ಋಗ್ವೇದದ ನಿಜವಾದ ಅರ್ಥವನ್ನು ತಿಳಿಸಿಕೊಟ್ಟು ವೇದವಾಙ್ಮಯದ ಬಗೆಗೆ ನಮ್ಮ ಜನರಲ್ಲಿ ಗೌರವಭಾವವನ್ನು ಮೂಡಿಸಲು ಎಸ್. ಕೆ. ರಾಮಚಂದ್ರರಾಯರು ‘ಋಗ್ವೇದದರ್ಶನ’ವನ್ನು ೩೨ ಸಂಪುಟಗಳಲ್ಲಿ ಬರೆಯಬೇಕೆಂದು ಸಂಕಲ್ಪಿಸಿದರು. ಆದರೆ ಅವರು ತಮ್ಮ ಕಡೆಯ ವರ್ಷಗಳಲ್ಲಿ ಇದನ್ನು ಬರೆಯಲು ಆರಂಭ ಮಾಡಿದ್ದರಿಂದ ಕೇವಲ ೧೬ ಸಂಪುಟಗಳನ್ನು ಬರೆಯಲಾಯಿತು. ಉಳಿದ ಸಂಪುಟಗಳಲ್ಲಿ ಋಗ್ವೇದದ ಎಲ್ಲ ಮಂತ್ರಗನ್ನೂ ವ್ಯಾಖ್ಯಾನ ಮಾಡಬೇಕೆಂದು ಅವರ ಸಂಕಲ್ಪ ಇದ್ದರೂ ಅದು ಸಫಲವಾಗಲಿಲ್ಲ ಎಂಬುದು ಭಾರತೀಯರ ದುರ್ದೈವವೇ ಸರಿ. ಈ ೧೬ ಸಂಪುಟಗಳನ್ನು ೧೩ ಸಂಪುಟಗಳಾಗಿ ಮತ್ತೊಮ್ಮೆ ಎಸ್.ಕೆ. ರಾಮಚಂದ್ರರಾವ್ ಮೆಮೋರಿಯಲ್ ಟ್ರಸ್ಟ್ನ ವತಿಯಿಂದ ೨೦೧೫ರಲ್ಲಿ ಪುನರ್ಮುದ್ರಿಸಲಾಗಿದೆ.
ಪ್ರೊ|| ಎಸ್.ಕೆ. ರಾಮಚಂದ್ರರಾಯರು ನಮ್ಮ ಸಮಕಾಲೀನ ಪ್ರಪಂಚದ ಅತ್ಯಂತ ವಿಖ್ಯಾತ ವಿದ್ವಾಂಸರು. ಭಾರತೀಯ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಅವರ ಕೊಡುಗೆ ಅಪೂರ್ವ, ಅಸಾಧಾರಣ. ಇವರ ಈ ಕೊಡುಗೆಗೆ ಮುಖ್ಯ ಕಾರಣ ಅವರ ಸಾಂಪ್ರದಾಯಿಕ ಅಧ್ಯಯನ. ಬಾಲ್ಯದಿಂದ ವೇದಗಳನ್ನು ಓದಿ ಶಾಸ್ತ್ರಗಳ ಬಲದಿಂದ ಆ ವೇದಗಳ ಅರ್ಥವನ್ನು ತಿಳಿದವರು ರಾಮಚಂದ್ರರಾಯರು. ಅದು ಕೇವಲ ಕಾಲೇಜು, ಯುನಿವರ್ಸಿಟಿಗಳ ಅಧ್ಯಯನವಾಗಿರಲಿಲ್ಲ. ಆಯಾ ಶಾಸ್ತ್ರಗಳ ಪರಿನಿಷ್ಠಿತ ವಿದ್ವಾಂಸರ ಪಾದಕಮಲಗಳಲ್ಲಿ ಕುಳಿತುಕೊಂಡು ಅಧ್ಯಯನ ಮಾಡಿದ್ದರಿಂದ ಆಯಾ ಶಾಸ್ತ್ರಗಳ ನಿಜವಾದ ಅಭಿಪ್ರಾಯವು ಅವರಿಗೆ ಹೃದ್ಗತವಾಗಿತ್ತು. ಹೀಗಾಗಿ ಭಾರತೀಯ ಶಾಸ್ತ್ರಪರಂಪರೆಯ ನಿಜವಾದ ಅರ್ಥವನ್ನು ತಮ್ಮ ಕೃತಿಗಳ ಮೂಲಕವಾಗಿ ಲೋಕಕ್ಕೆ ತಲಪಿಸಲು ಸಾಧ್ಯವಾಯಿತು.
ಭಾರತೀಯ ಸಂಸ್ಕೃತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ಆ ಸಂಸ್ಕೃತಿಗೆ ಮೂಲವಾದ ಋಗ್ವೇದ ಮುಂತಾದ ನಾಲ್ಕು ವೇದಗಳನ್ನು ಅರಿತುಕೊಳ್ಳಬೇಕು. ಅತಿದೀರ್ಘಕಾಲದ ಕಠಿಣವಾದ ತಪಸ್ಸಿನ ಬಲದಿಂದ ಪರಮಾತ್ಮನ ಅನುಗ್ರಹದ ಫಲವಾಗಿ ಋಷಿಗಳಿಗೆ ವೇದಮಂತ್ರಗಳ ದರ್ಶನವಾಗುತ್ತದೆ. ವೇದಮಂತ್ರಗಳ ದರ್ಶನವಾಗುವುದರಿಂದಲೇ ಅವರನ್ನು ಋಷಿಗಳು ಎಂದು ಕರೆದಿದ್ದಾರೆ. ಋಷಿಗಳೆಂದು ಕರೆಸಿಕೊಳ್ಳುವುದು ಅತ್ಯಂತ ದೊಡ್ಡ ವಿಷಯ. ವೇದಮಂತ್ರಗಳು ಮನುಷ್ಯರ ಪ್ರಯತ್ನದಿಂದ ಆಡಿದ ಮಾತುಗಳಲ್ಲ, ಜಡ್ಡು ವಾದ-ವಿವಾದವಲ್ಲ, ಒಣ ವಾಕ್ಯಾರ್ಥವಲ್ಲ. ಪರಮಾತ್ಮ ತಾನಾಗಿ ಹೊಳೆಸಿದ ಮಾತು. ಋಷಿಗಳ ಮಾತಿನಲ್ಲಿ ಸತ್ಯವಿದೆ. ಅಂಥ ಋಷಿಗಳ ಮಾತನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅವರ ಸ್ತರಕ್ಕೆ ನಾವು ಸ್ವಲ್ಪವಾದರೂ ಏರಬೇಕು.
“ಇತಿಹಾಸಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್” – ಬ್ರಾಹ್ಮಣಗಳು, ಉಪನಿಷತ್ತುಗಳು, ಕಲ್ಪಸೂತ್ರಗಳು, ಸ್ಮöÈತಿಗ್ರಂಥಗಳು, ಮಹಾಭಾರತ, ರಾಮಾಯಣ, ಪುರಾಣಗಳು ಮುಂತಾದವುಗಳ ಜ್ಞಾನವಿಲ್ಲದೆ ವೇದಗಳ ಅರ್ಥಗಳನ್ನು ತಿಳಿಯುವುದು ಸರ್ವಥಾ ಸಾಧ್ಯವಿಲ್ಲ ಎಂಬುದಾಗಿ ನಮ್ಮ ಪ್ರಾಚೀನರ ಅಭಿಪ್ರಾಯ. ಆದ್ದರಿಂದ ವೇದಾರ್ಥವನ್ನು ತಿಳಿಯುವ ಪ್ರಯತ್ನಕ್ಕೆ ಮೇಲ್ಕಂಡ ಈ ಎಲ್ಲ ಗ್ರಂಥಗಳ ಸಹಾಯ ಅತ್ಯಾವಶ್ಯಕ.
