‘ಅಮೆರಿಕ ಇಂಗ್ಲೆಂಡುಗಳಂತಹ ದೇಶಗಳು ಭಾರತದಲ್ಲಿ ಪ್ರಜಾಪ್ರಭುತ್ವ ಕುಸಿದಿರುವತ್ತ ಲಕ್ಷ್ಯ ಹರಿಸಬೇಕು’ – ಎಂದು ಪ್ರಮುಖ ವಿರೋಧಪಕ್ಷವಾದ ಕಾಂಗ್ರೆಸ್ಸಿನ ನಾಯಕ ರಾಹುಲ್ಗಾಂಧಿ ವಿದೇಶೀ ನೆಲದಲ್ಲಿ ಬಡಬಡಿಸಿದುದಕ್ಕೆ ಏನೆನ್ನಬೇಕು? ಈ ವಿಕೃತ ಮಂಡನೆಯನ್ನು ಸಾಂವಿಧಾನಿಕವೆನ್ನಲಾದೀತೆ? ಅದು ಸಂವಿಧಾನವನ್ನೇ ಅವಗಣನೆ ಮಾಡಿದಂತಾಗದೆ? ಇನ್ನೊಂದು ವಿಪರ್ಯಾಸವೂ ಇದೆ. ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರಗಳೇ ಇವೆಯಲ್ಲ. ಅವೆಲ್ಲ ಅಸಿಂಧುವಾದವೆಂದು ರಾಹುಲ್ಗಾಂಧಿಯವರೇ ಹೇಳಿದಂತಾಗಲಿಲ್ಲವೆ?
ಸಂಸದೀಯ ರಾಜ್ಯಪದ್ಧತಿಯಲ್ಲಿ ನಡವಳಿಗಳ ಗುಣಮಟ್ಟವನ್ನು ಉಳಿಸುವ ಹೊಣೆಗಾರಿಕೆ ಎಲ್ಲರ ಮೇಲೂ ಇದೆ. ವಿರೋಧಪಕ್ಷಗಳೂ ಈ ಹೊಣೆಗಾರಿಕೆಯಿಂದ ಮುಕ್ತವಲ್ಲ. ಟೀಕೆಗಳಿಗೂ ಅವಕಾಶ ಇದ್ದೇ ಇರುತ್ತದೆ. ಆದರೆ ಈ ಸವಲತ್ತನ್ನು ಬಳಸಿಕೊಂಡು ವಿರೋಧಪಕ್ಷಗಳು ಸದಾ ಆರೂಢ ಸರ್ಕಾರದ ಎಲ್ಲ ಕ್ರಮಗಳನ್ನೂ ಟೀಕಿಸುತ್ತಿರುವುದನ್ನೇ ಧಂದೆಯಾಗಿಸಿಕೊಂಡು ಸಭಾಕಲಾಪಗಳಿಗೆ ಅಡಚಣೆಯೊಡ್ಡುವುದನ್ನೇ ತಮ್ಮ ಏಕೈಕ ಲಕ್ಷ್ಯ ಮಾಡಿಕೊಂಡಿವೆ; ಸಂಸತ್ತಿನ ಘನತೆಯನ್ನು ರಕ್ಷಿಸುವುದರಲ್ಲಿ ತಮ್ಮ ಪಾತ್ರವೂ ಇದೆಯೆಂಬುದನ್ನೇ ಅವು ಮರೆತಿವೆ. ಇದು ತಮ್ಮನ್ನು ಸಾಂಸದರನ್ನಾಗಿ ಆಯ್ಕೆ ಮಾಡಿದ ಜನತೆಗೆ ವಿಶ್ವಾಸದ್ರೋಹ ಬಗೆದಂತೆಯೂ ಆಗಿದೆ. ಈಚಿನ ವರ್ಷಗಳಲ್ಲಿ ಸಂಸತ್ಕಲಾಪವನ್ನು ವಿರೋಧಪಕ್ಷಗಳು ನಲ್ಲಿಕಟ್ಟೆ ಜಗಳದ ಮಟ್ಟಕ್ಕೆ ಇಳಿಸಿವೆ. ರಾಷ್ಟçದ ಹಿತಚಿಂತನೆಗೆ ಆದ್ಯತೆ ಸಲ್ಲಬೇಕೆಂಬ ಕಲ್ಪನೆಯೇ ಮರೆಯಾಗಿದೆ.
