ಎಷ್ಟೋ ಬಾರಿ ಪ್ರಗಲ್ಭ ವಿದ್ವಾಂಸರೆಂದೆನಿಸಿಕೊಂಡವರ ಬರವಣಿಗೆಗಳು ಪಂಡಿತರಿಗೆ ಮಾತ್ರ ಪ್ರಿಯವಾಗುವಂತೆ ಇರುವುದನ್ನು ನೋಡುತ್ತೇವೆ. ಅಂತಹವರು ಸಾಮಾನ್ಯ ಜನರಿಗೆ ಎಟುಕುವಂತಹ ಭಾಷೆಯಲ್ಲಿ ವಿಷಯನಿರೂಪಣೆಯನ್ನು ಮಾಡುವ ಕೌಶಲವನ್ನೇ ಪಡೆದಿಲ್ಲವೇನೋ ಎಂಬಂತೆ ತೋರುತ್ತದೆ. ಆದರೆ ಇಂತಹ ಕೊರತೆ ರಾಮಚಂದ್ರರಾಯರು ರಚಿಸಿದ ಗ್ರಂಥರಾಶಿಯಲ್ಲಿ ಎಲ್ಲಿಯೂ ಕಾಣದು; ದೇವಾಲಯಸಂಸ್ಕೃತಿಗೆ ಸಂಬಂಧಪಟ್ಟಂತೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನೂ, ಕೃತಿಶ್ರೇಣಿಗಳನ್ನೂ ರಾಯರು ರಚಿಸಿರುವರು. ಎಲ್ಲ ಹಂತಗಳ ವಿದ್ಯಾರ್ಥಿಗಳಿಗೂ ಸಾಮಾನ್ಯಜನರಿಗೂ ಸಂಶೋಧಕರಿಗೂ ಪ್ರಯೋಜನವಾಗುವಂತಹ ವಿವಿಧ ಗಾತ್ರಗಳ ಗ್ರಂಥಗಳನ್ನು ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ಬರೆದಿರುವರು. ಓದುಗರನ್ನು ಗಮನದಲ್ಲಿರಿಸಿಕೊಂಡು ಗಹನವಾದ ವಿಷಯಗಳನ್ನೂ ತಿಳಿಯಾದ ಭಾಷೆಯಲ್ಲಿ ನಿರೂಪಿಸುವುದು ರಾಯರು ರೂಢಿಸಿಕೊಂಡ ಶಕ್ತಿ.
ಸಾ.ಕೃ. ರಾಮಚಂದ್ರರಾಯರ ಪರಿಚಯ ವೈಯಕ್ತಿಕವಾಗಿಯೋ ಅಥವಾ ಅವರ ಗ್ರಂಥಗಳ ಮೂಲಕವೋ ಇದ್ದವರಿಗೆ ಅನುಕ್ಷಣವೂ ಗೋಚರವಾಗುವುದು ಅವರ ವಿಶ್ವಕೋಶಾತ್ಮಕವಾದ ಜ್ಞಾನಸಂಪತ್ತಿ ಹಾಗೂ ಸನಾತನಧರ್ಮದ ಸಕಲಾಂಶಗಳ ಬಗ್ಗೆ ಅವರಿಗಿದ್ದ ನಿಕಟವಾದ ಪರಿಚಯ. ಅವರ ಜ್ಞಾನವು ಗ್ರಂಥಾಧ್ಯಯನದಿಂದಲೂ ಆಳವಾದ ಜೀವನಾನುಭವದಿಂದಲೂ ಪುಷ್ಟವಾಗಿದ್ದದ್ದು ಸುವೇದ್ಯ.
ದೇವಾಲಯಗಳು ಭಾರತೀಯ ಸಂಸ್ಕೃತಿಯ ಹೃದ್ಭಾಗವೆಂದರೆ ತಪ್ಪಾಗಲಾರದು. ಹೃದಯದ ಮಿಡಿತವು ನಿಂತ ಕ್ಷಣವೇ ಜೀವಿಯೊಂದರ ಜೀವನವೇ ಕೊನೆಯಾಗುವಂತೆ, ದೇವಾಲಯಗಳು ನಶಿಸಿಹೋದೊಡನೆಯೇ ಭಾರತೀಯ ಸಂಸ್ಕೃತಿಯೇ ಲಯಗೊಂಡಂತಾಗುತ್ತದೆ. ಆಧಿಭೌತಿಕ, ಆಧಿದೈವಿಕ ಹಾಗೂ ಆಧ್ಯಾತ್ಮಿಕ ಸ್ತರಗಳ ಎಲ್ಲ ಸಾಂಸ್ಕೃತಿಕ ಅಂಶಗಳಿಗೂ ಕೇಂದ್ರಭೂತವಾದವು ದೇವಾಲಗಯಗಳು. ವಸ್ತುತಃ ಭಾರತದ ಇತಿಹಾಸವನ್ನು ಪರಾಮರ್ಶಿಸಿದಾಗ ಇದೇ ತತ್ತ್ವವು ಗೋಚರಿಸುವುದು. ನಮ್ಮ ದೇಶದ ಮೇಲೆ ದಾಳಿ ಮಾಡಿದ ಮತಾಂಧ ಪರಕೀಯರೂ ಕೂಡ ಈ ವಸ್ತುಸ್ಥಿತಿಯನ್ನು ಅರಿತು ದೇವಾಲಯಗಳ ನಾಶವೇ ತಮ್ಮ ಪ್ರಧಾನ ಲಕ್ಷ್ಯವೆಂಬಂತೆ ದೌಷ್ಟ್ಯವನ್ನು ತೋರಿದ್ದು ಸರ್ವವಿದಿತವಾಗಿದೆ.
ಭಾರತೀಯ ದೇವಾಲಯಗಳು ಪೋಷಿಸದ ಜ್ಞಾನಶಾಖೆಯಾಗಲಿ, ಕಲೆಯಾಗಲಿ ಇಲ್ಲವೆಂದು ಹೇಳಬೇಕು. ನಾಟ್ಯವೇದವನ್ನು ಕುರಿತು ಚತುರ್ಮುಖಬ್ರಹ್ಮನು ಹೇಳಿರುವ ಈ ಮಾತುಗಳು ದೇವಾಲಯಗಳಿಗೂ ಅನ್ವಯವಾಗುತ್ತದೆ – “ನ ತಜ್ಞಾನಂ ನ ತಚ್ಛಿಲ್ಪಂ ನ ಸಾ ವಿದ್ಯಾ ನ ಸಾ ಕಲಾ | ನಾಸೌ ಯೋಗೋ ನ ತತ್ಕರ್ಮ ನಾಟ್ಯೇಽಸ್ಮಿನ್ ಯನ್ನ ದೃಶ್ಯತೇ ||’’ ದೇವಾಲಯದ ನಿರ್ಮಾಣದಲ್ಲಿ, ಅದರ ಪೋಷಣೆ-ರಕ್ಷಣೆಗಳಲ್ಲಿ ಹಾಗೂ ತತ್ಸಂಬಂಧವಾದ ಅಧ್ಯಯನದಲ್ಲಿ ಒದಗಿಬಾರದ ಜ್ಞಾನಶಾಖೆ, ವಿದ್ಯೆ, ಕರ್ಮ, ಯೋಗ, ಹಾಗೂ ಕಲೆ ಯಾವುದೂ ಇಲ್ಲ. ವೇದ, ವೇದಾಂತ, ಧರ್ಮಶಾಸ್ತ್ರ, ಅರ್ಥಶಾಸ್ತ್ರ, ಆಗಮ, ಪುರಾಣ, ವಾಸ್ತುಶಾಸ್ತ್ರ, ಗಣಿತ, ಸೌಂದರ್ಯಶಾಸ್ತ್ರಾದಿಗಳ ಉಳಿವಿಗೆ ಹಾಗೂ ಬೆಳವಣಿಗೆಗೆ ದೇವಾಲಯಗಳ ಕೊಡುಗೆ ಅಪಾರವಾದದ್ದು. ವಾಸ್ತುಶಿಲ್ಪ, ಮೂರ್ತಿಶಿಲ್ಪ, ಚಿತ್ರಕಲೆ, ಗೀತ, ನೃತ್ಯ, ನಾಟ್ಯ, ಕಾವ್ಯಾದಿ ಕಲೆಗಳ ಆಕರಭೂಮಿಯೇ ದೇವಾಲಯ. ದೇವತಾತತ್ತ್ವವು ಸಕಲ ಭಾರತೀಯ ಕಲೆಗಳಲ್ಲಿಯೂ ಹಾಸುಹೊಕ್ಕಾಗಿದೆ. ಇಂತಿರಲು ದೇವಾಲಯಗಳ ಅಧ್ಯಯನವನ್ನು ಕೈಗೊಳ್ಳಲು ಈ ಎಲ್ಲ ಜ್ಞಾನಶಾಖೆಗಳ ಹಾಗೂ ಕಲೆಗಳ ಆಳವಾದ ಪರಿಚಯವು ಅತ್ಯವಶ್ಯ. ಅಲ್ಲದೆ ಇತಿಹಾಸ, ಪುರಾತತ್ತ್ವಶೋಧನೆಗಳ ಅರಿವೂ ಇರಬೇಕು. ರಾಮಚಂದ್ರರಾಯರಿಗೆ ಇವೆಲ್ಲದರ ಬಗೆಗಿದ್ದ ಪರಿಪೂರ್ಣ ದೃಷ್ಟಿ ಹಾಗೂ ಪ್ರಯೋಗಕೌಶಲಗಳಿಂದ ಅವರಿಗೆ ಇಂತಹ ವಿಷಯಗಳ ಅಧ್ಯಯನ ಹಾಗೂ ತತ್ಸಂಬಂಧವಾದ ಬರವಣಿಗೆ, ಗ್ರಂಥರಚನೆಗಳು ಸಾಧ್ಯವಾದವು.
ಇಂದಿನ ನಮ್ಮ ವಿದ್ಯಾಭ್ಯಾಸಕ್ರಮದ ಹಿನ್ನೆಲೆಯಲ್ಲಂತೂ ಇಂತಹ ಸರ್ವತೋಮುಖವಾದ ತಿಳಿವಳಿಕೆಯ ಮಹತ್ತ್ವ ಹಾಗೂ ಅದರ ಅಭಾವದಿಂದ ಆಗುವ ಹಾನಿ ಸ್ಪಷ್ಟವಾಗುವುದು. ಇಂದು ಇತಿಹಾಸಜ್ಞರೆಂದು ಎನಿಸಿಕೊಂಡಿರುವವರಿಗೆ ದೇವಾಲಯಸಂಸ್ಕೃತಿಯ ಪರಿಚಯವಿರುವುದು ಅಪರೂಪದ ಮಾತು; ವಾಸ್ತುಶಾಸ್ತ್ರಜ್ಞರಿಗೆ ಪ್ರಾಥಮಿಕವಾದ ಇತಿಹಾಸಪ್ರಜ್ಞೆಯೇ ಇರದಂತೆ ತೋರುತ್ತದೆ; ಶಾಸನಗಳಲ್ಲಿಯ ಲಿಪಿಗಳನ್ನು ಓದಬಲ್ಲವರಿಗೆ ಭಾಷೆ ಬಾರದು; ಭಾಷೆ ಬರುವವರಿಗೆ ವಿವಿಧ ಲಿಪಿಗಳ ಪರಿಚಯವಿರುವುದಿಲ್ಲ; ಪುರಾತತ್ತ್ವಶೋಧಕರಿಗೆ ಪುರಾಣೇತಿಹಾಸಗಳ ತಿಳಿವಳಿಕೆ ಸಾಲದಂತೆ ಕಾಣುತ್ತದೆ; ಹಾಗೆಯೇ ಶಿಲ್ಪಿಗಳಿಗೆ ಮೂರ್ತಿಲಕ್ಷಣದ ತಾತ್ತಿ÷್ವಕ ಹಿನ್ನೆಲೆಯ ಅರಿವೇ ಇರುವಂತೆ ತೋರದು; ಶಾಸ್ತ್ರಗಳ ಅಧ್ಯಯನವನ್ನು ಮಾಡಿದವರಿಗೆ ಪ್ರಯೋಗಕುಶಲತೆ ಇರುವುದೂ ವಿರಳವೇ ಆಗಿದೆ.
ಎಷ್ಟೋ ಬಾರಿ ಪ್ರಗಲ್ಭ ವಿದ್ವಾಂಸರೆಂದೆನಿಸಿಕೊಂಡವರ ಬರವಣಿಗೆಗಳು ಪಂಡಿತರಿಗೆ ಮಾತ್ರ ಪ್ರಿಯವಾಗುವಂತೆ ಇರುವುದನ್ನು ನೋಡುತ್ತೇವೆ. ಅಂತಹವರು ಸಾಮಾನ್ಯ ಜನರಿಗೆ ಎಟುಕುವಂತಹ ಭಾಷೆಯಲ್ಲಿ ವಿಷಯನಿರೂಪಣೆಯನ್ನು ಮಾಡುವ ಕೌಶಲವನ್ನೇ ಪಡೆದಿಲ್ಲವೇನೋ ಎಂಬಂತೆ ತೋರುತ್ತದೆ. ಆದರೆ ಇಂತಹ ಕೊರತೆ ರಾಮಚಂದ್ರರಾಯರು ರಚಿಸಿದ ಗ್ರಂಥರಾಶಿಯಲ್ಲಿ ಎಲ್ಲಿಯೂ ಕಾಣದು. ದೇವಾಲಯಸಂಸ್ಕೃತಿಗೆ ಸಂಬಂಧಪಟ್ಟಂತೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನೂ ಕೃತಿಶ್ರೇಣಿಗಳನ್ನೂ ರಾಯರು ರಚಿಸಿರುವರು. ಎಲ್ಲ ಹಂತಗಳ ವಿದ್ಯಾರ್ಥಿಗಳಿಗೂ ಸಾಮಾನ್ಯ ಜನರಿಗೂ ಸಂಶೋಧಕರಿಗೂ ಪ್ರಯೋಜನವಾಗುವಂತಹ ವಿವಿಧ ಗಾತ್ರಗಳ ಗ್ರಂಥಗಳನ್ನು ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ಬರೆದಿರುವರು. ಓದುಗರನ್ನು ಗಮನದಲ್ಲಿರಿಸಿಕೊಂಡು ಗಹನವಾದ ವಿಷಯಗಳನ್ನೂ ತಿಳಿಯಾದ ಭಾಷೆಯಲ್ಲಿ ನಿರೂಪಿಸುವುದು ರಾಯರು ರೂಢಿಸಿಕೊಂಡ ಶಕ್ತಿ.
