“ಮ್ಯಾನೇಜರಾಗಿ ಇಲ್ಲಿ ನನ್ನ ಕೆಲಸವೆಂದರೆ ಡೈರಿಗೆ ಹಾಲು ನೀಡುವ ರೈತರಿಗೆ ತೃಪ್ತಿಯಾಗುವಂತೆ ನಡೆದುಕೊಳ್ಳುವುದು. ಉತ್ಪಾದನೆ ಹೆಚ್ಚಿಸುವುದಕ್ಕಾಗಿ ನಾನು ರೈತರಿಗೆ ಮೂಲಸವಲತ್ತು ಒದಗಿಸಬೇಕಿತ್ತು. ಅವರಿಗೆ ಲಾಭವಾಗುವಂತೆ ಉತ್ಪಾದನೆಯನ್ನು ಹೆಚ್ಚಿಸಬೇಕಿತ್ತು. ಅವರು ಒದಗಿಸಿದ ಹಾಲನ್ನು ನಾನು ಖರೀದಿಸಲೇಬೇಕಿತ್ತು. ಇದು ರೈತರ ಬೇಡಿಕೆಗಳಿಗೆ ಸದಾ ಸ್ಪಂದಿಸುವ ಡೈರಿಯಾಗಿದೆ. ಆನಂದ್ನಂತೆಯೇ ಹೈನುಗಾರಿಕೆಯಲ್ಲಿ ಮುಂದುವರಿದ ಎಲ್ಲ ದೇಶಗಳಲ್ಲಿ ರೈತರೇ ಡೈರಿಗಳ ಮಾಲೀಕರು. ನ್ಯೂಜಿಲೆಂಡ್, ಹಾಲೆಂಡ್, ಡೆನ್ಮಾರ್ಕ್, ಅಮೆರಿಕಗಳಲ್ಲಿ ನಿಜವಾದದ್ದು ಭಾರತಕ್ಕೂ ಅನ್ವಯ ಆಗುತ್ತದೆ ಎಂಬುದನ್ನು ನಾವು ಆನಂದ್ನಲ್ಲಿ ಸಾಬೀತುಪಡಿಸಿದ್ದೇವೆ” ಎಂದು ಕುರಿಯನ್ ಪ್ರಧಾನಿ ಶಾಸ್ತ್ರಿಯವರಿಗೆ ವಿವರಿಸಿದರು.
ಸರ್ದಾರ್ ಪಟೇಲ್ ಅವರ ಜನ್ಮದಿನವಾದ ಅಕ್ಟೋಬರ್ 31ರಂದು ಹೊಸ ಪ್ರಮುಖ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಅಮುಲ್ನಲ್ಲಿ ಒಂದು ಸಂಪ್ರದಾಯವೇ ಆಗಿತ್ತು. ಅದರಂತೆ 1964ರಲ್ಲಿ ಹಾಕಿಕೊಂಡ ಯೋಜನೆ ಪಶು-ಆಹಾರ ಮಿಶ್ರಣ ಕಾರ್ಖಾನೆಯ ಉದ್ಘಾಟನೆ. ಅದು ಆಕ್ಸ್ಫಾಮ್ ಪ್ರಾಯೋಜಿತವಾಗಿದ್ದು, ಆನಂದ್ನಿಂದ ಎಂಟು ಕಿ.ಮೀ. ದೂರದ ಕಂಜರಿಯಲ್ಲಿ ಅದನ್ನು ಸ್ಥಾಪಿಸಲಾಯಿತು. ಅದು ದೇಶದ ಪ್ರಥಮ ಆಧುನಿಕ ಸ್ವಯಂಚಾಲಿತ ಪಶು-ಆಹಾರ ಮಿಶ್ರಣ ಕಾರ್ಖಾನೆಯಾಗಿತ್ತು. ಅಂದಿನ ಪ್ರಧಾನಿ ಲಾಲ್ಬಹಾದುರ್ ಶಾಸ್ತ್ರಿಯವರು ಉದ್ಘಾಟನೆ ನೆರವೇರಿಸಲು ಆಗಮಿಸಿದರು. ಹಳ್ಳಿಯೊಂದರಲ್ಲಿ ರಾತ್ರಿ ರಹಸ್ಯವಾಗಿ ಉಳಿದು ಜನರ ಜೀವನದ ಸ್ಥಿತಿ-ಗತಿ, ಹಾಲು ಉತ್ಪಾದಕರ ಸಂಘಗಳ ಜೊತೆ ಅವರ ಸಂಬಂಧ, ಹಾಲಿನ ಸೊಸೈಟಿಗಳಿಂದ ಗ್ರಾಮೀಣ ಜನರ ಜೀವನದ ಮೇಲಾಗುತ್ತಿರುವ ಪರಿಣಾಮ ಇದನ್ನೆಲ್ಲ ಜನರಿಂದಲೇ ತಿಳಿದುಕೊಂಡು ಕಾರ್ಖಾನೆಯನ್ನು ಉದ್ಘಾಟಿಸಿದರು.
ಪ್ರಧಾನಿ ಶಾಸ್ತ್ರಿ ಶ್ಲಾಘನೆ
ಆಗ ಅವರು ಹೇಳಿದ್ದು: “ಎರಡು ಮತ್ತು ಮೂರನೆಯ ಪಂಚವಾರ್ಷಿಕ ಯೋಜನೆಗಳಲ್ಲಿ ಬಹಳಷ್ಟು ಡೈರಿಗಳನ್ನು ಸರ್ಕಾರದ ಕಡೆಯಿಂದ ಮಾಡಿದ್ದೇವೆ. ಅವು ಹಲವು ಕಷ್ಟಗಳಿಗೆ ಸಿಲುಕಿದ್ದು, ನಷ್ಟದಲ್ಲಿವೆ. ಅಮುಲ್ ಡೈರಿ ಮತ್ತದರ ಉತ್ಪನ್ನಗಳನ್ನು ಜನ ದೇಶದಾದ್ಯಂತ ಇಷ್ಟಪಡುತ್ತಾರೆ. ಅವು ದೇಶದಾದ್ಯಂತ ಸಿಗುತ್ತವೆ. ವರ್ಷದಿಂದ ವರ್ಷಕ್ಕೆ ತುಂಬಾ ವೇಗವಾಗಿ ಬೆಳೆಯುತ್ತಿವೆ. ಇತರ ಎಲ್ಲ ಡೈರಿಗಳು ವಿಫಲವಾಗಿರುವಾಗ ಅಮುಲ್ ಮಾತ್ರ ಏಕೆ ಯಶಸ್ವಿಯಾಗಿದೆ? ಅದನ್ನು ಕಂಡುಹಿಡಿಯಬೇಕೆಂದು ನಾನು ಇಲ್ಲಿ ಗ್ರಾಮವಾಸ್ತವ್ಯ ಮಾಡಿದೆ. ಆದರೆ ಕುರಿಯನ್ ಅವರೆ, ನಾನಿದರಲ್ಲಿ ಯಶಸ್ವಿಯಾಗಲಿಲ್ಲ” ಎಂದರು ಪ್ರಧಾನಿ ಶಾಸ್ತ್ರಿ.
ಮುಂದುವರಿದು, “ಇಲ್ಲಿಯ ಮಣ್ಣನ್ನು ನಾನು ಗಮನಿಸಿದೆ. ಇದು ಗಂಗಾನದಿ ಬಯಲಿನ ಮಣ್ಣಿನಷ್ಟು ಫಲವತ್ತಾಗಿಲ್ಲ. ಇಲ್ಲಿಯ ಹವಾಮಾನದ ಬಗ್ಗೆ ಕೇಳಿದೆ; ಚಳಿಗಾಲದ ಚಳಿ, ಬೇಸಗೆಯಲ್ಲಿ ತುಂಬಾ ಬಿಸಿ ಎಂದು ಜನ ಹೇಳಿದರು. ಅದರಲ್ಲಿ ವಿಶೇಷವೇನೂ ಇಲ್ಲ. ಮಳೆ ಎಷ್ಟು ಬರುತ್ತದೆ ಎಂದು ಕೇಳಿದೆ. ಮಳೆಗಾಲದ ಮೂರು ತಿಂಗಳಲ್ಲಿ ಒಟ್ಟು ಸುಮಾರು 30 ಇಂಚು ಬರುತ್ತದೆ ಎಂದರು. ಊರೆಲ್ಲ ಹಸಿರಾಗಿದ್ದು ಜಾನುವಾರು ಹೊಟ್ಟೆ ತುಂಬಾ ಮೇಯುತ್ತವೆ ಎಂದುಕೊಂಡಿದ್ದೆ. ಹಾಗೇನೂ ಇಲ್ಲ; ದೇಶದ ಇತರ ಭಾಗಗಳಂತೆ ಇದು ಕೂಡ ಕಂದುಬಣ್ಣದಿಂದ ತುಂಬಿದೆ. ಮೇವು ಕೂಡ ಇಲ್ಲಿ ರಾಶಿ ಬಿದ್ದಿಲ್ಲ. ಇಲ್ಲಿಯ ಎಮ್ಮೆಗಳನ್ನು ನೋಡಿದೆ; ಇವುಗಳಿಗಿಂತ ನನ್ನ ರಾಜ್ಯವಾದ ಉತ್ತರಪ್ರದೇಶದ ಎಮ್ಮೆಗಳು ಚೆನ್ನಾಗಿವೆ ಮತ್ತು ಅವು ಕೊಡುವ ಹಾಲು ಕೂಡ ಜಾಸ್ತಿ. ಇಲ್ಲಿಯ ರೈತರನ್ನು ನೋಡಿದೆ. ಅವರು ಒಳ್ಳೆಯವರು – ಎಲ್ಲ ರೈತರೂ ಒಳ್ಳೆಯವರೇ. ಆದರೆ ಇವರು ಪಂಜಾಬಿನ ರೈತರಷ್ಟು ಪರಿಶ್ರಮಿಗಳಲ್ಲ. ಆನಂದ್ ಇಷ್ಟೊಂದು ಯಶಸ್ವಿಯಾಗಲು ನನಗೆ ಯಾವುದೇ ವಿಶೇಷ ಕಾರಣ ಕಾಣಿಸುವುದಿಲ್ಲ; ಆದ್ದರಿಂದ ಈ ಯಶಸ್ಸಿನ ಹಿಂದಿರುವ ಗುಟ್ಟೇನೆಂದು ನನಗೆ ತಿಳಿಸುವಿರಾ?” ಎಂದು ಶಾಸ್ತ್ರಿ ಕೇಳಿದರು.
ಆಗ ಡಾ|| ಕುರಿಯನ್ “ನೀವು ಹೇಳಿದ್ದೆಲ್ಲ ಪೂರ್ತಿ ಸರಿ. ಆದರೆ ಒಂದು ವ್ಯತ್ಯಾಸವಿದೆ. ಅದು ನಿಮಗೆ ಗೊತ್ತಾಗಲಿಲ್ಲ. ಅದೆಂದರೆ ಇಲ್ಲಿ ರೈತರೇ ನಮ್ಮ ಅಮುಲ್ ಡೈರಿಯ ಮಾಲೀಕರು. ಅವರ ಚುನಾಯಿತ ಪ್ರತಿನಿಧಿಗಳು ಇಲ್ಲಿ ಆಡಳಿತ ನಡೆಸುತ್ತಾರೆ. ವೃತ್ತಿಪರ ಮ್ಯಾನೇಜರಾದ ನಾನು ಅವರ ನೌಕರ. ಡೈರಿ ನಡೆಸುವುದು ನನ್ನ ಕೆಲಸ” ಎಂದು ಪ್ರಧಾನಿಯ ಗಮನಕ್ಕೆ ತಂದರು.
ರೈತರೇ ಮಾಲೀಕರು
“ಮ್ಯಾನೇಜರಾಗಿ ಇಲ್ಲಿ ನನ್ನ ಕೆಲಸವೆಂದರೆ ಡೈರಿಗೆ ಹಾಲು ನೀಡುವ ರೈತರಿಗೆ ತೃಪ್ತಿಯಾಗುವಂತೆ ನಡೆದುಕೊಳ್ಳುವುದು. ಉತ್ಪಾದನೆ ಹೆಚ್ಚಿಸುವುದಕ್ಕಾಗಿ ನಾನು ರೈತರಿಗೆ ಮೂಲಸವಲತ್ತು ಒದಗಿಸಬೇಕಿತ್ತು. ಅವರಿಗೆ ಲಾಭವಾಗುವಂತೆ ಉತ್ಪಾದನೆಯನ್ನು ಹೆಚ್ಚಿಸಬೇಕಿತ್ತು. ಅವರು ಒದಗಿಸಿದ ಹಾಲನ್ನು ನಾನು ಖರೀದಿಸಲೇಬೇಕಿತ್ತು. ಇದು ರೈತರ ಬೇಡಿಕೆಗಳಿಗೆ ಸದಾ ಸ್ಪಂದಿಸುವ ಡೈರಿಯಾಗಿದೆ. ಆನಂದ್ನಂತೆಯೇ ಹೈನುಗಾರಿಕೆಯಲ್ಲಿ ಮುಂದುವರಿದ ಎಲ್ಲ ದೇಶಗಳಲ್ಲಿ ರೈತರೇ ಡೈರಿಗಳ ಮಾಲೀಕರು. ನ್ಯೂಜಿಲೆಂಡ್, ಹಾಲೆಂಡ್, ಡೆನ್ಮಾರ್ಕ್, ಅಮೆರಿಕಗಳಲ್ಲಿ ನಿಜವಾದದ್ದು ಭಾರತಕ್ಕೂ ಅನ್ವಯ ಆಗುತ್ತದೆ ಎಂಬುದನ್ನು ನಾವು ಆನಂದ್ನಲ್ಲಿ ಸಾಬೀತುಪಡಿಸಿದ್ದೇವೆ” ಎಂದು ಕುರಿಯನ್ ವಿವರಿಸಿದರು. “ರೈತರು ನನ್ನಲ್ಲಿ ವಿಶ್ವಾಸವಿರಿಸಿದ್ದು, ನನ್ನ ವಿಶ್ವಸನೀಯತೆ, ಸಾಮಥ್ರ್ಯ, ಪ್ರಾಮಾಣಿಕತೆಗಳನ್ನು ಮೆಚ್ಚಿದ್ದಾರೆ. ಸಂಸ್ಥೆಯನ್ನು ನಡೆಸುವಲ್ಲಿ ನನಗೆ ಮುಕ್ತ ಅವಕಾಶ ನೀಡಿದ್ದಾರೆ. ಯಾರಿಗೂ ನನ್ನ ಕೆಲಸದಲ್ಲಿ ಹಸ್ತಕ್ಷೇಪ ಮಾಡಲು ಬಿಟ್ಟಿಲ್ಲ” ಎಂದು ಕೂಡ ತಿಳಿಸಿದರು.
“ದೇಶದ ಸಹಕಾರಿ ಸಂಘಗಳ ಕಾಯ್ದೆಯು ನಿಂತ ನೀರಾಗಿದೆ (ಸ್ಥಗಿತತೆ). ನೈಜ ಪ್ರಜಾಸತ್ತಾತ್ಮಕ ಸಂಸ್ಥೆ ಕಟ್ಟಲು ಅದರ ಪ್ರೋತ್ಸಾಹವಿಲ್ಲ. ಅದು ಸರ್ಕಾರದ ಸಹಕಾರಿ ಇಲಾಖೆಯ ಬಾಲಂಗೋಚಿಯಾಗಿದೆ. ಆದರೆ ಕೈರಾ ಸಹಕಾರಿ ಯೂನಿಯನ್ನಲ್ಲಿ ಇಂತಹ ಕಾನೂನಿನ ಅಡಿಯಲ್ಲೂ ನೈಜ ಸಹಕಾರಿ ವ್ಯವಸ್ಥೆಯಿದೆ. ಅದಕ್ಕೆ ಕಾರಣ ಅಧ್ಯಕ್ಷ ತ್ರಿಭುವನದಾಸ್ ಪಟೇಲರು; ಇವರನ್ನು ಸರ್ದಾರ್ ಪಟೇಲರು ಆರಿಸಿದ್ದು, ರೈತರಿಗೆ ಇವರಲ್ಲಿ ಪೂರ್ತಿ ವಿಶ್ವಾಸವಿದೆ” ಮುಂತಾಗಿ ಡಾ|| ಕುರಿಯನ್ ಪ್ರಧಾನಿ ಶಾಸ್ತ್ರಿ ಅವರಿಗೆ ಎಲ್ಲವನ್ನೂ ವಿವರಿಸಿದರು.
ದೇಶಕ್ಕೆ ವಿಸ್ತರಣೆ
ಪೂರ್ತಿ ಕೇಳಿಸಿಕೊಂಡ ಪ್ರಧಾನಿ ಶಾಸ್ತ್ರಿಯವರು ಉತ್ತೇಜಿತರಾಗಿ “ಕುರಿಯನ್ ಅವರೆ, ಹಾಗಾದರೆ ನಾವು ಹಲವು ಆನಂದ್ಗಳನ್ನು ಮಾಡಬಹುದಲ್ಲವೆ? ಆನಂದ್ ಗುಜರಾತ್ನಲ್ಲಿ ಮಾತ್ರ ಇರಬೇಕೆಂದೇನೂ ಇಲ್ಲವಲ್ಲ” ಎಂದು ಕೇಳಿದರು. ಇವರು ತಲೆ ಅಲ್ಲಾಡಿಸುತ್ತಲೇ “ಹಾಗಾದರೆ ನಾಳೆಯಿಂದ ನೀವು ಕೇವಲ ಆನಂದ್ ಅಥವಾ ಗುಜರಾತ್ಗಾಗಿ ಕೆಲಸ ಮಾಡುವುದಲ್ಲ. ಇಡೀ ದೇಶಕ್ಕಾಗಿ ಕೆಲಸ ಮಾಡಬೇಕು. ಭಾರತ ಸರ್ಕಾರ ನಿಮಗೆ ಖಾಲಿ ಚೆಕ್ ನೀಡಲಿದೆ. ಬೇಕಾದ ರೀತಿ ಮಾಡಿ, ಬೇಕಾದವರನ್ನು ನಿಮ್ಮೊಂದಿಗೆ ಸೇರಿಸಿಕೊಳ್ಳಿ; ನೀವೇ ಮುಖ್ಯಸ್ಥರು. ಒಟ್ಟಿನಲ್ಲಿ ದೇಶದಾದ್ಯಂತ ಆನಂದ್ಗಳಾಗಬೇಕು. ನಿಮಗೇನು ಬೇಕು ಎಂದು ಕೇಳಿ; ಸರ್ಕಾರ ಅದನ್ನು ಒದಗಿಸಲಿದೆ” ಎಂದು ಪ್ರಧಾನಿ ಸ್ಥಳದಲ್ಲೇ ವಾಗ್ದಾನವನ್ನೂ ಮಾಡಿದರು.
ಅದಕ್ಕೆ ಒಪ್ಪುವ ಮುನ್ನ ತನ್ನದು ಎರಡು ಶರತ್ತುಗಳಿವೆ ಎಂದರು ಡಾ|| ಕುರಿಯನ್. “ಮೊದಲನೆಯದಾಗಿ, ನಾನು ರೈತರ ನೌಕರನಾಗಿರುವವನೇ ಹೊರತು ಸರ್ಕಾರದ ನೌಕರನಲ್ಲ. ಸರ್ಕಾರದಿಂದ ನಾನು ಒಂದು ಪೈಸೆಯನ್ನೂ ತೆಗೆದುಕೊಳ್ಳುವುದಿಲ್ಲ” ಎಂದಾಗ ಪ್ರಧಾನಿ ಅದೇಕೆಂದು ಕೇಳಿದರು.
