ಕನ್ನಡ ವೈದಿಕ ಸಾಹಿತ್ಯ ಕೃತಿಗಳಲ್ಲಿ ಚಾಟುವಿಟ್ಠಲನಾಥನ ಭಾಗವತದ ಹೊರತು ಮಿಕ್ಕವುಗಳಲ್ಲಿ ಒಂದೊಂದು ಸಾಲಿನಲ್ಲಿ ಕಥಾಂಶ ಸೂಚಿತವಾಗಿದ್ದು ಯಾವುದೇ ವಿಶೇಷ ಕಂಡುಬರುವುದಿಲ್ಲ. ದಾಸಸಾಹಿತ್ಯದಲ್ಲಿನ ಕೆಲವು ಕಾವ್ಯಗಳನ್ನು ಹೊರತುಪಡಿಸಿ ಇನ್ನಿತರ ಕಾವ್ಯಗಳಲ್ಲಿ, ಯಕ್ಷಗಾನ ಕೃತಿಗಳಲ್ಲಿ, ಸಂಗೀತ ಕೃತಿಗಳಲ್ಲಿ ವಾಮನಾವತಾರದ ಕಥೆ ದಶಾವತಾರಗಳ ಸ್ತುತಿ ಸಂದರ್ಭದಲ್ಲಿ ಬಂದಿದೆ.
ದಾಸಶ್ರೇಷ್ಠರು ತಮ್ಮ ಕೀರ್ತನೆಗಳಲ್ಲಿ ಈ ಕಥಾಂಶವನ್ನು ಬಹಳವಾಗಿ ತಂದಿರುವುದುಂಟು.
ವಾಮನಾವತಾರವು ವಿಷ್ಣುವಿನ ದಶಾವತಾರಗಳಲ್ಲಿ ಐದನೆಯದು. ಈ ಅವತಾರದಲ್ಲಿ ವಿಷ್ಣುವು ಕಶ್ಯಪನ ಪತ್ನಿಯಾದ ಅದಿತಿಯಲ್ಲಿ ವಾಮನನಾಗಿ ಜನಿಸಿದನು. ಬಲಿಚಕ್ರವರ್ತಿಯ ಅಹಂಕಾರವನ್ನು ಮುರಿಯುವುದಕ್ಕಾಗಿ ಅದಿತಿದೇವಿಯಲ್ಲಿ ಇಂದ್ರನಿಗೆ ತಮ್ಮನಾಗಿ ಜನಿಸಿದ ಕಾರಣ ಉಪೇಂದ್ರನೆಂಬ ಹೆಸರೂ ಈತನಿಗಿದೆ. ಈ ಅವತಾರವು ಈಗ ನಡೆಯುತ್ತಿರುವ ವೈವಸ್ವತ ಮನ್ವಂತರದ ಏಳನೆಯ ತ್ರೇತಾಯುಗದಲ್ಲಿ ನಡೆಯಿತೆಂದು ಪುರಾಣಗಳು ವರ್ಣಿಸುತ್ತವೆ.
ಈ ಅವತಾರದ ಕಲ್ಪನೆ ತುಂಬ ಚೆಲುವಾದುದು. ವಿಶ್ವದ ವಿಸ್ತಾರವನ್ನು ಅಳೆಯುವ ಸಾಧನವಾಗಿ ಇದು ಇಂದಿಗೂ ಬಳಕೆಗೊಳ್ಳುತ್ತಿದೆ. ರಾಮಾಯಣದ ಸುಂದರಕಾಂಡದಲ್ಲಿ ಬರುವ ಒಂದು ಪ್ರಸಂಗ ವಾಮನಾವತಾರದ ವಿಶ್ವವ್ಯಾಪಕತೆಯನ್ನು ಸಮರ್ಥವಾಗಿ ಪ್ರತಿಬಿಂಬಿಸುತ್ತದೆ. ಅದನ್ನು ಕೆಳಗಿನಂತೆ ಸಂಗ್ರಹಿಸಬಹುದು.
ಆಂಜನೇಯ, ಅಂಗದ ಮುಂತಾದ ಕಪಿವೀರರೆಲ್ಲ ದಕ್ಷಿಣ ಸಮುದ್ರದ ದಡದಲ್ಲಿ ಕುಳಿತು ೧೦೦ ಯೋಜನ ವಿಸ್ತಾರದ ಸಾಗರವನ್ನು ಲಂಘಿಸಿ ಲಂಕೆಗೆ ಹೋಗುವುದು ಹೇಗೆಂದು ಚಿಂತಿಸುತ್ತ ಕುಳಿತಿರುವಾಗ ಅಂಗದನು ಜಾಂಬವಂತನನ್ನು ಕೇಳುತ್ತಾನೆ. “ತಾತಾ, ಮಹಾವಿಷ್ಣು ವಾಮನನಾಗಿ ಜನಿಸಿ ಬಲಿಚಕ್ರವರ್ತಿಯ ಅಹಂಕಾರವನ್ನು ಅಡಗಿಸಲು ಆತನಿಂದ ೩ ಅಡಿಗಳಷ್ಟು ನೆಲವನ್ನು ಬೇಡಿ, ಅದನ್ನು ಪಡೆದು, ಅಳೆಯಲು ತ್ರಿವಿಕ್ರಮನಾದನು. ಸ್ವರ್ಗ, ಮರ್ತ್ಯ, ಪಾತಾಳಗಳನ್ನು ಆಕ್ರಮಿಸಿದ ಆ ತ್ರಿವಿಕ್ರಮಮೂರ್ತಿಗೆ ನೀನು ಪ್ರದಕ್ಷಿಣೆಗೈದವನು. ಅಂತಹ ನಿನಗೆ ಲಂಕೆಗೆ ಹೋಗಲು ಈ ೧೦೦ ಯೋಜನದ ಸಾಗರ ಯಾವ ಲೆಕ್ಕ!” ಅದಕ್ಕೆ ಜಾಂಬವಂತನು “ನನ್ನ ಪರಾಕ್ರಮ ಅಂತಿಂಥಹುದಲ್ಲ. ನನಗೆ ಸರಿಗಟ್ಟುವ ವೀರನು ಅಷ್ಟು ಸುಲಭವಾಗಿ ಸಿಗುವುದಿಲ್ಲ. ನಿತ್ಯವೂ ಕೈಲಾಸ ಪ್ರದಕ್ಷಿಣೆ ಮಾಡಿ ಶಿವನನ್ನು ದರ್ಶಿಸುತ್ತಿದ್ದೆ. ಆದರೆ ಈಗ ವಯಸ್ಸಾಗಿರುವುದರಿಂದ ನನಗೆ ಅದು ಸಾಧ್ಯವಿಲ್ಲ” – ಎಂದು ಹೇಳುತ್ತಾನೆ. ಅಂಗದನ ಮಾತಿನಲ್ಲಿ ಕಾಣುವ ಧ್ವನಿಯನ್ನು ನಾವು ಬರಹದಲ್ಲಿ ಕಾಣಲು ಸಾಧ್ಯವಿಲ್ಲ. ಅದನ್ನು ಆಸ್ವಾದಿಸಿಯೇ ಅನುಭವಿಸಬೇಕು. ವೈದಿಕ ಆಕರಗಳಲ್ಲಿ ಕಂಡುಬರುವ ವಾಮನಾವತಾರದ ಕಥೆಯನ್ನು ಕೆಳಗೆ ಸಂಗ್ರಹ ಮಾಡಿಕೊಡಲಾಗಿದೆ.
ಅಮೃತದಿಂದ ವಂಚಿತರಾದ ರಾಕ್ಷಸರು ದೇವತೆಗಳ ಮೇಲೆ ಯುದ್ಧಕ್ಕೆ ಹೋಗಲು ದೇವತೆಗಳು ರಾಕ್ಷಸರನ್ನು ಸದೆಬಡಿಯಲಾರಂಭಿಸಿದರು. ಇದನ್ನು ಕಂಡು ಬಲಿಚಕ್ರವರ್ತಿಯು ಕೋಪದಿಂದ ಯುದ್ಧಮಾಡುತ್ತ ದೇವೇಂದ್ರನ ಬಳಿಗೆ ಹೋದನು. ಇಬ್ಬರಿಗೂ ಭೀಕರ ಯುದ್ಧ ಜರುಗಿತು. ಬಲಿಯು ಸೋತುಹೋಗುವ ಸಂದರ್ಭ ಬಂದಾಗ ಮಾಯಾಯುದ್ಧಕ್ಕೆ ತೊಡಗಿದನು. ಇದರಿಂದ ದೇವತೆಗಳ ಸೈನ್ಯವು ಹಿಮ್ಮೆಟ್ಟಲಾರಂಭಿಸಿತು. ಆಗ ದೇವತೆಗಳು ವಿಷ್ಣುವನ್ನು ಸ್ತುತಿಸಿದರು. ಕೂಡಲೇ ಪ್ರತ್ಯಕ್ಷನಾದ ವಿಷ್ಣು ರಾಕ್ಷಸ ಮಾಯೆಯನ್ನು ಭಂಗಗೊಳಿಸಿದನು. ಅನಂತರವೂ ಬಲಿಗೂ ದೇವೇಂದ್ರನಿಗೂ ಯುದ್ಧ ಮುಂದುವರಿಯಿತು. ಬಲಿಯನ್ನು ಕೊಲ್ಲಲು ಇಂದ್ರನು ವಜ್ರಾಯುಧವನ್ನು ಪ್ರಯೋಗಿಸಿದಾಗಲೂ ಬಲಿಗೆ ಅದರಿಂದ ಯಾವುದೇ ರೀತಿಯ ಗಾಯವೂ ಆಗಲಿಲ್ಲ. ಆಗ ಅಶರೀರವಾಣಿಯು ‘ಬಲಿಗೆ ಗಟ್ಟಿವಸ್ತುಗಳು ಮತ್ತು ನೀರಾದ ವಸ್ತುಗಳಿಂದ ಮರಣವಿಲ್ಲ’ ಎಂದು ಹೇಳಲು ಇಂದ್ರನು ಸಮುದ್ರದ ನೊರೆಯಿಂದ ಬಲಿಯನ್ನು ಕೊಂದನು. ಇದನ್ನು ಕಂಡು ದೇವತೆಗಳೂ ರಾಕ್ಷಸರನ್ನು ಕೊಲ್ಲುವುದಕ್ಕೆ ತೊಡಗಿದರು. ಆಗ ನಾರದರು ಬಂದು ಇದನ್ನು ನಿಲ್ಲಿಸುವಂತೆ ತಿಳಿಸಲು ಯುದ್ಧ ನಿಂತಿತು. ನಾರದರ ಮಾತಿನಂತೆ ದೈತ್ಯರು ಬಲಿಯ ಮೃತ ದೇಹವನ್ನು ಹೊತ್ತು ಹಿಂತಿರುಗಿದರು. ಅನಂತರ ರಾಕ್ಷಸರ ಗುರು ಶುಕ್ರಾಚಾರ್ಯರು ಮೃತಸಂಜೀವನೀ ವಿದ್ಯೆಯ ಬಲದಿಂದ ಬಲಿಯನ್ನು ಬದುಕಿಸಿ ವಿಶ್ವಜಿತ್ ಯಾಗವನ್ನು ಮಾಡಿಸಲು ಬಲಿಗೆ ಯಜ್ಞಕುಂಡದಿಂದ ದೇವೇಂದ್ರನ ರಥಾಶ್ವ, ಆಯುಧಗಳಿಗೆ ಸಮನಾದ ರಥಾಶ್ವ, ಆಯುಧಗಳು ಮೂಡಿಬಂದವು. ಅವುಗಳ ಸಹಾಯದಿಂದ ಬಲಿಯು ಸ್ವರ್ಗವನ್ನು ಆಕ್ರಮಿಸಿದನು. ದೇವತೆಗಳು ಹೆದರಿ ಓಡಿಹೋದರು. ಇದನ್ನು ಕಂಡು ದೇವತೆಗಳ ತಾಯಿ ಅದಿತಿಗೆ ಸಂಕಟವಾಯಿತು. ತನ್ನ ಪತಿಯಾದ ಕಶ್ಯಪಬ್ರಹ್ಮನಲ್ಲಿ ದುಃಖವನ್ನು ತೋಡಿಕೊಂಡಾಗ ಆತನು ವ್ರತವೊಂದನ್ನು ಉಪದೇಶಿಸಿದನು. ಅದರಂತೆ ಅದಿತಿಯು ಕೈಕೊಂಡ ವ್ರತಕ್ಕೆ ಪ್ರಸನ್ನಗೊಂಡ ವಿಷ್ಣುವು ಪ್ರತ್ಯಕ್ಷನಾಗಿ ನಾನು ನಿನ್ನ ಮಗನಾಗಿ ಹುಟ್ಟಿ ದೇವತೆಗಳನ್ನು ಕಾಪಾಡುತ್ತೇನೆ ಎಂಬುದಾಗಿ ವರವಿತ್ತು, ಅದಿತಿದೇವಿಯಲ್ಲಿ ವಾಮನನಾಗಿ ಜನಿಸಿ ಬ್ರಹ್ಮತೇಜಸ್ಸಿನಿಂದ ಶೋಭಿಸುತ್ತಿದ್ದನು.
ಬಲಿಯು ಅಶ್ವಮೇಧಯಾಗವನ್ನು ಶುಕ್ರಾಚಾರ್ಯರ ನೇತೃತ್ವದಲ್ಲಿ ಕೈಕೊಂಡನು. ಇದನ್ನು ನೋಡಲು ವಾಮನನು ಹೊರಟನು. ಬಲಿ ಚಕ್ರವರ್ತಿಯ ಯಜ್ಞಸ್ಥಳಕ್ಕೆ ಬಂದಾಗ ಬಲಿಯು ಈತನನ್ನು ನೋಡಿ ಭಕ್ತಿಯಿಂದ ಅರ್ಘ್ಯಪಾದ್ಯಾದಿಗಳನಿತ್ತು ಸತ್ಕರಿಸಿ ‘ನಿಮ್ಮ ಬಯಕೆಯೇನು?’ ಎಂದು ಕೇಳಿದನು. ವಾಮನನು ಮೂರು ಹೆಜ್ಜೆ ಭೂಮಿಯನ್ನು ಬೇಡುತ್ತಾನೆ, ಬಲಿಯು ಅದನ್ನು ನೀಡಲು ಸಿದ್ಧನಾದನು. ಆಗ ಶುಕ್ರಾಚಾರ್ಯರು ಬಲಿಗೆ ‘ವಾಮನನ ಮಾತಿಗೆ ಒಪ್ಪಬೇಡ. ದೇವತೆಗಳನ್ನು ಕಾಪಾಡಿ ನಿನ್ನನ್ನು ಅಧೋಗತಿಗೆ ತುಳಿಯಲು ಮಹಾವಿಷ್ಣು ಈ ರೂಪದಿಂದ ಬಂದಿದ್ದಾನೆ’ ಎಂದು ಹೇಳಿದರೂ ಬಲಿಯು ಕೊಟ್ಟ ಮಾತಿಗೆ ತಪ್ಪಲಾರೆ ಎಂದು ವಾಮನನಿಗೆ ಭೂಮಿಯನ್ನು ದಾನಮಾಡಲು ಮುಂದಾಗುತ್ತಾನೆ. ವಾಮನನು ಕೂಡಲೇ ತ್ರಿವಿಕ್ರಮನಾಗಿ ಸ್ವರ್ಗ, ಮರ್ತ್ಯಗಳನ್ನು ಆಕ್ರಮಿಸಲು ಮೂರನೆಯ ಹೆಜ್ಜೆಗೆ ಸ್ಥಳವಿಲ್ಲದಾಯಿತು. ಆಗ ಬಲಿಯು ತನ್ನ ತಲೆಯನ್ನೇ ತೋರಿದನು. ಆಗ ತ್ರಿವಿಕ್ರಮನು ಆತನನ್ನು ಪಾತಾಳಕ್ಕೆ ತಳ್ಳಿ ದೇವತೆಗಳಿಗೆ ಮತ್ತೆ ಮೊದಲಿನ ಸ್ಥಿತಿ ಹಿಂತಿರುಗುವಂತೆ ಮಾಡಿದನು. ತಾನು ಒಡ್ಡಿದ ಪರೀಕ್ಷೆಗೆ ಬಲಿಯು ಸ್ಪಂದಿಸಿದುದನ್ನು ನೋಡಿ ಅವನಿಗೆ ಅನೇಕ ವರಗಳನ್ನು ನೀಡಿ, ಮುಂದೆ ಬರುವ ಸಾವರ್ಣಿ ಮನ್ವಂತರದಲ್ಲಿ ದೇವೇಂದ್ರನಾಗುವನೆಂದು ಹೇಳಿ ತಾನು ಮರಳಿದನು.
