ನಮ್ಮ ಋಷಿಮುನಿಗಳು ಪಂಚ ಯಜ್ಞಗಳನ್ನು ಹೇಳಿದರು. ಯಜ್ಞವೆಂದರೂ ಕೃತಜ್ಞತೆ ಎಂದರೂ ಒಂದೇ. ಜನ್ಮವಿತ್ತ ತಾಯಿತಂದೆಗೆ, ವಿದ್ಯಾಗುರುಗಳಿಗೆ, ಜನ್ಮದಾತರಿಗೆ, ಆನಂದವಾಹಕ ಅತಿಥಿಗಳಿಗೆ, ಸತ್ಯ ಶಿವ ಸುಂದರ ಸೃಷ್ಟಿಗೆ – ಹೀಗೆ ಐದು ವಸ್ತುಗಳಿಗೆ ನಾವು ಕೃತಜ್ಞರಾಗಿರುವುದು ಒಂದು ಶ್ರೇಷ್ಠ ಪೂಜೆಯೇ ಆಗಿದೆ. ಹಿಂದಿನ ದಿನಗಳಲ್ಲಿ ನಮ್ಮ ರೈತರು ತಾವು ಬೆಳೆದ ಮೊದಲಿನ ಸಿಹಿ ತೆನೆಯ ಹಸಿರುಗಾಳನ್ನು ತಿನ್ನುವ ಮೊದಲು ನಾಲ್ಕು ಕಾಳುಗಳನ್ನು ಭೂ-ದೇವಿಗೆ ಅರ್ಪಿಸುತ್ತಿದ್ದರು. ಇದಾದರೂ ಕೃತಜ್ಞತಾ ಸಮರ್ಪಣೆಯೆ ಆಗಿದೆ.
ಇನ್ನು ಧ್ಯಾನ-ಸಾಧನೆಯ ಮೂಲಕ ದೇವರನ್ನು ಒಲಿಸಲು ಕೆಲವರು ಹರಸಾಹಸ ಮಾಡುತ್ತಾರೆ. ಒಂದು ಹೂವನ್ನು ನೋಡಿದ ನಂತರ ಆ ಹೂವಿನ ಚಿತ್ರವನ್ನು ಮನದಲ್ಲಿ ಮೂಡಿಸಿಕೊಂಡು ಅದರಲ್ಲೇ ಮನಸ್ಸನ್ನು ಕೇಂದ್ರೀಕರಿಸಿದರೆ ಅದಕ್ಕೆ ಧ್ಯಾನವೆನ್ನುತ್ತಾರೆ. ಆದರೆ ನಿರಾಕಾರನಾದ ದೇವರು ದೇಶಕಾಲಾತೀತ ಪರವಸ್ತು, ಅಮೂರ್ತ ಸ್ವರೂಪ. ಬಯಲಿಗೆ ಬಯಲಾದ ಆ ನಿರ್ಬಯಲು ದೇವರನ್ನು ಧ್ಯಾನಿಸುವುದಾದರೂ ಹೇಗೆ? ಧ್ಯಾನ ಮಾಡುವುದು ಮನಸ್ಸನ್ನು ಹಸನುಗೊಳಿಸಲು, ವಿಕಾರ ವೃತ್ತಿಗಳನ್ನು ಕಳೆದು ಶಾಂತಗೊಳಿಸಲು! ಹೀಗೆ ಮಾನಸಿಕ ಸ್ವಾಸ್ಥö್ಯವನ್ನು ಕಾಪಾಡಲು ಧ್ಯಾನ ಮಾಡುವುದೇ ವಿನಾ ದೇವನೊಲುಮೆಗಾಗಿ ಅಲ್ಲ. ಕೆಲವರು ಇಷ್ಟು ಗಂಟೆ ಧ್ಯಾನ ಮಾಡಿದೆ, ಜಪ ಮಾಡಿದೆ ಎಂದು ಲೆಕ್ಕ ಬರೆದಿಟ್ಟಿರುತ್ತಾರೆ. ಈ ಲೆಕ್ಕಾಚಾರ ‘ಪೂಜೆ’ಗೆ, ‘ಧ್ಯಾನ’ಕ್ಕೆ ದೇವರು ಎಂದೂ ಒಲಿಯುವುದಿಲ್ಲ. ಜಪ-ತಪ, ಧ್ಯಾನಾದಿಗಳನ್ನು ಮಾಡುತ್ತ ನಾವು ಮನದ ಆಚೆ ಸಾಗಿ ಅಮನಸ್ಕರಾಗಿ ಆನಂದಿತರಾಗಿ ಬದುಕಲು ಕಲಿಯಬೇಕು. ಅದುವೇ ದೇವನೊಲುಮೆಯ ಸಲ್ಲಕ್ಷಣ. ಆಗ ನಮ್ಮ ಜೀವನವೇ ಒಂದು ಪೂಜೆ ಆಗಿರುತ್ತದೆ.
[ಪೂಜ್ಯ ಮಹಾಸ್ವಾಮಿಗಳ ‘ದೇವನೊಲುಮೆ’
ಪ್ರವಚನಸಂಕಲನದಿಂದ.
ಸಂಪಾದಕರು: ಡಾ|| ಶ್ರದ್ದಾನಂದಸ್ವಾಮಿಗಳು. ಕೃಪೆ: ಜ್ಞಾನಯೋಗ ಫೌಂಡೇಶನ್, ವಿಜಾಪುರ.]