ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾಗಾಂಧಿ ಮಾಡಿದ ಅನ್ಯಾಯ-ಅತ್ಯಾಚಾರಗಳು, ಯಾವುದೇ ಸರ್ವಾಧಿಕಾರಿಗಳ ಕ್ರೂರತನವನ್ನು ಮೀರಿಸಿ ನಿಂತಿವೆ. ನಿರಂಕುಶ ಆಡಳಿತ, ನಾಗರಿಕರ ಹಕ್ಕುಗಳ ಅಪಹರಣ, ಪತ್ರಿಕೆಗಳ ಮೇಲೆ ಪ್ರತಿಬಂಧ, ಲಕ್ಷಾಂತರ ಜನರಿಗೆ ಸೆರೆಮನೆವಾಸ, ಪೊಲೀಸರ ಅನಾಗರಿಕ ವರ್ತನೆ, ಅಧಿಕಾರಿಗಳ ದುರಾಡಳಿತ, ಭ್ರಷ್ಟಾಚಾರ – ಒಂದೇ ಎರಡೇ! ಇಂತಹ ಅನೇಕ ಪ್ರಕರಣಗಳ ಕ್ರೂರ ಇತಿಹಾಸವೇ ತುರ್ತುಪರಿಸ್ಥಿತಿ ಎಂದು ಹೇಳಬಹುದು.
ಸಂಜಯಗಾಂಧಿ, ಪ್ರಧಾನಮಂತ್ರಿಯ ಪುತ್ರ ಎಂಬ ಅರ್ಹತೆಯೊಂದನ್ನು ಬಿಟ್ಟರೆ ಇವರಿಗೆ ಬೇರೆ ಯಾವ ಅರ್ಹತೆಗಳೂ ಇರಲಿಲ್ಲ. ಬಾಲ್ಯದಿಂದ ಸ್ವಚ್ಛಂದ ವಾತಾವರಣದಲ್ಲಿ ಬೆಳೆದ ಇವರು ಅಶಿಸ್ತು ಮತ್ತು ಅವಿಧೇಯತೆಯನ್ನು ಮೈಗೊಂಡಿಸಿಕೊಂಡವರು. ಯುವಕಾಂಗ್ರೆಸ್ಸಿನ ನೇತೃತ್ವವನ್ನು ವಹಿಸಿಕೊಂಡ ಮೇಲೆ ಸಂಜಯಗಾಂಧಿ ಒಂದು ಸಂವಿಧಾನೇತರ ಶಕ್ತಿಯಾಗಿ ಬೆಳೆದರು. ಸರ್ಕಾರದ ಹಿರಿಯ ಅಧಿಕಾರಿಗಳು, ಪಕ್ಷದ ನಾಯಕರು, ರಾಜ್ಯಗಳ ಮುಖ್ಯಮಂತ್ರಿಗಳು, ಎಲ್ಲರೂ ಇವರ ಆಜ್ಞಾಧಾರಕರಾಗಿದ್ದರು. ಸಂಜಯಗಾಂಧಿ ರಕ್ಷಣಾಪಡೆಗಳಿಗೆ ಸೇರಿದ ಹೆಲಿಕಾಪ್ಟರ್ನಲ್ಲಿ ಹಾರಾಡುತ್ತ ದೇಶದಾದ್ಯಂತ ಸಂಚಾರ ಮಾಡುತ್ತಿದ್ದರು. ಇವರ ಮಾರ್ಗದರ್ಶನದಲ್ಲಿ ನಡೆದ ಸಂತಾನಹರಣ ಶಸ್ತçಚಿಕಿತ್ಸೆಯ ಶಿಬಿರಗಳು ಯಾತನಾ ಶಿಬಿರಗಳೆಂದು ಕರೆಯಲ್ಪಟ್ಟಿವೆ. ಸಾವಿರಾರು ಜನ ಈ ಬಲಾತ್ಕಾರದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಅಪಾರ ನೋವನ್ನು ಅನುಭವಿಸಿದರು.
ಅಪಾಯಕಾರಿಯಾದ ಒಂದು ಕೆಲಸದಲ್ಲಿ ತೊಡಗುವುದಕ್ಕೆ ಜನರ ಆಡುಮಾತಿನಲ್ಲಿ ಹುಲಿಸವಾರಿಯ ಒಂದು ರೂಪಕವಿದೆ. ಇದು ಅಪಾಯಕಾರಿ. ಮುಂದಕ್ಕೆ ಹೋಗುತ್ತಿದ್ದರೂ ಕ್ಷಣಕ್ಷಣವೂ ಭಯ ತಪ್ಪಿದ್ದಲ್ಲ. ಆದರೆ ಇಳಿದು ಪಾರಾಗುವಂತಿಲ್ಲ; ಇಳಿಯುತ್ತಲೇ ಹುಲಿ ಮೈಮೇಲೆ ಹಾರಿ ಕೊಂದು ತಿಂದುಬಿಡುತ್ತದೆ. ಅಂದಿನ ಪ್ರಧಾನಿ ಇಂದಿರಾಗಾಂಧಿಯವರಿಗೆ ತುರ್ತುಪರಿಸ್ಥಿತಿ ಅಂಥದೇ ಒಂದು ಇಕ್ಕಟ್ಟಿನ ಸನ್ನಿವೇಶವನ್ನು ತಂದಿಟ್ಟಿತೆನ್ನಬಹುದು. ಸಮಸ್ಯೆ ಎದುರಾದದ್ದು ಅವರ ಅಧಿಕಾರಕ್ಕೆ. ನ್ಯಾಯಾಲಯದ ತೀರ್ಪಿನಂತೆ ಅವರು ನಡೆದುಕೊಂಡಿದ್ದಿದ್ದರೆ ಈ ತುರ್ತುಪರಿಸ್ಥಿತಿಯ ಅಗತ್ಯವೇ ಇರಲಿಲ್ಲ. ತಮ್ಮ ಕುರ್ಚಿಗೆ ಎದುರಾದ ಆಪತ್ತನ್ನು ಅವರು ದೇಶಕ್ಕೆ, ದೇಶದ ಭದ್ರತೆಗೆ ಎದುರಾದ ಆಂತರಿಕ ಮತ್ತು ಬಾಹ್ಯ ಅಪಾಯ ಎಂಬಂತೆ ವ್ಯಾಖ್ಯಾನಿಸಿ ಅತ್ಯಂತ ಕಠಿಣ ಕ್ರಮಕ್ಕೆ ಮುಂದಾದರು. ಅದೇ ಅವರಿಗೊಂದು ಹುಲಿಸವಾರಿಯಾಗಿ ಪರಿಣಮಿಸಿತು.
ತೀವ್ರ ಸ್ವರೂಪದ ತುರ್ತುಪರಿಸ್ಥಿತಿಯ ಹೇರಿಕೆಗೆ ಸಮರ್ಥನೆಯಾಗಿ ದೇಶದ ಅಭಿವೃದ್ಧಿಗೆ ಪರವಾದ ಕೆಲವಾದರೂ ಕ್ರಮಗಳನ್ನು ತೋರಿಸಬೇಕಿತ್ತು. ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ದೇಶದ ಬಹುಭಾಗದಲ್ಲಿ ಚಳವಳಿಯಲ್ಲಿ ತೊಡಗಿದವರು ಅಭಿವೃದ್ಧಿಕಾರ್ಯಗಳ ವಿರೋಧಿಗಳು; ಅಶಿಸ್ತನ್ನು ಹಬ್ಬಿಸುವವರು; ಅದಕ್ಕಾಗಿ ದೇಶದಲ್ಲಿ ಶಿಸ್ತು-ಅನುಷ್ಠಾನಗಳಿಗೆ ಪರವಾದ ‘ಅನುಶಾಸನಪರ್ವ’ವನ್ನು ತರಬೇಕು – ಎನ್ನುವುದು ತುರ್ತುಪರಿಸ್ಥಿತಿಗೆ ಅವರು ನೀಡಿದ ಒಂದು ದೊಡ್ಡ ‘ಸಮರ್ಥನೆ’. ಆಗ ಕೈಗೆತ್ತಿಕೊಂಡ ಅಭಿವೃದ್ಧಿಗೆ ಪರವಾದ ಒಂದು ಕಾರ್ಯಕ್ರಮವೇ ಕುಟುಂಬಯೋಜನೆ. ಪ್ರತಿ ಕುಟುಂಬದಲ್ಲಿ ಮಕ್ಕಳ ಸಂಖ್ಯೆಯನ್ನು ನಿಯಂತ್ರಿಸುವ ಮೂಲಕ ದೇಶದ ಜನಸಂಖ್ಯೆಯನ್ನು ತಹಬಂದಿಗೆ ತರುವುದೇ ಆಗ ವಿಶೇಷ ಒತ್ತು ನೀಡಿದ ಕಾರ್ಯಕ್ರಮವಾಗಿತ್ತು.
ಕುಟುಂಬಯೋಜನೆ – ಶಸ್ತ್ರಕ್ರಿಯೆ
ದೇಶದಲ್ಲಿ ಅದೇನೂ ಹೊಸ ಕಾರ್ಯಕ್ರಮವಾಗಿರಲಿಲ್ಲ. ಕುಟುಂಬಯೋಜನೆ ಮೊದಲೇ ಇತ್ತು. ಜನರ ಮನವೊಲಿಸುವ ಮೂಲಕ ಜನಸಂಖ್ಯಾ ನಿಯಂತ್ರಣದ ಕ್ರಮಗಳನ್ನು ಅನುಸರಿಸಲಾಗುತ್ತಿತ್ತು. ಅದರಿಂದ ತುಂಬಾ ಹೆಚ್ಚಿನ ಪ್ರಗತಿ ಆಗಿರಲಿಲ್ಲ ಎಂಬುದು ಸತ್ಯ. ಆ ನಿಟ್ಟಿನಲ್ಲಿ ಇಂದಿಗೆ ಹೋಲಿಸಿದರೆ ೧೯೭೦ರ ದಶಕದ ಮಧ್ಯಭಾಗದ ಆ ಹೊತ್ತಿನಲ್ಲಿ ಪರಿಸ್ಥಿತಿ ತುಂಬಾ ಭಿನ್ನವಾಗಿತ್ತು. ಈಗ ನಾವು ಸಾಮಾನ್ಯವಾಗಿ ಪ್ರತಿ ಕುಟುಂಬದಲ್ಲಿ ಒಂದು ಅಥವಾ ಎರಡೇ ಮಕ್ಕಳನ್ನು ಕಂಡರೆ ಆಗ ಒಂದು ದಂಪತಿಗೆ ಮೂರು-ನಾಲ್ಕು ಮಕ್ಕಳಿರುವುದು ಸಾಮಾನ್ಯವಾಗಿತ್ತು. ಬಹಳಷ್ಟು ಸಂದರ್ಭಗಳಲ್ಲಿ ಅವಿದ್ಯಾವಂತ ವರ್ಗಗಳಲ್ಲಿ ಮತ್ತು ಗ್ರಾಮೀಣಪ್ರದೇಶಗಳಲ್ಲಂತೂ ಕುಟುಂಬದ ಮಕ್ಕಳ ಸಂಖ್ಯೆ ಇನ್ನೂ ಜಾಸ್ತಿ ಇರುವುದು ಕೂಡ ಇತ್ತು. ತುರ್ತುಪರಿಸ್ಥಿತಿಯಲ್ಲಿ ಅದಕ್ಕೆ ಒಮ್ಮೆಗೇ ತಡೆಹಾಕಲು ಪ್ರಯತ್ನಿಸಲಾಯಿತು. ಜನ ಸ್ವಂತ ಇಚ್ಛೆಯಿಂದ ಅಂತಹ ಕ್ರಮಗಳಿಗೆ ಮುಂದಾಗಬೇಕು; ಮನವೊಲಿಕೆ ಇತ್ಯಾದಿಯಿಂದ ಅದು ನಡೆಯಬೇಕು ಎಂಬ ದೃಷ್ಟಿ ಬದಿಗೆ ಸರಿದು ಕಡ್ಡಾಯ, ಬಲಪ್ರಯೋಗಗಳು ಮುನ್ನೆಲೆಗೆ ಬಂದವು. ಕುಟುಂಬಯೋಜನೆ ಎಂದರೆ ಪತಿ ಅಥವಾ ಪತ್ನಿ ಶಸ್ತ್ರಕ್ರಿಯೆಗೆ ಒಳಪಡುವುದು ಎಂದಾಯಿತು. ಈ ರೀತಿಯಲ್ಲಿ ಅದಕ್ಕೆ ಅಮಾನವೀಯತೆಯ ಸ್ವರೂಪವೇ ಬಂದುಬಿಟ್ಟಿತು. ಮಾತ್ರವಲ್ಲ, ತುರ್ತುಪರಿಸ್ಥಿತಿಯ ಸಂದರ್ಭದ ಅತ್ಯಂತ ಅಮಾನವೀಯ ಚಟುವಟಿಕೆಗಳಲ್ಲಿ ಕುಟುಂಬಯೋಜನೆಯ ಶಸ್ತ್ರಕ್ರಿಯೆಗಳು ಸ್ಥಾನ ಪಡೆದುಕೊಂಡವು. ಶಸ್ತ್ರಕ್ರಿಯೆಗಳ ಸಂಖ್ಯೆ ನಿಗದಿಪಡಿಸುವುದು, ಯಾವುದಾದರೂ ರೀತಿಯಲ್ಲಿ ಅದನ್ನು ಸಾಧಿಸುವುದು ದೇಶಾದ್ಯಂತ ಮಾಮೂಲಾಯಿತು. ಆ ದಿನಗಳಲ್ಲಿ ಸರ್ಕಾರೀ ನೌಕರರಿಗೆ ಅದೇ ಪ್ರಧಾನ ಕೆಲಸ ಆಯಿತೆಂದರೆ ತಪ್ಪಲ್ಲ; ಅವಿವಾಹಿತರಿಗೂ ಶಸ್ತ್ರಕ್ರಿಯೆಗಳು ನಡೆದವು.
ಶಾ ಆಯೋಗಕ್ಕೆ ಲಭಿಸಿದ ಕೆಳಗಿನ ಒಂದು ಮಾಹಿತಿ ಆ ಅಮಾನವೀಯ ಸನ್ನಿವೇಶಕ್ಕೆ ಸಾಕ್ಷಿ ಹೇಳುತ್ತದೆ. ‘ಅವಿವಾಹಿತರಿಗೆ ಕುಟುಂಬಯೋಜನೆಯ ಎಷ್ಟು ಶಸ್ತ್ರಕ್ರಿಯೆಗಳು ನಡೆದವು?’ ಎಂಬ ಪ್ರಶ್ನೆಗೆ ‘ದೇಶದಲ್ಲಿ ಅಂತಹ ೫೪೮ ಶಸ್ತ್ರಕ್ರಿಯೆಗಳು (೧೯೭೫-೭೬) ನಡೆದವು’ ಎಂಬ ಮಾಹಿತಿ ದೊರೆಯಿತು. ರಾಜ್ಯವಾರಾಗಿ ಅದು ಹೀಗಿದೆ – ಉತ್ತರಪ್ರದೇಶ-೧೬೪, ಹರ್ಯಾಣಾ-೧೦೫, ಮಧ್ಯಪ್ರದೇಶ-೮೪, ರಾಜಸ್ಥಾನ-೪೪, ಮಹಾರಾಷ್ಟ್ರ-೩೭, ದೆಹಲಿ-೩೨, ಬಿಹಾರ-೩೦, ಅಸ್ಸಾಂ-೨೧, ಪಂಜಾಬ್-೧೫, ಗುಜರಾತ್-೫, ಪಶ್ಚಿಮಬಂಗಾಳ-೫, ಹಿಮಾಚಲಪ್ರದೇಶ-೩, ಒಡಿಸ್ಸಾ-೧, ಗೋವಾ, ಡಾಮನ್, ದಿಯು-೧ ಮತ್ತು ಪಾಂಡಿಚೇರಿ-೧. ತಮಿಳುನಾಡು ಆ ಮಾಹಿತಿ ನೀಡಲಿಲ್ಲ; ಉಳಿದ ರಾಜ್ಯಗಳೂ ಕೇಂದ್ರಾಡಳಿತ ಪ್ರದೇಶಗಳು ‘ಒಂದೂ ಇಲ್ಲ’ ಎಂದು ತಿಳಿಸಿದವು.
ಈ ಶಸ್ತçಕ್ರಿಯೆಗಳನ್ನು ನಡೆಸುವುದಕ್ಕೆ ಬಹಳಷ್ಟು ಕಡೆ ಮೂಲ ಸವಲತ್ತಿನ ಕೊರತೆಯಿತ್ತು. ಅದರಿಂದಾಗಿ ಶಸ್ತ್ರಕ್ರಿಯೆಯ ಅನಂತರ ಸೂಕ್ತ ಚಿಕಿತ್ಸೆ, ಉಪಚಾರ ನೀಡುವಲ್ಲಿ ಲೋಪದೋಷಗಳಾಗಿ ಅದರಿಂದಲೇ ಅನೇಕರು ಮೃತಪಟ್ಟರು. ಆ ವಿವರ ಹೀಗಿದೆ: ದೇಶದಲ್ಲಿ ಒಟ್ಟು ಸಾವು ೧೭೭೪. ರಾಜಸ್ಥಾನ – ೨೧೭, ಉತ್ತರಪ್ರದೇಶ- ೨೦೧, ಮಹಾರಾಷ್ಟ್ರ – ೧೫೧, ಆಂಧ್ರಪ್ರದೇಶ – ೧೩೫, ಹರ್ಯಾಣಾ – ೧೩೨, ಮಧ್ಯಪ್ರದೇಶ – ೧೩೨, ಕರ್ನಾಟಕ- ೧೨೩, ಅಸ್ಸಾಂ – ೯೫, ತಮಿಳುನಾಡು – ೯೦, ಬಿಹಾರ- ೮೦, ದೆಹಲಿ – ೭೮, ಗುಜರಾತ್ – ೬೮, ಒಡಿಸ್ಸಾ- ೬೮, ಪಶ್ಚಿಮಬಂಗಾಳ – ೬೫, ಹಿಮಾಚಲಪ್ರದೇಶ – ೬೦, ಕೇರಳ – ೪೦, ಪಂಜಾಬ್ – ೨೯, ಜಮ್ಮು-ಕಾಶ್ಮೀರ – ೨, ತ್ರಿಪುರಾ – ೨, ಗೋವಾ, ಡಾಮನ್, ದೀಯು – ೨, ಪಾಂಡಿಚೇರಿ – ೨, ಛತ್ತೀಸ್ಗಢ – ೧ ಮತ್ತು ಮಿಜೋರಾಂ – ೧. ಅದೇ ರೀತಿ ೫೫ ವರ್ಷ ದಾಟಿದವರಿಗೆ ಕುಟುಂಬಯೋಜನೆ ಶಸ್ತ್ರಕ್ರಿಯೆ ನಡೆಸಿದ ವಿವರಗಳನ್ನು ಕೂಡ ಶಾ ಆಯೋಗ ದಾಖಲಿಸಿದೆ.