ಇಂತಹ ವಾಮನಾವತಾರವನ್ನು ಕನ್ನಡ ಕವಿಗಳು ಯಾವ ರೀತಿ ವರ್ಣಿಸಿದ್ದಾರೆಂಬುದನ್ನು ಪ್ರಕೃತ ಬರಹದಲ್ಲಿ ಸಂಕ್ಷಿಪ್ತವಾಗಿ ಸಮೀಕ್ಷಿಸಲಾಗಿದೆ. ಮೊದಲು ಕನ್ನಡ ಸಾಹಿತ್ಯದ ವೈದಿಕ ಕೃತಿಗಳಲ್ಲಿ ಕಂಡುಬರುವ ಕೆಲವು ಉಲ್ಲೇಖಗಳನ್ನು ದಾಖಲಿಸಿ ಅನಂತರ ಅವುಗಳ ಬಗೆಗೆ ವಿಶ್ಲೇಷಿಸಲಾಗಿದೆ.
ಜಲದಾಧ್ವಂಬರಮೆತ್ತಿದಂಘ್ರಿಯ ನಖಾಂಶುಶ್ರೇಣಿ ತಾರಾಗಣ
ಚ್ಛಲದಿಂದಿರ್ಪಿನಮಿನ್ನುಮಂದವನಿಚಕ್ರಂ ವಿಕ್ರಮಕ್ಕೆಯ್ದದಾ
ಬಲಿಯಂ ದೈತ್ಯಕದಂಬಕೈಕಬಲಿಯಂ ಯತ್ನೀಕೃತಶ್ಮಶ್ರುಭೃ
ದ್ಬಲಿಯಂ ಮೆಟ್ಟಿ ರಸಾತಳಕ್ಕಿೞಿಪಿದೈ ನೀಂ ವಾಮನಾಕಾರದಿಂ
– ರುದ್ರಭಟ್ಟನ ಜಗನ್ನಾಥ ವಿಜಯ ೧-೫೯
ತ್ರೇತೆಯಲಿ ಬಲಿರಾಜ್ಯ ಭುವನ
ಖ್ಯಾತವಾಯ್ತು ತದಶ್ವಮೇಧದೊ
ಳೀತ ವಾಮನನಾಗಿ ಯಾಚಿಸಿದನು ಪದತ್ರಯವ
ಭೂತಳವನಲ್ಲಿಂದ ಬಳಿಕ
ಪ್ರೀತಿಯಲಿ ಕಮಲಜ ಕಟಾಹೋ
ದ್ಭೂತ ಚರಣದೊಳಳೆಯಲಾದುದು ಧರಣಿ ಪದಯುಗಕೆ
– ಕುಮಾರವ್ಯಾಸ ಭಾರತ, ಸಭಾಪರ್ವ ೯-೪೬
ಕಾಯಿದೈ ಕರುಣದಲಿ ದಿವಿಜರ
ತಾಯ ಪರಿಭವವನು ಪಯೋಧಿಯ
ಹಾಯಿದಮರಾರಿಗಳ ಖಂಡಿಸಿ ತಲೆಯ ಚೆಂಡಾಡಿ
ಕಾಯಿದೈ ಜಾನಕಿಯನೆನ್ನನು
ಕಾಯಬೇಹುದು ಹೆಣ್ಣ ಹರಿಬಕೆ
ನೋಯಬಲ್ಲರೆ ಕೆಲಬರೆಂದೊರಲಿದಳು ತರಳಾಕ್ಷಿ
– ಕುಮಾರವ್ಯಾಸ ಭಾರತ, ಸಭಾಪರ್ವ ೧೪-೧೧೪
ಬೇಡಿದೊಂದೊಂದೂರು ನಮ್ಮಯ
ನಾಡ ತಲೆಮಂಡೆಗಳು ರಾಜ್ಯದ
ರೂಡಿs ಐದೂರುಗಳ ಬಳವಿಗೆ ಹಸ್ತಿನಾನಗರ
ಬೇಡಲರಿವನು ಮಾನ ನಿನಗುಂ
ಟಾಡಲೇತಕೆ ನೆಲನ ನೀರಡಿ
ಮಡಿಕೊಂಡ ಮಹಾತ್ಮ ನಿನಗಾನಂಜಿದಪೆನೆಂದ
– ಕುಮಾರವ್ಯಾಸ ಭಾರತ, ಉದ್ಯೋಗಪರ್ವ ೯-೨೯
ನೆಲನನಳೆವಂದೀ ಮಹಾದಿಗು
ವಳಯವೀ ಕುಲಪರ್ವತಗಳೀ
ಜಲನಿಧಿಗಳೀ ಗಗನವೀ ಬ್ರಹ್ಮಾಂಡ ಪವಣಿಸಿದ
ವಿಲಸಿತದ ವಿಭುವಿಂಗೆ ದಟ್ಟಡಿ
ಬಳುಕನಡೆ ಮೆಲ್ನಡೆಗಳೆಂಬಿವು
ತಿಳಿದವರ ಮನಸಿಂಗೆ ಮಱೆ ತಾನಲ್ಲವೇಯೆಂದ
– ಕುಮಾರವಾಲ್ಮೀಕಿಯ ತೊರವೆ ರಾಮಾಯಣ, ಬಾಲಕಾಂಡ, ಸಂಧಿ-೮, ಪದ್ಯ ೭೬
ಬಲಿಚಕ್ರವರ್ತಿ ರಾಜ್ಯವನಾಳುವಂದು ಕರ
ದೊಳು ಕೊಡೆವಿಡಿದು ಕುಬ್ಜ ವಿಪ್ರಾವತಾರದಿಂ
ನೆಲನ ಮೂರಡಿಯ ದಾನವ ಬೇಡಿ ಭೂವ್ಯೋಮಮೀರ
ಡಿಯೊಳೈಕ್ಯಮಾಗೆ
ಉಳಿದೊಂದಡಿಗೆಯತಳಕಿಳುಹಿಯಾ ನೃಪನ ವೆ
ಗ್ಗಳ ಕಾರ್ತಿವೀರ್ಯರುಂ ಮೂವೇಳು ಸೂಳಿನೊಳ್
ಸಲೆ ಸವರಿ ಭೂಸುರರ್ಗಖಿಳ ಭೂತಳವನಿತ್ತನು
ಪರಶುರಾಮನಾಗಿ
– ಲಕ್ಷ್ಮಿಕವಿಯ ರುಕ್ಮಾಂಗದ ಚರಿತ್ರ, ೬-೨೧
ಅದು ಕಾರಣ ಗಮ್ಯಾವೆಸರಿಂದಲಂದು
ನಿಮ್ಮುದರದೊಳಾನುದಿಸಿದೆನು
ಅದಿತಿ ಕಾಶ್ಯಪರಾಗಿ ಮರಳಿ ಜನಿಸಿ ನಿಮ
ಗುದಿಸಿದೆ ವಾಮನನಾಗಿ
ಬೇಡಿ ದಾನವನಲಿ ಪೊಡವಿಯ ನೀರಡಿ
ಮಾಡಿ ಬಲಿಯ ಬಲು ಚಲವ
ನಾಡೆ ಕೆಡಿಸಿ ದೇವಸಂದೋಹದಿಂದ ಕೊಂ
ಡಾಡಿಸಿಕೊಂಡೆ ನಾನೆಂದ
– ತಿಮ್ಮ ಕವಿಯ ಹರಿವಿಲಾಸ ೪-೭, ೮
ನೆಲನಳೆದು ಪುಟ್ಟ ಬೆರಳು ನೊಂದಳುತಾನೆ ಬಾರೆ ಗೋಪಮ್ಮ
– ಪುರಂದರದಾಸರ ದಶಾವತಾರ ಸ್ತುತಿಯ ಕೀರ್ತನೆ
ಸುರಪಗೊಲಿದು ಬಲಿಯ ಶಿರ ತುಳಿಯುವಾಗ
ಸುರನದಿ ಸೃಜಿಸಿದ ಹರಿಪಾದವ
– ಪುರಂದರದಾಸರ ಹೊಯ್ಯೆಲೊ ಡಂಗುರವ ಕೀರ್ತನೆ, ಪುರಂದರದಾಸರ ಸಾಹಿತ್ಯ ದರ್ಶನ, ಸಂಪುಟ-೨, {ಸಂ} ಸಾ.ಕೃ. ರಾಮಚಂದ್ರರಾವ್, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೧೯೮೫, ಪುಟ ೨೩೧
ಗರುಡ ಶೇಷಾದಿಗಳು ಪೊತ್ತುಕೊಂಡಿಹ ಪಾದ
ಧರೆಯ ಈರಡಿ ಮಾಡಿ ಅಳೆದ ಪಾದ
– ಕನಕದಾಸರ ಭಜಿಸಿ ಬದುಕೆಲೊ ಮನಮುಟ್ಟಿ ಶ್ರೀಹರಿಯ ಕೀರ್ತನೆ, ಕನಕದಾಸರ ಹಾಡುಗಳು (ಸಂ) ಕೃಷ್ಣಶರ್ಮಾ ಬೆಟಗೇರಿ, ಹುಚ್ಚರಾವ್ ಬೆಂಗೇರಿ, ಸಮಾಜ ಪುಸ್ತಕಾಲಯ, ಧಾರವಾಡ, ೨೦೦೯, ಪುಟ ೭೬
ಆ ಮಹಾಸಿರಿಯ ಗರ್ವದಿ ಮುಂದರಿಯದೆ
ಭೂಮಿಯನು ಬಲಿ ತಾನಾಳುತಿರೆ
ನೇಮಿಸಿ ಎರಡೇ ಹೆಜ್ಜೆಯೊಳಳಕೊಂಡ
ವಾಮನ ರೂಪಿನ ಮಾಸಾಳಮ್ಮ
– ಕನಕದಾಸರ ತಾಳಲ್ಲಲ್ಲಲ್ಲಲ್ಯೊ ಮಾಸಾಳಲ್ಲಲ್ಲಲ್ಲಲ್ಯೊ ಕೀರ್ತನೆ, ಕನಕದಾಸರ ಜನಪ್ರಿಯ ಕೀರ್ತನೆಗಳು (ಸಂ) ಹೊ.ರಾ. ಸತ್ಯನಾರಾಯಣರಾವ್, ಅಂಕಿತ ಪುಸ್ತಕ, ಬೆಂಗಳೂರು, ೨೦೦೮, ಪುಟ ೧೦೭
ಬಾಲನಿಗೊಲಿದವನ ಭಕ್ತರ ನಿಧಿಯಾದ ನರಸಿಂಹನ
ಧರೆಯ ನೀರಡಿ ಅಳೆದ ವಾಮನ
– ವ್ಯಾಸರಾಯರ ಕರೆತಾರೆಲೆ ರಂಗನ ಶ್ರೀಹರಿಯ ನೀ ಕೀರ್ತನೆ, ಶ್ರೀವ್ಯಾಸರಾಯರ ಕೃತಿಗಳು, (ಸಂ) ಟಿ.ಎನ್. ನಾಗರತ್ನ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, ೨೦೦೧, ಪುಟ ೩೨ (ಜನಪ್ರಿಯ ಆವೃತ್ತಿ)
ಮೂರುಪಾದವ ಬೇಡುತ ನಿಂದು
– ವ್ಯಾಸರಾಯರ ತೋರೆ ಬೇಗನೆ ತೋಯಜನಯನೆ ಮದವಾರಣಗಮನೆ ಕೀರ್ತನೆ, ಶ್ರೀವ್ಯಾಸರಾಯರ ಕೃತಿಗಳು, (ಸಂ) ಟಿ.ಎನ್. ನಾಗರತ್ನ , ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು-೨೦೦೧, ಪುಟ ೫೬ (ಜನಪ್ರಿಯ ಆವೃತ್ತಿ)
ಜಗವ ನೆಗಹುವೆನೆಂದ [ಬಗಿ]ದು ಕಂಬದಿ ಬಂದ
ಮಗುವಿನಂದದಿ ನಿಂದ
– ವ್ಯಾಸರಾಯರ ರಂಗ ಬಾರ ಬಾಲೆ ಕುರಂಗನಯನೆ ಕೇಳೆ, ಶ್ರೀವ್ಯಾಸರಾಯರ ಕೃತಿಗಳು, (ಸಂ) ಟಿ.ಎನ್. ನಾಗರತ್ನ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, ೨೦೦೧, ಪುಟ ೯೯ (ಜನಪ್ರಿಯ ಆವೃತ್ತಿ)
ಮತ್ಸ್ಯ ಕೂರ್ಮನಾಗಿ ಮತ್ತೆ ಮಹಿಯನೆತ್ತಿ
ಕೀರ್ತಿಯ ಪಡೆದ ಕಿಂಕರನ
ಮೃತ್ಯುವ ಬಿಡಿಸಿದ ಮತ್ತೆ ಬಲಿಯ ಕಿತ್ತು
ಕ್ಷತ್ರಿಯರುಕ್ಕು ತಗ್ಗಿಸಿದ
– ಶ್ರೀವಾದಿರಾಜರ ದೀರ್ಘ ಕೃತಿಗಳು,(ಸಂ) ಟಿ.ಎನ್. ನಾಗರತ್ನ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, ೧೯೮೭, ಪುಟ ೬೬ (ಜನಪ್ರಿಯ ಆವೃತ್ತಿ)
ಮೂರಡಿಯ ಭೂದಾನ ಬೇಡಿದವಗೆ
ಸಾರಿದಭೀಷ್ಟಗಳ ಪೊರೈಪ ಮದವೊ
– ಶ್ರೀ ಗೋಪಾಲದಾಸರ ಕೃತಿಗಳು (ಸಂ) ಟಿ.ಎನ್. ನಾಗರತ್ನ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು-೧೯೮೭, ಪುಟ ೧೦೫ (ಜನಪ್ರಿಯ ಆವೃತ್ತಿ)
ಬಡಬ್ರಾಹ್ಮಣನಾಗಿ ತಿರಿದ
– ಹೆಳವನಕಟ್ಟೆ ಗಿರಿಯಮ್ಮನ ಹಾಡುಗಳು, (ಸಂ) ಟಿ.ಕೆ. ಇಂದೂಬಾಯಿ, ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು, ೧೯೮೭, ಪುಟ ೩ (ಪಂಡಿತ ಆವೃತ್ತಿ)
ನಾರುವ ಮೈಯವ ನೀರೊಳು ಅಡಗಿದ
ಹಂದಿ ಮೈಯವನೆ ಬಲುಕೋಪಿ
ತಿರಿದುಂಬೊ ಹಾರುವನ ಗೊಡವೆ ನಮಗ್ಯಾಕೊ
– ಗಲಗಲಿ ಅವ್ವನವರ ಕೀರ್ತನೆ, ಉದ್ಧೃತಿ: ಗಲಗಲಿ ಅವ್ವ – ಎಂ. ಆರ್. ಲಕ್ಷ್ಮಿದೇವಿ, ಪ್ರಕಟನೆ: ಲೇಖಕರು, ಬೆಂಗಳೂರು, ೨೦೧೧, ಪುಟ ೬೨
ಶರಣು ಕೇಶವ ಶರಣು ಮಾಧವ | ಶರಣು ದೇವರ ದೇವನೆ |
ಶರಣು ಬಲಿಬಂಧನ ಮುಕುಂದ£ | ಶರಣು ದುರಿತ ವಿಭಂಜನ ||
ನೆಲನನಳೆದನೆ ನಾಗಫಣದಲಿ | ನಲಿದು ನರ್ತಿಸಿದಾತನೆ |
ಸಲಹಿ ಜಗವನು ನಿಜವನಿತ್ತನೆ | ಜಲಜಸಂಭವನಯ್ಯನೆ || ೨ ||
– ತಿಮ್ಮಪ್ಪದಾಸರ ಶ್ರೀಕೃಷ್ಣ ಬಾಲಲೀಲೆ, (ಸಂ) ಎಂ. ವಿ. ಸೀತಾರಾಮಯ್ಯ, ಬಿ. ಎಂ. ಶ್ರೀ. ಸ್ಮಾರಕ ಪ್ರತಿಷ್ಠಾನ, ಬೆಂಗಳೂರು, ೧೯೮೬, ಪುಟ ೨-೩, ಕೀರ್ತನೆ-೨