“ಏಕೆಂದರೆ ಸರ್ಕಾರದ ನೌಕರ ಅನಿವಾರ್ಯವಾಗಿ ತನ್ನ ಮೇಲಿನವರನ್ನು ಖುಷಿಪಡಿಸಬೇಕಾಗುತ್ತದೆ. ರೈತರ ನೌಕರ ಅವರನ್ನು ಖುಷಿಪಡಿಸಿದರೆ ಸಾಕು” ಎಂಬುದು ಕುರಿಯನ್ರ ಉತ್ತರವಾಗಿತ್ತು. “ಎರಡನೆಯದಾಗಿ, ದೇಶದಾದ್ಯಂತ ಬರುವ ಆನಂದ್ನಂತಹ ಸಂಸ್ಥೆಗಳ ಕೇಂದ್ರಸ್ಥಾನ ದೆಹಲಿಯಲ್ಲಿ ಇರಬಾರದು. ಏಕೆಂದರೆ ದೆಹಲಿಯಲ್ಲಿರುವ ಜನ ಯಾವಾವುದೋ ವಿಷಯಗಳ ಬಗ್ಗೆ ಚಿಂತಿಸುತ್ತಾರೆಯೇ ಹೊರತು ರೈತರ ಬಗ್ಗೆ ಚಿಂತಿಸುವುದಿಲ್ಲ. ಆನಂದ್ನಲ್ಲಿ ನಾವು ರೈತರು, ಕೃಷಿ ಮತ್ತು ಹೈನುಗಾರಿಕೆ ಬಿಟ್ಟು ಬೇರೆ ವಿಷಯದ ಬಗ್ಗೆ ಚಿಂತಿಸುವುದಿಲ್ಲ. ಆದ್ದರಿಂದ ಸರ್ಕಾರ ಈ ಬಗ್ಗೆ ಯಾವುದೇ ಸಂಸ್ಥೆಯನ್ನು ಸ್ಥಾಪಿಸುವುದಾದರೂ ಅದರ ಕೇಂದ್ರ ಆನಂದ್ನಲ್ಲೇ ಇರಬೇಕು; ನಾನು ದೆಹಲಿಗೆ ಬರುವವನಲ್ಲ” ಎಂದು ಕುರಿಯನ್ ಹೇಳಿದಾಗ ಶಾಸ್ತ್ರಿ ಎರಡೂ ಷರತ್ತುಗಳಿಗೆ ಸಮ್ಮತಿಸಿದರು.
‘ಜನರ ನಾಯಕ ಶಾಸ್ತ್ರಿ’
ಆ ಕುರಿತು ಹೇಳುವ ಡಾ|| ವರ್ಗೀಸ್ ಕುರಿಯನ್, “ಶಾಸ್ತ್ರಿ ಅವರು ಜನರ ನಾಯಕ. ಅವರ ಹೃದಯಕ್ಕೆ ಅತಿ ಹತ್ತಿರದ ವಿಷಯ ದೇಶದ ಗ್ರಾಮೀಣ ಜನರ ಕಲ್ಯಾಣವಾಗಿದ್ದು, ಗ್ರಾಮೀಣ ಭಾರತದ ಸಾಮಾಜಿಕ-ಆರ್ಥಿಕ ಪ್ರಗತಿಯನ್ನು ಅವರು ಬಯಸಿದ್ದರು. ಅದೇ ಡಿಸೆಂಬರ್ನಲ್ಲಿ ಅವರು ಸುತ್ತೋಲೆಯಾಗಿ ಒಂದು ಅಧಿಕೃತ ಪತ್ರವನ್ನು ಹೊರಡಿಸಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿ ಮತ್ತು ರಾಜ್ಯಪಾಲರುಗಳಿಗೆ ಕಳುಹಿಸಿದರು. ನಾಲ್ಕನೆಯ ಪಂಚವಾರ್ಷಿಕ ಯೋಜನೆಯ ಹೊತ್ತಿಗೆ ದೇಶದಾದ್ಯಂತ ಕೈರಾ ಯೂನಿಯನ್ ಮಾದರಿಯ ಸಹಕಾರಿ ಸಂಸ್ಥೆಗಳು ಸ್ಥಾಪನೆಯಾಗಬೇಕು ಎಂಬುದು ಪತ್ರದ ಸಾರಾಂಶ.
ಜೊತೆಗೆ ಕುರಿಯನ್ರನ್ನು ದೆಹಲಿಗೆ ಕರೆದು, ಆಹಾರ ಮತ್ತು ಕೃಷಿ ಸಚಿವ ಸಿ. ಸುಬ್ರಹ್ಮಣ್ಯಮ್ ಅವರನ್ನು ಭೇಟಿ ಮಾಡಲು ಸೂಚಿಸಿದರು. ದೆಹಲಿ ಮಿಲ್ಕ್ಸ್ಕೀಮ್ ಸರಿಪಡಿಸಿದ ಕುರಿಯನ್ ಸಚಿವರಿಗೆ ಮೊದಲೇ ಪರಿಚಿತರು. ಪ್ರಧಾನಿಯ ಯೋಜನೆಯ ಕುರಿತು ಚರ್ಚಿಸಿದ ಸುಬ್ರಹ್ಮಣ್ಯಮ್ ಅದಕ್ಕೆ ಎಷ್ಟು ಹಣ ಬೇಕೆಂದು ಕೇಳಿದರು. ಕಚೇರಿಯ ಆವಶ್ಯಕತೆಗಳಿಗಾಗಿ ಒಂದು ಮೂವತ್ತು ಸಾವಿರ ರೂ. ಕೊಟ್ಟರೆ ಸಾಕೆಂದು ಕುರಿಯನ್ ಹೇಳಿದಾಗ ಸುಬ್ರಹ್ಮಣ್ಯಮ್ ನಗಾಡಿದರು. “ಬರೇ 30 ಸಾವಿರವೇ? ಅದರಿಂದ ಏನು ಮಾಡುತ್ತೀರಿ? ನೀವು 30 ಕೋಟಿಯೋ, 300 ಕೋಟಿಯೋ ಕೇಳಬಹುದು ಎಂದಿದ್ದೆ” – ಎಂದು ಅಚ್ಚರಿಯಿಂದ ಕೇಳಿದರು.
‘ಬೇಡ, ಮೂವತ್ತು ಸಾವಿರ ರೂ. ಸಾಕು’ ಎಂದಾಗ ಅದನ್ನು ಕೊಡಿಸುವೆ ಎಂದರು.
ಆದರೆ ಅವರ ಅಧಿಕಾರಿಗಳಲ್ಲಿ ಬೇರೆಯೇ ಯೋಚನೆ ಇತ್ತು. ಕೃಷಿ ಇಲಾಖೆಯಲ್ಲಿ ಈಗಾಗಲೆ ಡೈರಿ ವಿಭಾಗ ಇರುವಾಗ ಪ್ರಧಾನಿ ಒಂದು ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿಯನ್ನು (National Dairy Development Board) ಸ್ಥಾಪಿಸಲು ಹೊರಟಿದ್ದಾರೆ; ಆ ಮೂಲಕ ನಮ್ಮ ಡೈರಿ ವಿಭಾಗದ ದಕ್ಷತೆಯನ್ನು ಪ್ರಶ್ನಿಸುತ್ತಿದ್ದಾರೆ. ಇದು ತಮ್ಮ ಸಚಿವಾಲಯಕ್ಕೆ ಬಗೆದ ಅವಮಾನ ಎಂಬುದವರ ತಕರಾರು. ಅಷ್ಟು ಮಾತ್ರವಲ್ಲ, ಪ್ರಧಾನಿಗಳ ಪ್ರಸ್ತಾವಕ್ಕೆ ಅಧಿಕಾರಿಗಳಿಂದ ತೀವ್ರ ವಿರೋಧವೇ ಬಂತು. ‘ಅಂತಹ ಸಂಸ್ಥೆ ಬೇಡ. ಒಂದು ವೇಳೆ ಮಾಡುವುದಾದರೂ ಅದು ದೆಹಲಿಯಲ್ಲೇ ಇರಲಿ’ ಎಂದವರು ಪಟ್ಟುಹಿಡಿದರು. ಆದರೆ ಪ್ರಧಾನಿ ಆನಂದ್ ಮಾದರಿಯಲ್ಲೇ ಆಗಬೇಕೆನ್ನುವ ಅಪೇಕ್ಷೆಯನ್ನು ಬಿಡಲಿಲ್ಲ. ಡಾ|| ಕುರಿಯನ್ ದೆಹಲಿಯಲ್ಲಿ ಎರಡು ದಿನ ಇದ್ದರೂ ಕೂಡ ಅವರು ಕೇಳಿದ 30 ಸಾವಿರ ರೂ. ಕೂಡ ಸಿಗುವುದಿಲ್ಲ ಎಂಬುದು ಸ್ಪಷ್ಟವಾಯಿತು. ತಾನು ಡೈರಿ ಬೋರ್ಡ್ ಮಾಡುವುದಿಲ್ಲ; ಆನಂದ್ಗೆ ಮರಳುವೆ – ಎಂದು ಸುಬ್ರಹ್ಮಣ್ಯಮ್ ಅವರಲ್ಲಿ ಹೇಳಿ ಪ್ರಧಾನಿಗೆ ತಿಳಿಸಿ ಎಂದರು.
‘ಕುರಿಯನ್ ಭಿಕ್ಷುಕ ಅಲ್ಲ’
ಆಗ ಸುಬ್ರಹ್ಮಣ್ಯಮ್ ಕುರಿಯನ್ ಅವರಲ್ಲಿ ಮಾತನಾಡಬಯಸಿದರು. ಇವರು ಬಗ್ಗುವುದಿಲ್ಲ ಎಂದು ಖಚಿತವಾದ ಮೇಲೆ ‘ಪ್ರಧಾನಿ ಅವರಿಗೆ ಏನು ಹೇಳಲಿ?’ ಎಂದು ಕೇಳಿದರು. “ಕುರಿಯನ್ ಒಬ್ಬ ಭಿಕ್ಷುಕ ಅಲ್ಲ. ಆತ ಇಲ್ಲಿಗೆ ಭಿಕ್ಷೆ ಕೇಳಲು ಬಂದಿಲ್ಲ ಎಂದು ಹೇಳಿ. 30 ಸಾವಿರ ರೂ. ಕೊಡುವುದಿಲ್ಲ ಎಂದು ಹೇಳಿದ್ದರೆ ನಾನೇ ಅದನ್ನು ಮಾಡಿಕೊಳ್ಳುತ್ತಿದ್ದೆ” ಎಂದು ಕಟುವಾಗಿ ಹೇಳಿದರು.
“ನಮ್ಮ ಹಣ ಇಲ್ಲದೆ ಎನ್ಡಿಡಿಬಿ ರಚಿಸಬಲ್ಲಿರಾ?” ಎಂದು ಸಚಿವ ಸುಬ್ರಹ್ಮಣ್ಯಮ್ ಕೇಳಿದಾಗ, ಅಷ್ಟೇ ನೇರವಾಗಿ ‘ಮಾಡಬಲ್ಲೆ’ ಎಂದು ಹೇಳಿ ಆನಂದ್ಗೆ ಮರಳಿದರು.
ಆನಂದ್ನ ಮುಂದಿನ ಬೋರ್ಡ್ ಮೀಟಿಂಗ್ನಲ್ಲಿ ದೆಹಲಿಯಲ್ಲಿ ನಡೆದ ವಿಷಯವನ್ನು ವಿವರಿಸಿದಾಗ ಕೆಲವೇ ನಿಮಿಷಗಳಲ್ಲಿ ಎನ್ಡಿಡಿಬಿ ಸ್ಥಾಪನೆಗೆ ಬೇಕಾದ ಹಣ (30 ಸಾವಿರ ರೂ.) ಮಂಜೂರಾಯಿತು. ಒಬ್ಬ ಸದಸ್ಯರು ಮಾತ್ರ “ಇದೆಲ್ಲ ಏಕೆ ಮಾಡುತ್ತೀರಿ? ಅಮುಲ್ನಂತಹ ಇನ್ನಷ್ಟು ಸಂಸ್ಥೆ ಸ್ಥಾಪನೆ ಎಂದರೆ ನಮಗೇ ಸ್ಪರ್ಧೆ ಅಲ್ಲವಾ?” ಎಂದು ಕೇಳಿದರು. ಅದಕ್ಕೆ ಡಾ|| ಕುರಿಯನ್ “ನಮ್ಮ ದೇಶಕ್ಕೆ ಒಂದು ಅಮುಲ್ ಸಾಲದು. ಪ್ರಧಾನಿ ಶಾಸ್ತ್ರಿಯವರು ಬಯಸಿದಂತೆ ಹಲವು ಅಮುಲ್ಗಳು ಬೇಕು. ಒಂದು ಕೋಲಿನಂತೆ ಒಂದೇ ಅಮುಲ್ ಇದ್ದರೆ ಮುರಿದೀತು. ಹಲವು ಅಮುಲ್ಗಳಿದ್ದರೆ ಮುರಿಯಲಾರದು. ಹಲವಿದ್ದರೆ ಅಮುಲ್ಗೇ ಒಳ್ಳೆಯದು” ಎನ್ನುವ ಉತ್ತರ ನೀಡಿ ಸಮಾಧಾನಪಡಿಸಿದರು.
ಅದೇ ಎನ್ಡಿಡಿಬಿಗೆ ಮೂಲ. ಬೇಕಾದ ಹಣವನ್ನು ಸಂಗ್ರಹಿಸಿದರು. ಗುಜರಾತ್ ಸರ್ಕಾರ ಇವರಿಗೆ ಮೂರು ಪಶು-ಆಹಾರ ಸ್ಥಾವರಗಳ ಸ್ಥಾಪನೆಯ ಹೊಣೆಯನ್ನು ನೀಡಿತು; ಅವುಗಳ ತಲಾ ವೆಚ್ಚ 30 ಲಕ್ಷ ರೂ. ಅದಕ್ಕೆ ಎನ್ಡಿಡಿಬಿ ಶೇಕಡ ಐದು ರಾಯಲ್ಟಿಯನ್ನು ಹಾಕಿತು. ಆ ಮೂಲಕ 4.5 ಲಕ್ಷ ರೂ. ಬಂತು. ಡಾ|| ಕುರಿಯನ್ರನ್ನು ಎನ್ಡಿಡಿಬಿಯ ಗೌರವ ಅಧ್ಯಕ್ಷರಾಗಿ ಆರಿಸಲಾಯಿತು. ಅಮುಲ್ನ ಇನ್ನೊಬ್ಬರು ಕೋಶಾಧಿಕಾರಿಯಾದರು, ಮತ್ತೊಬ್ಬರು ಗೌರವ ಕಾರ್ಯದರ್ಶಿಯಾದರು. ಇವರು ಯಾರೂ ಎನ್ಡಿಡಿಬಿಯಿಂದ ವೇತನ ಪಡೆಯಲಿಲ್ಲ. ಕೈರಾ ಸಹಕಾರಿ ಯೂನಿಯನ್ನಲ್ಲೇ ಎನ್ಡಿಡಿಬಿ ಕಚೇರಿ ಸ್ಥಾಪಿತವಾಯಿತು. ಕಚೇರಿ ಎಂದರೆ ಒಂದು ಕೋಣೆ, ಒಂದು ಡೆಸ್ಕ್, ಕೆಲವು ಕುರ್ಚಿಗಳು ಅಷ್ಟೆ. ಕೈರಾ ಜಿಲ್ಲೆಯ ಹಾಲು ಉತ್ಪಾದಕ ರೈತರೇ ಇದನ್ನೆಲ್ಲ ನೀಡಿದರೆಂದು ಕುರಿಯನ್ ನೆನಪಿಸುತ್ತಾರೆ.
ದೇಶದಾದ್ಯಂತ ಆನಂದ್
ಎನ್ಡಿಡಿಬಿಯ ಕೆಲಸ ದೇಶದಾದ್ಯಂತ ಆನಂದ್ ಮಾದರಿಯ ಹಾಲಿನ ಸಹಕಾರಿ ಸಂಘಗಳನ್ನು ಸ್ಥಾಪಿಸುವುದು; ಅಂದರೆ ಹೈನುಗಾರಿಕೆಯನ್ನು ಸರ್ಕಾರದಿಂದ ರಕ್ಷಿಸಿ ರೈತರಿಗೆ ಒಪ್ಪಿಸುವುದು. “ಇಷ್ಟರಲ್ಲಿ ಸರ್ಕಾರದ ಜೊತೆಗಿನ ವ್ಯವಹಾರದಿಂದ ನನಗೆ ಮನದಟ್ಟಾದ ಅಂಶವೆಂದರೆ, ಸರ್ಕಾರವು ಆಳ್ವಿಕೆಯನ್ನು (ಗವರ್ನ್) ಮಾತ್ರ ಮಾಡಬೇಕು; ವ್ಯವಹಾರ (Business)ದಲ್ಲಿ ಅದರ ಪಾತ್ರ ಇರಬಾರದು. ಡೈರಿ ನಡೆಸುವಲ್ಲಿ ಸರ್ಕಾರದ ನಿಯಮ-ನಿಬಂಧನೆಗಳು ಇರಬಾರದು. ಸರ್ಕಾರವಿರುವುದು ದೇಶವನ್ನು ಆಳಲು. ಸರ್ಕಾರ ಡೈರಿ ನಡೆಸಿದಾಗ ಅದು ದೆಹಲಿ, ಮುಂಬಯಿ ಅಥವಾ ಕೋಲ್ಕತ್ತಾ ಮಿಲ್ಕ್ಸ್ಕೀಮ್ಗಳಂತೆ ವಿಫಲ ಆಗುವುದು ಸಹಜ. ಇದು ಪ್ರಧಾನಿ ಶಾಸ್ತ್ರಿ ಅವರಿಗೆ ಅರ್ಥವಾಗಿ ಎನ್ಡಿಡಿಬಿ ಸ್ಥಾಪನೆಯಾಗಬೇಕೆಂದು ಬಯಸಿದರು” ಎನ್ನುತ್ತಾರೆ ಡಾ|| ಕುರಿಯನ್.
