ಅಂದಿನ ಬ್ರಿಟಿಷರ ದರ್ಪ, ದೌರ್ಜನ್ಯ, ನಯವಂಚನೆ ಮತ್ತು ಅಸಹಾಯಕ `ಇಂಡಿಯಾ’ದ ಬಗ್ಗೆ ಅಮೆರಿಕ ಮತ್ತು ಯೂರೋಪಿನ (ಇಂಗ್ಲೆಂಡೂ ಸೇರಿದಂತೆ) ಇಂಗ್ಲಿಷ್ ಬಲ್ಲ ಜಗತ್ತಿನ ಜನಮಾನಸದ ಗಮನವನ್ನು ದಾಖಲೆಗಳ ಮೂಲಕ ಸೆಳೆಯುವುದೇ ಈ ಕೃತಿಯ ಮೂಲ ಉದ್ದೇಶ ಆಗಿತ್ತು. ಅದರಿಂದಾಗಿಯೇ ಅವರು ವಿದೇಶೀ ಓದುಗರಿಗೆ ಚಿರಪರಿಚಿತವಾದ ರಾಜಕಾರಣಿಗಳ, ಅಧಿಕಾರಿಗಳ, ಲೇಖಕರ ಹಾಗೂ ತತ್ತ್ವಜ್ಞಾನಿಗಳ ಹೆಸರು, ಹುದ್ದೆ ಹಾಗೂ ಅಭಿಪ್ರಾಯಗಳನ್ನು ಈ ಕೃತಿಯಲ್ಲಿ ಹೇರಳವಾಗಿ ಲೇಖಕರು ಉಲ್ಲೇಖಿಸುತ್ತಾರೆ. ಈ ಪುಸ್ತಕದಲ್ಲಿ ನಾಲ್ಕು ಅಧ್ಯಾಯಗಳೂ, ಪುಸ್ತಕದ ಕೊನೆಗೆ `ನಿರ್ಣಯ’ವೆಂಬ ಚಿಕ್ಕ ಅಧ್ಯಾಯವೂ ಇದೆ. ಮೊದಲ ಅಧ್ಯಾಯದಲ್ಲಿ ಬ್ರಿಟಿಷರು ಬರುವುದಕ್ಕೂ ಮುಂಚೆ ಭಾರತ ಹೇಗಿತ್ತು ಎಂಬುದರ ಬಗ್ಗೆ ಸಂಡರ್ಲ್ಯಾಂಡ್ರ ಹೇಳಿಕೆಯನ್ನು ಉದ್ಧರಿಸುತ್ತಾರೆ.
ನಮ್ಮೆಲ್ಲರ ತಾಯ್ನೆಲ ಭಾರತ. ಇದು ಅನಾದಿಕಾಲದಿಂದಲೂ ಮುಂದುವರಿದುಕೊಂಡು ಬಂದ ನಂಬಿಕೆ. ಆದರೆ ಬ್ರಿಟಿಷರು ‘ಭಾರತ’ದ ಹೆಸರನ್ನೇ ‘ಇಂಡಿಯಾ’ ಎಂದಾಗಿಸಿಬಿಟ್ಟರು. ಬರೆ ಹೆಸರನ್ನಷ್ಟೇ ಬದಲಾಯಿಸಿದ್ದಲ್ಲ, ನಮ್ಮ ನಂಬಿಕೆಗಳನ್ನೂ, ಪರಂಪರೆಯನ್ನೂ, ನಡೆನುಡಿಗಳನ್ನೂ ಕುಲಗೆಡಿಸಿಬಿಟ್ಟರು. ಅಷ್ಟೇ ಅಲ್ಲ, ನಮ್ಮ ಚಿಂತನೆಯ ಧಾಟಿಯನ್ನೇ ಅಡ್ಡದಾರಿಗೆ ಹಚ್ಚಿಬಿಟ್ಟರು. ವ್ಯಾಪಾರದ ನೆಪದಲ್ಲಿ ನಮ್ಮ ನೆಲದಲ್ಲಿ ಕಾಲಿರಿಸಿ ನಮ್ಮ ತಲೆಯ ಮೇಲೆಯೆ ಕುಳಿತುಬಿಟ್ಟರು. ಸಂಪತ್ತಿನ ನೆಲೆವೀಡಾಗಿದ್ದ ನಮ್ಮ ನಾಡನ್ನು ಬಡತನದ ಕೂಪಕ್ಕೆ ತಳ್ಳಿದರು. ನಯವಂಚಕತೆಯಿಂದಲೂ ದುಂಡಾವೃತ್ತಿಯಿಂದಲೂ ಇಲ್ಲಿಯದೆಲ್ಲವನ್ನೂ ಲೂಟಿ ಮಾಡಿ ತಮ್ಮ ದೌಲತ್ತನ್ನು ಹೆಚ್ಚಿಸಿಕೊಂಡರು.
ಅವರ ದುರಾಡಳಿತವನ್ನು ಅಂಗುಲಂಗುಲವಾಗಿ ವಿವರಿಸುವ ಹಲವು ಗ್ರಂಥಗಳು ಇಂದು ದೊರೆಯುತ್ತವೆ. ಅವುಗಳಲ್ಲಿ ವಿಲ್ ಡುರಾಂಟರ ‘ದಿ ಕೇಸ್ ಫಾರ್ ಇಂಡಿಯಾ’ವೂ ಒಂದು. ಅದನ್ನು ‘ಇಂಡಿಯಾ ಅಂದು’ ಎಂಬ ಶಿರೋನಾಮೆಯಡಿಯಲ್ಲಿ ಕೆ.ಎನ್. ವೆಂಕಟಸುಬ್ಬರಾವ್ ಅವರು (ಪ್ರ: ಕಾಮಧೇನು ಪುಸ್ತಕ ಭವನ, ಬೆಂಗಳೂರು) ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಶೀರ್ಷಿಕೆಯಲ್ಲಿ ‘ಇಂಡಿಯಾ’ ಎಂಬ ಪದ ಬಳಸಿದೆ. ಅದು ಬ್ರಿಟಿಷರ ಆಳ್ವಿಕೆಯಲ್ಲಿದ್ದ ಭಾರತವನ್ನು ಸಮರ್ಥವಾಗಿ ಸಂಕೇತಿಸುತ್ತದೆ ಎನಿಸುತ್ತದೆ.
ವಿಲ್ ಡುರಾಂಟ್ (೧೮೮೫-೧೯೮೧) ಮೂಲತಃ ಅಮೆರಿಕದವರು. ‘ನಾಗರಿಕತೆಯ ಕಥೆ’ (ದಿ ಸ್ಟೋರಿ ಆಫ್ ಸಿವಿಲೈಸೇಷನ್) ಎಂಬ ಬೃಹತ್ ಗ್ರಂಥ ಸರಣಿಯನ್ನು ಅವರು ಹನ್ನೊಂದು ಸಂಪುಟಗಳಲ್ಲಿ ಸಿದ್ಧಪಡಿಸಿದ್ದಾರೆ. ಈ ಪುಸ್ತಕವನ್ನು ಸಿದ್ಧಪಡಿಸುವ ಸಂದರ್ಭದಲ್ಲಿ ಅವರು ವಿವರ ಕಲೆಹಾಕಲು ಹಾಗೂ ಸಾಂಸ್ಕೃತಿಕ ಇತಿಹಾಸವನ್ನು ಕಣ್ಣಾರೆ ಕಾಣಲು ೧೯೩೦ರಲ್ಲಿ ಭಾರತಕ್ಕೂ ಬಂದಿದ್ದರು. ಆಗ ಮಾನವಜನಾಂಗದ ಐದನೇ ಒಂದರಷ್ಟು ಜನರು ಜಗತ್ತಿನಲ್ಲಿ ಎಂದೂ ಕಂಡುಬರದಂತಹ ಕಡುಬಡತನ ಮತ್ತು ತುಳಿತಕ್ಕೆ ಒಳಗಾಗಿರುವುದು ಹಾಗೂ ಇಲ್ಲಿನ ವಿದ್ಯಮಾನಗಳು ಅವರನ್ನು ವಿಚಲಿತರನ್ನಾಗಿ ಮಾಡಿಬಿಟ್ಟವು. ಅವರು ಬರೆಯುತ್ತಾರೆ – “ಯಾವುದೇ ಸರ್ಕಾರ ತನ್ನ ಪ್ರಜೆಗಳನ್ನೇ ಇಂತಹ ಹೀನ ಅವಸ್ಥೆಗೆ ದೂಡುವುದು ಸಾಧ್ಯವೆಂದು ನಾನು ಯೋಚಿಸಿಯೇ ಇರಲಿಲ್ಲ” ಎಂದು. ಇದರಿಂದಾಗಿ ನಾಗರಿಕತೆಯ ಕಥೆಯನ್ನು ಬರೆಯುವ ಕೆಲಸವನ್ನು ಕೆಲಕಾಲ ಪಕ್ಕಕ್ಕಿಟ್ಟು ಅವರು ‘ಇಂಡಿಯಾ’ದ ಕರುಣಕಥೆಯನ್ನು ಬರೆಯಲು ಮೊದಲು ಮಾಡಿದರು.
ಈ ಕೃತಿಯ ಮೂಲ ಉದ್ದೇಶ ಅಂದಿನ ಬ್ರಿಟಿಷರ ದರ್ಪ, ದೌರ್ಜನ್ಯ, ನಯವಂಚನೆ ಮತ್ತು ಅಸಹಾಯಕ ‘ಇಂಡಿಯಾ’ದ ಬಗ್ಗೆ ಅಮೆರಿಕ ಮತ್ತು ಯೂರೋಪಿನ (ಇಂಗ್ಲೆಂಡೂ ಸೇರಿದಂತೆ) ಇಂಗ್ಲಿಷ್ ಬಲ್ಲ ಜಗತ್ತಿನ ಜನಮಾನಸದ ಗಮನವನ್ನು ದಾಖಲೆಗಳ ಮೂಲಕ ಸೆಳೆಯುವುದೇ ಆಗಿತ್ತು. ಅದರಿಂದಾಗಿಯೇ ಅವರು ವಿದೇಶೀ ಓದುಗರಿಗೆ ಚಿರಪರಿಚಿತವಾದ ರಾಜಕಾರಣಿಗಳ, ಅಧಿಕಾರಿಗಳ, ಲೇಖಕರ ಹಾಗೂ ತತ್ತ್ವಜ್ಞಾನಿಗಳ ಹೆಸರು, ಹುದ್ದೆ ಹಾಗೂ ಅಭಿಪ್ರಾಯಗಳನ್ನು ಕೃತಿಯಲ್ಲಿ ಹೇರಳವಾಗಿ ಉಲ್ಲೇಖಿಸುತ್ತಾರೆ.
ಈ ಪುಸ್ತಕದಲ್ಲಿ ನಾಲ್ಕು ಅಧ್ಯಾಯಗಳೂ, ಪುಸ್ತಕದ ಕೊನೆಗೆ ‘ನಿರ್ಣಯ’ವೆಂಬ ಚಿಕ್ಕ ಅಧ್ಯಾಯವೂ ಇದೆ. ಮೊದಲ ಅಧ್ಯಾಯದಲ್ಲಿ ಬ್ರಿಟಿಷರು ಬರುವುದಕ್ಕೂ ಮುಂಚೆ ಭಾರತ ಹೇಗಿತ್ತು ಎಂಬುದರ ಬಗ್ಗೆ ಸಂಡರ್ಲ್ಯಾಂಡ್ರ ಹೇಳಿಕೆಯನ್ನು ಉದ್ಧರಿಸುತ್ತಾರೆ:
“ಹಿಂದೂಗಳು ವ್ಯಾಪಕ ಮತ್ತು ವೈವಿಧ್ಯಪೂರ್ಣ ಉದ್ಯಮಗಳ ಮೂಲಕ ಸಂಪತ್ತನ್ನು ಸೃಷ್ಟಿಸಿದ್ದರು. ನಾಗರಿಕ ಜಗತ್ತು ತಿಳಿದಿದ್ದ ಎಲ್ಲ ರೀತಿಯ ಉತ್ಪನ್ನಗಳನ್ನೂ ಇಂಡಿಯಾ ಬಹಳ ಹಿಂದೆಯೇ ಉತ್ಪಾದಿಸುತ್ತಿದ್ದಿತು. ಇಂಡಿಯಾದ ಉನ್ನತ ಔದ್ಯಮಿಕ ಉತ್ಪಾದನೆಯ ಮಟ್ಟ ಯೂರೋಪ್ ಅಥವಾ ಏಷ್ಯಾದ ಯಾವುದೇ ದೇಶವನ್ನೂ ಮೀರಿಸಿದ್ದಾಗಿತ್ತು. ಅದರ ಉತ್ಪಾದನೆಯಾಗಿದ್ದ ಉತ್ತಮ ಗುಣಮಟ್ಟದ ಹತ್ತಿ, ಉಣ್ಣೆ, ರೇಷ್ಮೆ ಮತ್ತು ನಾರುಬಟ್ಟೆಗಳು ಪ್ರಖ್ಯಾತವಾಗಿದ್ದವು. ಅಂತೆಯೇ ಆಭರಣ, ಕುಂಬಾರಿಕೆ, ಕಬ್ಬಿಣ, ಉಕ್ಕು, ಬೆಳ್ಳಿ, ಬಂಗಾರದ ಉತ್ಪನ್ನಗಳ ಉತ್ಕೃಷ್ಟ ಗುಣಮಟ್ಟ, ಮನೋಹರ ವಾಸ್ತುಶಿಲ್ಪ, ಎಂಜಿನಿಯರಿಂಗ್ ಕೌಶಲ, ಹಡಗು ನಿರ್ಮಾಣ, ಲೇವಾದೇವಿ ವ್ಯವಸ್ಥೆ, ವ್ಯಾಪಕ ವ್ಯಾಪಾರಗಳು ಜಗತ್ತಿನ ಮನಸೆಳೆದಿದ್ದವು… ಬ್ರಿಟಿಷರು ಕಾಲಿಟ್ಟಾಗ ಕಂಡಿದ್ದು ಇಂತಹ ಇಂಡಿಯಾವನ್ನು…”
* * *
ಲೂಟಿ ಮಾಡಿದ ಪರಿ
ಇಂತಹ ಐಶ್ವರ್ಯವನ್ನು ಸ್ವಾಧೀನಪಡಿಸಿಕೊಳ್ಳುವುದು ಈಸ್ಟ್ ಇಂಡಿಯಾ ಕಂಪೆನಿಯ ಉದ್ದೇಶವಾಗಿತ್ತು. ಇಂಡಿಯಾದಲ್ಲಿ ಎಂದಿಗೂ ಊರ್ಜಿತವಾಗುವಂತಹ ಸುಭದ್ರ ಇಂಗ್ಲಿಷ್ ಆಧಿಪತ್ಯವನ್ನು ಸ್ಥಾಪಿಸುವುದಾಗಿ ಕಂಪೆನಿಯ ನಿರ್ದೇಶಕರು ೧೬೮೬ರಲ್ಲಿ ಘೋಷಿಸಿದ್ದರು. ಕಂಪೆನಿಯು ಹಿಂದೂ ಅಧಿಕಾರಿಗಳಿಂದ ಮದ್ರಾಸ್, ಕೋಲ್ಕತಾ ಮತ್ತು ಮುಂಬೈಯಲ್ಲಿ ವ್ಯಾಪಾರಿ ಮಳಿಗೆಗಳನ್ನು ಬಾಡಿಗೆಗೆ ಪಡೆದಿದ್ದರು. ಅಧಿಕಾರಿಗಳ ಅಪ್ಪಣೆ ಇಲ್ಲದೆ ಮಳಿಗೆಗಳ ಸುತ್ತ ಕೋಟೆ ಕಟ್ಟಿದ್ದರು. ಕೋಟೆಯೊಳಗೆ ಗುಟ್ಟಾಗಿ ಫಿರಂಗಿಗಳನ್ನು ಸಾಗಿಸಿ ಸೇನೆ ಜಮಾಯಿಸಿದ್ದರು. ಇಂತಹ ನಡೆಯನ್ನು ವಿರೋಧಿಸಿದ್ದ ಬಂಗಾಳದ ರಾಜನು ೧೭೫೬ರಲ್ಲಿ ಇಂಗ್ಲಿಷ್ ಫೋರ್ಟ್ ವಿಲಿಯಮ್ಸ್ ಮೇಲೆ ದಂಡೆತ್ತಿ ಹೋಗಿ ಒಂದುನೂರ ನಲವತ್ತಾರು ಇಂಗ್ಲಿಷರನ್ನು ಕೈದು ಮಾಡಿದ್ದನು. ಕೈದಿಗಳನ್ನು ಕೋಲ್ಕತಾದ ‘ಬ್ಲಾಕ್ಹೋಲ್’ ಸೆರೆಮನೆಗೆ ದಬ್ಬಿದ್ದನು. ಮಾರನೆಯ ಬೆಳಗ್ಗೆ ಕೇವಲ ಇಪ್ಪತ್ತಮೂರು ಕೈದಿಗಳು ಮಾತ್ರ ಜೀವಂತವಾಗಿದ್ದರು.