ಈ ಮೇಲಿನ ವೈದಿಕ ಉದ್ಧೃತಿಗಳಲ್ಲಿ ಎಲ್ಲವೂ ದಶಾವತಾರಗಳ ವರ್ಣನೆ, ಸ್ತುತಿ ಇವುಗಳನ್ನು ಮಾಡುವ ಸಂದರ್ಭದಲ್ಲಿ ರಚನೆಯಾದವುಗಳಾಗಿವೆ. ಸ್ವತಂತ್ರವಾಗಿ ವಾಮನಾವತಾರದ ಬಗೆಗೆ ರಚಿತವಾದ ಕೃತಿಗಳು ಇಲ್ಲವೇ ಹಾಡುಗಳು ನಮ್ಮ ಗಮನಕ್ಕೆ ಬಂದಂತೆ ಕನ್ನಡ ಸಾಹಿತ್ಯದಲ್ಲಿ ದೊರೆತಿರುವಂತೆ ಕಾಣುವುದಿಲ್ಲ. ಆದರೂ ಮೇಲಿನ ವರ್ಣನೆಗಳಲ್ಲಿ ಭಾಷೆ ಮತ್ತು ಸಂಗ್ರಹಗುಣದ ಕಾರಣ ನಾವೀನ್ಯ ಉಂಟು. ಕುಮಾರವ್ಯಾಸ (ಕ್ರಿ.ಶ. ಸು ೧೩೫೦) ‘ಕಾಯಿದೈ ಕರುಣದಲಿ ದಿವಿಜರ ತಾಯ ಪರಿಭವವನು’ ಎಂದು ಸೂಚಿಸಿರುವುದು ವಾಮನಾವತಾರದ ಕಥಾಂಶವನ್ನೇ. ರುದ್ರಭಟ್ಟನ (ಕ್ರಿ.ಶ. ಸು ೧೧೮೫) ಜಗನ್ನಾಥ ವಿಜಯದಲ್ಲಿಯೂ ಇದೇ ಸಂಗ್ರಹಗುಣವೇ ಪ್ರಧಾನವಾಗಿದೆ. ಕುಮಾರವಾಲ್ಮೀಕಿಯ (ಕ್ರಿ.ಶ. ಸು ೧೪೦೦) ವರ್ಣನೆಯಲ್ಲಿ ವಾಮನನು ತ್ರಿವಿಕ್ರಮನಾಗಿ ಬೆಳೆದಾಗ ಆತನು ಯಾವ ರೀತಿ ಬ್ರಹ್ಮಾಂಡವನ್ನು ಆಕ್ರಮಿಸಿದ ಎಂದು ಸೂಚಿಸಿ ಇಂತಹವನು ಈಗ ಮಗುವಾಗಿ ಮೆಲ್ಲಗೆ ನಡೆಯುತ್ತಿದ್ದಾನೆ ಎಂಬುದಾಗಿ ರಾಮನ ಜನನದ ಸಂದರ್ಭವನ್ನು ಹೇಳುತ್ತಾನೆ. ಈ ಕೃತಿಗಳಲ್ಲಿನ ವರ್ಣನೆಗಳಲ್ಲದೆ ಮಲ್ಲರಸನ ದಶಾವತಾರ ಚರಿತ್ರೆ (ಕ್ರಿ.ಶ. ಸು ೧೬೮೦) ಇನ್ನೂ ಮುಂತಾದ ಕೃತಿಗಳಲ್ಲಿ ದಶಾವತಾರದ ಸ್ತುತಿ ಮತ್ತು ವರ್ಣನೆಗಳ ಸಂದರ್ಭದಲ್ಲಿ ವಾಮನಾವತಾರದ ವಿವರಗಳುಂಟು. ಚಾಟುವಿಟ್ಠಲನಾಥನ (ಕ್ರಿ.ಶ. ಸು ೧೪೪೦) ಭಾಗವತದಲ್ಲಿ ವಾಮನಾವತಾರದ ಕಥೆ ಅಷ್ಟಮ ಸ್ಕಂಧದಲ್ಲಿ ೯ ಸಂಧಿಗಳಲ್ಲಿ ವರ್ಣಿತವಾಗಿದೆ. ಈ ೯ ಸಂಧಿಗಳ ಒಟ್ಟು ಪದ್ಯಸಂಖ್ಯೆ ಈಚಿನ ಪರಿಷ್ಕರಣದ ಪ್ರಕಾರ ೪೨೪. ಇದರ ಅನುವಾದದಲ್ಲಿ ಚಾಟುವಿಟ್ಠಲನಾಥನು ಮೂಲ ಭಾಗವತವನ್ನೇ ಅನುಸರಿಸುತ್ತಾ ನಾದರೂ ವರ್ಣನೆಗಳಲ್ಲಿ ಹೊಸತನವುಂಟು. ಬಲಿಯು ದಾನವನ್ನು ನೀಡಿದಾಗ ವಾಮನನು ತ್ರಿವಿಕ್ರಮನಾಗಿ ಸ್ವರ್ಗ, ಮರ್ತ್ಯ, ಪಾತಾಳಗಳನ್ನು ಆಕ್ರಮಿಸಹೊರಟಾಗ ರಾಕ್ಷಸರು ಇದನ್ನು ಕಂಡು ತ್ರಿವಿಕ್ರಮನ ಮೇಲೆ ಯುದ್ಧಕ್ಕೆ ಇಳಿದಾಗ ತ್ರಿವಿಕ್ರಮನು ಇವರನ್ನು ಸಂಹರಿಸಿದನೆಂಬ ಕಥೆ ಕೆಲವು ಆಕರಗಳಲ್ಲಿ ಇರುವಂತಿಲ್ಲ. ಮೂಲ ಸಂಸ್ಕೃತ ಭಾಗವತಕ್ಕಿಂತ ಇಲ್ಲಿನ ಕಥಾಮಾರ್ಗ ಬೇರೆ ಆಗುವುದಿಲ್ಲ. ಕೆಲವು ವಿವರಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸ ಕಂಡುಬಂದರೂ ಕಥೆ ಮೂಲ ಭಾಗವತವನ್ನೇ ಅನುಸರಿಸುತ್ತದೆ. ಭಾಷೆ ಮತ್ತು ಇತರ ಅಂಶಗಳಲ್ಲಿ ಕುಮಾರವ್ಯಾಸ, ಕುಮಾರವಾಲ್ಮೀಕಿಗಳ ಪ್ರಭಾವವೂ ಉಂಟು. ಕನ್ನಡದಲ್ಲಿ ಇಷ್ಟು ದೀರ್ಘವಾಗಿ ವಾಮನಾವತಾರವನ್ನು ಕುರಿತು ರಚಿತವಾದ ಕಾವ್ಯಭಾಗ ಇದೇ ಆಗಿದೆ ಎಂದು ತೋರುತ್ತದೆ. ಉದಾಹರಣೆಗೆ ಕೆಲವೊಂದು ಪದ್ಯಗಳನ್ನು ನೋಡಬಹುದು.
ಅರಸ ಕೇಳವನಿಯಲಿ ದಕ್ಷಿಣ
ಚರಣ ಕಮಲವ ನೀಡಿದರೆ ಪು
ಷ್ಕರದೊಳಗೆ ನೀಡಿತ್ತು ಮಹಿಮಾನಿಧಿಯ ನಖಬಿಂಬ
ಅರರೆ ಲೋಕಾಲೋಕ ಗಿರಿವರ
ಜರಿದುದಗ್ರಾಂಗುಲಿಯ ಸೋಂಕಿನ
ಲುರವಣಿಸಿ ಮೀರಿತ್ತು ಹೊರಗಣ ಕಾಂಚನದ ಧರೆಗೆ ||
೮-೧೭-೫ ||
ಆ ಪರಮಪೂರುಷನ ವಿಮಳ
ಶ್ರೀಪದಾಬ್ಜವ ಕಂಡು ಸಕಲ
ದ್ವೀಪಜನಗಳು ಶಿವಶಿವೆಂದು ಕೃತಾರ್ಥರಾವೆನುತ
ಧೂಪ ದೀಪ ಸುಗಂಧಪುಷ್ಪ ಫ
ಲೋಪಹೃತಿಗಳನಿತ್ತು ಚಿತ್ತದ
ತಾಪ ಬಿಡೆ ಹೊರಳಿದರು ಹರಿಚರಣಾರವಿಂದದಲಿ ||
೮-೧೭-೬ ||
ಮೊದಲ ಕಂಡವರಿಲ್ಲ ಚರಣದ
ತುದಿಯ ಕಂಡವರಿಲ್ಲ ಕಂಗಳಿ
ಗೊದವಿದನಿತನೆ ಕಂಡುದಲ್ಲದೆ ಹಿಂದುಮುಂದಿಲ್ಲ
ಮುದದ ಹರಹಿನಲಖಿಳಜನಪದ
ಪದಜನಿತ ಹೂವಲಿಯ ಭೇರೀ
ವಿದಿತವಾದ್ಯದ ಸಂಭ್ರಮದಲೋಲೈಸಿದುದು ಪದವ ||
೮-೧೭-೭ ||
ಸೇತುವೋ ಭವಜಲಧಿ ಪತಿತರ
ನಾ ತಡಿಯನೈದಿಸಲು ನೆರೆದ ಮ
ಹೀತಳಾಯತ ಮಾನದಂಡವೊ ಪುಂಡರೀಕಭವ
ಭೂತಸೃಷ್ಟಿಯನಳೆದ ಹಿಂದಣ
ಕೌತುಕವನೇವೇಳ್ವೆ ಪರಮಾ
ತೀತನಂಘ್ರಿಸರೋಜವೆಸೆದುದು ಧರೆಗೆ ಮಿಗಿಲೆನಿಸಿ||
೮-೧೭-೮ ||
ಲಕ್ಷ್ಮಿ ಕವಿಯ (ಕ್ರಿ.ಶ. ಸು ೧೭೨೪) ‘ರುಕ್ಮಾಂಗದ ಚರಿತ್ರೆ’, ತಿಮ್ಮ ಕವಿಯ (ಕ್ರಿ.ಶ. ಸು ೧೭೭೦) ‘ಹರಿವಿಲಾಸ’ ಕೃತಿಗಳಲ್ಲಿ ಕಥಾಂಶ ಸಂಗ್ರಹವಾಗಿ ಸೂಚಿತವಾಗಿದೆ. ಭಾಷೆಯ ಬಳಕೆಯಲ್ಲಿ ಲಾಲಿತ್ಯವುಂಟು. ಇನ್ನು ಪುರಂದರದಾಸ (ಕ್ರಿ.ಶ. ಸು ೧೫೩೦), ಕನಕದಾಸ (ಕ್ರಿ.ಶ. ಸು ೧೫೩೦), ಗೋಪಾಲದಾಸ (ಕ್ರಿ.ಶ.ಸು ೧೭೪೦), ವ್ಯಾಸರಾಯರು (ಕ್ರಿ.ಶ. ಸು ೧೫೩೦), ಹೆಳವನಕಟ್ಟೆ ಗಿರಿಯಮ್ಮ (ಕ್ರಿ.ಶ. ಸು ೧೭೫೦), ಗಲಗಲಿ ಅವ್ವ (ಕ್ರಿ.ಶ. ಸು ೧೭೦೦) ಮುಂತಾದವರ ಕೀರ್ತನೆಗಳಲ್ಲಿಯೂ ಒಂದೊಂದು ಸಾಲಿನ ಉಲ್ಲೇಖಗಳಿವೆಯೇ ಹೊರತು ಹೆಚ್ಚಿನ ವರ್ಣನೆಯೇನೂ ಕಂಡುಬರುವುದಿಲ್ಲ. ಶೈಲಿಯಲ್ಲಿ ಒಂದು ಬಗೆಯ ಶಿಥಿಲತೆ ಕಂಡುಬರುತ್ತದೆ. ಇದಕ್ಕೆ ಕಾರಣ ಇವು ಭಜನೆಯ ಪದ್ಧತಿಗೆ ಹೊಂದಿಕೊಳ್ಳುವಂತೆ ರಚನೆಯಾದ ಕೃತಿಗಳಾಗಿವೆ. ತಿಮ್ಮಪ್ಪದಾಸರ (ಕ್ರಿ.ಶ. ಸು ೧೮೦೦) ಶ್ರೀಕೃಷ್ಣ ಬಾಲಲೀಲೆಯ ಕೀರ್ತನೆಯಲ್ಲಿ ಬಲಿಬಂಧನ, ನೆಲನನಳೆದನ ಎಂಬ ಪದಗಳು ವಾಮನಾವತಾರವನ್ನು ಸೂಚಿಸುತ್ತವೆ. ಎಷ್ಟೋ ಕಡೆಗಳಲ್ಲಿ ತ್ರಿವಿಕ್ರಮ ಎಂಬ ಪದವೂ ವಾಮನಾವತಾರವನ್ನೇ ಕುರಿತದ್ದಾಗಿದೆ.
ಕನ್ನಡದಲ್ಲಿ ವೈದಿಕ ಸಾಹಿತ್ಯದ ಉಲ್ಲೇಖಗಳು ದಶಾವತಾರಗಳ ವರ್ಣನೆ, ಸ್ತುತಿ ಇವುಗಳನ್ನು ಮಾಡುವ ಸಂದರ್ಭದಲ್ಲಿ ರಚನೆಯಾದವುಗಳಾಗಿವೆ. ಇವುಗಳಲ್ಲದೆ ಜೈನ ಸಾಹಿತ್ಯದಲ್ಲೂ ಬಲಿ-ವಾಮನೋಪಾಖ್ಯಾನವು ಕಂಡುಬರುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಈ ಕಥನವು ಜೈನ ಸಾಹಿತ್ಯದಲ್ಲಿ ಹರಿವಂಶ ಪುರಾಣ, ನೇಮಿನಾಥ ತೀರ್ಥಕರನ ಪುರಾಣಗಳಲ್ಲಿ ಕಂಡುಬರುತ್ತಿದ್ದು ವಿಸ್ತಾರವಾಗಿಯೇ ರಚಿತವಾಗಿದೆ. ಹರಿವಂಶದ ಕಥಾವಸ್ತು ಪ್ರಧಾನವಾಗಿ ೨೨ನೆಯ ತೀರ್ಥಕರನಾದ ನೇಮಿನಾಥನ ಚರಿತ್ರೆಯನ್ನು ಕುರಿತದ್ದು. ಇದರಲ್ಲಿ ಜೈನ ಸಂಪ್ರದಾಯದ ಹರಿವಂಶ, ಕುರುವಂಶದವರ ಕಥೆಗಳು, ನೇಮಿನಾಥನ ಚರಿತ್ರ, ಭಾರತ-ಭಾಗವತ, ಇತರ ಉಪಕಥೆಗಳು ಎಲ್ಲವೂ ಸೇರಿ ಹಲವಾರು ಸಂಪ್ರದಾಯಗಳ ಮಹತ್ತ್ವದ ಗಣಿಯಾಗಿದೆ.
ಕನ್ನಡ ಸಾಹಿತ್ಯದಲ್ಲಿ ಈಗ ಲಭ್ಯವಿರುವಂತೆ ಮೊದಲು ಈ ಬಲಿ-ವಾಮನೋಪಾಖ್ಯಾನವು ದೊರಕುವುದು ಚಾವುಂಡರಾಯನ ‘ತ್ರಿಷಷ್ಟಿ ಲಕ್ಷಣ ಮಹಾಪುರಾಣ’ ಅಥವಾ ‘ಚಾವುಂಡರಾಯ ಪುರಾಣ’ವೆಂಬ ಗದ್ಯ ಗ್ರಂಥದಲ್ಲಿ (ಕ್ರಿ.ಶ. ೯೭೮). ಇದರ ಅನಂತರ ಕರ್ಣಪರ್ಯನ (ಕ್ರಿ.ಶ. ಸು ೧೧೭೦) ‘ನೇಮಿನಾಥ ಪುರಾಣ’ವೆಂಬ ಚಂಪೂ ಕಾವ್ಯದಲ್ಲ್ಲಿ {ಆಶ್ವಾಸ-೫}. ಇವೆರಡರ ಅನಂತರ ನೇಮಿಚಂದ್ರನ (ಕ್ರಿ.ಶ. ಸು ೧೨೦೦) ‘ನೇಮಿನಾಥ ಪುರಾಣ’ ಅಥವಾ ‘ಅರ್ಧನೇಮಿ ಪುರಾಣ’ವೆಂಬ ಚಂಪೂ ಕೃತಿಯಲ್ಲಿ ಕಂಡುಬರುತ್ತದೆ. ಚಾವುಂಡರಾಯ ಪುರಾಣವನ್ನು ಹೊರತುಪಡಿಸಿ ಮಿಕ್ಕೆಲ್ಲವಕ್ಕೂ ಬಲುಮಟ್ಟಿಗೆ ಮೂಲವೆಂದು ಹೇಳಬಹುದಾದ್ದು ಪುನ್ನಾಟ ಸಂಘೀಯ ಜಿನಸೇನಾಚರ್ಯರು ಸಂಸ್ಕೃತದಲ್ಲಿ ರಚಿಸಿರುವ ಹರಿವಂಶ ಪುರಾಣ (ಕ್ರಿ.ಶ. ೭೮೩). ಕನ್ನಡ ಕವಿಗಳು ಗುಣಭದ್ರಾಚರ್ಯರ (ಕ್ರಿ.ಶ. ಸು ೮೫೦) ಉತ್ತರಪುರಾಣದಲ್ಲಿನ ನೇಮಿನಾಥ ತೀರ್ಥಕರ ಕಥಾನಕವನ್ನು ಕೂಡ ಆಕರವಾಗಿ ಬಳಸಿಕೊಂಡಿದ್ದಾರೆ. ಈ ಹರಿವಂಶ ಪುರಾಣದಲ್ಲಿನ ಕಥೆಯನ್ನು ಮತ್ತು ಉತ್ತರಪುರಾಣದಲ್ಲಿನ ಕಥೆಯನ್ನು ಸಂಗ್ರಹವಾಗಿ ಕೆಳಗೆ ನೀಡಲಾಗಿದೆ. ಉತ್ತರಪುರಾಣದಲ್ಲಿ ಈ ಕಥೆ ‘ವಿಷ್ಣುಕುಮಾರಮಾಹಾತ್ಯ ವರ್ಣನಂ’ ಎಂಬ ಹೆಸರಿನಲ್ಲಿ ಕಂಡುಬರುತ್ತದೆ.
