ಬ್ರಿಟಿಷರ ಆರಂಭಿಕ ಬೆಳವಣಿಗೆ ತುಂಬಾ ನಿಧಾನಗತಿಯಲ್ಲೇ ಇತ್ತು. ಮೊಘಲರ ಪತನದ ಅನಂತರ ಅದು ಸ್ವಲ್ಪ ವೇಗವನ್ನು ಪಡೆದುಕೊಂಡಿತು. ಆ ನಿಟ್ಟಿನಲ್ಲಿ ಬಂಗಾಳದಲ್ಲಿಯ ಅವರ ಬೆಳವಣಿಗೆ ಮತ್ತು ಅಲ್ಲಿ ನಡೆದ (೧೭೫೭) ಪ್ಲಾಸಿಯುದ್ಧವು ಮಹತ್ತ್ವದ್ದೆನಿಸಿದೆ. ಭಾರತದಲ್ಲಿ ಬ್ರಿಟಿಷರ ಸಾಮ್ರಾಜ್ಯದ ಆರಂಭ ಪ್ಲಾಸಿ ಯುದ್ಧದಿಂದಲೇ ಶುರುವಾಯಿತೆಂದು ಭಾವಿಸಲಾಗುತ್ತದೆ.
೧೮ನೇ ಶತಮಾನದಲ್ಲಿ ಬಂಗಾಳವು ನವಾಬರ ಕೈಯಲ್ಲಿತ್ತು. ಜಾನ್ ಕಂಪೆನಿ ಎಂದು ಕರೆಯಲಾಗುವ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು ೧೮ನೇ ಶತಮಾನದ ಆರಂಭದಲ್ಲಿ ಅಲ್ಲಿಗೆ ಬಂತು. ಫ್ರೆಂಚರು, ಆರ್ಮೇನಿಯನ್ನರು, ಡಚ್ಚರು ಕೂಡ ಅಲ್ಲಿದ್ದರು. ಹೊಸ ಬಗೆಯ ರಾಜಕೀಯ ಮಂಥನ, ಕಾರ್ಯತಂತ್ರ, ಕಾರ್ಯಾಚರಣೆಗಳು ಭಾರತೀಯ ಉಪಖಂಡದಲ್ಲಿ ಮೊದಲ ಬಾರಿಗೆ ಅಲ್ಲಿ ನಡೆದವು.
ಕೇವಲ ಒಂದು ತಕ್ಕಡಿಯೊಂದಿಗೆ ಭಾರತಕ್ಕೆ ಬಂದ ಬ್ರಿಟಿಷರು ತಮ್ಮ ದೇಶಕ್ಕಿಂತ ಎಷ್ಟೋ ಪಾಲು ದೊಡ್ಡದಾದ ಭಾರತವನ್ನು ಬಹುಬೇಗ ತಮ್ಮ ಸಾಮ್ರಾಜ್ಯವನ್ನಾಗಿ ಮಾಡಿಕೊಂಡರು; ಮತ್ತು ಇಡೀ ಜಗತ್ತಿನಲ್ಲೆ ‘ಸೂರ್ಯ ಮುಳುಗದ ಸಾಮ್ರಾಜ್ಯ’ವನ್ನು ಸ್ಥಾಪಿಸಿದರು ಎಂದು ನಾವು ಆಗಾಗ ಕೇಳುತ್ತೇವೆ. ಈ ಮಾತನ್ನಷ್ಟೇ ಗಮನಿಸಿದರೆ ಇದು ತುಂಬಾ ಸುಲಭದ ಕೆಲಸವಾಗಿತ್ತು ಎನ್ನುವ ಭಾವನೆ ಬಂದರೆ ಆಶ್ಚರ್ಯವಿಲ್ಲ. ಆದರೆ ಅದು ನಿಜವಾಗಿ ಹಾಗಿರಲಿಲ್ಲ. ಸಂಚಾರ, ಸಂಪರ್ಕಗಳು ತುಂಬಾ ಪ್ರಯಾಸದ ಕೆಲಸವಾಗಿದ್ದ ಆ ದಿನಗಳಲ್ಲಿ ಅದು ಸುಲಭದಲ್ಲಿ ಕೈಗೂಡುವುದು ಸಾಧ್ಯವೇ ಇರಲಿಲ್ಲ. ಆದರೂ ಬ್ರಿಟಿಷರು ಅದನ್ನು ಸಾಧಿಸಿದರು.
ಜಗತ್ತಿನಾದ್ಯಂತ ಇಂತಹ ಸಾಹಸವನ್ನು ಮಾಡಲು ಯೂರೋಪಿನ ಅನೇಕ ದೇಶಗಳಿಂದ ಆಗ ನಾವಿಕರ ತಂಡಗಳು ಹೊರಟಿದ್ದವು: ಪೋರ್ಚುಗಲ್, ಸ್ಪೇಯ್ನ್, ಫ್ರಾನ್ಸ್, ಹಾಲೆಂಡ್, ಜರ್ಮನಿ ಇತ್ಯಾದಿ. ಪೋರ್ಚುಗೀಸರು ಬ್ರಿಟಿಷರಿಗಿಂತ ಮೊದಲೇ ಹೊರಟಿದ್ದರು. ಆದರೆ ಸಾಧನೆಯಲ್ಲಿ ಬ್ರಿಟಿಷರು ಉಳಿದವರನ್ನೆಲ್ಲ ಹಿಂದೆ ಹಾಕಿದರು. ಅದಕ್ಕೇನು ಕಾರಣ? ಬ್ರಿಟಿಷರ ಯಾವ ತಂತ್ರ, ಕಾರ್ಯವಿಧಾನಗಳಿಂದ ಅದು ಸಾಧ್ಯವಾಯಿತು – ಎನ್ನುವ ಬಗೆಗಿನ ಅಧ್ಯಯನವು ಕುತೂಹಲಕಾರಿ ಆಗಬಲ್ಲದು.
ಹಲವು ಐರೋಪ್ಯರು
ಭಾರತವನ್ನೇ ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಈ ಬೃಹತ್ ದೇಶದಲ್ಲಿ ಅವರು ಮೊದಲಿಗೆ ಎಲ್ಲಿ ಕಾಲೂರಿದರು? ಆಗ ಈ ದೇಶದ ಪರಿಸ್ಥಿತಿ ಹೇಗಿತ್ತು? ಅದಕ್ಕೆ ಬ್ರಿಟಿಷರು ಹೇಗೆ ಸ್ಪಂದಿಸಿದರು? ಇಲ್ಲಿಯ ಯಾವ ಅಂಶಗಳು, ವಿದ್ಯಮಾನಗಳು ಅವರಿಗೆ ಅನುಕೂಲಕರವಾದವು? ಅವುಗಳನ್ನು ಅವರು ಯಾವ ರೀತಿಯಲ್ಲಿ ತಮ್ಮ ಅನುಕೂಲಕ್ಕೆ ಬಳಸಿಕೊಂಡರು? ಅದು ಯಶಸ್ವಿಯಾಯಿತೆ? ಹೇಗೆ? – ಎಂಬೆಲ್ಲ ಅಂಶಗಳು ಅಧ್ಯಯನಯೋಗ್ಯವಾಗಿವೆ. ಇನ್ನೊಂದು ಗಮನಾರ್ಹ ಅಂಶವೆಂದರೆ, ತಮಗಿಂತ ಮೊದಲು ಭಾರತಕ್ಕೆ ಬಂದ ಐರೋಪ್ಯರು, ಅದರಲ್ಲೂ ವಿಶೇಷವಾಗಿ ಪೋರ್ಚುಗೀಸರು ಮಾಡಿದ ಬಲಾತ್ಕಾರದ ಮತಾಂತರ ಮುಂತಾದ ತಪ್ಪುಗಳನ್ನು ಮಾಡಬಾರದೆಂದು ಬ್ರಿಟಿಷರು ತಮಗೆ ಮಿತಿ ಹಾಕಿಕೊಂಡು ಸಾಧ್ಯವಾದಷ್ಟು ಸಂಯಮದಿAದ ನಡೆದುಕೊಂಡದ್ದು ಉಲ್ಲೇಖಾರ್ಹ. ಮೊದಲಿಗೆ ಮೊಘಲ್ ದೊರೆಗಳ ಒಪ್ಪಿಗೆ ಪಡೆದು ಗುಜರಾತಿನ ಸೂರತ್ನಲ್ಲೊಂದು ವ್ಯಾಪಾರ ಕೇಂದ್ರವನ್ನು ಸ್ಥಾಪಿಸಿಕೊಂಡರಾದರೂ ಅವರ ಆರಂಭಿಕ ಬೆಳವಣಿಗೆ ತುಂಬಾ ನಿಧಾನಗತಿಯಲ್ಲೇ ಇತ್ತು. ಮೊಘಲರ ಪತನದ ಅನಂತರ ಅದು ಸ್ವಲ್ಪ ವೇಗವನ್ನು ಪಡೆದುಕೊಂಡಿತು. ಆ ನಿಟ್ಟಿನಲ್ಲಿ ಬಂಗಾಳದಲ್ಲಿಯ ಅವರ ಬೆಳವಣಿಗೆ ಮತ್ತು ಅಲ್ಲಿ ನಡೆದ (೧೭೫೭) ಪ್ಲಾಸಿ ಯುದ್ಧವು ಮಹತ್ತ್ವದ್ದೆನಿಸಿದೆ. ಭಾರತದಲ್ಲಿ ಬ್ರಿಟಿಷರ ಸಾಮ್ರಾಜ್ಯದ ಆರಂಭ ಪ್ಲಾಸಿ ಯುದ್ಧದಿಂದಲೇ ಶುರುವಾಯಿತೆಂದು ಭಾವಿಸಲಾಗುತ್ತದೆ.
೧೮ನೇ ಶತಮಾನದಲ್ಲಿ ಬಂಗಾಳವು ನವಾಬರ ಕೈಯಲ್ಲಿತ್ತು. ಜಾನ್ ಕಂಪೆನಿ ಎಂದು ಕರೆಯಲಾಗುವ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು ೧೮ನೇ ಶತಮಾನದ ಆರಂಭದಲ್ಲಿ ಅಲ್ಲಿಗೆ ಬಂತು. ಫ್ರೆಂಚರು, ಆರ್ಮೇನಿಯನ್ನರು, ಡಚ್ಚರು ಕೂಡ ಅಲ್ಲಿದ್ದರು. ಹೊಸ ಬಗೆಯ ರಾಜಕೀಯ ಮಂಥನ, ಕಾರ್ಯತಂತ್ರ, ಕಾರ್ಯಾಚರಣೆಗಳು ಭಾರತೀಯ ಉಪಖಂಡದಲ್ಲಿ ಮೊದಲ ಬಾರಿಗೆ ಅಲ್ಲಿ ನಡೆದವು.
ಛಿದ್ರವಾದ ಮೊಘಲ್ ಸಾಮ್ರಾಜ್ಯ
ಒಂದು ಕಾಲದಲ್ಲಿ ಭಾರತದಲ್ಲಿ ಮೊಘಲ್ ಸಾಮ್ರಾಜ್ಯವು ಶಾಶ್ವತ ಎಂಬಂತಿತ್ತು. ಅದು ಶಿಥಿಲವಾಗಿ ಛಿದ್ರವಾದ ಮೇಲಷ್ಟೇ ಬ್ರಿಟಿಷರಿಗೆ ಬೆಳೆಯಲು ಅವಕಾಶವಾಯಿತು. ಟರ್ಕಿ ಮೂಲದ ರಾಜಪುರುಷ ಬಾಬರ್ ಕ್ರಿ.ಶ. ೧೫೨೬ರಲ್ಲಿ ಈ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ. ದೆಹಲಿಯಲ್ಲಿ ಅಧಿಕಾರದಲ್ಲಿದ್ದ ಆಫಘನ್ ಮೂಲದ ಲೋದಿ ವಂಶಸ್ಥರನ್ನು ಆತ ಸೋಲಿಸಿದ. ಒಂದು ವರ್ಷ ಕಳೆಯುವಷ್ಟರಲ್ಲಿ ಬಾಬರ್ಗೆ ಮೇವಾಡದ ರಜಪೂತ ದೊರೆ ಮಹಾರಾಣಾ ಸಂಗ್ರಾಮಸಿಂಗ್ನಿಂದ ಭಾರೀ ಸವಾಲು ಬಂದರೂ ಆತ ಜಯಿಸಿದ. ಬಾಬರನ ಮಗ ಹುಮಾಯೂನ್ ೧೫೩೦ರಲ್ಲಿ ಅಧಿಕಾರಕ್ಕೆ ಬಂದ. ೧೫೪೦ರಲ್ಲಿ ನಡೆದ ಯುದ್ಧದಲ್ಲಿ ಆತ ಸೋತು ಸುಮಾರು ಹದಿನೈದು ವರ್ಷ ಅಜ್ಞಾತವಾಸದಲ್ಲಿದ್ದ. ಆಫಘನ್ ಮೂಲದ ಸೂರ್ ದೊರೆಗಳು ಹುಮಾಯೂನ್ನನ್ನು ಸೋಲಿಸಿದರು. ಅವರ ಮೂಲಪುರುಷ ಶೇರ್ ಶಾ ಸೂರಿ ಆಫಘನಿಸ್ತಾನ ಮತ್ತು ಪೂರ್ವಭಾರತದ ನಡುವೆ ಬೃಹತ್ ಮಾರ್ಗವನ್ನು ನಿರ್ಮಿಸಿದ್ದು ಬ್ರಿಟಿಷರು ಅದನ್ನು ಗ್ರಾಂಡ್ ಟ್ರಂಕ್ ರೋಡ್ ಎಂದು ಕರೆದರು.
