ದಲಿತರ ಅಭ್ಯುದಯವನ್ನು ನಮ್ಮ ದೇಶದ ಎಲ್ಲರೂ ನಿರಾಕ್ಷೇಪವಾಗಿ ಬಯಸುತ್ತಾರೆ. ಆದರೆ ಅದು ಬರಿಯ ಪೊಳ್ಳು ಕ್ಲೀಷೆ ಆಗಿಬಿಟ್ಟರೆ ಹೇಗೆ? ತಾವು ಅಧಿಕಾರಕ್ಕೆ ಬಂದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶಗಳನ್ನೂ ಧಿಕ್ಕರಿಸಿ ‘ದಲಿತ’ ವರ್ಗಗಳಿಗೆ ಸರ್ಕಾರೀ ನೌಕರಿಗಳಲ್ಲಿಯೂ ಅನ್ಯ ಕ್ಷೇತ್ರಗಳಲ್ಲಿಯೂ ಇರುವ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವೆವೆಂದೋ ‘ಒಳ–ಮೀಸಲಾತಿ’ ಯನ್ನು ಜಾರಿಗೊಳಿಸುವೆವೆಂದೋ ಚುನಾವಣೆಯ ಪ್ರಣಾಳಿಕೆಗಳಲ್ಲಿಯೂ ಸಾರ್ವಜನಿಕ ಪ್ರಚಾರಭಾಷಣಗಳಲ್ಲಿಯೂ ಘೋಷಿಸುವುದು ಮಾಮೂಲೆನಿಸಿಬಿಟ್ಟಿದೆ.
ಒಂದು ಸಂಸ್ಕೃತ ವ್ಯಂಗ್ಯೋಕ್ತಿ ಹೀಗಿದೆ:
ಅಹಂ ಕಾಶೀಂ ಗಚ್ಛಾಮಿ
ತತ್ರೈವ ನಿವಸಾಮ್ಯಹಮ್ |
ಇತಿ ಬ್ರುವಾಣಃ ಸತತಂ
ಕಾಶೀವಾಸಫಲಂ ಭವೇತ್ ||
ನಾನು ಕಾಶಿಗೆ ಹೋಗುತ್ತೇನೆ, ಅಲ್ಲಿಯೆ ಇದ್ದು ಬಿಡುತ್ತೇನೆ – ಹೀಗೆ ನಿರಂತರವಾಗಿ ಹೇಳುತ್ತಿದ್ದರೆ ವಾಸ್ತವವಾಗಿ ಕಾಶಿಯಲ್ಲಿ ಇದ್ದಷ್ಟು ಪುಣ್ಯ ಬರುತ್ತದೆ.”
ಹಾಗೆಯೆ ‘ಬಡತನದ ನಿರ್ಮೂಲನ’, ‘ದಲಿತರ ಏಳ್ಗೆ’ ಮೊದಲಾದ ನುಡಿಗಟ್ಟುಗಳ ಎಡೆಬಿಡದ ಬಳಕೆಯಿಂದ ತಾವು ‘ಪೊಲಿಟಿಕಲಿ ಕರೆಕ್ಟ್’ ಎನಿಸುವೆವೆಂದೂ ಅದರಿಂದ ತಮಗೆ ರಾಜಕೀಯ ಲಾಭವಿದೆಯೆಂದೂ ಈಗಿನ ರಾಜಕಾರಣಿಗಳು ನಂಬಿರುವಂತಿದೆ. ಈ ಅಭ್ಯಾಸ ಕೆಲವೊಮ್ಮೆ ಹಾಸ್ಯಾಸ್ಪದವಾಗುವುದೂ ಉಂಟು. ಇತ್ತೀಚೆಗೆ ರಾಹುಲ್ಗಾಂಧಿ ಮಹಾಶಯರು ‘ಈಗ ಪ್ರಕಟಗೊಂಡಿರುವ ಸೌಂದರ್ಯ ಸ್ಪರ್ಧೆಯ ವಿಜೇತರ ಪಟ್ಟಿಯಲ್ಲಿ ದಲಿತರು ಇಲ್ಲವೇ ಇಲ್ಲ’ ಎಂದು ಅಪ್ಪಣೆ ಕೊಡಿಸಿದರು. ವ್ಯಾಖ್ಯಾನದ ಆವಶ್ಯಕತೆ ಇಲ್ಲ.