ಪುನ್ನಾಟ ಸಂಘೀಯ ಜಿನಸೇನಾಚರ್ಯರ ಹರಿವಂಶಪುರಾಣ
ಉಜ್ಜಯಿನಿಯಲ್ಲಿ ಶ್ರೀಧರ್ಮಾ ಎಂಬ ಅರಸನಿದ್ದನು. ಇವನ ಹಿರಿಯ ರಾಣಿ ಶ್ರೀಮತಿ. ಈತನ ಬಳಿ ಮಂತ್ರವಿಶಾರದರಾದ ಬಲಿ, ಬೃಹಸ್ಪತಿ, ನಮುಚಿ, ಪ್ರಹ್ಲಾದ ಎಂಬ ಹೆಸರಿನ ನಾಲ್ವರು ಮಂತ್ರಿಗಳಿದ್ದರು. ಒಂದಾನೊಂದು ಸಮಯದಲ್ಲಿ ಅಕಂಪನರೆಂಬ ಮಹಾಮುನಿಗಳು ೭೦೦ ಜನ ಮುನಿಗಳ ಸಮೂಹದೊಡನೆ ಬಂದು ಉಜ್ಜಯಿನಿಯ ಹೊರಗಿನ ಉದ್ಯಾನದಲ್ಲಿರುತ್ತಿದ್ದರು. ಜನರು ಇವರ ದರ್ಶನಕ್ಕೆ ತಂಡೋಪತಂಡವಾಗಿ ಹುಚ್ಚೆದ್ದ ಸಾಗರದಂತೆ ಬರುತ್ತಿರುವುದನ್ನು ಶ್ರೀಧರ್ಮನು ಅರಮನೆಯ ಪ್ರಾಸಾದದಿಂದ ನೋಡಿ ಮಂತ್ರಿಗಳನ್ನು ಈ ಜನರ ಅಕಾಲಯಾತ್ರೆ ಎಲ್ಲಿಗೆ ನಡಯುತ್ತಿದೆ ಎಂದು ಕೇಳಿದನು. ಅದಕ್ಕೆ ಬಲಿಯು ಈ ಅಜ್ಞಾನಿ ಜನರು ಶ್ರಮಣರನ್ನು ನೋಡಲು ಹೋಗುತ್ತಿದ್ದಾರೆ ಎನ್ನಲು, ರಾಜನೂ ತಾನೂ ಹೋಗಬೇಕೆಂದನು. ಮಂತ್ರಿಗಳು ಎಷ್ಟು ತಡೆದರೂ ರಾಜನು ಕೇಳದ ಕಾರಣ ಅವರೂ ಜೊತೆಯಲ್ಲಿ ಹೋಗಬೇಕಾಯಿತು.
ಮುನಿಗಳನ್ನು ನೋಡುತ್ತಲೆ ಮಂತ್ರಿಗಳು ಅವರೊಂದಿಗೆ ವಿವಾದಕ್ಕೆ ಇಳಿದರು. ಆದರೆ ಗುರುಗಳ ಆದೇಶದ ಕಾರಣ ಮುನಿವೃಂದ ಮೌನವಾಗಿ ಇದ್ದುದರಿಂದ ಮಂತ್ರಿಗಳು ಬೇರೆ ದಾರಿ ಕಾಣದೆ ಹಿಂತಿರುಗಿದರು. ಹಾಗೆ ಹಿಂತಿರುಗುವಾಗ ಎದುರಿನಲ್ಲಿ ಯೋಗಿಯೊಬ್ಬನನ್ನು ಕಂಡು ರಾಜನೊಡನೆ ಇರುವುದನ್ನು ಬಿಟ್ಟು ವಿವಾದಕ್ಕೆ ತೊಡಗಿದಾಗ ಕೆಟ್ಟದಾರಿಯನ್ನು ತುಳಿದಿದ್ದ ಇವರನ್ನು ಆ ಯೋಗಿ (ಶ್ರುತಸಾಗರ ಮುನಿ) ಗೆದ್ದುಬಿಟ್ಟನು. ಅದೇ ದಿನ ರಾತ್ರಿ ಆ ಮುನಿ ಪ್ರತಿಮಾ ಯೋಗದಲ್ಲಿ ನಿಂತುದನ್ನು ಕಂಡು ಮಂತ್ರಿಗಳು ಕೊಲ್ಲಲು ಹೋದಾಗ ದೇವತೆಯಿಂದ ಸ್ತಂಭಿಸಲ್ಪಟ್ಟರು. ಇದನ್ನು ಗಮನಿಸಿ ಶ್ರೀಧರ್ಮನು ಇವರಿಗೆ ದೇಶದಿಂದ ಬಹಿಷ್ಕಾರ ಹಾಕಿದನು.
ಇದೇ ಸಮಯದಲ್ಲಿ ಹಸ್ತಿನಾಪುರದಲ್ಲಿ ಮಹಾಪದ್ಮನೆಂಬ ಚಕ್ರಿಯಿದ್ದನು. ಈತನ ಎಂಟು ಮಂದಿ ಕನ್ಯೆಯರನ್ನು ಎಂಟು ಮಂದಿ ವಿದ್ಯಾಧರರು ಅಪಹರಿಸಿಕೊಂಡು ಹೋಗಿದ್ದರು. ಶುದ್ಧಶೀಲೆಯರಾಗಿದ್ದ ಈ ಕನ್ಯೆಯರು ಹಿಂತಿರುಗಿ ಬಂದಾಗ ವೈರಾಗ್ಯವಾವರಿಸಿ ದೀಕ್ಷೆಯನ್ನು ಪಡೆದರು. ಇವರನ್ನು ಅಪಹರಿಸಿಕೊಂಡು ಹೋಗಿದ್ದ ಎಂಟು ಮಂದಿ ವಿದ್ಯಾಧರರೂ ವಿರಕ್ತಿಯನ್ನು ಹೊಂದಿ ತಪಸ್ಸನ್ನು ಕೈಕೊಂಡರು. ಇದರಿಂದ ಮಹಾಪದ್ಮನೂ ವೈರಾಗ್ಯವನ್ನು ತಳೆದು ಲಕ್ಷ್ಮೀಮತಿಯೆಂಬ ರಾಣಿಯಲ್ಲಿ ಹುಟ್ಟಿದ ಪದ್ಮನೆಂಬ ಹೆಸರಿನ ಹಿರಿಯ ಮಗನಿಗೆ ರಾಜ್ಯವನ್ನು ಒಪ್ಪಿಸಿ ಕಿರಿಯಮಗ ವಿಷ್ಣುಕುಮಾರನೊಡನೆ ದೀಕ್ಷೆಯನ್ನು ಪಡೆದನು. ರತ್ನತ್ರಯವನ್ನು ಸಾಧಿಸಿದ, ತಪೋನಿಷ್ಠನಾದ ವಿಷ್ಣುಕುಮಾರನು ಕೆಲಸಮಯದಲ್ಲಿಯೇ ಸಿದ್ಧಿಗಳ ನಿಧಿಯಾದನು.
ದೇಶ, ಕಾಲ, ಅವಸ್ಥೆಗಳನ್ನು ಬಲ್ಲ ಬಲಿ ಮುಂತಾದ ನಾಲ್ವರು ಮಂತ್ರಿಗಳು ಪದ್ಮ ಮಹಾರಾಜನ ಆಶ್ರಯ ಪಡೆದರು. ಪದ್ಮನು ಬಲಿಯ ಸಲಹೆಯ ಕಾರಣದಿಂದ ಸಿಂಹಬಲನೆಂಬ ಅರಸನನ್ನು ಹಿಡಿಯುವುದು ಸಾಧ್ಯವಾಯಿತು. ಪದ್ಮನು ಇದಕ್ಕಾಗಿ ವರವನ್ನು ಕೇಳಿ ನಿನಗೆ ಇಷ್ಟವಾದ ವಸ್ತುವನ್ನು ಪಡೆ ಎಂದು ಹೇಳಿದನು. ಅದಕ್ಕೆ ಬಲಿಯು ಬೇಕಾದಾಗ ಬೇಡಿ ಪಡೆಯುವೆನೆಂದು ಉತ್ತರ ಕೊಟ್ಟನು.
ಸಮಯ ಹೀಗೆ ಸಾಗುತ್ತಿರಲು ಅಕಂಪನಾಚರ್ಯರು ವಿಹರಿಸುತ್ತಾ ಮುನಿಗಳೊಡನೆ ಹಸ್ತಿನಾಪುರಕ್ಕೆ ಬಂದರು. ಚಾತುರ್ಮಾಸ್ಯ ವ್ರತಕ್ಕಾಗಿ ನಗರದ ಹೊರವಲಯದಲ್ಲಿ ನಿಂತರು. ಇದರಿಂದ ಭಯಗೊಂಡ ಬಲಿ ಮೊದಲಾದ ಮಂತ್ರಿಗಳು ಮುನಿಗಳನ್ನು ಅಲ್ಲಿಂದ ಅಟ್ಟಿಬಿಡಲು ಯೋಚಿಸಿದರು. ಇದಕ್ಕಾಗಿ ಬಲಿಯು ಪದ್ಮನಲ್ಲಿಗೆ ಬಂದು ‘ಪ್ರಭು, ನೀವು ನನಗೆ ಕೊಟ್ಟಿದ್ದ ವರವನ್ನು ಈಗ ಕೇಳುತ್ತಿದ್ದೇನೆ. ನನಗೆ ಈ ರಾಜ್ಯವು ಏಳು ದಿನಗಳ ಕಾಲ ಆಳುವುದಕ್ಕೆ ಕೊಡಬೇಕು’ ಎಂದು ಪ್ರಾರ್ಥಿಸಿದನು. ಪದ್ಮನು ಇದಕ್ಕೆ ಒಪ್ಪಿ ತಾನು ಯಾರಿಗೂ ಕಾಣದಂತೆ ಇರತೊಡಗಿದನು. ಬಲಿಯು ರಾಜ್ಯವನ್ನು ವಹಿಸಿಕೊಂಡು ಅಕಂಪನಾಚರ್ಯ ಸಮೇತರಾದ ಮುನಿಜನಕ್ಕೆ ತೊಂದರೆಗಳನ್ನು ನೀಡತೊಡಗಿದನು. ಆ ಮುನಿಗಳ ಸುತ್ತಲೂ ಎಂಜಲು ತಟ್ಟೆಗಳನ್ನು ಚೆಲ್ಲಿಸಿ, ಒಣ ಎಲೆಗಳನ್ನು ಹಾಕಿ ಬೆಂಕಿ ಹಚ್ಚಿಸಿ ಹೊಗೆ ಕವಿಯುವಂತೆ ಮಾಡಿದನು. ಆ ಮುನಿಗಳು ಉಪಸರ್ಗ ತೊಲಗಿದರೆ ಆಹಾರವನ್ನು ಪಡೆಯೋಣ ಇಲ್ಲವಾದಲ್ಲಿ ಅಗತ್ಯವಿಲ್ಲ ಎಂದು ಆ ಕಷ್ಟಗಳನ್ನು ಸಹಿಸಿಕೊಂಡು ತಪೋಮಗ್ನರಾದರು.
ಮಿಥಿಲೆಯಲ್ಲಿದ್ದ ವಿಷ್ಣುಕುಮಾರಮುನಿಯ ಗುರುಗಳು ಇದನ್ನು ಅವಧಿ ಜ್ಞಾನದಿಂದ ಅರಿತು ಸಹಾನುಭೂತಿ ಹೊಂದಿ ಈ ವಿಷಯವನ್ನು ಹೇಳಿದಾಗ ಅವರ ಸಮೀಪದಲ್ಲಿದ್ದ ಪುಷ್ಪದಂತನೆಂಬ ಕ್ಷುಲ್ಲಕನು ಈ ಘಟನೆ ಎಲ್ಲಿ ನಡೆಯುತ್ತಿದೆ ಎಂದು ಕೇಳಲು ಗುರುಗಳು ಹಸ್ತಿನಪುರ ಎಂದುತ್ತರಿಸಿದರು. ಈ ಸಂಕಟ ಯಾರಿಂದ ದೂರವಾಗಲು ಸಾಧ್ಯ ಎಂದು ಪುಷ್ಪದಂತನು ಕೇಳಲು ವಿಷ್ಣುಕುಮಾರಮುನಿಯಿಂದ ಸಾಧ್ಯವೆಂದು ಗುರುಗಳು ಉತ್ತರಿಸಿದರು.
ಪುಷ್ಪದಂತನು ಇದನ್ನು ಕೇಳಿ ವಿಷ್ಣುಕುಮಾರಮುನಿಯ ಬಳಿಗೆ ಹೋಗಿ ಈ ಸುದ್ದಿಯನ್ನು ಹೇಳಲು ವಿಕ್ರಿಯಾಋದ್ಧಿಯು ತಮಗೆ ಪ್ರಾಪ್ತವಾಗಿರುವುದನ್ನು ಖಚಿತಪಡಿಸಿಕೊಂಡ ಮುನಿಯು ಪದ್ಮರಾಜನಲ್ಲಿಗೆ ಹೋಗಿ ತಪಸ್ವಿಗಳಿಗೆ ತೊಂದರೆಯಾದರೆ ನೀನು ನಿವಾರಿಸಬೇಕು; ನೀನು ಬಲಿಯ ದುಷ್ಕಾರ್ಯವನ್ನು ನಿಲ್ಲಿಸದಿದ್ದರೆ ನಿನಗೇ ತೊಂದರೆ ಎಂದು ಹೇಳಲು, ಪದ್ಮನು “ಸ್ವಾಮಿ, ನಾನು ರಾಜ್ಯವನ್ನು ಏಳು ದಿನಗಳ ಕಾಲ ಬಲಿಗೆ ಕೊಟ್ಟಿದ್ದೇನೆ. ನನಗೆ ಏನು ಮಾಡುವುದಕ್ಕೂ ಅಧಿಕಾರವಿಲ್ಲ. ತಾವೇ ಹೋಗಿ ಅಪ್ಪಣೆ ಮಾಡಿದರೆ ಬಲಿ ತಮ್ಮ ಮಾತನ್ನು ಒಪ್ಪುತ್ತಾನೆ” ಎಂದು ಹೇಳಿದನು.
ವಿಷ್ಣುಕುಮಾರಮುನಿಯು ಬಲಿಯ ಬಳಿಗೆ ಹೋಗಿ ‘ಇಂತಹ ಕರ್ಯವು ನಿನಗೆ ಸಲ್ಲದು. ಈ ತೊಂದರೆ ಅವರಿಗೆ ತಪ್ಪುವಂತೆ ಮಾಡು’ ಎಂದು ಹೇಳಲು ಬಲಿಯು “ಅವರು ನನ್ನ ರಾಜ್ಯದಿಂದ ಹೊರಟುಹೋದರೆ ಈ ಸಂಕಟ ತಪ್ಪುತ್ತದೆ” ಎಂದು ಹೇಳಿದನು. ವಿಷ್ಣುಕುಮಾರಮುನಿಯು “ಮುನಿಗಳು ದೇಹವನ್ನಾದರೂ ತ್ಯಾಗ ಮಾಡಿಯಾರು, ವಿನಾ ನಿಯಮವನ್ನು ಉಲ್ಲಂಘಿಸುವುದಿಲ್ಲ. ಆ ಮುನಿಗಳು ಇರುವುದಕ್ಕಾಗಿ ಮೂರು ಹೆಜ್ಜೆ ಭೂಮಿಯನ್ನು ನನಗೆ ಕೊಡಲು ಒಪ್ಪಿಕೋ. ನಾನು ಇದುವರೆಗೂ ಯಾರನ್ನೂ ಯಾಚಿಸಿಲ್ಲ” ಎಂದು ಹೇಳಲು ಬಲಿಯು ಆ ಮುನಿಗಳೇನಾದರೂ ಒಂದು ಹೆಜ್ಜೆಯನ್ನು ಮೀರಿದರೆ ದಂಡನಾರ್ಹರಾಗುತ್ತಾರೆ. ಈ ದೋಷಕ್ಕೆ ನಾನು ಬಾಧ್ಯನಲ್ಲ ಎಂದು ಹೇಳಿ ವಿಷ್ಣುಕುಮಾರಮುನಿಗೆ ಮೂರು ಹೆಜ್ಜೆ ಭೂಮಿಯನ್ನು ಕೊಟ್ಟನು.
