ಯಾರಿಗೆ ಸರಿಯಾಗಿ ಸತ್ಯದ ಜ್ಞಾನವಾಗಿರುತ್ತದೆಯೊ ಅವನು ಸರ್ವಜ್ಞನೇ ಆಗಿರುತ್ತಾನೆ. ಹಾಗೂ ಯಾರು ಈ ಸತ್ಯವನ್ನು ಆಶ್ರಯಿಸಿಕೊಂಡಿರುತ್ತಾರೊ, ಅವರು ಸಂತರಾಗುತ್ತಾರೆ. ಸಂತರು ನಮಗೆ ಮಾರ್ಗ ತೋರಿಸಲು ಸಿದ್ಧರಿರುತ್ತಾರೆ, ಆದರೆ ನಮ್ಮ ಅಭಿಮಾನವೇ ಅದಕ್ಕೆ ಅಡ್ಡ ಬರುತ್ತದೆ. ಅಲ್ಲದೆ ನಾವು ಆ ಸಂತರನ್ನೇ ದೂಷಿಸುತ್ತೇವೆ! ಒಬ್ಬನು ಸಂತರನ್ನು ಉದ್ದೇಶಿಸಿ “ನೀವು ನಮಗೆ ಹಾನಿ ಮಾಡುತ್ತೀರಿ. ಅಪಕಾರ ಮಾಡುವವರಿಗೂ ಉಪಕಾರ ಮಾಡಲು ಹೇಳಿ ನಮ್ಮನ್ನು ದುರ್ಬಲರನ್ನಾಗಿ ಮಾಡುತ್ತೀರಿ” ಎಂದು ಹೇಳಿದನಂತೆ. ವಾಸ್ತವಿಕವಾಗಿ ಸಂತರೂ ಕರ್ಮದ ರಾಶಿಯನ್ನೇ ಹಾಕಿರುತ್ತಾರೆ. ಆದರೆ ಅವರ ಹಾಗೂ ನಮ್ಮ ಕರ್ಮಗಳಲ್ಲಿ ಭೇದವಿರುತ್ತದೆ. ‘ರಾಮನೇ ಕರ್ತಾ’ ಎಂಬ ಭಾವನೆಯಿಂದ ಅವರು ಕರ್ಮ ಮಾಡುತ್ತಾರೆ. ಆದರೆ ನಾವು ಅಹಂಭಾವನೆಯಿಂದ ಮಾಡುತ್ತೇವೆ. ಆದುದರಿಂದ ಕರ್ಮವು ನಮಗೆ ಬಂಧನಕಾರಕವಾಗುತ್ತದೆ. ಸಂತರ ಕಾರ್ಯದ ವ್ಯಾಪ್ತಿಯು ಯಾರಿಗೂ ಕಾಣುವುದಿಲ್ಲ. ಆದರೆ ನಮ್ಮದು ಮಾತ್ರ ಕಣ್ಣಿಗೆ ಕಾಣುವಷ್ಟೇ ಇರುತ್ತದೆ. ಆದ್ದರಿಂದ ಅದು ಪರ್ಯಾಪ್ತವಾಗುವುದಿಲ್ಲ.
ಜಗತ್ತಿನ ಮೇಲೆ ಸಂತರದು ಬಹಳ ದೊಡ್ಡ ಉಪಕಾರವಿರುತ್ತದೆ. ಅವರು ಪರಮಾತ್ಮನನ್ನು ಸಗುಣದಲ್ಲಿ ತಂದರು ಹಾಗೂ ನಮಗೆ ಅವನ ಉಪಾಸನೆಯನ್ನು ಸುಲಭ ಮಾಡಿಕೊಟ್ಟರು. ಪರಮಾತ್ಮನನ್ನು ನಮ್ಮವನನ್ನಾಗಿ ಮಾಡಿಕೊಳ್ಳಲು ನಾಮಸ್ಮರಣೆ ಎಂಬ ಸುಲಭ ಸಾಧನವನ್ನು ಕೊಟ್ಟಿರುತ್ತಾರೆ. ಏಕನಾಥೀ ಭಾಗವತ, ಜ್ಞಾನೇಶ್ವರಿಗಳಂಥ ಅಮೂಲ್ಯ ಗ್ರಂಥಗಳನ್ನು ನಿರ್ಮಾಣ ಮಾಡಿರುತ್ತಾರೆ ಹಾಗೂ ಯಥಾ ಶಕ್ತಿ ಅನ್ನದಾನ ಮಾಡುವದೇ ಈ ಕಲಿಯುಗದಲ್ಲಿ ಉತ್ತಮ ಸಾಧನೆಯಾಗಿರುತ್ತದೆ ಎಂದು ಹೇಳಿರುತ್ತಾರೆ. ಈ ವಿಚಾರಗಳನ್ನು ಆಚರಣೆಯಲ್ಲಿ ಯಾರು ತರುವ ಪ್ರಯತ್ನವನ್ನು ಮಾಡುತ್ತಾರೊ ಅವರಿಗೆ ಯಾವುದೂ ಕಡಮೆ ಬೀಳುವುದಿಲ್ಲ.
[ಸದ್ಗುರು ಮಹಾರಾಜರ ಪ್ರವಚನದಿಂದ.
ಅನುವಾದ: ಶ್ರೀ ದತ್ತಾತ್ರೇಯ ಅವಧೂತರು.
ಕೃಪೆ: ಚೈತನ್ಯಾಶ್ರಮ, ಹೆಬ್ಬಳ್ಳಿ.]