ಹೂವಿನ ಸುಂದರವಾದ ಚಿತ್ರದ ಬೆಲೆ ಲಕ್ಷ ಲಕ್ಷ. ನಿಜವಾದ ಹೂವಿನ ಬೆಲೆ ಎಂಟಾಣೆ! ಆದರೆ ಚಿತ್ರದ ಹೂವು ನಿಜವಾದ ಹೂವಿಗೆ ಎಂದೂ ಸರಿಸಮಾನ ಆಗಲಾರದು! ಚಿತ್ರದ ಹೂವಿಗೆ ತೋರಿಕೆಯಿದೆ; ಇರುವಿಕೆ ಅಥವಾ ಜೀವಂತಿಕೆ ಇಲ್ಲ! ಸುಗಂಧ ಮಕರಂದಗಳಿಂದ ಕೂಡಿದ ನಿಜವಾದ ಹೂವು ದೇವರ ತಲೆಗೆ ಏರುತ್ತದೆ. ಚಿತ್ರದ ಹೂವು ಪ್ರದರ್ಶನಕ್ಕೆ ವಿನಾ ದೇವರ ದರ್ಶನಕ್ಕಲ್ಲ! ಜ್ಞಾನಿಗಳು, ವಿದ್ವಾಂಸರು ಚಿತ್ರದ ಹೂವಿನಂತೆ. ಸಂತರು-ಶರಣರು, ಋಷಿ-ಮುನಿಗಳು ಜೀವಂತ ಹೂವಿನಂತೆ. ಅಂಥ ಅನುಭಾವಿಗಳ ಅಮೂಲ್ಯವಾದ ಜೀವನ ಕುರಿತು ಷಣ್ಮುಖ ಶಿವಯೋಗಿಗಳು ತಮ್ಮ ಒಂದು ವಚನದಲ್ಲಿ ಹೇಳಿದ್ದಾರೆ.
ಸಂತರಿಗೂ, ಶರಣರಿಗೂ, ನಮಗೂ ದೇವರು ಒಂದೇ ಅಮೂಲ್ಯವಾದ ದೇಹದೇಗುಲವನ್ನು ಕರುಣಿಸಿದ್ದಾನೆ. ಸಂತರು, ಶರಣರು ತಮ್ಮ ಹೃದಯಮಂದಿರದಲ್ಲಿ ಮಹಾದೇವನನ್ನು ಪ್ರತಿಷ್ಠಾಪಿಸಿದರು. ನಾವು ನಮ್ಮ ಹೃದಯಮಂದಿರದಲ್ಲಿ ಧನಕನಕಾದಿ ಪ್ರಾಪಂಚಿಕ ವಿಷಯಗಳನ್ನು ಪ್ರತಿಷ್ಠಾಪಿಸಿದೆವು. ಪರಮಸತ್ಯದ, ಪರಮಾತ್ಮನ ಆರಾಧಕರಾದ ಸಂತರು, ಶರಣರು ಪರಮ ಸುಖಿಗಳಾದರು, ನಿತ್ಯಮುಕ್ತರಾದರು. ಮಿಥ್ಯವಾದ ಪ್ರಾಪಂಚಿಕ ವಿಷಯಗಳನ್ನು ಆರಾಧಿಸಿದ ನಾವು ಭವಸಾಗರದಲ್ಲಿ ಮುಳುಗಿ ದುಃಖಿತರಾದೆವು!
ದಿವ್ಯಾನಂದದ ಪ್ರಾಪ್ತಿಗಾಗಿ ಪ್ರಯತ್ನಿಸಿದವರಾಗಲಿ, ಪ್ರಾಣಾರ್ಪಣ ಮಾಡಿದವರಾಗಲಿ ಯಾರೂ ಇಲ್ಲ. ಅಥವಾ ಲಕ್ಷಕ್ಕೊಬ್ಬರು ಎಂಬಂತೆ ಬುದ್ಧ, ಬಸವ, ಮಹಾವೀರರ ಹಾಗೆ ಅಲ್ಲೊಬ್ಬರು ಇಲ್ಲೊಬ್ಬರು ಇರಬಹುದು ಅಷ್ಟೆ. ಸಾಮಾನ್ಯವಾಗಿ ಉಳಿದವರೆಲ್ಲರೂ ಭೂಮಿ-ಸೀಮೆಗಳಿಗಾಗಿ ಹೋರಾಡಿ ಹೋಗಿರುವರು.
ಸಂತರು ಶರಣರು ಮಾತ್ರ ನಮ್ಮಂತೆ ಈ ಪ್ರಾಪಂಚಿಕ ವಿಷಯಗಳಿಗಾಗಿ ಜೀವನವನ್ನು ಕಳೆಯಲಿಲ್ಲ. ಅವರು ತಮ್ಮ ಜೀವನವನ್ನು ಪಾರಮಾರ್ಥಿಕ ಸತ್ಯದ ಶೋಧನೆಗಾಗಿ, ಸಾಧನೆಗಾಗಿ ಮೀಸಲಾಗಿಟ್ಟರು. ಅಂತೆಯೇ ಈ ಸೃಷ್ಟಿಯ ಸೌಂದರ್ಯವನ್ನು ತಮ್ಮ ಹೃದಯ ಮಂದಿರದಲ್ಲಿ ಆರಾಧಿಸಿದವರು ಮಹಾಕವಿಗಳಾದರು. ಸೃಷ್ಟಿಕರ್ತನನ್ನು ಅಥವಾ ಪರಮಸತ್ಯವನ್ನು ತಮ್ಮ ಹೃದಯಮಂದಿರದಲ್ಲಿ ಸ್ಥಾಪಿಸಿದವರು ದಾರ್ಶನಿಕರಾದರು. ಪರಮಶಾಂತಿ, ಪರಮಾನಂದವನ್ನು ತಮ್ಮ ಹೃದಯದೇಗುಲದಲ್ಲಿ ಪ್ರತಿಷ್ಠಾಪಿಸಿದವರು ಅನುಭಾವಿಗಳಾದರು. ಲೋಕಪೂಜ್ಯರಾದರು.
[ಪೂಜ್ಯ ಸ್ವಾಮಿಗಳ ‘ಈಶಯೋಗ’ ಪ್ರವಚನಸಂಕಲನದಿಂದ.
ಸಂಪಾದನ: ಡಾ|| ಶ್ರದ್ಧಾನಂದಸ್ವಾಮಿಗಳು.