ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
61ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ನವೆಂಬರ್ 2022 > ಮೃತ್ಯುಂಜಯ ಸಾವರಕರ್

ಮೃತ್ಯುಂಜಯ ಸಾವರಕರ್

ದ್ರಷ್ಟಾರ  ಸಾವರಕರ್-9

-ಎಸ್‍.ಆರ್‍. ರಾಮಸ್ವಾಮಿ

ಸಾವರಕರರ ಬಗೆಗೆ ಇಂದಿರಾಗಾಂಧಿಯವರಿಗಿದ್ದ ಗೌರವ ಉಲ್ಲೇಖನೀಯ. ಸಾವರಕರರ ನಿಧನವಾದಾಗ (16-2-1966) ಅದು ದೇಶಕ್ಕೆ ಭರಿಸಲಾಗದ ನಷ್ಟ ಎಂದು ಶೋಕ ವ್ಯಕ್ತ ಮಾಡಿದ್ದರು. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲೇ ಸಾವರಕರರ ಸ್ಮರಣೆಯ ಅಂಚೆಚೀಟಿ ಬಿಡುಗಡೆಯಾಗಿತ್ತು. ಸಾವರಕರ್ ನ್ಯಾಸಕ್ಕೆ ಇಂದಿರಾಗಾಂಧಿ ತಮ್ಮ ಸ್ವಂತ ಖಾತೆಯಿಂದ ರೂ. 11,000 ದೇಣಿಗೆ ಕೊಟ್ಟರು. ಸಾವರಕರರ ಬಗೆಗೆ ಒಂದು ಒಳ್ಳೆಯ ಸಾಕ್ಷ್ಯಚಿತ್ರವನ್ನು (ಡಾಕ್ಯುಮೆಂಟರಿ) ಮಾಡಿಸುವಂತೆ 1983ರಲ್ಲಿ ಫಿಲ್ಮ್ ಡಿವಿಜನ್ನಿಗೆ ಆದೇಶ ನೀಡಿದ್ದರು. ಈ ಸಂಗತಿಗಳನ್ನು ಸ್ಮರಿಸುವಾಗ ಸಾವರಕರರ ಬಗೆಗೆ ಇಂದಿರಾಗಾಂಧಿಯವರ ಉತ್ತರಾಧಿಕಾರಿಗಳ ವರ್ತನೆ ಬೇಸರ ತರಿಸುತ್ತದೆ.

ತಾಯ್ನಾಡಿಗಾಗಿ ವಿನಾಯಕ ದಾಮೋದರ ಸಾವರಕರರಷ್ಟು ತ್ಯಾಗ ಮಾಡಿದವರ ಮತ್ತು ಬಂಧನದಲ್ಲಿ ಅವರಷ್ಟು ಬವಣೆಗಳನ್ನು ಅನುಭವಿಸಿದವರ ಅನ್ಯ ನಿದರ್ಶನ ದುರ್ಲಭವೆಂದರೆ ಅದರಲ್ಲಿ ರವೆಯಷ್ಟೂ ಅತ್ಯುಕ್ತಿಯ ಅಂಶ ಇರದು. ಸಾವರಕರರನ್ನು ಕುರಿತ ಜೀವನಕಥನಗಳು ಹಲವಾರು ಭಾಷೆಗಳಲ್ಲಿ ಲಭ್ಯವಿವೆ. ಕಳೆದ ಮೂರು-ನಾಲ್ಕು ವರ್ಷಗಳಲ್ಲಿಯೆ ಉದಯ್ ಮಾಹುರಕರ್ ಬರೆದ ‘Veer Savarkar: The Man Who Could Have Prevented Partition’, ವಿಕ್ರಮ್ ಸಂಪತ್ ಬರೆದ ‘Savarkar” Echoes from A Forgotten Past’ ಸೇರಿದಂತೆ ಹಲವು ಗ್ರಂಥಗಳೂ ಗಣನೀಯ ಸಂಖ್ಯೆಯ ಶೋಧಲೇಖನಗಳೂ ಪ್ರಕಟಗೊಂಡು ಸಂಚಲನವನ್ನು ಸೃಷ್ಟಿಸಿವೆ. ಸಾವರಕರ್ ನಿಧನರಾಗಿ (26-2-1966) ಹತ್ತಿರಹತ್ತಿರ ಐವತ್ತೇಳು ವರ್ಷಗಳೇ ಸಂದಿವೆ. ಆದರೂ ಸ್ವಾತಂತ್ರ್ಯವೀರರಾಗಿ ಸಾವರಕರ್ ನಿರ್ವಹಿಸಿದ ಅತುಲನೀಯ ಪಾತ್ರದ ಸ್ಮರಣೆಯೂ ಅವರು ಸ್ವೀಯ ಚಿಂತನೆಯಿಂದ ಆವಿಷ್ಕರಿಸಿ ಪ್ರಚುರಗೊಳಿಸಿದ ರಾಷ್ಟ್ರೀಯತೆಯ ದರ್ಶನದ ಸ್ಮರಣೆಯೂ ವರ್ಷಗಳುದ್ದಕ್ಕೂ ಮುಂದುವರಿದಿರುವ ರೀತಿ ಹೋಲಿಕೆಯಿಲ್ಲದ್ದು. ಸಾವರಕರರ ಬಗೆಗೆ ದಶಕಗಳುದ್ದಕ್ಕೂ ಬಳಕೆಯಾಗುತ್ತಬಂದಿರುವ ‘ಮೃತ್ಯುಂಜಯ’ ಎಂಬ ವರ್ಣನೆ ಸಮುಚಿತವೇ ಆಗಿದೆಯೆಂದು ಒಪ್ಪಬೇಕಾಗಿದೆ.

