ರೇಖಾಚಿತ್ರಗಳು ರಾಯರ ಹೆಚ್ಚಿನ ಬರೆಹಗಳ ಅವಿಭಾಜ್ಯ ಅಂಗಗಳು, ಅಂದದ ಅಲಂಕೃತಿಗಳು. ಅವರ ‘ಚಿತ್ರಕ’ ಶೈಲಿಗೆ ಇವುಗಳ ಕೊಡುಗೆಯೂ ಇಲ್ಲದಿಲ್ಲ. ಇವನ್ನು ರಾಯರೇ ರಚಿಸುತ್ತಿದ್ದುದು ವಿಶೇಷ. ಈ ಮೂಲಕ ಒಂದು ಮಾಧ್ಯಮದಲ್ಲಿ ಮೂಡಿದ ವಿವರ ಮತ್ತೊಂದು ಮಾಧ್ಯಮದಲ್ಲಿ ಹೇಗೆ ತೋರುತ್ತದೆ ಎಂದು ತಾಳೆ ನೋಡಿ ತಿಳಿಯುವ ಅನನ್ಯ ಅವಕಾಶ ಓದುಗರಿಗೆ ದಕ್ಕುತ್ತದೆ. ಎರಡೂ ಭೂಮಿಕೆಗಳಲ್ಲಿ ರಾಯರ ಅಭಿವ್ಯಕ್ತಿ ಏಕಪ್ರಕಾರವಾದ ಸೌಂದರ್ಯ–ಸೌಷ್ಠವಗಳನ್ನು ಬಿಂಬಿಸಿರುವುದು ಒಡಕಿಲ್ಲದ ಅವರ ಅಂತರAಗಕ್ಕೂ ಮೇರೆಯರಿಯದ ಅವರ ಕೌಶಲಕ್ಕೂ ದಿಕ್ಸೂಚಿ ಎನ್ನಬಹುದು.
ಅಳಿಯದೆ ಉಳಿಯಬೇಕೆಂಬ ಬಯಕೆ ಒಂದಲ್ಲ ಒಂದು ರೂಪದಲ್ಲಿ ನಮ್ಮಲ್ಲೆಲ್ಲ ಇರುತ್ತದೆ. ಆದರೆ ಏನು ಮಾಡುವುದು, ಮಾನವರು ಮರ್ತ್ಯರು; ಶಾಶ್ವತತೆ ನಮ್ಮ ಹಣೆಯಲ್ಲಿ ಬರೆದಿಲ್ಲ. ಎಷ್ಟೋ ಬಾರಿ ವ್ಯಕ್ತಿಗಳು ಗತಿಸಿದರೂ ಬಯಕೆಗಳು ಮಾತ್ರ ಉಳಿದಿರುತ್ತವೆ. ಭರ್ತೃಹರಿ ಹೇಳಿಲ್ಲವೇ, “ತೃಷ್ಣಾ ನ ಜೀರ್ಣಾ ವಯಮೇವ ಜೀರ್ಣಾಃ”. ಈ ಬಗೆಯ ಬಯಕೆಯೇ ಧನಾತ್ಮಕವಾಗಿ ದುಡಿದು ಮಾನವರ ನೆನಪನ್ನು ಹಸನಾಗಿ ಉಳಿಸುವ ಹಲವಾರು ವಿಧಾನಗಳನ್ನು ಕಂಡುಕೊಂಡಿದೆ. ಅವುಗಳಲ್ಲಿ ಸಾಹಿತ್ಯ ಪ್ರಮುಖವಾದುದು, ಸುಂದರವಾದುದು. ಒರ್ವ ವ್ಯಕ್ತಿ ತನ್ನನ್ನು ಕುರಿತು ತಾನೇ ಬರೆದುಕೊಂಡರೆ ಅದು ಆತ್ಮಕಥೆ ಎನಿಸುತ್ತದೆ. ಹೀಗಲ್ಲದೆ ಬೇರೆಯವರು ಬರೆದರೆ ಅದು ವ್ಯಕ್ತಿವೃತ್ತ, ಸ್ಮೃತಿಚಿತ್ರ, ಜೀವನಚರಿತ್ರೆ ಮುಂತಾದ ರೂಪಗಳನ್ನು ಪಡೆಯುತ್ತದೆ. ಹೀಗೆ ಚಿತ್ರಿತರಾದ ವ್ಯಕ್ತಿಗಳ ಬಾಳು ಬೀಳಾಗಿರದೆ ಎತ್ತರದ ಆದರ್ಶಗಳಿಗೆ ಮುಡಿಪಾಗಿದ್ದರೆ ಅದನ್ನು ಕುರಿತ ಸಾಹಿತ್ಯ ನೂರು ಕಾಲ ನಿಲ್ಲುತ್ತದೆ; ಸಾರ್ಥಕವಾದ ಜೀವನವನ್ನು ಕಟ್ಟಿಕೊಳ್ಳಲು ಓದುಗರಿಗೆ ಮೇಲ್ಪಂಕ್ತಿಯನ್ನು ಹಾಕಿಕೊಡುತ್ತದೆ; ಸಮಾಜದ ಸ್ವಾಸ್ಥ್ಯವನ್ನು ಕಾಪಿಡುತ್ತದೆ.
ವಿದ್ಯಾಲಂಕಾರ ಸಾ.ಕೃ. ರಾಮಚಂದ್ರರಾಯರು ಸ್ವಯಂ ಉನ್ನತವಾದ ಬದುಕನ್ನು ನಡಸಿದವರು. ಹಲವರು ಹಿರಿಯರನ್ನು ಕುರಿತು ಬರೆಯಬೇಕೆಂಬ ಪ್ರವೃತ್ತಿ ಅವರಿಗೆ ಬಂದುದು ನಮ್ಮ ಭಾಗ್ಯ. ನಾವು ಉತ್ತಮವೆಂದು ಮೆಚ್ಚುವ ಬಳಿನ ಬಗೆಗಳಲ್ಲಿ ಅದೆಷ್ಟು ಪರಸ್ಪರ ಪೂರಕವಾದ ವ್ಯತ್ಯಾಸಗಳಿರುತ್ತವೆ, ಒಂದೇ ಗುರಿಯನ್ನು ಮುಟ್ಟಲು ಅದೆಷ್ಟು ಹಾದಿಗಳು ತೆರೆದಿರುತ್ತವೆ, ಸೊಗಸಿನಲ್ಲಿ ಅದೆಷ್ಟು ವಿಧಗಳಿವೆ, ಸತ್ಯಕ್ಕೆ ಎಷ್ಟೆಲ್ಲ ನೆಲೆಗಳಿವೆ, ಇವನ್ನೆಲ್ಲ ಚೆನ್ನಾಗಿ ಗ್ರಹಿಸಿ ರಸಮಯವೂ ಬೋಧಪ್ರದವೂ ಆದ ರಚನೆಯನ್ನು ಸಾಹಿತಿಯೊಬ್ಬ ಹೇಗೆ ಮಾಡಲು ಸಾಧ್ಯ – ಎಂಬುದನ್ನು ಈ ನಿಟ್ಟಿನ ಅವರ ಕೃತಿಗಳು ತೋರ್ಪಡಿಸಿವೆ. ಅಂಥ ಕೆಲವು ಕೃತಿಗಳನ್ನು ಪರಿಚಯಿಸಿಕೊಡುವುದೇ ಸದ್ಯದ ಉದ್ದೇಶ.
ಜೀವನಚರಿತ್ರೆಗಳನ್ನು ರಚಿಸಲು ರಾಮಚಂದ್ರರಾಯರು ಆಯ್ದುಕೊಂಡ ಮಹನೀಯರ ಪೈಕಿ ಯತಿಗಳು, ಯೋಗಿಗಳು, ದಾಸರು, ಅನುಭಾವಿಗಳು, ಅವಧೂತರು, ವಿದ್ವಾಂಸರು, ಕವಿಗಳು, ಕಲಾವಿದರು, ಬಹುಶ್ರುತರು, ಅಲ್ಪತೃಪ್ತರು – ಎಲ್ಲರೂ ಇದ್ದಾರೆ. ಇವರನ್ನು ಕುರಿತು ಮಕ್ಕಳಿಗಾಗಿಯೂ ದೊಡ್ಡವರಿಗಾಗಿಯೂ ಬರೆದಿದ್ದಾರೆ. ವಿಶೇಷವೆಂದರೆ ಮಕ್ಕಳ ಪುಸ್ತಕಗಳು ಪರಿಣತಪ್ರಜ್ಞರೂ ಓದಿ ಮೆಚ್ಚುವಂತಿವೆ; ದೊಡ್ಡವರಿಗಾಗಿ ಬರೆದವು ಮೊದಲ ಓದುಗರಿಗೂ ಆಪ್ತವೆನಿಸುವಂತಿವೆ. ಇದು ರಾಯರ ಸಿದ್ಧಿ. ಏನಿರಬಹುದು ಇದರ ರಹಸ್ಯ?
ಅಂತರಂಗ–ಅಭಿವ್ಯಕ್ತಿ
ರಾಯರ ಅರಿಮೆ ಅಸೀಮವಾದುದು. ಅವರು ಸರ್ವತಂತ್ರಸ್ವತಂತ್ರರು. ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿ ಶಿಷ್ಟ ಸಮಾಜದಲ್ಲಿ ಬೆಳೆದ ಸಂಸ್ಕಾರ, ಹಲವು ಹತ್ತು ಪ್ರಾಚೀನ ಹಾಗೂ ನವೀನ ವಿದ್ಯೆಗಳ ಅನುಸಂಧಾನದಿಂದ ಲಭಿಸಿದ ಬುದ್ಧಿಪರಿಷ್ಕಾರ, ಕಲೆ-ಸಾಹಿತ್ಯಗಳ ಅಭಿರುಚಿ-ವ್ಯವಸಾಯಗಳಿಂದ ಮೂಡಿದ ಭಾವಸಂವೇದನೆ ಎಲ್ಲವೂ ಸೇರಿ ಅವರ ವ್ಯಕ್ತಿತ್ವವನ್ನು ರೂಪಿಸಿದುವು. ಇವುಗಳ ಪೈಕಿ ವಿವಿಧ ದರ್ಶನಗಳ ಅಧ್ಯಯನವು ಮಾನವಜೀವನದ ಪರಮ ಗಂತವ್ಯದ ಹಾಗೂ ಆ ದಿಕ್ಕಿನಲ್ಲಿ ಸಾಗುವಾಗ ಎದುರಾಗುವ ಎಡರು-ತೊಡರುಗಳ ತಿಳಿವನ್ನು ಒದಗಿಸಿ, ತಮ್ಮ ಮಟ್ಟಿಗೆ ನೆಮ್ಮದಿಯನ್ನೂ ಲೋಕದ ಬಗೆಗೆ ಔದಾರ್ಯವನ್ನೂ ರಾಯರು ಪಡೆದುಕೊಳ್ಳುವಂತೆ ಮಾಡಿತು. ಅವರು ಇಷ್ಟಪಟ್ಟು ಓದಿದ ಆಯುರ್ವೇದ, ಮನಃಶಾಸ್ತ್ರ, ಸಮಾಜಶಾಸ್ತ್ರಗಳು ವ್ಯಕ್ತಿಯಿಂದ ಸಂಸ್ಕೃತಿಯವರೆಗೆ ವಿಸ್ತರಿಸಿಕೊಳ್ಳುವ ಮಾನುಷ ಜೀವನದ ಒಳ-ಹೊರಗುಗಳನ್ನು ಪರಿಚಯಿಸಿಕೊಟ್ಟವು. ಎಲ್ಲೆಡೆ ‘ಸ್ವಾಸ್ಥ್ಯ’ವನ್ನು ಅರಸುವಂತೆ, ಅದು ಕಂಡುಬರದಿದ್ದರೆ ಅದಕ್ಕೆ ಕಾರಣಗಳನ್ನು ಹುಡುಕಿ ಚಿಕಿತ್ಸೆ ನೀಡುವಂತೆ ಮಾಡಿದುವು. ಇನ್ನು ಚಿತ್ರ-ಶಿಲ್ಪ-ಸಂಗೀತಗಳ ಅಭ್ಯಾಸ ಚೆಲುವನ್ನು ಸೃಜಿಸುವ ಹಾಗೂ ಅದಕ್ಕೆ ಸಮುಚಿತವಾಗಿ ಸ್ಪಂದಿಸುವ ಶಕ್ತಿಯನ್ನು ದಕ್ಕಿಸಿಕೊಟ್ಟು ಸಿನಿಕತನ ಮೂಡದಂತೆ ಮಾಡಿತು.
ಈ ಬಗೆಯ ಅಂತರಂಗಪಾಕಕ್ಕೆ ಸರಿಮಿಗಿಲಾದ ಅಭಿವ್ಯಕ್ತಿಶಕ್ತಿಯನ್ನು ರಾಯರು ಸಂಪಾದಿಸಿಕೊಂಡಿದ್ದರು. ಎಲ್ಲ ಬಗೆಯ ನಿರೂಪಣೆಗೂ ಒದಗಿಬಂದು ಬುದ್ಧಿ-ಭಾವಗಳನ್ನು ಸಮನಾಗಿ ಬೆಳಗಬಲ್ಲ ಸರ್ವಾನುಕೂಲ ಶೈಲಿ ಅವರದು. ಅದು ಆಪ್ತ, ಅಕೃತಕ. ಅಲ್ಲಿ ಪರಿಷ್ಕಾರವಿದ್ದರೂ ಪೆಡಸುತನವಿಲ್ಲ, ಆಡುನುಡಿಯಿದ್ದರೂ ಅಗ್ಗತನವಿಲ್ಲ. ಗಾಂಭೀರ್ಯವನ್ನು ಬಲಿಗೊಡದ ಲವಲವಿಕೆ, ಅಧಿಕಾರಧ್ವನಿಗೆ ಭಂಗ ತಾರದ ಅನೌಪಚಾರಿಕತೆ ಅಲ್ಲಿಯ ಹೆಗ್ಗುರುತುಗಳು. ಆಲೋಚನೆ ಮತ್ತು ಅಭಿವ್ಯಕ್ತಿಗಳ ನಡುವೆ ಎಳ್ಳಷ್ಟೂ ಬಿರುಕಿಲ್ಲದ ಮಹಾತ್ಮರೊಬ್ಬರು ತಮ್ಮ ಓದುಗರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಸಲುಗೆಯಿಂದ, ನಯವಾಗಿ ವಿಷಯಗಳನ್ನು ವಿವರಿಸುವ ಕ್ರಮ ಅಲ್ಲಿ ಕಂಡುಬರುತ್ತದೆ. ಉದಾಹರಣೆಗಳು, ಉಪಕಥೆಗಳು, ಹಾಸ್ಯಕಣಿಕೆಗಳು, ಸಾಮತಿಗಳು, ಸಾರೋಕ್ತಿಗಳು, ಕಟಕಿ-ವಿನೋದಗಳು ನಡುನಡುವೆ ಬಂದು ಓದಿನ ಅನುಭವವನ್ನು ಉಲ್ಲಸಿತವಾಗಿಸುತ್ತವೆ. ರಾಯರ ಬರೆವಣಿಗೆ ಪಾಠವೆಂದರೆ ಪಾಠ, ಪ್ರವಚನವೆಂದರೆ ಪ್ರವಚನ. ನಮಗಂತೂ ಸ್ವಾಧ್ಯಾಯಕ್ಕೆ ಸಮಾನ!