ಒಂದು ವರ್ಷದ ಬಳಿಕ ರಾಬರ್ಟ್ ಕ್ಲೈವ್ನ ಸೇನೆ ಬಂಗಾಳದ ಸೇನೆಯನ್ನು ಪ್ಲಾಸಿಯಲ್ಲಿ ಪರಾಭವಗೊಳಿಸಿತು. ಈ ಕದನದಲ್ಲಿ ಇಪ್ಪತ್ತೆರಡು ಮಂದಿ ಬ್ರಿಟಿಷರು ಪ್ರಾಣ ಬಿಟ್ಟಿದ್ದರು. ತನ್ನ ಕಂಪೆನಿಯು ಇಂಡಿಯಾದ ಅತ್ಯಂತ ಶ್ರೀಮಂತ ಪ್ರಾಂತದ ಒಡೆಯ ಎಂದು ಕ್ಲೈವ್ ಘೋಷಿಸಿದ್ದನು. ಅಷ್ಟು ಸಾಲದೆಂಬಂತೆ, ಒಪ್ಪಂದಗಳನ್ನು ನಕಲು ಮಾಡಿ, ಅವನ್ನೂ ಉಲ್ಲಂಘಿಸಿ, ಆಸುಪಾಸಿನ ಪ್ರದೇಶಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿದ್ದನು. ಸ್ಥಳೀಯ ರಾಜರುಗಳಿಗೆ ಆಮಿಷವೊಡ್ಡಿ, ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿ, ಅಪಾರ ಸಂಪತ್ತನ್ನು ಸಂಗ್ರಹಿಸಿ ನಾಲ್ಕು ದಶಲಕ್ಷ ಡಾಲರ್ಗಳನ್ನು ನಾವೆಯ ಮೂಲಕ ಕೋಲ್ಕತಾಗೆ ಗುಟ್ಟಾಗಿ ರವಾನಿಸಿದ್ದನು. ಕಂಪೆನಿಗೆ ಸಲ್ಲುವ ವಾರ್ಷಿಕ ಕಪ್ಪವಾದ ೧,೪೦,೦೦೦ ಡಾಲರ್ಗಳಲ್ಲದೆ ತಾನು ನೀಡಿದ ನೆರವಿನ ಸ್ವರೂಪ ಮತ್ತು ಒದಗಿಸಿದ ಬಂದೂಕುಗಳ ಸಂಖ್ಯೆಯ ಆಧಾರದ ಮೇಲೆ ಹಿಂದೂ ದೊರೆಗಳಿಂದ ೧೧,೭೦,೦೦೦ ಡಾಲರ್ಗಳಷ್ಟು ಮೊತ್ತವನ್ನು ‘ಉಡುಗೊರೆ’ ರೂಪದಲ್ಲಿ ಪಡೆದು ತನ್ನ ಸ್ವಂತ ಖಜಾನೆಯಲ್ಲಿ ಅಡಗಿಸಿದ್ದನು. ಈ ವಿದ್ಯಮಾನವನ್ನು ತನಿಖೆ ಮಾಡಿದ್ದ ಬ್ರಿಟಿಷ್ ಸಂಸತ್ತು ಅವನನ್ನು ದೋಷಮುಕ್ತಗೊಳಿಸಿತ್ತು. ‘ಆ ದೇಶದ ಅಪಾರ ಸಂಪತ್ತಿನಲ್ಲಿ ನಾನು ಸ್ವಂತಕ್ಕೆ ಗಳಿಸಿದ್ದು ಅತ್ಯಲ್ಪ, ಯೋಚಿಸಿದಾಗ ನನ್ನ ಮಿತಿಯಿಂದ ನಾನೇ ಚಕಿತನಾದೆ’ ಎಂದಿದ್ದ ಅವನು ಅಫೀಮ್ನ ಸೇವನೆಗೆ ಬಲಿಯಾಗಿದ್ದ. ಇಂಥ ನೈತಿಕ ನೆಲೆಯ ಮಹನೀಯರೇ ಇಂಡಿಯಾದಲ್ಲಿ ‘ನಾಗರಿಕತೆ’ಯನ್ನು ರೂಢಿಸಲು ಉದ್ದೇಶಿಸಿದ್ದರು!
ಕಂಪೆನಿಯಲ್ಲಿ ಕ್ಲೈವ್ನ ಉತ್ತರಾಧಿಕಾರಿಗಳಾಗಿದ್ದವರು ಇಂಡಿಯಾದ ಸಂಪನ್ಮೂಲಗಳ ಮೇಲೆ ಒಂದು ಶತಮಾನದ ಕಾಲ ಅವ್ಯಾಹತವಾಗಿ ಅತಿಕ್ರಮಣ ಮಾಡಿ ಯಾವುದೇ ಅಡೆತಡೆಗಳಿಲ್ಲದೆ ಲಾಭ ಮಾಡಿಕೊಂಡರು. ಇಂಡಿಯಾದಲ್ಲಿ ೨೦,೦೦,೦೦೦ ಡಾಲರ್ಗಳಿಗೆ ಖರೀದಿಸಿದ ವಸ್ತುಗಳನ್ನು ಇಂಗ್ಲೆಂಡಿನಲ್ಲಿ ೧,೦೦,೦೦,೦೦೦ ಡಾಲರ್ಗಳಿಗೆ ಮಾರುತ್ತಿದ್ದರು. ಕಂಪೆನಿಯ ಪರವಾಗಿ ಮತ್ತು ಖಾಸಗಿಯಾಗಿ ಒಳನಾಡು ವ್ಯಾಪಾರಕ್ಕೆ ಇಳಿದಿದ್ದ ಅವರು ಹಿಂದೂ ವ್ಯಾಪಾರಿಗಳು ತೆರುತ್ತಿದ್ದ ಸುಂಕವನ್ನೂ ತಾವು ತೆರಲು ನಿರಾಕರಿಸಿ ಇಡೀ ವ್ಯಾಪಾರ-ವಹಿವಾಟುಗಳ ಮೇಲೆ ಲಾಭದಾಯಕ ಏಕಸ್ವಾಮ್ಯ ಸಾಧಿಸಿದ್ದರು. ಕಂಪೆನಿಯು ತನ್ನ ಪಾಲುದಾರರಿಗೆ ನೀಡುತ್ತಿದ್ದ ಲಾಭಾಂಶದಿಂದಾಗಿ ಷೇರುಪೇಟೆಯಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಪ್ರತಿ ಷೇರಿನ ಬೆಲೆ ೩೨,೦೦೦ ಡಾಲರ್ಗಳಿಗೆ ಏರಿತ್ತು. ಕಂಪೆನಿಯ ದಲ್ಲಾಳಿಗಳು ಅವರಿಗೆ ಲಭ್ಯವಾದ ಅಥವಾ ನೀಡಲು ನಿರಾಕರಿಸಲಾದ ಆಮಿಷದ ಮೊತ್ತದ ಆಧಾರದಲ್ಲಿ ಹಿಂದೂ ಆಡಳಿತಗಾರರನ್ನು ಸ್ಥಾಪಿಸುತ್ತಿದ್ದರು. ಈ ಕ್ರಮದಲ್ಲಿ ದಲ್ಲಾಳಿಗಳು ಹತ್ತು ವರ್ಷದ ಅವಧಿಯಲ್ಲಿ ಗಳಿಸಿದ ‘ಉಡುಗೊರೆ’ಯ ಮೊತ್ತ ೩,೦೦,೦೦,೦೦೦ ಡಾಲರಿನಷ್ಟಾಗಿದ್ದವು. ಸಂದರ್ಭಕ್ಕೆ ತಕ್ಕಂತೆ ದಾಖಲೆಗಳನ್ನು ತಿದ್ದಿ ಅಥವಾ ನಕಲು ಮಾಡಿ, ದಾಖಲೆಗಳನ್ನು ತಿದ್ದಿದ್ದಕ್ಕೆ ಅಥವಾ ನಕಲು ಮಾಡಿದ್ದಕ್ಕೆ ಹಿಂದೂಗಳನ್ನು ನೇಣಿಗೆ ಏರಿಸುತ್ತಿದ್ದರು. ಮೀರ್ಜಾಫರ್ಗೆ ಬಂಗಾಳದ ಅಧಿಕಾರ ನೀಡಲು ಕ್ಲೈವ್ನು ಅವನಿಂದ ೬೧,೯೨,೮೭೫ ಡಾಲರ್ ಪಡೆದಿದ್ದನು. ಕ್ಲೈವ್ನ ಉತ್ತರಾಧಿಕಾರಿಗಳು ಮೀರ್ಜಾಫರ್ನನ್ನು ಪದಚ್ಯುತಗೊಳಿಸಿ ಅವನ ಸ್ಥಾನದಲ್ಲಿ ಮೀರ್ ಕಾಸಿಂನನ್ನು ಕೂರಿಸಲು ೧೦,೦೧,೩೪೫ ಡಾಲರ್ ಕಸಿದಿದ್ದರು. ಮೂರು ವರ್ಷಗಳ ಬಳಿಕ ೨೫,೦೦,೮೨೫ ಡಾಲರ್ ಪಡೆದು ಮೀರ್ಜಾಫರ್ಗೆ ಮತ್ತೆ ಪಟ್ಟ ಕಟ್ಟಿದ್ದರು. ಮತ್ತೆರಡು ವರ್ಷಗಳ ನಂತರ ನಿಜಾಮ-ಉದ್-ದೌಲನಿಂದ ೧೧,೫೧,೭೮೦ ಡಾಲರ್ ಪಡೆದು ಮೀರ್ಜಾಫರ್ನನ್ನು ಪದಚ್ಯುತಗೊಳಿಸಿದ್ದರು. ಕಂಪೆನಿಯ ವ್ಯಾಪ್ತಿಗೆ ಒಳಪಡುವ ಪ್ರಾಂತಗಳ ಮೇಲೆ ಎಷ್ಟು ದುಬಾರಿ ತೆರಿಗೆಗಳನ್ನು ವಿಧಿಸಿದ್ದರೆಂದರೆ ಆಯಾ ಪ್ರಾಂತಗಳ ಮೂರನೇ ಎರಡರಷ್ಟು ಪ್ರಜೆಗಳು ಬೇರೆಡೆಗೆ ಪಲಾಯನ ಮಾಡಿದ್ದರು. ತೆರಿಗೆ ಪಾವತಿಸಲಾಗದವರು ಬೋನುಗಳನ್ನು ಹೊಕ್ಕಬೇಕಿತ್ತು. ಹಾಗೆ ಬೋನು ಹೊಕ್ಕವರು ಬಿಸಿಲಿನ ತಾಪದಿಂದ ಬೇಯುವುದೂ ಅನಿವಾರ್ಯವಾಗಿತ್ತು. ತೆರಿಗೆ ಪಾವತಿಸಲು ಅಪ್ಪ-ಅಮ್ಮ ಮಕ್ಕಳನ್ನೇ ಮಾರುತ್ತಿದ್ದರು.
* * *
ಭೂಮಿಯ ಒಟ್ಟು ಉತ್ಪತ್ತಿಯಲ್ಲಿ ಶೇಕಡ ೫೦ರಷ್ಟನ್ನು ಕೇಳುವುದು ಮಾಮೂಲಿನ ಸಂಗತಿಯಾಗಿತ್ತು. ‘ಹತಭಾಗ್ಯ ರೈತರಿಂದ ಬರಬೇಕಾದದ್ದನ್ನು ವಸೂಲು ಮಾಡಲು ಕಾನೂನಿನ ಪ್ರಕಾರವೋ ಇಲ್ಲ ಅದನ್ನು ಉಲ್ಲಂಘಿಸಿಯೋ ಹಿಂಸೆಯನ್ನೂ ಸೇರಿದಂತೆ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿತ್ತು. ಅವರು ಯಾವುದಕ್ಕೂ ಜಗ್ಗದೆ, ಕೇಳಿದ್ದನ್ನು ಕೊಡಲು ನಿರಾಕರಿಸಿದ ಕೆಲವು ಸಂದರ್ಭಗಳಲ್ಲಿ ವರ್ಣಿಸಲೇ ಆಗದಂತಹ ಅತ್ಯಂತ ಕ್ರೂರ ಹಾಗೂ ಅಸಹ್ಯ ವಿಧಾನಗಳನ್ನೂ ಅನುಸರಿಸಲಾಗುತ್ತಿತ್ತು” – ಎಂದು ಇಂಗ್ಲಿಷ್ ಭಾಷಿಕನೊಬ್ಬ ಮುಂಬೈ ಆಡಳಿತಕ್ಕೆ ಸಲ್ಲಿಸಿರುವ ಲಿಖಿತ ವರದಿ ತಿಳಿಸಿದೆ. ವಾರನ್ ಹೇಸ್ಟಿಂಗ್ಸನು ಕಂಪೆನಿಯ ಬೊಕ್ಕಸಕ್ಕೆ ಪ್ರಾಂತದ ರಾಜರಿಂದ ಪಡೆದಿದ್ದ ಮೊತ್ತ ಎರಡೂವರೆ ಲಕ್ಷ ಡಾಲರ್ಗಳಿಗೂ ಅಧಿಕವಾಗಿತ್ತು. ಹೆಚ್ಚು ಕೇಳುವುದಿಲ್ಲ ಎನ್ನುತ್ತಲೇ ರುಷುವತ್ತಿಗೆ ಕೈಚಾಚುತ್ತಿದ್ದ ಅವನು ಇನ್ನಷ್ಟು ಮತ್ತಷ್ಟಕ್ಕೂ ಕೈಚಾಚುತ್ತಿದ್ದ; ಅವನನ್ನು ತಣಿಸದಿದ್ದ ಪ್ರಾಂತಗಳನ್ನು (ಪ್ರದೇಶಗಳನ್ನು) ಸ್ವಾಧೀನಪಡಿಸಿಕೊಳ್ಳುತ್ತಿದ್ದ. ಕಾಣಿಕೆಗಳ ವಸೂಲಿಯಲ್ಲಿ ತನ್ನ ದಲ್ಲಾಳಿಗಳಿಗೆ ಹಿಂಸೆಗೂ ಅನುಮತಿ ನೀಡುತ್ತಿದ್ದ. ತನ್ನ ಸೇನೆಯೊಡನೆ ಔಧ್ ಪ್ರಾಂತವನ್ನು ವಶಪಡಿಸಿಕೊಂಡಿದ್ದ ಹೇಸ್ಟಿಂಗ್ಸ್ ಕಂಪೆನಿಗೆ ಸಲ್ಲಬೇಕಿದ್ದ ೫,೦೦೦,೦೦೦ ಡಾಲರ್ ವಸೂಲಿಗೆ ಅಲ್ಲಿಯ ನವಾಬನಿಗೆ ನೆರವಾಗಿ ಅವನಿಂದಲೇ ಅವನ ತಾಯಿ ಮತ್ತು ಅಜ್ಜಿಯರನ್ನು ದೋಚಿಸಿದ್ದ. ಆನಂತರ ೨,೫೦೦,೦೦೦ ಡಾಲರ್ ಪಡೆದು ಔಧ್ ಪ್ರಾಂತವನ್ನು ರಾಜನೊಬ್ಬನಿಗೆ ಮಾರಿದ್ದ. ಹಿಂದೂ ರಾಜನೊಬ್ಬನಿಗೆ ಬ್ರಿಟಿಷ್ ಸೇನೆಯನ್ನು ಬಾಡಿಗೆಗೆ ಕೊಟ್ಟಿದ್ದ. ಆ ಸೇನೆ ಅನಾಗರಿಕ ಉದ್ದೇಶಗಳಿಗಾಗಿ ಹತ್ಯೆಗಳಲ್ಲಿ ತೊಡಗಿದಾಗ ಮತ್ತು ಹತ್ಯೆಗೆ ಒಳಗಾದಾಗ ಮೌನವೇ ಅವನ ಉತ್ತರವಾಗಿತ್ತು. ‘ಆಕ್ಸ್ಫರ್ಡ್ ಹಿಸ್ಟರಿ ಆಫ್ ಇಂಡಿಯ’ ಹೇಳುವಂತೆ ಆಗ ‘ಎಲ್ಲರೂ ಎಲ್ಲವೂ ಮಾರಾಟಕ್ಕೆ ಇದ್ದವು’.