ದೇವಾಲಯಸಂಸ್ಕೃತಿಗೆ ಸಂಬಂಧಪಟ್ಟಂತೆ ರಾಯರು ರಚಿಸಿರುವ ಗ್ರಂಥಗಳ ಕಡೆಗಿನ್ನು ಗಮನಹರಿಸೋಣ:
ಭಾರತದ ದೇವಾಲಯ: ನೆಲೆ-ಹಿನ್ನೆಲೆ ಎಂಬ ಕನ್ನಡದ ಕಿರುಹೊತ್ತಿಗೆಯಲ್ಲಿ ಹಾಗೂ Temples: Icons and Rituals ಎಂಬ ಆಂಗ್ಲಪುಸ್ತಿಕೆಯಲ್ಲಿ ದೇವಾಲಯಗಳಿಗೆ ಸಂಬಂಧಪಟ್ಟಂತಹ ಅನೇಕ ಆಯಾಮಗಳನ್ನು ಪರಿಚಯಿಸಿದ್ದಾರೆ. ಪ್ರಾಚೀನ ಕಾಲದ ದೇಗುಲಗಳು, ಅವುಗಳ ಬೆಳವಣಿಗೆ, ಆಲಯದ ಕಟ್ಟಡ, ಷಡ್ವರ್ಗ, ಸಾಂಕೇತಿಕ ಹಿನ್ನೆಲೆ, ಸಾಂಪ್ರದಾಯಿಕವಾದ ಚೌಕಟ್ಟು, ಮೂರ್ತಿಪೂಜೆ, ಮೂಲಬೇರಗಳ ಪ್ರಾಚೀನತೆ, ದೈನಂದಿನ ಪೂಜಾವಿಧಿ, ಉತ್ಸವಗಳು, ಪೂಜಾಪದ್ಧತಿಗಿರುವ ಆಧ್ಯಾತ್ಮಿಕ ಭಿತ್ತಿ – ಹೀಗೆ ಅನೇಕ ವಿಷಯಗಳನ್ನು ಈ ಪುಸ್ತಿಕೆಗಳಲ್ಲಿ ನಿರೂಪಿಸುತ್ತಾರೆ. ದೇವಾಲಯವೆಂಬುದು ಪೂಜಾಯೋಗ್ಯವಾದ ಮೂರ್ತಿಯೊಂದರ ವಾಸಸ್ಥಾನ; ಆ ಮೂರ್ತಿಯಾದರೂ ಕೇವಲ ಭಕ್ತಿಯ ಅಭಿವ್ಯಕ್ತಿಯ ಕೇಂದ್ರವಲ್ಲದೆ ಮನಸ್ಸನ್ನು ಸೂರೆಗೈಯುವ ಕಲಾಕೃತಿಯೂ ಹೌದೆಂದು ನಿರೂಪಿಸುತ್ತಾರೆ. ಮನೋವಿಜ್ಞಾನವನ್ನೂ ಅಧ್ಯಯನ ಮಾಡಿದ್ದಂತಹ ರಾಯರು, ಪೂಜಾಪದ್ಧತಿಯ ಬೆಳವಣಿಗೆಯನ್ನು ಕುರಿತು ಹೇಳುವ ಮಾತುಗಳು ಗಮನಾರ್ಹ –
“ಹಿಂದಿನ ಕಾಲದ ಮನುಷ್ಯನಿಗೆ ಪೂಜಾಬುದ್ಧಿ ಬೆಳೆದುದು ಅವನ ಅಜ್ಞಾನದಿಂದಷ್ಟೇ ಎನ್ನಲಾಗದು. ಅಪೂರ್ವವಾದುದರ, ಅದ್ಭುತವೆನಿಸಿದುದರ ಎದುರು ನಿಂತಾಗ ಅವನಲ್ಲಿ ಒದಗಿಬಂದ ಉದಾತ್ತ ಭಾವನೆಗಳೂ ಇಲ್ಲಿ ಕೆಲಸ ಮಾಡುತ್ತವೆ. ಅದ್ಭುತವಾದುದನ್ನು ಅನುಭವಿಸುವ, ಸುಂದರವಾದುದನ್ನು ಸವಿಯುವ ಸಾಮರ್ಥ್ಯ ಮನುಷ್ಯನಿಗಿರುವುದರಿಂದಲೇ ಅವನಲ್ಲಿ ಆರಾಧನಾಪ್ರವೃತ್ತಿ ಕಾಣಿಸಿಕೊಂಡಿತು. ಈ ಸಾಮರ್ಥ್ಯ ಇಂದಿಗೂ ಕಳೆಗುಂದಿಲ್ಲ, ಹಳತಾಗಿಲ್ಲ.’’
ಈ ಮಾತಿನ ಹಿನ್ನೆಲೆಯಲ್ಲಿಯೇ ರಾಯರು, “ಪ್ರತಿಮೆಗೆ ಅದರ ಮಹಿಮೆ ಬರುವುದಕ್ಕೆ ಆ ವಸ್ತುವಿಗಿಂತ ಹೆಚ್ಚಾಗಿ ಕಲ್ಪನೆಯೇ ಕೆಲಸ ಮಾಡಿದೆ; ಪದಾರ್ಥಕ್ಕೆ ಇಲ್ಲದ ಗುಣಧರ್ಮಗಳೆಲ್ಲ, ಹಿರಿಮೆ-ಸಾಮರ್ಥ್ಯಗಳೆಲ್ಲ ಮಾನವನ ಕಲ್ಪನೆಯ ನೆರವಿನಿಂದ ಒಂದಾನೊಂದು ಪ್ರತಿಮೆಯಲ್ಲಿ ಮೂಡಿಬರುತ್ತದೆ” ಎಂದು ತಿಳಿಸುತ್ತಾರೆ. ಅಂತೆಯೇ, ಪ್ರತಿಮೆಗಳನ್ನು ನಿರ್ಮಿಸುವುದು ಹಾಗೂ ಅವುಗಳನ್ನು ಬಳಸುವುದನ್ನು ಪ್ರಾಣಿಗಳ ಪೈಕಿ ಮಾನವನಲ್ಲಿ ಮಾತ್ರ ಕಾಣಬಹುದಾದ ಗುಣವಿಶೇಷ ಎಂದೂ ಗುರುತಿಸುತ್ತಾರೆ.
ದೇವಾಲಯಗಳ ಕಲ್ಪನೆಗೆ ಹಾಗೂ ರಚನೆಗೆ ಸಾವಿನ ನಿಗೂಢತೆಯೂ ಕಾರಣವಿದ್ದಿರಬಹುದೆಂದು ಹೇಳುತ್ತ, ಸ್ತೂಪಗಳಿಗೂ ಮಂದಿರಗಳಿಗೂ ನೇರವಾದ ಸಂಬಂಧವಿರುವುದಾಗಿಯೂ ಸ್ತೂಪದ ಹಿನ್ನೆಲೆಯು ವೈದಿಕವಾದ ಆಗ್ನೀಧ್ರಿಯಲ್ಲಿ ಇರುವುದನ್ನೂ ಗುರುತಿಸುತ್ತಾರೆ. ಹೀಗೆ ಹೇಳುವಲ್ಲಿ ರಾಯರು ಮನುಷ್ಯಸಾಮಾನ್ಯನ ಮನಃಪ್ರವೃತ್ತಿಯನ್ನು ಗಮನದಲ್ಲಿ ಇರಿಸಿಕೊಂಡಿರುವುದಲ್ಲದೇ ವೈದಿಕ ಪರಂಪರೆಗೂ ಬೌದ್ಧರ ವಾಸ್ತುನಿರ್ಮಾಣಗಳಿಗೂ ಸನಾತನ ದೇವಾಲಯಗಳಿಗೂ ಇರುವ ಸಂಸ್ಕೃತಿಯ ಐಕ್ಯವನ್ನೂ ತತ್ತ್ವಸಾಮ್ಯವನ್ನೂ ಸಾರುತ್ತಾರೆ. ವೈದಿಕ ವಿಧಿಗಳೇ ಬೇರೆ, ಬೌದ್ಧಮತವೇ ಬೇರೆ ಎಂದು ವಾದಿಸುವವರಿಗೆ ರಾಯರ ಅನೇಕ ಬರವಣಿಗೆಗಳಲ್ಲಿ ಇವೆರಡರ ಜನ್ಯ-ಜನಕಭಾವವು ಗೋಚರಿಸದೆ ಹೋಗದು.
ಈ ರೀತಿಯಾಗಿ ತಾತ್ತ್ವಿಕ ಹಿನ್ನೆಲೆಯನ್ನು ನೀಡಿದ ಬಳಿಕ ರಾಯರು ಗುಹಾಂತರ್ಗತ ದೇವಾಲಯಗಳು, ಏಕಶಿಲಾನಿರ್ಮಾಣಗಳು ಹಾಗೂ ವಿವಿಧ ಮಾಧ್ಯಮಗಳ ಮೂಲಕ ನಿರ್ಮಾಣವಾದ ಸ್ವತಂತ್ರ ದೇವಾಲಯಗಳ ಬಗೆಗೆ ಚರ್ಚಿಸುತ್ತಾರೆ. ಶಾಸನಗಳ ಆಧಾರದ ಮೇಲೆ ಪ್ರಾಚೀನ ಕಾಲದಲ್ಲಿ ಬಳಸುತ್ತಿದ್ದ ವಿವಿಧ ಸಾಮಗ್ರಿಗಳನ್ನು ತಿಳಿಸುತ್ತಾರೆ. ಮುಂದೆ ದೇವಾಲಯ ಕಟ್ಟಡದ ನಿರ್ಮಾಣಕ್ಕೆ ಸಂಬಂಧಪಟ್ಟಂತಹ ವಿವರಗಳನ್ನು ಗಮನಿಸುತ್ತ ದೇವಾಲಯಗಳು ಮೊದಲು ಬಂದು, ಅವುಗಳ ವ್ಯಾಕರಣವನ್ನು ಉಲ್ಲೇಖಿಸುವ, ಬೋಧಿಸುವ ಗ್ರಂಥಗಳ ರಚನೆಯು ತದನಂತರವಾಗಿರಬೇಕೆಂದು ವಾದಿಸುತ್ತಾರೆ. ಶಾಸ್ತ್ರಗ್ರಂಥಗಳಲ್ಲಿ ಅನೇಕ ಶೈಲಿಗಳು ಚರ್ಚಿತವಾಗಿದ್ದರೂ ಕೊನೆಗೆ ದ್ರಾವಿಡ, ನಾಗರ, ವೇಸರವೆಂಬ ಮೂರು ಪ್ರಭೇದಗಳೇ ಮೂಲಭೂತವಾಗಿ ಉಳಿಯುವುವು ಎಂದು ತಿಳಿಸುತ್ತಾರೆ. ಇಲ್ಲಿ ರಾಮಚಂದ್ರರಾಯರ ಚಿಕಿತ್ಸಾತ್ಮಕ ದೃಷ್ಟಿ ಹಾಗೂ ವಸ್ತುನಿಷ್ಠವಾದ ತರ್ಕಶುದ್ಧಿ ಸ್ಪಷ್ಟವಾಗಿ ಕಾಣುವುದು. ಸಾಂಪ್ರದಾಯಿಕವಾಗಿ ಬಂದ ಶಾಸ್ತ್ರಗಳ ಬಗೆಗೆ ರಾಯರಿಗೆ ಗೌರವವಿದ್ದರೂ ಸಹ ಅವುಗಳಲ್ಲಿ ಕಾಣುವ ಮಿತಿಗಳನ್ನು, ಅತಿವ್ಯಾಪ್ತಿ-ಅವ್ಯಾಪ್ತಿ ದೋಷಗಳನ್ನು ವಿಶ್ಲೇಷಿಸುವರು. ಶ್ರದ್ಧಾಜಾಡ್ಯವಿಲ್ಲದ ತಮ್ಮ ಅಧ್ಯಯನದಿಂದ ಶಾಸ್ತ್ರಗಳ ಸಾರವನ್ನೇ ಸಂಗ್ರಹವಾಗಿ ಈ ಪುಸ್ತಿಕೆಗಳಲ್ಲಿ ನೀಡಿರುವರು. ಇದೇ ದೃಷ್ಟಿಯು ಅವರು ರಚಿಸಿರುವ ವಿವಿಧ ಕೋಶಗಳಲ್ಲಿ ಕಂಡುಬರುತ್ತದೆ.