ಹೊಣೆ ರಾಜ್ಯಗಳಿಗೆ
“ಭಾರತದಲ್ಲಿ ಕುಟುಂಬಯೋಜನೆಯನ್ನು ಕೇಂದ್ರ-ಬೆಂಬಲಿತ ಕಾರ್ಯಕ್ರಮವಾಗಿ ರಾಜ್ಯಸರ್ಕಾರಗಳು ಜಾರಿ ಮಾಡುತ್ತವೆ. ಅದಕ್ಕೆ ನೂರಕ್ಕೆ ನೂರು ಕೇಂದ್ರದ ನೆರವು (ಅನುದಾನ) ಇರುತ್ತದೆ. ಒಟ್ಟಾರೆ ನೀತಿಯ (ಪಾಲಿಸಿ) ಮಾರ್ಗದರ್ಶನಕ್ಕೆ ಕೇಂದ್ರಸರ್ಕಾರದ ಸಹಕಾರ ಇರುತ್ತದೆ. ನಿಜವಾದ ಜಾರಿಯ ಹೊಣೆ ರಾಜ್ಯಗಳದ್ದು” ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಯೋಗಕ್ಕೆ ತಿಳಿಸಿತು. ದೇಶದಲ್ಲಿ ೧೯೭೬-೭೭ರ ಸಾಲಿಗೆ ೪೩ ಲಕ್ಷ ಶಸ್ತçಕ್ರಿಯೆಗಳ (ವ್ಯಾಸೆಕ್ಟಮಿ ಮತ್ತು ಟ್ಯುಬೆಕ್ಟಮಿ ಸೇರಿ) ಗುರಿ ಇರಿಸಿಕೊಳ್ಳಲಾಗಿತ್ತು. ರಾಜ್ಯಗಳು ಕೂಡ ಸಾಧ್ಯವಾದಷ್ಟು ಎತ್ತರದ ಗುರಿ ಇರಿಸಿಕೊಳ್ಳಬೇಕಿತ್ತು. ಅದೇ ರೀತಿ ಕೇಂದ್ರಸರ್ಕಾರ ರಾಜ್ಯಗಳಿಗೆ ಅತಿರೇಕ (Excess) ಮಾಡಬಾರದೆಂದು ಹೇಳುತ್ತಲೇ ಇತ್ತು. ಇದು ಹೇಗಿತ್ತೆಂದರೆ ಪಕ್ಕಾ ‘ಮಗುವಿಗೆ ಚಿವುಟುವುದು ಮತ್ತು ತೊಟ್ಟಿಲು ತೂಗುವುದು’ ಎರಡನ್ನೂ ಮಾಡುವಂತಿತ್ತು; ದೊಡ್ಡ ಗುರಿ ಇರಿಸಿ ಹೆಚ್ಚುಹೆಚ್ಚು ಶಸ್ತçಕ್ರಿಯೆ ಮಾಡುವಂತೆ ರಾಜ್ಯಸರ್ಕಾರಗಳನ್ನು ಒತ್ತಾಯಿಸುವುದು, ಇನ್ನೊಂದೆಡೆ ಅತಿರೇಕ ಮಾಡಬೇಡಿ ಎಂದು ವೇಗಕ್ಕೆ ಮಿತಿ ಇರಲಿ ಎನ್ನುವುದು ನಿರಂತರವಾಗಿ ನಡೆದೇ ಇತ್ತು. ಈ ರೀತಿ ‘ವೇಗಕ್ಕೆ ಮಿತಿ ಇರಲಿ’ ಎಂದು ಹೇಳುತ್ತಿದ್ದವರಲ್ಲಿ ಪ್ರಧಾನಿ ಇಂದಿರಾಗಾಂಧಿಯವರು ಕೂಡ ಇದ್ದರು. ಅದಕ್ಕೆ ಉದಾಹರಣೆಯಾಗಿ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಗ್ಯಾನ ಪ್ರಕಾಶ್ ಅವರ ನವೆಂಬರ್ ೨೨, ೧೯೭೬ರ ಲಕ್ನೋ ಭೇಟಿಯನ್ನು ಗಮನಿಸಬಹುದು.
ಆಗ ಉತ್ತರಪ್ರದೇಶ ಸರ್ಕಾರ ಆ ಸಾಲಿಗೆ ೧೫ ಲಕ್ಷ ಸಂತಾನಹರಣ ಶಸ್ತ್ರಕ್ರಿಯೆಗಳ ಗುರಿ ಇರಿಸಿಕೊಂಡಿತ್ತು. ಕೇಂದ್ರ ಆರೋಗ್ಯ ಕಾರ್ಯದರ್ಶಿಯವರಿಗೆ ಗಾಬರಿ ಆಯಿತೋ ಏನೋ! ರಾಜ್ಯದ ಮುಖ್ಯ ಕಾರ್ಯದರ್ಶಿ ಮುಂತಾದವರೊಂದಿಗೆ ಚರ್ಚಿಸಿ, “೧೫ ಲಕ್ಷದ ಗುರಿ ಬೇಡ; ನೀವು ಈ ಸಾಲಿಗೆ ೪ ಲಕ್ಷದ ಗುರಿ ಸಾಧಿಸಿದರೆ ಸಾಕು. ಶಸ್ತ್ರಕ್ರಿಯೆ ನಡೆಸುವಲ್ಲಿ ಬಲಪ್ರಯೋಗ ಇರಲೇಬಾರದು” ಎಂದು ಮಾರ್ಗದರ್ಶನ ಮಾಡಿದರು. ಆ ಹೊತ್ತಿಗೆ ಇಲಾಖೆಯ ವಿಶೇಷ ಕಾರ್ಯದರ್ಶಿ ಮತ್ತು ಕಮಿಷನರ್ಗಳು ದೇಶದ ಇತರ ರಾಜ್ಯಗಳಿಗೂ ಅದೇ ರೀತಿ ಸಲಹೆ ನೀಡುತ್ತಿದ್ದರು. ಗುರಿಯನ್ನು (Target) ಏರಿಸುವುದು ಬೇಡ ಎನ್ನುವುದರ ಜೊತೆಗೆ ಶಸ್ತ್ರಕ್ರಿಯೆಯ ಹೊತ್ತಿಗೆ ಮತ್ತು ಅನಂತರ ವೈದ್ಯಕೀಯ ಸೇವೆ, ಉಪಚಾರಗಳು ಒಳ್ಳೆಯದಿರಬೇಕೆಂದು ಕೂಡ ಅವರು ಸೂಚನೆ ಕೊಡುತ್ತಿದ್ದರು. ಇದರಿಂದ ತಿಳಿದುಬರುವ ಮಥಿತಾರ್ಥವೆಂದರೆ, ತುರ್ತುಪರಿಸ್ಥಿತಿ ಜಾರಿಯಾಗಿ ಒಂದು ವರ್ಷ ದಾಟಿರುವ ಆ ಹೊತ್ತಿಗೆ ದೇಶಾದ್ಯಂತ ಸಂತಾನಹರಣ ಶಸ್ತ್ರಕ್ರಿಯೆಗಳು ತುಂಬಾ ವೇಗವಾಗಿ ನಡೆಯುತ್ತಿದ್ದವು; ಅದರ ವೇಗ ಎಷ್ಟಿತ್ತೆಂದರೆ ಈ ಗಾಡಿ ಮುಗ್ಗರಿಸಿ ಏನೋ ದೊಡ್ಡ ಅನಾಹುತಕ್ಕೆ ದಾರಿಯಾಗುತ್ತಿದೆ ಎನ್ನುವ ಕಲ್ಪನೆ ಸಂಬಂಧಪಟ್ಟವರಿಗೆ ಬಂದಿತ್ತು – ಎಂದು ಊಹಿಸಬಹುದು.
ಸರ್ಕಾರದ ನೀತಿ ಹೇಗಿತ್ತು?
ಮುಖ್ಯವಾಗಿ ತುರ್ತುಪರಿಸ್ಥಿತಿಗೆ ಮುನ್ನ ಸರ್ಕಾರದ ನೀತಿ ಏನಾಗಿತ್ತೆಂಬುದನ್ನು ಅಂದಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ|| ಕರಣಸಿಂಗ್ ಅವರ ಏಪ್ರಿಲ್ ೫, ೧೯೭೪ರ ಒಂದು ಹೇಳಿಕೆಯಿಂದ ತಿಳಿಯಬಹುದು: “ಶಸ್ತ್ರಕ್ರಿಯೆಗೆ ಗುರಿಯನ್ನು ನಿಗದಿ ಮಾಡುವುದರಿಂದ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಲು ಅನುಕೂಲವಾಗುತ್ತದೆ. ಜನರು ತಾವಾಗಿಯೇ ಇದನ್ನು ಸ್ವೀಕರಿಸಬೇಕು. ಕಡ್ಡಾಯ ಆಗಿರಬಾರದು. ಇದು ‘ಸ್ವಂತ ಇಚ್ಛೆಯ ಜನರ ಕಾರ್ಯಕ್ರಮ’ ಆಗಿರಬೇಕು. ತಿಳಿವಳಿಕೆ ಮೂಡಿಸುವುದು, ಪ್ರೇರಣೆ ಮತ್ತು ಮನವೊಲಿಕೆಗಳು ನಮ್ಮ ಪ್ರಯತ್ನದ ಒಂದು ಮುಖ. ಸೇವೆಯನ್ನು ಒದಗಿಸುವುದು ಎರಡನೇ ಮುಖ” ಎಂದು ಅವರು ಹೇಳಿದ್ದರು. ಇದು ಸ್ವಂತ ಇಚ್ಛೆಯಿಂದ ಮಾಡುವಂಥದು ಆಗಿತ್ತೆಂಬುದಕ್ಕೆ ಆ ಬಗೆಗಿನ ಒಂದು ಪತ್ರ ಕೂಡ ಸಾಕ್ಷಿಯಾಗಿದೆ. ಆದರೆ ತುರ್ತುಪರಿಸ್ಥಿತಿಯ ವೇಳೆ ಸ್ವಂತ ಇಚ್ಛೆಯದ್ದು ಎಂಬುದು ಬದಲಾಯಿತು.
ಅದು ಯಾವ ರೀತಿ ಬದಲಾಯಿತು ಎಂಬುದನ್ನು ಅಕ್ಟೋಬರ್ ೧೦, ೧೯೭೫ರದು ಡಾ|| ಕರಣಸಿಂಗ್ ಅವರು ಪ್ರಧಾನಿಗೆ ಕಳುಹಿಸಿದ ಒಂದು ಟಿಪ್ಪಣಿಯಿಂದ ತಿಳಿಯಬಹುದು. ಕುಟುಂಬಯೋಜನೆಯನ್ನು ತೀವ್ರಗೊಳಿಸಲು ಚುರುಕಿನ ಕಾರ್ಯಕ್ರಮ (crash programme) ಅಗತ್ಯವೆನಿಸಿದೆ ಎನ್ನುತ್ತ “ಸಮಸ್ಯೆ ಈಗ ಎಷ್ಟು ತೀವ್ರವಾಗಿದೆಯೆಂದರೆ, ದೇಶದ ಒಟ್ಟಾರೆ ಹಿತಾಸಕ್ತಿಯ ದೃಷ್ಟಿಯಿಂದ ಈಗ ಇದಕ್ಕೆ ಸ್ವಲ್ಪ ಕಡ್ಡಾಯದ ಅಂಶವನ್ನು ಸೇರಿಸುವುದು ಅಗತ್ಯವೆನಿಸಿದೆ. ಈ ಹಂತದಲ್ಲಿ ನಾನು ಕಡ್ಡಾಯದ ಮಾತನ್ನು ಆಡುತ್ತಿಲ್ಲ. ಆದರೆ ನಮ್ಮ ನೀತಿಯು ಸರ್ಕಾರದ ದೃಢನಿರ್ಧಾರವನ್ನು ಪ್ರಕಟಿಸುವುದು ಅಗತ್ಯ. ಕುಟುಂಬಗಳಿಗೆ ಜನಸಂಖ್ಯೆ ನಿಯಂತ್ರಣದ ಅಗತ್ಯವನ್ನು ಮನವರಿಕೆ ಮಾಡಬೇಕಾಗಿದೆ. ಪ್ರೋತ್ಸಾಹಕ(ಇನ್ಸೆಂಟಿವ್) ಮತ್ತು ನಿರುತ್ಸಾಹಕ (ಡಿಸ್-ಇನ್ಸೆಂಟಿವ್)ಗಳ ಯೋಗ್ಯ ಮಿಶ್ರಣದಿಂದ ಇದನ್ನು ಸಾಧಿಸಬಹುದು. ಇಂದಿನ ತುರ್ತುಪರಿಸ್ಥಿತಿ ಮತ್ತು ಪ್ರಧಾನಿಯವರು ಇಪ್ಪತ್ತು ಅಂಶಗಳ ಕಾರ್ಯಕ್ರಮವನ್ನು ಘೋಷಿಸಿರುವುದು ಈ ಸಮಸ್ಯೆಯ (ಜನಸಂಖ್ಯೆ ಏರಿಕೆ) ಪರಿಹಾರಕ್ಕೆ ಬೇಕಾದ ಸೂಕ್ತ ವಾತಾವರಣವನ್ನು ನಿರ್ಮಿಸಿವೆ” ಎಂದು ಅವರು ತಿಳಿಸಿದ್ದರು.
ಜನವರಿ ೨೦, ೧೯೭೬ರಂದು ನಡೆದ ಸಂಸದರ ಇಲಾಖಾ ಸಲಹಾ ಸಮಿತಿ ಸಭೆಯಲ್ಲಿ ಸರ್ಕಾರದ ಬದಲಾದ ನೀತಿಯು ಸ್ಪಷ್ಟವಾಯಿತು. ಅಲ್ಲಿ ಸಚಿವ ಡಾ|| ಕರಣಸಿಂಗ್ ಕಡ್ಡಾಯದ ಕೆಲವು ಅಂಶಗಳ ಬಗ್ಗೆ ಹೇಳಿದರು. ಆ ಸಭೆಯಲ್ಲಿ “ಈವರೆಗೆ ಕುಟುಂಬಯೋಜನೆಯು ಸ್ವಂತ ಇಚ್ಛೆಯದಾಗಿತ್ತು. ಈಗ ಒಂದು ಬಗೆಯ ಕಡ್ಡಾಯವನ್ನು ಜಾರಿಗೆ ತರುವ ಕಾಲ ಬಂದಿದೆ. ಕೆಲವು ರಾಜ್ಯಗಳು ಈಗಾಗಲೆ ಆ ರೀತಿ ಮಾಡುತ್ತಿವೆ. ಇನ್ನು ಇತರ ರಾಜ್ಯಗಳು ಹಾಗೆ ಮಾಡುವುದನ್ನು ಕೇಂದ್ರಸರ್ಕಾರವು ತಡೆಯಬಾರದು” ಎಂದು ಹೇಳಲಾಯಿತು.
‘ದೃಢ ನಿರ್ಧಾರದಿಂದ ಕೆಲಸ ಮಾಡಿ’
ಎರಡು ದಿನಗಳ ಅನಂತರ ಪ್ರಧಾನಿ ಇಂದಿರಾಗಾಂಧಿಯವರು ವೈದ್ಯರ ಸಂಘದ ೩೧ನೇ ಜಂಟಿ ಸಮ್ಮೇಳನದಲ್ಲಿ ಮಾಡಿದ ಭಾಷಣದಲ್ಲಿ ಹೀಗೆ ಹೇಳಿದರು: “ಈಗ ನಾವು ದೃಢನಿರ್ಧಾರದೊಂದಿಗೆ ಕೆಲಸ ಮಾಡಿ ಜನನ ಪ್ರಮಾಣವನ್ನು ಇಳಿಸಲೇಬೇಕು. ದೇಶದ ಜನಸಂಖ್ಯೆಯು ಕೇವಲ ೨೮ ವರ್ಷಗಳಲ್ಲಿ ಇಮ್ಮಡಿ ಆಗುವುದನ್ನು ತಡೆಯಬೇಕಾಗಿದೆ. ತೀವ್ರ (drastic) ಎಂಬಂತಹ ಕ್ರಮಗಳನ್ನು ಅನುಸರಿಸಲು ನಾವೀಗ ಹಿಂಜರಿಯಬಾರದು. ಜೀವಿಸುವ ಹಕ್ಕು, ಪ್ರಗತಿಯ ಹಕ್ಕು ಎಂಬ ದೇಶದ ಮಾನವಹಕ್ಕಿಗಾಗಿ ಕೆಲವು ವೈಯಕ್ತಿಕ ಹಕ್ಕುಗಳನ್ನು ಅಮಾನತಿನಲ್ಲಿಡಬೇಕಾಗಿದೆ.” ಪ್ರಧಾನಿಯವರ ಈ ಮಾತುಗಳಿಗೆ ವ್ಯಾಪಕ ಪ್ರಚಾರವನ್ನು ಕೊಡಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ‘ದೃಢನಿರ್ಧಾರದಿಂದ ಕೆಲಸ ಮಾಡಬೇಕಾದ ಸಮಯ’ ಎಂಬ ಹೆಸರಿನ ಕರಪತ್ರವನ್ನು ಮುದ್ರಿಸಿ ಎಲ್ಲೆಡೆ ಹಂಚಲಾಯಿತು.
ಅದೇ ಮಾರ್ಚ್ ೫ರಂದು ಕೇಂದ್ರ ಸಚಿವ ಸಂಪುಟದ ಒಂದು ಟಿಪ್ಪಣಿ ಬಂತು. ಅದರಲ್ಲಿ ಕೇಂದ್ರಸರ್ಕಾರದ ನೌಕರಿಗಾಗಿ ಒಂದಷ್ಟು ಪ್ರೋತ್ಸಾಹಕಗಳು ಮತ್ತು ನಿರುತ್ಸಾಹಕಗಳು ಇದ್ದವು. ಅದರಲ್ಲಿ ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆಯು “ಜನರ ಸಂತಾನಶಕ್ತಿ(Fertility)ಯನ್ನು ನಿರೀಕ್ಷಿತ ಮಟ್ಟಕ್ಕೆ ಇಳಿಸಬೇಕಾದರೆ ಮತ್ತು ಅಭಿವೃದ್ಧಿಯ ಗುರಿಯನ್ನು ಸಾಧಿಸಬೇಕಿದ್ದರೆ ಕುಟುಂಬಯೋಜನೆಯು ಪೂರ್ತಿ ಸ್ವಂತ ಇಚ್ಛೆಯಿಂದ ಆಗಬೇಕೆಂದು ಕುಳಿತರೆ ಆಗದು” ಎನ್ನುವ ಮಾತಿತ್ತು. ಅದೇ ಮಾರ್ಚ್ ೧೧ರಂದು ಇಲಾಖೆಯ ಉಪಮಂತ್ರಿಯವರು ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲಿ “ದೇಶದ ಇಂದಿನ ಜನಸಂಖ್ಯೆಯ ಪರಿಸ್ಥಿತಿಯನ್ನು ನೋಡಿದರೆ ಸ್ವಲ್ಪ ಒತ್ತಡ ತರುವುದು ಅಗತ್ಯವೆನಿಸಿದೆ. ದೇಶದ ನಾಗರಿಕರ ಜೀವನಮಟ್ಟವನ್ನು ಉತ್ತಮಗೊಳಿಸಬೇಕಿದ್ದರೆ ಸಣ್ಣ ಸಂಸಾರವು ಅತಿ ಅಗತ್ಯ” ಎಂದು ಹೇಳಿದ್ದರು. ಹೀಗೆ ಕೇಂದ್ರ ನಾಯಕರು, ಅಧಿಕಾರಿಗಳು ಸ್ವಂತ ಇಚ್ಛೆ ಎಂಬುದನ್ನು ಕೈಬಿಟ್ಟು, ಶಸ್ತ್ರಕ್ರಿಯೆಗೆ ಒತ್ತು ನೀಡಿದರು; ಜೊತೆಗೆ ಶಸ್ತ್ರಕ್ರಿಯೆ ವೇಳೆ ಉತ್ತಮ ಸೇವೆ ನೀಡಬೇಕು ಎಂದರು.
ಉಳಿದ ವಿಧಾನಗಳು ಹಿಂದಕ್ಕೆ ಸರಿದು ಇಲಾಖೆಯು ಸಂತಾನಹರಣ ಶಸ್ತçಕ್ರಿಯೆ ಒಂದಕ್ಕೇ ಆತುಕೊಂಡಿತು ಎಂಬುದನ್ನು ಶಾ ಆಯೋಗಕ್ಕೆ ನೀಡಿದ ಅಂಕಿ-ಅಂಶಗಳು ತಿಳಿಸುತ್ತವೆ. ೧೯೭೫-೭೬ರಲ್ಲಿ ಶಸ್ತçಕ್ರಿಯೆಯಲ್ಲಿ ಗುರಿಯನ್ನು ಮೀರಿ ಶೇ. ೧೦೭ರಷ್ಟು ಸಾಧನೆ ಆದರೆ ೧೯೭೬-೭೭ರಲ್ಲಿ ಶೇ. ೧೯೦ರಷ್ಟು ಭಾರೀ ಸಾಧನೆ ಆಯಿತು. ಇತರ ವಿಧಾನಗಳು ಗುರಿಯಿಂದ ಹಿಂದೆ ಬಿದ್ದವು. ಇಲಾಖೆಯ ಕಾರ್ಯದರ್ಶಿ ಗ್ಯಾನಪ್ರಕಾಶ್ ಅವರು ಜನವರಿ ೧೫, ೧೯೭೭ರ ಪತ್ರದಲ್ಲಿ ಇದನ್ನು ದಾಖಲಿಸಿದ್ದಾರೆ: “ಶಸ್ತçಕ್ರಿಯೆಯಲ್ಲಿ ನಾವು ಈಗಾಗಲೆ ಗುರಿಗಿಂತ ತುಂಬಾ ಜಾಸ್ತಿ ಸಾಧನೆ ಮಾಡಿರುವ ಕಾರಣ ಮುಂದಿನ ತಿಂಗಳು ಕಾಂಡೋಮ್ ವಿತರಣೆಗೆ ಒತ್ತು ನೀಡಬಹುದು. ಅದೇ ರೀತಿ ಐಯುಡಿ ಮತ್ತು ಇತರ ವಿಧಾನಗಳನ್ನು ಕೂಡ ಕೈಗೊಳ್ಳಬಹುದು” ಎಂದಿದ್ದಾರೆ.