ಎಡೆಬಿಡದೆ ತುಳಿತ
ಇನ್ನೂರು-ಮುನ್ನೂರು ವರ್ಷಗಳ ಹಿಂದೆಯೇ ಮಧುರೆ, ತಂಜಾವೂರಿನಲ್ಲಿ ಇರುವಂತಹ ಬೃಹತ್ ದೇವಾಲಯಗಳನ್ನು ನಿರ್ಮಿಸಲು ಜನ ಹಣ ಹೊಂದಿಸಿದ್ದು ಹೇಗೆ ಎಂದು ನಾನು ತಿರುಚಿನಾಪಲ್ಲಿಯ ನನ್ನ ಗೈಡ್ನನ್ನು ಕೇಳಿದೆ. ಅದಕ್ಕೆ ಅವನು ನೀಡಿದ ಉತ್ತರ – ‘ನಮ್ಮ ರಾಜಮಹಾರಾಜರು ಇಂಗ್ಲಿಷರಿಗಿಂತ ಅತ್ಯಂತ ಕಡಮೆ ಕಂದಾಯ ವಿಧಿಸುತ್ತಿದ್ದರೂ ಕೂಡ ಅವರು ಇಂಥ ಬೃಹತ್ ಶಿಲ್ಪಗಳನ್ನು ನಿರ್ಮಿಸುತ್ತಿದ್ದರು.’ ಇಂಗ್ಲಿಷರು ರಕ್ತಬಸಿಯುವ ಕಂದಾಯ ನಿಗದಿ ಮಾಡುತ್ತಿದ್ದರು/ವಸೂಲಿಮಾಡುತ್ತಿದ್ದರು. ಹಿಂದೂಗಳ ಶಾಸನಸಭೆಗಳು ನಿರ್ವೀರ್ಯವಾಗಿ ಇದ್ದುದರಿಂದ ಅವರಿಗೆ ಪರಿಹಾರ ಅಲಭ್ಯವಾಗಿತ್ತು. ಇಂಥ ಕಂದಾಯದಿಂದಾಗಿ ಹೃದಯ ಹಿಂಡುವಂತಹ ದಾರಿದ್ರ್ಯ ಸೃಷ್ಟಿಯಾಗುತ್ತಿದ್ದರೂ ಸರ್ಕಾರ ದುಬಾರಿ ವೆಚ್ಚದಲ್ಲಿ ಇಂಡಿಯಾದ ವಾಸ್ತುಶಿಲ್ಪಕ್ಕೇ ಅತ್ಯಂತ ಅನನ್ಯವಾದ ಶೈಲಿಯ ಬೃಹತ್ ಕಟ್ಟಡಗಳನ್ನು ತನ್ನ ಆಡಳಿತಕ್ಕಾಗಿ ಅನಗತ್ಯವಾಗಿ ನಿರ್ಮಿಸಿತು. ಸಾಲದ್ದಕ್ಕೆ, ಪ್ರತಿ ಏಳು ತಿಂಗಳಿಗೊಮ್ಮೆ ತನ್ನ ರಾಜಧಾನಿಯ ತಾಣವನ್ನು ಸಾರಾಸಗಟಾಗಿ ಬದಲಿಸುತ್ತಿತ್ತು. ಲಕ್ಷಾಂತರ ಡಾಲರ್ ವ್ಯಯಿಸಿ ಪರ್ವತಗಳಲ್ಲಿ ವಿಶ್ರಾಂತಿಧಾಮಗಳನ್ನು ನಿರ್ಮಿಸುತ್ತಿತ್ತು. ಇಂಥದ್ದಕ್ಕಾಗಿ ಹತ್ತಾರು ದಶಲಕ್ಷಗಳಷ್ಟು ಮೊತ್ತವನ್ನು ಒದಗಿಸುತ್ತಿದ್ದ ಜನರನ್ನು ಮೆಚ್ಚಿಸಲು ಝಗಮಗಿಸುವ ದರ್ಬಾರುಗಳನ್ನೂ ನಡೆಸುತ್ತಿತ್ತು.
ಇದರ ಪರಿಣಾಮವಾಗಿ ೧೭೯೨ರಲ್ಲಿ ಇಂಡಿಯಾ ದೇಶ ಹೊತ್ತಿದ್ದ ಸಾಲ ೩,೫೦,೦೦,೦೦೦ ಡಾಲರ್ ಆಗಿಬಿಟ್ಟಿತ್ತು. ಈ ಸಾಲದ ಮೊತ್ತ ೧೮೦೫ರಲ್ಲಿ ೧೦,೫೦,೦೦,೦೦೦ ಡಾಲರ್ಗೆ, ೧೮೨೯ರಲ್ಲಿ ೧೫,೦೦,೦೦,೦೦೦ ಡಾಲರ್ಗೆ, ೧೮೪೫ರಲ್ಲಿ ೨೧,೫೦,೦೦,೦೦೦ ಡಾಲರ್ಗೆ, ೧೮೫೦ರಲ್ಲಿ ೨೭,೫೦,೦೦,೦೦೦ ಡಾಲರ್ಗೆ, ೧೮೫೮ರಲ್ಲಿ ೩೫,೦೦,೦೦,೦೦೦ ಡಾಲರ್ಗೆ, ೧೮೬೦ರಲ್ಲಿ ೫೦,೦೦,೦೦,೦೦೦ ಡಾಲರ್ಗೆ, ೧೯೦೧ರಲ್ಲಿ ೧,೦೦,೦೦,೦೦,೦೦೦ ಡಾಲರ್ಗೆ, ೧೯೧೩ರಲ್ಲಿ ೧,೫೩,೫೦,೦೦,೦೦೦ ಡಾಲರ್ಗೆ, ೧೯೨೯ರಲ್ಲಿ ಈ ಮೊತ್ತ ೩,೫೦,೦೦,೦೦,೦೦೦ ಡಾಲರ್ಗೆ ಕ್ರಮವಾಗಿ ಏರಿತ್ತು! ಈ ಸಂಖ್ಯೆಗಳೇ ಎಲ್ಲವನ್ನೂ ಸಾರುವುದಾಗಿವೆ.
* * *
‘ಭಾರತದ ಜನರ ಅಭ್ಯುದಯವನ್ನು ಇಡಿಯಾಗಿ ತುಳಿಯುವಲ್ಲಿ ನಮ್ಮ ಆಡಳಿತ ವ್ಯವಸ್ಥೆ ಈ ಹಿಂದಿನ ಯಾವುದೇ ಸರ್ಕಾರಗಳನ್ನೂ ಮೀರಿಸಿದ್ದಾಗಿದೆ ಎಂಬುದನ್ನು ನಾನು ಆತ್ಮಸಾಕ್ಷಿಯಾಗಿ ನಂಬುತ್ತೇನೆ’ ಎಂದು ಈಸ್ಟ್ ಇಂಡಿಯಾ ಕಂಪೆನಿಯ ಸೇನೆಯಲ್ಲಿ ಬ್ರಿಟಿಷ್ ಅಧಿಕಾರಿಯಾಗಿದ್ದ ಲೆಫ್ಟಿನೆಂಟ್-ಕರ್ನಲ್ ಜಾನ್ ಬ್ರಿಗ್ಸ್ ೧೮೩೦ರಲ್ಲಿ ಹೇಳುತ್ತಾನೆ. ಬಂಗಾಳದಲ್ಲಿ ಬ್ರಿಟಿಷ್ ಆಡಳಿತಾಧಿಕಾರಿಯಾಗಿದ್ದ ಎಫ್.ಜೆ. ಶೋರ್ ೧೮೫೭ರಲ್ಲಿ ಬ್ರಿಟಿಷ್ ಸಂಸತ್ತಿನ ಕೆಳಮನೆಯಲ್ಲಿ ತನ್ನ ಸಾಕ್ಷ್ಯವನ್ನು ಹೀಗೆ ಪ್ರಮಾಣೀಕರಿಸಿದ್ದ:
“ಹಿತಾಸಕ್ತಿ ಮತ್ತು ಲಾಭಗಳಿಕೆ ದೃಷ್ಟಿಯಿಂದ ಸರ್ವಸಾಧ್ಯ ಮಾರ್ಗಗಳಲ್ಲೂ ಇಡೀ ಇಂಡಿಯಾ ದೇಶವನ್ನು ತಮ್ಮ ದಾಸ್ಯಕ್ಕೆ ಒಳಪಡಿಸುವುದು ಇಂಗ್ಲಿಷರ ಮೂಲಭೂತ ನೀತಿಯಾಗಿತ್ತು. ಪ್ರಾಂತ, ಪ್ರದೇಶಗಳು ನಮ್ಮ ಕೈವಶವಾದಂತೆ ಅಲ್ಲಿಯ ಜನರ ಮೇಲೆ ಗರಿಷ್ಠ ಸಾಧ್ಯ ತೆರಿಗೆಗಳನ್ನು ಹೇರಲಾಯಿತು. ಸ್ಥಳೀಯ ಆಡಳಿತಗಾರರು ಮಾಡುತ್ತಿದ್ದ ಸುಲಿಗೆಗಿಂತ ನಮ್ಮ ಆದಾಯ ಅತ್ಯಧಿಕವಾಗಿದೆ ಎಂಬುದು ನಮ್ಮ ಹೆಗ್ಗಳಿಕೆಯಾಗಿದೆ. ಅತ್ಯಂತ ಹೀನ ಮಟ್ಟದಲ್ಲಿ ಇರುವ ಇಂಗ್ಲಿಷ್ ಮನುಷ್ಯನೂ ಒಪ್ಪದಂತಹ ಮರ್ಯಾದೆ, ಮಾನ್ಯತೆ ಅಥವಾ ಅಧಿಕಾರಗಳಿಂದಲೂ ಇಂಡಿಯಾದ ಜನರನ್ನು ದೂರ ಇಡಲಾಗಿದೆ.”
ಇವು, ಬ್ರಿಟಿಷರು ಇಂಡಿಯಾವನ್ನು ತಮ್ಮ ವಶಪಡಿಸಿಕೊಳ್ಳುವಲ್ಲಿ ಹೊಂದಿದ್ದ ಉದ್ದೇಶ ಮತ್ತು ಅನುಸರಿಸಿದ ಮಾರ್ಗ.
* * *
ಸೂರೆಗೊಂಡ ಸಂಪತ್ತು
ವೇತನ ಮತ್ತು ಪಿಂಚಣಿ ರೂಪದಲ್ಲಿ ಇಂಡಿಯಾದಿಂದ ಇಂಗ್ಲೆಂಡು ಸೂರೆ ಮಾಡಿ ವಿದೇಶದಲ್ಲಿ ವ್ಯಯಿಸಿದ್ದನ್ನು ನಾವೊಂದಿಷ್ಟು ಪರಾಂಬರಿಸೋಣ. ಬ್ರಿಟನ್ನಿನಲ್ಲಿ ಇರುವ ೭೫೦೦ ನಿವೃತ್ತ ಅಧಿಕಾರಿಗಳು ಇಂಡಿಯಾದ ಆದಾಯದಿಂದ ನಿವೃತ್ತಿವೇತನದ ರೂಪದಲ್ಲಿ ಪಡೆಯುತ್ತಿದ್ದುದು ವಾರ್ಷಿಕ ತಲಾ ೧,೭೫,೦೦,೦೦೦ ಡಾಲರ್ ಎಂದು ಲಾರ್ಡ್ ವಿಂಟರ್ಟನ್ ೧೯೨೭ರಲ್ಲಿ ಸಂಸತ್ತಿನ ಕೆಳ ಸದನವಾದ ಹೌಸ್ ಆಫ್ ಕಾಮನ್ಸ್ನಲ್ಲಿ ಪ್ರತಿಪಾದಿಸಿದ್ದ. ರಾಮ್ಸೆ ಮೆಕ್ಡೊನಾಲ್ಡ್ ಅವರು ಆ ಮೊತ್ತ ವಾರ್ಷಿಕ ೨,೦೦,೦೦,೦೦೦ ಡಾಲರ್ ಎಂದು ಸ್ಪಷ್ಟಪಡಿಸಿದ್ದರು. ತನ್ನ ಜನಸಂಖ್ಯೆ ಬಂಗಾಳದ ಜನಸಂಖ್ಯೆಯಷ್ಟೇ ಉಲ್ಬಣಿಸಿದಾಗೆಲ್ಲ ಇಂಗ್ಲೆಂಡ್ ತನ್ನವರನ್ನು ಇಂಡಿಯಾ ಅಪೇಕ್ಷಿಸುವ ಇಪ್ಪತ್ತನಾಲ್ಕು ವರ್ಷಗಳ ಸೇವೆಗಾಗಿ ಅಲ್ಲಿಗೆ ಕಳುಹಿಸುತ್ತದೆ. ಈ ಸೇವಾವಧಿಯನ್ನು ನಾಲ್ಕು ವರ್ಷಗಳ ಕಾಲ ಕುಗ್ಗಿಸಿ ಅದನ್ನು ದೀರ್ಘಕಾಲದ ರಜೆಯ ಅವಧಿ ಎಂದು ಪರಿಗಣಿಸುತ್ತದೆ. ಅವಧಿ ಪೂರ್ಣಗೊಂಡ ತರುವಾಯ ಅವರಿಗೆ ಜೀವನಪೂರ್ತಿ ಪಿಂಚಣಿ ನೀಡುತ್ತದೆ. ಈ ಪಿಂಚಣಿಯ ಮೊತ್ತವನ್ನು ಹಿಂದೂಗಳು ತೆರುತ್ತಾರೆ. ಹೀಗೆ ಪಿಂಚಣಿ ಪಡೆಯುವ ಅಧಿಕಾರಿಗಳು ತಮ್ಮ ಸೇವಾವಧಿಯಲ್ಲಿ ತಮ್ಮ ಕುಟುಂಬವನ್ನು ಅಥವಾ ತಮ್ಮ ಮಕ್ಕಳನ್ನು ಇಂಗ್ಲೆಂಡಿಗೆ ಅಲ್ಲೇ ವಾಸಿಸಲು ಕಳುಹಿಸುತ್ತಾರೆ. ಅವರ ವೆಚ್ಚಗಳಿಗೆ ಇಂಡಿಯಾದಿಂದ ಕಬಳಿಸಿದ ಹಣವನ್ನು ರವಾನಿಸುತ್ತಾರೆ. ಕೊಳೆಯುವ ಆಹಾರ ಪದಾರ್ಥಗಳನ್ನು ಬಿಟ್ಟು ಉಳಿದೆಲ್ಲವನ್ನೂ ಬ್ರಿಟಿಷರು ಹೊರಗಿನಿಂದ ಇಂಡಿಯಾಕ್ಕೆ ತರಿಸುತ್ತಾರೆ. ಇಂಡಿಯಾ ಸರ್ಕಾರ ಸರಬರಾಜು ವೆಚ್ಚದ ಅಡಿಯಲ್ಲಿ ನಿಗದಿಮಾಡಿದ ಮೊತ್ತದ ಬಹುಭಾಗ ಇಂಗ್ಲೆಂಡಿನಲ್ಲಿ ವ್ಯಯವಾಗುತ್ತಿದೆ.