ಎನ್ಡಿಡಿಬಿ ಸ್ಥಾಪನೆಯಾಗುತ್ತಲೇ ಕುರಿಯನ್ ಸರ್ಕಾರ ತಮಗೆ ವಹಿಸಿದ ಕೆಲಸವನ್ನು ಮಾಡಲು ಮುಂದಾದರು. ಮೊದಲಿಗೆ ನೆರೆರಾಜ್ಯ ಮಹಾರಾಷ್ಟ್ರದತ್ತ ಗಮನಹರಿಸಿದರು. ಅಲ್ಲಿಯ ಮುಖ್ಯಮಂತ್ರಿಗಳನ್ನು ಸಂಪರ್ಕಿಸುತ್ತಲೇ ಮತ್ತೆ ಅಧಿಕಾರಿಗಳ ಮರ್ಜಿ ಗಮನಕ್ಕೆ ಬಂತು. ಮುಖ್ಯಮಂತ್ರಿಯವರನ್ನು ಕೇಳಿದಾಗ ಕೃಷಿಮಂತ್ರಿಗಳ ಬಳಿಗೆ ಕಳುಹಿಸಿದರು. ಅವರು ಹಾಲಿನ ಕಮಿಷನರ್ರನ್ನು ಭೇಟಿ ಮಾಡಿಸಿದರು. ಅವರಿಗೆ ಎನ್ಡಿಡಿಬಿಯ ಉದ್ದೇಶವನ್ನು ತಿಳಿಸುತ್ತಲೇ “ನಿಮ್ಮ ಪ್ರಕಾರ ಹೈನುಗಾರಿಕೆಯು ರೈತರ ಕೆಳಗಿರಬೇಕೆ? ಹಾಗಾದರೆ ನನಗೇನು ಉಳಿಯಿತು? ನೀವು ಇಲಾಖೆಯನ್ನು ನಾಶ ಮಾಡುತ್ತಿದ್ದೀರಿ. ಗುಜರಾತಿನಲ್ಲಿ ನೀವು ಮಾಡಿದ್ದು ಗೊತ್ತು. ಅಲ್ಲಿ ಹಾಲಿನ ಕಮಿಷನರೂ ಇಲ್ಲ. ಹಾಲಿನ ಇಲಾಖೆಯೂ ಇಲ್ಲ” ಎಂದುಬಿಟ್ಟರು. ಅದಕ್ಕೆ ಕುರಿಯನ್ “ಅಲ್ಲಿ ಅವುಗಳಿಲ್ಲ ನಿಜ; ಆದರೆ ಹಾಲಿದೆ” ಎಂದು ಸೆಡ್ಡು ಹೊಡೆದರು. ಕಮಿಷನರ್ ಮುಂದುವರಿದು “ಮಹಾರಾಷ್ಟ್ರದ ರೈತರು ಬೇರೆ ಥರ; ನಮ್ಮಲ್ಲಿ ವಿಚಿತ್ರ ಐಡಿಯಾಗಳು ನಡೆಯುವುದಿಲ್ಲ” ಎಂದದ್ದೂ ಆಯಿತು. ಅದನ್ನು ನೆನಪಿಸಿಕೊಂಡು ಡಾ|| ಕುರಿಯನ್ “ನಾನೆಂದೂ ಸುಲಭದಲ್ಲಿ ಬಿಡುವವನಲ್ಲ. ಸದಾ ಸವಾಲುಗಳನ್ನು ಎದುರುನೋಡುವವ ಎಂದು ಆ ಹೊತ್ತಿಗೆ ನಾನು ಎಲ್ಲರಿಗೂ ಅರ್ಥವಾಗಿದ್ದೆ” ಎಂದಿದ್ದಾರೆ.
ಅಧಿಕಾರಿಗಳೇ ಖಳರು
ಅಲ್ಲಿಂದ ಹಾಲಿನ ಕಮಿಷನರ್ನ ಎದುರಾಳಿ ಪಶುಸಂಗೋಪನೆ ಇಲಾಖೆ ನಿರ್ದೇಶಕರ ಭೇಟಿಗೆ ಹೋದರು. “ರೈತರಿಂದ ಹಾಲನ್ನು ಖರೀದಿಸುವುದರೊಂದಿಗೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗುವ ಜವಾಬ್ದಾರಿ ನಮಗೆ ಬರುತ್ತದೆ. ಆನಂದ್ನಲ್ಲಿ 75 ಜನ ಪಶುವೈದ್ಯರು, 900 ಜನ ಪ್ರಥಮ ಚಿಕಿತ್ಸಕರು ಇದ್ದಾರೆ. 3 ಲಕ್ಷ ಕೃತಕ ಗರ್ಭಧಾರಣೆ ನಡೆಸಿದ್ದೇವೆ” ಎಂದು ಹೇಳಿ ಇದರಿಂದ ಆತ ಪ್ರಭಾವಿತನಾಗಿರಬಹುದೆಂದು ನೋಡುವಾಗ ಆತ “ಅದು ಸರಿ, ಆದರೆ ನನ್ನ ಇಲಾಖೆಯ ಗತಿ ಏನು?” ಎಂದು ಕೇಳಿದರು. ಅದಕ್ಕೆ ಕುರಿಯನ್ “ಅದು ಮುಖ್ಯವಲ್ಲ, ರೈತರಿಗೇನಾಗುತ್ತದೆ ಎಂಬುದೇ ಮುಖ್ಯ” ಎಂದು ತಿರುಗೇಟು ನೀಡಿದರು. ‘ಈ ಚಿಂತನೆಗಳೆಲ್ಲ ಇಲ್ಲಿ ನಡೆಯುವುದಿಲ್ಲ’ ಎಂದು ಆತ ಕೂಡ ಇವರನ್ನು ಸಾಗಹಾಕಿದ.
ಮತ್ತೆ ಕುರಿಯನ್ ಸಹಕಾರಿ ಸಂಘಗಳ ರಿಜಿಸ್ಟ್ರಾರ್ ಅವರನ್ನು ಕಂಡು, ಅಮುಲ್, ಎನ್ಡಿಡಿಬಿ ಬಗ್ಗೆ ಎಲ್ಲ ವಿವರಿಸಿದರು. ಎಲ್ಲ ಕೇಳಿದ ಮೇಲೆ ಆತ “ಹೌದು; ರೈತರ ಉದ್ಧಾರಕ್ಕೆ ಸಹಕಾರವೇ ಏಕೈಕ ಮಾರ್ಗ. ಅದಕ್ಕಾಗಿ ಇಲಾಖೆಯ ಡೆಪ್ಯುಟಿ ರಿಜಿಸ್ಟ್ರಾರ್ ಅವರನ್ನು ಜಂಟಿ (Joint) ರಿಜಿಸ್ಟ್ರಾರ್ ಆಗಿ ಮಾಡಿ ಅವರಿಗೆ ಈ ಕೆಲಸವನ್ನು ವಹಿಸುತ್ತೇವೆ” ಎಂದು ಅವರ ಪರಿಹಾರ ಸೂಚಿಸಿದರು. ಕುರಿಯನ್ ಅವರ ತಾಳ್ಮೆ ಮುಗಿಯುತ್ತಿತ್ತು. “ನಾನು ಹೇಳಿದ್ದು ನಿಮಗೆ ಅರ್ಥವಾಗಲಿಲ್ಲ. ಸಹಕಾರಿ ಸಂಘಗಳನ್ನು ರೈತರು ನಡೆಸಬೇಕು; ಸರ್ಕಾರ ಅಲ್ಲ” ಎಂದು ಅಬ್ಬರಿಸಿ ಅಲ್ಲಿಂದ ಹೊರಟರು.
ಎಲ್ಲ ರಾಜ್ಯವೂ ಒಂದೇ
ಸಹಕಾರಿ ಸಂಘಗಳು ಆನಂದ್ ಮಾದರಿಯಲ್ಲಿ ರೂಪಗೊಳ್ಳಬೇಕೆಂಬುದಕ್ಕೆ ವಿವಿಧ ರಾಜ್ಯಗಳ ಗಮನಸೆಳೆದಾಗ ಎಲ್ಲ ರಾಜ್ಯಗಳ ಪ್ರತಿಕ್ರಿಯೆ ಬಹುತೇಕ ಒಂದೇ ರೀತಿ ಇತ್ತು. “ನನ್ನ ವಿಚಿತ್ರ ಚಿಂತನೆ ಕಾರ್ಯಗತವಾಗುವುದು ಗುಜರಾತಿನಲ್ಲಿ ಮಾತ್ರ, ಇತರ ರಾಜ್ಯಗಳಲ್ಲಿ ನಡೆಯುವುದಿಲ್ಲ. ಪ್ರಧಾನಿ ಶಾಸ್ತ್ರಿ ಅವರು ಬಯಸಿದ್ದನ್ನು ಕಾರ್ಯಗತಗೊಳಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅಧಿಕಾರಶಾಹಿ ಅದಕ್ಕೆ ಸಮ್ಮತಿಸುವುದಿಲ್ಲ. ಹಿಂದುಳಿದ ದೇಶಗಳ ಸಮಸ್ಯೆಯೆಂದರೆ ಜನರಿಗೆ ಯಾವುದೇ ಅಧಿಕಾರ ಇರುವುದಿಲ್ಲ. ರೈತರೇ ಯಜಮಾನರಾದ ಸಹಕಾರಿ ಸಂಘಗಳನ್ನು ಕಟ್ಟಲು ಅಧಿಕಾರಿಗಳು ಬಿಡುವುದಿಲ್ಲ. ಆದ್ದರಿಂದ ಇನ್ನಷ್ಟು ಅಮುಲ್ಗಳನ್ನು ಮಾಡಬೇಕಿದ್ದರೆ ಅದಕ್ಕೆ ನಮ್ಮದೇ ಹಣ ಬೇಕೆಂಬ ತೀರ್ಮಾನಕ್ಕೆ ಬಂದೆ. ಆಗ ರಾಜ್ಯಸರ್ಕಾರಗಳ ಬಳಿ ಹೋಗಿ, ‘ನಾವು ಐದು ಕೋಟಿ ರೂ. ಕೊಡುತ್ತೇವೆ – ನಿಮ್ಮ ರಾಜ್ಯದಲ್ಲೊಂದು ಆನಂದ್ ಸ್ಥಾಪಿಸಿ. ಆದರೆ ಒಂದು ಶರತ್ತಿದೆ – ಗ್ರಾಮೀಣ ಸಹಕಾರಿ ಸಂಘಗಳನ್ನು ರಚಿಸಬೇಕು. ಸಹಕಾರಿ ಸಂಘಗಳ ಮೂಲಕವೇ ಹಾಲು ಸಂಗ್ರಹಿಸಬೇಕು. ಡೈರಿಯು ಹಾಲು ಉತ್ಪಾದಕರಿಗಾಗಿ ನಡೆಯಬೇಕು. ರೈತರೇ ಡೈರಿಯ ಮಾಲೀಕರು’ ಎಂದು ಹೇಳಬಹುದೆಂದು ತೀರ್ಮಾನಿಸಲಾಯಿತು. ಈ ರೀತಿಯಲ್ಲಿ ಡಾ|| ಕುರಿಯನ್ ಅವರ ತಲೆಯಲ್ಲಿ ‘ಕ್ಷೀರ ಪ್ರವಾಹ ಕಾರ್ಯಾಚರಣೆ’ಯ (Operation Flood) ಬೀಜಾವಾಪನವಾಯಿತು.
‘ಆಪರೇಶನ್ ಫ್ಲಡ್’ ಸಿದ್ಧ
ಅಮುಲ್ ಕಚೇರಿಯ ಒಂದು ಕೊಠಡಿಯಲ್ಲಿ ಎಚ್.ಎಂ. ದಲಾಯಾ ಮತ್ತು ಮೈಕೆಲ್ ಹಾಲ್ಸ್ ಅವರೊಂದಿಗೆ ಕುಳಿತು ‘ಆಪರೇಶನ್ ಫ್ಲಡ್’ನ ಪ್ರಸ್ತಾವವನ್ನು ತಯಾರಿಸಿದರು. ಹಾಲ್ಸ್ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್ಎಓ) ತಜ್ಞರಾಗಿದ್ದು ಹಾರ್ವರ್ಡ್ನಲ್ಲಿ ತರಬೇತಿ ಪಡೆದಿದ್ದರು. ಅಹಮದಾಬಾದ್ನಲ್ಲಿ ಸಂದರ್ಶಕ-ಪ್ರಾಧ್ಯಾಪಕರಾಗಿದ್ದರು. ಯೋಜನೆಗಾಗಿ ವಿಶ್ವಬ್ಯಾಂಕ್ನಿಂದ ಪಡೆದ 40 ಲಕ್ಷ ಡಾಲರ್ ಸಾಲದಲ್ಲಿ 10 ಲಕ್ಷವನ್ನು ಎಫ್ಎಓಗೆ ನೀಡಿ ಹಾಲ್ಸ್ರ ಸೇವೆಯನ್ನು ಪಡೆದುಕೊಂಡರು. ಮೂವರು ತಜ್ಞರು ಸವಿವರವಾಗಿ ಚರ್ಚಿಸುವಾಗ ಹಾಲ್ಸ್ ಟಿಪ್ಪಣಿ ಮಾಡಿಕೊಂಡು, ನಾಲ್ಕೈದು ದಿನ ನಾಪತ್ತೆಯಾಗಿ ಬರುವಾಗ ಯೋಜನೆಯ ದಾಖಲೆಯನ್ನು ಸಿದ್ಧಪಡಿಸಿಕೊಂಡು ಬರುತ್ತಿದ್ದರು; ಅದು ಕುರಿಯನ್ ಅವರ ‘ಭಾಷೆ’ಯಲ್ಲಿ ಇರುತ್ತಿತ್ತು.
1968ರ ಸರ್ದಾರ್ ಪಟೇಲ್ ಜನ್ಮದಿನದ ಹೊತ್ತಿಗೆ (ಅಕ್ಟೋಬರ್ 31) ಸಿದ್ಧವಾದ ಆ ಡಾಕ್ಯುಮೆಂಟ್ ಭಾರತದ ಹಾಲಿನ ಬಗೆಗಿನ ಆಹಾರ ಭದ್ರತೆಯ ಆರಂಭದಂತಿತ್ತು. “1940ರ ದಶಕದ ಕೊನೆಯ ವೇಳೆ ಸರ್ದಾರ್ ಪಟೇಲರು ಹಾಲಿನ ಸಹಕಾರಿ ಚಳವಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ರೈತರಿಗೆ ಸ್ಫೂರ್ತಿ ಆಗಿದ್ದರು. ಎರಡು ಕ್ಯಾನ್ಗಳು ಮತ್ತು ಬೆರಳೆಣಿಕೆಯ ರೈತರೊಂದಿಗೆ ಆರಂಭವಾದ ನಮ್ಮ ಸಹಕಾರಿ ಸಂಸ್ಥೆ ಎರಡು ದಶಕಗಳಾಗುವಾಗ ಒಂದು ರಾಷ್ಟ್ರೀಯ ಕಾರ್ಯಕ್ರಮದ ಚಾಲನಾಶಕ್ತಿ ಆಯಿತು. ಸರ್ಕಾರದ ಬಹಳಷ್ಟು ಜನ ಅದನ್ನು ಒಪ್ಪುವುದಿಲ್ಲ. ಆದರೆ ಆ ಹೊತ್ತಿಗೆ ಈ ಬಗ್ಗೆ ಒಂದು ರಾಷ್ಟ್ರೀಯ ಕಾರ್ಯಕ್ರಮದ ತುರ್ತು ಅಗತ್ಯವಿತ್ತು. ಹಾಲು ಉತ್ಪಾದನೆ ಮತ್ತು ಬಳಕೆಗೆ ಸಂಬಂಧಿಸಿ ದೇಶವು ಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿತ್ತು. 1950-51ರ ಹೊತ್ತಿಗೆ ದೇಶದಲ್ಲಿ ಹಾಲಿನ ತಲಾ ಬಳಕೆ ದಿನಕ್ಕೆ 124 ಗ್ರಾಂ ಇದ್ದರೆ 1970ರ ಹೊತ್ತಿಗೆ ಅದು 107 ಗ್ರಾಂಗೆ ಇಳಿದಿದ್ದು, ಅದು ಬಹುಶಃ ಜಗತ್ತಿನಲ್ಲೇ ಅತಿ ಕಡಮೆ ಇತ್ತು. ಪೌಷ್ಟಿಕ ಆಹಾರ ಸೇವನೆ ದೃಷ್ಟಿಯಿಂದಲೂ ಅದು ಕೆಳಗಿತ್ತು. ಹೈನುಗಾರಿಕೆ ಉದ್ಯಮವು ಅಳಿಯುವ ಭೀತಿಯನ್ನು ಎದುರಿಸುತ್ತಿತ್ತು. ಜಗತ್ತಿನಲ್ಲೇ ಅತಿಹೆಚ್ಚು ಜಾನುವಾರುಗಳು ಇದ್ದರೂ ಕೂಡ ವರ್ಷಕ್ಕೆ 210 ಲಕ್ಷ ಟನ್ ಮಾತ್ರ ಉತ್ಪಾದನೆಯಾಗುತ್ತಿತ್ತು. ದೇಶದ ಆಹಾರಕ್ರಮದಲ್ಲಿ ಹಾಲು ಮತ್ತದರ ಉತ್ಪನ್ನಗಳಿಗಿರುವ ಮಹತ್ತ್ವದ ದೃಷ್ಟಿಯಿಂದ ಇದು ಆತಂಕಕಾರಿ.
ಎಚ್ಚೆತ್ತ ಸರ್ಕಾರ
ಅಂತಹ ಸಂದರ್ಭದಲ್ಲಿ ಡಾ|| ಕುರಿಯನ್ ಮತ್ತು ಗೆಳೆಯರು ಆಪರೇಶನ್ ಫ್ಲಡ್ ರೂಪಿಸಿದಾಗ ಸರ್ಕಾರ ಕೂಡಲೆ ಎಚ್ಚರಗೊಂಡು ಹಿಂದಿನ ಜಾಡ್ಯವನ್ನು ಬಿಟ್ಟು ಪ್ರಸ್ತಾವಕ್ಕೆ ಅನುಮತಿ ನೀಡಿತು; ಸಹಕಾರಿ ವಿಧಾನದಿಂದ ರಾಷ್ಟ್ರಮಟ್ಟದಲ್ಲಿ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವುದು ಯೋಜನೆಯ ಗುರಿ. ಎನ್ಡಿಡಿಬಿ ಸಂಶೋಧನೆಯಿಂದ ತಿಳಿದ ಒಂದು ಬೇಸರದ ಅಂಶವೆಂದರೆ, ದೇಶದಲ್ಲಿ 1960ರ ದಶಕದಲ್ಲಿ ಅಧಿಕ ಇಳುವರಿ ಜಾನುವಾರುಗಳ ಸಂಖ್ಯೆ ಇಳಿಯುತ್ತಿತ್ತು. ನಗರಗಳಿಗೆ ಹಾಲು ಪೂರೈಕೆ ವ್ಯವಸ್ಥೆಯಿಂದಾಗಿ ಎಮ್ಮೆ-ದನಗಳು ಸೊರಗುತ್ತಿದ್ದವು. ಮುಂಬಯಿಯಂಥ ನಗರದಲ್ಲಿ ಜಾಗದ ಸಮಸ್ಯೆಯಿಂದಾಗಿ ಕರುವಿಲ್ಲದೆ ಹಾಲು ಕರೆಯುವ ಕ್ರಮಗಳನ್ನು ಅನುಸರಿಸುತ್ತಿದ್ದರು; ಕರುಗಳು ಅಳಿಯುತ್ತಿದ್ದವು; ಜೊತೆಗೆ ಉತ್ತಮ ತಳಿಗಳು ನಾಶವಾಗುತ್ತಿದ್ದವು. ಹಾಲು ಕೊಡದ ಅಥವಾ ಕರು ಹಾಕಲು ವಿಳಂಬವಾದ ದನ-ಎಮ್ಮೆಗಳನ್ನು ಕಸಾಯಿಖಾನೆಗೆ ಕಳುಹಿಸುವುದು ನಗರಗಳಲ್ಲಿ ಮಾಮೂಲಾಗಿತ್ತು; ದೇಶದ ಬಹುಭಾಗದಲ್ಲಿ ಈ ಪ್ರವೃತ್ತಿ ಪ್ರಚಲಿತವಿತ್ತು. ನಗರಗಳಿಗೆ ಉತ್ತಮ ಮೇವು ಕಳುಹಿಸುವುದು ಕಷ್ಟವಾದ್ದರಿಂದ ಹಾಲಿನ ಗುಣಮಟ್ಟ ಕೂಡ ಕುಸಿದಿತ್ತು. ಹಾಲಿನ ಕೊರತೆಯನ್ನು ಸರಿದೂಗಿಸಲು ನೀರು ಬೆರೆಸುತ್ತಿದ್ದರು. ಒಟ್ಟಿನಲ್ಲಿ ದುಬಾರಿ ದರ ಕೊಡುವ ಗ್ರಾಹಕರಿಗೆ ಸಿಗುತ್ತಿದ್ದುದು ಕಳಪೆ ಹಾಲು.