ಸೂರ್ ದೊರೆಗಳು ದುರ್ಬಲರಾದಾಗ ೧೫೫೫ರಲ್ಲಿ ಹುಮಾಯೂನ್ ಮತ್ತೆ ಅಧಿಕಾರಕ್ಕೆ ಬಂದ. ಅವನ ಮಗ ಚಕ್ರವರ್ತಿ ಅಕ್ಬರನ ಕಾಲದಲ್ಲಿ ಮೊಘಲ್ ಸಾಮ್ರಾಜ್ಯವು ತುಂಬಾ ವಿಸ್ತರಣೆಗೊಂಡು ಸುಭದ್ರವೆನಿಸಿತು. ಅಕ್ಬರನ ಬಳಿಕ ೧೬೦೫ರಲ್ಲಿ ಪುತ್ರ ಜಹಾಂಗೀರ್ ಪಟ್ಟವೇರಿದ. ಅವನ ಮಗ ಷಾಜಹಾನ್ ೧೬೨೮ರಲ್ಲಿ ಅಧಿಕಾರಕ್ಕೆ ಬಂದಿದ್ದು, ತಾಜ್ಮಹಲ್ ಕಟ್ಟಿಸುವ ಮೂಲಕ ಆತ ಕೀರ್ತಿಭಾಜನನಾದ. ಅನಂತರ ೧೬೫೮ರಲ್ಲಿ ಪಟ್ಟವೇರಿದ ಔರಂಗಜೇಬನು ಸುದೀರ್ಘ ೪೯ ವರ್ಷ ಚಕ್ರವರ್ತಿಯಾಗಿದ್ದ. ಆಗ ಮೊಘಲ್ ಸಾಮ್ರಾಜ್ಯವು ಗರಿಷ್ಠ ದೊಡ್ಡದಾಗಿದ್ದು, ಪಶ್ಚಿಮದಲ್ಲಿ ಆಫಘನಿಸ್ತಾನದಿಂದ ಪೂರ್ವದಲ್ಲಿ ಬಂಗಾಳದವರೆಗೆ ಮತ್ತು ದಕ್ಷಿಣದಲ್ಲೂ ಸಾಕಷ್ಟು ವಿಸ್ತರಿಸಿತ್ತು. ಮತಾಂಧನಾಗಿದ್ದ ಔರಂಗಜೇಬನಿಗೆ ಪ್ರಬಲ ಸವಾಲೊಡ್ಡಿದವನು ಮರಾಠರ ಅಪ್ರತಿಮ ನಾಯಕ ಶಿವಾಜಿ.
ಔರಂಗಜೇಬನ ಕಾಲದಲ್ಲೇ ಮೊಘಲ ಸಾಮ್ರಾಜ್ಯದಲ್ಲಿ ಒಡಕುಗಳು ಕಾಣಿಸಿದ್ದವು. ಅವನ ಕಾಲಾನಂತರ (೧೭೦೭) ಅವು ಹೆಚ್ಚುತ್ತಹೋದವು. ಬಳಿಕ ೧೭೧೯ರೊಳಗೆ ಆರು ಜನ ಮೊಘಲ್ ಸಾಮ್ರಾಟರು ಬಂದುಹೋದರು. ಔರಂಗಜೇಬನ ಮಗ ಆಜಂ ಶಾ ಒಂದೇ ವರ್ಷ ಅಧಿಕಾರದಲ್ಲಿದ್ದ. ಅವನ ಸಹೋದರ (ಮಲತಾಯಿಯ ಮಗ) ಬಹಾದುರ್ ಶಾ ಆಜಂನನ್ನು ಕೊಂದು ಅಧಿಕಾರಕ್ಕೆ ಬಂದ. ೧೭೧೩ರಲ್ಲಿ ಅಧಿಕಾರದಲ್ಲಿದ್ದ ಮೊಘಲ್ ಚಕ್ರವರ್ತಿ ಫರೂಖ್ಸಿಯಾರ್ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಕಲ್ಕತ್ತಾ (ಇಂದಿನ ಕೋಲ್ಕತಾ)ದಲ್ಲಿ ವ್ಯಾಪಾರ ನಡೆಸುವುದಕ್ಕೆ ಸಂಬಂಧಿಸಿದ ಮಹತ್ತ್ವದ ಪರವಾನಿಗಿ(ಫರ್ಮಾನು) ನೀಡಿದ. ಕಲ್ಕತ್ತಾದಲ್ಲಿ ಸ್ಥಳೀಯರಿಂದ ತೊಂದರೆ ಬಂದಾಗ ಜಾನ್ ಸುರ್ಮನ್ ನೇತೃತ್ವದ ರಾಯಭಾರಿಗಳ ತಂಡ (ಎಂಬೆಸಿ) ದೆಹಲಿಗೆ ಆಗಮಿಸಿ, ಚಕ್ರವರ್ತಿಯ ಮನವೊಲಿಸಿ ಸನ್ನದನ್ನು ಪಡೆದುಕೊಂಡಿತು. ಆ ಅನುಮತಿ ಹಲವು ಮೊಘಲ್ ದೊರೆಗಳ ಕಾಲದಲ್ಲಿ ಮುಂದುವರಿಯಿತು. ಫರ್ಮಾನೆಂದರೆ ಹಲವು ಸವಲತ್ತು ಮತ್ತು ಭರವಸೆ(ಈಗಿನ ಭಾಷೆಯಲ್ಲಿ ‘ಗ್ಯಾರಂಟಿ’)ಗಳನ್ನು ಒಳಗೊಂಡ ರಾಯಲ್ ಗ್ರಾಂಟ್. ಅದರಂತೆ ಅವರಿಗೆ ಬಂಗಾಳ, ಬಿಹಾರ ಮತ್ತು ಒರಿಸ್ಸಾ (ಒಡಿಶಾ)ಗಳನ್ನು ಒಳಗೊಂಡ ಬಂಗಾಳ ಸುಬಾದಲ್ಲಿ ವ್ಯಾಪಾರದ ಹಕ್ಕನ್ನು ನೀಡಲಾಯಿತು. ವರ್ಷಕ್ಕೆ ಸುಮಾರು ೩,೦೦೦ ರೂ. ನೀಡಿದರಾಯಿತು; ಬೇರೆ ಯಾವುದೇ ಸುಂಕ (duty) ಇರುವುದಿಲ್ಲ. ಹಲವು ದಶಕಗಳ ಕಾಲ ಈ ವ್ಯವಸ್ಥೆ ಮುಂದುವರಿಯಿತು. ಮುಂದೆ ಸಿರಾಜುದ್ದೌಲ ಬಂಗಾಳದ ನವಾಬನಾಗಿದ್ದಾಗ ಇದೇ ಫರ್ಮಾನಿನ ಕಾರಣದಿಂದ ಸ್ಫೋಟವಾಗಿ ಬೆಂಕಿ ಹೊತ್ತುವಂತಾಯಿತು.
ದೆಹಲಿಯಲ್ಲಿ ೧೭೧೯ರಲ್ಲಿ ಫರೂಖ್ಸಿಯಾರ್ ಪದಚ್ಯುತಿಯಾಗಿ ಮಹಮ್ಮದ್ ಶಾ ಚಕ್ರವರ್ತಿಯಾದ. ಅದು ಮುಖ್ಯವಾಗಿ ಮೊಘಲ್ ಸಾಮ್ರಾಜ್ಯದ ಅವರೋಹಣದ ಕಾಲವಾಗಿತ್ತು. ಕೊನೆಯ ಮೊಘಲ್ ದೊರೆಗಳು ಬಹುತೇಕ ಅಜ್ಞಾತ ಸ್ಥಳಗಳಲ್ಲಿ ಯಾವುದೋ ರೀತಿಯಲ್ಲಿ ಕಾಲ ಕಳೆಯುತ್ತಿದ್ದರು. ಥಾಮಸ್ ಮೆಕಾಲೆ ತನ್ನ ‘ಕ್ರಿಟಿಕಲ್ ಆ್ಯಂಡ್ ಹಿಸ್ಟಾರಿಕಲ್ ಎಸ್ಸೇಸ್’ ಪುಸ್ತಕದಲ್ಲಿ ‘ಅವರು ಭಂಗಿ ಜಗಿಯುತ್ತ, ಸೇವಿಸುತ್ತ ಇರುತ್ತಾರೆ; ವೇಶ್ಯೆಯರ ಒಡನಾಟದಲ್ಲಿರುತ್ತಾರೆ; ಮತ್ತು ಬಫೂನ್ಗಳ ಹಾಸ್ಯದಲ್ಲಿ ಮೈಮರೆತಿರುತ್ತಾರೆ’ ಎಂದು ಬಣ್ಣಿಸಿದ್ದಾನೆ.
ಆಂತರಿಕ ವಿನಾಶದ ಕಾಲ
ಮೊಘಲ್ ಸಾಮ್ರಾಜ್ಯದ ಅಧಿಕಾರ ಕುಸಿತವನ್ನು ಇತಿಹಾಸಕಾರ ಇರ್ಫಾನ್ ಹಬೀಬ್ ‘ಆಂತರಿಕ ವಿನಾಶ’ (Internal Decay) ಎಂದು ವಿಶ್ಲೇಷಿಸಿದ್ದಾರೆ. ಅದು ಔರಂಗಜೇಬನ ಕೊನೆಯ ವರ್ಷಗಳಲ್ಲೇ ಶುರುವಾಗಿತ್ತು. ಸಾಮ್ರಾಜ್ಯವು ಹಲವು ದಂಗೆಗಳಿಗೆ ಗುರಿಯಾಗಿ ಶಿಥಿಲವಾಗಿ ಅಲ್ಲಾಡುವಂತಿತ್ತು. ಜಾಟರು, ಸಿಖ್ಖರು, ಸತ್ನಾಮಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮರಾಠರು ದಂಗೆಗಳ ಸರಮಾಲೆಯನ್ನೇ ಸೃಷ್ಟಿಸಿದ್ದರು. ಆ ದಂಗೆಗಳು ಯಶಸ್ವಿ ಕೂಡ ಆಗುತ್ತಿದ್ದವು. ಭಾಗಶಃ ಕೃಷಿಸಂಬAಧಿ ಕಾರಣಗಳು, ಕಂದಾಯದ ಹೊರೆ, ರೈತರ ಸಂಕಷ್ಟ, ಜಮೀನ್ದಾರ ವರ್ಗದ ಉದಯ ಮುಂತಾದವು ಅವುಗಳ ಹಿಂದೆ ಇರುತ್ತಿದ್ದವು. ಹಬೀಬ್ ಪ್ರಕಾರ ಅದರಿಂದ ಸಾಮ್ರಾಜ್ಯದ ಕೇಂದ್ರವ್ಯವಸ್ಥೆಯ ಜಾಲವು ಕುಸಿಯಿತು.
ದಂಗೆಗಳ ಕಾರಣದಿಂದ ಹೊಸ ಸಂಸ್ಥಾನಗಳು ಸ್ಥಾಪನೆಗೊಂಡವು. ಉದಾಹರಣೆಗೆ ಮರಾಠಾ ಸಂಸ್ಥಾನವೂ ಜಾಟರು, ಸಿಖ್ಖರ ರಾಜ್ಯಗಳೂ ಅಸ್ತಿತ್ವಕ್ಕೆ ಬಂದವು. ೧೭೩೦ರ ದಶಕದ ಹೊತ್ತಿಗೆ ದೇಶದಲ್ಲಿ ಮೊಘಲರ ಉತ್ತರಾಧಿಕಾರಿಗಳೆಂಬಂತೆ ಮಧ್ಯಭಾರತ, ಉತ್ತರಭಾರತ, ಪರ್ಯಾಯದ್ವೀಪದ ಭಾಗ – ಅಲ್ಲೆಲ್ಲ ಆಂತರಿಕ ಬಂಡಾಯಗಳಾಗಿ ವ್ಯವಸ್ಥೆ ಛಿದ್ರವಾಗುತ್ತಿತ್ತು. ಅವಧ (ಅಯೋಧ್ಯೆ), ಮೈಸೂರು ಮತ್ತಿತರ ಕಡೆ ಸಂಸ್ಥಾನಗಳ ನಡುವೆ ಅಧಿಕಾರ ಮತ್ತು ನೆಲ(ರಾಜ್ಯ)ಕ್ಕಾಗಿ ಪರಸ್ಪರ ಯುದ್ಧಗಳು ನಡೆಯುತ್ತಿದ್ದವು. ಮರಾಠರು ಗುಜರಾತಿನಿಂದ ಪೂರ್ವದಲ್ಲಿ ಒರಿಸ್ಸಾದವರೆಗೆ ತಮ್ಮ ರಾಜ್ಯವನ್ನು ವಿಸ್ತರಿಸಿಕೊಂಡರು. ನಡುವೆ ಗಾಯಕವಾಡರು, ಪೇಶ್ವೆಗಳು, ಸಿಂಧಿಯಾಗಳು, ಹೋಳ್ಕರರು, ಭೋಂಸ್ಲೆಗಳು – ಹೀಗೆ ಹಲವು ಸಾಮಂತ ರಾಜರಿದ್ದರು. ಹೈದರಾಬಾದ್ ಒಂದು ಭಾಗವಾಗಿತ್ತು. ದಕ್ಷಿಣದ ಮೈಸೂರು, ತಿರುವಾಂಕೂರು ಸಂಸ್ಥಾನಗಳು ಮೊಘಲ್ ಸಾಮ್ರಾಜ್ಯದ ಹೊರಗಿದ್ದವು. ಬಿಹಾರವು ಸ್ವಾಯತ್ತ ಬಂಗಾಳ ಪ್ರಾಂತದ ಅಧೀನದಲ್ಲಿತ್ತು. ಅದರಲ್ಲಿ ಬಂಗಾಳ, ಬಿಹಾರ ಮತ್ತು ಒರಿಸ್ಸಾ ಸುಬಾಗಳು ಸೇರಿದ್ದವು. ಆ ಹೊತ್ತಿಗೆ ಬಂಗಾಳದ ಮೇಲೆ ಮರಾಠರ ದಾಳಿ ಯಾವಾಗಲೂ ನಡೆಯುತ್ತಿತ್ತು.