ಕೂಡಲೇ ವಿಷ್ಣುಕುಮಾರಮುನಿಯು ಬಲಿಗೆ ಬುದ್ಧಿ ಕಲಿಸಲು ಸಿದ್ಧನಾಗಿ ತನ್ನ ದೇಹವನ್ನು ಮಹತ್ತಾಗಿ ಬೆಳೆಸಿದಾಗ ಅದು ಜ್ಯೋತಿಷ್ಪಟಲವನ್ನು ಸ್ಪರ್ಶಿಸಿತು. ಮುನಿಯು ಒಂದು ಹೆಜ್ಜೆಯನ್ನು ಮೇರುವಿನ ಮೇಲಿಟ್ಟನು. ಮತ್ತೊಂದು ಹೆಜ್ಜೆಯನ್ನು ಮಾನುಷೋತ್ತರದ ಮೇಲಿಟ್ಟನು. ಮೂರನೆಯ ಹೆಜ್ಜೆಗೆ ಸ್ಥಳ ಸಿಗದೆ ಆಕಾಶದಲ್ಲಿಯೇ ಅಲೆದಾಟವಾಯಿತು. ವಿಷ್ಣುಕುಮಾರಮುನಿಯ ಪ್ರಭಾವದಿಂದ ತ್ರಿಭುವನಗಳೂ ಸ್ತಬ್ಧವಾದವು. ಕಿನ್ನರ, ಗಂಧರ್ವ ಮುಂತಾದವರು ಪ್ರಾರ್ಥಿಸಲು ಮುನಿಯು ತನ್ನ ರೂಪವನ್ನು ಉಪಸಂಹರಿಸಿಕೊಂಡು ಸಹಜರೂಪಕ್ಕೆ ಬಂದು ನಿಂತನು. ದೇವತೆಗಳು ಅಕಂಪನಾದಿ ಮುನಿಗಳಿಗೆ ಒದಗಿದ್ದ ಕ್ಲೇಶಗಳನ್ನು ನಿವಾರಿಸಿ ದುರಾತ್ಮನಾದ ಬಲಿಯನ್ನು ಬಂಧಿಸಿ, ದಂಡಿಸಿ ದೂರ ದೇಶಕ್ಕೆ ಓಡಿಸಿದರು. ಅನಂತರ ವಿಷ್ಣುಕುಮಾರಮುನಿಯು ಘೋರ ತಪಸ್ಸನ್ನು ಮಾಡಿ ಕರ್ಮಗಳನ್ನು ಕಳೆದುಕೊಂಡು ಕೊನೆಗೆ ಮೋಕ್ಷವನ್ನು ಸಂಪಾದಿಸಿದನು.
ಗುಣಭದ್ರಾಚರ್ಯರ ಉತ್ತರಪುರಾಣದಲ್ಲಿ ನೇಮಿನಾಥ ಚರಿತಂ
ಹಸ್ತಿನಾಪುರದ ಅರಸ ಮೇಘರಥ. ಈತನ ಪತ್ನಿ ಪದ್ಮಾವತಿ. ಇವರಿಗೆ ವಿಷ್ಣು, ಪದ್ಮರಥರೆಂಬ ಇಬ್ಬರು ಪುತ್ರರು ಜನಿಸಿದರು. ವಿಷ್ಣುವಿನ ಜೊತೆ ಮೇಘರಥನು ದೀಕ್ಷೆಯನ್ನು ತೆಗೆದುಕೊಂಡು ತಪಸ್ಸನ್ನು ಕೈಗೊಳ್ಳಲು ಪದ್ಮರಥನು ರಾಜ್ಯಭಾರ ನಿರ್ವಹಿಸುತ್ತಿದ್ದನು. ಒಂದು ಬಾರಿ ಮ್ಲೇಚ್ಛದೇಶದ ರಾಜನಿಂದ ತೊಂದರೆಯುಂಟಾಗಲು ಮುಖ್ಯಮಂತ್ರಿಯು ಅವನನ್ನು ಸಾಮ ಮುಂತಾದ ಉಪಾಯಗಳಿಂದ ಸರಿಮಾಡಿದನು. ಪದ್ಮರಥನು ಸಂತುಷ್ಟನಾಗಿ ಮಂತ್ರಿಯಾದ ಬಲಿಗೆ ನಿನಗೆ ಏನು ಬೇಕು ಎಂದು ಕೇಳಲು ಬಲಿಯು ಏಳು ದಿನಗಳ ವರೆಗೆ ನಿಮ್ಮ ರಾಜ್ಯ ನನಗೆ ಬೇಕು ಎಂದು ಕೇಳಿದನು. ಅಂತೆಯೇ ಪದ್ಮರಥನು ಅದನ್ನು ದಯಪಾಲಿಸಿದನು. ಆ ಸಮಯದಲ್ಲಿ ಅಲ್ಲಿಗೆ ಅಕಂಪನಾದಿ ಮುನಿಸಮೂಹವು ಬರಲು, ಹಿಂದೆ ಸೌಮ್ಯರಾಜನ ಸಭೆಯಲ್ಲಿ ಬಲಿಯು ಅಕಂಪನ ಮುನಿಯೊಡನೆ ವಾದಮಾಡಲು ಹೋಗಿ ಸೋತಿದ್ದನ್ನು ನೆನೆಸಿಕೊಂಡು ಆ ಮುನಿಯನ್ನು ಕೊಲ್ಲಲು ಹಂಚಿಕೆ ಹೂಡಿದನು. ಯಾಗದ ನೆಪದಿಂದ ಆ ಮುನಿಗಳ ಸುತ್ತಲೂ ಬೆಂಕಿ ಹಚ್ಚಿಸಿ ಹೊಗೆ ಕವಿಯುವಂತೆ ಮಾಡಿದನು. ವಿಷ್ಣುಕುಮಾರಮುನಿಯು ಇದನ್ನು ತಿಳಿದು ಪದ್ಮರಥನ ಬಳಿಗೆ ಹೋಗಿ ಈ ಅಕರ್ಯವನ್ನು ನಿಲ್ಲುವಂತೆ ಮಾಡು ಎಂದು ಹೇಳಲು ಪದ್ಮರಥನು ತನಗದು ಸಾಧ್ಯವಿಲ್ಲವೆಂದು, ತಮಗೆ ಮಾತ್ರ ಅದು ಸಾಧ್ಯವೆಂದು ಹೇಳಲು ವಿಷ್ಣುಕುಮಾರಮುನಿಯು ವಾಮನರೂಪದಿಂದ ಬ್ರಾಹ್ಮಣಾಕಾರವನ್ನು ತಾಳಿ ಬಲಿಯಲ್ಲಿಗೆ ಬಂದು ಮೂರು ಹೆಜ್ಜೆಗಳ ಭೂಮಿಯನ್ನು ಯಾಚಿಸಿದನು. ಬಲಿಯು ಅದನ್ನು ನೀಡಲು ವಿಷ್ಣುಕುಮಾರ ಮುನಿಯು ತನ್ನ ದೇಹವನ್ನು ಮಹತ್ತಾಗಿ ಬೆಳೆಸಿ ಒಂದು ಕಾಲನ್ನು ಮಾನುಷೋತ್ತರ ಪರ್ವತದ ಮಸ್ತಕದ ಮೇಲಿರಿಸಿ ಮತ್ತೊಂದು ಕಾಲವನ್ನು ಮಹಾಮೇರು ಪರ್ವತದ ಚೂಲಿಕೆಯಲ್ಲಿರಿಸಿದನು. ಅನಂತರ ವಿದ್ಯಾಧರರು, ಭೂಚರರು ಸ್ತುತಿಸಲು ವಿಷ್ಣುಕುಮಾರಮುನಿಯು ಮೊದಲಿನಂತೆ ರೂಪವನ್ನು ಧರಿಸಿದನು. ಈ ರೀತಿಯಾಗಿ ವಿಷ್ಣುಕುಮಾರಮುನಿಯು ಅಕಂಪನಾದಿ ಮುನಿಗಳ ಸಂಕಟವನ್ನು ದೂರಮಾಡಿದನು. ಬಲಿಯನ್ನು ಬಂಧಿಸಿದನು. ಬಂಧಿಸಲಾದ ಬಲಿಯನ್ನು ಪದ್ಮರಥನು ಕೊಲ್ಲಲು ಹೋದಾಗ ವಿಷ್ಣುಕುಮಾರಮುನಿಯು ಆತನನ್ನು ತಡೆದು ಸದ್ಧರ್ಮವನ್ನು ಬೋಧಿಸಿದನು.
ಮೇಲಿನ ಕಥೆಯನ್ನು ಗಮನಿಸಿದರೆ ಪುನ್ನಾಟ ಸಂಘೀಯ ಜಿನಸೇನಾಚರ್ಯರ ಹರಿವಂಶಪುರಾಣದ ಕಥೆಗೂ ಉತ್ತರಪುರಾಣದ ಕಥೆಗೂ ಬಹಳವಾಗಿ ವ್ಯತ್ಯಾಸವಿರುವುದು ಕಂಡುಬರುತ್ತದೆ. ಒಂದು ರೀತಿಯಿಂದ ಹರಿವಂಶಪುರಾಣ ಮತ್ತು ಉತ್ತರಪುರಾಣಗಳಲ್ಲಿನ ಬಲಿ-ವಾಮನೋಪಾಖ್ಯಾನವು ಜೈನ ಸಾಹಿತ್ಯದ ಎರಡು ವಿಭಿನ್ನ ಆವೃತ್ತಿಗಳಾಗಿವೆ. ಚಾವುಂಡರಾಯ ಪುರಾಣದಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳನ್ನು ಹೊರತುಪಡಿಸಿದರೆ ಉತ್ತರಪುರಾಣವನ್ನೇ ಚಾವುಂಡರಾಯನು ಅನುಸರಿಸಿದ್ದಾನೆ ಎಂದು ಹೇಳಬಹುದು. ಆದರೆ ಅತಿಯಾದ ಪಾಠದೋಷಗಳ ಕಾರಣ ಚಾವುಂಡರಾಯ ಪುರಾಣದಲ್ಲಿನ ವಿವರಗಳ ಆಶಯವನ್ನು ಸಮರ್ಪಕವಾಗಿ ತಿಳಿಯಲು ಸಾಧ್ಯವಿಲ್ಲ. ಜೊತೆಗೆ ಚಾವುಂಡರಾಯನು ಉತ್ತರ ಪುರಾಣವನ್ನೇ ಅನುಸರಿಸಿದರೂ ಈಗ ಅಲಭ್ಯವಾಗಿರುವ ಕವಿಪರಮೇಶ್ವರರ ‘ವಾಗರ್ಥ ಸಂಗ್ರಹ’ವೆಂಬ ಕೃತಿಯನ್ನು ಕೂಡ ಬಳಸಿಕೊಂಡಿರುವುದು ಕರ್ತೃವೇ ಕೊಡುವ ಸೂಚನೆಯಿಂದ ಸ್ಪಷ್ಟವಾಗಿದೆ. ನೇಮಿನಾಥ ಚರಿತ್ರೆಯ ಭಾಗದಲ್ಲಿ ಕವಿಪರಮೇಶ್ವರರ ವೃತ್ತ ಎಂಬ ಸೂಚನೆಯೊಂದಿಗೆ ಕವಿಪರಮೇಶ್ವರರ ‘ವಾಗರ್ಥ ಸಂಗ್ರಹ’ದ ವೃತ್ತವೊಂದು ಉದಾಹೃತವಾಗಿದೆ.
ಮೇಲೆ ನೀಡಿರುವ ಕಥೆಯನ್ನು ಕನ್ನಡ ಜೈನ ಕವಿಗಳು ಅವಲಂಬಿಸಿ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ. ಕನ್ನಡ ಕವಿಗಳಲ್ಲಿ ಚಾವುಂಡರಾಯನ ಪುರಾಣ, ಕರ್ಣಪರ್ಯನ ನೇಮಿನಾಥಪುರಾಣ, ನೇಮಿಚಂದ್ರನ ಅರ್ಧನೇಮಿಪುರಾಣ, ಮಹಾಬಲನ ನೇಮಿನಾಥಪುರಾಣ ಕೃತಿಗಳಲ್ಲಿ ಈ ಕಥೆ ಯಾವ ರೀತಿ ಚಿತ್ರಿತವಾಗಿದೆ ಎಂದು ತಿಳಿಯಲು ಕಥಾಸಾರವನ್ನು ಸಂಗ್ರಹ ಮಾಡಿ ಕೊಡಲಾಗಿದೆ.
ಕರ್ಣಪರ್ಯನ ನೇಮಿನಾಥಪುರಾಣ
ಭಾರತವರ್ಷದ ಆರ್ಯಾ ಖಂಡಕ್ಕೆ ಸೇರಿದ ಕುರುಜಾಂಗಣ ದೇಶದೊಳಗಿರುವ ಹಸ್ತಿನಾಪುರದ ಅರಸ ಮೇಘರಥ. ಈತನ ಪತ್ನಿ ಪದ್ಮೆ. ಇವರಿಗೆ ವಿಷ್ಣು, ಪದ್ಮರಥರೆಂಬ ಇಬ್ಬರು ಪರಾಕ್ರಮಶಾಲಿ, ಕೀರ್ತಿಶಾಲಿ ಪುತ್ರರು ಜನಿಸಿದರು. ಮೇಘರಥನು ಕೆಲಕಾಲ ಸುಖವಾಗಿ ರಾಜ್ಯಭಾರ ಮಾಡಿ ವೈರಾಗ್ಯವಾವರಿಸಿ ತಪಸ್ಸಿಗೆ ಹೋದನು. ಅಂದೇ ವಿಷ್ಣುಕುಮಾರನೂ ದೀಕ್ಷೆಯನ್ನು ತೆಗೆದುಕೊಂಡು ತಪಸ್ಸನ್ನು ಕೈಕೊಳ್ಳಲು ಪದ್ಮರಥನು ರಾಜ್ಯಭಾರ ನಿರ್ವಹಿಸುತ್ತಿದ್ದನು.
ಮತ್ತೊಂದೆಡೆ ಅವಂತೀ ವಿಷಯದ ಉಜ್ಜಯಿನಿಯ ಹೊರಗಿನ ಉದ್ಯಾನದಲ್ಲಿ ಅಕಂಪನಾಚರ್ಯರೆಂಬ ಯತಿಗಳು ಬಂದಿರಲಾಗಿ ಉಜ್ಜಯಿನಿಯ ಅರಸು ವೃಷಭಕೇತು ಅವರನ್ನು ಪೂಜಿಸಲು ಹೋದನು. ಈತನೊಂದಿಗೆ ಅತಿಧೂರ್ತರೂ ಗರ್ವಿತರೂ ಆದ ಬಲಿ, ಶುಕ್ರ, ಬೃಹಸ್ಪತಿ ಎಂಬ ಮಂತ್ರಿಗಳೂ ಹೋದರು. ಹೋದವರು ಯತಿಯೊಂದಿಗೆ ವಾದಕ್ಕಿಳಿದು ಅವರ ವರ್ಚಸ್ಸಿನ ವಜ್ರದ ಕುಡುಗೋಲಿನಿಂದ ಪೆಟ್ಟು ತಿಂದು ಹಿಂತಿರುಗಿದರು. ಮೂವರು ಮಂತ್ರಿಗಳಲ್ಲಿ ಒಬ್ಬನಾದ ಬಲಿಯು ರಾತ್ರಿಯ ಸಮಯದಲ್ಲಿ ಹೋಗಿ ಆ ಯತಿಗಳನ್ನು ಸಂಹರಿಸಲು ಕತ್ತಿಯನ್ನು ಎತ್ತಿದಾಗ ವನದೇವತೆಗಳು ಅದನ್ನು ನೋಡಿ ಕತ್ತಿ ಕದಲದಂತೆ ಸ್ತಂಭಿಸಿಬಿಟ್ಟವು. ಬಲಿಯು ಈ ರೀತಿಯಾಗಿ ಸಿಕ್ಕಿಬಿದ್ದು ಕಿರುಚಿಕೊಳ್ಳಲು, ಜನರು ಬಂದು ನೆರೆದು ವೃಷಭಕೇತು ಮಹಾರಾಜನಿಗೆ ತಿಳಿಸಿದರು. ಈತ ಬಂದು ಯತಿಗಳನ್ನು ಬೇಡಿ ಬಲಿಗಾದ ಉಪದ್ರವವನ್ನು ನಿವಾರಿಸಿ ಮೂವರು ಮಂತ್ರಿಗಳನ್ನು ದೇಶದಿಂದ ಓಡಿಸಿಬಿಟ್ಟನು. ಈ ಮೂವರು ಅಲ್ಲಿಂದ ಹೊರಟು ಹಸ್ತಿನಾಪುರದ ಪದ್ಮರಥನನ್ನು ಕಂಡು ಅವನ ಬಳಿ ಮಂತ್ರಿಗಳಾಗಿ ಇದ್ದರು.
