ಒಂದೊಮ್ಮೆ ಭಾರತದ ಹೆಚ್ಚಿನೆಡೆಗಳಲ್ಲಿ ಹಾಲಿನ ಕೊರತೆಯಿತ್ತು. ಆ ಸ್ಥಿತಿಯಿಂದ ಹೊರಬಂದು ಭಾರತ ಈಗ ವಿಶ್ವದಲ್ಲೇ ಅತಿ ಹೆಚ್ಚು ಹಾಲನ್ನು ಉತ್ಪಾದಿಸುವ ದೇಶವಾಗಿದೆ. ನಾಡಿನ ಮೂಲೆಮೂಲೆಗಳಿಗೂ ಈಗ ಹಾಲು ಸರಬರಾಜಿನ ಜಾಲ ತಲಪಿರುವುದಲ್ಲದೆ, ಲಕ್ಷಾಂತರ ರೈತರಿಗೆ ‘ಕ್ಷೀರಕ್ರಾಂತಿ’ ಸ್ವಾವಲಂಬಿ ಸಮೃದ್ಧ ಬದುಕನ್ನು ಕಲ್ಪಿಸಿದೆ. ಇಡೀ ಜಗತ್ತಿನಲ್ಲಿ ಮಾರಾಟವಾಗುತ್ತಿರುವ ಹಾಲಿನ ಶೇ. ೨೨ರಷ್ಟನ್ನು ಭಾರತವೇ ಉತ್ಪಾದಿಸುತ್ತಿದೆ. ಇದೀಗ ಪ್ರತಿವರ್ಷ ೨೨ ಕೋಟಿ ಟನ್ನಿನಷ್ಟು ಹಾಲು ಭಾರತದಲ್ಲಿ ಉತ್ಪಾದಿತವಾಗುತ್ತಿದೆ. ಈ ಪವಾಡವನ್ನು ಆಗುಮಾಡಿಸಿದ ರೂವಾರಿ ಡಾ|| ವರ್ಗೀಸ್ ಕುರಿಯನ್. ‘ಶ್ವೇತಕ್ರಾಂತಿಯ ಪಿತಾಮಹ’ ಎಂದೇ ಪ್ರಸಿದ್ಧರಾದ ಡಾ|| ವರ್ಗೀಸ್ ಕುರಿಯನ್ರ ಇತಿಹಾಸಾರ್ಹ ಸಾಧನೆಯನ್ನು ಈಗಿನ ಪೀಳಿಗೆಗೆ ಈ ಲೇಖನಮಾಲೆಯಲ್ಲಿ ಪರಿಚಯಿಸಲಾಗುತ್ತಿದೆ. – ಸಂಪಾದಕ
ಇಡೀ ಜಗತ್ತನ್ನು ವಿಭಾಗಿಸಬಹುದಾದ ಒಂದು ವಿಷಯವನ್ನು ಹೇಳಬೇಕೆಂದರೆ ಶೋಷಣೆ ಎಂಬುದನ್ನು ಧಾರಾಳವಾಗಿ ಹೇಳಬಹುದೆನಿಸುತ್ತದೆ; ಅದರಂತೆ ಎಲ್ಲರನ್ನೂ ಶೋಷಕರು ಮತ್ತು ಶೋಷಿತರು ಎಂಬುದಾಗಿ ವಿಂಗಡಿಸಬಹುದು. ಕೆಲವರು ಶೋಷಕರಾದರೆ ಉಳಿದವರು ಶೋಷಿತರು. ಪ್ರಬಲರು ದುರ್ಬಲರನ್ನು ಶೋಷಿಸುವುದು ಜೀವಿಗಳ ಸಹಜ ಪ್ರವೃತ್ತಿ ಎಂದರೂ ಸಲ್ಲುತ್ತದೆ. ಬುದ್ಧಿವಂತಿಕೆಯು ಬೆಳೆದ ಮನುಷ್ಯ ಶೋಷಣೆಯ ಬಗೆಬಗೆಯ ಮಾರ್ಗಗಳನ್ನು ಕಂಡುಕೊಂಡಿದ್ದಾನೆ. ದೇಶ-ದೇಶಗಳ ನಡುವಣ ಸಂಬಂಧಕ್ಕೂ ಈ ಮಾತು ಅನ್ವಯಿಸುತ್ತದೆ. ಜಾಗತೀಕರಣ, ಉದಾರೀಕರಣ, ಖಾಸಗೀಕರಣಗಳೆಂಬ ತ್ರಿ-ಕರಣಗಳನ್ನು ಜಗತ್ತು ಅಂಗೀಕರಿಸಿದ ಸುಮಾರು ೧೯೯೦ರ ದಶಕದ ಕಾಲದಿಂದ ಬಲಿಷ್ಠ ರಾಷ್ಟ್ರಗಳು ಮುಂಚೆ ಇದ್ದುದಕ್ಕಿಂತ ಹೆಚ್ಚಾಗಿ ಹಿಂದುಳಿದ ದೇಶಗಳ ಮೇಲೆ ಸವಾರಿ ಮಾಡುವ ಪ್ರವೃತ್ತಿಗೆ ಕಾನೂನು-ನಿಯಮಗಳ ಬೆಂಬಲ ಕೂಡ ಸಿಕ್ಕಿದೆ ಎನಿಸುತ್ತದೆ. ಇದು ಇನ್ನೊಂದು ಬಗೆಯ ವಸಾಹತೀಕರಣ ಎಂದರೂ ಸಲ್ಲುತ್ತದೆ.

ಇನ್ನು ರಾಷ್ಟ್ರಮಟ್ಟದಲ್ಲಿ ಹೇಳುವುದಾದರೆ ಹಳ್ಳಿಗಳು ಮತ್ತು ಅಲ್ಲಿ ವಾಸಿಸುವ ರೈತರು ನಿಜವಾಗಿಯೂ ಶೋಷಿತರು. ನಗರಗಳು ಹಳ್ಳಿಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತವೆ. ರೈತನೇ ಎಲ್ಲರಿಗೂ ಅನ್ನದಾತ. ಆದರೆ ಗರಿಷ್ಠ ಶೋಷಣೆಗೆ ಗುರಿಯಾಗುವಾತ ಅವನೇ. ಆತನು ನಡೆಸುವ ಉತ್ಪಾದನೆ ಅರ್ಥಾತ್ ಕೃಷಿ ಮಳೆಯೊಂದಿಗೆ ನಡೆಸುವ ಡೊಂಬರಾಟವಾದರೆ ತನ್ನ ಉತ್ಪನ್ನಕ್ಕೆ ಬೆಲೆ ನಿಗದಿಪಡಿಸುವ ಅಧಿಕಾರ ಆತನ ಬಳಿ ಇಲ್ಲವೇ ಇಲ್ಲ; ಅಲ್ಲೂ ಬಗೆಬಗೆಯ ಶೋಷಣೆ. ಮಧ್ಯವರ್ತಿಗಳು ಅವನನ್ನು ಹಿಂಡಿ ಹಿಪ್ಪೆ ಮಾಡುತ್ತಾರೆ. ಹೀಗಿರುವಾಗ ಅವನಿಗೆ ಬಲ ತುಂಬುವ ಯಾವುದಾದರೂ ಮಾರ್ಗ ಇದೆಯೆ? ಶೋಷಣೆಯ ತಡೆಗೆ ಏನಾದರೂ ಉಪಾಯ ಇದೆಯೆ?
ಈ ಪ್ರಶ್ನೆಗಳಿಗೆ ತನ್ನದೇ ಉತ್ತರ ಕಂಡುಕೊಂಡು ಅವುಗಳನ್ನು ದೊಡ್ಡ ರೀತಿಯಲ್ಲಿ ಅನುಷ್ಠಾನಕ್ಕೆ ತಂದ ಓರ್ವ ವ್ಯಕ್ತಿ ಇದ್ದಾರೆ. ಅವರೇ ‘ಅಮುಲ್’ ಸಂಸ್ಥೆಯೊಂದಿಗೆ ಜಗತ್ತಿಗೇ ಪರಿಚಿತರಾದ ಡಾ|| ವರ್ಗೀಸ್ ಕುರಿಯನ್ (೧೯೨೧-೨೦೧೨). ಕೇರಳದಲ್ಲಿ ಜನಿಸಿದ ಇವರು ನೆಲೆಯೂರಿದ್ದು ದೂರದ ಗುಜರಾತಿನಲ್ಲಿ. ಅಲ್ಲಿ ಬೇರೂರಿ ಅವರು ಯಾವ ರೀತಿ ಬೆಳೆದರೆಂದರೆ ಅವರು ಆರಿಸಿಕೊಂಡ ಕ್ಷೇತ್ರದಲ್ಲಿ ಅವರು ಮತ್ತು ಅವರ ಸಂಸ್ಥೆ ನಮ್ಮ ದೇಶಕ್ಕೇ ಕೇಂದ್ರಸ್ಥಾನವಾಯಿತು. ಮುಂಬಯಿ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರೋಡದಿಂದ ಸುಮಾರು ೪೦ ಕಿ.ಮೀ. ದೂರದಲ್ಲಿ ಒಂದು ನೀಲಿ-ಬಿಳಿ ಬಣ್ಣದ ಬೋರ್ಡ್ ಕಾಣಿಸುತ್ತದೆ; ಅದರಲ್ಲಿರುವ ಬಾಣದ ಗುರುತು ಆನಂದ್ ಎನ್ನುವ ಊರಿನ ಕಡೆಗೆ ತೋರಿಸುತ್ತದೆ; ಅದರಲ್ಲಿ ‘The Milk Capital of India’ (ಭಾರತದ ಹಾಲಿನ ರಾಜಧಾನಿ) ಎಂದು ಬರೆದಿದೆ.
ಹಲವು ಸಂಸ್ಥೆಗಳ ಹೊಣೆ
ಮುಂದೆ ಹೋದರೆ ಅಲ್ಲಿ ಅಮುಲ್, ಎನ್ಡಿಡಿಬಿ (ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ಮಂಡಳಿ), ಜಿಸಿಎಂಎಂಎಫ್ (ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ) ಮತ್ತು ಐಆರ್ಎಂಎ (ಗ್ರಾಮೀಣ ಮ್ಯಾನೇಜ್ಮೆಂಟ್ ಸಂಸ್ಥೆ) – ಇವುಗಳ ಕಚೇರಿಗಳಿವೆ. ಇವೆಲ್ಲ ಹೈನುಗಾರ ರೈತರನ್ನು ಬೆಂಬಲಿಸುವ ಮತ್ತು ಪೋಷಿಸುವ ಸಂಸ್ಥೆಗಳಾಗಿವೆ. ನಿವೃತ್ತರಾಗಿ ಅಧಿಕಾರವನ್ನು ಹಸ್ತಾಂತರಿಸುವ ಹೊತ್ತಿಗೆ ಕುರಿಯನ್ರನ್ನು ಭೇಟಿ ಮಾಡಿದ ಓರ್ವ ಪತ್ರಕರ್ತ “ನಿಮ್ಮ ಭವಿಷ್ಯದ ಯೋಜನೆಗಳೇನು?” ಎನ್ನುವ ಮಾಮೂಲಿ ಪ್ರಶ್ನೆಯನ್ನು ಕೇಳಿದನಂತೆ. ಅದಕ್ಕೆ ಅವರು ಅಷ್ಟೇ ನಿರ್ಲಿಪ್ತರಾಗಿ ಹೀಗೆ ಉತ್ತರಿಸಿದರು: “ನನ್ನ ಈ ಪ್ರಾಯದಲ್ಲಿ ಒಬ್ಬ ವ್ಯಕ್ತಿಗೆ ನಿಜವಾಗಿ ಭವಿಷ್ಯ ಎಂಬುದು ಇರುವುದು ಸಾಧ್ಯವಿಲ್ಲ; ಆದರೆ ಭೂತಕಾಲ ಇರುತ್ತದೆ.” ‘ಭೂತಕಾಲ ಇರುತ್ತದೆ’ ಎನ್ನುವ ಈ ಮಾತಿನ ಹಿಂದೆ ಪ್ರಚಂಡವಾದ ಆತ್ಮವಿಶ್ವಾಸವಿದೆ ಎಂಬುದನ್ನು ಗಮನಿಸಬೇಕು; ಏಕೆಂದರೆ ಅದು ಮಾಮೂಲಿಯಾದ ಭೂತಕಾಲವಲ್ಲ; ದಶಕಗಳ ಸಾಧನೆ ಮತ್ತು ಅದರ ಪ್ರಯೋಜನವನ್ನುಂಡು ಸಂತೃಪ್ತರಾದ ಕೋಟಿಗಟ್ಟಲೆ ದೇಶಬಾಂಧವರು, ಮುಖ್ಯವಾಗಿ ಭರವಸೆಯಿಂದ ವಂಚಿತರಾಗಿದ್ದ ಗ್ರಾಮೀಣ ಜನ ಅಲ್ಲಿ ಕಾಣಿಸುತ್ತಾರೆ.
ದಶಕಗಳುದ್ದಕ್ಕೂ ವರ್ಗೀಸ್ ಕುರಿಯನ್ ಅವರು ನಿರ್ವಹಿಸಿದ ಹುದ್ದೆಗಳು ಹಲವಾರು. ೧೯೫೦ರಿಂದ ೧೯೭೩ರವರೆಗೆ ಅವರು ಕೈರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಯೂನಿಯನ್ನ (ಅಮುಲ್ – ಇದರ ಜನಪ್ರಿಯ ಹೆಸರು) ಮ್ಯಾನೇಜರ್ ಹಾಗೂ ಅನಂತರ ಜನರಲ್ ಮ್ಯಾನೇಜರ್ ಆಗಿದ್ದರು. ೧೯೭೩ರಿಂದ ೧೯೮೩ರಲ್ಲಿ ನಿವೃತ್ತರಾಗುವ ವಯಸ್ಸಿನವರೆಗೆ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (ಜಿಸಿಎಂಎಂಎಫ್) ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿದ್ದರು. ಅನಂತರವೂ ಅವರಿಗೆ ಅದರಿಂದ ಬಿಡುಗಡೆಯಾಗಲಿಲ್ಲ; ಜಿಸಿಎಂಎಂಎಫ್ನ ಚುನಾಯಿತ ಅಧ್ಯಕ್ಷರಾಗಿ ಮುಂದುವರಿದರು. ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್ಗೆ (ಎನ್ಡಿಡಿಬಿ) ಪೂರ್ತಿ ೩೩ ವರ್ಷ ಅವರು ಅಧ್ಯಕ್ಷರಾಗಿದ್ದರು. ಇದು ಭಾರತ ಸರ್ಕಾರ ಸ್ಥಾಪಿಸಿದ್ದ ಸಂಸ್ಥೆ. ಆ ೩೩ ವರ್ಷಗಳಲ್ಲಿ ಕೇಂದ್ರದಲ್ಲಿ ಹಲವು ಸರ್ಕಾರಗಳು ಬಂದುಹೋದವು; ಆದರೆ ಅವೆಲ್ಲವೂ ಇವರನ್ನು ಮುಂದುವರಿಸಿದವು. ವಯಸ್ಸು ೮೦ ವರ್ಷ ದಾಟಿದ್ದರೂ ಐಆರ್ಎಂಎ, ಜಿಸಿಎಂಎಂಎಫ್ ಹಾಗೂ ಭಾರತ ರಾಷ್ಟ್ರೀಯ ಸಹಕಾರಿ ಡೈರಿ ಫೆಡರೇಶನ್ಗೆ (ಎನ್ಸಿಡಿಎಫ್ಐ) ಅವರೇ ಅಧ್ಯಕ್ಷರಾಗಿದ್ದರು. ಆ ಮೂಲಕ ತನಗೆ ದೇಶದ ಹೈನುಗಾರ ರೈತರು ಮತ್ತು ಗ್ರಾಮೀಣ ಜನತೆಯ ಹಿತರಕ್ಷಣೆ ಸಾಧ್ಯವಾಗುತ್ತಿದೆ ಎಂಬುದು ಅವರ ಸಮಾಧಾನವಾಗಿತ್ತು. ಮುಂಬಯಿ-ದೆಹಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಬಾಣದ ಗುರುತು ಸಾಂಕೇತಿಕವಾಗಿ ಇದನ್ನೆಲ್ಲ ಹೇಳುತ್ತಿತ್ತು.
ಗುಜರಾತಿನ ಹೆಮ್ಮೆ ‘ಆನಂದ್’
ಈ ಸಂಸ್ಥೆಗಳಿಂದಾಗಿ ಆನಂದ್ ಗುಜರಾತಿನ ಹೆಮ್ಮೆ ಎನಿಸಿದೆ. ೫೦ ವರ್ಷಗಳ ಹಿಂದೆ ಅದೊಂದು ಸಣ್ಣ ಪಟ್ಟಣವಾಗಿತ್ತು; ಹಳ್ಳಿ ಎಂದರೂ ಸಲ್ಲುತ್ತದೆ. “ಯಾವುದೋ ವಿಧಿ ನನ್ನನ್ನು ಇಲ್ಲಿಗೆ ಕರೆತಂದಿತು; ಅದು ಬಿಡಲಾಗದ ನಂಟಾಯಿತು” ಎಂದು ತಮ್ಮ ಆತ್ಮಚರಿತ್ರೆ ‘The Milk Capital of India’ನಲ್ಲಿ (ನಿರೂಪಣೆ: ಗೌರಿ ಸಾಲ್ವಿ) ಕುರಿಯನ್ ಹಿನ್ನೋಟ ಬೀರುತ್ತ ಹೇಳಿದ್ದಾರೆ. ಇದು ವಿಧಿಯಾಟ ಇರಬಹುದು; ಆದರೆ ದೇಶದ ಹಿತಕ್ಕೆ ಅಪೂರ್ವ ಕೊಡುಗೆ ನೀಡಿದ ಒಂದು ವಿಧಿಯಾಟ ಇದಾಗಿತ್ತು.