ದಲಿತರ ಅಭ್ಯುದಯವನ್ನು ನಮ್ಮ ದೇಶದ ಎಲ್ಲರೂ ನಿರಾಕ್ಷೇಪವಾಗಿ ಬಯಸುತ್ತಾರೆ. ಆದರೆ ಅದು ಬರಿಯ ಪೊಳ್ಳು ಕ್ಲೀಷೆ ಆಗಿಬಿಟ್ಟರೆ ಹೇಗೆ? ತಾವು ಅಧಿಕಾರಕ್ಕೆ ಬಂದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶಗಳನ್ನೂ ಧಿಕ್ಕರಿಸಿ ‘ದಲಿತ’ ವರ್ಗಗಳಿಗೆ ಸರ್ಕಾರೀ ನೌಕರಿಗಳಲ್ಲಿಯೂ ಅನ್ಯ ಕ್ಷೇತ್ರಗಳಲ್ಲಿಯೂ ಇರುವ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸುವೆವೆಂದೋ ‘ಒಳ-ಮೀಸಲಾತಿ’ಯನ್ನು ಜಾರಿಗೊಳಿಸುವೆವೆಂದೋ ಚುನಾವಣೆಯ ಪ್ರಣಾಳಿಕೆಗಳಲ್ಲಿಯೂ ಸಾರ್ವಜನಿಕ ಪ್ರಚಾರಭಾಷಣಗಳಲ್ಲಿಯೂ ಘೋಷಿಸುವುದು ಮಾಮೂಲೆನಿಸಿಬಿಟ್ಟಿದೆ. ಈಗ್ಗೆ ನಾಲ್ಕು ದಶಕಗಳ ಹಿಂದೆಯಾದರೆ ಏನೇನೊ ಕಾರಣಗಳಿಂದ ನಿರ್ಮಿತವಾಗಿದ್ದ ಸಾಮಾಜಿಕ-ಆರ್ಥಿಕ ಅಸಮತೋಲವನ್ನು ತಗ್ಗಿಸಲು ಆಗಿನ ಪ್ರಚಲಿತ ವ್ಯವಸ್ಥೆಯೊಳಗಡೆ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಸವಲತ್ತುಗಳನ್ನು ಕಲ್ಪಿಸುವ ಚಿಂತನೆಯೂ ವಾಸ್ತವ ಯೋಜನೆಗಳೂ ಇದ್ದವೇ ಹೊರತು ಈ ವಿಷಯ ರಾಜಕೀಯಲಾಭೋದ್ದೇಶದ ಅಸ್ತçವಾಗಿರಲಿಲ್ಲ. ಈಗ ಆರೂಢ ಕೇಂದ್ರಸರ್ಕಾರ ತಾನಾಗಿ ‘ಹಿಂದುಳಿದ’ ವರ್ಗಗಳಿಗೆ ವಿವಿಧ ಸ್ತರಗಳಲ್ಲಿ ಹಿಂದಿದ್ದುದಕ್ಕಿಂತ ಮಿಗಿಲಾದ ಪ್ರಾತಿನಿಧ್ಯ ಸೇರಿದಂತೆ ಸವಲತ್ತುಗಳನ್ನೂ ಅವಕಾಶಗಳನ್ನೂ ಕಲ್ಪಿಸಿದ್ದರೂ, ಸರ್ಕಾರದ ಎಲ್ಲ ನಡೆಗಳನ್ನೂ ಟೀಕಿಸುತ್ತಿರುವುದನ್ನೇ ಏಕೈಕ ಅಜೆಂಡಾ ಆಗಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ಅನಿಯಂತ್ರಿತ ವರ್ತನೆಯ ಫಲಿತವೆಂದರೆ ಒಡಕನ್ನು ಬಿತ್ತಿ ತಾನು ಅದರ ಫಲಾನುಭವಿಯಾಗಬೇಕೆಂಬ ಹವಣಿಕೆ. ಅದರಲ್ಲಿ ಈಗ ಯಾವುದೇ ತರ್ಕವನ್ನಾಗಲಿ ಶಿಷ್ಟತೆಯನ್ನಾಗಲಿ ಅಖಂಡ ರಾಷ್ಟçಹಿತಪ್ರಜ್ಞೆಯನ್ನಾಗಲಿ ನಿರೀಕ್ಷಿಸುವಂತಿಲ್ಲ.
