿ. ಆದ್ದರಿಂದಲೇ ಎಸ್.ಕೆ.ಆರ್. ಸದಾ ನಮಗೆ ಪ್ರಸ್ತುತರಾಗುತ್ತಾರೆ. ನಮಗೆ ಅತ್ಯಂತ ಅಗತ್ಯವಾದ ಒಳನೋಟಗಳನ್ನು – ಇವನ್ನು ಕೇವಲ ಅವರು ಮಾತ್ರ ಕೊಡಬಲ್ಲರೆಂಬಂತೆ – ನಮಗೆ ಕೊಡುತ್ತ ಹೋಗುತ್ತಾರೆ.