ಮಣಿಬೆನ್ ಕಿವಿಮಾತು
ತಮ್ಮ ಸಂಸ್ಥೆಗಳೊಂದಿಗೆ ವರ್ಗೀಸ್ ಕುರಿಯನ್ ಎಂತಹ ಸಂಬಂಧ ಹೊಂದಿದ್ದರು ಎಂಬುದಕ್ಕೆ ಒಂದು ನಿದರ್ಶನವನ್ನು ನೀಡಬಹುದು. ಕೇರಳದ ತ್ರಿಶೂರು ಮೂಲದ ಸಿರಿಯನ್ ಕ್ರೈಸ್ತರಾದ ವರ್ಗೀಸ್ ಕುರಿಯನ್ ೧೯೫೩ರಲ್ಲಿ ಮೊಲ್ಲಿ ಪೀಟರ್ ಅವರನ್ನು ಮದುವೆಯಾಗಿ ನವ-ವಧುವನ್ನು ಕರೆದುಕೊಂಡು ಆನಂದ್ಗೆ ಬಂದರು. ಆಗಲೇ ಪರಿಚಿತರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರ ಪುತ್ರಿ ಮಣಿಬೆನ್ ಮೊಲ್ಲಿ ಅವರಲ್ಲಿ ಹೀಗೆ ಹೇಳಿದರಂತೆ: “ನೀನು ಯಾವಾಗಲೂ ನೆನಪಿಡಬೇಕಾದ ಒಂದು ಅಂಶವೆAದರೆ ನೀನು ಕುರಿಯನ್ಗೆ ಎರಡನೇ ಹೆಂಡತಿ. ಡೈರಿಯೇ ಅವನ ಮೊದಲ ಹೆಂಡತಿ. ಇದನ್ನು ಎಂದಿಗೂ ಮರೆಯಬೇಡ; ಮರೆತು ಹೊಟ್ಟೆಕಿಚ್ಚು ಬೆಳೆಸಿಕೊಂಡು ದುಃಖಕ್ಕೆ ಗುರಿಯಾಗಬೇಡ; ಮತ್ತು ಎಂದಿಗೂ ಕೂಡ ನಿನ್ನ ಗಂಡನನ್ನು ಅವನ ಮೊದಲ ಹೆಂಡತಿಯಿಂದ ದೂರಮಾಡಲು ಪ್ರಯತ್ನಿಸಬೇಡ.” ಈ ಸಲಹೆಯನ್ನು ಮೊಲ್ಲಿ ಅಮ್ಮ ಹೃದಯಪೂರ್ವಕವಾಗಿ ಸ್ವೀಕರಿಸಿದ್ದರು. ಆನಂದ್ನ ಆಚೆಗಿನ ಜೀವನಕ್ಕೆ ಆಕೆ ಎಂದೂ ಹಂಬಲಿಸಲಿಲ್ಲ. “ಎಲ್ಲ ರೀತಿಯಲ್ಲಿ ತಂದೆಯನ್ನು ಸಾಧ್ಯವಾದಷ್ಟು ಬೆಂಬಲಿಸಿದರು” ಎಂದು ಮಗಳು ನಿರ್ಮಲಾ ಹೇಳಿದ್ದಾರೆ.
ಮಣಿಬೆನ್ ಕುರಿಯನ್ ಕುಟುಂಬಕ್ಕೆ ನಿಕಟವಾಗಿದ್ದರು. ಮೊಲ್ಲಿ ಅವರ ಮೊದಲ ಭೇಟಿ ಈ ಹಿರಿಯ ಜೀವಕ್ಕೆ ಆಶ್ಚರ್ಯ, ಸಂತೋಷಗಳನ್ನು ಉಂಟುಮಾಡಿತ್ತು. ನವ-ವಧು ಮೊಲ್ಲಿ ಸೀರೆ ಉಟ್ಟಿದ್ದರು. ಕೈಯಲ್ಲಿ ಕೆಂಪು ಗಾಜಿನ ಬಳೆಗಳಿದ್ದವು. ಹಣೆಯಲ್ಲಿ ಕುಂಕುಮದ ಬೊಟ್ಟು, ಜಡೆಹೆಣೆದ ಉದ್ದ ತಲೆಗೂದಲು. ಅವರ ನಿರೀಕ್ಷೆಯ ಕ್ರೈಸ್ತ ಯುವತಿ ಹಾಗಿರಲೇ ಇಲ್ಲ. ಆಂಗ್ಲರನ್ನು ಹೋಲುವಂತೆ ಬಾಬ್ಕಟ್ ತಲೆಗೂದಲು, ಅದಕ್ಕೊಪ್ಪುವ ವೇಷಭೂಷಣದ ನಿರೀಕ್ಷೆಯಲ್ಲಿ ಅವರಿದ್ದರಂತೆ. ಈ ಪರಿಚಯ, ಗೆಳೆತನಗಳು ಆಪ್ತವಾಗುತ್ತ ಹೋದವು. ಮಣಿಬೆನ್ ಇವರ ಮನೆಯ ಓರ್ವ ಸದಸ್ಯೆಯಂತೆಯೇ ಆಗಿಬಿಟ್ಟರು; ಮತ್ತು ಮೊಲ್ಲಿ ಜೀವಮಾನದುದ್ದಕ್ಕೂ ಅದೇ ರೀತಿ ಭಾರತೀಯ ವೇಷಭೂಷಣಗಳಿಗೆ ಅಂಟಿಕೊಂಡಿದ್ದರು. ಎಲ್ಲಿಯವರೆಗೆಂದರೆ ಪತಿ ಕಚೇರಿಯಿಂದ ಬರುವಾಗ ಪ್ರತಿದಿನ ರೇಷ್ಮೆ ಸೀರೆಯುಟ್ಟು ಮಲ್ಲಿಗೆ ಹೂದಂಡೆ ಮುಡಿದು ಪತಿಯನ್ನು ಸ್ವಾಗತಿಸುವುದನ್ನೊಂದು ಅಭ್ಯಾಸವನ್ನಾಗಿ ಮಾಡಿಕೊಂಡಿದ್ದರೆಂದು ಮಗಳು ನೆನಪಿಸಿಕೊಂಡದ್ದಿದೆ.
ಜನನ, ಬಾಲ್ಯ
ನವೆಂಬರ್ ೨೬, ೧೯೨೧ರಂದು ಕೇರಳದ ಕಲ್ಲಿಕೋಟೆಯಲ್ಲಿ ಹೆತ್ತವರ ನಾಲ್ಕು ಮಕ್ಕಳಲ್ಲಿ ಮೂರನೆಯವರಾಗಿ ವರ್ಗೀಸ್ ಜನಿಸಿದರು. ಆ ಹೆಸರಿಡಲು ಕಾರಣ ಚಿಕ್ಕಪ್ಪ ರಾವ್ಸಾಹೇಬ್ ಪಿ.ಕೆ. ವರ್ಗೀಸ್, ಅವರು ತಮ್ಮ ಊರು ಎರ್ನಾಕುಳಂನಲ್ಲಿ ಜನೋಪಕಾರಿಯಾಗಿ ಪ್ರಸಿದ್ಧರಾಗಿದ್ದರು. ಕುರಿಯನ್ ತಂದೆ ಪುತ್ತೇನ್ ಪರಕ್ಕಲ್ ಕುರಿಯನ್ ಕೊಚ್ಚಿಯಲ್ಲಿ ಸಿವಿಲ್ ಸರ್ಜನ್ ಆಗಿದ್ದರು. ತಾಯಿಯೂ ಪ್ರತಿಷ್ಠಿತ ಕುಟುಂಬದಿಂದ ಬಂದವರು. ಪಿಯಾನೋ ವಾದಕಿ, ವಿದ್ಯಾವಂತೆ. ಒಟ್ಟಿನಲ್ಲಿ ಸುಶಿಕ್ಷಿತರ ಕುಟುಂಬ. ೧೪ ವರ್ಷವಾದಾಗ ಬಾಲಕ ಕುರಿಯನ್ನನ್ನು ಮದ್ರಾಸಿನ ಲೊಯೋಲಾ ಕಾಲೇಜಿಗೆ ಸೇರಿಸಿದರು. ೧೯ ವರ್ಷ ಆಗುವಾಗ ವಿಜ್ಞಾನದಲ್ಲಿ ಪದವಿ ಗಳಿಸಿದ್ದಾಯಿತು. ಮತ್ತೆ ಇಂಜಿನಿಯರಿಂಗ್ ಕಾಲೇಜಿಗೆ ಸೇರಬೇಕೆಂದರೆ ವಯಸ್ಸಾಗಿಲ್ಲ ಎಂಬ ಅಡಚಣೆ ಬಂತು. ಅನಂತರ ಭೌತಶಾಸ್ತ್ರದ ಬಿ.ಎಸ್ಸಿ. ಮುಗಿಸಿ ಬಳಿಕ ಗಿಂಡಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದರು. ಕುರಿಯನ್ ತಂದೆ ಕ್ರೀಡಾಪಟು (ಅಥ್ಲೆಟ್) ಕೂಡಾ ಆಗಿದ್ದರು. ಅದು ಮಗನಲ್ಲೂ ಬಂತು. ಇವರು ಟೆನ್ನಿಸ್, ಬ್ಯಾಡ್ಮಿಂಟನ್, ಕ್ರಿಕೆಟ್ ಅಲ್ಲದೆ ಬಾಕ್ಸಿಂಗ್ನಲ್ಲಿ ಕೂಡಾ ಪ್ರವೇಶ ಪಡೆದರು; ಕ್ರೀಡಾಕೂಟಗಳಲ್ಲಿ ತಮ್ಮ ಕಾಲೇಜನ್ನು ಪ್ರತಿನಿಧಿಸಿದರು. ಬಾಕ್ಸಿಂಗ್ ಹೆಚ್ಚು ಸಮಯ ಬಯಸುತ್ತಿತ್ತು; ಮತ್ತು ಕೆಲವು ಸಲ ಮುಖ-ಮೂತಿಗೆಲ್ಲ ಪೆಟ್ಟುಬಿದ್ದು ಗಾಯ-ಗಡಿ ಆಗಿ ತಿನ್ನುವುದಕ್ಕೂ ಕಷ್ಟವಾಗುತ್ತಿತ್ತು. ಅದಲ್ಲದೆ ಅವರು ಯುಟಿಸಿಗೆ (ಯೂನಿಯನ್ ಟ್ರೈನಿಂಗ್ ಕರ್ಸ್) ಸೇರಿ ಉತ್ತಮ ಕೇಡೆಟ್ ಎನಿಸಿದ್ದರು. ಮುಂದೆ ಸೇನಾ ಮುಖ್ಯಸ್ಥರಾದ ಜ|| ಕೆ.ಎಸ್. ತಿಮ್ಮಯ್ಯ ಕೂಡ ಆಗ ಯುಟಿಸಿ ಕೇಡೆಟ್ ಅಂತೆ.
ಪ್ರತಿಷ್ಠಿತ ಮನೆತನ
ಇದೆಲ್ಲದರಿಂದ ಕುರಿಯನ್ ಶಿಸ್ತು ಕಲಿತದ್ದಲ್ಲದೆ ಅವರಿಗೆ ಸೇನೆಗೆ ಸೇರಬೇಕೆನ್ನುವ ಅಪೇಕ್ಷೆಯೂ ಆಗಿತ್ತಂತೆ. ಆದರೆ ಅದೇ ಹೊತ್ತಿಗೆ ಇವರಿಗೆ ೨೨ ವರ್ಷವಾಗಿದ್ದಾಗ ತಂದೆಯ ಅಕಾಲ ಮರಣವಾದ ಕಾರಣ ಸೇನೆಗೆ ಸೇರುವ ಆಸೆಯನ್ನು ಕೈಬಿಡಬೇಕಾಯಿತು. ಅಜ್ಜ (ತಾಯಿಯ ದೊಡ್ಡಪ್ಪ) ಚೆರಿಯನ್ ಮಥಾಯ್ ಬಂದು ಇವರನ್ನೆಲ್ಲ ತ್ರಿಶೂರಿಗೆ ಕರೆದೊಯ್ದರು. ಆತ ಕೊಚ್ಚಿ ಸಂಸ್ಥಾನದ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿದ್ದರು. ಮುಂದೆ ದೇಶದ ಹಣಕಾಸು ಸಚಿವರಾದ ಜಾನ್ ಮಥಾಯ್ ಅವರ ತಮ್ಮ. ತಾನು ಮದುವೆಯಾಗದ ಚೆರಿಯನ್ ಮಥಾಯ್ ಅವರು ಸೋದರ, ಸೋದರಿಯರನ್ನು ಉನ್ನತ ಶಿಕ್ಷಣಕ್ಕೆ ಇಂಗ್ಲೆಂಡಿಗೆ ಕಳುಹಿಸಿದ್ದರು. ಸುಮಾರು ೧೦೦ ಎಕ್ರೆ ಜಾಗದಲ್ಲಿ ಅವರ ಬಂಗ್ಲೆಯಿದ್ದು ಇಲ್ಲಿ ಬೋಟ್ಕ್ಲಬ್, ವ್ಯಾಯಾಮಶಾಲೆೆ, ಗಾಲ್ಫ್ಕೋರ್ಸ್ಗಳೆಲ್ಲ ಇದ್ದವು; ಉತ್ತಮ ಅಡುಗೆಭಟ್ಟರೂ ಇದ್ದರು. ವರ್ಗೀಸ್ ಸೇರಿದಂತೆ ಮಕ್ಕಳೆಲ್ಲ ರಜೆಗೆ ಅವರ ಮನೆಗೆ ಹೋಗುತ್ತಿದ್ದರು; ಬಾಲ್ಯದ ಸವಿನೆನಪಿಗೆ ಅದೊಂದು ಕಾರಣವಾಗಿತ್ತು.
ಸೇನೆಗೆ ಸೇರದಂತೆ ತಡೆದ ತಾಯಿ ಲೋಹಶಾಸ್ತ್ರ (ಮೆಟಲರ್ಜಿ)ದಲ್ಲಿ ಇಂಜಿನಿಯರಿಂಗ್ ಓದಿದ ವರ್ಗೀಸ್ರನ್ನು ಟಾಟಾ ಉಕ್ಕಿನ ಕಾರ್ಖಾನೆಗೆ (ಟಿಸ್ಕೋ) ಸೇರಲು ಹೇಳಿದರು. ಹತ್ತು ಮಂದಿ ‘ಎ’ ದರ್ಜೆಯ ಅಪ್ರೆಂಟಿಸ್ಗಳಲ್ಲಿ ಒಬ್ಬರಾಗಿ ವರ್ಗೀಸ್ ಕುರಿಯನ್ ೧೯೪೪ರಲ್ಲಿ ಟಿಸ್ಕೋಗೆ ಸೇರಿದರು. ಆಗ ಜಹಾಂಗೀರ್ ಜೆ. ಫಾಂದಿ ಟಿಸ್ಕೋದ ಆಡಳಿತ ನಿರ್ದೇಶಕರು. ಆ ಹೊತ್ತಿಗೆ ಜಾನ್ ಮಥಾಯ್ ಟಾಟಾ ಇಂಡಸ್ಟ್ರಿಸ್ನ ಓರ್ವ ನಿರ್ದೇಶಕರಾಗಿದ್ದು, ಒಮ್ಮೆ ಅವರು ಅಪ್ರೆಂಟಿಸ್ ಆಗಿದ್ದ ವರ್ಗೀಸ್ರನ್ನು ಕಾಣಲು ಬಂದರು; “ನೀನಿಲ್ಲಿ ಬೇಗ ಮೇಲೇರುವಿ” ಎಂದರು. ಅಲ್ಲಿಂದ ಸಂಸ್ಥೆಯಲ್ಲಿ ಎಲ್ಲರೂ ವರ್ಗೀಸ್ರನ್ನು ಕಾಣುವ ರೀತಿಯೇ ಬದಲಾಯಿತು; ಎಲ್ಲರೂ ಒಳ್ಳೆಯವರಾದರಂತೆ.
ಅವರು ಇನ್ನೊಮ್ಮೆ ಬಂದಾಗ ವರ್ಗೀಸ್ “ನಾನಿಲ್ಲಿ ಇರಲು ಬಯಸುವುದಿಲ್ಲ; ಬೇರೆ ಕಡೆ ಹೋಗುತ್ತೇನೆ. ಏಕೆಂದರೆ ನಾನೀಗ ಇಲ್ಲಿ ಬರೇ ಕುರಿಯನ್ ಅಲ್ಲ, ಬಾಸ್ನ ಮೊಮ್ಮಗ” ಎಂದರು. ಜಾನ್ ಮಥಾಯ್ “ಬೇಡ, ಇಲ್ಲೇ ಇರು. ಬೇಗ ಉನ್ನತ ಸ್ಥಾನಕ್ಕೆ ಏರುವಿ” ಎಂದು ಸಲಹೆ ನೀಡಿದರು. ಆದರೆ ಇವರು ಉನ್ನತ ಶಿಕ್ಷಣಕ್ಕಾಗಿ ಬ್ರಿಟಿಷ್ ಸರ್ಕಾರಕ್ಕೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದರು. ಅದು ಅವರಿಗೆ ಇಷ್ಟ ಆಗಲಿಲ್ಲ. ಇಲ್ಲೇ ಇರು ಎಂದು ಒತ್ತಾಯಪೂರ್ವಕವಾಗಿ ಹೇಳಿದರು. ಆದರೂ ಈತ ಒಪ್ಪಲಿಲ್ಲ.