ವೀರ ಘೋಷಣೆಗಳು
ಅದು ಹಾಗಿರಲಿ. ಕಾಂಗ್ರೆಸಿಗೆ ತನ್ನ ತರ್ಕಹೀನ ನಡವಳಿಗಳ ಬಗೆಗೆ ಬದ್ಧತೆಯಾದರೂ ಇದೆಯೆ? ಮೂರು ಪ್ರಸಂಗಗಳನ್ನು ನೆನಪಿಸುವುದು ಪರ್ಯಾಪ್ತವಾದೀತು.
(೧) ೨೦೧೧ರಲ್ಲಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರ್ಕಾರ (ದ್ವಿತೀಯ) ದೇಶದಲ್ಲಿ ಸಾಮಾಜಿಕ-ಆರ್ಥಿಕ-ಜಾತೀಯ ಪುನರ್ವಿನ್ಯಾಸ ಮಾಡಿಬಿಡುವುದಾಗಿ ಉಚ್ಚಸ್ಥಾಯಿಯಲ್ಲಿ ಘೋಷಿಸಿತು. ಅದಕ್ಕೆ ಆಧಾರವಾಗಿ ಒಂದು ಸಮೀಕ್ಷೆ ನಡೆಸಲು ಸೂಚನೆ ನೀಡಿತು – ಸೆನ್ಸಸ್ ಇಲಾಖೆಗಲ್ಲ, ಗ್ರಾಮಾಭಿವೃದ್ಧಿ ಸಚಿವ ಖಾತೆಗೆ! ಅದಂತಿರಲಿ, ಆ ಸಮೀಕ್ಷೆಯ ವರದಿಯನ್ನೂ ನಾಲ್ಕು ವರ್ಷ ಪ್ರಕಟಿಸಲೇ ಇಲ್ಲ. ಆ ವರದಿ ಬೆಳಕು ಕಂಡದ್ದು ನರೇಂದ್ರ ಮೋದಿ ಸರ್ಕಾರ ಬಂದ ಮೇಲೆಯೆ – ೨೦೧೫ರಲ್ಲಿ.
(೨) ಅಂಥದೇ ವೀರಘೋಷಣೆಯನ್ನು ಸಿದ್ದರಾಮಯ್ಯನವರ (ಮೊದಲ) ಕರ್ನಾಟಕ ಸರ್ಕಾರವೂ ಮಾಡಿತ್ತು. ಈಗ ಎರಡನೇ ಸಿದ್ದರಾಮಯ್ಯ ಸರ್ಕಾರ ಪಟ್ಟಕ್ಕೆ ಬಂದು ಕುಳಿತಿದೆ. ಇಷ್ಟು ಕಾಲ ಕಳೆದಿದ್ದರೂ – ಈಗ ಹತ್ತು ವರ್ಷಗಳೇ ಆಗಿದ್ದರೂ – ಕಳೆದ (೨೦೨೪) ಜುಲೈ ತಿಂಗಳಿನಷ್ಟು ಈಚೆಗೂ ಸಿದ್ದರಾಮಯ್ಯ “ನಾನು ಆ ವರದಿಯನ್ನೇ ನೋಡಿಲ್ಲ, ಅದು ಸಚಿವಸಂಪುಟದ ಕೈಗೆ ಬಂದೇ ಇಲ್ಲ. ಬಂದ ಮೇಲೆ ಚರ್ಚಿಸಲಾಗುತ್ತದೆ” ಎಂದಿದ್ದಾರೆ.
(೩) ಕಳೆದ ವರ್ಷದ (೨೦೨೩) ಜುಲೈ ೧೭-೧೮ರಲ್ಲಿ ‘ಐ.ಎನ್.ಡಿ.ಐ.ಎ.’ ಕೂಟದ ಸಮಾವೇಶ ಬೆಂಗಳೂರಿನಲ್ಲಿ ಸೇರಿದ್ದಾಗಲೂ ಅನಂತರ ಮುಂಬಯಿಯಲ್ಲಿ ಸೇರಿದಾಗಲೂ ಆಗಿನ ವಿಪಕ್ಷ ಟೋಳಿಯ ಪ್ರಮುಖರಾಗಿದ್ದ ನಿತೀಶ್ಕುಮಾರ್ ದೇಶದಲ್ಲಿ ಜಾತ್ಯಾಧಾರಿತ ಜನಗಣತಿ ನಡೆಯಬೇಕೆಂದು ಆಗ್ರಹಿಸಿದರು. ಈ ಸೂಚನೆಗೆ ಅನ್ಯ ಧುರೀಣರಿಂದ ಅಲ್ಪ ಸ್ಪಂದನವೂ ಸಿಗಲಿಲ್ಲ.
