ಒಬ್ಬ ಭಕ್ತನ ಹೊರತು ಉಳಿದವರಿಗೆ ಅಹಂಕಾರವೆಂಬ ಭೂತದ ಸಂಚಾರವಾದ್ದರಿಂದ, ಅವರಿಗೆ ಆತ್ಮಬೋಧೆಯ ವಿಸ್ಮೃತಿಯುಂಟಾಯಿತು. ಆಗ ಅವರಿಗೆ ನಿಯಮರೂಪ ವಸ್ತ್ರದ ಪರಿವೆ ಉಳಿಯುವುದಿಲ್ಲ. ಮುಂದೆ ಒದಗುವ ಅಧೋಗತಿಯ ಬಗ್ಗೆ ಲಜ್ಜೆಯೆನಿಸುವುದಿಲ್ಲ. ಇಷ್ಟೇ ಅಲ್ಲ, ವೇದವು ನಿಷೇಧಿಸಿದ ಸಂಗತಿಗಳನ್ನು ಅವರು ಆಚರಿಸುವರು. ಅರ್ಜುನ! ನೋಡು. ಅವರು ಈ ಶರೀರವೆಂಬ ಊರಿಗೆ ಯಾವ ಕೆಲಸಗಳನ್ನು ನಿರ್ವಹಿಸಲು ಬಂದಿರುವರೋ ಅವೆಲ್ಲವನ್ನು ಬದಿಗಿರಿಸಿ, ಇಂದ್ರಿಯಗಳೆಂಬ ಗ್ರಾಮದ ರಾಜಮಾರ್ಗದ ಮೇಲೆ ಕಾಮ ಕ್ರೋಧ ಮುಂತಾದ ಹಲವಾರು ವಿಕಾರಗಳ ಸಮುದಾಯಗಳನ್ನು ಗುಂಪುಗೂಡಿಸಿ ನಾನು ಮತ್ತು ನನ್ನದು ಎಂದು ಬಡಬಡಿಸುವರು. ಇಂತಹವರನ್ನು ದುಃಖ ಶೋಕಗಳು ಅದೆಷ್ಟು ಬಾಧಿಸಿದರೂ ಅವರು ಅವುಗಳ ಎಚ್ಚರವಿಲ್ಲದಂತಿರುವರು. ಏಕೆಂದರೆ, ಅವರು ಮಾಯಾಗ್ರಸ್ತರಾಗಿರುವರು. ಅಂತೆಯೆ ಅವರು ನನಗೆ ಅಂತರಿಸುವರು. ಇನ್ನು ನನ್ನನ್ನು ಭಜಿಸಿ ತಮ್ಮ ಆತ್ಮಹಿತವನ್ನು ಬೆಳೆಸಿಕೊಂಡಂತಹವರು ನಾಲ್ಕು ಬಗೆಯ ಭಕ್ತರಿರುವರು. ಅವರ ವರ್ಣನೆಯನ್ನು ಕೇಳು. ಅವರೊಳಗಿನ ಮೊದಲಿಗರು ಆರ್ತರು, ಎರಡನೆಯವರು ಜಿಜ್ಞಾಸುಗಳು, ಮೂರನೆಯವರು ಅರ್ಥಾರ್ಥಿಗಳು ಮತ್ತು ನಾಲ್ಕನೆಯವರು ಜ್ಞಾನಿಗಳು.
ಅದರೊಳಗಿನ ಆರ್ತನು ಪೀಡೆಯ ನಿವಾರಣೆಗಾಗಿ, ಜಿಜ್ಞಾಸುವು ಜ್ಞಾನಾರ್ಥವಾಗಿ ಮತ್ತು ಮೂರನೆಯವನು ಅರ್ಥಪ್ರಾಪ್ತಿಗಾಗಿ ನನ್ನನ್ನು ಭಜಿಸುವರು. ಬಳಿಕ ನಾಲ್ಕನೆಯವನಾದ ಜ್ಞಾನಿ ಭಕ್ತನಲ್ಲಿ (ಬಯಕೆಯೇ ಇಲ್ಲದ್ದರಿಂದ) ಅವನಿಗೆ ಏನೂ ಕರ್ತವ್ಯವಿರುವುದಿಲ್ಲ. ಆದ್ದರಿಂದ ಒಬ್ಬ ಜ್ಞಾನಿಯೇ ನಿಜವಾದ ಭಕ್ತನಿರುವನೆಂದು ತಿಳಿ. ಏಕೆಂದರೆ ಆತ್ಮಜ್ಞಾನರೂಪ ಪ್ರಕಾಶದಿಂದ ಅವನಲ್ಲಿ ಹುದುಗಿದ ದ್ವೈತಾದ್ವೈತರೂಪ ಕತ್ತಲೆಯು ಇಲ್ಲದಾಗಿರುವುದು. ಆದ್ದರಿಂದ ಅವನು ಮದ್ರೂಪ(ನನ್ನ ರೂಪ)ನಾಗುವನು. ಇಂತು ಅವನು ಬೋಧರೂಪದಿಂದ ಮದ್ರೂಪನಾದಾಗ್ಯೂ (ದೇಹವಿರುವವರೆಗೆ) ಅವನು ತನ್ನನ್ನು ನನ್ನ ಭಕ್ತನೆಂದೇ ತಿಳಿದುಕೊಳ್ಳುವನು. ನೋಡುವವರ ದೃಷ್ಟಿಗೆ ಒಂದು ಕ್ಷಣ ಹೊತ್ತು ಸ್ಫಟಿಕವು ನೀರಿನಂತೆ ತೋರುವುದು. ಅದರಂತೆ ಆ ಜ್ಞಾನಿಯಾದವನು ದೇಹವನ್ನು ಧರಿಸಿರುವವರೆಗೆ, ದೇವನ ಭಕ್ತನು ತಾನು, ದೇವನಿಂದ ಬೇರೆಯಾಗಿರುವೆನು ಎಂದು ತಿಳಿಯುವನೇ!
ಗಾಳಿಯನ್ನು ಅಲ್ಲಾಡಿಸಿ ನೋಡಿದಾಗ ಅದು ಆಕಾಶದಿಂದ ಬೇರೆಯಾಗಿರುವುದು ತಿಳಿಯುವುದು. ಇಲ್ಲವಾದರೆ, ಅದು ಆಕಾಶರೂಪವೇ ಆಗಿರುವುದು. ಅದರಂತೆ ಜ್ಞಾನಿ ಪುರುಷನು, ಶರೀರ ದೃಷ್ಟಿಯಿಂದ ಭಕ್ತನೆಂದೆನಿಸುವನು. ಆದರೆ ಭೇದ ದೃಷ್ಟಿಯಿಂದ ಅವನು ಮದ್ರೂಪನೇ ಇರುವನು. ಮತ್ತು ಅವನಲ್ಲಿ ಜ್ಞಾನೋದಯವಾದ್ದರಿಂದ, ನನ್ನನ್ನು ತನ್ನ ಆತ್ಮವೆಂದು ತಿಳಿಯುವನು.
[ಶ್ರೀ ಜ್ಞಾನೇಶ್ವರೀಗೀತೆ, ಅಧ್ಯಾಯ ೭.
ಅನುವಾದ: ಅಣ್ಣಪ್ಪ ಕೃಷ್ಣಾಜಿರಾವ ಕುಲಕರ್ಣಿ.]