ಪದ್ಮರಥನ ಮೇಲೆ ಬಲಶಾಲಿಗಳಾದ ಶತ್ರುರಾಜರು ದಂಡೆತ್ತಿ ಬರಲು ಪದ್ಮರಥನು ದೊಡ್ಡದಾದ ರಥವನ್ನು ಏರಿ ಯುದ್ಧಕ್ಕೆ ಸಿದ್ಧನಾಗಲು ಬಲಿ, ಶುಕ್ರ, ಬೃಹಸ್ಪತಿಗಳು ಪದ್ಮನನ್ನು ತಡೆದು ತಮ್ಮ ಬುದ್ಧಿವಂತಿಕೆಯಿಂದ, ಭೇದೋಪಾಯದಿಂದ ಶತ್ರುವನ್ನು ಸಾಧಿಸಿಬಿಟ್ಟರು. ಪದ್ಮನು ಸಂತೋಷಗೊಂಡು ಬಲಿಗೆ ವರವನ್ನು ಕೇಳಿ ನಿನಗೆ ಇಷ್ಟವಾದ ವಸ್ತುವನ್ನು ಪಡೆ ಎಂದು ಹೇಳಿದನು. ಅದಕ್ಕೆ ಬಲಿಯು ಬೇಕಾದಾಗ ಬೇಡಿ ಪಡೆಯುವೆನೆಂದು ಉತ್ತರಕೊಟ್ಟನು.
ಸಮಯ ಹೀಗೆ ಸಾಗುತ್ತಿರಲು ಅಕಂಪನಾಚರ್ಯರು ಏಳುನೂರು ಮುನಿಗಳೊಡನೆ ಬಂದು ಹಸ್ತಿನಾಪುರಕ್ಕೆ ಸ್ವಲ್ಪದೂರದಲ್ಲಿದ್ದ ಸೌಮ್ಯಗಿರಿಯ ಮೇಲೆ ತಂಗಿದರು. ಇದೇ ಸಮಯದಲ್ಲಿ ವನವಿಹಾರಕ್ಕೆಂದು ಬಂದಿದ್ದ ಬಲಿಯು ಇವರನ್ನು ನೋಡಿ ಅತಿಕೋಪಗೊಂಡು ‘ಈ ಯತಿ ಹಿಂದೆ ನನಗೆ ಅಪಮಾನ ಮಾಡಿದ್ದಾನೆ. ಈಗ ಮತ್ತೆ ಮಾಡಲು ಬಂದಿದ್ದಾನೆ. ಇವರನ್ನು ಮಟ್ಟ ಹಾಕುವುದು ಹೇಗೆಂದು ತನಗೆ ಗೊತ್ತು’ ಎಂದು ಯೋಚಿಸಿ ಪದ್ಮನಲ್ಲಿಗೆ ಬಂದು ‘ಪ್ರಭು, ನೀವು ನನಗೆ ಕೊಟ್ಟಿದ್ದ’ ವರವನ್ನು ಈಗ ಕೇಳುತ್ತಿದ್ದೇನೆ. ನನಗೆ ಈ ರಾಜ್ಯವು ಏಳು ದಿನಗಳ ಕಾಲ ಆಳುವುದಕ್ಕೆ ಕೊಡಬೇಕು ಎಂದು ಪ್ರಾರ್ಥಿಸಿದನು. ಪದ್ಮನು ಇದಕ್ಕೆ ಒಪ್ಪಿ ತಾನು ಯಾರಿಗೂ ಕಾಣದಂತೆ ಇರತೊಡಗಿದನು. ಬಲಿಯು ರಾಜ್ಯವನ್ನು ವಹಿಸಿ ಕೊಂಡು ವಿಪ್ರರಿಗೆ, ದೀನರಿಗೆ ಅನಾಥರಿಗೆಲ್ಲ ಯಥೇಚ್ಛವಾಗಿ ದಾನಗಳನ್ನು ನೀಡಿದನು. ಹಾಗೆ ದಾನಗಳನ್ನು ಪಡೆದವರಿಗೆ ಪುರದೊಳಗೆ ಸ್ಥಳಾವಕಾಶವಾಗದೆಂಬ ನೆವದಿಂದ ಸೌಮ್ಯಗಿರಿಗೆ ಬಂದು ಅಕಂಪನಾಚರ್ಯರಿಗೆ ಭೂಮಿಯಲ್ಲಿರುವವರಿಗೆ ಬೇಡಿದ್ದನ್ನೆಲ್ಲ್ಲ ನೀಡಿದ್ದೇನೆ, ಆದುದರಿಂದ ನಾನು ಕೊಡುವ ದಾನಕ್ಕೆ ನೀವು ಕೂಡ ಕೈಯ್ಯೊಡ್ಡಿರಿ ಎಂದು ಹೇಳಿದನು. ಅದಕ್ಕೆ ಅಕಂಪನಾಚರ್ಯರು ‘ಪವಿತ್ರ ಜಿನಮೂರ್ತಿಗೆ ವಂದಿಸುವ ಕೈಗಳು ಇವು. ಯಾವುದಕ್ಕೂ ಆಸೆಪಡದೆ ಇರುವವರು ಹೇಗೆ ನಿನ್ನ ಬಳಿ ಕೈಯ್ಯೊಡ್ಡಲು ಸಾಧ್ಯ?’ ಎನ್ನಲು ಬಲಿಯು ಕೋಪಗೊಂಡು ಮುನಿಜನಕ್ಕೆ ತೊಂದರೆಗಳನ್ನು ನೀಡತೊಡಗಿದನು. ದಾನಗಳನ್ನು ಪಡೆದವರಿಗೆ, ಪಡೆಯುವವರಿಗೆ, ಪಾಕಶಾಲೆಗಳನ್ನು ನರ್ಮಿಸಿ, ಹೋಮಭೂಮಿಗಳನ್ನು ರಚಿಸಿ ಆ ಮುನಿಗಳ ಸುತ್ತಲೂ ಹೊಗೆ ಕವಿಯುವಂತೆ ಮಾಡಿದನು. ಆ ಮುನಿಗಳು ಉಪಸರ್ಗ ತೊಲಗುವವರೆಗೂ ಯೋಗದಲ್ಲಿಯೇ ಇದ್ದು ಕಷ್ಟಗಳನ್ನು ಸಹಿಸಿಕೊಂಡು ತಪೋಮಗ್ನರಾದರು.
ವಿಷ್ಣುಕುಮಾರಮುನಿಯ ಗುರುಗಳು ಇದನ್ನು ಅವಧಿ ಜ್ಞಾನದಿಂದ ಅರಿತು ಸಹಾನುಭೂತಿ ಹೊಂದಿ ಇದನ್ನು ಪರಿಹಾರ ಮಾಡಲು ವಿಷ್ಣುಕುಮಾರಮುನಿಗೆ ಮಾತ್ರ ಸಾಧ್ಯ ಎಂದು ಹೇಳಿ ಈ ವಿಷಯವನ್ನು ವಿಷ್ಣುಕುಮಾರಮುನಿಗೆ ತಿಳಿಸಿ ಕಳುಹಿಸಿಕೊಟ್ಟರು.
ಮುನಿಯು ಪದ್ಮರಾಜನಲ್ಲಿಗೆ ಹೋಗಿ ‘ನಿನ್ನ ಅಮಾತ್ಯರಿಂದ ತಪಸ್ವಿಗಳಿಗೆ ತೊಂದರೆಯಾಗುತ್ತಿದ್ದರೂ ನೀನು ನಿವಾರಿಸದೆ ಸುಮ್ಮನಿರುವೆಯಲ್ಲಾ’ ಎನ್ನಲು ಪದ್ಮನು ‘ಸ್ವಾಮಿ, ನಾನು ರಾಜ್ಯವನ್ನು ಏಳು ದಿನಗಳ ಕಾಲ ಬಲಿಗೆ ಕೊಟ್ಟಿದ್ದೇನೆ. ನನಗೆ ಏನು ಮಾಡುವುದಕ್ಕೂ ಅಧಿಕಾರವಿಲ್ಲ. ತಾವೇ ಹೋಗಿ ಅಪ್ಪಣೆ ಮಾಡಿದರೆ ಬಲಿ ತಮ್ಮ ಮಾತನ್ನು ಒಪ್ಪುತ್ತಾನೆ’ ಎಂದು ಹೇಳಿದನು.
ವಿಕ್ರಿಯಾ ಋದ್ಧಿಯನ್ನು ಪಡೆದಿದ್ದ ವಿಷ್ಣುಕುಮಾರಮುನಿಯು ಚಿನ್ನದ ಜನಿವಾರ, ಕೈಗಳಲ್ಲಿ ದರ್ಭೆ, ಸೊಗಸಾದ ತಲೆಗಂಟು, ಕಮಂಡಲು ಇವುಗಳನ್ನು ಹೊಂದಿ ವಾಮನಾಕೃತಿಯನ್ನು ತಳೆದು ಬಲಿಯ ಬಳಿಗೆ ಬಂದನು. ಬಲಿಯು ಏನು ಬೇಕೋ ಬೇಡೆನ್ನಲು ಜಪವನ್ನು ಮಾಡಲು ಮೂರು ಹೆಜ್ಜೆ ನೆಲವನ್ನು ವಿಷ್ಣುಕುಮಾರಮುನಿ ಬೇಡಲು ಕೋರಿಕೆ ಚಿಕ್ಕದಾಯಿತು ಎಂದು ಬಲಿಯು ಅದನ್ನು ಕೊಟ್ಟನು. ಕೊಡುವ ಸಮಯದಲ್ಲಿ ಬಲಿಯ ಸಹವರ್ತಿ ಶುಕ್ರನು ‘ಈತ ದುಷ್ಟನು, ಇವನಿಗೆ ಕೊಡಕೂಡದು’ ಎಂದು ಅಡ್ಡಬರಲು ಈ ಪ್ರಯತ್ನವನ್ನು ನಿವಾರಿಸುವ ಸಂದರ್ಭದಲ್ಲಿ ವಾಮನನ ಕೈಯ ದರ್ಭೆ ತಗುಲಿ ವಕ್ರವಾದ ಶುಕ್ರನ ಕಣ್ಣು ಒಡೆಯಿತು. ಕೂಡಲೇ ವಿಷ್ಣುಕುಮಾರ ಮುನಿಯು ಬಲಿಗೆ ಬುದ್ಧಿ ಕಲಿಸಲು ಸಿದ್ಧನಾಗಿ ತನ್ನ ದೇಹವನ್ನು ಮಹತ್ತಾಗಿ ಬೆಳೆಸಿ ಒಂದು ಹೆಜ್ಜೆಯನ್ನು ಕಾಂಚನಾದ್ರಿ ಶಿಖರದ ಮೇಲಿಟ್ಟನು. ಮತ್ತೊಂದು ಹೆಜ್ಜೆಯನ್ನು ಮಾನುಷೋತ್ತರದ ಮೇಲಿಟ್ಟನು. ಮೂರನೆಯ ಹೆಜ್ಜೆಗೆ ಸ್ಥಳ ಸಿಗದೆ ಬಲಿಯ ತಲೆಯ ಮೇಲೆ ಕಾಲನ್ನಿಟ್ಟನು. ಆಗ ಅಲ್ಲಿದ್ದ ಬ್ರಾಹ್ಮಣರು ‘ಪ್ರಭು, ನಿಮ್ಮ ಪಾದವೇ ಶರಣು’ ಎಂದು ಸ್ತುತಿಸಲು ಮುನಿಯು ಶಾಂತನಾಗಿ ತನ್ನ ಕಾಲನ್ನು ಬಲಿಯ ತಲೆಯ ಮೇಲಿಂದ ತೆಗೆದನು. ಆಗ ಕಿನ್ನರ, ಗಂರ್ವ ಮುಂತಾದವರಿಂದ ವಾದ್ಯಮೇಳ ಹೊಮ್ಮಲು ಮುನಿಯು ತನ್ನ ರೂಪವನ್ನು ಉಪಸಂಹರಿಸಿಕೊಂಡು ಸಹಜರೂಪಕ್ಕೆ ಬಂದು ನಿಂತನು. ಅಕಂಪನಾದಿ ಮುನಿಗಳಿಗೆ ಒದಗಿದ್ದ ಕ್ಲೇಶಗಳು ನಿವಾರಣೆಯಾಗಿ ಅವರು ಸಹಜ ಸ್ಥಿತಿಗೆ ಮರಳಿದರು. ದುರಾತ್ಮನಾದ ಬಲಿಯನ್ನು ಪದ್ಮರಥನು ಕೊಲ್ಲಲು ಹೋದಾಗ ಅಕಂಪನಾಚರ್ಯರು ತಡೆದರು. ಬಲಿಗೆ ವಿವೇಕವುದಯಿಸಿ ಅಕಂಪನಾಚರ್ಯರ ಬಳಿ ತನಗೆ ಜಿನದೀಕ್ಷೆ ನೀಡಲು ಬೇಡಿಕೊಂಡನು. ಬಲಿಯನ್ನು ಅನುಸರಿಸಿ ಶುಕ್ರನೂ ಬೃಹಸ್ಪತಿಯೂ ಜಿನದೀಕ್ಷೆಯನ್ನು ಪಡೆದರು.
ನೇಮಿಚಂದ್ರನ ನೇಮಿನಾಥಪುರಾಣ ಅಥವಾ ಅರ್ಧನೇಮಿಪುರಾಣ
ಹಸ್ತಿನಾಪುರದ ಅರಸ ಮೇಘರಥ. ಈತನ ಪತ್ನಿ ಪದ್ಮಾವತಿ. ಇವರಿಗೆ ವಿಷ್ಣುಕುಮಾರ, ಪದ್ಮರಥರೆಂಬ ಇಬ್ಬರು ಪುತ್ರರು ಜನಿಸಿದರು. ಒಮ್ಮೆ ಮುಗಿಲನ್ನು ಕಂಡು ಅಷ್ಟರಿಂದಲೇ ವೈರಾಗ್ಯ ಹೊಂದಿ ಮೇಘರಥನು ದೀಕ್ಷೆಯನ್ನು ತೆಗೆದುಕೊಂಡು ವಿಷ್ಣುಕುಮಾರನೊಡನೆ ತಪಸ್ಸನ್ನು ಕೈಕೊಳ್ಳಲು, ಪದ್ಮರಥನು ರಾಜ್ಯಭಾರ ನಿರ್ವಹಿಸುತ್ತಿದ್ದನು. ಒಂದು ಬಾರಿ ಬೇರೆ ದೇಶದ ರಾಜರು ದಂಡೆತ್ತಿ ಬರಲು ಮುಖ್ಯಮಂತ್ರಿಯಾದ ಬಲಿಯು ಅದನ್ನು ತನ್ನ ಮಂತ್ರಶಕ್ತಿಯಿಂದ ನಿವಾರಿಸಿದನು. ಪದ್ಮರಥನು ಸಂತುಷ್ಟನಾಗಿ ಬಲಿಗೆ ನಿನಗೆ ಏನು ಬೇಕು ಎಂದು ಕೇಳಲು ಬಲಿಯು ಜೋಕುಮಾರನಂತೆ ‘ಏಳು ದಿನಗಳವರೆಗೆ ನಿಮ್ಮ ರಾಜ್ಯ ನನಗೆ ಬೇಕು’ ಎಂದು ಕೇಳಿದನು. ಅಂತೆಯೇ ಪದ್ಮರಥನು ಅದನ್ನು ದಯಪಾಲಿಸಿದನು. ಆ ಸಮಯದಲ್ಲಿ ಅಲ್ಲಿಗೆ ಅಕಂಪನಾದಿ ಮುನಿ ಸಮೂಹವು ಬಂದು ಆ ಪುರದ ಹೊರಗಿನ ಸೌಮ್ಯಗಿರಿಯಲ್ಲಿ ತಂಗಲು, ಅಕಂಪನಮುನಿಗೆ ತೊಂದರೆ ಕೊಡಲು ಯೋಚಿಸಿದನು. ತಾನು ಕೋಟಿ ಹೋಮವನ್ನೂ ಬ್ರಾಹ್ಮಣಭೋಜನವನ್ನೂ ಸೌಮ್ಯಗಿರಿಯ ಗುಹೆಗಳಲ್ಲಿ ಮಾಡುತ್ತೇನೆಂದು ಡಂಗುರ ಸಾರಿಸಿದನು. ಇದನ್ನು ಕೇಳಿ ಮನಸೋತ ಬ್ರಾಹ್ಮಣರು ಸೌಮ್ಯಗಿರಿಯ ಮೇಲೆ ಯಾಗವನ್ನೂ ಭೋಜನವನ್ನೂ ಸತತವಾಗಿ ನಡೆಸಲು ತೊಡಗಿದರು. ಯಾಗದ ಹೊಗೆ ಮುನಿಗಳ ಸುತ್ತಲೂ ಕವಿದು ಅಕಂಪನಮುನಿ ಅದರಲ್ಲಿ ಮುಚ್ಚಿಹೋಗಿ ಅಗ್ನಿದೇವನಂತೆಯೇ ಕಾಣುತ್ತಿದ್ದನು. ವಿಷ್ಣುಕುಮಾರಮುನಿಯು ಇದನ್ನು ತಿಳಿದು ಪದ್ಮರಥನ ಬಳಿಗೆ ಹೋಗಿ ಈ ಅಕರ್ಯವನ್ನು ನಿಲ್ಲುವಂತೆ ಮಾಡು ಎಂದು ಹೇಳಲು ಪದ್ಮರಥನು ತನಗದು ಸಾಧ್ಯವಿಲ್ಲವೆಂದು, ತಮಗೆ ಮಾತ್ರ ಅದು ಸಾಧ್ಯವೆಂದು ಹೇಳಲು ವಿಷ್ಣುಕುಮಾರಮುನಿಯು ವಾಮನ ರೂಪದಿಂದ ಬ್ರಾಹ್ಮಣಾಕಾರವನ್ನು ತಾಳಿ ಬಲಿಯಲ್ಲಿಗೆ ಬಂದು ಮೂರು ಹೆಜ್ಜೆಗಳ ಭೂಮಿಯನ್ನು ಯಾಚಿಸಿದನು. ಆಗ ವಿಷ್ಣುಕುಮಾರಮುನಿಯು ಪೀತಾಂಬರ, ಯಜ್ಞೋಪವೀತ, ಶಿಖೆ, ಕೌಪೀನ, ಕರಡಗೆ, ಬಂಗಾರದ ಕೊಡೆ, ದ್ವಾದಶನಾಮದ ಲಾಂಛನ, ದರ್ಭೆ, ಮುಂಜಿಯ ಉಡುದಾರ, ಮುತ್ತುಗದ ದಂಡ, ಕುಂಡಲ ಇವುಗಳನ್ನು ಹೊಂದಿ ಶೋಭಿಸುತ್ತಿದ್ದನು. ಬಲಿಯು ಮುನಿಗೆ ಮೂರು ಹೆಜ್ಜೆ ಭೂಮಿಯನ್ನು ನೀಡಲು ವಿಷ್ಣುಕುಮಾರಮುನಿಯು ತನ್ನ ದೇಹವನ್ನು ಮಹತ್ತಾಗಿ ಬೆಳೆಸಿ ಮೂರು ಲೋಕಗಳನ್ನೂ ಆಕ್ರಮಿಸಿದನು. ಅನಂತರ ವಿದ್ಯಾಧರರು, ಭೂಚರರು ಸ್ತುತಿಸಲು ವಿಷ್ಣುಕುಮಾರಮುನಿಯು ಮೊದಲಿನಂತೆ ರೂಪವನ್ನು ಧರಿಸಿದನು. ಈ ರೀತಿಯಾಗಿ ವಿಷ್ಣುಕುಮಾರಮುನಿಯು ಅಕಂಪನಾದಿ ಮುನಿಗಳ ಸಂಕಟವನ್ನು ದೂರಮಾಡಿದನು. ಬಲಿಯನ್ನು ಬಂಧಿಸಿದನು.