‘ಚಿತ್ರಕ’ ಶೈಲಿ
ರಾಮಚಂದ್ರರಾಯರು ಮೂವತ್ತಕ್ಕಿಂತ ಹೆಚ್ಚಿನ ಸಂಖ್ಯೆಯ ವ್ಯಕ್ತಿಚಿತ್ರ ಮತ್ತು ಜೀವನಚರಿತ್ರೆಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಚಿಸಿದ್ದಾರೆ. ಇವುಗಳಲ್ಲಿ ಪ್ರಮುಖವಾದುವು: ಟಿಬೆಟ್ಟಿನ ಯೋಗಿ ಮಿಲರೇಪ, ಬುದ್ಧ, ವರ್ಧಮಾನ ಮಹಾವೀರ, ತ್ಯಾಗರಾಜ, ಪುರಂದರದಾಸರು, ಕನಕದಾಸರು, ಮಧ್ವಾಚಾರ್ಯರು, ಭದ್ರಬಾಹುಸ್ವಾಮಿ, ರಾಘವೇಂದ್ರ ಸ್ವಾಮಿಗಳು, ಮಹರ್ಷಿ ದೈವರಾತರು, ಶಾರದಾಪೀಠದ ಮಾಣಿಕ್ಯ, ಕಲಾತಪಸ್ವಿ ವೆಂಕಟಪ್ಪ, ಕಲಾತತ್ತ್ವಮಹರ್ಷಿ ಆನಂದಕುಮಾರಸ್ವಾಮಿ, ಪುರುಷಸರಸ್ವತಿ ರಾಳ್ಳಪಲ್ಲಿ ಅನಂತಕೃಷ್ಣಶರ್ಮರು, ಹಿರಿಯ ಹೆಜ್ಜೆಗಳು, ಸಂಗೀತರತ್ನ ಮೈಸೂರು ಟಿ. ಚೌಡಯ್ಯ, ಅಭಿನವಗುಪ್ತ, ಸಂಗೀತಸಾಮ್ರಾಜ್ಞಿ ಎಂ.ಎಸ್. ಸುಬ್ಬುಲಕ್ಷ್ಮಿ, ರಾಮಕೃಷ್ಣ ಪರಮಹಂಸರ ಮಾತುಕತೆಗಳು.
ರಾಯರು ತಾವು ಬರೆಯಬೇಕಾದ ವ್ಯಕ್ತಿಗಳನ್ನು ಕುರಿತು ಕ್ಷೇತ್ರಕಾರ್ಯ, ಸಂಬದ್ಧ ದಾಖಲೆಗಳ ಪರಾಮರ್ಶೆ, ಒಡನಾಡಿಗಳೊಂದಿಗೆ ಸಂವಾದ ಮುಂತಾದ ಬಗೆಗಳಿಂದ ಅಧ್ಯಯನ ನಡಸಿ ತಮ್ಮ ಮನಸ್ಸಿನಲ್ಲಿ ಸ್ಪಷ್ಟವಾದ ಚಿತ್ರವೊಂದನ್ನು ತಂದುಕೊಳ್ಳುವರು. ಆ ವ್ಯಕ್ತಿ ತಮಗೆ ತಿಳಿದವರೇ ಆದಲ್ಲಿ ತಮ್ಮ ಅನುಭವಗಳನ್ನೇ ಪ್ರಧಾನವಾಗಿ ನಚ್ಚಿ ಮುಂದುವರಿಯುವರು. ಹೀಗೆ ಕಥನದ ಒಳ-ಹೊರಗು ಸಿದ್ಧವಾದ ಬಳಿಕ ಅವರ ಮಾತಿನ ಮೋಡಿ ಕಾರ್ಯಪ್ರವೃತ್ತವಾಗುವುದು. ಎಂದೋ ನಡೆದುಹೋದ, ಮುಂದೆಂದೋ ನಡೆಯುವ, ಎಂದೂ ನಡೆಯದ ಘಟನೆಗಳನ್ನೂ ಕಣ್ಣಿಗೆ ಕಟ್ಟಿಸುವಂಥ ಅವರ ಚಿತ್ರಕ ನಿರೂಪಣೆ ಕಾದಂಬರಿಯಂತೆ ಓದಿಸಿಕೊಂಡುಹೋಗುವ ಗುಣವನ್ನು ಉಳ್ಳದ್ದು. ರಾಯರು ಬರೆವಣಿಗೆಗೆ ಆರಿಸಿಕೊಂಡ ವ್ಯಕ್ತಿಗಳನ್ನು ಕುರಿತು ಆ ಹಿಂದೆ ಅಥವಾ ಅನಂತರ ಹತ್ತಾರು ಪುಸ್ತಕಗಳು ಬಂದಿರಬಹುದು. ಆದರೂ ಇವರ ಬರೆಹ ಗತಾರ್ಥವೆನಿಸುವುದಿಲ್ಲ. ಇವರು ಮಾತ್ರ ಕಾಣಿಸಬಲ್ಲ ಒಳನೋಟಗಳು, ಒದಗಿಸಬಲ್ಲ ಪರಿಪ್ರೇಕ್ಷೆ, ದೊರಕಿಸಬಲ್ಲ ವಿವರಗಳು ಸಾಕಷ್ಟಿರುತ್ತವೆ. ‘ರಾಯರು ಬರೆಯದಿದ್ದರೆ ನಿಜಕ್ಕೂ ಕೊರತೆಯಾಗುತ್ತಿತ್ತು’ ಎಂಬ ಭಾವ ಓದುಗರಿಗೆ ಮೂಡುವುದು ಹುಸಿಯಲ್ಲ.
ರೇಖಾಚಿತ್ರಗಳು ಅವರ ಹೆಚ್ಚಿನ ಬರೆಹಗಳ ಅವಿಭಾಜ್ಯ ಅಂಗಗಳು, ಅಂದದ ಅಲಂಕೃತಿಗಳು. ಹಿಂದೆ ಹೇಳಿದ ‘ಚಿತ್ರಕ’ ಶೈಲಿಗೆ ಇವುಗಳ ಕೊಡುಗೆಯೂ ಇಲ್ಲದಿಲ್ಲ. ಇವನ್ನು ರಾಯರೇ ರಚಿಸುತ್ತಿದ್ದುದು ವಿಶೇಷ. ಈ ಮೂಲಕ ಒಂದು ಮಾಧ್ಯಮದಲ್ಲಿ ಮೂಡಿದ ವಿವರ ಮತ್ತೊಂದು ಮಾಧ್ಯಮದಲ್ಲಿ ಹೇಗೆ ತೋರುತ್ತದೆ ಎಂದು ತಾಳೆ ನೋಡಿ ತಿಳಿಯುವ ಅನನ್ಯ ಅವಕಾಶ ಓದುಗರಿಗೆ ದಕ್ಕುತ್ತದೆ. ಎರಡೂ ಭೂಮಿಕೆಗಳಲ್ಲಿ ರಾಯರ ಅಭಿವ್ಯಕ್ತಿ ಏಕಪ್ರಕಾರವಾದ ಸೌಂದರ್ಯ-ಸೌಷ್ಠವಗಳನ್ನು ಬಿಂಬಿಸಿರುವುದು ಒಡಕಿಲ್ಲದ ಅವರ ಅಂತರಂಗಕ್ಕೂ ಮೇರೆಯರಿಯದ ಅವರ ಕೌಶಲಕ್ಕೂ ದಿಕ್ಸೂಚಿ ಎನ್ನಬಹುದು. ಒಂದೆರಡು ಉದಾಹರಣೆಗಳನ್ನು ಗಮನಿಸಬಹುದು.
ಎಂ.ಎಸ್. ಸುಬ್ಬುಲಕ್ಷ್ಮಿ ಅವರ ವಿನೀತಪ್ರಶಾಂತ ಮುಖಮುದ್ರೆ ಭಕ್ತಿಭಾವವೇ ಮೈದಳೆದಂತೆ ತೋರುವುದು ದಿಟವಷ್ಟೆ. ಇದನ್ನು ರಾಯರು ಅಕ್ಷರ-ರೇಖೆಗಳಲ್ಲಿ ಬಣ್ಣಿಸುವ ಬಗೆ ಹೀಗಿದೆ:
“ಒಡಲಲ್ಲಿ ತುಂಬಿ ಬಂದ ಭಕ್ತಿಭಾವ, ಎಡೆಬಿಡದ ಸಾಧನೆಯಿಂದ ಒದಗಿಬಂದ ಸ್ವರಶುದ್ಧಿ, ಶ್ರುತಿಶುದ್ಧಿ, ಲಯಶುದ್ಧಿಗಳು, ಇವುಗಳೊಂದಿಗೆ ಹೃದಯದಲ್ಲಿ ಅರಳಿಕೊಂಡ ದೈವಶ್ರದ್ಧೆಯ ಬೆಳಕು ಅವರ ಮುಖಮಂಡಲವನ್ನೇ ಬೆಳಗುತ್ತಿದ್ದಿತು. ಆ ಸೌಮ್ಯ, ಸಾತ್ತ್ವಿಕ, ಶಾಂತ, ಮಂದಹಾಸದ ಮುಖಮುದ್ರೆ ಯಾರನ್ನಾದರೂ ಬೆರಗುಗೊಳಿಸುತ್ತಿದ್ದಿತು, ಸೆಳೆದುಕೊಳ್ಳುತ್ತಿದ್ದಿತು.” (‘ಸಂಗೀತ ಸಾಮ್ರಾಜ್ಞಿ ಎಂ.ಎಸ್. ಸುಬ್ಬುಲಕ್ಷ್ಮಿ’. ವಿ.ಸೀ. ಸಂಪದ, ಬೆಂಗಳೂರು, ೨೦೦೫, ಪು. ೬೭)
‘ಕಲಾತಪಸ್ವಿ ವೆಂಕಟಪ್ಪ – ಜೀವನ, ವ್ಯಕ್ತಿ, ಕಲೆ’ (ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೧೯೮೮) ಎಂಬ ಪುಸ್ತಕದ ಮೊದಲಿಗೇ ಬರುವ ವೆಂಕಟಪ್ಪನವರ ಆಕೃತಿಯ ಬಣ್ಣನೆಗೂ ಮುಖಪುಟದಲ್ಲಿ ರಾಯರೇ ರಚಿಸಿರುವ ಅವರ ರೇಖಾಚಿತ್ರಕ್ಕೂ ಪ್ರತ್ಯಂಶಸಾಮ್ಯವಿದೆ:
“ಮುಪ್ಪಡರಿದ್ದರೂ ಮುಖದ ಚೆಲುವು ಮರೆಯಾಗಿರಲಿಲ್ಲ. ಮುಖಮುದ್ರೆಯ ಗಾಂಭೀರ್ಯದೊಂದಿಗೆ ಮುಖದ ಒಂದೊಂದು ವಿವರವನ್ನೂ ಶಿಲ್ಪಿಯೇ ಕಂಡರಿಸಿ ಮಾಡಿದಂತೆ ತೋರುವರು. ಶಿಲ್ಪದಂತೆ ಅಂಗಪ್ರತ್ಯಂಗಗಳೆಲ್ಲ ಸ್ಫುಟವಾಗಿ, ನಾಜೂಕಾಗಿ ಸಿದ್ಧವಾಗಿವೆ. ಮುಖದ ಮೇಲೆ ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬಯಸುವಂತೆ ಕಳೆ. ಹಣೆಯ ಹರವು, ಕಣ್ಣುಗಳ ಹೊಳಪು, ಮೂಗಿನ ಮಾಟ, ಬಿಳಿಮೀಸೆಗಳ ಸೊಗಸು, ತುಂಬಿಕೊಂಡ ಗದ್ದ, ತಲೆಯ ಮೇಲೆ ಜರಿಯಿಲ್ಲದ ಬಿಳಿ ರುಮಾಲು, ಮೈಮೇಲೆ ಹಳೆಯ ಕಾಲದ ಎದೆ ಮುಚ್ಚುವ ಕೋಟು … ಅವರ ನೋಟದಲ್ಲಿ, ನಡಿಗೆಯಲ್ಲಿ, ಕೈಯಾಟದಲ್ಲಿ ಆತ್ಮವಿಶ್ವಾಸ ಎದ್ದುಕಾಣುವುದು. ಸಾಮಾನ್ಯವಾಗಿ ಕಣ್ಣಿಗೆ ಬೀಳುವ ವ್ಯಕ್ತಿಯಂತಲ್ಲ ಇವರು. ಯಾವುದೋ ಸಾಧನೆಯಲ್ಲಿ ತೊಡಗಿ ಏನೋ ಸಿದ್ಧಿಯನ್ನು ಪಡೆದುಕೊಂಡು ಕೃತಕೃತ್ಯರಾದಂತೆ ನಿಲವು.” (ಪು. ೧)[ಚಿತ್ರಗಳಿಗಾಗಿ ಈ ಲೇಖನದ ಮೊದಲ ಪುಟವನ್ನು ನೋಡಿ.]