ದುಬಾರಿಯಾದ ಟಾರ್ಗೆಟ್
ಸಂತಾನಹರಣ ಶಸ್ತ್ರಕ್ರಿಯೆಗಳ ಬಗ್ಗೆ ೧೯೭೬-೭೭ಕ್ಕೆ ತುಂಬಾ ಎತ್ತರದ ಗುರಿ ಇರಿಸಿಕೊಳ್ಳಲಾಗಿತ್ತು; ರಾಜ್ಯಗಳು ಗುರಿಯನ್ನು ಏರಿಸಿ ಪರಿಷ್ಕರಿಸಿದ್ದು ದೇಶದ ಒಟ್ಟು ಗುರಿ ೪೩ ಲಕ್ಷ ಆಗಿತ್ತು; ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರ ಅಧ್ಯಕ್ಷತೆಯ ಕೇಂದ್ರ ಕುಟುಂಬಯೋಜನೆ ಕೌನ್ಸಿಲನ್ನು ರಚಿಸಲಾಗಿತ್ತು. ಜೂನ್ ೧೫, ೧೯೭೬ರಂದು ಆರೋಗ್ಯ ಇಲಾಖೆಯ ವಿಶೇಷ ಕಾರ್ಯದರ್ಶಿಯವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು “ತುಂಬಾ ಎತ್ತರದ ಗುರಿಯನ್ನು ಇರಿಸಿಕೊಂಡ ಕಾರಣ ಆರಂಭದಿಂದಲೇ ಭಾರೀ ಪ್ರಯತ್ನ ಅವಶ್ಯ; ಕಳೆದ ವರ್ಷದ ಕೊನೆಯ ತಿಂಗಳುಗಳ ವೇಗವನ್ನು ಉಳಿಸಿಕೊಳ್ಳಬೇಕು. ಇದರಲ್ಲಿ ಇಡೀ ಆಡಳಿತಯಂತ್ರವು ತೊಡಗಬೇಕು” ಎಂದು ಸೂಚಿಸಿದರು. ಒಟ್ಟಿನಲ್ಲಿ ರಾಜ್ಯಗಳು ತಮ್ಮ ಶಸ್ತ್ರಕ್ರಿಯೆ ಗುರಿಯನ್ನು ಎತ್ತರಿಸುತ್ತಾ ಹೋದವು. ಅಸ್ಸಾಂ, ಮಹಾರಾಷ್ಟ್ರ, ದೆಹಲಿಯನ್ನು ಹೊರತುಪಡಿಸಿ ಬೇರೆಲ್ಲ ರಾಜ್ಯಗಳು ತಮ್ಮ ಗುರಿಯನ್ನು ಶೇ. ೧೦೦ ಅಥವಾ ಅದಕ್ಕಿಂತಲೂ ಜಾಸ್ತಿ ಏರಿಸಿದವು ಎಂದು ಆಯೋಗ ವಿವರಿಸಿದೆ.
ರಾಜ್ಯಗಳು ಈ ರೀತಿ ತಮ್ಮ ಗುರಿಯನ್ನು ತುಂಬಾ ಏರಿಸಿದ್ದನ್ನು ಗಮನಿಸಿ ಕೇಂದ್ರಸರ್ಕಾರವು ವೇಗಕ್ಕೆ ಮಿತಿಹಾಕುವ ಪ್ರಯತ್ನ ನಡೆಸಿತು ಎಂದು ಹೇಳಲಾದರೂ ಆ ಬಗ್ಗೆ ಸರಿಯಾದ ದಾಖಲೆ ಇಲ್ಲ ಎಂದು ಆಯೋಗ ಹೇಳಿದೆ. “ಶಸ್ತ್ರಕ್ರಿಯೆಗಳು ಹೆಚ್ಚಾದ ಕಾರಣ ಚಿಕಿತ್ಸೆಗೆ ಅಗತ್ಯವಾದ ಸವಲತ್ತು ಜಾಸ್ತಿ ಬೇಕು; ಉಪಕರಣಗಳು, ಲಿನನ್ ಸವಲತ್ತು ಇವುಗಳನ್ನು ಸರಿಯಾಗಿ ಹೊಂದಿಸಿಕೊಳ್ಳಬೇಕು; ಅವು ದೊರೆತ ಮೇಲೆ ಸುರಕ್ಷತೆಗೂ ವಿಶೇಷ ಗಮನ ಇರಬೇಕು. ಹೆಚ್ಚುವರಿ ಸವಲತ್ತು ಒದಗಿಸುವವರೆಗೆ ಒಂದು ದಿನ ಮಾಡುವ ಶಸ್ತ್ರಕ್ರಿಯೆಗಳ ಸಂಖ್ಯೆಯನ್ನು ಮಿತಿಗೆ ಒಳಪಡಿಸಬೇಕು. ಆಸ್ಪತ್ರೆಗೆ ಬಂದ ಎಲ್ಲರಿಗೂ ಅದೇ ದಿನ ಶಸ್ತ್ರಕ್ರಿಯೆ ನಡೆಸಿ ಎಂದು ಡಾಕ್ಟರುಗಳ ಮೇಲೆ ಒತ್ತಡ ಬೇಡ. ಇದನ್ನು ಅಲಕ್ಷಿಸಿ ಶಸ್ತçಕ್ರಿಯೆಗಳು ನಿಲ್ಲುವಂತಾದರೆ ಮುಂದೆ ದೊಡ್ಡ ನಷ್ಟವಾಗಬಹುದು” ಎಂದು ಕೇಂದ್ರದಿಂದ ಸೂಚನೆ ಹೋಗಿದೆ ಎಂದು ಹೇಳಲಾಗುತ್ತದೆ. ಆದರೆ ವಿವಿಧ ರಾಜ್ಯಗಳಲ್ಲಿ ಶಸ್ತ್ರಕ್ರಿಯೆಗೆ ಒಳಗಾದವರು ಸಾವಿಗೀಡಾದ ಸಂಖ್ಯೆಯನ್ನು ಗಮನಿಸಿದರೆ ಅಂದಿನ ಆ ಧಾವಂತದಲ್ಲಿ ಎಲ್ಲ ಎಚ್ಚರಗಳು ಬದಿಗೆ ಸರಿದವೇನೋ ಅನ್ನಿಸುತ್ತದೆ.
ಅದಲ್ಲದೆ ‘ನಿಮ್ಮ ಗುರಿಯಿಂದ ಹಿಂದೆ ಸರಿಯಿರಿ’ ಎಂದು ಕೇಂದ್ರ ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆಯು ರಾಜ್ಯಗಳಿಗೆ ಕಟ್ಟುನಿಟ್ಟಾಗಿ ಹೇಳಿದ್ದಿಲ್ಲ; ಬದಲಾಗಿ ಶಸ್ತ್ರಕ್ರಿಯೆಗಳ ವೇಗವನ್ನು ಕಾಪಾಡುವ ಕಾಳಜಿಯೇ ಕಾಣಿಸುತ್ತದೆ – ಎನ್ನುವ ಅಭಿಪ್ರಾಯಕ್ಕೆ ಶಾ ಆಯೋಗ ಬಂದಿದೆ. ಅದಕ್ಕೆ ಪೂರಕ ಎಂಬಂತೆ ಡಿಸೆಂಬರ್ ೨೦, ೧೯೭೬ರ ಪತ್ರದಲ್ಲಿ ಉತ್ತರಪ್ರದೇಶದ ಆರೋಗ್ಯ ಕಮಿಷನರ್ “ಹಿಂದಿನ ತಿಂಗಳುಗಳಿಗೆ ಹೋಲಿಸಿದರೆ ಈಗ ದಿನದ ಸರಾಸರಿ ಶಸ್ತ್ರಕ್ರಿಯೆಗಳ ಸಂಖ್ಯೆ ಇಳಿದಿದೆ. ಕೃಷಿಯ ಬಿತ್ತನೆ ಮತ್ತು ಕೊಯ್ಲು ಮುಗಿದ ಬಳಿಕ ದಿನದ ಸರಾಸರಿ ಮೇಲೇರಬಹುದು” ಎಂದು ಹೇಳಿದ್ದರು. ಅದೇ ರಾಜ್ಯದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಪ್ರತ್ಯೇಕ ಗುರಿ ನೀಡಿದ್ದು ೧೯೭೭ರ ಮಾರ್ಚ್ ಕೊನೆಯೊಳಗೆ ೧೨ ಲಕ್ಷ ಶಸ್ತ್ರಕ್ರಿಯೆಗಳು ನಡೆಯಬಹುದೆಂದು ಹಿಂದಿನ ಸೆಪ್ಟೆಂಬರ್ನಲ್ಲಿ ನಿರೀಕ್ಷಿಸಲಾಗಿತ್ತು.
ಟ್ಯುಬೆಕ್ಟಮಿ (ಮಹಿಳೆಯರಿಗೆ) ಶಸ್ತ್ರಕ್ರಿಯೆಗಳ ಸಂಖ್ಯೆ ಇಳಿದು ವ್ಯಾಸೆಕ್ಟಮಿಗಳು (ಪುರುಷರಿಗೆ) ಹೆಚ್ಚಿಗೆಯಾದದ್ದು ಅಂದಿನ ಒಂದು ಒಳ್ಳೆಯ ಬೆಳವಣಿಗೆಯಾಗಿತ್ತು; ವ್ಯಾಸೆಕ್ಟಮಿಗಳು ಟ್ಯುಬೆಕ್ಟಮಿಯ ಐದು ಪಾಲಿನಷ್ಟು ಆಗುತ್ತಿದ್ದವು. ಅದರಿಂದಾಗಿ ಉತ್ತರಪ್ರದೇಶದಲ್ಲಿ ಮೂಲಸವಲತ್ತಿನ ಕೊರತೆಯಿದ್ದರೂ ಕೂಡ ಕುಟುಂಬಯೋಜನೆ ಶಸ್ತ್ರಕ್ರಿಯೆಗಳು ಏರುಗತಿಯಲ್ಲೇ ಇದ್ದವು. ವರ್ಷದ ಕೊನೆಗಿಂತ ಸಾಕಷ್ಟು ಮುಂಚಿತವಾಗಿ ವರ್ಷದ ಗುರಿ ಮುಟ್ಟುತ್ತಿತ್ತು.
ಸಂತಾನಹರಣ ಶಸ್ತ್ರಕ್ರಿಯೆಯ ವಿಷಯದಲ್ಲಿ ಕೆಲವು ರಾಜ್ಯಗಳ ನಡುವೆ ಸ್ಪರ್ಧೆಯೇ ಉಂಟಾಗಿತ್ತು. “ಉತ್ತರಪ್ರದೇಶದಲ್ಲಿ ಒಂದು ತಿಂಗಳಲ್ಲಿ ೧.೨ ಲಕ್ಷ ಶಸ್ತ್ರಕ್ರಿಯೆಗಳು ನಡೆಯಬಹುದಾದರೆ ಬಿಹಾರದಲ್ಲಿ ಏಕೆ ಆಗುವುದಿಲ್ಲ?” ಎಂದು ಬಿಹಾರದ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ತನ್ನಲ್ಲಿ ಕೇಳಿದರೆಂದು ಕೇಂದ್ರ ಆರೋಗ್ಯ ಇಲಾಖೆ ಕಮಿಷನರ್ ಸರಳಾ ಗ್ರೆವಾಲ್ ತಿಳಿಸಿದ್ದಾರೆ. ತಮ್ಮ ಭೋಪಾಲ್ ಭೇಟಿಯ ಬಗ್ಗೆ ಗ್ರೆವಾಲ್ ೧೯೭೬ರ ಡಿಸೆಂಬರ್ ಕೊನೆಯಲ್ಲಿ ಹೀಗೆ ಹೇಳಿದ್ದರು: “ಮಧ್ಯಪ್ರದೇಶದಲ್ಲಿ ಈ ಸಾಲಿನಲ್ಲಿ ಈಗಾಗಲೆ ೮ ಲಕ್ಷ ಶಸ್ತ್ರಕ್ರಿಯೆಗಳು ನಡೆದಿವೆ. ಮಾರ್ಚ್ ಕೊನೆಯೊಳಗೆ ೧೨ ಲಕ್ಷ ಸಾಧಿಸಲು ಏನೂ ಕಷ್ಟವಿಲ್ಲವೆಂದು ಮುಖ್ಯಮಂತ್ರಿ ನನ್ನಲ್ಲಿ ಹೇಳಿದರು. ಶಸ್ತ್ರಕ್ರಿಯೆಗೆ ಸಂಬಂಧಿಸಿ ರಾಜ್ಯದ ಮೂಲಸವಲತ್ತು ಕಳಪೆ ಇದೆ; ಅದನ್ನು ಕೂಡಲೆ ಸರಿಪಡಿಸಲು ಬೇಕಾದ ಸವಲತ್ತು ಒದಗಿಸಬೇಕು.”
ಕೆಲವೆಡೆ ಪ್ರತಿರೋಧ
ಕುಟುಂಬಯೋಜನೆ ಶಸ್ತ್ರಕ್ರಿಯೆಗಳೇನೋ ಶರವೇಗದಲ್ಲಿ ನಡೆಯುತ್ತಿದ್ದವು. ಆದರೆ ತಪ್ಪುಗಳಾದಲ್ಲಿ ಜನರ ವಿರೋಧ ಬಾರದೆ ಇರಲಿಲ್ಲ; ಮಾಧ್ಯಮಗಳ ಬಾಯಿ ಮುಚ್ಚಿದ್ದರಿಂದ ಜನರಿಗೆ ತಿಳಿದು ಅಸಮಾಧಾನ ಹೆಚ್ಚುತ್ತಿರಲಿಲ್ಲ ಅಷ್ಟೆ. ಜಾಗೃತದಳ(ಐಬಿ)ದ ಸೆಪ್ಟೆಂಬರ್ ೨೪, ೧೯೭೬ರ ಒಂದು ವರದಿಯ ಪ್ರಕಾರ “ಕೆಲವು ರಾಜ್ಯಗಳಲ್ಲಿ ಕುಟುಂಬಯೋಜನೆಗೆ ಪ್ರತಿರೋಧ ಬರುತ್ತಿದೆ. ಹೆಚ್ಚಿನ ರಾಜ್ಯಗಳಲ್ಲಿ ಕುಟುಂಬಯೋಜನೆ ಆಂದೋಲನವು ಸಲೀಸಾಗಿ ನಡೆಯುತ್ತಿದೆಯಾದರೂ ಕೆಲವು ವಿರುದ್ಧ ಪ್ರತಿಕ್ರಿಯೆಗಳು ಕೂಡ ಬಂದಿವೆ. ಉತ್ತರಪ್ರದೇಶದಲ್ಲಿ ಅದು ಜಾಸ್ತಿಯಾಗಿದೆ. ಬಿಹಾರ, ಪಶ್ಚಿಮಬಂಗಾಳ ಮತ್ತು ಮಹಾರಾಷ್ಟ್ರಗಳಲ್ಲಿ ಸಣ್ಣ ಪ್ರಮಾಣದಲ್ಲಿದೆ. ವಿರುದ್ಧ ಪ್ರತಿಕ್ರಿಯೆ ಏಕೆ ಬಂತೆಂದು ನೋಡುವಾಗ ಕೆಲವು ಕಡೆ ಕಾನೂನು-ಸುವ್ಯವಸ್ಥೆ ಸಮಸ್ಯೆಯಲ್ಲಿ ಪರ್ಯವಸಾನ ಆಗಿರುವುದೂ ಗೊತ್ತಾಗಿದೆ. ಸರ್ಕಾರೀ ಏಜೆನ್ಸಿಗಳು, ಸಂಘಟನೆಗಳು, ಗುರುತಿಸಲಾಗದವರು, ಕೋಮುವಾದಿ ಶಕ್ತಿಗಳಿಂದ ವಿರೋಧ ಬಂದಿದೆ. ಕೆಲವು ರಾಜ್ಯಗಳು ತುಂಬಾ ಎತ್ತರದ ಗುರಿ ಇರಿಸಿಕೊಂಡದ್ದು ಅದಕ್ಕೆ ಮುಖ್ಯಕಾರಣ; ಕೇಂದ್ರಸರ್ಕಾರ ಹೇಳಿದ್ದಕ್ಕಿಂತ ಜಾಸ್ತಿ ಗುರಿ ಇರಿಸಿಕೊಂಡರು. ಉತ್ತರಪ್ರದೇಶಕ್ಕೆ ಕೇಂದ್ರ ಸೂಚಿಸಿದ ಗುರಿ ೪ ಲಕ್ಷ; ರಾಜ್ಯ ಅದನ್ನು ೧೫ ಲಕ್ಷಕ್ಕೆ ಏರಿಸಿಕೊಂಡಿತ್ತು. ಪಶ್ಚಿಮಬಂಗಾಳದಲ್ಲಿ ಅದು ಅನುಕ್ರಮವಾಗಿ ೩.೨೫ ಲಕ್ಷ ಮತ್ತು ೧೦ ಲಕ್ಷ ಇತ್ತು. ಅದರಿಂದಾಗಿ ಕಡಮೆ ಅವಧಿಯಲ್ಲಿ ತುಂಬಾ ಶಸ್ತ್ರಕ್ರಿಯೆ ಮಾಡಬೇಕಾಗಿ ಬಂದು, ಅನಾಹುತಕಾರಿ ಪರಿಣಾಮ ಉಂಟಾಯಿತು. ಅತಿ ಹೆಚ್ಚಿನ ಗುರಿ ಇರಿಸಿಕೊಳ್ಳದಂತೆ ಕೇಂದ್ರಸರ್ಕಾರ ರಾಜ್ಯಗಳನ್ನು ತಡೆಯಬಹುದು” ಎಂದಿತ್ತು.
ಪ್ರಸ್ತುತ ವರದಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸ್ವಲ್ಪಮಟ್ಟಿನ ಸಂಚಲನ ಉಂಟುಮಾಡಿತು. ಜಾಗೃತದಳದ ವರದಿಯಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವ ಸಲುವಾಗಿ ಇಲಾಖಾ ಕಾರ್ಯದರ್ಶಿಯವರು ಗೃಹ ಇಲಾಖೆ, ವಾರ್ತಾ-ಪ್ರಸಾರ ಇಲಾಖೆ ಕಾರ್ಯದರ್ಶಿಗಳು ಮತ್ತು ಐಬಿ ನಿರ್ದೇಶಕರ ಸಭೆ ನಡೆಸುವಂತೆ ಸಚಿವರಿಗೆ ಮನವಿ ಮಾಡಿದರು. ಸಚಿವರು ಸಹಮತ ಸೂಚಿಸಿದರಾದರೂ ಸಭೆ ನಡೆಯಲಿಲ್ಲ. ಟಾರ್ಗೆಟ್ ಬದಲಿಸಿಕೊಳ್ಳಿ ಎಂದು ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಹೇಳಿದ್ದೂ ಇಲ್ಲ. ಬದಲಾಗಿ ಸಚಿವ ಡಾ|| ಸಿಂಗ್ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅವರ ಸಾಧನೆಯನ್ನು ಶ್ಲಾಘಿಸಿದರು; ಜೊತೆಗೆ ಶಸ್ತçಕ್ರಿಯೆಗೆ ಅರ್ಹರನ್ನು ಸರಿಯಾಗಿ ಗುರುತಿಸಿ; ಶಸ್ತçಕ್ರಿಯೆಯ ನಂತರದ ಉಪಚಾರಕ್ಕೆ ಸೂಕ್ತ ಗಮನಕೊಡಿ – ಎಂದು ಸೂಚಿಸಿದರು; ಮತ್ತು ಗುರಿ ಮೀರಿದವರನ್ನು ಅಭಿನಂದಿಸುವುದನ್ನು ನಿಲ್ಲಿಸಲಿಲ್ಲ.