ವೇದವಾಙ್ಮಯವನ್ನು ಹಾಳುಗೆಡಿಸಲು ವೈದಿಕ ಧರ್ಮದ ವಿರೋಧಿಗಳಾದ ಇತರ ಮತಗಳು ಕಳೆದ ಮೂರು ಸಾವಿರ ವರ್ಷಗಳಿಂದ ಬಹಳವಾಗಿ ಪ್ರಯತ್ನಪಟ್ಟರೂ ಕೂಡ ಭಾರತೀಯ ಜನಮಾನಸದ ಮೇಲೆ ಇದು ಯಾವ ಪ್ರಭಾವವನ್ನೂ ಬೀರಲಿಲ್ಲ. ಏಕೆಂದರೆ ಅವರು ಹೊರಗೆ ನಿಂತು ‘ವೇದಗಳೆಲ್ಲ ಸುಳ್ಳು, ಅವುಗಳಲ್ಲಿ ಏನೂ ಸತ್ಯವಿಲ್ಲ’ ಎಂಬುದಾಗಿ ಮಾತ್ರ ಹೇಳುತ್ತಿದ್ದರು. ಅವರು ವೇದಗಳಿಗೆ ವ್ಯಾಖ್ಯಾನವನ್ನು ಮಾಡಲಿಲ್ಲ. ಆದರೆ ಕಳೆದ ಇನ್ನೂರೈವತ್ತು ವರ್ಷಗಳಲ್ಲಿ ಯೂರೋಪ್ ಮತ್ತು ಅಮೆರಿಕೆಯ ವಿದ್ವಾಂಸರು ವೇದಗಳ ಬಗೆಗೆ ಹಾಗೂ ವೈದಿಕ ಋಷಿಗಳ ಬಗೆಗೆ ಭಾರತೀಯ ಜನಮಾನಸದಲ್ಲಿ ಅಪನಂಬಿಕೆ ಬರುವಂತೆ ‘ಇವರೆಲ್ಲರೂ ಮಧ್ಯ ಏಷ್ಯಾದಿಂದ ಭಾರತಕ್ಕೆ ವಲಸೆ ಬಂದ ದನಗಾಹಿಗಳು. ಇಲ್ಲಿಯ ಮೂಲನಿವಾಸಿಗಳನ್ನು ಸದೆಬಡಿದು ತಮ್ಮ ರಾಜ್ಯವನ್ನು ನಡೆಸಿದವರು. ದುಡ್ಡಿಗಾಗಿ ಮಂತ್ರಗಳನ್ನು ರಚಿಸಿದವರು. ಇವರ ಸಾಹಿತ್ಯದಲ್ಲಿ ಎಳ್ಳಷ್ಟೂ ಸತ್ತ್ವವಿಲ್ಲ. ಇಡೀ ಭಾರತೀಯ ವಾಙ್ಮಯವು ಯೂರೋಪಿನ ಸಾಹಿತ್ಯದ ಒಂದು ಕಪಾಟಿಗೂ ಸಮವಾಗುವುದಿಲ್ಲ’ ಎಂದು ಉದ್ಘೋಷಣೆಯನ್ನು ಮಾಡಿದರು. ಈ ಅಗೌರವಬುದ್ಧಿ ನಮ್ಮ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದರು.
ವಿದೇಶೀ ವಿದ್ವಾಂಸರು ಬೈಬಲ್ ಮುಂತಾದ ಗ್ರಂಥಗಳ ಅಧ್ಯಯನಪರಂಪರೆಯನ್ನು ಅನುಸರಿಸಿ ತಮ್ಮ ಸ್ವಂತ ಬುದ್ಧಿಬಲದಿಂದ, ತಮ್ಮ ಕಲ್ಪನಾಮಾತ್ರದಿಂದ ವೇದಗಳಿಗೆ ಅನುವಾದಗಳನ್ನು ಹಾಗೂ ವ್ಯಾಖ್ಯಾನಗಳನ್ನು ಮಾಡಿದ್ದಾರೆ. ‘ನಾವು ವೇದಾರ್ಥವನ್ನು ತಿಳಿಯಲು ಹಿಸ್ಟಾರಿಕಲ್ ಮೆಥಡ್ ಎಂಬ ಮಾರ್ಗವನ್ನು ಅನುಸರಿಸುತ್ತೇವೆ. ಈ ರೀತಿಯಿಂದಲೇ ವೇದಗಳ ಅರ್ಥವನ್ನು ತಿಳಿಯಲು ಸಾಧ್ಯ’ ಎಂಬುದಾಗಿ ಹೇಳುತ್ತಾರೆ. ಆದರೆ ಇವರ ಹೆಚ್ಚಿನ ಅಭಿಪ್ರಾಯಗಳು ಕೇವಲ ಅವರ ಕಲ್ಪನಾವಿಲಾಸಗಳೇ ಹೊರತು ಇವುಗಳಿಗೆ ಯಾವುದೇ ಆಧಾರವಿಲ್ಲ.
ಹೀಗೆ ಭಾರತೀಯ ಜನಮಾನಸದಲ್ಲಿ ವೇದಗಳ ಬಗ್ಗೆ ಅಪನಂಬಿಕೆ ಬೆಳೆದಿದೆ. ಇದನ್ನು ಅಳಿಸಿಹಾಕಲು ಅನೇಕ ಭಾರತೀಯರು ಇಂಗ್ಲಿಷ್, ಹಿಂದಿ ಮುಂತಾದ ಭಾಷೆಗಳಲ್ಲಿ ಹೊಸತಾಗಿ ವೇದವ್ಯಾಖ್ಯಾನವನ್ನು ಮಾಡಲು ಪ್ರಯತ್ನಿಸಿದರೂ ಅದು ಸಫಲವಾಗಿಲ್ಲ. ಕರ್ನಾಟಕದಲ್ಲಿ ಮೈಸೂರು ಮಹಾರಾಜರ ಆಶ್ರಯದಲ್ಲಿ ಜಿ.ಎನ್. ಚಕ್ರವರ್ತಿ ಮುಂತಾದ ವಿದ್ವಾಂಸರು ಇಡೀ ಋಗ್ವೇದವನ್ನು ಸಾಯಣಭಾಷ್ಯ, ಮಂತ್ರಗಳ ಕನ್ನಡ ಮತ್ತು ಇಂಗ್ಲಿಷ್ ಅನುವಾದಗಳೊಡನೆ ಪ್ರಕಟಿಸಿದ್ದಾರೆ. ಅನೇಕ ಕಡೆಗಳಲ್ಲಿ ವಿಮರ್ಶಾತ್ಮಕವಾಗಿ ಅರ್ಥವನ್ನು ತಿಳಿಯಲು ಪ್ರಯತ್ನಿಸಿದ್ದಾರೆ. ಅವರ ಪ್ರಯತ್ನ ಸರ್ವಥಾ ಶ್ಲಾಘನೀಯ. ಆದರೆ ಆ ಕಾಲದ ಪ್ರಭಾವದಿಂದ ಈ ಸಂಪುಟಗಳ ಮೇಲೂ ಕೆಲವೆಡೆ ಯೂರೋಪಿನ ಅಪವ್ಯಾಖ್ಯಾನದ ದಟ್ಟವಾದ ಪ್ರಭಾವವಿರುವುದರಿಂದ ಋಗ್ವೇದದ ನಿಜವಾದ ಅರ್ಥವನ್ನು ತಿಳಿಸಿಕೊಡಲು ಈ ಗ್ರಂಥರಾಶಿ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ.