ಈ ಬಗೆಯ ಚಿತ್ರಗಳನ್ನು ಮುಖ್ಯವಾಗಿ ಎಂ. ಎಸ್. ಸುಬ್ಬುಲಕ್ಷ್ಮಿ, ಅಭಿನವಗುಪ್ತ ಮತ್ತು ರಾಮಕೃಷ್ಣರನ್ನು ಕುರಿತ ಕೃತಿಗಳಲ್ಲಿ ಕಾಣಬಹುದು. ಮೊದಲನೆಯದರಲ್ಲಿ ಸುಬ್ಬುಲಕ್ಷ್ಮಿ ಮತ್ತು ಅವರ ಗಂಡ ಸದಾಶಿವಂ ಅವರ ಚಿತ್ರಗಳಲ್ಲದೆ ಅವರಿಗೆ ನೇರವಾಗಿಯೋ ಪರೋಕ್ಷವಾಗಿಯೋ ಮಾರ್ಗದರ್ಶನ ಮಾಡಿದ ಹಿರಿಯ ಸಂಗೀತಗಾರರ ಚಿತ್ರಗಳಿದ್ದರೆ, ಎರಡನೆಯದರಲ್ಲಿ ಅಭಿನವಗುಪ್ತನ ಪೂರ್ವಜರ ಆಕೃತಿಗಳೂ ವಿವಿಧ ಭಾವಗಳಲ್ಲಿ ತೋರಿರಬಹುದಾದ ಅವನವೇ ಭಂಗಿಗಳ ಕಲ್ಪಿತ ಚಿತ್ರಗಳೂ ಇವೆ. ಇನ್ನು ಮೂರನೆಯದರಲ್ಲಿ ಶ್ರೀರಾಮಕೃಷ್ಣರ ಶಿಷ್ಯರ ಹಾಗೂ ಅನುಯಾಯಿಗಳ ರೇಖಾಚಿತ್ರಗಳಿವೆ. ಇವಲ್ಲದೆ ‘ಹಿರಿಯ ಹೆಜ್ಜೆಗಳು’ ಎಂಬ ವಿನೂತನ ಕೃತಿಯಲ್ಲಿ ಸುಮಾರು ಅರುವತ್ತು ಮಂದಿ ಹಳೆಯ ಕಾಲದ ಸಾಂಪ್ರದಾಯಿಕ ಸಂಗೀತಜ್ಞರ ರೇಖಾಚಿತ್ರಗಳಿವೆ; ನಾಲ್ಕಾರು ವರ್ಣಚಿತ್ರಗಳೂ ಇವೆ. (ಇಲ್ಲಿಯ ಕೆಲವು ಚಿತ್ರಗಳು ಎಂ.ಎಸ್. ಬಗೆಗಿನ ಪುಸ್ತಕದಲ್ಲಿಯೂ ಸೇರಿವೆ.) ರಾಯರು ವ್ಯಕ್ತಿಗಳ ಚಿತ್ರಗಳನ್ನು ಮಾತ್ರವಲ್ಲದೆ ಆಯಾ ಕೃತಿಯ ಆವಶ್ಯಕತೆಗೆ ತಕ್ಕಂತೆ ಗುಡಿ-ಗೋಪುರಗಳ, ವಿಗ್ರಹ-ಪರಿಕರಗಳ ರೇಖಾಚಿತ್ರಗಳನ್ನೂ ರಚಿಸಿರುವುದುಂಟು. ಇವು ಓದಿನ ಏಕತಾನತೆಯನ್ನು ಮುರಿದು ಗ್ರಹಣೆಗೆ ಪುಷ್ಟಿಯನ್ನು ತುಂಬಲು ಸಹಕರಿಸುತ್ತವೆ.
ರತ್ನತ್ರಯ
ರಾಯರು ರಚಿಸಿರುವ ಜೀವನಚರಿತ್ರೆಗಳ ಪೈಕಿ ‘ರತ್ನತ್ರಯ’ ಎಂದು ಗುರುತಿಸಬಹುದಾದುವು
ಶ್ರೀಚಂದ್ರಶೇಖರಭಾರತೀಸ್ವಾಮಿಗಳು, ರಾಳ್ಳಪಲ್ಲಿ ಅನಂತಕೃಷ್ಣಶರ್ಮರು ಮತ್ತು ಕೆ. ವೆಂಕಟಪ್ಪನವರನ್ನು ಕುರಿತ ಹೊತ್ತಿಗೆಗಳು.
ಈ ಮೂರು ಕೃತಿಗಳನ್ನು ರಾಯರು ಬೇರೆಬೇರೆಯ ನೆಲೆಗಳಿಂದ ರಚಿಸಿರುವಂತೆ ತೋರುತ್ತದೆ. ‘ಶಾರದಾಪೀಠದ ಮಾಣಿಕ್ಯ’ದಲ್ಲಿ ಆದ್ಯಂತವಾಗಿ ಪ್ರಶ್ರಯ ಮತ್ತು ಸಂಯಮಗಳು ಕಾಣಿಸುತ್ತವೆ. ಲೇಖಕರು ಮನಃಶಾಸ್ತ್ರದ ವಿದ್ವಾಂಸರೆಂದು ತಿಳಿಯಲು ಅಲ್ಲಲ್ಲಿ ಪುರಾವೆಗಳು ದೊರೆಯುವುವಾದರೂ ಅವರು ಸ್ವಾಮಿಗಳಿಗೆ ಸಮರ್ಪಿತಚಿತ್ತರಾದ ಮಾನಸಶಿಷ್ಯರೆಂದು ನಿಚ್ಚಳವಾಗುತ್ತದೆ. ಇನ್ನು ‘ಪುರುಷಸರಸ್ವತಿ’ಯಲ್ಲಿ ತಮ್ಮ ಗುರುಗಳ ಬಗೆಗಿನ ಪ್ರಾಂಜಲವಾದ ಗೌರವ ಎದ್ದುಕಾಣುತ್ತದೆ. ಪ್ರಶ್ನಾತೀತವಾದ ಅಂಗೀಕಾರವೇ ಇಲ್ಲಿಯ ಆಧಾರಶ್ರುತಿ ಎನ್ನಬಹುದು. ‘ಕಲಾತಪಸ್ವಿ ವೆಂಕಟಪ್ಪ’ ಕೃತಿಯಲ್ಲಾದರೋ ಆದರವು ಆರಾಧನೆಯಾಗದ ಹದವನ್ನು ಕಾಣುತ್ತೇವೆ. ವೆಂಕಟಪ್ಪನವರ ವಿಷಯದಲ್ಲಿ ಏಕವಚನ-ಬಹುವಚನಗಳೆರಡೂ ಬಳಕೆಯಾಗಿರುವುದು ಇದಕ್ಕೆ ಒಂದು ಮಾರ್ಮಿಕ ಸಾಕ್ಷಿ. ಅವರು ಎತ್ತಿಹಿಡಿದ ಮೌಲ್ಯಗಳನ್ನು, ಗಳಿಸಿದ ಕಲಾಸಿದ್ಧಿಯನ್ನು ರಾಯರು ಮೆಚ್ಚಿದರೂ ಅವರ ಕುಂದು-ಕೊರತೆಗಳಿಗೆ ಕುರುಡಾಗದೆ ಅವನ್ನು ಹೃದ್ಯವಾದ ಹಾಸ್ಯದ ಲೇಪದೊಡನೆ ಕಾಣಿಸಬಲ್ಲರು.
ರಾಯರು ಬರೆದ ಜೀವನಚರಿತ್ರೆಗಳ ಪ್ರತಿನಿಧಿಗಳಾಗಿ ಇವನ್ನು ಸ್ವೀಕರಿಸಿ ವಿಶದವಾಗಿ ವಿವೇಚಿಸೋಣ.
‘ಶಾರದಾಪೀಠದ ಮಾಣಿಕ್ಯ’ದ (ಅಭಿಜ್ಞಾನ, ಬೆಂಗಳೂರು, ೨೦೨೧) ‘ಮೊದಲ ಮಾತು’ ನಿಜವಾಗಿ ರಾಮಚಂದ್ರರಾಯರನ್ನು ಅರಿಯಬಯಸುವವರು ಓದಬೇಕಾದ ಮೊದಲ ಮಾತೂ ಹೌದು. ಏಕೆಂದರೆ ಇಲ್ಲಿ ಅವರು ತಮ್ಮ ಗುರುಗಳನ್ನು ಗುರುತಿಸಿಕೊಂಡ ಪ್ರಸ್ತಾವವಿದೆ. “ಅವರನ್ನು ನಾನು ಮೊದಲು ಕಂಡದ್ದು ಹದಿಮೂರು ವರ್ಷಗಳ ಹುಡುಗನಾಗಿದ್ದಾಗ. ಅಂದಿನಿಂದ ಇಂದಿನವರೆಗೂ ಅವರನ್ನು ನಾನು ನೆನೆಯದಿದ್ದ ದಿನವಿಲ್ಲ, ಅವರನ್ನು ಸ್ಮರಿಸದೆ ಆರಂಭಿಸಿದ ಅಧ್ಯಯನವಿಲ್ಲ, ಅವರ ನೆರವನ್ನು ಕೋರದೆ ಮೊದಲು ಮಾಡಿದ ಅನುಷ್ಠಾನವಿಲ್ಲ. ನನಗೆ ಅವರಲ್ಲಿ ಏಕನಿಷ್ಠೆ; ಬೇರೊಬ್ಬ ಗುರುವನ್ನು ಅರಸುವ ಅಗತ್ಯ ನನಗೆ ಈವರೆಗೆ ಬಂದುದಿಲ್ಲ!” (ಪು. ೧೮). ಅಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ದೊಡ್ಡ ಪ್ರಭಾವ ಆಗಬೇಕೆಂದರೆ ಸ್ವಾಮಿಗಳು ಎಷ್ಟು ಮಹಿಮಶಾಲಿಗಳಾಗಿರಬೇಕು, ರಾಯರು ಎಷ್ಟು ಸಂವೇದನಶೀಲರಾಗಿರಬೇಕು ಎಂಬುದು ತಾನಾಗಿಯೇ ತಿಳಿಯುತ್ತದೆ. ಇಲ್ಲಿ ಬಂದಿರುವ ಆ ಪ್ರಥಮ ದರ್ಶನದ ನಿರೂಪಣೆ ನಮ್ಮ ಸಾಮಾನ್ಯದ ಅಲ್ಪತೆಯನ್ನು ಅಡಗಿಸಿ ಯವುದೋ ದೊಡ್ಡ ಅನುಭವಕ್ಕೆ ನಮ್ಮನ್ನು ಒಪ್ಪಿಸುತ್ತದೆ.
ಈ ಕೃತಿಯಲ್ಲಿ ಸ್ವಾಮಿಗಳ ಪೂರ್ವಾಶ್ರಮದಿಂದ ಮೊದಲ್ಗೊಂಡು ಜೀವನ್ಮುಕ್ತರಾದ ಅವರು ವಿದೇಹಮುಕ್ತಿಯನ್ನು ಪಡೆಯುವವರೆಗಿನ ವಿವರಗಳು ಅಧಿಕೃತವಾಗಿ, ಆಕರ್ಷಕವಾಗಿ ಚಿತ್ರಿತವಾಗಿವೆ. ಜೊತೆಗೆ ‘ಶ್ರೀಗುರುಕೃತಿರತ್ನಮಾಲೆ’ ಎಂಬ ಹೆಸರಿನಲ್ಲಿ ಸ್ವಾಮಿಗಳು ರಚಿಸಿದ ಹತ್ತು ಸ್ತೋತ್ರಗಳ ಮೂಲಪಾಠ ಹಾಗೂ ಕನ್ನಡ ಅನುವಾದಗಳಿವೆ. ‘ಪರಿಶಿಷ್ಟ’ದಲ್ಲಿ ಸದಾಶಿವಬ್ರಹ್ಮೇಂದ್ರರ ಪರಿಚಯ, ಆತ್ಮವಿದ್ಯಾವಿಲಾಸದ ಅನುವಾದ (ಮೂಲಶ್ಲೋಕಗಳೊಡನೆ) ಹಾಗೂ ಅವಧೂತಸಂಪ್ರದಾಯದ ಸಂಕ್ಷಿಪ್ತ-ಸಮಗ್ರ ನಿರೂಪಣೆಯಿದೆ.