ಮುಂಬಯಿಯಲ್ಲಿ ಬೇಕಾದಷ್ಟು ಹಾಲು ಸಿಗದ ಕಾರಣ ಮಿಲ್ಕ್ ಸ್ಕೀಮ್ (ಜಿಎಂಎಸ್)ನವರು ವಿದೇಶದಿಂದ ಹಾಲು ಹುಡಿ ತರಿಸಿ ನೀರಿನಲ್ಲಿ ಕರಗಿಸಿ ವಿತರಿಸುತ್ತಿದ್ದರು. ಅದರ ಪರಿಣಾಮವಾಗಿ ಸ್ಥಳೀಯ ಹಾಲಿಗೆ ಪ್ರೋತ್ಸಾಹದ ಕೊರತೆ ಎದುರಾಗಿತ್ತು. ಅದರಿಂದ ಉತ್ಪಾದನೆ ಮತ್ತೆ ಇಳಿಯುತ್ತಿತ್ತು. ಹಾಲಿನ ದರ ಏರಿಸಿದಾಗ ಖಾಸಗಿಯವರು ಅದರ ಲಾಭ ಪಡೆಯುತ್ತಿದ್ದರು. ಉತ್ತಮ ದನ-ಎಮ್ಮೆಗಳು ನಗರಗಳಿಗೆ ಪೂರೈಕೆಯಾಗಿ ಕಳಪೆ ದನ-ಎಮ್ಮೆಗಳು ಹಳ್ಳಿಗಳಲ್ಲಿ ಉಳಿಯುತ್ತಿದ್ದವು. ಇದು ಹೈನುಗಾರಿಕೆ-ವಿರೋಧಿ ವಾತಾವರಣವಾಗಿದ್ದು ಅದನ್ನು ಬದಲಿಸಬೇಕಿತ್ತು.
ಅದಕ್ಕಾಗಿ ಆನಂದ್ ಮಾದರಿಯಲ್ಲಿ ಹಾಲು ಸಂಗ್ರಹಿಸಿ ನಗರಗಳಿಗೆ ಕಳುಹಿಸಬೇಕು. ದೇಶದಾದ್ಯಂತ ಅಂತಹ ಯೋಜನೆಯನ್ನು ಜಾರಿಗೊಳಿಸುವುದಾದರೆ 650 ಕೋಟಿ ರೂ. ಬೇಕು. ಕೇಂದ್ರಸರ್ಕಾರ ಅದನ್ನು ಕೊಡಲಾರದು ಎನಿಸಿದಾಗ ಎನ್ಡಿಡಿಬಿ ವತಿಯಿಂದ ಒಂದು ಅಪೂರ್ವ ಕ್ರಮವನ್ನು ರೂಪಿಸಿದರು. ಆ ಹೊತ್ತಿಗೆ ಮುಂದುವರಿದ ದೇಶಗಳಲ್ಲಿ ಒಂದು ವಿಲಕ್ಷಣ ಪರಿಸ್ಥಿತಿ ಉಂಟಾಗಿತ್ತು. 1960ರ ದಶಕದ ಕೊನೆಯ ವೇಳೆಗೆ ಕೆಲವು ದೇಶಗಳಲ್ಲಿ ಭಾರೀ ಹಾಲು ಉತ್ಪಾದನೆಯಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಹೆಚ್ಚುವರಿ ಆದವು. ಆ ಹೆಚ್ಚುವರಿಯನ್ನು ಬಳಸಿಕೊಂಡು ಎನ್ಡಿಡಿಬಿ 650 ಕೋಟಿ ರೂ. ಗಳಿಸಬೇಕು. ಅದು ರೈತರು ಮತ್ತು ಬಳಕೆದಾರರು ಇಬ್ಬರಿಗೂ ಅನುಕೂಲಕರ ಆಗಬೇಕೆಂಬುದು ಇವರ ಉದ್ದೇಶ.
ಯೂರೋಪಿನ ದಾನ
ಯೂರೋಪ್ನ ಇಇಸಿ (ಯೂರೋಪಿಯನ್ ಇಕನಾಮಿಕ್ ಕಮ್ಯುನಿಟಿ) ಹೆಚ್ಚುವರಿಯಾಗಿ ಕಳುಹಿಸುವ ಹಾಲಿನ ಹೊಳೆ ಮತ್ತು ಬೆಣ್ಣೆಯ ಬೆಟ್ಟಗಳು ದೇಶದೊಳಗೆ ಹಾಗೆಯೇ ನುಗ್ಗಿದರೆ ನಮ್ಮ ಡೈರಿ ಉದ್ಯಮಕ್ಕೆ ಅಪಾಯವಾಗುವ ಭೀತಿಯಿತ್ತು. ಅದನ್ನು ದೇಶದ ಬಡವರಿಗೆ ಉಚಿತವಾಗಿ ಹಂಚಿದರೆ ಆಂತರಿಕ ಬೇಡಿಕೆ ಕುಸಿಯಬಹುದಿತ್ತು. ಅದು ಹಾಲು ಉತ್ಪಾದಕ ರೈತರಿಗೆ ಹಾನಿಕರ. ಈ ಉಚಿತ ಅಥವಾ ರಿಯಾಯಿತಿ ದರದ ಹಾಲಿನ ವಿರುದ್ಧ ಸ್ಪರ್ಧೆ ಅಸಾಧ್ಯ. ಅದಕ್ಕಾಗಿ ವಿದೇಶದಿಂದ ದಾನವಾಗಿ ಬಂದುದನ್ನು ಎನ್ಡಿಡಿಬಿಗೆ ನೀಡಬೇಕು. ಹಾಲಿನ ಹುಡಿಯಾದರೆ ಅದನ್ನು ಹಾಲಾಗಿ ಪರಿವರ್ತಿಸಿ ರೈತರ ಹಾಲಿನ ಬೆಲೆಗೆ ಸಮಾನವಾದ ಬೆಲೆಯಲ್ಲಿ ಮಾರುವುದು. ಆ ಮೂಲಕ ಆಪರೇಶನ್ ಫ್ಲಡ್ನ ಖರ್ಚಿಗೆ ಬೇಕಾದ ಹಣದ ಸಂಗ್ರಹ. ಆಪರೇಶನ್ ಫ್ಲಡ್ನ ಪ್ರಸ್ತಾವವನ್ನು ಡಾ|| ಕುರಿಯನ್ ತುಂಬಾ ಉತ್ಸಾಹದಿಂದ ಸರ್ಕಾರಕ್ಕೆ ಕಳುಹಿಸಿದರು. ಆದರೆ ದೆಹಲಿಯಿಂದ ಯಾವುದೇ ಸ್ಪಂದನೆ ಇಲ್ಲ.
ಹೀಗಿರುವಾಗ ಕೇಂದ್ರ ಗೃಹಕಾರ್ಯದರ್ಶಿ ಎಲ್.ಪಿ. ಸಿಂಗ್ ಅವರು ಗುಜರಾತ್ ಭೇಟಿಯ ವೇಳೆ ಸಾಂದರ್ಭಿಕವಾಗಿ ಆನಂದ್ಗೆ ಬಂದು ಅಮುಲ್ ಡೈರಿಯನ್ನು ನೋಡಿದರು. ಸಹಕಾರಿ ಸಂಸ್ಥೆಯ ಸಾಧನೆಯಿಂದ ಅಚ್ಚರಿಗೊಂಡ ಅವರು, ದೇಶದ ಇತರ ಕಡೆ ರೈತರ ಇಂತಹ ಸಂಸ್ಥೆಗಳು ಏಕಿಲ್ಲ ಎಂದು ಕೇಳಿದರು. ಅಂತಹ ಸಂದರ್ಭಕ್ಕಾಗಿ ಕಾಯುತ್ತಿದ್ದ ಡಾ|| ಕುರಿಯನ್ “ಅದಕ್ಕೆ ಕಾರಣ ನಿಮ್ಮ ಕೆಟ್ಟ ಅಧಿಕಾರಶಾಹಿ. ಏಕೆಂದರೆ ಅವರು ಬೇರೆಯವರು ಮಾಡಿದ ಏನನ್ನೂ ಗುರುತಿಸುವುದಿಲ್ಲ. ಅಮುಲ್ ಡೈರಿ ಅವರಿಗೆ ಗೊತ್ತೂ ಇಲ್ಲ. ಈ ಅಧಿಕಾರಿಗಳಿಗೆ ತಜ್ಞರು ಬೇಡ. ಜನರಿಗೆ ಬಲ ತುಂಬುವವರು ಅವರಿಗೆ ಬೇಡ. ಅಧಿಕಾರಶಾಹಿಯನ್ನು ಬಲಪಡಿಸುವವರು ಮಾತ್ರ ಅವರಿಗೆ ಬೇಕು. ಪ್ರಧಾನಿ ಆನಂದ್ಗೆ ಭೇಟಿ ನೀಡಿದ್ದು, ಅವರ ಸಲಹೆಯ ಪ್ರಕಾರ ಪ್ರಸ್ತಾವವನ್ನು ಕಳುಹಿಸಿದ್ದೇನೆ. ಯೋಜನಾ ಆಯೋಗದ ಓರ್ವ ಅಧಿಕಾರಿಯ ಕಚೇರಿಯಲ್ಲಿ ಅದು ಧೂಳು ತಿನ್ನುತ್ತಿದೆಯಂತೆ. ಆತನ ಮನಸ್ಸಿನಲ್ಲಿದ್ದ ಎರಡು ಪ್ರಶ್ನೆಗಳಿಗೆ ಉತ್ತರ ಬೇಕಂತೆ. ಆ ಬಗ್ಗೆ ಆತ ನಮ್ಮಲ್ಲಿ ಕೇಳಿಲ್ಲ. ನೆನಪೋಲೆಗಳನ್ನು ಅಲಕ್ಷಿಸಿದ್ದಾನೆ. ಇದು ಸಾಕಾಗಿದೆ. ಈ ಕೆಲಸವನ್ನೇ ನಿಲ್ಲಿಸುವ ಯೋಚನೆಯಲ್ಲಿದ್ದೇನೆ” ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಎಲ್.ಪಿ. ಸಿಂಗ್ ಪ್ರಸ್ತಾವದ ಒಂದು ಪ್ರತಿಯನ್ನು ತೆಗೆದುಕೊಂಡು ದೆಹಲಿಗೆ ಹೋದರು. ಕೆಲವು ದಿನಗಳಲ್ಲಿ ಫೋನ್ ಮಾಡಿ “ಪ್ರಸ್ತಾವವನ್ನು ಓದಿದೆ. ಸಂಪುಟ ಕಾರ್ಯದರ್ಶಿ, ಕೃಷಿ ಕಾರ್ಯದರ್ಶಿ ಹಾಗೂ ಸಂಬಂಧಿಸಿದ ಇತರರ ಜೊತೆ ಮಾತನಾಡಿದೆ. ದೆಹಲಿಗೆ ಬಂದು ಅವರನ್ನೆಲ್ಲ ಭೇಟಿ ಮಾಡಿ” ಎಂದು ಸಿಂಗ್ ತಿಳಿಸಿದರು.
ಕುರಿಯನ್ ಅದಕ್ಕಾಗಿ ಹೋಗಲಿಲ್ಲ. ಬೇರೆ ಕಡೆಗೆ ಹೋಗುವಾಗ ದೆಹಲಿಗೆ ತೆರಳಿ ಎಲ್.ಪಿ. ಸಿಂಗ್ ಅವರ ಮನೆಗೆ ಭೇಟಿ ಕೊಟ್ಟರು; ಅಲ್ಲಿ ಎಲ್ಲ ಅಧಿಕಾರಿಗಳು ಸೇರಿದ್ದರು. “ಕುರಿಯನ್ ನಮ್ಮಿಂದ ಏನೂ ಕೇಳಿಲ್ಲ. ಪ್ರಸ್ತಾವವನ್ನು ಮುಂದೆ ಕಳುಹಿಸಿ ಎಂದಷ್ಟೇ ಹೇಳಿದ್ದಾರೆ. ಏಕೆ ಕಳುಹಿಸಿಲ್ಲ? ಯೋಜನೆಯ ಬಗ್ಗೆ ವಿಶ್ವಬ್ಯಾಂಕ್, ಎಫ್ಎಓಗಳನ್ನು ಸಂಪರ್ಕಿಸಿದ್ದಾರೆ. ನಾವು ಅವರ ಫೈಲ್ ಮೇಲೆ ಕುಳಿತಿದ್ದೇವೆ. ನಮ್ಮದಿದು ಎಂತಹ ಅಧಿಕಾರಶಾಹಿ?” ಎಂದು ಸಿಂಗ್ ತರಾಟೆಗೆ ತೆಗೆದುಕೊಂಡರು. ಸಂಪುಟ ಕಾರ್ಯದರ್ಶಿಯವರ ಉಪಸ್ಥಿತಿಯಲ್ಲಿ ಇಲಾಖಾ ಕಾರ್ಯದರ್ಶಿಗಳ ಸಭೆ ನಡೆದು ಅಲ್ಲೇ ಆಪರೇಶನ್ ಫ್ಲಡ್ಗೆ ಮಂಜೂರಾತಿ ನೀಡಲಾಯಿತು. ಮಂಜೂರಾತಿಯ ವೇಳೆ ರಾಜಕಾರಣಿಗಳು ಇರಲಿಲ್ಲ. ರೋಮ್ನಲ್ಲಿ ನಡೆದ ಇಪ್ಪತ್ತೆರಡು ದೇಶಗಳ ಸಭೆಯಲ್ಲಿ ಇದನ್ನು ಮಂಡಿಸಲು ಡಾ|| ಕುರಿಯನ್ ಹೋಗುವಾಗ ಕೃಷಿ ಇಲಾಖೆಯ ಕಾರ್ಯದರ್ಶಿ ಬಿ.ಆರ್. ಪಟೇಲ್ ಅವರೊಂದಿಗಿದ್ದರು. ಯೋಜನೆಯಂತೆ ದೇಶದಲ್ಲೊಂದು ಸಹಕಾರಿ ವ್ಯವಸ್ಥೆ ಬರಲಿದ್ದು, ದೇಶದ 110 ಲಕ್ಷ ಜನ ಹಾಲು ಉತ್ಪಾದಕ ರೈತರೇ ಡೈರಿ ಸ್ಥಾವರಗಳ ಒಡೆಯರು ಎಂದು ಅದರಲ್ಲಿ ಹೇಳಲಾಗಿತ್ತು.
ಮಹತ್ತ್ವದ ವರ್ಷ
“1965 ನನಗೆ ಮಹತ್ತ್ವದ ವರ್ಷವಾಗಿತ್ತು. ಆ ವರ್ಷ ಅಮೆರಿಕದ ಮಿಶಿಗನ್ ವಿಶ್ವವಿದ್ಯಾಲಯ ನನಗೆ ‘ಗೌರವ ಡಾಕ್ಟರ್ ಆಫ್ ಸಯನ್ಸ್’ ಪದವಿ ನೀಡಿತು; ಮುಂದೆ ನಾನು ‘ಡಾಕ್ಟರ್ ಕುರಿಯನ್’ ಆದೆ. ಮತ್ತು ಅದೇ ವರ್ಷ ಸೆಪ್ಟೆಂಬರ್ನಲ್ಲಿ ಎನ್ಡಿಡಿಬಿ ನೋಂದಣಿಯಾಯಿತು” ಎಂದವರು ದಾಖಲಿಸಿದ್ದಾರೆ. ಅದೇ ರೀತಿ ‘1957ರಲ್ಲಿ ನಮ್ಮ ಮಗಳು ಹುಟ್ಟಿದಳು. ಅವಳಿಗೆ ನಿರ್ಮಲಾ ಎಂದು ಹೆಸರಿಟ್ಟೆವು. ಅವಳ ಮುಗ್ಧತೆ ಮತ್ತು ಪರಿಶುದ್ಧತೆ (Purity)ಗಳು ಮನೆಯಲ್ಲಿ ಅಪಾರ ಸಂತೋಷವನ್ನು ತಂದವು. ಜೊತೆಗೆ ಮಣಿಬೆನ್ (ಸರ್ದಾರ್ ಪಟೇಲರ ಪುತ್ರಿ) ‘ಮಗಳಿಗೆ ಸಮಯ ಕೊಡು’ ಎಂದು ಆದೇಶವಿತ್ತರು. “ಸಂಜೆ ಆರರೊಳಗೆ ಮನೆಗೆ ಬರಬೇಕು. ಎಂಟು ಗಂಟೆ ಕೆಲಸ, ಎಂಟು ಗಂಟೆ ಫ್ಯಾಮಿಲಿಗೆ ಮತ್ತು ಎಂಟು ಗಂಟೆ ನಿದ್ರೆಗೆ” ಎಂದು ಎಚ್ಚರಿಸಿದರು. ಮಣಿಬೆನ್ ಮಾತಿಗೆ ಒಪ್ಪಿದರೂ ಕೂಡ ಮಗಳಿಗೆ ಅಷ್ಟು ಸಮಯ ಕೊಡಲಾಗಲಿಲ್ಲ – ಎಂದಿದ್ದಾರೆ ಕುರಿಯನ್.
ಆಪರೇಶನ್ ಫ್ಲಡ್ನಲ್ಲಿ ಮೂರು ಪ್ರಮುಖ ಹೆಜ್ಜೆಗಳಿದ್ದವು. ಮೊದಲನೆಯದಾಗಿ, ದಾನವಾಗಿ ಬಂದ ಹಾಲಿನ ಉತ್ಪನ್ನಗಳ ಪುನವ್ರ್ಯವಸ್ಥೆ. ಮುಂಬಯಿ, ದೆಹಲಿ, ಕೋಲ್ಕತ್ತಾ ಮತ್ತು ಮದ್ರಾಸ್ (ಚೆನ್ನೈ)ಗಳಿಗೆ ಹಾಲನ್ನು (ದ್ರವ) ಒದಗಿಸುವುದರೊಂದಿಗೆ ಅಲ್ಲಿಯ ಮಾರುಕಟ್ಟೆಯ ದೊಡ್ಡ ಪಾಲನ್ನು ಗಿಟ್ಟಿಸಿಕೊಳ್ಳುವುದು. ಎರಡನೆಯದಾಗಿ, ದಾನವಾಗಿ ಬಂದ ಹಾಲಿನ ಉತ್ಪನ್ನಗಳ ಪುನವ್ರ್ಯವಸ್ಥೆ ಮತ್ತು ಮಾರಾಟದಿಂದ ಬಂದ ಹಣದ ಮೂಲಕ ನಗರದಲ್ಲಿರುವ ಜಾನುವಾರುಗಳ ಸ್ಥಿತಿಯನ್ನು ಉತ್ತಮಪಡಿಸುವುದು ಮತ್ತು ಸಂಘಟಿತ ಹಾಲು ಉತ್ಪಾದನೆಯನ್ನು ಹೆಚ್ಚಿಸುವುದು. ಮತ್ತು ಕೊನೆಯದಾಗಿ, ಪ್ರಧಾನ ದ್ರವ ಹಾಲು ಯೋಜನೆಗಳು ಮಾರುಕಟ್ಟೆಯಲ್ಲಿ ಭದ್ರಗೊಳ್ಳುವಂತೆ ಇಡೀ ಕಾರ್ಯಾಚರಣೆಯನ್ನು ರೂಪಿಸುವುದು.