ಸಮಾನವಾದ ಮರುಸಂದಾಯವಿಲ್ಲದೆ ಇಂಡಿಯಾದ ಸಂಪನ್ಮೂಲಗಳನ್ನು ಪ್ರತಿ ವರ್ಷವೂ ಸೂರೆ ಮಾಡುವುದು ಅಂತಿಮವಾಗಿ ಇಂಡಿಯಾವನ್ನು ನಾಶ ಮಾಡುವುದಾಗಿದೆ – ಎಂದು ಎಡ್ಕಂಡ್ ಬರ್ಕ್ ೧೭೮೩ರಲ್ಲಿ ಭವಿಷ್ಯ ನುಡಿದಿದ್ದ. ಪ್ಲಾಸಿ ಕದನದಿಂದ ವಾಟರ್ಲೂ ಸಮರದವರೆಗಿನ ಐವತ್ತೇಳು ವರ್ಷಗಳ ಅವಧಿಯಲ್ಲಿ ಬ್ರಿಟಿಷರು ಇಂಡಿಯಾದಿಂದ ಇಂಗ್ಲೆಂಡಿಗೆ ದೋಚಿ ತಂದ ಸಂಪತ್ತು ಎರಡೂವರೆಯಿಂದ ಐದು ಶತಕೋಟಿ ಡಾಲರ್ಗಳಷ್ಟು ಎಂದು ಬ್ರೂಕ್ಸ್ ಆಡಮ್ಸï ಲೆಕ್ಕಹಾಕಿದ್ದಾನೆ. ಇಂಗ್ಲೆಂಡಿನ ಯಾಂತ್ರಿಕ ಅನ್ವೇಷಣೆಗಳ ಅಭಿವೃದ್ಧಿಗೆ ಮತ್ತು ‘ಔದ್ಯಮಿಕ ಕ್ರಾಂತಿ’ಗೆ ಇಂಡಿಯಾದಿಂದ ಕದ್ದ ಸಂಪತ್ತು ಬಿಟ್ಟಿ ಬಂಡವಾಳ ಒದಗಿಸುವುದು – ಎಂದು ಮೆಕಾಲೆ ಬಹಳ ಹಿಂದೆಯೇ ಸೂಚಿಸಿದ್ದ – ಎಂದೂ ಬರ್ಕ್ ಹೇಳಿದ. ಇಂಡಿಯಾದಿಂದ ಹೊರಗೆ ಹೋದ ಅದರ ಅರ್ಧದಷ್ಟು ನಿವ್ವಳ ಆದಾಯ ಮರಳುತ್ತಿಲ್ಲ ಎಂದು ಅರ್ಥಶಾಸ್ತ್ರಜ್ಞ ರೊಮೇಶ್ ಚಂದ್ರ ದತ್ ಅಂದಾಜು ಮಾಡಿದ್ದರು. ಪ್ರತಿ ವರ್ಷ ಇಂಡಿಯಾದಿಂದ ೪,೦೦,೦೦,೦೦೦ ಡಾಲರಿನಷ್ಟು ಸೂರೆಯಾಗುತ್ತಿತ್ತು ಎಂದು ೧೯೦೬ರಲ್ಲಿ ಇಂಗ್ಲಿಷ್ ಲೇಖಕ ಮತ್ತು ರಾಜಕಾರಣಿ ಹೆನ್ರಿ ಹೈಂಡ್ಮ್ಯಾನ್ ಹೇಳುತ್ತಾನೆ. ಅರ್ಥಶಾಸ್ತ್ರಜ್ಞ ಎ.ಜೆ. ವಿಲ್ಸನ್ ಪ್ರಕಾರ ಇಂಡಿಯಾದ ವಾರ್ಷಿಕ ಉತ್ಪಾದನೆಯ ಹತ್ತನೆ ಒಂದು ಭಾಗ ಹೊರಹೋಗುತ್ತಿತ್ತು. ಇಂಡಿಯಾದಿಂದ ವಾರ್ಷಿಕ ೧,೫೦,೦೦,೦೦೦ ಡಾಲರ್ ಹೊರಗೆ ಹೋಗುತ್ತಿತ್ತು ಎಂದು ಇಂಗ್ಲಿಷ್-ಐರಿಷ್ ಲೇಖಕ ರಾಬರ್ಟ್ ಮಾಂಟ್ಗೋಮೆರಿ ಮಾರ್ಟಿನ್ ೧೮೩೮ರಲ್ಲಿ ಅಂದಾಜು ಮಾಡಿದ್ದ. ಐವತ್ತು ವರ್ಷಗಳಲ್ಲಿ ಹೊರಗೆ ಹೋಗಿದ್ದ ಇಡೀ ಮೊತ್ತ ಇಂಡಿಯಾದಲ್ಲೇ ಇದ್ದಿದ್ದರೆ ಬಡ್ಡಿಯನ್ನೂ ಸೇರಿದಂತೆ ಅದರ ಗಾತ್ರ ೪೦,೦೦,೦೦,೦೦,೦೦೦ ಡಾಲರ್ ಆಗುತ್ತಿತ್ತು. ಕಣ್ಣಿಗೆ ರಾಚುವಂತಹ ಇಂತಹ ಮೊತ್ತ ಕೇವಲ ಕಣ್ಕಟ್ಟಿನದು ಎನಿಸಿದರೂ ೧೭೫೭ರಿಂದ ಇಂಗ್ಲೆಂಡಿಗೆ ಸಾಗಿಸಿರುವ ಸಂಭವನೀಯ ಮೊತ್ತವಾಗಿದೆ. ಈ ಮೊತ್ತ ಇಂಡಿಯಾದಲ್ಲೇ ಇದ್ದು ಅತ್ಯಂತ ಕನಿಷ್ಠ ಬಡ್ಡಿ ಗಳಿಸಿದ್ದಿದ್ದರೂ ಅದು ಇಡಿಯಾಗಿ ೪,೦೦,೦೦,೦೦,೦೦,೦೦೦ ಡಾಲರ್ ಆಗುತ್ತಿತ್ತು.
ಈ ದ್ರವ್ಯವನ್ನು ಇಂಡಿಯಾದಲ್ಲಿ ಮರುಹೂಡಿಕೆ ಮಾಡಿದಲ್ಲಿ ಆ ಮೊತ್ತವೇ ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಕಡು ಬಡದೇಶಗಳ ನಡುವಿನ ಅಂತರ ತೋರುವುದಾಗಿತ್ತು. ಇಂಡಿಯಾದ ರಕ್ತಹೀರಿದ ತೆರಿಗೆಗಳ ದರ ಪ್ರಾಯಶಃ ಮನುಷ್ಯ ದೌರ್ಬಲ್ಯವಿರಬಹುದು. ಸೂರೆ ಮಾಡಿದ ಸಂಪತ್ತನ್ನು ಇಂಡಿಯಾದ ಅರ್ಥವ್ಯವಸ್ಥೆಗೇ ಮರಳಿಸಿದ್ದಿದ್ದರೆ ಇಂಡಿಯಾ ಶಾಶ್ವತವಾಗಿ ಘಾಸಿಗೊಳ್ಳುತ್ತಿರಲಿಲ್ಲ. ಆದರೆ ಒಂದು ದೇಹದಿಂದ ಮತ್ತೊಂದು ದೇಹಕ್ಕೆ ರಕ್ತ ಪೂರೈಸಿದಂತೆ ಇಂಗ್ಲೆಂಡ್ ಇಂಡಿಯಾದ ಸಂಪತ್ತನ್ನು ತನ್ನೆಡೆಗೆ ಹರಿಸಿತು. ‘ಇಂಡಿಯಾದ ಅಥವಾ ವಿಶ್ವದ ಆ ವರೆಗಿನ ಇತಿಹಾಸ ಕಾಣದಿದ್ದ ಮಟ್ಟದಲ್ಲಿ ಇಂಡಿಯಾದ ಸಂಪನ್ಮೂಲಗಳನ್ನು ಸೂರೆಮಾಡಿದ ಇಂಗ್ಲೆಂಡ್ ಆ ದೇಶವನ್ನು ಪದೇಪದೇ ಕ್ಷಾಮಕ್ಕೂ ವ್ಯಾಪಕ ಸಾವುನೋವುಗಳಿಗೂ ತುತ್ತಾಗಿಸಿತು’ ಎಂದು ದತ್ ಹೇಳುತ್ತಾರೆ.
* * *
ಬರ್ಬರ ಹತ್ಯಾಕಾಂಡದ ಹಿನ್ನೆಲೆ
ಜಲಿಯನ್ವಾಲಾಬಾಗ್ನಲ್ಲಿ ನಡೆದ ಬರ್ಬರ ಹತ್ಯೆಯನ್ನು ನಾವೆಲ್ಲ ಕೇಳಿ ತಿಳಿದೇ ಇದ್ದೇವೆ. ಈ ಹತ್ಯಾಕಾಂಡದ ಹಿನ್ನೆಲೆಯನ್ನು ಡುರಾಂಟ್ರ ಕೃತಿ ಹೀಗೆ ಸಾದರಪಡಿಸುತ್ತದೆ:
ಅಮೃತಸರದಲ್ಲಿ ನಡೆದಿದ್ದ ಹತ್ಯಾಕಾಂಡದ ಬಗೆಗಿನ ಎಲ್ಲ ಮಾಹಿತಿಗಳನ್ನೂ ಹಲವಾರು ತಿಂಗಳ ಕಾಲ ಇಂಗ್ಲೆಂಡಿನ ಸಂಸತ್ತನ್ನೂ ಸೇರಿದಂತೆ ಪ್ರಪಂಚದೆಲ್ಲೆಡೆ ಮರೆಮಾಚಲಾಗಿತ್ತು. ಆದರೆ ಇದೇ ಹತ್ಯಾಕಾಂಡ ೧೯೨೧ರ ಕ್ರಾಂತಿಗೆ ರೂವಾರಿಯಾಗಿತ್ತು. ಪಂಜಾಬಿನ ಪ್ರಖ್ಯಾತ ನಗರವಾದ ಅಮೃತಸರದಲ್ಲಿ ರೌಲೆತ್ ಕಾಯ್ದೆಗಳ ವಿರುದ್ಧ ೧೯೧೯ರ ಮಾರ್ಚ್ ೩೦ ಮತ್ತು ಏಪ್ರಿಲ್ ೬ರಂದು ಹರತಾಳವನ್ನು ಯಶಸ್ವಿಯಗಿ ಆಚರಿಸಲಾಗಿತ್ತು. ಇಂಡಿಯಾದ ನಿವಾಸಿಯಾಗಿದ್ದ ಇಂಗ್ಲಿಷ್ ಪಾದ್ರಿಯೊಬ್ಬರ ಪ್ರಕಾರ: “ಎಲ್ಲವೂ ವ್ಯವಸ್ಥಿತವಾಗಿತ್ತು. ಗುಂಪುಗಳ ನಡುವೆಯೇ ಯೂರೋಪಿಯನ್ನರು ಯಾವುದೇ ಅಡೆತಡೆ ಅಪಾಯಗಳಿಲ್ಲದೆ ಹಾದುಹೋಗಬಹುದಿತ್ತು. ಅಹಿಂಸೆ ಮತ್ತು ಅಸಹಕಾರಕ್ಕೆ ಅದೊಂದು ಅತ್ಯುತ್ತಮ ಉದಾಹರಣೆಯಾಗಿತ್ತು.”
ಈ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದ ವಕೀಲ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸೈಫುದ್ದೀನ್ ಕಿಚ್ಲು ಮತ್ತು ಡಾ. ಸತ್ಯಪಾಲ್ ಅವರನ್ನು ಸರ್ಕಾರ ಏಪ್ರಿಲ್ ೯ರಂದು ಬಂಧಿಸಿತ್ತು. ಈ ಈರ್ವರ ಬಂಧನದ ಸುದ್ದಿ ಹರಡಿದಂತೆ ಜನ ಗುಂಪುಗುಂಪಾಗಿ ರಸ್ತೆಗೆ ಇಳಿದಿದ್ದರು. ಗುಂಪು ತಮ್ಮ ನಾಯಕರ ಬಂಧನದ ಬಗ್ಗೆ ವಿರೋಧ ವ್ಯಕ್ತಪಡಿಸಲು ನೇರವಾಗಿ ಪೊಲೀಸ್ ಡೆಪ್ಯುಟಿ ಕಮಿಷನರ್ ಕಚೇರಿಯತ್ತ ತೆರಳುತ್ತಿತ್ತು. ಹಾಗೆ ತೆರಳುವಾಗ ಗುಂಪಿನಲ್ಲಿ ಇದ್ದ ಕೆಲವರು ಪೊಲೀಸರತ್ತ ಕಲ್ಲುಗಳನ್ನು ಎಸೆದಿದ್ದರು. ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿ ಹತ್ತು ಜನರ ಜೀವ ಪಡೆದಿದ್ದರು. ಶವವಾಗಿ ಬಿದ್ದಿದ್ದ ತಮ್ಮವರನ್ನು ಕಂಡಂತೆ ಕೋಪೋದ್ರಿಕ್ತ ಗುಂಪು ಹಿಂಸಾಚಾರಕ್ಕೆ ತಿರುಗಿತ್ತು. ಗಲಭೆ-ಹಿಂಸೆ ಸರ್ಕಾರದ ಆಸ್ತಿಯನ್ನು ನಾಶಮಾಡಿದ್ದಲ್ಲದೆ ಐವರು ಇಂಗ್ಲಿಷರ ಪ್ರಾಣ ಕಸಿದಿತ್ತು. ತೀವ್ರವಾಗಿ ಗಾಯಗೊಂಡ ಮತಪ್ರಚಾರಕಿಯೊಬ್ಬಳನ್ನು ಹಿಂದೂಗಳು ಸುರಕ್ಷಿತ ಜಾಗಕ್ಕೆ ಒಯ್ದಿದ್ದರು. ಉದ್ರಿಕ್ತ ಗುಂಪನ್ನು ಸಮಾಧಾನಪಡಿಸಲು ಯತ್ನಿಸಿದ ಸುಶಿಕ್ಷಿತ ಇಂಡಿಯನ್ನರು ವಿಫಲರಾಗಿದ್ದರು. ಇಂಡಿಯಾದ ಅಧಿಕಾರಿಗಳೇ ಸ್ವಯಂಪ್ರೇರಿತರಾಗಿ ಸರ್ಕಾರದ ನೆರವಿಗೆ ನಿಂತಿದ್ದರು.