ಸ್ವಾಮಿಗಳ ಹಿರಿಮೆಯನ್ನು ಮನಗಾಣಿಸುವ ಅನೇಕ ಪ್ರಸಂಗಗಳು ಇಲ್ಲಿ ವಿವೃತವಾಗಿವೆ. ಕೆಲವನ್ನಾದರೂ ಮೆಲುಕುಹಾಕೋಣ. ಸಂನ್ಯಾಸದೀಕ್ಷೆಯ ಹಿಂದಿನ ದಿನ ಹಲವರು ಹಿರಿಯರು ಸಭೆ ಸೇರಿದ್ದರು. ನರಸಿಂಹ (ಸ್ವಾಮಿಗಳ ಪೂರ್ವಾಶ್ರಮದ ಹೆಸರು) ಬ್ರಹ್ಮಚಾರಿಯೂ ಇದ್ದನು. ಹಿರಿಯರ ನಡುವೆ ಬ್ರಹ್ಮಚಾರಿ ಕುಳಿತುಕೊಳ್ಳದೆ ನಿಂತೇ ಇದ್ದನು. ನಾಳೆ ಜಗದ್ಗುರುಗಳಾಗುವವರು ಹೀಗೆ ನಿಂತಿರಬಾರದೆಂದು ಯಾರೋ ಸೂಚಿಸಿದಾಗ ನರಸಿಂಹನಿಂದ ಬಂದ ಉತ್ತರ, “ಅದು ನಾಳೆ ತಾನೆ!” (ಪು. ೬೪). ಬ್ರಹ್ಮಜ್ಞಾನದ ಮೊದಲ ಮೆಟ್ಟಿಲು ವಿವೇಕ ಎಂಬುದನ್ನು ಈ ಪ್ರಸಂಗ ಸೊಗಸಾಗಿ ಅರಹುತ್ತದೆ. ಅದೊಮ್ಮೆ ಯಾತ್ರೆಯ ವೇಳೆ ಪರಿಚಾರಕನೊಬ್ಬ ಗಲಿಬಿಲಿಗೊಂಡು ಬಹಿರ್ವಾಸವನ್ನು ಹಿಂದುಮುಂದಾಗಿ ಅವರಿಗೆ ಹೊದೆಸಿಬಿಟ್ಟ. ಒಳಗಣ ದಾರಗಳು ಗೋಜುಗೋಜಾಗಿ ಹೊರಗೆ ಕಾಣುತ್ತಿದ್ದುವು. ಆ ದಿನವಿಡೀ ಸ್ವಾಮಿಗಳು ಹಾಗೆಯೇ ಸಂಚಾರ ಮಾಡಿದರು. ದಿನಾಂತ್ಯದಲ್ಲಿ ಪರಿಚಾರಕನಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಯಾಚಿಸಿದಾಗ ಸ್ವಾಮಿಗಳು, “ಏನಾಯಿತೀಗ? ಈ ದಿನ ಇದೊಂದು ವೇಷ!” ಎಂದರಂತೆ (ಪು. ೧೦೦). ‘ಕೌಪೀನವಂತಃ ಖಲು ಭಾಗ್ಯವಂತಃ’ ಎಂದು ನಂಬಿದ್ದವರಲ್ಲವೇ ಅವರು? ಇನ್ನೊಮ್ಮೆ ಸಕೇಶಿ ವಿಧವೆಯೊಬ್ಬರಿಗೆ ತೀರ್ಥ ಕೊಟ್ಟು ಸಾಂತ್ವನ ಹೇಳಿದ್ದು (ಪು. ೧೨೯), ಮಗದೊಮ್ಮೆ ಮಗಳ ಮದುವೆಗೆ ದುಡ್ಡಿಲ್ಲದ ಮುದುಕರಿಗೆ ತಮ್ಮ ಎದುರು ಹರಿವಾಣದಲ್ಲಿದ್ದ ಅಷ್ಟೂ ಬೆಳ್ಳಿಯ ನಾಣ್ಯಗಳನ್ನು ಕೊಟ್ಟಿದ್ದು (ಪು. ೧೩೦) ಯತಿವರೇಣ್ಯರೊಬ್ಬರ ಔದಾರ್ಯದ ದ್ಯೋತಕಗಳು. “ಅದ್ವೈತಾನುಭವವೆನ್ನುವುದು ಶಂಕರಾಚಾರ್ಯರ ಶಿಷ್ಯರ ಸ್ವತ್ತೋ? ಶೃಂಗೇರೀಮಠದ ಜಹಗೀರಿಯೋ?” (ಪು. ೧೩೪) ಎಂಬ ಮಾತು ನಿರುಪಾಧಿಕವಾದ ಅವರ ನೆಲೆಗೆ ತಕ್ಕುದಾದುದು. ಇಂಥ ಮಹಾತ್ಮರಿಗೆ ಚಿಕಿತ್ಸೆ ಮಾಡಲು ಬಂದ ಡಾ|| ಗೋವಿಂದಸ್ವಾಮಿ ಎಂಬ ವೈದ್ಯರು “ನಾನು ಸ್ವಾಮಿಗಳ ವ್ಯಾಧಿಯನ್ನು ಗುಣಪಡಿಸಲೆಂದು ಹೋದದ್ದು ನಿಜ; ಆದರೆ ನಡೆದದ್ದು, ನನ್ನ ವ್ಯಾಧಿ ಗುಣವಾಯಿತು!” (ಪು. ೧೦೮) ಎಂದು ಉದ್ಗರಿಸಿದ್ದರಲ್ಲಿ ಅಚ್ಚರಿ ಏನಿದೆ? ಹೀಗೆ ಚಾರಿತ್ರಸ್ಫೋರಕವಾದ ಘಟನೆಗಳನ್ನು ಮೊಗೆಮೊಗೆದು ಕೊಡುವ ರಾಯರು ಜೀವನಚರಿತ್ರೆಯ ಜೀವ ಇರುವುದು ಇವುಗಳಲ್ಲಿಯ ಎಂದು ಧ್ವನಿಸುತ್ತಾರೆ.
ಇನ್ನು ಸ್ವಾಮಿಗಳ ಪೂರ್ವಾಶ್ರಮದ ತಂದೆ-ತಾಯಿಯರಿಗೆ ಹುಟ್ಟಿದ ಹದಿಮೂರು ಮಕ್ಕಳು ಎಳವೆಯಲ್ಲಿಯೇ ಗತಿಸಿ ಹದಿನಾಲ್ಕನೆಯ ಗಂಡುಮಗು ಉಳಿದುಕೊಂಡಿಡ್ಡು, ಅದನ್ನೇ ತಮ್ಮ ಸರ್ವಸ್ವವಾಗಿ ಕಂಡ ಹೆತ್ತವರು ತಮ್ಮ ಆಶೋತ್ತರಗಳನ್ನೆಲ್ಲ ಅದರ ಮೇಲೆ ಹೇರಿದುದು, ಅವರ ಬಡತನ-ಬಡಿವಾರಗಳು, ಮಗನಿಗೆ ಆಂಗ್ಲ ವಿದ್ಯಾಭ್ಯಾಸ ಮಾಡಿಸಬೇಕೆಂದು ತಾವು ಕನಸು ಕಾಣುತ್ತಿದ್ದಾಗ ಮಠದ ಸಂಸ್ಕೃತಪಾಠಶಾಲೆಗೆ ಆತನನ್ನು ಸೇರಿಸಬೇಕಾಗಿ ಬಂದುದು, ಆಡಳಿತ ಅಧಿಕಾರಿಗಳ ದರ್ಪ-ಧೋರಣೆಗಳು, ಬಯಸಿ ಬಯಸಿ ಆದ ಮಗ ಸಂನ್ಯಾಸಿಯಾಗಬೇಕಾದ ಪರಿಸ್ಥಿತಿ ಎದುರಾದಾಗ ತಂದೆ-ತಾಯಂದಿರಿಗಾದ ತೊಳಲಾಟ, ವಿರಕ್ತಿಯನ್ನು ಆತ್ಮಸಾತ್ತಾಗಿ ಮಾಡಿಕೊಳ್ಳಲು ಯತ್ನಿಸುತ್ತಿದ್ದ ಸ್ವಾಮಿಗಳಿಗೆ ಮಠದ ಲೌಕಿಕ ವ್ಯವಹಾರಗಳನ್ನು ನೋಡಬೇಕಾಗಿ ಬಂದ ತೊಡಕು, ಮನೋವ್ಯಾಧಿಪೀಡಿತರೆಂದು ಕೆಲವರು ಆಡಿಕೊಳ್ಳುವ ಮಟ್ಟದಿಂದ ಅವಧೂತರಾದ ಜೀವನ್ಮುಕ್ತರೆಂದು ಇಡಿಯ ಜಗತ್ತೇ ಪೂಜಿಸುವ ಮಟ್ಟಕ್ಕೆ ಅವರ ವಿಕಾಸ – ಈ ಒಂದೊಂದು ವಿವರವೂ ಯಾವ ಶ್ರೇಷ್ಠ ಕಾವ್ಯಕ್ಕೂ ಕಡಮೆ ಇಲ್ಲ.
* * *
‘ಪುರುಷಸರಸ್ವತಿ’ (ವಿ.ಸೀ. ಸಂಪದ, ಬೆಂಗಳೂರು, ೧೯೯೪) ಸಣ್ಣದಾದರೂ ಹಿರಿದಾದ ಕೃತಿ. ಕೇವಲ ಐವತ್ತು ಪುಟಗಳ ಒಳಗೆ ಕರ್ಣಾಟಾಂಧ್ರಸವ್ಯಸಾಚಿ ರಾಳ್ಲಪಲ್ಲಿ ಅನಂತಕೃಷ್ಣಶರ್ಮರ ಸ್ಫಟಿಕೋಪಮ ಜೀವನವನ್ನು ಕಟ್ಟಿಕೊಡುವ ರಾಯರು ಅನುಬಂಧವಾಗಿ ‘ಸಂಗೀತದ ಮೂಲದ್ರವ್ಯಗಳು’ ಎಂಬ ಶರ್ಮರ ತೆಲುಗು ಬರೆಹವೊಂದರ ಕನ್ನಡ ಅನುವಾದವನ್ನು ಒದಗಿಸಿ, ಅವರ ಜೀವನಪಥದ ಪ್ರಮುಖ ಘಟ್ಟಗಳನ್ನೂ ಅವರಿಗೆ ಸಂದ ಪ್ರಶಸ್ತಿಗಳನ್ನೂ ಅವರು ಬರೆದ ಗ್ರಂಥಗಳ ವಿವರಗಳನ್ನೂ ನೀಡಿದ್ದಾರೆ. ಹೀಗೆ ಇದೊಂದು ಸ್ವಯಂಪೂರ್ಣವಾದ ರಚನೆ. ಶರ್ಮರ ಜನ್ಮಶತಮಾನೋತ್ಸವದಲ್ಲಿ ಪ್ರಕಟವಾದ ಈ ಕೃತಿಗೆ ಸಂದರ್ಭದ ಔಚಿತ್ಯವೂ ಸಂದಿದೆ.
ಕೃತಿಯ ಮೊದಲಿಗೆ “ಸಂಪನ್ನವಾದ ಸಂಸ್ಕೃತಿಯೂ ಸದಾಚಾರವೂ ಮನುಷ್ಯನಿಗೆ ಹೇಗೆ ನೆರವಾಗಬಲ್ಲವು ಎನ್ನುವುದಕ್ಕೆ ಇವರು ನಿದರ್ಶನವಾಗಿದ್ದರು. ‘ತುಂಬಿದ ಕೊಡ’ ಎನ್ನುವ ಸಾಮತಿ ಎಲ್ಲಿ ಸಾರ್ಥಕವಾಗುತ್ತದೆ ಎನ್ನುವುದು ಇವರನ್ನು ನೋಡಿದಾಗ ತಿಳಿಯುತ್ತಿದ್ದಿತು. ಇಂಥ ವ್ಯಕ್ತಿಗಳಿದ್ದರೆ ಸಮಾಜವು ಧನ್ಯತೆಯನ್ನು ಪಡೆದೀತು ಎಂಬ ಅರಿವು ಮೂಡುತ್ತಿದ್ದಿತು” (ಪು. ೬) ಎಂದು ಶರ್ಮರ ವ್ಯಕ್ತಿತ್ವವನ್ನು ವರ್ಣಿಸುವ ರಾಯರು ಓದುಗರಿಗೆ ‘ಕೈ ಮುಗಿದು ಒಳಗೆ ಬಾ’ ಎಂದು ಹೇಳದೆಯೇ ಹೇಳಿದ್ದಾರೆ. ಮುಂದೆ ಅವರ ಗುಣಗಳನ್ನು ವಿಸ್ತರಿಸುತ್ತ, “ಸಾಹಿತ್ಯದಲ್ಲಿ, ಸಂಗೀತದಲ್ಲಿ, ಬದುಕಿನಲ್ಲಿ ಅವರು ಹಿಡಿದದ್ದು ರಾಜಮಾರ್ಗ; ನಡೆದದ್ದು ಪಟ್ಟದಾನೆಯಂತೆ. ಅಳುಕದೆ, ಕೊಂಕದೆ, ಬಾಗದೆ, ಆಮಿಷಗಳಿಗೆ ವಶವಾಗದೆ, ಆತಂಕಗಳಿಗೆ ಅಂಜದೆ, ಹೊತ್ತಿಗೆ ಮೂರು ಮೊಳ ನೇಯದೆ, ಹಣಕ್ಕೆ ಆಸೆ ಪಡದೆ, ಯಶಸ್ಸಿಗೆ ಬಾಯಿ ಬಿಡದೆ, ತಮಗೆ ಸರಿಯೆಂದು ತೋರಿದ ದಾರಿಯಲ್ಲೇ ದಿಟ್ಟತನದಿಂದ ನಡೆದು ಬದುಕಿದ ದೊಡ್ಡ ಜೀವ” (ಪು. ೭) ಎನ್ನುವ ಮೂಲಕ ಹೇಳಬೇಕಾದುದನ್ನೆಲ್ಲ ಒಂದೇ ವಾಕ್ಯದಲ್ಲಿ ಸಂಗ್ರಹಿಸಿಬಿಟ್ಟಿದ್ದಾರೆ.