ಉತ್ತರಭಾರತದಲ್ಲಿ ಹಲವು ರಜಪೂತ ರಾಜ್ಯಗಳಿದ್ದವು. ಕಾಶ್ಮೀರ ಸಂಸ್ಥಾನವಿತ್ತು. ದೆಹಲಿಯ ದಕ್ಷಿಣದಲ್ಲಿ ಜಾಟರ ರಾಜ್ಯವಿದ್ದರೆ, ಪರಮಾರರ ರೊಹಿಲ್ಲಾ ರಾಜ್ಯವು ದೆಹಲಿಯ ಪೂರ್ವಭಾಗದಲ್ಲಿತ್ತು; ಮತ್ತೂ ಪೂರ್ವದಲ್ಲಿ ಅವಧವಿದ್ದು, ಅದು ಬಿಹಾರದ ಗಡಿಯಾಗಿತ್ತೆಂದು ಲೇಖಕ ಸುದೀಪ್ ಚಕ್ರವರ್ತಿ ತಮ್ಮ ಪುಸ್ತಕ Plassey (ಪ್ಲಾಸಿ)ಯಲ್ಲಿ ವಿವರಿಸಿದ್ದಾರೆ. (ಪ್ರ. ೨೦೨೦, ಆಲೇಫ್ ಬುಕ್ ಕಂಪೆನಿ, ನವದೆಹಲಿ).
ಈ ನಡುವೆ ವಿದೇಶೀ ದಾಳಿಗಳು ಕೂಡ ನಡೆಯುತ್ತಿದ್ದವು. ೧೭೩೯ರಲ್ಲಿ ನಾದಿರ್ ಶಾ ನೇತೃತ್ವದಲ್ಲಿ ಪರ್ಶಿಯನ್ನರ ದಾಳಿ ನಡೆಯಿತು. ೧೭೫೬ರಲ್ಲಿ ಆಫಘನ್ ದೊರೆ ಅಹಮದ್ ಶಾ ದುರಾನಿ ದಾಳಿ ನಡೆಸಿದ. ನಾದಿರ್ ಶಾ ದಾಳಿಯ ಬಳಿಕ ಮಯೂರ ಸಿಂಹಾಸನ, ಕೊಹಿನೂರ್ ವಜ್ರ ಮತ್ತು ಬಿಲಿಯ (ಶತಕೋಟಿ)ಗಟ್ಟಲೆ ರೂಪಾಯಿಗಳನ್ನು ಭಾರತದಿಂದ ಸಾಗಿಸಿದ. ಆತನ ಸೈನಿಕರಿಂದ ಮತ್ತು ಬೆಂಬಲಿಗರಿಂದ ಅತ್ಯಾಚಾರ, ಹಿಂಸಾಚಾರಗಳು ದೊಡ್ಡ ಪ್ರಮಾಣದಲ್ಲಿ ನಡೆದವು.
ಗಮನಿಸುತ್ತಿದ್ದ ಕಂಪೆನಿ
ಈಸ್ಟ್ ಇಂಡಿಯಾ ಕಂಪೆನಿಯು ಔರಂಗಜೇಬನ ಅವಸಾನದ ಕಾಲದಿಂದಲೇ ಭಾರತದಲ್ಲಿನ ಈ ಬೆಳವಣಿಗೆಗಳನ್ನು ಗಮನಿಸುತ್ತಿತ್ತು. “ದೊಡ್ಡ ಗೊಂದಲಗಳು, ಮುಖ್ಯವಾಗಿ ಬಂಗಾಳದಲ್ಲಿ ಉಂಟಾಗುವಂತಹ ತೊಂದರೆಗಳ ಹಿನ್ನೆಲೆಯಲ್ಲಿ ನಮ್ಮ ಎಲ್ಲ ಅಧಿಕಾರಿಗಳು ಸದಾ ಸಿದ್ಧಸ್ಥಿತಿಯಲ್ಲಿರಬೇಕು” ಎಂದು ಕಂಪೆನಿಯ ಕಲ್ಕತ್ತಾ ಕೌನ್ಸಿಲ್ನ ನಿರ್ಣಯವು ಹೇಳಿತ್ತು. ಕೋಟೆಯಲ್ಲಿ ಶಸ್ತಾçಸ್ತçಗಳನ್ನು ಸರಿಯಾದ ಜಾಗದಲ್ಲಿ ಇಟ್ಟಿರಬೇಕು. ಎಲ್ಲ ಉದ್ದೇಶಗಳಿಗೂ ಅನುಕೂಲವಾಗುವಂತಹ ದೊಡ್ಡ ಬಂದೂಕುಗಳನ್ನು (ಫಿರಂಗಿ?) ಕೋಟೆ ಗೋಡೆಯ ಮೇಲೆ ಇರಿಸಬೇಕು (ಕಲ್ಕತ್ತಾಕೋಟೆ). ಪಾವತಿಗಳನ್ನು ಮಾಡುವ ಅಧಿಕಾರಿಯಾದ ಬಕ್ಷಿ ಧಾನ್ಯ ಮತ್ತು ಪದಾರ್ಥಗಳ ಸಂಗ್ರಹವು ಯಾವಾಗಲೂ ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಆಗ ನಾವು ದಾಳಿಕೋರರಿಂದ ಸುರಕ್ಷಿತವಾಗಿ ಇರಬಹುದು. ಏಕೆಂದರೆ ದಾಳಿಕೋರರ ಜೊತೆಗೆ ಸೈನಿಕರು ಕೂಡ ಇರುತ್ತಾರೆ – ಎಂದು ಕೌನ್ಸಿಲ್ನ ನಿರ್ಣಯ ಹೇಳಿದೆ.
“ನಮ್ಮಲ್ಲಿ ಸುಮಾರು ೧೪೦ ಜನ ಅಧಿಕಾರಿಗಳಿದ್ದರೆ, ಸುಮಾರು ಇನ್ನೂರು ಜನ ಸೈನಿಕರಿದ್ದಾರೆ. ಯೂರೋಪಿನ ಬಲಶಾಲಿಗಳಾದ ಜನ, ಗನ್ರೂಂ ಸಿಬ್ಬಂದಿ, ಕಾವಲು ಸೈನ್ಯ (garrison)ಗಳು ಕೋಟೆಯ ರಕ್ಷಣೆಗೆ ಸದಾ ಸಮರ್ಥವಿರಬೇಕು; ಸಾಕಷ್ಟಿರಬೇಕು” ಎಂದು ಕೂಡ ಕಲ್ಕತ್ತಾದಲ್ಲಿ ಬ್ರಿಟಿಷರು ಎಚ್ಚರವಹಿಸಿದ್ದು ಕಾಣಿಸುತ್ತದೆ. ಅವರ ಸೇನೆ ಇತ್ಯಾದಿ ಬೆಳೆಯುವವರೆಗೆ ೧೭೫೦ರ ದಶಕದವರೆಗೂ ಅವರಲ್ಲಿ ಅಂತಹ ಭದ್ರತೆಯ ಪ್ರಜ್ಞೆ ಜಾಗೃತವಾಗಿತ್ತು.
ಬಲಶಾಲಿ ಮರಾಠರು
ಆಗ ಮರಾಠರು ಅತ್ಯಂತ ಬಲಶಾಲಿಗಳಾಗಿದ್ದರು. ಔರಂಗಜೇಬನ ಆರಂಭದ ವರ್ಷಗಳಲ್ಲೇ ಅವರು ಆತನನ್ನು ಎದುರುಹಾಕಿಕೊಂಡಿದ್ದರು. ಆಗ ಮೊಘಲ್ ಸಾಮ್ರಾಜ್ಯದ ದೋಷಗಳು ಆರಂಭಿಕ ಸ್ಥಿತಿಯಲ್ಲಿದ್ದವು. ಶಿವಾಜಿ ನೇತೃತ್ವದಲ್ಲಿ ಮರಾಠರು ಔರಂಗಜೇಬನಿಗೆ ತುಂಬಾ ಇರುಸುಮುರುಸನ್ನುಂಟು ಮಾಡಿದರು. ೧೬೬೪ರಲ್ಲಿ ಶಿವಾಜಿ ಮೊದಲ ಬಾರಿಗೆ ಗುಜರಾತಿನತ್ತ ಹೋಗಿ ಇಂಗ್ಲಿಷರ ಸೂರತ್ ಕೋಟೆಗೆ ದಾಳಿ ನಡೆಸಿದ. ದಾಳಿ ೪೦ ದಿನಗಳ ಕಾಲ ಮುಂದುವರಿಯಿತು. ಆಗ ಅಲ್ಲಿ ಉಳಿದದ್ದು ಇಂಗ್ಲಿಷರ ಫ್ಯಾಕ್ಟರಿ ಮಾತ್ರ. ಒಂದು ದಿನ ಹಿಂದಕ್ಕೆ ಸರಿಯುವುದು, ಮತ್ತೊಂದು ದಿನ ತೀವ್ರ ದಾಳಿ ನಡೆಸುವುದು – ಹೀಗೆ ಆತನ ಕಾರ್ಯತಂತ್ರವಿತ್ತು. ರಾಬರ್ಟ್ ಕ್ಲೈವ್ ಪ್ಲಾಸಿಯ ಮೇಲೆ ದಾಳಿ ನಡೆಸಿದಾಗ ಕೂಡ ಅದೇ ತಂತ್ರವನ್ನು ಅನುಸರಿಸಿದ.
ಸೈನಿಕ ದಾಳಿಗಳ ವೇಳೆ ಮರಾಠರಿಗಿದ್ದ ಒಂದು ಅನುಕೂಲವೆಂದರೆ ಅದ್ಭುತವಾದ ಅವರ ಅಶ್ವಪಡೆ. ಆ ಕುದುರೆಗಳು ತುಂಬಾ ವೇಗವಾಗಿ ಸಂಚರಿಸುತ್ತಿದ್ದವು; ಮತ್ತು ಯುದ್ಧಭೂಮಿಗೆ ಹೋಗುವಾಗ ಕನಿಷ್ಠ ಸರಕು (ಲಾಜಿಸ್ಟಿಕ್ಸ್) ಸಾಕಾಗುತ್ತಿತ್ತು. ಹಳ್ಳಿಗಳ ನಡುವೆ ಮತ್ತು ಕಾಡುಮೇಡುಗಳಲ್ಲಿ ಕೂಡ ಅವು ನಿರಾಯಾಸವಾಗಿ ಓಡುವ ಕುದುರೆಗಳು; ಮತ್ತು ತಪ್ಪಿಸಿಕೊಳ್ಳುವುದಕ್ಕೆ ಹೇಳಿಮಾಡಿಸಿದಂಥವು. ಮೊಘಲರ ಕುದುರೆಗಳು ಹಾಗಿರಲಿಲ್ಲ. ಮರಾಠರಿಗೆ ಕೆಲವೆಡೆ ಹಿನ್ನಡೆಗಳಾದರೂ ಕೂಡ ದಕ್ಖಣದ ತುಂಬಾ ಭಾಗ ಅವರ ವಶದಲ್ಲಿತ್ತು. ದಕ್ಷಿಣದ ವೆಲ್ಲೂರು-ಜಿಂಜಿಗಳ ನಡುವಣ ಒಂದು ಪ್ರದೇಶ ಕೂಡ ಮರಾಠರಿಗೆ ಸೇರಿತ್ತು. ಔರಂಗಜೇಬನ ಮರಣದ ೪೦ ವರ್ಷ ಆಗುವಾಗ ಮಧ್ಯ ಮತ್ತು ಪೂರ್ವಭಾರತದ ಬಹಳಷ್ಟು ಭಾಗ ಮರಾಠರ ಕೈಯಲ್ಲಿತ್ತು.