ನಿರ್ಲಿಪ್ತ
ಅದಕ್ಕೆ ಕಾರಣ ಏನಾಗಿತ್ತೆಂಬ ಹಿನ್ನೆಲೆಯನ್ನು ಆಗ ವಿದ್ಯಮಾನಗಳನ್ನು ಸಮೀಪದಿಂದ ವೀಕ್ಷಿಸಿದ್ದ ಜೆ.ಡಿ.(ಯು) ಜನತಾದಳ ಸಂಯುಕ್ತ ಪಕ್ಷ ವರಿಷ್ಠ ಲಲನ್ಸಿಂಗ್ (ಈಗ ಕೇಂದ್ರ ಸಚಿವ) ಈಗ್ಗೆ (ಸೆಪ್ಟೆಂಬರ್ ೨೦೨೪) ಕೆಲವೇ ದಿನಗಳ ಹಿಂದೆ ಹೊರಹಾಕಿದರು, ಪಟ್ನಾದಲ್ಲಿ: “ಜಾತ್ಯಾಧಾರಿತ ಜನಗಣತಿಯ ಬಗೆಗೆ ರಾಹುಲ್ಗಾಂಧಿ ‘ಮೊಸಳೆ ಕಣ್ಣೀರು’ ಸುರಿಸುವುದಷ್ಟೆ ಆಯಿತು…. ಅವರು ಜನರಲ್ಲಿ ವೃಥಾ ಗೊಂದಲವನ್ನು ಸೃಷ್ಟಿಸುತ್ತಿದ್ದಾರೆ. ಬಿಹಾರ ಸರ್ಕಾರ ಜಾತ್ಯಾಧಾರಿತ ಸಮೀಕ್ಷೆ ನಡೆಸಿದಾಗ ನಾವು ‘ಐ.ಎನ್.ಡಿ.ಐ.ಎ.” ಕೂಟದ ಭಾಗವಾಗಿದ್ದೆವು. ಜಾತ್ಯಾಧಾರಿತ ಸೆನ್ಸಸ್ ಕುರಿತು ಠರಾವು ಮಾಡಿಸುವಂತೆ ನಾವು ಮೇಲಿಂದ ಮೇಲೆ ಆಗ್ರಹಿಸಿದೆವು. ಆದರೂ ರಾಹುಲ್ಗಾಂಧಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಒತ್ತಡಕ್ಕೆ ಮಣಿದರು; ನಮ್ಮ ಸಲಹೆಯನ್ನು ನಿರ್ಲಕ್ಷ್ಯ ಮಾಡಿದರು.” ಬೆಂಗಳೂರು ಸಮಾವೇಶದಲ್ಲಿ ಈ ವಿಷಯದ ಮುಖ್ಯತೆಯನ್ನು ಪ್ರಬಲವಾಗಿ ಮುಂದೊಡ್ಡಿದರೂ ಮಮತಾ ಬ್ಯಾನರ್ಜಿ ವಿರೋಧಿಸುತ್ತಲೇ ಹೋದರು. ನಿತೀಶ್ಕುಮಾರ್ ಹತಾಶರಾಗಿ “ನೀವು ಬ್ಯಾನರ್ಜಿ (= ಬ್ರಾಹ್ಮಣರು). ನಿಮಗೆ ಈ ವಿಷಯ ಹೇಗೆ ಅರ್ಥವಾದೀತು!” -ಎಂದರು.
ಕಾಂಗ್ರೆಸಿನ ಈ ಛದ್ಮ ಇಂದು-ನಿನ್ನೆಯದಲ್ಲ. ‘ಹಾವು ಸಾಯಬಾರದು, ಕೋಲು ಮುರಿಯಬಾರದು’ ಎಂಬ ಜಾಡಿನ ಅನುಸರಣೆಯ ದೀರ್ಘ ಪರಂಪರೆಯೇ ಕಾಂಗ್ರೆಸಿಗಿದೆ. ಒಂದಷ್ಟು ಹಿಂದಿನ ಇತಿಹಾಸವನ್ನು ಸ್ಮರಿಸುವುದು ಸಂಗತವಾದೀತು.