ಶರ್ಮರ ಋಜುತೆ-ರಸಿಕತೆಗಳನ್ನು ಬಣ್ಣಿಸುವ ನಾಲ್ಕಾರು ಪ್ರಸಂಗಗಳು ಇಲ್ಲಿವೆ. ತಮಗೆ ಬಹುವಾಗಿ ನೆರವಾಗಿದ್ದ, ಆಗಿನ ಕಾಲಕ್ಕೆ ತೆಲುಗು ಸಾಹಿತ್ಯವಲಯದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಕಟ್ಟಮಂಚಿ ರಾಮಲಿಂಗ ರೆಡ್ಡಿಯವರ ಬರೆಹವೊಂದನ್ನು ವಿಮರ್ಶಿಸುತ್ತ ಅವರ ಅಭಿಪ್ರಾಯಗಳು “ಬಹುಮಟ್ಟಿಗೆ ಸ್ವಚ್ಛಂದ, ವಿಪ್ಲಾವಕ” ಎಂದು ಟೀಕಿಸಿದ್ದರು; ಹೀಗಿದ್ದರೂ ತಮ್ಮ ಒಂದು ಗ್ರಂಥವನ್ನು ರೆಡ್ಡಿ ಅವರಿಗೇ ಅಂಕಿತ ಮಾಡಿದ್ದರು! (ಪು. ೨೭). ಒಮ್ಮೆ ಯಾರೋ ಒಬ್ಬರು ಮುಪ್ಪಿನಲ್ಲಿ ಅಂಧರಾಗಿ, “ನಾನು ಮಹಾಭಾರತದ ಮಹಾವ್ಯಕ್ತಿಗಳನ್ನು ಅಗೌರವದಿಂದ ವಿಮರ್ಶೆ ಮಾಡಿದ್ದಕ್ಕೆ ಇದು ಫಲ ಎಂದು ಕೆಲವರು ಹೇಳುತ್ತಾರೆ, ನೋಡಿ” ಎಂದು ಶರ್ಮರಲ್ಲಿ ಹೇಳಿಕೊಂಡಾಗ, “ಆ ಕೆಲವರಲ್ಲಿ ನಾನೂ ಒಬ್ಬ” ಎಂದು ನಿಸ್ಸಂಕೋಚವಾಗಿ ಪ್ರತಿಕ್ರಿಯಿಸಿದ್ದರು! (ಪು. ೨೮). ವೀಣೆ ಶೇಷಣ್ಣನವರು ಗತಿಸಿದ ತರುಣದಲ್ಲಿಯೇ ತೆಲುಗು ಪತ್ರಿಕೆಯೊಂದು ಪ್ರಾರಂಭವಾಯಿತು. ಅದರ ಮೊದಲ ಸಂಚಿಕೆಯಲ್ಲಿಯೇ ಶರ್ಮರು ಒಂದು ಲೇಖನವನ್ನು ಬರೆಯಬೇಕಾಗಿ ಬಂದಾಗ ಆ ಮಹಾವೈಣಿಕರನ್ನೇ ಕುರಿತು ಬರೆಯುವೆನೆಂದು ಹೇಳಿ, “ಶೇಷಣ್ಣನವರಂತೆ ಬದುಕಿ ಬಾಳಿ ಯಾರಾದರೂ, ಈ ಪತ್ರಿಕೆಯಾದರೂ, ಸತ್ತರೆ ಅದು ಸಂತೋಷದ ಮತೇ” ಎಂದರು! (ಪು. ೩೭). ಇದು ಶರ್ಮರ ಪುಣ್ಯಾಹ, ಸ್ವಸ್ತಿವಾಚನ. ಇಂಥ ಕೃತಾತ್ಮರು ತಿರುಪತಿಯ ದೇವಸ್ಥಾನದ ಆಸ್ಥಾನವಿದ್ವಾಂಸರಾದ ಸುದ್ದಿ ಪ್ರಸಾದದೊಡನೆ ಬಂದು ತಲಪಿದ ಕೆಲವು ಘಂಟೆಗಳಲ್ಲಿಯೇ ಜೀವಯಾತ್ರೆ ಮುಗಿಸಿದರು (ಪು. ೪೫).
ಶರ್ಮರಂಥ ಧೀಮಂತರ ಕೆಲವು ಮೌಲಿಕ ಆಲೋಚನೆಗಳನ್ನು ಇಲ್ಲಿ ನಮೂದಿಸಿರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಸಂಗೀತದ ವಿನಿಕೆಯನ್ನು ಕುರಿತ ಅವರ ಅಭಿಪ್ರಾಯ ಹೀಗಿದೆ: “ಕೃತಿಯ ರಾಗ-ತಾಳಗಳಿಗೆ ಯಾವ ರೀತಿಯ ಭಂಗವನ್ನೂ ಶೈಥಿಲ್ಯವನ್ನೂ ತಾರದೆ, ಕೇಳುವವರಿಗೆ ಸಾಹಿತ್ಯವು ಚೆನ್ನಾಗಿ ತಿಳಿಯುವಂತೆ, ಸಾಹಿತ್ಯಭಾಗವನ್ನೂ ಅವರು ಆನಂದಿಸುವಂತೆ ಹಾಡಬೇಕು. ಸ್ವರಕಲ್ಪನೆ ಮಾಡುವಾಗ ತಾಳಕ್ಕೆ ಹೆಚ್ಚು ಪ್ರಾಧಾನ್ಯ ಕೊಡದೆ ರಾಗಭಾವವನ್ನು ಪೋಷಿಸಬೇಕು” (ಪು. ೩೯). ಅವರು ಭಗವಂತನಲ್ಲಿ ಮಾಡಿದ ಪ್ರಾರ್ಥನೆ ಎಲ್ಲರಿಗೂ ಯಾವಾಗಲೂ ಉಪಾದೇಯವಾಗಿದೆ – “ನಾನು ಏನನ್ನು ಸಾಧಿಸಲಾಗಿಲ್ಲವೋ ಅದರ ಬಗ್ಗೆ ಚಿಂತೆಯಿರದಂತೆ, ಏನನ್ನು ಸಾಧಿಸಿದ್ದೇನೋ ಅದನ್ನು ಕುರಿತು ಹೆಮ್ಮೆಯಿರದಂತೆ, ಏನನ್ನು ಸಾಧಿಸಬಹುದೋ ಅದರ ಬಗ್ಗೆ ಆಲಸ್ಯವಿರದಂತೆ ಅನುಗ್ರಹಿಸು” – “ಅನಿರ್ವೇದಮಸಿದ್ಧೇಷು ಸಾಧಿತೇಷ್ವನಹಂಕೃತಿಮ್ | ಅನಾಲಸ್ಯಂ ಚ ಸಾಧ್ಯೇಷು ಕೃತ್ಯೇಷ್ವನುಗೃಹಾಣ ನಃ” (ಪು. ೪೯).
* * *
‘ಕಲಾತಪಸ್ವಿ ವೆಂಕಟಪ್ಪ’ (ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೧೯೮೮) ಒಂದು ಸರ್ವಾಂಗಸುಂದರವಾದ ಜೀವನಚರಿತ್ರೆ. ಜೀವನ, ವ್ಯಕ್ತಿ ಮತ್ತು ಕಲೆ ಎಂಬ ವಿಭಾಗಗಳು ಇಲ್ಲಿದ್ದು ವೆಂಕಟಪ್ಪನವರು ಮೈಸೂರಿನಲ್ಲಿ ಹುಟ್ಟಿ, ಬಂಗಾಳದಲ್ಲಿ ಕಲಿತು, ಹಿಮಾಲಯದ ಯಾತ್ರೆಯನ್ನು ಮಾಡಿ, ಮೈಸೂರಿಗೆ ಹಿಂದಿರುಗಿ ಬಂದು, ಕಡೆಯ ವರ್ಷಗಳನ್ನು ಬೆಂಗಳೂರಿನಲ್ಲಿ ಕಳೆದ ಪರಿಯನ್ನೂ ಹಲವು ತೆರದ ವೈಶಿಷ್ಟ್ಯಗಳನ್ನುಳ್ಳ ಅವರ ‘ಒಗಟಿನಂಥ’ ವ್ಯಕ್ತಿತ್ವವನ್ನೂ ಚಿತ್ರ-ಶಿಲ್ಪ ಕಲೆಗಳಲ್ಲಿ ಅವರು ಗಳಿಸಿದ ಸಿದ್ಧಿ-ಪ್ರಸಿದ್ಧಿಗಳನ್ನೂ ಸಾಕಲ್ಯದಿಂದ ವಿವರಿಸಿವೆ. ಕೆಲವು ಪ್ರಾತಿನಿಧಿಕ ಚಿತ್ರಗಳು, ವೆಂಕಟಪ್ಪನವರ ಕನ್ನಡ ಹಸ್ತಾಕ್ಷರದ ಮಾದರಿ ಕೃತಿಯ ಅಂದವನ್ನೂ ಉಪಯುಕ್ತತೆಯನ್ನೂ ಹೆಚ್ಚಿಸಿವೆ.
ಇಡಿಯ ಕೃತಿಯಲ್ಲಿ ನಮ್ಮನ್ನು ಸೆಳೆಯುವುದು ವೆಂಕಟಪ್ಪನವರ ವ್ಯಕ್ತಿತ್ವ ಮತ್ತು ಅದನ್ನು ಕುರಿತ ರಾಯರ ಟಿಪ್ಪಣಿಗಳು. ಮೈಸೂರಿನ ಒಡೆಯರ ನೆರವಿನಿಂದ ಬಂಗಾಳದಲ್ಲಿ ಚಿತ್ರಕಲೆಯನ್ನು ಕಲಿಯಲು ಹೋದ ವೆಂಕಟಪ್ಪನವರಿಗೆ ಕಲ್ಕತ್ತೆಯಲ್ಲಿ ಸರ್ಕಾರದ ಉನ್ನತ ಉದ್ಯೋಗದ ಅವಕಾಶ ದಕ್ಕಿದರೂ ಅದನ್ನು ಒಪ್ಪಿಕೊಳ್ಳಲಿಲ್ಲ. ‘ನನಗೆ ವಿದ್ಯಾರ್ಥಿವೇತನ ನೀಡಿ ಇಲ್ಲಿಗೆ ಕಳುಹಿಸಿದವರು ಮೈಸೂರಿನ ಮಹಾರಾಜರು; ಹೀಗಾಗಿ ನನ್ನ ಸೇವೆ ಸಲ್ಲಬೇಕಾದುದು ಅವರ ನೆಲೆಯಲ್ಲಿ’ (ಪು. ೩೦-೩೧) ಎಂದು ಹೇಳಿ ನಿಷ್ಠೆಯನ್ನು ಮೆರೆದಿದ್ದರು. ಆದರೆ ಅದೇ ಮಹಾರಾಜರು ಗತಿಸಿದ ಬಳಿಕ ಅರಮನೆಯಿಂದ ತಮಗೆ ಅನ್ಯಾಯವಾದಾಗ ಒಡೆಯರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಮೀನ-ಮೇಷ ಎಣಿಸಲಿಲ್ಲ! ಸಾಧು-ಸಂತರ ಬಗೆಗೆ ಅಪಾರವಾದ ಭಕ್ತಿಯನ್ನು ತಳೆದು ತಮ್ಮ ಹದಿಹರೆಯದ ವಯಸ್ಸಿನಲ್ಲಿಯೇ ಹಿಮಾಲಯಯಾತ್ರೆಯನ್ನು ಮಾಡಿದ್ದವರು ವೆಂಕಟಪ್ಪನವರು. ಇಂಥವರು ರಚಿಸಿದ ಒಂದು ಚಿತ್ರ ರಾಮಕೃಷ್ಣ ಆಶ್ರಮವು ಹೊರತರುತ್ತಿದ್ದ ‘ಉದ್ಬೋಧನ’ ಎಂಬ ಪತ್ರಿಕೆಯಲ್ಲಿ ಒಮ್ಮೆ ಪ್ರಕಟವಾಗಿತ್ತು. ರಾಮ ಹನುಮಂತನಿಗೆ ಅಂಗುಲಿಪ್ರದಾನ ಮಾಡುವ ಆ ಚಿತ್ರದಲ್ಲಿ ಬ್ಲಾಕ್ ತಿರುಗುಮುರುಗಾಗಿ ರಾಮನ ಬಲಭುಜದ ಮೇಲೆ ಯಜ್ಞೋಪವೀತ ಇರುವಂತೆ, ಆತ ಎಡಗೈಯಿಂದ ಉಂಗುರವನ್ನು ನೀಡುತ್ತಿರುವಂತೆ ತೋರುತ್ತಿತ್ತು. ಇದರಿಂದ ಕೋಪಗೊಂಡ ವೆಂಕಟಪ್ಪ ಮೊಕದ್ದಮೆ ಹೂಡಿ ಇಬ್ಬರು ಯತಿಗಳಿಂದ ಒಂದೊಂದು ರೂಪಾಯಿ ಸಾಂಕೇತಿಕ ಪರಿಹಾರದ್ರವ್ಯವನ್ನು ಪಡೆದರು! (ಪು. ೬೦-೬೧). ವೆಂಕಟಪ್ಪನವರು ಯಾರಿಂದಲೂ ಏನನ್ನೂ ಸ್ವೀಕರಿಸದ ಅಪರಿಗ್ರಹವ್ರತವನ್ನು ಕಾಪಾಡಿಕೊಂಡಿದ್ದರು. ಇದು ಅತಿರೇಕಕ್ಕೆ ಹೋದಾಗ ರಾಯರ ಟಿಪ್ಪಣಿ ಸೊಗಸಾಗಿದೆ: “ಅಪರಿಗ್ರಹವೇನೊ ಸರಿಯೆ. ಆದರೆ ಅದಕ್ಕೊಂದು ಮಿತಿ ಇರಬೇಡವೆ ಎನಿಸುತ್ತದೆ … [ತಮ್ಮ ಸೋದರಿ] ಹೇರಳೆ ಹಣ್ಣಿನ ಉಪ್ಪಿನಕಾಯಿ ಹಾಕಿದ ಜಾಡಿಯೊಂದನ್ನು ತಂದುಕೊಟ್ಟರೆ, ಈ ಅಪರಿಗ್ರಹವ್ರತಿ ಅದಕ್ಕೆ ಬದಲಾಗಿ ಮೂರುಕಾಲು ಸೇರು ಗೋಧಿಯನ್ನು ತಂದು ಮುಂದಿಟ್ಟರು! ಆಕೆಗೆ ಇದರಿಂದ ಆಗಿರಬಹುದಾದ ಅಳಲನ್ನು ಇವರು ಅರಿತುಕೊಂಡರೆ? ಅದರ ಕಡೆ ಗಮನವಾದರೂ ಇದ್ದಿತೋ?” (ಪು. ೧೦೧). ತಾವು ತಮ್ಮನ್ನು ಸದಾ ‘ಕಲಾವಿದ್ಯಾರ್ಥಿ’ ಎಂದೇ ಕರೆದುಕೊಳ್ಳುತ್ತಿದ್ದ ವೆಂಕಟಪ್ಪ ಕಲೆಯ ವಿಚಾರದಲ್ಲಿ ಸ್ವಲ್ಪದ ಏರುಪೇರನ್ನೂ ಸಹಿಸುತ್ತಿರಲಿಲ್ಲ. ತಮ್ಮಲ್ಲಿ ವೀಣೆಯ ಪಾಠ ಕಲಿಯುತ್ತಿದ್ದ ರುದ್ರಪ್ಪ ಎಂಬಾತ ತಮಗಾಗಿ ವೀಣೆಯೊಂದನ್ನು ತಯಾರಿಸುವುದಾಗಿ ಹೇಳಿ ಆರೇಳು ವರ್ಷಗಳು ಉರುಳಿದರೂ ಕೆಲಸವನ್ನು ಅರ್ಧಾಂತಿಕವಾಗಿ ನಿಲ್ಲಿಸಿಬಿಟ್ಟಾಗ, ಇವರು ಆ ಕೆಲಸವನ್ನು ತಾವೇ ಮುಗಿಸಿ ತಯಾರಾದ ವೀಣೆಯ ಮೇಲೆ ‘ಗುರುದ್ರೋಹಿ ರುದ್ರಪ್ಪನ ದಗ (ಮೋಸ) ವೀಣೆ’ ಎಂದು ಬರೆದರು! (ಪು. ೭೧-೭೨). ರಾಯರು ಹೇಳುತ್ತಾರೆ, “ಸೌಜನ್ಯ ಅವರಲ್ಲಿದ್ದುದು ದಿಟ; ಆದರೆ ಅದನ್ನು ಅನುಭವಿಸಿದವರು ವಿರಳ” (ಪು. ೯೧).