ಬಂಗಾಳಕ್ಕೆ ಸಂಬಂಧಿಸಿ ಮರಾಠರಿಗೆ ತುಂಬಾ ಮಹತ್ತ್ವವಿದೆ. ಮೊಘಲರ ಪ್ರಾಂತಗಳಿಂದ ಅವರು ಚೌಥ್ (ನಾಲ್ಕನೇ ಒಂದು ಪಾಲು) ಕಂದಾಯವನ್ನು ವಸೂಲು ಮಾಡುತ್ತಿದ್ದರು. ೧೭೫೧ರವರೆಗೆ ಅವರು ಬಂಗಾಳದ ಹಳ್ಳಿ-ಪಟ್ಟಣಗಳ ಮೇಲೆ ದಾಳಿ ನಡೆಸಿ ಕಂದಾಯ ವಸೂಲು ಮಾಡುತ್ತಿದ್ದರು. ನವಾಬ ಅಲಿವರ್ದಿಖಾನ್ ಚೌಥ್ ಕೊಡುವುದಾಗಿ ಮರಾಠರೊಂದಿಗೆ ಒಪ್ಪಂದ ಮಾಡಿಕೊಂಡಿದ್ದ. ಒರಿಸ್ಸಾದ ನಿಯಂತ್ರಣವನ್ನು ಅಲಿವರ್ದಿ ಮರಾಠರಿಗೆ ಬಿಟ್ಟುಕೊಟ್ಟಿದ್ದ. ಆತ ಬಂಗಾಳ, ಬಿಹಾರ ಮತ್ತು ಒರಿಸ್ಸಾಗಳ ಸುಬೇದಾರನೆಂಬುದು ಹೆಸರಿನಲ್ಲಷ್ಟೆ ಎಂಬ ಸ್ಥಿತಿ ಉಂಟಾಗಿತ್ತು. ಮುಂದೆ ಪ್ಲಾಸಿ ಯುದ್ಧದ ಓರ್ವ ಪಿತೂರಿಗಾರನಾದ ಮೀರ್ ಜಾಫರ್ ಮತ್ತು ರಾ ದುರ್ಲಭ್ (ಇಬ್ಬರೂ ಮುಂದೆ ಪ್ಲಾಸಿ ಜನರಲ್ಗಳು) – ಇಬ್ಬರಿಗೂ ಒರಿಸ್ಸಾದ ಗವರ್ನರ್ಗಳಾಗಲು ಇಷ್ಟವಿರಲಿಲ್ಲ ಎನ್ನಲಾಗಿದೆ.
ಕಂಪೆನಿಯ ಸಂಕಷ್ಟ
ಇನ್ನೊಂದೆಡೆ ಈಸ್ಟ್ ಇಂಡಿಯಾ ಕಂಪೆನಿ ಕೂಡ ಸುಖವಾಗಿರಲಿಲ್ಲ. ಮರಾಠರೊಂದಿಗೆ ಆಗಾಗ ವ್ಯವಹರಿಸಬೇಕಾಗುತ್ತಿತ್ತು. ಸಾಧ್ಯವಾದಷ್ಟು ಅದು ಮರಾಠರಿಂದ ದೂರವಿರುತ್ತಿತ್ತು. ಅದರ ಕೋಟೆಯ ಪಶ್ಚಿಮದಲ್ಲಿ ಹೂಗ್ಲಿ ನದಿ ಇದ್ದರೆ, ಪೂರ್ವ ಮತ್ತು ದಕ್ಷಿಣಗಳಲ್ಲಿ ಕಂದಕವಿತ್ತು. ಮರಾಠರ ಕಿರುಕುಳದ ಪರಿಣಾಮದ ಬಗ್ಗೆ ಕಂಪೆನಿಯ ಸಂಗ್ರಹದಲ್ಲಿ ಹಲವು ದಾಖಲೆಗಳಿದ್ದವು. ಡಿಸೆಂಬರ್ ೯, ೧೭೫೧ರ ಕಂಪೆನಿಯ ವಿಚಾರವಿನಿಮಯ (consulation)ದಲ್ಲಿ “ಮರಾಠರು ಆಗಾಗ ಬಂಗಾಳಕ್ಕೆ ಬಂದು ಜನರ ಮನೆಗಳನ್ನು ಲೂಟಿ ಮಾಡುತ್ತಾರೆ; ಮತ್ತು ಸುಟ್ಟುಹಾಕುತ್ತಾರೆ” ಎನ್ನುವ ವಿವರವಿದೆ. ಕಂಪೆನಿಯ ೧೭೪೮ರ ಮಾರ್ಚ್ನ ಒಂದು ದಾಖಲೆಯಲ್ಲಿ “ಪಠಾಣರು ಘಟ್ಟಾದ ಡಚ್ ಕಾರ್ಖಾನೆಯಿಂದ ೬೫ ಸಾವಿರ ರೂ. ಮೌಲ್ಯದ ಬಟ್ಟೆಯನ್ನು ಲೂಟಿ ಮಾಡಿದರು. ದೇಶ ಗೊಂದಲದಲ್ಲಿದೆ” ಎಂದು ತಿಳಿಸಲಾಗಿದೆ.
ಆಗ ಬಂಗಾಳದಲ್ಲಿ ರಾಜಕೀಯ ಮಥನವೇ ನಡೆಯುತ್ತಿತ್ತು. ಯೂರೋಪಿನ ವ್ಯಾಪಾರಿ ಕಂಪೆನಿಗಳು ಭಾರತದ ಸಂಪತ್ತಿಗಾಗಿ ಸ್ಪರ್ಧೆ ನಡೆಸುತ್ತಿದ್ದವು. ಮೊಘಲ್ ಚಕ್ರವರ್ತಿ ಮತ್ತು ಸ್ಥಳೀಯ ಗವರ್ನರ್ಗಳಿಂದ ಯಾವ ಲಾಭ ಆಗಬಹುದೆನ್ನುವ ಆಸೆಯಲ್ಲಿದ್ದವು; ಮೊಘಲ್ ಸಾಮ್ರಾಜ್ಯದ ಕೊನೆಯ ಹೊತ್ತಿಗೆ ಬಂಗಾಳದ ಆಡಳಿತ ನೆಲೆಗಳು (ರಾಜಧಾನಿ ಇತ್ಯಾದಿ) ಸ್ಥಳಾಂತರವಾಗುತ್ತಿದ್ದವು. ರಾಜಮಹಲ್ ಮೊದಲ ನೆಲೆಯಾಗಿದ್ದು ಪ್ಲಾಸಿ ಯುದ್ಧದ ಕೊನೆ ಆಟದಲ್ಲಿ ಅದು ವರ್ಣರಂಜಿತ ಪಾತ್ರವನ್ನು ವಹಿಸಿತ್ತು. ಈಗ ಅದೊಂದು ಸಣ್ಣ ಪಟ್ಟಣವಾಗಿದೆ. ಗಂಗಾನದಿ ಬದಿಯಲ್ಲಿ ಬಂಗಾಳ-ಜಾರ್ಖಂಡ್ ಗಡಿಯಲ್ಲಿ ಫರಕ್ಕಾ ಬ್ಯಾರೇಜ್ ಸಮೀಪ ಇರುವ ಅದಕ್ಕೆ ಅಗಲವಾಗುತ್ತಿದ್ದ ಗಂಗಾನದಿ ತೊಂದರೆ ಕೊಡುತ್ತಿತ್ತು. ಬಂಗಾಳದ ಮೊಘಲ್ ವೈಸರಾಯ್ ಇಸ್ಲಾಂಖಾನ್ ೧೬೧೦ರಲ್ಲಿ ರಾಜಧಾನಿಯನ್ನು ರಾಜಮಹಲ್ನಿಂದ ಢಾಕಾಗೆ ಸ್ಥಳಾಂತರಿಸಿದ. ಢಾಕಾದ ಹಿಂದಿನ ಹೆಸರು ಜಹಾಂಗೀರ್ನಗರ. ನಡುವೆ ೧೬ ವರ್ಷ ಬಿಟ್ಟರೆ (ಆಗ ರಾಜಮಹಲ್ ಮತ್ತೆ ರಾಜಧಾನಿಯಾಗಿತ್ತು) ಸುಮಾರು ನೂರು ವರ್ಷ ಢಾಕಾವೇ ರಾಜಧಾನಿಯಾಗಿತ್ತು.
ಶಾಯಿಸ್ತಾಖಾನ್ ಎಂದು ಪ್ರಸಿದ್ಧನಾದ ಬಂಗಾಳದ ಗವರ್ನರ್ ಮಿರ್ಜಾ ಅಬುತಾಲಿಬ್ ಓರ್ವ ವರ್ಣರಂಜಿತ ವ್ಯಕ್ತಿಯಾಗಿದ್ದ. ಶಿವಾಜಿಯು ಮದುಮಗನ ಪಾರ್ಟಿಯ ರೀತಿಯಲ್ಲಿ ಬಂದು ಆತನನ್ನು ಅಪಹರಿಸಿದ. ತಪ್ಪಿಸಿಕೊಂಡು ಪರಾರಿ ಆಗುವಾಗ ಶಾಯಿಸ್ತಾಖಾನನ ಮೂರು ಬೆರಳುಗಳು ಕತ್ತರಿಸಲ್ಪಟ್ಟವು. (೨೦೧೩ರಲ್ಲಿ ಶಿವಾಜಿಯ ಅಭಿಮಾನಿಗಳು ಆ ಘಟನೆಯ ೩೫೦ನೇ ವರ್ಷವನ್ನು ಆಚರಿಸಿದರು.) ೧೬೮೮ರವರೆಗೆ ಶಾಯಿಸ್ತಾಖಾನ್ ಬಂಗಾಳದ ಗವರ್ನರ್ ಆಗಿದ್ದ. ಆತ ಅಧಿಕಾರದಲ್ಲಿದ್ದಾಗ ಹೂಗ್ಲಿಯಿಂದ ಪೋರ್ಚುಗೀಸರನ್ನು ಹೊರಗೆ ಹಾಕಲಾಯಿತು.
ಶಾಯಿಸ್ತಾಖಾನನ ಕೊನೆಯ ಆರು ವರ್ಷಗಳಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ವ್ಯಾಪಾರಕ್ಕೆ ತುಂಬಾ ತೊಂದರೆ ಆಯಿತು. ಕಸ್ಟಮ್ಸ್ ಡ್ಯೂಟಿಗಳ ವಿಷಯದಲ್ಲಿ ಹಲವು ಜಗಳಗಳಾದವು. ೭೦ ವರ್ಷಗಳ ಬಳಿಕ ಸಿರಾಜುದ್ದೌಲನ ಕಾಲದಲ್ಲಿ ಅದೇ ತಂತ್ರದ ಬಳಕೆಯಾಯಿತು.
ಭಾರತ ಉಪಖಂಡದ ವಿವಿಧ ರಾಜರಿಗೆ, ವಿಶೇಷವಾಗಿ ಬಂಗಾಳದವರಿಗೆ ಬ್ರಿಟಿಷರು ಕ್ರಮೇಣ ಒಂದು ಬೆದರಿಕೆಯಾಗುವ ಸೂಚನೆಯಿತ್ತು. ಆರಂಭದಿಂದಲೇ ಅವರು ತಮ್ಮ ಗಡಿಯನ್ನು ವಿಸ್ತರಿಸುವ ತಂತ್ರಗಳನ್ನು ಅನುಸರಿಸುತ್ತ ಬಂದರು. ಮೊಘಲ್ ದೊರೆ ಜಹಾಂಗೀರನ ಕಾಲದಲ್ಲಿ ಥಾಮಸ್ ಮನ್ರೋನೇ ಅದನ್ನು ಶುರು ಮಾಡಿದ. ಆತ ರಾಯಭಾರಿ ಆಗಿದ್ದುದು ಕಂಪೆನಿಗೆ ಅನುಕೂಲವಾಯಿತು. ಮೊಘಲ್ ಶಿಪ್ಪಿಂಗ್ಗೆ ಆತ ಕಿರುಕುಳ ನೀಡಿದ್ದನ್ನು ಯಾರೂ ತಡೆಯಲಿಲ್ಲ. ತಮ್ಮ ಕಾರ್ಖಾನೆಗಳಿಗೆ ಕಂಪೆನಿಯವರು ಕೋಟೆ ಕಟ್ಟುತ್ತಿದ್ದರು. ಉಪಖಂಡದಲ್ಲಿ ಘರ್ಷಣೆ ಮತ್ತು ಯುದ್ಧಗಳ ಕಾರಣದಿಂದ ಕಂಪೆನಿ ಮತ್ತು ದೊರೆಗಳು (Crown) ನಿಕಟವಾದರು.
ಶಾಯಿಸ್ತಾಖಾನ್ ಪ್ರಕರಣದಲ್ಲಿ ಮಾತ್ರ ಅಲ್ಲ, ಬಂಗಾಳದ ಇತರ ಕೆಲವು ನವಾಬರ ವಿಷಯದಲ್ಲೂ ಕಂಪೆನಿ ಮಧ್ಯಪ್ರವೇಶ ಮಾಡಿದ್ದಿದೆ. ಪ್ಲಾಸಿ ಯುದ್ಧದ ಸಂದರ್ಭದಲ್ಲಿ ಅದು ತುತ್ತತುದಿಗೇರಿತು; ಕಂಪೆನಿ ಮತ್ತು ಬಂಗಾಳದ ಗವರ್ನರ್ಗಳ ನಡುವೆ ಹಲವು ದಶಕಗಳ ಕಾಲ ಇಂತಹ ವ್ಯವಹಾರಗಳು ನಡೆದಿದ್ದವು. ಅಲಿವರ್ದಿ ಮತ್ತು ಮೊಮ್ಮಗ (ಮಗಳ ಮಗ) ಸಿರಾಜುದ್ದೌಲ ಪೂರ್ವನಿದರ್ಶನವನ್ನೇನೂ ಇಡಲಿಲ್ಲ. ರಾಬರ್ಟ್ ಕ್ಲೈವ್ ಮತ್ತು ತಂಡದ ಬಗ್ಗೆ ಏನು ಹೇಳಬಹುದು? ಕುತೂಹಲದ ಸಂಗತಿಯೆAದರೆ, ಬಂಗಾಳದಲ್ಲಿ ಶಾಯಿಸ್ತಾಖಾನ್ ವಿಷಯದಲ್ಲಿ ಕಂಪೆನಿ ಹೆಚ್ಚು ಶಾಂತಿ ಪರವಾಗಿ ಮತ್ತು ರಕ್ಷಣಾತ್ಮಕವಾಗಿ ನಡೆದುಕೊಂಡಿತ್ತು.