ಇನ್ನು ವಿವಿಧ ಹಂತಗಳಲ್ಲಿ ಅವರು ಮೆರೆದ ಚಿಂತನಸ್ಫುಟತೆಯೂ ಕಾರ್ಯಶೀಲತೆಯೂ ನಿಜವಾದ ನಾಯಕತ್ವ ಹೇಗಿರಬೇಕೆಂಬುದಕ್ಕೆ ಮಾನದಂಡವನ್ನೇ ನಿರ್ಮಿಸಿವೆ. ಇದು ಔಪಚಾರಿಕ ಹೇಳಿಕೆಯಲ್ಲ, ನೂರಕ್ಕೆ ನೂರರಷ್ಟೂ ಯಥಾರ್ಥ – ಎಂಬುದನ್ನು ಸಾಕ್ಷ್ಯಪಡಿಸುವ ಒಂದೆರಡು ಸಂಗತಿಗಳನ್ನು ಸ್ಮರಿಸೋಣ. ಪ್ರಕೃತೋದ್ದೇಶಕ್ಕೆ ಮೂರು ಅಂಶಗಳು ಪರ್ಯಾಪ್ತವಾದಾವು.

* ಗಾಂಧಿಯವರ ಮೂಲಧೋರಣೆಗೆ ವ್ಯತಿರಿಕ್ತವಾಗಿ ಸಾವರಕರ್ ವೈಜ್ಞಾನಿಕ ಮನೋವೃತ್ತಿ, ಯಂತ್ರೀಕರಣ, ಸೇನಾಬಲವರ್ಧನೆ, ಆಧುನಿಕತೆ ಮೊದಲಾದವುಗಳ ಸಮರ್ಥಕರಾಗಿದ್ದರು. ಅವರ ಚಿಂತನೆಯ ಅಂತರ್ನಿಕ್ಷಿಪ್ತ ತಾರ್ಕಿಕತೆಯಿಂದಾಗಿ ಅನಂತರದ ಕಾಲದಲ್ಲಿ ದೇಶವು ಸಹಜವಾಗಿ ಈ ಮಾರ್ಗವನ್ನೇ ಅನುಸರಿಸುವಂತಾಯಿತಲ್ಲವೆ? ಈಗಲೂ ಊರ್ಜಿತವಾಗಿ ಉಳಿದಿರುವುದು ಸಾವರಕರರ ಆಧುನಿಕತೆಗೆ ಅನುಗುಣವಾದ ಚಿಂತನಪ್ರಣಾಳಿಯೇ.

*  ತಾತ್ಪರ್ಯದೃಷ್ಟಿಯಿಂದ ವಿವೇಚಿಸಿದಲ್ಲಿ ಸ್ವಾತಂತ್ರ್ಯೋದಯದೊಡಗೂಡಿ ಭಾರತ ಸ್ವೀಕರಿಸಿದ ಸಂವಿಧಾನವಾದರೋ ಸಾವರಕರರು ವರ್ಷಗಳುದ್ದಕ್ಕೂ ಒತ್ತಿಹೇಳುತ್ತಿದ್ದ ನಿಲವುಗಳನ್ನು ಪ್ರತಿಬಿಂಬಿಸುವುದೇ ಆಗಿದೆಯಲ್ಲವೆ? ಸಂವಿಧಾನದ ಅನುಸಂಧಾನದಲ್ಲಿ ರಾಜಕೀಯೋದ್ದೇಶಜನಿತ ವಿಕೃತಿಗಳು ಸುಳಿದಿರುವುದುಂಟು. ಇವನ್ನು ನಿರಸನಗೊಳಿಸಿ ಸರ್ವಸಮಾನತೆಯ ತತ್ತ್ವವನ್ನು ನಿವಿಷ್ಟಗೊಳಿಸಿದಲ್ಲಿ ಘಟಿಸುವುದು ಸಾವರಕರ್ ಅಪೇಕ್ಷಿಸಿದ ಸಂವಿಧಾನಿಕತೆಯೇ ಅಲ್ಲವೆ?

* ಜಗತ್ತಿನ ಇತಿಹಾಸದಲ್ಲಿಯೆ ಸಾವರಕರ್ ಅನುಪಮ ಕ್ರಾಂತಿಕಾರಿಯಾಗಿದ್ದು ಕ್ರಾಂತಿಶಾಸ್ತ್ರವನ್ನೇ ನಿರ್ಮಿಸಿ ದವರಾದರೂ, ಭಾರತೀಯ ಸಮಾಜದಲ್ಲಿ ಸ್ವಾಭಿಮಾನವನ್ನೂ ಆತ್ಮಗೌರವವನ್ನೂ ಪುನರ್ನಿರ್ಮಿಸುವ ಐತಿಹಾಸಿಕ ಆವಶ್ಯಕತೆ ಅವರಿಂದ ಪೂರೈಕೆಯಾಯಿತೆಂಬುದು ಅವರ ಮುಖ್ಯ ವಾರಸಿಕೆಯೆಂಬುದನ್ನು ಗುರುತಿಸದಿದ್ದಲ್ಲಿ ಲೋಪವಾಗುತ್ತದೆ. ಇನ್ನು ‘ಸಮಾಜದ ಸೈನಿಕೀಕರಣವಾಗಬೇಕು’ ಎಂಬ ಸಾವರಕರರ ಆವಾಹನೆಯನ್ನು 2022ರಲ್ಲಿಯೂ ಉಪೇಕ್ಷಿಸಲಾಗದು, ಅಲ್ಲವೆ?