ಋಗ್ವೇದದ ನಿಜವಾದ ಅರ್ಥವನ್ನು ತಿಳಿಸಿಕೊಟ್ಟು ವೇದವಾಙ್ಮಯದ ಬಗೆಗೆ ನಮ್ಮ ಜನರಲ್ಲಿ ಗೌರವಭಾವವನ್ನು ಮೂಡಿಸಲು ಎಸ್.ಕೆ. ರಾಮಚಂದ್ರರಾಯರು ‘ಋಗ್ವೇದದರ್ಶನ’ವನ್ನು ೩೨ ಸಂಪುಟಗಳಲ್ಲಿ ಬರೆಯಬೇಕೆಂದು ಸಂಕಲ್ಪಿಸಿದರು. ಆದರೆ ಅವರು ತಮ್ಮ ಕಡೆಯ ವರ್ಷಗಳಲ್ಲಿ ಇದನ್ನು ಬರೆಯಲು ಆರಂಭ ಮಾಡಿದ್ದರಿಂದ ಕೇವಲ ೧೬ ಸಂಪುಟಗಳನ್ನು ಬರೆಯಲಾಯಿತು. ಉಳಿದ ಸಂಪುಟಗಳಲ್ಲಿ ಋಗ್ವೇದದ ಎಲ್ಲ ಮಂತ್ರಗಳನ್ನೂ ವ್ಯಾಖ್ಯಾನ ಮಾಡಬೇಕೆಂದು ಅವರ ಸಂಕಲ್ಪ ಇದ್ದರೂ ಅದು ಸಫಲವಾಗಲಿಲ್ಲ ಎಂಬುದು ಭಾರತೀಯರ ದುರ್ದೈವವೇ ಸರಿ. ಈ ೧೬ ಸಂಪುಟಗಳನ್ನು ೧೩ ಸಂಪುಟಗಳಾಗಿ ಮತ್ತೊಮ್ಮೆ ಎಸ್.ಕೆ. ರಾಮಚಂದ್ರರಾವ್ ಮೆಮೋರಿಯಲ್ ಟ್ರಸ್ಟ್ನ ವತಿಯಿಂದ ೨೦೧೫ರಲ್ಲಿ ಪುನರ್ಮುದ್ರಿಸಲಾಗಿದೆ.
‘ಋಗ್ವೇದದರ್ಶನ’
ಈ ೧೩ ಸಂಪುಟಗಳ ವಿಷಯ, ವಸ್ತುಗಳು ಹೀಗಿವೆ-
ಮೊದಲ ಸಂಪುಟ ಉಪೋದ್ಘಾತ. ಇದರ ಪ್ರಥಮ ಪರಿಚ್ಛೇದದಲ್ಲಿ ವೇದಗಳ ಪ್ರಸ್ತುತತೆ, ಅವುಗಳ ಬಗೆಗಿನ ಕೆಲವು ಮಿಥ್ಯಾಕಲ್ಪನೆಗಳು, ವೇದಾರ್ಥದ ನಿರೂಪಣೆಯಲ್ಲಿ ಎರಡು ಮಾರ್ಗಗಳು – ಈ ವಿಷಯಗಳ ನಿರೂಪಣೆ ಬಂದಿದೆ. ಇನ್ನು ಎರಡನೇ ಪರಿಚ್ಛೇದದಲ್ಲಿ ವೇದಗಳೆಂದರೆ ಏನು? ವೇದಗಳಲ್ಲಿರುವ ವಿಷಯಗಳು ಯಾವುವು? ವೈದಿಕ ಗ್ರಂಥಗಳ ನಿರ್ಮಾಣ ಹೇಗಾಯಿತು? ಎಂಬ ವಿಷಯಗಳನ್ನು ನಿರೂಪಿಸಲಾಗಿದೆ. ಮೂರನೇ ಪರಿಚ್ಛೇದದಲ್ಲಿ ವೇದಗಳಿಗೆ ನಿಜವಾಗಲೂ ಅರ್ಥವಿದೆಯೇ ಎಂಬುದನ್ನು ವಿಚಾರ ಮಾಡಿ ವೇದಗಳ ಅರ್ಥವನ್ನು ತಿಳಿಯಲು ಬೇಕಾದ ಸಾಧನಗಳನ್ನು ತಿಳಿಸಿಕೊಟ್ಟಿದ್ದಾರೆ. ನಾಲ್ಕನೇ ಪರಿಚ್ಛೇದದಲ್ಲಿ ವೈದಿಕ ಋಷಿಗಳ, ಛಂದಸ್ಸುಗಳ ಹಾಗೂ ದೇವತೆಗಳ ಬಗ್ಗೆ ವಿಸ್ತಾರವಾಗಿ ಚರ್ಚೆಯನ್ನು ಮಾಡಿ, ವೈದಿಕ ಮಂತ್ರಗಳ ಪಠನಪದ್ಧತಿಯನ್ನು ಉದಾಹರಣೆಗಳೊಂದಿಗೆ ನಿರೂಪಿಸಿದ್ದಾರೆ. ಸಂಹಿತಾಪಾಠ, ಪದಪಾಠ, ಕ್ರಮಪಾಠ, ಪಂಚಸಂಧಿ ಪಾಠ, ಜಟಾಪಾಠ, ಕ್ರಮಪಾಠ, ಮಾಲಾಪಾಠ, ಶಿಖಾಪಾಠ, ರೇಖಾಪಾಠ, ಧ್ವಜಪಾಠ, ದಂಡಪಾಠ, ರಥಪಾಠ, ದ್ವಿಚಕ್ರ ರಥಪಾಠದ ಮೂರು ಪ್ರಕಾರಗಳು, ಘನಪಾಠದ ಎರಡು ಪ್ರಕಾರಗಳು – ಹೀಗೆ ವೇದದ ಯಥಾವತ್ ರೂಪದ ಸಂರಕ್ಷಣೆಗಾಗಿ ಕಲ್ಪಿಸಲಾದ ವಿವಿಧ ಪಾಠಗಳ ಸ್ವರೂಪವನ್ನು ತಿಳಿಸಿದ್ದಾರೆ.