ಔರಂಗಜೇಬನ ಆಳ್ವಿಕೆಯ ಉತ್ತರಾರ್ಧದಲ್ಲಿ, ೧೬೮೮ರಲ್ಲಿ ಶಾಯಿಸ್ತಾಖಾನ್ ಬಂಗಾಳದಿಂದ ದೆಹಲಿಗೆ ಹೋದ. ರಾಜಕೀಯ ಹೊಂದಾಣಿಕೆಗಳು ವ್ಯಾಪಾರದೊಂದಿಗೆ ಮತ್ತು ಕಂಪೆನಿಯ ವಿದೇಶೀ ಮಹತ್ತ್ವಾಕಾಂಕ್ಷೆಯೊಂದಿಗೆ ಗಟ್ಟಿಯಾಗಿ ಬಂಧಿತವಾಗಿದ್ದವು. ಬಂಗಾಳದ ನವಾಬರು ಸ್ವಾಯತ್ತ ಆಳ್ವಿಕೆದಾರರಂತೆ ತಮ್ಮ ದಾರಿಯನ್ನು ತಾವೇ ರೂಪಿಸಿಕೊಳ್ಳುತ್ತಾರೆಂದು ಬಂಗಾಳದ ಹೆಚ್ಚಿನವರಂತೆ ಬ್ರಿಟಿಷರು ಕೂಡ ತಿಳಿದುಕೊಂಡಿದ್ದರು. ೧೭೧೭ರಲ್ಲಿ ಮುರ್ಷಿದ್ ಕೂಲಿಯನ್ನು ಬಂಗಾಳ, ಬಿಹಾರ, ಒರಿಸ್ಸಾಗಳ ಸುಬೇದಾರನಾಗಿ ನೇಮಿಸಲಾಯಿತು.
ಸಮೃದ್ಧ ನಾಡು ಬಂಗಾಳ
ಅಂದು ವಾಣಿಜ್ಯ ವ್ಯವಹಾರಗಳಿಗೆ ದೇಶದ ಬೇರೆ ಯಾವುದೇ ಭಾಗ ಬಂಗಾಳದಷ್ಟು ಉತ್ತಮವಾಗಿರಲಿಲ್ಲ; ಯೂರೋಪಿನ ದೇಶಗಳಿಗೆ ಅದೇ ಆಕರ್ಷಣೆಯಾಗಿತ್ತು. ಅಲ್ಲಿಯ ಮಕ್ಷೂದಾಬಾದ್ ಮುರ್ಷಿದಾಬಾದ್ ಆಗುವ ಮುನ್ನವೇ ಯೂರೋಪಿನ ವ್ಯಾಪಾರಿಗಳಿಗೆ ಅದರ ಬಗ್ಗೆ ಚೆನ್ನಾಗಿ ತಿಳಿದಿತ್ತು. ಅದು ಮೊಘಲ್ ಸಾಮ್ರಾಜ್ಯದ ಪೂರ್ವದ ವೈಸರಾಯ್ ಮುರ್ಷಿದ್ ಕೂಲಿ ಖಾನ್ನ ರಾಜಧಾನಿಯಾಗಿತ್ತು. ಮೊದಲು ಮಕ್ಷೂದಾಬಾದ್ ಅಲ್ಲೊಂದು ಅತಿಥಿಗೃಹವನ್ನು ನಿರ್ಮಿಸಿದ್ದ. ಅದರಿಂದಾಗಿ ಅದು ಮಕ್ಷೂದಾಬಾದ್ ಆಯಿತು. ಕ್ರಿ.ಶ. ೧೬೦೦ರ ಆರಂಭದಿAದಲೇ ಅದೊಂದು ವ್ಯಾಪಾರ ಕೇಂದ್ರವಾಯಿತು; ಕಲ್ಕತ್ತಾ ನಗರ ಏರ್ಪಟ್ಟದ್ದು ೧೬೯೦ರಲ್ಲಿ.
ಗುಣಮಟ್ಟದ ರೇಷ್ಮೆ
ಮುರ್ಷಿದಾಬಾದ್ ಪ್ರದೇಶದ ಉತ್ತಮ ಗುಣಮಟ್ಟದ ರೇಷ್ಮೆಯು ಇಬ್ಬರು ಬ್ರಿಟಿಷ್ ಏಜೆಂಟರ ಗಮನಸೆಳೆಯಿತು. ಅವರನ್ನು ೧೬೧೯ರಲ್ಲಿ ಆಗ್ರಾದಿಂದ ಪಾಟ್ನಾಕ್ಕೆ ಕಳುಹಿಸಲಾಗಿತ್ತು. ಅವರು ಅಲ್ಲೊಂದು ವ್ಯಾಪಾರಕೇಂದ್ರವನ್ನು ತೆರೆದರು. ಮುಂದಿನ ವರ್ಷ ಅವರು ರೇಷ್ಮೆ ಖರೀದಿಗೆ ೫೦೦ ರೂ. ಹೂಡಿಕೆ ಮಾಡಿದರು. ಒಬ್ಬ ಏಜೆಂಟ್ನ ಪತ್ರದಲ್ಲಿ ಅಲ್ಲಿಯ ರೇಷ್ಮೆ ಶ್ರೇಷ್ಠಮಟ್ಟದ್ದೆನ್ನುವುದು ದಾಖಲಾಗಿದೆ. ಕಂಪೆನಿಯ ಏಜೆಂಟರು ಸೂರತ್ ಮತ್ತಿತರ ಕಡೆಯ ಫ್ಯಾಕ್ಟರಿಗಳ ಜೊತೆ ಬಹಳಷ್ಟು ಪತ್ರವ್ಯವಹಾರ ನಡೆಸಿದರು. ಅಲ್ಲಿ ಕಂಪೆನಿ ತುಂಬಾ ಸಂಪರ್ಕ ಮತ್ತು ವ್ಯವಹಾರ ಮಾಡಿತು. ಈ ಏಜೆಂಟರು ಪಾಟ್ನಾದ ಗವರ್ನರನ ಭೇಟಿ ಮಾಡಿದರು; ಬಂಗಾಳದ ರೇಷ್ಮೆಯ ಮಾದರಿಯನ್ನು ಆಗ್ರಾಕ್ಕೆ ಕಳುಹಿಸಿದರು.
ಏಜೆಂಟರಲ್ಲಿ ಒಬ್ಬನಾದ ಹಗ್ಸ್ ವ್ಯಾಪಾರದ ಸ್ಪರ್ಧೆಯ ಬಗ್ಗೆ ತಿಳಿದುಕೊಂಡ. ಪಟ್ಟಣದಲ್ಲಿ ಕೆಲವರು ಪೋರ್ಚುಗೀಸರಿದ್ದಾರೆ; ಮತ್ತೆ ಕೆಲವರು ಬಂಗಾಳದ ತಮ್ಮ ನೆಲೆಗೆ ಹೋಗಿದ್ದಾರೆಂದು ತಿಳಿಯಿತು. ಮುರ್ಷಿದಾಬಾದ್ನ ದಕ್ಷಿಣದ ಕಾಸಿಂಬಜಾರ್ನಲ್ಲಿ ೧೬೫೮ರಲ್ಲಿ ಕಂಪೆನಿಯ ಒಂದು ಕಾರ್ಖಾನೆಯನ್ನು ಸ್ಥಾಪಿಸಿದರು; ಮುಂದೆ ಅದು ಅವರ ಕೇಂದ್ರವಾಯಿತು. ಬಂಗಾಳದಲ್ಲಿ ಅದೇ ಕಂಪೆನಿಯ ಮೊದಲ ಫ್ಯಾಕ್ಟರಿಯಾಗಿದ್ದು, ಅದು ಹೂಗ್ಲಿಯ ಏಜೆನ್ಸಿಗೆ ಒಳಪಟ್ಟಿತ್ತು.
ಕಂಪೆನಿ ಧ್ಯೇಯವಾಕ್ಯ
ಈಸ್ಟ್ ಇಂಡೀಸ್ ಜೊತೆ ವ್ಯಾಪಾರ ನಡೆಸುತ್ತಿದ್ದ ಇಂಗ್ಲೆಂಡಿನ ವ್ಯಾಪಾರಿಗಳ ಸಂಯುಕ್ತ ಕಂಪೆನಿಯಾದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯು ತನ್ನ ಧ್ಯೇಯವಾಕ್ಯವನ್ನು (motto) ಈ ರೀತಿಯಾಗಿ ಘೋಷಿಸಿತು: “ದೇವರು ಹೇಳಿದಾಗ ಅಥವಾ ಹೇಳಿದ ಕಡೆಗೆ ಹೋದಾಗ ಯಾವುದೇ ನಷ್ಟ ಅಥವಾ ತೊಂದರೆ ಆಗುವುದಿಲ್ಲ.” ಇದು ಬಂಗಾಳದ ವ್ಯಾಪಾರದಲ್ಲಿ ತುಂಬಾ ಪ್ರೇರಕ ಆಯಿತು. ಸ್ಥಳೀಯರು ಅದನ್ನು ಜಾನ್ ಕಂಪೆನಿ ಎಂದು ಕರೆಯುತ್ತಿದ್ದರು. ಅದು ಬಂಗಾಳದಲ್ಲಿ ಗಾಳ ಹಾಕಿಕೊಂಡು ಕುಳಿತಿದ್ದ ಒಂದೇ ಒಂದು ಬಹುರಾಷ್ಟ್ರೀಯ ಕಂಪೆನಿ ಆಗಿರಲಿಲ್ಲ. ಕಾಸಿಂಬಜಾರ್ ಫ್ರೆಂಚರಿಗೂ ತುಂಬಾ ಮುಖ್ಯವಾಗಿತ್ತು. ಆರ್ಮೇನಿಯನ್ನರು, ಡಚ್ಚರು ಕೂಡ ಆ ಭಾಗದಲ್ಲಿದ್ದರು. ಎಲ್ಲರ ಗುರಿ ರೇಷ್ಮೆ ವ್ಯಾಪಾರವಾಗಿತ್ತು ಎಂಬುದು ಆ ಕಾಲದ ವಿದೇಶೀ ಪ್ರವಾಸಿಗರ ಬರಹಗಳಿಂದ ತಿಳಿಯುತ್ತದೆ. ಡಚ್ಚರು ಕೂಡ ಅಲ್ಲಿ ಫ್ಯಾಕ್ಟರಿಯನ್ನು ಸ್ಥಾಪಿಸಿದ್ದರು. ಅಲ್ಲಿಯ ಚಂದ್ರನಗರ (ಚಂದ್ರನಾಗೋರ್)ದಲ್ಲಿ ಫ್ರೆಂಚರ ಸ್ಥಾಪನೆ ಇತ್ತು.
ಏನಿದ್ದರೂ ಅಲ್ಲಿ ಅತ್ಯಂತ ಪ್ರಬಲವಾಗಿ ವ್ಯಾಪಾರದ ಬೆನ್ನು ಹತ್ತಿದವರು ಬ್ರಿಟಿಷರೇ. ವಿಶೇಷ ವಸ್ತುಗಳ ಮೇಲೆ ಅವರು ಗಮನವನ್ನು ಕೇಂದ್ರೀಕರಿಸಿದರು: ಉದಾಹರಣೆ – ರೇಷ್ಮೆ. ಅದು ಮುರ್ಷಿದಾಬಾದ್ನ ಪ್ರಧಾನ ಕೃಷಿಯೇತರ ಉದ್ಯಮವಾಗಿತ್ತು. ಅಲಿವರ್ದಿಖಾನನ ಕಾಲದಲ್ಲಿ (೧೭೪೦-೫೬) ಸುಮಾರು ೮೭.೫ ಲಕ್ಷ ರೂ. ಮೌಲ್ಯದ ಕಚ್ಚಾ ರೇಷ್ಮೆ ಪ್ರತಿವರ್ಷ ಮುರ್ಷಿದಾಬಾದ್ನ ಕಸ್ಟಮ್ಸ್ ಹೌಸ್ನ ಪುಸ್ತಕದಲ್ಲಿ ಕಾಣಿಸುತ್ತಿತ್ತು. ಮುರ್ಷಿದಾಬಾದ್ನ ಈ ಸಂಪತ್ತು ಆಗ ದೊಡ್ಡ ಸಾಧನೆ ಎನಿಸಿತ್ತು (‘ಬಂಗಾಳ ರೇಷ್ಮೆ’). ೧೭೭೬ರ ಹೊತ್ತಿಗೆ ಇಟಾಲಿಯನ್ ಮತ್ತು ಚೀನಾದ ರೇಷ್ಮೆಯನ್ನು ಹೊರತುಪಡಿಸಿ ಇತರ ಎಲ್ಲ ರೇಷ್ಮೆಯನ್ನು ಬ್ರಿಟಿಷ್ ಮಾರುಕಟ್ಟೆಯಿಂದ ಹೊರಹಾಕಿತು; ಹೀಗೆ ಬಂಗಾಳ ಅವರಿಗೆ ಸೇರಿದಂತಾಯಿತು.
ಪ್ಲಾಸಿ ಯುದ್ಧದ ಮೊದಲು ಮತ್ತು ಅನಂತರ ಕೂಡ ಈ ವ್ಯಾಪಾರವು ಬೆಳೆಯಿತು. ಪ್ಲಾಸಿಯ ಮೂರು ದಶಕಗಳ ಅನಂತರ ಪ್ರಕಟವಾದ ಒಂದು ಪುಸ್ತಕದಲ್ಲಿ ಬಂಗಾಳದ ನದಿ ಮೇಲಿನ ವ್ಯಾಪಾರವು ೩೦ ಸಾವಿರ ಅಂಬಿಗರಿಗೆ ಉದ್ಯೋಗ ನೀಡಿದೆ ಎಂದು ದಾಖಲಾಗಿದೆ.