ವಿದೇಶೀ ವೇದಿಕೆಯಲ್ಲಿ
ಈ ನಿಟ್ಟಿನಲ್ಲಿ ವಿಶ್ವ ಆಹಾರ ಕಾರ್ಯಕ್ರಮಕ್ಕೆ (ಡಬ್ಲ್ಯುಎಫ್ಪಿ) ಇವರ ಪ್ರಸ್ತಾವವನ್ನು ಕಳುಹಿಸಬೇಕಿತ್ತು. ಇಲ್ಲವಾದರೆ ವಿದೇಶೀ ದಾನವನ್ನು ಕಳೆದುಕೊಳ್ಳ್ಳುವ ಅಪಾಯವಿತ್ತು. ಇನ್ನೊಂದು ತೊಂದರೆಯೆಂದರೆ ಡಬ್ಲ್ಯುಎಫ್ಪಿಯ ಈ ಭಾಗದ ಅಧಿಕಾರಿ ಪಾಕಿಸ್ತಾನದ ನಸೀರ್ ಅಹಮದ್ ಎಂಬಾತ. ಆತ ಈ ನೆರವನ್ನು ತನ್ನ ದೇಶಕ್ಕೆ ಒಯ್ಯಲು ಯತ್ನಿಸಿದರು. ಇವರ ಇಡೀ ಪ್ರಸ್ತಾವವನ್ನು ನಕಲು ಮಾಡಿ ರೋಮ್ನಲ್ಲಿದ್ದ ಪಾಕಿಸ್ತಾನ್ ರಾಯಭಾರಿಗೆ ಕಳುಹಿಸಿದ; ನಮ್ಮ ನಗರಗಳ ಬದಲು ಲಾಹೋರ್, ಕರಾಚಿ ಮುಂತಾಗಿ ಪಾಕಿಸ್ತಾನದ ನಾಲ್ಕು ನಗರಗಳನ್ನು ಸೇರಿಸಿದ್ದ. ಭಾರತದ ವಿರುದ್ಧ ಆತನ ಪೂರ್ವಗ್ರಹ ಸ್ಪಷ್ಟವಿತ್ತು. “ಒಬ್ಬ ಕ್ರೈಸ್ತ ವ್ಯಕ್ತಿ (ಭಾರತದ) ಎನ್ಡಿಡಿಬಿಯ ಅಧ್ಯಕ್ಷ ಆಗಲು ಹೇಗೆ ಸಾಧ್ಯ?” ಎಂದು ಆತ ಕುರಿಯನ್ ಅವರಲ್ಲೇ ಕೇಳಿದ್ದ. ಅದಕ್ಕೆ ಕುರಿಯನ್ ಉತ್ತರಿಸಿ “ಅಹಮದ್ ಅವರೆ, ಇದು ಸಾಧ್ಯವಾಯಿತು; ಏಕೆಂದರೆ ಭಾರತವು ಪಾಕಿಸ್ತಾನವಲ್ಲ. ನಿಮ್ಮ ದೇಶ ಭಾರತದ ಮೇಲೆ ದಾಳಿ ಮಾಡಿದಾಗ ಕಛ್ ಜಿಲ್ಲೆಯ ಕಲೆಕ್ಟರ್(ಜಿಲ್ಲಾಧಿಕಾರಿ) ಆಗಿದ್ದವರು ಒಬ್ಬ ಕ್ರೈಸ್ತ, ಗುಜರಾತಿನ ಐಜಿಪಿ ಓರ್ವ ಶ್ರದ್ಧಾಳು ಮುಸ್ಲಿಂ, ಗುಜರಾತಿನ ಗೃಹ ಕಾರ್ಯದರ್ಶಿ ಓರ್ವ ಕ್ರೈಸ್ತ ಮತ್ತು ಗುಜರಾತಿನ ರಾಜ್ಯಪಾಲ ಓರ್ವ ಮುಸ್ಲಿಂ ಇದ್ದರು. ತಿಳಿದುಕೊಳ್ಳಿ, ಇದು ಭಾರತ” ಎಂದಿದ್ದರು.
ನೆರವನ್ನು ಪಾಕಿಸ್ತಾನಕ್ಕೆ ಒಯ್ಯುವ ಆತನ ಆಟ ನಡೆಯಲಿಲ್ಲ. ಡಬ್ಲ್ಯುಎಫ್ಪಿ ಕಮಿಟಿಯನ್ನು ಭೇಟಿ ಮಾಡಿ ಇಇಸಿ ನೆರವಿನ ಬಗ್ಗೆ ವ್ಯವಹರಿಸಲು ಕುರಿಯನ್ ರೋಮ್ಗೆ ಹೋದರು. ಇವರ ಜೊತೆ ಇದ್ದ ಕೃಷಿ ಇಲಾಖೆಯ ಕಾರ್ಯದರ್ಶಿ ಬಿ.ಆರ್. ಪಟೇಲ್ “ಭಾರತದ ದೃಷ್ಟಿಕೋನವನ್ನು ಡಾ|| ಕುರಿಯನ್ ಪ್ರಸ್ತುತಪಡಿಸುತ್ತಾರೆ” ಎಂದು ಹೊಣೆಯನ್ನು ಇವರಿಗೇ ವಹಿಸಿದರು. ಸಿದ್ಧಪಡಿಸಿದ ಭಾಷಣವನ್ನು ಓದುವ ಬದಲು ಶ್ರೋತೃಗಳ ಮುಂದೆ ನೇರವಾಗಿ ಮಾತನಾಡುವುದು ಕುರಿಯನ್ರಿಗೆ ಇಷ್ಟ. ಅಲ್ಲಿಯೂ ಹಾಗೆಯೆ ಆಯಿತು. ಇವರ ಭಾಷಣ ಕೇಳಿದ ಆಸ್ಟ್ರೇಲಿಯ ನಿಯೋಗದ ಮುಖ್ಯಸ್ಥ “ನಿಮ್ಮನ್ನು ವಿರೋಧಿಸಬೇಕು ಎಂದಿದ್ದೆ; ನಿಮ್ಮ ಭಾಷಣ ಕೇಳಿ ಬದಲಾದೆ” ಎಂದರೆ ಪಾಕಿಸ್ತಾನದ ಪ್ರತಿನಿಧಿ “ಭಾರತದವರು ಹೇಳಿದ ಎಲ್ಲವನ್ನೂ ವಿರೋಧಿಸು ಎಂದು ಹೇಳಿ ನನ್ನನ್ನು ಕಳುಹಿಸಿದ್ದರು. ಆದರೆ ನಿಮ್ಮ ಮಾತು ಕೇಳಿ ಮಾತು ಬೇಡ ಎನಿಸಿತು. ಈ ಮೌನವು ಸಮ್ಮತಿಗೆ ಸಮಾನ” ಎಂದು ಹೇಳಿದರು. ಆಹಾರದ ನೆರವನ್ನು ಸೂಕ್ತವಾಗಿ ನೀಡಿದಾಗ ಪಡೆದ ದೇಶದ ಸಾಮಾಜಿಕ-ಆರ್ಥಿಕ ಕಲ್ಯಾಣವಾಗುತ್ತದೆ; ಸ್ವಾವಲಂಬನೆ ನಾಶವಾಗುವುದಿಲ್ಲ. ನಿಗದಿತ ಅವಧಿಯವರೆಗೆ ಭಾರತದ ನಾಲ್ಕು ನಗರಗಳಲ್ಲಿ ವಿತರಿಸುವ ಹಾಲಿನ ಶೇ. 33 ಭಾಗ ನೆರವಿನಿಂದ ಬಂದ ಹಾಲಿನ ಹುಡಿಯಿಂದ ತಯಾರಿಸಿದ್ದು – ಎಂದು ಡಾ|| ಕುರಿಯನ್ ಸಭೆಗೆ ತಿಳಿಸಿದರು. “ನಾವು ನಿಮ್ಮ ಕೊಡುಗೆಯನ್ನು ನಂಬಿ ಇರುವುದಿಲ್ಲ; ಭಾರತದ ಉತ್ಪಾದಕರು ನಿರೀಕ್ಷಿಸುವ ದರಕ್ಕಿಂತ ಕಡಮೆ ದರದಲ್ಲಿ ನಿಮ್ಮ ಹಾಲು ವಿತರಣೆ ಆಗುವುದಿಲ್ಲ. ಮಂತ್ರಿಗಳ ಕ್ಷೇತ್ರದಲ್ಲಿ ಅವರನ್ನು ಜನಪ್ರಿಯಗೊಳಿಸಲು ಕಡಮೆ ಬೆಲೆಗೆ ಮಾರುವುದಿಲ್ಲ” ಎಂದು ಕೂಡ ಹೇಳಿದರು. ಆ ರೀತಿಯಲ್ಲಿ ಸಿಕ್ಕಿದ ಹಣದಿಂದ ಉತ್ಪಾದನೆಯನ್ನು ಹೆಚ್ಚಿಸಿ ಆನಂದ್ ಮಾದರಿಯನ್ನು ರಾಷ್ಟ್ರಮಟ್ಟದಲ್ಲಿ ಪ್ರಚುರಗೊಳಿಸಲು ಸಾಧ್ಯ ಎಂಬುದು ಅವರ ಎಣಿಕೆಯಾಗಿತ್ತು. ಇವರ ಪ್ರಸ್ತಾವ ಅಂಗೀಕಾರ ಆಗುವುದರೊಂದಿಗೆ ಆಪರೇಶನ್ ಫ್ಲಡ್ ಬಗೆಗಿನ ಒಂದನೇ ಯುದ್ಧವನ್ನು ಗೆದ್ದಂತಾಯಿತು.
ಐಡಿಸಿ ರಚನೆ
ಪ್ರಸ್ತುತ ಕೆಲಸಕ್ಕೆ ಮೊದಲು ಎನ್ಡಿಡಿಬಿಯೇ ಕಾರ್ಯನಿರ್ವಹಣಾ ಪ್ರಾಧಿಕಾರ (Operating Authority)ವಾಗಿತ್ತು. ಮುಂದೆ ಎನ್ಡಿಡಿಬಿಗೆ ಇಷ್ಟು ದೊಡ್ಡ ಕೆಲಸವು ಕಷ್ಟವಾಗುತ್ತದೆ ಎನಿಸಿ ಭಾರತಸರ್ಕಾರವು ಇಂಡಿಯನ್ ಡೈರಿ ಕಾರ್ಪೊರೇಶನ್ (ಐಡಿಸಿ) ಎಂಬ ಸಂಸ್ಥೆಯನ್ನು ಸ್ಥಾಪಿಸಿತು. ಕೆಲಸವನ್ನು ಅದು ಮಾಡಿದರೆ ಎನ್ಡಿಡಿಬಿ ತಾಂತ್ರಿಕ ಸಲಹಾ ಸಂಸ್ಥೆಯಾಗಿ ಸಮೀಕ್ಷೆ ಮುಂತಾದ ಕೆಲಸಗಳಲ್ಲಿ ತೊಡಗಿಕೊಂಡಿತು. ಕುರಿಯನ್ ಅವರನ್ನೇ ಐಡಿಸಿ ಅಧ್ಯಕ್ಷರಾಗಿ ಕೂಡ ನೇಮಿಸಿದರು. ಜುಲೈ 1970ರಲ್ಲಿ ಎನ್ಡಿಡಿಬಿ ‘ಬಿಲಿಯನ್ (ಶತಕೋಟಿ) ಲೀಟರ್ ಐಡಿಯಾ’ವನ್ನು ಕಾರ್ಯಗತಗೊಳಿಸಿತು. ಹಾಲಿನ ಭಾರೀ ಉತ್ಪಾದನೆ ಅದರ ಉದ್ದೇಶವಾಗಿದ್ದು, ಅದು ಜಗತ್ತಿನಲ್ಲೇ ಅತಿದೊಡ್ಡ ಹೈನುಗಾರಿಕೆ ಅಭಿವೃದ್ಧಿ ಕಾರ್ಯಕ್ರಮವೆನಿಸಿತು.
ಮೂರು ಅಂಶಗಳು
ದೇಶದ ಹಲವು ಹಾಲುಸಂಗ್ರಹ ಕೇಂದ್ರಗಳಲ್ಲಿ (ಮಿಲ್ಕ್ಶೆಡ್) ಆನಂದ್ ಮಾದರಿಯನ್ನು ತರುವುದು ಆಪರೇಶನ್ ಫ್ಲಡ್ನ ಪ್ರಧಾನ ಉದ್ದೇಶವಾಗಿದ್ದು, ಅದಕ್ಕೆ ಮೂರು ಮುಖ್ಯಾಂಶಗಳನ್ನು ಅನುಸರಿಸಲಾಯಿತು.
1. ಹಾಲನ್ನು ಉತ್ಪಾದಿಸುವುದಾದರೆ ಮಾರುಕಟ್ಟೆಯನ್ನು ನೋಡಿಕೊಳ್ಳಬೇಕು. ಆ ಮಾರುಕಟ್ಟೆಯು ಲಾಭ ತರುವಂತಿರಬೇಕು. ರೈತರನ್ನು ಅವಲಂಬಿಸಬಹುದೆಂದು ಅಮುಲ್ನ ಅನುಭವ ತಿಳಿಸಿತ್ತು. ಹಾಲು ಉತ್ಪಾದಕ ರೈತರಿಗೆ ಉತ್ತಮ ಅನುಭವವಿದ್ದು, ಲಾಭವಿದ್ದರೆ ಅವರು ಹೆಚ್ಚು ಉತ್ಪಾದಿಸದೆ ಇರುವುದಿಲ್ಲ. ದುರದೃಷ್ಟವೆಂದರೆ ನಮ್ಮ ಪಶುಸಂಗೋಪನೆ ಇಲಾಖೆಯವರಿಗೆ ಇದು ಅರ್ಥವಾಗುವುದಿಲ್ಲ. ಉತ್ಪಾದನೆ ಜಾಸ್ತಿ ಆಗಬೇಕೆಂದರೆ ಕೃಷಿ ಇಲಾಖೆಯವರು ಹೇಳುವುದು ಉತ್ತಮ ಬೀಜ, ರಸಗೊಬ್ಬರ, ನೀರಾವರಿ ಇತ್ಯಾದಿ. ಹಾಗೆಯೇ ಹೈನುಗಾರಿಕೆಯಲ್ಲಿ ಹಾಲ್ಸ್ಟೀನ್, ಜೆರ್ಸಿ, ವೀರ್ಯಬ್ಯಾಂಕ್ ಇತ್ಯಾದಿ. ಮಾರಾಟದ ಬಗ್ಗೆ ಅವರು ಮಾತನಾಡುವುದಿಲ್ಲ. ಮಾರುಕಟ್ಟೆ ತುಂಬಾ ಮುಖ್ಯ. ಮುಂಬಯಿ ಇಲ್ಲದಿದ್ದರೆ ಆನಂದ್ ಆಗುತ್ತಿರಲಿಲ್ಲ ಎನ್ನುತ್ತಾರೆ ಡಾ|| ಕುರಿಯನ್.
2. ಎರಡನೇ ಅಂಶವೆಂದರೆ, ಹಾಲಿನ ಸಂಗ್ರಹ ಮತ್ತು ಮಾರುಕಟ್ಟೆ ಸಂಬಂಧವನ್ನು ಬಿಗಿಗೊಳಿಸಬಾರದು. ಏಕೆಂದರೆ ಸಂಗ್ರಹ ಮತ್ತು ಮಾರಾಟ ಎರಡೂ ಒಂದೇ ರೀತಿಯಲ್ಲಿರುವುದು ಅಸಾಧ್ಯ. ಬೇಸಗೆಯಲ್ಲಿ ಹಾಲಿನ ಉತ್ಪಾದನೆ-ಸಂಗ್ರಹಗಳು ಇಳಿಯುತ್ತವೆ; ಆದರೆ ಮಾರುಕಟ್ಟೆ (ಬೇಡಿಕೆ) ಕುಸಿಯುವುದಿಲ್ಲ.
3. ಇನ್ನೊಂದು ಇನ್ನೊಂದು ಅಂಶವೆಂದರೆ, ಬೃಹತ್ ನಗರಗಳ ಸಮೀಪವೇ ಆನಂದ್ನಂತಹ ಸಂಸ್ಥೆಯನ್ನು ಕಟ್ಟಲು ಸಾಧ್ಯವಾಗುವುದಿಲ್ಲ. ಸುಮಾರು 45 ಕಿ.ಮೀ.ನೊಳಗೆ ಮಾಡುವುದೆಂದರೆ ನಮಗೆ ಬೇಕಾಗುವುದು ಸೈಕಲಿರುವ ಹಾಲಿನ ಭೈಯಾಗಳು ಮಾತ್ರ. ಸಾವಿರಾರು ನೌಕರರು, ಉನ್ನತ ಅಧಿಕಾರಿಗಳೆಲ್ಲ ಬೇಡ. ದೂಧ್ವಾಲಾ ಬೇಸಗೆಯಲ್ಲಿ ಹಾಲಿಗೆ ನೀರು ಸೇರಿಸುತ್ತಾನೆ. ಚಳಿಗಾಲದಲ್ಲಿ ಎಲ್ಲ ಹಾಲನ್ನು ಸಂಗ್ರಹಿಸುವುದಿಲ್ಲ. ಸರ್ಕಾರೀ ಇಲಾಖೆ ಇದನ್ನೆಲ್ಲ ಮಾಡದು. ಅದರಿಂದಾಗಿ ನಷ್ಟ ತಪ್ಪಿದ್ದಲ್ಲ.
ಹಾಲಿನ ಸಂಗ್ರಹ ಮಾತ್ರವಲ್ಲ; ಮಾರಾಟದಲ್ಲೂ ಖಾಸಗಿಯವರ ಜೊತೆ ಸ್ಪರ್ಧಿಸಬೇಕಾಗುತ್ತದೆ. ಅಮುಲ್ನವರು ಬರೋಡಾದಲ್ಲಿ ಬೇಸಿಗೆ ವೇಳೆ ಒಂದು ಸಹಕಾರಿ ಸಂಸ್ಥೆಗೆ 25 ಸಾವಿರ ಲೀ. ಹಾಲು ನೀಡುವ ಮೂಲಕ ಸ್ಪರ್ಧೆಗೆ ಸಹಕರಿಸಿದ್ದರು. ಯೂರೋಪಿನಿಂದ ಉದಾರ ದಾನವಾಗಿ ಬಂದ ಹಾಲಿನ ಉತ್ಪನ್ನಗಳನ್ನು ದೆಹಲಿ ಮತ್ತಿತರ ಕಡೆ ವಿತರಿಸಿ ಮಾರುಕಟ್ಟೆಯನ್ನು ಬಲಪಡಿಸಿಕೊಂಡದ್ದು ಆಪರೇಶನ್ ಫ್ಲಡ್ನ ಸಾಧನೆ ಎನಿಸಿತು. ಖಾಸಗಿಯವರು ಆ ಮಾರುಕಟ್ಟೆಯನ್ನು ಕಳೆದುಕೊಂಡರು. ಆಗ ಸಂಗ್ರಹ ಕೂಡ ಎನ್ಡಿಡಿಬಿ ಕಡೆಗೆ ಬಂತು. ಈ ಯಶಸ್ಸಿನ ಹಿಂದೆ ಇದ್ದುದು ಸಹಕಾರಿ ವ್ಯವಸ್ಥೆ. ಅಲ್ಲಿ ಲಾಭ ಹೊರಗೆ ಹೋಗುವುದಿಲ್ಲ. ಆ ಮೂಲಕ ಆಪರೇಶನ್ ಫ್ಲಡ್ ಹಾಲಿನ ಉತ್ಪಾದಕರು ಮತ್ತು ಬಳಕೆದಾರರನ್ನು ಹತ್ತಿರ ತಂದಿತು. ಬಳಕೆದಾರ ನೀಡಿದ ಹಣದಲ್ಲಿ ಗರಿಷ್ಠ ಭಾಗವನ್ನು ಉತ್ಪಾದಕ ರೈತರಿಗೆ ತಲಪಿಸಿತು.