ಕಡೆಯ ಭಾಗದಲ್ಲಿ ಬಂದಿರುವ ವೆಂಕಟಪ್ಪನವರ ಕಲಾಕೃತಿಗಳ ವಿಮರ್ಶೆ ಉದ್ಬೋಧಕವಾಗಿದೆ. ಸದ್ಯಕ್ಕೆ ಒಂದು ಮಾದರಿಯನ್ನು ನೋಡೋಣ: “ಅವರು ತಮ್ಮದಾಗಿಸಿಕೊಂಡ ಶೈಲಿಯಲ್ಲಿ ವಾಸ್ತವಿಕತೆ ಮತ್ತು ಕಾವ್ಯಮನೋಧರ್ಮ ಎರಡೂ ಸೇರಿಕೊಂಡಿವೆ. ಅವರು ಸೌಂದರ್ಯಾನುಭವದ ಪಕ್ಷಪಾತಿಗಳೂ ಹೌದು, ಯಥಾವತ್ತಾದ ವಿವರನಿರೂಪಣೆಗೆ ಒಲಿದವರೂ ಹೌದು … ಭಾವವಾಗಲಿ, ಚೆಲುವಿನ ಪ್ರಕಾರಗಳಾಗಲಿ ರೂಪವನ್ನು ಮಾರ್ಪಡಿಸಬಾರದು; ನಿಯತವಾದ ರೇಖೆಗಳ ನಿಯಮಕ್ಕೆ ಅಡ್ಡಿ ಬರಬಾರದು, ಅಂಗವಿಭಜನೆಯ ನಿಯಮವನ್ನೂ ಕಡೆಗಾಣಿಸಬಾರದು. ರೂಪದ ಸಮಷ್ಟಿ ಮತ್ತು ವ್ಯಷ್ಟಿ ನಿರೂಪಣೆ, ಮೇಲ್ಮೈ ರೇಖೆಗಳ ನಿರ್ದಿಷ್ಟತೆ, ಅವಯವಗಳ ವಿಂಗಡಣೆ, ವರ್ಣಗಳ ಕ್ರಮ, ಭೂಮಿಕೆ ಮತ್ತು ರೂಪಗಳ ವಿನ್ಯಾಸ ಇವನ್ನು ಕಲಾವಿದ ಮರೆಯುವಹಾಗಿಲ್ಲ.” (ಪು. ೧೩೩). ಇದು ಸ್ವಭಾವೋಕ್ತಿ ಮತ್ತು ವಕ್ರೋಕ್ತಿಗಳ, ಲೋಕಧರ್ಮೀ ಹಾಗೂ ನಾಟ್ಯಧರ್ಮಿಗಳ ಹದವನ್ನು ಕಂಡುಕೊಂಡಿದ್ದ ಸಿದ್ಧಹಸ್ತರ ಅನುಭವದ ಮಾತು. ವೆಂಕಟಪ್ಪನವರು ಬಿಡಿಸಿದ ಅವನೀಂದ್ರನಾಥ ಠಾಕೂರರ ಚಿತ್ರದಲ್ಲಿ ಕೈ ಮೇಲಿನ ನೀಲಿಗಟ್ಟಿದ ನರಗಳು, ಅವರು ತೊಟ್ಟ ನಿಲುವಂಗಿಯ ದಾರಗಳು ಕೂಡ ಸ್ಪಷ್ಟವಾಗಿ ಕಾಣುತ್ತವೆಂದೂ ನಾಲ್ಮಡಿ ಕೃಷ್ಣರಾಜ ಒಡೆಯರ ಚಿತ್ರದಲ್ಲಿ ಒಂದು ದಿನ ಮುಖಕ್ಷೌರ ತಪ್ಪಿ ನೀಲಿಗಟ್ಟಿದ ಕೆನ್ನೆಗಳು, ಕಣ್ಣುಗುಡ್ಡೆಗಳಲ್ಲಿ ಮೂಡಿಬಂದ ಪದರಗಳು ಕೂಡ ಸ್ಪಷ್ಟವಾಗಿ ಆಕೃತಿಗೊಂಡಿವೆಯೆಂದೂ ರಾಯರು ವಿವರಿಸುವುದು
(ಪು. ೧೩೯) ಅವರ ಸೂಕ್ಷ್ಮಜ್ಞತೆಯ ಸಂಕೇತ.
ಬರೆಹದ ಬನಿ
ರಾಯರ ನುಡಿಜಾಡಿನ ಹೆಗ್ಗುರುತುಗಳನ್ನು ಹಿಂದೆಯೇ ಕಾಣಿಸಿದ್ದೇನೆ. ಅವುಗಳಿಗೆ ನಿದರ್ಶನವಾಗಿ ಕೆಲವು ಉದ್ಧೃತಿಗಳನ್ನು ಈಗ ಪರಿಶೀಲಿಸೋಣ. ಅವರು ಶ್ರೀಚಂದ್ರಶೇಖರಭಾರತೀಸ್ವಾಮಿಗಳ ಪೂರ್ವಾಶ್ರಮದ ತಾಯಿ-ತಂದೆಯರ ಜೀವನವಿಧಾನವನ್ನು ಬಣ್ಣಿಸುವ ಬಗೆ ಹೀಗೆ:
“ಏನೋ, ಇರಲೊಂದು ಜಾಗ, ತಲೆಯ ಮೇಲೊಂದು ಸೂರು, ಮಠದಿಂದ ಅಷ್ಟಿಷ್ಟು ನೆರವು; ಸಾಕೆಂದು ಸುಮ್ಮನಿದ್ದರು. ಹೆಚ್ಚು ಗಳಿಸುವ ಯಾವ ಪ್ರಯತ್ನವನ್ನೂ ಮಾಡದೆ, ತಾನಾಗಿ ಬಂದುದರಲ್ಲಿ ತೃಪ್ತರಾಗಿ, ಹೆರವರನ್ನು ನೋಡಿ ಕರುಬದೆ, ಜನರ ಗುಂಪಿನಲ್ಲಿ ಬೆರೆಯದೆ, ಬೇರೆಯವರ ಹವ್ಯಾಸಕ್ಕೆ ಕೈಯಿಕ್ಕದೆ, ತಮ್ಮ ಪಾಡಿಗೆ ತಾವು ಇರುತ್ತಿದ್ದರು. ಬ್ರಾಹ್ಮಣ್ಯಕ್ಕೆ ಬೇಕಾದ ಕರ್ಮಾನುಷ್ಠಾನವನ್ನು ಕೈಲಾದಷ್ಟು ಹಾಗೂ ಹೀಗೂ ಉಳಿಸಿಕೊಂಡಿದ್ದರು. ಬಡವರಾದರೆ ಭಕ್ತಿಗೇನು ಬಡತನವೆ? ನಿಷ್ಠೆಗೇನು ಕೊರತೆಯೆ? ಬಡವರೆಂದು ಅವರಿಗೆ ಬೇಸರವೂ ಇಲ್ಲ, ಬೇಗುದಿಯೂ ಇಲ್ಲ.” (‘ಶಾರದಾಪೀಠದ ಮಾಣಿಕ್ಯ’, ಪು. ೩೨)
ತಮ್ಮ ಗುರುಗಳಾದ ರಾಳ್ಳಪಲ್ಲಿ ಅನಂತಕೃಷ್ಣಶರ್ಮರನ್ನು ರಾಯರು ಹೀಗೆ ಕಂಡರಿಸಿದ್ದಾರೆ:
“ಅವರ ವ್ಯಕ್ತಿತ್ವದ ಮುಖಗಳು ಒಂದೆ, ಎರಡೆ? ಮಾತನಾಡುವಾಗ ಮುತ್ತಿನ ಚಪ್ಪರ ಕಟ್ಟುತ್ತಿದ್ದರು; ಬರೆಯುವಾಗ ಬಂಗಾರದ ಬಲೆಯನ್ನು ಬೀಸುತ್ತಿದ್ದರು; ಹಾಡುವಾಗ ಹನಿಜೇನು ಸೂಸುತ್ತಿದ್ದರು. ನೋಡಿದರೆ ನೆಮ್ಮದಿಯನ್ನುಂಟುಮಾಡುವುದು ಅವರಿಗೆ ಸಹಜವಾಗಿ ಒಲಿದುಬಂದಿದ್ದ ಕಲೆ. ಅವರ ನಡೆ, ನುಡಿ, ಉಡುಗೆ, ತೊಡುಗೆ, ನಿಲುವು, ನೆಲೆ ಎಲ್ಲದರಲ್ಲೂ ಓರಣ, ಅಚ್ಚುಕಟ್ಟು. ಯಾವುದರಲ್ಲೂ ಒಂದಿಷ್ಟೂ ಆತಂಕವಿಲ್ಲ, ಆತುರವಿಲ್ಲ, ಗೊಂದಲವಿಲ್ಲ.” (‘ಪುರುಷಸರಸ್ವತಿ’, ಪು. ೬)
ಜಗನ್ಮಾನ್ಯ ವಿದ್ವಾಂಸರಾದ ಎಂ. ಹಿರಿಯಣ್ಣನವರನ್ನು ಕುರಿತು ಮಕ್ಕಳಿಗಾಗಿ ಬರೆದ ಪುಸ್ತಕದಲ್ಲಿ ಅವರನ್ನು ಪರಿಚಯಿಸುವ ಪರಿ ಹೀಗಿದೆ:
“ಏರುಪೇರಿಲ್ಲದ, ಆಡಂಬರವಿಲ್ಲದ ಬದುಕನ್ನು ಗದ್ದಲವಿಲ್ಲದೆ ಬದುಕಿ, ತಮ್ಮ ಬದುಕಿನಂತೆಯೇ ಬರಹವನ್ನೂ ನಿರಾಡಂಬರ, ಸರಳ, ಸುಂದರ, ಸ್ಪಷ್ಟ ಮಾಡಿ ತೀರಿಕೊಂಡವರು ಅವರು. ತಮ್ಮಲ್ಲಿ ಅಪಾರವಾದ ಪಾಂಡಿತ್ಯ ಇದ್ದಿತಾದರೂ ಅದನ್ನು ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ. ‘ಎಲೆ ಮರೆಯ ಕಾಯಿ’ ಎನ್ನುತ್ತಾರಲ್ಲ; ಹಾಗೆಯೇ ಇದ್ದವರು. ಅವರು ಆದರೆ ಕಾಯಲ್ಲ, ಹಣ್ಣು ಅಷ್ಟೆ. ಹೀಗಾಗಿ ಬಹು ಮಂದಿ ಅವರ ಹೆಸರನ್ನು ಕೇಳರಿಯರು.” (‘ಪ್ರೊ|| ಎಂ. ಹಿರಿಯಣ್ಣ’. ಐ.ಬಿ.ಎಚ್. ಪ್ರಕಾಶನ, ಬೆಂಗಳೂರು, ೧೯೭೩, ಪು. ೬-೭)
ಇಲ್ಲಿಯ ಒಂದೊಂದು ವಾಕ್ಯವೂ ಸರಳಸುಭಗವಾದ ಗದ್ಯಶೈಲಿಗೆ ಮಾದರಿ. ಆಡುನುಡಿಯ ಪರಿಮಳ ಕಟ್ಟಿದ ಅಚ್ಚಗನ್ನಡದ ಮಾತುಗಳು, ಅತಿಯಾಗದ ಪ್ರತ್ಯಯಲೋಪಗಳು, ವೆಗಟಾಗದ ಅವಧಾರಣೆಗಳು, ಎದ್ದುತೋರದ ಕಾವ್ಯಸ್ಪರ್ಶ, ತಿಳಿಯಾದ ಅರ್ಥಕ್ರಮ, ಸವಿಯಾದ ಶಬ್ದಮೈತ್ರಿ – ಯಾವ ಪುಣ್ಯದ ಫಲವೋ!
ಪೂರಕ ಸಾಮಗ್ರಿ
ರೇಖಾಚಿತ್ರಗಳಂತೆ ರಾಯರು ಹಲವು ತೆರದ ಪೂರಕ ಸಾಮಗ್ರಿಯನ್ನು ಹೊಂದಿಸಿಕೊಟ್ಟು ನಮ್ಮ ಅರಿವಿನ ಸೀಮೆಗಳನ್ನು ವಿಸ್ತರಿಸುತ್ತಾರೆ; ಎಂದೂ ಮರೆಯಲಾಗದ ಓದಿನ ಅನುಭವವನ್ನು ಒದಗಿಸುತ್ತಾರೆ.
