ನೀವು ಮನಸ್ಸಿನಿಂದ ಶ್ರೀರಾಮನಿಗೆ ಸಮರ್ಪಿತವಾಗಿರಿ. ನನ್ನ ಆಪ್ತನು, ಇಷ್ಟನು, ಸಂಬಂಧಿಯೂ ಕೇವಲ ರಾಮನೊಬ್ಬನೆ ಇರುತ್ತಾನೆ ಎಂಬ ಭಾವನೆಯನ್ನಿಟ್ಟುಕೊಂಡು ಅವನಿಗೆ ಶರಣು ಹೋಗಬೇಕು. ಭಗವಂತನೊಂದಿಗೆ ಅನನ್ಯವಾಗಬೇಕು. ಅವನು ಕೃಪೆಯ ಪ್ರತಿಮೂರ್ತಿಯೇ ಆಗಿರುತ್ತಾನೆ ಎಂದು ತಿಳಿಯಬೇಕು. “ಹೇ ಶ್ರೀರಾಮ, ನಾನು ನಿನಗೆ ಅನನ್ಯವಾಗಿ ಶರಣು ಬಂದಿರುವೆ. ಆದ್ದರಿಂದ ನನಗೆ ಇನ್ನು ಜೀವನದಲ್ಲಿ ಮಾಡಬೇಕಾದದ್ದೇನೂ ಉಳಿದಿರುವುದಿಲ್ಲ. ನನ್ನ ಜೀವನದಲ್ಲಿ ಪ್ರಾಪ್ತವಾಗುವ ಸುಖ-ದುಃಖಗಳೆಲ್ಲವೂ ನಿನ್ನಿಂದಲೇ ಬರುತ್ತವೆ” ಎಂದು ಭಾವಿಸಿ ಪ್ರಾರ್ಥಿಸಬೇಕು. ನಾವು ಕಲ್ಪನೆಯಿಂದ ಸುಖ-ದುಃಖಗಳನ್ನು ಕಲ್ಪಿಸುವಂತೆ ಮನಸ್ಸಿನಿಂದ ಸುಖ-ದುಃಖಗಳನ್ನು ಅನುಭವಿಸಬೇಕು. ಎಲ್ಲಿಯವರೆಗೆ ನಾನು-ನನ್ನದೆಂಬ ಧಡಪಡವಿರುತ್ತದೆಯೋ ಅಲ್ಲಿಯವರೆಗೆ ಸಮಾಧಾನವಾಗಲಾರದು. ನಾವು ಸರ್ವಸ್ವೀ ಶ್ರೀರಾಮನಿಗೆ ಅರ್ಪಣವಾಗಬೇಕೆಂಬ ಉಪಾಯವನ್ನು ಸಾಧು ಸಂತರು ನಮಗೆ ಹೇಳುತ್ತಾರೆ. ಭಗವಂತನಿಗೆ ಹೇಗೆ ಅರ್ಪಣವಾಗಬೇಕೆಂಬ ಮಾರ್ಗವನ್ನೂ ಕೂಡ ಅವರು ಹೇಳುತ್ತಾರೆ. ನಾವು ಜೀವನದಲ್ಲಿ ಪ್ರಯತ್ನ ಮಾಡದೆ ಇರಬಾರದು ಹಾಗೂ ಫಲದ ಆಶೆ ಇಡಬಾರದು. ಭಗವಂತನನ್ನು ಮರೆಯಬಾರದು. ಪ್ರಾಪ್ತವಾದ ಕರ್ಮಗಳನ್ನು ಕರ್ತವ್ಯದ ಬುದ್ಧಿಯಿಂದ ಮಾಡಬೇಕು. ಪ್ರತಿಯೊಂದು ಕಾರ್ಯವನ್ನು ಮಾಡುವಾಗ ಭಗವಂತನ ಅಧಿಷ್ಠಾನವನ್ನಿಟ್ಟೇ ಮಾಡಬೇಕು. ಇದರಿಂದಲೇ ಪ್ರಯತ್ನದ ಪ್ರಾರಂಭವಾಗಬೇಕು. ಅಖಂಡವಾದ ಅನುಸಂಧಾನವನ್ನಿಟ್ಟುಕೊಳ್ಳುವುದರಿಂದಲೇ ನಾವು ಮಾಡುವ ಕರ್ಮಗಳು ರಾಮಾರ್ಪಣವಾಗುತ್ತವೆ.
ನಮ್ಮ ವೃತ್ತಿಗಳನ್ನು ಅತ್ಯಂತ ಶಾಂತವಾಗಿಟ್ಟುಕೊಳ್ಳಬೇಕು. ಇದೇ ಸಂತರ ಮುಖ್ಯ ಲಕ್ಷಣವಾಗಿರುತ್ತದೆ. ಜೀವನದಲ್ಲಿ ನಡೆಯುವುದೆಲ್ಲವೂ ಶ್ರೀರಾಮನ ಇಚ್ಛೆಯಿಂದಲೇ ನಡೆಯುತ್ತದೆಂದು ತಿಳಿಯಬೇಕು. ವ್ಯವಹಾರದ ವಿಷಯದಲ್ಲಿ ಜಾಗೃತರಾಗಿರಬೇಕು. ಭಗವಂತನೇ ನಮ್ಮನ್ನು ಸಂರಕ್ಷಿಸುವನೆಂದು ತಿಳಿದು ಅತ್ಯಂತ ನಿರ್ಭಯರಾಗಿರಬೇಕು. ಮಹದ್ಭಾಗ್ಯದಿಂದಲೇ ಭಗವಂತನು ಮನೆಗೆ ಬಂದಿರುತ್ತಾನೆ ಎಂದು ತಿಳಿದು ನಾವು ಭಗವಂತನವರಾಗಬೇಕು.
[ಸದ್ಗುರು ಮಹಾರಾಜರ ಪ್ರವಚನದಿಂದ.
ಅನುವಾದ: ಶ್ರೀ ದತ್ತಾತ್ರೇಯ ಅವಧೂತರು.
ಕೃಪೆ: ಚೈತನ್ಯಾಶ್ರಮ, ಹೆಬ್ಬಳ್ಳಿ]