ಏಪ್ರಿಲ್ ೧೦ ಮತ್ತು ೧೧ರಂದು ಒಟ್ಟು ೬೦೦ ಸೈನಿಕರ ತುಕಡಿಗಳು ಅಮೃತಸರಕ್ಕೆ ಧಾವಿಸಿದ್ದವು. ಏಪ್ರಿಲ್ ೧೨ರಂದು ಧಾವಿಸಿದ್ದ ಬ್ರಿಗೇಡಿಯರ್-ಜನರಲ್ ಡೈಯರ್ ತುಕಡಿಗಳ ಮುಂದಾಳತ್ವ ವಹಿಸಿದ್ದನು. ಅಂದಿನಿಂದ ಕಾನೂನು ಮತ್ತು ಶಿಸ್ತುಪಾಲನೆಗೆ ಕ್ರಮ ಕೈಗೊಂಡು ಗುಂಪುಗಳನ್ನು ಚದುರಿಸಿ, ಶಾಂತ ವಾತಾವರಣ ಸೃಷ್ಟಿಸಲಾಗಿತ್ತು. ಹಲವಾರು ಜನರನ್ನು ಬಂಧಿಸಿದ್ದ ಡೈಯರ್, ಏಪ್ರಿಲï ೧೩ರಂದು ಅಮೃತಸರ ನಗರದ ಹಾದಿಬೀದಿಗಳಲ್ಲಿ ಡಂಗುರ ಹೊಡೆಸಿ ಜನರ ಸಭೆ ಕರೆದಿದ್ದನು. ‘ಪರವಾನಗಿ ಇಲ್ಲದೆ ನಗರದ ಹೊರಗೆ ಹೋಗಬಾರದು; ಸಭೆಗಳನ್ನು, ಮೆರವಣಿಗೆಗಳನ್ನು ನಡೆಸಬಾರದು; ಮೂವರಿಗಿಂತ ಹೆಚ್ಚು ಮಂದಿ ಗುಂಪು ಸೇರಬಾರದು’ ಎಂದು ಸಭೆಯಲ್ಲಿ ಘೋಷಿಸಿದ್ದನು. ಈ ಮಧ್ಯೆ ಡೈಯರ್ ಮಾಡಿದ್ದ ಘೋಷಣೆಗಳ ಬಗ್ಗೆ ತಿಳಿಯದ ನೆರೆಯ ಜಿಲ್ಲೆಗಳ ೧೦,೦೦೦ ಮಂದಿ ಹಿಂದೂಗಳು ಧಾರ್ಮಿಕ ಉತ್ಸವವನ್ನು ಆಚರಿಸಲು ಜಲಿಯನ್ವಾಲಾಬಾಗ್ನಲ್ಲಿ ಸಮಾವೇಶಗೊಂಡಿದ್ದರು. ಜಲಿಯನ್ವಾಲಾಬಾಗ್ನ ನಾಲ್ಕೂ ದಿಕ್ಕಿನಲ್ಲಿ ಎತ್ತರದ ಗೋಡೆಗಳಿಂದ ಸುತ್ತುವರಿದಿದ್ದ, ಆಗಮನ-ನಿರ್ಗಮನಕ್ಕೆ ತುಂಬಾ ಕಿರಿದಾದ ಒಂದೆರಡು ಓಣಿಗಳಿದ್ದ ಪಾಳುಬಿದ್ದ ಉದ್ಯಾನವನವಾಗಿತ್ತು ಅದು.
ಇಂಥ ಉದ್ಯಾನವನದಲ್ಲಿ ಜನ ಸೇರಿರುವುದನ್ನು ತಿಳಿದಂತೆಯೇ ಮೆಷಿನ್ಗನ್ನುಗಳಿಂದ ಸಜ್ಜಿತವಾಗಿದ್ದ ಸೇನಾ ತುಕಡಿ ಮತ್ತು ಶಸ್ತ್ರಸಜ್ಜಿತ ಮೋಟಾರ್ ಕಾರುಗಳ ಸಹಿತ ಡೈಯರ್ ಸ್ಥಳಕ್ಕೆ ಧಾವಿಸಿದ್ದ. ಅಲ್ಲಿ ಬೃಹತ್ ಗುಂಪನ್ನು ನೋಡಿದಂತೆ ಜನ ತನ್ನ ಆಜ್ಞೆಯನ್ನು ಉಲ್ಲಂಘಿಸಿ ಸಭೆ ಸೇರಿದ್ದರೆ ಎಂದು ನಿರ್ಧರಿಸಿದ್ದ. ಕಿಂಚಿತ್ತೂ ಮುನ್ಸೂಚನೆ ನೀಡದೆ, ಅಥವಾ ಜನರಿಗೆ ತಾವು ಸೇರಿರುವ ಉದ್ದೇಶವನ್ನು ತಿಳಿಸಲೂ ಆವಕಾಶ ನೀಡದೆ ಜನಸಮೂಹದತ್ತ ಗುಂಡು ಹಾರಿಸುವಂತೆ ತುಕಡಿಗೆ ಆದೇಶ ನೀಡಿದ್ದ. ಪ್ರತಿರೋಧ ತೋರಲಾಗದ ಸ್ಥಿತಿಯಲ್ಲಿದ್ದ ಜನರು ಭಯದಿಂದ ಚೀರುತ್ತಾ ಉದ್ಯಾನವನವನ್ನು ತೊರೆಯಲು ಓಣಿಗಳತ್ತ ನುಗ್ಗತೊಡಗಿದ್ದರು. ತಂದಿರುವ ಮದ್ದುಗುಂಡುಗಳು ಖಾಲಿಯಾಗುವವರೆಗೂ ನೂಕುನುಗ್ಗಲಾಗಿದ್ದ ಓಣಿಯತ್ತಲೇ ಗುಂಡು ಹಾರಿಸುವಂತೆ ಡೈಯರ್ ಖುದ್ದಾಗಿ ಸೂಚಿಸಿದ್ದ. ಹತ್ತು ನಿಮಿಷಗಳಲ್ಲಿ ಕಗ್ಗೊಲೆಯ ಕಾರ್ಯ ಅಂತ್ಯಗೊಂಡಿತ್ತು. ಗುರಿ ಚೆನ್ನಾಗಿತ್ತು ಎಂದು ಡೈಯರ್ ಘೋಷಿಸಿದ್ದ. ೧೫೦೦ ಹಿಂದುಗಳು ನೆಲಕ್ಕೆ ಒರಗಿದ್ದರು. ಆ ಪೈಕಿ ೪೦೦ ಮಂದಿ ಮೃತಪಟ್ಟಿದ್ದರು. ಗಾಯಗೊಂಡವರಿಗೆ ನೆರವು ನೀಡದಂತೆ ಸೈನಿಕರಿಗೆ ಸೂಚಿಸಿದ್ದ ಡೈಯರ್ ಇಪ್ಪತ್ನಾಲ್ಕು ಗಂಟೆಗಳ ಕಾಲ ಹಿಂದುಗಳು ರಸ್ತೆಗೆ ಇಳಿಯಕೂಡದು ಎಂದೂ ಆಜ್ಞೆ ಹೊರಡಿಸಿದ್ದ. ಆ ಮೂಲಕ ಗಾಯಗೊಂಡು ಬಿದ್ದಿದ್ದವರಿಗೆ ಅವರ ಬಂಧುಬಾಂಧವರು ಒಂದು ಲೋಟ ನೀರು ನೀಡುವುದಕ್ಕೂ ತಡೆಹಾಕಿದ್ದ.
ತರುವಾಯ, ಅಧಿಕೃತ ಭಯೋತ್ಪಾದನೆ ಆರಂಭವಾಗಿತ್ತು. ಯಾವ ರಸ್ತೆಯಲ್ಲಿ ಆಕಸ್ಮಿಕವಾಗಿ ಮತಪ್ರಚಾರಕಿ ಘಾಸಿಗೊಂಡಿದ್ದಳೋ ಆ ರಸ್ತೆಯನ್ನು ಬಳಸುತ್ತಿದ್ದ ಹಿಂದುಗಳು ಹೊಟ್ಟೆಯ ಮೇಲೆ ತೆವಳುವ ಶಿಕ್ಷೆ ವಿಧಿಸಿದ್ದ. ಶಿಕ್ಷೆಗೆ ಒಳಗಾಗಿ ತೆವಳುತ್ತಿದ್ದವರು ತಲೆ ಎತ್ತಿ ಏಳಲು ಯತ್ನಿಸಿದರೆ ಸೈನಿಕರು ಬಂದೂಕಿನ ಹಿಂಬದಿಯಿಂದ ತಲೆಯ ಮೇಲೆ ಮೊಟಕುತ್ತಿದ್ದರು. ಡೈಯರ್ ೫೦೦ ಪ್ರೊಫೆಸರ್ಗಳನ್ನು ಮತ್ತು ವಿದ್ಯಾರ್ಥಿಗಳನ್ನು ಬಂಧಿಸಿ ಅವರೆಲ್ಲರೂ ಪ್ರತಿದಿನ ಪೊಲೀಸ್ ಠಾಣೆಯಲ್ಲಿ ಹಾಜರಿಗೆ ಬರಬೇಕು ಎಂದು ಕಟ್ಟಳೆ ವಿಧಿಸಿದ್ದ. ಆವರಲ್ಲಿ ಬಹಳಷ್ಟು ಮಂದಿ ಠಾಣೆಗೆ ಬರಲು ಪ್ರತಿದಿನ ನಡಿಗೆಯಲ್ಲಿ ಹದಿನಾರು ಮೈಲಿ ಕ್ರಮಿಸಬೇಕಿತ್ತು. ಯಾವುದೇ ತಪ್ಪು ಮಾಡದ ಶಾಲಾ ಬಾಲಕರನ್ನೂ ಸೇರಿದಂತೆ ನೂರಾರು ನಾಗರಿಕರನ್ನು ಸಾರ್ವಜನಿಕವಾಗಿಯೆ ಛಡಿಯಿಂದ ಥಳಿಸುತ್ತಿದ್ದ. ಬೃಹತ್ ಬೋನುಗಳನ್ನು ತಯಾರಿಸಿ ಒಳಗೆ ಬಂದಿಗಳನ್ನು ಕೂಡಿಹಾಕಿ ಅವರನ್ನು ರಣಬಿಸಿಲಿನಲ್ಲಿ ಇರಿಸುತ್ತಿದ್ದ. ಕೆಲವು ಬಂದಿಗಳನ್ನು ಹಗ್ಗದಿಂದ ಬಂಧಿಸಿ ಅವರನ್ನು ಹದಿನೈದು ಗಂಟೆಗಳ ಕಾಲ ತೆರೆದ ಲಾರಿಗಳ ಮೇಲೆ ನಿಲ್ಲಿಸುತ್ತಿದ್ದ. ಸಾಧುಸಂತರನ್ನು ನಗ್ನಗೊಳಿಸಿ ಅವರ ದೇಹಕ್ಕೆ ಸುಣ್ಣ ಬಳಿಸಿ ಅವರನ್ನು ಬಿಸಿಲಿನಲ್ಲಿ ನಿಲ್ಲಿಸುತ್ತಿದ್ದ. ಸೂರ್ಯನ ಶಾಖದಿಂದ ಸುಣ್ಣ ಒಣಗಿ ಚರ್ಮ ಬಿರಿದಾಗ ಈ ಸಾಧುಸಂತರನ್ನು ಯಾತನೆಗೆ ಒಳಪಡಿಸುವುದು ಡೈಯರ್ ಶಿಕ್ಷೆಯ ಉದ್ದೇಶವಾಗಿತ್ತು. ಇಂಡಿಯನ್ನರ ಮನೆಗಳ ನೀರು ಮತ್ತು ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿ, ಹಿಂದುಗಳು ತಾವು ಹೊಂದಿರುವ ವಿದ್ಯುತ್ ಪಂಖಗಳನ್ನು ಸರ್ಕಾರಕ್ಕೆ ಒಪ್ಪಿಸುವಂತೆ ಆದೇಶ ಹೊರಡಿಸಿದ್ದ. ಹಾಗೆ ಒಪ್ಪಿಸಲಾಗಿದ್ದ ಪಂಖಗಳನ್ನು ಬ್ರಿಟಿಷರಿಗೆ ಪುಕ್ಕಟೆಯಾಗಿ ನೀಡಿದ್ದ. ಕಡೆಯದಾಗಿ, ಬಯಲುಗಳಲ್ಲಿ ದುಡಿಯುತ್ತಿದ್ದ ಮಹಿಳೆಯರು ಮತ್ತು ಪುರುಷರ ಮೇಲೆ ವಿಮಾನಗಳಿಂದ ಬಾಂಬುಗಳ ದಾಳಿ ನಡೆಸಿದ್ದ.
ಸೇನೆಯ ವಿಘ್ನಸಂತೋಷದ ಪ್ರತೀಕವಾಗಿದ್ದ ಈ ರಾಕ್ಷಸೀ ಸ್ವೇಚ್ಛಾಚಾರ ಸುಮಾರು ಆರು ತಿಂಗಳ ಕಾಲ ಪ್ರಪಂಚಕ್ಕೆ ತಿಳಿಯದಾಗಿತ್ತು. ಸರ್ಕಾರ ತಡವಾಗಿ ನೇಮಿಸಿದ್ದ ವಿಚಾರಣಾ ಆಯೋಗವೊಂದು (ತಿಪ್ಪೆ ಸಾರಿಸುವ) ದ್ವಂದ್ವಾರ್ಥದ ವರದಿ ನೀಡಿತ್ತು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನೇಮಿಸಿದ್ದ ಸಮಿತಿಯೊಂದು ಪರಿಷ್ಕೃತ ರೀತಿಯ ವಿಚಾರಣೆ ನಡೆಸಿ ಇಡೀ ಘಟನೆಗಳ ಸಂದರ್ಭದಲ್ಲಿ ೧೨೦೦ ಮಂದಿ ಮೃತಪಟ್ಟಿದ್ದಾರೆ ಮತ್ತು ೩೬೦೦ ಮಂದಿ ಗಾಯಗೊಂಡಿದ್ದರೆ ಎಂದು ವರದಿ ನೀಡಿತ್ತು. ಇಂಗ್ಲೆಂಡಿನ ಕೆಳಮನೆಯು (ಹೌಸ್ ಆಫ್ ಕಾಮನ್ಸ್) ಡೈಯರ್ನನ್ನು ಖಂಡಿಸಿತ್ತು. ಆದರೆ ಮೇಲ್ಮನೆ (ಹೌಸ್ ಆಫ್ ಲಾರ್ಡ್ಸ್) ಅವನನ್ನು ನಿರ್ದೋಷಗೊಳಿಸಿ, ಪಿಂಚಣಿ ನೀಡಿ ನಿವೃತ್ತಿಗೊಳಿಸಿತ್ತು. ನೀಡಲಾಗಿದ್ದ ಬಳುವಳಿ ಸಾಲದೆಂಬಂತೆ ಸಾಮ್ರಾಜ್ಯದ ಸೇನಾನಾಯಕರು ಅವನ ಗೌರವಾರ್ಥ ಸಂಗ್ರಹಿಸಲಾದ ೧೫೦,೦೦೦ ಡಾಲರ್ ನಿಧಿ ಹಾಗೂ ಆಭರಣ ಖಚಿತ ಖಡ್ಗವೊಂದನ್ನು ಅವನಿಗೆ ಅರ್ಪಿಸಿದ್ದರು.