ವಯೊಲಿನ್ ವಾದಕರಾಗಿ ಖ್ಯಾತನಾಮರಾದ ಟಿ. ಚೌಡಯ್ಯನವರನ್ನು ಕುರಿತು ಬರೆಯುತ್ತ, ಕರ್ಣಾಟಕಸಂಗೀತದ ವಿಕಾಸಕ್ಕೆ ಕಾವೇರಿ ನದಿ ಹೇಗೆ ಸಾಕ್ಷಿಯಾಗಿದೆ ಎಂದು ವಿವರಿಸುತ್ತಾರೆ: “ಕರ್ನಾಟಕ ಸಂಗೀತದ ಭಾಗ್ಯದೇವತೆಯರಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಶಾಸ್ತ್ರಿಗಳು ನಮ್ಮೆದುರು ತೋರಿಕೊಂಡದ್ದು ತಿರುವಾರೂರಿನಲ್ಲಿ; ಕಾವೇರಿಯ ತೀರವೇ ಅದು. ತ್ಯಾಗರಾಜರು ನೆಲೆಸಿ ಕಣ್ಮರೆಯಾದದ್ದು ತಿರುವಯ್ಯಾರಿನಲ್ಲಿ; ಅದೂ ಕಾವೇರಿಯ ದಡವೇ … ಕಾವೇರಿಯ ತೀರದಲ್ಲೇ ಇರುವ ಹನಸೋಗೆ ವೀಣೆ ಶೇಷಣ್ಣನವರು ಹುಟ್ಟಿ ಬೆಳೆದ ಜಾಗ. ರುದ್ರಪಟ್ಟಣವಂತೂ ಸರಿಯೇ ಸರಿ; ಸಂಗೀತದ ತೌರೂರು. ಕಾವೇರಿ ಮುಂದೆ ಹರಿದುಬಂದ ಶ್ರೀರಂಗಪಟ್ಟಣವೂ ಸಂಗೀತಕ್ಷೇತ್ರವೇ. ಇನ್ನೂ ಮುಂದೆ ಕಾವೇರಿಯು ಕಪಿಲೆಯೊಂದಿಗೆ ಕೂಡಿಕೊಳ್ಳುವ ತಾಣ ತಿರುಮಕೂಡಲು ನಮ್ಮ ಚೌಡಯ್ಯನವರ ಊರೇ … ಅಂತೂ ಕಾವೇರಿ ನದಿಗೂ ಕರ್ನಾಟಕ ಸಂಗೀತಕ್ಕೂ ಮೊದಲಿಂದ ಅದೇನೋ ನಂಟು.” (‘ಸಂಗೀತರತ್ನ ಮೈಸೂರು ಟಿ. ಚೌಡಯ್ಯ’. ಶ್ರೀರಾಮಸೇವಾಮಂಡಲಿ ಟ್ರಸ್ಟ್, ಬೆಂಗಳೂರು, ೧೯೯೪, ಪು. ೧)
ಬಹುಮುಖಪ್ರಜ್ಞಾಶಾಲಿ ಆನಂದ ಕೆ. ಕುಮಾರಸ್ವಾಮಿ ಅವರನ್ನು ಕುರಿತು ಬರೆಯುತ್ತ, ನಮ್ಮ ದೇಶದ ಸ್ವಾತಂತ್ರ್ಯಪ್ರಾಪ್ತಿಯ ಇತಿಹಾಸದಲ್ಲಿ ‘ಸ್ವದೇಶೀ’ ಮನೋಭಾವ ವಹಿಸಿದ ಪಾತ್ರವನ್ನೂ ಅದಕ್ಕೆ ಕುಮಾರಸ್ವಾಮಿಯವರು ನೀಡಿದ ದಿಶಾನಿರ್ದೇಶನವನ್ನೂ ವಿವರಿಸಿದ್ದಾರೆ: “ಸ್ವರಾಜ್ಯದ ಕಲ್ಪನೆ ಬೇರೂರಲು ‘ಸ್ವದೇಶೀ’ ಎಂಬ ಮಂತ್ರ ಅಗತ್ಯವಾಯಿತು … ಇದನ್ನು ಆನಂದ ಕುಮಾರಸ್ವಾಮಿ ಅನುಮೋದಿಸಿ, ‘ಸ್ವದೇಶೀ’ ಎನ್ನುವ ಕಲ್ಪನೆ ದಿಟವಾಗಬೇಕಾದರೆ ದೇಶದ ಜನ ತಮ್ಮ ಧರ್ಮ, ಕಲೆ, ರೀತಿ, ನೀತಿಗಳ ಹಿರಿಮೆಯನ್ನು ಅರಿತುಕೊಳ್ಳಬೇಕು ಎಂದರು. ಸ್ವದೇಶೀಭಾವನೆಯಲ್ಲೊಂದು ಆಧ್ಯಾತ್ಮಿಕತೆ ಇದೆಯೆಂದು ಅವರ ವಾದ …ರಾಜಕೀಯವಾಗಿ ಮಾತ್ರ ವಿದೇಶೀ-ಆಡಳಿತದಿಂದ ಮುಕ್ತಿಯನ್ನು ಪಡೆದುಕೊಂಡರೆ ಅದು ದಿಟವಾದ ಸ್ವಾತಂತ್ರ್ಯವಲ್ಲ; ಆರ್ಥಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ದೇಶ ‘ಸ್ವತಂತ್ರ’ವಾಗುವುದು ಮುಖ್ಯವಾದ ವಿಚಾರ. ದೇಶ ಸ್ವತಂತ್ರವಾದರೆ ನಿಮ್ಮ ಸಂದೇಶವೇನು ಎಂದು ಯಾರೋ ಆನಂದ ಕುಮಾರಸ್ವಾಮಿಯವರನ್ನು ಕೇಳಿದರಂತೆ. ಅದಕ್ಕೆ ಅವರು “ನೀವು ನೀವೇ ಆಗಿರಬೇಕು” (‘Be Yourself’) ಎಂದು ಉತ್ತರ ನೀಡಿದರು.” (‘ಕಲಾತತ್ತ್ವಮಹರ್ಷಿ ಆನಂದ ಕುಮಾರಸ್ವಾಮಿ’. ಅಭಿಜ್ಞಾನ, ಬೆಂಗಳೂರು, ೨೦೦೦. ಪು. ೧೬-೧೭)
ಇಂಥ ವಿವರಗಳನ್ನು ವೆಂಕಟಪ್ಪನವರ ಬಗೆಗಿನ ಕೃತಿಯಲ್ಲಿಯೂ ಕಾಣಬಹುದು. ಅದರ ಮೊದಲ ಭಾಗದಲ್ಲಿ ಮೈಸೂರಿನ ಅರಸರು, ದಿವಾನರು, ಅರಮನೆಯ ಕೆಲಸಗಳನ್ನು ಸಾಗಿಸುತ್ತಿದ್ದ ‘ದಫ್ತರ್’ ಇಲಾಖೆಗಳು, ಬಕ್ಷಿಗಳೇ ಮುಂತಾದ ಮೇಲ್ವಿಚಾರಕರು, ಆಗಿನ ಕಾಲದ ಸಾಂಸ್ಕೃತಿಕ ವಾತಾವರಣ – ಇವೆಲ್ಲ ಸಂಗ್ರಹವಾಗಿ, ಚೊಕ್ಕಟವಾಗಿ ಒಕ್ಕಣೆಗೊಂಡಿವೆ. ಜೊತೆಗೆ ಆಗಿನ ಕಾಲದಲ್ಲಿ ಹ್ಯಾವೆಲ್, ಆನಂದ ಕುಮಾರಸ್ವಾಮಿ, ಅವನೀಂದ್ರನಾಥ ಠಾಕೂರ್, ಸೋದರಿ ನಿವೇದಿತಾ ಮುಂತಾದವರಿಂದ ಪ್ರಚುರಗೊಂಡ ಭಾರತದ ಸಾಂಪ್ರದಾಯಿಕ ಚಿತ್ರಕಲೆಯ ವಿವರಗಳೂ ಅಧಿಕೃತವಾಗಿ ಬಂದಿವೆ. ಇನ್ನು ಶ್ರೀಚಂದ್ರಶೇಖರಭಾರತೀಸ್ವಾಮಿಗಳನ್ನು ಕುರಿತ ಕೃತಿಯಲ್ಲಿ ಶೃಂಗೇರಿ ಮಠದ ಇತಿಹಾಸ, ಅದಕ್ಕೂ ಮೈಸೂರಿನ ಒಡೆಯರಿಗೂ ಇರುವ ಸಂಬಂಧ, ಪ್ರಸಿದ್ಧವಾದ ಶ್ರೀಮಹಾಗಣಪತಿ ವಾಕ್ಯಾರ್ಥಸಭೆಯ ಇತಿಹಾಸ, ವಿಕಾಸವೇ ಮೊದಲಾದ ಸಂಗತಿಗಳು ಸಮುಚಿತವಾಗಿ ಸೇರಿವೆ. ರಾಳ್ಲಪಲ್ಲಿ ಅವರ ಬಗೆಗಿನ ಹೊತ್ತಿಗೆಯಲ್ಲಿ ‘ಆಕಾಶವಾಣಿ’ ಎಂಬ ಶಬ್ದವನ್ನು ಅವರು ಟಂಕಿಸಿದ ಅಪೂರ್ವ ವಿವರ ದಾಖಲಾಗಿದೆ.
ಈ ಬಗೆಯ ಸಾಮಗ್ರಿ ಉಪಯುಕ್ತವಾದ ಅನುಬಂಧಗಳಾಗಿಯೂ ಮೈದಾಳುವುದನ್ನು ಈಗಾಗಲೇ ಕಂಡಿದ್ದೇವೆ. ಇದನ್ನು ‘ಅಭಿನವಗುಪ್ತ’ ಪುಸ್ತಕದಲ್ಲಿಯೂ (ಅಭಿಜ್ಞಾನ, ಬೆಂಗಳೂರು, ೨೦೧೬) ಗಮನಿಸಬಹುದು. ಅಲ್ಲಿ ‘ಗುರುನಾಥಪರಾಮರ್ಶ’ ಮತ್ತು ‘ಭಗವದ್ಗೀತಾರ್ಥಸಂಗ್ರಹ’ಗಳ ಕೆಲವು ಶ್ಲೋಕಗಳು ಸಾನುವಾದವಾಗಿ ಸೇರಿರುವುದೂ ಪ್ರತ್ಯಭಿಜ್ಞಾಶೈವದರ್ಶನದ ಬಗೆಗೆ ಒಂದು ಸಣ್ಣ ಲೇಖನ ಜೊತೆಗೂಡಿರುವುದೂ ಅಧ್ಯಯನಾಸಕ್ತರ ಪಾಲಿಗೆ ಹಬ್ಬವೆನಿಸಿವೆ.
ಪೂರಕ ಸಂಗತಿಗಳು ಮಾಹಿತಿಯಾಗಿ ಮಾತ್ರವೇ ಅಲ್ಲದೆ ಘಟನೆಗಳಾಗಿಯೂ ಅರಳಿವೆ. ಇದಕ್ಕೊಂದು ಸೊಗಸಾದ ನಿದರ್ಶನ ಸುಬ್ಬುಲಕ್ಷ್ಮಿ ಅವರ ಬಗೆಗಿನ ಕೃತಿಯಲ್ಲಿದೆ. ಕಲಾವಿದರ ವಿವಿಧ ಸ್ವಭಾವಗಳನ್ನು ತಿಳಿಹೇಳಲು ತಮ್ಮ ಗುರುಗಳು ನಿರೂಪಿಸಿದ್ದ ಎರಡು ಪ್ರಸಂಗಗಳನ್ನು ರಾಯರಿಲ್ಲಿ ಕಾಣಿಸಿದ್ದಾರೆ. ಹಿಂದಿನ ಕಾಲದ ವೈಣಿಕರೊಬ್ಬರು ವಾದನ ಮಾಡುವಾಗ ಒಳ್ಳೆಯ ನುಡಿಕಾರ ಬಂದರೆ, ಹೆಮ್ಮೆಯಿಂದ “ಹಾಗೆ ನುಡಿಯೇ ಮುಂಡೆ!” (‘ಅಷ್ಟ್ಲ ಪಲುಕವೇ, ಮುಂಡ!’) ಎಂದು ತಮ್ಮ ಮೆಚ್ಚಿಗೆ ಸೂಚಿಸುತ್ತಿದ್ದರಂತೆ. ಆದರೆ ವೈಣಿಕಶಿಖಾಮಣಿ ಶೇಷಣ್ಣನವರು “ನನ್ನ ಶಕ್ತಿಯಿದ್ದಷ್ಟು ನಾನು ನುಡಿಸಬಲ್ಲೆ; ವೀಣೆಯ ಸಾಮರ್ಥ್ಯಕ್ಕೆ ಸರಿಯಾಗಿ ನುಡಿಸುವ ಯೋಗ್ಯತೆ ನನಗೆಲ್ಲಿ ಬಂತು?” ಎಂದು ನಮ್ರತೆಯಿಂದ ನಿವೇದಿಸುತ್ತಿದ್ದರಂತೆ.
ಇಂಥ ಸಂದರ್ಭಗಳಿಂದಲ್ಲವೇ ಕೃತಿ ಕಳೆಗಟ್ಟುವುದು? ಎಂದೋ ಯಾರೋ ಹೇಳಿದ ಸಂಗತಿಯನ್ನು, ಎಲ್ಲೋ ಓದಿದ ವಿವರವನ್ನು ನೆನಪಿನಲ್ಲಿ ಇರಿಸಿಕೊಂಡು ಸರಿಯಾದ ಎಡೆಯಲ್ಲಿ ಬಳಸಿಕೊಳ್ಳುವುದು ತನ್ನಂತೆಯೇ ಒಂದು ಕಲೆ. ಇದರಲ್ಲಿ ನುರಿತವರು ರಾಯರು.