* * *

ಪರಿಸ್ಫುಟ ಚಿಂತನೆ

ದ್ವಿತೀಯ ಮಹಾಯುದ್ಧವು ಭಾರತದ ಪಾಲಿಗೆ ಒಂದು ಸದವಕಾಶವೆಂದು ಯುದ್ಧದ ಸಮಾಪ್ತಿಯ ಹಂತದಲ್ಲಿಯೆ ಕಂಠೋಕ್ತವಾಗಿ ಹೇಳಿದ ಜನನಾಯಕರು ಸಾವರಕರ್ ಮಾತ್ರ. ಈ ದಿಕ್ಸೂಚನೆಯನ್ನು ವಿಚಾರಪೂರ್ವಕವಾಗಿ ಗ್ರಹಿಸಿ ನೇತಾಜಿ ಸುಭಾಷಚಂದ್ರ ಬೋಸ್ ಕಾರ್ಯೋನ್ಮುಖರಾದದ್ದು ಈಗ ಇತಿಹಾಸ. ಪ್ರಮುಖವಾಗಿ ನೇತಾಜಿಯವರ ಅಭಿಯಾನದಿಂದಾಗಿಯೆ ಸ್ವಾತಂತ್ರ್ಯೋದ್ಯಮಕ್ಕೆ ನಿರ್ಣಾಯಕ ತಿರುವು ಬಂದಿತೆಂಬುದು ಬ್ರಿಟಿಷ್ ಇತಿಹಾಸಜ್ಞರೂ ಸೇರಿದಂತೆ ಗಣ್ಯಚಿಂತಕರ ವಿಶ್ಲೇಷಣೆ ಇದೆ.

ಸಾವರಕರರಿಗೆ ಕಾಂಗ್ರೆಸ್ಸನ್ನು ಸೇರುವಂತೆ ಅವರ ಹಿತೈಷಿಗಳಿಂದಲೂ, ಕಾಂಗ್ರೆಸ್ಸಿನ ವರಿಷ್ಠರಿಂದಲೂ ಸಾಕಷ್ಟು ಒತ್ತಾಯ ಬಂದಿತ್ತು. ಆದರೆ ಕಾಂಗ್ರೆಸ್ಸಿನ ದೃಷ್ಟಿಯೂ ತಮ್ಮದೂ ಹೊಂದಾಣಿಕೆಯಾಗುವ ಸಂಭವವೇ ಇಲ್ಲವೆಂದು 1920ರ ದಶಕದಲ್ಲಿಯೆ ಸಾವರಕರರು ಗ್ರಹಿಸಿದ್ದರು. ಹೀಗೆ ಅವರು ತಮ್ಮದೇ ಪಥದಲ್ಲಿ ಮುನ್ನಡೆದರು.

1965ರ ಸಂದರ್ಶನವೊಂದರಲ್ಲಿ ಅವರು ಹೇಳಿದರು: “ನಾನು ಕಾಂಗ್ರೆಸ್ಸಿನ ಅನುಯಾಯಿಯಾಗಲೊಪ್ಪಿದ್ದಿದ್ದರೆ ಆತ್ಮದ್ರೋಹಿಯೂ, ರಾಷ್ಟ್ರದ್ರೋಹಿಯೂ ಆಗುತ್ತಿದ್ದೆ. ಈಗಲಾದರೋ ಕಾಂಗ್ರೆಸ್ಸಿನ ದೇಶವಿಭಜನೆಯ ದುರ್ನಿರ್ಣಯದಲ್ಲಿ ನಾನು ಭಾಗಿಯಾಗಲಿಲ್ಲವೆಂದು ನನಗೆ ಸಮಾಧಾನವೂ ಹೆಮ್ಮೆಯೂ ಆಗಿದೆ. ಆದ್ದರಿಂದ ನಾನು ಪ್ರಾಮಾಣಿಕವಾಗಿ ರಾಷ್ಟ್ರಕ್ಕೂ ಸಮಾಜಕ್ಕೂ ನಿಷ್ಠನಾಗಿ ನನ್ನ ಭಕ್ತಿಯನ್ನು ಅರ್ಪಿಸಿದೆನೆಂಬ ಸಂತೃಪ್ತಿಯೂ, ಹೆಮ್ಮೆಯೂ ನನ್ನ ಪಾಲಿಗಿದೆ.”

ಕಾಂಗ್ರೆಸ್ ಮುಖ್ಯಧಾರೆಯ ಧೋರಣೆಗೆ ವಿರುದ್ಧವಾಗಿ ಆರ್ಯಸಮಾಜವೂ ಹಿಂದೂ ಮಹಾಸಭೆಯೂ ಕಣಕ್ಕಿಳಿದುದರಿಂದಲೇ ನಿಜಾಮಶಾಹಿಯಿಂದ ಭಾಗ್ಯನಗರದ ವಿಮೋಚನೆ ಶಕ್ಯವಾದದ್ದು.

ಸ್ವಾತಂತ್ರ್ಯಕ್ಕೆ ದೋಹದ

ಕಾಂಗ್ರೆಸ್ಸಿನ ಚಿಂತನದಾಢ್ರ್ಯ ಶಿಥಿಲಗೊಳ್ಳುತ್ತಿದ್ದುದನ್ನೂ ಮುಸ್ಲಿಮರನ್ನು ಓಲೈಸುವ ಅದರ ಪ್ರಯಾಸದ ನಿರರ್ಥಕತೆಯನ್ನೂ ಮೊದಮೊದಲೇ ಗುರುತಿಸಿ ಎಚ್ಚರಿಸಿದವರು ಸಾವರಕರ್. ಹಿಂದು-ಮುಸ್ಲಿಂ ಐಕ್ಯ ಮೊದಲಾದ ಭ್ರಾಮಕ ಕಲ್ಪನೆಗಳು ದುರಂತಕ್ಕೆ ದಾರಿಮಾಡುವುದು ನಿಶ್ಚಿತವೆಂದು ಕರ್ಣಾವತಿಯ (1937 ಡಿಸೆಂಬರ್) ಹಿಂದು ಮಹಾಸಭೆಯ ಅಧಿವೇಶನದ ಅಧ್ಯಕ್ಷಭಾಷಣದಲ್ಲಿಯೂ ಸಾವರಕರ್ ಉಚ್ಚಸ್ವರದಲ್ಲಿ ಸಾರಿದರು. ಆ ದುಃಸ್ವಪ್ನ ಹತ್ತೇ ವರ್ಷಗಳಲ್ಲಿ ನಿಜವಾಯಿತು.