ಮಹಾಬಲನ ನೇಮಿನಾಥಪುರಾಣ
ಅವಂತೀ ವಿಷಯದ ಉಜ್ಜಯಿನಿಯನ್ನು ಆಳುವ ಪದ್ಮರಥ ಮಹಾರಾಜನ ಮಂತ್ರಿಗಳಾದ ಬಲಿ, ಶುಕ್ರ, ಬೃಹಸ್ಪತಿಗಳೆಂಬ ಮೂವರು ಅಕಂಪನಾಚರ್ಯರ ಸಮೀಪಕ್ಕೆ ಬಂದರು. ಅಲ್ಲಿ ಬಲಿಯೆಂಬ ಮಂತ್ರಿ ಅಕಂಪನಾಚರ್ಯರ ಬಳಿ ವಾದವನ್ನು ಮಾಡಲು ಆ ಯತಿಯ ವಾಗ್ಬಲದಿಂದ ಬಲಿಯ ವಿದ್ಯೆಯೆಂಬ ಬಲ ನಾಶವಾಯಿತು. ಅನಂತರ ಅಕಂಪನಾಚರ್ಯರು ದಿವ್ಯ ಧ್ಯಾನದಲ್ಲಿ ಮುಳುಗಿದರು. ಇದನ್ನು ಕಂಡು ಬಲಿಯು ಸೇನಾಸಹಿತನಾಗಿ ಬಂದು ಅವರನ್ನು ಕೊಲ್ಲಬೇಕೆಂದಿರುವಲ್ಲಿ ಸರ್ವಾವಧಿಯನ್ನು ಅರಿತು ಸಪ್ತರ್ಧಿ ಸಂಪನ್ನನೊಬ್ಬನು ರಾಜಪದವಿಯನ್ನು ಏಳುದಿನಗಳಿಗಾಗಿ ರಾಜನು ಕೊಟ್ಟುದನ್ನು ಅರಿತುಕೊಂಡು ಪರಿಹರಿಸುವ ಉಪಾಯವನ್ನು ಕಂಡುಕೊಂಡನು.
ವಾಮನರೂಪವನ್ನು ತಾಳಿ ವಟುವೇಷದಿಂದ ಬಂದು ಮೂರಡಿ ಭೂಮಿಯನ್ನು ಬೇಡಲು ಬಲಿಯು ನಕ್ಕು ಮೂರಡಿ ಭೂಮಿಯನ್ನು ನೀಡಲು ವಾಮನನು ಆಕಾಶದೆತ್ತರಕ್ಕೆ ಬೆಳೆದು ಒಂದು ಹೆಜ್ಜೆಯನ್ನು ಹೇಮಗಿರಿಯಲ್ಲಿ ನಿಲ್ಲಿಸಿ ಮತ್ತೊಂದು ಹೆಜ್ಜೆಯನ್ನು ಮಾನುಷೋತ್ತರದಲ್ಲಿ ಇಡಲು ಕೌತುಕಗೊಂಡ ವೈಮಾನಿಕಾದಿ ದೇವತೆಗಳು ನಮಸ್ಕರಿಸಲು, ಅವರೆಲ್ಲರ ಕಾಂತಿಯು ಸರ್ಯನೊಡನೆ ಪ್ರತಿಸ್ಪರ್ಧಿಸಿದಂತಾಯಿತು. ಅದನ್ನು ಕಂಡ ಬಲಿ ಭಯಪಟ್ಟು ತನ್ನ ಅಸಾಮರ್ಥ್ಯದಿಂದ ಬಂಧನಕ್ಕೀಡಾಗಿ ಮೋಕ್ಷಗಾಮಿಗಳಾದವರಿಗೆ ತೊಂದರೆಯು ತಪ್ಪಲು ಆ ವಿಷ್ಣುಮುನಿಯ ಪಾದಗಳನ್ನು ಪೂಜಿಸಿದನು.
ಚಾವುಂಡರಾಯನ ಚಾವುಂಡರಾಯಪುರಾಣಂ
ಹಸ್ತಿನಾವತಿಯ ಮೇಘರಥನೆಂಬ ರಾಜನಿಗೂ ಆತನ ಪತ್ನಿ ಪದ್ಮಾವತಿಗೂ ವಿಷ್ಣು, ಪದ್ಮರಥರೆಂಬ ಇಬ್ಬರು ಮಕ್ಕಳಿದ್ದರು. ವಿಷ್ಣುವು ತನ್ನ ತಂದೆ ಮೇಘರಥನೊಡನೆ ತಪಸ್ಸಿಗೆ ಹೋಗಲು ಪದ್ಮರಥನು ರಾಜ್ಯಕ್ಕೆ ಅರಸನಾಗಿ ಆಳುತ್ತಿದ್ದನು. ಒಮ್ಮೆ ನೆರೆಯ ರಾಜ್ಯದವರು ದಂಡೆತ್ತಿ ಬರಲು ಬಲಿಯೆಂಬ ಮಂತ್ರಿಯು ಸಾಮಾದಿ ಉಪಾಯಗಳಿಂದ ಅವರು ಹಿಂದೆ ಹೋಗುವಂತೆ ಮಾಡಿದನು. ಅದಕ್ಕೆ ಪದ್ಮರಥನು ಮೆಚ್ಚಿ ನಿನಗೇನು ಬೇಕೆಂದು ಕೇಳಲು ಬಲಿಯು ನಾನು ಏಳು ದಿನಗಳ ಮಟ್ಟಿಗೆ ರಾಜ್ಯಭಾರ ಮಾಡಬೇಕೆಂಬ ಆಸೆಯುಂಟು ಎನ್ನಲು ಪದ್ಮರಥನು ಹಾಗೆಯೇ ಆಗಲೆಂದು ರಾಜ್ಯವನ್ನು ಬಿಟ್ಟುಕೊಟ್ಟನು. ಒಂದು ದಿವಸ ಆ ನಗರದ ಹರ್ವ್ಮ್ಯಗಿರಿಯಲ್ಲಿ ಅಕಂಪನಗುರು ಮೊದಲಾದವರು ತಪೋಯೋಗದಲ್ಲಿರಲು ಬಲಿಯು ಹಿಂದೆ ವಿದ್ವತ್ಸಭೆಯಲ್ಲಿ ಅಕಂಪನರೊಡನೆ ವಾದ ಮಾಡಿ ಸೋತಿದ್ದನ್ನು ನೆನೆದು ಸೇಡು ತೀರಿಸಿಕೊಳ್ಳಲು ಬೆಟ್ಟದ ಸುತ್ತಲೂ ಬೇಡಿದವರಿಗೆ ಅನ್ನದಾವ ಮಾಡುವ ನೆಪದಿಂದ ಬೆಂಕಿಯನ್ನು ಉರಿಸಿ ಋಷಿಗಳಿಗೆ ತೊಂದರೆಯನ್ನುಂಟುಮಾಡಿದನು. ಆಗ ವಿಷ್ಣುಕುಮಾರನು ಪದ್ಮರಥನ ಬಳಿಗೆ ಬರಲು ಆತನು ನಿಮ್ಮ ಇಷ್ಟವೇನು ನಡಸಿಕೊಡುವೆ ಎನ್ನಲು ವಿಷ್ಣುಕುಮಾರಮುನಿಯು ನಿಮ್ಮ ಮಂತ್ರಿ ಬಲಿಯು ಮುನಿಗಳಿಗೆ ಕೊಡುತ್ತಿರುವ ತೊಂದರೆಯನ್ನು ನಿಲ್ಲಿಸಬೇಕು ಎಂದು ಹೇಳಿದಾಗ ಪದ್ಮರಥನು ‘ಸ್ವಾಮಿ, ನಾನು ಏಳು ದಿನಗಳ ಕಾಲ ರಾಜ್ಯವನ್ನು ಬಲಿಗೆ ಒಪ್ಪಿಸಿಬಿಟ್ಟಿರುವೆನು. ಅಲ್ಲಿಯವರೆಗೂ ನಾನು ಆತನನ್ನು ಮಾತನಾಡಿಸಲು ಸಾಧ್ಯವಿಲ್ಲ. ಆದ ಕಾರಣ ನೀವೇ ಹೇಗಾದರೂ ಇದನ್ನು ತಪ್ಪಿಸಬೇಕು’ ಎಂದು ಹೇಳಿದನು. ಆಗ ವಿಷ್ಣುವು ವಾಮನರೂಪದಿಂದ ಬಲಿಯಲ್ಲಿಗೆ ಬಂದು ಮೂರಡಿ ನೆಲವನ್ನು ಜಲಧಾರಾಪೂರ್ವಕವಾಗಿ ಬೇಡಿ, ಅದನ್ನು ಪಡೆದು ವಿಕ್ರಿಯಾಋದ್ಧಿಯ ಬಲದಿಂದ ದೊಡ್ಡ ಆಕಾರವನ್ನು ತಾಳಿ ಒಂದು ಕಾಲನ್ನು ಮಾನುಷೇತರ ಪರ್ವತದಲ್ಲಿಯೂ (ಭೂಲೋಕದ ಕೊನೆಯವರೆಗೂ) ಮತ್ತೊಂದನ್ನು ಮೇರುಗಿರಿಯ ಮಸ್ತಕದಲ್ಲಿಯೂ (ಸ್ವರ್ಗಲೋಕದಲ್ಲಿಯೂ) ಇಟ್ಟು ಮೂರನೆಯಡಿಗೆ ಸ್ಥಳವಿಲ್ಲದೆ ವಿಜೃಂಭಿಸುತ್ತಿರಲು ಖೇಚರ ಭೂಚರರೆಲ್ಲರೂ ಸೇರಿ ವೀಣಾವಾದ್ಯವನ್ನು ಬಾರಿಸುತ್ತ ಬಂದು ಗೀತದೊಡನೆ ಪ್ರಾರ್ಥಿಸಿ ನಮಸ್ಕರಿಸಲು ವಿಷ್ಣುಕುಮಾರನು ಸಿಟ್ಟನ್ನು ಬಿಟ್ಟನು. ಆ ಕಾಲದಲ್ಲಿ ದೇವತೆಗಳು ವಿದ್ಯಾಧರರಿಗೆಲ್ಲ ಘೋಷೆ, ಸುಘೋಷೆಯೆಂಬ ಎರಡು ವೀಣೆಗಳನ್ನು, ಭೂಮಿಗೋಚರರಿಗೆ ಮಹಾಘೋಷೆ, ಘೋಷವತಿ ಎಂಬ ಎರಡು ವೀಣೆಗಳನ್ನು ಕೊಟ್ಟರು. ಮೂರಡಿ ನೆಲವು ತನಗೆ ಸಿಕ್ಕದಿರಲು ವಿಷ್ಣುಕುಮಾರನು ಬಲಿಯನ್ನು ಕಟ್ಟಿ ಮುನಿಗಳಿಗೆ ಉಂಟಾದ ತೊಂದರೆಯನ್ನು ನಿವಾರಿಸಿದನು. ಅನಂತರ ಪದ್ಮರಥನು ಬಲಿಯನ್ನು ಕೊಲ್ಲಲು ಹೋದಾಗ ವಿಷ್ಣುಕುಮಾರನು ಅದನ್ನು ತಡೆದು ಬಲಿಗೆ ಜಿನದೀಕ್ಷೆ ಕೊಡಿಸಿದನು.
ಗುಣಭದ್ರಾಚರ್ಯರ ಉತ್ತರಪುರಾಣದ ಕಥೆಯನ್ನೇ ಕರ್ಣಪರ್ಯನು ಅನುಸರಿಸಿದ್ದರೂ ಅನೇಕ ಕಡೆ ವ್ಯತ್ಯಾಸಗಳಿವೆ. ಕರ್ಣಪರ್ಯನ ಒಟ್ಟಾರೆ ಕೃತಿಯ ಕಥಾಮಾರ್ಗ ಹರಿವಂಶಪುರಾಣದ್ದೇ ಆಗಿದೆ. ಜೊತೆಗೆ ಹರಿವಂಶಪುರಾಣದಂತೆ ಇಲ್ಲಿಯೂ ವೈದಿಕ ಮೂಲದ ಕಥಾಂಶಗಳನ್ನು ಕರ್ಣಪರ್ಯನು ಹದವರಿತು ಬಳಸಿಕೊಂಡಿದ್ದಾನೆ. ಅಂಕಿತನಾಮಗಳ ಬಳಕೆಯಲ್ಲಿ ಹರಿವಂಶಪುರಾಣ-ಉತ್ತರಪುರಾಣ ಎರಡರ ಅನುಸರಣೆಯೂ ಕಂಡುಬರುತ್ತದೆ. ಕರ್ಣಪರ್ಯನ ಕಥಾಮಾರ್ಗ ಹರಿವಂಶಪುರಾಣದ್ದೇ ಆದರೂ ಎಷ್ಟೋ ಕಡೆ ನಮಗಿಂದು ಅಲಭ್ಯವಾಗಿರುವ ಆಕರಗಳನ್ನು ಕೂಡ ಬಳಸಿರುವುದು ತೌಲನಿಕ ಅಧ್ಯಯನದಿಂದ ತಿಳಿದುಬಂದಿದೆ. ವಾಮನೋಪಾಖ್ಯಾನಕ್ಕೆ ಸಂಬಧಿಂಸಿದ ಎರಡು ಪದ್ಯಗಳನ್ನು ಕೆಳಗೆ ನೀಡಲಾಗಿದೆ.
