ಅರ್ಜುನ, ಕಣ್ಣುಗಳಿಂದ ನೋಡುವಲ್ಲಿ, ಕಿವಿಯಿಂದ ಕೇಳುವಲ್ಲಿ, ಮನಸ್ಸಿನಿಂದ ಚಿಂತಿಸುವಲ್ಲಿ ಹಾಗೂ ಬಾಯಿಯಿಂದ ನುಡಿಯುವಲ್ಲಿ ಹೀಗೆ ನಡೆಯುವ ಎಲ್ಲ ವ್ಯವಹಾರಗಳಲ್ಲಿ, ಒಳಹೊರಗೆ ನನ್ನನ್ನೇ ಅನುಸರಿಸು. ಅಂದರೆ ಅವೆಲ್ಲವೂ ನನ್ನ ವಿಷಯವಾಗಿಯೇ ಇರಲಿ. ಹೀಗೆ ಮಾಡಲು, ಎಲ್ಲ ಕಾಲಗಳಲ್ಲಿ ಯಾವಾಗಲೂ ನಾನೇ ಇರುವೆನು.
ಈ ಅಭ್ಯಾಸವನ್ನು ಒಳ್ಳೆಯ ರೀತಿಯಿಂದ ಚಿತ್ತಕ್ಕೆ ಅಂಟಿಸು. ಎಲೊ! ಪ್ರಯತ್ನದ ಬಲದಿಂದ ಹೆಳವನಾದರೂ ಗುಡ್ಡವನ್ನೇರಬಲ್ಲನು. ಅದರಂತೆ ಸತತವಾದ ಅಭ್ಯಾಸದಿಂದ ನಿನ್ನ ಚಿತ್ತಕ್ಕೆ ಪರಮಾತ್ಮನ ವಿಷಯವನ್ನು ಆಗ್ರಹದ್ದನ್ನಾಗಿ ಮಾಡಿಕೊ. ಅಷ್ಟಾದ ಬಳಿಕ ಶರೀರವು ಉಳಿಯಲಿ, ಇಲ್ಲವೆ ಹೋಗಲಿ. ಅನಂತ ಗತಿಯನ್ನು ದೊರಕಿಸಿಕೊಡುವ ಚಿತ್ತವು, ಒಂದು ವೇಳೆ ಆತ್ಮನನ್ನು ವರಿಸಿದರೆ, ದೇಹದ ಇರವು-ಹೋಗುಗಳನ್ನು ಅದಾರು ನೆನಪಿನಲ್ಲಿಡುವರು?
ಮನಸ್ಸಿಗೆ ಯಾವಾಗಲೂ ಹೊರಗೆ ಸಂಚರಿಸುವ ರೂಢಿಯುಂಟು. ಅದನ್ನು ತಪ್ಪಿಸಿ, ಅಂತಃಕರಣವೆಂಬ ಮಡುವಿನಲ್ಲಿ ಮುಳುಗಿರುವಂತೆ ಮಾಡು.
ಎಲ್ಲ ಜ್ಞಾನದ ಪ್ರಾಪ್ಯಸ್ಥಾನವು ಮತ್ತು ಕೇವಲ ಜ್ಞಾನದ ಖನಿಯು ಎಂಬ ಸ್ವರೂಪಕ್ಕೆ ಜ್ಞಾನಿಗಳು ಅಕ್ಷರ ಎಂದೆನ್ನುವರು. ಪ್ರಚಂಡವಾದ ಗಾಳಿಗೆ ಮುರಿಯದಂತಹದೆಂದರೆ, ಒಂದು ಆಕಾಶವೇ ಸರಿ. ಅದನ್ನು ಬಿಟ್ಟು ಮೋಡವು ಗಾಳಿಗೆ ಎದುರಾದರೆ ಅದೆಂತು ತಡೆದು ನಿಲ್ಲಬಲ್ಲದು?
ಸರ್ವೇಂದ್ರಿಯಗಳೆಂಬ ಬಾಗಿಲುಗಳ ನಿಗ್ರಹರೂಪ ಕದಗಳು ಯಾವಾಗಲೂ ಮುಚ್ಚಲ್ಪಟ್ಟರೆ ಮಾತ್ರ ಈ ಸ್ಥಿತಿಯು ಸಿದ್ಧಿಸುವುದು. ಬಳಿಕ ಮನಸ್ಸು ಸಹಜವಾಗಿಯೇ ನಿರೋಧಿಸಲ್ಪಡುವುದು ಮತ್ತು ಅಂತಃಕರಣದಲ್ಲಿ ಸ್ಥಿರವಾಗುವುದು.
ಈ ಸ್ಥಿತಿಗಿಂತ ಇನ್ನೊಂದು ಹೆಚ್ಚಿನ ಪ್ರಾಪ್ತವ್ಯವು ಅದಾವುದೂ ಇಲ್ಲ.
[ಶ್ರೀ ಜ್ಞಾನೇಶ್ವರೀ ಗೀತೆ, ಅಧ್ಯಾಯ ೮. ಅನುವಾದ: ಅಣ್ಣಪ್ಪ ಕೃಷ್ಣಾಜಿರಾವ ಕುಲಕರ್ಣಿ.]