ನಮ್ಮ ಭಾವ ಬುದ್ಧಿಯು ಕೂಡಾ ದೇಶ-ಕಾಲದಲ್ಲಿ ಮಾತ್ರ ಕೆಲಸ ಮಾಡುತ್ತವೆ. ಅವು ದೇಶ-ಕಾಲಗಳ ಮಿತಿಯನ್ನು ಮೀರಿ ಹರಿಯಲಾರವು. ನಮ್ಮ ಬುದ್ಧಿಯು ಒಂದು ವಸ್ತುವನ್ನು ನೋಡಿದಾಗ ಅದನ್ನು ಇನ್ನೊಂದು ವಸ್ತುವಿನೊಂದಿಗೆ ಹೋಲಿಸುತ್ತದೆ. ಮೌಲ್ಯಮಾಪನ ಮಾಡಿ ಒಂದು ಹೆಚ್ಚು ಇನ್ನೊಂದು ಕಡಮೆ ಎಂದು ಹೇಳುತ್ತದೆ. ಬೆಲೆ ಕಟ್ಟುತ್ತದೆ.
ಈ ಬುದ್ಧಿಯ ಹೋಲಿಸುವ ಸ್ವಭಾವದಿಂದಾಗಿಯೇ ಮನುಷ್ಯ ಎಷ್ಟೆಲ್ಲ ತಾಪತ್ರಯಕ್ಕೆ ಒಳಗಾಗುವುದನ್ನು ನೋಡುತ್ತೇವೆ. ಒಬ್ಬರು ಹೊಸ ಬಟ್ಟೆಯನ್ನೋ ವಾಹನವನ್ನೋ ಖರೀದಿಸುತ್ತಾರೆ. ಸಂತೋಷದಿಂದ ಅದನ್ನು ಇನ್ನೊಬ್ಬರಿಗೆ ತೋರಿಸುತ್ತಾರೆ. ನೋಡಿದವರು ಇದು ತುಂಬಾ ಚೆನ್ನಾಗಿದೆ ಎಂದರೆ ತಂದವರಿಗೆ ಅಷ್ಟೇ ಸಂತೋಷ. ಆದರೆ ಇದಕ್ಕಿಂತ ಚೆನ್ನಾಗಿರುವ ವಾಹನ ಅಥವಾ ಬಟ್ಟೆ ನಮ್ಮ ಇನ್ನೊಬ್ಬ ಮಿತ್ರರ ಮನೆಯಲ್ಲಿದೆ ಎಂದು ಅವರು ಹೇಳಿದರೆ ವಾಹನ ಅಥವಾ ಬಟ್ಟೆ ತೋರಿಸಿದವರು ನೆಮ್ಮದಿಯಿಂದಿರಲು ಸಾಧ್ಯವೆ?
ಕಾಶೀ ಕ್ಷೇತ್ರದಲ್ಲಿ ಮೈಲು, ಮೈಲು ಉದ್ದ ಗಂಭೀರವಾಗಿ ಹರಿಯುವ ಗಂಗೆ ಎಲ್ಲಿ, ನಮ್ಮ ಮನೆಯ ಜಗುಲಿನ ಮೇಲಿನ ಪುಟ್ಟ ತಂಬಿಗೆಯಲ್ಲಿರುವ ಗಂಗೆ ಎಲ್ಲಿ! ಅವೆರಡನ್ನು ಹೋಲಿಸುವುದಾದರೂ ಹೇಗೆ? ಆದರೆ ಬುದ್ಧಿಯು ಹೋಲಿಸಿ ಒಂದು ಶ್ರೇಷ್ಠ ಒಂದು ಕನಿಷ್ಠವೆಂದು ಶಾಸ್ತಾçಧಾರವನ್ನು ಕೊಟ್ಟು ವಾದಿಸುತ್ತದೆ.
ಪರೀಕ್ಷೆಯ ಒಂದು ಕ್ಷಣದ ಸ್ಮರಣೆಯು ಎಂದಾದರೂ ನಮ್ಮ ಸುದೀರ್ಘ ಬದುಕನ್ನು ಸರಿಗಟ್ಟೀತೇ? ಥಾಮಸ್ ಅಲ್ವಾ ಎಡಿಸನ್ನನ್ನು ಶಾಲೆಗೇ ಸೇರಿಸಿಕೊಂಡಿರಲಿಲ್ಲ. ಆದರೆ ಅವನೇ ಮುಂದೆ ಜಗತ್ಪçಸಿದ್ಧ ವಿಜ್ಞಾನಿಯಾಗಲಿಲ್ಲವೇ? ಅಂತೆಯೇ ಪ್ರಪಂಚ ಪರಮಾರ್ಥ ಎಲ್ಲೆಂದರಲ್ಲಿ ಭೇದವನೆಣಿಸುವ ಈ ಬುದ್ಧಿಗೆ ದೇವರು ಎಂದೂ ಒಲಿಯುವುದಿಲ್ಲ! ಏಕೆಂದರೆ ದೇವರು ಮತಿಗತೀತನು!
[ಪೂಜ್ಯ ಸ್ವಾಮಿಗಳ ‘ದೇವನೊಲುಮೆ’
ಪ್ರವಚನಸಂಕಲನದಿಂದ.
ಸಂಪಾದನ: ಡಾ|| ಶ್ರದ್ಧಾನಂದ ಸ್ವಾಮಿಗಳು. ಕೃಪೆ: ಜ್ಞಾನಯೋಗ ಫೌಂಡೇಶನ್, ವಿಜಾಪುರ]