ದೇಶದ ಸ್ವಾತಂತ್ರ್ಯಪ್ರಾಪ್ತಿಯನ್ನು ತೀವ್ರಗೊಳಿಸಿದುದು ಸಾವರಕರರ ಚರಿತ್ರಾರ್ಹ ಜೀವನಗಾಥೆಯ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಭಾವ – ಎಂಬುದು ಅಸಂದಿಗ್ಧವಾಗಿ ಸಾಕ್ಷ್ಯಗೊಂಡಿರುವ ತಥ್ಯ. ಇದನ್ನು ಈ ದೇಶದ ಜನತೆ ಮಾತ್ರವಲ್ಲದೆ ಆಗಿನ ದಮನಕಾರಿ ಆಂಗ್ಲಪ್ರಭುತ್ವವೂ ಅಂಗೀಕರಿಸಲೇಬೇಕಾಯಿತು.

ಕ್ರಾಂತಿಕಾರಿಗಳಿಗೆ ಪ್ರಚೋದನೆ ನೀಡುವವರು ದಂಡನಾರ್ಹರು – ಎಂದು ಗಾಂಧಿ ಲಂಡನ್ನಿನಲ್ಲಿದ್ದಾಗ ಹೇಳಿದ್ದರು.

ಸಾವರಕರರನ್ನು ವಿಮುಕ್ತಗೊಳಿಸಬೇಕೆಂಬ ಬೇಡಿಕೆಯಿರಿಸಿ ನಡೆದಿದ್ದ ಅಭಿಯಾನದಲ್ಲಿ ಮನವಿಗೆ ಗಾಂಧಿ ಸಹಿ ಮಾಡಲಿಲ್ಲ.

ಆದರೆ “ಭಾರತದಿಂದ ಆಂಗ್ಲಪ್ರಭುತ್ವದ ಉಚ್ಚಾಟನೆಯಾಗಲೇಬೇಕು – ಎಂಬ ಸ್ಪಷ್ಟತೆಯನ್ನು ನನಗಿಂತ ಮುಂಚೆಯೇ ಪಡೆದುಕೊಂಡವರು ಸಾವರಕರ್. ಭಾರತವನ್ನು ಪ್ರೀತಿಸಿದ ‘ತಪ್ಪಿ’ಗಾಗಿ ಅವರೀಗ ಅಂಡಮಾನಿನಲ್ಲಿ ಬಂಧನದಲ್ಲಿದ್ದಾರೆ. ನ್ಯಾಯಯುತ ಸರ್ಕಾರ ಇದ್ದಿದ್ದರೆ ಅವರಿಲ್ಲಿ ಅತ್ಯುನ್ನತ ಪದವಿಯಲ್ಲಿರುತ್ತಿದ್ದರು. ಸಾವರಕರರ ಸೋದರರ ದುರ್ಭರ ಸ್ಥಿತಿ ನನ್ನನ್ನು ಉದ್ವಿಗ್ನಗೊಳಿಸಿದೆ” – ಎಂದು ‘ಯಂಗ್ ಇಂಡಿಯ’ ಪತ್ರಿಕೆಯಲ್ಲಿ ಗಾಂಧಿಯವರೇ ಬರೆದಿದ್ದರು (18-5-1921).

* * *

ಸ್ವಭಾವವಿಕೃತಿ

ಗಾಂಧಿಯಾಗಲಿ ನೆಹರು ಆಗಲಿ ಕ್ರಾಂತಿಕಾರಿಗಳ ತ್ಯಾಗ-ಸಮುನ್ನತಿಗಳನ್ನು ಅರಿಯದವರಲ್ಲ. ಕ್ರಾಂತಿಕಾರಿಗಳ ಬಗೆಗೆ ಅವರು ಬಹಿರಂಗವಾಗಿ ರಾಜಕೀಯ ಕಾರಣಗಳಿಂದ ತಾತ್ಸಾರ ಪ್ರದರ್ಶಿಸಿದುದನ್ನು ಒಂದು ಸ್ವಭಾವವಿಕೃತಿ ಎನ್ನಬೇಕಷ್ಟೆ.

ಸಾವರಕರರನ್ನು ಟೀಕಿಸುವ ವಾಮಪಂಥೀಯರು ತಮ್ಮದೇ ಇತಿಹಾಸವನ್ನಾದರೂ ಅರಿಯಬೇಕು. ಇವರ ಪರಮಗುರು ಲೆನಿನ್ ಲಂಡನ್ನಿನಲ್ಲಿ ಸಾವರಕರರ ಸಂಪರ್ಕದಲ್ಲಿದ್ದುದು ಮಾತ್ರವಲ್ಲದೆ ಇಬ್ಬರ ನಡುವೆ ಭಾವೀ ಜಗತ್ತಿನ ರೂಪರೇಖೆಗಳನ್ನು ಕುರಿತು ಸುದೀರ್ಘ ಸಂವಾದ ನಡೆದು ಲೆನಿನ್ ಮೇಲೆ ಸಾವರಕರರ ಗಾಢ ಪ್ರಭಾವವಾಗಿತ್ತು. ರಷ್ಯಾದ ಕ್ರಾಂತಿಯ ತರುವಾಯ ಮಂಡಿಸಿದ ಮೊದಲ ಬಜೆಟ್ ಭಾಷಣದಲ್ಲಿ ಲೆನಿನ್ ಸಾವರಕರರ ಹೆಸರನ್ನು ಗೌರವಪೂರ್ವಕ ಉಲ್ಲೇಖಿಸಿದ್ದ.

ಸಾವರಕರರಂಥ ಅನನ್ಯ ಹೋರಾಟಗಾರರನ್ನು ಸಾಮ್ರಾಜ್ಯವಾದದ ಸಮರ್ಥಕರೆಂದೂ, ಕೋಮುವಾದಿಯೆಂದೂ ಚಿತ್ರಿಸಲೆಳಸಿರುವುದು ಕಾಂಗ್ರೆಸ್ಸಿನ, ಸೆಕ್ಯುಲರಿಸ್ಟರ, ವಾಮಪಂಥೀಯರ ನೈತಿಕ ಅಧಃಪಾತದ ಚರಮದಶೆಯನ್ನು ಸೂಚಿಸುತ್ತದೆ.