ವಿದೇಶದಲ್ಲಿ ಶಿಕ್ಷಣ
ಬ್ರಿಟಿಷ್ ಸರ್ಕಾರ ೫೦೦ ವಿದ್ಯಾರ್ಥಿಗಳ ಆಯ್ಕೆಗೆ ಕ್ರಮಕೈಗೊಂಡಿತ್ತು. ಮೆಟಲರ್ಜಿ ಮತ್ತು ನ್ಯೂಕ್ಲಿಯರ್ ಫಿಸಿಕ್ಸ್ನಲ್ಲಿ ಮಾಸ್ಟರ್ಸ್ ಡಿಗ್ರಿಗೆ ಇವರು ಅರ್ಜಿ ಸಲ್ಲಿಸಿದ್ದರು. ಸಂದರ್ಶನದಲ್ಲಿ ಪ್ಯಾಶ್ಚರೈಸೇಶನ್ ಎನ್ನುವ ಪ್ರಶ್ನೆಗೆ ವರ್ಗೀಸ್ ಸರಿಯಾಗಿ ಉತ್ತರ ಕೊಟ್ಟಿದ್ದೇ ಇವರನ್ನು ಡೈರಿ ಇಂಜಿನಿಯರಿಂಗ್ಗೆ ಆರಿಸಿಬಿಟ್ಟರು. ಅದು ಬೇಡ; ತಾನು ಕೇಳಿದ್ದನ್ನು ಕೊಡಿ ಎಂದರೆ ‘ಆಗುವುದಿಲ್ಲ. ಇದಾದರೆ ಮಾತ್ರ’ ಎಂಬ ಉತ್ತರ ಸಿಕ್ಕಿತು. ಇವರಿಗೆ ಟಿಸ್ಕೋ ಅಂತೂ ಬಿಡಬೇಕಿತ್ತು. ವಿದ್ಯಾರ್ಥಿವೇತನ ಪಡೆದು ಭಾರತದ ಕೃಷಿ ಇಲಾಖೆಯ ಡೈರಿ ಇಂಜಿನಿಯರ್ ಆಗುವುದಕ್ಕಾಗಿ ಅಮೆರಿಕಕ್ಕೆ ಹೊರಟರು.
ಹೈನುಗಾರಿಕೆಯನ್ನು ತಪ್ಪಿಸಲು ಕೊನೆಯ ಪ್ರಯತ್ನ ಎಂಬಂತೆ ತನಗೆ ಹೈನುಗಾರಿಕೆ ಬಗ್ಗೆ ಏನೂ ಗೊತ್ತಿಲ್ಲ ಎಂದರೆ ಡೈರಿಯ ಪ್ರಾಥಮಿಕ ವಿಷಯ ತಿಳಿಯಲು ಬೆಂಗಳೂರಿನ ಇಂಪೀರಿಯಲ್ ಡೈರಿ ರೀಸರ್ಚ್ ಸಂಸ್ಥೆಗೆ ಕಳುಹಿಸಿದರು! (ಅನಂತರ ಅದು ಎನ್ಡಿಆರ್ಐ, ಭಾರತ ಆಯಿತು.)
ಬೆಂಗಳೂರಿಗೆ ಹೋದೊಡನೆ ‘ಟಿಸ್ಕೋ ಬಿಟ್ಟು ತಪ್ಪು ಮಾಡಿದೆ’ ಎನಿಸಲು ಶುರುವಾಯಿತು; ಕಾರಣ ಏನೂ ಗೊತ್ತಿಲ್ಲದವನನ್ನು ಡೈರಿ ಇಂಜಿನಿಯರಿಂಗ್ಗೆ ಆರಿಸಿದ್ದಾರೆನ್ನುವ ಮಾತು ಕೇಳಬೇಕಾಯಿತು. ಆ ಕಾರಣವಾಗಿ ದ್ವೇಷಿಸುವವರೂ ಇದ್ದರು. ಆದರೆ ಈಗ ಹಿಂದೆ ಹೋಗಲು ಅಸಾಧ್ಯವಾಗಿತ್ತು. ನಡುವೆ ಇಬ್ಬರು ತಂತ್ರಜ್ಞರು ಗೆಳೆತನಕ್ಕೆ ಸಿಕ್ಕಿದರು. ಹೊಟೇಲ್, ಸಿನೆಮಾ ಹಾಲ್ ಮುಂತಾಗಿ ಎಂಟು ತಿಂಗಳು ಕಳೆಯಿತು. ೧೯೪೦ರ ಚಳಿಗಾಲದಲ್ಲಿ ಅಮೆರಿಕಕ್ಕೆ ಹೊರಟರು; ಮಿಶಿಗನ್ ಯುನಿವರ್ಸಿಟಿಗೆ ಸೇರಿಕೊಂಡರು. ಅಲ್ಲಿ ಬೆಂಗಳೂರಿನ ಮಿತ್ರ ಫಿರೋಜ್ ಮೆಡೋರ್ ಅವರ ಗೆಳೆತನವಾಯಿತು; ಮುಂದೆ ಸುದೀರ್ಘ ಕಾಲ ಒಡನಾಡಿಯಾದ ಹರಿಚಂದ್ ಎಂ. ದಲಾಯಾ ಕೂಡ ಸೇರಿದರು. ಅನಾಯಾಸವಾಗಿ ದಿನಗಳು ಉರುಳುತ್ತಿದ್ದವು. ವರ್ಗೀಸ್ ಜೀವನಶೈಲಿ ಕಂಡು ದಲಾಯಾಗೆ ಚಿಂತೆ; ಓದುತ್ತಿಲ್ಲ, ಪ್ರಯೋಗಶಾಲೆಯಲ್ಲಿ ಕೆಲಸ ಮಾಡುತ್ತಿಲ್ಲ; ಇದೇನಿದು ಎಂಬುದಾಗಿ. ‘ನಾನು ನಗುತ್ತಾ ಡಿಗ್ರಿ ಪಡೆಯುತ್ತೇನೆ’ ಎಂದ ವರ್ಗೀಸ್ ನಗುತ್ತಲೇ ಮಾಸ್ಟರ್ ಡಿಗ್ರಿಯನ್ನು ಪಡೆದರು.
ಮಿಶಿಗನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಒಳ್ಳೆಯ ವಾತಾವರಣವಿತ್ತು; ಈತ ಟೆನ್ನಿಸ್ ಆಡಿ ಚಾಂಪಿಯನ್ಶಿಪ್ಪನ್ನು ಪಡೆದರು. ಮಿತ್ರರ ಜೊತೆ ಪ್ರೇರಣಾದಾಯಿ ಚರ್ಚೆ ನಡೆಯುತ್ತಿತ್ತು. ಮೂರನೇ ಜಗತ್ತಿನವರೆಂದು ಏನಾದರೂ ವರ್ಣದ್ವೇಷದ ಮಾತು ಬಂದರೆ ಕುರಿಯನ್ ಸರಿಯಾಗಿಯೇ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಕಬ್ಬಿಣ ಮತ್ತು ಉಕ್ಕಿಗೆ ಸಂಬಂಧಿಸಿ ಆಗ ಕೈಗೊಂಡ ಒಂದು ಸಂಶೋಧನೆಯನ್ನು ವಿಸ್ತರಿಸಿದ್ದರೆ ಬಹುದೊಡ್ಡ ಸಂಶೋಧನೆ ಆಗಬಹುದಿತ್ತು. ಅದರಿಂದ ತುಂಬ ಶ್ರೀಮಂತರಾಗಬಹುದಿತ್ತು. ಅದಾಗಿದ್ದಿದ್ದರೆ ಅಮೆರಿಕ ಬಿಡುವ ಪ್ರಶ್ನೆ ಬರುತ್ತಿರಲಿಲ್ಲ. ಆದರೆ ವಿಧಿಯ ಲೆಕ್ಕಾಚಾರ ಬೇರೆಯೇ ಇತ್ತಲ್ಲವೆ! ಮೆಟಲರ್ಜಿ ಮತ್ತು ನ್ಯೂಕ್ಲಿಯರ್ ಫಿನಿಕ್ಸ್ನಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ೧೯೪೮ರಲ್ಲಿ ಭಾರತಕ್ಕೆ ವಾಪಸಾದರು.
‘ಆನಂದ್ಗೆ ಹೋಗಿ’
ವಾಪಸಾದ ಬಗ್ಗೆ ವರದಿ ಮಾಡಿಕೊಂಡಾಗ ಶಿಕ್ಷಣ ಇಲಾಖೆಯ ಸಂಪರ್ಕದಲ್ಲಿರಿ ಎಂಬ ಸೂಚನೆ ಬಂತು. ಜಾನ್ ಮಥಾಯ್ ಅವರು ಆ ವೇಳೆಗೆ ದೇಶದ ಹಣಕಾಸು ಮಂತ್ರಿಯಾಗಿದ್ದರು. ಇಲಾಖೆಯ ಅಧೀನ ಕಾರ್ಯದರ್ಶಿಯವರನ್ನು ಭೇಟಿ ಮಾಡಿದಾಗ ಆನಂದ್ಗೆ ಹೋಗಿ ಎಂದರು. ಅದೆಲ್ಲಿದೆ ಎಂದು ಈತ ಕೇಳಿದರು; ಅಮೆರಿಕ ಮೂಲದ ಯೂನಿಯನ್ ಕಾರ್ಬೈಡ್ನ ಒಂದು ಉದ್ಯೋಗದ ಪ್ರಸ್ತಾವ ಕೂಡ ಬಂದಿತ್ತು. ಆನಂದ್ನ ಕೆಲಸ ಇಷ್ಟವಿಲ್ಲ ಎಂದಾಗ ಅಧೀನ ಕಾರ್ಯದರ್ಶಿ ವಿದ್ಯಾರ್ಥಿವೇತನವಾಗಿ ಪಡೆದ ೩೦ ಸಾವಿರ ರೂ. ವಸೂಲಿಗೆ ದಾವೆ ಹೂಡುವೆ ಎಂದರು.
ಬೇರೆ ದಾರಿ ಇರಲಿಲ್ಲ; ಸರ್ಕಾರದ ೩೦ ಸಾವಿರ ರೂ. ಮರಳಿಸಲು ಕಷ್ಟವಿತ್ತು. ನೇಮಕಾತಿ ಪತ್ರ ಕೈಗೆ ಬಂತು. ಆನಂದ್ನ ಕೆಲಸ ಬೇಡ ಎಂದಾಗ ಅಜ್ಜ ಜಾನ್ ಮಥಾಯ್ ಸಹಾಯ ಮಾಡಲು ನಿರಾಕರಿಸಿ, ತನ್ನ ಮಾತು ಕೇಳದೆ ಟಿಸ್ಕೋ ಬಿಟ್ಟಿದ್ದರ ಸೇಡು ತೀರಿಸಿಕೊಂಡರು. ಅಧೀನ ಕಾರ್ಯದರ್ಶಿ ಬೆಂಗಳೂರಿನ ಒಂದು ಸಂಸ್ಥೆಯ ಹುದ್ದೆಯನ್ನು ಬೇರೊಬ್ಬರಿಗೆ ಕೊಟ್ಟರು. ತುಂಬ ಸಮಯ ಇವರಿಗೆ ಆ ಬಗ್ಗೆ ಸಿಟ್ಟಿತ್ತು. “ಆದರೆ ಆ ಕೆಲಸ ಕೊಟ್ಟಿದ್ದರೆ ಮುಂದೆ ಏನಾಗುತ್ತಿತ್ತೋ ಗೊತ್ತಿಲ್ಲ. ಕೊನೆಯಲ್ಲಿ ಆ ಸಂಸ್ಥೆಯ ನಿರ್ದೇಶಕ ಆಗಬಹುದಿತ್ತು, ಅಷ್ಟೆ” ಎಂದು ಕುರಿಯನ್ ನೆನಪಿಸಿಕೊಂಡಿದ್ದರು.

ಅಂತೂ ಮುಂದೆ ಸವಾಲಿನ ಜೀವನವಿದ್ದ ಆನಂದ್ಗೆ ಪ್ರಯಾಣಿಸಿದ್ದಾಯಿತು. ಅಲ್ಲಿ ಇವರ ಕೆಲಸದ ಶೈಲಿಯನ್ನು ಗಮನಿಸಿದ ಸೀನಿಯರ್ಗಳು “ಈತ ಓರ್ವ ದಕ್ಷ ಅಧಿಕಾರಿ ಆಗುವುದು ಕಷ್ಟ” ಎಂದು ರಹಸ್ಯ ವರದಿಯಲ್ಲಿ ಬರೆದಿದ್ದರಂತೆ. ಇಷ್ಟು ಹೊತ್ತಿಗೆ ಜಾನ್ ಮಥಾಯ್ ಅವರ ನಿಕಟಸಂಬಂಧಿ ಎಂದು ಗೊತ್ತಾದ ಅಧೀನ ಕಾರ್ಯದರ್ಶಿ (ತಿಂಗಳಿಗೆ) ೬೦೦ ರೂ. ಸಂಬಳ ನಿಗದಿಪಡಿಸಿ ಆದೇಶ ಹೊರಡಿಸಿದರು. ಅದು ಹಣಕಾಸು ಇಲಾಖೆಗೆ ಹೋದಾಗ ಜಾನ್ ಮಥಾಯ್ ಅವರ ಗಮನಕ್ಕೆ ಬಂತು; ಅವರದನ್ನು ನಿರಾಕರಿಸಿದರು ಎನ್ನುವ ಕುರಿಯನ್, “ಆಗ ಭಾರತ ಸರ್ಕಾರದ ನೀತಿಗಳು ಅಂತಹ ಉನ್ನತ ಮಟ್ಟದಲ್ಲಿದ್ದವು” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರ್ಗೀಸ್ ಕುರಿಯನ್ ಅವರು ಆನಂದ್ಗೆ ಹೋಗುವ ಹೊತ್ತಿಗೆ ಅಲ್ಲೊಂದು ಹಾಲಿನ ಸಹಕಾರ ಸಂಘ ಒದ್ದಾಡುತ್ತಿತ್ತು. ಪೆಸ್ತೋನ್ಜೀ ಎಡುಲ್ಜೀ ಎನ್ನುವ ಚಾಣಾಕ್ಷ ಪಾರ್ಸಿ ವ್ಯಕ್ತಿ ಆ ಪ್ರದೇಶದ ಹಾಲಿನ ವ್ಯವಹಾರವನ್ನು ನಿಯಂತ್ರಿಸುತ್ತಿದ್ದ. ಇದಕ್ಕೆ ಮುನ್ನ ೧೯೪೨-೪೩ರಲ್ಲಿ ಮಹಾನಗರ ಮುಂಬಯಿ ನಿವಾಸಿಗಳಾದ ಬ್ರಿಟಿಷರಲ್ಲಿ ಒಂದು ಬಗೆಯ ಅನಾರೋಗ್ಯ ಕಂಡುಬಂದಿತ್ತು. ತಪಾಸಣೆ ನಡೆಸಿದಾಗ ಅದಕ್ಕೆ ಕಾರಣ ಅವರು ಬಳಸುತ್ತಿದ್ದ ಹಾಲು ಎಂದಾಯಿತು. ಹೆಚ್ಚಿನ ಪರೀಕ್ಷೆಗಾಗಿ ಅದನ್ನು ಲಂಡನ್ ಪ್ರಯೋಗಶಾಲೆಗೆ ಕಳುಹಿಸಿದರು; ಅಲ್ಲಿಂದ ಈ ಹಾಲು ಲಂಡನ್ನಿನ ಚರಂಡಿ ನೀರಿಗಿಂತ ಕೆಟ್ಟದಾಗಿದೆ ಎಂಬ ವರದಿ ಬಂತು. ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಮುಂಬಯಿಗೆ ಹಾಲಿನ ಕಮಿಷನರ್ ಅವರನ್ನು ನೇಮಿಸಿತು. ಹಾಲಿನ ಇಲಾಖೆಯನ್ನು ಸ್ಥಾಪಿಸಿ, ಮುಂಬಯಿಗೆ ಬರುವ ಹಾಲನ್ನು ದೋಷಮುಕ್ತಗೊಳಿಸುವ ಪ್ರಯತ್ನ ನಡೆಯಿತು. ಇದು ದೇಶದ ಕ್ಷೀರ ಉದ್ಯಮದಲ್ಲಿ ನಡೆದ ಆ ಬಗೆಯ ಮೊದಲ ಪ್ರಯತ್ನ. ಆದರೆ ಅದಕ್ಕೆ ಒಟ್ಟಾರೆ ಜನರ ಹಿತ ಅಥವಾ ಸಮಾಜವಾದದಂತಹ ಮೌಲ್ಯ ಕಾರಣವಲ್ಲ ಎಂಬುದು ಸ್ಪಷ್ಟ.