ದೇವಾಲಯದ ವಾಸ್ತುವಿನ ಸಾಂಕೇತಿಕತೆಯ ಬಗೆಗಿನ ರಾಯರ ಮಾತುಗಳು ಗಮನಾರ್ಹವಾಗಿವೆ –
“ಭಾರತೀಯ ದೇವಾಲಯಗಳ ಹಿನ್ನೆಲೆಯಲ್ಲಿರುವ ಸಂಕೇತ ಗಂಭೀರವಾದುದು, ಗೂಢವಾದುದು, ಎಲ್ಲ ಕಾಲಕ್ಕೂ ಸಮರ್ಪಕವಾದುದು. ಈ ಸಂಕೇತಗಳ ಜಾಲ ಅಭಿವ್ಯಕ್ತಿಯನ್ನು ತಳೆಯುವುದು ವಿವಿಧ ವಿನ್ಯಾಸದ ಪ್ರಾದೇಶಿಕ ವಿಕ್ಷೇಪಗಳಲ್ಲಿ, ಕಟ್ಟಡಗಳ ಭೌತಿಕ ರೂಪದಲ್ಲಿ, ಅಲಂಕರಣದ ಹರವಿನಲ್ಲಿ, ಕುಶಲ ಕಲೆಗಳ ಕೈವಾಡದಲ್ಲಿ. ಹೊರಗಿನ ಮತ್ತು ಮೂರ್ತವಾದ ಅಭಿವ್ಯಕ್ತಿಯನ್ನು ತಳೆದ ಸಂಕೇತಗಳನ್ನೇ ಆಯಾ ಕಾಲಗಳ ಮತ್ತು ಪ್ರದೇಶಗಳ ಉಪಾಧಿಯಿಂದ ಪ್ರಕಾರಗಳಾಗಿ ವಿಭಜನೆಮಾಡುತ್ತೇವೆ.’’
ವೇದಾಂತಪ್ರಸಿದ್ಧವಾದ ಊರ್ಧ್ವಮೂಲ-ಅಧಶ್ಶಾಖವಾದ ವೃಕ್ಷದ ಪ್ರತಿಮೆಯು ದೇವಾಲಯದ ವಿಮಾನದಲ್ಲಿ ಅನುವಾದಗೊಂಡಿರುವುದರ ಬಗೆಗೆ ಹೀಗೆ ತಿಳಿಸುತ್ತಾರೆ –
“ಭಾರತೀಯ ದೇವಾಲಯಗಳಿಗೂ ಮರಗಳಿಗೂ ನಂಟು ಬಹಳ ಹಳೆಯದು, ಹರಡಿರುವಂಥದು. ದೇವಾಲಯವೇ ಜೀವನವೃಕ್ಷದ ಪ್ರತೀಕ ಎಂದರೂ ಸಲ್ಲುತ್ತದೆ. ಗರ್ಭಗೃಹದ ಬೇರುಗಳು ಭೂಮಿಯೊಳಗಿದ್ದು ರೆಂಬೆಕೊಂಬೆಗಳು ಮೇಲೆ ಕಾಣುವ ಸಾಮಾನ್ಯವಾದ ಮರವಾದರೆ, ಗರ್ಭಗೃಹದ ಮೇಲಿರುವ ವಿಮಾನ ಬುಡಮೇಲಾದ ಮರದ ಸಂಕೇತ.’’
ಅಂತೆಯೇ ವಿಮಾನದ ಮೇಲ್ಭಾಗವು ಅಗ್ನಿಯ ಸಂಕೇತವಾದರೆ ಬುನಾದಿಯು ಪೃಥ್ವೀತತ್ತ್ವವನ್ನು ಪ್ರತಿನಿಧಿಸುತ್ತದೆ; ಗರ್ಭಗೃಹದ ವಿವಿಧ ಭಾಗಗಳು ಪಾಂಚಭೌತಿಕವಾದ ಇಡಿಯ ವಿಶ್ವವನ್ನೇ ಪ್ರತಿಬಿಂಬಿಸುತ್ತದೆ ಎಂದು ತೋರ್ಪಡಿಸುತ್ತಾರೆ. ದೇವಾಲಯವಾಸ್ತುವಿಗೂ ಮಾನವನ ಜಾಗ್ರತ್-ಸ್ವಪ್ನ-ಸುಷುಪ್ತಿ-ತುರೀಯ ಅವಸ್ಥೆಗಳಿಗೂ ಸಮೀಕರಣವನ್ನು ರಾಯರು ಸುಂದರವಾಗಿ ತೋರಿಸುವರು. ಹಾಗೆಯೇ ಪಂಚಕೋಶಗಳಿಗೂ ಮಾನವನ ದೇಹದ ವಿವಿಧ ಅಂಗಗಳಿಗೂ ದೇವಾಯಲದ ವಾಸ್ತುವಿಗೂ ಇರುವ ಸಂಬಂಧವನ್ನು ಅವರು ನಿರೂಪಿಸಿರುವ ಬಗೆ ವಿಶೇಷವಾದುದು.
ದೇವಾಲಯದ ವಿವಿಧ ಭಾಗಗಳಲ್ಲಿ ಕಾಣುವ ಮೇಲ್ಮುಖವಾದ ಹಾಗೂ ಕೆಳಮುಖವಾದ ದಳಗಳ ಸಾಂಕೇತಿಕತೆಯನ್ನು ವಿವರಿಸುತ್ತ, ಮೇಲ್ಮುಖವಾಗಿರುವ ದಳಗಳು ಸೂರ್ಯನ ಹಾಗೂ ದೈವೀ ಅನುಗ್ರಹದ ದ್ಯೋತಕವೆಂದು, ಕೆಳಮುಖವಾದ ದಳಗಳು ಚಂದ್ರನ ಹಾಗೂ ಪುರುಷಪ್ರಯತ್ನದ ಸೂಚಕವೆಂದೂ ತಿಳಿಸುತ್ತಾರೆ. ಈ ಅರ್ಥದಲ್ಲಿ ದೇವಾಲಯವು ದೈವೀ ಕೃಪೆ ಹಾಗೂ ಮಾನುಷಯತ್ನಗಳ ಸಮ್ಮೇನಳನವೆಂದು ಸ್ಪಷ್ಟಪಡಿಸುತ್ತಾರೆ. ಮನುಷ್ಯನ ದೇಹರಚನೆ ಮತ್ತು ದೇವಾಲಯದ ವಾಸ್ತುವಿನ್ಯಾಸಗಳ ನಡುವೆ ಇರುವ ಸಾದೃಶ್ಯವೂ ಇದನ್ನೇ ತೋರಿಸುತ್ತದೆ.
ದೇವಾಲಯಗಳಲ್ಲಿ ಕಾಣುವಂತಹ ಬಲಿಪೀಠದ ಬಗೆಗೆ ಚರ್ಚಿಸುತ್ತ ರಾಯರು ಅದು ಪ್ರಾಚೀನ ವೈದಿಕಯಜ್ಞದ ಯೂಪದ ಅವಶೇಷವೆಂದು ಊಹಿಸುತ್ತಾರೆ. ಹಳೆಯ ದೇವಸ್ಥಾನಗಳಲ್ಲಿ ಬಲಿಪೀಠಗಳು ಒರಟು ಕಲ್ಲುಗಂಬವಾಗಿರುವುದು ಇದಕ್ಕೆ ಪುರಾವೆಯೆಂದು ಸೂಚಿಸುತ್ತಾರೆ. ರಾಯರ ಈ ಊಹೆಗೆ ಆಧಾರವಿಲ್ಲದಿಲ್ಲ. ಪ್ರಾಚೀನ ಕಾಲದ ಕಾಷ್ಠನಿರ್ಮಿತ ಯಜ್ಞಮಂಟಪಗಳೇ ಕಾಲಕ್ರಮೇಣ ಕಲ್ಲಿನ ದೇವಸ್ಥಾನಗಳಾದವು ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ.
ಮಾನವನಿರ್ಮಿತ ದೇವಾಲಯಗಳಲ್ಲದೆ ದೇವಭೂಮಿಯೆಂದೇ ಪ್ರಖ್ಯಾತವಾದ ಭಾರತದಲ್ಲಿ ಇರುವ ಅನೇಕ ತೀರ್ಥಕ್ಷೇತ್ರಗಳ ಬಗೆಗೆ ರಾಯರು ಉಲ್ಲೇಖಿಸುತ್ತಾರೆ. ಇಂತಹ ಕ್ಷೇತ್ರಗಳು ಜಾಗ್ರತವಾದವು ಹಾಗೂ ದೇವರ ಸಾನ್ನಿಧ್ಯ ಅಲ್ಲಿ ತಾನೇ ತಾನಾಗಿ ಮೂಡಿಕೊಂಡಿರುವುದೆಂಬ ಪುರಾಣಪ್ರತೀತಿ ಇರುವುದನ್ನು ರಾಯರು ತಿಳಿಸುತ್ತಾರೆ.
ಸಂಪ್ರದಾಯದಲ್ಲಿ ಶ್ರದ್ಧೆಯನ್ನು ಉಳ್ಳ ರಾಯರು ಲೋಕದಲ್ಲಿ ಕಾಣುವ ವಸ್ತುಸ್ಥಿತಿಗೆ ವಿಮುಖರಲ್ಲ. ಇದನ್ನು ಅವರ ಮಾತುಗಳಲ್ಲಿಯೇ ನಾವು ಗಮನಿಸಬಹುದು –
“ಭಗವತ್ಸಾನ್ನಿಧ್ಯವನ್ನು ಅನುಭವಿಸಲೆಂದೇ ಅಲ್ಲವೆ ಭಕ್ತನು ಗುಡಿಗೆ ಬರುವುದು? ಅಲ್ಲಿ ಪ್ರಾರ್ಥನೆ ಸಲ್ಲಿಸುವುದು ಗೌಣವಾದ ವಿವರ; ಪ್ರಾರ್ಥನೆಯನ್ನು ಎಲ್ಲಿಯಾದರೂ ಸಲ್ಲಿಸಬಹುದು. ಮೇಲಾಗಿ, ಈಗಿನ ಹೆಸರಾಂತ ದೇವಾಲಯಗಳಲ್ಲಿ ನೆಮ್ಮದಿಯಿಂದ ಪ್ರಾರ್ಥನೆ ಮಾಡುವುದು ಅಸಾಧ್ಯವೆಂದು ಅನುಭವವಿರುವ ಎಲ್ಲರೂ ಬಲ್ಲರು. ಆಡಂಬರದಲ್ಲಿ ಕೂಟದಲ್ಲಿ ಪ್ರಾರ್ಥನೆಗೆ ಅನುಕೂಲವಾದ ಮನೋಧರ್ಮ ಮೂಡುವುದು ಕಷ್ಟ. ಭಕ್ತನಿಗೆ ದೈವದ ಇರವನ್ನು ಅನುಭವಿಸುವ ಆಸಕ್ತಿಯಿರದಿದ್ದರೆ, ಗುಡಿಯ ಭೌತಿಕ ವಿವರಗಳನ್ನು ಮೀರಿ ಅವನು ಹೋಗಲಾರ; ಕಣ್ಣಿಗೆ ಕಾಣುವುದನ್ನು ದಾಟಿ ಹಾಯಲಾರ. ದೇವರನ್ನು ನಂಬಿದ ಮಾತ್ರಕ್ಕೆ, ಪ್ರಾರ್ಥನೆಯ ಅಗತ್ಯವನ್ನು ಮನಗಂಡಮಾತ್ರಕ್ಕೆ ಏನೂ ಸಿದ್ಧಿಯಾಗುವುದಿಲ್ಲ. ದೈವದ ಇರವನ್ನು ಗುಡಿಯಲ್ಲಿ ನೇರವಾಗಿ ಅನುಭವಿಸುವ ಸಾಮರ್ಥ್ಯವಿದ್ದರೆ ಗುಡಿ ಪವಿತ್ರವಾದ ಸನ್ನಿವೇಶವಾಗುತ್ತದೆ. ಇಲ್ಲವಾದರೆ ಗುಡಿಗೆ ಅರ್ಥವಾಗಲಿ, ಗುಡಿಯಿಂದ ಪ್ರಯೋಜನವಾಗಲಿ ಇರದು.’’
ಈ ಪುಸ್ತಿಕೆಗಳ ಕೊನೆಯಲ್ಲಿ ರಾಮಚಂದ್ರ ರಾಯರು ಹೇಳುವ ದೇವಾಲಯ ತತ್ತ್ವದ ಸಾರಸರ್ವಸ್ವವನ್ನು ಹಿಡಿದು ಇಡುತ್ತದೆ –
“ಮನುಷ್ಯನನ್ನೂ ದೈವೀಶಕ್ತಿಯನ್ನೂ ಒಟ್ಟಿಗೆ ಸೇರಿಸುವ ಹದ ಅದರಲ್ಲಿ (ದೇವಾಲಯದಲ್ಲಿ) ಇದೆ. ಮನುಷ್ಯನು ಪರದೈವದ ಅಸ್ತಿತ್ವವನ್ನು ತನ್ನಲ್ಲಿಯೇ ಕಂಡುಕೊಳ್ಳುವ, ಅನುಭವಿಸುವ ಸಾಧನಗಳಲ್ಲಿ ದೇವಾಲಯವೊಂದು.’’