ಈವುದುಮಂಬರಾಂತರಮನೆಯ್ದುವಿನಂ ತನುವಂ ವಿಗುರ್ವಿಸಿ
ರ್ದಾ ವಿಭು ಕಾಂಚನಾದ್ರಿಶಿಖರಕ್ಕಿರದೊಂಡಡಿಯಿಟ್ಟು ಮತ್ತ ಮ
ತ್ತೋವದೆ ಮಾನುಷೋತ್ತರಗಿರೀಂದ್ರದೊಳೊಂದಡಿಯಿಟ್ಟು
ಪೇೞಿಮು
ರ್ವೀವರ ಭೂಮಿಯಿಲ್ಲಡಿಯಿಡಲ್ಕೆನುತಾತನ ಮೇಲೆ
ಲೀಲೆಯಿಂ ||೫-೨೩||
ಇಡೆ ಕಾಲಂ ಬಲಿ ಸಿಲ್ಕಿ ಪಲ್ಗಿಱಿದು ಕಣ್ಪೋತಂದು
ಸುಯ್ಗೆಟ್ಟು ಸೀ
ರ್ಪಡಿಸುತ್ತಿರ್ದ ಧರಾಮರರ್ ನಡುಗೆ ಬಿೞ್ದೆಲ್ಲಂ ಶರಣ್
ದೇವ ನಿ
ಮ್ಮಡಿಯೆಂದಿರ್ಪುದುಮಾಗಳಂಬರದಿನಾ
ದೇವರ್ಕಳೆಯ್ತಂದು ಕಂ
ಡುಡುಗಿಂ ಪಾದಮನಿಂದಯೋದ್ಯ ನಿಮಗಿಂತೀ
ಕ್ಷುದ್ರನೊಳ್ ರೌದ್ರಮೇಂ ||೫-೨೪||
ನೇಮಿಚಂದ್ರನು ಉತ್ತರಪುರಾಣದ ಕಥಾಮಾರ್ಗವನ್ನು ಅನುಸರಿಸಿದ್ದರೂ ಅನೇಕ ಕಡೆ ಕೆಲವು ವ್ಯತ್ಯಾಸಗಳನ್ನು ಮಾಡಿಕೊಂಡಿದ್ದಾನೆ. ಎಷ್ಟೋ ಕಡೆ ಉತ್ತರಪುರಾಣದ ವಿವರಗಳನ್ನು ಉತ್ತಮಪಡಿಸಿದ್ದಾನೆ. ನೇಮಿಚಂದ್ರನ ಕಾವ್ಯದಲ್ಲಿನ ಬಲಿ-ವಾಮನೋಪಾಖ್ಯಾನವು ಸೊಗಸಾದ ಸನ್ನಿವೇಶವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಎರಡು ಪದ್ಯಗಳನ್ನು ಕೆಳಗೆ ನೀಡಲಾಗಿದೆ.
ಒಗೆಯೆ ಕವಿಲ್ತ ಕಾಸೆ ಪೊಸಜನ್ನಿವರಂ ಶಿಖಿ ಕೋವಣಂ ಕರಂ
ಡಗೆ ಕಿಸುವೊನ್ನ ಬಟ್ಟಗೊಡೆ ಬಾರಸನಾಮದ ಬೊಟ್ಟು
ಕೊಪ್ಪಿನೊಳ್
ನೆಗೆದ ಕುಶಾಂಕುರಂ ಮಿಸುಪ ಮುಂಜಿ ಪಲಾಶದ ದಂಡ
ಕುಂಡಳಂ
ಬಗೆವುಗೆ ಬಂದನಂದು ಬಲಿಯಲ್ಲಿಗೆ ವಾಮನನಾಗಿ
ಕಾಮದಂ || ೬-೨೪ ||
ಮರನಂ ಮುಟ್ಟಿದನಿಲ್ಲ ಮೇಘಘಟೆಯೊಳ್
ಕಾಲ್ಕೋದನಿಲ್ಲಿಲ್ಲ ಭೂ
ಧರಮಂ ದಾಂಟಿದನಿಲ್ಲ ಬಾಚಿದೊಱೆಯೊಳಿಟ್ಟಂ
ಕಾಲನಿಲ್ಲಿಲ್ಲ ಭಾ
ಸ್ಕರನಂ ಮಾಯದ ಮಾಣಿ ಸೆಂಡೊದೆದನಾ ಇಲ್ಲೆಂಬಿನಂ
ನೀಡಿದಂ
ತರದಿಂ ಪಾದಮನುರ್ವಿ ಕೊರ್ವಿ ಬಲಿಯಂ ಗೆಲ್ವಾ
ಮನಂ ವಾಮನಂ||೬-೨೭||
ಕರ್ಣಪರ್ಯ-ನೇಮಿಚಂದ್ರ ಇಬ್ಬರು ಕವಿಗಳು ತಮ್ಮ ಪ್ರತಿಭೆಯಿಂದ ಸೊಗಸಾದ ಚಿತ್ರಗಳನ್ನು ಮೂಡಿಸಿದ್ದಾರೆ. ಕರ್ಣಪರ್ಯನಿಗಿಂತ ನೇಮಿಚಂದ್ರ ಕೊಡುವ ಚಿತ್ರಣ ಅದ್ಭುತವಾಗಿದೆ. ಈಗಾಗಲೇ ‘ಕನ್ನಡ ನೇಮಿನಾಥ ಪುರಾಣಗಳ ತೌಲನಿಕ ಅಧ್ಯಯನ’ವೆಂಬ ಕೃತಿಯಲ್ಲಿ ಟಿ.ವಿ. ವೆಂಕಟಾಚಲಶಾಸ್ತ್ರಿ ಅವರು ಈ ಭಾಗವನ್ನು ವಿಸ್ತಾರವಾಗಿ ಅಧ್ಯಯನ ಮಾಡಿ ತೌಲನಿಕವಾಗಿ ಸಾಮ್ಯ, ವ್ಯತ್ಯಾಸಗಳನ್ನು ಗುರುತಿಸಿದ್ದಾರೆ. ಆದ ಕಾರಣ ಹೆಚ್ಚಿನ ವಿಶ್ಲೇಷಣೆಗೆ ಇಲ್ಲಿ ಕೈಹಾಕಲು ಹೋಗಿಲ್ಲ.
ಮಹಾಬಲನ ನೇಮಿನಾಥಪುರಾಣದಲ್ಲಿ ಈ ಭಾಗ ತೀರಾ ಸಂಕ್ಷೇಪವಾಗಿದೆ. ಅಷ್ಟೇ ಅಲ್ಲದೆ ಕೆಲವು ಅಂಶಗಳು ಬಿಟ್ಟುಹೋಗಿವೆಯೇ ಎಂಬ ಅನುಮಾನ ಮೂಡುತ್ತದೆ. ಈ ಕೃತಿಯಲ್ಲಿ ಗದ್ಯ, ಪದ್ಯಗಳು ತ್ರುಟಿತವಾಗಿರುವ ಸಾಧ್ಯತೆಯೂ ಇದೆ. ಸಾಳ್ವ, ಮಂಗರಸರ ಕೃತಿಗಳಿಗೆ ಗುಣಭದ್ರಾಚರ್ಯರ ಉತ್ತರಪುರಾಣವೇ ಆಕರವಾಗಿದೆ.
ಯಕ್ಷಗಾನಗಳಲ್ಲಿಯೂ ವಾಮನಾವತಾರವನ್ನು ಕುರಿತಾದ ಸ್ವತಂತ್ರ ರಚನೆಗಳಿವೆ. ಹಲಸಿನಹಳ್ಳಿ ನರಸಿಂಹಶಾಸ್ತ್ರಿ ಎಂಬವರು ವಾಮನ ಚರಿತ್ರೆಯೆಂಬ ಯಕ್ಷಗಾನವನ್ನು ರಚಿಸಿದ್ದಾರೆ. ಇದಕ್ಕೂ ಮೂಲ ಭಾಗವತವೇ ಆಗಿದೆ. ಇದು ೧೯೩೧ ರಲ್ಲಿ ಪ್ರಥಮ ಮುದ್ರಣವನ್ನು ಕಂಡಿದೆ (ನೋಡಿ: ಪ್ರಸಂಗ ವಿಶ್ಲೇಷಣೆ- ಪಾದೇಕಲ್ಲು ವಿಷ್ಣುಭಟ್ಟ, ಸ್ವಾಗತ ಸಮಿತಿ, ಅಖಿಲ ಭಾರತ ೭೪ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಉಡುಪಿ-೨೦೦೭, ಪುಟ ೧೪೬-೧೪೭). ವಾಮನಾವತಾರವನ್ನು ಕುರಿತ ಬಿಡಿ ಪದ್ಯಗಳೂ ಉಂಟು. ಇವೆಲ್ಲವೂ ಬಲುಮಟ್ಟಿಗೆ ದಶಾವತಾರಗಳ ಸ್ತುತಿಯ ಸಂದರ್ಭದಲ್ಲಿ ಕಂಡುಬರುತ್ತವೆ.
ಒಟ್ಟಾರೆಯಾಗಿ ಕೆಲವೊಂದು ಮಾತುಗಳನ್ನು ಕನ್ನಡ ಸಾಹಿತ್ಯದಲ್ಲಿ ಕಂಡುಬರುವ ವಾಮನಾವತಾರದ ಬಗೆಗೆ ಹೇಳಬಹುದು. ಕನ್ನಡ ವೈದಿಕ ಸಾಹಿತ್ಯ ಕೃತಿಗಳಲ್ಲಿ ಚಾಟುವಿಟ್ಠಲನಾಥನ ಭಾಗವತವನ್ನು ಹೊರತು ಮಿಕ್ಕವುಗಳಲ್ಲಿ ಒಂದೊಂದು ಸಾಲಿನಲ್ಲಿ ಕಥಾಂಶ ಸೂಚಿತವಾಗಿದ್ದು ಯಾವುದೇ ವಿಶೇಷವೂ ಕಂಡುಬರುವುದಿಲ್ಲ. ದಾಸಸಾಹಿತ್ಯದಲ್ಲಿ ಮೇಲೆ ಉದಾಹರಿಸಿರುವ ಕಾವ್ಯಗಳನ್ನು ಹೊರತುಪಡಿಸಿ ಇನ್ನಿತರ ಕಾವ್ಯಗಳಲ್ಲಿ, ಯಕ್ಷಗಾನ ಕೃತಿಗಳಲ್ಲಿ, ಸಂಗೀತ ಕೃತಿಗಳಲ್ಲಿ ವಾಮನಾವತಾರದ ಕಥೆ ದಶಾವತಾರಗಳ ಸ್ತುತಿ ಸಂದರ್ಭದಲ್ಲಿ ಬಂದಿದೆ. ದಾಸಶ್ರೇಷ್ಠರು ತಮ್ಮ ಕೀರ್ತನೆಗಳಲ್ಲಿ ಈ ಕಥಾಂಶವನ್ನು ಬಹಳವಾಗಿ ತಂದಿರುವುದುಂಟು. ಆದರೆ ಎಲ್ಲವೂ ಒಂದು ಸಾಲಿನ ಉಲ್ಲೇಖಗಳೇ ಆಗಿವೆ. ಸಂಪ್ರದಾಯದ ಹಾಡುಗಳಲ್ಲಿಯೂ ಇದೇ ರೀತಿ ಉಲ್ಲೇಖಗಳು ಕಂಡುಬರುತ್ತವೆ {ಸಂಪ್ರದಾಯದ ಹಾಡುಗಳ ವಿವರಗಳಿಗೆ ನೋಡಿ: ಹೃದಯ ಸಂಪುಟ – ವಾಗೀಶ್ವರಿ ಶಾಸ್ತ್ರಿ, ವಾಗ್ದೇವಿ ಕಲಾ ನಿಕೇತನ, ಬೆಂಗಳೂರು-೨೦೦೮, ದ್ವಿಮು; ಅಮ್ಮ ಹಾಡಿದ ಸಂಪ್ರದಾಯದ ಹಾಡುಗಳು-(ಸಂಗ್ರಹ) ಸುಬ್ಬಲಕ್ಷಮ್ಮಾ ಅವಧಾನಿ, (ಸಂ) ಎಸ್. ಜಗನ್ನಾಥ, ತನು ಮನು ಪ್ರಕಾಶನ, ಮೈಸೂರು-೨೦೧೩}. ಜೈನಸಾಹಿತ್ಯ ಕೃತಿಗಳಲ್ಲಿ ಕಂಡುಬರುವ ಕಥೆ ಬೇರೆಯೇ ಆಗಿದ್ದು ಅಲ್ಲಿಯೂ ಎರಡು ಕಥಾಮಾರ್ಗಗಳು ಕಂಡುಬರುತ್ತವೆ. ಕನ್ನಡ ಕವಿಗಳು ಈ ಎರಡು ಕಥಾಮಾರ್ಗಗಳನ್ನೂ ಲಕ್ಷಿಸಿದ್ದಾರೆ. ಅನೇಕ ಕಡೆಗಳಲ್ಲಿ ಮೂಲಕ್ಕಿಂತ ಹೆಚ್ಚು ಸೊಗಸಾದ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ. ಸಂಸ್ಕೃತ ಮೂಲದ ಜೈನ ಆಕರಗಳಲ್ಲಿಯೂ ವೈದಿಕ ಕಥಾಮೂಲದ ಅನುಸರಣೆ ಕಂಡುಬರುತ್ತಿದ್ದು ಇದನ್ನೇ ಕನ್ನಡ ಕವಿಗಳು ವೈದಿಕ-ಜೈನ ಎಂಬ ಎರಡೂ ವಾಹಿನಿಗಳನ್ನು ಹದವರಿತು ಬೆರೆಸಿ ತಮ್ಮ ಕಾವ್ಯಗಳನ್ನು ರಚಿಸಿದ್ದಾರೆ. ಇದರಿಂದಾಗಿ ಕಾವ್ಯದ ಸೊಗಸು ಕೆಲಮಟ್ಟಿಗೆ ಹೆಚ್ಚಾಗಿದೆ. ಜೈನ-ವೈದಿಕ ಕಥಾಮೂಲಗಳ ಅಧ್ಯಯನಕ್ಕೆ ಬಲಿ-ವಾಮನೋಪಾಖ್ಯಾನದಂತಹ ಪ್ರಸಂಗಗಳು ಹೆಚ್ಚಿನ ನೆರವು ನೀಡುತ್ತವೆ. ಇದರಿಂದ ವೈದಿಕ-ಜೈನ ಪಾಠಗಳ ಮೂಲ ಸ್ವರೂಪ ತಿಳಿದುಬರುತ್ತದೆ. ಪಾಠಪರಿಷ್ಕರಣಕ್ಕೂ ಸಹಾಯವಾಗುತ್ತದೆ. ಪ್ರಕೃತ ಲೇಖನದಲ್ಲಿ ಕನ್ನಡ ಸಾಹಿತ್ಯದಲ್ಲಿ ವಾಮನಾವತಾರದ ಉಲ್ಲೇಖಗಳ ಬಗೆಗೆ ಲಭ್ಯವಿರುವ ಸಾಮಗ್ರಿಯನ್ನು ಬಳಸಿಕೊಂಡು ಸಂಕ್ಷಿಪ್ತ ಸಮೀಕ್ಷೆಯನ್ನು ಮಾಡಲಾಗಿದೆ. ವೈದಿಕ-ಜೈನ ಕಥಾಂಶವನ್ನು ಸಂಸ್ಕೃತ ಮೂಲಗಳಿಂದ ಸಂಗ್ರಹಿಸಿ ಕೊಡಲಾಗಿದೆ. ಇವುಗಳಿಗೆ ಭಿನ್ನ ಪಾಠಗಳೂ ಕಂಡುಬರುತ್ತವೆ. ಈ ಕಥಾಸಂಗ್ರಹ ಅನಿವರ್ಯವಾಗಿ ಪೂರ್ಣ ಸಮರ್ಪಕವಾಗಿ ಮೂಡಿಬಂದಿಲ್ಲದೆ ಇರಬಹುದು (ಈ ಕಥಾಸಂಗ್ರಹದಲ್ಲಿ ಪಾರಿಭಾಷಿಕ ಶಬ್ದಗಳನ್ನು ಹೆಚ್ಚು ಬಳಸದಿದ್ದರೂ ಅನಿವರ್ಯವಾಗಿ ಒಂದೆರಡು ಕಡೆ ಇರುವ ಶಬ್ದಗಳನ್ನು ವಿವರಿಸಲು ಹೋಗಿಲ್ಲ) ಈಗಾಗಲೇ ಈ ವಿಷಯದ ಮೇಲೆ ತೌಲನಿಕ ಅಧ್ಯಯನ ನಡೆದಿರುವುದರಿಂದ ಇಲ್ಲಿ ಯಥಾಶಕ್ತಿಯಾಗಿ ಮಾಹಿತಿಯನ್ನು ಮಾತ್ರ ದಾಖಲಿಸಲು ಪ್ರಯತ್ನಿಸಲಾಗಿದೆ. ನಮ್ಮ ಬರಹದಲ್ಲಿ ಕೆಲವೊಂದು ಲೋಪದೋಷಗಳೂ ಇರಬಹುದು. ಬಲ್ಲವರು ಇವುಗಳನ್ನು ತಿದ್ದಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಇದೇ ರೀತಿಯಾಗಿ ಮಾಹಿತಿಯನ್ನು ಇನ್ನೂ ಬೃಹತ್ ಪ್ರಮಾಣದಲ್ಲಿ ಸಂಕಲಿಸಿದರೆ ವಾಮನಾವತಾರದ ಬಗೆಗೆ ವಿಶ್ವಕೋಶರೂಪದ ಕೃತಿಯನ್ನು ಪ್ರಕಟಿಸಬಹುದು. ಇದು ಆದಷ್ಟು ಜಾಗ್ರತೆಯಾಗಿ ನಡೆಯಲೆಂದು ಹಾರೈಸುತ್ತೇವೆ.