ತದನಂತರದಲ್ಲಿ ಋಗ್ವೇದದ ಛಂದಸ್ಸುಗಳ ಬಗೆಗೆ ವಿಸ್ತಾರವಾಗಿ ನಿರೂಪಣೆ ಮಾಡಲಾಗಿದೆ. ಗಾಯತ್ರಿಯ ಅನೇಕ ಪ್ರಭೇದಗಳು, ಉಷ್ಣಿಕ್ ಅನುಷ್ಟುಪ್ನ ಅನೇಕ ಪ್ರಭೇದಗಳು, ಬೃಹತೀ ಛಂದಸ್ಸು, ಪಂಕ್ತಿ, ತ್ರಿಷ್ಟುಪ್, ಜಗತೀ, ಪ್ರಗಾಥ, ಸಂಕೀರ್ಣ ಛಂದಸ್ಸುಗಳು – ಇವೇ ಮೊದಲಾದ ಛಂದಸ್ಸುಗಳ ಸ್ವರೂಪವನ್ನು ವಿಸ್ತಾರವಾಗಿ ನಿರೂಪಿಸಿ ಉದಾಹರಣೆಗಳನ್ನೂ ಕೊಡಲಾಗಿದೆ. ಮುಂದೆ ಕಾತ್ಯಾಯನ ಋಷಿಗಳಿಂದ ನಿರ್ಮಿತವಾದ ಸರ್ವಾನುಕ್ರಮಣಿ ಎಂಬ ಗ್ರಂಥದ ಸಮಗ್ರ ಪಾಠವನ್ನು ಕೊಡಲಾಗಿದೆ. ಏಕೆಂದರೆ ಈ ಸರ್ವಾನುಕ್ರಮಣಿ ಗ್ರಂಥದಲ್ಲಿಯೇ ಋಗ್ವೇದದ ಎಲ್ಲ ಋಷಿಗಳ, ಛಂದಸ್ಸುಗಳ ಹಾಗೂ ದೇವತೆಗಳ ವಿವರಣೆಗಳು ಬಂದಿವೆ. ಇದರ ಆಧಾರದಿಂದಲೇ ಎಲ್ಲ ಭಾಷ್ಯಕಾರರೂ ತಮ್ಮ ತಮ್ಮ ಭಾಷ್ಯಗಳನ್ನು ಬರೆದಿದ್ದಾರೆ. ಪಾಣಿನೀಯಶಿಕ್ಷಾ ಗ್ರಂಥವನ್ನೂ ಕಡೆಯಲ್ಲಿ ಕೊಡಲಾಗಿದೆ. ಈ ಶಿಕ್ಷಾಗ್ರಂಥದ ಆಧಾರದಿಂದಲೇ ವೇದಗಳ ಸರಿಯಾದ ಉಚ್ಚಾರಣೆಯನ್ನು ಮಾಡಲಾಗುತ್ತದೆ. ಇಲ್ಲಿಗೆ ಮೊದಲನೇ ಸಂಪುಟ ಮುಕ್ತಾಯವಾಗಿದೆ.
ಎರಡನೇ ಸಂಪುಟದಲ್ಲಿ ಸಾಯಣಾಚಾರ್ಯರು ತಿಳಿಸಿಕೊಟ್ಟ ಅಧಿಯಜ್ಞ ಅರ್ಥ, ಶೌನಕರ ಬೃಹದ್ದೇವತಾ ಗ್ರಂಥದ ಅಧಿದೈವತ ಪಕ್ಷ, ನಿರುಕ್ತ ಗ್ರಂಥಕಾರ ಯಾಸ್ಕರ ಹಾಗೂ ಆನಂದತೀರ್ಥರ ಅಧ್ಯಾತ್ಮ ಅರ್ಥಗಳ ಚಿಂತನೆಯನ್ನು ಮಾಡಲಾಗಿದೆ. ಹೀಗೆ ಮುಂದಿನ ಎಲ್ಲ ಮಂತ್ರಗಳ ಅರ್ಥಚಿಂತನೆಗೆ ಬೇಕಾದ ಪದ್ಧತಿಯನ್ನು ಎರಡನೇ ಸಂಪುಟದಲ್ಲಿ ನಿರೂಪಿಸಲಾಗಿದೆ.
ಓಂಕಾರದಲ್ಲಿನ ಅ ಉ ಮ್ ಎಂಬ ಮೂರು ಅಕ್ಷರಗಳ ವಿಸ್ತಾರವೇ ಭೂರ್ ಭುವಃ ಸುವಃ ಎಂಬ ಮೂರು ವ್ಯಾಹೃತಿಗಳು. ವ್ಯಾಹೃತಿಗಳ ಅರ್ಥವಿಸ್ತಾರವನ್ನು ಗಾಯತ್ರಿಯ ಮೂರು ಪಾದಗಳಲ್ಲಿ ವಿವರಿಸಲಾಗಿದೆ. ಗಾಯತ್ರಿಯ ಮೂರು ಪಾದಗಳ ಅರ್ಥಗಳನ್ನೇ ಪುರುಷಸೂಕ್ತದ ಮೂರು ವರ್ಗಗಳಲ್ಲಿ ತಿಳಿಸಲಾಗಿದೆ. ಪುರುಷಸೂಕ್ತದ ಮೂರು ವರ್ಗಗಳ ಅರ್ಥಗಳನ್ನೇ ಋಗ್ವೇದ, ಯಜುರ್ವೇದ, ಸಾಮವೇದಗಳೆಂಬ ಮೂರು ವೇದಗಳಲ್ಲಿ ತಿಳಿಸಲಾಗಿದೆ. ಹೀಗೆ ಓಂಕಾರದ ಅರ್ಥವನ್ನು ಕ್ರಮವಾಗಿ ವಿಸ್ತರಿಸಲಾದ್ದರಿಂದ ಓಂಕಾರವೇ ಎಲ್ಲ ವೇದಗಳಿಗೆ ಮೂಲ ಎಂಬ ಮಧ್ವಾಚಾರ್ಯರ ನಿಲವಿನ ವೈಶಿಷ್ಟö್ಯವನ್ನು ಮೂರು ಮತ್ತು ನಾಲ್ಕನೇ ಸಂಪುಟಗಳಲ್ಲಿ ತೋರಿಸಲಾಗಿದೆ. ಇಡೀ ಮೂರನೇ ಸಂಪುಟ ಗಾಯತ್ರಿಗೆ ಮೀಸಲಾಗಿದ್ದರೆ ನಾಲ್ಕನೇ ಸಂಪುಟವು ಪುರುಷಸೂಕ್ತದ ಅರ್ಥವನ್ನು ತಿಳಿಸಿಕೊಟ್ಟಿದೆ.
‘ಯಜ್ಞೋ ವೈ ವಿಷ್ಣುಃ’, ‘ಸೋಧ್ವನಃ ಪಾರಮಾಪ್ನೋತಿ ತದ್ ವಿಷ್ಣೋಃ ಪರಮಂ ಪದಮ್’, ‘ಸರ್ವೇ ವೇದಾ ಯತ್ಪದಮಾಮನಂತಿ ತಪಾಂಸಿ ಸರ್ವಾಣಿ ಚ ಯದ್ವದಂತಿ ಯದಿಚ್ಛಂತೋ ಬ್ರಹ್ಮಚರ್ಯಂ ಚರಂತಿ ತತ್ತೇ ಪದಂ ಸಂಗ್ರಹೇಣ ಬ್ರವೀಮಿ’ ಮುಂತಾದ ಎಲ್ಲ ವಾಕ್ಯಗಳು ಸಕಲ ವೇದಗಳೂ ವಿಷ್ಣುಪರ ಎಂಬುದನ್ನು ಸ್ಫುಟವಾಗಿ ತಿಳಿಸುತ್ತವೆ.