ಕೈರಾ ಹಾಲು ಮುಂಬಯಿಗೆ
ಮುಂಬಯಿಗೆ ಒಳ್ಳೆಯ ಹಾಲು ಬೇಕೆನ್ನುವಾಗ ಕೈರಾ ಜಿಲ್ಲೆಯತ್ತ ಗಮನ ಹರಿಯಿತು. ಮಾರುಕಟ್ಟೆ ಉಂಟಾದಾಗ ಉತ್ಪಾದಕರು ಚುರುಕಾಗುತ್ತಾರಲ್ಲವೆ? ಕೈರಾ ಜಿಲ್ಲೆಯ ರೈತರು ಅದಕ್ಕೆ ಸ್ಪಂದಿಸಿ ಹಾಲು ಉತ್ಪಾದನೆಯನ್ನು ಹೆಚ್ಚಿಸಿದರು. ಹೀಗೆ ಯಾವುದೇ ಹಾಲಿನ ಸಹಕಾರಿ ಸಂಘ ಸ್ಥಾಪನೆಯಾಗುವುದಕ್ಕೆ ಮುನ್ನವೇ ಹೈನುಗಾರ ರೈತರು ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಜಿಲ್ಲೆ ಇಡೀ ಪ್ರದೇಶದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ಜಿಲ್ಲೆ ಎಂಬ ಮನ್ನಣೆಗೆ ಪಾತ್ರವಾಗಿತ್ತು.
ಪೆಸ್ತೋನ್ಜೀ ದೊಡ್ಡ ಕಾರ್ಖಾನೆ ಸ್ಥಾಪಿಸಿ ಬೆಣ್ಣೆಯನ್ನು ತಯಾರಿಸಿ ಅದನ್ನು ಪಾಶ್ಚಾತ್ಯವೆಂದು ತೋರುವ ಪೋಲ್ಸನ್ (Polson) ಎನ್ನುವ ಹೆಸರಿನಲ್ಲಿ ಮಾರಾಟ ಮಾಡಲು ಆರಂಭಿಸಿದರು; ಈ ಬೆಣ್ಣೆ ಜನಪ್ರಿಯವಾಯಿತು. ಮುಂಬಯಿ ಹಾಲಿನ ಕಮಿಷನರ್ ಹಾಲಿಗಾಗಿ ಪೋಲ್ಸನ್ ಡೈರಿಯನ್ನು ಸಂಪರ್ಕಿಸಿದಾಗ ಮೊದಲಬಾರಿಗೆ ೩೫೦ ಕಿ.ಮೀ.ನಷ್ಟು ದೂರಕ್ಕೆ ಹಾಲನ್ನು ಕೆಡದಂತೆ ಕಳುಹಿಸುವ ಪ್ರಯತ್ನ ನಡೆಯಿತು. ಪಾಶ್ಚರೈಸ್ ಮಾಡಿದ ಹಾಲನ್ನು ಕ್ಯಾನ್ಗಳಲ್ಲಿ ತುಂಬಿ, ಕ್ಯಾನ್ಗಳ ಮೇಲೆ ಮಂಜುಗಡ್ಡೆಯ ತುಂಡುಗಳನ್ನು ಹಾಕಿ ಸಾಗಿಸಿದರು. ಬಾಂಬೆ ಮಿಲ್ಕ್ ಸ್ಕೀಮ್ಗೆ (ಬಿಎಂಸ್) ಇದು ನಾಂದಿಯಾಯಿತು. ಕೈರಾದ ಹಾಲಿಗೆ ಮುಂಬಯಿ ಮಾರುಕಟ್ಟೆಯಾಯಿತು. ಮುಂಬಯಿ ಜೊತೆ ಕೈರಾ ಜಿಲ್ಲೆಗೆ ನೇರ ಸಂಪರ್ಕ ಕೂಡ ಏರ್ಪಟ್ಟಿತು. ಕೈರಾ ಜಿಲ್ಲೆ ಹಾಲು ಉತ್ಪಾದಕರ ಸಂಘ (ಸೊಸೈಟಿ)ವನ್ನು ಸ್ಥಾಪಿಸಿದರು. ಪೆಸ್ತೋನ್ಜೀ ಹಾಲಿನ ಸಂಸ್ಕರಣದ ಚಾರ್ಜ್ ಕೇಳಿದಾಗ ಸರ್ಕಾರ ಅದನ್ನು ಕೊಟ್ಟಿತು; ಆ ಭಾಗದಲ್ಲಿ ಹಾಲು ಸಂಗ್ರಹಿಸುವ ಅಧಿಕಾರ ತನಗೆ ಮಾತ್ರ ಇರಬೇಕೆಂದು ಕೇಳಿದಾಗ ಸರ್ಕಾರ ಅದನ್ನು ಕೂಡ ದಯಪಾಲಿಸಿತು; ಹೀಗೆ ಅಲ್ಲಿ ಹಾಲಿನ ವ್ಯಾಪಾರದ ಏಕಸ್ವಾಮ್ಯ ಬಂತು.
ಸರ್ದಾರ್ ಪಟೇಲ್ಗೆ ದೂರು
ಈ ಹಾಲಿನ ವ್ಯವಹಾರದಲ್ಲಿ ಬಂದ ಲಾಭದ ಪಾಲು ತಮ್ಮ ಕಡೆಗೆ ಬರುತ್ತಿಲ್ಲ; ಅದನ್ನು ಯಾರೋ ಉಣ್ಣುತ್ತಾರೆ ಎನ್ನುವುದು ಹೈನುಗಾರ ರೈತರ ಬೇಸರಕ್ಕೆ ಕಾರಣವಾಯಿತು. ಅವರು ಸ್ವಾತಂತ್ರ್ಯ ಸೇನಾನಿ ಸರ್ದಾರ್ ಪಟೇಲರಿಗೆ ದೂರು ನೀಡಿದರು. ಅವರು ಆನಂದ್ ಸಮೀಪದವರು ಕೂಡ. ರೈತಾಪಿ ಜನ ಶೋಷಣೆಯಿಂದ ಮುಕ್ತರಾಗಬೇಕೆನ್ನುವುದು ಅವರ ಅಪೇಕ್ಷೆಯೂ ಆಗಿತ್ತು. ರೈತರೇ ಹಾಲಿನ ಸಂಗ್ರಹ, ಸಂಸ್ಕರಣ ಮತ್ತು ಮಾರಾಟವನ್ನು ಮಾಡುವುದೇ ಈ ಸಮಸ್ಯೆಗೆ ಪರಿಹಾರ; ಅದಕ್ಕಾಗಿ ಗ್ರಾಮೀಣ ಸಂಸ್ಥೆಯೊಂದು ಜನ್ಮತಾಳಬೇಕು; ಹಾಲು ಸಹಕಾರಿ ಸಂಘಗಳನ್ನು ರಚಿಸಿಕೊಂಡಾಗ ಸಂಪನ್ಮೂಲದ ಮೇಲೆ ಹಿಡಿತ ಬರಲು ಸಾಧ್ಯವೆಂದು ಅವರು ಸೂಚಿಸಿದರು – ಎನ್ನುವ ಕುರಿಯನ್, ಸರ್ದಾರ್ ಪಟೇಲರ ದರ್ಶನ (Vision) ಸದಾ ಸ್ಫೂರ್ತಿದಾಯಕ ಎಂದು ಕೊಂಡಾಡಿದ್ದಾರೆ.
ಪಟೇಲರು ಅಷ್ಟಕ್ಕೆ ನಿಲ್ಲಿಸದೆ ತಮ್ಮ ಡೆಪ್ಯೂಟಿಯಾಗಿದ್ದ ಮೊರಾರ್ಜಿ ದೇಸಾಯಿ ಅವರಿಗೆ ಈ ಕೆಲಸದ ಸಂಯೋಜನೆ (co-ordinate) ಮಾಡಲು ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ತ್ರಿಭುವನದಾಸ್ ಪಟೇಲ್ ಅವರಿಗೆ ಹೊಸ ಸಂಸ್ಥೆಯ ಅಧ್ಯಕ್ಷತೆಯ ಹೊಣೆಯನ್ನು ವಹಿಸಲಾಯಿತು. ಸ್ಥಳೀಯ ಹಾಲಿನ ವ್ಯವಹಾರದ ಏಕಸ್ವಾಮ್ಯವನ್ನು ದಕ್ಕಿಸಿಕೊಂಡಿದ್ದ ಪೋಲ್ಸನ್ರವರು ಆಗ ಸುಮ್ಮನಿರಲು ಸಾಧ್ಯವೆ? ಕೈರಾಗೆ ಸರ್ದಾರ್ ಪಟೇಲ್ ಸ್ವತಃ ಭೇಟಿಯನ್ನೂ ನೀಡಿದರು; “ಸಹಕಾರವನ್ನು ವಿಸ್ತರಿಸಿ; ಪೋಲ್ಸನ್ ತೊಲಗಿಸಿ (Remove); ನೀವೇ ಮಾಲೀಕರಾಗಿ” ಎಂದು ಕರೆಕೊಟ್ಟರು; ಇದು ನಡೆದದ್ದು ೧೯೪೫ರಲ್ಲಿ.
ಹೋರಾಟಕ್ಕೆ ಮಾರ್ಗದರ್ಶನ
“ಬ್ರಿಟಿಷರು ಇದನ್ನು ಇಷ್ಟಪಡುವುದಿಲ್ಲ; ಏಕೆಂದರೆ ಇದರ ಹಿಂದೆ ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಉದ್ದೇಶವಿದೆ; ಸರ್ದಾರ್ ಪಟೇಲ್ ರೈತರನ್ನು ಬ್ರಿಟಿಷರ ವಿರುದ್ಧ ಸಂಘಟಿಸುತ್ತಿದ್ದಾರೆ ಎಂದವರು ಭಾವಿಸುತ್ತಾರೆ; ಸಹಕಾರಿ ಸಂಘಗಳನ್ನು ರಚಿಸುವುದರ ಹಿಂದೆ ಅವರಿಗೆ ರಾಜಕೀಯ ಉದ್ದೇಶವಿದೆ ಎಂದವರು ತಿಳಿಯುತ್ತಾರೆ. ನಮಗೆ ಅದೇನೂ ಇಲ್ಲ” ಎಂದ ಪಟೇಲರು ಇದು ಸುಲಭದ ಕೆಲಸವಲ್ಲ ಎಂದು ಕೈರಾ ಜಿಲ್ಲೆಯ ರೈತರನ್ನು ಎಚ್ಚರಿಸಿದರು.
“ಇದನ್ನೆಲ್ಲ ಸಾಧಿಸಬೇಕಿದ್ದರೆ ನೀವು ಹೋರಾಡಲು ಸಿದ್ಧರಿರಬೇಕು. ಯಾವುದೇ ಹೋರಾಟದಲ್ಲಿ ನಷ್ಟವಿರುತ್ತದೆ ಎಂಬುದನ್ನು ಮರೆಯಬಾರದು; ನಷ್ಟವಾಗುವುದು ನಿಮಗೆ, ನನಗಲ್ಲ. ಒಂದು ವೇಳೆ ನೀವು ನಷ್ಟವನ್ನು ತಾಳಿಕೊಂಡು ಮುಂಬಯಿ ಹಾಲಿನ ಕಮಿಷನರ್ ಮತ್ತು ಆತನ ಇಲಾಖೆಯ ವಿರುದ್ಧ ಹೋರಾಡುವುದಾದರೆ ನಾಯಕತ್ವ ನೀಡಲು ನಾನು ಸಿದ್ಧ” ಎಂದು ತಿಳಿಸಿದರು.
ಹೋರಾಟದ ನೇತೃತ್ವದ ಹೊಣೆಯನ್ನು ಮೊರಾರ್ಜಿ ದೇಸಾಯಿ ಅವರಿಗೆ ನೀಡಿದರು; ಆಗ ಅವರು ಗುಜರಾತ್ ಪ್ರಾಂತ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದರು. ಮೊದಲಿಗೆ ಆನಂದ್ನಿಂದ ಸುಮಾರು ೧೦ ಕಿ.ಮೀ. ದೂರದ ಚಕ್ಲಾಶಿ ಎಂಬಲ್ಲಿ ಹೈನುಗಾರ ರೈತರ ಸಭೆ ನಡೆಸಿದರು. ಸಭೆಯಲ್ಲಿ ಕೇವಲ ಎರಡು ನಿರ್ಣಯಗಳನ್ನು ಅಂಗೀಕರಿಸಲಾಯಿತು.
೧. ಪೋಲ್ಸನ್ ಡೈರಿಗೆ ಹಾಲು ಮಾರುವುದಿಲ್ಲ.
೨. ಕೈರಾ ಜಿಲ್ಲೆಯ ಪ್ರತಿ ಗ್ರಾಮದಲ್ಲಿ ಒಂದು ಸಹಕಾರಿ ಸಂಘವನ್ನು ರಚಿಸುತ್ತೇವೆ; ಈ ಸಹಕಾರಿ ಸಂಘಗಳ ಯೂನಿಯನ್ ಕೈರಾದಲ್ಲಿದ್ದು, ಅದು ಹಾಲಿನ ಸಂಸ್ಕರಣವನ್ನು ನಿರ್ವಹಿಸುತ್ತದೆ. ಇದರಿಂದ ನಮಗೆ ಹಾಲಿನ ಸಂಗ್ರಹ, ಸಂಸ್ಕರಣ ಮತ್ತು ಮಾರಾಟದ ಮೇಲೆ ನಿಯಂತ್ರಣ ಸಾಧ್ಯವಾಗುತ್ತದೆ.
ಈ ರೀತಿಯಲ್ಲಿ ಬಾಂಬೆ ಮಿಲ್ಕ್ ಸ್ಕೀಮ್ ವಿರುದ್ಧ ರೈತರ ಹೋರಾಟ ಆರಂಭವಾಯಿತು. ರೈತರ ಸಹಕಾರಿ ಸಂಘಗಳಿಂದ ಮುಂಬಯಿ ಹಾಲಿನ ಕಮಿಷನರ್ ಹಾಲನ್ನು ನೇರವಾಗಿ ಖರೀದಿಸಬೇಕು; ಪೋಲ್ಸನ್ನಿಂದ ಅಲ್ಲ ಎಂಬುದನ್ನು ಸರ್ಕಾರ ಒಪ್ಪಲಿಲ್ಲ; ಸರ್ಕಾರದ ಬಿಎಂಎಸ್ ವಿರುದ್ಧ ರೈತರು ಮುಷ್ಕರಕ್ಕಿಳಿದು ಸಂಗ್ರಹಿಸಿದ ಹಾಲನ್ನು ರಸ್ತೆಗೆ ಚೆಲ್ಲಿದರು.
ಇದು ಕೈರಾ ಜಿಲ್ಲೆಯ ‘೧೫ ದಿನಗಳ ಹಾಲಿನ ಮುಷ್ಕರ’ ಎಂದು ಪ್ರಸಿದ್ಧವಾಗಿದೆ; ಪೋಲ್ಸನ್ ಡೈರಿಗೆ ಒಂದು ಹನಿ ಹಾಲು ಕೂಡ ಸಿಗಲಿಲ್ಲ; ಅವರ ಹಾಲಿನ ಸಂಗ್ರಹ ಮತ್ತು ಬಿಂಎಂಎಸ್ಗಳು ಒಟ್ಟಿಗೇ ಮಕಾಡೆ ಮಲಗಿದವು.
ಹಾಲಿನ ಕಮಿಷನರ್ ಮತ್ತು ಆತನ ಡೆಪ್ಯೂಟಿ ಹಾಗೂ ಮುಂದೆ ದೇಶದ ಪ್ರಸಿದ್ಧ ಹೈನು ಕಂಪೆನಿ ಕಟ್ಟಿದ ದಾರಾ ಖುರೋಡಿ ಕೈರಾ ಜಿಲ್ಲೆಗೆ ಭೇಟಿ ನೀಡಲು ನಿರ್ಧರಿಸಿದರು. ಅವರ ಬೇಡಿಕೆಗಳಿಗೆ ಒಪ್ಪುವುದೇ ಸರಿ ಎಂದು ಖುರೋಡಿ ಹಾಲಿನ ಕಮಿಷನರ್ಗೆ ಸಲಹೆ ನೀಡಿದರು: “ಅವರ ನಾಯಕ ತ್ರಿಭುವನ್ದಾಸ್ ಪಟೇಲರನ್ನು ನೋಡಿ: ಆತ ಗಾಂಧಿ ಟೊಪ್ಪಿ ಧರಿಸುತ್ತಾರೆ; ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ಆತ ಈ ಹಾಲಿನ ವ್ಯವಹಾರ ನಿಭಾಯಿಸಲು ಹೇಗೆ ಸಾಧ್ಯ? ಹಾಲಿನ ವ್ಯವಹಾರ ಒಂದು ತಾಂತ್ರಿಕ ಸಂಗತಿಯಾಗಿದೆ. ಆನಂದ್ನ ಸಹಕಾರಿ ಸಂಘಗಳು ಇದರಲ್ಲಿ ಯಶಸ್ವಿಯಾಗಲು ಸಾಧ್ಯವೆ? ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳಿ; ಇದರಲ್ಲಿ ಅವರು ಸೋಲುವುದು ನಿಶ್ಚಿತ” ಎಂದಾತ ಹೇಳಿದರು.
ಫಲ ನೀಡಿದ ರೈತ ಮುಷ್ಕರ
ತ್ರಿಭುವನ್ದಾಸ್ ಪಟೇಲರಿಗೆ ಇದೇ ಬೇಕಾಗಿತ್ತು. ಕೈರಾ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ರಚಿಸಬೇಕೆಂದು ಅವರು ಇಡೀ ವರ್ಷ ಊರೂರು ಸುತ್ತಿದರು. ವರ್ಷ (೧೯೪೬) ಮುಗಿಯುವ ಹೊತ್ತಿಗೆ ಐದು ಸೊಸೈಟಿಗಳು ನೋಂದಣಿಯಾಗಿ ಕೈರಾ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಯೂನಿಯನ್ ನಿಯಮಿತ (ಕೆಡಿಸಿಎಂವಿಯುಎಲ್) ಅಸ್ತಿತ್ವಕ್ಕೆ ಬಂತು.