* * *
ಹಿಂಸೆಯ ಪುನರಾವರ್ತನೆ
ಜಲಿಯನ್ವಾಲಾಬಾಗ್ನ ಪುನರಾವರ್ತನೆಯಂತಿರುವ ಘಟನೆಯೊಂದು ದಂಡೀಯಾತ್ರೆಯ ನಂತರದ ದಿನಗಳಲ್ಲಿ ಧರ್ಸಾನಾದಲ್ಲಿಯೂ ನಡೆದಿತ್ತು. ಅದರ ವಿವರ ಇಂತಿದೆ:
೧೯೩೦ರ ಏಪ್ರಿಲ್ ೨೩ರಂದು ಗುಂಪೊಂದು ಸ್ಥಳೀಯರೂ ಆಗಿದ್ದ ರಾಷ್ಟ್ರೀಯ ನಾಯಕರ ಬಂಧನವನ್ನು ಪ್ರತಿಭಟಿಸಿ ಪೆಷಾವರದಲ್ಲಿ ಪ್ರತಿಭಟಿಸಿತ್ತು. ಅಧಿಕೃತ ವರದಿಯ ಪ್ರಕಾರ ಗಲಭೆಯಲ್ಲಿ ಇಪ್ಪತ್ತು ಮಂದಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬಿನ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಬ್ದುಲ್ ಕಸೌರಿ ಅವರ ವರದಿಯನ್ನು ಜಾರಿಯಲ್ಲಿದ್ದ ಸೆನ್ಸಾರ್ ಕಣ್ಣು ತಪ್ಪಿಸಿ ಪಂಜಾಬಿನಾಚೆಗೆ ತರಲಾಗಿತ್ತು. ಅವರ ವರದಿ:
ಅಲ್ಲಿ ಸಂಪೂರ್ಣವಾಗಿ ಯಾವುದೇ ರೀತಿಯ ಅವ್ಯವಸ್ಥೆಯಾಗಲಿ ಅಥವಾ ಅಧಿಕಾರಿಗಳು ಭಯಪಡುವಂತಹ ಯಾವುದೇ…. ಕನಿಷ್ಠ ಕಾರಣವೂ ಇರಲಿಲ್ಲ. ಗುಂಪಿನ ವರ್ತನೆಯೂ ಅನುಕರಣೀಯವಾಗಿತ್ತು. ಗುಂಪು ಶಾಂತವಾಗಿ ನಗರದತ್ತ ಮರಳುತ್ತಿದ್ದಾಗ, ಸೈನಿಕರಿಂದ ತುಂಬಿದ್ದ ಎರಡು ಶಸ್ತ್ರಸಜ್ಜಿತ ವಾಹನಗಳು ಹಿಂಬದಿಯಿಂದ ಧಾವಿಸಿದ್ದವು. ಎಚ್ಚರಿಕೆ ನೀಡುವ ಶಬ್ದ (ಹಾರ್ನ್) ಕೂಡಾ ಮಾಡದೆ, ಪರಿಣಾಮವನ್ನು ಲೆಕ್ಕಿಸದೆ ಗುಂಪಿನ ಮೇಲೆ ಹರಿದಿದ್ದವು. ಹಲವಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದರು, ಕನಿಷ್ಠ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆಯಿಂದ ಕೆರಳಿದ್ದರೂ ಗುಂಪು ಅತ್ಯಂತ ಸಂಯಮದಿಂದ ನಡೆದುಕೊಂಡಿತ್ತು.
ಈ ಸಂದರ್ಭದಲ್ಲಿ ಇಂಗ್ಲಿಷ್ ಅಧಿಕಾರಿಯೊಬ್ಬರು ಹಠಾತ್ತನೆ ಮೋಟಾರ್ಸೈಕಲ್ಲಿನಲ್ಲಿ ಧಾವಿಸಿದ್ದರು. ಬಳಿಕ ಅವರಿಗೆ ಏನಾಯಿತೆಂಬುದು ಸ್ಪಷ್ಟವಾಗಿ ತಿಳಿದಿಲ್ಲ. ಆ ಬಗ್ಗೆ ಎರಡು ಅಭಿಪ್ರಾಯಗಳಿವೆ. ಅರೆ ಸರ್ಕಾರದ (ಸೆಮಿ-ಗರ್ನಮೆಂಟ್) ಅಭಿಪ್ರಾಯದಂತೆ, ಅಧಿಕಾರಿ ಗುಂಪಿನ ಮೇಲೆ ಗುಂಡು ಹಾರಿಸಿದ್ದರು, ಗಾಯಗೊಂಡಿದ್ದ ವ್ಯಕ್ತಿಯೊಬ್ಬ ಅವರ ತಲೆಗೆ ಹೊಡೆದಾಗ ಅಧಿಕಾರಿ ಮೃತಪಟ್ಟ. ಇನ್ನೊಂದು ಅಭಿಪ್ರಾಯದ ಪ್ರಕಾರ ಅವನು ಮೋಟಾರ್ ಕಾರಿಗೆ ಡಿಕ್ಕಿ ಹೊಡೆದಿದ್ದ.
ಇದೇ ವೇಳೆಯಲ್ಲಿ ಶಸ್ತ್ರಸಜ್ಜಿತ ವಾಹನವೊಂದಕ್ಕೆ ಬೆಂಕಿ ತಗುಲಿತ್ತು. ಒಂದು ಅಭಿಪ್ರಾಯದಂತೆ ಗುಂಪು ವಾಹನಕ್ಕೆ ಬೆಂಕಿ ಹಚ್ಚಿತ್ತು, ಇನ್ನೊಂದು ಅಭಿಪ್ರಾಯದಂತೆ ವಾಹನಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿತ್ತು. ಇಂಗ್ಲಿಷ್ ಸೈನಿಕರ ತುಕಡಿಯೊಂದು ಸ್ಥಳಕ್ಕೆ ಧಾವಿಸಿತ್ತು. ಯಾವುದೇ ಎಚ್ಚರಿಕೆ ನೀಡದೆ ಹೆಂಗಸರು, ಮಕ್ಕಳು ಇದ್ದ ಗುಂಪಿನ ಮೇಲೆ ಗುಂಡು ಹಾರಿಸಿತ್ತು.
ಅಹಿಂಸೆಯ ಶಿಕ್ಷಣ ಪಡೆದಿದ್ದ ಗುಂಪಿನ ವರ್ತನೆ ಅಹಿಂಸೆಯ ಉತ್ತಮ ಉದಾಹರಣೆಯಾಗಿತ್ತು. ತಮ್ಮ ಮುಂದಿರುವವರು ಗುಂಡೇಟು ತಿಂದು ನೆಲಕ್ಕೆ ಕುಸಿದಂತೆ, ಹಿಂದಿದ್ದವರು ಮುಂದೆ ಬಂದು ಬಂದೂಕುಗಳಿಗೆ ಎದೆಯೊಡ್ಡಿದ್ದರು.. ಕೆಲವರ ದೇಹಗಳು ಇಪ್ಪತ್ತೊಂದು ಗುಂಡೇಟುಗಳಿಂದ ಗಾಯಗೊಂಡಿದ್ದವು. ಧೃತಿಗೆಡದ ಯುವಕರು ನಿಂತಲ್ಲೇ ನಿಂತಿದ್ದರು. ಸಿಖ್ ಬಾಲಕನೊಬ್ಬ ಸೈನಿಕನಿಗೆ ಎದುರಾಗಿ ನಿಂತು ಗುಂಡು ಹಾರಿಸುವಂತೆ ಅಬ್ಬರಿಸಿದಾಗ, ಸೈನಿಕ ಹಿಂಜರಿಯದೆ ಗುಂಡು ಹಾರಿಸಿ ಬಾಲಕನನ್ನು ಕೊಂದಿದ್ದ. ಅಂತೆಯೆ ತನ್ನ ಬಂಧುಬಾAಧವರು ಗುಂಡೇಟಿನಿಂದ ಗಾಯಗೊಳ್ಳುತ್ತಿರುವುದನ್ನು ನೋಡಿದ ವೃದ್ಧೆಯೊಬ್ಬಳು ಮುಂದೆ ಬಂದು ತಾನೂ ಗುಂಡೇಟಿನಿಂದ ಗಾಯಗೊಂಡಿದ್ದಳು. ಹೆಗಲ ಮೇಲೆ ನಾಲ್ಕು ವರ್ಷದ ಮಗುವನ್ನು ಹೊತ್ತಿದ್ದ ವೃದ್ಧನೊಬ್ಬ ತನ್ನ ಮೇಲೆ ಗುಂಡು ಹಾರಿಸುವಂತೆ ಸವಾಲು ಹಾಕಿದಾಗ ಸೈನಿಕನೊಬ್ಬ ವೃದ್ಧನ ಮೇಲೂ ಗುಂಡು ಹಾರಿಸಿದ್ದ. ಹೆಚ್ಚಿನ ವಿಚಾರಣೆಯಲ್ಲಿ ಇಂತಹ ಇನ್ನೂ ಅನೇಕ ನಿದರ್ಶನಗಳು ಲಭಿಸುತ್ತವೆ.
ಗುಂಪು ಒಂದೆಡೆ ನಿಂತಿತ್ತು.. ಮೃತ ಮತ್ತು ಗಾಯಗೊಂಡ ದೇಹಗಳು ಗುಡ್ಡೆಯಾಗಿ ಬೆಳೆಯುವವರೆಗೂ ಸೈನಿಕರು ಆಗಿಂದಾಗ್ಗೆ ಗುಂಪಿನ ಮೇಲೆ ಗುಂಡು ಹಾರಿಸುತ್ತಿದ್ದರು. ಜನರು ಒಬ್ಬರಾದ ಮೇಲೆ ಒಬ್ಬರು, ಮತ್ತೊಬ್ಬರು, ಮಗದೊಬ್ಬರಂತೆ ಬಂದೂಕುಗಳಿಗೆ ಎದುರಾಗಿದ್ದರು. ಮುಂದಿನವರು ನೆಲಕ್ಕೆ ಉರುಳಿದಂತೆ ಹಿಂದಿನವರು ಬಂದೂಕುಗಳಿಗೆ ಮುಖಾಮುಖಿಯಾಗುತ್ತಿದ್ದರು. ಇದು ಬೆಳಗಿನ ಹನ್ನೊಂದರಿಂದ ಸಂಜೆ ಐದರವರೆಗೂ ನಡೆದಿತ್ತು -ಎಂದು ಸರ್ಕಾರದ ಮುಖವಾಣಿಯಾಗಿದ್ದ ಲಾಹೋರಿನ ಆಂಗ್ಲೋ-ಇಂಡಿಯನ್ ಪತ್ರಿಕೆ ವರದಿ ಮಾಡಿದೆ.
ಇಲ್ಲಿ ಎರಡು ಸಂಗತಿಗಳು ಗಮನಾರ್ಹ. ಯಾವುದೇ ವ್ಯಕ್ತಿಯ ಶರೀರದ ಹಿಂಭಾಗಕ್ಕೆ ಗುಂಡೇಟು ಬಿದ್ದ ಗುರುತುಗಳು ಇರಲಿಲ್ಲ. ಗುಂಪಿನಲ್ಲಿದ್ದವರು ದೊಣ್ಣೆಯನ್ನಾಗಲಿ ಅಥವಾ ಯಾವುದೇ ಆಯುಧಗಳನ್ನಾಗಲಿ ಹಿಡಿದಿದ್ದರು ಎಂದು ಪೊಲೀಸರಾಗಲಿ ಅಥವಾ ಸೇನೆಯಾಗಲಿ ಆರೋಪ ಮಾಡಿಲ್ಲ. ಅಥವಾ ಅಡಗಿಸಿದ್ದಿರಬಹುದಾದ ಆಯುಧಗಳನ್ನು ಅವರು ಕಸಿದುಕೊಂಡಿರಲಿಲ್ಲ.
ಈ ಹಂತದಲ್ಲಿ ಜನ ಮೃತರಾದವರ ಮತ್ತು ಗಾಯಗೊಂಡವರ ಸಂಖ್ಯೆ ಎಷ್ಟೆಂದು ಹೇಳುವುದು ಸಾಧ್ಯವಾಗದ್ದು. ನೂರಾರು ಜನ ಪ್ರಾಣ ನೀಗಿರುವುದು ಸಂಭವನೀಯ. ಸನ್ನಿವೇಶದ ಬಗ್ಗೆ ಎಚ್ಚರಿಕೆಯಿಂದ ನಡೆಸಿದ ಅಧ್ಯಯನವು ಘಟನೆ ಜಲಿಯನ್ವಾಲಾಬಾಗ್ನ ಪುನರಾವರ್ತನೆಯಂತಿದೆ ಎಂದು ಹೇಳುವುದಾಗಿದೆ.