ಈ ವಿಶ್ಲೇಷಣೆಯ ಆಶಯ ಟೀಕೆಗಳು ಬೇಡವೆಂದಲ್ಲ. ಅಧಿಕಾರಸ್ಥ ಸರ್ಕಾರದ ಕ್ರಮಗಳ ಪರೀಕ್ಷಣೆ ಸದಸ್ಯರ ವಿಹಿತ ಕರ್ತವ್ಯವೇ ಆಗಿದೆ. ಟೀಕೆಗಳೂ ಆಕ್ಷೇಪಗಳೂ ವಸ್ತುನಿಷ್ಠವಾಗಿರಬೇಕು, ಹೊಣೆಗಾರಿಕೆಯಿಂದ ಕೂಡಿರಬೇಕು – ಎಂಬುದು ನಿರೀಕ್ಷೆ. ಹಾಗಲ್ಲದೆ ವ್ಯರ್ಥವೂ ಹಲವೊಮ್ಮೆ ಅನ್ಯೋದ್ದೇಶಜನಿತಗಳೂ ಆದ ಮಾತುಗಳ ಮೇಲಾಟವೂ ಸಮಯದ ದುರ್ವ್ಯಯವೂ ಆಗುತ್ತಿದೆಯೆಂಬುದು ವಿಷಾದಕರ. ಈ ಪ್ರವೃತ್ತಿಯ ಅಪಕರ್ಷಣವಾದಲ್ಲಿ ಮಾತ್ರ ಸಂಸದೀಯ ಪ್ರಜಾಪ್ರಭುತ್ವದ ಸ್ವಾಸ್ಥ್ಯದ ಬಗೆಗೆ ಜನರಲ್ಲಿ ಭರವಸೆ ಉಳಿದೀತು. ಸಂಸತ್ತಿನಂತಹ ಉನ್ನತ ವೇದಿಕೆಯಲ್ಲಿ ಹೊಣೆಗೇಡಿ ವರ್ತನೆ ಮೆರೆದಲ್ಲಿ ಅದು ದೇಶದ ಪ್ರತಿಮೆಯನ್ನೇ ಮುಕ್ಕಾಗಿಸುತ್ತದೆ. ಸಲ್ಲದ ಅಗ್ಗದ ಟೀಕೆಗಳನ್ನು ರಾಜದ್ರೋಹ(ಟ್ರೀಸನ್)ವೆಂದೇ ಪರಿಗಣಿಸಬೇಕಾಗುತ್ತದೆ. ಸಂಸತ್ತಿನ ಹೊರಗೂ ಶಿಷ್ಟತೆಯ ಪಾಲನೆ ಇರುವುದು ಅನಿವರ್ಯ. ಹೊಣೆಗಾರಿಕೆ ಇದ್ದಲ್ಲಿ ಮಾತ್ರ ಅಭಿಪ್ರಾಯಸ್ವಾತಂತ್ರ್ಯಾದಿಗಳೂ ಅರ್ಥಪೂರ್ಣವಾಗಬಲ್ಲವು.