“ನಮ್ಮ ಅದೃಷ್ಟವೆಂದರೆ, ದೇಶಕ್ಕೆ ಆ ಸಮಯಕ್ಕೇ ಸ್ವಾತಂತ್ರ್ಯ ಲಭಿಸಿತು. ಸರ್ದಾರ್ ವಲ್ಲಭಭಾಯಿ ಪಟೇಲರು ಉಪಪ್ರಧಾನಿಯಾದರು. ತ್ರಿಭುವನ್ದಾಸ್ ಪಟೇಲರು ದೆಹಲಿಗೆ ಹೋಗಿ ಆನಂದ್ನ ಸಂಸ್ಥೆಯ ಕಷ್ಟಗಳನ್ನು ಸರ್ದಾರರ ಮುಂದೆ ನಿವೇದಿಸಿಕೊಂಡು ಹೈನುಗಾರ ರೈತರಿಗೆ ಅವರದ್ದಾದ ಡೈರಿ ಬೇಕೆಂದು ಪ್ರಾರ್ಥಿಸಿದರು. ಆಗ ಸರ್ದಾರ್ ಕೃಷಿ ಮಂತ್ರಿ ರಾಜೇಂದ್ರ ಪ್ರಸಾದರನ್ನು ಭೇಟಿಯಾಗಿ ರೈತರ ಸಹಕಾರಿ ಸಂಘಕ್ಕೆ ಡೈರಿಯೊಂದನ್ನು ಕೇಳುವಂತೆ ಸೂಚಿಸಿದರು. ಅದಕ್ಕೆ ಅಧಿಕಾರಿಗಳಿಂದ ವಿರೋಧ ಬಂತು; ಸರ್ಕಾರೀ ಆಸ್ತಿಯನ್ನು ಆ ರೀತಿಯಲ್ಲಿ ಯಾರಿಗೂ ಕೊಡಲಾಗದು; ಡೈರಿಯ ಕೆಲವು ಯಂತ್ರಗಳನ್ನು ವರ್ಷಕ್ಕೆ ೯,೦೦೦ರೂ. ಬಾಡಿಗೆ ಆಧಾರದಲ್ಲಿ ಕೈರಾ ಸಹಕಾರಿ ಯೂನಿಯನ್ಗೆ ನೀಡಬಹುದು – ಎಂದರು. ಡೈರಿಯ ಉಳಿದ ಸ್ವತ್ತುಗಳು ಸಂಶೋಧನೆಯ ಸಲುವಾಗಿ ಎನ್ಡಿಆರ್ಐ ಬಳಿ ಇದ್ದವು.
ಅವೆಲ್ಲ ಒಂದನೇ ಮಹಾಯುದ್ಧದ ಕಾಲದ (೧೯೧೫-೧೯) ಮಾದರಿಯಲ್ಲಿದ್ದು, ಬಳಕೆ ಕಷ್ಟ ಎಂಬಂತಿದ್ದವು “ಆ ಹೊತ್ತಿಗೆ ಅಲ್ಲಿಗೆ ನನ್ನ ಪ್ರವೇಶವಾಯಿತು; ಅದು ಕೇವಲ ಆಕಸ್ಮಿಕ. ವಾಸ ಮಾಡುವ ಸ್ಥಳ, ಅನುಸರಿಸುವ ಜೀವನಶೈಲಿಗಳ ಬಗ್ಗೆ ನನ್ನಲ್ಲಿ ಯಾವ ಕನಸಿತ್ತೋ ಅದರಲ್ಲಿ ಆನಂದ್ಗೆ ಸ್ಥಾನವೇ ಇರಲಿಲ್ಲ” ಎಂದು ಡಾ|| ವರ್ಗೀಸ್ ಕುರಿಯನ್ ಪ್ರಾಂಜಲವಾಗಿ ಹೇಳಿಕೊಂಡಿದ್ದಾರೆ.

ಹಾಲು ಸಂಗ್ರಹಣಾ ಕೇಂದ್ರದಲ್ಲಿ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಅವರೊಂದಿಗೆ ಡಾ. ಕುರಿಯನ್.
ಅದು ಶುಕ್ರವಾರ, ಮೇ ೧೩, ೧೯೪೯. ಆನಂದ್ನಲ್ಲಿ ಎನ್ಡಿಆರ್ಐ ನಡೆಸುತ್ತಿದ್ದ ಕಚೇರಿಗೆ ಹೋದಾಗ ಪರಿಚಿತರಾದ ಕೋದಂಡಪಾಣಿ ಅಲ್ಲಿದ್ದರು. ‘ಶುಕ್ರವಾರ, ೧೩ನೇ ತಾರೀಖು ತುಂಬ ಕೆಟ್ಟದು, ದುರದಕೃಷ್ಟಕರ, ಇವತ್ತು ಕೆಲಸಕ್ಕೆ ಸೇರಬೇಡ’ ಎಂಬ ಸಲಹೆ ಅವರಿಂದ ಬಂತು. ಅದಕ್ಕೆ ಈತ “ಇಲ್ಲ, ನನಗೆ ಇಲ್ಲಿನದು ಇಷ್ಟ ಇಲ್ಲ. ಇಂದೇ ಚಾರ್ಜ್ ತೆಗೆದುಕೊಳ್ಳುತ್ತೇನೆ. ಏನಾದರೂ ಆಗಲಿ; ಹೆಚ್ಚು ಸಮಯ ಇಲ್ಲಿ ಇರುವುದಿಲ್ಲ” ಎಂದು ಉತ್ತರಿಸಿ ಚಾರ್ಜ್ ತೆಗೆದುಕೊಂಡೇಬಿಟ್ಟರು. ಆಗ ಆನಂದ್ ಜನಸಂಖ್ಯೆ ಸುಮಾರು ಹತ್ತು ಸಾವಿರ. ಹಿಂದೆ ವಿದ್ಯಾಭ್ಯಾಸದ ವೇಳೆ ತಾನಿದ್ದ ನ್ಯೂಯಾರ್ಕ್ಗೆ ಇದನ್ನು ಹೋಲಿಸಿದರೆ ಏನೇನೋ ಅನ್ನಿಸುತ್ತಿತ್ತು. ಉಳಿದುಕೊಳ್ಳಲು ಮನೆ ಅಥವಾ ರೂಮ್ ಕೇಳಿದರೆ ಯಾರೂ ಕೊಡುವವರಿಲ್ಲ. ದೂರದ ಮಲೆಯಾಳಿ, ಕ್ರೈಸ್ತ, ಮಾಂಸಾಹಾರಿ, ಬ್ರಹ್ಮಚಾರಿ – ಹೀಗೆ ಹಲವು ಕಾರಣಗಳು. ಬೇರೆ ದಾರಿಯಿಲ್ಲದೆ ಸಂಸ್ಥೆಯ ಗ್ಯಾರೇಜ್ನಲ್ಲೇ ಉಳಿದರು. ಕಿಟಕಿ ಇಲ್ಲದ ಅಲ್ಲಿಗೆ ಕಿಟಕಿ, ಬಚ್ಚಲುಮನೆ ಮಾಡಿಸಿಕೊಂಡರು. ‘ಓಡಿ ಹೋಗುವ’ ಎನಿಸುತ್ತಿತ್ತು; ಆದರೆ ಅದು ಅಸಾಧ್ಯ. ಏಕೆಂದರೆ ಸರ್ಕಾರ ಅವರ ಶಿಕ್ಷಣಕ್ಕೆ ವ್ಯಯಿಸಿತ್ತು. ಅವರು ಕಳುಹಿಸಿದಲ್ಲಿಗೆ ಹೋಗಬೇಕಿತ್ತು. ಗೆಳೆಯರೊಂದಿಗೆ ಇಸ್ಪೀಟಾಡುತ್ತ ಸಿಗರೇಟು ಸೇದುತ್ತ ಕಾಲಕಳೆದರು. ಹೈದರಾಬಾದ್ನಲ್ಲಿದ್ದ ಅಣ್ಣ ಒಬ್ಬ ಅಡುಗೆಭಟ್ಟನನ್ನು ಕಳುಹಿಸಿಕೊಟ್ಟರು. ಸಂಸ್ಥೆಯಲ್ಲಿ ಸಂಶೋಧನೆ ನಡೆಯುತ್ತಿರಲಿಲ್ಲ. ಆಗ ಅಲ್ಲಿಗೆ ಮಾಸ್ರ್ಸ್ ಡಿಗ್ರಿಯವರು ಬೇಕಿರಲಿಲ್ಲ. ಎಮ್ಮೆ ಹಾಲಿನಿಂದ ಸಣ್ಣ ಪ್ರಮಾಣದ ಹಾಲಿನ ಹುಡಿ ತಯಾರಿಸಬೇಕೆಂಬುದು ಅಲ್ಲಿಗೆ ವಹಿಸಿದ್ದ ಕೆಲಸ. ಅದಕ್ಕೆ ಸಂಶೋಧನೆಯೇನು ಬೇಕಿರಲಿಲ್ಲ. ಸರ್ಕಾರೀ ಕೆಲಸದ ಶೈಲಿಯಲ್ಲಿ ಅದನ್ನೇ ಉತ್ಪಾದನೆ ಎಂದು ಬದಲಿಸಿದ್ದರು. ನಿಜವೆಂದರೆ ಪ್ರಾಜೆಕ್ಟ್ನ ಮೊದಲ ಹೆಜ್ಜೆಯನ್ನೇ ಇಟ್ಟಿರಲಿಲ್ಲ. ಕುರಿಯನ್ ನೋಡುವಾಗ ಸಣ್ಣ ದೋಷದಿಂದಾಗಿ ಯಂತ್ರದ ರೋಲರ್ ಡ್ರೈಯರ್ ಕೆಲಸ ಮಾಡುತ್ತಿರಲಿಲ್ಲ. ಇವರು ಅದನ್ನು ಕೇವಲ ಹತ್ತು ನಿಮಿಷದಲ್ಲಿ ಸರಿಪಡಿಸಿದರು. ರೋಲರ್ ಡ್ರೈಯರ್ ಸರಿಯಾಗಿದ್ದರೆ ಹಾಲಿನ ಪುಡಿಯ ಉತ್ಪಾದನೆಯೇನೂ ಬ್ರಹ್ಮವಿದ್ಯೆಯಲ್ಲ.
ಸರ್ಕಾರೀ ಸೇವೆಗೆ ರಾಜೀನಾಮೆ
ದಾಸ್ತಾನಿದ್ದ ಐದು ಟನ್ ಹಾಲಿನ ಹುಡಿಯನ್ನು ಮಾರಾಟ ಮಾಡುವಂತೆ ಇವರು ಸಲಹೆ ನೀಡಿದರು; ಓರ್ವ ಬಿಸ್ಕತ್ ಕಾರ್ಖಾನೆಯವನಿಗೆ ಅದನ್ನು ಮಾರಿದ್ದಾಯಿತು. ಆಗ ಕುರಿಯನ್ ಮುಂಬಯಿಗೆ ಹೋದರೆ ತಾಜ್ ಹೊಟೇಲಿನಲ್ಲಿ ಉಳಿಯುತ್ತಿದ್ದು ಮಾರಾಟಕ್ಕೆ ಸಹಕರಿಸಿದರು. ಇವರ ಸೂಪರ್ವೈಸರ್ ಒಬ್ಬ ಸೋಮಾರಿ; ಸಹೋದ್ಯೋಗಿಗಳಿಗೆ ಕೆಲಸ ಮಾಡಲು ಏನೂ ಮನಸ್ಸಿಲ್ಲ. ಈ ಸರ್ಕಾರೀ (ಅ)ವ್ಯವಸ್ಥೆ ಸಾಕಾಯಿತು. ತನಗೆ ಕೊಡುತ್ತಿರುವ ೩೫೦ ರೂ. ಸಂಬಳ ವೇಸ್ಟಾಗುತ್ತಿದೆ ಎಂದು ಕೇಂದ್ರ ಕೃಷಿ ಸಚಿವಾಲಯಕ್ಕೆ ರಾಜೀನಾಮೆ ಪತ್ರ ಬರೆದರು. ಎಂಟು ತಿಂಗಳಾಗುವಾಗ ರಾಜೀನಾಮೆ ಸ್ವೀಕೃತವಾಯಿತು. (ಎರಡು ರೋಲರ್ ಡ್ರೈಯರ್ ನಡೆಸುವುದಕ್ಕೆ ಅಲ್ಲಿ ಇಪ್ಪತ್ತು ಜನ ಸಿಬ್ಬಂದಿ ಇದ್ದರು; ಬೇರೆ ದೇಶಗಳಲ್ಲಿ ಒಬ್ಬ ವ್ಯಕ್ತಿ ಅಂತಹ ಇಪ್ಪತ್ತು ರೋಲರ್ ಡ್ರೆöÊಯರ್ಗಳನ್ನು ನಡೆಸುತ್ತಾನೆ – ಎನ್ನುತ್ತಾರೆ ಕುರಿಯನ್.)
ಈ ನಡುವೆ ಇಷ್ಟೊಂದು ಶಿಕ್ಷಣ ಪಡೆದ ತಾನು ಏನು ಮಾಡಬಹುದೆನ್ನುವ ಅವರ ಹುಡುಕಾಟ ನಡೆದೇ ಇತ್ತು; ಅದಿಲ್ಲವಾದರೆ ಒಳ್ಳೆಯ ಶಿಕ್ಷಣ ಎಂಬುದಕ್ಕೆ ಬೆಲೆಯಿಲ್ಲ ಅನ್ನಿಸುತ್ತಿತ್ತು. ಆಗ ಅವರಿಗೆ ಸಹಕಾರಿ ಕ್ಷೇತ್ರ ಪೂರ್ತಿ ಅಪರಿಚಿತ. ಅಲ್ಲೇ ಸಮೀಪ ತ್ರಿಭುವನ್ದಾಸ್ ಪಟೇಲರ ಕೈರಾ ಸಹಕಾರಿ ಯೂನಿಯನ್ ಇತ್ತು. ಅವರು ಹಾಗೂ ಹೈನುಗಾರ ರೈತರು ಏನೋ ಒದ್ದಾಡುವಂತೆ ಕಾಣಿಸುತ್ತಿತ್ತು. ಅವರ ಬಗೆಗೊಂದು ಆಕರ್ಷಣೆ ಉಂಟಾಗಿ ಬಿಡುವಿನ ಸಮಯ ಅವರಿಗೇ ಒಂದಷ್ಟು ಸಹಾಯ ಮಾಡಲಾರಂಭಿಸಿದರು. ಅದು ತ್ರಿಭುವನದಾಸ್ ಮತ್ತು ಕೈರಾ ಹಾಲು ಉತ್ಪಾದಕರ ಸಹಕಾರಿ ಯೂನಿಯನ್ ಜೊತೆಗಿನ ಸುದೀರ್ಘ ಮತ್ತು ಗಾಢ ಸಂಬಂಧಕ್ಕೆ ದಾರಿಯಾಗಬಹುದೆಂಬ ಕಲ್ಪನೆ ಕುರಿಯನ್ ಅವರಿಗಂತೂ ಇರಲಿಲ್ಲ.
ಸರ್ದಾರ್ ಪಟೇಲರ ಹಿಂಬಾಲಕರಾಗಿದ್ದ, ಹಳೆ ಕಾಲದ ಮೌಲ್ಯಗಳಿಗೆ ಒಗ್ಗಿಕೊಂಡಿದ್ದ ತ್ರಿಭುವನ್ದಾಸ್ ಪಟೇಲ್ ಸದಾ ಜನಹಿತದ ಹಿಂದೆ ನಿಲ್ಲುವವರಾಗಿದ್ದು ವರ್ಗೀಸ್ ಕುರಿಯನ್ರಿಗೆ ಸ್ಫೂರ್ತಿದಾಯಕರೆನಿಸಿದರು.

ಸಂಸ್ಥೆಯಲ್ಲಿದ್ದ ಒಂದನೇ ಮಹಾಯುದ್ಧ ಕಾಲದ ತುಕ್ಕು ಹಿಡಿದ ಡೈರಿ ಯಂತ್ರಗಳನ್ನು ಪಟೇಲರಿಗೆ ತೋರಿಸಿ, “ಇದನ್ನು ಮುರಿದುಹಾಕಿ ನಾನು ದುರಸ್ತಿ ಮಾಡಬಹುದು. ಆದರೆ ಅದಕ್ಕಿಂತ ಸಾಲ ಮಾಡಿ ಹೊಸ ಸ್ಥಾವರವನ್ನು ಹಾಕುವುದೇ ಉತ್ತಮ” ಎಂದರು. ಅವರು ಇನ್ನೊಬ್ಬರ ಸಲಹೆ ಕೇಳಿದಾಗ ಆತ ಕುರಿಯನ್ ನೀಡಿದ ಸಲಹೆಯನ್ನೇ ಕೊಟ್ಟರು. ಎಂತಹ ಯಂತ್ರ ಬೇಕೆಂದು ತ್ರಿಭುವನ್ದಾಸ್ ಕುರಿಯನ್ರನ್ನೇ ಕೇಳಿದರು. ಮುಂದಿನ ಸಲ ಮುಂಬಯಿಗೆ ಹೋದಾಗ ಇವರು ಲಾರ್ಸನ್- ಟೂಬ್ರೋದ ಯಂತ್ರ ಖರೀದಿ ಬಗ್ಗೆ ಆರ್ಡರನ್ನೂ ಕೊಟ್ಟು ಬಂದರು. ಇವರನ್ನು ನೋಡಿ ಕಂಪೆನಿಯವರಿಗೆ ಸಂಶಯ ಬಂದು ‘ಯಂತ್ರಕ್ಕೆ ಎಷ್ಟು ಗೊತ್ತಾ?’ ಎಂದು ಕೇಳಿದರಂತೆ. ಅದಕ್ಕೆ ಇವರು ಬ್ಯಾಗ್ನಿಂದ ೪೦ ಸಾವಿರ ರೂ. ತೆಗೆದು ಆತನ ಮುಂದೆ ಎಸೆದು ಆಗಲೇ ಆರ್ಡರ್ ಕೊಟ್ಟರು; ಅದು ಪ್ಲೇಟ್ ಪ್ಯಾಶ್ಚರೈಸರ್.