ಪೂರ್ವಕಥೆ
ಜವಾಹರಲಾಲ್ ನೆಹರು ಕಾಲದಲ್ಲಿ ಮತ-ಗಳಿಕೆಗಾಗಿ ‘ಹಿಂದುಳಿದ’ ವರ್ಗಗಳನ್ನು ಓಲೈಸಬೇಕಾದ ಪ್ರಮೇಯವಿರಲಿಲ್ಲ. ಇಂದಿರಾಗಾಂಧಿಯವರಿಗೂ ವಾಮಪಕ್ಷಾದಿಗಳ ಬೆಂಬಲ ಪರ್ಯಾಪ್ತವಾಗಿತ್ತು. ಜಾತಿವಿನ್ಯಾಸಗಳ ರಾಜಕೀಯೀಕರಣ ಉಲ್ಬಣಿಸಿದ್ದು ಅನಂತರದ ವರ್ಷಗಳಲ್ಲಿ.
ಸಾಮಾಜಿಕವಾಗಿಯೂ ಶೈಕ್ಷಣಿಕವಾಗಿಯೂ ಹಿಂದುಳಿದ ವರ್ಗಗಳನ್ನು ಗುರುತಿಸಲು ಬಿ.ಪಿ. ಮಂಡಲ್ ಆಯೋಗವನ್ನು ರಚಿಸಿದ್ದುದು ಮೊರಾರ್ಜಿ ದೇಸಾಯಿ ಸರ್ಕಾರ, ೧೯೭೯ರಲ್ಲಿ.
ಆ ಆಯೋಗದ ಶಿಫಾರಸಿನಂತೆ ‘ಅದರ್ ಬ್ಯಾಕ್ವರ್ಡ್ ಕ್ಲಾಸಸ್’ (ಒ.ಬಿ.ಸಿ.) ವರ್ಗಗಳಿಗೆ ಶೇ. ೨೭ರಷ್ಟು ಮೀಸಲಾತಿಯನ್ನು ಘೋಷಿಸಿ ದೇಶವನ್ನಿಡೀ ಭುಗಿಲೆಬ್ಬಿಸಿದವರು ‘ನ್ಯಾಶನಲ್ ಫ್ರಂಟ್’ ಪ್ರಧಾನಿ ವಿ.ಪಿ. ಸಿಂಗ್, ೧೯೯೦ರ ನಡುಭಾಗದಲ್ಲಿ. ಅದು ಸೃಷ್ಟಿಸಿದ ಪ್ರಕ್ಷೋಭೆಯದು ಬೇರೆ ಕಥೆ, ಅದು ಹಾಗಿರಲಿ. ಸಂಸತ್ತಿನಲ್ಲಿ ಮಂಡಲ್ ಆಯೋಗ ವರದಿ ಚರ್ಚೆಗೆ ಬಂದಾಗ ಆ ಜಾಡಿನ ಮೀಸಲಾತಿ ಧೋರಣೆಯನ್ನು ಖಂಡತುಂಡ ಟೀಕಿಸಿದವರು ಆಗ ಕಾಂಗ್ರೆಸ್ ಅಧ್ಯಕ್ಷರೂ ಸಂಸತ್ತಿನಲ್ಲಿ ವಿರೋಧಪಕ್ಷ ನಾಯಕರೂ ಆಗಿದ್ದ ಮತ್ತು ಈಗಿನ ಕಾಂಗ್ರೆಸ್ ಪಕ್ಷಾಧ್ಯಕ್ಷ ರಾಹುಲ್ಗಾಂಧಿಯ ತಂದೆಯೂ ಆದ ರಾಜೀವ್ಗಾಂಧಿ (೬ ಸೆಪ್ಟೆಂಬರ್ ೧೯೯೦). ಅವರು ಹೇಳಿದರು:
“ದೇಶವನ್ನು ‘ಒಡೆದು ಆಳಲು’ ಸಾಧನವನ್ನಾಗಿ ಮಂಡಲ್ ವರದಿಯನ್ನು ಈ [ವಿ.ಪಿ. ಸಿಂಗ್] ಸರ್ಕಾರ ಬಳಸಿಕೊಳ್ಳುತ್ತಿದೆ. ಸಾಮಾಜಿಕವಾಗಿಯೂ ಶೈಕ್ಷಣಿಕವಾಗಿಯೂ ಹಿಂದುಳಿದ ವರ್ಗಗಳಿಗೆ ಸವಲತ್ತುಗಳನ್ನು ನೀಡುವುದಕ್ಕೆ ಕಾಂಗ್ರೆಸಿನ ವಿರೋಧವಿಲ್ಲ. ಆದರೆ ಅತ್ಯಧಿಕ ಪ್ರಮಾಣದ ಮೀಸಲಾತಿಯನ್ನು ಹಿಂದುಳಿದವರ ಪೈಕಿ ಒಂದೇ ಒಂದು [ಒ.ಬಿ.ಸಿ.] ವರ್ಗಕ್ಕೆ ನೀಡಹೊರಟಿರುವುದನ್ನು ನಾವು ವಿರೋಧಿಸುತ್ತೇವೆ.”