‘ಅಮೆರಿಕ ಇಂಗ್ಲೆಂಡುಗಳಂತಹ ದೇಶಗಳು ಭಾರತದಲ್ಲಿ ಪ್ರಜಾಪ್ರಭುತ್ವ ಕುಸಿದಿರುವತ್ತ ಲಕ್ಷ್ಯ ಹರಿಸಬೇಕು’ – ಎಂದು ಪ್ರಮುಖ ವಿರೋಧಪಕ್ಷವಾದ ಕಾಂಗ್ರೆಸ್ಸಿನ ನಾಯಕ ರಾಹುಲ್ಗಾಂಧಿ ವಿದೇಶೀ ನೆಲದಲ್ಲಿ ಬಡಬಡಿಸಿದುದಕ್ಕೆ ಏನೆನ್ನಬೇಕು? ಈ ವಿಕೃತ ಮಂಡನೆಯನ್ನು ಸಾಂವಿಧಾನಿಕವೆನ್ನಲಾದೀತೆ? ಅದು ಸಂವಿಧಾನವನ್ನೇ ಅವಗಣನೆ ಮಾಡಿದಂತಾಗದೆ? ಇನ್ನೊಂದು ವಿಪರ್ಯಾಸವೂ ಇದೆ. ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರಗಳೇ ಇವೆಯಲ್ಲ. ಅವೆಲ್ಲ ಅಸಿಂಧುವಾದವೆಂದು ರಾಹುಲ್ಗಾಂಧಿಯವರೇ ಹೇಳಿದಂತಾಗಲಿಲ್ಲವೆ?
ಯಾವುದೊ ವಿಷಯವನ್ನು ಎತ್ತಿಕೊಂಡು ದಿನಗಳಗಟ್ಟಲೆ ಗುಲ್ಲೆಬ್ಬಿಸುವುದು, ತಮ್ಮ ಅಪಲಾಪವನ್ನು ಯಾರೂ ಕೇಳಿಸಿಕೊಳ್ಳದಿದ್ದಾಗ ಬೇರೆ ವಿಷಯವನ್ನು ಹುಡುಕುವುದು – ಇದು ರಾಹುಲ್ಗಾಂಧಿ ಕಂಡುಕೊಂಡಿರುವ ದಾರಿ. ರ್ಯಾಫೇಲ್ ಖರೀದಿಯಲ್ಲಿ ಅಕ್ರಮ ನಡೆದಿದೆಯೆಂದು ಬೊಬ್ಬೆಹೊಡೆಯುತ್ತ ಹೋದರು. ಆ ಆಪಾದನೆಯಲ್ಲಿ ಹುರುಳಿಲ್ಲವೆಂದು ನ್ಯಾಯಾಲಯಗಳು ಸಾರಿದವು. ಅದರಂತೆ ಆಮೇಲಿನ ದಿನಗಳಲ್ಲಿ ಅಡಾನಿ ಪ್ರಕರಣವನ್ನು ಎತ್ತಿಕೊಂಡರು. ಜನಸಾಮಾನ್ಯರಲ್ಲೆದ್ದ ಪ್ರಶ್ನೆಗಳು: (೧) ನೀವು ಅದನ್ನು ಮೋದಿಯವರ ತಲೆಗೆ ಕಟ್ಟುತ್ತಿದ್ದೀರಿ. ಹಿಂದಿನಿಂದ ನಡೆದಿರುವ ಅಡಾನಿ ಕಂಪೆನಿಗಳಿಗೂ ಈಗಿನ ಪ್ರಧಾನಿಗಳಿಗೂ ಎತ್ತಣ ಸಂಬಂಧ? (೨) ಹಲವು ರಾಜ್ಯಗಳಲ್ಲಿ ನಿಮ್ಮ ಕೃಪಾಪೋಷಿತ ಕಾಂಗ್ರೆಸ್ ಸರ್ಕಾರಗಳೇ ಇವೆಯಲ್ಲ? ಆ ಸರ್ಕಾರಗಳೇಕೆ ಅಡಾನಿ ಕಂಪೆನಿಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತಿಲ್ಲ?
ಕಳೆದ ನಾಲ್ಕು ವರ್ಷಗಳ ರಾಹುಲ್ಗಾಂಧಿಯವರ ಬುಡವಿಲ್ಲದ ಮಾತುಗಳನ್ನು ನೋಡುವಾಗ ಅನಿಸುವುದು – ತಮ್ಮ ಪಕ್ಷವನ್ನು ಬಲಪಡಿಸುವುದಕ್ಕೆ ಬದಲಾಗಿ ಅವರು ನರೇಂದ್ರ ಮೋದಿ ವಿರುದ್ಧ ಸದಾ ಮಾತನಾಡುವುದರಿಂದ ತಮ್ಮ ಕಿಮ್ಮತ್ತು ಬೆಳೆಯುತ್ತದೆಂದು ನಂಬಿರುವಂತಿದೆ. ಆದರೆ ಪಾಪ ಈ ತಂತ್ರ ಕೈಗೂಡುತ್ತಿಲ್ಲ.