ಧರ್ಸಾನಾದಲ್ಲಿ ಇದ್ದ ಸತ್ಯಾಗ್ರಹಿಗಳು ಅಹಿಂಸೆಯ ಪ್ರತಿಜ್ಞೆ ಮಾಡಿದ್ದರು. ಜೀವನಾಧಾರವಾದ ಉಪ್ಪಿನಂತಹ ವಸ್ತುವಿನ ಮೇಲೆ ತೆರಿಗೆ ವಿಧಿಸಬಾರದು ಎಂಬ ಭಾವನೆ ವ್ಯಕ್ತಪಡಿಸಿದ್ದರು. ಉಪ್ಪಿನ ತೊಟ್ಟಿಗಳತ್ತ ಸಾಗಿ ಹಿಡಿ ಉಪ್ಪನ್ನು ತೆಗೆದುಕೊಳ್ಳಲು ಯತ್ನಿಸುತ್ತಿದ್ದರು. ಮುನ್ನುಗ್ಗುತ್ತಿದ್ದ ಸತ್ಯಾಗ್ರಹಿಗಳನ್ನು ಹಿಂಸೆಗೆ ಆಸ್ಪದ ನೀಡದೆ ಚದುರಿಸಲು ಲಾಠಿ ಹಿಡಿದಿದ್ದ ಪೊಲೀಸರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಸತ್ಯಾಗ್ರಹಿಗಳು ಹಿಂದಕ್ಕೆ ಸರಿಯದೆ ಮತ್ತೆಮತ್ತೆ ಮುನ್ನುಗ್ಗಿದಾಗ ಪೊಲೀಸರು ಉಕ್ಕಿನ ಹಿಡಿಯಿದ್ದ ಉದ್ದನೆಯ ಲಾಠಿಗಳನ್ನು ಬೀಸಿದ್ದರು. ಪ್ರತಿಭಟನೆ ವ್ಯಕ್ತಪಡಿಸದ ಮುಂದಿನ ಸಾಲಿನ ಸತ್ಯಾಗ್ರಹಿಗಳು ಲಾಠಿ ಪೆಟ್ಟು ತಿಂದು ಪ್ರಜ್ಞಾಶೂನ್ಯರಾಗುವವರೆಗೂ ಮುನ್ನುಗ್ಗುತ್ತಲೇ ಇದ್ದರು. ಕೂಡಲೇ ಧಾವಿಸುತ್ತಿದ್ದ ಸ್ಟ್ರೆಚರ್ ಹಿಡಿದ ಸತ್ಯಾಗ್ರಹಿ ಸ್ವಯಂಸೇವಕರ ತಂಡ ಪ್ರಜ್ಞಾಶೂನ್ಯರಾದವರನ್ನು ಒಯ್ಯುತ್ತಿದ್ದರು. ಬಳಿಕ ಹಿಂದಿನ ಸಾಲಿನಲ್ಲಿ ಇದ್ದವರು ಮುಂದಿನ ಸಾಲಿಗೆ ಬಂದು ಪೊಲೀಸರಿಗೆ ಎದುರಾಗುತ್ತಿದ್ದರು. ಪ್ರಜ್ಞೆ ತಪ್ಪುವವರೆಗೂ ಪೊಲೀಸರು ಲಾಠಿಗಳಿಂದ ಅವರನ್ನು ಬಡಿಯುತ್ತಿದ್ದರು, ಕಿಬ್ಬೊಟ್ಟೆ, ಮುಖ, ಎಲ್ಲೆಂದರಲ್ಲಿ ಬಡಿಯುತ್ತಿದ್ದರು. ಪ್ರಜ್ಞೆ ತಪ್ಪಿದವರು ರಕ್ತಸಿಕ್ತರಾಗಿ ಬಯಲಲ್ಲಿ, ಸ್ಟ್ರೆಚರ್ಗಳ ಮೇಲೆ, ಇಲ್ಲವೆ ಆಸುಪಾಸಿನ ಮನೆಗಳಲ್ಲಿ ಬಿದ್ದಿದ್ದರೂ ಪೊಲೀಸರ ಪ್ರಹಾರ ಹಲವಾರು ಗಂಟೆಗಳ ಕಾಲ ಸಾಗಿತ್ತು. ಈ ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದ ಯುನೈಟೆಡ್ ಪ್ರೆಸ್ ಸಂಸ್ಥೆಯ ಯೂರೋಪಿಯನ್ ನ್ಯೂಸ್ ಮ್ಯಾನೇಜರ್ (ಸುದ್ದಿ ನಿರ್ವಾಹಕ) ವೆಬ್ ಮಿಲ್ಲರ್ ವರದಿ:
“ನಾನು ನನ್ನ ಹದಿನೆಂಟು ವರ್ಷಗಳ ವರದಿಗಾರಿಕೆಯಲ್ಲಿ ಇಪ್ಪತ್ತೆರಡು ದೇಶಗಳಿಂದ ವರದಿ ಮಾಡಿದ್ದಾನೆ. ಆ ಅವಧಿಯಲ್ಲಿ ಅಸಂಖ್ಯಾತ ಪೌರ ಸಂಘರ್ಷಗಳು, ದೊಂಬಿಗಳು, ಬೀದಿ ಕಾಳಗಗಳು, ಬಂಡಾಯಗಳ ಪ್ರತ್ಯಕ್ಷದರ್ಶಿಯಾಗಿದ್ದಾನೆ. ಆದರೆ ಧರಸಾನಾದಲ್ಲಿ ನಡೆದಿರುವ ಮನಕಲಕುವಂತಹ ದೃಶ್ಯವನ್ನು ನಾನೆಂದೂ ಕಂಡಿರಲಿಲ್ಲ. ಹಿಂಸೆಗೆ ಪ್ರತಿಯಾಗಿ ಹಿಂಸೆಯನ್ನು, ಹೋರಾಟವನ್ನು ಪಾಶ್ಚಾತ್ಯ ಮನಸ್ಸು ಅರ್ಥಮಾಡಿಕೊಳ್ಳುತ್ತದೆ. ಆದರೆ ಪ್ರತಿರೋಧವಿಲ್ಲದೆ ಉದ್ದೇಶಪೂರ್ವಕವಾಗಿಯೇ ಮುನ್ನುಗ್ಗಿ ಥಳಿತಕ್ಕೆ ಒಪ್ಪಿಸಿಕೊಳ್ಳುವ ದೃಶ್ಯದಿಂದ ಬೆರಗಾಗಿದ್ದಾನೆ, ತಬ್ಬಿಬ್ಬೂ ಆಗಿದ್ದಾನೆ. ಕೆಲವೊಮ್ಮೆ ಈ ದೃಶ್ಯವನ್ನು ನೋಡಲಾಗದೆ ಕ್ಷಣಕಾಲ ಮುಖ ತಿರುಗಿಸಿದ್ದಾನೆ. ವಿಸ್ಮಯದ ವಿಚಾರವೆಂದರೆ ಸ್ವಯಂಸೇವಕರ ಶಿಸ್ತು. ಈ ಸ್ವಯಂಸೇವಕರು ಗಾಂಧಿಯ ಅಹಿಂಸಾ ತತ್ತ್ವವನ್ನು ಮೈಗೂಡಿಸಿಕೊಂಡಿದ್ದಾರೆ ಎನ್ನಿಸುತ್ತದೆ.
ಮುಂಬೈಯಲ್ಲೂ ಕೂಡ ಜೂನ್ ೧೯ ಮತ್ತು ೨೧ರಂದು ಇದೇ ಸ್ವರೂಪದ ಘಟನೆಯನ್ನು ಇಂಡಿಯಾದ ಹೊಸ ಹೆಮ್ಮೆ ಹಾಗೂ ನಿರ್ಧಾರಗಳ ಮೂಕ ಸಂಕೇತ ಎಂಬಂತೆ ಮತ್ತೊಮ್ಮೆ ಪ್ರದರ್ಶಿಸಲಾಯಿತು. ಸರ್ಕಾರ ನಿಷೇಧಿಸಿದ್ದರೂ ಶಿಸ್ತಿನಿಂದ ಕೂಡಿದ್ದ ಪುರುಷರು ಮತ್ತು ಮಹಿಳಾ ಸತ್ಯಾಗ್ರಹಿಗಳು ತಂಡಗಳಲ್ಲಿ ಮುಂಬೈನ ಎಸ್ಪ್ಲನೇಡ್ ಮೈದಾನದಲ್ಲಿ ಏರ್ಪಡಿಸಿದ್ದ ಸಭೆಗೆ ಆಗಮಿಸಿದ್ದರು. ಮರಾಠಿ ಪೊಲೀಸರ ಲಾಠಿ ಪ್ರಹಾರಕ್ಕೆ ಪ್ರಜ್ಞೆ ತಪ್ಪುವವರೆಗೂ ತಮ್ಮನ್ನು ಒಪ್ಪಿಸಿಕೊಂಡಿದ್ದರು. ನೀಳ ಖಡ್ಗಗಳನ್ನು ಹಿಡಿದಿದ್ದ ಬಲಿಷ್ಠ ಸಿಖ್ಖರು ತಮ್ಮನ್ನು ರಕ್ಷಿಸಿಕೊಳ್ಳುವ ಗೋಜಿಗೆ ಹೋಗದೆ ಬಾಯಲ್ಲಿ ರಕ್ತ ಸುರಿಸುತ್ತಾ ನೆಲಕ್ಕೆ ಒರಗಿದ್ದರು. ಸಮರಪ್ರೇಮಿ ಜನಾಂಗ ಗಾಂಧಿ ಬೋಧನೆಯ ಅಹಿಂಸೆಯನ್ನು ಒಪ್ಪುವುದು ಎಂಬುದೇ ಇಂಡಿಯಾದಲ್ಲಿ ಎಲ್ಲರ ನಿರೀಕ್ಷೆ ಮೀರಿದ್ದಾಗಿತ್ತು. ಅಲ್ಲಿನ ದೃಶ್ಯ ಪ್ರಾಚೀನ ಕ್ರೈಸ್ತರು ಮೂಕವೇದನೆಯಿಂದ ಮತ್ತೊಮ್ಮೆ ರೋಮಿನ ದಬ್ಬಾಳಿಕೆಯ ವಿರುದ್ಧ ಹೋರಾಡುತ್ತಿದ್ದರೇನೋ ಎಂಬಂತಿತ್ತು.
ಬಹಳಷ್ಟು ಪ್ರಕರಣಗಳಿಗೆ ಸಂಬಂಧಿಸಿದಂತೆ ಬರ್ಬರತೆ, ಕ್ರೌರ್ಯ ಇಲ್ಲದಿರುವವರಿಗೆ ಪೊಲೀಸ್ ಪ್ರವೇಶ ಇಂಡಿಯಾದಲ್ಲಿ ಸಾಧ್ಯವಿರಲಿಲ್ಲ ಎಂಬುದು ಅತ್ಯಂತ ಜುಗುಪ್ಸೆ ಹುಟ್ಟಿಸುವುದಾಗಿತ್ತು. “ಪುರುಷ ಬಂದಿಗಳ ಉಡುಪುಗಳನ್ನು ಕಿತ್ತೆಸೆದ ಪೊಲೀಸರು ಬಂದಿಗಳ ಬಾಯಿ ನೊರೆಗಟ್ಟಿ ಅವರು ಪ್ರಜ್ಞೆ ತಪ್ಪುವವರೆಗೂ ಶಿಶ್ನವನ್ನು ತಿರುಚಿ, ವೃಷಣಗಳನ್ನು ಹಿಚುಕಿ, ಕೆಲವೊಮ್ಮೆ ಜಜ್ಜುತ್ತಿದ್ದರು” ಎಂದು ಒಬ್ಬ ಪ್ರತ್ಯಕ್ಷದರ್ಶಿ ವರದಿ ಮಾಡಿದ್ದಾರೆ. ನಂಬಲಾಗದಂತಿರುವ ಈ ವರದಿಯನ್ನು ಸಂಶಯಾತೀತರಾದ ಇನ್ನೊಬ್ಬ ಪ್ರತ್ಯಕ್ಷದರ್ಶಿ ದೃಢೀಕರಿಸಿದ್ದಾರೆ. ಬ್ರಿಟಿಷ್ ನೌಕಾಪಡೆಯ ಅಡ್ಮಿರಲ್ ಅವರ ಪುತ್ರಿ ಮ್ಯಾಡಲಿನ್ ಸ್ಲೇಡ್ ಅವರು ಜೂನ್ ೧೨ರ ಯಂಗ್ ಇಂಡಿಯಾ ಸಾಪ್ತಾಹಿಕದಲ್ಲಿ ತಾವು ಧರಸಾನಾದಲ್ಲಿ ಕಂಡಿದ್ದನ್ನು ವರದಿ ಮಾಡಿದ್ದಾರೆ. ಈ ವರದಿ ಯುನೈಟೆಡ್ ಪ್ರೆಸ್ ರಿಪೋರ್ಟ್ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ ಅಥವಾ ಅದನ್ನು ಪತ್ರಿಕಾ ಸೆನ್ಸಾರ್ ಅನ್ವಯ ಅಳಿಸಿಹಾಕಿದ್ದಾರೆ. ಅವರ ವರದಿ/ಲೇಖನ:
ಇತ್ತೀಚಿನ ದಿನಗಳಲ್ಲಿ ವೈಟ್ಹಾಲ್ (ಲಂಡನ್ನಿನ ಒಂದು ಪ್ರಧಾನ ರಸ್ತೆ) ಮತ್ತು ಸಿಮ್ಲಾದಲ್ಲಿ ಇರುವ ಅಧಿಕಾರಿಗಳು ಪೊಲೀಸರ ವರ್ತನೆಯನ್ನು ದಣಿವಿಲ್ಲದಂತೆ ಪ್ರಶಂಸಿಸುತ್ತಿದ್ದಾರೆ. ಪೊಲೀಸರ ಅನುಕರಣೀಯ ವರ್ತನೆ ಪ್ರಶಂಸೆ ಧರ್ಸಾನಾದಲ್ಲಿ ಇರುವ ಸತ್ಯಾಗ್ರಹಿಗಳ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ತಿಳಿಯಲು ನಾನೇ ಅಲ್ಲಿಗೆ ಹೋಗಲು ಯೋಚಿಸಿದೆ. ಜೂನ್ ೬ರ ಮಧ್ಯಾಹ್ನ ಬುಲ್ಸಾರ್ ತಲಪಿದೆ. ಅಂದು ಬೆಳಗಿನ ದಾಳಿಯಲ್ಲಿ ಗಾಯಗೊಂಡವರನ್ನು ಆಗಷ್ಟೇ ಕರೆತರಲಾಗುತ್ತಿತ್ತು. ಬಹಳಷ್ಟು ಗಾಯಾಳುಗಳನ್ನು ಸ್ಟ್ರೆಚರ್ನಲ್ಲಿ ತರಲಾಗುತ್ತಿತ್ತು. ವಾಹನದಿಂದ ಇಳಿದಿದ್ದ ಕೆಲವರು ಆಸ್ಪತ್ರೆಯ ಕೊಠಡಿಗಳಿಗೆ ಪ್ರಯಾಸದಿಂದ ಹೆಜ್ಜೆ ಹಾಕುತ್ತಿದ್ದರು.
‘ಇಂದು ಲಾಠಿ ಏಟು ಮತ್ತು ಚಿತ್ರಹಿಂಸೆ ಅತ್ಯಂತ ನಿರ್ದಯವಾಗಿತ್ತು’ ಎಂದು ವೈದ್ಯರು ಮತ್ತು ಅವರ ಸಹಾಯಕರು ಹೇಳಿದರು. ಸತ್ಯಾಗ್ರಹಿಗಳನ್ನು ಅತ್ಯಂತ ಹತ್ತಿರದಿಂದ ನೋಡಲು ಮತ್ತು ಅವರಿಗೆ ಆಗಿರುವ ಗಾಯಗಳ ಸ್ವರೂಪಗಳ ಬಗ್ಗೆ ವೈದ್ಯರಿಂದ ತಿಳಿಯಲು ಅವರೊಡನೆಯೆ ಗಾಯಾಳುಗಳಿದ್ದ ವಾರ್ಡುಗಳಿಗೆ ತೆರಳಿದೆ. ಅಹಿಂಸೆಯ ಪ್ರತಿಜ್ಞೆ ಸ್ವೀಕರಿಸಿ ಕೆಲವೇ ಕೆಲವು ಗಂಟೆಗಳ ಹಿಂದೆ ಸಂಪೂರ್ಣ ನಿಶ್ಶಸ್ತ್ರರಾಗಿದ್ದ ಧೈರ್ಯಶಾಲಿಗಳು ನೆತ್ತಿಯಿಂದ ಪಾದಗಳ ಅಂಗುಷ್ಠದವರೆಗೂ ಜಬ್ಬಿಸಿಕೊಂಡು ಬಿದ್ದಿರುವುದನ್ನು ನೋಡಿ ನನ್ನ ಮೈರೋಮಗಳು ನಿಮಿರಿನಿಂತಿದ್ದವು. ಅಲ್ಲೊಬ್ಬ ಪೆಟ್ಟುತಿಂದ ಯುವಕನ ಭುಜಗಳು, ಪೃಷ್ಠ ಆತ ಅಂಗಾತಾಗಿ ಮಲಗುವುದನ್ನೇ ಅಸಾಧ್ಯವಾಗಿಸಿತ್ತು. ಆತನ ತೋಳುಗಳು, ಪಾರ್ಶ್ವಗಳು ವಿಶ್ರಾಂತಿಗೆ ಮಗ್ಗುಲು ಬದಲಿಸಲೂ ಸಾಧ್ಯವಾಗದಷ್ಟು ಘಾಸಿಗೊಂಡಿದ್ದವು. ಇನ್ನೊಬ್ಬನ ಎದೆಗೆ ಭಾರಿ ಪೆಟ್ಟು ಬಿದ್ದಿತ್ತು. ಆತ ಉಸಿರಾಡಲೇ ಹೆಣಗುತ್ತಿದ್ದ. ಅವನ ಪಕ್ಕದ ಹಾಸಿಗೆಯಲ್ಲಿ ಮಲಗಿದ್ದ ಮುಸ್ಲಿಮನೊಬ್ಬ ಅತ್ಯಂತ ಅಸಹಾಯಕನಾಗಿದ್ದ.