ವಾಮಪಂಥೀಯರ ವಿರೋಧವೇನೋ ಅವರ ಜಾಯಮಾನಕ್ಕೆ ಅನುಗುಣವಾಗಿಯೆ ಇದ್ದಿತೆನ್ನೋಣ. ಅವರು ಗಾಂಧಿಯವರನ್ನು ‘ಸಾಮ್ರಾಜ್ಯಶಾಹಿಯ ಹಸ್ತಕ’ರೆಂದೂ ನೇತಾಜಿ ಸುಭಾಷಚಂದ್ರ ಬೋಸ್ ಅವರನ್ನು ‘ಜಪಾನಿನ ಪ್ರಧಾನಿ ಟೋಜೋರವರ ನಾಯಿ’ ಎಂದೂ ಅವಹೇಳನ ಮಾಡಿ ಪ್ರಚಾರ ನಡೆಸಿದ್ದುದು ಸುವಿದಿತವೇ ಆಗಿದೆ. ಆದರೆ, ಈ ವ್ಯಧಿಕರಣಿಗಳ ಜೊತೆಗೆ ಸ್ವಾತಂತ್ರ್ಯಸಂಘರ್ಷದ ಧಾರೆಯ ಕಾಂಗ್ರೆಸ್ ಪಕ್ಷವೂ ಸೇರಿಕೊಂಡದ್ದು ವಿಷಾದಕರ.

ಒಂದುಕಡೆ ವಿದೇಶೀ ಆಳ್ವಿಕೆಯನ್ನೂ ತಜ್ಜನಿತ ಮಾನಸಿಕ-ಸಾಂಸ್ಕøತಿಕ ಕಾಲುಷ್ಯವನ್ನೂ ಆಜೀವನವೂ ವಿರೋಧಿಸಿದ ಸ್ವಾತಂತ್ರ್ಯವೀರ; ಇನ್ನೊಂದುಕಡೆ ದೇಶವಿಭಜನೆಯನ್ನು ಸಮರ್ಥಿಸಿ ಸುಭಾಷಚಂದ್ರ ಬೋಸರಂಥ ಇತಿಹಾಸಪುರುಷರನ್ನು ನಾಯಿಗೆ ಹೋಲಿಸಿದ್ದ ವಾಮಪಂಥೀಯರು ಹಾಗೂ ಹೃದಯದೌರ್ಬಲ್ಯಕ್ಕೀಡಾದ ಕಾಂಗ್ರೆಸ್ – ಈ ಎರಡರ ನಡುವಣ ವೈದೃಶ್ಯ ಕಣ್ಣಿಗೆ ಎದ್ದುಕಾಣುತ್ತದೆ.

ಕೇರಳದಲ್ಲಿ ಮಾಪಿಳ್ಳೆಗಳು ನಡೆಸಿದ ಹಿಂಸಾಚರಣೆ, ಅಬ್ದುಲ್ ರಶೀದನಿಂದ ಶ್ರದ್ಧಾನಂದರಂತಹ ಧಾರ್ಮಿಕನಾಯಕರ ಹತ್ಯೆ – ಮೊದಲಾದವನ್ನು ಗಾಂಧಿ ಖಂಡಿಸದಿದ್ದುದು ಅವರ ನಿಕಟವರ್ತಿಗಳಿಗೂ ಇರುಸುಮುರುಸನ್ನು ತಂದಿತು.

ಶೇಷಪ್ರಶ್ನೆ

ಸ್ವಾತಂತ್ರ್ಯೋತ್ತರ ಕಾಲದಲ್ಲಿ ಸಮಾಜವನ್ನು ಮುಸುರಿರುವ ಬೌದ್ಧಿಕ ಇಲ್ಲಣಗಳು ಪೂರ್ತಿ ಮರೆಯಾದ ಮೇಲೆ ತ್ರಯಸ್ಥರು ಕೇಳಬಹುದಾದ ಪ್ರಶ್ನೆಗಳು ಈ ಜಾಡಿನದಿದ್ದಾವು: “1924ರಿಂದ ಆಚೆಗೆ ರತ್ನಾಗಿರಿಯಲ್ಲಿ ಗೃಹಬಂಧನದಲ್ಲಿದ್ದ ವಿ.ದಾ. ಸಾವರಕರರು ಪ್ರತಿಪಾದನೆಯ ಮೂಲಕವೂ ಪ್ರತ್ಯಕ್ಷ ಕಾರ್ಯಾಚರಣಸರಣಿಯ ಮೂಲಕವೂ ಸತತವಾಗಿ ಶ್ರಮಿಸುತ್ತಿದ್ದುದು ಜಾತಿವ್ಯವಸ್ಥಾಂತರ್ಗತ ದೋಷಗಳ ನಿರ್ಮೂಲನಕ್ಕಾಗಿ. ಗಾಂಧಿಯವರಾದರೋ ಜಾತಿಪದ್ಧತಿಯು ಇಲ್ಲಿಯ ಸಮಾಜದ ಒಂದು ಮುಖ್ಯ ಅವಲಂಬವೆಂದೇ ಉದ್ದಕ್ಕೂ ಹೇಳುತ್ತಿದ್ದುದು. ಹೀಗಿದ್ದರೂ ದಶಕಗಳುದ್ದಕ್ಕೂ ಸಾವರಕರರ ಭತ್ರ್ಸನೆಯೂ ಗಾಂಧಿಯವರ ಆರಾಧನೆಯೂ ನಡೆದಿವೆಯಲ್ಲ! ಕಿಮಾಶ್ಚರ್ಯಮತಃ ಪರಂ?” – ಎಂದು.