ಮುಂದುವರಿದು ರಾಜೀವ್ಗಾಂಧಿ ಮಂಡಲ್ ಆಯೋಗದ ವರದಿಯ ಆಧಾರಸಮ್ಮತಿಗಳನ್ನೇ ಪ್ರಶ್ನಿಸಿದರು:
“ಸಂವಿಧಾನದಲ್ಲಿರುವುದು ಹಿಂದುಳಿದ ‘ವರ್ಗ’ಗಳ ಪ್ರಸ್ತಾವ. ಆದರೆ ಮಂಡಲ್ ಆಯೋಗವು ‘ವರ್ಗ’ಗಳಿಗೆ ಬದಲಾಗಿ ‘ಜಾತಿ’ಗಳನ್ನು ತನ್ನ ಗುರಿಗುಂಪಾಗಿಸಿಕೊಂಡಿದೆ. ತನ್ನ ಶಿಫಾರಸಿಗೆ ಆಧಾರವಾಗಿ ಅದು ಅತಿ ಸಣ್ಣ ಗ್ರಾಮಸಮೂಹವನ್ನು ಆಯ್ಕೆ ಮಾಡಿಕೊಂಡಿದೆ; ‘ಒ.ಬಿ.ಸಿ.’ಗೆ ಸೇರಿದವರ ಹೇಳಿಕೆಗಳನ್ನು ಮಾತ್ರ ದಾಖಲೆ ಮಾಡಿಕೊಂಡಿದೆ; ಉಳಿದ ಪಂಗಡಗಳ ಅಭಿಪ್ರಾಯಗಳನ್ನು ಗಣನೆಗೇ ತೆಗೆದುಕೊಳ್ಳಲಿಲ್ಲ. ಬಿ.ಪಿ. ಮಂಡಲ್ ಅವರು ಆಯೋಗದ ಅನ್ಯ ಸದಸ್ಯರು ವ್ಯಕ್ತಪಡಿಸಿದ ನಿಲವುಗಳನ್ನೂ ಪೂರ್ಣ ಅಲಕ್ಷ್ಯ ಮಾಡಿದ್ದಾರೆ. …ಶೇ.೭೮ರಷ್ಟು ಸಂದರ್ಶಿತರು ‘ಜಾತಿ’ಯೂ ಒಂದು ಪರಿಗಣನೆಯಾಗಿರಬಹುದು ಎಂದಿದ್ದಾರೆ. ಜಾತಿಯೊಂದೇ ಮೀಸಲಾತಿಗೆ ಆಧಾರವಾಗಲಿ ಎಂದು ಹೇಳಿದವರು ಸಂದರ್ಶಿತರಲ್ಲಿ ಶೇ. ೨೮ರಷ್ಟು ಮಂದಿ ಮಾತ್ರ. …ಜಾತಿ-ಆಧಾರಿತ ಮತದಾರಸಮೂಹಗಳು ಏರ್ಪಡಲಿ ಎಂಬ ಮಂಡಲ್ ಆಶಯವನ್ನು [ವಿ.ಪಿ. ಸಿಂಗ್] ಸರ್ಕಾರ ಸ್ವೀಕರಿಸುತ್ತಿದೆಯೆ? ನಾವು [೧೯೩೦-೩೧ರ] ಲಂಡನ್ ದುಂಡುಮೇಜು ಪರಿಷತ್ತಿನ ‘ಪ್ರತ್ಯೇಕ ಮತದಾರಸಮೂಹ ವ್ಯವಸ್ಥೆ’ ಸಮಯಕ್ಕೆ ಮರಳುತ್ತಿದ್ದೇವೆಯೆ?…”
ಛದ್ಮ ವಾದಗಳು
ಹೀಗೆ ಮಂಡಲ್ ಆಯೋಗದ (ವಾಸ್ತವವೇ ಆದ) ಹುಳುಕುಗಳನ್ನು ರಾಜೀವ್ಗಾಂಧಿ ಬಟಾಬಯಲು ಮಾಡಿಟ್ಟರು. ಅವರು ಎತ್ತಿದ ಆರೋಪಗಳೆಲ್ಲ ಆಧಾರಭೂತವಾದವೇ. ಆದರೆ ಅವರ ಟೀಕೆಯ ಹಿಂದಿನ ಆಶಯ ಏನಿದ್ದಿತೆಂಬುದು ಚಿಂತನೀಯ.