ಭವಿಷ್ಯ ನಿಜವಾಯಿತು
ಕೈರಾ ಸಹಕಾರಿ ಯೂನಿಯನ್ಗೆ ಸೇರುವ ಮುನ್ನ ಕುರಿಯನ್ ನಂಬಿಕೆ ಇಲ್ಲದಿದ್ದರೂ ಭವಿಷ್ಯ ಕೇಳುವ ಒಂದು ಸಂದರ್ಭ ನಡೆದಿತ್ತು. ಗೆಳೆಯ ಮೆಡೋರಾ ನೆರಳು ನೋಡಿ ಭವಿಷ್ಯ ಹೇಳುವ ಓರ್ವ ಜ್ಯೋತಿಷಿಯ ಬಳಿಗೆ ಹೋಗಿದ್ದರು. ಅವರದಾದ ಬಳಿಕ ಜ್ಯೋತಿಷಿ ‘ನಿಮ್ಮದೂ ಹೇಳಬೇಕೆ?’ ಎಂದು ಕೇಳಿದಾಗ ‘ನಾನು ನಾಸ್ತಿಕ; ಇದನ್ನೆಲ್ಲ ನಂಬುವುದಿಲ್ಲ’ ಎಂದರು. ಆದರೂ ಕುತೂಹಲದಿಂದ ‘ಸರಿ’ ಎಂದರು. ಆಗ ಕೃಷಿ ಇಲಾಖೆಗೆ ರಾಜೀನಾಮೆ ಪತ್ರ ಬರೆಯುತ್ತಿದ್ದರು. ಜ್ಯೋತಿಷಿ “ಈಗಿನ ಕೆಲಸದಲ್ಲಿ ನಿಮಗೆ ಸಮಾಧಾನವಿಲ್ಲ. ತಿಂಗಳಿನಲ್ಲಿ ಬೇರೆ ಕೆಲಸ ಸಿಗುತ್ತದೆ. ಅದರಲ್ಲಿ ತುಂಬ ಮೇಲಕ್ಕೆ ಏರುತ್ತೀರಿ” ಎಂದರಂತೆ. ಹೀಗೆ ಅವರ ಸಂಶಯವನ್ನೇ ಪ್ರಶ್ನಿಸಿಕೊಳ್ಳುವ ಸಂದರ್ಭ ಎದುರಾಯಿತು.
ಹಾಗಿದ್ದಾಗ ಒಮ್ಮೆ ಮುಂಬಯಿಗೆ ಹೊರಟಾಗ ತ್ರಿಭುವನ್ದಾಸ್ ಎಲ್ಲಿಗೆಂದು ಕೇಳಿದರು. ‘ಮುಂಬಯಿಗೆ’ ಎಂದಾಗ “ನೀನು ಹೇಳಿದ ಯಂತ್ರ ಬರುತ್ತಿರುವಾಗ ಬಿಟ್ಟು ಹೋಗುವಿಯಾ?” ಎಂದು ಕೇಳಿದರಂತೆ. ಅವರ ಬಗ್ಗೆ ಗೌರವ ಮೊದಲೇ ಇತ್ತು. ಅವರ ಜೊತೆ ಕೆಲಸ ಮಾಡಲು ಒಪ್ಪಿಕೊಂಡು ಎರಡು ತಿಂಗಳು ಅಲ್ಲಿ ನಿಂತರು.
“ಅದು ನನ್ನ ಇಡೀ ಜೀವಮಾನದ ಸಂಬಂಧವಾಗುತ್ತದೆಂದು ಗೊತ್ತಿರಲಿಲ್ಲ” ಎಂದಿದ್ದಾರೆ ಕುರಿಯನ್.
ತ್ರಿಭುವನದಾಸ್ ಅವರು ಈ ಯುವಕನನ್ನು ಪ್ರಸ್ತುತ ಉದ್ಯೋಗದಲ್ಲಿ ಕ್ರಮೇಣ ಆಳವಾಗಿ ತೊಡಗಿಸಿದರು. “ರೈತರ ಈ ಡೈರಿಯನ್ನು ನಡೆಸಲು ನನಗೆ ನಿನ್ನ ವೃತ್ತಿಪರ ಕೌಶಲಗಳು ಬೇಕು. ನೀನು ಆನಂದ್ನಲ್ಲಿ ನಿಂತರೆ ರೈತರು ನಿನಗೆ ಕೃತಜ್ಞರಾಗಿರುತ್ತಾರೆ” ಎನ್ನುವ ಆಮಿಷ ಒಡ್ಡಿದರು. ರೈತರ ಸಹಕಾರಿ ಸಂಘಗಳನ್ನು ಕಟ್ಟಲು ಕುರಿಯನ್ರಂತಹ ವೃತ್ತಿಪರರನ್ನು ಬಳಸಿಕೊಳ್ಳಬೇಕು; ಆ ಬಗ್ಗೆ ಅವರಿಗೆ ಪ್ರೇರಣೆ ನೀಡಬೇಕು ಎನ್ನುವುದವರ ದೃಷ್ಟಿಯಾಗಿತ್ತು. ಕುರಿಯನ್ರಿಗೆ ಕೂಡ ಅಲ್ಲಿ ಉದ್ಯೋಗವಲ್ಲದೆ ಬಹುಜನರ ಹಿತವೂ ಇದೆ ಎನ್ನಿಸಿತು. ಬೇರೆಯವರಿಗಾಗಿ ಕೆಲಸ ಮಾಡಿದಾಗ ಆಳವಾದ ತೃಪ್ತಿ ಸಿಗುತ್ತದೆ ಎನ್ನುವುದು ಅನುಭವಕ್ಕೆ ಬರತೊಡಗಿತು. ಆದರೆ ಅಲ್ಲಿ ದೇಶದ ಹೈನುಗಾರಿಕೆಯ ಕ್ರಾಂತಿ ಅಡಗಿದೆ ಎಂಬುದೇನೂ ಅವರಿಗೆ ಗೊತ್ತಿರಲಿಲ್ಲ. ತ್ರಿಭುವನದಾಸ್ ಪಟೇಲರಂತಹ ಹಿರಿಯರು ಅಲ್ಲಿದ್ದ ಕಾರಣ ಕೈರಾ ಸಹಕಾರಿ ಯೂನಿಯನ್ನಲ್ಲಿ ರಾಜಕೀಯ ಹಸ್ತಕ್ಷೇಪ ಸಾಧ್ಯವಿರಲಿಲ್ಲ; ಯಾರಾದರೂ ಕೈ ಹಾಕಿದರೆ ಅಂತಹ ಕೈಯನ್ನೇ ಕಡಿದುಬಿಡುವಂಥವರು ಅವರು. ೧೯೫೦ರಲ್ಲಿ ಕೈರಾ ಸಹಕಾರಿ ಯೂನಿಯನ್ಗೆ ಸೇರಿದ್ದ ಅವರ ಮುಂದೆ ರೈತರ ಆರ್ಥಿಕ ಸ್ವಾತಂತ್ರ್ಯ-ಸ್ವಾವಲಂಬನೆ ಬಗ್ಗೆ ಕೆಲಸ ಮಾಡಬೇಕೆನ್ನುವ ಆದರ್ಶವಿತ್ತು. ತಾವು ಮಾಡುತ್ತಿರುವ ಕೆಲಸ ರೈತರಿಗೆ ಮತ್ತು ಹೊಸರಾಷ್ಟ್ರಕ್ಕೆ ಮುಖ್ಯ ಎನಿಸಿತ್ತು. ಹಾಲು ಉತ್ಪಾದಕರದೇ ಮಾಲೀಕತ್ವ ಮತ್ತು ನಿಯಂತ್ರಣವಿರುವ ಸಹಕಾರಿ ಸಂಸ್ಥೆಯನ್ನು ಕಟ್ಟಿದ್ದು ತನಗೆ ಸಿಕ್ಕಿದ ಅತಿ ದೊಡ್ಡ ಉಡುಗೊರೆ ಎಂದವರು ಯಾವಾಗಲೂ ಭಾವಿಸಿದ್ದರು.
ಸವಾಲು–ಅವಕಾಶ
ಆನಂದ್ನ ಆ ಸಹಕಾರಿ ಸಂಸ್ಥೆಯೊಂದಿಗೆ ಬೆಳೆದ ವರ್ಗೀಸ್ ಕುರಿಯನ್ ಹೊಸ ಪಾಠಗಳನ್ನು ಕಲಿಯುತ್ತಹೋದರು. ಪ್ರತಿಯೊಂದು ಸವಾಲಿನೊಳಗೆ ಒಂದು ಅವಕಾಶ ಇರುತ್ತದೆನ್ನುವುದು ಅಲ್ಲಿ ಆರಂಭದಲ್ಲೇ ಸಿಕ್ಕಿದ ಒಂದು ಪಾಠವಾಗಿತ್ತು.
ಭಾರತದ ಹೈನುಗಾರಿಕೆಯ ಒಂದು ವಿಲಕ್ಷಣ ಸಮಸ್ಯೆಯೆಂದರೆ ಇಲ್ಲಿನ ಎಮ್ಮೆಗಳು ಬೇಸಿಗೆಯಲ್ಲಿ ಕೊಡುವ ಹಾಲಿನ ಇಮ್ಮಡಿ ಹಾಲನ್ನು ಚಳಿಗಾಲದಲ್ಲಿ ಕೊಡುತ್ತವೆ. ಅದನ್ನು ಪೂರ್ತಿ ಮುಂಬಯಿಗೆ ಕಳುಹಿಸಬೇಕು; ಇಲ್ಲವಾದರೆ ಹಾಳಾಗುತ್ತದೆ. ಮುಂಬಯಿ ಹಾಲಿನ ಕಮಿಷನರ್ ದಾದಾ ಖುರೋಡಿ ಅವರಿಗೆ ಯಾವಾಗಲೂ ಒಂದೇ ಪ್ರಮಾಣದ ಹಾಲು ಬರಬೇಕು; ಅದರಲ್ಲಿ ಏರಿಳಿತ ಸಲ್ಲದು; ಇದೇ ಒಂದು ತಕರಾರಿಗೆ ಕಾರಣವಾಯಿತು.
“ಎಮ್ಮೆಗಳು ಚಳಿಗಾಲದಲ್ಲಿ ಇಮ್ಮಡಿ ಹಾಲನ್ನು ಕೊಡುತ್ತವೆ; ಅದನ್ನು ನೀವು ತೆಗೆದುಕೊಳ್ಳಬೇಕಲ್ಲವೆ?” ಎಂದು ಕುರಿಯನ್ ಹೇಳಿದಾಗ ಕೋಪಗೊಂಡು ಖುರೋಡಿ “ಮುಂಬಯಿ ಜನ ಬೇಸಿಗೆಯಲ್ಲಿ ಒಂದು ಬಾಟ್ಲಿ ಮತ್ತು ಚಳಿಗಾಲದಲ್ಲಿ ಎರಡು ಬಾಟ್ಲಿ ಹಾಲು ಕುಡಿಯುವುದಿಲ್ಲ. ಅದು ನಿಮ್ಮ ಸಮಸ್ಯೆ. ನಾನು ಒಂದೇ ರೀತಿ ಖರೀದಿಸುವುದು” ಎಂದರು. ಮುಂಬಯಿಗೆ ಬೇಕಾದಷ್ಟು ಹಾಲು ಸಿಗುತ್ತಿರಲಿಲ್ಲ; ಅದಕ್ಕಾಗಿ ನ್ಯೂಜಿಲ್ಯಾಂಡ್ನಿಂದ ಹಾಲಿನ ಹುಡಿ ಆಮದು ಮಾಡಿ ಅದರಿಂದ ಹಾಲು ತಯಾರಿಸಿಕೊಳ್ಳುತ್ತಿದ್ದರು. ನಮ್ಮ ದೇಶದಲ್ಲಿ ಬೇಕಾದಷ್ಟು ಹಾಲು ಸಿಗುತ್ತಿದ್ದ ಕಾರಣ ಅಂತಹ ಆಮದು ಅನಗತ್ಯ; ಮತ್ತು ನಮ್ಮ ಹೈನುಗಾರರಿಗೆ ಮಾಡುವ ಅನ್ಯಾಯವಾಗಿತ್ತು. ಕುರಿಯನ್ ಅಲ್ಲಿಗೇ ಬಿಡುವವರಲ್ಲ. “ಖುರೋಡಿ ಅವರೆ, ನೀವು ಮುಂಬಯಿ ಹಾಲಿನ ಕಮಿಷನರೇ ಅಥವಾ ನ್ಯೂಜಿಲ್ಯಾಂಡ್ನವರೇ? ನಮ್ಮ ರೈತರಿಂದ ಹಾಲು ಖರೀದಿಸುವ ಬದಲು ಬೇರೊಂದು ದೇಶದಿಂದ ಹಾಲಿನ ಹುಡಿ ಆಮದು ಮಾಡುವುದೇಕೆ?” ಎಂದು ಕೇಳಿಯೇಬಿಟ್ಟರು.
ಹಾಲಿನ ಜಗಳ
ಆತ ಮತ್ತಷ್ಟು ಸಿಟ್ಟಾಗಿ “ಹೀಗೆ ಹೇಳಲು ನಿಮಗೆಷ್ಟು ಧೈರ್ಯ? ಸರ್ಕಾರವನ್ನು ಪ್ರಶ್ನಿಸಲು ನೀವು ಯಾರು?” ಎಂದು ಕೇಳಿದರು; ಹೆಚ್ಚುವರಿ ಹಾಲನ್ನು ಖರೀದಿಸಲು ನಿರಾಕರಿಸಿ ಹಾಲಿನ ಹುಡಿ ಆಮದನ್ನು ಮುಂದುವರಿಸಿದರು. ಈ ಆಮದು ವ್ಯವಹಾರದಿಂದ ಕೆಲವರಿಗೆ ಏನೋ ಲಾಭವಿದೆ ಎಂಬುದು ಗಮನಕ್ಕೆ ಬಂತು. ಕೆಲವರಿಗೆ ವಿದೇಶ ಪ್ರವಾಸದ ಲಾಭವಾದರೆ ಇನ್ನು ಕೆಲವರಿಗೆ ದರ ಏರಿಸಿ ಖರೀದಿಸುವ ಲಾಭ – ಹೀಗೇ ಏನೋನೋ. ಆದರೆ ಆಮದನ್ನು ನಿಲ್ಲಿಸಲು ಕುರಿಯನ್ರಿಗೆ ಸಾಧ್ಯವಾಗಲಿಲ್ಲ. ಭಾರತ ಸರ್ಕಾರಕ್ಕೆ ದೂರು ಕೂಡ ನೀಡಿದರು; ಆದರೆ ಯಾರೂ ಈ ಕಡೆಗೆ ಗಮನಹರಿಸಲಿಲ್ಲ. ಆನಂದ್ನಲ್ಲಿ ಜೀವನ ಕುತೂಹಲಕರವಾಗಿ ಸಾಗಿತ್ತು. ಒಮ್ಮೆ ಮುಂಬಯಿಗೆ ಕಳುಹಿಸಿದ ಹಾಲಿನಲ್ಲಿ ಸತ್ತ ನೊಣವಿದೆ ಎಂಬ ದೂರು ಬಂತು; ಮಾಧ್ಯಮಗಳಲ್ಲಿ ಅದು ದೊಡ್ಡ ಸುದ್ದಿಯಾಗಿ ಆಕ್ರೋಶವೂ ಕೇಳಿಬಂತು. ಆಗ ಕುರಿಯನ್ “ನೊಣದ ಪರೀಕ್ಷೆ ಮಾಡಿ. ಅದರ ಶ್ವಾಸಕೋಶದಲ್ಲಿ ಹಾಲು ತುಂಬಿದ್ದರೆ ಅದು ಹಾಲಿಗೆ ಬಿದ್ದು ಸತ್ತದ್ದೆಂದೂ ಇಲ್ಲವಾದರೆ ಸತ್ತ ನೊಣವನ್ನು ಯಾರೋ ಹಾಲಿಗೆ ಹಾಕಿದ್ದೆಂದೂ ಸಾಬೀತಾಗುತ್ತದೆ” ಎಂದರು. ಆಗ ಗಲಾಟೆ ಒಮ್ಮೆಲೇ ಬಂದ್ ಆಯಿತಂತೆ!