* * *

ವಿಪರ್ಯಾಸ

ಕ್ರಾಂತಿಕಾರಿ ಚಟುವಟಿಕೆಗಳಿಂದ ಸದಾ ದೂರ ಉಳಿದು ಸುರಕ್ಷಿತವಾಗಿದ್ದವರು ಜವಾಹರಲಾಲ್ ನೆಹರು. ಸಾವರಕರರ ವಿರುದ್ಧ ಬ್ರಿಟಿಷ್ ಸರ್ಕಾರ ಖಟ್ಲೆ ಹೂಡಿದಾಗ ಅವರ ಪರವಾಗಿ ಮೊಕದ್ದಮೆಗೆ ಹಣ ಸಂಗ್ರಹ ನಡೆದಿದ್ದಾಗ ಚಂದಾ ನೀಡಲು ನೆಹರು ಬಿಲ್‍ಕುಲ್ ನಿರಾಕರಿಸಿದ್ದರು; ಆ ಮನವಿಪತ್ರವನ್ನು ಬಂದವರೆದುರಿನಲ್ಲೆ ನಿಂದಾಪೂರ್ವಕ ಎಸೆದಿದ್ದರು.

ವಸಂತ ಸಾಠೆ ಅವರು ಕೇಂದ್ರ ಪ್ರಸಾರ ಇಲಾಖೆಯ ಸಚಿವರಾಗಿದ್ದಾಗ ಒಂದು ಸಂದರ್ಭದಲ್ಲಿ ಭಾವಪೂರ್ಣವಾಗಿ ಹೀಗೆಂದಿದ್ದರು: “ಒಂದುಕಡೆ ಚಂದ್ರಶೇಖರ ಆಜಾದ್, ಬಟುಕೇಶ್ವರ ದತ್ತ ಮೊದಲಾದವರ ಬಲಿದಾನವನ್ನು ಕೀರ್ತಿಸಲು ನಾವು ಸಂಕೋಚಪಡುವುದಿಲ್ಲ. ಆದರೆ ಅಂತಹ ಸಾವಿರಾರು ಕ್ರಾಂತಿಕಾರಿಗಳಿಗೆ ಪ್ರೇರಣಾಸ್ರೋತವಾಗಿದ್ದ ಸಾವರಕರರ ಹೆಸರು ಹೇಳಲು ಹಿಂದೆಗೆಯುತ್ತೇವೆ! ಸ್ವಯಂ ಇಂದಿರಾಗಾಂಧಿಯವರೂ ಸಾವರಕರರನ್ನು ಭಾರತದ ಒಬ್ಬ ಮಹಾನ್ ಅನುಪಮ ಹೋರಾಟಗಾರರೆಂದು ಉದ್ಗರಿಸಿದ್ದುದಿದೆ. ಆದರೆ ಇಂದಿರಾಗಾಂಧಿಯವರ ಸೊಸೆಯೇ ಸಾವರಕರರನ್ನು ದೇಶದ್ರೋಹಿಗಳ ಪಟ್ಟಿಗೆ ಸೇರಿಸಿರುವುದು ಎಂತಹ ದೊಡ್ಡ ವಿಪರ್ಯಾಸ!”

* * *

ಸಾವರಕರರು ಬ್ರಿಟಿಷ್‍ಪ್ರಭುತ್ವವನ್ನು ಉಚ್ಚಾಟಿಸಲು ಭೂಗತ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದರೆಂಬ ಭಾವನೆ ಬ್ರಿಟಿಷರ ಮನಸ್ಸಿನಲ್ಲಿ ಎಷ್ಟು ಆಳವಾಗಿ ಬೇರುಬಿಟ್ಟಿತ್ತೆಂದರೆ ಅನೇಕ ವಿಕಟಪ್ರಸಂಗಗಳೂ ನಡೆದುದುಂಟು.

ಸಾವರಕರರ ‘ದೇಶದ್ರೋಹಿ’ ಆಚರಣೆಗಳಿಗಾಗಿ ಅವರನ್ನು ಬಂಧಿಸಬೇಕೆಂದು ಆಗಿನ ಭಾರತಸರ್ಕಾರ ಆಜ್ಞೆ ಹೊರಡಿಸಿತು. ವಾಸ್ತವವಾಗಿ ಆ ದಿನಗಳಲ್ಲಿ ಸಾವರಕರ್ ಭಾರತದಲ್ಲಿಯೆ ಇರಲಿಲ್ಲ; ಆರೋಗ್ಯ ಸುಧಾರಣೆಗಾಗಿ ಪ್ಯಾರಿಸಿನಲ್ಲಿ ಮೇಡಂ ಕಾಮಾ ಅವರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಫ್ರಾನ್ಸ್ ದೇಶ ಬ್ರಿಟಿಷರ ಅಧಿಕಾರಪರಿಧಿಯಿಂದ ಹೊರಗೆ ಇದ್ದುದರಿಂದ ಬ್ರಿಟಿಷರ ಶಾಸನಕ್ಕೆ ಅಲ್ಲಿ ಬೆಲೆ ಇರಲಿಲ್ಲ. ಈ ಸುರಕ್ಷಿತತೆಗಾಗಿಯೆ ಸಾವರಕರರು ಪ್ಯಾರಿಸ್ ನಗರವನ್ನು ಆಯ್ಕೆ ಮಾಡಿಕೊಂಡಿದ್ದುದು.

* * *

ನೆಹರು ಪ್ರಭುತ್ವದ ಧೋರಣೆ

1966ರ ಫೆಬ್ರುವರಿಯಲ್ಲಿ ಸಾವರಕರರ ದೇಹಾವಸಾನವಾದಾಗ ಸ್ವಯಂ ರಾಷ್ಟ್ರಪತಿ ಡಾ|| ರಾಧಾಕೃಷ್ಣನ್ ಶ್ರದ್ಧಾಂಜಲಿಯನ್ನು ಅರ್ಪಿಸಿದ್ದರು. ಕಮ್ಯುನಿಸ್ಟ್ ನಾಯಕ ಶ್ರೀಪಾದ ಅಮೃತ ಡಾಂಗೇ ಅವರೂ ಸಾವರಕರರನ್ನು ವಸಾಹತುಶಾಹಿಯ ವಿರೋಧಿಗಳಲ್ಲಿ ಅಗ್ರಣಿ ಎಂದು ವರ್ಣಿಸಿದ್ದರು.