ಋಗ್ವೇದದ ಪ್ರಧಾನ ದೇವತೆ ವಿಷ್ಣು. ಆದ್ದರಿಂದ ವಿಷ್ಣುವಿಗೆ ಸಂಬಂಧಿಸಿದ ಎಲ್ಲ ಸೂಕ್ತಗಳ ಸಮಗ್ರ ವ್ಯಾಖ್ಯಾನವು ಐದು, ಆರು ಹಾಗೂ ಏಳನೇ ಸಂಪುಟಗಳಲ್ಲಿ ವಿಸ್ತಾರವಾಗಿ ಬಂದಿದೆ. (ಮೊದಲನೇ ಮಂಡಲದಲ್ಲಿ ಬರುವ ೨೨ನೆಯ ಸೂಕ್ತದ ಆರು ಮಂತ್ರಗಳ, ಹಾಗೂ ೧೫೪, ೧೫೫, ೧೫೬ ಈ ಮೂರು ಸೂಕ್ತಗಳ, ಆರನೇ ಮಂಡಲದ ೬೯ನೆಯ ಸೂಕ್ತದ, ೭ನೆಯ ಮಂಡಲದ ೯೯ ಹಾಗೂ ೧೦೦ನೆಯ ಸೂಕ್ತಗಳ ವ್ಯಾಖ್ಯಾನ.) ಈ ಮೂರು ಸಂಪುಟಗಳಿಗೂ ವಿಷ್ಣುಸೂಕ್ತ ಎಂಬುದಾಗಿ ಹೆಸರಿಟ್ಟಿದ್ದಾರೆ. ಅನುವಾಕಾನುಕ್ರಮಣಿ, ಆರ್ಷಾನುಕ್ರಮಣಿ ಮತ್ತು ಚರಣವ್ಯೂಹದ ಸೂತ್ರಗಳನ್ನು ಆರನೆಯ ಸಂಪುಟದಲ್ಲಿ ಕೊಡಲಾಗಿದೆ. ಏಳನೇ ಸಂಪುಟದಲ್ಲಿ ಉವಟರ ಸರ್ವಾನುಕ್ರಮಪರಿಭಾಷೆ ಮತ್ತು ಶೌನಕರ ಛಂದೋನುಕ್ರಮಣಿಗಳನ್ನು ಕೊಡಲಾಗಿದೆ.
ದಿನಕರಭಟ್ಟರು ಸಂಪೂರ್ಣ ಋಗ್ವೇದದ ಸಾರರೂಪವಾಗಿ ಇನ್ನೂರು ಮಂತ್ರಗಳನ್ನು ಆಯ್ದು ಅವುಗಳ ವ್ಯಾಖ್ಯಾನವನ್ನು ಋಗರ್ಥಸಾರವೆಂಬ ಹೆಸರಿನಿಂದ ಮಾಡಿದ್ದಾರೆ. ಎಂಟು ಮತ್ತು ಒಂಬತ್ತನೆಯ ಸಂಪುಟಗಳಲ್ಲಿ ದಿನಕರಭಟ್ಟರ ಈ ಋಗರ್ಥಸಾರವನ್ನು ಮುದ್ರಿಸಲಾಗಿದೆ. ಅದರ ಜೊತೆಗೆ ಸಾಯಣರ ಭಾಷ್ಯವನ್ನೂ ನೀಡಲಾಗಿದೆ. ಆದರೆ ರಾಮಚಂದ್ರರಾಯರು ಕೇವಲ ಯಜ್ಞಪರವಾದ ಅರ್ಥವನ್ನು ಅನುಸರಿಸದೆ ತಮ್ಮ ಸ್ವಂತ ವಿವೇಚನೆಗೆ ಅನುಸಾರವಾಗಿ ಅಧ್ಯಾತ್ಮ ಅರ್ಥವನ್ನು ಕೂಡ ಅನುವಾದ ಹಾಗೂ ವಿವರಣೆಗಳಲ್ಲಿ ನೀಡಿದ್ದಾರೆ. ಸಾಮಾನ್ಯ ಜನರ ಅನುಕೂಲಕ್ಕಾಗಿ ಈ ಎರಡು ಸಂಪುಟಗಳನ್ನು ಇಲ್ಲಿ ಸೇರಿಸಲಾಗಿದೆ.
ಹತ್ತನೇ ಸಂಪುಟದಲ್ಲಿ ಋಗ್ವೇದದ ಅಗ್ನಿಸೂಕ್ತವನ್ನು ವಿಸ್ತಾರವಾಗಿ ವ್ಯಾಖ್ಯಾನಿಸಲಾಗಿದೆ.
ಹನ್ನೊಂದನೇ ಸಂಪುಟದಲ್ಲಿ ಸಾಯಣಾಚಾರ್ಯರ ಋಗ್ವೇದಭಾಷ್ಯಭೂಮಿಕೆಯನ್ನು ಸಾಮಾನ್ಯ ಜನರಿಗೆ ತಲಪುವಂತೆ ನೀಡಲಾಗಿದೆ. ಇದರಿಂದ ಸಾಯಣಾಚಾರ್ಯರ ದೃಷ್ಟಿ ಯಾವ ಬಗೆಯದೆಂದು ಚೆನ್ನಾಗಿ ಗೊತ್ತಾಗುತ್ತದೆ.
ಹನ್ನೆರಡನೇ ಸಂಪುಟದಲ್ಲಿ ಅಭಿನವ ಶಂಕರರ ವ್ಯಾಖ್ಯಾನದ ಜೊತೆಗೆ ಸಮಗ್ರ ರುದ್ರಾಧ್ಯಾಯವನ್ನು ನೀಡಲಾಗಿದೆ. ರುದ್ರಾಧ್ಯಾಯವು ಯಜುರ್ವೇದದಲ್ಲಿ ಬರುವುದಾದರೂ ಕೂಡ ಅದರ ಹನ್ನೊಂದನೇ ಅನುವಾಕದಲ್ಲಿ ಕೆಲವು ಋಗ್ವೇದಮಂತ್ರಗಳು ಇರುವುದರಿಂದ ಋಗ್ವೇದದರ್ಶನ ಪುಸ್ತಕದಲ್ಲಿ ಇದನ್ನು ಸೇರಿಸಲಾಗಿದೆ.
ಹದಿಮೂರನೇ ಸಂಪುಟ ಸಂಪೂರ್ಣವಾಗಿ ಯಾಸ್ಕರ ನಿರುಕ್ತದ ದೇವತಾಕಾಂಡದ ವಿವೇಚನೆಯಾಗಿದೆ. ಇನ್ನುಳಿದಂತೆ ಶ್ರೀಸೂಕ್ತವು ಬೇರೆಯಾಗಿ ಮುದ್ರಿತವಾಗಿದೆ.
ಈ ಸಂಪುಟಗಳಲ್ಲಿ ವೇದವ್ಯಾಖ್ಯಾನರೀತಿಯ ಬಗೆಗೆ ಇರುವ ಎರಡನೇ ಸಂಪುಟ, ಪುರುಷಸೂಕ್ತದ ಬಗೆಗೆ ಇರುವ ನಾಲ್ಕನೇ ಸಂಪುಟ, ವಿಷ್ಣುವಿನ ಅನೇಕ ಸೂಕ್ತಗಳ ಬಗೆಗೆ ಇರುವ ಐದು, ಆರು ಮತ್ತು ಏಳನೇ ಸಂಪುಟಗಳು, ಅಗ್ನಿಸೂಕ್ತದ ಬಗೆಗೆ ಇರುವ ಹತ್ತನೇ ಸಂಪುಟ – ಇವು ಬಹಳ ಮುಖ್ಯ. ಉಳಿದದ್ದು ರಾಮಚಂದ್ರರಾಯರ ವೇದವ್ಯಾಖ್ಯಾನರೀತಿಯ ಪರಿಕರಗಳಷ್ಟೇ. ಈ ಸಂಪುಟಗಳಲ್ಲಿಯೇ ರಾಮಚಂದ್ರರಾಯರ ಪ್ರಮುಖವಾದ ಕೊಡುಗೆ ಇದೆ.