ಅಡಾನಿ ಪ್ರಕರಣದಂತಹ ವಿಷಯಗಳಿಗಾಗಿ ಸಂಸತ್ತಿನ ಹಲವಾರು ದಿನಗಳು ವ್ಯಯವಾಗಬೇಕೆ? ನ್ಯಾಯಾಂಗಾದಿ ವ್ಯವಸ್ಥೆ ಇರುವುದೇಕೆ? ಇಷ್ಟಾಗಿ ಅಡಾನಿ ವಿರುದ್ಧದ ಆಕ್ಷೇಪಗಳು ನಿರಾಧಾರವೆಂದು ಈಗ ಸರ್ವೋಚ್ಚ ನ್ಯಾಯಾಲಯವೇ ನಿರ್ಣಯ ಕೊಟ್ಟಿದೆ. ನ್ಯಾಯಾಂಗ, ತನಿಖಾಸಂಸ್ಥೆಗಳು – ಎಲ್ಲವನ್ನೂ ಧಿಕ್ಕರಿಸುತ್ತಹೋದಲ್ಲಿ ಏನು ಉಳಿಯುತ್ತದೆ?
ಅಂತರರಾಷ್ಟ್ರೀಯ ಸ್ತರದಲ್ಲಿ ಭಾರತದ ಪ್ರತಿಮೆಗೆ ಊನ ತರಲು ನಮ್ಮ ದೇಶೀಯರೇ ಕಾರಣವಾಗುತ್ತಿರುವುದನ್ನು ಸಹ್ಯವೆನ್ನಲಾದೀತೆ?
ನ್ಯಾಯಾಲಯ ರಾಹುಲ್ಗಾಂಧಿ ಅಪರಾಧಿ ಎಂದು ತೀರ್ಪಿತ್ತಿರುವಾಗ ನ್ಯಾಯಾಂಗವನ್ನು ನಿಂದಿಸುತ್ತಿರುವುದಲ್ಲದೆ ‘ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಸತ್ತಿದೆಯೆಂಬುದನ್ನು ಇದು ಪುರಾವೆಗೊಳಿಸಿದೆ’ ಎಂಬ ‘ಪ್ರಾಜ್ಞ’ ಮಂಡನೆಗಳು ಆಗಿವೆ.
ದೇಶದಲ್ಲಿ ನಮಗೇ ಪ್ರಾಥಮ್ಯ, ನಾವು ಶಾಸನಗಳಿಗೆ ಅತೀತರು – ಎಂಬಂತಹ ಹಿಂದಿನ ದಶಕಗಳಲ್ಲಿದ್ದಂತಹ ಅಹಮಿಕೆಗೆ ಈಗಿನ ಭಾರತದಲ್ಲಿ ಅವಕಾಶ ಇರದೆಂಬುದನ್ನು ಈ ಪ್ಯಾರನಾಯ್ಡ್ ಮಂದಿ ಈಗಲಾದರೂ ಮನವರಿಕೆ ಮಾಡಿಕೊಂಡಾರೆ?
ತಮ್ಮ ಕೃತ್ಯಾಕೃತ್ಯಗಳನ್ನು ತನಿಖಾಸಂಸ್ಥೆಗಳು ವಿಚಾರಣೆಗೊಳಪಡಿಸಬಾರದೆಂಬ ವಿರೋಧಪಕ್ಷಗಳ ಬಾಲಿಶ ಮನವಿಯನ್ನು ಸರ್ವೋಚ್ಚ ನ್ಯಾಯಾಲಯ ಸಗಟಾಗಿ ತಿರಸ್ಕರಿಸಿರುವುದು ನಿರೀಕ್ಷಿತವೇ ಆಗಿದೆ.
ಧರ್ಮೋ ರಕ್ಷತಿ ರಕ್ಷಿತಃ – ಎಂಬುದೇ ಅಂತಿಮ ಸತ್ಯ.
***