ಯಾರಿಗೆ ವ್ಯವಹಾರದಲ್ಲಿ ಸರಿಯಾಗಿ ನಡೆಯಲು ಬರುವುದಿಲ್ಲವೋ ಅವರಿಗೆ ಪರಮಾರ್ಥ ಮಾಡಲೂ ಬರುವುದಿಲ್ಲ. ವ್ಯವಹಾರದಲ್ಲಿ ನಡೆದ ಘಟನೆಗಳ ಪರಿಣಾಮವನ್ನು ಮನಸ್ಸಿನ ಮೇಲೆ ಆಗಗೊಡಬಾರದೆಂಬ ನಿಶ್ಚಯ ಮಾಡಬೇಕು ಹಾಗೂ ಸದ್ಗುರು ಆಜ್ಞೆಯನ್ನೇ ಪ್ರಮಾಣವೆಂದು ತಿಳಿದು ಅದನ್ನು ದಂಡೆಗೆ ತಲಪಿಸಬೇಕು. ಸಾಧನೆಯಲ್ಲಿ ತೀವ್ರತೆ ಇರಬೇಕು. “ನಾನು ಯಾರು” ಎಂಬುದನ್ನು ತಿಳಿದುಕೊಳ್ಳಬೇಕು. ಭಗವಂತನಿಗಿಂತ ಶ್ರೇಷ್ಠವಾದದ್ದಿಲ್ಲ ಎಂದು ತಿಳಿದಿದ್ದರೆ ನಾನು ಯಾರು ಎಂಬುದು ತಿಳಿಯುತ್ತದೆ. ನಿರ್ಗುಣದ ಬೋಧವಾದರೂ ಸಗುಣವನ್ನು ಬಿಡಬಾರದು. “ನನ್ನ ನಾಲಿಗೆಯ ಮೇಲೆ ಭಗವಂತನ ನಾಮ ಬರುತ್ತದೆ” – ಇದಕ್ಕಿಂತ ಶ್ರೇಷ್ಠವಾದ ಭಾಗ್ಯ ಯಾವುದು? ಹೃದಯದಲ್ಲಿಯ ಸ್ಫೂರ್ತಿಯಿಂದಲೇ ನಾವು ಮಾತನಾಡುವುದಿಲ್ಲವೆ? ಅಂದ ಮೇಲೆ ನಮ್ಮ ಬಾಯಲ್ಲಿ ಬರುವ ರಾಮನಾಮವು ಹೃದಯದಲ್ಲಿ ಇಲ್ಲವೆಂದು ಹೇಗೆ ಹೇಳುವಿರಿ? ನೀವು ನನಗೆ “ಉಪನಿಷತ್ತಿನಲ್ಲಿ ಹೇಳಿದ್ದನ್ನು ಹೇಳಿರಿ” ಎಂದರೆ ನಾನು ಅದನ್ನು ಹೇಗೆ ಹೇಳಲಿ? ಯಾರು ಏನು ಮಾಡಿರುತ್ತಾರೋ ಅವರು ಅದನ್ನೇ ಹೇಳುತ್ತಾರೆ. ಗುರು ಆಜ್ಞಾಪಾಲನೆಯ ಹೊರತಾಗಿ ನಾನು ಬೇರೆ ಏನನ್ನೂ ಮಾಡಲಿಲ್ಲ. ಅಂದಮೇಲೆ ನಾನು ಬೇರೆ ಏನು ಹೇಳಲು ಶಕ್ಯ? ಸಂತರ ಸಹವಾಸ ಮಾಡುವುದರಿಂದಲೇ ನಾವು ನಿಜವಾದ ಮಾರ್ಗಕ್ಕೆ ಹತ್ತುತ್ತೇವೆ. ನಾವು ಸಂತರನ್ನು ವ್ಯವಹಾರದಲ್ಲಿ ತರುತ್ತೇವೆ ಹಾಗೂ ಆ ಸಂತರು ನಮ್ಮೊಡನೆ ವ್ಯವಹಾರಕ್ಕನುಸಾರವಾಗಿ ನಡೆದರೆ ಅವರಲ್ಲಿ ಸಮತಾಭಾವ ಇಲ್ಲವೆಂದು ಒದರಾಡುತ್ತೇವೆ. ಸಂತರು ದೇಹದ ರೋಗವನ್ನು ಗುಣಪಡಿಸುವುದಿಲ್ಲ. ಆದರೆ ಆ ರೋಗದ ಭಯವನ್ನು ದೂರ ಮಾಡುತ್ತಾರೆ. ಸಂತರು ನಡೆದಾಡುವ ದೇವರೇ ಇರುತ್ತಾರೆ. ಸಂತರ ದೈಹಿಕ ಚಟುವಟಿಕೆಗಳಿಗೆ ಮಹತ್ತ್ವವಿರುವುದಿಲ್ಲ. ಭಗವಂತನ ನಾಮವನ್ನು ಸಿದ್ಧಮಾಡಿಕೊಡುವುದೇ ಸಂತರು ಜಗತ್ತಿನ ಮೇಲೆ ಮಾಡುವ ಬಹಳ ದೊಡ್ಡ ಉಪಕಾರವಾಗಿರುತ್ತದೆ. ಸಾವಿರಾರು ಜನರನ್ನು ಭಗವಂತನ ನಾಮಕ್ಕೆ ಹಚ್ಚುವುದೇ ಸಂತರ ನಿಜವಾದ ಕಾರ್ಯವಾಗಿರುತ್ತದೆ.
ಸಂತರ ಯಾವುದೇ ಮಾರ್ಗವು ವೇದ ಹಾಗೂ ಶಾಸ್ತ್ರಗಳಿಗೆ ವಿರುದ್ಧವಾಗಿರಲು ಶಕ್ಯವೇ ಇಲ್ಲ. ಸಂತರು ಸೂರ್ಯನಂತೆ ಜಗತ್ತಿಗೆ ಸ್ವಾಭಾವಿಕವಾಗಿ ಉಪಕಾರ ಮಾಡುತ್ತಾರೆ. ಸೂರ್ಯನ ತೇಜವು ಕಡಮೆಯಾಗುತ್ತಿರುತ್ತದೆ ಎಂದು ಶಾಸ್ತ್ರಜ್ಞರು ಹೇಳುತ್ತಾರೆ. ಆದರೆ ಸಂತರ ತೇಜವು ಮಾತ್ರ ಬೆಳೆಯುತ್ತಲೇ ಇರುತ್ತದೆ!
[ಮಹಾರಾಜರ ಪ್ರವಚನದಿಂದ.
ಅನುವಾದ: ಶ್ರೀ ದತ್ತಾತ್ರೇಯ ಅವಧೂತರು.
ಕೃಪೆ: ಶ್ರೀ ಚೈತನ್ಯಾಶ್ರಮ, ಹೆಬ್ಬಳ್ಳಿ.]