ಸತ್ಪುರುಷರುಗಳು ಎಂದಿಗೂ ದೈನ್ಯತೆಯಿಂದ ವರ್ತಿಸುವುದಿಲ್ಲ ಹಾಗೂ ಅವರಿಗೆ ಭಯದ ಲವಲೇಶವೂ ಇರುವುದಿಲ್ಲ. ಅವರಿಗೆ ತಮ್ಮ ಶಿಷ್ಯನು ಯಾವ ಆಧ್ಯಾತ್ಮಿಕ ಭೂಮಿಕೆಯಲ್ಲಿರುತ್ತಾನೆ ಎಂಬುದು ತಿಳಿದಿರುತ್ತದೆ. ಸತ್ಪುರುಷರ ಹತ್ತಿರ ಯಾವ ಸಮಾಧಾನವಿರುತ್ತದೆಯೊ ಅದು ನಮಗೆ ಪ್ರಾಪ್ತವಾದದ್ದಾದರೆ ಅಥವಾ ಅದರ ಅಭಿರುಚಿ ನಿರ್ಮಾಣವಾದದ್ದಾದರೆ ನಮಗೆ ಸತ್ಪುರುಷರ ನಿಜವಾದ ಅನುಭವ ಬಂದಂತೆ ಎಂದು ತಿಳಿಯಬೇಕು. ಔಷಧದಲ್ಲಿ ಏನು ಇರುತ್ತದೆ ಎಂಬುದು ತಿಳಿಯದಿದ್ದರೂ ರೋಗಿಯು ಅದನ್ನು ಶ್ರದ್ಧೆಯಿಂದ ತೆಗೆದುಕೊಂಡದ್ದಾದರೆ ಗುಣವು ಬಂದೇಬರುತ್ತದೆ. ಅಥವಾ ಅಡುಗೆ ಮಾಡಲು ಬರದೇ ಇರುವ ಮನುಷ್ಯನಿಗೂ ಕೂಡ ಅನ್ನದ ರುಚಿಯು ತಿಳಿದೇ ತಿಳಿಯುತ್ತದೆ, ಹಾಗೂ ಹೊಟ್ಟೆ ತುಂಬ ಊಟ ಮಾಡಲು ಸಾಧ್ಯವಾಗುತ್ತದೆ. ಅದರಂತೆ ಜ್ಞಾನದ ಅನುಭವ ಪಡೆದ ಮನುಷ್ಯನಿಗೆ ಅದನ್ನು ಶಬ್ದಗಳಿಂದ ಹೇಳಲು ಬರುತ್ತದೆ ಎಂದೇನೂ ಇಲ್ಲ.
ಉಪ್ಪು ಕ್ಷಾರವಾಗಿರುತ್ತದೆ ಎಂದು ನಮಗೇನೂ ದುಃಖವಾಗುವುದಿಲ್ಲ. ಅದರಂತೆ ಜಗತ್ತಿನಲ್ಲಿ ಯುದ್ಧಗಳೂ ಹೊಡೆದಾಟಗಳೂ ಸಜ್ಜನರಿಗೆ ಪೀಡಿಸುವುದು, ಸಂಕಟಗಳು – ಇವುಗಳ ಬಗ್ಗೆ ಸಂತರಿಗೆ ಕೆಡಕೆನಿಸುವುದಿಲ್ಲ ಅಂದರೆ ಅವರಿಗೆ ಅದು ರುಚಿಸುತ್ತದೆ ಎಂದೇನೂ ಅರ್ಥವಲ್ಲ. ಉಪ್ಪು ಹೇಗೆ ಕ್ಷಾರವೇ ಆಗಿರುತ್ತದೆಯೊ, ಅದರಂತೆ ಜಗತ್ತಿನಲ್ಲಿ ಇಂಥ ಘಟನೆಗಳು ಸಂಭವಿಸುವುದು ಸಹಜವೇ. ಜಗತ್ತಿನ ರೀತಿಯೇ ಹೀಗೆ ಇರುತ್ತದೆ ಎಂದು ತಿಳಿದಿರುವುದರಿಂದ ಅವರು ದುಃಖಿಸುವುದಿಲ್ಲ. ಆದರೆ ಉಪ್ಪು ಹೆಚ್ಚಿಗೆ ಆದರೆ ಅದರ ಕ್ಷಾರತೆಯು ಸಹನೆಯಾಗದಂತೆ ದುರ್ಘಟನೆಗಳ ಅತಿರೇಕವು ಸತ್ಪುರುಷರಿಗೆ ಸಹನೆಯಾಗುವುದಿಲ್ಲ. ಆಗ ಅವರು ದುರ್ಘಟನೆಗಳನ್ನು ಕಡಮೆ ಮಾಡುವುದಕ್ಕಾಗಿ ಪ್ರಯತ್ನ ಮಾಡುತ್ತಾರೆ.
ಬಾವಿಯಲ್ಲಿಯ ಕಪ್ಪೆಗೆ ಸಮುದ್ರದ ಕಲ್ಪನೆ ಬರುವುದಿಲ್ಲ. ಅದರಂತೆ ನಮಗೆ ಸಂತರ ಕಲ್ಪನೆ ಬರುವುದಿಲ್ಲ. ಸಂತರು ಮೊದಲು ನಮ್ಮಂತೆ ಇರುತ್ತಾರೆ. ಆದರೆ ಅವರು ಅನುಸಂಧಾನದ ಮಾರ್ಗದಿಂದ ಮೇಲೆ ಹೋಗಿರುತ್ತಾರೆ. ನಾವು ಸಂತರನ್ನು ಹುಡುಕಬೇಕಾದ ಆವಶ್ಯಕತೆ ಇಲ್ಲ. ನಮ್ಮ ಇಚ್ಛೆಯು ಬಲವತ್ತರವಾಗಿದ್ದರೆ ಸಂತರೇ ನಮ್ಮನ್ನು ಹುಡುಕುತ್ತ ನಮ್ಮ ಹತ್ತಿರ ಬರುತ್ತಾರೆ. ಸಂತರು ನಮ್ಮ ಭಾವನೆ ಹೇಗೆ ಇರುತ್ತದೆ ಎಂಬುದರ ಕಡೆಗೆ ಗಮನ ಕೊಡುತ್ತಾರೆ.
[ಸದ್ಗುರು ಮಹಾರಾಜರ ಪ್ರವಚನ ಸಂಕಲನದಿಂದ.
ಅನುವಾದ: ಶ್ರೀ ದತ್ತಾತ್ರೇಯ ಅವಧೂತರು.
ಕೃಪೆ: ಚೈತನ್ಯಾಶ್ರಮ, ಹೆಬ್ಬಳ್ಳಿ]