ರಾಯರು ತಮ್ಮ ಈ ಎರಡು ಪುಸ್ತಿಕೆಗಳಲ್ಲಿ ಸಂಗ್ರಹವಾಗಿ ಹೇಳಿರುವ ಅಂಶಗಳನ್ನೇ ಇನ್ನಷ್ಟು ವಿವರಗಳೊಂದಿಗೆ, ಶಾಸ್ತ್ರವಾಕ್ಯಗಳ ಆಧಾರವನ್ನೂ ನೀಡಿ ದೇವಾಲಯಕ್ಕೆ ಸಂಬಂಧಪಟ್ಟಂತಹ ತಮ್ಮ ಇತರ ಸಂಪುಟಗಳಲ್ಲಿ ರಚಿಸಿರುವರು. Art and Architecture of Indian Temples ಎಂಬ ಶೀರ್ಷಿಕೆಯ ಮೂರು ಸಂಪುಟಗಳಲ್ಲಿ ಮೇಲ್ಕಂಡ ಅಂಶಗಳ ಜೊತೆಗೆ ಅನೇಕ ದೇವಾಲಯಗಳ ಹಾಗೂ ಮೂರ್ತಿಗಳ ಚಿತ್ರಗಳನ್ನೂ ರಾಯರೇ ರಚಿಸಿದ ರೇಖಾಚಿತ್ರಗಳನ್ನೂ ಕಾಣಬಹುದು. ರಾಯರ ರೇಖಾಚಿತ್ರಗಳನ್ನು ಗಮನಿಸಿದಾಗ ಅವರಿಗಿದ್ದ ತಾಲಮಾನಗಳ ಅರಿವು ಹಾಗೂ ಅದನ್ನು ಹಾಳೆಗೆ ಇಳಿಸುವ ಕೌಶಲ ಗೋಚರಿಸುವುದು. ರಾಯರು ಸುಂದರವಾದ ಸಾಂಪ್ರದಾಯಿಕ ಶೈಲಿಯ ಮೃಣ್ಮಯ ಮೂರ್ತಿಗಳನ್ನೂ ನಿರ್ಮಿಸುತ್ತಿದ್ದರೆಂದು ತಿಳಿಯುತ್ತದೆ.
ಮೇಲೆ ಹೇಳಿದ ಸಂಪುಟಗಳಿಗೆ ಸಂವಾದಿಯಾಗಿ ರಾಯರು ರಚಿಸಿದ Evolution of Mandala in Temple Architecture ಮತ್ತು Mandalas in Temple Worship ಎಂಬ ಗ್ರಂಥಗಳು ಯಜ್ಞಗಳ ಹಾಗೂ ದೇವಾಲಯಗಳ ಮಾತೃಕೆಗಳೆನಿಸಿದ ಮಂಡಲಗಳನ್ನು ಕುರಿತದ್ದಾಗಿವೆ. ಇವೆಲ್ಲದರ ಸಂಗ್ರಹದೊಂದಿಗೆ ಅನೇಕ ಹೊಳಹುಗಳನ್ನು ಒಳಗೊಂಡ ಮತ್ತೊಂದು ಪುಸ್ತಕ Indian Temple Traditions ಎಂಬ ಶೀರ್ಷಿಕೆಯುಳ್ಳದ್ದು. ಇದರಲ್ಲಿ ಮಾರ್ಗ-ದೇಶಿಗಳ ಸಮನ್ವಯವನ್ನು ನಿರೂಪಿಸಿರುವ ರಾಯರ ಸರ್ವಸಮದೃಷ್ಟಿಯನ್ನು ಕಾಣಬಹುದು. ಇದರೊಂದಿಗೆ ಸಾಂಪ್ರದಾಯಿಕ ಹಾಗೂ ಆಧುನಿಕ ದೃಷ್ಟಿಕೋನಗಳ ವಸ್ತುನಿಷ್ಠ ವಿಮರ್ಶೆಯನ್ನೂ ಕಾಣಬಹುದು. Vāstu-śilpa-kośa ಎಂಬ ಸರಣಿಯಲ್ಲಿ ಬಂದ ಮೂರು ಸಂಪುಟಗಳು ದೇವಾಲಯವಸ್ತುವಿಗೆ ಸಂಬಂಧಪಟ್ಟಂತೆ ವಿವಿಧ ಶಾಸ್ತ್ರಗಳಿಂದ ಸಂಗ್ರಹಿಸಿದ ವಿವರಗಳನ್ನು ಒಳಗೊಂಡಿವೆ. ಶಾಸ್ತ್ರಗಳ ಮೂಲವಾಕ್ಯಗಳನ್ನು ಉಲ್ಲೇಖಿಸುವುದರ ಜೊತೆಗೆ ರಾಯರು ರೇಖಾಚಿತ್ರಗಳ ಮೂಲಕ ದೇವಾಲಯದ ಅಂಗೋಪಾಂಗಗಳನ್ನೂ ಅವುಗಳ ಪ್ರಭೇದಗಳನ್ನೂ ಸುಂದರವಾಗಿ ನಿರೂಪಿಸುವರು.
* * *
ರಾಮಚಂದ್ರರಾಯರ ಮತ್ತೊಂದು ಮಹತ್ತ್ವಪೂರ್ಣ ಗ್ರಂಥ ‘ಮೂರ್ತಿಶಿಲ್ಪಿ: ನೆಲೆ-ಹಿನ್ನೆಲೆ’. ಈ ಪುಸ್ತಕದಲ್ಲಿ ರಾಯರು ತದನಂತರದ ವರ್ಷಗಳಲ್ಲಿ ಹೊರತಂದ ಅನೇಕ ದೇವತಾಕೋಶಗಳ ಮೂಲಮಾತೃಕೆಯನ್ನು ಕಾಣಬಹುದು. ಈ ಗ್ರಂಥವು ರಾಯರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನೂ ದೊರಕಿಸಿತು. ಈ ಪುಸ್ತಕಕ್ಕೆ ರಾಯರು ಬರೆದಿರುವ ಮೊದಲ ಮಾತುಗಳಲ್ಲಿಯೇ ಅವರ ಮನೋವೈಜ್ಞಾನಿಕ ಅಂತರ್ದೃಷ್ಟಿಯನ್ನು ಕಾಣಬಹುದು –
“ಒಬ್ಬ ವ್ಯಕ್ತಿಯು ಪಡೆದುಕೊಂಡ, ಅವನ ಅನುಭವದಲ್ಲಿ ಬಂದ, ಕಲ್ಪನೆಗಳಿಗಿಂತ ಇಡೀ ಸಮುದಾಯವು ಒಟ್ಟಾರೆ ಗಳಿಸಿಕೊಂಡ ಕಲ್ಪನೆಗಳು ಒಬ್ಬೊಬ್ಬ ವ್ಯಕ್ತಿಯಲ್ಲಿಯೂ ಕೆಲಸ ಮಾಡುವುದು ಮುಖ್ಯ. ಮನೋವಿಜ್ಞಾನ ಇದನ್ನು ‘ಸಾಮುದಾಯಿಕ ಸುಪ್ತಪ್ರಜ್ಞೆ’ (Collective Unconcious) ಎಂದು ನಿರ್ದೇಶಿಸುತ್ತದೆ – ನಮ್ಮ ಧಾರ್ಮಿಕ ವಿಧಿಗಳು ಮಾತ್ರವಲ್ಲ, ಸಾಮಾಜಿಕ ಕಟ್ಟುಕಟ್ಟಳೆಗಳೂ, ನೀತಿ ನಿಯಮಗಳೂ, ಆಟಪಾಟಗಳೂ, ಬಯಕೆಬಿಂಕಗಳೂ ಈ ತೆರೆಯ ಮರೆಯ ಕಲ್ಪನೆಗಳಿಂದ ಪ್ರಭಾವಿತವಾಗುತ್ತವೆ. ಕಲ್ಪನೆಗಳು ಪ್ರತಿಮೆ(image)ಗಳಂತೆ ಮೈದಳೆದು ಮನಸ್ಸಿನ ಪ್ರವೃತ್ತಿಗಳಿಗೆ ದಾರಿತೋರಿಸುತ್ತವೆ, ನಡೆನುಡಿಗಳಲ್ಲಿ ಮೂಡಿ ಬರುತ್ತವೆ.’’
ಈ ರೀತಿಯಾದ ಉಪೋದ್ಘಾತವಾಕ್ಯಗಳಿಂದ ಪ್ರಾರಂಭವಾಗುವ ಗ್ರಂಥದಲ್ಲಿ ಇರುವ ವಿಷಯಗಳು ಈ ರೀತಿಯಾಗಿವೆ – ಬದುಕಿನ ಬಯಕೆ, ಪೂಜೆ ಪುನಸ್ಕಾರಗಳು, ಪ್ರತಿಮಾಲಕ್ಷಣ, ಗಣಪತಿಯ ಗುಟ್ಟು, ಶಿವನ ಸ್ವಾರಸ್ಯ, ವಿಷ್ಣುವಿನ ವೈಶಿಷ್ಟ್ಯ, ಗ್ರಾಮದೇವತೆಗಳು, ಪಾರ್ಶ್ವದೇವತೆಗಳು, ಆಗಮಗಳು, ಆದಿವಾಸಿಗಳ ದೇವತೆಗಳು, ಶಬರಿಮಲೆಯ ಶಾಸ್ತ, ಅಷ್ಟದಿಕ್ಪಾಲಕರು, ತುಳುನಾಡಿನ ದೈವಗಳು, ಕೃಷ್ಣನ ಕಲ್ಪನೆ, ಜೈನರ ಕೊಡುಗೆ, ಜಗನ್ನಾಥಮೂರ್ತಿಗಳು, ಕಾಳೀಪೂಜೆ ಇತ್ಯಾದಿ.
ಭಾರತೀಯ ದೇವತಾಪ್ರತಿಮೆಗಳ ಲಕ್ಷಣವನ್ನು ಹೇಳಲು ಹೊರಟ ರಾಯರು ಮೂಲಭೂತವಾಗಿ ಗಮನಿಸುವ ಅಂಶಗಳೇ ಸ್ವಾರಸ್ಯಕರವಾಗಿವೆ –
“ನಮ್ಮ ದೇಶದ ದೇವತಾಮೂರ್ತಿಗಳಲ್ಲಿ ಎದ್ದು ಕಾಣುವ ವಿವರವೆಂದರೆ ಅವುಗಳ ಅಪ್ರಾಕೃತ ಮತ್ತು ಅಸ್ವಾಭಾವಿಕ ಸ್ವರೂಪ. ಪ್ರಾಣಿಯ ತಲೆ, ಮನುಷ್ಯನ ಮೈ, ಅನೇಕ ಕೈಗಳು, ಹಲವಾರು ತಲೆಗಳು; ಚಿತ್ರವಿಚಿತ್ರ ಭಂಗಿಗಳು; ಅಸಂಗತವೆನಿಸುವ ವಾಹನಗಳು, ಅರ್ಥವಿಲ್ಲದ ಆಯುಧಗಳು, ಅತಿರೇಕ ಆಭರಣಗಳು, ವಿಕಾರ ರೂಪಗಳು – ಇವೆಲ್ಲವನ್ನೂ ನಮ್ಮ ಪ್ರತಿಮೆಗಳಲ್ಲಿ ಕಾಣಬಹುದು. ಇದನ್ನು ಕಂಡು ಬೆರಗಾದ, ಹೇಸಿದ ಪರದೇಶದ ಪಂಡಿತರಿದ್ದಾರೆ, ನಾಚಿಕೊಂಡ ದೇಶೀಯರಿದ್ದಾರೆ. ಇದನ್ನು ಕಲೆಯ ಅತಿಮಾರ್ಗಪ್ರವೃತ್ತಿ ಎನ್ನುವುದೇ? ಧಾರ್ಮಿಕ ಮನೋವೃತ್ತಿಯ ಅಭಿವ್ಯಕ್ತಿ ಎನ್ನುವುದೇ? ಬರಿಯ ಆಭಾಸವಾಗಿದ್ದರೆ, ಏನೊಂದೂ ಅರ್ಥವಾಗಲಿ ಪ್ರಯೋಜನವಾಗಲಿ ಇಲ್ಲದಿದ್ದರೆ ಈ ಪ್ರತಿಮಾಪದ್ಧತಿ ಇಷ್ಟು ಕಾಲ ಉಳಿಯುತ್ತಿತ್ತೇ?’’
ಈ ಮಾತುಗಳಿಂದಲೇ ಪ್ರತಿಮೆಗಳಿಗಿರುವ ಗೂಢಾರ್ಥವನ್ನು ಧ್ವನಿಸುತ್ತಾರೆ.
ದೇವತಾಮೂರ್ತಿಗಳ ಉದ್ಭವ ಮತ್ತು ವಿಕಾಸವನ್ನು ರಾಯರು ವೈದಿಕ ಸಂಸ್ಕೃತಿಯಿಂದ ಪ್ರಾರಂಭ ಮಾಡಿ ಸೈಂಧವ ಸಂಸ್ಕೃತಿಯನ್ನು ಹಾಯ್ದು ಬಂದು, ಗುಪ್ತರ ಸ್ವರ್ಣಯುಗ, ರಾಷ್ಟ್ರಕೂಟ, ಪಲ್ಲವ, ಚೋಳ, ಹೊಯ್ಸಳ ಹಾಗೂ ವಿಜಯನಗರ ಸಾಮ್ರಾಜ್ಯದವರೆಗೆ ವಿಶ್ಲೇಷಿಸುತ್ತಾರೆ. ಪಾಶ್ಚಾತ್ಯಜಗತ್ತಿನೊಂದಿಗೆ ಅದರಲ್ಲೂ ಗ್ರೀಕರೊಂದಿಗೆ ಇದ್ದ ಸಂಪರ್ಕದಿಂದಾಗಿ ಭಾರತೀಯ ಮೂರ್ತಿಶಿಲ್ಪಗಳು ಪ್ರಭಾವಗೊಂಡ ರೀತಿಯನ್ನೂ ವಿವರಿಸುತ್ತಾರೆ. ಅಲ್ಲದೆ ಕಳೆದ ಎರಡು-ಮೂರು ಶತಮಾನಗಳಲ್ಲಿ ವಿಶೇಷತಃ ಮೈಸೂರು ಪ್ರಾಂತದ ಚಿತ್ರಕಲೆಯಲ್ಲಿ ಬೆಳೆದುಬಂದ ವಿಶಿಷ್ಟ ರೂಪಗಳ ಬಗೆಗೂ ನಮ್ಮ ಗಮನವನ್ನು ಸೆಳೆಯುತ್ತಾರೆ. ಪ್ರತಿಯೊಂದು ಮೂರ್ತಿಯ ಆಂಗಿಕ ವಿನ್ಯಾಸ, ಹಸ್ತಮುದ್ರೆಗಳು, ಆಯುಧಗಳು, ವಾಹನಗಳು, ಆಹಾರ್ಯ, ಬಣ್ಣ ಮುಂತಾದ ವಿವರಗಳ ಸಾಂಕೇತಿಕತೆಯನ್ನು ಕಾವ್ಯಮಯವಾಗಿಯೂ ಹೃದಯಸ್ಪರ್ಶಿಯಾಗಿಯೂ ಪ್ರಸ್ತುತಪಡಿಸುತ್ತಾರೆ. ಉದಾಹರಣೆಗೆ ದಕ್ಷಿಣಾಮೂರ್ತಿಯ ಬಲಗೈಯಲ್ಲಿ ಕಾಣುವ ಚಿನ್ಮುದ್ರೆಯು ಸಂದರ್ಶನಮುದ್ರೆಯೆಂದು ಹೆಸರಾಗಿ ಜೀವಾತ್ಮ-ಪರಮಾತ್ಮರ ಸಂಯೋಗವನ್ನು ಸೂಚಿಸುತ್ತದೆಯೆಂದು ಹೇಳುತ್ತಾರೆ.