ಸಾವರಕರರ ವಿಷಯದಲ್ಲಿ ಬ್ರಿಟಿಷ್ ಸರ್ಕಾರವೂ ಅನಂತರ ಭಾರತ ಸರ್ಕಾರವೂ ಅದೊಂದು ರೀತಿಯ ಬುದ್ಧಿವಿಕಲ್ಪ (ಠಿಚಿಡಿಚಿಟಿoiಚಿ) ಬೆಳೆಸಿಕೊಂಡಿತ್ತೇ ಎಂದು ಅನಿಸುತ್ತದೆ.

ತಮ್ಮ ಹಿಂದುತ್ವನಿಷ್ಠೆಯಿಂದಾಗಿ ಸಾವರಕರ್ ಗಾಂಧಿ ಹತ್ಯೆಯ ಪ್ರಕರಣದಲ್ಲಿಯೂ ಆಪಾದಿತರೆನಿಸಬೇಕಾಯಿತು.

ಗಾಂಧಿ ಹತ್ಯೆಯಲ್ಲಿ ಸಾವರಕರರನ್ನು ಆರೋಪಿಯಾಗಿಸಲು ಯಾವುದೇ ಆಧಾರವಿಲ್ಲವೆಂದು ಆಗ ಕಾನೂನು ಸಚಿವರಾಗಿದ್ದ ಡಾ|| ಅಂಬೇಡ್ಕರರು ಒತ್ತಿಹೇಳಿದರೂ ನೆಹರು ಛಲದಿಂದ ಸಾವರಕರರಿಗೆ ದೋಷಿಯ ಪಟ್ಟ ಕಟ್ಟಿದರು. ಉತ್ತರೋತ್ತರ ನ್ಯಾಯಾಲಯ ಸಾವರಕರರನ್ನು ನಿರ್ದೋಷಿಯೆಂದು ಘೋಷಿಸಿತು. ಇದರಿಂದ ಸಾವರಕರರ ಬಗೆಗೆ ನೆಹರು ಅವರ ಅಲರ್ಜಿ ಇನ್ನಷ್ಟು ಹೆಚ್ಚಿತು. 

ನೆಹರು ಅವರ ಕ್ಷುದ್ರವೃತ್ತಿ ವರ್ಷಗಳುದ್ದಕ್ಕೂ ಮುಂದುವರಿಯಿತು. 1950ರಲ್ಲಿ ಲಿಯಾಖತ್ ಅಲಿಯ ಭಾರತ ಭೇಟಿಯ ಸಂದರ್ಭದಲ್ಲಿ ‘ಕಾನೂನು ಸುವ್ಯವಸ್ಥೆ’ಗೆ ಭಂಗವಾಗುತ್ತದೆಂಬ ನೆವವೊಡ್ಡಿ ನೆಹರು ಸರ್ಕಾರ ದೈಹಿಕವಾಗಿ ಜರ್ಜರಿತರಾಗಿದ್ದ ಮತ್ತು ಎಲ್ಲ ಚಟುವಟಿಕೆಗಳಿಂದ ಬಹುಮಟ್ಟಿಗೆ ನಿವೃತ್ತರಾಗಿದ್ದ ಅರವತ್ತೇಳು ವರ್ಷದ ವೃದ್ಧ ಸಾವರಕರರನ್ನು ಬಂಧನಕ್ಕೊಳಪಡಿಸಿ ಬೆಳಗಾವಿ ಜೈಲಿಗೆ ಕಳಿಸಿತು.

ಇಂಥ ಚಾರಿತ್ರ್ಯದ ನೆಹರು ಪ್ರಜಾಪ್ರಭುತ್ವ ಪ್ರವರ್ತಕರೆಂದು ಕೀರ್ತಿತರಾದರು.

ಬ್ರಿಟಿಷ್ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದ ಸಾವರಕರರ ಪಿತ್ರಾರ್ಜಿತ ಮನೆಯನ್ನು ಅವರಿಗೆ ಹಿಂದಿರುಗಿಸುವ ಸೌಜನ್ಯವನ್ನೂ ನೆಹರು ಸರ್ಕಾರ ತೋರಲಿಲ್ಲ.

ಸತ್ಯವಿಮುಖ ಛಲ

ಸಂಸದ್‍ಭವನದಲ್ಲಿ ಅನ್ಯ ನಾಯಕರ ಚಿತ್ರಗಳ ಪಂಕ್ತಿಯಲ್ಲಿ ಸಾವರಕರರ ಚಿತ್ರವೂ ಇರಬೇಕೆಂಬುದು ಬಹುಮಂದಿಯ ದೀರ್ಘಕಾಲದ ಆಕಾಂಕ್ಷೆಯಾಗಿತ್ತು. ಆಖೈರಾಗಿ 2004ರಲ್ಲಿ ತತ್ಕಾಲೀನ ಸರ್ಕಾರ ಇದಕ್ಕೆ ಅನುಮೋದನೆ ನೀಡಿತ್ತು. ಆ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ಚಿತ್ರದ ಅನಾವರಣ ಮಾಡುವುದು ಸರ್ಕಾರದ ಯೋಜನೆಯಾಗಿತ್ತು. ಆದರೆ ರಾಷ್ಟ್ರೀಯತಾವಾದವನ್ನೇ ತಿರಸ್ಕರಿಸುತ್ತಬಂದಿದ್ದ ವಾಮಪಂಥೀಯರು ಈ ಯೋಜನೆಯನ್ನು ಆರಂಭದಿಂದಲೇ ವಿರೋಧಿಸುತ್ತಬಂದಿದ್ದರು. ಸರ್ಕಾರವು ಚಿತ್ರದ ಸ್ಥಾಪನೆಯ ವಿಷಯದಲ್ಲಿ ದೃಢಮನಸ್ಕವಾಗಿದ್ದುದನ್ನು ಗಮನಿಸಿ ಅವರು ಅಂತಿಮವಾಗಿ ಚಿತ್ರದ ‘ಅನಾವರಣ ಸಮಾರಂಭ’ ಬೇಡವೆಂದು ರಾಷ್ಟ್ರಪತಿಗಳ ಮೇಲೆ ಒತ್ತಾಯ ಹೇರಿದರು. ಯೋಜನೆಯನ್ನು ವಿರೋಧಿಸಿದವರಲ್ಲಿ ಸೋನಿಯಾಗಾಂಧಿಯವರೂ ಸೇರಿದ್ದರು.