“ಇದನ್ನು ರೂಪಿಸಿದಾಗ ನಮ್ಮ ತಲೆಯಲ್ಲಿ ಹಾಲಿನ ಸ್ವಾವಲಂಬನೆಗಿಂತ ದೊಡ್ಡದಾದ ಉದ್ದೇಶ ಇತ್ತು. ಅಲಕ್ಷ್ಯಕ್ಕೀಡಾದ ರೈತಪುರುಷ ಮತ್ತು ಮಹಿಳೆಯರನ್ನು ಅಭಿವೃದ್ಧಿ ಪ್ರಕ್ರಿಯೆಯ ಒಳಗೆ ಸೇರಿಸಿಕೊಳ್ಳಬೇಕಿತ್ತು. ಬ್ರಿಟಿಷರಿದ್ದಾಗ ಅವರಿಗೆ ಈ ‘ನೇಟಿವ್’ಗಳ ಅಭಿವೃದ್ಧಿ ಬೇಕಿರಲಿಲ್ಲ. ಆದರೆ ಸ್ವಾತಂತ್ರ್ಯಾನಂತರ ನಮ್ಮ ‘ಕಂದು ಸಾಹೇಬ’ರಲ್ಲಿ ಅದೇ ಮಾನಸಿಕತೆ ಮುಂದುವರಿದದ್ದು ದುರದೃಷ್ಟಕರ. ನಮ್ಮ ರೈತರನ್ನು ನಂಬಲಾಗದು ಎಂಬ ಸ್ಥಿತಿಯನ್ನು ನಾವೇ ತಂದೆವು” ಎನ್ನುತ್ತಾರೆ ಡಾ|| ಕುರಿಯನ್.
ಬ್ರೌನ್ಸಾಹೇಬರ ಕಿರುಕುಳ
“ಆಪರೇಶನ್ ಫ್ಲಡ್ಗೆ ಈ ಬ್ರೌನ್ ಸಾಹೇಬರ ವಿರೋಧವನ್ನು ನಾನು ನಿರೀಕ್ಷಿಸಿದ್ದೆ. ಅದು ಬಂದೇ ಬಂತು. ಆಗಲೇ ಹೈನುಗಾರಿಕೆ ಸರ್ಕಾರೀ ವ್ಯವಸ್ಥೆಯೊಳಗೆ ಸಿಕ್ಕಿಬಿದ್ದಿತ್ತು. ದೇಶದ ವಿವಿಧ ಭಾಗಗಳಲ್ಲಿ ಸುಮಾರು 100 ಸರ್ಕಾರೀ ಡೈರಿಗಳಿದ್ದವು. ಏನಾದರೂ ತೊಂದರೆ ಬಂದರೆ ಅದಕ್ಕೊಂದು ವಿಭಾಗ (ಇಲಾಖೆ) ರಚಿಸುವುದು, ಅದಕ್ಕೊಬ್ಬ ಕಮಿಷನರ್, ಮೇಲೊಬ್ಬ ಜಂಟಿ ಕಮಿಷನರ್ – ಹೀಗೆ ನಡೆಯುತ್ತಿತ್ತು” ಎನ್ನುವ ಕುರಿಯನ್, “ಆದರೆ ಆಪರೇಶನ್ ಫ್ಲಡ್ನಲ್ಲಿ ವಿಕೇಂದ್ರೀಕರಣ ಆಗಬೇಕಿತ್ತು. ಹಳ್ಳಿಯ ವಿಷಯವನ್ನು ಅಲ್ಲಿಯ ಸೊಸೈಟಿ ನಿರ್ವಹಿಸುವುದು; ಹಳ್ಳಿಯವರೇ ಹಾಲು ಸಂಗ್ರಹಿಸುವುದು, ಜಿಲ್ಲಾಮಟ್ಟದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಲ್ಲಿಯ ಡೈರಿಯನ್ನು ನೋಡಿಕೊಳ್ಳುವುದು, ರಾಜ್ಯಮಟ್ಟದಲ್ಲಿ ಮಾರ್ಕೆಟಿಂಗ್ ಫೆಡರೇಶನ್. ನಮ್ಮ ಹೈನುಗಾರಿಕೆ ಸಹಕಾರಿ ವ್ಯವಸ್ಥೆಯಲ್ಲಿ ಸಣ್ಣ ರೈತರೇ ಇದನ್ನೆಲ್ಲ ನೋಡಿಕೊಳ್ಳುತ್ತಾರೆ. ಇದು ದೊಡ್ಡ ಅಧಿಕಾರಶಾಹಿಯನ್ನು ಪ್ರೋತ್ಸಾಹಿಸುವುದಿಲ್ಲ. ಏಕೆಂದರೆ ದೊಡ್ಡ ಅಧಿಕಾರಿಗಳು ಜನರ ಆವಶ್ಯಕತೆಗಳಿಗೆ ಸ್ಪಂದಿಸುವುದಿಲ್ಲ. ಅಧಿಕಾರಶಾಹಿಗೆ ವಿರೋಧಿಯಾದ ನಮ್ಮ ವಿಕೇಂದ್ರೀಕರಣ ವ್ಯವಸ್ಥೆಯನ್ನು ಕೆಲವು ಅಧಿಕಾರಿಗಳು ಇಷ್ಟಪಡಲಿಲ್ಲ. ಕೆಲವು ರಾಜ್ಯಗಳಲ್ಲಿ ಆಗಲೇ ಹೈನುಗಾರಿಕೆ ಅಭಿವೃದ್ಧಿ ಇಲಾಖೆ ಇದ್ದು, ಅದರ ಕೆಳಗೆ ಸುಮಾರು 25 ಸಾವಿರ ನೌಕರರಿದ್ದರು. ಆ ಜನರ ಉದ್ಯೋಗವೇ ಅವರ ಉದ್ದೇಶ ಎಂಬಂತಿತ್ತು. ಮಾರುಕಟ್ಟೆ ಬಗ್ಗೆ ಆದ್ಯತೆಯಿಲ್ಲ. ಇದೇ ನಮಗೂ ಅವರಿಗೂ ಇದ್ದ ಮುಖ್ಯ ವ್ಯತ್ಯಾಸ” ಎಂದು ವಿವರಿಸಿದ್ದಾರೆ.
“ಸಹಕಾರಿ ತತ್ತ್ವ ವಿಫಲವಾದರೆ ಅಲ್ಲಿಗೆ ನಮ್ಮ ಗ್ರಾಮೀಣ ಭಾರತದ ಏಕೈಕ ಆಸೆಯು ವಿಫಲವಾದಂತೆ ಎಂದು ಸ್ವಾತಂತ್ರ್ಯಪೂರ್ವದಲ್ಲೇ ಕೃಷಿ ಬಗೆಗಿನ ರಾಯಲ್ ಕಮಿಷನ್ ಹೇಳಿತ್ತು. ಆದರೆ ಈ ಮಾತಿನ ಹಿಂದಿನ ಸತ್ಯವನ್ನು ಗಮನಿಸಿದವರು ನಮ್ಮಲ್ಲಿ ತೀರಾ ಕಡಮೆ. ದೇಶದ ಸಹಕಾರಿ ಸಂಸ್ಥೆಗಳು ಸರಿಯಾಗಿ ಕೆಲಸ ಮಾಡದಿರಲು ಸರ್ಕಾರೀ ಅಧಿಕಾರಶಾಹಿ ಮತ್ತು ರಾಜಕೀಯ ವ್ಯವಸ್ಥೆಯೇ ಕಾರಣ. ಅದರಿಂದಾಗಿ ಅವು ಸ್ಥಗಿತವಾಗಿವೆ. ಆ ಹಿಡಿತದಿಂದ ತಪ್ಪಿಸಿ ಅವುಗಳನ್ನು ಜನರಿಗೆ ಒಪ್ಪಿಸಿದರೆ ನಿಜವಾದ ಪ್ರಜಾಪ್ರಭುತ್ವ ಜಾರಿಯಾದಂತೆ” ಎನ್ನುತ್ತಾರೆ ಡಾ|| ಕುರಿಯನ್.
ಹಾಲಿನಲ್ಲಿ ಸ್ವಾವಲಂಬನೆ
ಹಲವು ಅಡ್ಡಿ-ಆತಂಕಗಳ ನಡುವೆಯೂ ಆಪರೇಶನ್ ಫ್ಲಡ್ನ ಸಹಕಾರಿ ಪ್ರಯೋಗವು ಸಾಕಷ್ಟು ಯಶಸ್ವಿಯಾಯಿತು. ದೇಶ ಹಾಲಿನಲ್ಲಿ ಸ್ವಾವಲಂಬಿಯಾಯಿತು. 2005ರ ಹೊತ್ತಿಗೆ ದೇಶದ 22 ರಾಜ್ಯಗಳ 110 ಲಕ್ಷ ರೈತರು 200 ಡೈರಿ ಸ್ಥಾವರಗಳನ್ನು ನಡೆಸುವ ಮಟ್ಟಕ್ಕೆ ಬಂದರು. ಅದರಿಂದ 1.8 ಕೋಟಿ ಲೀಟರ್ ಹಾಲಿನ ನಿರ್ವಹಣೆ ನಡೆಯುತ್ತಿತ್ತು. ಅದಕ್ಕೆ ಜಾಗತಿಕಮಟ್ಟದ ಶ್ಲಾಘನೆಯೂ ಬಂತು. 1955ರಲ್ಲಿ ದೇಶ 500 ಟನ್ ಬೆಣ್ಣೆ ಆಮದು ಮಾಡಿದರೆ 2005ರ ವೇಳೆಗೆ ಕೇವಲ ಸಹಕಾರಿ ಸಂಸ್ಥೆಗಳು 12 ಸಾವಿರ ಟನ್ ಉತ್ಪಾದಿಸುತ್ತಿದ್ದವು. ಅಮುಲ್ ಮತ್ತು ಆಪರೇಶನ್ ಫ್ಲಡ್ ಇಲ್ಲವಾಗಿದ್ದರೆ ಬೆಣ್ಣೆ ಆಮದು 12 ಸಾವಿರ ಟನ್ಗೆ ಏರುತ್ತಿತ್ತು ಎಂದು ಅಂದಾಜು. 1955ರಲ್ಲಿ 3,000 ಟನ್ ಬೇಬಿಫುಡ್ ಆಮದಾದರೆ ಈಗ ಸಹಕಾರಿ ಸಂಸ್ಥೆಗಳ ಉತ್ಪಾದನೆಯೇ 38 ಸಾವಿರ ಟನ್ ಆಗಿತ್ತು. 1975ರ ಹೊತ್ತಿಗೆ ಎಲ್ಲ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದು ನಿಂತಿತು.
ಆಪರೇಶನ್ ಫ್ಲಡ್ನ ಅಡಿಯಲ್ಲಿ ವಿದೇಶಗಳ (ಇಇಸಿ) ದಾನವಾಗಿ 37 ಸಾವಿರ ಟನ್ ಹಾಲಿನ ಹುಡಿ ಮತ್ತು 11 ಸಾವಿರ ಟನ್ ಕೊಬ್ಬು ದೇಶಕ್ಕೆ ಬಂತು. ಅದನ್ನು ಮಾರಾಟ ಮಾಡಿ ಎನ್ಡಿಡಿಬಿ ತನ್ನ ಖರ್ಚಿಗೆ ಆದಾಯ ಮಾಡಿಕೊಂಡಿತು. ರಾಷ್ಟ್ರೀಯ ಮಿಲ್ಕ್ಗ್ರಿಡ್ ಸ್ಥಾಪಿಸಿ 700 ಪಟ್ಟಣ-ನಗರಗಳಿಗೆ ಹಾಲು ಪೂರೈಸಿದರು. ಆಪರೇಶನ್ ಫ್ಲಡ್ ಯಶಸ್ವಿಯಾಗಬೇಕಿದ್ದರೆ ಹಾಲಿನ ಹುಡಿ ಆಮದಿನ ಅಧಿಕಾರ ತಮಗೆ ಬೇಕೆಂದು ಎನ್ಡಿಡಿಬಿ, ಐಡಿಸಿ ಕೇಳಿದವು. ಅದಕ್ಕೆ ಬದಲಾಗಿ ವಿತರಣೆ ಅಧಿಕಾರವನ್ನು (Canalising Agency) ಸರ್ಕಾರ ನೀಡಿತು. ಅದರಿಂದಲೂ ಒಳ್ಳೆಯ ಕೆಲಸವಾಯಿತು. ಹಾಲಿನ ಹುಡಿ, ಕೊಬ್ಬು (Fat)ಗಳ ಕೊಡುಗೆ ಸ್ವೀಕಾರ, ಮಾರಾಟಗಳನ್ನು ನಿಗದಿತ ನಾಲ್ಕು ವರ್ಷಗಳಲ್ಲಿ ಮುಕ್ತಾಯಗೊಳಿಸಲಾಯಿತು.
275 ನಕಲಿ ಅರ್ಜಿ
ಬೇಬಿಫುಡ್ ಕಾರ್ಖಾನೆಗಳಿಗೆ ವಿದೇಶದಿಂದ ಬಂದ ಹಾಲಿನ ಹುಡಿಯನ್ನು ವಿತರಿಸುವ ವೇಳೆ ಎನ್ಡಿಡಿಬಿಗೆ ಕೆಲವು ವಿಲಕ್ಷಣ ಅನುಭವಗಳು ಕೂಡಾ ಆದವು. ಬೇಬಿಫುಡ್ ಕಾರ್ಖಾನೆಯವರಿಂದ ಆ ಬಗ್ಗೆ ಅರ್ಜಿ ಕರೆದಾಗ ಕರ್ನಾಟಕದಿಂದ 276 ಅರ್ಜಿಗಳು ಬಂದವಂತೆ. ಕರ್ನಾಟಕದಲ್ಲಿದ್ದುದು ಒಂದೇ ಕಾರ್ಖಾನೆ ಎಂಬುದು ಡಾ|| ಕುರಿಯನ್ರಿಗೆ ತಿಳಿದಿತ್ತು. ಅದರ ತನಿಖೆಯನ್ನು ಕೃಷಿ ಇಲಾಖೆಗೆ ವಹಿಸಿದಾಗ ಸತ್ಯ ಬಯಲಾಯಿತು. ಬೇಬಿಫುಡ್ ಮತ್ತು ಸಾಂದ್ರೀಕೃತ ಹಾಲು ಉತ್ಪಾದಕರೆಂದು ವಂಚಿಸಲು ಬಂದವರಿಗೆ ಕುರಿಯನ್ ಈ ರೀತಿ ಎಚ್ಚರಿಕೆ ನೀಡಿದರು: “ನೋಡಿ, ನಿಮ್ಮ ಆಟ ಗೊತ್ತಾಗಿದೆ. ನೀವು ಒಬ್ಬ ಡೈರಿಮ್ಯಾನ್ ಜೊತೆ ವ್ಯವಹರಿಸುತ್ತಿದ್ದೀರಿ. ದೆಹಲಿಯ ಬುದ್ಧಿವಂತರ ಜೊತೆ ಅಲ್ಲ. ಆದ್ದರಿಂದ ಎಚ್ಚರಿಕೆಯಿಂದ ಇರಬೇಕು. ಭಾರತದ ಹಾಲಿನಿಂದ ಬೇಬಿಫುಡ್ ಮತ್ತಿತರ ಡೈರಿ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ನಿಮಗೆ ಲೈಸನ್ಸ್ ನೀಡಲಾಗಿತ್ತು. ವಿದೇಶದಿಂದ ಬಂದ ಹಾಲನ್ನು ನೀವು ಕೇಳಬಾರದು. ಇಂದಿನಿಂದ ನಿಮ್ಮ ಆಮದು ಲೈಸನ್ಸನ್ನು ಪ್ರತಿವರ್ಷ ಶೇ. 25ರಷ್ಟು ಕಡಿತಗೊಳಿಸಲಾಗುವುದು; ಅಷ್ಟರಲ್ಲಿ ನೀವು ದೇಶದ ಹಾಲನ್ನು ಬಳಸಿಕೊಳ್ಳಲು ಸಿದ್ಧರಾಗಬೇಕು.”
ನಾಲ್ಕು ವರ್ಷದೊಳಗೆ ದೇಶದೊಳಗಿನ ಎಲ್ಲ ಹಾಲನ್ನು ಖರೀದಿಸುವಂತೆ ಡಾ|| ಕುರಿಯನ್ ಮಾಡಿದರು. ಅದಕ್ಕೆ ಅವರಿಗೆ ಸರ್ಕಾರದ ಅತ್ಯುನ್ನತ ಮಟ್ಟದವರ ಬೆಂಬಲವಿತ್ತು. ನಾಲ್ಕು ವರ್ಷದ ಅನಂತರ ಉದ್ಯಮಿಗಳು ಏನು ಮಾಡಿದರೂ ವಿದೇಶೀ (ಆಮದು) ಹಾಲು ಸಿಗದಂತೆ ಬಿಗಿ ಮಾಡಿದರು. ಪ್ರತಿವರ್ಷ ಆಮದು ಲೈಸನ್ಸ್ನ ಶೇ. 25ರಷ್ಟು ಕಡಿತ ಆಗುತ್ತಿತ್ತು. ಅದು ಅಮುಲ್ಗೂ ಅನ್ವಯವಾಗಿತ್ತು. ಎನ್ಡಿಡಿಬಿ, ಐಡಿಸಿಗಳಿಗೆ ಸರ್ಕಾರ ವಿಪರೀತ ಅಧಿಕಾರ ನೀಡಿದೆಯೆಂದು ಹಲವರು ಭಾವಿಸಿದರು. ಆದರೆ ಆಪರೇಶನ್ ಫ್ಲಡ್ ಜಾರಿಗೆ ಅದರ ಅಗತ್ಯವಿತ್ತು. ಅನಗತ್ಯವಾಗಿ ದೇಶದ ಆಮದು ಮುಂದುವರಿಸುವವರ ಮೇಲೆ ಕ್ರಮ ಅನಿವಾರ್ಯವಾಗಿತ್ತು. ಮುಂದೆ ಪ್ರಧಾನಿಯಾಗಿ ಇಂದಿರಾಗಾಂಧಿ ಅವರು ಕೂಡ ಡಾ|| ಕುರಿಯನ್ ಬಳಗಕ್ಕೆ ಉತ್ತಮ ಬೆಂಬಲ ನೀಡಿದರು. ಅಧಿಕಾರ ಸಿಕ್ಕಿದ ಕಾರಣ ನಮಗೆ ಭ್ರಷ್ಟಾಚಾರದಿಂದ ದೇಶದ ಹಿನ್ನಡೆಗೆ ಕಾರಣವಾಗುವವರನ್ನು ತಡೆಯಲು ಸಾಧ್ಯವಾಯಿತು. ಆ ಬಗ್ಗೆ ಹೆಮ್ಮೆ ಇದೆ – ಎಂದವರು ಹೇಳಿದ್ದಿದೆ.
ಟಾಟಾ ಸಹಕಾರ ಕೇಳಿದ್ದು
ಬೃಹತ್ ಯೋಜನೆಯಾದ ಆಪರೇಶನ್ ಫ್ಲಡ್ಗೆ ಎಲ್ಲರ ಬೆಂಬಲ ಬೇಕಿತ್ತು. ಆ ಹಿನ್ನೆಲೆಯಲ್ಲಿ ಡಾ|| ಕುರಿಯನ್ ಉದ್ಯಮಿ ಜೆ.ಆರ್.ಡಿ. ಟಾಟಾ ಅವರನ್ನು ಭೇಟಿ ಮಾಡಿ, ಒಂದು ವರ್ಷದ ಮಟ್ಟಿಗೆ ನಿಮ್ಮ ಆರು ಜನ ಮ್ಯಾನೇಜರ್ಗಳನ್ನು ನಮಗೆ ಕೊಡಬಹುದೇ ಎಂದು ಕೇಳಿದರು. ‘ಅದನ್ನು ನಮ್ಮ ಬೋರ್ಡ್ಗೆ ಬಂದು ಹೇಳಿ’ ಎಂದರು ಟಾಟಾ. ಬೋರ್ಡ್ನಲ್ಲಿ ಕುರಿಯನ್ ತಮ್ಮ ಬೇಡಿಕೆಯನ್ನು ಮುಂದಿಟ್ಟಾಗ ಕೆಲವರು ನಕ್ಕರು; ಮತ್ತು ಒಬ್ಬ ಮ್ಯಾನೇಜರ್ನನ್ನೂ ಕೊಡಲಿಲ್ಲ. ಇದು ಕುರಿಯನ್ರಿಗೆ ಕಹಿ ಎನಿಸಿತು. ಕಾರ್ಪೊರೇಟ್ ಮತ್ತು ಸಹಕಾರಿ ವ್ಯವಸ್ಥೆ ಪೂರ್ತಿ ಭಿನ್ನ ಎಂಬುದು ಗಮನಕ್ಕೆ ಬಂತು. ಮತ್ತೆ ತಮ್ಮದೇ ಉತ್ತಮ ಮ್ಯಾನೇಜರ್ಗಳನ್ನು ರೂಪಿಸಿಕೊಂಡರು.