ಅಂತಹ ಛದ್ಮವಾದಗಳನ್ನು ಕಾಂಗ್ರೆಸ್ ಪಕ್ಷವು ವರ್ಷಗಳುದ್ದಕ್ಕೂ ಬಳಸಿದೆ. ರಾಜೀವ್ಗಾಂಧಿ ದೋಷಪೂರ್ಣವೆಂದಿದ್ದ ನಿಲವುಗಳನ್ನೇ ಅವರ ಸುಪುತ್ರ ರಾಹುಲ್ಗಾಂಧಿ ಸತತವಾಗಿ ಮುಂದೊತ್ತುತ್ತ ಬಂದಿದ್ದಾರೆ. ‘ವರ್ಗ’ಗಳನ್ನೂ ‘ಜಾತಿ’ಗಳನ್ನೂ ಸಮೀಕರಿಸುವುದನ್ನು ರಾಜೀವ್ಗಾಂಧಿ ತಪ್ಪು ಎಂದಿದ್ದರು. ರಾಹುಲ್ಗಾಂಧಿ ನಿರಂತರವಾಗಿ ಅದೇ ತಪ್ಪನ್ನೆಸಗಿ ಜಾತ್ಯಾಧಾರಿತ ಮೀಸಲಾತಿಯನ್ನು ಪ್ರವರ್ತಿಸಿದ್ದಾರೆ. ಜಾತ್ಯಾಧಾರಿತ ಜನಗಣತಿ ನಡೆಯಲೆಂದು ಕಾಂಗ್ರೆಸ್ ಆಗ್ರಹಿಸುತ್ತಿದೆ; ಮತ್ತು ಲೋಕಸಭೆಯಲ್ಲೂ ರಾಜ್ಯ ವಿಧಾನಸಭೆಗಳಲ್ಲೂ ಮಹಿಳೆಯರಿಗೆ ಮೀಸಲಿರಿಸಲಾಗಿರುವ ಶೇ. ಮೂವತ್ತಮೂರರಷ್ಟು ಆರಕ್ಷಣೆಯೊಳಗಡೆಗೆ ಒ.ಬಿ.ಸಿ. ಜಾತಿಗಳನ್ನು ಹೊಗಿಸಲು ಈಚಿನ ಚುನಾವಣೆಗಳ ಸಂದರ್ಭದಲ್ಲಿ ಯತ್ನಿಸಿದೆ.
ಈ ಕಸರತ್ತುಗಳೆಲ್ಲ ರಾಜಕೀಯೋದ್ದೇಶದ ಹುನ್ನಾರುಗಳಷ್ಟೆ ಎಂದು ವಿವರಿಸುವ ಆವಶ್ಯಕತೆ ಇಲ್ಲ. ರಾಜೀವ್ಗಾಂಧಿಯಿಂದ ಹಿಡಿದು ರಾಹುಲ್ಗಾಂಧಿವರೆಗೆ ನಡೆದಿರುವುದು ಇದೇ ದ್ವಿಮುಖೀ ತಂತ್ರಗಾರಿಕೆ.
ಇಲಾಖಾ ಕಾರ್ಯದರ್ಶಿಗಳು ಮೊದಲಾದ ಉನ್ನತ ಅಧಿಕಾರಸ್ಥಾನಗಳಿಗೆ ಸರ್ಕಾರೀ ಯಂತ್ರಾಂಗದಿಂದ ಆಚೆಗಿನ ವಲಯಗಳಿಂದ ವಿಶೇಷ ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳಬಹುದೆಂಬ (‘ಲ್ಯಾಟೆರಲ್ ಎಂಟ್ರಿ’) ಮೋದಿ ಸರ್ಕಾರದ ಸಲಹೆಯನ್ನು ರಾಹುಲ್ಗಾಂಧಿ ‘ಹೀಗೆ ಆಯ್ಕೆಗೊಳ್ಳುವವರಲ್ಲಿ ಹಿಂದುಳಿದವರಿಗೆ ಪ್ರಾತಿನಿಧ್ಯ ಇಲ್ಲ’ ಎಂಬ ‘ಕಾರಣ’ವನ್ನೊಡ್ಡಿ ವಿರೋಧಿಸಿದರು! ಹೀಗೆ ಆ ರಚನಾತ್ಮಕ ಕ್ರಮ ನೆನೆಗುದಿಗೆ ಸರಿಯಿತು.