ಮೊದಲನೆಯ ಸಂಪುಟದ ಉಪೋದ್ಘಾತದಲ್ಲಿಯೇ ತಮ್ಮ ವೇದವ್ಯಾಖ್ಯಾನರೀತಿಯ ಬಗೆಗೆ ಅವರು ವಿಸ್ತಾರವಾಗಿ ಬರೆದಿದ್ದಾರೆ. ವೇದಾರ್ಥಚಿಂತನೆಯನ್ನು ಪಾಶ್ಚಾತ್ಯರು ಅನೇಕ ರೀತಿಯಾಗಿ ನಡೆಸಿದ್ದರೂ ಕೂಡ ಪಾರಂಪರಿಕವಾದ ಭಾಷ್ಯಕಾರರು ನಡೆಸಿದ ಅರ್ಥಾನುಸಂಧಾನದ ಪ್ರಕಾರವನ್ನು ಆಧುನಿಕ ವಿದ್ವಾಂಸರು ಸರಿಯಾಗಿ ಪರಿಗಣಿಸಿಲ್ಲ. ಪಾಶ್ಚಾತ್ಯರು ಭಾಷಾಶಾಸ್ತ್ರೀಯ, ಮಿಥಕೀಯ, ಐತಿಹಾಸಿಕ ಮತ್ತು ಕರ್ಮಕಾಂಡೀಯ ವಿವೇಚನೆಗಳನ್ನು ಅನೇಕ ರೀತಿಯಾಗಿ ನಡೆಸಿದ್ದರೂ ಕೂಡ ವೇದಗಳ ಹೃದಯ ಏನು ಎಂಬುದರ ಬಗೆಗೆ ದಿವ್ಯವಾದ ನಿರ್ಲಕ್ಷ್ಯವನ್ನು ತೋರಿಸಿದ್ದಾರೆ. ತದನುಸಾರಿಗಳಾದ ನಮ್ಮ ಭಾರತೀಯ ವಿದ್ವಾಂಸರೂ ಕೂಡ ಪಾಶ್ಚಾತ್ಯರ ಪುಚ್ಛಗ್ರಾಹಕರಾಗಿ ತಾವೂ ಮೋಸ ಹೋಗಿ ಜಗತ್ತಿಗೂ ಮೋಸ ಮಾಡಿದ್ದಾರೆ. ಪಾಶ್ಚಾತ್ಯ ಅಧ್ಯಯನದ ರೀತಿಯನ್ನು ಅನುಸರಿಸಿಯೇ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ, ಅಧ್ಯಾಪನಗಳು ನಡೆಯುತ್ತಿವೆ. ಇದರಿಂದ ವೇದಗಳ ನಿಜವಾದ ಅರ್ಥವು ಏನೆಂದು ಯಾರಿಗೂ ತಿಳಿಯದಂತಾಗಿದೆ.
ಈ ಕಷ್ಟದ ಪರಿಹಾರಕ್ಕಾಗಿಯೇ ಋಗ್ವೇದದ ಅರ್ಥವನ್ನು ಮೂವತ್ತೆರಡು ಸಂಪುಟಗಳಲ್ಲಿ ಬರೆಯಬೇಕೆಂದು ರಾಮಚಂದ್ರರಾಯರು ಸಂಕಲ್ಪಸಿದ್ದರು. ಸಾಯಣಾಚಾರ್ಯರ ಸಮಗ್ರವಾದ ಭಾಷ್ಯವು ಅನುವಾದಸಹಿತವಾಗಿ ಮೈಸೂರಿನಿಂದ ಮುದ್ರಿತವಾಗಿದ್ದರೂ ಕೂಡ ರಾಮಚಂದ್ರರಾಯರು ಅದರಲ್ಲಿ ತೃಪ್ತಿಯನ್ನು ಕಾಣಲಿಲ್ಲ. ಇದನ್ನು ಸ್ಪಷ್ಟವಾಗಿ ಎಂಟನೇ ಸಂಪುಟದ ಉಪೋದ್ಘಾತದಲ್ಲಿ ಬರೆದಿದ್ದಾರೆ. ಸ್ಕಂದಸ್ವಾಮಿಗಳ ವ್ಯಾಖ್ಯಾನವು ಸಾಯಣರ ವ್ಯಾಖ್ಯಾನಕ್ಕಿಂತ ಅಲ್ಲಲ್ಲಿ ಸ್ವಲ್ಪ ಭಿನ್ನವಾಗಿದ್ದರೂ ಕೂಡ ಹೆಚ್ಚಿನ ಮಟ್ಟಿಗೆ ಯಜ್ಞಪರವೇ ಆಗಿದೆ. ಆಯಾ ಯಜ್ಞಗಳನ್ನು ಮಾಡುವಾಗ ಅಗ್ನಿ, ವರುಣ, ಮಿತ್ರ ಮೊದಲಾದ ದೇವತೆಗಳನ್ನು ಆಹ್ವಾನಿಸಿ ಅವರಿಗೆ ಆಹುತಿಗಳನ್ನು ನೀಡಲು ಋಗ್ವೇದದ ಮಂತ್ರಗಳನ್ನು ಉಪಯೋಗಿಸುತ್ತಾರೆ. ಆಶ್ವಲಾಯನ ಶ್ರೌತಸೂತ್ರಗಳಿಗೆ ಅನುಸಾರವಾಗಿ ಯಜ್ಞಗಳಲ್ಲಿ ಮಂತ್ರಗಳನ್ನು ಉಪಯೋಗಿಸತಕ್ಕದ್ದು. ಇದರಲ್ಲಿ ಯಜ್ಞವೇ ಪ್ರಧಾನವಾದದ್ದು. ದೇವತೆಗಳಾದರೂ ಕೂಡ ಯಜ್ಞಾಂಗವೇ ಹೊರತು ಸ್ವಯಂ ಪ್ರಧಾನವಾಗಿರುವುದಿಲ್ಲ. ಇದು ಸಾಯಣಾಚಾರ್ಯರು ಪ್ರಧಾನವಾಗಿ ಅನುಸರಿಸುವ ಮಾರ್ಗ. ಇದನ್ನು ಅಧಿಯಜ್ಞಪಕ್ಷ ಎನ್ನುತ್ತಾರೆ.
ಶೌನಕರ ಬೃಹದ್ದೇವತಾ ಗ್ರಂಥದ ಅನುಸಾರವಾಗಿ ಋಷಿಗಳು ಆಯಾ ದೇವತೆಗಳನ್ನು ಸ್ತೋತ್ರ ಮಾಡುತ್ತ ಅತ್ಯಂತ ಗಂಭೀರವಾದ ತಪಸ್ಸು ಮಾಡುವುದು ದೇವತಾಪರವಾದ ಅರ್ಥ. ಇದನ್ನು ಅಧದೈವತಪಕ್ಷ ಎನ್ನುತ್ತಾರೆ.