ಆಯುಧಗಳ ಮೀಮಾಂಸೆಯನ್ನು ಮಾಡುವ ಸಂದರ್ಭದಲ್ಲಿ ರಾಯರು ಪ್ರಾಸಂಗಿಕವಾಗಿ ಸಾಂಪ್ರದಾಯಿಕ ಶಿಲ್ಪಗಳ ಸೌಂದರ್ಯವಿಮರ್ಶೆಯನ್ನೂ ಮಾಡುತ್ತಾರೆ. ಉದಾಹರಣೆಗೆ, ಹೊಯ್ಸಳ ಶಿಲ್ಪಗಳಲ್ಲಿ ಕಂಡುಬರುವ ಸೂಕ್ಷ್ಮವೂ ವಿಪುಲವೂ ಆದ ಅಲಂಕರಣದಿಂದಾಗಿ ಆಯುಧಗಳ ಮುಖ್ಯ ಲಕ್ಷಣವೇ ಮುಳುಗಿಹೋಗುತ್ತದೆ ಎಂದು ವಿಶ್ಲೇಷಿಸುತ್ತಾರೆ. ಮತ್ತೊಂದೆಡೆ, ಔಚಿತ್ಯವನ್ನು ಮೀರಿ ಮಾಡಿರುವ ಅಲಂಕರಣದಿAದಾಗಿ ಹೊಯ್ಸಳರ ಆಯುಧಗಳ ಕ್ಷಾತ್ರಸತ್ತ್ವವೇ ಕುಗ್ಗಿದೆ ಎಂದು ಗಮನಿಸುತ್ತಾರೆ; ಆದರೆ ಪಲ್ಲವ ಶಿಲ್ಪಗಳಲ್ಲಿ ಆಯುಧನಿರೂಪಣೆಯು ನೈಜವೂ ಸರಳವೂ ಆಗಿರುವುದನ್ನು ಉಲ್ಲೇಖಿಸುತ್ತಾರೆ. ಇದೇ ರೀತಿಯಲ್ಲಿ ಪಲ್ಲವರ ಕಾಲದಲ್ಲಿ ಇದ್ದ ವಿಷ್ಣುಮೂರ್ತಿಗಳ ಶಂಖ-ಚಕ್ರಗಳ ಸರಳತೆಯ ಮುಂದುವರಿದ ರೂಪವೆಂಬಂತೆ ಚೋಳರ ಕಾಲದಲ್ಲಿ ಅವುಗಳಿಗೆ ಜ್ವಾಲೆಗಳನ್ನು ಅಳವಡಿಸುತ್ತಾರೆ; ಹಾಗೆಯೇ ಆಯುಧಗಳನ್ನು ಹಿಡಿಯುವ ಹಸ್ತವಿನ್ಯಾಸದಲ್ಲಿಯೂ ಕಾಲಕ್ರಮದಲ್ಲಿ ಮಾರ್ಪಾಟು ಒದಗಿತೆಂದು ಹೇಳುತ್ತಾರೆ. ಇಂತಹ ವಿವರಗಳು ರಾಯರ ಸೂಕ್ಷ್ಮದೃಷ್ಟಿಯನ್ನೂ ವ್ಯುತ್ಪತ್ತಿಯ ಹರಹನ್ನೂ ನಿದರ್ಶಿಸುತ್ತವೆ. ಆಯುಧಗಳನ್ನು ಹಿಡಿಯುವ ರೀತಿ ಅಸ್ವಾಭಾವಿಕವೆನಿಸಿದರೂ ಮೂರ್ತಿಲಕ್ಷಣದಲ್ಲಿ ಈ ಲೀಲಾವಿನ್ಯಾಸವು ಸಮಂಜಸವಾಗಿಯೇ ಕಾಣುತ್ತದೆ ಎಂದು ರಾಯರು ನಿರೂಪಿಸುತ್ತಾರೆ. ಪರಮಾತ್ಮನಿಗೆ ದುಷ್ಟಸಂಹಾರವು ಲೀಲೆಯೇ ಸರಿ, ಆತನು ಮಾನವಯೋಧನಂತೆ ಪ್ರಯೋಗಮುದ್ರೆಯನ್ನು ಹಿಡಿದೇ ಸಂಹಾರಕಾರ್ಯವನ್ನು ಮಾಡಬೇಕಿಲ್ಲ ಎಂಬುದನ್ನು ಸೂಚಿಸುವಂತೆ ಶೈಲೀಕೃತ ಹಸ್ತಮುದ್ರೆಗಳನ್ನು ವಿಗ್ರಹಗಳಲ್ಲಿ ಕಾಣುತ್ತೇವೆ. ಹೀಗಿದ್ದರೂ ಮೂರ್ತಿಲಕ್ಷಣಗಳು ಲೋಕದಿಂದ ದೂರವಾದಷ್ಟೂ ರಸನಿಷ್ಪತ್ತಿಯ ಸಾಧ್ಯತೆ ಕಡಮೆಯಾಗುವುದು.
ಗ್ರಾಮದೇವತೆಗಳ ಬಗೆಗೆ ಹೇಳುತ್ತ ರಾಮಚಂದ್ರರಾಯರು ದೇವತೆಗಳ ಹೆಸರಿನ ನಿಷ್ಪತ್ತಿಯನ್ನು ಊಹಿಸಿ, ಭಯ-ವಿಸ್ಮಯ-ಭಕ್ತಿಗಳು ಈ ತತ್ತ್ವಗಳನ್ನು ರೂಪಿಸಿರುವುದರ ಬಗೆಗೆ ಚರ್ಚಿಸುತ್ತಾರೆ. ರಾಯರು ತಮ್ಮ ಕೆಲವು ಬರವಣಿಗೆಗಳಲ್ಲಿ ಆರ್ಯರಿಗೂ ದ್ರಾವಿಡರಿಗೂ ಭೇದವನ್ನು ಹೇಳಿರುವಂತೆ ಕಂಡರೂ ತದನಂತರದ ಲೇಖನಗಳಲ್ಲಿ ಬೃಹದ್ಭಾರತಾದ್ಯಂತ ಪ್ರಾಚೀನ ಕಾಲದಿಂದಲೂ ಹರಡಿರುವ ಅದ್ವಿತೀಯ ಸಾಂಸ್ಕೃತಿಕ ಅಂಶಗಳನ್ನು ಸಾರುತ್ತಾರೆ. ಇದೇ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಹಾಗೂ ಬುಡಕಟ್ಟುಗಳಲ್ಲಿ ಕಾಣುವ ದೇವತಾರಾಧನೆ ಹಾಗೂ ವೈದಿಕ ಪರಂಪರೆಯ ಆಚರಣೆಗಳ ಸಮನ್ವಯವನ್ನು ತೋರಿಸುತ್ತಾರೆ. ಹೀಗೆ ತೋರಿಸುವಲ್ಲಿ ವೈದಿಕವೂ ನಿಜವಾದ ಅರ್ಥದಲ್ಲಿ ಜಾನಪದವೇ ಎಂದು ಸ್ಪಷ್ಟಪಡಿಸುತ್ತ, ಎಲ್ಲಮ್ಮ, ಅಣ್ಣಮ್ಮ, ಗಂಗಮ್ಮ, ಅಚ್ಚಮ್ಮ, ಸಿದ್ಧಮ್ಮ, ಮಾರಮ್ಮ, ಪುಟ್ಟಮ್ಮ, ತಿಮ್ಮಮ್ಮ, ಕಿರಾತಮ್ಮ, ಪೋದಿ, ಚಾವುಂಡಿ, ಮುಂತಾತ ದೇವತೆಗಳಿಗೂ ಪುರಾಣಗಳಲ್ಲಿ ಕಾಣುವ ನಗ್ನಶಬರಿ, ಪರ್ಣಶಬರಿ, ಅಪರ್ಣಾ, ನಗ್ನಿಕಾ, ದಂಡಿನೀ, ಕಾಮಚಾರಿಣೀ, ಮಾರ್ಗದಾಯಿನೀ ಎಂಬ ದೇವೀರೂಪಗಳಿಗೂ ಇರುವ ಸಾಮ್ಯವನ್ನು ನಿವೇದಿಸುತ್ತಾರೆ. ಅಷ್ಟೇ ಅಲ್ಲದೆ ಅಮೆರಿಕ, ಆಸ್ಟ್ರೇಲಿಯಾ, ಆಫ್ರಿಕಾ ಖಂಡಗಳ ಪ್ರಾಚೀನ ಸಂಸ್ಕೃತಿಗಳಲ್ಲಿಯೂ ಹಾಗೆಯೆ ಗ್ರೀಕರ ಅಭಿಜಾತ ಯುಗದಲ್ಲಿಯೂ ಇದ್ದ ಮಾತೃಕಾಪೂಜೆಯ ವೈಶಿಷ್ಟ್ಯವನ್ನು ಗಮನಿಸುತ್ತ ಈ ಪದ್ಧತಿಯು ಜಗತ್ತಿನಾದ್ಯಂತ ಹರಡಿದ್ದನ್ನು ನಿವೇದಿಸುತ್ತಾರೆ. ಪ್ರಕೃತಿಪೂಜೆ ಹಾಗೂ ಪಿತೃದೇವತೆಗಳ ಆರಾಧನೆ ಎಲ್ಲಾ ಪ್ರಾಚೀನ ಸಂಸ್ಕೃತಿಗಳಲ್ಲಿಯೂ ಇದ್ದದನ್ನು ನಾವು ಗಮನಿಸಬಹುದು. ಈ ಅರ್ಥದಲ್ಲಿ ಅವೆಲ್ಲವೂ ಸನಾತನವೇ. ಈ ಚರ್ಚೆಗೆ ಸಂಬಂಧಪಟ್ಟಂತೆಯೇ ಪುರಿಯ ಜಗನ್ನಾಥ ಹಾಗೂ ಬಂಗಾಳದ ದುರ್ಗಾಪೂಜೆಗಳ ಬಗೆಗೆ ವಿವರಿಸುತ್ತ ಅಲ್ಲಿ ಕಾಣುವ ಮಾರ್ಗ-ದೇಶಿಗಳ ಸಮನ್ವಯವನ್ನೂ ರಾಯರು ಸೂಚಿಸುತ್ತಾರೆ.