ಈ ನಡುವೆ ಮುಂಬಯಿ ಪ್ರಾಂತದ ಉಪಮಂತ್ರಿ (ಆಗ ಗುಜರಾತ್ ಮುಂಬಯಿ ಪ್ರಾಂತಕ್ಕೆ ಸೇರಿತ್ತು) ವೈ.ಬಿ. ಚವ್ಹಾಣ್ ಅವರು ಒಮ್ಮೆ ಕೈರಾ ಯೂನಿಯನ್ನ ಹಾಲು ಸಂಸ್ಕರಣ ಘಟಕಕ್ಕೆ ಭೇಟಿ ನೀಡಿದರು. ತ್ರಿಭುವನದಾಸ್ ಅವರ ಸಲಹೆಯ ಮೇರೆಗೆ ಘಟಕವನ್ನೆಲ್ಲ ತೋರಿಸಿದ ಕುರಿಯನ್, ಮುಂಬಯಿ ಹಾಲಿನ ಕಮಿಷನರ್ ಖುರೋಡಿ ಅವರು ಕೈರಾ ಹಾಲು ಸಹಕಾರಿ ಸಂಘಗಳ ಪ್ರಗತಿಗೆ ಅಡ್ಡಗಾಲಿಡುತ್ತಿದ್ದಾರೆ ಎನ್ನುವ ದೂರನ್ನು ಕೂಡ ಮುಂದಿಟ್ಟರು. ಮುಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ, ಕೇಂದ್ರ ಸಚಿವ, ಉಪಪ್ರಧಾನಿ ಎಲ್ಲ ಆದ ಚವ್ಹಾಣ್ ಅವರು ಹತ್ತಿರ ಕರೆದು “ನೀವು ಹೇಳುತ್ತಿರುವುದೆಲ್ಲ ಸರಿ. ಆದರೆ ಉಪಮಂತ್ರಿಯಾದ ನಾನೀಗ ಏನೂ ಮಾಡಲಾರೆ. ನೀವು ಮಾಡುತ್ತಿರುವುದು ಸರಿ; ಮತ್ತು ಕೈರಾದ ಹಾಲು ಉತ್ಪಾದಕರ ಹಿತ ಮತ್ತು ಹಕ್ಕುಗಳಿಗಾಗಿ ನಡೆಸುವ ನಿಮ್ಮ ಹೋರಾಟವನ್ನು ನಿಲ್ಲಿಸಬೇಡಿ; ಮುಂದುವರಿಸಿ” ಎಂದು ಆತ್ಮೀಯವಾಗಿ ಹೇಳಿದರು.
ನಿರಂತರ ಪ್ರಗತಿ
೧೯೫೨ರಲ್ಲಿ ಕೈರಾ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಯೂನಿಯನ್ ಐದು ವರ್ಷಗಳನ್ನು ಪೂರೈಸಿತು. ೧೯೪೮ರಲ್ಲಿ ಅದು ದಿನಕ್ಕೆ ೨೦೦ ಲೀಟರ್ ಹಾಲು ಸಂಗ್ರಹಿಸುತ್ತಿದ್ದರೆ ಐದು ವರ್ಷ ಆಗುವಾಗ ೨೦ ಸಾವಿರ ಲೀ.ಗೆ ಏರಿತ್ತು. ಹಾಲು ಸಂಗ್ರಹದ ಪ್ರದೇಶ ಕೂಡ ವಿಸ್ತರಿಸಿತ್ತು. ಮುಂಬಯಿಯಲ್ಲಿ ಹಾಲಿನ ಬೇಡಿಕೆ ಹೆಚ್ಚಿದಂತೆ ಇವರ ಸಂಗ್ರಹ, ಪೂರೈಕೆಯೂ ಬೆಳೆಯಿತು. ಬಹುಬೇಗ ಹೊಸದೊಂದು ಡೈರಿ ತಮಗೆ ಬೇಕಾಗುತ್ತದೆಂದು ಕುರಿಯನ್ರಿಗೆ ಅನ್ನಿಸಿತು. ಆಗ ಜನರಲ್ ಮ್ಯಾನೇಜರ್ ಆಗಿದ್ದ ಅವರಿಗೆ ಒಂದು ಆಧುನಿಕ ಡೈರಿಯನ್ನು ನಡೆಸಲು ಬೇಕಾದ ಜ್ಞಾನ ಮತ್ತು ಕೌಶಲಗಳನ್ನು ಗಳಿಸಿಕೊಳ್ಳುವುದು ಅಗತ್ಯ ಅನ್ನಿಸಿತು; ಅಂತಹ ಒಂದು ಅವಕಾಶ ಕೂಡಾ ಅವರ ಮುಂದೆ ತೆರೆದುಕೊಂಡಿತು. ಆ ವರ್ಷ ಇಬ್ಬರು ಪ್ರಮುಖ ಕೇಂದ್ರಸಚಿವರು ಕೈರಾಗೆ ಭೇಟಿ ನೀಡಿದರು. ಯೂನಿಯನ್ ಡೈರಿಯ ಶೀಘ್ರ ಬೆಳವಣಿಗೆಯ ಸುದ್ದಿ ದೆಹಲಿಗೆ ಮುಟ್ಟಿತು.
ಕೇಂದ್ರ ಕೃಷಿ ಕಾರ್ಯದರ್ಶಿ ವಿಷ್ಣು ಸಹಾಯ್ ಅವರು ಕೈರಾಗೆ ಬಂದು ಇವರ ಹಾಲು ಉತ್ಪಾದಕರ ಸಹಕಾರಿ ಯೂನಿಯನ್ ಯಾವ ರೀತಿ ಕೆಲಸ ಮಾಡುತ್ತಿದೆ; ಹಾಲಿನ ಸಂಗ್ರಹ, ಸಂಸ್ಕರಣ, ಮಾರಾಟಗಳೆಲ್ಲ ಹೇಗೆ ನಡೆಯುತ್ತಿವೆ ಎಂದು ಪೂರ್ತಿಯಾಗಿ ನೋಡಿ ಹೀಗೆ ಉದ್ಗರಿಸಿದರು: “ನಾವು ಖರ್ಚು ಮಾಡಿ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳುಹಿಸಿದ ಒಬ್ಬ ವ್ಯಕ್ತಿ ಕಲಿತು ವಾಪಸು ಬಂದು ಏನೋ ಅರ್ಥಪೂರ್ಣವಾದದ್ದನ್ನು ಮಾಡುತ್ತಿದ್ದಾನೆನ್ನುವ ಬಗ್ಗೆ ನನಗೆ ತುಂಬ ಸಂತೋಷವಾಗುತ್ತದೆ.” ಅದಕ್ಕೆ ಪ್ರತಿಕ್ರಿಯಿಸಿದ ಕುರಿಯನ್ “ದನ ಎಂದರೆ ಏನೆಂದು ಗೊತ್ತಿಲ್ಲದ ಒಬ್ಬನನ್ನು ನೀವು ಡೈರಿ ಇಂಜಿನಿಯರಿಂಗ್ ಮಾಡಲು ವಿದೇಶಕ್ಕೆ ಕಳುಹಿಸಿದಿರಿ. ಅದಕ್ಕೆ ಹೋಲಿಸಿದರೆ ಈಗ ಡೈರಿಯಲ್ಲಿ ಮೂರು-ನಾಲ್ಕು ವರ್ಷ ಕಳೆಯುವಾಗ ನನಗೆ ಈ ಬಗ್ಗೆ ಸ್ವಲ್ಪ ಜ್ಞಾನ ಬಂದಿದೆ. ಈಗ ಹೊರದೇಶಕ್ಕೆ ಕಳುಹಿಸಿದರೆ ನಿಜವಾಗಿಯೂ ಅರ್ಥಪೂರ್ಣವಾದದ್ದನ್ನು ಕಲಿಯಬಹುದು ಎನಿಸುತ್ತದೆ” ಎಂದರು.
“ಹಾಗಾದರೆ ಎಲ್ಲಿಗಾದರೂ ಹೋಗಿ” ಎಂದು ಕೃಷಿ ಕಾರ್ಯದರ್ಶಿ ಹೇಳಿದಾಗ ಇವರು “ಹಾಗೆ ಹೇಳಿದರೆ ಆಗುತ್ತದೆಯೇ? ಹಣ ಎಲ್ಲಿದೆ?” ಎಂದು ನೇರವಾಗಿಯೇ ಕೇಳಿದರು. ಸಂಭಾಷಣೆ ಆಗ ಅಲ್ಲಿಗೇ ನಿಂತಿತು. ಆದರೆ ಸಹಾಯ್ ಅವರು ಆಗಲೇ ಕುರಿಯನ್ರನ್ನು ಒಂದು ಸೀನಿಯರ್ ಫೆಲೋಶಿಪ್ ಅಡಿಯಲ್ಲಿ ನ್ಯೂಜಿಲ್ಯಾಂಡ್ಗೆ ಕಳುಹಿಸುವ ತೀರ್ಮಾನ ಮಾಡಿರಬೇಕು. ಏಳು ತಿಂಗಳ ಪ್ರವಾಸ. ಮೊದಲ ಐದು ತಿಂಗಳು ಹೈನುಗಾರಿಕೆಯ ಸ್ವರ್ಗ ನ್ಯೂಜಿಲ್ಯಾಂಡ್ನಲ್ಲಾದರೆ ಉಳಿದ ಎರಡು ತಿಂಗಳು ಆಸ್ಟ್ರೇಲಿಯಾದಲ್ಲಿ.
ಹಾಲಿನ ಹುಡಿ ತಯಾರಿ
೧೯೫೦ರ ದಶಕದ ಆರಂಭದಲ್ಲಿ ಎಮ್ಮೆ ಹಾಲಿನಿಂದ ಹಾಲಿನ ಹುಡಿ ತಯಾರಿ ಅಸಾಧ್ಯವೆಂಬ ಭಾವನೆಯಿತ್ತು. ಕುರಿಯನ್ ಮತ್ತಿತರರು ಸಂಶೋಧನೆಯ ಭಾಗವಾಗಿ ಸಣ್ಣ ಪ್ರಮಾಣದಲ್ಲಷ್ಟೇ ತಯಾರಿಸಿದ್ದರು. ನ್ಯೂಜಿಲ್ಯಾಂಡ್ನ ತರಬೇತಿಯ ವೇಳೆ ಇವರಿಗೆ ಅದನ್ನು ದೊಡ್ಡ ಪ್ರಮಾಣದಲ್ಲಿ ವಾಣಿಜ್ಯಾತ್ಮಕವಾಗಿ ಕೂಡ ತಯಾರಿಸಬಹುದೆಂಬ ಆತ್ಮವಿಶ್ವಾಸ ಬಂತು. ವಿದೇಶದಿಂದ ಮರಳಿದವರು ಗೆಳೆಯ ಮತ್ತು ಸಹೋದ್ಯೋಗಿ ದಲಾಯಾ ಅವರಲ್ಲಿ ಅದನ್ನು ಮಾಡುವಂತೆ ಹೇಳಿದರು. ಅದು ಯಶಸ್ವಿಯಾಗಿ ಆ ಕಾಲಕ್ಕೆ ಬಹುದೊಡ್ಡ ಸಾಧನೆ ಎನಿಸಿತು. ನ್ಯೂಜಿಲ್ಯಾಂಡ್ನ ತರಬೇತಿ ಇನ್ನು ಕೆಲವು ಲಾಭಗಳನ್ನೂ ತಂದಿತು. ಭಾರತದಲ್ಲಿ, ವಿಶೇಷವಾಗಿ ಕೈರಾ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ಅಭಿವೃದ್ಧಿಪಡಿಸುವುದಕ್ಕೆ ನ್ಯೂಜಿಲೆಂಡ್ ಸರ್ಕಾರ ಮುಂದೆ ಬಂತು. ನೆರವಿನ ಅರ್ಧಭಾಗ ಕೈರಾ ಯೂನಿಯನ್ಗೆ ಉಚಿತ ಕೊಡುಗೆಯಾದರೆ ಉಳಿದ ಅರ್ಧ ಭಾರತ ಸರ್ಕಾರಕ್ಕೆ ನೀಡಿದ ಸಾಲ.
ಕೈರಾ ಸಹಕಾರಿ ಯೂನಿಯನ್ ಬೆಳೆಯುತ್ತಲೇ ಇತ್ತು. ಆ ಹೊತ್ತಿಗೆ ಕುರಿಯನ್ ತಮ್ಮೊಳಗೆ ಬೆಳೆಯುತ್ತಿದ್ದ ಒಂದು ಯೋಚನೆಯನ್ನು ತ್ರಿಭುವನದಾಸ್ ಪಟೇಲ್ ಅವರ ಮುಂದಿಟ್ಟರು. ಸಂಸ್ಥೆಗೆ ಇನ್ನೊಂದು ಆಧುನಿಕ ಡೈರಿ ಬೇಕು; ಅದಕ್ಕೆ ಸ್ವಲ್ಪ ಜಾಗ ಬೇಕು ಎಂಬುದೇ ಆ ಯೋಚನೆ. ಈ ಹೊಸ ಸ್ಥಾವರಕ್ಕೆ ಸುಮಾರು ೪೦ ಲಕ್ಷ ರೂ. ಬೇಕಾಗಬಹುದು ಎಂದಾಗ ಪಟೇಲರು ಆಘಾತಗೊಂಡು ‘ಅಷ್ಟು ಹಣ ಎಲ್ಲಿಂದ ತರುವುದು’ ಎಂದುಬಿಟ್ಟರು. ಹೊಸ ಡೈರಿ ಎಷ್ಟು ಮುಖ್ಯ ಎಂದು ಮನಗಾಣಿಸುವ ಸಲುವಾಗಿ “ಇದಕ್ಕೆ ಸಹಕಾರಿ ಯೂನಿಯನ್ ಒಪ್ಪುವುದಿಲ್ಲವಾದರೆ ಇನ್ನೊಂದು ಉದ್ಯೋಗ ಹುಡುಕಿಕೊಂಡು ಹೋಗುವೆ; ಇಲ್ಲಿ ಇರಲಾರೆ” ಎಂದರು. ಆಗ ಪಟೇಲರು “ಅದೆಲ್ಲ ಬೇಡ; ಹೊಸ ಡೈರಿಗೆ ಬೇಕಾದ ಹಣ ಹೇಗಾದರೂ ಸಂಗ್ರಹಿಸೋಣ” ಎಂದು ಸಮಾಧಾನಪಡಿಸಿದರು. ವೃತ್ತಿಪರರಿಲ್ಲದೆ ಡೈರಿ ನಡೆಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಅವರು ಬಂದಿದ್ದರು.
ಕೈರಾದ ತ್ರಿಮೂರ್ತಿಗಳು
ತ್ರಿಭುವನದಾಸ್ ಓರ್ವ ಸಮರ್ಥ, ಪ್ರಭಾವಿ ನಾಯಕರಾದರೂ ತಮಗೆ ವೃತ್ತಿಪರರ ಕೌಶಲದ ಬೆಂಬಲ ಅಗತ್ಯ ಎಂಬುದನ್ನು ಕಂಡುಕೊಂಡಿದ್ದರು. ಗುಜರಾತಿನ ಅತಿಮುಖ್ಯ ರಾಜಕೀಯ ನಾಯಕರಲ್ಲಿ ಒಬ್ಬರಾದರೂ ಸಂಸ್ಥೆಯ ಕೆಲಸಗಳಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಕುರಿಯನ್ ಮತ್ತವರ ತಂಡಕ್ಕೆ ಬೆಂಬಲ ನೀಡುತ್ತ ಸಂಸ್ಥೆಯ ಯಶಸ್ಸಿಗೆ ತಂಡದ ಶ್ರೇಷ್ಠ ಕೊಡುಗೆ ಬರುವಂತೆ ನೋಡಿಕೊಳ್ಳುತ್ತಿದ್ದರು.

ಹರಿಚಂದ್ ದಲಾಯಾ ಅವರು ತಂಡದಲ್ಲಿ ಇಲ್ಲವಾಗಿದ್ದರೆ ಆನಂದ್ನಲ್ಲೆ ಅಂತಹ ‘ಪವಾಡ’ ಸಂಭವಿಸುತ್ತಿರಲಿಲ್ಲ ಎನ್ನುತ್ತಾರೆ ಕುರಿಯನ್. ಯೂನಿಯನ್ನಲ್ಲಿ ಪ್ರಚಂಡ ಸಾಧ್ಯತೆ ಇತ್ತೆಂಬುದು ತನಗೆ ತಿಳಿದಿದ್ದರೂ ಹೈನುಗಾರಿಕೆಯ ಎಷ್ಟೋ ವಿಷಯ ಗೊತ್ತಿರಲಿಲ್ಲ. ದಲಾಯಾ ಅಮೆರಿಕದಲ್ಲಿ ಇವರೊಂದಿಗೆ ಕಲಿತವರು. ಒಮ್ಮೆ ಮುಂಬಯಿಗೆ ಹೋಗಿದ್ದಾಗ ತಮ್ಮ ಸಂಸ್ಥೆಗೆ ಬರುವಂತೆ ಅವರನ್ನು ಆಹ್ವಾನಿಸಿದರು. “ನಾನು ಕಂಡ ಅತಿ ಶ್ರೇಷ್ಠ ಹೈನುಗಾರಿಕೆ ತಜ್ಞರಲ್ಲಿ (Dairymen) ಅವರೊಬ್ಬರು. ಉತ್ತರ ಪ್ರದೇಶದ ಯಾದವರಾದ ಅವರು ತಮ್ಮ ವಂಶ ಶ್ರೀಕೃಷ್ಣನ ಜೀವನದಲ್ಲಿ ಬರುವ ಗೋಪಿಕೆಯರಿಂದ ಬಂದುದೆAದು ಹೇಳುತ್ತಿದ್ದರು. ಆತ ಹಾಲು ಉತ್ಪಾದಕರ (ಗೊಲ್ಲರ) ನಡುವೆಯೇ ಹುಟ್ಟಿ ಬೆಳೆದವರು. ಅವರ ಕುಟುಂಬ ಕರಾಚಿಯಲ್ಲಿ ಒಂದು ದೊಡ್ಡ ಡೈರಿಯನ್ನು ಹೊಂದಿತ್ತು. ದೇಶ ವಿಭಜನೆಯಾದಾಗ ಅವರು ಭಾರತಕ್ಕೆ ಬರಬೇಕಾಯಿತು. ಆಗ ೩೦೦ ದೊಡ್ಡ ಕೆಂಪು ಸಿಂಧಿ ದನಗಳಿದ್ದ ಡೈರಿಯನ್ನು ಮುಚ್ಚಿದರು. ಅವರು ಡೈರಿಮ್ಯಾನ್ ಮಾತ್ರ ಅಲ್ಲ; ಪ್ರತಿಭಾವಂತ ಡೈರಿ ತಂತ್ರಜ್ಞಾನಿ. ಆತ ನಮ್ಮ ಸಂಸ್ಥೆಗೆ ಸೇರಿದಾಗ ‘ನಮ್ಮ ಶ್ರಮ ವಿಭಜನೆ ತುಂಬ ಸರಳ. ‘ನಾನು ಮಾತನಾಡುತ್ತೇನೆ; ನೀವು ಕೆಲಸ ಮಾಡಿ’ ಎಂದು ಅವರಿಗೆ ಹೇಳಿದೆ. ಆತ ಈ ಮಾತನ್ನು ಒಪ್ಪಿಕೊಂಡಿರಬೇಕು; ಏಕೆಂದರೆ ಆನಂದ್ನಲ್ಲಿ ಆತ ಪೂರ್ತಿ ೩೫ ವರ್ಷ ಇದ್ದರು” ಎಂದು ತಮ್ಮ ಆತ್ಮಕಥನದಲ್ಲಿ ಕುರಿಯನ್ ನೆನಪಿಸಿಕೊಂಡಿದ್ದಾರೆ.
