ಎಲ್ಲ ಪ್ರಾಣಿಮಾತ್ರರನ್ನು ಮಾಯೆಯೇ ಉತ್ಪನ್ನಗೊಳಿಸುವುದು ಮತ್ತು ಅದೇ ಅವನ್ನು ಲಯಗೊಳಿಸುವುದು.
ಈ ಮಾಯೆಗೆ ಪ್ರಕೃತಿಯೆಂಬ ಹೆಸರಿದ್ದು, ಅದು ಎರಡು ವಿಧವಾಗಿದೆ ಎಂಬ ಸಂಗತಿಯನ್ನು ನಿನಗೆ ಈ ಮೊದಲೇ (ಅ.೭. ಶ್ಲೋ.೪-೫) ಹೇಳಿರುವೆನು. ಅವುಗಳಲ್ಲಿ ಒಂದು ಎಂಟು ವಿಧವಾದುದು (ಅಷ್ಟಧಾ ಪ್ರಕೃತಿಯು), ಇನ್ನೊಂದು ಜೀವರೂಪ. ಈ ಎಲ್ಲ ಪ್ರಕೃತಿಯ ವಿಷಯವನ್ನು ನೀನು ಮೊದಲು ಕೇಳಿಯೇ ಇರುವಿ. ಆದ್ದರಿಂದ ಅದಿರಲಿ, ಮೇಲಿಂದ ಮೇಲೆ ಹೇಳುವುದೇಕೆ? ಅದಾಗ್ಯೂ ಇನ್ನೂ ಹೇಳುವುದಾದರೆ, ಮಹಾ ಕಲ್ಪಾಂತ ಸಮಯಕ್ಕೆ ಈ ಎಲ್ಲ ಭೂತಗಳು ನನ್ನ ಅವ್ಯಕ್ತ ಪ್ರಕೃತಿಯಲ್ಲಿ ಲಯ ಹೊಂದುವವು. ಗ್ರೀಷ್ಮ ಋತುವಿನ ಪ್ರಖರವಾದ ಬೇಸಿಗೆಯಲ್ಲಿ ಹುಲ್ಲೆಲ್ಲವೂ ಬೀಜ ಸಹಿತವಾಗಿ ಭೂಮಿಯಲ್ಲಿ ಲಯವಾಗುವುದು ಅಥವಾ ವರ್ಷ ಋತುವಿನ ಮೋಡಗಳ ಆರ್ಭಟೆಯು ಕುಗ್ಗಿ, ಶರದೃತುವಿನ ಆರಂಭದೊಡನೆ ಎಲ್ಲ ಮೋಡ ಸಮೂಹವು ಆಕಾಶದಲ್ಲಿಯೇ ಲಯವಾಗುವುದು, ಅಥವಾ ಆಕಾಶದ ಪೊಳ್ಳಿನಲ್ಲಿ ವಾಯುವು ಸಹಜವಾಗಿಯೇ ಲೋಪವಾಗಿಹೋಗುವುದು, ಅಥವಾ ನೀರಿನಲ್ಲಿ ತರಂಗಗಳು ಲುಪ್ತವಾಗುವವು. ಎಚ್ಚರಾದ ಮೇಲೆ ಮನಸ್ಸಿನೊಳಗಿನ ಕನಸು ಮನದಲ್ಲಿಯೇ ಲಯವಾಗುವುದು. ಅದರಂತೆ ಪ್ರಕೃತಿಯ ಕಾರ್ಯವಾದ ಜಗತ್ತು ಮಹಾಪ್ರಳಯದ ವೇಳೆಗೆ ಪ್ರಕೃತಿಯಲ್ಲಿಯೇ ಲಯ ಹೊಂದುವುದು. ಬಳಿಕ ಮತ್ತೆ ಸೃಷ್ಟಿಯ ಆರಂಭದಲ್ಲಿ ನಾನೇ ಆ ಸೃಷ್ಟಿಯನ್ನು ಉತ್ಪನ್ನಿಸುವೆನೆಂದು ಶಾಸ್ತ್ರ ವದಂತಿಯುಂಟು.