* * *
ಇದೇ ಗ್ರಂಥಕ್ಕೆ ಸಂಬಂಧಪಟ್ಟಂತೆ ಕಲ್ಪತರು ಸಂಶೋಧನಾ ಪ್ರತಿಷ್ಠಾನದ ಮೂಲಕ ರಾಮಚಂದ್ರರಾಯರು ಪ್ರಕಟಿಸಿದ ‘ದೇವತಾ-ರೂಪ-ಮಾಲಾ’ ಎಂಬ ಶೀರ್ಷಿಕೆಯ ಆಂಗ್ಲ ಸಂಪುಟಗಳನ್ನೂ ‘ಧ್ಯಾನಚಿತ್ರಾವಳಿ’ ಎಂಬ ಗ್ರಂಥವನ್ನೂ ಗಮನಿಸಬಹುದು. ಈ ಪುಸ್ತಕಗಳ ಹೆಚ್ಚಿನ ಭಾಗವು ‘ಮೂರ್ತಿ ಶಿಲ್ಪ: ನೆಲೆ-ಹಿನ್ನೆಲೆ’ಯಲ್ಲಿ ಪ್ರಕಟಗೊಂಡಿದ್ದರೂ ಕೆಲವೊಂದು ವೈಶಿಷ್ಟ್ಯಗಳನ್ನು ಹೊಂದಿವೆ. ದೇವತಾ-ರೂಪ-ಮಾಲೆಯಲ್ಲಿ ಚೀನಾ, ಜಪಾನ್, ಟಿಬೆಟ್ ಹಾಗೂ ಅನೇಕ ಆಗ್ನೇಯ ಏಷಿಯಾದ ಮೂರ್ತಿಲಕ್ಷಣಗಳನ್ನೂ ದೇವತಾಚಿತ್ರಗಳನ್ನೂ ವಿವರಿಸಲಾಗಿದೆ. ಧ್ಯಾನಚಿತ್ರಾವಳಿ ಗ್ರಂಥವು ವಿದ್ಯಾರ್ಥಿಗಳಿಗೂ ಸಂಶೋಧಕರಿಗೂ ಶಿಲ್ಪಿಗಳಿಗೂ ಬಹಳ ಪ್ರಯೋಜನಕಾರಿಯಾಗುವಂತಹದ್ದು. ಈ ಪುಸ್ತಕದಲ್ಲಿ ರೇಖಾಚಿತ್ರಗಳೊಂದಿಗೆ ರಾಯರು ತಾಲಮಾನಗಳ ವಿವರವನ್ನೂ ವಿವಿಧ ಆಂಗಿಕ ವಿನ್ಯಾಸಗಳನ್ನೂ ಆಯುಧ-ಆಭರಣಗಳ ಬಗೆಯನ್ನೂ ನಿರೂಪಿಸಿದ್ದಾರೆ. ಇಲ್ಲಿ ಸಕಲ ಮೂರ್ತಿಗಳಿಗೂ ಸಲ್ಲುವ ಮೂಲಭೂತ ನಿಯಮಗಳನ್ನು ಮೊದಲಿಗೆ ನೀಡಿ ತದನಂತರ ಪ್ರತ್ಯೇಕ ದೇವತೆಗಳ ಲಕ್ಷಣಗಳನ್ನೂ ಲೀಲಾಮೂರ್ತಿಗಳ ಲಕ್ಷಣಗಳನ್ನೂ ಅವುಗಳ ಧ್ಯಾನ್ಯಶ್ಲೋಕದೊಂದಿಗೆ ನೀಡಿರುವರು. ಈ ನಿಟ್ಟಿನಲ್ಲಿ ಶಾಸ್ತ್ರ ಮತ್ತು ಪ್ರತಿಭೆಗಳ ಬಗೆಗೆ ರಾಯರು ಹೇಳುವ ಮಾತುಗಳು ಗಮನಾರ್ಹವಾಗಿವೆ –
“ಎಲ್ಲವನ್ನೂ ಧ್ಯಾನಶ್ಲೋಕಗಳ ನಿರ್ದೇಶನದಂತೆ ಮಾಡುವುದಾದಲ್ಲಿ ಶಿಲ್ಪಿಯ ಕೆಲಸವೇನು, ಅವನ ಸ್ವಾತಂತ್ರ್ಯದ ಗತಿಯೇನೆಂಬ ಪ್ರಶ್ನೆ ಏಳಬಹುದು. ಶ್ಲೋಕಗಳ ವಿವರಗಳಿಗೆ ಹೊರತಾದ ವಿಗ್ರಹವನ್ನು ರಚಿಸಲೇಬಾರದೆಂಬ ನಿಯಮವನ್ನೇನೂ ವಿಧಿಸುತ್ತಿಲ್ಲ. ಶಿಲ್ಪಿಗೆ ಆ ಸಾಮರ್ಥ್ಯ, ಪ್ರತಿಭೆ, ವ್ಯುತ್ಪತ್ತಿ, ದರ್ಶನಗಳಿದ್ದರೆ ರಚಿಸಲೇನಡ್ಡಿಯಿಲ್ಲ.’’
ಧ್ಯಾನಚಿತ್ರಾವಳಿಯಲ್ಲಿ ಅನೇಕ ಮೂಲಗಳಿಂದ ಆಯ್ದ ಧ್ಯಾನಶ್ಲೋಕಗಳನ್ನು ಮೂಲ ಸಂಸ್ಕೃತಭಾಷೆಯಲ್ಲಿ ನೀಡುವುದರ ಜೊತೆಗೆ ಕನ್ನಡದಲ್ಲಿ ಅದರ ವಿಶ್ಲೇಷಣೆಯನ್ನೂ ತಾವೇ ಬಿಡಿಸಿದ ಚಿತ್ರಗಳನ್ನೂ (ಅನೇಕ ಚಿತ್ರಗಳನ್ನು ವಿನಯ ಹೆಗಡೆ ಅವರು ಬಿಡಿಸಿರುವರು) ಮೈಸೂರಿನ ಸಾಂಪ್ರದಾಯಿಕ ವರ್ಣಚಿತ್ರಗಳನ್ನೂ ನೀಡಿರುವುದು ವಿಶೇಷ. ರಾಯರ ಅಧ್ಯಯನದ ಹರಹನ್ನು ತಿಳಿಯಲು ಅವರ ಆಕರಗ್ರಂಥಗಳ ಪಟ್ಟಿಯನ್ನು ನೋಡಿದರೆ ಸಾಕು; ಓದುಗರು ನಿಬ್ಬೆರಗಾಗುತ್ತಾರೆ. ವಿವಿಧ ಆಗಮಗಳು, ಪುರಾಣಗಳು, ಮಯಮತ, ಮಾನಸಾರ, ಕಾಶ್ಯಪಶಿಲ್ಪಶಾಸ್ತ್ರ, ಶ್ರೀತತ್ತ್ವನಿಧಿ, ಮಹಾಲಕ್ಷ್ಮೀರತ್ನಕೋಶ, ರಾಮಾಷ್ಟೋತ್ತರ, ಲೀಲಾಶುಕನ ಕೃಷ್ಣಕರ್ಣಾಮೃತ, ಭಟ್ಟಭಾಸ್ಕರ ಭಾಷ್ಯ, ಶಾರದಾತಿಲಕತಂತ್ರ, ಸುದರ್ಶನಸಂಹಿತೆ, ಅಷ್ಟಾಕರೀಕಲ್ಪ, ಅಥರ್ವಣರಹಸ್ಯ, ಮುಂತಾದವುಗಳನ್ನು ರಾಯರು ಕೂಲಂಕಷವಾಗಿ ಗಮನಿಸಿರುವುದನ್ನು ಕಾಣಬಹುದು.
* * *
ಈ ಗ್ರಂಥದಲ್ಲಿ ಹೇಳಿರುವ ವಿಷಯಗಳ ವಿನಿಯೋಗವೋ ಎಂಬಂತೆ ಇರುವುದು ‘Mysore Chitramālā – Traditional Paintings’ ಎಂಬ ಸುಂದರವಾದ ಪುಸ್ತಕ. ಇಲ್ಲಿ ಮೈಸೂರು ಶೈಲಿಯ ಚಿತ್ರಗಳ ಸೌಂದರ್ಯಮೀಮಾಂಸೆಯೊಂದಿಗೆ ಕಥಾಪ್ರಸಂಗಗಳನ್ನು ಸೆರೆಹಿಡಿದಿರುವ ಚಿತ್ರಗಳ ಬಗೆಗೂ ಚರ್ಚಿಸುತ್ತಾರೆ. ಮೈಸೂರು ಶೈಲಿಯ ವೈಶಿಷ್ಟ್ಯ, ಅದಕ್ಕೆ ಸಿಕ್ಕಂತಹ ರಾಜಪೋಷಣೆ, ಆ ಕಾಲದ ಪ್ರಮುಖ ಕಲಾವಿದರು, ಶೈಲಿಯ ಉದ್ಭವ ಮತ್ತು ವಿಕಾಸ, ಅಲ್ಲಿ ಕಾಣುವ ಅಪರೂಪದ ಪ್ರಸಂಗಗಳೇ ಮುಂತಾದ ವಿವರಗಳನ್ನು ಈ ಪುಸ್ತಕದಲ್ಲಿ ಕಾಣಬಹುದು.
* * *
ಈ ಗ್ರಂಥಗಳಲ್ಲಿ ಗಣಪತಿಗೆ ಸಂಬಂಧಪಟ್ಟಂತೆ ಹೇಳಿರುವ ವಿಷಯದ ಸಂಗ್ರವನ್ನು ‘ಗಣಪತಿಯ ಕಲ್ಪನೆ’ ಎಂಬುದು ಸಣ್ಣದೊಂದು ಪುಸ್ತಿಕೆಯಲ್ಲಿ ಕಾಣಬಹುದು. ಇಲ್ಲಿ ಕೆಲವೊಂದು ಹೊಸದಾದ ಒಳನೋಟಗಳನ್ನೂ ರಾಯರು ನೀಡುತ್ತಾರೆ. ವೇದದಲ್ಲಿ ಗಣೇಶನ ಉಲ್ಲೇಖ, ಶಿವಪರಿವಾರಕ್ಕೂ ಗಣಪತಿಗೂ ಇರುವ ಸಂಬಂಧ, ಗಣೇಶನು ಗೌರೀಪುತ್ರನಾದ ಬಗೆ, ಅನೇಕ ವಿನಾಯಕರು ಸೇರಿ ಒಬ್ಬ ಗಣಪತಿಯಾದ ರೀತಿ, ವಿದ್ಯಾಗಣಪತಿ, ಮುಂತಾದ ವಿವರಗಳನ್ನು ಇಲ್ಲಿ ಕಾಣಬಹುದು. ರಾಯರು ಗಣೇಶನ ಆರಾಧನೆಯ ಹಿನ್ನೆಲೆಯಲ್ಲಿರಬಹುದಾದ ಆನೆಗಳ ಪೂಜೆ, ಋತುಚಕ್ರಕ್ಕೆ ಅನುಗುಣವಾದ ಕೃಷಿ, ಯಕ್ಷರ ಪೂಜೆ, ಮನುಷ್ಯನಿಗಿರುವ ವಿಘ್ನಗಳ ಭೀತಿ ಮುಂತಾದವುಗಳನ್ನು ಚರ್ಚಿಸುತ್ತಾರೆ. ಹಾಗೆಯೇ ಗಣಪತಿಯು ಏಕದಂತನಾದ ಕಥೆ, ಪಾರ್ವತಿಯ ಕುಮಾರನಾದ ಬಗೆ, ಶಿವಗಣಗಳ ಅಧಿಪತಿಯಾದ ರೀತಿ, ಮೂಲಾಧಾರಚಕ್ರಕ್ಕೆ ಅಧಿದೇವನಾದುದರ ರಹಸ್ಯ, ಆತನ ಮದುವೆಯ ಸಂಗತಿ ಮುಂತಾದವುಗಳ ಸಾಂಕೇತಿಕತೆಯನ್ನು ವಿಸ್ತಾರವಾಗಿ ಚರ್ಚಿಸುತ್ತಾರೆ. ಈ ಪುಸ್ತಿಕೆಯ ಅರ್ಧಭಾಗ ಕನ್ನಡ ಗದ್ಯವಾದರೆ ಉಳಿದ ಅರ್ಧಭಾಗದಲ್ಲಿ ರಾಯರು ಬಿಡಿಸಿದ ವಿವಿಧ ಗಣಪತಿಗಳ ರೂಪವಗಳನ್ನು ಕಾಣಬಹುದು. ವಿರಳವಾಗಿ ಕಾಣಿಸುವ ಗಣೇಶನ ರೂಪಗಳು ಹಾಗೂ ಲೀಲಾಮೂರ್ತಿಗಳನ್ನು ರಾಯರು ದಾಖಲಿಸಿರುವರು. ಇಲ್ಲಿ ಅಖಂಡ ಭಾರತದ ಆದ್ಯಂತ ಕಾಣುವ ರೂಪಗಳ ಸಂಗ್ರಹವೇ ಇದೆ. ತ್ರಿಪುರಾರಿ-ವರದಗಣಪತಿ (ರಂಜನ್ಗಾಂವ್), ಮಧುಕೈಟಭ-ವರದಗಣಪತಿ (ಸಿದ್ಧಟೇಕ್), ಮಯೂರೇಶ್ವರ ಗಣಪತಿ (ಮೋರ್ ಗಾಂವ್), ಡುಂಢೀಗಣಪತಿ (ಕಾಶೀ), ಅರ್ಭಕಗಣಪತಿ (ಪಿಳ್ಳೆಯಾರ್ಪಟ್ಟ), ಬ್ರಿಟಿಷ್ ಮ್ಯೂಸಿಯಂನಲ್ಲಿರುವ ಗಣಪತಿ, ಸಿಂಹಳದ ಹಾಗೂ ನೇಪಾಳದ ಗಣಪತಿಗಳು, ಚೀಣೀಶಿಲ್ಪದಲ್ಲಿ ಕಾಣುವ ಬಾಲಗಣಪತಿ, ಬೋರ್ನಿಯೋದ ಗುಹೆಯಲ್ಲಿ ದೊರೆತ ಗಣಪತಿ, ಬುದ್ಧ-ಗಣಪತಿ (ಬರ್ಮಾ), ಪ್ರಾಚೀನ ಆಲಬಾಸ್ಟರ್ ಗಣಪತಿ, ತುರ್ಕಿಸ್ತಾನ್ ನಲ್ಲಿ ಸಿಕ್ಕಂತಹ ಗಣಪತಿಯ ವರ್ಣಚಿತ್ರ, ಜಾವಾದಲ್ಲಿ ದೊರೆತ ಬಾರಾಗಣೇಶ (ಶಾಸನಯುತ), ಕಾಂಬೋಡಿಯಾ ದೇಶದ ದ್ವಿಭುಜಗಣಪತಿ, ಶಕ್ತಿಗಣಪತಿ, ವಾತಾಪಿಗಣಪತಿ, ಹೇರಂಬಗಣಪತಿ, ಉಚ್ಛಿಷ್ಟಗಣಪತಿ, ಜಪಾನಿನ ಕಾಂಗಿಟನ್ ಗಣಪತಿ, ಶಕ್ತಿಸಹಿತ ಹೇರಂಬ ಗಣಪತಿ – ಹೀಗೆ ಅನೇಕ ರೂಪಗಳ ಚಿತ್ರಗಳನ್ನು ನೀಡಿದ್ದಾರೆ. ಇವನ್ನು ನೋಡಿದರೆ ವಿಸ್ಮಯವಾಗುವುದು. ಇಷ್ಟೆಲ್ಲ ವಿಷಯಗಳನ್ನು ರಾಯರು ಅದು ಹೇಗೆ ಸಂಗ್ರಹಿಸಿದರೆಂದು ಅಚ್ಚರಿಯಾಗುವುದು.