ಬ್ರಿಟಿಷ್ ಸಾಮ್ರಾಜ್ಯದ ಹಿನ್ನೆಲೆಯಲ್ಲಿ ಮುಖ್ಯವೆನಿಸುವ ಬೇರೆ ಸಾಕ್ಷ್ಯಗಳು ಕೂಡ ಬಂಗಾಳದಲ್ಲಿ ಲಭ್ಯವಿವೆ. “ಇಲ್ಲಿಯ ಮೂಲನಿವಾಸಿಗಳಿಗೆ ಇಂಗ್ಲಿಷನ್ನು ಚೆನ್ನಾಗಿ ಕಲಿಸಿ ನಮ್ಮ ಅಡಿಯಾಳಾಗಿ ಮಾನವಸಂಪನ್ಮೂಲವನ್ನು ತಯಾರಿಸಿಕೊಳ್ಳಬಹುದು” – ಎಂದು ಮೆಕಾಲೆ ಹೇಳಿದ್ದಿದೆ. ಬಂಗಾಳವನ್ನು ಆ ರೀತಿಯಲ್ಲಿ ಹೊಗಳಿದ ಮೆಕಾಲೆ ಬಂಗಾಳಕ್ಕೆ ಮಹತ್ತ್ವ ನೀಡಿದ್ದಕ್ಕಾಗಿ ಕ್ಲೆöÊವ್ನನ್ನು ಕೂಡ ಶ್ಲಾಘಿಸಿದ; ಆತನದು ಬಂಗಾಳದ ಕಾರ್ಪೋರೇಟ್ ವಿಜಯಿ ಎಂದು ಹೇಳಿದ.
ಆಗ ಬ್ರಿಟಿಷರ ಸಂಪರ್ಕಕ್ಕೆ ಬಂದ ಪ್ರಾಂತಗಳಲ್ಲಿ ಬಂಗಾಳವೇ ಅತ್ಯಂತ ಶ್ರೀಮಂತವಾಗಿತ್ತು; ಇತರ ಯಾವುದೇ ಭಾಗಕ್ಕೆ ಅಂತಹ ನೈಸರ್ಗಿಕ ಸಂಪನ್ಮೂಲ ಇರಲಿಲ್ಲ; ಕೃಷಿ, ವಾಣಿಜ್ಯ ಎರಡಕ್ಕೂ ಅನುಕೂಲವಾಗಿತ್ತು. ಗಂಗಾನದಿ ಅಲ್ಲಿ ಹಲವು ಉಪನದಿಗಳಾಗಿ ಸಮುದ್ರಕ್ಕೆ ಹರಿಯುವ ಕಾರಣ ದೊಡ್ಡ ಬಯಲು ನಿರ್ಮಾಣವಾಗಿದೆ. ತುಂಬಾ ಅಕ್ಕಿ ಬೆಳೆಯುತ್ತಾರೆ. ಸಂಬಾರ ಪದಾರ್ಥಗಳು, ಸಕ್ಕರೆ, ತರಕಾರಿ, ಎಣ್ಣೆ ಕೂಡ ಸಮೃದ್ಧವಾಗಿವೆೆ. ಜಲಸಂಪನ್ಮೂಲಗಳಲ್ಲಿ ಮೀನು ಧಾರಾಳ ಸಿಗುತ್ತದೆ. ಕರಾವಳಿಯಲ್ಲಿನ ದ್ವೀಪಸಮುದಾಯ ‘ಗಾರ್ಡನ್ ಆಫ್ ಈಡನ್’ನಂತಿವೆ. ಇಲ್ಲಿಯ ಮಗ್ಗಗಳಲ್ಲಿ ತಯಾರಾಗುವ ನುಣುಪಾದ ಬಟ್ಟೆ ಲಂಡನ್, ಪ್ಯಾರಿಸ್ಗಳ ಶ್ರೀಮಂತ ಮಹಿಳೆಯರಿಗೆ ತುಂಬಾ ಇಷ್ಟವಾಯಿತು. ವ್ಯಾಪಾರ ಬೆಳೆಯಿತು. ಇದರ ಕೀರ್ತಿ ಬ್ರಿಟನ್ಗೂ ಹೋಯಿತು. ಈ ಭಾಗದ ಕಲ್ಲಿದ್ದಲು ನ್ಯೂಕ್ಯಾಸಲ್ಗೆ ಹೋಗಿ ಕೈಗಾರಿಕಾ ಕ್ರಾಂತಿಗೆ ಪೂರಕವಾಯಿತು.
ಮುರ್ಷಿದ್ ಕೂಲಿ ಪ್ರಭಾವ
ಅಧಿಕಾರದ ಉನ್ನತ ಸ್ಥಾನಗಳಿಗೆ ಏರುತ್ತ ಹೋದ ಮುರ್ಷಿದ್ ಕೂಲಿ ಡೆಕ್ಕನ್ನಲ್ಲಿ ಒಬ್ಬ ಹಿಂದುವಾಗಿ ಜನಿಸಿದವನೆಂದು ಹೇಳಲಾಗುತ್ತದೆ. ಬಾಲ್ಯದಲ್ಲೇ ಆತ ಹಲವು ಭಾಷೆಗಳನ್ನು ಕಲಿತ. ಹತ್ತು ವರ್ಷವಿದ್ದಾಗ ಆತನನ್ನು ಒಬ್ಬ ಪರ್ಶಿಯನ್ ಅಧಿಕಾರಿಗೆ ಮಾರಲಾಯಿತು. ಬಂಗಾಳ ಮತ್ತು ಈಸ್ಟ್ ಇಂಡಿಯಾ ಕಂಪೆನಿಗಳ ಭವಿಷ್ಯ ಕೆಲವು ಈತನಿಗೆ ತಳಕು ಹಾಕಿಕೊಂಡಿವೆ. ಔರಂಗಜೇಬನ ಮರಣಾನಂತರ ಉಂಟಾದ ಗೊಂದಲಮಯ ಪರಿಸ್ಥಿತಿಯಲ್ಲಿ ಮುರ್ಷಿದ್ ಕೂಲಿ ತನ್ನ ಪ್ರಭಾವವನ್ನು ಗಟ್ಟಿ ಮಾಡಿಕೊಂಡ. ದಿವಾನನಾದ; ಅನಂತರ ಒರಿಸ್ಸಾದ ಗವರ್ನರ್ ಆದ. ಚಕ್ರವರ್ತಿ ಅಜಯ್ ಶಾ ಪುತ್ರ ಫರೂಖ್ಸಿಯಾರ್ನ ಪರಿಚಯ ಬೆಳೆಸಿಕೊಂಡ. ಫರೂಖ್ಸಿಯಾರ್ ೧೭೧೩ರಲ್ಲಿ ದೆಹಲಿಯ ಚಕ್ರವರ್ತಿಯಾದರೆ ಈತ (ಕರ್ತಾಲಿಬ್ಖಾನ್ ಯಾನೇ ಮುರ್ಷಿದ್ ಕೂಲಿ) – ಬಂಗಾಳ, ಬಿಹಾರ, ಒರಿಸ್ಸಾಗಳ ಗವರ್ನರ್ ಹುದ್ದೆಗೇರಿದ. ಊರಿನ ಹೆಸರನ್ನು ತನ್ನ ಹೆಸರಿಗೆ ಬದಲಿಸಿಕೊಂಡ. ಮುರ್ಷಿದಾಬಾದ್ ಕ್ರಮೇಣ ಸಮೃದ್ಧ ನಗರವಾಯಿತು.
ಮುರ್ಷಿದ್ ಕೂಲಿ ಸುಬೇದಾರ್ ಆಗಿದ್ದಾಗ (೧೭೧೭-೨೭) ಕಂದಾಯ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತಂದ. ಆತನ ಅಧಿಕಾರಿಗಳು ಕಂದಾಯ ವಸೂಲಿಯಲ್ಲಿ ಕ್ರೂರಿಗಳಾಗಿದ್ದರೂ ಅದನ್ನು ಆತ ಅಲಕ್ಷಿಸಿದ; ಕಂದಾಯ ಪಾವತಿಸದವರನ್ನು ಅತ್ಯಂತ ಕ್ರೂರವಾಗಿ ದಂಡಿಸುತ್ತಿದ್ದರು.
ನವಾಬನಾಗಿ ಮುರ್ಷಿದ್ ಕೂಲಿ ಬಂಗಾಳದಲ್ಲಿ ಒಂದು ಬ್ಯಾಂಕರ್ ಕುಟುಂಬ (ಸೇಠ್ಗಳು) ಬೆಳೆಸಿದ್ದು ಅದರಿಂದ ಪ್ಲಾಸಿ ಯುದ್ಧಕ್ಕೂ ಒಂದು ಕೊಡುಗೆಯನ್ನು ಕೊಟ್ಟಂತಾಯಿತು. ಆ ಸೇಠ್ಗಳು ರಾಜಸ್ಥಾನದಿಂದ ವಲಸೆ ಬಂದವರು. ಕೂಲಿ ಮತ್ತು ಅನಂತರದ ನವಾಬರ ಪೋಷಣೆಯಿಂದಾಗಿ ಆ ಸೇಠ್ ಕುಟುಂಬದವರು ತಮ್ಮ ವ್ಯಾಪಾರವನ್ನು ತುಂಬಾ ಲಾಭಕರವನ್ನಾಗಿ ಮಾಡಿಕೊಂಡರು. ತಮ್ಮ ಹಣಕಾಸಿನ ಪ್ರಭಾವದಿಂದ ಇತರರನ್ನು ಬಗ್ಗಿಸಿದರು. ಆ ವಂಶದಲ್ಲಿ ಬಂದ ಜಗತ್ಸೇಠ್ ಭಾರೀ ಶ್ರೀಮಂತನಾಗಿದ್ದ. ಢಾಕಾದಲ್ಲಿ ಮುರ್ಷಿದ್ ಕೂಲಿಗೂ ಮಾಣಿಕ್ಚಂದ್ ಎಂಬ ಸೇಠ್ಗೂ ಗೆಳೆತನವಿತ್ತು. ಬಂಗಾಳದ ವಿವಿಧ ನಗರಗಳಲ್ಲದೆ ಹೊರಗೆ ಕೂಡ ಮಾಣಿಕ್ಚಂದ್ನ ಬ್ಯಾಂಕಿನ ಶಾಖೆಗಳಿದ್ದವು.
ನಾಣ್ಯಮುದ್ರಣಕ್ಕೆ ಲಂಚ
ಅಂದಿನ ನಾಣ್ಯಮುದ್ರಣದಲ್ಲೂ ಸೇಠ್ಗಳು ಭಾಗಿಯಾಗಿದ್ದರು. ಮುರ್ಷಿದಾಬಾದ್ನಲ್ಲಿ ನಾಣ್ಯಮುದ್ರಣ ನಡೆಯುತ್ತಿದ್ದು ಈಸ್ಟ್ ಇಂಡಿಯಾ ಕಂಪೆನಿ ಅಲ್ಲಿ ನಾಣ್ಯಮುದ್ರಣ ಮಾಡಿಸಿಕೊಳ್ಳುತ್ತಿತ್ತು. ೧೭೦೬ರಲ್ಲಿ ಕಾಸಿಂಬಜಾರ್ನ ಇಂಗ್ಲಿಷರು ೨೬ ಸಾವಿರ ರೂ. ಮೌಲ್ಯ ಬಿಲಿಯನ್ ಕೊಟ್ಟು ನಾಣ್ಯ ಮಾಡಿಸಿಕೊಂಡರು. ಮೊದಲು ಕಂಪೆನಿಗೆ ಮುಕ್ತವಾಗಿ ನಾಣ್ಯ ಮಾಡಿಸಲು ಬಿಟ್ಟ ಮುರ್ಷಿದ್ ಕೂಲಿ ೧೭೧೬ರಿಂದ ಅಡ್ಡಿಪಡಿಸತೊಡಗಿದ. ಆತನಿಗೆ ೧೫ ಸಾವಿರ ರೂ., ದಿವಾನ ಇಕ್ರಂಖಾನ್ಗೆ ರೂ. ೫,೦೦೦ ಹಾಗೂ ಇತರರಿಗೆ ೫,೦೦೦ ರೂ. – ಹೀಗೆ ಒಟ್ಟು ೨೫ ಸಾವಿರ ರೂ. ಕೊಡಬೇಕೆಂದು ವಿಧಿಸಿದ. ನಿರಾತಂಕ ವ್ಯಾಪಾರ ನಡೆಸುವುದಕ್ಕೆ ಒಮ್ಮೆ ಕಂಪೆನಿಯಿಂದ ಚಕ್ರವರ್ತಿ ಹೆಸರಲ್ಲಿ ೩೦ ಸಾವಿರ ರೂ. ಕೇಳಿದ. ಕಂಪೆನಿ ಇಪ್ಪತ್ತು ಸಾವಿರ ಕೊಡುವೆ ಎಂದಾಗ ನವಾಬ ಒಪ್ಪಲಿಲ್ಲ. ಆಗ ವಿವಿಧ ಗವರ್ನರ್ಗಳು, ಅಧಿಕಾರಿಗಳು ಉಡುಗೊರೆ, ಲಂಚ ಕೇಳುವುದಿತ್ತು. ಆದರೆ ಈ ಮೊತ್ತ ದುಬಾರಿಯೆನಿಸಿತು.