ಅದೇ ನಿಲವಿನ ಮುಂದುವರಿಕೆಯೆಂಬಂತೆ 2004ರಲ್ಲಿ ಸೋನಿಯಾಗಾಂಧಿ-ನಿರ್ದೇಶಿತ ಕಾಂಗ್ರೆಸ್-ಯು.ಪಿ.ಎ. ಸರ್ಕಾರ ಅಂಡಮಾನಿನ ಸಾವರಕರ್ ಸ್ಮøತಿಫಲಕವನ್ನು ಕಿತ್ತುಹಾಕಿತು.

* * *

ನ್ಯಾಯಮೂರ್ತಿ ಎಂ.ಸಿ. ಛಗ್ಲಾ ಅವರು ಒಮ್ಮೆ ಹೇಳಿದ್ದರು: “ಸಾವರಕರರು ಅತ್ಯಂತ ಕ್ಲೇಶಪೂರ್ಣವಾಗಿ ನಿರ್ಮಿಸಿದ್ದ ಬುನಾದಿಯ ಕಾರಣದಿಂದಲೇ ಗಾಂಧಿಯವರ ಅನೇಕ ಪ್ರಯಾಸಗಳು ಸಾಫಲ್ಯ ಪಡೆಯುವುದು ಸಾಧ್ಯವಾಯಿತು.”

ಇಂದಿರಾಗಾಂಧಿಯವರ ಪ್ರಶಂಸಾರ್ಹ ವರ್ತನೆ

ಸಾವರಕರರ ಬಗೆಗೆ ಇಂದಿರಾಗಾಂಧಿಯವರಿಗಿದ್ದ ಗೌರವ ಉಲ್ಲೇಖನೀಯ. ಸಾವರಕರರ ನಿಧನವಾದಾಗ (16-2-1966) ಅದು ದೇಶಕ್ಕೆ ಭರಿಸಲಾಗದ ನಷ್ಟ ಎಂದು ಶೋಕ ವ್ಯಕ್ತ ಮಾಡಿದ್ದರು. ಅವರು ಪ್ರಧಾನಿಯಾಗಿದ್ದ ಅವಧಿಯಲ್ಲೇ ಸಾವರಕರರ ಸ್ಮರಣೆಯ ಅಂಚೆಚೀಟಿ ಬಿಡುಗಡೆಯಾಗಿತ್ತು. ಸಾವರಕರ್ ನ್ಯಾಸಕ್ಕೆ ಇಂದಿರಾಗಾಂಧಿ ತಮ್ಮ ಸ್ವಂತ ಖಾತೆಯಿಂದ ರೂ. 11,000 ದೇಣಿಗೆ ಕೊಟ್ಟರು. ಸಾವರಕರರ ಬಗೆಗೆ ಒಂದು ಒಳ್ಳೆಯ ಸಾಕ್ಷ್ಯಚಿತ್ರವನ್ನು (ಡಾಕ್ಯುಮೆಂಟರಿ) ಮಾಡಿಸುವಂತೆ 1983ರಲ್ಲಿ ಫಿಲ್ಮ್ಸ್ ಡಿವಿಜನ್ನಿಗೆ ಆದೇಶ ನೀಡಿದ್ದರು. ಈ ಸಂಗತಿಗಳನ್ನು ಸ್ಮರಿಸುವಾಗ ಸಾವರಕರರ ಬಗೆಗೆ ಇಂದಿರಾಗಾಂಧಿಯವರ ಉತ್ತರಾಧಿಕಾರಿಗಳ ವರ್ತನೆ ಬೇಸರ ತರಿಸುತ್ತದೆ.

* * *

ಅವರ ಜೀವಿತದ ಕೊನೆಯ ವರ್ಷಗಳಲ್ಲಿ ಸಾವರಕರರ ಚಿಂತನೆಯಷ್ಟೂ ಕೇಂದ್ರಿತವಾಗಿದ್ದುದು (1) ಹಿಂದೂ ಸಂಘಟನೆ, (2) ಹಿಂದೂ ತರುಣರ ಸೈನಿಕೀಕರಣ ಹಾಗೂ ಕ್ಷಾತ್ರವೃತ್ತಿಗೆ ಪ್ರೋತ್ಸಾಹನ, (3) ಭಾರತದ ಆಧುನಿಕ ರೀತಿಯ ಔದ್ಯಮೀಕರಣ; – ಎಂದು ಹೇಳುವುದು ಔಚಿತ್ಯಪೂರ್ಣವೆನಿಸುತ್ತದೆ. ಅವರು ಆ ದಿನಗಳಲ್ಲಿ ತೊಡಗಿಕೊಂಡ ಕಾರ್ಯಾವಳಿಗಳು ಇದನ್ನು ಬಿಂಬಿಸುತ್ತವೆ.

ಭಾರತ ಇತಿಹಾಸದ ಕಕ್ಷೆಯಲ್ಲಿ ಸಾವರಕರರ ಸ್ಥಾನ, ಅವರ ದರ್ಶನದ ತಾತ್ತ್ವಿಕ ಅಧಿಷ್ಠಾನ, ಅವರ ಸಾಂಸ್ಕøತಿಕ-ರಾಜಕೀಯ-ಸಾಮಾಜಿಕ ವಾರಸಿಕೆ – ಈ ಎಲ್ಲ ಅಂಶಗಳನ್ನು ಕುರಿತು ಈಗಿನ ಮತ್ತು ಮುಂದಿನ ಪೀಳಿಗೆಗಳವರಿಗೆ ವಿಫುಲ ಸಂಶೋಧನೆಗೆ ಅವಕಾಶವಿದೆ.

                    [ಮುಗಿಯಿತು]

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat