ದೇಶಕಾಲಗಳಿಗೆ ಅನುಗುಣವಾಗಿ ಸ್ಥೂಲ-ಸೂಕ್ಷ್ಮಗಳಿಂದಾಗುವ ಕ್ರಿಯೆಗಳು, ದೇಶದಲ್ಲಿ ಮತ್ತು ಕಾಲಗಳಲ್ಲಿ ಅದೇ ವಸ್ತುವಿನ ಸತ್ತೆಯಿಂದಲೇ ಜರಗುವವು. ಆದ್ದರಿಂದ ಆ ಜ್ಞೇಯ ವಸ್ತುವಿಗೆ “ವಿಶ್ವಬಾಹು” ಎಂದೆನ್ನುವರು. ಏಕೆಂದರೆ ಅದು ಸರ್ವಾಧಾರವಾಗಿದೆ. ಅದರ ಸತ್ತೆಯಿಂದಲೇ ಎಲ್ಲ ಕ್ರಿಯೆಗಳು ಎಲ್ಲ ಕಾಲದಲ್ಲೂ ಜರಗುವವು. ಮತ್ತು ಅರ್ಜುನ! ಏಕ ಸಮಯಾವಚ್ಛೇದದಿಂದ ಎಲ್ಲ ಕಡೆಗೂ ಅದರ ವ್ಯಾಪ್ತಿಯುಂಟು. ಅಂತೆಯೆ ಅದಕ್ಕೆ “ವಿಶ್ವಾಂಘ್ರಿ” ಅಂದರೆ ವಿಶ್ವದ ಮೂಲ ಎಂದೆನ್ನುವರು. ಸೂರ್ಯನಿಗೆ ಕಣ್ಣು, ಮೈ ಎಂಬ ಬೇರೆಬೇರೆ ಅವಯವಗಳಿರದೆ, ಕಣ್ಣೇ ಆತನ ಶರೀರ ಇಲ್ಲವೆ ಸ್ವರೂಪವಾಗಿರುವುದು. ಅದರಂತೆ ಸರ್ವಾಧಿಷ್ಠಾನತ್ವದಿಂದ ಸರ್ವ ದೃಷ್ಟತ್ವ – ಸರ್ವ ಪ್ರಕಾಶವೇ ಆತನ ಸ್ವರೂಪವಾಗಿದೆ. ಆದ್ದರಿಂದ ಸರ್ವ ದೃಷ್ಟತ್ವ ಅಥವಾ ದ್ರಷ್ಟುç ಸ್ವರೂಪಿ ಅರ್ಥಾತ್ ಇಲ್ಲದ ವಸ್ತುವಿಗೆ ವೇದಗಳು ಒಳ್ಳೆ ಚಾತುರ್ಯದಿಂದ “ವಿಶ್ವತಶ್ಚಕ್ಷು” (ವಿಶ್ವಜ್ಞ) ಎಂಬ ಹೆಸರು ಕೊಟ್ಟಿದೆ. ಮತ್ತು ಅದು ಎಲ್ಲಕ್ಕಿಂತ ಶ್ರೇಷ್ಠದಾಗಿರುವುದರಿಂದಲೂ ಎಲ್ಲಕ್ಕಿಂತ ಶಾಶ್ವತವಾಗಿರುವುದರಿಂದಲೂ ಆ ವಸ್ತುವಿಗೆ “ವಿಶ್ವಮೂರ್ಧಾ” (ವಿಶ್ವಪ್ರಧಾನ) (ಎಲ್ಲ ಅವಯವಗಳಲ್ಲಿ ಶಿರವು ಪ್ರಧಾನವಾಗಿದೆ) ಎಂದು ನುಡಿದವು. ಅಗ್ನಿಗೆ ಮೂರ್ತಿ, ಮುಖಗಳು ಒಂದೇ ಆಗಿವೆ. ಅದರಂತೆ ಸರ್ವವ್ಯಾಪಕತೆಯ ಮೂಲಕ ಅದು ಸರ್ವಭೋಕ್ತೃವಾಗಿರುವುದು, ಆದ್ದರಿಂದಲೇ ಅದರ “ವಿಶ್ವತೋಮುಖ” ಎಂಬ ಸಾರ್ಥನಾಮವು ಶ್ರುತಿವಾಣಿಯಲ್ಲಿ ಸಹಜವಾಗಿ ಬಂದುಬಿಟ್ಟಿದೆ. ಪದಾರ್ಥಗಳಲ್ಲೆಲ್ಲ ಗಗನವು ವ್ಯಾಪಿಸಿರುವುದು. ಅಂತೆಯೆ ಶಬ್ದಗಳಲ್ಲೆಲ್ಲ ಆ ವಸ್ತುವಿಗೆ ಕಿವಿಗಳುಂಟು. ಆದ್ದರಿಂದ ನಾವು ಅದಕ್ಕೆ “ಸರ್ವಶ್ರೋತೃವು” ಎಂದೆನ್ನುವೆವು. ಒಟ್ಟಾರೆ ಅದು ಎಲ್ಲ ವಸ್ತುಗಳಲ್ಲಿ ವ್ಯಾಪ್ತವಾಗಿದೆ. ಅರ್ಜುನ! ವಸ್ತುತಃ ವಿಚಾರ ಮಾಡಲು, ಆ ವಸ್ತುವಿನ ವ್ಯಾಪ್ತಿಯು ಸರ್ವತ್ರದಲ್ಲಿಯೂ ಉಂಟೆಂಬುದನ್ನು ಲಕ್ಷಿಸಬೇಕೆಂಬುದಾಗಿಯೇ, ಶ್ರುತಿಯು ವಿಶ್ವತಶ್ಚಕ್ಷು ಮೊದಲಾದ ಪ್ರಕಾರಗಳಿಂದ ಬಣ್ಣಿಸಿದೆ. ಆದ್ದರಿಂದ ಶ್ರುತಿಗಳು ಯುಕ್ತಿಯ ಮಟ್ಟಿಗೆ ದ್ವೈತವನ್ನು ಗ್ರಹಿಸಿ, ಅದ್ವೈತ ಪ್ರತಿಪಾದನೆಯ ರಾಜಮಾರ್ಗವನ್ನು ತೋರಿಸಿಕೊಟ್ಟಿರುವವು.
[ಶ್ರೀ ಜ್ಞಾನೇಶ್ವರೀ ಗೀತೆ, ಅಧ್ಯಾಯ ೧೩.
ಅನುವಾದ: ಅಣ್ಣಪ್ಪ ಕೃಷ್ಣಾಜಿರಾವ ಕುಲಕರ್ಣಿ]