* * *
ಆರು ಸಂಪುಟಗಳಲ್ಲಿ ಪ್ರಕಟಗೊಂಡಿರುವ ‘Pratima Kosha’ವು ರಾಯರ ಮತ್ತೊಂದು ಹಿರಿದಾದ ಕೊಡುಗೆ. ಇದರಲ್ಲಿ ಪೂಜಾರಾಧನೆ-ಪುರಾಣಾಗಮಗಳಲ್ಲಿ ಪ್ರಸ್ತುತವಾದ ದೇವತಾರೂಪವನ್ನು ಅಕಾರಾದಿಯಾಗಿ ನಿರೂಪಿಸಿದ್ದಾರೆ. ಈ ಸರಣಿಯಲ್ಲಿ ಮೂರ್ತಿರೂಪಗಳ ಹಿನ್ನೆಲೆಯ ಪೌರಾಣಿಕ ಕಥೆಗಳಿಗಿಂತಲೂ ಪ್ರತಿಮಾಲಕ್ಷಣದ ಮೇಲೆ ಅವಧಾರಣೆ ಹೆಚ್ಚಾಗಿರುವುದನ್ನು ಗಮನಿಸಬಹುದು. ವಸ್ತುತಃ ಈ ಸಂಪುಟಗಳಲ್ಲಿ ಪರಾಮರ್ಶನೆಗೆ ಒಳಗಾಗದ ದೇವತಾರೂಪವೇ ಇಲ್ಲವೆಂದರೆ ತಪ್ಪಾಗಲಾರದು. ನಿಜವಾದ ಅರ್ಥದಲ್ಲಿ ಇದು ಕೋಶವೇ ಆಗಿದೆ.
* * *
ರಾಯರು ರಚಿಸಿರುವ ದೇವತಾಸ್ವರೂಪ ಕೋಶಗಳು ಅನನ್ಯವಾದುವು. ಆಂಗ್ಲ ಭಾಷೆಯಲ್ಲಿ ಪ್ರಕಟಗೊಂಡಿರುವ ಈ ಸಂಪುಟಗಳು ಆಯಾ ದೇವತಾ ತತ್ತ್ವದ ರೂಪ-ಸ್ವರೂಪಗಳನ್ನು ವಿವರಿಸುವುದಲ್ಲದೆ ಅವುಗಳ ಪೂಜಾವಿಧಾನ, ಮಂತ್ರಗಳ ವಿವರ, ಆಗಮಾದಿ ಹಿನ್ನೆಲೆಯನ್ನು ಒಳಗೊಂಡಿರುವಂತಹವು. ಮೂರ್ತಿಶಿಲ್ಪಿ: ನೆಲೆ, ಹಿನ್ನೆಲೆ ಪುಸ್ತಕದ ವ್ಯಾಖ್ಯಾನಗಳಂತೆ ಇವು ತೋರುವವು. ಈ ಸರಣಿಯಲ್ಲಿ ಬಂದ ಪುಸ್ತಕಗಳು ಈ ರೀತಿಯಾಗಿವೆ: ಗಣೇಶ ಕೋಶ, ವಿಷ್ಣು ಕೋಶ, ಸಾಲಗ್ರಾಮ ಕೋಶ (ಎರಡು ಸಂಪುಟಗಳು), ದುರ್ಗಾ ಕೋಶ, ಲಲಿತಾ ಕೋಶ, ಹನುಮಾನ್ ಕೋಶ, ಶ್ರೀವಿದ್ಯಾ ಕೋಶ, ನವಗ್ರಹ ಕೋಶ (ಎರಡು ಸಂಪುಟಗಳು) ಮತ್ತು ಶಿವ ಕೋಶ (ಎರಡು ಸಂಪುಟಗಳು). ಕೋಶಗಳುದ್ದಕ್ಕೂ ರಾಯರ ಹೊಳಹುಗಳು ವಿಶೇಷವಾಗಿವೆ. ಅನೇಕ ಎಡೆಗಳಲ್ಲಿ ಆಗಮಸಂಪ್ರದಾಯಕ್ಕೂ ವೈದಿಕ ಪರಂಪರೆಗೂ ಇರುವ ಅವಿನಾಭಾವಸಂಬಂಧವನ್ನು ಮತ್ತೆ ಮತ್ತೆ ತೋರಿಸುತ್ತಾರೆ. ಶ್ರೀವಿದ್ಯಾಕೋಶದಲ್ಲಂತೂ ಶ್ರೀವಿದ್ಯೆಗೂ ವೇದಾಂತಕ್ಕೂ ಇರುವ ಸಂಬಂಧವನ್ನು ಖಚಿತಪಡಿಸುವ ರೀತಿ ಅಮೋಘವಾಗಿದೆ. ಶ್ರೀವಿದ್ಯೆಯಲ್ಲಿ ಕಂಡುಬರುವ ಲಲಿತೆಯೇ ವೇದಾಂತದ ಬ್ರಹ್ಮತತ್ತ್ವವೆಂದು ಸಿದ್ಧಪಡಿಸುತ್ತಾರೆ. ಜ್ಞಾನ-ಭಕ್ತಿಗಳ ಮಿಶ್ರಮಾರ್ಗವೆನಿಸಿದ ಶ್ರೀವಿದ್ಯೋಪಾಸನೆಯು ಕೊನೆಗೆ ನಮ್ಮ ಅಂತಃಕರಣಶುದ್ಧಿಯ ಸಾಧನವಾಗಬಲ್ಲದ್ದು ಎಂದು ನಿವೇದಿಸುತ್ತಾರೆ.
ರಾಯರು ರಚಿಸಿರುವ ಹನ್ನೆರಡು ಸಂಪುಟಗಳ ಆಗಮಕೋಶವು ಅತ್ಯಂತ ಬೆಲೆಯುಳ್ಳದ್ದು. ಈ ಪ್ರಮಾಣದ ಗುಣ-ಗಾತ್ರಗಳುಳ್ಳ ಆಕರಗ್ರಂಥವು ಅನ್ಯತ್ರ ದುರ್ಲಭವೆಂಬುದನ್ನು ನೆನೆದಾಗ, ರಾಯರು ಏಕಾಂಗಿಯಾಗಿ ಮಾಡಿದ ವಿದ್ವತ್ಸಾಹಸ ವಿದ್ವಜ್ಜನರನ್ನೂ ಬೆರಗಾಗಿಸುತ್ತದೆ. ಈ ಸಂಪುಟಗಳಲ್ಲಿ ಆಗಮಗಳ ಸಾಮಾನ್ಯ ಪರಿಚಯ, ಶೈವಾಗಮಗಳು, ವೈಷ್ಣವಾಗಮಗಳು, ಶಾಕ್ತಾಗಮಗಳು, ಮುದ್ರೆಗಳು, ದೇವಾಲಯನಿರ್ಮಾಣ, ಪ್ರತಿಷ್ಠಾಪನೆ, ಪೂಜಾವಿಧಿಗಳು, ಉತ್ಸವಸಂಪ್ರದಾಯ, ಮೂಲಬೇರದ ವೈವಿಧ್ಯ, ಇವೆಲ್ಲದ ಹಿನ್ನೆಲೆಯ ತತ್ತ್ವ ಮುಂತಾದವುಗಳ ಕುರಿತಾದ ವಿವೇಚನೆಯನ್ನು ಒದಗಿಸಿದ್ದಾರೆ.
* * *
ಇಷ್ಟರವರೆಗೆ ಉಲ್ಲೇಖಿಸಿದ ರಾಯರ ಗ್ರಂಥಗಳಲ್ಲಿ ಹೆಚ್ಚಿನವು ಶಾಸ್ತ್ರೀಯ ಅಂಶಗಳನ್ನು ಒಳಗೊಂಡಿರುವುದಾದರೆ, ಅವರ ‘ತಿರುಪತಿ ತಿಮ್ಮಪ್ಪ’ ಎಂಬ ಗ್ರಂಥವು ಅವರ ಹೃದಯಾಳದಿಂದ ಬಂದಂತಹ ಕಾವ್ಯಮಯವಾದ ಗ್ರಂಥವೆನ್ನಬೇಕು. ಇದರ ಸ್ವಲ್ಪ ವಿಸ್ತೃತ ರೂಪವನ್ನೇ ಅವರ ‘The Hill-shrine of Vengadam’ ಎಂಬಲ್ಲಿ ಕಾಣಬಹುದು. ಆದರೂ ಮೂಲ ಕನ್ನಡದಲ್ಲಿ ಕಾಣುವ ನೈಜತೆ ಹಾಗೂ ಭಾವನಿರ್ಭರತೆ ಆಂಗ್ಲಕೃತಿಯಲ್ಲಿ ಸ್ವಲ್ಪ ಕಡಮೆಯಾಗಿದೆ ಎನ್ನಬೇಕು. ತಿಮ್ಮಪ್ಪನ ಜಾನಪದ-ಪೌರಾಣಿಕ ಹಿನ್ನೆಲೆ, ದೇವಾಲಯದ ಇತಿಹಾಸ, ವಿಕಾಸ, ವಾಸ್ತುವಿವರಗಳು, ಉತ್ಸವಗಳು, ಪರಿವಾರದೇವತೆಗಳು – ಮುಂತಾದ ಮಾಹಿತಿಯನ್ನು ಈ ಪುಸ್ತಕವು ಹೊಂದಿದೆ. ಈ ನಿಟ್ಟಿನಲ್ಲಿ ಇದು ಎಲ್ಲ ರೀತಿಯಿಂದಲೂ ಪರಿಪೂರ್ಣವಾದ ಗ್ರಂಥವೆನ್ನಬೇಕು. ಇಷ್ಟು ವಿಸ್ತಾರವಾಗಿ ಅಧಿಕೃತವಾದ ಮಾಹಿತಿಯನ್ನು ಉಳ್ಳ, ಭಾವ-ಬುದ್ಧಿಗಳಿಗೆ ಮುಟ್ಟುವಂತಹ ಗ್ರಂಥ ಬೇರೆ ಯಾವ ದೇವಾಲಯದ ಬಗೆಗೂ ಕನ್ನಡ ಭಾಷೆಯಲ್ಲಿ ಇಲ್ಲ ಎಂದರೆ ತಪ್ಪಾಗಲಾರದು. ರಾಯರ ಮಾತಿನಲ್ಲೇ ಹೇಳುವುದಾದರೆ, “ತಿರುಪತಿ ತಿಮ್ಮಪ್ಪ ನೂರಾರು ವರ್ಷಗಳಿಂದ ಭಾರತೀಯ ಸಂಸ್ಕೃತಿಪ್ರವಾಹದ ಒಂದು ಪ್ರಧಾನ ಸ್ರೋತವೆನಿಸಿದ್ದಾನೆ.’’
ಪುಸ್ತಕದ ಪ್ರಸ್ತಾವನೆಯಲ್ಲಿಯೇ ರಾಯರು ಮಾಡುವ ಈ ಕೆಳಕಂಡ ನಿವೇದನೆ ಯಾವುದೇ ದೇವಾಲಯದ ಬಗ್ಗೆ ಸಂಶೋಧನೆಯನ್ನು ಮಾಡುವವರಿಗೆ ಇರಲೇಬೇಕಾದ ಮನೋಧರ್ಮವನ್ನು ಸೂಚಿಸುತ್ತಾರೆ –
“ಇತಿಹಾಸಕ್ಕೆ ಒಪ್ಪಾಗಿ, ಆಗಮಕ್ಕೆ ಓರಣವಾಗಿ, ಜಾನಪದ ನೆಲೆಗೆ ಅನುಕೂಲವಾಗಿ, ಸಾಹಿತ್ಯಕ್ಕೆ ಹೊಂದಿಕೊಂಡಂತೆ ಬೆಟ್ಟ-ಗುಡಿ-ದೈವ – ಈ ತ್ರಿಪುಟಿಯನ್ನು ಪರಿಶೀಲಿಸಬೇಕಾದ ಅಗತ್ಯವಿದೆ. ಸ್ಪಷ್ಟವಾದ, ಸಾರ್ಥಕವಾದ ಒಂದು ಚೌಕಟ್ಟನ್ನು ಒದಗಿಸಬೇಕಾಗಿದೆ.’’
ತಿರುಮಲೆಯ ಬಗೆಗೆ ಹೇಳುತ್ತ ರಾಯರು,
“ಬೆಟ್ಟವನ್ನೇರಿಬಿಟ್ಟರೆ ಅದನ್ನು ಗೆದ್ದುಕೊಂಡಂತಾದೀತೆ? ಗೆಲುವೆಂಬುದು ಇಲ್ಲಿ ಸಲ್ಲುವ ಭಾವನೆಯಲ್ಲ. ನಾವು ಬೆಟ್ಟವನ್ನು ಕಾಣುವುದು ಭಕ್ತಿಯಿಂದ. ಬೆಟ್ಟವೆಂದರೆ ದೈವದ ಸಾನ್ನಿಧ್ಯ; ಅದು ದೈವದ ಅದ್ಭುತ, ಅಪೂರ್ವ, ವಿಚಿತ್ರ ಲೀಲೆಯ ಪ್ರತೀಕ. ಅಲ್ಲಿ ನಾವು ನೋಡುವುದು ನಿಸರ್ಗದ ಸೌಂದರ್ಯವನ್ನು, ಧರ್ಮದ ನೆಲೆಯನ್ನು; ಮನುಷ್ಯನ ಭಾವನೆಗಳು ತಿಳಿಯಾಗುವುದನ್ನು.’’ ಎಂದು ಸ್ಪಷ್ಟಪಡಿಸುತ್ತಾರೆ. ಈ ವಾಕ್ಯಗಳಲ್ಲಿಯೇ ಆಧ್ಯಾತ್ಮಿಕ ಜೀವನಕ್ಕೆ ಶ್ರುತಿಯಾದವರ ಮನೋಧರ್ಮಕ್ಕೂ ಬರಿಯ ಲೌಕಿಕ ಪ್ರಯೋಜನವನ್ನೇ ಕಾಣುವವರ ಮನೋಧರ್ಮಕ್ಕೂ ಇರುವ ವ್ಯತ್ಯಾಸವನ್ನು ಧ್ವನಿಸುತ್ತಾರೆ. ಭಾರತೀಯರಿಗೆ ಬೆಟ್ಟವೆಂಬುದು ಬರಿಯ ಭೌತಿಕ ವಸ್ತುವಲ್ಲ; ಅದೊಂದು ಭಾವನಾತ್ಮಕ ಸತ್ಯ, ಆಧ್ಯಾತ್ಮಿಕ ಪ್ರತೀಕ. ಹಿರಿದಾದುದ್ದಕ್ಕೆ ಮನಸೋಲುವುದೇ ಭಾರತೀಯ ಮನೋಧರ್ಮ; ಅದನ್ನು ಮೆಟ್ಟಿನಿಲ್ಲಬೇಕೆಂಬುವುದಲ್ಲ.