ವಿದೇಶೀ ವಿನಿಮಯ ಹೊರಗೆ ಹೋಗುವುದನ್ನು ತಡೆಯುವುದಕ್ಕೆ ಡಾ|| ಕುರಿಯನ್ ಬದ್ಧರಾಗಿದ್ದರು. ಅದಕ್ಕಾಗಿ ಅವರ ಡೈರಿ ಸಹಕಾರಿ ಸಂಸ್ಥೆ ಪೂರ್ತಿ ಭಾರತೀಯವಾಗಿತ್ತು. ತಜ್ಞರು ಬೇಕಾದಾಗ ಎಫ್ಎಓ ಮುಂತಾದ ಸಂಸ್ಥೆಗಳನ್ನು ಕೇಳುತ್ತಿದ್ದರು. ಆದರೆ ಪಾಲುಗಾರಿಕೆ ಅಥವಾ ಲಾಭದ ಪಾಲನ್ನು ನೀಡುವ ಕ್ರಮ ಇರಲಿಲ್ಲ. ಒಂದು ಹಂತದಲ್ಲಿ ಕೈರಾ ಜಿಲ್ಲಾ ಸಹಕಾರಿ ಯೂನಿಯನ್ ದೇಶದ ಯಾವುದೇ ಬಹುರಾಷ್ಟ್ರೀಯ ಕಂಪೆನಿ (ಎಂಎನ್ಸಿ)ಗಿಂತ ದೊಡ್ಡ ಕಾರ್ಯನಿರ್ವಹಣೆಯನ್ನು ಮಾಡುತ್ತಿತ್ತು.
ಆಪರೇಶನ್ ಫ್ಲಡ್ಗೆ ಎಂಎನ್ಸಿ ಲಾಬಿಯಿಂದ ವಿರೋಧ ನಿರೀಕ್ಷಿತವಿತ್ತು. ಸಾಮಾನ್ಯ ವ್ಯಕ್ತಿ ಬಲಶಾಲಿಯಾಗಿ ಬೆಳೆದದ್ದು ದೇಶದೊಳಗೆ ಕೂಡ ಕೆಲವರಿಗೆ ಇಷ್ಟವಾಗಲಿಲ್ಲ. ಸರ್ಕಾರೀ ಅಧಿಕಾರಿಗಳು ಮತ್ತು ವ್ಯಾಪಾರಿಗಳು ಕೂಡ ಇದನ್ನು ಇಷ್ಟಪಡಲಿಲ್ಲ. ಆದರೆ ಎನ್ಡಿಡಿಬಿ ಮೇಲೆ ನಡೆಸುವ ದಾಳಿ ಸಹಕಾರಿ ಚಳವಳಿಯ ಮೇಲಿನ ದಾಳಿಯಾಗುತ್ತಿತ್ತು. ದೇಶದಲ್ಲಿ ಸಹಕಾರಿ ಚಳವಳಿ ಸಾಕಷ್ಟು ಬಲಶಾಲಿಯಾಗಿದ್ದ ಕಾರಣ ಆ ಫ್ಲಡ್ ನಿಲ್ಲಲಿಲ್ಲ. ಇದರ ಮೇಲೆ ಜನರ ವಿಶ್ವಾಸ ಕೂಡ ಇತ್ತು. ಜನರಿಗೆ ಶಕ್ತಿ ನೀಡುವುದು ಸಹಕಾರಿ ವ್ಯವಸ್ಥೆ ಮಾತ್ರ.
ಮಣಿದ ಕರ್ನಾಟಕ ಸರ್ಕಾರ
ಕೆಲವು ರಾಜ್ಯಗಳು ಹಿಂದೆ ‘ನಮ್ಮ ಶವದ ಮೇಲೆ ಆಪರೇಶನ್ ಫ್ಲಡ್’ ಎಂದಿದ್ದವು. ಅವುಗಳು ಈಗ ತಮ್ಮ ಗೋರಿಯನ್ನು ತಾವೇ ತೋಡಬೇಕಾಯಿತು. ಆ ಫ್ಲಡ್ಗೆ ಬದ್ಧ ವಿರೋಧಿಯಾಗಿದ್ದ ಕರ್ನಾಟಕದಲ್ಲಿ ಎಂತಹ ಪರಿಸ್ಥಿತಿ ಬಂತೆಂದರೆ ವಿಧಾನಸಭೆಯಲ್ಲಿ ಚಪ್ಪಲಿ ತೂರಾಟ ನಡೆಯಿತು. ರಾಜ್ಯಕ್ಕೆ ಆ ಫ್ಲಡ್ ಏಕೆ ಬರುತ್ತಿಲ್ಲ ಎಂಬ ಪ್ರಶ್ನೆಗೆ ಸರ್ಕಾರ ಉತ್ತರಿಸಬೇಕಾಯಿತು. “ಫ್ಲಡ್ನ ಕಾರಣದಿಂದ ಹಲವರ ಅಧಿಕಾರ ಮೊಟಕಾಯಿತು. ಅವರಲ್ಲಿ ದ್ವೇಷವೂ ಉಂಟಾಯಿತು. ಆದರೆ ರೈತರು ಅದರ ಬಗ್ಗೆ ಆಶಾಭಾವನೆಯನ್ನು ಹೊಂದಿ ನಮ್ಮತ್ತ ನೋಡುತ್ತಿದ್ದರು. ರೈತರನ್ನು ಆನಂದ್ಗೆ ಕರೆದು ಅದರ ಯಶಸ್ಸಿನ ಕುರಿತು ವಿವರಿಸಿದೆವು. ಐದು ವರ್ಷ ಆಗುವಾಗ ನಮ್ಮ ಪ್ರಯೋಗದ ವಿವರವನ್ನು ತಿಳಿಸಬೇಕಿತ್ತು. ಅದಕ್ಕಾಗಿ ಸಾಕ್ಷ್ಯಚಿತ್ರ (ಡಾಕ್ಯುಮೆಂಟರಿ)ಗಳನ್ನು ಮಾಡಿದೆವು. ಶ್ಯಾಂ ಬೆನಗಲ್ ಅವರೊಂದಿಗೆ ಪರಿಚಯ ಬೆಳೆದು ನಮ್ಮ ಕ್ಷೀರಕ್ರಾಂತಿಯನ್ನು ಚಿತ್ರಿಸುವ ‘ಮಂಥನ್’ ಸಿನೆಮಾ ನಿರ್ಮಾಣವಾಗಿ ತೆರೆಕಂಡಿತು.
ಮೂರು ಹಂತಗಳಲ್ಲಿ ಜಾರಿ
ಆಪರೇಶನ್ ಫ್ಲಡ್ ಕಾರ್ಯಕ್ರಮವು ಸುಮಾರು ಮೂರು ದಶಕಗಳ ಅವಧಿಯಲ್ಲಿ ಮೂರು ಹಂತಗಳಲ್ಲಿ ಜಾರಿಗೊಂಡಿತು. 1970ರ ದಶಕದಲ್ಲಿ ನಡೆದ ಮೊದಲ ಹಂತಕ್ಕೆ ಐದು ವರ್ಷಗಳ ಬದಲು ಹತ್ತು ವರ್ಷ ಹಿಡಿಯಿತು. ವಿಶ್ವ ಆಹಾರ ಕಾರ್ಯಕ್ರಮ (ಡಬ್ಲ್ಯುಎಫ್ಪಿ) ಪ್ರಕಾರ ಇಇಸಿ ನೀಡಿದ ಹಾಲಿನ ಹುಡಿ, ಬಟರ್ ಆಯಿಲ್ಗಳ ಮಾರಾಟದಿಂದ ಬಂದ ಹಣದಿಂದ ಆಪರೇಶನ್ ಫ್ಲಡ್ ಅನುಷ್ಠಾನ ನಡೆಯಿತು. ದೇಶದ ಮಿಲ್ಕ್ಶೆಡ್ಗಳ ಜೋಡಣೆ ಮತ್ತು ನಾಲ್ಕು ಮಹಾನಗರಗಳ ಹಾಲಿನ ವ್ಯವಸ್ಥೆ ಅದರಲ್ಲಿ ಮುಖ್ಯವಾಗಿತ್ತು.
ಡಾ|| ಕುರಿಯನ್ ಅವರಿಗೆ ಎದುರಾದ ದೊಡ್ಡ ತೊಂದರೆ ಸರ್ಕಾರೀ ಅಧಿಕಾರಿಗಳದ್ದೇ. ಅಧಿಕಾರಿಗಳಿಂದ ಹಿಡಿದು ಮಂತ್ರಿಗಳವರೆಗೆ ಎಲ್ಲರೂ ಹೇಳುವುದು ಒಂದೇ: “ಸರ್ಕಾರ ಇದನ್ನು ಪರಿಶೀಲಿಸುತ್ತದೆ” ಎಂಬುದಾಗಿ. ಇದರಲ್ಲಿ ಸರ್ಕಾರ ಅಂದರೆ ಯಾರು? ಅಲ್ಲಿ ಏನು ನಡೆಯುತ್ತದೆ ಎಂಬುದೇ ಕುರಿಯನ್ರಿಗೆ ದೊಡ್ಡ ತಲೆನೋವಾಗಿ ದೂರನ್ನು ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಬಳಿಗೇ ಒಯ್ದರು. ಇವರಿಗಾದ ಅನುಭವ ಕೇಳಿ ಮೊರಾರ್ಜಿ ನಕ್ಕರು. ಎನ್ಡಿಡಿಬಿ ಕಡತಗಳನ್ನು ಪರಿಶೀಲಿಸಲು ಕಾರ್ಯದರ್ಶಿಗಳ ಒಂದು ಸಮಿತಿಯನ್ನು ರಚಿಸಿದರು; ಅಲ್ಲಿಗೆ ಒಂದು ಮಟ್ಟದಲ್ಲಿ ಸಮಸ್ಯೆ ಪರಿಹಾರಗೊಂಡಿತು.
ವಿಶ್ವಬ್ಯಾಂಕ್ ಶ್ಲಾಘನೆ
ಆಪರೇಶನ್ ಫ್ಲಡ್ನ ಎರಡನೇ ಹಂತ 1981-85ರ ಅವಧಿಯಲ್ಲಿ ನಡೆಯಿತು. ಆ ಹೊತ್ತಿಗೆ ವಿಶ್ವಬ್ಯಾಂಕ್ನ ಸಾಲ 200 ಕೋಟಿ ರೂ. ಸಿಕ್ಕಿತು. ಮಿಲ್ಕ್ಶೆಡ್ಗಳ ಸಂಖ್ಯೆ 18 ರಿಂದ 136ಕ್ಕೇರಿತು. ಆಪರೇಶನ್ ಕೆಳಗಿನ ಡೈರಿ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂತು.
ಆಪರೇಶನ್ ಫ್ಲಡ್ನ ಮೂರನೇ ಹಂತ 1985 ರಿಂದ 1996ರ ವರೆಗೆ ವಿಸ್ತರಿಸಿಕೊಂಡಿತು. 42 ಸಾವಿರ ಇದ್ದ ಸಹಕಾರಿ ಡೈರಿಗಳ ಸಂಖ್ಯೆ 72 ಸಾವಿರಕ್ಕೇರಿದರೆ, ಮಿಲ್ಕ್ಶೆಡ್ಗಳು 173 ಆದವು. ಈ ಹಂತದಲ್ಲಿ ಸಂಶೋಧನೆಗೆ ಒತ್ತು ನೀಡಲಾಯಿತು. 1998ರಲ್ಲಿ ಪ್ರಕಟವಾದ ವಿಶ್ವಬ್ಯಾಂಕ್ ವರದಿಯು ಆಪರೇಶನ್ ಫ್ಲಡ್ ಕಾರ್ಯಕ್ರಮವನ್ನು ಶ್ಲಾಘಿಸುತ್ತ, ಬ್ಯಾಂಕ್ ನೀಡಿದ 200 ಕೋಟಿ ರೂ. ಸಾಲದಿಂದ ಪ್ರತಿವರ್ಷ 24 ಸಾವಿರ ಕೋಟಿ ರೂ. ವ್ಯವಹಾರ ನಡೆಯುತ್ತಿದೆ ಎಂದು ಹೇಳಿತು.
ಈ ನಡುವೆ ಗುಜರಾತಿನ ಹಾಲು ಉತ್ಪಾದಕರ ಸಹಕಾರಿ ಸಂಘಗಳ ನಡುವೆ ಪರಸ್ಪರ ಸ್ಪರ್ಧೆ ಉಂಟಾದಾಗ ಅದರ ತಡೆಗೆ ಕ್ರಮಕೈಗೊಳ್ಳಲಾಯಿತು. ಅದರಂತೆ 1973ರಲ್ಲಿ ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಫೆಡರೇಶನ್ ರಚಿಸಿದಾಗ ಅದರ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿ ಕುರಿಯನ್ ಅವರನ್ನೇ ಆರಿಸಿದ್ದರು. ಆಗ ಅವರು ಅಮುಲ್ನ ಜನರಲ್ ಮ್ಯಾನೇಜರ್ ಹುದ್ದೆಯನ್ನು ಬೇರೆಯವರಿಗೆ ವಹಿಸಿದರು.
(ಸಶೇಷ)
ಪ್ರಧಾನಿ ಶಾಸ್ತ್ರಿ ಅವರ ‘ಅಜ್ಞಾತವಾಸ’
1964ರ ಕೊನೆಯ ಭಾಗದಲ್ಲಿ ಕೈರಾ ಸಹಕಾರಿ ಯೂನಿಯನ್ ತನ್ನ ಹೊಸ ಪಶುಆಹಾರ ಮಿಶ್ರಣ ಕಾರ್ಖಾನೆಯನ್ನು ಆರಂಭಿಸಲು ಮುಂದಾಯಿತು. ಆಧುನಿಕ ಸ್ವಯಂಚಾಲಿತ ಸ್ಥಾವರವಾದ ಅದು ದೇಶದಲ್ಲೇ ಪ್ರಥಮವಾಗಿದ್ದು, ಡೈರಿ ಉದ್ಯಮದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿತ್ತು. ಅದನ್ನು ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿಯವರು ಉದ್ಘಾಟಿಸಬೇಕೆಂದು ಸಂಸ್ಥೆ ಬಯಸಿತು. ಸಣ್ಣ ಪಟ್ಟಣ ಆನಂದ್ನಲ್ಲಿ ಅವರು ಉಳಿಯಬಹುದಾದ ಹೊಟೇಲ್ ಇರಲಿಲ್ಲ. ಆಗ ಸಂಸ್ಥೆಗೆ ಬಂದ ಅತಿಗಣ್ಯರು (ವಿವಿಐಪಿ) ಡಾ|| ಕುರಿಯನ್ ಅವರ ಮನೆಯಲ್ಲೇ ಉಳಿಯುತ್ತಿದ್ದರು. ಸೆಕ್ಯುರಿಟಿ ಡ್ರಿಲ್ನಿಂದಾಗಿ ಅದು ಕಷ್ಟವೆನಿಸಿತು.
ಜೊತೆಗೆ ಶಾಸ್ತ್ರಿಯವರು ತಾವು ಹಳ್ಳಿಯ ಸಣ್ಣ ರೈತರ ಮನೆಯಲ್ಲಿ ಉಳಿಯಬೇಕೆನ್ನುವ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಪ್ರಧಾನಿಯ ಇಂತಹ ಅಪರೂಪದ ಬೇಡಿಕೆ ಆತಂಕವನ್ನೇ ಸೃಷ್ಟಿಸಿತು. ಗುಜರಾತ್ ಮುಖ್ಯಮಂತ್ರಿಗಳು ಪ್ರಧಾನಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡುವಂತೆ ಕುರಿಯನ್ರನ್ನೇ ಕೇಳಿದರು. ಪ್ರಧಾನಿ ಒಂದು ಹಳ್ಳಿಗೆ ಹೋಗುವುದೆಂದರೆ ಬರುವ ಮೊದಲೇ ಅಲ್ಲಿ ಕನಿಷ್ಠ 300 ಪೊಲೀಸರು ಇರಬೇಕಾಗುತ್ತದೆ. ಊರಿನ ಜನಸಂಖ್ಯೆಯೇ ಅಷ್ಟಿಲ್ಲ; ಆಗ ಅದು ಹಳ್ಳಿಯಲ್ಲ; ಪೊಲೀಸ್ ಕ್ಯಾಂಪ್ ಆಗುತ್ತದೆ. ಅದನ್ನೇನು ನೋಡುವುದು? ಪ್ರಧಾನಿಗೆ ಹಳ್ಳಿಯನ್ನು ಸಹಜಸ್ಥಿತಿಯಲ್ಲಿ ನೋಡಬೇಕಿದ್ದರೆ ಭದ್ರತೆಯ ಹೊಣೆ ಕುರಿಯನ್ಗೆ ಎಂದಾಯಿತು.
ರಾಜ್ಯದ ಗೃಹಕಾರ್ಯದರ್ಶಿ ಹೆರೆಡಿಯಾ ಇದಕ್ಕೊಪ್ಪಲಿಲ್ಲ. “ಏನಾದರೂ ಘಟನೆ ಸಂಭವಿಸಿದರೆ ತಲೆಹೋಗುವುದು ನನ್ನದು; ಬೇರೆ ಯಾರಿಗೂ ವಹಿಸಲಾರೆ” ಎಂದುಬಿಟ್ಟರು. ಆದರೆ ಅವರಿಗೆ ಕುರಿಯನ್ರ ಕಷ್ಟ ಅರ್ಥವಾಯಿತು. ಅದಕ್ಕೊಂದು ತಂತ್ರ ರೂಪಿಸಿದರು. ಪ್ರಧಾನಿ ಹಳ್ಳಿಗೆ ಬರುತ್ತಿದ್ದಾರೆಂದು ಯಾರಿಗೂ ಹೇಳುವುದು ಬೇಡ. ಅಥವಾ ಯಾವ ಹಳ್ಳಿಗೆ ಹೋಗುತ್ತಿದ್ದಾರೆಂದು ತಿಳಿಸುವುದಲ್ಲ, ಆಗ ಪ್ರಧಾನಿ ಸುರಕ್ಷಿತರಾಗಿರುತ್ತಾರೆ. ಇದು ಒಪ್ಪಿತವಾಯಿತು. ಆದರೆ ರಹಸ್ಯ ಕಾಪಾಡುವುದು ಅತ್ಯಗತ್ಯ.