ಕುಟುಂಬಯೋಜನೆ ವರ್ಷ
೧೯೭೭ರ ಜನವರಿ ಆರಂಭದಲ್ಲಿ ಸರಳಾ ಗ್ರೆವಾಲ್ ಅವರು ರಾಜ್ಯ ಮುಖ್ಯಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಹೀಗೆಂದರು: “ಭಾರತದ ಮಟ್ಟಿಗೆ ೧೯೭೬ನ್ನು ‘ಕುಟುಂಬಯೋಜನೆಯ ವರ್ಷ’ ಎಂದರೆ ಯಾವುದೇ ಅತಿಶಯೋಕ್ತಿ ಎನಿಸದು. ಕ್ಯಾಲೆಂಡರ್ ವರ್ಷದ ಆರಂಭದಲ್ಲೇ ನಾವು ಹೊಸ ಎತ್ತರಕ್ಕೆ ಏರಿದೆವು. ಬಳಿಕ ಏಪ್ರಿಲ್ನಲ್ಲಿ ‘ರಾಷ್ಟ್ರೀಯ ಜನಸಂಖ್ಯಾ ನೀತಿ’ಯನ್ನು ಘೋಷಿಸಿದಾಗ ಕಾರ್ಯಕ್ರಮವು ಇನ್ನೂ ವೇಗವನ್ನು ಪಡೆಯಿತು. ರಾಜ್ಯಗಳು ಭಾರೀ ಸಾಧನೆಯನ್ನು ಮಾಡಿದವು.”
ಕೇಂದ್ರ ಆರೋಗ್ಯ ಕುಟುಂಬ ಇಲಾಖೆಯು ರಾಜ್ಯಗಳನ್ನು ಹೇಗೆ ಬೆನ್ನಟ್ಟುತ್ತಿತ್ತು ಎಂಬುದಕ್ಕೆ ಬಿಹಾರದ ಒಂದು ಸಂದರ್ಭವನ್ನು ಗಮನಿಸಬಹುದು. ಗ್ಯಾನಪ್ರಕಾಶ್ ಮತ್ತು ಸರಳಾ ಗ್ರೆವಾಲ್ ಅವರು ೧೯೭೬ರ ಜನವರಿ ಮಧ್ಯಭಾಗದಲ್ಲಿ ಬಿಹಾರಕ್ಕೆ ಭೇಟಿ ನೀಡಿ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಜಿಲ್ಲಾ ಮುಖ್ಯ ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ಯಾನಪ್ರಕಾಶ್, ಅವರ ಸಾಧನೆ ಏನೂ ಸಾಲದೆಂದು ಹೇಳಿ, ಅವರ ಕಳಪೆ ಸಾಧನೆಯು ಕ್ರಿಮಿನಲ್ ಮತ್ತು ರಾಷ್ಟ್ರವಿರೋಧಿ ಕೃತ್ಯಕ್ಕೆ ಸಮ ಎಂದರು. ಸಾಧನೆಯು ಸುಧಾರಿಸದಿದ್ದರೆ ಕುಟುಂಬಯೋಜನೆಗೆ ಕೇಂದ್ರವು ನೀಡುವ ಹಣವನ್ನು ಕಡಿತಗೊಳಿಸುವ ಎಚ್ಚರಿಕೆ ನೀಡಿದರು. ಮುಂದೆ ಬಿಹಾರದ ಆರೋಗ್ಯಮಂತ್ರಿ ಇಲಾಖೆಯನ್ನು ಚುರುಕುಗೊಳಿಸಿದರು.
ಇನ್ಸೆಂಟಿವ್ ಬಳಕೆ
ಇನ್ಸೆಂಟಿವ್, ಡಿಸ್-ಇನ್ಸೆಂಟಿವ್ಗಳ ಬಗ್ಗೆ ಆರೋಗ್ಯ ಇಲಾಖೆ ಹೇಳಿತಾದರೂ, ಅಂತಹ ಕ್ರಮ ಏನೆಂದು ಸ್ಪಷ್ಟವಾಗಿ ಹೇಳಲಿಲ್ಲ; ಮತ್ತು ಆ ಬಗೆಯ ವಿಧಾನಗಳನ್ನು ಅನುಸರಿಸುವ ಬಗ್ಗೆ ರಾಜ್ಯಗಳಿಗೆ ಸ್ವಾತಂತ್ರ್ಯ ನೀಡಲಾಯಿತು. ೧೯೭೬ರ ಏಪ್ರಿಲ್ ೧೬ರಂದು ಬಂದ ರಾಷ್ಟ್ರೀಯ ಜನಸಂಖ್ಯಾ ನೀತಿಯಲ್ಲಿ ಅದು ಕಾಣಿಸುತ್ತದೆ: “ಕೆಲವು ರಾಜ್ಯಗಳು ಕುಟುಂಬಯೋಜನೆಯ ಸರಣಿ ಕ್ರಮಗಳನ್ನು ತಮ್ಮ ನೌಕರರು ಮತ್ತು ಇತರ ನಾಗರಿಕರ ಬಗ್ಗೆ ಕೈಗೊಂಡಿವೆ. ಅದರಲ್ಲಿ ಮನೆ ನೀಡಿಕೆ, ಸಾಲ ನೀಡಿಕೆಯಲ್ಲಿ ಆದ್ಯತೆ ಸೇರಿವೆ. ಈ ವಿಷಯದಲ್ಲಿ ಪ್ರತಿಯೊಂದು ರಾಜ್ಯ ತನಗೆ ಸರಿ ಎನಿಸಿದ ವಿಧಾನವನ್ನು ಅನುಸರಿಸಲಿ” ಎಂದು ಸೂಚಿಸಲಾಗಿತ್ತು.
ಹೀಗೆ ಸ್ವಾತಂತ್ರ್ಯ ನೀಡಿದ ಕಾರಣ ಪ್ರೋತ್ಸಾಹಕ-ನಿರುತ್ಸಾಹಕಗಳು ದೇಶದ ಎಲ್ಲ ರಾಜ್ಯಗಳಲ್ಲಿ ಸಮಾನವಾಗಿ ಇರಲಿಲ್ಲ; ಅವುಗಳ ಪರಿಕಲ್ಪನೆಯಲ್ಲೇ ವ್ಯತ್ಯಾಸವಿತ್ತು. ಬಿಹಾರ ಮತ್ತು ರಾಜಸ್ಥಾನಗಳು ಮೂರು ಮಕ್ಕಳಾದ ಅನಂತರ ಸಂತಾನಹರಣ ಶಸ್ತ್ರಕ್ರಿಯೆ ಎಂದರೆ ಆಂಧ್ರಪ್ರದೇಶ, ಹರ್ಯಾಣಾ, ಹಿಮಾಚಲಪ್ರದೇಶದಂತಹ ರಾಜ್ಯಗಳು ಎರಡು ಮಕ್ಕಳೇ ಸಾಕು ಎಂಬ ನಿಲವು ತಳೆದವು. ಕೇಂದ್ರಸರ್ಕಾರವು ತನ್ನ ನೌಕರರಿಗೆ ಮೂರು ಮಕ್ಕಳಿಗೆ ಅವಕಾಶ ನೀಡುವ ನೀತಿಯನ್ನು ಜಾರಿಗೆ ತಂದಿತು. ಕೇಂದ್ರೀಯ ವಿದ್ಯಾಲಯ ಸಂಘಟನೆಯು ಇನ್ನಷ್ಟು ಬಿಗಿಯಾದ ನೀತಿಯನ್ನು ಅನುಸರಿಸಿತು. ಅದರಂತೆ ಎರಡು ಅಥವಾ ಹೆಚ್ಚು ಮಕ್ಕಳಾಗಿಯೂ ಹೆತ್ತವರು (ಇಬ್ಬರಲ್ಲಿ ಒಬ್ಬರು) ಸಂತಾನಹರಣ ಶಸ್ತ್ರಕ್ರಿಯೆಯನ್ನು ಮಾಡಿಸಿಕೊಳ್ಳದಿದ್ದಲ್ಲಿ ಅವರ ಮಕ್ಕಳು ಕೇಂದ್ರೀಯ ವಿದ್ಯಾಲಯದ ಪ್ರವೇಶಕ್ಕೆ ಅರ್ಹರಲ್ಲ ಎಂದು ಆ ಸಂಸ್ಥೆಗಳ ಪ್ರಿನ್ಸಿಪಾಲರುಗಳಿಗೆ ಸೂಚನೆ ನೀಡಲಾಯಿತು.
ರಾಜ್ಯಗಳಲ್ಲಿ ವ್ಯತ್ಯಾಸ
ಶಸ್ತ್ರಕ್ರಿಯೆಗೆ ಯಾರು ಅರ್ಹರು ಎಂಬ ವಿಷಯದಲ್ಲೂ ರಾಜ್ಯಗಳ ನಡುವೆ ವ್ಯತ್ಯಾಸವಿತ್ತು. ಕೆಲವು ರಾಜ್ಯಗಳು ಶಸ್ತ್ರಕ್ರಿಯೆಗೆ ಒಳಗಾಗುವ ಬಗ್ಗೆ ಪುರುಷರ ಗರಿಷ್ಠ ವಯಸ್ಸಿಗೊಂದು ಮಿತಿಯನ್ನು ಸೂಚಿಸಿದರೆ ಇತರ ರಾಜ್ಯಗಳು ಹಾಗೆ ಮಾಡಲಿಲ್ಲ. ನಿರುತ್ಸಾಹಕಗಳ ಜಾರಿ ಯಾವಾಗಿನಿಂದ ಎಂಬ ವಿಷಯದಲ್ಲೂ ರಾಜ್ಯಗಳ ನಡುವೆ ವ್ಯತ್ಯಾಸವಿತ್ತು. ಕೇಂದ್ರಸರ್ಕಾರವು ತನ್ನ ನೌಕರರಿಗೆ ಹತ್ತು ತಿಂಗಳ ಬಳಿಕ ಜಾರಿ ಎಂದರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಕ್ಷಣದಿಂದ ಜಾರಿ ಎಂದವು.
ಡಿಸ್ಇನ್ಸೆಂಟಿವ್ ಎಂದರೆ ಕೆಲವು ಸವಲತ್ತು ಹಾಗೂ ರಿಯಾಯಿತಿಗಳ ನಿರಾಕರಣೆಯಾಗಿತ್ತು. ಹೆರಿಗೆ ರಜೆ, ವಿವಿಧ ಉದ್ದೇಶಗಳಿಗೆ ಮುಂಗಡ ಮತ್ತು ಸಾಲ, ಜಮೀನು ನೀಡಿಕೆ, ಉಚಿತ ವೈದ್ಯಕೀಯ ಸೇವೆ (ಚಿಕಿತ್ಸೆ), ಮಕ್ಕಳಿಗೆ ಫ್ರೀಶಿಪ್, ಶಿಕ್ಷಣ ಭತ್ಯೆ, ಸರ್ಕಾರೀ ನೌಕರರು ಹಾಗೂ ನಾಗರಿಕರಿಗೆ ಉದ್ಯೋಗಾವಕಾಶಗಳನ್ನು ಗುರುತಿಸಿದ್ದು, ತಮ್ಮ ಮಕ್ಕಳ ಸಂಖ್ಯೆಯನ್ನು ನಿಯಂತ್ರಿಸದಿದ್ದವರು ಮತ್ತು ಶಸ್ತ್ರಕ್ರಿಯೆಗೆ ಒಳಗಾಗದವರು ಅವುಗಳಿಂದ ವಂಚಿತರಾಗುತ್ತಿದ್ದರು. ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಲೋಕಸಭೆಯಲ್ಲಿ ಮಂಡಿಸಿದಾಗ, ಪ್ರತಿಯೊಂದು ರಾಜ್ಯವೂ ಸಾಲ ಹಾಗೂ ಮನೆ ನೀಡಿಕೆ ಮುಂತಾದ ವಿಷಯಗಳಲ್ಲಿ ತನ್ನ ಇಷ್ಟದಂತೆ ನಡೆದುಕೊಳ್ಳಲಿ; ಒಟ್ಟಾರೆ ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಪಾಲಿಸಿದರೆ ಸರಿ ಎನ್ನುವ ಸ್ವಾತಂತ್ರ್ಯವನ್ನು ನೀಡಲಾಯಿತು.
ರಾಷ್ಟ್ರಪತಿಗೆ ದೂರು
ಈ ನಡುವೆ ಹಿಮಾಚಲಪ್ರದೇಶದ ರಾಜ್ಯಪಾಲರು ರಾಷ್ಟ್ರಪತಿಯವರಿಗೊಂದು ಪತ್ರ ಬರೆದು “ರಾಜ್ಯಸರ್ಕಾರವು ತನ್ನ ಎಲ್ಲ ನೌಕರರಿಗೆ ಕುಟುಂಬಯೋಜನೆಯನ್ನು ಕಡ್ಡಾಯ ಮಾಡಿದೆ. ಒಂದು ಗಂಡು, ಒಂದು ಹೆಣ್ಣು ಮಕ್ಕಳಿರುವವರನ್ನು ಸಂತಾನಹರಣ ಶಸ್ತçಕ್ರಿಯೆಗೆ ಅರ್ಹರೆಂದು ಪರಿಗಣಿಸಿದೆ. ಅಂತಹ ದಂಪತಿಯಲ್ಲಿ ಪತಿ ಅಥವಾ ಪತ್ನಿ ಮೂರು ತಿಂಗಳೊಳಗೆ ಶಸ್ತçಕ್ರಿಯೆ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ೧) ವಾರ್ಷಿಕ ಇಂಕ್ರಿಮೆಂಟ್ ಸಿಗುವುದಿಲ್ಲ ೨) ಉದ್ಯೋಗದ ಖಾಯಂ (ಕನ್ಫರ್ಮ್), ಪದೋನ್ನತಿ (ಪ್ರಮೋಶನ್) ಆಗುವುದಿಲ್ಲ ೩) ಮೆಡಿಕಲ್ ರೀ-ಇಂಬರ್ಸ್ಮೆಂಟ್ ಹಾಗೂ ಸರ್ಕಾರೀ ಆಸ್ಪತ್ರೆಯ ಸೇವೆ ಸಿಗುವುದಿಲ್ಲ ೪) ಸರ್ಕಾರೀ ವಸತಿ ಸಿಗುವುದಿಲ್ಲ; ಈಗಾಗಲೇ ಸರ್ಕಾರೀ ವಸತಿಗೃಹದಲ್ಲಿ (ಕ್ವಾಟರ್ಸ್) ಇದ್ದವರು ಅದಕ್ಕೆ ಬಾಡಿಗೆ ಕೊಡಬೇಕಾಗುತ್ತದೆ ೫) ಸರ್ಕಾರೀ ಸಾಲ ಅಥವಾ ಭವಿಷ್ಯನಿಧಿಯ (ಪಿಎಫ್) ಮುಂಗಡ ಸಿಗುವುದಿಲ್ಲ ಮತ್ತು ೬) ಹೆರಿಗೆ ರಜೆ ಸಿಗುವುದಿಲ್ಲ” ಎಂಬ ವಿಷಯವನ್ನು ಗಮನಕ್ಕೆ ತಂದರು.
ರಾಷ್ಟ್ರಪತಿಯವರಿಂದ ಆ ಪತ್ರ ಪ್ರಧಾನಿಯವರ ಬಳಿಗೆ ಹೋಯಿತು. ಅವರು ಅದಕ್ಕೆ ಪ್ರತಿಕ್ರಿಯೆ ನೀಡಬೇಕಾಯಿತು. “ಈ ನಿಯಮ (ಹಿಮಾಚಲಪ್ರದೇಶದ್ದು) ತುಂಬಾ ಬಿಗುವಾಯಿತು. ಈ ಬಗ್ಗೆ ಇತರ ರಾಜ್ಯಗಳಲ್ಲಿ ಏನಾಗುತ್ತಿದೆ ಎಂದು ಮಾಹಿತಿ ಪಡೆಯಬೇಕು; ಮತ್ತು ವಿವೇಚನೆಯಿಂದ ಕೂಡಿದ ಕ್ರಮವನ್ನು ಅನುಸರಿಸಬೇಕೆಂದು ಹೇಳಿ ಅದನ್ನು ಆರೋಗ್ಯ ಇಲಾಖೆಯ ಗಮನಕ್ಕೆ ತಂದರು.
ಆಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು “ರಾಜ್ಯಗಳು ತಮ್ಮದೇ ಚಿಂತನೆಯ ಪ್ರಕಾರ ಹೋಗುತ್ತಾ ಇರುವಂತಿದೆ; ಸಮಾನತೆ ಕಾಣಿಸುತ್ತಿಲ್ಲ” ಎಂದುದಲ್ಲದೆ ರಾಜ್ಯಗಳು ಕೇಂದ್ರದ ನೀತಿಯನ್ನು ಅನುಸರಿಸಲಿ ಎಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆಯಲು ತೀರ್ಮಾನಿಸಿತು. ಆದರೆ ಕೇಂದ್ರಸರ್ಕಾರವು ರಾಜ್ಯಗಳ ನಡುವೆ ಸಮಾನ ಮಾದರಿಯನ್ನು ತರಲಿಲ್ಲ. ಕೇಂದ್ರಸರ್ಕಾರದ ನೌಕರರಿಗೆ ಕುಟುಂಬಯೋಜನೆ ಪ್ರೋತ್ಸಾಹಕ-ನಿರುತ್ಸಾಹಕಗಳನ್ನು ಜಾರಿ ಮಾಡುವ ಮುನ್ನ ವಿವಿಧ ರಾಜ್ಯಗಳಲ್ಲಿ ಏನಿದೆ ಎಂದು ಸಮೀಕ್ಷೆ ನಡೆಸಲಿಲ್ಲ. ತಾನು ಮಾಡಿದ್ದನ್ನು ವಿವಿಧ ರಾಜ್ಯಗಳಿಗೆ, ಸಾರ್ವಜನಿಕರಂಗದ ಸಂಸ್ಥೆಗಳಿಗೆ ಕಳುಹಿಸಿತಾದರೂ “ನೀವು ನಿಮ್ಮ ನೌಕರರಿಗೆ ಇದೇ ರೀತಿ ಮಾಡಬಹುದು” ಎಂದು ಸೂಚಿಸಲಿಲ್ಲ.
ಚುನಾವಣೆ ಬಂದಾಗ
ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆಯು ವಿವಿಧ ರಾಜ್ಯಗಳ ಇನ್ಸೆಂಟಿವ್-ಡಿಸ್ಇನ್ಸೆಂಟಿವ್ಗಳ ಸಮೀಕ್ಷೆ ನಡೆಸುವಾಗಲೇ ಪ್ರಧಾನಿಯ ಕಚೇರಿಯಿಂದ ಒಂದು ಟಿಪ್ಪಣಿ ಬಂತು (ದಿ.೧೮-೨-೧೯೭೭). ಲೋಕಸಭಾ ಚುನಾವಣೆ ಘೋಷಣೆಯ ಹಿನ್ನೆಲೆಯಲ್ಲಿ ಆಗಲೇ ಕೆಲವು ಡಿಸ್ಇನ್ಸೆಂಟಿವ್ಗಳ ಹಿಂತೆಗೆತ ಆಗಿತ್ತು. ಪ್ರಧಾನಿ ಇಂದಿರಾಗಾಂಧಿಯವರ ಅನುಮತಿಯ ಮೇರೆಗೆ ಬಂದ ಟಿಪ್ಪಣಿಯಲ್ಲಿ ‘ಕುಟುಂಬಯೋಜನೆ ಅನುಷ್ಠಾನದಲ್ಲಿ ಯಾವುದೇ ಕಡ್ಡಾಯ ಇರುವುದಿಲ್ಲ’ ಎಂದು ತಿಳಿಸಲಾಗಿತ್ತು. ಸವಲತ್ತು ನೀಡಿಕೆಯಲ್ಲಿ ಸಂತಾನಹರಣ ಶಸ್ತ್ರಕ್ರಿಯೆಯು ಒಂದು ಷರತ್ತು ಎಂಬುದನ್ನು ಹಿಂತೆಗೆಯುವವರೆಗೆ ಜನ ಚುನಾವಣಾ ಪ್ರಣಾಳಿಕೆಯ ಘೋಷಣೆಗಳನ್ನು ನಂಬುವುದಿಲ್ಲ – ಎಂಬುದು ಸರ್ಕಾರಕ್ಕೆ ಈಗ ಮನವರಿಕೆಯಾಗಿತ್ತು.