ಈ ಮಂತ್ರಗಳು ನಮ್ಮ ಮನಸ್ಸಿನಲ್ಲಿ ನಡೆಯುತ್ತಿರುವ ಜ್ಞಾನ-ಅಜ್ಞಾನಗಳ ನಡುವಿನ ಹೋರಾಟದ ಪ್ರತೀಕವಾದ ಯಜ್ಞಗಳನ್ನು ತಿಳಿಸುತ್ತವೆ. ಭಕ್ತಿಯುಕ್ತವಾದ ನಮ್ಮ ಮನಸ್ಸೇ ಸೋಮ. ಈ ಸೋಮವನ್ನು ಸ್ವೀಕಾರ ಮಾಡಿ ನಮ್ಮ ಮನಸ್ಸಿಗೂ ಶರೀರಕ್ಕೂ ಬಲವನ್ನು ಕೊಟ್ಟು ಆಧ್ಯಾತ್ಮಿಕವಾಗಿ ಇನ್ನೂ ಹೆಚ್ಚಿನ ಉನ್ನತಿಯಾಗುವಂತೆ ಪ್ರಾರ್ಥಿಸುವುದು ಅಧ್ಯಾತ್ಮಪರವಾದ ಅರ್ಥ.
ಈ ಆಧ್ಯಾತ್ಮಿಕ ಪಕ್ಷವನ್ನು ಯಾಸ್ಕರು ತಮ್ಮ ನಿರುಕ್ತ ಗ್ರಂಥದಲ್ಲಿ ಸೂಚಿಸಿದ್ದಾರೆ ಹಾಗೂ ಅದೇ ರೀತಿಯಾಗಿ ಅನೇಕ ಮಂತ್ರಗಳನ್ನು ವ್ಯಾಖ್ಯಾನಿಸಿದ್ದಾರೆ. ಇದು ವೇದಗಳ ಮೂರು ರೀತಿಯಾದ ವ್ಯಾಖ್ಯಾನಕ್ರಮ.
ಇವು ಮೂರು ಬೇರೆ ಬೇರೆಯೇ ಮಾರ್ಗಗಳು; ಅಧಿಯಜ್ಞಪಕ್ಷವನ್ನು ಅನುಸರಿಸುವವರು ದೈವತಪಕ್ಷವನ್ನಾಗಲಿ, ಅಧ್ಯಾತ್ಮಪಕ್ಷವನ್ನಾಗಲಿ ಸರ್ವಥಾ ನಿರಾಕರಿಸುತ್ತಾರೆ; ಮಾರ್ಗಗಳಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲವೇ ಇಲ್ಲ – ಎಂದು ಅನೇಕ ವೇದವ್ಯಾಖ್ಯಾನಕಾರರ ಅಭಿಪ್ರಾಯ.
ಈ ಮೂರು ಪಕ್ಷಗಳನ್ನು ಹೊಂದಿಸಿಕೊಂಡು ಸಮನ್ವಯ ಮಾಡಿ ಮುಂದುವರಿಯುವ ಪಕ್ಷವೇ ತ್ರಿತಯಪಕ್ಷ. ಇದನ್ನು ಮೊದಲು ತಿಳಿಸಿಕೊಟ್ಟವರೇ ಆನಂದತೀರ್ಥರು. ಋಗ್ವೇದದ ಮೊದಲ ನಲವತ್ತು ಸೂಕ್ತಗಳಿಗೆ ಅವರು ಭಾಷ್ಯವನ್ನು ಬರೆದಿದ್ದಾರೆ. ಎಲ್ಲ ವೇದಗಳೂ ವಿಷ್ಣುವನ್ನೇ ಹೇಳುವುದರಿಂದ ವಿಷ್ಣುಪರವಾದ ಅರ್ಥವು ಮೊದಲನೆಯದ್ದು. ಆಯಾ ದೇವತಾಪರವಾದ ಅರ್ಥ ಎರಡನೆಯದ್ದು. ಅದರಂತೆ ನಮ್ಮ ಶರೀರದಲ್ಲಿ, ಮನಸ್ಸಿನಲ್ಲಿ ನಡೆಯುತ್ತಿರುವ ಜ್ಞಾನ-ಅಜ್ಞಾನಗಳ ಸಂಘರ್ಷವನ್ನು ಪ್ರತಿಪಾದಿಸುವ ರೀತಿಯೇ ಅಧ್ಯಾತ್ಮ ಅರ್ಥ. ಆಯಾ ಅಧಿಕಾರಿಗಳ ದೃಷ್ಟಿಯಿಂದ ಈ ಮೂರು ಕೂಡ ಸರಿಯೇ ಎಂದು ಮಧ್ವಾಚಾರ್ಯರು ಮೊದಲ ಬಾರಿಗೆ ಪ್ರತಿಪಾದಿಸಿದರು. ಅದೇ ಮಾರ್ಗವನ್ನು ಅನುಸರಿಸಿ ಅರವಿಂದರು ಹಾಗೂ ಅವರ ಶಿಷ್ಯರಾದ ಕಪಾಲಿಶಾಸ್ತಿçಗಳು ವೇದಗಳ ಅಧ್ಯಾತ್ಮ ಅರ್ಥವನ್ನು ನಿರೂಪಿಸಿದ್ದಾರೆ. ರಾಮಚಂದ್ರರಾಯರು ಕೂಡ ಇದೇ ಮಾರ್ಗದಲ್ಲಿ ವೇದಗಳಿಗೆ ಮೂರು ರೀತಿಯಾದ ಅರ್ಥಗಳನ್ನು ನಿರೂಪಣೆ ಮಾಡಲು ಪ್ರಯತ್ನಪಟ್ಟಿದ್ದಾರೆ.
ಇದಕ್ಕೆ ಉದಾಹರಣೆಯಾಗಿ ಋಗ್ವೇದದ ಮೊದಲನೇ ಮಂತ್ರವನ್ನು ತೋರಿಸಬಹುದಾಗಿದೆ.
ಇಲ್ಲಿ ‘ಅಗ್ನಿ’ ಎಂದರೆ ನಾವು ಪ್ರತ್ಯಕ್ಷವಾಗಿ ಕಾಣುವ ಬೆಂಕಿಯಲ್ಲ; ಇದರ ಒಳಗೆ ಇರುವ ಅಗ್ನಿದೇವತೆ ಹಾಗೂ ಅಗ್ನಿದೇವತೆಯ ಒಳಗಿರುವ ವಿಷ್ಣು. ಅವನು ಅನಾದಿಕಾಲದಿಂದ ನಮ್ಮ ಹಿತವನ್ನು ಕಾಪಾಡುತ್ತಿರುವುದರಿಂದ ‘ಪುರೋಹಿತ’. ದ್ಯುತಿ, ವಿಜಯ, ಕಾಂತಿ, ಸ್ತುತಿ, ಗತಿ, ರತಿಗಳಿಂದ ಕೂಡಿದ ‘ದೇವ’. ಅಗ್ನಿಯೇ ಯಜ್ಞದ ಋತ್ವಿಜರಲ್ಲಿ ಹಾಗೂ ವಿಶೇಷವಾಗಿ ಹೋತೃವಿನಲ್ಲಿ ಇದ್ದು ಬಾಹ್ಯ ಯಜ್ಞ ಹಾಗೂ ಆಂತರ ಯಜ್ಞಗಳನ್ನು ನಡೆಸಿರುವುದರಿಂದ ‘ಋತ್ವಿಕ್’ ಮತ್ತು ‘ಹೋತಾ’. ನಮ್ಮ ಇಂದ್ರಿಯಗಳೆಂಬ ಅಗ್ನಿಗಳಲ್ಲಿ ವಿಷಯಗಳನ್ನು ಹೋಮ ಮಾಡುವುದರಿಂದ ಹೋತಾ. ನಮಗೆ ಅತ್ಯಂತ ಸುಖವೆಂಬ ರತಿಯನ್ನು ಕೊಡುವುದರಿಂದ ‘ರತ್ನಧಾತಮ’. ಹೀಗೆ ಒಂದೇ ಮಂತ್ರ ಅಗ್ನಿದೇವತೆ, ಅಗ್ನಿಯ ಒಳಗಿರುವ ವಿಷ್ಣು ಹಾಗೂ ಅಧ್ಯಾತ್ಮದ ಜ್ಞಾನಯಜ್ಞ ಎಂಬ ಮೂರು ಅರ್ಥಗಳನ್ನು ತಿಳಿಸಿಕೊಡುತ್ತದೆ. ಇದೇ ರೀತಿಯಾಗಿ ಸಮಗ್ರ ಋಗ್ವೇದದ ಅರ್ಥವನ್ನು ತಿಳಿಯಬೇಕು.