ಸೇಠ್ ಸಲಹೆ ಮೇರೆಗೆ…
‘ಬಂಗಾಳದಲ್ಲಿ ಮುಕ್ತವಾಗಿ ವ್ಯಾಪಾರ ಮಾಡುವ ಬಗ್ಗೆ ಸನದು ಮಾಡಿಕೊಳ್ಳೋಣ. ಅದಕ್ಕೆ ಹಣ ಕೊಡಬೇಕು’ ಎಂದು ಉಡುಗೊರೆ ರೂಪದಲ್ಲಿ ಕೇಳಿದರು. ಕಂಪೆನಿಯವರು ಹಣ ಕೊಡುವುದಕ್ಕೆ ತಯಾರಿ ಮಾಡುವಷ್ಟರಲ್ಲಿ ಔರಂಗಜೇಬ್ ತೀರಿಕೊಂಡ. ಉತ್ತರಾಧಿಕಾರದ ಬಗ್ಗೆ ಅಂತರ್ಯುದ್ಧಗಳು ನಡೆದವು. ಆಗ ಕಂಪೆನಿಯವರು ಕಲ್ಕತ್ತಾದಿಂದ ಕಾಸಿಂಬಜಾರಿಗೆ ಹಣ ಒಯ್ಯುವವನನ್ನು ವಾಪಸು ಕರೆದು, ‘ಈಗ ಬೇಡ; ಯಾರು ಅಧಿಕಾರಕ್ಕೆ ಬರುತ್ತಾರೆಂದು ಕಾದುನೋಡೋಣ’ ಎಂಬ ನಿಲವಿಗೆ ಬಂದರು; ಹಣಕ್ಕಾಗಿ ಒತ್ತಡ ಮುಂದುವರಿಯಿತು.
ಮುಕ್ತ ವ್ಯಾಪಾರದ ಬಗ್ಗೆ ೧೭೧೧ರಲ್ಲಿ ಚಕ್ರವರ್ತಿ ಹೆಸರಿನಲ್ಲಿ ೪೫ ಸಾವಿರ ರೂ. ಕೇಳಿದರು; ಇತರ ಖರ್ಚಿಗೆ ಮತ್ತೆ ಕೆಲವು ಸಾವಿರ ರೂ. ಕೇಳಿದಾಗ ಕಂಪೆನಿಯವರು ‘ಒಟ್ಟು ೩೦ ಸಾವಿರ ರೂ. ಕೊಡುತ್ತೇವೆ; ಇಲ್ಲವಾದರೆ ಕಾಸಿಂಬಜಾರ್ ಕಾರ್ಖಾನೆಯನ್ನು ಮುಚ್ಚುತ್ತೇವೆ’ ಎಂದರು; ‘ಕಲ್ಕತ್ತಾದ ಫೋರ್ಟ್ ವಿಲಿಯಂನಲ್ಲಿ ಮೊಘಲ್ ಹಡಗುಗಳನ್ನು ತಡೆಯುತ್ತೇವೆ. ಇದಕ್ಕೆ ದಿವಾನರು ಒಪ್ಪದಿದ್ದರೆ ನಮ್ಮ ದಾರಿಯನ್ನು ನೋಡಿಕೊಳ್ಳುತ್ತೇವೆ; ಮತ್ತು ಚಕ್ರವರ್ತಿಗೆ ದೂರು ಕೊಡುತ್ತೇವೆ’ ಎಂದು ಎಚ್ಚರಿಸಿದರು. ಆಗ ಸೇಠ್ ಫತೇಚಂದ್ (ಜಗತ್ಸೇಠ್) ಸಲಹೆಯ ಪ್ರಕಾರ ಮುರ್ಷಿದ್ ಕೂಲಿ, ಕಂಪೆನಿಯವರೊAದಿಗೆ ಹೊಸ ಕರಾರು ಮಾಡಿಕೊಳ್ಳೋಣ – ಎಂದು ತಿಳಿಸಿದ.
‘ಬಂಗಾಲ್ ಬೂಮ್’
ಕಂಪೆನಿಯ ವ್ಯಾಪಾರವನ್ನು ಉಧ್ವಸ್ತಗೊಳಿಸುವ ಮುರ್ಷಿದ್ ಬೆದರಿಕೆಗೆ ಸೇಠ್ ಚಕ್ರವರ್ತಿಗೆ ನೇರವಾಗಿ ದೂರು ಸಲ್ಲಿಸುವ (ಬೈಪಾಸ್) ಪರಿಹಾರ ಸೂಚಿಸಿದರು. ಅದಕ್ಕೆ ಮುರ್ಷಿದ್ ಕೂಲಿ ಆಕ್ಷೇಪ ಸೂಚಿಸಿ ಶಿಕ್ಷೆಯ ಬೆದರಿಕೆಯೊಡ್ಡಿದನು. ಆದರೆ ಖಂಡಿತವಾಗಿ ಫ್ಯಾಕ್ಟರಿ ಮುಚ್ಚುವ ಬೆದರಿಕೆ ಬಂದಾಗ ಆತ ಚುರುಕಾದ. ವ್ಯಾಪಾರ ನಷ್ಟವಾದೀತೆಂದು ಬೇರೊಂದು ಪರಿಹಾರ ಸೂಚಿಸಿದ. ಬಂಗಾಳ, ಬಿಹಾರ, ಒರಿಸ್ಸಾಗಳಲ್ಲಿ ಸುಂಕವಿಲ್ಲದೆ ಕಂಪೆನಿಯ ಗೂಡ್ಸ್ ಸಾಗಾಟಕ್ಕೆ ೩೦ ಸಾವಿರ ರೂ.; ಇನ್ನು ಚಕ್ರವರ್ತಿಯಿಂದ ಫರ್ಮಾನು ಬಂದಾಗ ಮತ್ತೆ ೨೨,೫೦೦ ರೂ. ಕೊಡಬೇಕು – ಎಂದಾಗ ಕಂಪೆನಿ ಅದಕ್ಕೆ ಒಪ್ಪಿತು.
ಮುರ್ಷಿದ್ ಕೂಲಿಯ ಬೇಕಾಬಿಟ್ಟಿ ವರ್ತನೆಯ ಬದಲಿಗೆ ಈಗ ಮುಕ್ತ ಸಾಗಾಟಕ್ಕೆ ಮೇಲಿನವರ ಒಪ್ಪಿಗೆ ಸಿಕ್ಕಿದಂತಾಯಿತು, ಪ್ಲಾಸಿ ಯುದ್ಧದವರೆಗೆ ಇಂತಹ ‘ತಡೆಗಳು’ ಸೇಠ್ಗಳು, ಮತ್ತಿತರರ ಹಿತಾಸಕ್ತಿಗಳು, ಕಿರಿಕಿರಿ ಎಲ್ಲ ಇತ್ತು. ಇದು ಮುಗಿದರೂ ಕೂಡ ನಾಣ್ಯಮುದ್ರಣದ ವಿಷಯದಲ್ಲಿ ತಕರಾರು ಮುಂದುವರಿಯಿತು. ಏನಿದ್ದರೂ ಕಂಪೆನಿ ಬಂಗಾಳದಲ್ಲಿ ವ್ಯವಹಾರದ ವಿಸ್ತರಣೆಗೆ ಯತ್ನಿಸುತ್ತಲೇ ಇತ್ತು; ಅದು ‘ಬಂಗಾಲ್ ಬೂಮ್’ನ ನಡುವೆ ಇತ್ತು. ಪ್ಲಾಸಿ ಯುದ್ಧದ ಮೊದಲೇ ಅದು ಗಮನಕ್ಕೆ ಬಂತು. ಕೂಲಿ ಕಾಲದಿಂದ ಅಲಿವರ್ದಿ ಕಾಲವು ಆರಂಭವಾಗುವ ತನಕ (೧೭೦೮-೧೭೪೦) ಬ್ರಿಟನ್ನಿಂದ ಬಂಗಾಳಕ್ಕೆ ಬರುವ ಹಡಗುಗಳು ಹೆಚ್ಚುತ್ತಲೇಹೋದವು.
ದೊರೆ ತನಕ ದೂರು
ಕಂಪೆನಿಯ ವ್ಯವಹಾರ ಹೆಚ್ಚುತ್ತಿದ್ದರೂ ಸೇಠ್ಗಳು ಇದು ತಮ್ಮ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂಬಂತೆ ನಡೆದುಕೊಂಡರು. ಮುದ್ರಣಾಗಾರ (ಮಿಂಟ್)ಕ್ಕೆ ಕಂಪೆನಿಯವರು ಸೀದಾ ಪ್ರವೇಶ ಪಡೆಯುತ್ತಿದ್ದರೆ ತಮ್ಮ ನಿಯಂತ್ರಣ ತಪ್ಪುತ್ತದೆ; ತಮ್ಮ ಆದಾಯಕ್ಕೆ ಕುತ್ತು ಬರುತ್ತದೆ ಎಂಬ ನಿಲವಿಗೆ ಬಂದರು. ಈ ಸತ್ಯವನ್ನು ತಿಳಿದ ಕಂಪೆನಿ ಕೌನ್ಸಿಲ್ (ಕಲ್ಕತ್ತಾ) ಮುರ್ಷಿದ್ ಕೂಲಿಗೆ ಇನ್ನು ಉಡುಗೊರೆ, ಹಣ (ಲಂಚ) ಕೊಡುವುದಿಲ್ಲ ಎಂದು ಹೇಳಿತು. ಅದರ ಬದಲು ದೆಹಲಿಯಲ್ಲಿ ಸರಿ ಮಾಡಿಕೊಳ್ಳುತ್ತೇವೆ; ಮುಕ್ತ ವ್ಯಾಪಾರಕ್ಕೆ ಚಕ್ರವರ್ತಿಯ ಸಮಗ್ರ ಒಪ್ಪಿಗೆಯನ್ನು ಪಡೆಯುವುದು, ಮಿಂಟ್ ಬಳಸಿಕೊಳ್ಳುವುದು ಹಾಗೂ ಇತರ ರಿಯಾಯಿತಿಗಳನ್ನು ಪಡೆದುಕೊಳ್ಳುತ್ತೇವೆ – ಎಂಬ ತೀರ್ಮಾನಕ್ಕೆ ಬಂದರು. ಮುರ್ಷಿದಾಬಾದ್ನ ನಾಣ್ಯಮುದ್ರಣಾಗಾರದವರು ನಮಗೆ ಬೇಕಾದಾಗ, ಅಂದರೆ ವಾರದಲ್ಲಿ ಮೂರು ದಿನ ಕಂಪೆನಿಯ ನಾಣ್ಯಗಳ ಮುದ್ರಣಕ್ಕೆ ಅವಕಾಶ ನೀಡಬೇಕು; ಅಲ್ಲಿ ಕಿರುಕುಳ ಸಲ್ಲದು – ಮುಂತಾದ ಅಂಶಗಳಿರುವ ಮನವಿಯನ್ನು ಕಂಪೆನಿಯ ಎಂಬೆಸಿ(ರಾಯಭಾರಿಗಳು) ೧೭೧೬ರಲ್ಲಿ ದೆಹಲಿಯ ಮೊಘಲ್ ಆಸ್ಥಾನಕ್ಕೆ ನೀಡಿತು.
೧೭೧೭ರ ಮೇ ತಿಂಗಳಲ್ಲಿ ಚಕ್ರವರ್ತಿ ಫರೂಖ್ಸಿಯಾರ್ನಿಂದ ಕಂಪೆನಿಗೆ ಫರ್ಮಾನು ಬಂತು. ಆ ಮೂಲಕ ಕಂಪೆನಿಗೆ ಬಂಗಾಳದಲ್ಲಿ ಮುಕ್ತವಾಗಿ ವ್ಯಾಪಾರ ಮಾಡಲು ಅವಕಾಶ ಸಿಕ್ಕಿತು. ಮುರ್ಷಿದಾಬಾದ್ನ ಮಿಂಟ್ನ ಬಳಕೆಗೆ ಹೆಚ್ಚಿನ ಅವಕಾಶ ನೀಡಿತು. ಈ ಅಂಶಗಳು ಮುಂದೆ ಮೈಮನಸ್ಯಕ್ಕೆ ಕಾರಣವಾದವು; ಮತ್ತು ಪ್ಲಾಸಿ ಯುದ್ಧದತ್ತ ಕರೆದೊಯ್ದವು – ಎಂಬುದು ಬೇರೆ ವಿಚಾರ. ಫರ್ಮಾನು ಬಂಗಾಳ, ಬಿಹಾರ, ಒರಿಸಾಗಳಿಗೆ ಸಂಬAಧಿಸಿದ್ದು ಈಸ್ಟ್ ಇಂಡಿಯಾ ಕಂಪೆನಿ ವರ್ಷಕ್ಕೆ ೩,೦೦೦ ರೂ. ಶುಲ್ಕ ನೀಡಬೇಕು. ಈ ಸುಬಾಗಳಲ್ಲಿ ಅವರ ಎಲ್ಲ ವ್ಯಾಪಾರ, ಫ್ಯಾಕ್ಟರಿಗಳಿಗೆ ಮುಕ್ತ ಅವಕಾಶ ಇರುತ್ತದೆ. ನೆಲ ಅಥವಾ ಜಲಮಾರ್ಗದಲ್ಲಿ ಅವರು ಆಚೀಚೆ ಸಂಚರಿಸಬಹುದು. ಮೇಲಿನ ಸುಬಾಗಳಲ್ಲಿ, ಬಂದರು ಅಥವಾ ಜಿಲ್ಲೆಯಲ್ಲಿ ಇಷ್ಟದಂತೆ ಖರೀದಿ, ಮಾರಾಟ ಮಾಡಬಹುದು; ಅದಕ್ಕೆ ಸುಂಕ (ಕಸ್ಟಮ್) ಇರುವುದಿಲ್ಲ; ಇಲ್ಲಿ ಮನಸ್ಸಿದ್ದ ಕಡೆ ಕಾರ್ಖಾನೆ ಸ್ಥಾಪಿಸಬಹುದು – ಮುಂತಾಗಿ ಚಕ್ರವರ್ತಿ ತುಂಬಾ ಉದಾರವಾದ ಅನುಮತಿ ನೀಡಿದ.