ಕಾಂಗ್ರೆಸಿನ ಈ ವಿರೋಧ ವಿಚಿತ್ರವೆನಿಸುತ್ತದೆ. ಒಂದುಕಡೆ ನಿರುದ್ಯೋಗವನ್ನು ಎತ್ತಿ ಆಡುವ ಕಾಂಗ್ರೆಸ್ ಪಕ್ಷವೇ ಇನ್ನೊಂದುಕಡೆ ಆರ್ಥಿಕವಲಯದ ಉನ್ನತೀಕರಣಕ್ಕೂ ಆ ಮೂಲಕ ಹೆಚ್ಚಿನ ಉದ್ಯೋಗಸೃಷ್ಟಿಗೆ ಪ್ರೋತ್ಸಾಹಕವಾಗಬಲ್ಲ ಮತ್ತು ಪ್ರಯೋಜನಕರವೆಂದು ಹಿಂದೆ ಸಿದ್ಧಪಟ್ಟಿರುವ ‘ಲ್ಯಾಟೆರಲ್ ಎಂಟ್ರಿ’ ಯೋಜನೆಯನ್ನು ವಿರೋಧಿಸಿದೆ.
ಆಂತರ್ಯ ಏನು?
ಈ ಹಿನ್ನೆಲೆಯಲ್ಲಿ ಯೋಚಿಸುವಾಗ ಕಾಂಗ್ರೆಸ್ ಆಗಿಂದಾಗ ಘೋಷಿಸುವ ದಲಿತಪ್ರೀತಿ ಮೊದಲಾದವಕ್ಕೆ ಹೆಚ್ಚಿನ ಅರ್ಥ ಉಳಿಯದು. ‘ನಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಮೀಸಲಾತಿಗೆ ಈಗ ವಿಧಿಸಲಾಗಿರುವ ಗರಿಷ್ಠ ಮಿತಿಯನ್ನು ತೊಡೆದುಹಾಕುತ್ತೇವೆ’ ಎಂದು ಕರ್ನಾಟಕದ ಕಾಂಗ್ರೆಸ್ ನಾಯಕರು ಕೆಲವು ಕಾಲ ಹಿಂದೆ ಹೇಳಿದುದುಂಟು. ಈಗ ಅಂತಹ ಹೇಳಿಕೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸರು.
ಕಾಂಗ್ರೆಸಿನ ದ್ವೈಮುಖ್ಯಕ್ಕೆ ಕಿರೀಟಪ್ರಾಯವಾಗಿ ಪಕ್ಷದ ಪ್ರಮುಖರೂ ಸಾಂಸದರೂ ವಿರೋಧಪಕ್ಷಕೂಟ ನಾಯಕರೂ ಆದ ರಾಹುಲ್ಗಾಂಧಿ ಕಳೆದ (೨೦೨೪) ಸೆಪ್ಟೆಂಬರಿನ ಅಮೆರಿಕ ಭೇಟಿಯಲ್ಲಿ ಜಾರ್ಜ್ಟೌನ್ನಲ್ಲಿ ಮಾತನಾಡುತ್ತ ‘ಮುಂದೆ ಆರಕ್ಷಣ ಧೋರಣೆಗೇ ಕಾಂಗ್ರೆಸ್ ಮುಕ್ತಾಯ ಹೇಳಬಹುದು’ ಎಂದು ಒಡೆದು ಹೇಳಿ ಸಂಚಲನವನ್ನು ಸೃಷ್ಟಿಸಿದ್ದಾರೆ. ಇದನ್ನು ಅಪ್ರಬುದ್ಧತೆ ಎನ್ನಬೇಕೆ, ಸದ್ಯದ ವಸ್ತುಸ್ಥಿತಿಯ ಪರಿಜ್ಞಾನದ ಕೊರತೆ ಎನ್ನಬೇಕೆ, ಯಾವುದೊ ವರ್ಗಗಳನ್ನು ಓಲೈಸುವ ಹುನ್ನಾರವೆನ್ನಬೇಕೆ, ಹಿಂದುಳಿದ ವರ್ಗಗಳ ಹಿತದ ಬಗೆಗೆ ಎಂದಿನಿಂದಲೂ ಇರುವ ಕಾಂಗ್ರೆಸಿನ ನೈಜ ಆಂತರ್ಯದ ಮುಂದುವರಿಕೆ ಎನ್ನಬೇಕೆ – ಎಂಬುದನ್ನು ಕಾಲವೇ ನಿರ್ಧರಿಸಲಿ.