ಪ್ರಕೃತಿಯ ಈ ಎಲ್ಲ ಕಾರ್ಯಗಳಲ್ಲಿ ನಾನೇ ಒಬ್ಬನಿರುವೆ. ಆದರೆ ಇದರಲ್ಲಿ ಲಕ್ಷಿಸತಕ್ಕ ಮಾತೆಂದರೆ, ಉದಾಸೀನನಂತೆ ನಾನು; ಏನನ್ನೂ ಮಾಡುವುದಿಲ್ಲ ಮತ್ತು ಮಾಡಿಸುವುದೂ ಇಲ್ಲ. ಮನೆಯೊಳಗಿನ ದೀಪವು ‘ನೀನು ಇದನ್ನು ಮಾಡು ಇಲ್ಲವೆ ಮಾಡಬೇಡ’ ಎಂದು ಯಾರಿಗೂ ಹೇಳುವುದಿಲ್ಲ ಮತ್ತು ಯಾರಲ್ಲಿ ಯಾವ ವ್ಯವಹಾರ ಮಾಡುವರೆಂಬುದನ್ನೂ ತಿಳಿಯುವುದಿಲ್ಲ. ಅದು ಮನೆಯು ನಡೆಯುವ ವ್ಯವಹಾರಗಳಿಗೆ ಕಾರಣವಾದಾಗ್ಯೂ ಸಾಕ್ಷೀಭೂತ ಅಥವಾ ತಟಸ್ಥವಾಗಿರುವುದು. ಅದರಂತೆ ನಾನು ಭೂತಗಳಲ್ಲಿ ಇದ್ದಾಗ್ಯೂ, ಅವುಗಳ ಕರ್ಮಗಳಲ್ಲಿ ಉದಾಸೀನನಾಗಿರುವೆನು.
ಇಂತಹ ವಿಚಾರದ ಬೆಳಕಿನಿಂದ, ನೀನು ನನ್ನ ಐಶ್ವರ್ಯಯೋಗವನ್ನು ಚೆನ್ನಾಗಿ ದಿಟ್ಟಿಸಿನೋಡು (ಅದು ಹೀಗೆ). ನನ್ನ ಆಶ್ರಯದ ಮೇಲೆ ಎಲ್ಲ ಭೂತಗಳು ಇವೆ. ಆದರೆ ನಾನು ಅವುಗಳ ಆಶ್ರಯದ ಮೇಲೆ ಇಲ್ಲ. ಅಥವಾ (ಅಜಾತವಾದದ ದೃಷ್ಟಿಯಿಂದ ತ್ರೈಕಾಲಿಕವಾಗಿ ಭೂತಗಳ ಅತ್ಯಂತಾಭಾವವುಂಟೆಂದು) ಭೂತಗಳು ನನ್ನ ಆಶ್ರಯದ ಮೇಲೆ ಇಲ್ಲ ಮತ್ತು ನಾನಾದರೂ ಅವುಗಳ ಆಶ್ರಯದ ಮೇಲೆ ಇಲ್ಲ. ಈ ರಹಸ್ಯವನ್ನು ನೀನು ಎಂದೂ ಮರೆಯಕೂಡದು. ಇದು ನಮ್ಮ ಸರ್ವಸ್ವವಾಗಿದ್ದು ಗುಪ್ತಸಂಗತಿಯಾಗಿದೆ.
[ಜ್ಞಾನೇಶ್ವರೀಗೀತೆ, ಅಧ್ಯಾಯ ೯.
ಅನುವಾದ: ಅಣ್ಣಪ್ಪ ಕೃಷ್ಣಾಜಿರಾವ ಕುಲಕರ್ಣಿ.]