ಇದನ್ನು ತಿಳಿಸಲು ರಾಮಚಂದ್ರರಾಯರು ಋಗ್ವೇದದ ಪ್ರಥಮ ಸೂಕ್ತಕ್ಕೆ ವಿಸ್ತಾರವಾಗಿ ವ್ಯಾಖ್ಯಾನವನ್ನು ಮಾಡಿದ್ದಾರೆ. ಇವರ ಇಂತಹ ತ್ರಿತಯವ್ಯಾಖ್ಯಾನಪಕ್ಷಕ್ಕೆ ಆಧಾರ ಮಧ್ವಾಚಾರ್ಯರ ಋಗ್ವೇದ ಭಾಷ್ಯವೇ ಆಗಿದೆ. ಇದನ್ನು ಅವರು ಸ್ಪಷ್ಟವಾಗಿ ಉಲ್ಲೇಖಿಸಿಯೂ ಇದ್ದಾರೆ. ಅಪೂರ್ವವಾದ ಈ ತ್ರಿತಯವ್ಯಾಖ್ಯಾನಕ್ರಮವನ್ನು ಆಧುನಿಕರು ಯಾರೂ ಅಳವಡಿಸಿಕೊಳ್ಳಲಿಲ್ಲ ಎಂಬುದು ಅತ್ಯಂತ ವಿಷಾದಕರವೇ ಆಗಿದೆ.
ಈ ಅರ್ಥಕ್ರಮವನ್ನು ತಿಳಿಸಲೆಂದೇ ರಾಮಚಂದ್ರರಾಯರ ವ್ಯಾಖ್ಯಾನದ ಉಪಕ್ರಮವಾಯಿತು. ಆಧುನಿಕ ವೈದಿಕ ಅಧ್ಯಯನಪರಂಪರೆಯಲ್ಲಿಯೇ ಇದೊಂದು ಹೊಸತಾದ ರೀತಿ. ಪರಂಪರೆಯನ್ನು ಅನುಸರಿಸಿದರೂ ವಿಮರ್ಶಾತ್ಮಕ ದೃಷ್ಟಿಯಿಂದ ವೇದಗಳನ್ನು ನೋಡುವುದೇ ಇದರ ಉದ್ದೇಶ. ಈ ಕಾರ್ಯದಲ್ಲಿ ರಾಮಚಂದ್ರರಾಯರು ಸಫಲರೇ ಆಗಿದ್ದಾರೆ. ಇವರು ಬರೆದಿರುವ ಎಲ್ಲ ವಿಷಯಗಳೂ ತುಂಬ ಪ್ರಾಮಾಣಿಕವಾಗಿವೆ. ಇದರಲ್ಲಿ ಯಾವ ಸಂಶಯವೂ ಇಲ್ಲ.
ಈ ಸಂಪುಟಗಳನ್ನು ಯಾವುದೇ ವಿಶ್ವವಿದ್ಯಾಲಯದ ಪಠ್ಯಕ್ರಮದದಲ್ಲಿ ಸೇರಿಸಲಾಗಿಲ್ಲವೆಂಬುದು ಅತ್ಯಂತ ದುಃಖದ ಸಂಗತಿ. ವಿಶ್ವವಿದ್ಯಾಲಯಗಳಲ್ಲಿ ಅವರ ಶಿಷ್ಯ-ಪ್ರಶಿಷ್ಯ ಪರಂಪರೆಯವರು ಯಾರೂ ಇಲ್ಲವೆಂಬುದು ಒಂದು ಕಾರಣವಾದರೆ ನಮ್ಮ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟದ ಅವನತಿಯೇ ಇದಕ್ಕೆ ಮುಖ್ಯ ಕಾರಣ.
ಕರ್ನಾಟಕದ ವೈದಿಕ ಪರಂಪರೆ ಮಧ್ವಾಚಾರ್ಯರಿಂದ ಆರಂಭವಾಗಿದೆ. ಸಾಯಣಾಚಾರ್ಯರು ಇದರಲ್ಲಿ ಮುಖ್ಯ ಪಾತ್ರ ವಹಿಸಿದವರು. ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಈ ಕಾರ್ಯವನ್ನು ಮುಂದುವರಿಸಿದವರು ರಾಮಚಂದ್ರರಾಯರು ಹಾಗೂ ಸಂಸ್ಕೃತದಲ್ಲಿ ಬನ್ನಂಜೆ ಗೋವಿಂದಾಚಾರ್ಯರು. ಹೆಚ್ಚುಕಡಮೆ ಸಮಕಾಲೀನರಾದ ಇಬ್ಬರೂ ತಮ್ಮ ಯೌವನದ ದಿನಗಳನ್ನು ಬೇರೆ ಬೇರೆ ಕಾರ್ಯಗಳಿಗಾಗಿ ವಿನಿಯೋಗಿಸದೆ ಇಡಿಯಾಗಿ ಋಗ್ವೇದವ್ಯಾಖ್ಯಾನವನ್ನು ಮಾಡಿದ್ದರೆ ಅವರ ಕೊಡುಗೆ ಬಹಳ ದೊಡ್ಡದಾಗಿರುತ್ತಿತ್ತು. ರಾಮಚಂದ್ರರಾಯರು ತಮ್ಮ ಎಪ್ಪತ್ತನಾಲ್ಕನೇ ವಯಸ್ಸಿನಲ್ಲಿ ಋಗ್ವೇದದರ್ಶನವನ್ನು ಬರೆಯಲು ಆರಂಭಿಸಿ ಹಿಂದೆ ಬರೆದ ಅನೇಕ ವಿಷಯಗಳನ್ನು ಸೇರಿಸಿ ಹದಿಮೂರು ಸಂಪುಟಗಳನ್ನು ಹೊರತರಲು ಮಾತ್ರ ಸಾಧ್ಯವಾಯಿತು. ಈಗ ‘ಆದರೆ, ಹಾಗಾಗಿದ್ದರೆ’ ಮುಂತಾದ ಮಾತುಗಳಿಂದ ಪ್ರಯೋಜನವೇನೂ ಇಲ್ಲ. ಇವರ ಜೀವನದಿಂದ ನಾವು ಪಾಠ ಕಲಿತು ಕಾರ್ಯವನ್ನು ಮುಂದುವರಿಸಬೇಕು.
ಆ ಮಹಾನುಭಾವರಿಗೆ ನಮ್ಮ ನಮಸ್ಕಾರಗಳು.