“ಅವನಿಗೆ ಆಗಿರುವ ಹಾನಿಯೇನು?” – ನಾನು ಕೇಳಿದೆ.
“ಅವನ ಹೊಟ್ಟೆ, ಬೆನ್ನು, ಬಲಗಾಲಿಗೆ ತೀವ್ರವಾದ ಪೆಟ್ಟು ಬಿದ್ದಿದೆ. ಪೊಲೀಸರು ಬಲವಾಗಿ ಹಿಚುಕಿರುವುದರಿಂದ ಅವನ ವೃಷಣಗಳು ಊದಿವೆ” – ಅವರು ಉತ್ತರಿಸಿದರು.
ನಾವು ಮಹಡಿಗೆ ತೆರಳಿದೆವು. ಅಲ್ಲಿ ಶಿಳ್ಳೆಯಂತೆ ಕೇಳಿಸುತ್ತಿದ್ದ ಉಸಿರಾಟದ ಏರಿಳಿತ, ಗೊಗ್ಗರೆತ, ನರಳಾಟಗಳತ್ತ ನನ್ನ ಗಮನ ಹರಿಯಿತು. ಅಲ್ಲೊಬ್ಬ ಯುವಕ ಹೊಟ್ಟೆ ಹಿಡಿದು ವಿಲವಿಲ ಒದ್ದಾಡುತ್ತ ಆಗಿಂದಾಗ್ಗೆ ಇದ್ದಕ್ಕಿದ್ದಂತೆಯೆ ಕುಳಿತು ತಾನು ಹುಚ್ಚನಾಗುತ್ತಿದ್ದಾನೆಯೋ ಎಂಬಂತೆ ನೋವಿನಿಂದ ಚೀರಾಡುತ್ತಿದ್ದ.
“ಅವನ ಕಿಬ್ಬೊಟ್ಟೆಗೆ ಮಾರಣಾಂತಿಕ ಪೆಟ್ಟು ಬಿದ್ದಿದೆ. ರಕ್ತ ವಾಂತಿ ಮಾಡುತ್ತಿದ್ದಾನೆ. ಅವನ ವೃಷಣಗಳನ್ನೂ ಹಿಚುಕಿದ್ದಾರೆ. ಅದು ಅವನ ನರಗಳನ್ನೇ ಪುಡಿಪುಡಿ ಮಾಡಿದೆ” – ಅವರು ಹೇಳಿದರು. ಅವನ ನೆತ್ತಿಗೆ, ಘಾಸಿಯಾಗಿರುವ ಭಾಗಗಳಿಗೆ ಅವರು ಬರ್ಫ ಸವರಿ ನಿಧಾನವಾಗಿ ಅವನನ್ನು ಸಮಾಧಾನಗೊಳಿಸಿದರು.
ಅಲ್ಲಿಂದ ಮನೆಗಳಿಗೆ ನಾವು ಭೇಟಿ ನೀಡಿದೆವು. ಅಲ್ಲಿಯೂ ಹೆಚ್ಚೆಚ್ಚು ಗಾಯಾಳುಗಳನ್ನು ನಾವು ನೋಡಿದೆವು. ನನ್ನೊಡನೆ ಮಾತನಾಡಿದ ಎಲ್ಲರೂ ಅದೇ ಹಿಂಸೆಯ ವಿವರಣೆ ನೀಡಿದರು. ಎಲ್ಲರೂ ತಮ್ಮತಮ್ಮ ದಿಗಿಲುಗಳ ಬಗ್ಗೆ, ಪೊಲೀಸರು, ಇಂಡಿಯಾದ, ಇಂಗ್ಲಿಷರ ಉನ್ನತ ಅಧಿಕಾರಿಗಳು ಎಸಗಿರುವ ಆಡಲಾಗದ ಪಾಷಂಡಿ ಕೃತ್ಯಗಳ ಬಗ್ಗೆ ಹೇಳಿದರು.
ಓ… ಇದು ಪೊಲೀಸರ ಕೆಲವು ‘ಅನುಕರಣೀಯ’ ವರ್ತನೆಗಳಲ್ಲಿ ಒಂದು.. ಹೀಗಾದಲ್ಲಿ ಇಂಗ್ಲಿಷ್, ಇಂಗ್ಲಿಷ್ ನ್ಯಾಯದ ಪಾಡೇನು? … ಅಹಿಂಸಾ ಸಭೆಯನ್ನು ಚದುರಿಸುವ ಸಾಧನ ಬಳಸುವ ಧೈರ್ಯ ತೋರಿದ್ದು ಯಾರು? ೧. ಎಗ್ಗಿಲ್ಲದ ಲಾಠಿ ಪ್ರಹಾರ, ೨. ಕಿಬ್ಬೊಟ್ಟೆಯ ಹಾಗೂ ಮರ್ಮಾಂಗಗಳ ಮೇಲೆ ಲಾಠಿಗಳನ್ನು ಬಲವಾಗಿ ತಿವಿದಿದ್ದು. ೩. ಥಳಿಸುವ ಮುನ್ನ ಪುರುಷರನ್ನು ನಗ್ನಗೊಳಿಸಿದ್ದು. ೪. ಒಳ ಉಡುಪನ್ನು ಕಳಚಿಸಿ ಗುದದ್ವಾರದೊಳಗೆ ಕೋಲುಗಳನ್ನು ತೂರಿಸಿದ್ದು, ೫. ಪುರುಷರು ಪ್ರಜ್ಞೆ ತಪ್ಪುವವರೆಗೂ ಅವರ ವೃಷಣಗಳನ್ನು ಅದುಮುವುದು, ಹಿಚಕುವುದು. ೬. ಗಾಯಾಳು ಪುರುಷರ ಕೈ, ಕಾಲುಗಳನ್ನು ಹಿಡಿದು, ಆಗಾಗ್ಗೆ ಥಳಿಸುತ್ತ ದರದರ ಎಳೆದಾಡುವುದು. ೭. ಗಾಯಾಳುಗಳನ್ನು ಮುಳ್ಳುಗಳಿಂದ ತುಂಬಿದ ಉಪ್ಪು ತುಂಬಿದ ತೊಟ್ಟಿಗಳಿಗೆ ಎಸೆಯುವುದು. ೮. ನೆಲದ ಮೇಲೆ ಮಲಗಿರುವ, ಕುಳಿತಿರುವವರ ಮೇಲೆ ಕುದುರೆಗಳನ್ನು ದೌಡಾಯಿಸುವುದು. ೯. ಪುರುಷ ದೇಹಗಳನ್ನು ಒಮ್ಮೊಮ್ಮೆ ಅವರು ಪ್ರಜ್ಞಾಹೀನರಾಗಿದ್ದರೂ ಸೂಜಿಗಳಿಂದ, ಮುಳ್ಳುಗಳಿಂದ ಚುಚ್ಚುವುದು. ೧೦. ಪ್ರಜ್ಞೆ ತಪ್ಪಿದ ಪುರುಷರನ್ನು ಥಳಿಸುವುದು ಮತ್ತು ಎಷ್ಟೋ ಇತರ ಹೊಲಸಾದ ಕಾರ್ಯಗಳನ್ನೂ ನಂಟು ಹಾಕಬಹುದು.
ದೇಶಗಳ ಇತಿಹಾಸದಲ್ಲಿ ಈ ಪ್ರಕರಣ ಕಠೋರವಾದ, ಸಮರ್ಥಿಸಲಾಗದ ಪೈಶಾಚಿಕ ಸ್ವರೂಪದ್ದಾಗಿದೆ. ಇಂಡಿಯಾಕ್ಕೆ ಈಗ ಬ್ರಿಟಿಷ್ರಾಜ್ನ (ಆಡಳಿತ) ಸ್ವಭಾವ ಮನದಟ್ಟಾಗಿದೆ. ಈ ಮನವರಿಕೆಯೊಂದಿಗೆ ರಾಜ್ಯ ಅಳಿದಿದೆ.
* * *
ಈ ವಿವರಣೆಯ ಬಗ್ಗೆ ಸರ್ಕಾರ ಪ್ರತಿಭಟನೆ ವ್ಯಕ್ತಪಡಿಸಲಿಲ್ಲ. ಬದಲಾಗಿ, ಭವಿಷ್ಯದಲ್ಲಿ ಇಂಥ ಲೇಖನಗಳನ್ನು ಪ್ರಕಟಿಸುವುದರ ವಿರುದ್ಧ ಗ್ಯಾರಂಟಿ ಮೊತ್ತವಾಗಿ ಯಂಗ್ ಇಂಡಿಯಾ ೧೮,೦೦೦ ಡಾಲರ್ಗಳನ್ನು ಸರ್ಕಾರದಲ್ಲಿ ಠೇವಣಿ ಇಡಬೇಕು ಎಂದು ಆದೇಶ ಹೊರಡಿಸಿತು! ಆ ಮೊತ್ತವನ್ನು ಠೇವಣಿ ಇಡಲು (ಸಾಧ್ಯವಾಗದ ಕಾರಣ) ಸಾಪ್ತಾಹಿಕ ನಿರಾಕರಿಸಿತ್ತು. ಸರ್ಕಾರ ಸಾಪ್ತಾಹಿಕದ ಪ್ರಕಟಣೆಯನ್ನು ನಿಗ್ರಹಿಸಿ, ಅದರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.
ನಾವು ಅತೀವ ಅನುಕಂಪಕ್ಕೆ ಒಳಗಾಗದಿರಲೆಂದು (ಅಸಾಧಾರಣ ತ್ಯಾಗಕ್ಕೆ ಸೆನ್ಸಾರಿನ ಪರದೆ ಎಳೆದು) ನಮಗೆ ಇಷ್ಟನ್ನು ಮಾತ್ರ ತಿಳಿಸಲಾಗಿದೆ. ಸೆನ್ಸಾರ್ ತೆರೆಯ ಹಿಂದೆ ಇಂಡಿಯಾದಲ್ಲಿ ಏನು ನಡೆಯುತ್ತಿದೆ ಎಂಬುದು ದೇವರಿಗೇ ಗೊತ್ತು. ಎಂತಹ ಧೈರ್ಯ, ಯಾತನೆ, ಗುಂಡುಗಳ ಸುರಿಮಳೆ, ಬಾಂಬುಗಳ ಸ್ಫೋಟ, ವಿಮಾನಗಳು, ಸಮರದ ಟ್ಯಾಂಕುಗಳು, ಅಧಿಕಾರ, ದೌರ್ಜನ್ಯ ಮತ್ತು ಬಂದೂಕಿಗೆ ಸೆಡ್ಡು ಹೊಡೆಯುತ್ತಿರುವ, ಚರಿತ್ರೆ ಈವರೆಗೂ ಕಾಣದಿದ್ದಂತಹ, ಆತ್ಮಸಂಯಮ.”
‘ಇಂಡಿಯಾ ಇಂದು’ ಎಂಬ ಪುಸ್ತಕದಲ್ಲಿ ಇಂತಹ ವಿವರಗಳು ಇನ್ನೂ ಹಲವಾರಿವೆ. ಇಲ್ಲಿ ವಿವರಿಸಿದವು ಹೆಕ್ಕಿ ತೆಗೆದ ಕೆಲವು ತುಣುಕುಗಳು ಅಷ್ಟೆ. ಒಟ್ಟಾರೆಯಾಗಿ ಬ್ರಿಟಿಷ್ ಆಡಳಿತವನ್ನು ಕುರಿತಂತೆ ಲೇಖಕರು ಹೇಳುವುದಿಷ್ಟು – “ಒಂದು ಕಾಲದಲ್ಲಿ ಇಂಡಿಯಾದ ಎಲ್ಲ ನಗರಗಳಲ್ಲೂ ಮೆರೆಯುತ್ತಿದ್ದ ಅಸಾಧಾರಣ ಬುದ್ಧಿಮತ್ತೆಯನ್ನು ಕುಂಠಿತಗೊಳಿಸಿ ಅದರ ಹೆಮ್ಮೆ ಬೆಳವಣಿಗಯನ್ನು ಕುಗ್ಗಿಸಿ ಹಿಂದು ಚೈತನ್ಯವನ್ನು ಬಗ್ಗು ಬಡಿದಿರುವುದೇ ಬ್ರಿಟಿಷರ ಆಳ್ವಿಕೆಯ ವಿಷಾದಪೂರ್ಣ ಫಲಿತಾಂಶವಾಗಿದೆ.”
‘ಸ್ವಾತಂತ್ರ್ಯ ಸಂಗ್ರಾಮ’ದ ಕಾಲಖಂಡದಲ್ಲಿ ಸ್ವಾತಂತ್ರ್ಯ ಪಡೆಯಲೋಸುಗ ನಡೆದ ಕೆಲವು ಘಟನೆಗಳಷ್ಟೇ ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ. ಅದೇ ದಿನಗಳಲ್ಲೇ ಬ್ರಿಟಿಷರ ದೌರ್ಜನ್ಯ, ದಬ್ಬಾಳಿಕೆ, ಅಮಾನವೀಯ ನಡವಳಿಕೆ, ಕಪಟತನ, ವಂಚನೆ, ಭ್ರಷ್ಟಾಚಾರ ಮುಂತಾದವು ದಾಖಲೆಯ ಪ್ರಮಾಣದಲ್ಲಿ ನಡೆದಿದ್ದರೂ ಅವನ್ನು ತಿಳಿಸಿಕೊಡುವ ಪ್ರಯಾಸ ತುಂಬ ಕಡಮೆ ಜರುಗಿದೆಯೆನ್ನಬಹುದು. ಈ ಹಿನ್ನೆಲೆಯಲ್ಲಿ ವಿಲ್ ಡುರಾಂಟರ ಕೃತಿ ‘ದಿ ಕೇಸ್ ಫಾರ್ ಇಂಡಿಯಾ’ (ಇಂಡಿಯಾ ಅಂದು) ಒಂದು ಒಳ್ಳೆಯ ವಸ್ತುನಿಷ್ಠ ದಾಖಲೆಯಾಗಿದೆ.