ಸಾರಗ್ರಹಣ
ರಾಯರ ಅಸಮಾನ ಶಕ್ತಿಗಳಲ್ಲಿ ಒಂದು ಸಾರಗ್ರಹಣ. ತಿಳಿಸಬೇಕಿರುವ ವಿಷಯ ಬೆಟ್ಟದಷ್ಟೇ ಇರಲಿ, ಅದು ಎಣಿಕೆಗೆ ಎಟುಕದಷ್ಟು ಮುಖಗಳನ್ನೇ ಹೊಂದಿರಲಿ, ರಾಯರು ಅದರ ಹೃದಯವನ್ನು ಹೊಕ್ಕು, ಸಾರವನ್ನು ಹೀರಿ ಕೆಲವೇ ಪರಿಣಾಮಕರ ವಾಕ್ಯಗಳಲ್ಲಿ ಹೇಳಿಬಿಡುವರು. ಇದು ಬರೆಹಕ್ಕೊಂದು ಅಡಕವನ್ನೂ ಅಧಿಕೃತತೆಯನ್ನೂ ತಂದುಕೊಡುತ್ತದೆ. ಇಂಥ ವಾಕ್ಯಗಳು ಅದೆಷ್ಟು ದೂರಗಾಮಿಯಾದ ಧ್ವನಿಗಳನ್ನು ಹೊರಡಿಸಬಲ್ಲುವೆಂದು ಇಡಿಯ ಕೃತಿಯನ್ನು ಓದುವಷ್ಟರಲ್ಲಿ ನಮಗೇ ಮನವರಿಕೆಯಾಗುತ್ತದೆ. ಒಂದೆರಡು ಉದಾಹರಣೆಗಳನ್ನು ಪರಿಶೀಲಿಸೋಣ.
‘ಭಾರತ-ಭಾರತಿ ಪುಸ್ತಕಸಂಪದ’ದಲ್ಲಿ ತ್ಯಾಗರಾಜರನ್ನು ಕುರಿತು ಮಕ್ಕಳಿಗಾಗಿ ಬರೆದ ಕೃತಿಯಲ್ಲಿಯ ಒಂದು ವಾಕ್ಯವೃಂದ ಹೀಗಿದೆ: “ತ್ಯಾಗರಾಜರು ಇದ್ದ ಕಾಲ ತುಂಬ ಹಿಂದೇನಲ್ಲ. ಅವರು ತೀರಿಕೊಂಡು ಈಗ್ಗೆ ನೂರ ಇಪ್ಪತ್ತೈದು ವರ್ಷಗಳಾದುವಷ್ಟೆ. ಆದರೆ ಎಷ್ಟೋ ಸಾವಿರಾರು ವರ್ಷಗಳ ಹಿಂದಿದ್ದ ಋಷಿಗಳಂತೆ ಅವರ ವಿಚಾರವಾಗಿ ನಮ್ಮ ಕಲ್ಪನೆಯಿದೆ. ದೇವಲೋಕದ ಋಷಿ ನಾರದರ ಹೆಸರು ಕೇಳಿದ್ದೀರಷ್ಟೆ. ತ್ಯಾಗರಾಜರು ನಾರದರ ಅವತಾರವೆಂದೇ ಅವರ ಶಿಷ್ಯಪರಂಪರೆಯ ನಂಬಿಕೆ. ರಾಮಾಯಣವನ್ನು ರಚಿಸಿದ ವಾಲ್ಮೀಕಿ ಋಷಿಗಳೇ ತ್ಯಾಗರಾಜರಾಗಿ ಅವತರಿಸಿದರೆಂದೂ ಹೇಳುತ್ತಾರೆ. ಜನ ಹೀಗೆ ನಂಬಬೇಕಾದರೆ ತ್ಯಾಗರಾಜರು ಎಷ್ಟು ದೊಡ್ಡ ಮನುಷ್ಯರಾಗಿರಬೇಕು, ಎಂಥ ಮಹಾತ್ಮರಾಗಿರಬೇಕು, ಊಹಿಸಿಕೊಳ್ಳಿ.” (ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು, ೨೦೨೦, ಪು. ೧೨)
ಅಭಿನವಗುಪ್ತನ ಬಗೆಗೆ ರಾಯರು ಬರೆದಿರುವ ಪುಸ್ತಕದ ಮೊದಲ ಕಂಡಿಕೆಯೇ ಆತನ ವ್ಯಕ್ತಿತ್ವಸರ್ವಸ್ವವನ್ನು ನಮ್ಮೆದುರು ತೆರೆದಿಡುತ್ತದೆ: “ನಮ್ಮ ದೇಶದಲ್ಲಿ ನಡುಯುಗದಲ್ಲಿ ತೋರಿಕೊಂಡ ಮೇಧಾವಿಗಳ ಸಾಲಿನಲ್ಲಿ ಮೊದಲಿಗೇ ನೆನೆಯಬೇಕಾದ ಕೆಲವರಲ್ಲಿ ಅಭಿನವಗುಪ್ತ (ಕ್ರಿಸ್ತಾಬ್ದ ಹತ್ತನೆಯ ಶತಮಾನದಲ್ಲಿದ್ದವನು) ಸೇರುತ್ತಾನೆ … ತನ್ನ ಬರಹಗಳಿಂದ ಸಂಸ್ಕೃತಸಾಹಿತ್ಯದಲ್ಲಿ ಹೊಸದೊಂದು ಕಳೆಯನ್ನು ಮೂಡಿಸಿದವನು, ಹೊಸದೊಂದು ಪ್ರೇರಣೆಯನ್ನು ಒದಗಿಸಿದವನು. ಎಲ್ಲ ವಿದ್ವಾಂಸರ ವಿಸ್ಮಯಕ್ಕೆ ಕಾರಣವಾಗುವಂಥ ಬಹುಮುಖ ಪ್ರತಿಭೆ ಅವನದ್ದು. ಕವಿ, ವಿಮರ್ಶಕ, ವ್ಯಾಖ್ಯಾನಕಾರ, ದಾರ್ಶನಿಕ, ದ್ರಷ್ಟಾರ, ಆಲಂಕಾರಿಕ, ಭಾವುಕ, ಅನುಭಾವಿ, ಗಾಯಕ, ಯೋಗಿ, ಸಂತ, ಸಿದ್ಧ; ಅವನ ಸಾರಸ್ವತವ್ಯವಸಾಯ ಅನನ್ಯಸಾಧಾರಣವಾದುದು; ಬಹುಶ್ರುತತ್ವಕ್ಕೆ ಅವನಿಗಿಂತ ಮಿಗಿಲಾದ ನಿದರ್ಶನ ಸಿಗಲಾರದು. ಗುರೂಪದೇಶದಿಂದ, ಶಾಸ್ತಾçಧ್ಯಯನದಿಂದ, ಸಾಧನೆಯ ಕಾವಿನಿಂದ, ಅನುಭವದಿಂದ ಅವನು ಪಡೆದುಕೊಂಡ ಸಿದ್ಧಿಯ ಬೆಳಕಿನ ತುಣುಕುಗಳು ಅವನ ಬರಹಗಳಲ್ಲಿ ಧಾರಾಳವಾಗಿ ಕಾಣಿಸಿಕೊಳ್ಳುತ್ತವೆ.” (ಪು. ೧)
ಎಂ.ಎಸ್. ಸುಬ್ಬುಲಕ್ಷ್ಮಿ ಮತ್ತು ಸದಾಶಿವಂ ಅವರ ದಾಂಪತ್ಯವನ್ನು ರಾಯರು ಬಣ್ಣಿಸುವುದು ಹೀಗೆ: “ಅದೊಂದು ಅನನ್ಯ, ಅನ್ಯೋನ್ಯ, ಅನುಕೂಲ ದಾಂಪತ್ಯ … ಅನುರಾಗ ಪರಸ್ಪರವಲ್ಲದಿದ್ದರೂ ಊರ್ಜಿತವಾಯಿತು. ಅದೊಂದು ಅನ್ಯೋನ್ಯಾಶ್ರಯದ ಕತೆ. ಅವರಿಂದ ಇವರು ನೆಲೆಗಂಡರು, ಇವರಿಂದ ಅವರು ಮೇಲೇರಿದರು. ಸ್ವಭಾವದಲ್ಲಿ ತೀರ ವಿಭಿನ್ನವಾದರೂ ಅವಿನಾಭಾವ ಅಗತ್ಯವಾಯಿತು.” (‘ಸಂಗೀತಸಾಮ್ರಾಜ್ಞಿ ಎಂ. ಎಸ್. ಸುಬ್ಬುಲಕ್ಷ್ಮಿ’, ಪು. ೮)
ಅದೇ ಕೃತಿಯಲ್ಲಿ ಸುಬ್ಬುಲಕ್ಷ್ಮಿ ಅವರ ಸಾಧನೆಯ ನೆಲೆಗಟ್ಟನ್ನು ಹೀಗೆ ಗುರುತಿಸಿದ್ದಾರೆ: “…ಹೃದಯ ತುಂಬಿ ಹಾಡುವುದು, ಕೈ ತುಂಬಿ ಕೊಡುವುದು; ಮೊದಲನೆಯದರಿಂದ ರಸಿಕರಂಜನೆ, ಎರಡನೆಯದರಿಂದ ಆರ್ತರಕ್ಷಣೆ. ಭಗವದ್ಗೀತೆ ಹೇಳುವಂತೆ ಮೊದಲು ಯಜ್ಞ (ಸಂಗೀತಸಮಾರಾಧನೆಯಿಂದ ಭಗವತ್ಪೂಜೆ), ಅನಂತರ ದಾನ. ಎರಡಕ್ಕೂ ಆಕರವಾಗಿ ತಪಸ್ಸು (ಅವರ ಬದುಕೇ).” (ಪು. ೧೯)
ಉಪಸಂಹಾರ
ಸಂಸ್ಕೃತಪದ್ಯವೊಂದು ಹೇಳುತ್ತದೆ: ಯಾವುದು ಮುಕ್ಕಣ್ಣನ ಮೂರನೆಯ ಕಣ್ಣಿಗೂ ಮೀರಿದ್ದೋ, ನಾಲ್ಮೊಗ ಬೊಮ್ಮನ ಎಂಟು ಕಂಗಳಿಗೂ ಕಾಣುವುದಿಲ್ಲವೋ, ಷಣ್ಮುಖನ ಹನ್ನೆರಡು ನೇತ್ರಗಳಿಗೂ ಅತೀತವಾದುದೋ, ಇಂದ್ರನ ಸಾವಿರ ಕಣ್ಣುಗಳ ದೃಷ್ಟಿಗೂ ದಕ್ಕುವುದಿಲ್ಲವೋ, ಮೂರು ಲೋಕಗಳು ಕಲೆತು ಕಂಡರೂ ಗೋಚರವಾಗದೋ ಅದನ್ನು ಅಂತರ್ದೃಷ್ಟಿಯುಳ್ಳ ಪಂಡಿತರು ಕಣ್ಣು ಮುಚ್ಚಿಕೊಂಡೇ ದರ್ಶಿಸುತ್ತಾರೆ – “ಯನ್ನೇತ್ರೆöÊಸ್ತಿçಭಿರೀಕ್ಷತೇ ನ ಗಿರಿಶೋ ನಾಷ್ಟಾಭಿರಪ್ಯಬ್ಜಭೂಃ ಸ್ಕಂದೋ ದ್ವಾದಶಭಿಸ್ತಥಾ ನ ಮಘವಾ ಚಕ್ಷುಃಸಹಸ್ರೇಣ ವಾ | ಸಂಭೂಯಾಪಿ ಜಗತ್ತçಯಸ್ಯ ನಯನೈರ್ದ್ರಷ್ಟುಂ ನ ಯತ್ಪಾರ್ಯತೇ ಪ್ರತ್ಯಾಹೃತ್ಯ ದೃಶೌ ಸಮಾಹಿತಧಿಯಃ ಪಶ್ಯಂತಿ ತತ್ಪಂಡಿತಾಃ ||” (ಸುಭಾಷಿತರತ್ನಕೋಶ, ೧೨೪೯)
ಸಾ.ಕೃ. ರಾಮಚಂದ್ರರಾಯರು ಇಂಥ ಪಂಡಿತರು. ಅವರು ಗುಣ-ಗಾತ್ರಗಳಲ್ಲಿ ದೊಡ್ಡ ಗಣನೆಗೆ ಬರುವ ವ್ಯಕ್ತಿಚಿತ್ರ ಮತ್ತು ಜೀವನಚರಿತ್ರೆಗಳನ್ನು ರಚಿಸಿ ಈ ಸಾಹಿತ್ಯಪ್ರಕಾರಕ್ಕೆ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ವ್ಯಕ್ತಿಚಿತ್ರಗಳಲ್ಲಿ ಜೀವನಚರಿತ್ರೆಯ ಸಮಗ್ರತೆಯನ್ನೂ ಜೀವನಚರಿತ್ರೆಯಲ್ಲಿ ವ್ಯಕ್ತಿಚಿತ್ರದ ಆಪ್ತತೆಯನ್ನೂ ತುಂಬಿಕೊಡುವುದು ಅವರ ಬಲ್ಮೆ. ರೇಖಾಚಿತ್ರಗಳಿಂದ, ಬಗೆಬಗೆಯ ಪೂರಕ ಸಂಗತಿಗಳಿಂದ ಪುಷ್ಟವಾದ ಅವರ ಪುಸ್ತಕಗಳು ಓದಿನ ರುಚಿಯನ್ನು ತಿಳಿಯದ ವಾಚಕರನ್ನೂ ಸೆಳೆಯಬಲ್ಲುವು; ಪರಿನಿಷ್ಠಿತರಾದ ಓದುಗರನ್ನೂ ಹಿಡಿದಿಡಬಲ್ಲುವು. ಇನ್ನು ಅವರ ಭಾಷೆಯಂತೂ ಸೌಂದರ್ಯದ ಸೆಲೆ, ತಿಳಿತನದ ನೆಲೆ, ಬಂಗಾರದ ಬೆಳೆ. ಅದನ್ನು ಸವಿದು ಧನ್ಯರಾಗೋಣ.