ಕಾರ್ಖಾನೆ ಸ್ಥಾಪಿಸಲು ೪೦ ಬೀಘಾ (ಸುಮಾರು ೧೩ ಎಕ್ರೆ) ಜಾಗ ಬೇಕೆಂದು ಕಂಪೆನಿ ಕೇಳಿತ್ತು. ಕಲ್ಕತ್ತಾದ ಬಾಡಿಗೆ ವರ್ಷಕ್ಕೆ ೧,೧೯೫ ರೂ. ಗಳಾಗಿದ್ದು, ಕಂಪೆನಿ ವರ್ಷಕ್ಕೆ ನೀಡುವ ೮,೧೨೧ ರೂ.ಗಳಿಗೆ ೩೮ ಪಟ್ಟಣ ಮತ್ತು ಅವುಗಳ ಸಮೀಪದ ಹಳ್ಳಿಗಳು ವ್ಯಾಪಾರದ ಬಗ್ಗೆ ಕಂಪೆನಿಗೆ ಸಿಕ್ಕಿದವು. ಮದ್ರಾಸ್ ಸಿಕ್ಕಾಗಳನ್ನು ಸೂರತ್ ನಾಣ್ಯಗಳಿಗೆ ಸಮಾನವಾಗಿ ಪರಿಗಣಿಸಲಾಯಿತು. ಬೊಂಬಾಯಿ (ಮುಂಬಯಿ) ಕೂಡ ಸಿಕ್ಕಾ ಮುದ್ರಿಸಬಹುದಿತ್ತು. ಒಟ್ಟಿನಲ್ಲಿ ಮುರ್ಷಿದಾಬಾದ್ ಮಿಂಟ್ನ ತಡೆಯಿಲ್ಲದ ಬಳಕೆಗೆ ಅವಕಾಶ ಸಿಕ್ಕಿದ್ದು ದೊಡ್ಡ ಸಾಧನೆ ಎನಿಸಿತು.
ಬಹುಮುಖಿ ಒತ್ತಡ ಸೇರಿದಂತೆ ತೆರೆಮರೆಯ ಚಟುವಟಿಕೆಗಳು ಸಾಕಷ್ಟು ಇದ್ದವು. ಹಿಂದೆ ಭಾರೀ ಲಂಚ ಕೊಡಲಾಗುತ್ತಿತ್ತು. ಹಿಂದಿನ ಫರ್ಮಾನಿನ ಅವಧಿ ಮುಗಿದರೂ ಮತ್ತೆ ಕೊಡುವ ಸಾಧ್ಯತೆ ಇರಲಿಲ್ಲ. ‘ಸೂರತ್ ಮತ್ತಿತರ ನೆಲೆಗಳಿಂದ ವಾಪಸಾಗುತ್ತೇವೆ’ ಎಂದು ಬೆದರಿಕೆ ಹಾಕಿದ್ದು ಕೂಡ ೧೭೧೬ರ ಫರ್ಮಾನು ಸಿಗಲು ಕಾರಣ ಆಗಿರಬಹುದು. ಅದಲ್ಲದೆ ಹ್ಯಾಮಿಲ್ಟನ್ ಎಂಬ ಡಾಕ್ಟರ್ ಚಕ್ರವರ್ತಿ ಫರೂಖ್ಸಿಯಾರ್ನ ಬಹುಕಾಲದಿಂದ ಗುಣವಾಗದಿದ್ದ ಒಂದು ರೋಗವನ್ನು ಗುಣಪಡಿಸಿದ್ದು ಹೆಚ್ಚಿನ ಪ್ರಭಾವ ಬೀರಿತೆಂದು ನಂಬಲಾಗಿದೆ. ಅದರಿಂದ ಇಂಗ್ಲೆಂಡ್ ದೇಶಕ್ಕೇ ಲಾಭವಾಯಿತು; ಆಸ್ಥಾನದಲ್ಲಿ ಆತ ಮಿಂಚಿದ. ಫರ್ಮಾನು ದೊರೆಯಿತಾದರೂ ಎಂಬೆಸಿ ಅದಕ್ಕೆ ಒಂದು ಲಕ್ಷ ಪೌಂಡ್ಗೂ ಅಧಿಕ ವೆಚ್ಚ ಮಾಡಿತ್ತು.
ಸಂತೋಷ ಅಲ್ಪಾವಧಿ
ಫರ್ಮಾನು ಸಿಕ್ಕಿದ್ದನ್ನು ಕಂಪೆನಿಯ ಕೌನ್ಸಿಲ್ ಆಚರಿಸಿತು. ಆದರೆ ಆ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ಮೊಘಲ್ ಚಕ್ರವರ್ತಿಯ ಫರ್ಮಾನಿಗೂ ಭಯವಿಲ್ಲ (ಬೆಲೆಯಿಲ್ಲ?) ಎಂಬ ಸ್ಥಿತಿ. ನಾಣ್ಯ ತಯಾರಿಸುವ ಬಗ್ಗೆ ಮಿಂಟ್ಗೆ ಇಪ್ಪತ್ತು ಚೆಸ್ಟ್ ಚಿನ್ನ ಕಳುಹಿಸಿದಾಗ ಬೇರೆ ರೀತಿಯ ತಕರಾರು ಬಂತು. ಮಿಂಟ್ನ ಅಧಿಕಾರಿ ರಘುನಂದನ್ ತೀವ್ರ ಅನಾರೋಗ್ಯದಲ್ಲಿದ್ದ. ನವಾಬನ ಭೇಟಿ ಮಾಡಿ ಫರ್ಮಾನು ತೋರಿಸಿದರೂ ಪರಿಣಾಮ ಶೂನ್ಯ. ಮುರ್ಷಿದ್ ಕೂಲಿ ತನ್ನ ಮತ್ತು ಸೇಠ್ಗಳ ಹಿತಾಸಕ್ತಿಗೆ ಸೀಮಿತವಾಗಿರುವಂತೆ ಕಂಡುಬಂತು. ಅನಂತರ ರಘುನಂದನ್ ತೀರಿಕೊಂಡಾಗ ಮಿಂಟ್ನ ಹೊಣೆ ಸೇಠ್ಗಳಿಗೆ ಸೇರಿತು. ಅವರದೇ ಏಕಸ್ವಾಮ್ಯ ಒಂದಾದರೆ ಅವರಿಗೆ ನವಾಬನ ರಕ್ಷಣೆ ಇದ್ದುದು ಇನ್ನೊಂದು. ನಾಣ್ಯಮುದ್ರಣಕ್ಕೆ ದುಬಾರಿ ಚಾರ್ಜ್ ವಿಧಿಸಿದರು. ಬಂಗಾಳದಲ್ಲಿ ಅಲ್ಲಿಯ ನವಾಬನದೇ ಶಾಸನ ಎಂಬಂತಾಯಿತು.
ನವಾಬರು ಮತ್ತು ಬ್ಯಾಂಕ್ ನಡೆಸುವವರು ಬದಲಾದರೂ ಕೂಡ ನವಾಬ ಮತ್ತು ಸೇಠ್ಗಳ ಗೆಳೆತನ ದಶಕಗಳ ಕಾಲ ಮುಂದುವರಿಯಿತು. ಮುದ್ರಣಾಗಾರವು ಬ್ರಿಟಿಷರ ಕೈ ಎಟುಕಿನಿಂದ ತಪ್ಪಿಹೋಯಿತು. ಜಗತ್ ಸೇಠ್ ಮುದ್ರಣಾಗಾರದ ಮುಖ್ಯಸ್ಥನಾದ. ಆಗ ಕಾಸಿಂಬಜಾರ್ನ ಕಂಪೆನಿಯ ಕಾರ್ಖಾನೆ, ಬೇರೆಯವರಿಗೆ ಬೆಳ್ಳಿನಾಣ್ಯವನ್ನು ಮುದ್ರಿಸುವ ಧೈರ್ಯ ಕೂಡ ಇಲ್ಲ ಎಂಬ ತೀರ್ಮಾನಕ್ಕೆ ಬಂತು.
ಕಂಪೆನಿ-ಸೇಠ್ ಗೆಳೆತನ
ಇದು ಬದಲಾದದ್ದು ೧೭೫೭ರಲ್ಲಿ ನಡೆದ ಪ್ಲಾಸಿ ಯುದ್ಧದ ಬಳಿಕವೇ. ಆಗ ಕಂಪೆನಿ ಕಲ್ಕತ್ತಾದ ಹೊಸ ಮುದ್ರಣಾಗಾರದಲ್ಲಿ ತನ್ನ ನಾಣ್ಯಗಳನ್ನು ತಾನೇ ಮುದ್ರಿಸಿತು. ಆದರೆ ಅವರ ನಾಣ್ಯಗಳು ‘ಎಂಪೆರರ್ ಆಫ್ ಹಿಂದೂಸ್ತಾನ್’ ಎಂಬ ಹೆಸರಿನಲ್ಲೇ ಇದ್ದವು. ಯುದ್ಧಾನಂತರ ೧೭೬೦ರಲ್ಲಿ ಮೀರ್ಕಾಸಿಂ ಕಲ್ಕತ್ತಾದಲ್ಲಿ ಮುದ್ರಣಾಗಾರ ಸ್ಥಾಪಿಸಲು ಕಂಪೆನಿಗೆ ಅನುಮತಿ ನೀಡಿದ. ಆಗ ಸೇಠ್ಗಳ ಏಕಸ್ವಾಮ್ಯವು ಮುರಿಯಿತು. ೧೭೬೫ರ ಹೊತ್ತಿಗೆ ಅವರು ಮತ್ತಷ್ಟು ದುರ್ಬಲವಾಗಿದ್ದರು. ಆಗ ಬಂಗಾಳದಲ್ಲಿ ಕಂದಾಯ ಸಂಗ್ರಹಿಸುವ ಮಹತ್ತ್ವದ ಹಕ್ಕು ಈಸ್ಟ್ ಇಂಡಿಯಾ ಕಂಪೆನಿಗೆ ಸಿಕ್ಕಿತು.
ಗಮನಾರ್ಹ ಸಂಗತಿಯೆಂದರೆ, ಪ್ಲಾಸಿ ಯುದ್ಧದ ಪಿತೂರಿಯಲ್ಲಿ ಕೂಡ ಈ ಸೇಠ್ಗಳಿದ್ದರು. ಬಂಗಾಳದ ವಿಷಯದಲ್ಲಿ ಅವರು ನಡೆಸಿದ ಆಟದಲ್ಲಿ ಬ್ರಿಟಿಷ್ ಸೇನಾನಿ ರಾಬರ್ಟ್ ಕ್ಲೈವ್ ಅದ್ಭುತವಾಗಿ ಮೂಡಿಬಂದ. ಅಲ್ಲಿ ಸೇಠ್ಗಳು ಇಂಗ್ಲಿಷರನ್ನು ಬೆಂಬಲಿಸಿದರು. ಜಗತ್ ಸೇಠ್ ಮತ್ತು ಆತನ ಸೋದರಸಂಬಂಧಿ ಮಹಾರಾಜಾ ಸ್ವರೂಪ್ಚಂದ್ ಪ್ಲಾಸಿ ಪಿತೂರಿಯಲ್ಲಿ ಶಾಮೀಲಾಗಿಯೇ ಇದ್ದರು. ಯುದ್ಧದ ಅನಂತರವೂ ಸೇಠ್ಗಳು ಬ್ರಿಟಿಷರ ಜೊತೆಗಿದ್ದರು. ಅದೇ ಕಾರಣಕ್ಕೆ ಅವರಿಗೆ ‘ದೇಶದ್ರೋಹ’ದ ಕಳಂಕ ಬರಲಿಲ್ಲವೆಂದು ನಂಬಲಾಗಿದೆ.
ಜಗತ್ತಿನ ಪೂರ್ವಭಾಗದಲ್ಲಿ, ಮುಖ್ಯವಾಗಿ ಭಾರತದಲ್ಲಿ ಯೂರೋಪಿನ ಹಲವು ರಾಷ್ಟçಗಳು ವ್ಯಾಪಾರ, ವಸಾಹತು ಸ್ಥಾಪನೆ ಪ್ರಯತ್ನಗಳನ್ನು ನಡೆಸಿವೆ. ಆದರೆ ಅದರಲ್ಲಿ ನಿರಂತರವಾಗಿ ಯಶಸ್ಸಿನ ಮೆಟ್ಟಿಲು ಏರುತ್ತಾ ಹೋದವರು ಬ್ರಿಟಿಷರು. ಪ್ಲಾಸಿ ಯುದ್ಧದ ಹಿಂದಿನ ದಿನಗಳನ್ನು ಗಮನಿಸಿದರೆ ಅದು ಬಹು ಚೆನ್ನಾಗಿ ತಿಳಿಯುತ್ತದೆ. ಪ್ಲಾಸಿ ಯುದ್ಧ ಈ ನಿಟ್ಟಿನಲ್ಲಿ ಮಹತ್ತ್ವದ ಘಟ್ಟವಾಗಿದ್ದು, ಅದರ ಹಿನ್ನೆಲೆಯಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಪ್ರಭಾವ ದಟ್ಟವಾಗಿಯೇ ಇದೆ.
(ಸಶೇಷ)