ಹೆರೆಡಿಯಾ ಮತ್ತು ಕುರಿಯನ್ ಚರ್ಚಿಸಿ ಪ್ರಧಾನಿ ವಾಸ್ತವ್ಯಕ್ಕೆ ಆನಂದ್ನಿಂದ ಕೆಲವು ಕಿ.ಮೀ. ದೂರದ ಅಜಾರ್ಪುರವನ್ನು ಆರಿಸಿದರು. ಹಾಲು ಉತ್ಪಾದಕ ರೈತನನ್ನು ಕೂಡ ಕುರಿಯನ್ ಆರಿಸಿ (ರಮಣ್ಭಾಯಿ ಪೂಂಜಾಭಾಯಿ ಪಟೇಲ್) ಇಬ್ಬರು ವಿದೇಶೀಯರು ತಮ್ಮಲ್ಲಿಗೆ ಬರುತ್ತಿದ್ದಾರೆ; ಒಂದು ರಾತ್ರಿ ಅವರ ವಸತಿಗೆ ವ್ಯವಸ್ಥೆ ಮಾಡಬಹುದೆ?” ಎಂದು ಕೇಳಿದರು. ಆತನಿಗೆ ಇದೇನೆಂದು ಅರ್ಥವಾಗದಿದ್ದರೂ, ವಿಶೇಷವೇನೂ ಮಾಡುವುದು ಬೇಡವೆಂದು ಒಪ್ಪಿಸಿದ್ದಾಯಿತು.
ನಿಗದಿತ ದಿನ ಸಂಜೆ 5.30ರ ಹೊತ್ತಿಗೆ ಬಂದ ಪ್ರಧಾನಿ ಶಾಸ್ತ್ರಿ ಅವರಿಗೆ ಡಾ|| ಕುರಿಯನ್ ಅವರ ಮನೆಯಲ್ಲಿ ಗೌರವರಕ್ಷೆ ನೀಡಲಾಯಿತು. ಜೊತೆಗೆ ಕುರಿಯನ್ ಜಿಲ್ಲಾಧಿಕಾರಿಗೆ ಒಂದು ಮುಚ್ಚಿದ ಲಕೋಟೆಯನ್ನು ನೀಡಿದರು. ಗೃಹಕಾರ್ಯದರ್ಶಿ ನೀಡಿದ ಪತ್ರ ಅದರಲ್ಲಿದ್ದು, ಪ್ರಧಾನಿ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆಯಾಗಿದ್ದು, ಅದನ್ನು ಕುರಿಯನ್ ತಿಳಿಸುತ್ತಾರೆ ಎಂದು ಅದರಲ್ಲಿತ್ತು. ಅಲ್ಲಿಂದ ಕುರಿಯನ್ ಮತ್ತು ಜಿಲ್ಲಾಧಿಕಾರಿ ಪ್ರಧಾನಿ ಅವರನ್ನು ಸೀದಾ ರಮಣ್ಭಾಯಿ ಪಟೇಲ್ ಅವರ ಮನೆಗೆ ಕರೆದೊಯ್ದರು. ಆಗ ಕುರಿಯನ್ ಮನೆಮಾಲೀಕರ ಬಳಿ “ನಿಜವಾಗಿ ನಿಮ್ಮ ಅತಿಥಿಗಳು ಯಾರೆಂದು ಈಗ ಹೇಳುತ್ತಿದ್ದೇವೆ. ಇವರು ದೇಶದ ಪ್ರಧಾನಿ ಮತ್ತು ಗುಜರಾತ್ ಮುಖ್ಯಮಂತ್ರಿ” ಎಂದರು. ಗಾಬರಿಗೊಂಡ ರಮಣ್ಭಾಯಿ “ನನ್ನ ಮನೆಯಲ್ಲಿ ಪ್ರಧಾನಿಯೆ? ಇದೇನು ಮಾಡುತ್ತಿದ್ದೀರಿ ಸ್ವಾಮಿ” ಎಂದು ಉದ್ಗರಿಸಿದರು. “ಹೆದರಬೇಡಿ. ಅವರು ನಿಮ್ಮ ನಮ್ಮಂತೆಯೇ ಒಳ್ಳೆಯವರು. ನಿಮ್ಮ ಸಾಮಾನ್ಯ ಅತಿಥಿಗಳಂತೆ ನೋಡಿಕೊಂಡರೆ ಸಾಕು” ಎಂದು ಸಮಾಧಾನಿಸಿದರು. ಜಿಲ್ಲಾಧಿಕಾರಿಯನ್ನು ಅವರಿಗೆ ಪರಿಚಯಿಸಿ, ಪ್ರಧಾನಿಯನ್ನು ಅವರಿಗೆ ಒಪ್ಪಿಸಿ ಕುರಿಯನ್ ಮನೆಗೆ ಮರಳಿದರು. ಪ್ರಧಾನಿ ಜೊತೆ ಬಂದ ಉಳಿದವರೆಲ್ಲ ಅಲ್ಲಿದ್ದರು.
ರಮಣ್ಭಾಯಿ ಮತ್ತು ಮನೆಯವರನ್ನು ಮಾತನಾಡಿಸಿದ ಪ್ರಧಾನಿ ಶಾಸ್ತ್ರಿಯವರು ಅವರೊಂದಿಗೆ ಸರಳವಾದ ಊಟವನ್ನು ಸವಿದರು. ವಿಶೇಷ ಅಡುಗೆ ಬೇಡವೆಂದು ಕುರಿಯನ್ರೇ ಹೇಳಿದ್ದರು. ಅನಂತರ ಹಳ್ಳಿಯಲ್ಲೊಂದು ವಾಕಿಂಗ್ ಹೋದರು. ಜನರಿಗೆ ಅವರ ಗುರುತು ಸಿಕ್ಕಿತಾದರೂ ಶಾಸ್ತ್ರಿಜೀ ಅವರೊಂದಿಗೆ ಮುಕ್ತವಾಗಿ ಬೆರೆತರು. ಅವರ ಮನೆಗಳಿಗೆ ಹೋಗಿ ಮನೆಮಂದಿಯೊಂದಿಗೆ ಕುಳಿತು ಮಾತನಾಡಿದರು. ಅವರ ಜೀವನ ಹೇಗೆ ಸಾಗುತ್ತಿದೆ? ಹಳ್ಳಿಯ ಹೆಂಗಸರು ಏನು ಮಾಡುತ್ತಿದ್ದಾರೆ? ಅವರ ಬಳಿ ಎಮ್ಮೆಗಳು ಇವೆಯೆ? ಹಾಲಿಗೆ ಅವರಿಗೆ ಎಷ್ಟು ಹಣ ಸಿಗುತ್ತಿದೆ? ಹಾಲಿನ ಉತ್ಪಾದನೆ ಹೆಚ್ಚಿಸುವುದಕ್ಕೆ ಅವರಿಗೆ ಏನಾದರೂ ಪ್ರೋತ್ಸಾಹಕ (incentives) ನೀಡಲಾಗುತ್ತಿದೆಯೆ? ಅವರು ಈ ಸಹಕಾರಿ ಸಂಘಗಳ ಸದಸ್ಯರಾಗಿರುವುದೇಕೆ? ಅವರ ಊರಿನ ಸಹಕಾರಿ ಸಂಘ ಹೇಗೆ ಕೆಲಸ ಮಾಡುತ್ತಿದೆ ಮುಂತಾದ ವಿಷಯಗಳನ್ನು ಮತ್ತೆ ಮತ್ತೆ ಕೇಳಿ ತಿಳಿದುಕೊಂಡರು.
ಊರಿನ ಹರಿಜನರ ಮನೆಗಳಿಗೆ ಕೂಡ ಪ್ರಧಾನಿ ಭೇಟಿ ನೀಡಿದರು. ಅವರೊಂದಿಗೆ ಕುಳಿತು ಮಾತನಾಡಿದರು. ಮುಸ್ಲಿಮರ ಮನೆಗಳಿಗೂ ಹೋಗಿ ಮಾತುಕತೆ ನಡೆಸಿದರು. ರಾತ್ರಿ 2 ಗಂಟೆಯಾದರೂ ಈ ಮಾತುಕತೆ, ಜನರ ಸಮಸ್ಯೆ ಕೇಳುವುದು ಮುಗಿಯಲಿಲ್ಲ. ಮರುದಿನ ಬೆಳಗ್ಗೆ 7 ಗಂಟೆಗೇ ಅವರ ಕಾರ್ಯಕ್ರಮ ಆರಂಭವಾಗಬೇಕಿತ್ತು. ಆದ್ದರಿಂದ ಒತ್ತಾಯಪೂರ್ವಕವಾಗಿ ಅವರನ್ನು ರಮಣ್ಭಾಯಿ ಅವರ ಮನೆಗೆ ಕರೆದುಕೊಂಡು ಬಂದರು. ಮರುದಿನ ಬೆಳಗ್ಗೆ ಪ್ರಧಾನಿ ಶಾಸ್ತ್ರಿ ಅವರು ಹಳ್ಳಿಯ ಹಾಲಿನ ಸೊಸೈಟಿಗೆ ಭೇಟಿ ನೀಡಿ ವಿಷಯ ತಿಳಿದುಕೊಂಡರು. ಆಗ ಡಾ|| ಕುರಿಯನ್ ಅಲ್ಲಿಗೆ ಬಂದು ಆ ಸೊಸೈಟಿಗಳು ಕೆಲಸ ಮಾಡುವ ರೀತಿ ಬಗ್ಗೆ ತಿಳಿಸಿದರು. ಅನಂತರವೇ ಪ್ರಧಾನಿ ಆನಂದ್ಗೆ ಬಂದು ಎಲ್ಲರೊಂದಿಗೆ ಸೇರಿಕೊಂಡರು; ಮತ್ತು ಪಶುಆಹಾರದ ಕಾರ್ಖಾನೆಯನ್ನು ಉದ್ಘಾಟಿಸಿದರು. ಇದು ಪ್ರಧಾನಿ ಶಾಸ್ತ್ರಿಯವರ ಕೆಲಸದ ಶೈಲಿಯಾಗಿತ್ತು!
ಶ್ಯಾಂ ಬೆನಗಲ್ ಚಿತ್ರ ‘ಮಂಥನ್’
“ರೇಡಿಯಸ್ ಜಾಹೀರಾತು ಸಂಸ್ಥೆಯಲ್ಲಿದ್ದ ಚಿತ್ರನಿರ್ದೇಶಕ ಶ್ಯಾಂ ಬೆನಗಲ್ ಅವರು ಅಮುಲ್ ಸಂಸ್ಥೆಗೆ ಹಲವು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿಕೊಟ್ಟಿದ್ದರು. ಒಂದು ದಿನ ಶ್ಯಾಂ ಅವರು ನನ್ನಲ್ಲಿ ಸಹಕಾರಿ ಸಂಘಗಳ ಸ್ಥಾಪನೆ ಮತ್ತು ಆಪರೇಶನ್ ಫ್ಲಡ್ನ ಅನುಷ್ಠಾನದಲ್ಲಿ ಹಲವು ಆಕರ್ಷಕ ಮತ್ತು ಭಾವನೆಗಳಿಗೆ ಪೋಷಕವಾದ ಮಾನವೀಯ ಕಥೆಗಳಿವೆ. ಸಾಕ್ಷ್ಯಚಿತ್ರಗಳು ಮಾಹಿತಿ ಮತ್ತು ಅಂಕಿ-ಅಂಶಗಳನ್ನು ನೀಡುವುದಕ್ಕೆ ಸರಿ. ಆದರೆ ಇಲ್ಲಿ ನಾನು ಕಾಣುತ್ತಿರುವ ಮಾನವೀಯ ಕಥೆಗಳಿಗೆ ಸಾಕ್ಷ್ಯಚಿತ್ರದಲ್ಲಿ ನ್ಯಾಯ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಈ ಹಳ್ಳಿಗಳ ಜನರ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನಾನು ದಾಖಲಿಸಬೇಕು; ಸಾಕ್ಷ್ಯಚಿತ್ರದಲ್ಲಿ ಅದು ಶುಷ್ಕವಾಗಿ ಬಿಡುತ್ತದೆ” ಎಂದರು.
‘ಹಾಗಿದ್ದರೆ ಒಂದು ಕಥಾಚಿತ್ರ ನಿರ್ಮಿಸಿ’ ಎಂದು ಕುರಿಯನ್ ಒಪ್ಪಿಗೆ ನೀಡಿದರು. ಚಿತ್ರನಿರ್ಮಾಣಕ್ಕೆ ಬೇಕಾದ ಹಣ ಎಲ್ಲಿಂದ ಬರುತ್ತದೆ ಎನ್ನುವ ಒಂದು ಸಣ್ಣ ಪ್ರಶ್ನೆ ಇತ್ತು. ಆಗ ಕುರಿಯನ್ ತಮ್ಮ ಸಹೋದ್ಯೋಗಿಗಳಲ್ಲಿ ಚರ್ಚಿಸಿದಾಗ ಗುಜರಾತಿನ ಎಲ್ಲ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಸದಸ್ಯರನ್ನು ಕೇಳುವುದೆಂದು ತೀರ್ಮಾನವಾಯಿತು. ರಾಜ್ಯದ ಪ್ರತಿಯೊಬ್ಬ ಹಾಲು ಉತ್ಪಾದಕ ತಲಾ ಒಂದು ರೂ. ನೀಡಲು ಮುಂದೆ ಬಂದರು. ಅದರಿಂದ ಚಿತ್ರನಿರ್ಮಾಣಕ್ಕೆ ಬೇಕಾದಷ್ಟು ಹಣ ಬಂತು. ಹೀಗೆ ‘ಮಂಥನ್’ ನಿರ್ಮಾಣಕ್ಕೆ ಬೇಕಾದಷ್ಟು ಹಣ ಬಂದದ್ದು ಗುಜರಾತಿನ ಹಾಲು ಉತ್ಪಾದಕರಿಂದ. ಅದೊಂದು ಕಡಮೆ ಬಜೆಟ್ನ ಉತ್ತಮ ಗುಣಮಟ್ಟದ ಚಿತ್ರವಾಗಿದ್ದು 10 ಲಕ್ಷ ರೂ. ಅದರ ವೆಚ್ಚ. ಕಪ್ಪು ಹಣಕ್ಕೆ ಹೆಸರಾದ ಬಾಲಿವುಡ್ ಚಿತ್ರಗಳ ಮಧ್ಯೆ ಇದು ಪೂರ್ತಿ ಲೆಕ್ಕ ಕೊಟ್ಟು ಮಾಡಿದ ಚಿತ್ರ.
“ಒಂದು ಕೆಲಸಕ್ಕೆ ಸರಿಯಾದ ವ್ಯಕ್ತಿಯನ್ನು ಆರಿಸಿ ನಮಗೇನು ಬೇಕೆಂದು ಹೇಳಿದ ಮೇಲೆ ಆತನಲ್ಲಿ ಪೂರ್ತಿ ವಿಶ್ವಾಸ ಇರಿಸಬೇಕು; ಮಧ್ಯೆ ಹಸ್ತಕ್ಷೇಪ ಮಾಡಬಾರದು. ಆಗ ಕೆಲಸ ಯಶಸ್ವಿ ಆಗಿಯೇ ಆಗುತ್ತದೆ. ಇದು ನಾನು ತ್ರಿಭುವನದಾಸ್ರಿಂದ ಕಲಿತ ಪಾಠ. ಮಂಥನ್ ಚಿತ್ರ ನಿರ್ಮಾಣದಲ್ಲೂ ಅದನ್ನೇ ಅನುಸರಿಸಲಾಯಿತು. ನಮ್ಮ ಸಹಕಾರಿ ಸಂಘಗಳು ಬೆಳೆದುಬಂದ ರೀತಿಯನ್ನು ಶ್ಯಾಂ ಬೆನಗಲ್ ಹಲವು ವರ್ಷಗಳಿಂದ ನೋಡಿದ್ದರು. ಆನಂದ್ ಪ್ರಯೋಗದಲ್ಲಿ ಅವರು ಒಂದಲ್ಲ ಒಂದು ರೀತಿಯಲ್ಲಿ ಒಳಗೊಂಡಿದ್ದರು; ಮೊದಲು ಅಮುಲ್ ಬಗ್ಗೆ, ಅನಂತರ ಎನ್ಡಿಡಿಬಿಯ ಆಪರೇಶನ್ ಫ್ಲಡ್ ಕುರಿತು ಸಾಕ್ಷ್ಯಚಿತ್ರಗಳನ್ನು ತಯಾರಿಸಿದರು. ಈ ಚಳವಳಿಯ ಮಾನವೀಯ ಮುಖದ ಕುರಿತು ಕಥಾಚಿತ್ರ ನಿರ್ಮಿಸಲು ಇವರಿಗಿಂತ ಉತ್ತಮ ನಿರ್ದೇಶಕರು ಸಿಗುವುದು ಸಾಧ್ಯವಿರಲಿಲ್ಲ” ಎಂದಿದ್ದಾರೆ ಡಾ|| ಕುರಿಯನ್.
ಶ್ಯಾಂ ಬೆನಗಲ್ ತಮ್ಮ ಕೆಲಸವನ್ನು ಚೆನ್ನಾಗಿಯೇ ಮಾಡಿದರು. ಅತ್ಯಂತ ಪ್ರತಿಭಾವಂತರಾದ ವೃತ್ತಿಪರ ವ್ಯಕ್ತಿಗಳನ್ನೇ ಆರಿಸಿತಂದರು. ಪ್ರಸಿದ್ಧ ನಾಟಕಕಾರ ವಿಜಯ್ ತೆಂಡೂಲ್ಕರ್ ಅವರು ಗುಜರಾತಿನ ಹಳ್ಳಿಗಳಲ್ಲಿ ಹಲವು ವಾರ ಸುತ್ತಾಡಿ ಜನರೊಂದಿಗೆ ಮಾತುಕತೆ ನಡೆಸಿ ಕಥೆ ಬರೆದರು. ಗುಜರಾತಿನ ವಿವಿಧ ಭಾಗಗಳಲ್ಲಿ ಸುಮಾರು 9 ತಿಂಗಳು ಸಿನೆಮಾದ ಶೂಟಿಂಗ್ ನಡೆಯಿತು. ಚಿತ್ರದ ತಾರಾಗಣವು ಭರ್ಜರಿಯಾಗಿದ್ದು, ಸ್ಮಿತಾ ಪಾಟೀಲ್, ಗಿರೀಶ್ ಕಾರ್ನಾಡ್, ನಾಸಿರುದ್ದೀನ್ ಶಾ, ಅನಂತ್ನಾಗ್, ಕುಲಭೂಷಣ್ ಖರ್ಬಂದಾ, ಅಮರೀಶ್ ಪುರಿ ಅವರಂತಹ ಘಟಾನುಘಟಿಗಳು ಅದರಲ್ಲಿದ್ದರು. ಅತ್ಯುತ್ತಮ ನಿರ್ದೇಶನ, ಅಭಿನಯಗಳಿದ್ದ ‘ಮಂಥನ್’ 1976ರಲ್ಲಿ ಬಿಡುಗಡೆಗೊಂಡಿತು. ದೇಶದಾದ್ಯಂತ ಪ್ರದರ್ಶನ ನಡೆದು ಗಲ್ಲಾಪೆಟ್ಟಿಗೆಯಲ್ಲಿ ಜಯಗಳಿಸಿದ್ದಲ್ಲದೆ ಹಲವು ಪ್ರಶಸ್ತಿಗಳನ್ನು ಕೂಡ ಬಾಚಿಕೊಂಡಿತು; ಹಳ್ಳಿಹಳ್ಳಿಗಳಲ್ಲಿ ಅದರ ಪ್ರದರ್ಶನ ನಡೆದು ಹಾಲು ಉತ್ಪಾದಕ ರೈತರಿಗೆ ಮಾಹಿತಿಯ ಜೊತೆಗೆ ಮಾನವೀಯ ಮೌಲ್ಯಗಳನ್ನೂ ತೆರೆದಿಟ್ಟಿತು. ಸಹಕಾರಿ ವ್ಯವಸ್ಥೆ ತರುವ ಸಾಮಾಜಿಕ-ಆರ್ಥಿಕ ಸುಧಾರಣೆ ಅಲ್ಲಿ ಅದ್ಭುತವಾಗಿ ಚಿತ್ರಿತವಾಗಿದೆ.