ಬಂಧುವಾದ ಮಣಿಬೆನ್
ಆನಂದ್ನಲ್ಲಿ ವರ್ಗೀಸ್ ಕುರಿಯನ್ ಮತ್ತವರ ಕುಟುಂಬಕ್ಕೆ ಓರ್ವ ನಿಕಟ ಬಂಧುವಿನಂತೆ ಒದಗಿದವರು ಸರ್ದಾರ್ ವಲ್ಲಭಭಾಯಿ ಪಟೇಲರ ಪುತ್ರಿ ಮಣಿಬೆನ್ ಪಟೇಲ್ ಅವರು. ಆನಂದ್ ಮತ್ತು ಸಹಕಾರಿ ಯೂನಿಯನ್ಗೆ ಅವರು ಆಗಾಗ ಭೇಟಿ ನೀಡುತ್ತಿದ್ದರು. ಸಂಸ್ಥೆಯಲ್ಲಿ ಆಕೆಗೆ ಔಪಚಾರಿಕ ಹುದ್ದೆ ಇಲ್ಲದಿದ್ದರೂ ಆಗಾಗ ಬರುತ್ತಿದ್ದರು. ಹಿಂದೆಯೆ ಹೇಳಿದಂತೆ ಅವರ ತಂದೆ ಕೈರಾ ಜಿಲ್ಲೆಯ ಹೈನುಗಾರಿಕೆಯ ಬಗ್ಗೆ ತುಂಬ ಕಾಳಜಿ ಹೊಂದಿದ್ದರು. ತಂದೆಯ ಧ್ಯೇಯಕ್ಕೆ ಅರ್ಪಿಸಿಕೊಂಡ ಆಕೆ ಅತ್ಯಂತ ಪ್ರಾಮಾಣಿಕ ಮಹಿಳೆ ಎಂದು ಕುರಿಯನ್ ಹೇಳಿದ್ದಾರೆ. ಪಟೇಲರು ನಿಧನ ಹೊಂದಿದಾಗ (೧೯೫೦) ಮಣಿಬೆನ್ ಅವರು ತಂದೆ ಹೇಳಿದಂತೆ ಒಂದು ಬ್ಯಾಗ್ ಮತ್ತು ಒಂದು ಪುಸ್ತಕವನ್ನು ಪ್ರಧಾನಿ ನೆಹರು ಅವರಿಗೆ ನೀಡಿದರು. ಬ್ಯಾಗ್ನಲ್ಲಿ ೩೫ ಲಕ್ಷ ರೂ. ಇತ್ತು; ಪುಸ್ತಕ ಅದರ ಅಕೌಂಟ್ ಬಗ್ಗೆ ಇತ್ತು. ಬ್ಯಾಗ್ ತೆಗೆದುಕೊಂಡ ನೆಹರು ಥ್ಯಾಂಕ್ಸ್ ಎಂದುದಲ್ಲದೆ ಬೇರೇನೂ ಹೇಳಲಿಲ್ಲ. ಜೀವನಕ್ಕೆ ಏನು ಮಾಡುತ್ತೀರಿ, ನೆರವು ಬೇಕೆ ಮುಂತಾಗಿ ಏನಾದರೂ ಕೇಳಿಯಾರೆಂದು ಈಕೆ ಒಂದು ಕ್ಷಣ ಕಾದರಂತೆ.
ಏನೂ ಇಲ್ಲ. ಹಾಗೆಯೇ ಮರಳಿದರು. ಆಕೆ ಒಂಟಿಯಾಗಿದ್ದರು. ಸ್ವಂತ ಹಣ ಇರಲಿಲ್ಲ. ಕಾಂಗ್ರೆಸ್ನ ಯಾರು ಕೂಡ ಆಕೆಯ ಬಗ್ಗೆ ಮತ್ತೆ ಕೇಳಿದ್ದಿಲ್ಲವಂತೆ. ಬಿರ್ಲಾ ಭವನದಲ್ಲಿ ನಿಲ್ಲಲು ಹೇಳಿದರು. ಅದು ಆಕೆಗೆ ಸರಿಹೊಂದಲಿಲ್ಲ. ಅಹಮದಾಬಾದ್ನ ಸೋದರಸಂಬಂಧಿ ಮನೆಗೆ ಹೋದರು. ಕಾರಿಲ್ಲ; ಬಸ್ ಅಥವಾ ಮೂರನೇ ದರ್ಜೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.
ಮುಂದೆ ತ್ರಿಭುವನದಾಸ್ ಅವರ ಸಲಹೆಯ ಮೇರೆಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದೆಯಾದರು. ಆದರೂ ರೈಲಿನ ಪ್ರಥಮ ದರ್ಜೆ ಪಾಸ್ ಬಳಸದೆ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು. ಚರಖಾದಲ್ಲಿ ಸ್ವತಃ ತೆಗೆದ ನೂಲಿನಿಂದ ತಯಾರಿಸಿದ ಸೀರೆಯನ್ನು ಉಡುತ್ತಿದ್ದರು; ತಾನು ಹೋಗುವ ಕಡೆಗೆಲ್ಲ ಚರಖಾ ಒಯ್ಯುತ್ತಿದ್ದರು. ತಂದೆ ನಿಧನ ಹೊಂದಿದ ಅನಂತರ ಮಣಿಬೆನ್ ತಂದೆಯ ಸ್ಥಿರೀಕರಣ (fixation)ವನ್ನು ಮೊರಾರ್ಜಿ ದೇಸಾಯಿ ಅವರಿಗೆ ಹಸ್ತಾಂತರಿಸಿದ್ದರು. ಆದರೆ ಅವರ ಬಳಿ ಆಕೆಗಾಗಿ ಸಮಯ ಇಲ್ಲ. ಕುರಿಯನ್ ಮೊರಾರ್ಜಿ ಬಳಿಗೆ ಹೋಗುವಾಗ ಆಕೆಯೂ ಹೋಗುತ್ತಿದ್ದರು. ಆದರೆ ಮೊರಾರ್ಜಿ ಇವರನ್ನು ಮಾತ್ರ ಒಳಗೆ ಕರೆದು ಆಕೆಯನ್ನು ಹೊರಗೆ ಕಾಯಿಸುತ್ತಿದ್ದರಂತೆ. ಈ ನಡವಳಿಕೆ ಕುರಿಯನ್ಗೆ ಹಿಡಿಸದೆ ಒಮ್ಮೆ ಅದನ್ನು ಪ್ರಸ್ತಾಪಿಸಿದರಂತೆ. ಮೊರಾರ್ಜಿ ಆಕೆಯ ಬಗ್ಗೆ ಒರಟಾಗಿರಲಿಲ್ಲ; ಆದರೆ ಯಾವುದೋ ಒಂದು ಬಗೆಯ ಅಲಕ್ಷ್ಯ (indifference). ಸರ್ದಾರ್ ಪಟೇಲ್ ದೇಶಕ್ಕಾಗಿ ಅಷ್ಟೆಲ್ಲ ಮಾಡಿದರು; ದೇಶ ಅವರ ಮಗಳಿಗಾಗಿ ಏನೂ ಮಾಡಲಿಲ್ಲ ಎಂದು ಕುರಿಯನ್ ನೊಂದು ನುಡಿಯುತ್ತಾರೆ.
ಕೊನೆಗೆ ಮಣಿಬೆನ್ ಅವರ ದೃಷ್ಟಿ ಮಂದವಾಯಿತು. ಆದರೂ ಅಹಮದಾಬಾದ್ನ ರಸ್ತೆಗಳಲ್ಲಿ ಯಾರದೇ ನೆರವಿಲ್ಲದೆ ಸಂಚರಿಸುತ್ತಿದ್ದರು. ಕೆಲವೊಮ್ಮೆ ಎಡವಿ ಬೀಳುತ್ತಿದ್ದರು; ಆಗ ಯಾರಾದರೂ ಎತ್ತಿ ಮನೆ ಕಡೆಗೆ ಕಳುಹಿಸುತ್ತಿದ್ದರು. ಅಂತಹ ಧೀರ ಮಹಿಳೆ ನಿಧನ ಹೊಂದುವ ಕಾಲಕ್ಕೆ ಅಂದಿನ ಮುಖ್ಯಮಂತ್ರಿ ಚಿಮಣ್ಭಾಯಿ ಪಟೇಲ್ ಹಾಸಿಗೆ ಸಮೀಪ ಬಂದರಂತೆ; ಜೊತೆಗೆ ಛಾಯಾಗ್ರಾಹಕರೂ ಇದ್ದರು. ಮರುದಿನ ಎಲ್ಲ ಪತ್ರಿಕೆಗಳಲ್ಲಿ ಮುಖ್ಯಮಂತ್ರಿ ಭೇಟಿಯ ಫೋಟೋಗಳು ಪ್ರಕಟವಾದವು ಎನ್ನುವ ಕುರಿಯನ್ “ಸ್ವಲ್ಪ ಪ್ರಯತ್ನಪಟ್ಟಿದ್ದರೂ ಅವರನ್ನು ಸುಖದಲ್ಲಿ ಇಡಬಹುದಿತ್ತು” ಎಂದು ದಾಖಲಿಸಿದ್ದಾರೆ.
ಕುರಿಯನ್ ಅವರ ಮನೆಯಲ್ಲಂತೂ ಪತ್ನಿ, ಮಗಳು ಸೇರಿದಂತೆ ಇಡೀ ಕುಟುಂಬಕ್ಕೆ ಮಣಿಬೆನ್ ಮನೆಯವರೇ ಆಗಿದ್ದರು. ಅದು ಆನಂದಾಶ್ರು ತರುವಂತಹ ಸನ್ನಿವೇಶ.
ಮೊಲ್ಲಿ ಕುರಿಯನ್ ಉಪಚಾರ
ದೇಶ ಕಂಡ ಮಹಾನ್ ನಾಯಕ ಸರ್ದಾರ್ ಪಟೇಲ್ ಅವರ ಮಗಳು ಮಣಿಬೆನ್ ತಮ್ಮ ವೃದ್ಧಾಪ್ಯದ ದಿನಗಳಲ್ಲಿ ಓರ್ವ ಅಪೂರ್ವ ತ್ಯಾಗಜೀವಿಯಾಗಿ ಬಾಳಿದವರು. ದೇಶದ ‘ಕ್ಷೀರ ಪುರುಷ’ (Milkman) ವರ್ಗೀಸ್ ಕುರಿಯನ್ ಕುಟುಂಬಕ್ಕೆ ಆಕೆ ಆಪ್ತರಾಗಿ ಸ್ನೇಹಸುಧೆಯನ್ನು ಹರಿಸಿದ್ದೊಂದು ವಿಶೇಷವೇ. ಆ ಕುರಿತು ಕುರಿಯನ್ ಮಗಳು ಶ್ರೀಮತಿ ನಿರ್ಮಲಾ ಹೀಗೆ ಹೇಳಿದ್ದಾರೆ: “ಸರ್ದಾರ್ ಪಟೇಲರ ಏಕಮಾತ್ರ ಪುತ್ರಿ ಮಣಿಬೆನ್ ಅವರು ಕೂಡ ನಮ್ಮ ಕುಟುಂಬದ ಓರ್ವ ಸದಸ್ಯೆ; ನನ್ನ ಅಮ್ಮನಿಗೆ (ಮೊಲ್ಲಿ ಕುರಿಯನ್) ಆಕೆ ತಾಯಿಯಂತಿದ್ದರು. ಅವರು ನಮ್ಮ ಮನೆಗೆ ಯಾವಾಗಲೂ ಬಂದು ಹೋಗುತ್ತಿದ್ದರು. ಎರಡು ತಿಂಗಳಿಗೊಮ್ಮೆ ಬಂದವರು ಒಂದು ವಾರ ನಮ್ಮ ಜೊತೆಯಲ್ಲೇ ಇರುತ್ತಿದ್ದರು. ನಮ್ಮದು ಮಾಂಸಾಹಾರಿಗಳ ಮನೆ; ಅದಕ್ಕಾಗಿ ಅಮ್ಮ ಮಣಿಬೆನ್ ಅವರ ಊಟ, ಅಡುಗೆ ಬಗ್ಗೆ ಪ್ರತ್ಯೇಕ ಪಾತ್ರೆಗಳನ್ನು ಇಟ್ಟುಕೊಂಡಿದ್ದರು. ಅವರ ಬಟ್ಟೆಗಳನ್ನು ಅಮ್ಮ ಒಂದು ಪ್ರತ್ಯೇಕ ಕಪಾಟಿನಲ್ಲಿ ಅಚ್ಚುಕಟ್ಟಾಗಿ ಇಡುತ್ತಿದ್ದರು. ಊಟದ ಟೇಬಲ್ನಲ್ಲಿ ಅವರನ್ನು ಮುಖ್ಯಸ್ಥಾನದಲ್ಲಿ ಕೂರಿಸುತ್ತಿದ್ದರು. ಮಣಿಬೆನ್ ಅವರ ಇಷ್ಟವಾದ ಪದಾರ್ಥವನ್ನು ಮಾಡಿ ಬಡಿಸುತ್ತಿದ್ದರು. ಅವರ ದೈನಂದಿನ ಚಟುವಟಿಕೆಗಳಿಗೆ ಎಲ್ಲ ಅನುಕೂಲವನ್ನೂ ಕಲ್ಪಿಸಲಾಗಿತ್ತು. ಆಕೆ ದಿನದ ಒಂದು ತಾಸು ಚರಖಾದಲ್ಲಿ ನೂಲು ತೆಗೆಯುತ್ತಿದ್ದರು. ಮಣಿಬೆನ್ ಅವರು ಹಲ್ಲುಜ್ಜುವ ಬ್ರಶ್ ಬಳಸುತ್ತಿರಲಿಲ್ಲ; ಅದಕ್ಕಾಗಿ ಅಮ್ಮ ಎಚ್ಚರದಿಂದ ಬೇವಿನೆಲೆಯ ಕಡ್ಡಿಯನ್ನು ಸಂಗ್ರಹಿಸಿ ಇಡುತ್ತಿದ್ದರು. ಆಕೆ ಯಾವಾಗಲೂ ತಮ್ಮ ತಂದೆಯ ಕಥೆ, ಸ್ವಾತಂತ್ರ್ಯ ಹೋರಾಟ, ಬ್ರಿಟಿಷರ ಕಾಲದ ಕಥೆಗಳನ್ನು ಹೇಳಿ ನಮ್ಮನ್ನು ರಂಜಿಸುತ್ತಿದ್ದರು. ತಮಾಷೆ ಮಾಡುವುದರಲ್ಲಿ ನಿಪುಣರಾದ ನಮ್ಮ ತಂದೆ ಮಣಿಬೆನ್ ಅವರ ಕಾಲೆಳೆಯುವ ಸಂದರ್ಭಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಒಮ್ಮೆ ಆಕೆಗೆ ತೀವ್ರ ಅನಾರೋಗ್ಯವಾದಾಗ ನಮ್ಮ ಮನೆಗೆ ಬರಲು ಬಯಸಿದರಲ್ಲದೆ, ‘ಅಲ್ಲೇ ಸಾಯಬೇಕೆನ್ನುವುದು ನನ್ನ ಅಪೇಕ್ಷೆ’ ಎಂದು ಕೂಡ ಹೇಳಿದ್ದರು. ಅವರ ಹೊಣೆಯಿದ್ದ ಮೊರಾರ್ಜಿ ದೇಸಾಯಿ ಅವರಿಗೆ ತಂದೆ ಆಕೆಯ ಅನಾರೋಗ್ಯದ ಬಗ್ಗೆ ತಿಳಿಸಿದಾಗ ‘ನನ್ನ ಪರವಾಗಿ ನೀವೇ ಏನಾದರೂ ಮಾಡಿ; ಅದಕ್ಕೆ ನನ್ನ ಬೆಂಬಲವಿದೆ’ ಎಂದಿದ್ದರು!
(ಸಶೇಷ)