ವಿಶ್ವಾಸಾರ್ಹತೆಯನ್ನು ಗಳಿಸಲು ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿತು. ಇಂದಿರಾಗಾಂಧಿಯವರು ಸಹಿ ಹಾಕಿದ ಆದೇಶದ ಪ್ರಕಾರ ಕೇಂದ್ರಸರ್ಕಾರದ ಬಳಿ ಇದ್ದ ಮಹಾರಾಷ್ಟçದ ಮಸೂದೆಯನ್ನು ವಾಪಸು ಮಾಡಲಾಯಿತು. ಸರ್ಕಾರದ ಯಾವುದೇ ಸವಲತ್ತು ಪಡೆಯಲು ಸಂತಾನಹರಣ ಶಸ್ತ್ರಕ್ರಿಯೆಯನ್ನು ಒಂದು ಶರತ್ತನ್ನಾಗಿ ಪರಿಗಣಿಸುವ ಎಲ್ಲ ಸೂಚನೆ/ಆದೇಶಗಳನ್ನು ತಕ್ಷಣ ವಾಪಸು ಪಡೆಯಲಾಯಿತು. ಚುನಾವಣೆಯ ವೇಳೆ ಶಸ್ತ್ರಕ್ರಿಯೆ ಬೇಡವೆಂದು ಅದನ್ನು ತಡೆಹಿಡಿಯಲಾಯಿತು. ಸ್ವಂತ ಇಚ್ಛೆಯಿಂದ ಬಂದವರಿಗೂ ಶಸ್ತ್ರಕ್ರಿಯೆ ನಡೆಸಲಿಲ್ಲ. ಕುಟುಂಬಯೋಜನೆಗೆ ಸಂಬಂಧಿಸಿದ ಅತಿರೇಕಗಳು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದೆಂಬ ಸಂಶಯ ಕಾಂಗ್ರೆಸ್ ನಾಯಕರಿಗೆ ಇತ್ತು. ಆ ಹಿನ್ನೆಲೆಯಿಂದ ಶಸ್ತ್ರಕ್ರಿಯೆಗಳು ಒಮ್ಮೆಗೇ ನಿಂತವು. ಆದರೆ ಜನ ಆಗಲೇ ಸಾಕಷ್ಟು ಘಾಸಿಗೊಂಡಿದ್ದರು; ಚುನಾವಣಾ ಫಲಿತಾಂಶದಲ್ಲಿ ಅದು ಸುಸ್ಪಷ್ಟವಾಗಿ ಕಂಡುಬಂತು.
ದುರದೃಷ್ಟವೆಂದರೆ, ಶಸ್ತ್ರಕ್ರಿಯೆಗೆ ಗುರಿ ಇರಿಸಿಕೊಂಡ ಈ ಕ್ರಮದಿಂದ ಜನರ ಸಾಂಪ್ರದಾಯಿಕ (ಹಳೆಯ) ಭಾವನೆಗಳಿಗೆ ನೋವುಂಟಾಯಿತು; ಅದೇ ಜನರ ತೀವ್ರ ವಿರೋಧಕ್ಕೆ ಕಾರಣವಾಯಿತು. ಜನರ ಆಕ್ರೋಶವನ್ನು ಶಮನಗೊಳಿಸುವ ಉದ್ದೇಶದಿಂದ ಡಿಸ್ಇನ್ಸೆಂಟಿವ್ ಅಡಿಯಲ್ಲಿ ಮಾಡಿದ ಎಲ್ಲ ಆದೇಶ, ನಿಯಮಗಳನ್ನು ಈಗ ವಜಾ ಮಾಡಲಾಯಿತು. ರಾಜ್ಯಗಳು ಕಡ್ಡಾಯ ಶಸ್ತ್ರಕ್ರಿಯೆ ಬಗೆಗಿನ ಶಾಸನವನ್ನು ತರಲಿ ಎಂದು ಮೊದಲು ಹೇಳಿದ್ದರೂ ಕೂಡ ಮಹಾರಾಷ್ಟ್ರ ಸಿದ್ಧಪಡಿಸಿದ ಅಂತಹ ಶಾಸನವನ್ನು ಕೈಬಿಡಲಾಯಿತು.
ಸಂಜಯಗಾಂಧಿ ಒತ್ತಡ
ತುರ್ತುಪರಿಸ್ಥಿತಿ ಹಿನ್ನೆಲೆಯ ಕಾರಣ ಇದ್ದರೂ ಕೂಡ ದೇಶದಲ್ಲಿ ಕುಟುಂಬಯೋಜನೆ, ಅದರಲ್ಲೂ ಸಂತಾನಹರಣ ಶಸ್ತ್ರಕ್ರಿಯೆಗಳು ಅಷ್ಟೊಂದು ವೇಗವನ್ನು ಪಡೆದುಕೊಂಡದ್ದು ಹೇಗೆ ಎನ್ನುವ ಪ್ರಶ್ನೆ ಹಲವರಲ್ಲಿ ಮೂಡಿತ್ತು; ಅದು ಬೆಳಕಿಗೆ ಬರಲು ತಡವಾಗಲಿಲ್ಲ. ಯುವಕಾಂಗ್ರೆಸ್ ನಾಯಕರಾಗಿದ್ದ ಪ್ರಧಾನಿ ಪುತ್ರ ಸಂಜಯಗಾಂಧಿಯವರು ೧೯೭೬ರ ಫೆಬ್ರುವರಿಯಲ್ಲಿ ತಮ್ಮ ನಾಲ್ಕು ಅಂಶಗಳ ಕಾರ್ಯಕ್ರಮವನ್ನು ಪ್ರಕಟಿಸಿದರು. ಕುಟುಂಬಯೋಜನೆಯು ಅದರಲ್ಲಿ ಸೇರಿತ್ತು. ಪ್ರಧಾನಿ ಇಂದಿರಾಗಾಂಧಿಯವರ ಇಪ್ಪತ್ತು ಅಂಶಗಳ ಕಾರ್ಯಕ್ರಮದಲ್ಲಿ ಅದನ್ನು ಸೇರಿಸುವುದಕ್ಕೆ ಕೇಂದ್ರ ಸಚಿವಸಂಪುಟವು ಒಪ್ಪಿರಲಿಲ್ಲ.
ಸಂಜಯಗಾಂಧಿಯವರ ನಾಲ್ಕು ಅಂಶಗಳ ಕಾರ್ಯಕ್ರಮದ ಜಾರಿಯ ಬಗ್ಗೆ ಅಂದಿನ ಕಾಂಗ್ರೆಸ್ ಆಳ್ವಿಕೆಯ ರಾಜ್ಯಸರ್ಕಾರಗಳಿಗೆ ಸೂಚನೆ ಕಳುಹಿಸಿಕೊಡಲಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಬರೂವಾ ಅವರು (‘Indira is India’ ಎಂದ ನಾಯಕರು) ಜುಲೈ ೨೩, ೧೯೭೬ರಂದು ಹಿಮಾಚಲಪ್ರದೇಶದ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಹೀಗೆ ಹೇಳಿದ್ದರು: “ಕಳೆದ ಮೇ ೨೯-೩೦ರಂದು ನಡೆದ ಎಐಸಿಸಿ ಅಧಿವೇಶನದಲ್ಲಿ ನಾನು, ಯುವಕಾಂಗ್ರೆಸ್ನ ನಾಲ್ಕು ಅಂಶಗಳನ್ನು ಪ್ರಧಾನಿಯ ಇಪ್ಪತ್ತು ಅಂಶಗಳ ಕಾರ್ಯಕ್ರಮದ ಜೊತೆಗೆ ಜಾರಿ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೆ. ಅವುಗಳೆಂದರೆ – ೧) ಕುಟುಂಬಯೋಜನೆ, ೨) ಗಿಡ ನೆಡುವುದು, ೩) ನಿರಕ್ಷರತೆ ನಿರ್ಮೂಲನ ಮತ್ತು ೪) ವರದಕ್ಷಿಣೆ ಹಾಗೂ ಜಾತಿಪದ್ಧತಿಗಳ ನಿರ್ಮೂಲನ. ರಾಜ್ಯ ಕಾಂಗ್ರೆಸ್ ಮತ್ತು ರಾಜ್ಯಸರ್ಕಾರಗಳು ಅವುಗಳ ಜಾರಿಯ ಬಗ್ಗೆ ಈಗಾಗಲೆ ಕ್ರಮಕೈಗೊಂಡಿವೆ. ಹೀಗೆ ಇಪ್ಪತ್ತರ ಜೊತೆಗೆ ನಾಲ್ಕು ಅಂಶದ ಕಾರ್ಯಕ್ರಮಗಳನ್ನು ಕೂಡ ಜಾರಿ ಮಾಡಬೇಕು” ಎಂದರು. ಅದರಂತೆ ಮುಖ್ಯಮಂತ್ರಿಗಳು ಮತ್ತು ಅವರ ಕೆಳಗಿನ ಹಿರಿಯ ಅಧಿಕಾರಿಗಳು ತಮ್ಮ ಭಾಷಣಗಳಲ್ಲಿ ಕುಟುಂಬಯೋಜನೆಯನ್ನು ಸಂಜಯಗಾಂಧಿ ಅವರ ಕಾರ್ಯಕ್ರಮವೆಂದು ಅವರ ಹೆಸರಿನೊಂದಿಗೆ ಸೇರಿಸುತ್ತಿದ್ದರು.
ತುರ್ತುಪರಿಸ್ಥಿತಿ ಜಾರಿಯ ಬಳಿಕ ಉತ್ತರಪ್ರದೇಶ ಸರ್ಕಾರವು ಇಪ್ಪತ್ತು ಅಂಶ ಮತ್ತು ಸಂಜಯಗಾಂಧಿ ಅವರ ನಾಲ್ಕು ಅಂಶಗಳ ಜಾರಿಯ ಬಗ್ಗೆ ಭಾರೀ ಪ್ರಯತ್ನ ನಡೆಸಿತು; ಮತ್ತು ಪ್ರಗತಿಯನ್ನೂ ಸಾಧಿಸಿತು. ಆಗಸ್ಟ್ ೨೪, ೧೯೭೬ರಂದು ಪಂಜಾಬ್ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಟುಂಬಯೋಜನೆಯು ಕೇಂದ್ರಸರ್ಕಾರದ ೨೫ ಅಂಶಗಳಲ್ಲಿ ಒಂದು (ಮುಂದೆ ಸಂಜಯಗಾಂಧಿಯವರದ್ದು ಐದಂಶ ಎಂದು ಪರಿಗಣಿಸಲಾಯಿತು) ಎಂದು ಹೇಳಿದ್ದಲ್ಲದೆ, ಕುಟುಂಬಯೋಜನೆಯಂತಹ ಸಾಮಾಜಿಕ ಕಾರ್ಯಕ್ರಮದಲ್ಲಿ ಮನವೊಲಿಕೆಗೆ ಪ್ರಮುಖ ಪಾತ್ರವಿದ್ದು, ಅಲ್ಲಿ ಒತ್ತಡವನ್ನು ತರಬಾರದೆಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು. ಇದು ಸರ್ಕಾರ ಮತ್ತು ದೇಶದ ಹಿತಾಸಕ್ತಿಯ ವಿಷಯ ಎಂದ ಮುಖ್ಯಮಂತ್ರಿ ಅಧಿಕಾರಿಗಳಿಗೆ ಪೂರ್ಣಬೆಂಬಲದ ಭರವಸೆ ನೀಡಿದರು. ಕುಟುಂಬಯೋಜನೆಗೆ ಅತಿ ಹೆಚ್ಚಿನ ಆದ್ಯತೆ ನೀಡಬೇಕು; ಶಸ್ತ್ರಕ್ರಿಯೆಗಳ ಬಗ್ಗೆ ಗುರಿ ಇರಿಸಿಕೊಂಡು ಅದನ್ನು ಸಾಧಿಸಬೇಕು – ಎಂದು ಕೂಡ ಸೂಚಿಸಿದರು.
ರಾಜ್ಯಕ್ಕೆ ಸಂಜಯ್ ಭೇಟಿ
ಯುವಕಾಂಗ್ರೆಸ್ ನೇತಾರ ಸಂಜಯಗಾಂಧಿಯವರು ಯಾವುದಾದರೂ ರಾಜ್ಯಕ್ಕೆ ಭೇಟಿ ನೀಡುತ್ತಾರೆಂದರೆ ಅದಕ್ಕೆ ಮುನ್ನ ಸಂತಾನಹರಣ ಶಸ್ತ್ರಕ್ರಿಯೆಗಳ ವಿಶೇಷ ಗುರಿ ಇರಿಸಿಕೊಂಡು ಅದನ್ನು ಸಾಧಿಸುತ್ತಿದ್ದುದು ಸಾಮಾನ್ಯವಾಗಿತ್ತು. ಅಕ್ಟೋಬರ್ ೨೮ರಂದು (೧೯೭೬) ಸಂಜಯಗಾಂಧಿ ಮಹಾರಾಷ್ಟ್ರಕ್ಕೆ ಭೇಟಿ ನೀಡುವವರಿದ್ದರು. ಅದಕ್ಕೆ ಸುಮಾರು ಒಂದು ತಿಂಗಳು ಮುನ್ನ ಮಹಾರಾಷ್ಟ್ರ ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಪತ್ರ ಬರೆದು, “ಸಂಜಯ್ ಅವರ ಆಗಮನಕ್ಕೆ ಮುನ್ನ ರಾಜ್ಯದಲ್ಲಿ ಶಸ್ತ್ರಕ್ರಿಯೆಗಳು ೫ ಲಕ್ಷದ ಗುರಿ ಮುಟ್ಟಬೇಕು. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಗಂಭೀರವಾಗಿದ್ದು ಅದನ್ನು ನೀವು ಅರ್ಥೈಸಿಕೊಳ್ಳಬೇಕು; ಇದಕ್ಕೆ ಅಗತ್ಯವಾದ ಎಲ್ಲರ ಸಹಕಾರವನ್ನು ಪಡೆದುಕೊಳ್ಳಬೇಕು” ಎಂದು ಸೂಚಿಸಿದ್ದರು.
ಹಿಮಾಚಲಪ್ರದೇಶ ಮುಖ್ಯಮಂತ್ರಿಯವರು ಅದೇ ವರ್ಷ ಡಿಸೆಂಬರ್ ೨೦ರ ಪತ್ರಿಕಾ ಹೇಳಿಕೆಯಲ್ಲಿ, ಕುಟುಂಬಯೋಜನೆಯು ಸಂಜಯಗಾಂಧಿಯವರ ಐದು ಅಂಶಗಳಲ್ಲಿ ಸೇರಿದ್ದೆಂದು ಒತ್ತಿ ಹೇಳಿದ್ದರು. “ಸಂತಾನಹರಣ ಶಸ್ತ್ರಕ್ರಿಯೆಗಳ ಗುರಿಯನ್ನು ರಾಜ್ಯಸರ್ಕಾರವು ಒಂದು ಲಕ್ಷಕ್ಕೆ ಏರಿಸಿದ್ದು ಅದರಲ್ಲಿ ಶೇ. ೭೦ರಷ್ಟು ಸಾಧನೆಯನ್ನು ಈಗಾಗಲೆ ಪೂರೈಸಿದೆ. ಸಂಜಯಗಾಂಧಿಯವರ ಐದು ಅಂಶಗಳ ಕಾರ್ಯಕ್ರಮ ಬಂದ ಬಳಿಕ ಕುಟುಂಬಯೋಜನೆಯು ವೇಗವನ್ನು ಪಡೆದುಕೊಂಡಿದೆ” ಎಂದು ಮುಖ್ಯಮಂತ್ರಿ ಶ್ಲಾಘಿಸಿದರು.
ಅದೇ ರೀತಿ ಒರಿಸ್ಸಾ (ಒಡಿಶಾ) ಆರೋಗ್ಯ ಇಲಾಖೆಯ ಕಾರ್ಯದರ್ಶಿಯವರು ಜನವರಿ ೧೭ರಂದು (೧೯೭೭) ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮುಖ್ಯ ವೈದ್ಯಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಕುಟುಂಬಯೋಜನೆಯ ಬಗ್ಗೆ ಸಂಜಯಗಾಂಧಿಯವರು ಸಲ್ಲಿಸಿದ ಸೇವೆಯನ್ನು ಉಲ್ಲೇಖಿಸಿದ್ದರು: “ಇದೇ ತಿಂಗಳು ೨೯-೩೦ಕ್ಕೆ ಸಂಜಯಗಾಂಧಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ೧೯೭೬ರ ಏಪ್ರಿಲ್ನಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಜನಸಂಖ್ಯಾ ನೀತಿಯ ಗುರಿ ಸಾಧನೆಗೆ ಸಂಜಯ್ ಅವರು ತಮ್ಮ ಕ್ರಿಯಾಶೀಲ (ಡೈನಾಮಿಕ್) ಪ್ರಭಾವ ಬೀರುತ್ತಿರುವುದು ನಮಗೆಲ್ಲ ಗೊತ್ತು. ದೇಶಾದ್ಯಂತ ಇದು ತಡೆಯಿಲ್ಲದೆ ನಡೆಯುತ್ತಿದೆ. ಆದ್ದರಿಂದ ಈ ಅತಿ ಮುಖ್ಯ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆಯ ಗುರುತಾಗಿ ನಾವು ದಿ. ೨೯ರಿಂದ ರಾಜ್ಯಾದ್ಯಂತ ವಿಶೇಷ ಕುಟುಂಬಯೋಜನಾ ಮಾಸವನ್ನು ಆಚರಿಸಬೇಕು” ಎಂದು ತಿಳಿಸಿದ್ದರು.
ಪುತ್ರನಿಗೆ ಇಂದಿರಾ ಶ್ಲಾಘನೆ
ಕೇಂದ್ರ ಯೋಜನಾ ಇಲಾಖೆ ರಾಜ್ಯ ಸಚಿವ ಶಂಕರ ಘೋಷ್ ಅವರು ಬರೆದ ‘೨೦ ಅಂಶ ಮತ್ತು ಐದಂಶಗಳ ಕಾರ್ಯಕ್ರಮ’ ಎಂಬ ಲೇಖನದಲ್ಲಿ ಪ್ರಧಾನಿ ಇಂದಿರಾಗಾಂಧಿಯವರು ಐದಂಶದ ಕಾರ್ಯಕ್ರಮವನ್ನು ಬಹಿರಂಗವಾಗಿ ಹೊಗಳಿದುದು ಉಲ್ಲೇಖಗೊಂಡಿದೆ: “ಸಂಜಯಗಾಂಧಿ ಘೋಷಿಸಿದ ಐದಂಶ ಕಾರ್ಯಕ್ರಮವು ದೇಶದಲ್ಲಿ ಅದ್ಭುತ ಉತ್ಸಾಹವನ್ನು ಕೆರಳಿಸಿದೆ. ಇದು ಕುಟುಂಬಯೋಜನೆಯ ಬೃಹತ್ ಆಂದೋಲನವಾಗಿದೆ.” ೧೯೭೬ರ ನವೆಂಬರ್ನಲ್ಲಿ ಗುವಾಹಟಿಯಲ್ಲಿ ಜರಗಿದ ಎಐಸಿಸಿ ಅಧಿವೇಶನದಲ್ಲಿ ಕೂಡ ಪ್ರಧಾನಿ ಐದಂಶದ ಕಾರ್ಯಕ್ರಮವನ್ನು ಹೊಗಳುತ್ತ “ಇತರ ಕಾರ್ಯಕ್ರಮಗಳ ಯಶಸ್ಸಿಗೆ ಐದಂಶಗಳ ಕಾರ್ಯಕ್ರಮವೇ ತಳಹದಿ(basic)” ಎಂದರು. ದೇಶದ ನಾಯಕಿ ಇಂದಿರಾ ಅವರ ಇಪ್ಪತ್ತು ಅಂಶಗಳಿಗೆ ಈ ಐದು ಅಂಶಗಳು ಪೂರಕ – ಎಂಬ ಅಭಿಪ್ರಾಯ ಎಲ್ಲೆಡೆ ಪ್ರತಿಬಿಂಬಿತವಾಯಿತು.
ಶಾ ಆಯೋಗಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನೀಡಿದ ಮಾಹಿತಿಯ ಪ್ರಕಾರ ದೇಶದಲ್ಲಿ ೧೯೭೫-೭೬ರಲ್ಲಿ ಒಟ್ಟು ೨೬.೭ ಲಕ್ಷ ಸಂತಾನಹರಣ ಶಸ್ತ್ರಕ್ರಿಯೆಗಳು ನಡೆದರೆ ಮುಂದಿನ ವರ್ಷ ಅದು ೮೧ ಲಕ್ಷಕ್ಕೇರಿತು. ೧೯೭೫-೭೬ರಲ್ಲಿ ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗುರಿ ಮೀರಿದ ಸಾಧನೆ ಮಾಡಿದರೆ ಮುಂದಿನ ವರ್ಷ ೧೮ ರಾಜ್ಯ ಹಾಗೂ ಐದು ಕೇಂದ್ರಾಡಳಿತ ಪ್ರದೇಶಗಳು ಅಂತಹ ಸಾಧನೆ ಮಾಡಿದವು. ಸಂಜಯಗಾಂಧಿಯವರ ಕಾರ್ಯಕ್ರಮದಲ್ಲಿ ಕುಟುಂಬಯೋಜನೆಗೆ ಮಹತ್ತ್ವ ನೀಡಿದ್ದೇ ಇಂತಹ ಏರಿಕೆಗೆ ಕಾರಣ ಎಂದು ತಿಳಿಯಲಾಯಿತು. ರಾಜಕೀಯ ವಲಯಗಳಲ್ಲಿ ಅದರ ಬದ್ಧತೆ (ಭಯ?) ಇತ್ತು.
ಬಲಾತ್ಕಾರದ ಕ್ರಮ
ಉತ್ತರಪ್ರದೇಶ, ಬಿಹಾರ, ಹರ್ಯಾಣಾ, ದೆಹಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಕುಟುಂಬಯೋಜನೆಯಲ್ಲಿ ಸರ್ಕಾರದ ಎಲ್ಲ ಇಲಾಖೆಗಳು ತಮ್ಮನ್ನು ತೊಡಗಿಸಿಕೊಂಡಿದ್ದವು. ವಿವಿಧ ಇಲಾಖೆಗಳಿಗೆ ಶಸ್ತ್ರಕ್ರಿಯೆ ಬಗ್ಗೆ ನಿರ್ದಿಷ್ಟ ಗುರಿಯನ್ನು ನೀಡಲಾಗಿತ್ತು. ಅದು ಹಲವೆಡೆ ಬಲಾತ್ಕಾರದ ಕ್ರಮಗಳಿಗೆ ದಾರಿಯಾಯಿತು. ೧೯೭೬ರ ಜುಲೈ ಹೊತ್ತಿಗೆ ಉತ್ತರಪ್ರದೇಶದ ಸರ್ಕಾರೀ ನೌಕರರ ನಿಯಮದಲ್ಲಿ ಪ್ರತಿಯೊಬ್ಬ ಸರ್ಕಾರೀ ನೌಕರನ ಕರ್ತವ್ಯದಲ್ಲಿ ಅರ್ಹ ವ್ಯಕ್ತಿಗಳಿಗೆ ಸಂತಾನಹರಣ ಶಸ್ತ್ರಕ್ರಿಯೆ ಬಗ್ಗೆ ಪ್ರೇರಣೆ ನೀಡುವುದು ಸೇರಿತ್ತು. ಅದನ್ನು ನೀಡದಿದ್ದರೆ ವೇತನ, ಭತ್ಯೆ, ವಾರ್ಷಿಕ ಇಂಕ್ರಿಮೆಂಟ್ಗಳನ್ನು ತಡೆಹಿಡಿಯಬಹುದಿತ್ತು; ರಾಜ್ಯಸರ್ಕಾರದಿಂದ ಕಾಲಕಾಲಕ್ಕೆ ಅಂತಹ ಎಚ್ಚರಿಕೆ ಸೂಚನೆಗಳು ಬರುತ್ತಿದ್ದವು.
ಬಿಹಾರದ ಜಿಲ್ಲಾಧಿಕಾರಿಗಳು ಮತ್ತು ವಿಭಾಗೀಯ ಕಮಿಷನರ್ಗಳಿಗೆ ರಾಜ್ಯದ ಆರೋಗ್ಯ ಕಮಿಷನರ್ ಅವರು ಬರೆದ ಪತ್ರದಲ್ಲಿ “ವಿವಿಧ ಇಲಾಖೆಗಳ ಕೆಳಹಂತದ ಕ್ಷೇತ್ರ ಸಿಬ್ಬಂದಿ ತಮಗೆ ವಿಧಿಸಿದ ಶಸ್ತ್ರಕ್ರಿಯೆ ಗುರಿಯನ್ನು ಸಾಧಿಸದಿದ್ದರೆ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿದೆ. ಪ್ರತಿ ತಿಂಗಳು ಅವರಿಗೆ ಸೂಚಿಸಿದ ಗುರಿ ಮತ್ತು ಸಾಧಿಸಿದ ಪ್ರಗತಿಯನ್ನು ತಿಳಿಸಬೇಕು (ವರದಿ)” ಎಂದಿದ್ದರು. ಕೆಲವು ಜಿಲ್ಲೆಗಳು ಎಲ್ಲ ವರ್ಗದ ಕ್ಷೇತ್ರ ಸಿಬ್ಬಂದಿಗೆ ಕಾರ್ಡ್ ನೀಡಿದ್ದವು. ಅಲ್ಲಿಯ ವೈದ್ಯಾಧಿಕಾರಿಗಳು ತಿಳಿಸಿದ ಪ್ರಕಾರ, ನಿಗದಿತ ಗುರಿಯನ್ನು ಸಾಧಿಸಿದ ಬಳಿಕವೇ ಅವರ ಸಂಬಳ, ನಿರ್ದಿಷ್ಟ ಪ್ರಯಾಣ ಭತ್ಯೆ (ಟಿಎ)ಗಳನ್ನು ನೀಡಲಾಗುತ್ತಿತ್ತು; ಇತರ ಜಿಲ್ಲೆಗಳು ಕೂಡ ಹಾಗೇ ಮಾಡಬಹುದೆಂದು ಸೂಚಿಸಲಾಗಿತ್ತು.
ಸ್ಥಳೀಯ ಅಧಿಕಾರಿಗಳು ಕೆಲವು ಜಿಲ್ಲೆಗಳ ಶಾಲಾ ಶಿಕ್ಷಕರ ವೇತನವನ್ನು ತಡೆಹಿಡಿದಿದ್ದರು. ಆಗ ಶಿಕ್ಷಣ ಇಲಾಖೆಯ ಕಮಿಷನರ್ ಪತ್ರ ಬರೆದು, ಗುರಿ ಸಾಧಿಸಿದವರ ಸಂಬಳವನ್ನು ತಡೆಯಬೇಡಿ ಎಂದರು. ಹರ್ಯಾಣಾದ ಮುಖ್ಯ ಕಾರ್ಯದರ್ಶಿಯವರು ಹಣಕಾಸು ಇಲಾಖೆ ಕಮಿಷನರ್ ಮತ್ತು ಇಲಾಖಾ ಮುಖ್ಯಸ್ಥರುಗಳಿಗೆ ಬರೆದ ಪತ್ರದಲ್ಲಿ (೨೮-೮-೧೯೭೬) “ಈಗಾಗಲೆ ಶಸ್ತ್ರಕ್ರಿಯೆಗೆ ಒಳಗಾಗದ ಎಲ್ಲ ಅರ್ಹ ಸರ್ಕಾರೀ ನೌಕರರು ನಿರ್ದಿಷ್ಟ ದಿನಾಂಕದೊಳಗೆ ಶಸ್ತçಕ್ರಿಯೆಗೆ ಒಳಗಾಗಬೇಕು. ಎರಡು ಹಂತಗಳಿದ್ದು, ಮೊದಲ ಹಂತದಲ್ಲಿ ಮೂರು ಅಥವಾ ಜಾಸ್ತಿ ಮಕ್ಕಳಿರುವವರು ಶಸ್ತ್ರಕ್ರಿಯೆಯನ್ನು ಮಾಡಿಸಿಕೊಳ್ಳಬೇಕು. ಎರಡನೇ ಹಂತದಲ್ಲಿ ಉಳಿದ ಎಲ್ಲ ಅರ್ಹ ಸರ್ಕಾರೀ ನೌಕರರು ಶಸ್ತ್ರಕ್ರಿಯೆಗೆ ಒಳಗಾಗಬೇಕು. ಇದನ್ನು ಪಾಲಿಸದವರು ಶಿಕ್ಷೆಗೆ ಒಳಪಡುತ್ತಾರೆ” ಎಂದು ತಿಳಿಸಿದ್ದರು.
ಹಿಮಾಚಲಪ್ರದೇಶದ ಕುಲು ಜಿಲ್ಲಾಧಿಕಾರಿ ತಮ್ಮ ಕೆಳಗಿನ ಇಲಾಖಾಧಿಕಾರಿಗಳಿಗೆ ಪತ್ರ ಬರೆದು (ಅಕ್ಟೋಬರ್ ೧೯೭೬) ರಾಜ್ಯದಲ್ಲಿ ಕೈಗೊಂಡ ಕುಟುಂಬಯೋಜನೆ ಕ್ರಮಗಳ ಬಗ್ಗೆ ವಿವರಿಸಿ ಎಲ್ಲ ಅಧಿಕಾರಿಗಳನ್ನು ಎಚ್ಚರಿಸಿದರು: “ಅರ್ಹರಾಗಿದ್ದೂ ಶಸ್ತ್ರಕ್ರಿಯೆ ಮಾಡಿಸಿಕೊಳ್ಳದವರನ್ನು ಇನ್ನು ಸಹಿಸುವುದಿಲ್ಲ. ಶಸ್ತ್ರಕ್ರಿಯೆ ಆಗುವವರೆಗೆ ಅವರ ವೇತನವನ್ನು ತಡೆಹಿಡಿಯಲಾಗುವುದು. ನಿಗದಿತ ಸಮಯದೊಳಗೆ ಶೇ. ೪೦ರಷ್ಟು ಮಾತ್ರ ಶಸ್ತ್ರಕ್ರಿಯೆ ಆಗಿದೆ. ಇತರ ಜಿಲ್ಲೆಗಳಲ್ಲಿ ಮನವೊಲಿಕೆ, ಬಲಾತ್ಕಾರ ಎರಡೂ ವಿಧಾನಗಳನ್ನು ಅನುಸರಿಸಿದ್ದಾರೆ. ಅಲ್ಲಿಯ ಎಲ್ಲ ಇಲಾಖಾ ಅಧಿಕಾರಿಗಳು ಕುಟುಂಬಯೋಜನೆಯ ಕೆಲಸ ಮಾಡಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಅದು ನಡೆದಿಲ್ಲ. ಈಗ ಗುರಿ ಸಾಧಿಸಲು ಬಲಾತ್ಕಾರವಾದರೂ ಸರಿ ಎನ್ನುವ ಪರಿಸ್ಥಿತಿಗೆ ಬಂದಿದ್ದೇವೆ” ಎಂದರು.
೪ನೇ ಮಗು ‘ದುರ್ನಡತೆ’
ಆಯೋಗದ ಪ್ರಶ್ನೆಗೆ ಉತ್ತರಿಸಿದ ರಾಜಸ್ಥಾನ ಸರ್ಕಾರವು, ಜಿಲ್ಲಾಮಟ್ಟದ ಅಧಿಕಾರಿಗಳ ಬಗೆಗಿನ ವಾರ್ಷಿಕ ರಹಸ್ಯ ವರದಿಯನ್ನು ತಯಾರಿಸುವಾಗ ‘ಕುಟುಂಬಯೋಜನೆಯಲ್ಲಿ ಅವರ ಯಶಸ್ಸನ್ನು ಪರಿಗಣಿಸುತ್ತಿದ್ದೆವು’ ಎಂದು ತಿಳಿಸಿತು. ಒಬ್ಬ ಸರ್ಕಾರೀ ನೌಕರನಿಗೆ ನಾಲ್ಕನೇ ಮಗು ಜನಿಸಿದರೆ ಅದನ್ನು ದುರ್ನಡತೆ (misconduct) ಎಂದು ಪರಿಗಣಿಸಲಾಗುತ್ತಿತ್ತು. ಅದೇ ರಾಜ್ಯದ ಚುರು ಜಿಲ್ಲೆಯಲ್ಲಿ ಅರ್ಹರಾಗಿದ್ದೂ ಶಸ್ತ್ರಕ್ರಿಯೆಗೆ ಒಳಪಡದ ಸರ್ಕಾರೀ ನೌಕರರಿಗೆ ಡ್ಯೂಟಿ ನೀಡದಿರುವ ಶಿಕ್ಷೆ ಇತ್ತು. ಆತ ಅಥವಾ ಆತನ ಪತ್ನಿ ಶಸ್ತçಕ್ರಿಯೆಗೆ ಒಳಗಾಗಿ ಅದರ ಸರ್ಟಿಫಿಕೇಟ್ ನೀಡಿದ ಬಳಿಕವೇ ಮತ್ತೆ ಕೆಲಸ ಕೊಡುತ್ತಿದ್ದರು.
ಭಿಕ್ಷುಕರಿಗೆ ಶಸ್ತ್ರಕ್ರಿಯೆ
ಕರ್ನಾಟಕದ ಒಂದು ವಿಚಿತ್ರ ಪ್ರಸಂಗವು ಶಾ ಆಯೋಗದ ಮುಂದೆ ಬಂದಿತ್ತು. ರಾಜ್ಯದ ಐಜಿಪಿಯವರು ಅಕ್ಟೋಬರ್ ೧೨, ೧೯೭೬ರಂದು ಹೆಚ್ಚುವರಿ ಐಜಿಪಿ (ಸಿಐಡಿ) ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ)ಗಳಿಗೆ ಒಂದು ಸುತ್ತೋಲೆ ಹೊರಡಿಸಿ, ಭಿಕ್ಷಾಟನೆ ತಡೆ ಕಾಯ್ದೆ-೧೯೭೫ರ ಪ್ರಕಾರ ಭಿಕ್ಷುಕರನ್ನು ಸೆರೆಹಿಡಿದು ಸಂತಾನಹರಣ ಶಸ್ತçಕ್ರಿಯೆ ನಡೆಸುವ ಬಗ್ಗೆ ಜಿಲ್ಲಾಸ್ಪತ್ರೆ ಮತ್ತಿತರ ಸಂಸ್ಥೆಗಳಿಗೆ ಕಳುಹಿಸುವಂತೆ ಸೂಚಿಸಿದ್ದರು. “ಎಲ್ಲ ಅರ್ಹರಿಗೆ ಶಸ್ತ್ರಕ್ರಿಯೆ ಆಗಬೇಕು. ಅದಕ್ಕಾಗಿ ಸಂಬಳವನ್ನು ತಡವಾಗಿ ಕೊಡಬಹುದು” ಎನ್ನುವ ಒಂದು ಸೂಚನೆ ದೆಹಲಿ ಆಡಳಿತದಿಂದ ಜಾರಿಯಾಗಿತ್ತು.
ತುರ್ತುಪರಿಸ್ಥಿತಿಯ ವೇಳೆ ಶಾಲಾ ಶಿಕ್ಷಕರನ್ನು ಕುಟುಂಬಯೋಜನೆ ಕಾರ್ಯಕ್ಕೆ ವ್ಯಾಪಕವಾಗಿ ಬಳಸಿಕೊಳ್ಳಲಾಗಿತ್ತು. ಪ್ರತಿಯೊಬ್ಬ ಸರ್ಕಾರೀ ಶಿಕ್ಷಕರು ಕನಿಷ್ಠ ಐವರನ್ನು ಶಸ್ತçಕ್ರಿಯೆಗೆ ಒಪ್ಪಿಸಿ ಕರೆದುಕೊಂಡು ಬರಬೇಕು ಎನ್ನುವ ಶರತ್ತು ಒಂದೆಡೆ ಇದ್ದರೆ, ಈ ಸಂಬಂಧ ಶಿಕ್ಷಕರ ವಿರುದ್ಧ ವರ್ಗಾವಣೆ, ಅಮಾನತು ಮಾತ್ರವಲ್ಲದೆ ಕೆಲಸದಿಂದ ವಜಾ ಮಾಡಿದ ಉದಾಹರಣೆಗಳು ಕೂಡ ಇವೆ. ಶಸ್ತçಕ್ರಿಯೆಗೆ ಸಂಬಂಧಿಸಿ ಸರ್ಕಾರದ ನೀತಿಯನ್ನು ಪಾಲಿಸದ ಸರ್ಕಾರೀ ನೌಕರರನ್ನು ವಜಾ ಮಾಡಿ ಶಸ್ತ್ರಕ್ರಿಯೆ ಮಾಡಿಸಿಕೊಂಡ ಬಳಿಕ ಮರುನೇಮಕ ಮಾಡಿದ ಉದಾಹರಣೆಗಳೂ ಇವೆ.
ದೆಹಲಿಯಲ್ಲಿ ಸೈಟ್ ಹಾಗೂ ಫ್ಲಾಟ್ ನೀಡಿಕೆ, ಕೈಗಾರಿಕಾ ನಿವೇಶನ ನೀಡಿಕೆ ಆಗಬೇಕಿದ್ದರೆ ಶಸ್ತçಕ್ರಿಯೆ ಮಾಡಿಸಿಕೊಂಡು ಅದರ ದಾಖಲೆಯನ್ನು ಹಾಜರುಪಡಿಸಬೇಕಿತ್ತು. ಫ್ಲಾಟ್ ಬದಲಾವಣೆ ಮಾಡಬೇಕಿದ್ದರೆ ೨೦ ಶಸ್ತ್ರಕ್ರಿಯೆ ಕೇಸ್ಗಳನ್ನು ತರಬೇಕಿತ್ತು. ಈಗಾಗಲೆ ಎರಡು ಅಥವಾ ಮೂರು ಮಕ್ಕಳಿದ್ದವರು ಪಡಿತರ ಚೀಟಿ (ರೇಶನ್ ಕಾರ್ಡ್)ಗೆ ಮತ್ತೆ ಮಕ್ಕಳನ್ನು ಸೇರಿಸಬೇಕಿದ್ದರೆ ಸುಲಭದಲ್ಲಿ ಸಾಧ್ಯವಾಗುತ್ತಿರಲಿಲ್ಲ; ಕಾಯಬೇಕಿತ್ತು.
ಪ್ರತಿಭಟನೆ ಬಿಸಿ ರಾಜ್ಯಕ್ಕೆ
ಭರ್ಜರಿ ಗುರಿ ಸಾಧನೆಗೆ ಕೆಲವು ರಾಜ್ಯಗಳು ಅನುಸರಿಸಿದ ಬಲಪ್ರಯೋಗದ ಕ್ರಮಗಳ ಫಲವಾಗಿ ಜನರಿಂದ ಪ್ರತಿಭಟನೆಗಳು ಬಂದ ಬಗ್ಗೆ ಗೃಹಇಲಾಖೆಯ ವರದಿಯು ತಿಳಿಸಿದೆ; ಮುಖ್ಯವಾಗಿ ಉತ್ತರಪ್ರದೇಶದಿಂದ ಅಂತಹ ವರದಿ ಬಂದಿತ್ತು. “ಕುಟುಂಬಯೋಜನೆ ಮತ್ತು ಶಸ್ತ್ರಕ್ರಿಯೆ ಎಂದರೆ ಆಗ ಒಂದೇ ಆಗಿತ್ತು. ಕುಟುಂಬಯೋಜನೆಗೆ ಜನರ ವಿರೋಧ ಎಂದರೆ ಅದು ಶಸ್ತ್ರಕ್ರಿಯೆ ಬಗೆಗಿನ ವಿರೋಧವಾಗಿತ್ತು. ಜಿಲ್ಲೆ ಮತ್ತು ಇಲಾಖೆಗಳಿಗೆ ಶಸ್ತçಕ್ರಿಯೆಯ ಸಂಖ್ಯೆಯನ್ನು ನಿಗದಿಪಡಿಸಿ ಜಾರಿಗೆ ಒತ್ತಡ ತಂದ ಕಾರಣ ಅಲ್ಲಲ್ಲಿ ವಿರೋಧ ವ್ಯಕ್ತವಾಯಿತು.” ರಾಜಕೀಯ ಪಕ್ಷಗಳು, ಹಿಂದು ಮತ್ತು ಮುಸ್ಲಿಂ ಮತೀಯ ಸಂಘಟನೆಗಳು ಮತ್ತು ಸಮಾಜದ ಕೆಲವು ಸಂಘಟಿತ ಸಂಘಟನೆಗಳು ಮತ್ತು ಸಮಾಜದ ಕೆಲವು ಸಂಘಟಿತ ವರ್ಗಗಳಿಂದ ವಿರೋಧ ಬಂತು. ಕುಟುಂಬಯೋಜನೆಗೆ ವಿರೋಧ ಇಲ್ಲದಿದ್ದರೂ ಸಂತಾನಹರಣ ಶಸ್ತ್ರಕ್ರಿಯೆಯ ಬಗೆಗಿನ ಬಲಾತ್ಕಾರ, ಒತ್ತಡಗಳು ವಿರೋಧ ಮತ್ತು ಪ್ರತಿಭಟನೆಗಳಿಗೆ ಕಾರಣವಾದವು.
ಶಸ್ತ್ರಕ್ರಿಯೆಯಲ್ಲಿ ಬಲಪ್ರಯೋಗದ ಬಗ್ಗೆ ದೂರುಗಳು ಬಂದಾಗ ಕೇಂದ್ರ ಆರೋಗ್ಯ ಇಲಾಖೆ ಅದಕ್ಕೆ ಹೆಚ್ಚಿನ ಮಹತ್ತ್ವ ನೀಡಲಿಲ್ಲ. ಇಲಾಖೆಯ ಕಾರ್ಯದರ್ಶಿಯವರು ಮಾರ್ಚ್ ೨೪, ೧೯೭೭ರಂದು ಹೀಗೆ ಹೇಳಿದರು: “ಕೆಲವು ಅಧಿಕಾರಿಗಳು ನಡೆಸಿದ ಅತಿರೇಕಗಳ ಕಾರಣದಿಂದ ಆಗಾಗ ಕಾನೂನು-ಸುವ್ಯವಸ್ಥೆ ಸಮಸ್ಯೆ ಉಂಟಾದದ್ದಿದೆ. ಮುಖ್ಯವಾಗಿ ಹರ್ಯಾಣಾ, ಉತ್ತರಪ್ರದೇಶ, ರಾಜಸ್ಥಾನ ಮತ್ತು ಬಿಹಾರಗಳಿಂದ ಅಂತಹ ದೂರುಗಳು ಬಂದಿವೆ. ಶಿಕ್ಷಕರು ಮುಂತಾದವರ ವೇತನವನ್ನು ತಡೆಹಿಡಿದ ಬಗ್ಗೆ ಕೂಡ ದೂರುಗಳು ಬಂದಿವೆ. ಅವುಗಳನ್ನು ಕೂಡಲೆ ಸಚಿವರ ಗಮನಕ್ಕೆ ತಂದಿದ್ದು ಅವರು ಅದನ್ನು ಸಂಬಂಧಪಟ್ಟ ರಾಜ್ಯಗಳಿಗೆ ಕಳುಹಿಸಿ ಸೂಕ್ತಕ್ರಮಕ್ಕೆ ಸೂಚಿಸಲಾಯಿತು. ಕುಟುಂಬಯೋಜನೆಯಲ್ಲಿ ರಾಜ್ಯಗಳ ಉತ್ತಮ ಸಾಧನೆಯನ್ನು ಶ್ಲಾಘಿಸುವ ಜೊತೆಗೆ ಸಚಿವರು, ಅರ್ಹರಲ್ಲದವರಿಗೆ ಶಸ್ತ್ರಕ್ರಿಯೆ ನಡೆಸಿದ್ದು, ಶಸ್ತ್ರಕ್ರಿಯೆ ಬಗ್ಗೆ ಬಲಪ್ರಯೋಗ ನಡೆಸಿದ ಬಗ್ಗೆ ಕೂಡ ರಾಜ್ಯಗಳ ಗಮನಸೆಳೆದಿದ್ದಾರೆ; ಮತ್ತು ಶಸ್ತçಕ್ರಿಯೆಯ ನಂತರದ ಚಿಕಿತ್ಸೆ, ಉಪಚಾರಗಳ ಕಡೆಗೆ ಒತ್ತು ನೀಡಿದ್ದಾರೆ” ಎಂದವರು ತಿಳಿಸಿದ್ದಾರೆ. ಇದರಲ್ಲಿ ದೂರು ಬಂದಾಗ ಅದರ ಹೊಣೆಯನ್ನು ರಾಜ್ಯಸರ್ಕಾರಗಳತ್ತ ತಿರುಗಿಸುವ ಕೇಂದ್ರದ ಜಾಣ್ಮೆ ಕೂಡ ಇದೆ. ಸಾಧನೆಯ ಯಶಸ್ಸು ಸಂಜಯಗಾAಧಿ ಮತ್ತು ಕೇಂದ್ರಸರ್ಕಾರಕ್ಕೆ; ಪ್ರತಿಭಟನೆಯ ಬಿಸಿ ರಾಜ್ಯಸರ್ಕಾರಗಳಿಗೆ – ಹೀಗಿತ್ತು ವ್ಯವಸ್ಥೆ ಎಂದರೆ ತಪ್ಪಲ್ಲ.
ಸಿಪಿಐ ದೂರು
ಆರೋಗ್ಯ ಇಲಾಖೆಗೆ ಸುಮಾರು ೩೦೦ ದೂರುಗಳು ಬಂದಿದ್ದು, ತನಿಖೆ-ಕ್ರಮಗಳ ಬಗ್ಗೆ ಅವುಗಳನ್ನು ಆಯಾ ರಾಜ್ಯಗಳಿಗೆ ಕಳುಹಿಸಲಾಯಿತು. ಈ ವಿಷಯದಲ್ಲಿ ರಾಜ್ಯಗಳ ಕೆಲಸದಲ್ಲಿ ಹಸ್ತಕ್ಷೇಪ ಮಾಡಬಾರದೆನ್ನುವುದು ಕೇಂದ್ರದ ಸಮರ್ಥನೆಯಾಗಿತ್ತು. ಸಿಪಿಐ ಪ್ರಧಾನಕಾರ್ಯದರ್ಶಿ ಸಿ. ರಾಜೇಶ್ವರರಾವ್ ಅವರು (ಸಿಪಿಐ ಆಗ ಕೇಂದ್ರಸರ್ಕಾರದ ಜೊತೆಗಿತ್ತು) ಅಕ್ಟೋಬರ್ ೨೦, ೧೯೭೬ರಂದು ಆರೋಗ್ಯ ಸಚಿವ ಡಾ|| ಕರಣಸಿಂಗ್ ಅವರಿಗೆ ಪತ್ರ ಬರೆದು ಪಂಜಾಬ್, ಉತ್ತರಪ್ರದೇಶ, ಹರ್ಯಾಣಾ, ಬಿಹಾರ, ರಾಜಸ್ಥಾನ, ದೆಹಲಿಗಳಲ್ಲಿ ಕುಟುಂಬಯೋಜನೆ ಅಧಿಕಾರಿಗಳು ಶಸ್ತ್ರಕ್ರಿಯೆ ಬಗ್ಗೆ ಬಲಪ್ರಯೋಗ ನಡೆಸಿದ್ದಾರೆ ಎಂದು ದೂರಿದರು. ಆಗ ಬಲಪ್ರಯೋಗ ಸಲ್ಲದೆಂದು ಸರ್ಕಾರ ಸೂಚಿಸಿತು. ಇದು ಸೂಕ್ಷ್ಮ ವಿಷಯ ಎಂಬ ಪರಿಜ್ಞಾನ ಸರ್ಕಾರಕ್ಕೆ ಇದ್ದೇ ಇತ್ತು. ಕಾನೂನು-ಸುವ್ಯವಸ್ಥೆ ಸಮಸ್ಯೆ ಬಂದಾಗ ‘ಎಚ್ಚರ’ ಎನ್ನುತ್ತಿತ್ತು.
ಕರ್ನಾಟಕದಿಂದ ಪತ್ರ
ಕರ್ನಾಟಕ ರಾಜ್ಯಪಾಲ ಉಮಾಶಂಕರ ದೀಕ್ಷಿತ್ ಅವರು ದಿ. ಅಕ್ಟೋಬರ್ ೨೦, ೧೯೭೬ರಂದು ಕೇಂದ್ರ ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆಗೊಂದು ಪತ್ರ ಬರೆದರು: “ಕುಟುಂಬಯೋಜನೆಯಲ್ಲಿ ಬಲಪ್ರಯೋಗ ಸಲ್ಲದೆಂದು ಪ್ರಧಾನಿ ಆಗಾಗ ಹೇಳಿದ್ದಾರೆ. ಆದರೂ ಕೆಲವು ರಾಜ್ಯಗಳಲ್ಲಿ ಅಂತಹ ಕ್ರಮಗಳು ನಡೆಯುತ್ತಿವೆ. ಡಾ|| ಸಿಂಗ್ ಅವರು ಹೇಳಿದರೂ ಕೆಲವು ರಾಜ್ಯಗಳು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಆದ್ದರಿಂದ ಉನ್ನತ ಗುರಿಯನ್ನು (ಶಸ್ತ್ರಕ್ರಿಯೆ) ಸಾಧಿಸುವ ಉತ್ಸಾಹದಲ್ಲಿ ಯಾವುದೇ ಅಧಿಕಾರಿ ಅಥವಾ ಸಂಸ್ಥೆ (ಏಜೆನ್ಸಿ) ಅತಿರೇಕವನ್ನು ನಡೆಸಿದಲ್ಲಿ ಅಂಥವರನ್ನು ತಪ್ಪದೆ ತರಾಟೆಗೆ ತೆಗೆದುಕೊಳ್ಳಬೇಕು; ಮತ್ತು ಶಿಕ್ಷಿಸಬೇಕು. ಆ ಶಿಕ್ಷೆಯು ಮಾಧ್ಯಮಗಳಲ್ಲಿ ಪ್ರಕಟಗೊಂಡಾಗ ಸರ್ಕಾರದ ಬಗ್ಗೆ ಜನರಲ್ಲಿ ವಿಶ್ವಾಸ ಬಂದೀತು; ಮತ್ತು ಅಪಪ್ರಚಾರ ನಿಲ್ಲಬಹುದು” ಎಂದು ಕರ್ನಾಟಕ ರಾಜ್ಯಪಾಲರು ಕೇಂದ್ರದ ಗಮನಕ್ಕೆ ತಂದರು. ಇದೆಲ್ಲ ಏನು ಪರಿಣಾಮ ಬೀರಿದವೋ ಗೊತ್ತಿಲ್ಲ. ಲೋಕಸಭಾ ಚುನಾವಣೆ ಬಾರದಿದ್ದರೆ ಕುಟುಂಬಯೋಜನೆಯ ಅತಿರೇಕಗಳು ದೇಶದಲ್ಲಿ ಯಾವ ಹಂತವನ್ನು ತಲಪುತ್ತಿದ್ದವೆಂದು ಹೇಳಲಾಗದು!
(ಸಶೇಷ)
ನ್ಯಾ. ಖನ್ನಾರ ನೇರವಂತಿಕೆಗೆ ಪ್ರತಿಫಲ : ಮುಖ್ಯನ್ಯಾಯಮೂರ್ತಿ ಹುದ್ದೆಗೆ ಕಡೆಗಣನೆ
ನ್ಯಾಯಾಂಗವನ್ನು ಅಪಮೌಲ್ಯಗೊಳಿಸಿ, ನ್ಯಾಯಾಧೀಶರು ಆಳುವ ಪಕ್ಷದ ನೀತಿಗಳಿಗೆ ಬದ್ಧರಾಗಿರಬೇಕೆಂಬ ವಿಚಾರಗಳು ತುರ್ತುಪರಿಸ್ಥಿತಿಯ ಕಾಲಕ್ಕೆ ಪ್ರಚಲಿತಗೊಳಿಸಲ್ಪಟ್ಟವು. ಸರ್ಕಾರೀ ಆಜ್ಞೆಗಳ ಸಿಂಧುತ್ವವನ್ನು ಪ್ರಶ್ನಿಸಿದ ನ್ಯಾಯಾಧೀಶರು ಎಂತಹ ಅವಮಾನವನ್ನು ಅನುಭವಿಸಬೇಕಾಯಿತು ಎಂಬುದಕ್ಕೆ ನ್ಯಾ. ಖನ್ನಾ ಪ್ರಕರಣ ಒಂದು ಸ್ಪಷ್ಟ ನಿದರ್ಶನ.
ಅದು ಎಡಿಎಂ ಜಬಲ್ಪುರ್ ಮತ್ತು ಶಿವಕಾಂತ್ ಶುಕ್ಲಾ ನಡುವಿನ ಪ್ರಕರಣ. ತುರ್ತುಪರಿಸ್ಥಿತಿಯು ಜಾರಿಯಲ್ಲಿರುವ ಸಂದರ್ಭದಲ್ಲಿ, ಸಂವಿಧಾನದ ೨೧ನೇ ವಿಧಿಯು ನೀಡಿರುವ ‘ಜೀವಿಸುವ ಸ್ವಾತಂತ್ರö್ಯ’ವನ್ನು ರಕ್ಷಿಸುವಂತೆ ಕೋರಿ ದೇಶದ ಪ್ರಜೆಗಳು ನ್ಯಾಯಾಲಯದ ಮೊರೆಹೊಗಬಹುದೇ ಎಂಬುದನ್ನು ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ತೀರ್ಮಾನಿಸಬೇಕಿತ್ತು.
ಇದರ ವಿಚಾರಣೆಗಾಗಿ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎ.ಎನ್. ರೇ ಅವರು ತಮ್ಮನ್ನೂ ಒಳಗೊಂಡಂತೆ, ನ್ಯಾಯಮೂರ್ತಿಗಳಾದ ಎಚ್.ಆರ್. ಖನ್ನಾ, ಎಚ್.ಎಂ. ಬೇಗ್, ವೈ.ವಿ. ಚಂದ್ರಚೂಡ್ ಮತ್ತು ಪಿ.ಎನ್. ಭಗವತಿ ಅವರಿದ್ದ ಪಂಚಸದಸ್ಯ ನ್ಯಾಯಪೀಠ ರಚಿಸಿದರು. ತುರ್ತುಪರಿಸ್ಥಿತಿಯು ಜಾರಿಯಲ್ಲಿರುವ ತನಕ ವೈಯಕ್ತಿಕ ಸ್ವಾತಂತ್ರ್ಯ ಬೇಕು ಎಂದು ಯಾವ ಪ್ರಜೆಯೂ ಕೇಳುವಂತಿಲ್ಲ – ಎಂಬ ಇಂದಿರಾಗಾಂಧಿ ಸರ್ಕಾರದ ವಾದವನ್ನು ನ್ಯಾಯಪೀಠದಲ್ಲಿದ್ದ ನಾಲ್ವರು ನ್ಯಾಯಮೂರ್ತಿಗಳು ಎತ್ತಿಹಿಡಿದರು. ಆದರೆ ನ್ಯಾಯಮೂರ್ತಿ ಖನ್ನಾ ಮಾತ್ರ ತಮ್ಮ ಭಿನ್ನಮತವನ್ನು ದಾಖಲಿಸಿದರು. ‘ಜೀವಿಸುವ ಹಾಗೂ ವೈಯಕ್ತಿಕ ಸ್ವಾತಂತ್ರ್ಯವನ್ನು ಕಾರ್ಯಾಂಗದ ಪ್ರಶ್ನಾತೀತ ಅಧಿಕಾರದ ಕೃಪೆಯಲ್ಲಿ ಇರಿಸುವುದಕ್ಕೆ ದೇಶದ ಸಂವಿಧಾನ ಮತ್ತು ಕಾನೂನುಗಳು ಅವಕಾಶ ಕೊಡುವುದಿಲ್ಲ’ ಎಂದು ನ್ಯಾಯಮೂರ್ತಿ ಖನ್ನಾ ಭಿನ್ನ ತೀರ್ಪು ನೀಡಿದರು. ಬಹುಮತದ ಆಧಾರದಲ್ಲಿ ತೀರ್ಪು ತುರ್ತುಪರಿಸ್ಥಿತಿ ಹೇರಿದ ಸರ್ಕಾರದ ಪರವಾಯಿತು. ಇದರ ಪಲಿತಾಂಶ ನ್ಯಾ. ಖನ್ನಾ ಅವರು ನಿರೀಕ್ಷಿಸಿದಂತೆಯೇ ಆಯಿತು.
ಒಂಬತ್ತು ತಿಂಗಳ ನಂತರ ಸರ್ವೋಚ್ಚ ನ್ಯಾಯಾಧೀಶ ಸ್ಥಾನದಿಂದ ರೇ ನಿವೃತ್ತರಾದರು. ಅತ್ಯಂತ ಹಿರಿಯ ನ್ಯಾಯಮೂರ್ತಿಗಳಾಗಿದ್ದ ಖನ್ನಾ ಮುಖ್ಯನ್ಯಾಯಾಧೀಶರಾಗಿ (ಸಿಜೆಐ) ನೇಮಕವಾಗಬೇಕಾಗಿತ್ತು. ಆದರೆ ಇಂದಿರಾಗಾಂಧಿ ನೇತೃತ್ವದ ಕೇಂದ್ರ ಸರ್ಕಾರವು, ನ್ಯಾಯಮೂರ್ತಿ ಖನ್ನಾ ಅವರ ಹಿರಿತನವನ್ನು ಕಡೆಗಣಿಸಿ (ಜೊತೆಗೆ ಹಿರಿಯ ನ್ಯಾಯಮೂರ್ತಿಗಳಾದ ಕೆ.ಎಸ್. ಹೆಗ್ಡೆ, ಜೆ.ಎಂ. ಶೆಲಾತ್, ಎ.ಎನ್. ಗ್ರೋವರ್ ಅವರ ಹಿರಿತನವನ್ನೂ ಕಡೆಗಣಿಸಲಾಯಿತು) ಕಿರಿಯ ನ್ಯಾಯಮೂರ್ತಿ ಎಚ್.ಎಂ. ಬೇಗ್ ಅವರನ್ನು ೧೯೭೭ರ ಜನವರಿಯಲ್ಲಿ ಸಿಜೆಐಯಾಗಿ ನೇಮಿಸಿತು. ಅಂದು ಸರ್ಕಾರದ ವಾದವನ್ನು ಒಪ್ಪಿದ ನ್ಯಾಯಮೂರ್ತಿಗಳಾದ ಚಂದ್ರಚೂಡ್ ಮತ್ತು ಭಗವತಿ ಅವರು ಕೂಡ ಮುಂದೆ ಮುಖ್ಯನ್ಯಾಯಮೂರ್ತಿಗಳಾದರು.
ಪ್ರತಿಭಟನೆ: ಕರ್ನಾಟಕದ ಮುನ್ನಡೆ
ಕಾಂಗ್ರೆಸ್ ದೇಶದ ಮೇಲೆ ಹೇರಿದ ತುರ್ತುಪರಿಸ್ಥಿತಿಯ ವಿರುದ್ಧ ನವೆಂಬರ್ ೧೪, ೧೯೭೫ರಂದು ಕರ್ನಾಟಕದ ೧೯ ಜಿಲ್ಲೆಗಳ ಎಲ್ಲ ಕೇಂದ್ರಗಳು ಸೇರಿದಂತೆ ದೇಶದ ೭೭ ಕೇಂದ್ರಗಳಲ್ಲಿ ಸತ್ಯಾಗ್ರಹ ನಡೆಯಿತು. ದಿ.೨೫-೧೧-೧೯೭೫ರ ವರೆಗಿನ ವರದಿಯ ಪ್ರಕಾರ ಅಂಕಿ-ಅಂಶಗಳು ಹೀಗಿವೆ: ಭಾಗವಹಿಸಿದ ತಾಲೂಕುಗಳು – ೭೯, ಸ್ಥಾನಗಳು – ೯೪, ತಂಡಗಳು – ೧೩೦.
ಒಟ್ಟು ಸತ್ಯಾಗ್ರಹಿಗಳು: (ಮೊದಲು ಬಂಧಿತರಾದವರು ಸೇರಿ) ೧,೪೫೨. ಬೆಂಗಳೂರುನಗರ – ೧೦೩, ಬೆಂಗಳೂರು ಜಿಲ್ಲೆ – ೮೧, ತುಮಕೂರು – ೬೬, ಕೋಲಾರ – ೨೨, ಮೈಸೂರು – ೧೦೬, ಮಂಡ್ಯ – ೮, ಕೊಡಗು – ೧೧೨, ಹಾಸನ – ೯೬, ಮಂಗಳೂರು – ೩೦೫, ಶಿವಮೊಗ್ಗ – ೧೫೧, ಚಿಕ್ಕಮಗಳೂರು – ೧೦೦, ಬಳ್ಳಾರಿ – ೧೫, ರಾಯಚೂರು – ೭, ಚಿತ್ರದುರ್ಗ – ೩೩, ಗುಲ್ಬರ್ಗ – ೨೪, ಬಿಜಾಪುರ – ೪೦, ಬೀದರ್ – ೪, ಧಾರವಾಡ – ೯೫, ಬೆಳಗಾವಿ – ೨೬, ಕಾರವಾರ – ೫೮.
ಬಂಧಿಸಲಾದ ರಾಜ್ಯಮಟ್ಟದ ಪ್ರಮುಖರು
ಡಾ|| ಕೆ.ಆರ್. ಕುಲಕರ್ಣಿ (ಪ್ರಾಂತ ಸಂಘಚಾಲಕ, ಆರೆಸ್ಸೆಸ್), ಕೆ.ಪಿ. ಸುಬ್ರಾಯ ಪ್ರಭು (ಭಾರತೀಯ ಕಿಸಾನ್ ಸಂಘದ ರಾಜ್ಯ ಅಧ್ಯಕ್ಷ), ವಾಸುದೇವರೆಡ್ಡಿ (ಭಾ. ಕಿ. ಸಂಘದ ರಾಜ್ಯ ಕಾರ್ಯದರ್ಶಿ), ಎಸ್. ಕೃಷ್ಣಯ್ಯ (ಭಾರತೀಯ ಮಜ್ದೂರ್ ಸಂಘದ ರಾಜ್ಯ ಉಪಾಧ್ಯಕ್ಷ), ಎಸ್. ಮಲ್ಲಿಕಾರ್ಜುನಯ್ಯ (ಜನಸಂಘದ ರಾಜ್ಯ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ, ಎಂಎಲ್ಸಿ) ಎ.ಕೆ. ಸುಬ್ಬಯ್ಯ (ಜನಸಂಘದ ಯುವಜನ ವಿಭಾಗ ಪ್ರಮುಖ, ಎಂಎಲ್ಸಿ) ಎಚ್. ಗಂಗಾಧರನ್ (ಜನಸಂಘ ರಾಜ್ಯ ಉಪಾಧ್ಯಕ್ಷ), ಅನಂತ ಶರ್ಮ ಚಿಂಚೋಳಿ (ಜನಸಂಘ ರಾಜ್ಯ ಕಾರ್ಯದರ್ಶಿ) ಡಿ.ಎಚ್. ಶಂಕರಮೂರ್ತಿ (ಜನಸಂಘ ರಾಜ್ಯ ಕಾರ್ಯದರ್ಶಿ) ಎಸ್. ಗುಂಡಯ್ಯ ಶೆಟ್ಟಿ (ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ, ರಾಜ್ಯ ಜನಸಂಘದ ಕೋಶಾಧಿಕಾರಿ), ಕೆ. ಬೋರಪ್ಪ (ಜನಸಂಘದ ರಾಜ್ಯ ಸಹಕಾರ್ಯದರ್ಶಿ), ಎಸ್.ಬಿ. ಶ್ವೇತಾದ್ರಿ (ಜನಸಂಘ ರಾಜ್ಯ ಪ್ರಮುಖರು), ವೀರೇಂದ್ರ ಪಾಟೀಲ್ (ಎಂಪಿ, ಮಾಜಿ ಮುಖ್ಯಮಂತ್ರಿ, ಸಂಸ್ಥಾ ಕಾಂಗ್ರೆಸ್ – ಬಿಡುಗಡೆಯಾಗಿದೆ), ರಾಮಕೃಷ್ಣ ಹೆಗಡೆ (ಎಂಎಲ್ಸಿ, ಮಾಜಿಸಚಿವ, ಸಂಸ್ಥಾ ಕಾಂಗ್ರೆಸ್ – ಬಿಡುಗಡೆಯಾಗಿದೆ), ಕೆ.ಡಿ. ಪಾಟೀಲ್ (ಎಂಎಲ್ಎ, ಸಂಸ್ಥಾ ಕಾಂಗ್ರೆಸ್), ವಿ.ಎಸ್. ಕೃಷ್ಣ ಅಯ್ಯರ್ (ಎಂಎಲ್ಸಿ, ಸಂಸ್ಥಾಕಾಂಗ್ರೆಸ್ – ಬಿಡುಗಡೆಯಾಗಿದೆ), ಗುಡದಿನ್ನಿ (ಎಂಎಲ್ಸಿ, ಸಂಸ್ಥಾ ಕಾಂಗ್ರೆಸ್), ಸಿ.ಎಂ. ಇಬ್ರಾಹಿಮ್ (ಯುವಜನ ವಿಭಾಗ ಪ್ರಮುಖ, ಸಂಸ್ಥಾ ಕಾಂಗ್ರೆಸ್), ಚಂದ್ರಶೇಖರ್ (ರಾಜ್ಯ ಪ್ರಮುಖ, ಸಂಸ್ಥಾ ಕಾಂಗ್ರೆಸ್), ಎನ್.ಕೆ. ಗಣಪಯ್ಯ (ರಾಜ್ಯ ಅಧ್ಯಕ್ಷ, ಬಿಎಲ್ಡಿ), ಎಸ್. ವೆಂಕಟರಾಮ್ (ಪ್ರಧಾನ ಕಾರ್ಯದರ್ಶಿ, ಸೋಷಲಿಸ್ಟ್ ಪಾರ್ಟಿ), ಶಿವಾನಂದ ದೇಸಾಯಿ (ರಾಜ್ಯ ಪ್ರಮುಖ, ಬಿಎಲ್ಡಿ), ವೆಂಕೋಬರಾವ್ (ಸರ್ವೋದಯ ನಾಯಕ), ಪಿ.ಜಿ.ಆರ್. ಸಿಂಧ್ಯಾ (ಅ.ಭಾ. ವಿದ್ಯಾರ್ಥಿ ಪರಿಷತ್ ರಾಜ್ಯ ಪ್ರಮುಖ), ಪಿ.ವಿ. ಕೃಷ್ಣ ಭಟ್ (ಅ.ಭಾ.ವಿ.ಪ. ರಾಜ್ಯ ಸಂಘಟನಾ ಕಾರ್ಯದರ್ಶಿ), ಬೆ.ಸು. ನಾ. ಮಲ್ಯ (‘ವಿಕ್ರಮ’ ಸಂಪಾದಕ).
(ಕಹಳೆ’ಯಿಂದ)
ರಾಷ್ಟ್ರೋತ್ಥಾನ ಪರಿಷತ್ ಮೇಲೆ ಪೊಲೀಸರ ದಾಳಿ
ತುರ್ತುಪರಿಸ್ಥಿತಿಯ ವೇಳೆ ದೇಶದ ಬಹಳಷ್ಟು ದೇಶಪ್ರೇಮಿ ಹಾಗೂ ರಾಷ್ಟ್ರೀಯ ಸಂಸ್ಥೆ, ಸಂಘಟನೆಗಳ ಮೇಲೆ ಕಾಂಗ್ರೆಸ್ ಸರ್ಕಾರ ದಾಳಿ ನಡೆಸಿದ್ದು, ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆಯವರು ಸಂಪಾದಿಸಿದ ಪುಸ್ತಕ ‘ಕಹಳೆ’ ರಾಷ್ಟ್ರೋತ್ಥಾನ ಪರಿಷತ್ ಮೇಲೆ ನಡೆದ ದಾಳಿಯನ್ನು ಹೀಗೆ ದಾಖಲಿಸಿದೆ.
“ದೇಶದ ಖ್ಯಾತ ಪುಸ್ತಕ ಪ್ರಕಾಶನ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್ತಿಗೆ ಮಾರ್ಚ್ ೧೭ರಂದು (೧೯೭೬) ಪೊಲೀಸರು ದಾಳಿಯಿಟ್ಟು ಐವರು ನೌಕರರನ್ನು ದಸ್ತಗಿರಿ ಮಾಡಿದರು. ಬಂಧಿತರಾದ ಪ್ರೆಸ್ ಮ್ಯಾನೇಜರ್ ಬಳಿಯಿದ್ದ ಬೀಗದ ಕೈಗಳನ್ನು ವಶಪಡಿಸಿಕೊಂಡು ಆಕ್ಷೇಪಾರ್ಹ ಸಾಹಿತ್ಯ ಹೊಂದಿದ್ದರೆಂಬ ಸುಳ್ಳು ಆಪಾದನೆ ಹೊರಿಸಿ ಎಲ್ಲರ ಮೇಲೂ ಡಿಐಆರ್ ಹೇರಿದರು.
ರಾಷ್ಟ್ರೋತ್ಥಾನ ಪರಿಷತ್ತು ಈ ಬೇಕಾನೂನು ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು. ಆಗ ಸರ್ಕಾರೀ ವಕೀಲರು ಅಂಥ ಯಾವ ಘಟನೆಯೂ ನಡೆದಿಲ್ಲವೆಂದು ಸುಳ್ಳು ಹೇಳಿದರು. ಪರಿಷತ್ತಿನ ಹೊಸ ಅಧಿಕಾರಿ ಎ.ಸಿ.ಪಿ. ಬಳಿ ಬೀಗದಕೈ ಕೇಳಿದಾಗ ‘ಅದು ಕಳೆದುಹೋಗಿದೆ. ಬಾಗಿಲು ಒಡೆದು ಒಳಗೆ ಹೋಗಬಹುದು’ ಎಂದು ತಿಳಿಸಿದರು. ಹೀಗೆ ಹತ್ತು ದಿನಗಳ ಕೆಲಸ ನಿಂತು ಸಾವಿರಾರು ರೂ.ಗಳ ನಷ್ಟವಾದ ಬಳಿಕ ರಾಷ್ಟ್ರೋತ್ಥಾನ ಪರಿಷತ್ತಿನ ಕಾರ್ಯಕಲಾಪಗಳು ಪುನರಾರಂಭವಾದವು.
ಪೊಲೀಸರ ಈ ಸುಳ್ಳು, ವಂಚನೆಗಳ ಉದ್ದೇಶ ಸ್ಪಷ್ಟವಾಗಿಲ್ಲ. ಅವರು ರಾಷ್ಟ್ರೋತ್ಥಾನವನ್ನು ಡಿಐಆರ್ ಮೂಲಕ ವಶಪಡಿಸಿಕೊಳ್ಳಲು ನ್ಯಾಯಾಧೀಶರಲ್ಲಿ ಅನುಮತಿ ಕೇಳಿದರೆಂದೂ, ಆದರೆ ಅನುಮತಿ ಸಿಗದಿದ್ದ ಕಾರಣ ನ್ಯಾಯಾಲಯದಲ್ಲಿ ತಮ್ಮ ಅಪರಾಧ ಮುಚ್ಚಿಕೊಳ್ಳಲು ಸುಳ್ಳಿನ ಹೀನತಂತ್ರ ಅವಲಂಬಿಸಿದರೆಂದೂ ಹೇಳಲಾಗಿದೆ. ಪರಿಷತ್ತಿನ ಆಡಳಿತ ಮಂಡಳಿಯ ಕೆಲವು ಸದಸ್ಯರಿಗೆ ಮೀಸಾ ಬಂಧನದ ಬೆದರಿಕೆ ಹಾಕಿ ರಾಜೀನಾಮೆ ನೀಡುವಂತೆ ಪೊಲೀಸರು ಒತ್ತಾಯಿಸಿದ್ದು ಕಂಡುಬಂದಿದೆ.
ಅನಿವಾರ್ಯ ಲಾಕೌಟ್
ಈ ನಡುವೆ ಬಂಧಿತರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ಅವರೆಲ್ಲರೂ ನಿರ್ದೋಷಿಗಳೆಂದು ನ್ಯಾಯಾಧೀಶರು ಬಿಡುಗಡೆ ಮಾಡಿದರು. ಅಷ್ಟರಲ್ಲಿ ಇಂಟಕ್ (ಕಾಂಗ್ರೆಸ್ನ ಕಾರ್ಮಿಕ ಸಂಘಟನೆ)ನವರು ಕೆಲವು ಕೆಲಸಗಾರರನ್ನು ಎತ್ತಿ ಕಟ್ಟಿದ್ದುದರಿಂದ ಬೆಲೆಬಾಳುವ ಯಂತ್ರಗಳು ಹಾಗೂ ಟೈಪ್ಗಳನ್ನು ಹಾನಿಗೊಳಿಸುವ ಅವರ ಕುತಂತ್ರ ಫಲಿಸಿತು. ಇದರಿಂದಾಗಿ ಕೆಲಸ ಮಾಡುವ ಎಲ್ಲ ಸಾಧ್ಯತೆಗಳೂ ಕುಸಿದುಬಿದ್ದು, ಆಡಳಿತಮಂಡಳಿಯು ಏಪ್ರಿಲ್ ೧೭, ೧೯೭೬ರಂದು ಲಾಕೌಟ್ ಘೋಷಿಸಿತೆಂದು ವರದಿಯಾಗಿದೆ.
ರಾಷ್ಟ್ರೋತ್ಥಾನ ಪರಿಷತ್ತಿನ ಕೆಲಸಗಳಿಗೆ ಪೊಲೀಸರು ಅಕ್ರಮವಾಗಿ ಅಡ್ಡಿಪಡಿಸಿದುದನ್ನು ಕರ್ನಾಟಕ ವಿಧಾನಸಭೆಯಲ್ಲಿ ವಿರೋಧಪಕ್ಷದ ಸದಸ್ಯರು ಬಲವಾಗಿ ಖಂಡಿಸಿದರು. ಪರಿಷತ್ತಿನ ಗಮನಾರ್ಹ ಸಾಧನೆಗಳನ್ನೂ, ಸೇವೆಯನ್ನೂ ಅವರು ಸಭೆಯ ಮುಂದೆ ವಿವರಿಸಿದರು” ಎಂದು ಕಹಳೆಯ ವರದಿಗಳನ್ನು ಉಲ್ಲೇಖಿಸಿ ಪುಸ್ತಕ ವಿವರಿಸಿದೆ.
ಇಂದಿರಾಜೀ ಅವರಿಗೆ ೩ ಅಂಶಗಳ ಶಾಕ್
ಭೂಗತ ಪತ್ರಿಕೆ ‘ಕಹಳೆ’ ಸಂಪಾದಕೀಯವನ್ನು ಕೂಡ ಪ್ರಕಟಿಸುತ್ತಿದ್ದು ಒಂದು ಸಂಪಾದಕೀಯ ಹೀಗಿದೆ:
ಆಪತ್ ಸ್ಥಿತಿ (ತುರ್ತುಪರಿಸ್ಥಿತಿ) ಸಾರಿದ ಮೇಲೆ ಇಂದಿರಾಜೀ ಅವರಿಗೆ ಮೊಟ್ಟಮೊದಲ ಬಾರಿ ಶಾಕ್ ಹೊಡೆದದ್ದು ನ್ಯಾಯಾಲಯದಲ್ಲಿ. ಇತ್ತೀಚಿನ ಅನಿಷ್ಟ ತಿದ್ದುಪಡಿಗಳಿಂದಾಗಿ ನ್ಯಾಯಾಧೀಶರು ಮಿಸುಕಾಡುವಂತಿಲ್ಲ; ಎಲ್ಲವೂ ಅರ್ಧಗಂಟೆಯೊಳಗೆ ಇತ್ಯರ್ಥವಾಗಿ ಹೋಗುತ್ತದೆ ಅಂತ ಹಮ್ಮಿನಿಂದ ಬಾಯ್ಬಿಟ್ಟುಕೊಂಡಿದ್ದರು. ಆದರೆ ಇಂಥ ತಿದ್ದುಪಡಿಗಳನ್ನು ಮಾಡಲು ಸಂಸತ್ತಿಗೆ ಅಧಿಕಾರವಿಲ್ಲ ಎಂದು ವಕೀಲ ಶಾಂತಿಭೂಷಣ್ ಸವಾಲು ಹಾಕಿದರು. ಅದೇ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಲು ಶ್ರೇಷ್ಠ ನ್ಯಾಯಾಲಯ(ಸುಪ್ರೀಂಕೋರ್ಟ್) ಒಪ್ಪಿಕೊಂಡಿತು. ಆದ್ದರಿಂದ, ಇಂದಿರಾಜೀ ಮತ್ತು ಕಾಂಗ್ರೆಸ್ನ ನಿರೀಕ್ಷೆ ತಲೆಕೆಳಗಾಗಿ ಎದೆ ನಡುಕ ಶುರುವಾಗಿದೆ.
ಬಂಗ್ಲಾದೇಶದ ಮುಜಿಬುರ್ ರೆಹಮಾನ್ ಅವರಿಗೆ ಸರ್ವಾಧಿಕಾರಿಯಾಗಲು ಸಲಹೆ ಕೊಟ್ಟವರು ಇಂದಿರಾಜೀ ಮತ್ತು ರಷ್ಯಾದ ತಜ್ಞರು. ಭಾರತದಲ್ಲಿನ ತಮ್ಮ ಕೆಲಸಕ್ಕೆ ಪೂರ್ವಪ್ರಯೋಗವಾಗಿ ಅವರು ಈ ಕೃತ್ಯವನ್ನು ಮಾಡಿದ್ದರು. ಆದರೆ ಈಗ ವಂಗಬಂಧುವಿಗೆ ಒದಗಿದ ಗತಿ (ಕುಟುಂಬದ ಸಾಮೂಹಿಕ ಹತ್ಯೆ) ನೋಡಿ ಎರಡನೇ ಶಾಕ್ ಹೊಡೆದಿದೆ.
ಪ್ರಪಂಚದ ಸ್ವತಂತ್ರ ರಾಷ್ಟ್ರಗಳ ಉಗ್ರ ಖಂಡನೆಯಿಂದ ಮೂರನೇ ಶಾಕ್ ತಗುಲಿದೆ. ಆದ್ದರಿಂದ ಅವರು ಸಾಕಷ್ಟು ಹಣ್ಣಾಗಿದ್ದಾರೆ. “ನನಗೆ ಹೀಗೆ ಮಾಡಲು ಇಷ್ಟವಿರಲಿಲ್ಲ. ಈಗಲೂ ಹೀಗೇ ಮುಂದುವರಿಸುವ ಇಚ್ಛೆ ಇಲ್ಲ” ಎಂದು ಸೋತ ದನಿಯಲ್ಲಿ ಮಾತನಾಡತೊಡಗಿದ್ದಾರೆ.
ಅವರ ಆಗಸ್ಟ್ ೧೫ರ ಸಮಾರಂಭದಲ್ಲಿ ಜನರೇ ಇಲ್ಲ. ಚಿತ್ರದಲ್ಲಿ ಬರೇ ಕೂಡಿಹಾಕಿದ ಶಾಲಾಮಕ್ಕಳು; ಆಕಾಶವಾಣಿಯಲ್ಲಿ ಸಹ ಸೊರಗಿದ ನಡುಕಲು ಸ್ವರ. ಇದು ಸರ್ವಾಧಿಕಾರದ ಅಮಲು ಇಳಿಯುತ್ತಿರುವ ಲಕ್ಷಣವೆ? ಇದ್ದೀತು. ಆದರೆ ಪುನಃ ಇನ್ನಷ್ಟು ಬಲವಾಗಿ ಅಮಲೇರಿಸಬಲ್ಲವರ ತಂಡ ಅವರ ಸುತ್ತ ಇದ್ದೇ ಇದೆ.