ತಿರುಪತಿಯ ತಿಮ್ಮಪ್ಪನಷ್ಟೇ ಮನಸೆಳೆಯುವುದು ರಾಯರ ಬರವಣಿಗೆ. ಅವರ ಮನೆಯ ದೇವರೂ ಈತನೇ ಆದುದರಿಂದ ಅವರು ಅದೊಂದು ವಿಶೇಷವಾದ ಉತ್ಸಾಹದಿಂದ ಬರೆದಿರುವುದನ್ನು ಕಾಣಬಹುದು. ಅವರೇ ಹೇಳುವಂತೆ ಐವತ್ತು ವರ್ಷಗಳಿಗೂ ಹೆಚ್ಚಿನ ಅಧ್ಯಯನವನ್ನು ಈ ಒಂದು ದೇವಸ್ಥಾನಕ್ಕಾಗಿಯೇ ಮಾಡಿರುವರು. ಐತಿಹಾಸಿಕವಾಗಿ ಇಲ್ಲಿಯ ಮೂಲಮೂರ್ತಿಯು ಶಿವನೋ ಹರಿಹರನೋ ಸುಬ್ರಹ್ಮಣ್ಯನೋ ದುರ್ಗೆಯೋ ವೀರಭದ್ರನೋ ಅಥವಾ ವಿಷ್ಣುವೋ ಎಂಬ ಕುತೂಹಲ ಅವರಿಗೆ ಇದ್ದದ್ದಾದರೂ ಅದು ಸಲ್ಲದ ಕುತೂಹಲವೆಂದು ಅವರ ತಂದೆ ಎಚ್ಚರಿಸಿದ್ದನ್ನು ರಾಮಚಂದ್ರರಾಯರು ನೆನೆಯುತ್ತಾರೆ. ಮೂರ್ತಿಯು ದೇವರಾಗುವುದು ಭಕ್ತನ ಭಾವನೆಯಿಂದಾಗಿ ಎಂದು ಧ್ವನಿಸುತ್ತಾರೆ. ಬೌದ್ಧಿಕವಾದ ಚರ್ಚೆಗಳೆಲ್ಲವೂ ಭಾವದ ಮುಂದೆ ಸೋಲುತ್ತವೆ ಎಂಬುವ ತಾತ್ಪರ್ಯ. ಅವರ ತೀರ್ಥರೂಪರ ಎಚ್ಚರದಿಂದಾಗಿ ರಾಯರು “ಈಗ ಅದು (ಮೂಲದೇವರು ಯಾರು ಎಂಬ ಕುತೂಹಲವು) ಸಮಸ್ಯೆಯೆಂದು ನನಗೆ ತೋರುತ್ತಿಲ್ಲ’’ವೆಂದು ನಿವೇದಿಸುತ್ತಾರೆ.
* * *
ರಾಯರ ಬರವಣಿಗೆಗಳಲ್ಲಿ ಅನೇಕ ವಾಕ್ಯಗಳು ಸೂತ್ರಪ್ರಾಯವಾಗಿಯೂ ಸುಭಾಷಿತಗಳಂತೆಯೂ ಬರುತ್ತವೆ. ಅವರಿಗಿದ್ದ ಜಗಜ್ಜೀವನದ ಬಗೆಗಿನ ಅಂತರ್ದೃಷ್ಟಿಗಳು ವಿಶೇಷವಾದವು. ಎಷ್ಟೋ ಬಾರಿ ಇಂತಹ ವಾಕ್ಯಗುಚ್ಛಗಳಲ್ಲಿ ಅರ್ಥಾಂರನ್ಯಾಸ, ದೃಷ್ಟಾಂತಾದಿ ಅಲಂಕಾರಗಳ ಛಾಯೆಯೂ ಕಾಣಿಸುವುದು. ಅನೇಕ ಭಾಗಗಳಲ್ಲಿ ರಾಯರ ಬರವಣಿಗೆಯು ಗದ್ಯಕಾವ್ಯದಂತೆಯೇ ಭಾಸವಾಗುತ್ತದೆ. ಕೆಲವು ಉದಾಹರಣೆಗಳನ್ನು ಇಲ್ಲಿ ಗಮನಿಸಬಹುದು:
- ಮನುಷ್ಯನ ಬಯಕೆಗಳಲ್ಲಿ ನೆಮ್ಮದಿಯಿಂದ ಇರುವುದು ಮುಖ್ಯವಾದುದು. ನೆಮ್ಮದಿಯೆಂದರೆ ನಿರ್ದಿಷ್ಟವಾಗಿ ಇದೇ ಎಂದು ಹೇಳಲು ಬಾರದಿರುವುದು ಸ್ವಾರಸ್ಯ. (ಮೂರ್ತಿಶಿಲ್ಪ: ನೆಲೆ-ಹಿನ್ನೆಲೆ, ಪುಟ ೧)
- ಚೆಲುವು ಜೀವನದಲ್ಲಿ ದೊಡ್ಡದೇ, ಅಡ್ಡಿಯಲ್ಲ? ಚೆಲುವಾದ ಮನುಷ್ಯ, ಮೃಗ, ಮರ, ಮನೆ ಎಲ್ಲದರಲ್ಲಿಯೂ ಒಂದು ‘ಕಳೆ’, ಅಲೌಕಿಕ ಚೈತನ್ಯವೊಂದು ಅಡಗಿರುತ್ತದೆ; ತೀರ ಕುರೂಪಿಯಲ್ಲಿಯೂ ಹಾಗೆಯೇ. ಸಾಮಾನ್ಯ ನೆಲೆಯಿಂದ ಯಾವುದು ಕೆಳಕ್ಕೆ ಜಾರಿದರೂ ಮೇಲಕ್ಕೆ ಏರಿದರೂ ಅದರಲ್ಲೊಂದು ವಿಶೇಷ ಗುಣ. ಹಾಗಿಲ್ಲದಿದ್ದರೆ ಜನರ ಗಮನವನ್ನು ಸೆಳೆಯುವುದು ಸಾಧ್ಯವಿಲ್ಲ. (ಮೂರ್ತಿಶಿಲ್ಪ: ನೆಲೆ-ಹಿನ್ನೆಲೆ, ಪುಟ ೬೯)
- ಅಮೂರ್ತವಾದುದನ್ನು ಮೂರ್ತದಲ್ಲಿ ಕಾಣುವ ಬಯಕೆ ಉಪಾಸಕನಿಗಿದೆ. ಜಡವೊಂದರ ಮಿತಿಯಲ್ಲಿ ಚೇತನವನ್ನು ನೋಡಬೇಕು. ಮೂರ್ತಸ್ವರೂಪದ ದೀಪದಿಂದ ಅಂತರAಗಕ್ಕೂ ಬೆಳಕೂ, ಬಹಿರಂಗದಲ್ಲಿ ಶಾಖವೂ ಒದಗಬೇಕಾಗಿದೆ. ಅಂತರಂಗದ ವ್ಯಾಪಾರ ಬಹಿರಂಗವಾಗಿಯೂ, ಬಹಿರಂಗದ ವ್ಯವಹಾರ ಅಂತರಂಗದಲ್ಲಿಯೂ ಮನಸ್ಸಿಗೆ ಹಿತವನ್ನುಂಟುಮಾಡುವಂತಿರಬೇಕು? ಇಂತಹ ಶಿಲ್ಪವೊಂದನ್ನು ರಚಿಸಬೇಕಾದರೆ ಶಿಲ್ಪಿಯ ಅಂತಸ್ಥವಾದ ಸಂಸ್ಕಾರ ಪರಿಶುದ್ಧವಾಗಿರಬೇಕು. (ಧ್ಯಾನಚಿತ್ರಾವಳಿ, ಪುಟ XLII)
- ಸಾಕಾರೋಪಾಸನೆಯ ಚರಮಲಕ್ಷ್ಯವೂ ನಿರಾಕಾರದೆಡೆಗೇ ಆಗಿದೆ. ಕಣ್ಣಿಗೆ ಕಾಣುವ, ಕೈಯಿಂದ ಸ್ಪರ್ಶಿಸಬಹುದಾದ ವಸ್ತುವೊಂದರ ಆಸರೆಯಿಂದ ಕಣ್ಣಿಗೆ ಕಾಣದ, ಕೈಗೆಟುಕದ ನಮ್ಮಳವಿಗೆ ಸಿಗದ ಅರಿವಿಗೆ ಮಾತ್ರ ಬಂದ ಶಕ್ತಿಯನ್ನು ಪ್ರತೀಕವೊಂದರಲ್ಲಿ ಕಾಣುವುದು, ಉಪಾಸಿಸುವುದು ಸಗುಣೋಪಾಸನೆ. ಸಾಕಾರಾರ್ಚನೆಯಲ್ಲಿ ಆಕಾರಗಳೇನೋ ಇವೆ. ಆದರೆ ಅದಕ್ಕೆ ನಿರ್ದಿಷ್ಟವಾದ ಇದೇ ಸರಿ ಎನ್ನಬಹುದಾದ ರೂಪವಿಲ್ಲ. ಅವರವರ ಭಾವ, ಸಂಸ್ಕಾರಗಳಿಗನುಗುಣವಾಗಿ ಬೇರೆಯಾಗಿ ತೋರಿಕೊಳ್ಳುತ್ತದೆ. ಆದ್ದರಿಂದಲೇ ರೂಪಭೇದ, ಮತಭೇದ, ಆಕಾರ ಭೇದಗಳ ವೈವಿಧ್ಯ ಉಂಟಾಗಿದೆ. ಹರಿಯುತ್ತಿರುವ ನದಿಗೆ ಯಾವ ನಿರ್ದಿಷ್ಟ ಆಕಾರವೂ ಇಲ್ಲ. ಆದರೆ ನೀರಿನ ಗುಣ ಇದೆ. ಆದರೆ ನಾವು ಅದನ್ನು ಬೊಗಸೆ ಅಥವಾ ಪಾತ್ರೆಗಳಲ್ಲಿ ತೆಗೆದುಕೊಂಡಾಗ ಅದು ಒಂದು ಆಕಾರ ಹಾಗೂ ಪ್ರಮಾಣಗಳಿಗೆ ನಿರ್ದಿಷ್ಟಗೊಂಡಿತು. ಅದೇ ರೀತಿ ಮೂಲ ಚೇತನ ಒಂದೇ, ಅದು ಅಭಿವ್ಯಕ್ತಿಗೊಂಡ ಬಗೆ ಹಲವು. ದಿಟವಾಗಿ ಈ ಎರಡು (ಸಾಕಾರ-ನಿರಾಕಾರ) ಉಪಾಸನಾಮಾರ್ಗಗಳು ಬೇರೆ ಬೇರೆಯಲ್ಲ. ಕಣ್ಣುಗಳೆರಡಾದರೂ ಅವುಗಳ ದೃಷ್ಟಿ ಒಂದೇ ಆಗಿದೆಯೋ, ಅದೇ ರೀತಿ ಈ ಉಪಾಸನೆಗಳು. (ಧ್ಯಾನಚಿತ್ರಾವಳಿ, ಪುಟ XI)
* * *
ರಾಯರು ದೇವಾಲಯದಂತೆಯೇ ಭಾರತೀಯ ಸಂಸ್ಕೃತಿಯ ಸಕಲಾಂಶಗಳ ಮೂರ್ತರೂಪ. ದೇವಾಲಯದಲ್ಲಿ ಕಾಣಬಹುದಾದ ನೆಮ್ಮದಿಯನ್ನು ರಾಮಚಂದ್ರರಾಯರ ಬಳಿಯಲ್ಲೂ ಕಾಣಬಹುದಾಗಿತ್ತು ಎಂದು ಅವರನ್ನು ಪ್ರತ್ಯಕ್ಷವಾಗಿ ಕಂಡವರು ಹೇಳುತ್ತಾರೆ. ಅವರದ್ದು ವಿಶ್ವಕೋಶಾತ್ಮಕ ಪ್ರತಿಭೆ. ತಿರುಪತಿ ತಿಮ್ಮಪ್ಪನು ಶತಮಾನಗಳುದ್ದಕ್ಕೂ ಜನರಲ್ಲಿ ವಿಸ್ಮಯ-ಆನಂದಗಳನ್ನು ಉಂಟುಮಾಡುತ್ತಿರುವಂತೆ ರಾಯರ ಬರವಣಿಗೆಗಳು ಎಲ್ಲ ಕಾಲದ, ಎಲ್ಲ ದೇಶಗಳ ಜನರ ಬುದ್ಧಿ-ಭಾವಗಳನ್ನು ಪೋಷಿಸುವ ಸತ್ತ್ವವನ್ನು ಉಳ್ಳದ್ದು. ಅವರ ಬರವಣಿಗಗಳಲ್ಲಿ ದೇವಾಲಯಗಳಿಗೆ ಸಂಬಂಧಪಟ್ಟಂತಹ ಕೃತಿಗಳೇ ಕಲಶಪ್ರಾಯವಾದವು. ಅವನ್ನು ಓದಿಯೇ ಆಸ್ವಾದಿಸಬೇಕು.